Tag: budget 2024

  • ಮೋದಿ ವಿಕಸಿತ ಭಾರತದ ಬಜೆಟ್ – ನಿರೀಕ್ಷೆಗಳೇನು? 

    ಮೋದಿ ವಿಕಸಿತ ಭಾರತದ ಬಜೆಟ್ – ನಿರೀಕ್ಷೆಗಳೇನು? 

    ಬಾರಿಯ ಲೋಕಸಭಾ ಚುನಾವಣೆಯ ಪ್ರಚಾರದ ಸಮಯದಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು (Narendra Modi) ದೇಶವು ಕೇವಲ ಅಭಿವೃದ್ಧಿಯ ಟ್ರೇಲರ್‌ನ್ನು ಮಾತ್ರ ನೋಡಿದೆ. ಇನ್ನೂ ಅಭಿವೃದ್ಧಿಯ ಪೂರ್ಣ ಚಿತ್ರಣ ಬಾಕಿ ಇದೆ ಎಂದಿದ್ದರು.‌ ಇದೇ ವೇಳೆ 2047ರ ಗುರಿಯಾದ ವಿಕಸಿತ ಭಾರತಕ್ಕೆ (Viksit Bharat 2047) ಬಲವಾದ ಅಡಿಪಾಯವನ್ನು ಹಾಕುವ ಸಲುವಾಗಿ ಭಾರತೀಯ ಆರ್ಥಿಕತೆಯಲ್ಲಿ ಸಾಕಷ್ಟು ಬಲಪಡಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದರು. ಈ ನಿಟ್ಟಿನಲ್ಲಿ ಜು.23 ರಂದು ಮಂಡನೆಯಾಗಲಿರುವ ಬಜೆಟ್‌ (Budget 2024) ದೇಶದ ಜನತೆಯಲ್ಲಿ ಬಹಳ ಕುತೂಹಲ ಮೂಡಿಸಿದೆ. 

    ಸಂಸತ್ತಿನ ಅಧಿವೇಶನದಲ್ಲಿ ತಮ್ಮ ಮೊದಲ ಭಾಷಣದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಮುಂಬರುವ ಬಜೆಟ್ ಐತಿಹಾಸಿಕ ಘೋಷಣೆಗಳನ್ನು ಮಾಡಲಿದೆ. ಈ ಮೂಲಕ ದೇಶದ ಬೆಳವಣಿಗೆಗೆ ‘ಭವಿಷ್ಯದ ದೃಷ್ಟಿಕೋನ’ವನ್ನು ಪ್ರಸ್ತುತಪಡಿಸುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದರು. ಇದೀಗ ವಿಕಸಿತ ಭಾರತದ ಕನಸು ನನಸಾಗಬೇಕಾದರೆ ಭಾರತದ ಮುಂದಿನ ಬಜೆಟ್‌ನ ನೀರೀಕ್ಷೆಗಳೇನು? ವಿಕಸಿತ ಭಾರತವಾಗಲು ನಮ್ಮ ಬಜೆಟ್ ಹೇಗಿರಬೇಕು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದರ ನಡುವೆ ಕೇಂದ್ರ ಬಜೆಟ್‌ನಲ್ಲಿ ಆರೋಗ್ಯ, ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿಯನ್ನು ಒಳಗೊಂಡ ಸಾಮಾಜಿಕ ವಲಯದ ಯೋಜನೆಗಳಿಗೆ ಹೆಚ್ಚಿನ ಹಣ ವ್ಯಯಿಸುವ ನಿರೀಕ್ಷೆ ಇದೆ. ಗ್ರಾಮೀಣ ಭಾಗಕ್ಕೆ ಮತ್ತು ಸಮಾಜದ ದುರ್ಬಲ ವರ್ಗಗಳನ್ನು ಸಬಲಗೊಳಿಸುವುದರ ಕಡೆಗೆ ಬಜೆಟ್‌ನಲ್ಲಿ ಹೆಚ್ಚು ಗಮನ ನೀಡಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

    ಈ ಬಾರಿ ಆರ್‌ಬಿಐ ತನ್ನ ಲಾಭಾಂಶವಾದ 2.10 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರಕ್ಕೆ ನೀಡಿದ್ದು, ಭಾರತದ ಆರ್ಥಿಕ ಸ್ಥಿತಿ ಸದೃಢವಾಗಿದೆ. ಇದು ಸಾಮಾಜಿಕ ವಲಯಕ್ಕೆ ಹೆಚ್ಚಿನ ಬಜೆಟ್ ಮೊತ್ತವನ್ನು ವ್ಯಯಿಸಲು ನೆರವಾಗಲಿದೆ ಎಂಬ ಮಾತುಗಳು ಕೇಳಿಬಂದಿವೆ. 

    ಬಜೆಟ್‌ ನಿರೀಕ್ಷೆಗಳೇನು? 

    ಶಿಕ್ಷಣ ಕ್ಷೇತ್ರಕ್ಕೆ ಬೂಸ್ಟರ್‌ ಡೋಸ್‌: ಶಿಕ್ಷಣ ಕ್ಷೇತ್ರ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಅಡಿಪಾಯವಾಗಿದೆ. ಈ ದೃಷ್ಟಿಯಿಂದ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತುಕೊಡುವುದು ಅನಿವಾರ್ಯವಾಗಿದೆ. ಮಾನವ ಶಕ್ತಿಯ ಉಪಯೋಗ, ಉದ್ಯೋಗವಕಾಶ ಮತ್ತು ಉತ್ಪಾದನೆಯಲ್ಲಿ ಹೆಚ್ಚಳಕ್ಕೆ ಇದು ಕಾರಣವಾಗಲಿದೆ. ಈ ನಿಟ್ಟಿನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಡಬೇಕಿರುವುದು ಅಗತ್ಯ ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯ.  

    ಗ್ರಾಮೀಣ ಜನರ ಆರ್ಥಿಕ ಬಲಕ್ಕಾಗಿ ನರೇಗಾಕ್ಕೆ ಒತ್ತು: ಗ್ರಾಮೀಣ ಭಾಗಗಳಲ್ಲಿ ಕೋವಿಡ್‌ ಕಾಲದಲ್ಲಿ ಜನರ ಆರ್ಥಿಕ ಸುಧಾರಣೆಗೆ ಸಹಕಾರಿಯಾಗಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆಗೆ ಕೇಂದ್ರ ವಿಶೇಷ ಮಹತ್ವ ನೀಡುವ ನಿರೀಕ್ಷೆ ಇದೆ. 2024 ಮತ್ತು 2025 ಮನರೇಗಾಕ್ಕೆ ಘೋಷಿಸಿದ ಮೊತ್ತದಲ್ಲಿ ಬಜೆಟ್‌ ಮೊತ್ತ ಏರಿಕೆಯಾಗಿಲ್ಲ. ಇದರಿಂದಾಗಿ ನರೇಗಾ ಯೋಜನೆಗೆ ಕೇಂದ್ರ ಸರ್ಕಾರ ವಿಶೇಷ ಒತ್ತು ನೀಡಬೇಕಾಗಿರುವುದು ಅನಿವಾರ್ಯವಾಗಿದೆ ಎಂಬುದ ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ.  

    ಹೊಸ ಉದ್ಯಮಗಳಿಗೆ ಬೇಕಿದೆ ನೆರವಿನ ಹಸ್ತ: ನವೋದ್ಯಮಗಳ ತಲೆ ಎತ್ತುತ್ತಿವೆ, ಇದರೊಂದಿಗೆ ಕೊನೆಗೊಳ್ಳುತ್ತಿರುವ ಉದ್ಯಮಗಳ ಸಂಖ್ಯೆಯೂ ಕಡಿಮೆ ಇಲ್ಲ. ಹೊಸ ಉದ್ಯಮಗಳ ಬೆಳವಣಿಗೆಗೆ ಸರ್ಕಾರದ ಅಗತ್ಯ ನೆರವು ಬೇಕು,  ‘ಕೂ’ನಂತಹ ಕಂಪನಿಗಳು ಸಹ ಭದ್ರವಾಗಿ ಬೇರೂರಲು ಇಲ್ಲಿ ಆಗಲಿಲ್ಲ ಎಂಬುದನ್ನು ನಾವಿಲ್ಲಿ ಗಮನಿಸಬಹುದು. ಒಂದು ಉದ್ಯಮದ ನಾಶ ಹಲವಾರು ಉದ್ಯೋಗದ ನಾಶಕ್ಕೆ ಕಾರಣ ಆಗಬಹುದು ಇದು ದೇಶದ ಪ್ರಗತಿಯ ಕುಂಠಿತಕ್ಕೆ ಕಾರಣವಾಗಲಿದೆ. ಈ ಬಾರಿಯ ಬಜೆಟ್‌ ನವೋದ್ಯಮ ಹಾಗೂ ಊದ್ಯಮ ಸ್ನೇಹಿಯಾಗುವ ನಿರೀಕ್ಷೆ ಇದೆ. 

    ಮಹಿಳಾ ಸಬಲೀಕರಣ: ಮುದ್ರಾ ಯೋಜನೆಯಡಿ ವಿತರಿಸಲಾಗುವ ಸಾಲದಲ್ಲಿ 30 ಕೋಟಿ ರೂ. ಮೊತ್ತದ ಸಾಲವನ್ನು ಮಹಿಳಾ ಉದ್ದಿಮೆದಾರರಿಗೆ ವಿತರಿಸಲಾಗಿದೆ ಎಂದು ಫೆಬ್ರುವರಿಯ ಮಧ್ಯಂತರ ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್ ಹೇಳಿದ್ದರು. 1 ಕೋಟಿ ಮಹಿಳೆಯರನ್ನು ಲಕ್ಷಾಧಿಪತಿಯಾಗಿಸುವ ಗುರಿ ಸರ್ಕಾರದ ಮುಂದಿದೆ. ಇದಕ್ಕಾಗಿ 83 ಲಕ್ಷ ಸ್ವಸಹಾಯ ಗುಂಪುಗಳು ಕಾರ್ಯೋನ್ಮುಖವಾಗಿವೆ. ಪಿಎಂ ಕಿಸಾನ್ ಯೋಜನೆ ಅಡಿ ಬರುವ 9 ಕೋಟಿಗೂ ಹೆಚ್ಚು ಫಲಾನುಭವಿಗಳಲ್ಲಿ ಮಹಿಳೆಯರ ಸಂಖ್ಯೆ 3 ಕೋಟಿಗೂ ಹೆಚ್ಚಿದೆ. ಜುಲೈ 23ರಂದು ಮಂಡನೆ ಆಗುವ ಬಜೆಟ್​ನಲ್ಲಿ ಮಹಿಳೆಯರಿಗೆ ಪರೋಕ್ಷವಾಗಿ ಅನುಕೂಲವಾಗುವ ನಿಟ್ಟಿನಲ್ಲಿ ವಿವಿಧ ಸಬ್ಸಿಡಿ, ತೆರಿಗೆ ಲಾಭ ಇತ್ಯಾದಿಯನ್ನು ವಿತ್ತ ಸಚಿವೆ ಘೋಷಿಸಬಹುದು ಎಂಬ ನಿರೀಕ್ಷೆ ಇದೆ. 

    ವಿಯೆಟ್ನಾಂ, ಚೀನಾ ರೀತಿ ಆಮದು ಸುಂಕ ಇಳಿಯಲಿ: ಭಾರತದ ಎಲೆಕ್ಟ್ರಾನಿಕ್ಸ್ ಉದ್ಯಮ ಈ ಬಾರಿಯ ಬಜೆಟ್​ನಿಂದ ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳ ಆಮದು ಸುಂಕಗಳ ಪ್ರಮಾಣವನ್ನು ಕಡಿಮೆಗೊಳಿಸಬೇಕು ಎನ್ನುವ ಬೇಡಿಕೆ ಇದೆ. ಬಿಡಿಭಾಗಗಳ ತಯಾರಿಕೆಗೆ ಉತ್ತೇಜನ ಕೊಡಲು ಇನ್ಸೆಂಟಿವ್ ಸ್ಕೀಮ್ ಅನ್ನು ಸರ್ಕಾರ ಜಾರಿಗೊಳಿಸಲಿ ಎನ್ನುವ ನಿರೀಕ್ಷೆಯೂ ಇದೆ. ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಉದ್ಯಮ ಏರುಗತಿಯಲ್ಲಿದೆ. ಇದು ವಿಯೆಟ್ನಾಂ ಇತ್ಯಾದಿ ಇತರ ಕೆಲ ದೇಶಗಳ ಪ್ರಬಲ ಪೈಪೋಟಿ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಸ್ಮಾರ್ಟ್​ಫೋನ್ ತಯಾರಕ ಉದ್ಯಮ ಸರ್ಕಾರದಿಂದ ಇನ್ನಷ್ಟು ಉತ್ತೇಜನ ನಿರೀಕ್ಷಿಸುತ್ತಿದೆ. 

    ಏಕೀಕೃತ ಸಬ್ಸಿಡಿ, ಜೈವಿಕ ರಸಗೊಬ್ಬರಗಳಿಗೆ ಸಬ್ಸಿಡಿ: ಕೃಷಿ ಕ್ಷೇತ್ರದ ಸಂಘ ಸಂಸ್ಥೆಗಳು, ತಜ್ಞರು ಮೊದಲಾದವರು ಕೃಷಿ ಕ್ಷೇತ್ರಕ್ಕೆ ಉತ್ತೇಜನ ಸಿಗಲು ಯಾವೆಲ್ಲಾ ಅಂಶಗಳು ಬೇಕಾಗಬಹುದು ಎಂದು ಈಗಾಗಲೇ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಚರ್ಚಿಸಿದ್ದಾರೆ. ಈ ವೇಳೆ ಜೈವಿಕ ರಸಗೊಬ್ಬರಗಳಿಗೆ ಸಬ್ಸಿಡಿ ಕೊಡಬೇಕು, ಯೂರಿಯಾ ದರದ ಬಗ್ಗೆ ಚರ್ಚೆಗಳಾಗಿವೆ ಎಂದು ಇತ್ತೀಚೆಗೆ ವರದಿಯಾಗಿತ್ತು. 

    ಕೃಷಿ ಕ್ಷೇತ್ರದ ಪ್ರಮುಖ ಬೇಡಿಕೆಗಳು

    ರೈತರ ಆದಾಯ ಹೆಚ್ಚಿಸಲು ಮತ್ತು ಕೃಷಿ ಕ್ಷೇತ್ರಕ್ಕೆ ಪುಷ್ಟಿ ಕೊಡಲು ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಮೊತ್ತದ ಹೂಡಿಕೆ ಬೇಕು.

    ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರೀಸರ್ಚ್​ನ (ಐಸಿಎಆರ್) ಬಜೆಟ್‌ನ್ನು 9,500 ಕೋಟಿ ರೂ.ನಿಂದ 20,000 ಕೋಟಿ ರೂ.ಗೆ ಹೆಚ್ಚಿಸಬೇಕು.

    ಎಲ್ಲಾ ಕೃಷಿ ಸಂಬಂಧಿತ ಸಬ್ಸಿಡಿಗಳನ್ನು ಏಕೀಕೃತಗೊಳಿಸಿ ಹಣವನ್ನು ನೇರವಾಗಿ ವರ್ಗಾವಣೆ ಮಾಡಬೇಕು.

    ಜೈವಿಕ ರಸಗೊಬ್ಬರಗಳಿಗೆ ಸಬ್ಸಿಡಿ ಕೊಟ್ಟು ಉತ್ತೇಜನ ನೀಡಬೇಕು.

    ಎಂಎಸ್​ಪಿ ಕಮಿಟಿಯನ್ನು ಸಮಾಪ್ತಿಗೊಳಿಸಿ; ಹೊಸ ಕೃಷಿ ನೀತಿ ಜಾರಿಗೆ ತರಬೇಕು.

    ಕೇಂದ್ರ ಪ್ರಾಯೋಜಿತ ಕೃಷಿ ಯೋಜನೆಗಳಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಅನುಪಾತವನ್ನು ಈಗಿರುವ 60:30ರಿಂದ 90:10ಕ್ಕೆ ಬದಲಿಸಬೇಕು. ಐದು ವರ್ಷ ಅವಧಿಯವರೆಗೆ 90%ರಷ್ಟು ವೆಚ್ಚವನ್ನು ಸರ್ಕಾರ ಭರಿಸಬೇಕು.

    ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನ ರಫ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ (ಎಪಿಇಡಿಎ) ಹಿಂದಿನ ಬಜೆಟ್​ನಲ್ಲಿ 80 ಕೋಟಿ ರೂ. ನೀಡಲಾಗಿತ್ತು. ಅದನ್ನು 800 ಕೋಟಿ ರೂ.ಗೆ ಹೆಚ್ಚಿಸಬೇಕು. ಇದರಿಂದ ಕೃಷಿ ರಫ್ತು ಹೆಚ್ಚಲು ಸಾಧ್ಯವಾಗುತ್ತದೆ.

    ರಾಷ್ಟ್ರೀಯ ಆಡು ಮತ್ತು ಕುರಿ ಯೋಜನೆ ಆರಂಭಿಸಬೇಕು.

    ಜಿಲ್ಲಾ ರಫ್ತು ಕೇಂದ್ರಗಳನ್ನು ಸ್ಥಾಪಿಸಬೇಕು.

    ತೆರಿಗೆ ಸುಧಾರಣೆ: ಭಾರತದ ಸಂಕೀರ್ಣ ತೆರಿಗೆ ಪದ್ಧತಿಗಳನ್ನು ಸರಳೀಕರಿಸಲು ಕೈಗಾರಿಕಾ ಸಂಸ್ಥೆಗಳು ಶಿಫಾರಸು ಮಾಡಿವೆ. ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಎಫ್‌ಐಸಿಸಿಐ) ಬಂಡವಾಳ ಲಾಭದ ತೆರಿಗೆ ಆಡಳಿತವನ್ನು ಎರಡು ಅಥವಾ ಮೂರು ವಿಶಾಲ ವರ್ಗಗಳಾಗಿ ಸರಳೀಕರಿಸಲು ಸಲಹೆ ನೀಡಿದೆ. FICCI ಕೂಡ ಸರಕು ಮತ್ತು ಸೇವಾ ತೆರಿಗೆ (GST) ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ಪ್ರತಿಪಾದಿಸಿದೆ. 

    ತೆರಿಗೆ ವಿನಾಯತಿ ಘೋಷಣೆ?

    ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಹೊಸ ತೆರಿಗೆ ನೀತಿ ಘೋಷಿಸುವ ಸಾಧ್ಯತೆ ಇದೆ. ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 5 ಲಕ್ಷ ರೂ.ಗೆ ಏರಿಸುವ ಜೊತೆಗೆ,ಚ್ಚಿನ ಆದಾಯ ಗಳಿಸುವವರಿಗೆ ಹಲವು ರೀತಿಯ ಡಿಡಕ್ಷನ್‌ಗಳ ಘೋಷಿಸಬೇಕು.ಅಷ್ಟೇ ಅಲ್ಲದೇ, 15 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಇರುವವರಿಗೆ ಈಗ ಇರುವ 30% ತೆರಿಗೆ ಬದಲು 25%ರಷ್ಟು ತೆರಿಗೆ ವಿಧಿಸಲಾಗುತ್ತದೆ ಎನ್ನಲಾಗಿದೆ. 

    ಇನ್ನಿತರೆ ಪ್ರಮುಖ ನಿರೀಕ್ಷೆಗಳು 

    ಹಸಿರು ಮತ್ತು ಸುಸ್ಥಿರ ಇಂಧನ ಮೂಲಗಳ ಮೇಲೆ ಕೇಂದ್ರೀಕರಿಸಿ ಇಂಧನ ಮೂಲಸೌಕರ್ಯದಲ್ಲಿ ಹೂಡಿಕೆಯನ್ನು ವಿಸ್ತರಣೆ. 

    ಮೂಲಸೌಕರ್ಯದಲ್ಲಿ ಖಾಸಗಿ ವಲಯದ ಸಹಭಾಗಿತ್ವವನ್ನು ಹೆಚ್ಚಳ

    ವಿದೇಶಿ ಹೂಡಿಕೆಗಳು, ವಿದೇಶಿ ಮೂಲಗಳಿಂದ ದೇಣಿಗೆ ಮತ್ತು ಅನುದಾನಗಳ ಸ್ವೀಕೃತಿಗೆ ತ್ವರಿತ ಕ್ಲಿಯರೆನ್ಸ್

    ಹೊಸ ಉತ್ಪಾದನಾ ಕಾರ್ಪೊರೇಟ್ ಕಂಪನಿಗಳಿಗೆ ರಿಯಾಯಿತಿ ತೆರಿಗೆ ದರವನ್ನು ವಿಸ್ತರಿಸುವುದು

    ಡಿಜಿಟಲ್ ಇಂಡಿಯಾ ದಕ್ಷತೆಯನ್ನು ಸುಧಾರಿಸಲು ತಂತ್ರಜ್ಞಾನ ಅಳವಡಿಕೆಗೆ ಪ್ರೋತ್ಸಾಹ.

    ಹೊಸ ದಾಖಲೆ ಬರೆಯಲಿದ್ದಾರೆ ನಿರ್ಮಲಾ ಸೀತಾರಾಮನ್‌ 

    ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಇದೇ ತಿಂಗಳು ಪೂರ್ಣಪ್ರಮಾಣದ ಬಜೆಟ್‌ ಮಂಡಿಸಿದರೆ ಹೊಸ ದಾಖಲೆ ಬರೆಯಲಿದ್ದಾರೆ. ಇದುವರೆಗೆ ನಿರ್ಮಲಾ ಸೀತಾರಾಮನ್‌ ಅವರು ಹಣಕಾಸು ಸಚಿವೆಯಾಗಿ ಐದು ಪೂರ್ಣ ಪ್ರಮಾಣದ ಹಾಗೂ ಒಂದು ಮಧ್ಯಂತರ ಬಜೆಟ್‌ ಮಂಡಿಸಿದ್ದಾರೆ. ಈಗ ಏಳನೇ ಬಾರಿಗೆ ಬಜೆಟ್‌ ಮಂಡಿಸಿದರೆ, ದೇಶದ ಇತಿಹಾಸದಲ್ಲಿಯೇ ಅತಿ ಹೆಚ್ಚು ಬಾರಿ ಬಜೆಟ್‌ ಮಂಡಿಸಿದ ಖ್ಯಾತಿಗೆ ಭಾಜನರಾಗಲಿದ್ದಾರೆ. ಮೊರಾರ್ಜಿ ದೇಸಾಯಿ ಅವರು ಆರು ಬಾರಿ ಬಜೆಟ್‌ ಮಂಡಿಸಿದ ದಾಖಲೆ ಮಾಡಿದ್ದಾರೆ. ನಿರ್ಮಲಾ ಸೀತಾರಾಮನ್‌ ಅವರು ಈ ಬಾರಿ ಈ ದಾಖಲೆಯನ್ನು ಮುರಿಯಲಿದ್ದಾರೆ.

  • ರಾಜ್ಯಕ್ಕೆ 62 ಸಾವಿರ ಕೋಟಿ ರೂ. ನಷ್ಟ – ಫೆ.7 ರಂದು ದೆಹಲಿಯಲ್ಲಿ ಕರ್ನಾಟಕ ಸರ್ಕಾರದಿಂದ ಪ್ರತಿಭಟನೆ ಎಂದ ಡಿಕೆಶಿ

    ರಾಜ್ಯಕ್ಕೆ 62 ಸಾವಿರ ಕೋಟಿ ರೂ. ನಷ್ಟ – ಫೆ.7 ರಂದು ದೆಹಲಿಯಲ್ಲಿ ಕರ್ನಾಟಕ ಸರ್ಕಾರದಿಂದ ಪ್ರತಿಭಟನೆ ಎಂದ ಡಿಕೆಶಿ

    ಬೆಂಗಳೂರು: ಕೇಂದ್ರ ಬಜೆಟ್‌ನಲ್ಲಿ (Union Budget 2024) ಕರ್ನಾಟಕ ರಾಜ್ಯಕ್ಕೆ ನಿರಂತರ ಅನ್ಯಾಯವಾಗುತ್ತಿದೆ. ಕೇಂದ್ರದ ಮಲತಾಯಿ ಧೋರಣೆಯಿಂದ ಕಳೆದ 5 ವರ್ಷಗಳಲ್ಲಿ ರಾಜ್ಯಕ್ಕೆ 62 ಸಾವಿರ ಕೋಟಿ ಹಣ ನಷ್ಟವಾಗಿದೆ. ಹೀಗಾಗಿ ಫೆ.7 ರಂದು ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರವು ದೆಹಲಿಯಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ

    ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ನೇತೃತ್ವದಲ್ಲಿ ನಾನು ಸೇರಿದಂತೆ ರಾಜ್ಯದ ಸಚಿವರು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಈ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇವೆ. ಪ್ರತಿಭಟನೆ ಸ್ಥಳವಕಾಶದ ಬಗ್ಗೆ ಕೆಂದ್ರಕ್ಕೆ ಪತ್ರ ಬರೆದಿದ್ದು, ಅನುಮತಿ ಸಿಕ್ಕ ಸ್ಥಳದಲ್ಲಿ ಪ್ರತಿಭಟನೆ ನಡೆಸುತ್ತೇವೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರತಿಭಟನೆ (Protest) ನಮ್ಮ ಮೂಲಭೂತ ಹಕ್ಕು. ಕಾಂಗ್ರೆಸ್ ಜನಪ್ರತಿನಿಧಿಗಳು ಭಾಗವಹಿಸಲಿರುವ ಈ ಪ್ರತಿಭಟನೆಯಲ್ಲಿ ಪ್ರತಿಪಕ್ಷದ ಸಂಸದರು. ಶಾಸಕರು ಭಾಗವಹಿಸಬೇಕು ಎಂದು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

    ರಾಜ್ಯಕ್ಕೆ ಅನ್ಯಾಯವಾಗಿದೆ:
    2018-19ರಲ್ಲಿ ಕೇಂದ್ರ ಸರ್ಕಾರದ ಬಜೆಟ್ ಗಾತ್ರ 24.5 ಲಕ್ಷ ಕೋಟಿ ಇತ್ತು. 2023-24ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬಜೆಟ್ ಗಾತ್ರ ದುಪ್ಪಟ್ಟಾಗಿದ್ದು 47 ಲಕ್ಷ ಕೋಟಿಯಾಗಿದೆ. 2018-19ರಲ್ಲಿ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ರಾಜ್ಯಕ್ಕೆ 46 ಸಾವಿರ ಕೋಟಿ ಅನುದಾನ ಸಿಕ್ಕಿತ್ತು. ಆದರೆ 2024-25ನೇ ಸಾಲಿನಲ್ಲಿ ರಾಜ್ಯಕ್ಕೆ ಬಂದಿರುವ ಅನುದಾನ ಕೇವಲ 50 ಸಾವಿರ ಕೋಟಿ ಮಾತ್ರ. ಕೇಂದ್ರ ಸರ್ಕಾರದ ಬಜೆಟ್ ಗಾತ್ರ ದುಪ್ಪಟ್ಟಾಗಿದ್ದರೂ ರಾಜ್ಯಕ್ಕೆ ಬರುವ ಅನುದಾನದ ಪ್ರಮಾಣದಲ್ಲಿ ಅತ್ಯಲ್ಪ ಏರಿಕೆ ಮಾತ್ರವಾಗಿದೆ. ಕರ್ನಾಟಕ ರಾಜ್ಯ ದೇಶದಲ್ಲೇ ಪ್ರಗತಿಪರ ರಾಜ್ಯ. ಮಹಾರಾಷ್ಟ್ರ ಬಿಟ್ಟರೆ ಕೇಂದ್ರಕ್ಕೆ ಅತಿ ಹೆಚ್ಚು ತೆರಿಗೆ ಪಾವತಿ ಮಾಡುತ್ತಿರುವ ರಾಜ್ಯ ಕರ್ನಾಟಕ. ಆದ್ರೆ ಕಳೆದ 5 ವರ್ಷಗಳ ಬಜೆಟ್ ನೋಡಿದ್ರೆ ನಮಗೆ ನಮ್ಮ ಪಾಲು ನ್ಯಾಯುತವಾಗಿ ಸಿಕ್ಕಿಲ್ಲ. ರಾಜ್ಯದ 28 ಸಂಸದರ ಪೈಕಿ 27 ಸಂಸದರು ಎನ್‌ಡಿಎ ಮೈತ್ರಿಕೂಟದವರೇ ಆಗಿದ್ದರೂ ನಮಗೆ ಸೂಕ್ತ ನ್ಯಾಯ ಸಿಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

    62 ಸಾವಿರ ಕೋಟಿ ಹಣ ಕಡಿಮೆಯಾಗಿದೆ:
    2018-19ರಿಂದ ಈಗಿನವರೆಗೂ ಕೇಂದ್ರ ಬಜೆಟ್ ಗಮನಿಸಿದರೆ ನಮ್ಮ ರಾಜ್ಯದ ಪಾಲಿನಲ್ಲಿ 40 ರಿಂದ 45% ಪಾಲು ಕಡಿಮೆಯಾಗಿದೆ. ಇದರಿಂದಾಗಿ ನಮ್ಮ ರಾಜ್ಯದ ಮೇಲೆ ಸಾಲದ ಹೊರೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಪ್ರತಿ ವರ್ಷ 7-10 ಸಾವಿರ ಕೋಟಿ ಅನುದಾನ ಕಡಿಮೆಯಾಗುತ್ತಾ ಬರುತ್ತಿದೆ. 14ನೇ ಹಣಕಾಸು ಆಯೋಗದ ಶಿಫಾರಸಿನಂತೆ ಕರ್ನಾಟಕ ರಾಜ್ಯಕ್ಕೆ 4.71% ಪಾಲು ನೀಡಲಾಗಿತ್ತು. ಆದರೆ 15ನೇ ಹಣಕಾಸು ಆಯೋಗದಲ್ಲಿ ರಾಜ್ಯದ ಪಾಲನ್ನು 3.64%ಗೆ ಇಳಿಸಲಾಗಿದೆ. ಇದರಿಂದಾಗಿ ನಮಗೆ 5 ವರ್ಷಕ್ಕೆ 62 ಸಾವಿರ ಕೋಟಿಯಷ್ಟು ಹಣ ಕಡಿಮೆಯಾಗಿದೆ. ಇನ್ನೂ ವಿವಿಧ ರೀತಿಯಲ್ಲಿ ಕರ್ನಾಟಕ ರಾಜ್ಯಕ್ಕೆ ಘೋಷಣೆ ಮಾಡಿದ್ದ ಅನುದಾನ ಕೂಡ ಸರಿಯಾಗಿ ನೀಡಿಲ್ಲ ಎಂದು ಕೇಂದ್ರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

    ಭದ್ರಾ ಮೇಲ್ದಂಡೆ ಯೋಜನೆಯ ಪ್ರಸ್ತಾಪವೇ ಇಲ್ಲ:
    ನೀರಾವರಿ ಯೋಜನೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,200 ಕೋಟಿ ನೀಡುವುದಾಗಿ ಘೋಷಣೆ ಮಾಡಿದ್ದರು. ಅದನ್ನೂ ನೀಡಿಲ್ಲ. ಇನ್ನು ಬೆಂಗಳೂರಿನಲ್ಲಿ ಮೆಟ್ರೋಗೆ ಕೂಡ ವಿವಿಧ ಹಂತದ ಯೋಜನೆ ಅನುದಾನ ನೀಡುವುದಾಗಿ ಹೇಳಿದ್ದರು. ನಾನು ಸಹ ಹಲವು ಬಾರಿ ಪ್ರಧಾನಿ, ಜಲಶಕ್ತಿ ಸಚಿವರು, ನಗರಾಭಿವೃದ್ಧಿ ಸಚಿವರಿಗೆ ಪತ್ರ ಬರೆದಿದ್ದೇನೆ. ನಮ್ಮ ರಾಜ್ಯದಿಂದ ಹೆಚ್ಚು ತೆರಿಗೆ ರವಾನೆಯಾಗುತ್ತಿದ್ದರೂ ನಮಗೆ ಮಲತಾಯಿ ಧೋರಣೆ ತೋರುತ್ತಿದ್ದೀರಿ. ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಆದರೂ ಯಾವುದೇ ಪ್ರಯೋಜನ ಆಗಿಲ್ಲ. ಇದರಿಂದಾಗಿ ನಮಗೆ ನಿರಾಸೆಯಾಗಿದೆ. ನಮಗೆ ಆಗಿರುವ ಅನ್ಯಾಯದ ಬಗ್ಗೆ ರಾಜ್ಯದ ಜನರಿಗೆ ತಿಳಿಸಬೇಕು. ನಮ್ಮ ರಾಜ್ಯದಲ್ಲಿ ಬರಗಾಲ ಎದುರಾಗಿದೆ. ರಾಜ್ಯದ ಇತಿಹಾಸದಲ್ಲೇ ಅತಿ ಹೆಚ್ಚು ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ನಮ್ಮ ಹಣಕಾಸು ಹಾಗೂ ಕೃಷಿ ಸಚಿವರು ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ನೀಡಿದ್ದರು. ಸಂಸದರು ಕೂಡ ಸರ್ಕಾರದ ಮೇಲೆ ಒತ್ತಡ ಹಾಕಿ ರಾಜ್ಯಕ್ಕೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ್ದೆವು. ಆದರೂ ನಯಾಪೈಸೆ ಹಣ ಬಂದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

    ಡಬಲ್‌ ಇಂಜಿನ್‌ ಸರ್ಕಾರದಲ್ಲೂ ರಾಜ್ಯಲ್ಲೆ ಲಾಭ ಆಗಿಲ್ಲ:
    ಹಿಂದಿನ ಬಿಜೆಪಿ ಸರ್ಕಾರ ಇದ್ದಾಗ ಡಬಲ್ ಇಂಜಿನ್ ಸರ್ಕಾರದಿಂದ ನಮಗೆ ಲಾಭ ಆಗಿರಬಹುದು ಎಂದು ಭಾವಿಸಿದ್ದೆವು. ಆದರೆ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿದಾಗ ನಮ್ಮ ರಾಜ್ಯಕ್ಕೆ 62 ಸಾವಿರ ಕೋಟಿ ನಷ್ಟವಾಗಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆಗೆ ವಿರೋಧ ಪಕ್ಷದ ಸಂಸದರಿಗೂ ಆಹ್ವಾನ ನೀಡಲಿದ್ದೇವೆ. ಈ ಸಮಯದಲ್ಲಿ ನಾವು ಅನಿವಾರ್ಯವಾಗಿ ಹೋರಾಟ ಮಾಡಬೇಕಿದೆ. ಕರ್ನಾಟಕ ಸರ್ಕಾರ ಮುಖ್ಯಮಂತ್ರಿಗಳ ನೇತೃತ್ವದಲ್ಲಿ 136+2 ಒಟ್ಟು 138 ಶಾಸಕರು, ಎಲ್ಲಾ ಪರಿಷತ್ ಸದಸ್ಯರು ಫೆ.6ರಂದು ದೆಹಲಿಗೆ ತಲುಪಿ, ಫೆ.7ರಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸಲಿದ್ದೇವೆ. ನಮ್ಮ ಧ್ವನಿಯನ್ನು ಕೇಂದ್ರ ಸರ್ಕಾರಕ್ಕೆ ಮುಟ್ಟಿಸಲು ಮುಂದಾಗಿದ್ದೇವೆ. ಫೆ.7ರಂದು ಬೆಳಗ್ಗೆ 10 ಗಂಟೆಗೆ ನಮಗೆ ಅನುಮತಿ ನೀಡುವ ಸ್ಥಳದಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದ್ದಾರೆ.

    ಮೇಕೆದಾಟುಗೆ ಹೊಸ ಸಮಿತಿ ರಚಿಸಲು ತೀರ್ಮಾನ:
    ಇದೇ ವೇಳೆ ಮೇಕೆದಾಟು ಯೋಜನೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿ, ಮೇಕೆದಾಟು ವಿಚಾರವಾಗಿ ಕರ್ನಾಟಕಕ್ಕೆ ಹೊಸ ಆಯಾಮ ಶುರುವಾಗಿದೆ. ನಿನ್ನೆ ಸಭೆಯಲ್ಲಿ ಮತಗಳನ್ನು ಹಾಕಲಾಗಿದೆ. ತಾಂತ್ರಿಕ ಸಮಿತಿ ರಚನೆಗೆ ತೀರ್ಮಾನವಾಗಿದೆ. ನಮ್ಮ ನೀರು ನಮ್ಮ ಹಕ್ಕು. ಅದನ್ನು ಬಳಸಿಕೊಂಡು ಅವರ ಪಾಲಿನ ನೀರನ್ನು ಖಂಡಿತವಾಗಿಯೂ ನೀಡುತ್ತೇವೆ. ಈ ವಿಚಾರವಾಗಿ ನಾವು ಅವರಿಗೆ ಮನದಟ್ಟು ಮಾಡುತ್ತೇವೆ. ಕೇಂದ್ರ ಸರ್ಕಾರ ಕೂಡ ಪರಿಸರ ಇಲಾಖೆ ಅನುಮತಿ ನೀಡಿ ಸಹಕಾರ ನೀಡಬೇಕಾಗುತ್ತದೆ. ಎಲ್ಲಾ ಸಂಸದರು ಒಟ್ಟಾಗಿ ಧ್ವನಿ ಎತ್ತಲಿ ಎಂದು ಮನವಿ ಮಾಡುತ್ತೇನೆ ಎಂದು ನುಡಿದಿದ್ದಾರೆ.

  • ಕರ್ನಾಟಕಕ್ಕೆ ಆದ ಅನ್ಯಾಯ ಪ್ರಶ್ನಿಸುವ ಹಕ್ಕು ನನಗಿದೆ: ಡಿಕೆ ಸುರೇಶ್

    ಕರ್ನಾಟಕಕ್ಕೆ ಆದ ಅನ್ಯಾಯ ಪ್ರಶ್ನಿಸುವ ಹಕ್ಕು ನನಗಿದೆ: ಡಿಕೆ ಸುರೇಶ್

    – ನನ್ನ ಮಾತಿಗೆ ಈಗಲೂ ನಾನು ಬದ್ಧ
    – ಬಿಜೆಪಿಯವರು ನನ್ನ ಮಾತನ್ನು ತಿರುಚಿದ್ದಾರೆ

    ನವದೆಹಲಿ: ಪ್ರತ್ಯೇಕ ರಾಷ್ಟ್ರದ ಕೂಗು ಎತ್ತುತ್ತಿದ್ದಂತೆಯೇ ಸಂಸದ ಡಿಕೆ ಸುರೇಶ್ (DK Suresh) ಭಾರೀ ಚರ್ಚೆಗೀಡಾದರು. ಈ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಸಂಸದರು ನನ್ನ ಹೇಳಿಕೆಗೆ ಈಗಲೂ ನಾನು ಬದ್ಧ ಎಂದಿದ್ದಾರೆ.

    ದೆಹಲಿಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ಭಾರತೀಯ, ನಾನೊಬ್ಬ ಕನ್ನಡಿಗ. ಕರ್ನಾಟಕಕ್ಕೆ ಆದ ಅನ್ಯಾಯ ಪ್ರಶ್ನಿಸುವ ಹಕ್ಕು ನನಗೆ ಇದೆ. ಸಂಸತ್‍ನಲ್ಲೂ ಪ್ರಶ್ನಿಸುತ್ತೇನೆ, ಹೊರಗೂ ಮಾತನಾಡುತ್ತೇನೆ. ದೇಶದ್ರೋಹಿ ಎನ್ನುವವರು ರಾಜ್ಯಕ್ಕೆ ತಂದ ಅನುದಾನ ಎಷ್ಟು ಎಂದು ತೋರಿಸಲಿ ಅಂತಾ ಸವಾಲೆಸೆದರು.

    ನೆಲ, ಜಲ, ಭಾಷೆ ಬಗ್ಗೆ ಧ್ವನಿ ಎತ್ತಿದ್ದೇನೆ. ನಮ್ಮನ್ನು ಅತಂತ್ರ ಸ್ಥಿತಿಯಲ್ಲಿ ಇಟ್ಟಿದ್ದಾರೆ. ಕರ್ನಾಟಕ ಕೇಂದ್ರಕ್ಕೆ ಕೊಡುವುದು ಸಿಂಹಪಾಲು, ನಮ್ಮ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ. ಅವರಿಗೆ ಬೇಕಾದ ರಾಜ್ಯಗಳಿಗೆ ಹೆಚ್ಚು ಹಣ ನೀಡುತ್ತಿದ್ದಾರೆ. ಜನರ ಭಾವನೆ ಏನು ಅನ್ನೋದನ್ನು ಹೇಳಿದ್ದೇನೆ. ಬಿಜೆಪಿಯವರು ದೇಶಕ್ಕೆ ಏನು ಕೊಟ್ಟಿದ್ದೇವೆ, ಬಜೆಟ್‍ನಲ್ಲಿ ಏನಿದೆ ಅನೋದನ್ನು ಹೇಳುತ್ತಿಲ್ಲ. ಆದರೆ ನನ್ನ ಹೇಳಿಕೆಯನ್ನು ತಿರುಚಿ ಬಿಜೆಪಿಯವರು ಮಾತಾಡ್ತಿದ್ದಾರೆ ಎಂದರು. ಇದನ್ನೂ ಓದಿ: ಪ್ರತ್ಯೇಕ ರಾಷ್ಟ್ರದ ಕೂಗು ಎತ್ತಿದ ಸಂಸದ ಡಿಕೆ ಸುರೇಶ್‌

    ತಮಿಳುನಾಡಿನಲ್ಲಿ ಪ್ರತ್ಯೇಕ ದೇಶದ ಕೂಗು ಶುರುವಾಗಿದೆ. ಕರ್ನಾಟಕದಲ್ಲಿ ಶುರುವಾಗುವುದಕ್ಕೂ ಮುನ್ನ ಬಿಜೆಪಿ ಎಚ್ಚೆತ್ತುಕೊಳ್ಳಬೇಕು. ನನ್ನ ವಿರುದ್ಧ ಬಿಜೆಪಿ ದೂರು ನೀಡಿದರೂ ಹೆದರುವುದಿಲ್ಲ. ಕನ್ನಡದ ಅಸ್ಮಿತೆಗಾಗಿ ಎಲ್ಲದಕ್ಕೂ ಸಿದ್ಧ. ಈ ವಿಚಾರದಲ್ಲಿ ಬಿಜೆಪಿ ಬೇಕಾದರೆ ರಾಜಕೀಯ ಮಾಡಿಕೊಳ್ಳಲಿ. ನಾನು ಕರ್ನಾಟಕದ ಪರವಾಗಿ ಮಾತನಾಡಿದ್ದೇನೆ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.

    ಸಂಸದರು ಹೇಳಿದ್ದೇನು..?: ಇಂದಿನ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ್ದ ಡಿಕೆ ಸುರೇಶ್, ಇಂದಿನ ಬಜೆಟ್‍ನಲ್ಲಿ ಹೊಸತೇನು ಇಲ್ಲ. ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ಇಂದು ನಮ್ಮ ಗ್ಯಾರಂಟಿಗಳನ್ನು ವಿರೋಧ ಮಾಡಿದಂತವರು ಗ್ಯಾರಂಟಿ ಹೆಸರಿನಲ್ಲಿ ಚುನಾವಣೆಗೆ ಹೊರಟಿದ್ದಾರೆ. ದಕ್ಷಿಣ ಭಾರತದ ಹಣವನ್ನ ಉತ್ತರ ಭಾರತಕ್ಕೆ ಬಿಡುತ್ತಿದ್ದಾರೆ. ಇದರಿಂದ ನಮಗೆ ಆರ್ಥಿಕ ತೊಂದರೆಯಾಗುತ್ತಿದೆ. ಹೀಗೆ ಮುಂದುವರಿದರೆ ಪ್ರತ್ಯೇಕ ದೇಶ ಕೇಳಬೇಕಾಗುತ್ತದೆ ಎಂದು ಹೇಳಿದ್ದರು. ಸಂಸದರ ಈ ಹೇಳಿಕೆ ಭಾರೀ ಚರ್ಚೆಗೀಡಾಗಿದ್ದು, ಬಿಜೆಪಿಯವರು ಡಿಕೆ ಸುರೇಶ್‌ ವಿರುದ್ಧ ಕಿಡಿಕಾರಿದ್ದಾರೆ.

  • ಮಧ್ಯಂತರ ಬಜೆಟ್‌ನಲ್ಲಿ ನಾರಿಶಕ್ತಿಗೆ ಹೆಚ್ಚಿನ ಒತ್ತು

    ಮಧ್ಯಂತರ ಬಜೆಟ್‌ನಲ್ಲಿ ನಾರಿಶಕ್ತಿಗೆ ಹೆಚ್ಚಿನ ಒತ್ತು

    ನವದೆಹಲಿ: ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್‌ (Niramala Sitharaman) ಅವರು ಮಂಡಿಸುತ್ತಿರುವ ಮಧ್ಯಂತರ ಬಜೆಟ್‌ನಲ್ಲಿ ನಾರಿ ಶಕ್ತಿಯ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.

    ನಾರಿಶಕ್ತಿಗೆ (Narishakti) ಹೆಚ್ಚಿನ ಒತ್ತು ನೀಡಲಾಗುವುದು ಎಂದ ಅವರು, ಕಳೆದ 10 ವರ್ಷಗಳಲ್ಲಿ ಉನ್ನತ ಶಿಕ್ಷಣದಲ್ಲಿ ಮಹಿಳೆಯರ ದಾಖಲಾತಿ 28% ಹೆಚ್ಚಾಗಿದೆ. ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (STEM) ಕೋರ್ಸ್‌ಗಳಲ್ಲಿ ಹುಡುಗಿಯರು ಮತ್ತು ಮಹಿಳೆಯರು 43% ದಾಖಲಾತಿಯನ್ನು ಮಾಡುತ್ತಾರೆ. ಇದು ವಿಶ್ವದಲ್ಲೇ ಅತಿ ಹೆಚ್ಚು ಎಂದು ತಿಳಿಸಿದ್ದಾರೆ.

    ತ್ರಿವಳಿ ತಲಾಖ್ ನಿಷೇಧ, ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 1/3 ಸ್ಥಾನಗಳನ್ನು ಮೀಸಲಿಡುವುದು. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ 70% ರಷ್ಟು ಮನೆಗಳು ಮಹಿಳೆಯರ ಘನತೆಯನ್ನು ಹೆಚ್ಚಿಸಿವೆ ಎಂದರು. ಇದನ್ನೂ ಓದಿ: ಡಿಬಿಟಿ ಮೂಲಕ 34 ಲಕ್ಷ ಕೋಟಿ ರೂ. ವಿತರಣೆ : ನಿರ್ಮಲಾ ಸೀತಾರಾಮನ್‌