Tag: Buffalo

  • ಕೇರಳದ ಆನೆ ಸಾವು ಮಾಸುವ ಮುನ್ನವೇ ಯಾದಗಿರಿಯಲ್ಲಿ ಅಮಾನವೀಯ ಘಟನೆ

    ಕೇರಳದ ಆನೆ ಸಾವು ಮಾಸುವ ಮುನ್ನವೇ ಯಾದಗಿರಿಯಲ್ಲಿ ಅಮಾನವೀಯ ಘಟನೆ

    – ಕಾಲು ಕಳ್ಕೊಂಡು ನದಿಯಲ್ಲಿ ನರಳುತ್ತಿರೋ ಎಮ್ಮೆ

    ಯಾದಗಿರಿ: ಇತ್ತೀಚೆಗೆ ಕೇರಳದಲ್ಲಿ ಆನೆಯೊಂದು ದುಷ್ಟರ ಕೃತ್ಯಕ್ಕೆ ನದಿಯಲ್ಲಿ ನರಳಿ ಪ್ರಾಣ ಬಿಟ್ಟಿದೆ. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಅಮಾನವೀಯ ಘಟನೆ ಯಾದಗಿರಿಯಲ್ಲಿ ನಡೆಯುತ್ತಿದೆ.

    ಎಮ್ಮೆಯೊಂದು ಜಿಲ್ಲೆಯ ವಡಗೇರಾ ತಾಲೂಕಿನ ಕೊಡಲ ಗ್ರಾಮದ ಸಮೀಪದ ಕೃಷ್ಣಾ ನದಿ ತೀರದಲ್ಲಿ ಮೊಸಳೆ ಹೊಡೆತಕ್ಕೆ ಸಿಕ್ಕು ಕಾಲು ಕಳೆದುಕೊಂಡಿದೆ. ಆದರೆ ಎಮ್ಮೆ ಕಳೆದ ಎರಡು ದಿನಗಳಿಂದ ನರಳುತ್ತಿದೆ. ಈ ವಿಷಯ ಸ್ಥಳೀಯ ಪಶು ಚಿಕಿತ್ಸಾಲಯ ಕ್ಕೆ ಗೊತ್ತಿದ್ದರೂ ಪಶು ವೈದ್ಯರು ಮಾತ್ರ ಎಮ್ಮೆಗೆ ಚಿಕಿತ್ಸೆ ನೀಡಲು ಮುಂದಾಗಿಲ್ಲ. ಇದರಿಂದ ಅತೀವ ನೋವಿನಿಂದ ನರಳುತ್ತಿರುವ ಎಮ್ಮೆ ನೋವು ತಗ್ಗಿಸಿಕೊಳ್ಳಲು ನದಿಯ ನೀರಿನಲ್ಲಿ ಕಾಲ ಕಳೆಯುತ್ತಿದೆ.

    ಕಳೆದ ಎರಡು ದಿನಗಳ ಹಿಂದೆ ನೀರು ಕುಡಿಯಲು ನದಿ ತೀರಕ್ಕೆ ಎಮ್ಮೆ ತೆರಳಿತ್ತು. ಈ ಸಮಯದಲ್ಲಿ ಮೊಸಳೆಯೊಂದು ಎಮ್ಮೆಯ ಮೇಲೆ ಏಕಾಏಕಿ ದಾಳಿ ಮಾಡಿದೆ. ದಾಳಿಯಲ್ಲಿ ಎಮ್ಮೆಯ ಕಾಲು ಕಟ್ ಆಗಿದ್ದು, ಮೊಸಳೆ ಬಾಯಿಂದ ತಪ್ಪಿಸಿಕೊಂಡು ಎಮ್ಮೆ ಜೀವ ಉಳಿಸಿಕೊಂಡಿದೆ. ತೀವ್ರವಾಗಿ ಗಾಯಗೊಂಡಿರುವ ಎಮ್ಮೆಯ ರಕ್ಷಣೆಗೆ ಯಾರೂ ಧಾವಿಸದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ನದಿಯ ನೀರಿನಲ್ಲಿ ಎಮ್ಮೆ ಕುಳಿತಿದೆ.

    ಇನ್ನೂ ನದಿಯಲ್ಲಿ ಮೊಸಳೆ ಇರುವುದರಿಂದ ನದಿಗಿಳಿದು ಎಮ್ಮೆ ಕಾಪಾಡಲು ಸ್ಥಳೀಯರು ಹಿಂದೇಟು ಹಾಕುತ್ತಿದ್ದಾರೆ. ಎರಡು ದಿನವಾದರೂ ಎಮ್ಮೆ ಮಾಲಿಕ ಪತ್ತೆಯಾಗಿಲ್ಲ. ವಿಷಯ ತಿಳಿದಿದ್ದರೂ ಇನ್ನೂ ಸ್ಥಳಕ್ಕೆ ಧಾವಿಸಿದ ಪಶು ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ಬೆಳೆಯನ್ನು ಎಮ್ಮೆ ಹಾಳು ಮಾಡಿತೆಂದು ಅಪ್ರಾಪ್ತ ಬಾಲಕನ ಹೊಡೆದು ಕೊಂದ್ರು!

    ಬೆಳೆಯನ್ನು ಎಮ್ಮೆ ಹಾಳು ಮಾಡಿತೆಂದು ಅಪ್ರಾಪ್ತ ಬಾಲಕನ ಹೊಡೆದು ಕೊಂದ್ರು!

    – ಬಾಲಕನ ಜೊತೆಯೇ ವಾಗ್ವಾದಕ್ಕಿಳಿದು ಕೋಲಿನಿಂದ ಹಲ್ಲೆಗೈದ್ರು

    ಲಕ್ನೋ: ತೋಟಕ್ಕೆ ನುಗ್ಗಿ ಎಮ್ಮೆ ಬೆಳೆ ಹಾಳು ಮಾಡಿತೆಂದು ಸಿಟ್ಟುಗೊಂಡ ಮೂವರು ಕುಡುಕರು 15 ವರ್ಷದ ಬಾಲಕನ ಹೊಡೆದು ಕೊಂದ ಅಮಾನವೀಯ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ.

    ಘಟನೆಯ ಬಳಿಕ ಮೂವರು ಆರೋಪಿಗಳು ಕೂಡ ಪರಾರಿಯಾಗಿದ್ದಾರೆ. ಮೃತ ದುರ್ದೈವಿ ಬಾಲಕನನ್ನು ಕುಲ್ದೀಪ್ ಯಾದವ್ ಎಂದು ಗುರುತಿಸಲಾಗಿದೆ.

    ಯಾದವ್ ಶನಿವಾರ ತನ್ನ ಗ್ರಾಮದಲ್ಲಿ ಗೆಳೆಯರ ಜೊತೆ ಸೇರಿಕೊಂಡು ಆಟವಾಡುತ್ತಿದ್ದನು. ಇದೇ ಸಂದರ್ಭದಲ್ಲಿ ಸಾಧು ಸಿಂಗ್ ಹಾಗೂ ಧರ್ಮೇಂದ್ರ ಸಿಂಗ್ ಅವರ ಕಬ್ಬಿನ ತೋಟಕ್ಕೆ ಯಾದವ್ ಮನೆಯ ಎಮ್ಮೆ ನುಗ್ಗಿದೆ. ಹೀಗೆ ತೋಟಕ್ಕೆ ನುಗ್ಗಿದ ಎಮ್ಮೆಯನ್ನು ಸಾಧು ಹಾಗೂ ಧರ್ಮೇಂದ್ರ ಸಿಂಗ್ ಹಿಡಿದಿದ್ದು, ಯಾದವ್ ಮನೆಗೆ ವಾಪಸ್ ಮಾಡಲು ನಿರಾಕರಿಸಿದ್ದಾರೆ. ಅಲ್ಲದೆ ಸಹೋದರರಿಬ್ಬರು ಯಾದವ್ ಜೊತೆ ವಾಗ್ವಾದಕ್ಕಿಳಿದಿದ್ದಾರೆ.

    ಜಗಳ ತಾರಕಕ್ಕೇರುತ್ತಿದ್ದಂತೆಯೇ ಸಾಧು, ಧರ್ಮೇಂದ್ರ ಹಾಗೂ ಮಗ ಭೂಪಿಂದರ್ ಸೇರಿಕೊಂಡು ಯಾದವ್ ಮೇಲೆ ಕೋಲಿನಿಂದ ಹಲ್ಲೆ ನಡೆಸಲು ಪ್ರಾರಂಭಿಸಿದ್ದಾರೆ. ಹಲ್ಲೆಯಿಂದ ಗಂಭೀರ ಗಾಯಗೊಂಡ ಯಾದವ್ ಪ್ರಜ್ಞಾಹೀನನಾಗಿ ಸ್ಥಳದಲ್ಲೇ ಕುಸಿದುಬಿದ್ದಿದ್ದಾನೆ. ಈ ವೇಳೆ ಮೂವರು ಆರೋಪಿಗಳೂ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

    ಇತ್ತ ಯಾದವ್ ತಂದೆ ಮಹೇಶ್ ಸ್ಥಳಕ್ಕೆ ದೌಡಾಯಿಸಿ ಗಾಯಗೊಂಡ ಮಗನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಬಾಲಕನ ಸ್ಥಿತಿ ಗಂಭೀರವಾಗಿದ್ದಿದ್ದನ್ನು ಅರಿತು ಹೆಚ್ಚಿನ ಚಿಕಿತ್ಸೆಗಾಗಿ ಬರೇಲಿಯ ಆಸ್ಪತ್ರೆಗೆ ಕರೆದುಕೊಯ್ಯಲು ವೈದ್ಯರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಲಕನನ್ನು ಕರೆದುಕೊಂಡು ಹೋಗಲಾಯಿತಾದರೂ ಮಾರ್ಗ ಮಧ್ಯೆಯೇ ಆತ ಮೃತಪಟ್ಟಿದ್ದಾನೆ.

    ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಜಗ್ನಾರಾಯರ್ನ ಪಾಂಡೆ ತಿಳಿಸಿದ್ದಾರೆ.

  • ವಿದ್ಯುತ್ ತಂತಿ ಹರಿದು ಬೆಂಕಿ- ಕೊಟ್ಟಿಗೆಯಲ್ಲಿದ್ದ ಏಳು ಜಾನುವಾರು ಸಜೀವ ದಹನ

    ವಿದ್ಯುತ್ ತಂತಿ ಹರಿದು ಬೆಂಕಿ- ಕೊಟ್ಟಿಗೆಯಲ್ಲಿದ್ದ ಏಳು ಜಾನುವಾರು ಸಜೀವ ದಹನ

    ಹಾವೇರಿ: ವಿದ್ಯುತ್ ತಂತಿ ಹರಿದು ಬಿದ್ದಿದರಿಂದ ದನದ ಕೊಟ್ಟಿಗೆಗೆ ಬೆಂಕಿ ತಗುಲಿ ಎತ್ತು, ಎಮ್ಮೆ, ಆಕಳುಗಳು ಸಜೀವ ದಹನವಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

    ಜಿಲ್ಲೆಯ ಹಾನಗಲ್ ತಾಲೂಕಿನ ನಿಸ್ಸೀಮ ಆಲದಕಟ್ಟಿ ಗ್ರಾಮದಲ್ಲಿ ಘಟನೆ ನಡೆದಿದ್ದು, ರೈತ ಫಕ್ಕೀರಪ್ಪ ಜಾನುಗುಂಡಿ ಅವರಿಗೆ ಸೇರಿದ ದನದ ಕೊಟ್ಟಿಗೆಯಲ್ಲಿ ಈ ದುರ್ಘಟನೆ ನಡೆದಿದೆ. ದನದ ಕೊಟ್ಟಿಗೆಯಲ್ಲಿದ್ದ ಎರಡು ಎತ್ತು, ಎರಡು ಎಮ್ಮೆ, ಒಂದು ಆಕಳು ಹಾಗೂ ಎರಡು ಕರುಗಳು ಸಜೀವ ದಹನವಾಗಿವೆ.

    ದನದ ಕೊಟ್ಟಿಗೆ ಊರಿನಿಂದ ದೂರ ಇದ್ದು, ಮಾಲೀಕರು ಊರಿನ ಮನೆಯಲ್ಲಿದ್ದಾಗ ಘಟನೆ ಸಂಭವಿಸಿದೆ. ನಿರ್ಜನ ಪ್ರದೇಶವಾಗಿದ್ದರಿಂದ ಬೆಂಕಿ ನಿಯಂತ್ರಿಸುವಲ್ಲಿ ತಡವಾಗಿದೆ. ಕೊಟ್ಟಿಗೆಯಲ್ಲಿ ವಿದ್ಯುತ್ ತಂತಿ ಹರಿದು ಬಿದ್ದಿದ್ದಿದ್ದು, ಬೆಂಕಿ ಹೊತ್ತಿಕೊಂಡು ಅನಾಹುತ ಸಂಭವಿಸಿದೆ. ಎತ್ತು, ಎಮ್ಮೆ, ಆಕಳು ಸಾವನ್ನಪ್ಪಿರುವುದರಿಂದ ರೈತ ಪಕ್ಕೀರಪ್ಪ ಅವರಿಗೆ ಎರಡು ಲಕ್ಷಕ್ಕೂ ಅಧಿಕ ರೂಪಾಯಿ ಹಾನಿಯಾಗಿದೆ. ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಕುಡುಕರ ಎಡವಟ್ಟಿನಿಂದ ಮೂರ್ನಾಲ್ಕು ಬಣವೆಗಳಿಗೆ ಬೆಂಕಿ

    ಕುಡುಕರ ಎಡವಟ್ಟಿನಿಂದ ಮೂರ್ನಾಲ್ಕು ಬಣವೆಗಳಿಗೆ ಬೆಂಕಿ

    – ಎಮ್ಮೆಗಳಿಗೂ ಹೊತ್ತಿದ ಜ್ವಾಲಾಮುಖಿ

    ಬಳ್ಳಾರಿ: ಲಾಕ್‍ಡೌನ್ ಸಡಿಲಿಕೆ ಮಾಡಿ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿದ್ದೆ ತಡ ಮದ್ಯಪ್ರಿಯರು ಮದ್ಯದಂಗಡಿ ಮುಂದೆ ಕ್ಯೂ ನಿಂತು ಖರೀದಿಸುತ್ತಿದ್ದಾರೆ. ಅಲ್ಲದೆ ಸಿಕ್ಕಿಸಿಕ್ಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದಾರೆ. ಇದೀಗ ಕುಡುಕರು ಮಾಡಿದ ಎಡವಟ್ಟಿನಿಂದಾಗಿ ಮೂರು ಬಣವೆಗಳು ಹೊತ್ತಿ ಉರಿದಿರುವ ಘಟನೆ ಬಳ್ಳಾರಿ ನಗರದ ಕಪ್ಪಗಲ್ಲು ರಸ್ತೆಯಲ್ಲಿ ನಡೆದಿದೆ.

    ಕಪ್ಪಗಲ್ಲು ರಸ್ತೆಯ ಡ್ರೀಮ್ ವರ್ಲ್ಡ್ ಶಾಲೆಯ ಹಿಂಭಾಗದ ಹೊಲದಲ್ಲಿರುವ ಮೂರು ಬಣವೆಗಳಿಗೆ ಬೆಂಕಿ ಬಿದ್ದಿದೆ. ಅಲ್ಲದೇ ಪಕ್ಕದಲ್ಲಿದ್ದ ಎಮ್ಮೆಗಳ ಮೈಗೂ ಬೆಂಕಿ ಹೊತ್ತಿಕೊಂಡಿದೆ. ಸುರೇಶ್ ಎಂಬವರ ಮೂರು ಬಣವೆಗಳಿಗೆ ಬೆಂಕಿಬಿದ್ದಿದೆ. ಜೊತೆಗೆ ದನದ ಕೊಟ್ಟಿಗೆಯಲ್ಲಿದ್ದ 12 ಎಮ್ಮೆಗಳ ಪೈಕಿ ಎರಡು ಎಮ್ಮೆಗಳ ಮೈಗೆ ಬೆಂಕಿ ಹೊತ್ತಿಕೊಂಡಿದ್ದು, ಸಣ್ಣಪುಟ್ಟ ಗಾಯಗಳಾಗಿವೆ.

    ಇಂದು ಬೆಳಗಿನ ಜಾವ ಈ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸಲು ಹರಸಾಹಸಪಟ್ಟರು. ಮದ್ಯ ಅಮಲಿನಲ್ಲಿದ್ದವರು ಸಿಗರೇಟ್ ತುಂಡು ಬೀಸಾಡಿದ್ದರಿಂದ ಈ ಬೆಂಕಿ ತಗುಲಿದೆ. ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಜನರು ಹೊಲ, ಗದ್ದೆ ಎಲ್ಲೆಂದರಲ್ಲಿ ಕುಳಿತು ಎಣ್ಣೆ ಹೊಡೆಯುವುದು ಹೆಚ್ಚಾಗಿದೆ. ಹೀಗಾಗಿ ವಿಪರೀತ ಮದ್ಯ ಸೇವನೆ ಮಾಡಿ ಸಿಗರೇಟ್‍ನಿಂದ ಬಣವೆಗಳಿಗೆ ಬೆಂಕಿ ಹೊತ್ತಿದೆ ಎನ್ನಲಾಗಿದೆ.

  • ರೈತನನ್ನು ಅಟ್ಟಾಡಿಸಿ ಬೈಕ್ ಎಸೆದ ಒಂಟಿ ಸಲಗ – 2 ಹಸು, 1 ಎಮ್ಮೆ ಬಲಿ

    ರೈತನನ್ನು ಅಟ್ಟಾಡಿಸಿ ಬೈಕ್ ಎಸೆದ ಒಂಟಿ ಸಲಗ – 2 ಹಸು, 1 ಎಮ್ಮೆ ಬಲಿ

    ಮಂಡ್ಯ: ಕಾಡಿನಿಂದ ಬಂದ ಒಂಟಿ ಸಲಗದ ದಾಳಿಗೆ ಎರಡು ಹಸುಗಳು ಹಾಗೂ ಒಂದು ಎಮ್ಮೆ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದೇವಿರಹಳ್ಳಿ ಗ್ರಾಮದಲ್ಲಿ ಜರುಗಿದೆ.

    ಭೀಮನಕಿಂಡಿ ಬೆಟ್ಟದ ಕಾಡಿನಿಂದ ಇಂದು ಬೆಳಗ್ಗೆ ಒಂಟಿ ಸಲಗವೊಂದು ನೀರು ಕುಡಿಯಲೆಂದು ಭಿಮನಕೆರೆಗೆ ಬಂದಿದೆ. ಈ ವೇಳೆ ಇದ್ದಕ್ಕಿದ್ದ ಹಾಗೆ ಒಂಟಿ ಸಲಗ ಗಾಬರಿಗೊಂಡಿದೆ. ಅಲ್ಲೆ ಪಕ್ಕದಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತರ ಕೃಷ್ಣ ಅವರನ್ನು ಅಟ್ಟಾಡಿಸಿದೆ. ನಂತರ ಕೃಷ್ಣ ಅವರ ಬೈಕ್‍ನ್ನು ಸೊಂಡಿಲಿನಿಂದ ಬಿಸಾಡಿದೆ. ಬಳಿಕ ಅಲ್ಲೇ ಇದ್ದ ಎತ್ತಿನಗಾಡಿಯನ್ನು ಸಂಪೂರ್ಣವಾಗಿ ಜಖಂಗೊಳಿಸಿದೆ.

    ನಂತರ ಮುಂದೆ ಗದ್ದೆಯಲ್ಲಿ ಮೆಯುತ್ತಿದ್ದ ಎರಡು ಹಸುಗಳು ಹಾಗೂ ಒಂದು ಎಮ್ಮೆಯ ಮೇಲೆ ಒಂಟಿ ಸಲಗ ದಾಳಿ ನಡೆಸಿದೆ. ಈ ವೇಳೆ ಗ್ರಾಮಸ್ಥರು ಬಂದು ಕಿರುಚಿದ ಪರಿಣಾಮ ಒಂಟಿ ಸಲಗ ಹೆದರಿ ಓಡಿ ಹೋಗಿದೆ. ಆನೆ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಹಸು ಹಾಗೂ ಎಮ್ಮೆಗಳು ಸಾವನ್ನಪ್ಪಿವೆ. ಹಲಗೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.

  • ಬಿಗಿ ಭದ್ರೆತೆ ನಡುವೆಯೂ ಬಿತ್ತು ಕೋಣ ಬಲಿ

    ಬಿಗಿ ಭದ್ರೆತೆ ನಡುವೆಯೂ ಬಿತ್ತು ಕೋಣ ಬಲಿ

    ದಾವಣಗೆರೆ: ನಗರ ದೇವತೆ ದುಗ್ಗಮ್ಮನ ಜಾತ್ರೆ ಎರಡು ವರ್ಷಗಳಿಗೊಮ್ಮೆ ನಡೆಯಲಿದ್ದು, ಇಲ್ಲಿ ದೇವತೆಗೆ ಕೋಣ ಬಲಿ ನೀಡುವುದೇ ಈ ಜಾತ್ರೆಯ ವಿಶೇಷ. ಆದರೆ ಜಿಲ್ಲಾಡಳಿತ ಪ್ರಾಣಿ ಬಲಿಯನ್ನು ಸಂಪೂರ್ಣ ನಿಷೇಧ ಮಾಡಿದೆ. ಅಲ್ಲದೆ ದುಗ್ಗಮ್ಮ ದೇವಸ್ಥಾನ ಸುತ್ತ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕೈಗೊಂಡು ಪ್ರಾಣಿ ಬಲಿ ನಿಷೇಧದ ನಡುವೆಯೂ ದಾವಣಗೆರೆ ನಗರ ದುಗ್ಗಮ್ಮನಿಗೆ ಕೋಣ ಬಲಿ ನೀಡಲಾಗಿದೆ.

    ನಗರದ ದುಗ್ಗಮ್ಮ ದೇವಸ್ಥಾನ ಸಮೀಪದಲ್ಲೇ ಇರುವ ಸೀಮೆಎಣ್ಣೆ ಬಂಕ್ ಬಳಿಯಲ್ಲಿ ಕೋಣವನ್ನು ಬಲಿ ನೀಡಲಾಗಿದೆ ಎನ್ನಲಾಗಿದೆ. ಕೋಣ ಬಲಿ ನೀಡದಂತೆ ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿತ್ತು. ಡಿಸಿ ಮಹಾಂತೇಶ್ ಬೀಳಗಿ, ಎಸ್‍ಪಿ ಹನುಮಂತರಾಯ ರಾತ್ರಿಯಲ್ಲೇ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಅದೇಗೋ ಬೇರೊಂದು ಸ್ಥಳದಲ್ಲಿ ಕೋಣ ಬಲಿ ನೀಡಲಾಗಿದೆ.

    ಜಾತ್ರೆಯಲ್ಲಿ ಕೋಣ ಬಲಿ ನೀಡಿದರೆ ಮಾತ್ರ ತಾಯಿ ಸಂತುಷ್ಟಿಯಾಗುತ್ತಾಳೆ ಎನ್ನುವ ನಂಬಿಕೆಯೊಂದಿಗೆ ದೇವಸ್ಥಾನ ಪ್ರದೇಶ ಬಿಟ್ಟು ಇನ್ನೊಂದು ಪ್ರದೇಶದಲ್ಲಿ ಊಧೋ ಊಧೋ ಎಂದು ಭಕ್ತರು ಕೋಣವನ್ನು ಬಲಿ ಕೊಟ್ಟಿದ್ದಾರೆ ಎನ್ನಲಾಗಿದ್ದು ಬಳಿಕ ಕೋಣದ ರಕ್ತದಲ್ಲಿ ಚರಗ ಹಾಕಿದ್ದಾರೆ. ಅಲ್ಲದೆ ರಾತ್ರಿ ದುಗ್ಗಮ್ಮ ದೇವಿಗೆ ಬಿಟ್ಟಂತಹ ಕೋಣದಿಂದ ಸಿರಂಜ್ ಮೂಲಕ ವೈದ್ಯರು ರಕ್ತವನ್ನು ತೆಗೆದು ದುಗ್ಗಮ್ಮ ದೇವಿಗೆ ಅರ್ಪಿಸಿದರು. ದೇವಸ್ಥಾನದ ಆವರಣದಲ್ಲಿ ಕೋಣವನ್ನು ಬಲಿ ನೀಡುತ್ತಾರೆ ಎನ್ನುವ ಮಾಹಿತಿಯಿಂದ ಇಡೀ ರಾತ್ರಿ ದೇವಸ್ಥಾನ ಆವರಣದಲ್ಲಿ ಜಿಲ್ಲಾಧಿಕಾರಿ, ಎಸ್‍ಪಿ ಸೇರಿದಂತೆ ಹಲವು ಅಧಿಕಾರಿಗಳು ಜಾಗರಣೆ ಮಾಡಿದರು. ಆದರೂ ಕೂಡ ದೇವಸ್ಥಾನದಿಂದ ದೂರದಲ್ಲಿ ದೇವರ ಕೋಣವನ್ನು ಬಲಿಕೊಟ್ಟು ದೇವತೆಗೆ ಭಕ್ತಿಯಿಂದ ಕೋಣದ ತಲೆ ಮೇಲೆ ದೀಪವಿಟ್ಟು ನೈವೇದ್ಯ ಅರ್ಪಿಸಿದರು.

  • ಹಾಲು ಉತ್ಪಾದನೆಯಲ್ಲಿ ವಿಶ್ವದಾಖಲೆ ಬರೆದಿದ್ದ ಎಮ್ಮೆ 51 ಲಕ್ಷಕ್ಕೆ ಮಾರಾಟ

    ಹಾಲು ಉತ್ಪಾದನೆಯಲ್ಲಿ ವಿಶ್ವದಾಖಲೆ ಬರೆದಿದ್ದ ಎಮ್ಮೆ 51 ಲಕ್ಷಕ್ಕೆ ಮಾರಾಟ

    – ಎಮ್ಮೆ ಮಾರಿ ಕಷ್ಟದ ಕಥೆ ಬಿಚ್ಚಿಟ್ಟ ಮಾಲೀಕ

    ಚಂಡೀಗಢ: ಹಾಲು ಉತ್ಪಾದನೆಯಲ್ಲಿ ವಿಶ್ವ ದಾಖಲೆ ಬರೆದಿದ್ದ ಹರಿಯಾಣದ ಮುರ್ರಾ ತಳಿಯ ಸರಸ್ವತಿ ಹೆಸರಿನ ಎಮ್ಮೆ 51 ಲಕ್ಷ ರೂ.ಗೆ ಮಾರಾಟವಾಗಿದೆ.

    ಹಿಸಾರ್ ಜಿಲ್ಲೆಯ ಲಿಟಾನಿಯ ರೈತ ಸುಖ್‍ಬೀರ್ ಸಿಂಗ್ ಧಂಡಾ ಅವರ ಮಾಲೀಕತ್ವದ ಸರಸ್ವತಿ ದಿನಕ್ಕೆ 33.131 ಕೆಜಿ ಹಾಲು ನೀಡುವ ಮೂಲಕ ಪಾಕಿಸ್ತಾನ ಎಮ್ಮೆಯ ದಾಖಲೆಯನ್ನು ಮುರಿತ್ತು. ಈ ಎಮ್ಮೆಯನ್ನು ಸದ್ಯ ಲುಧಿಯಾನದ ಸಿಕ್ ಪವಿತ್ರ ಕ್ಷೇತ್ರಕ್ಕಾಗಿ ಸಿಕ್ ಸಮುದಾಯ ಖರೀದಿಸಿದೆ.

    ವಾಸ್ತವವಾಗಿ, ಸುಖ್‍ಬೀರ್ ಅವರು ಕೆಲವು ದಿನಗಳ ಹಿಂದೆ ಸರಸ್ವತಿಯೊಂದಿಗೆ ಲುಧಿಯಾನದ ಜಾಗ್ರಾವ್‍ನಲ್ಲಿ ನಡೆದ ಡೈರಿ ಮತ್ತು ಅಗ್ರಿ ಎಕ್ಸ್‍ಪೋದಲ್ಲಿ ಭಾಗವಹಿಸಲು ಹೋಗಿದ್ದರು. ಅಲ್ಲಿ ಸರಸ್ವತಿ 33.131 ಕೆಜಿ ಹಾಲು ನೀಡುವ ಮೂಲಕ ವಿಶ್ವ ದಾಖಲೆಯನ್ನು ಮಾಡಿತ್ತು. ಹೀಗಾಗಿ ಸರಸ್ವತಿ ಮಾಲೀಕ ಸುಖ್‍ಬೀರ್ ಅವರಿಗೆ ಎರಡು ಲಕ್ಷ ರೂಪಾಯಿ ಬಹುಮಾನ ನೀಡಿ ಗೌರವಿಸಲಾಗಿತ್ತು. ಇದಕ್ಕೂ ಮೊದಲು ಅಂದ್ರೆ 2019ರ ಡಿಸೆಂಬರ್ ತಿಂಗಳಿನಲ್ಲಿ 32.050 ಕೆಜಿ ಹಾಲು ನೀಡಿದ ಪಾಕಿಸ್ತಾನದ ಎಮ್ಮೆಗಿಂತ ಅತಿ ಹೆಚ್ಚು ಹಾಲು ನೀಡಿದ ದಾಖಲೆ ಮಾಡಿತ್ತು.

    1.30 ಲಕ್ಷ ರೂ, ಖರೀದಿಸಿದ್ದ ಎಮ್ಮೆ:
    ಬಾರ್ವಾಲಾದ ಖೋಖಾ ಗ್ರಾಮದ ರೈತ ಗೋಪಿರಾಮ್ ಅವರಿಂದ ನಾಲ್ಕು ವರ್ಷಗಳ ಹಿಂದೆ ಸರಸ್ವತಿಯನ್ನು 1.30 ಸಾವಿರ ರೂಪಾಯಿಗೆ ಖರೀದಿಸಿದ್ದೆ. ಸರಸ್ವತಿ ಈಗಾಗಲೇ ಕರುಗಳಿಗೆ ಜನ್ಮ ನೀಡಿದೆ. ಅಷ್ಟೇ ಅಲ್ಲದೆ ಹಾಲು ಮತ್ತು ವೀರ್ಯವನ್ನು ಮಾರಾಟ ಮಾಡುವ ಮೂಲಕ ಒಂದು ಲಕ್ಷ ರೂಪಾಯಿಗೂ ಅಧಿಕ ಗಳಿಸಿದ್ದೇನೆ ಎಂದು ಮಾಲೀಕ ಸುಖ್‍ಬೀರ್ ತಿಳಿಸಿದ್ದಾರೆ.

    ಎಮ್ಮೆ ಮಾರಿದ್ಯಾಕೆ?
    ಸರಸ್ವತಿಯನ್ನು ಯಾರಾದರು ಕಳವು ಮಾಡುತ್ತಾರೆ ಎಂಬ ಆತಂಕ ಸುಖ್‍ಬೀರ್ ಅವರಿಗೆ ಇತ್ತು. ಜೊತೆಗೆ ಒಂದು ಕೋಟಿ ರೂಪಾಯಿಗೆ ಸಹ ಎಮ್ಮೆಯನ್ನು ಮಾರಾಟ ಮಾಡಲು ಅವರು ಸಿದ್ಧರಿರಲಿಲ್ಲ. ಹೀಗಾಗಿ ಎಮ್ಮೆ ಮಾರಾಟ ಮಾಡುವ ಮೊದಲು ರೈತ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಹಿಸಾರ್ ಅಷ್ಟೇ ಅಲ್ಲದೆ ಉತ್ತರ ಪ್ರದೇಶ, ಪಂಜಾಬ್ ಹಾಗೂ ರಾಜಸ್ಥಾನದ ಸುಮಾರು 700 ರೈತರು ಭಾಗವಹಿಸಿದ್ದರು. ಈ ವೇಳೆ ಲುಧಿಯಾನದ ಸಿಕ್ ಪವಿತ್ರ ಕ್ಷೇತ್ರಕ್ಕಾಗಿ ಸಿಕ್ ಸಮುದಾಯ ಎಮ್ಮೆ ಸರಸ್ವತಿಯನ್ನು ಖರೀದಿಸಿದೆ.

    ಅನೇಕ ದಾಖಲೆ ಬರೆದ ಸರಸ್ವತಿ:
    ಸರಸ್ವತಿ ಈ ಮೊದಲು ಸುಖ್‍ಬೀರ್ ಸಿಂಗ್ ಧಂಡಾ ಅವರಿಗೆ ಅನೇಕ ಹೆಮ್ಮೆಪಡುವಂತಹ ದಾಖಲೆಗಳನ್ನು ಮಾಡಿದೆ. ಈ ಕುರಿತು ಸುಖ್‍ಬೀರ್ ಸಿಂಗ್ ಮಾತನಾಡಿ, ‘ಸರಸ್ವತಿ ಕಳೆದ ವರ್ಷ ಹಿಸಾರ್‍ನಲ್ಲಿ 29.31 ಕೆಜಿ ಹಾಲು ನೀಡುವ ಮೂಲಕ ಪ್ರಥಮ ಬಹುಮಾನ ಗೆದ್ದಿತ್ತು. ಹಿಸಾರ್‍ನ ಸೆಂಟ್ರಲ್ ಇನ್‍ಸ್ಟಿಟ್ಯೂಟ್ ಆಫ್ ಬಫಲೋ ರಿಸರ್ಚ್ ಕಾರ್ಯಕ್ರಮದಲ್ಲಿ ಸರಸ್ವತಿ 28.7 ಕೆಜಿ ಹಾಲು ನೀಡುವ ಮೂಲಕ ಅಗ್ರಸ್ಥಾನ ಪಡೆಯಿತು. ಹರಿಯಾಣ ಜಾನುವಾರು ಅಭಿವೃದ್ಧಿ ಮಂಡಳಿಯಲ್ಲಿ 28.8 ಕೆಜಿ ಹಾಲು ಉತ್ಪಾದನೆಯೊಂದಿಗೆ ಸ್ಪರ್ಧೆಯನ್ನು ಗೆದ್ದಿತ್ತು ಎಂದು ತಿಳಿಸಿದ್ದಾರೆ.

  • ಕೋಣದ ರಂಪಾಟ – ರಸ್ತೆಯಲ್ಲಿ ಜನರು ಹೈರಾಣು

    ಕೋಣದ ರಂಪಾಟ – ರಸ್ತೆಯಲ್ಲಿ ಜನರು ಹೈರಾಣು

    ಚಿಕ್ಕಮಗಳೂರು: ಕೋಣವೊಂದು ರಸ್ತೆ ಮಧ್ಯೆ ಮನಸ್ಸೋ ಇಚ್ಛೆ ಓಡಾಡಿ ಎದುರಿಗೆ ಬಂದ ಜನ, ಅಡ್ಡ ಬಂದ ಕಾರು-ಬೈಕ್‍ಗಳನ್ನು ಹಾನಿಗೊಳಿಸಿದೆ.

    ಜಿಲ್ಲೆಯ ತರೀಕೆರೆ ತಾಲೂಕಿನ ಕೋಡಿಕ್ಯಾಂಪ್ ಬಳಿ ರಸ್ತೆ ಮಧ್ಯೆ ಕೋಣ ನಡೆಸಿದ ದಾಳಿಗೆ ಜನ ಹೈರಾಣಾಗಿದ್ದಾರೆ. ಕೋಣದ ಆರೋಗ್ಯ ಸ್ಥಿತಿ ಏನಾಗಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ ಕೋಣದ ರಂಪಾಟಕ್ಕೆ ಜನ ಕಂಗಾಲಾಗಿದ್ದಾರೆ. ಬೈಕ್‍ನಲ್ಲಿ ಬರುತ್ತಿದ್ದ ದಂಪತಿಗೆ ಕೋಣ ಗುದ್ದಿರುವುದರಿಂದ ದಂಪತಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.

    ಕೋಣದ ಅರ್ಭಟ ನೋಡಿ ಹಿಡಿದು ಕಟ್ಟಿಹಾಕಲು ಹೋದ ಸ್ಥಳೀಯ ಕೆಲ ಯುವಕರಿಗೂ ಗಾಯವಾಗಿದೆ. ಒಂದೂವರೆ-ಎರಡು ಕಿ.ಮೀ. ದೂರದಿಂದ ಏಕಾಏಕಿ ಮನಸ್ಸೋ ಇಚ್ಛೆ ಓಡಿ ಬಂದ ಕೋಣ ನಾಲ್ಕು ಬೈಕ್‍ಗಳ ಮೇಲೆ ದಾಳಿ ಮಾಡಿದೆ. ಸೇಡನ್ನು ತೀರಿಸಿಕೊಳ್ಳುವಂತೆ ನಿಂತಿದ್ದ ಬೈಕ್ ಮೇಲೆ ಮೇಲಿಂದ ಮೇಲೆ ದಾಳಿ ಮಾಡಿದೆ. ಕೋಣವನ್ನು ಸ್ಥಳೀಯರು ಹರಸಾಹಸ ಪಟ್ಟು ಕಟ್ಟಿಹಾಕಿದರೂ ಹಗ್ಗದ ಸಮೇತ ಕಿತ್ತುಕೊಂಡು ಬಂದ ಕೋಣ ಮತ್ತೆ ಕಾರು-ಬೈಕ್‍ಗಳ ಮೇಲೆ ದಾಳಿ ಮಾಡಿದೆ.

    ಕೋಣದ ದಾಳಿಯಿಂದ ಎಂಟಕ್ಕೂ ಹೆಚ್ಚು ಜನರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ನಾಲ್ಕಕ್ಕೂ ಹೆಚ್ಚು ಬೈಕ್‍ಗಳು ಕೂಡ ಡ್ಯಾಮೇಜ್ ಆಗಿವೆ. ಕೋಣಕ್ಕೆ ಹುಚ್ಚು ಹಿಡಿದಿರಬಹುದೆಂದು ಎಂದು ಹೇಳಲಾಗಿದೆ.

  • ಕಸಾಯಿಖಾನೆಗೆ ಸಾಗಿಸದಂತೆ ಮಂಡಿಯೂರಿ ಬೇಡಿಕೊಂಡ ಗರ್ಭಿಣಿ ಎಮ್ಮೆ- ವಿಡಿಯೋ

    ಕಸಾಯಿಖಾನೆಗೆ ಸಾಗಿಸದಂತೆ ಮಂಡಿಯೂರಿ ಬೇಡಿಕೊಂಡ ಗರ್ಭಿಣಿ ಎಮ್ಮೆ- ವಿಡಿಯೋ

    – ಎಮ್ಮೆ ಕಣ್ಣೀರಿಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
    – ಎಮ್ಮೆ ಉಳಿಸಲು 2.5 ಲಕ್ಷ ರೂ. ನೀಡಿದ ನೆಟ್ಟಿಗರು

    ಬೀಜಿಂಗ್: ಕಸಾಯಿಖಾನೆಗೆ ಸಾಗಿಸದಂತೆ ಗರ್ಭಿಣಿ ಎಮ್ಮೆಯೊಂದು ಮಂಡಿಯೂರಿ ಬೇಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

    ತನ್ನ ಹಾಗೂ ಮಗುವಿನ ಜೀವ ಉಳಿಸುವಂತೆ ಎಮ್ಮೆಯು ಕಸಾಯಿಖಾನೆ ಸಿಬ್ಬಂದಿ ಮುಂದೆ ಮೊಣಕಾಲುಗಳ ಮೇಲೆ ಕುಳಿತುಕೊಂಡಿದೆ. ಎಮ್ಮೆಯು ತನ್ನ ಯಜಮಾನನನ್ನು ಬಿಡಲು ಸಿದ್ಧರಿಲ್ಲ. ಜೊತೆಗೆ ಕಣ್ಣೀರನ್ನು ಸಹ ಹಾಕಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

    ಮಾಧ್ಯಮ ವರದಿಗಳ ಪ್ರಕಾರ, ಈ ಘಟನೆ ಭಾನುವಾರ ಸಂಭವಿಸಿದೆ. ಗ್ವಾಂಡೊಂಗ್ ಪ್ರಾಂತ್ಯದ ಶಾಂತೌನಲ್ಲಿ ಎಮ್ಮೆಯನ್ನು ಕಸಾಯಿಖಾನೆಗೆ ಮಾರಾಟ ಮಾಡಲಾಗುತ್ತಿತ್ತು. ಆದರೆ ಎಮ್ಮೆ ಹೋಗಲು ಸಿದ್ಧವಾಗಿಲ್ಲ. ಕಸಾಯಿಖಾನೆ ಸಿಬ್ಬಂದಿಯ ಭಾರೀ ಪ್ರಯತ್ನ ಬಳಿಕ ಎಮ್ಮೆ ಲಾರಿಯಿಂದ ಕೆಳಗೆ ಇಳಿಯಿತು. ಅಷ್ಟೇ ಅಲ್ಲದೆ ಅಲ್ಲಿಯೂ ಮೊಣಕಾಲುಗಳ ಮೇಲೆ ನಿಂತು ಪರಿಪರಿಯಾಗಿ ಬೇಡಿಕೊಂಡಿತು. ಈ ದೃಶ್ಯವನ್ನು ಸ್ಥಳದಲ್ಲಿದ್ದ ಯಾರೋ ಒಬ್ಬರು ವಿಡಿಯೋ ಮಾಡಿದ್ದಾರೆ. ಬಳಿಕ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ವಿಡಿಯೋವನ್ನು ನೋಡಿದ ನೆಟ್ಟಿಗರು ಮರುಕ ವ್ಯಕ್ತಪಡಿಸಿ, ಎಮ್ಮೆಯನ್ನು ಉಳಿಸಲು ಮುಂದಾದರು. ಈ ನಿಟ್ಟಿನಲ್ಲಿ ಆನ್‍ಲೈನ್‍ನಲ್ಲಿ 2.5 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿ ಕಸಾಯಿಖಾನೆಯ ನೌಕರರಿಗೆ ಹಸ್ತಾಂತರಿಸಿದ್ದಾರೆ. ಈ ಮೂಲಕ ಗರ್ಭಿಣಿ ಎಮ್ಮೆಯ ಪ್ರಾಣ ಉಳಿದಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಸಾಯಿಖಾನೆ ಉದ್ಯೋಗಿ, ನಾವು ಎಮ್ಮೆಯನ್ನು ಲಾರಿಯಿಂದ ಕೆಳಗೆ ಇಳಿಸುವಾಗ ಅದು ನೆಲದ ಮೇಲೆ ಕುಳಿತುಕೊಳ್ಳುತ್ತಿತ್ತು. ಅಷ್ಟೇ ಅಲ್ಲದೆ ಜೋರಾಗಿ ಕೂಗುತ್ತಿತ್ತು ಎಂದು ತಿಳಿಸಿದ್ದಾರೆ.

    ಮಾಧ್ಯಮವೊಂದರ ಪ್ರಕಾರ, ಈ ವಿಡಿಯೋದಲ್ಲಿ ಎಮ್ಮೆಯು ತಾನು ಬದುಕಬೇಕು ಎಂಬ ಬಯಕೆಯನ್ನು ತೋರಿಸಿದೆ. ಇದನ್ನು ಅನೇಕ ಪ್ರಾಣಿಪ್ರೀಯರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದರ ನಂತರ ಕೆಲವರು ಎಮ್ಮೆ ಉಳಿಸಲು ಬೆಲೆಯನ್ನು ನಿಗದಿಪಡಿಸಲು ಕಸಾಯಿಖಾನೆಯ ಮಾಲೀಕರನ್ನು ಕೇಳಿದ್ದರು. ಹೀಗಾಗಿ ಎಮ್ಮೆಯ ಬೆಲೆಯನ್ನು 24,950 ಯುವಾನ್‍ಗೆ (ಸುಮಾರು 2.5 ಲಕ್ಷ ರೂಪಾಯಿಗಳಿಗೆ) ಖರೀದಿಸಿದರು. ನಂತರ ಎಮ್ಮೆಯನ್ನು ಸ್ಥಳೀಯ ಬೌದ್ಧ ದೇವಾಲಯಕ್ಕೆ ಹಸ್ತಾಂತರಿಸಿದ್ದಾರೆ ಎಂದು ಹೇಳಲಾಗಿದೆ.

    ಜನರು ಎಮ್ಮೆಯನ್ನು ವಾಹನದಲ್ಲಿ ಹೊತ್ತುಕೊಂಡು ಹೋಗಿ ಬೌದ್ಧ ದೇವಾಲಯಕ್ಕೆ ಹಸ್ತಾಂತರಿಸಿದ ವಿಡಿಯೋವನ್ನು ಮಾಡಲಾಗಿದೆ. ಜೊತೆಗೆ ದಾನಿಗಳು ಎಮ್ಮೆಯ ಆರೈಕೆಗಾಗಿ 40 ಸಾವಿರ ರೂ. (4,000 ಯುವಾನ್) ಪ್ರತ್ಯೇಕವಾಗಿ ನೀಡಿದ್ದಾರೆ ಎಂದು ವರದಿಯಾಗಿದೆ.

  • ಕೆರೆ ನೀರಿನಲ್ಲಿ ಸಿಲುಕಿದ್ದ ಎಮ್ಮೆ ರಕ್ಷಿಸಲು ಹೋಗಿ ಯುವಕ ಸಾವು

    ಕೆರೆ ನೀರಿನಲ್ಲಿ ಸಿಲುಕಿದ್ದ ಎಮ್ಮೆ ರಕ್ಷಿಸಲು ಹೋಗಿ ಯುವಕ ಸಾವು

    ಬೀದರ್: ಎಮ್ಮೆ ರಕ್ಷಿಸಲು ಹೋಗಿದ್ದ ಯುವಕನ್ನೊಬ್ಬ ಕೆರೆ ನೀರಿನಲ್ಲಿ ಸಿಲುಕಿ ಮೃತಪಟ್ಟ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಾರಾಯಣಪೂರ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಗೋಪಾಲ ರೆಡ್ಡಿ ಪಲರಡ್ಡೆ(22) ಮೃತ ಯುವಕ. ಇಂದು ಮಧ್ಯಾಹ್ನ ಎಮ್ಮೆ ಮೇಯಿಸಲೆಂದು ಜಮೀನಿಗೆ ತೆರಳಿದಾಗ, ಗ್ರಾಮದ ಸಮೀಪವೇ ಇರುವ ಕೆರೆ ನೀರಿನಲ್ಲಿ ಇಳಿದ ಎಮ್ಮೆ ನೀರಿನಾಳದಲ್ಲಿನ ಕೆಸರಿನಲ್ಲಿ ಸಿಲುಕಿ ಹೊರ ಬರಲಾಗದೆ ಒದ್ದಾಡುತ್ತಿತ್ತು.

    ಇದನ್ನು ಗಮನಿಸಿದ ಗೋಪಾಲರೆಡ್ಡಿ ನೀರಿನಿಂದ ಎಮ್ಮೆ ಹೊರ ತರಲೆಂದು ತಾನು ಕೆರೆಗೆ ಇಳಿದಿದ್ದಾನೆ. ಆದರೆ ತಾನು ಕೂಡ ನೀರಿನಾಳದಲ್ಲಿನ ಕೆಸರಿನಲ್ಲಿ ಸಿಲುಕಿ ಹೊರ ಬರಲಾಗದೇ ಮೃತಪಟ್ಟಿದ್ದಾನೆ. ಸುದ್ದಿ ತಿಳಿದ ಗ್ರಾಮಸ್ಥರು ತಕ್ಷಣ ಸ್ಥಳಕ್ಕೆ ಧಾವಿಸಿ, ಯುವಕನ್ನು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆಸ್ಪತ್ರೆ ತಲುಪವಷ್ಟರಲ್ಲಿ ಯುವಕ ಮೃತಪಟ್ಟಿದ್ದ.