Tag: Budget Session

  • ಬಜೆಟ್ ಅಧಿವೇಶನ ಆರಂಭಕ್ಕೆ ಕ್ಷಣಗಣನೆ- ಒಂದು ತಿಂಗಳು ಸದನದಲ್ಲಿ ಜಂಗೀ ಕುಸ್ತಿ

    ಬಜೆಟ್ ಅಧಿವೇಶನ ಆರಂಭಕ್ಕೆ ಕ್ಷಣಗಣನೆ- ಒಂದು ತಿಂಗಳು ಸದನದಲ್ಲಿ ಜಂಗೀ ಕುಸ್ತಿ

    ಬೆಂಗಳೂರು: ಸೋಮವಾರದಿಂದ ಒಂದು ತಿಂಗಳ ಕಾಲ ಸುದೀರ್ಘ ಬಜೆಟ್ ಅಧಿವೇಶನ ಪ್ರಾರಂಭವಾಗಲಿದೆ. ಮಾರ್ಚ್ 2 ರಿಂದ 31 ರವರೆಗೆ ಸುಧೀರ್ಘ ಬಜೆಟ್ ಕಲಾಪ ನಡೆಯಲಿದೆ. ಇಡೀ ತಿಂಗಳು ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ನಿತ್ಯ ಜಂಗೀ ಕುಸ್ತಿಗೆ ಉಭಯ ಸದನಗಳು ವೇದಿಕೆಯಾಗಲಿವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸದನದಲ್ಲಿ ಬಿಜೆಪಿಯನ್ನು ಕಟ್ಟಿ ಹಾಕಲು ಸಾಕಷ್ಟು ತಯಾರಿ ಮಾಡಿಕೊಂಡಿವೆ. ಪ್ರತಿಪಕ್ಷಗಳಿಗೆ ತಕ್ಕ ಪ್ರತಿಯೇಟು ಕೊಡಲು ಬಿಜೆಪಿ ಸಹ ಸಿದ್ಧತೆ ಮಾಡಿಕೊಂಡಿದೆ.

    ಮುಖ್ಯವಾಗಿ ಬಜೆಟ್ ಅಧಿವೇಶನದಲ್ಲಿ ನೆರೆ ಹಾವಳಿ, ಅತಿವೃಷ್ಠಿ, ಅಸಮರ್ಪಕ ಪರಿಹಾರ ವಿತರಣೆ, ನೆರೆ ಪರಿಹಾರದಲ್ಲಿ ದೋಷ-ಅಕ್ರಮ, ಕೇಂದ್ರದ ತಾತ್ಸಾರ, ಕಾನೂನು ಸುವ್ಯವಸ್ಥೆ, ಕ್ಷೇತ್ರಗಳಿಗೆ ಅನುದಾನ ಕಡಿತ, ಕುಂಠಿತ ಅಭಿವೃದ್ಧಿ, ಉತ್ತರ ಕರ್ನಾಟಕದ ಸಮಸ್ಯೆಗಳು, ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಕುರಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗಳು ಸದನದಲ್ಲಿ ಸದ್ದು ಮಾಡಲಿವೆ. ರಾಜ್ಯ ಬಜೆಟ್ ನ ಲೋಪದೋಷಗಳನ್ನೂ ಸದನದಲ್ಲಿ ಪ್ರಸ್ತಾಪಸಿ ಸರ್ಕಾರಕ್ಕೆ ಪ್ರತಿಪಕ್ಷಗಳು ತರಾಟೆಗೆ ತೆಗೆದುಕೊಳ್ಳಲಿವೆ.

    ಮಾರ್ಚ್ 5 ರಂದು ಸಿಎಂ ಯಡಿಯೂರಪ್ಪ ರಾಜ್ಯ ಬಜೆಟ್ ಮಂಡಿಸಲಿದ್ದಾರೆ. ಇದಕ್ಕೂ ಮುನ್ನ ಬಜೆಟ್ ಅಧಿವೇಶನದ ಮೊದಲ ದಿನವಾದ ನಾಳೆ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಸಿಎಂ ಉತ್ತರ ನೀಡಲಿದ್ದಾರೆ. ನಾಳೆ ರಾಜ್ಯಪಾಲರ ಭಾಷಣ ಮೇಲಿನ ಚರ್ಚೆಗೆ ಉತ್ತರ ನೀಡಿದ ಬಳಿಕ ವಿಧಾನಸಭೆಯಲ್ಲಿ ಒಟ್ಟು 8 ಮಹತ್ವದ ವಿಧೇಯಕಗಳು ಮಂಡನೆಯಾಗಲಿವೆ. ನಂತರ ಮಾರ್ಚ್ 3 ಮತ್ತು 4 ಎರಡು ದಿನಗಳ ಕಾಲ ಸಂವಿಧಾನದ ಕುರಿತು ಉಭಯ ಸದನಗಳಲ್ಲೂ ವಿಶೇಷ ಚರ್ಚೆ ನಡೆಯಲಿದೆ.

  • ಅಧಿವೇಶನಕ್ಕೆ ಮಿನಿಸ್ಟರ್ ಆಗಿ ಎಂಟ್ರಿ ಕೊಡ್ತೀನಿ: ಮಹೇಶ್ ಕುಮಟಳ್ಳಿ ವಿಶ್ವಾಸ

    ಅಧಿವೇಶನಕ್ಕೆ ಮಿನಿಸ್ಟರ್ ಆಗಿ ಎಂಟ್ರಿ ಕೊಡ್ತೀನಿ: ಮಹೇಶ್ ಕುಮಟಳ್ಳಿ ವಿಶ್ವಾಸ

    ಬೆಂಗಳೂರು: ಕೊನೆಗೂ ಮುಖ್ಯಮಂತ್ರಿ ಯಡಿಯೂರಪ್ಪ ದೆಹಲಿಗೆ ತೆರಳಿದ್ದಾರೆ. ಈ ಬೆನ್ನಲ್ಲೇ ಸಚಿವ ಸ್ಥಾನದ ಆಕಾಂಕ್ಷಿ ಶಾಸಕರಲ್ಲಿ ಎದೆ ಬಡಿತ ಹೆಚ್ಚಾಗಿದೆ. ನಿನ್ನೆ ಬೆಳಗಾವಿಯಲ್ಲಿ ಎಲ್ಲ ಗೆದ್ದವರನ್ನೂ ಸಚಿವರಾಗಿ ಮಾಡ್ತೀವಿ ಅಂದಿದ್ದ ಯಡಿಯೂರಪ್ಪ ಹೇಳಿಕೆಯಿಂದ ಮಿತ್ರಮಂಡಳಿ ತಂಡ ಸಚಿವರಾಗುವ ಕನಸು ಕಾಣಲಾರಂಭಿಸಿದೆ. ಬೆಂಗಳೂರಿನಲ್ಲಿ ಇಂದು ಮಾತಾಡಿದ ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ನಾನು ಸಚಿವನಾಗಿ ಬಜೆಟ್ ಅಧಿವೇಶನಕ್ಕೆ ಎಂಟ್ರಿ ಕೊಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಶಾಸಕರ ಭವನದಲ್ಲಿ ಸಚಿವ ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ಮಾತಾಡಿದ ಮಹೇಶ್ ಕುಮಟಳ್ಳಿ, ಸಚಿವನಾಗಲು ನನಗೇನೂ ಗಡಿಬಿಡಿ ಇಲ್ಲ. ಆದ್ರೆ ನನ್ನನ್ನು ಸಚಿವನಾಗಿ ಮಾಡಿದರೆ ಅದಕ್ಕೆ ತಕ್ಕಂತೆ ಸಂತೋಷದಿಂದ ಕೆಲಸ ಮಾಡುತ್ತೇನೆ. ಯಾವ ಖಾತೆ ಕೊಟ್ಟರೂ ನನ್ನ ಸಾಮಥ್ರ್ಯ ಮೀರಿ ಕೆಲಸ ಮಾಡ್ತೇನೆ. ಮುಂಬರುವ ಬಜೆಟ್ ಅಧಿವೇಶನಕ್ಕೆ ಸಚಿವನಾಗಿಯೇ ಎಂಟ್ರಿ ಕೊಡ್ತೇನೆ ಅಂದ್ರು. ಇನ್ನು ಒಂದೊಮ್ಮೆ ಸಚಿವ ಸ್ಥಾನ ಸಿಗದಿದ್ರೆ ಶಾಸಕನಾಗಿ ಕೆಲಸ ಮಾಡ್ತೇನೆ. ಸಂಪುಟ ವಿಸ್ತರಣೆ ವಿಳಂಬಕ್ಕೆ ನಾವು ಯಾರೂ ಸಿಎಂ ಮೇಲೆ ಮುನಿಸಿಕೊಂಡಿಲ್ಲ. ವರಿಷ್ಠರ ನಿರ್ಧಾರಕ್ಕೆ ಬದ್ಧ, ಇದರಲ್ಲಿ ಮುನಿಸಿಕೊಳ್ಳುವ ಪ್ರಶ್ನೆ ಇಲ್ಲ ಎಂದು ಇದೇ ವೇಳೆ ಕುಮಟಳ್ಳಿ ಹೇಳಿದರು. ಇದನ್ನೂ ಓದಿ: ನನ್ಗೆ ಮಂತ್ರಿಗಿರಿ ಸಿಗದಿದ್ರೆ ಆಕಾಶವೇನು ಬೀಳಲ್ಲ: ಹೆಚ್.ವಿಶ್ವನಾಥ್

    ರಮೇಶ್ ಜಾರಕಿಹೊಳಿಗೆ ಉಪಮುಖ್ಯಮಂತ್ರಿ ಸ್ಥಾನಕ್ಕೆ ಮಹೇಶ್ ಕುಮಟಳ್ಳಿ ಒತ್ತಾಯಿಸಿದ್ರು. ಬೆಳಗಾವಿಗೆ ಮತ್ತೊಂದು ಡಿಸಿಎಂ ಸ್ಥಾನ ಕೊಟ್ರೆ ಒಳ್ಳೆಯದು. ರಮೇಶ್ ಜಾರಕಿಹೊಳಿಯವರಿಗೆ ಡಿಸಿಎಂ ಕೊಡಬೇಕು ಅನ್ನೋದು ನಮ್ಮ ಆಗ್ರಹವೂ ಇದೆ. ಈಗಾಗಲೇ ಸವದಿಯವರು ಬೆಳಗಾವಿಯಿಂದ ಡಿಸಿಎಂ ಆಗಿದ್ದಾರೆ. ಸವದಿ ಜೊತೆ ರಮೇಶ್ ಜಾರಕಿಹೊಳಿಯವರಿಗೂ ಡಿಸಿಎಂ ಸ್ಥಾನ ಕೊಟ್ಟರೆ ಅದೊಂದು ಐತಿಹಾಸಿಕ ಆಗಲಿದೆ. ಒಂದೇ ಜಿಲ್ಲೆಯಿಂದ ಇಬ್ಬರು ಡಿಸಿಎಂ ಆಗಿ ಕೆಲಸ ಮಾಡೋದು ಇತಿಹಾಸ ಎಂದು ಮಹೇಶ್ ಕುಮಟಳ್ಳಿ ಹೇಳಿದರು. ಚುನಾವಣೆಯಲ್ಲಿ ನಮಗೆ ಜನ ಆಶೀರ್ವಾದ ಮಾಡಿ ಶಾಸಕರಾಗಿ ಮಾಡಿದ್ರು. ಹಿರಿಯರಾದ ವಿಶ್ವನಾಥ್ ಅವರಿಗೆ ಜನಾದೇಶ ಸಿಗಲಿಲ್ಲ. ವಿಶ್ವನಾಥ್ ಅವರಿಗೂ ಬಿಜೆಪಿ ವರಿಷ್ಠರು ಸೂಕ್ತ ಸ್ಥಾನ ಕೊಡುವ ಭರವಸೆ ಇದೆ. ವಿಶ್ವನಾಥ್ ಅವರನ್ನೂ ನಮ್ಮ ಜೊತೆಗೆ ಸಚಿವರಾಗಿ ಮಾಡಲಿ ಎಂಬ ಆಸೆ ಇದೆ ಎಂದು ಇದೇ ವೇಳೆ ವಿಶ್ವನಾಥ್ ಅವರಿಗೂ ಸಚಿವ ಸ್ಥಾನಕ್ಕೆ ಪರೋಕ್ಷವಾಗಿ ಮಹೇಶ್ ಕುಮಟಳ್ಳಿ ಒತ್ತಾಯಿಸಿದರು. ಇದನ್ನೂ ಓದಿ: ದೆಹಲಿ ಭೇಟಿಗೂ ಮುನ್ನ ಬಿಎಸ್‍ವೈಗೆ ಶಾಕ್-ಇಂದು ಹೈಕಮಾಂಡ್ ಭೇಟಿ ಅನುಮಾನ

  • ಬಜೆಟ್ ಅಧಿವೇಶನ ದಿನಾಂಕ ಸೋಮವಾರ ತೀರ್ಮಾನ: ಸಿಎಂ

    ಬಜೆಟ್ ಅಧಿವೇಶನ ದಿನಾಂಕ ಸೋಮವಾರ ತೀರ್ಮಾನ: ಸಿಎಂ

    ಕಾರವಾರ: ರಾಜ್ಯದ ಮುಂದಿನ ಬಜೆಟ್ ಅಧಿವೇಶನ ದಿನಾಂಕ ನಿಗದಿ ಮಾಡುವ ಸಲುವಾಗಿ ಬರುವ ಸೋಮವಾರ ಬೆಂಗಳೂರಿನಲ್ಲಿ ಸಚಿವ ಸಂಪುಟದ ಸಭೆ ಕರೆಯಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

    ಹೊನ್ನಾವರ ತಾಲೂಕು ಮಂಕಿಯಲ್ಲಿ ಹಮ್ಮಿಕೊಳ್ಳಲಾದ ರಾಮಕ್ಷತ್ರಿಯ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಸೋಮವಾರ ಬೆಂಗಳೂರಿನಲ್ಲಿ ಸಚಿವ ಸಂಪುಟ ಸಭೆ ಕರೆಯಲಾಗಿದ್ದು, ಮುಂದಿನ ಬಜೆಟ್ ಅಧಿವೇಶನದ ದಿನಾಂಕ ನಿಗದಿ ಮಾಡಲಾಗುತ್ತದೆ. ಸರ್ಕಾರದ ಯೋಜನೆಗಳು ಹಾಗೂ ರಾಜ್ಯಪಾಲರ ಭಾಷಣದ ಕುರಿತು ಚರ್ಚಿಸಲಾಗುವುದು ಎಂದು ಹೇಳಿದರು.

    ಮುಂದಿನ ತಮ್ಮ ಬಜೆಟ್ ನಲ್ಲಿ ರೈತರಿಗೆ, ನೀರಾವರಿ ಮತ್ತು ರಾಜ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಒತ್ತು ನೀಡಿ ಮಂಡಿಸಲಾಗುವುದು. ರಾಜ್ಯದ ಅಭಿವೃದ್ಧಿಗೆ ಶಕ್ತಿಮೀರಿ ಕೆಲಸಮಾಡುವುದಾಗಿ ಅವರು ತಿಳಿಸಿದರು. ಉಡುಪಿ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಸ್ಥಿತಿ ಗಂಭೀರವಾಗಿದೆ. ವೈದ್ಯರು ನಿರಂತರವಾಗಿ ಪ್ರಯತ್ನ ನಡೆಸುತ್ತಿದ್ದಾರೆ. ಇಂದು ಸಂಜೆ ಉಡುಪಿಗೆ ತಾವು ತೆರಳುತ್ತಿರುವುದಾಗಿ ಅವರು ತಿಳಿಸಿದರು.

    ಈ ಸಂದರ್ಭದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ಅನಂತಕುಮಾರ್ ಹೆಗಡೆ, ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ರೋಷನ್, ಜಿಲ್ಲಾ ಪೊಲೀಸ್ ಅಧೀಕ್ಷಕ ಶಿವಕುಮಾರ್ ದೇವರಾಜ್, ಶಾಸಕರಾದ ರೂಪಾಲಿ ಎಸ್.ನಾಯ್ಕ್, ದಿನಕರಶೆಟ್ಟಿ, ಸುನೀಲ್ ನಾಯ್ಕ್ ಉಪಸ್ಥಿತರಿದ್ದರು.

  • ಜ.31 ರಿಂದ ಫೆ.13ರವರೆಗೆ ಬಜೆಟ್ ಅಧಿವೇಶನ – ಏನಿದು ಮಧ್ಯಂತರ ಬಜೆಟ್?

    ಜ.31 ರಿಂದ ಫೆ.13ರವರೆಗೆ ಬಜೆಟ್ ಅಧಿವೇಶನ – ಏನಿದು ಮಧ್ಯಂತರ ಬಜೆಟ್?

    ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನ ಜನವರಿ 31ರಿಂದ ಆರಂಭಗೊಂಡು ಫೆಬ್ರವರಿ 13ರ ವರೆಗೆ ನಡೆಯಲಿದ್ದು, ಫೆಬ್ರವರಿ 1ರಂದು ಮಧ್ಯಂತರ ಬಜೆಟ್ ಮಂಡನೆಯಾಗುವ ಸಾಧ್ಯತೆಯಿದೆ.

    ಏಪ್ರಿಲ್-ಮೇ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿರುವುದರಿಂದ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ(ಸಿಸಿಪಿಎ) ಸಭೆಯಲ್ಲಿ ಬಜೆಟ್ ಅಧಿವೇಶನದ ಬಗ್ಗೆ ದಿನಾಂಕ ನಿಗದಿ ಸಂಬಂಧ ಚರ್ಚೆ ನಡೆಸಲಾಯಿತು.

    ಪಂಚರಾಜ್ಯಗಳ ಚುನಾವಣೆಯಲ್ಲಿ ಪ್ರಮುಖ ಮೂರು ರಾಜ್ಯಗಳಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಹೀಗಾಗಿ ಜನರನ್ನು ಸೆಳೆದು ಎರಡನೇ ಬಾರಿ ಅಧಿಕಾರಕ್ಕೆ ಏರುವ ಕನಸು ಕಾಣುತ್ತಿರುವ ಮೋದಿ ಸರ್ಕಾರಕ್ಕೆ ಸಿಗುವ ಕೊನೆಯ ಅವಕಾಶ ಇದಾಗಿದ್ದು, ಎಲ್ಲರ ಕಣ್ಣು ಈಗ ಮಧ್ಯಂತರ ಬಜೆಟ್ ಮೇಲೆ ಬಿದ್ದಿದೆ.

    ಯಾಕೆ ಮಧ್ಯಂತರ ಬಜೆಟ್?
    ಹಾಲಿ ಇರುವ ಸರ್ಕಾರಕ್ಕೆ ಪೂರ್ಣ ಪ್ರಮಾಣದ ಬಜೆಟ್ ಮಂಡನೆಗೆ ಕಾಲಾವಕಾಶದ ಕೊರತೆ ಇದ್ದರೆ ಅಥವಾ ಸಾರ್ವತ್ರಿಕ ಚುನಾವಣೆ ಹತ್ತಿರ ಬಂದಾಗ ಮಧ್ಯಂತರ ಬಜೆಟ್ ಮಂಡಿಸಲಾಗುತ್ತದೆ. ಹೊಸದಾಗಿ ಚುನಾಯಿತಗೊಂಡ ಸರ್ಕಾರ ನಂತರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುತ್ತದೆ. ಇದನ್ನೂ ಓದಿ: ಬಜೆಟ್ ಮಂಡನೆ ಆಗುವುದು ಹೇಗೆ? ಅಧಿಕಾರಿಗಳು ರಹಸ್ಯ ಹೇಗೆ ಕಾಪಾಡುತ್ತಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ

    ಲೇಖಾನುದಾನ ಎಂದರೇನು?
    ಭಾರತದಲ್ಲಿ ಏಪ್ರಿಲ್ 1 ರಂದು ಆರ್ಥಿಕ ವರ್ಷ ಆರಂಭಗೊಂಡರೆ ಮಾರ್ಚ್ 31ರಂದು ಕೊನೆಯಾಗುತ್ತದೆ. ಆರ್ಥಿಕ ವರ್ಷದ ಕೊನೆ ದಿನವಾದ ಮಾರ್ಚ್ 31ರ ಅವಧಿಗೆ ಅನ್ವಯವಾಗುವಂತೆ ಪ್ರತಿ ವರ್ಷ ಆಯವ್ಯಯಕ್ಕೆ ಸಂಸತ್ತು ಅನುಮೋದನೆ ನೀಡುತ್ತದೆ. ಒಂದು ವೇಳೆ ಆರ್ಥಿಕ ವರ್ಷ ಮುಕ್ತಾಯವಾಗುವುದರೊಳಗೆ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲು ಸರ್ಕಾರಕ್ಕೆ ಸಾಧ್ಯ ಆಗದೇ ಇದ್ದರೆ ಹೊಸ ಸರ್ಕಾರ ಬಜೆಟ್ ಮಂಡಿಸುವ ತನಕದ ಅವಧಿಯ ವೆಚ್ಚಗಳಿಗೆ ಸಂಸತ್ತಿನ ಅನುಮೋದನೆ ಪಡೆಯಬೇಕಾಗುತ್ತದೆ. ಈ ಕಾರಣಕ್ಕಾಗಿ ಮಧ್ಯಂತರ ಬಜೆಟ್ ಮಂಡಿಸಿ ಲೇಖಾನುದಾನಕ್ಕೆ ಒಪ್ಪಿಗೆ ಪಡೆಯಲಾಗುತ್ತದೆ.

    ಪೂರ್ಣ ಪ್ರಮಾಣದ ಬಜೆಟ್ ಮಂಡನೆಯ ತನಕದ ಆಡಳಿತಾತ್ಮಕ ಖರ್ಚು ವೆಚ್ಚಗಳಿಗೆ ಲೇಖಾನುದಾನದಿಂದ ಅನುಕೂಲವಾಗುತ್ತದೆ. ಮೂರರಿಂದ ನಾಲ್ಕು ತಿಂಗಳಿಗೆ ಎಷ್ಟು ಖರ್ಚಾಗುತ್ತದೋ ಅಷ್ಟು ವೆಚ್ಚವನ್ನು ಮಾತ್ರ ಸರ್ಕಾರ ಪರಿಗಣಿಸಿ ಲೇಖಾನುದಾನಕ್ಕೆ ಅನುಮತಿ ಪಡೆಯುತ್ತದೆ. 2014ರ ಫೆಬ್ರವರಿಯಲ್ಲಿ ಪಿ. ಚಿದಂಬರಂ ಮಧ್ಯಂತರ ಬಜೆಟ್ ಮಂಡಿಸಿದ್ದರೆ, 2014ರ ಜುಲೈನಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ್ದರು.

  • ರಾಜ್ಯದ ಕಾನೂನು ಸುವ್ಯವಸ್ಥೆಗೆ ನಿನ್ನೆ ಮೋದಿ ತೆಗಳಿಕೆ, ಇಂದು ರಾಜ್ಯಪಾಲರ ಹೊಗಳಿಕೆ

    ರಾಜ್ಯದ ಕಾನೂನು ಸುವ್ಯವಸ್ಥೆಗೆ ನಿನ್ನೆ ಮೋದಿ ತೆಗಳಿಕೆ, ಇಂದು ರಾಜ್ಯಪಾಲರ ಹೊಗಳಿಕೆ

    ರಾಜ್ಯ ಸರ್ಕಾರಕ್ಕೆ ರಾಜ್ಯಪಾಲರ ಫುಲ್ ಮಾರ್ಕ್ಸ್
    – ಭ್ರಷ್ಟಾಚಾರ, ಮಹದಾಯಿ ವಿಚಾರವೂ ಪ್ರಸ್ತಾಪ

    ಬೆಂಗಳೂರು: ರಾಜ್ಯಪಾಲರ ಭಾಷಣದಲ್ಲಿ ಭಾಷಣದಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆಗೆ ಫುಲ್ ಮಾರ್ಕ್ಸ್ ಸಿಕ್ಕಿದೆ. ನಿನ್ನೆಯಷ್ಟೇ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇಲ್ಲ, ಮರ್ಡರ್ ಸರ್ಕಾರ ಎಂದು ಪ್ರಧಾನಿ ಮೋದಿ ಹೇಳಿದ್ದರೆ, ರಾಜ್ಯಪಾಲರ ಭಾಷಣದಲ್ಲಿ ಕಾನೂನು ಸುವ್ಯವಸ್ಥೆಗೆ ಫುಲ್ ಶಹಬ್ಬಾಸ್‍ಗಿರಿ ಸಿಕ್ಕಿದೆ.

    ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲ ವಿ.ಆರ್.ವಾಲಾ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪರಿಣಾಮಕಾರಿ ಕ್ರಮ ಕೈಗೊಂಡಿದೆ. ಕೋಮು ಸೌಹಾರ್ದ ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ರಾಜ್ಯ ಸರ್ಕಾರ ಖಾತ್ರಿಪಡಿಸಿದೆ. ಕೋಮು ಹಿಂಸಾ ಘಟನೆಗಳ ಬಗ್ಗೆ ದೃಢವಾದ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ.

    ನಿನ್ನೆ ಪ್ರಧಾನಿ ಮೋದಿ ಭಾಷಣದ ವೇಳೆ ಮೌನ ವಹಿಸಿದ್ದ ಮಹದಾಯಿ ವಿಚಾರ ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾಪವಾಯಿತು. ಮಹದಾಯಿ ಜಲಾನಯನ ಪ್ರದೇಶದ ಜನರ ಹಕ್ಕಿನ ಪಾಲನ್ನು ದೊರಕಿಸಿಕೊಡಲು ಎಲ್ಲ ರೀತಿ ಪ್ರಯತ್ನ ಮಾಡುತ್ತೇವೆ ಎಂದು ರಾಜ್ಯಪಾಲರು ಹೇಳಿದರು. ಕಾವೇರಿ, ಕೃಷ್ಣಾ ಜಲಾನಯನ ಪ್ರದೇಶಗಳ ನ್ಯಾಯಯುತ ನೀರಿನ ಬೇಡಿಕೆ ಈಡೇರಿಸಲು ಬದ್ಧ. ರಾಜ್ಯಕ್ಕೆ ನ್ಯಾಯ ದೊರಕಿಸಿಕೊಡುವಲ್ಲಿ ಸರ್ಕಾರದ ಬದ್ಧತೆ ಮುಂದುವರಿಯುತ್ತದೆ ಎಂದು ಹೇಳಿದರು.

    ರಾಜ್ಯಪಾಲರ ಭಾಷಣದಲ್ಲಿ ಭ್ರಷ್ಟಾಚಾರದ ಬಗ್ಗೆಯೂ ಪ್ರಸ್ತಾಪವಾಯಿತು. ಸಾರ್ವಜನಿಕ ಸೇವೆಗಳಲ್ಲಿರುವ ಭ್ರಷ್ಟಾಚಾರದ ವಿರುದ್ಧ ಹೋರಾಟ ಮುಂದುವರೆದಿದೆ. ಇದಕ್ಕಾಗಿಯೇ ರಾಜ್ಯ ಸರ್ಕಾರ ಭ್ರಷ್ಟಾಚಾರ ನಿಗ್ರಹ ದಳ ಆರಂಭಿಸಿದೆ. ಎಸಿಬಿ ಆರಂಭವಾದ ದಿನದಿಂದ ಇದುವರೆಗೆ 278 ಟ್ರ್ಯಾಪ್ ಪ್ರಕರಣ, 65 ದಾಳಿ, 61 ಇತರೆ ಪ್ರಕರಣ ಸೇರಿ ಒಟ್ಟು 404 ಪ್ರಕರಣ ದಾಖಲಾಗಿದೆ. ಎಸಿಬಿ ಆರಂಭದ ದಿನದಿಂದ ಸರ್ಕಾರವು ಸ್ವೀಕರಿಸಿದ 106 ಪ್ರಕರಣಗಳಲ್ಲಿ 72 ಪ್ರಕರಣಗಳಿಗೆ ಅಭಿಯೋಜನಾ ಮಂಜೂರಾತಿ ಆದೇಶ ಹೊರಡಿಸಿದ್ದೇವೆ ಅಂದ್ರು.

    ಬಿಜೆಪಿ ಆಕ್ಷೇಪ: ಇದೇ ವೇಳೆ ರಾಜ್ಯಪಲಾರ ಭಾಷಣಕ್ಕೆ ಪ್ರತಿಪಕ್ಷ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ರಾಜ್ಯಪಾಲರ ಭಾಷಣ ಸುಳ್ಳು, ರಾಜ್ಯಪಾಲರನ್ನು ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ರಾಜ್ಯ ಸರ್ಕಾರ ವಸ್ತು ಸ್ಥಿತಿ ಮರೆ ಮಾಚಿ ಸುಳ್ಳು ಅಂಕಿ ಅಂಶಗಳನ್ನು ಕೊಟ್ಟಿದೆ. ರಾಜ್ಯಪಾಲರ ಮುಖಾಂತರ ಕ್ರೈಂ ಮಾಡಿಸಿದೆ. ರಾಜ್ಯದಲ್ಲಿ ಕೊಲೆಗಳು ನಡೆಯುತ್ತಿದೆ. ರಾಜ್ಯದಲ್ಲಿರೋದು ಮರ್ಡರ್ ಸರ್ಕಾರ ಎಂದು ನಿನ್ನೆ ಬಿಜೆಪಿ ಸಮಾವೇಶದಲ್ಲಿ ಮೋದಿ ಹೇಳಿದ ಮಾತನ್ನೇ ಶೆಟ್ಟರ್ ಕೂಡಾ ಹೇಳಿದ್ದಾರೆ.