Tag: Budget 2020

  • ನಿಖಿಲ್ ಮದ್ವೆಗಾಗಿ ಜನರಿಗೆ ಯಾವುದೇ ಗಿಫ್ಟ್ ನೀಡ್ತಿಲ್ಲ, ಅದೆಲ್ಲವೂ ಸುಳ್ಳು: ಅನಿತಾ ಕುಮಾರಸ್ವಾಮಿ

    ನಿಖಿಲ್ ಮದ್ವೆಗಾಗಿ ಜನರಿಗೆ ಯಾವುದೇ ಗಿಫ್ಟ್ ನೀಡ್ತಿಲ್ಲ, ಅದೆಲ್ಲವೂ ಸುಳ್ಳು: ಅನಿತಾ ಕುಮಾರಸ್ವಾಮಿ

    ರಾಮನಗರ: ಪುತ್ರ ನಿಖಿಲ್ ಮತ್ತು ರೇವತಿ ಮದುವೆಗೆ ನಾವು ರಾಮನಗರ, ಚನ್ನಪಟ್ಟಣ ಕ್ಷೇತ್ರದ ಕುಟುಂಬಗಳಿಗೆ ಯಾವುದೇ ಉಡುಗೊರೆಯನ್ನು ನೀಡುತ್ತಿಲ್ಲ. ಇದೆಲ್ಲಾ ಸುಳ್ಳು ಸುದ್ದಿ, ಬೆಂಗಳೂರಿನ ಬದಲು ರಾಮನಗರ ಜಿಲ್ಲೆಯಲ್ಲೇ ಸರಳವಾಗಿ ಮದುವೆ ಮಾಡುತ್ತಿದ್ದೇವೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ.

    ರಾಮನಗರ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಅನಿತಾ ಕುಮಾರಸ್ವಾಮಿ ಭಾಗಿಯಾಗಿದ್ದರು. ಇದೇ ವೇಳೆ ಮಾತನಾಡಿದ ಅವರು, ನಿಖಿಲ್ ಮದುವೆಗೆ ಕ್ಷೇತ್ರದ ಮತದಾರರಿಗೆ ರೇಷ್ಮೆ ಸೀರೆ, ಪಂಚೆ ನೀಡುತ್ತಿದ್ದೇವೆ ಎಂದು ಸುದ್ದಿ ಹರಿದಾಡುತ್ತಿದೆ. ಆದರೆ ಇದೆಲ್ಲಾ ಸತ್ಯಕ್ಕೆ ದೂರವಾಗಿದೆ. ಈ ರೀತಿ ಯಾರು ಹಬ್ಬಿಸುತ್ತಿದ್ದಾರೆ ಗೊತ್ತಿಲ್ಲ ಎಂದರು. ಇದನ್ನೂ ಓದಿ: ನಿಖಿಲ್ ನಿಶ್ಚಿತಾರ್ಥಕ್ಕೆ ತಂದಿದ್ದ ಹಾರದ ಕಥೆ ಹೇಳಿದ ಎಚ್.ವಿಶ್ವನಾಥ್

    ಆಹ್ವಾನ ಪತ್ರಿಕೆಯನ್ನು ಸರಳವಾಗಿ ಪ್ರಿಂಟ್ ಮಾಡಿಸಿದ್ದೇವೆ. ಅದಕ್ಕೇನೂ ಸಾವಿರಾರು ರೂಪಾಯಿ ಖರ್ಚು ಮಾಡಿಲ್ಲ. ಇಲ್ಲಿಯೇ ಮದುವೆ ಮಾಡಬೇಕು ಎಂಬ ಇಚ್ಛೆ ನನಗೂ, ಕುಮಾರಸ್ವಾಮಿಗೂ ಇತ್ತು. ಈ ಹಿನ್ನೆಲೆಯಲ್ಲಿ ಅಧಿಕ ಜನರು ಸೇರುತ್ತಾರೆ ಎಂದು ಅದಕ್ಕಾಗಿ ವಿಶಾಲವಾದ ಸ್ಥಳಬೇಕು ಎಂಬ ದೃಷ್ಟಿಯಿಂದ ಇಲ್ಲಿ ಮದುವೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

    ಇದೇ ವೇಳೆ ರಾಜ್ಯ ಬಜೆಟ್ ಅನ್ನು ಟೀಕಿಸಿದ ಅವರು, ರೈತರ ಸಾಲಮನ್ನಾ ಯೋಜನೆ ಕೈ ಬಿಟ್ಟಿದ್ದಕ್ಕೆ ಬೇಸರವಾಗಿದೆ. ಸಿಎಂ ಯಡಿಯೂರಪ್ಪ ತಮ್ಮದು ರೈತ ಪರ ಸರ್ಕಾರದ ಬಜೆಟ್ ಎಂದು ಬಜೆಟ್ ಮಂಡಿಸುವಾಗ ಹಸಿರು ಶಾಲು ಹಾಕಿಕೊಂಡು ಬಜೆಟ್ ಮಂಡಿಸಿದರು. ಆದರೆ ಮಾಜಿ ಸಿಎಂ ಕುಮಾರಸ್ವಾಮಿಯವರ ರೈತರ ಸಾಲಮನ್ನಾ ಯೋಜನೆಯನ್ನು ಕೈ ಬಿಟ್ಟಿದ್ದಾರೆ. ಅದು ಸರಿಯಲ್ಲ. ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದಂತೆ ಬಜೆಟ್ ಮಂಡಿಸಿದ್ದಾರೆ. ಅಲ್ಲದೇ ಎಚ್‍ಡಿಕೆ ಯೋಜನೆಗಳಿಗೂ ಬ್ರೇಕ್ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

  • ನಿಖಿಲ್ ನಿಶ್ಚಿತಾರ್ಥಕ್ಕೆ ತಂದಿದ್ದ ಹಾರದ ಕಥೆ ಹೇಳಿದ ಎಚ್.ವಿಶ್ವನಾಥ್

    ನಿಖಿಲ್ ನಿಶ್ಚಿತಾರ್ಥಕ್ಕೆ ತಂದಿದ್ದ ಹಾರದ ಕಥೆ ಹೇಳಿದ ಎಚ್.ವಿಶ್ವನಾಥ್

    ಧಾರವಾಡ: ರಾಜ್ಯದ ಮತ್ತು ರಾಷ್ಟ್ರದ ಆರ್ಥಿಕ ಸ್ಥಿತಿ ನೋಡಿ ಬಜೆಟ್ ವಿಶ್ಲೇಷಣೆ ಮಾಡಬೇಕಿದೆ ಎಂದು ಹೇಳಿರುವ ಮಾಜಿ ಸಚಿವ ಎಚ್.ವಿಶ್ವನಾಥ್, ಸಚಿವ ಶ್ರೀರಾಮುಲು ಪುತ್ರಿ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪುತ್ರನ ಆಡಂಬರದ ಮದುವೆಯ ಬಗ್ಗೆ ಕೊಂಕು ಮಾತನಾಡಿದ್ದಾರೆ.

    ನಗರದ ಸಾಧನಕೆರೆಯ ಬೇಂದ್ರೆ ಭವನಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಸರ್ಕಾರದ ವಿಚಾರಗಳನ್ನು ಸತ್ಯದ ರೂಪದಲ್ಲಿ ಹೇಳಬೇಕಿದೆ. ರಾಜ್ಯದ ಆರ್ಥಿಕ ಸ್ಥಿತಿ ಕುಸಿದಿದ್ದರೂ ರಾಜಕೀಯ, ರಾಜಕಾರಣಿಗಳ ಆರ್ಥಿಕ ಬಲ ಜಾಸ್ತಿ ಆಗುತ್ತಿದೆ ಎನ್ನುತ್ತ ಆಡಂಬರದ ಮದುವೆ ಪ್ರಸ್ತಾಪ ಮಾಡಿದರು. ಬಜೆಟ್ ಮಂಡನೆ ದಿನವೇ ಶ್ರೀರಾಮುಲು ಮನೆ ಮದುವೆ ಆಯಿತು. 7 ದಿನದ ಮದುವೆ, ಬಳ್ಳಾರಿಯಿಂದ ಹಿಡಿದು ಬೆಂಗಳೂರವರೆಗಿನ ಮದುವೆಯಾಗಿದೆ ಎಂದರು.

    ಇನ್ನೊಂದೆಡೆ ಮಾಜಿ ಸಿಎಂ ಕುಮಾರಸ್ವಾಮಿ ಮಗನ ಮದುವೆಗಾಗಿ 50 ಎಕರೆ ಜಾಗದಲ್ಲಿ ಪೆಂಡಾಲ್ ಹಾಕುತ್ತಿದ್ದಾರೆ. ನಿಖಿಲ್ ಎಂಗೇಜ್‍ಮೆಂಟ್‍ಗೆ ಬೇರೆ ದೇಶದಿಂದ ಹಾರ ತರಿಸಿದ್ದರು. ನಮ್ಮ ರಾಜ್ಯದಲ್ಲೇ ಎಂತೆಂಥ ಹೂವುಗಳಿವೆ. ಆದರೆ ನಿಖಿಲ್ ಎಂಗೇಜ್‍ಮೆಂಟ್‍ಗೆ ಬೇರೆ ದೇಶದ ಹಾರವೇ ಬೇಕಾಗಿತ್ತಾ ಎಂದು ವಿಶ್ವನಾಥ್ ಪ್ರಶ್ನೆ ಮಾಡಿದರು.

    ಜನರ ಋಣ ತೀರಿಸಲು ಮಗನ ಮದುವೆಗೆ ಸೀರೆ ಇತ್ಯಾದಿ ಕೊಡುತ್ತೀನಿ ಎಂದು ಎಚ್‍ಡಿಕೆ ಹೇಳುತ್ತಿದ್ದಾರೆ. ಜನ ಅವಕಾಶ ಕೊಟ್ಟಾಗ ಸಿಎಂ ಆಗಿದ್ರಲ್ವಾ ಆಗ ಸರ್ಕಾರದ ಕಾರ್ಯಕ್ರಮದ ಮೂಲಕ ಜನರ ಅರ್ಥಿಕ ಬಲ ಮಾಡಬೇಕಿತ್ತು. ಇದರ ಬಗ್ಗೆ ಮಾಧ್ಯಮಗಳು ವಿಶ್ಲೇಷಣೆ ಮಾಡಬೇಕಿದೆ ಎಂದು ಆಗ್ರಹಿಸಿದರು.

    ಬಜೆಟ್ ಬಗ್ಗೆ ಮಾತು:
    ಬಜೆಟ್ ಪ್ರಸ್ತಾಪ ಮಾಡಿದ ವಿಶ್ವನಾಥ್, ಎರಡೂವರೆ ಲಕ್ಷ ಕೋಟಿ ರೂ. ಬಜೆಟ್ ಮಂಡನೆ ಮಾಡಿದರೂ 4 ಲಕ್ಷ ಕೋಟಿ ರೂ. ಹತ್ತಿರಕ್ಕೆ ಸಾಲ ತಂದಿದ್ದೇವೆ. ಸಾಲಕ್ಕೆ ಬಡ್ಡಿ ಕಟ್ಟೋಕೆ ಆಗುತ್ತಾ ಎಂಬ ಬಗ್ಗೆ ವಿಚಾರ ಮಾಡಬೇಕಿದೆ ಎಂದರು.

    ಅಧಿಕಾರಿಗಳ, ನೌಕರರ ಸಂಬಳಕ್ಕೆ 24 ಸಾವಿರ ಕೋಟಿ ರೂ. ಹೋಗುತ್ತಿದೆ. ನನ್ನ ಹತ್ತಿರ ಇರುವುದೇ ಹತ್ತು ರೂಪಾಯಿ ಅಂತ ಹೇಳುವ ನಾಯಕರು ಬೇಕಿದೆ. ದೆಹಲಿ ಸಿಎಂ ಬಸ್, ವಿದ್ಯುತ್, ನೀರು ಎಲ್ಲ ಉಚಿತ ಕೊಟ್ಟಿದ್ದಾರೆ. ಇಂತಹ ಕೆಲಸಗಳ ಬಗ್ಗೆ ನಮ್ಮ ರಾಜ್ಯ ಸರ್ಕಾರ ಗಮನಹರಿಸಬೇಕು. ಹೀಗಾಗಿ ದುಂದು ವೆಚ್ಚವನ್ನು ಕಡಿಮೆ ಮಾಡುವ ಸರ್ಕಾರ ಬೇಕಾಗಿದೆ ಎಂದು ವಿಶ್ವನಾಥ್ ಹೇಳಿದರು.

    ತಾವು ಪಕ್ಷ ಬದಲಿಸಿದ್ದು ಮಾರಾಟವಲ್ಲ. ಹೋರಾಟ ಎಂದ ವಿಶ್ವನಾಥ್, ರಾಜ್ಯದಲ್ಲಿ ಪಕ್ಷ ರಾಜಕಾರಣ ಸತ್ತು ಹೋಗಿ ಬಹಳ ದಿನವಾಯಿತು. ಇಲ್ಲಿ ಕುಟುಂಬ, ವ್ಯಕ್ತಿ ಜಾತಿ, ಗುಂಪು ರಾಜಕಾರಣ ಆಗುತ್ತಿದೆ. ಸಿದ್ದರಾಮಯ್ಯ, ಕುಮಾರಸ್ವಾಮಿ ನಮ್ಮನ್ನೆಲ್ಲ ಮಾರಾಟ ಅಂದ್ರು. ಆದರೆ ಅದು ಅವರ ದುರ್ನಡತೆ ವಿರುದ್ಧ ನಡೆದ ಹೋರಾಟ. ನಾನು ಸಚಿವ ಸ್ಥಾನಕ್ಕಾಗಿ ಹೋರಾಟ ಮಾಡಿದವನಲ್ಲ, ಸಚಿವ ಸ್ಥಾನ ಕೊಡುವುದು ಬಿಡುವುದು ಬಿಎಸ್‍ವೈಗೆ ಬಿಟ್ಟಿದ್ದು, ಸೋತವರಿಗೆ ಕೊಡಬಾರದು ಅಂತಿಲ್ಲ, ಈಗ ಸೋತವರೇ ಡಿಸಿಎಂ ಆಗಿದ್ದಾರೆ. ಕನ್ನಡ ನಾಡಿನಲ್ಲಿ ನಾಲಿಗೆ ಮೇಲೆ ನಿಂತ ಏಕೈಕ ನಾಯಕ ಯಡಿಯೂರಪ್ಪ ಮಾತ್ರ. ಕುಮಾರಸ್ವಾಮಿ ಎಂದಿಗೂ ಇಲ್ಲ. ಯಡಿಯೂರಪ್ಪ ಬಗ್ಗೆ ಮಾತ್ರ ನಮಗೆ ನಂಬಿಕೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ವಲಯಗಳಲ್ಲಿ ಹಂಚಿಹೋದ ಬಜೆಟ್ – ಸಚಿವರು ಕನ್ಫ್ಯೂಷನ್

    ವಲಯಗಳಲ್ಲಿ ಹಂಚಿಹೋದ ಬಜೆಟ್ – ಸಚಿವರು ಕನ್ಫ್ಯೂಷನ್

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಂಡಿಸಿರುವ 2020-21ನೇ ಸಾಲಿನ ರಾಜ್ಯ ಮುಂಗಡಪತ್ರ ಹಿಂದಿನ ಮುಂಗಡಪತ್ರಗಳಿಗಿಂತ ವಿಭಿನ್ನವಾಗಿದೆ. ಇದೇ ಮೊದಲ ಬಾರಿಗೆ ಸಿಎಂ ಯಡಿಯೂರಪ್ಪ ಬಜೆಟ್ ಸಂಪ್ರದಾಯದ ಚೌಕಟ್ಟು ದಾಟಿದ್ದಾರೆ.

    ರಾಜ್ಯದ ಬಜೆಟ್ ಇತಿಹಾಸದಲ್ಲಿ ಹೊಸ ಸಂಪ್ರದಾಯ ಆರಂಭಿಸಿರುವ ಸಿಎಂ ಯಡಿಯೂರಪ್ಪ, ಇದುವರೆಗೆ ಯಾರೂ ರೂಪಿಸದ ರೀತಿಯಲ್ಲಿ ಬಜೆಟ್ ಮಂಡಿಸಿದ್ದಾರೆ. ಈ ಸಲ ಇಲಾಖಾವಾರು ಬಜೆಟ್ ಮಂಡನೆಗೆ ಬ್ರೇಕ್ ಹಾಕಿದ ಬಿಎಸ್‍ವೈ, ಇಲಾಖಾವಾರು ಬದಲು ವಯಲವಾರು ವಿಂಗಡಿಸಿ ಬಜೆಟ್ ಮಂಡನೆ ಮಾಡಿದ್ದಾರೆ. ಆರು ವಲಯದಲ್ಲಿ 34 ಇಲಾಖೆಗಳನ್ನು ಹಂಚಿಕೆ ಮಾಡುವ ಮೂಲಕ ಅನುದಾನ ಘೋಷಿಸಲಾಗಿದೆ.

    ಲಭ್ಯ ಆರ್ಥಿಕ ಇತಿಮಿತಿಯಲ್ಲೇ ಸಿಎಂ ಯಡಿಯೂರಪ್ಪ ಈ ಬಾರಿ ಬಜೆಟ್ ಕೊಟ್ಟಿದ್ದಾರೆ. ಬಜೆಟ್‍ನಲ್ಲಿ ಸರ್ಕಾರದ ಇಲಾಖೆಗಳನ್ನು ವಲಯವಾರು ಹಂಚಿರೋದು ವಿಭಿನ್ನ ಪ್ರಯೋಗವೇನೋ ಸರಿ. ಆದರೆ ಸಂಪುಟ ಸಚಿವರಿಗೆ ಇದೇ ಒಂದು ದೊಡ್ಡ ಗೊಂದಲ ಸೃಷ್ಟಿಸಿದೆ ಎಂದು ತಿಳಿದು ಬಂದಿದೆ. ಯಾವ ಇಲಾಖೆ, ಯಾವ ವಲಯದಲ್ಲಿ ಸೇರಿದೆ ಅನ್ನೋದೇ ಸಚಿವರಿಗೆ ಕನ್ಫ್ಯೂಷನ್ ಹುಟ್ಟಿಸಿದೆ ಎನ್ನಲಾಗಿದೆ.

    ಇದೀಗ ಸಚಿವರು ತಮ್ಮ ಗೊಂದಲ ಬಗೆಹರಿಸಿಕೊಳ್ಳಲು ತಮ್ಮ ತಮ್ಮ ಇಲಾಖೆಗಳ ಹಿರಿಯ ಅಧಿಕಾರಿಗಳ ಮೊರೆ ಹೋಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸಚಿವರು ಬಜೆಟ್ ಅರ್ಥವಾಗದೇ ತಮ್ಮ ತಮ್ಮಲ್ಲೇ ಒಳ ಚರ್ಚೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಚಿವರು ಬಜೆಟ್ ಹೇಗಿದೆ ಅಂತ ಬಹಿರಂಗವಾಗಿ ಅಭಿಪ್ರಾಯ ಹೇಳಿಕೊಳ್ಳುವುದಕ್ಕೂ ಹಿಂಜರಿಯುತ್ತಿದ್ದಾರೆ ಎನ್ನಲಾಗಿದೆ.

    ಮೇಲ್ನೋಟಕ್ಕೆ ಕೆಲವು ಪ್ರಮುಖ ವಿಷಯಗಳು ಮಾತ್ರ ಬಜೆಟ್‍ನಲ್ಲಿ ಗೋಚರವಾಗಿದೆ. ಉಳಿದಂತೆ ಬಜೆಟ್‍ನಲ್ಲಿ ಇಲಾಖಾವಾರು ಏನೇನು ಸಿಕ್ಕಿದೆ ಅನ್ನೋದೇ ಸಚಿವರಿಗೆ ಅರ್ಥವಾಗಿಲ್ಲವಂತೆ. ಸಿಎಂ ಮಂಡಿಸಿದ ಬಜೆಟ್‍ನ ತಲೆಬುಡ ಅರ್ಥ ಮಾಡಿಕೊಳ್ಳಲು ತಿಣುಕಾಡುತ್ತಿರುವ ಸಚಿವರು ಅಧಿಕಾರಿಗಳ ಮೊರೆ ಹೋಗುತ್ತಿದ್ದಾರಂತೆ. ತಮ್ಮ ತಮ್ಮ ಇಲಾಖೆಗಳ ಅಧಿಕಾರಿಗಳಿಂದ ಸಚಿವರು ಬಜೆಟ್ ಬಗ್ಗೆ ಸ್ಪಷ್ಟನೆ ಪಡೆದುಕೊಳ್ಳುತ್ತಿದ್ದಾರಂತೆ. ತಮ್ಮ ತಮ್ಮ ಇಲಾಖೆಗಳಿಗೆ ಏನೇನು ಸಿಕ್ಕಿದೆ, ಹಳೆಯ ಅನುದಾನ ಎಷ್ಟು, ಹೊಸ ಅನುದಾನ ಎಷ್ಟು ಅನ್ನೋ ಮಾಹಿತಿಗೆ ಅಧಿಕಾರಿಗಳ ಬಳಿ ಸಚಿವರು ಹೋಗುತ್ತಿದ್ದಾರೆ. ಈ ಕಸರತ್ತಿನಲ್ಲಿ ಸಚಿವರು ಎಷ್ಟರ ಮಟ್ಟಿಗೆ ಸಕ್ಸಸ್ ಆಗ್ತಾರೋ ಕಾದು ನೋಡಬೇಕಿದೆ. ಒಟ್ಟಿನಲ್ಲಿ ಸಚಿವರ ಪಾಡು ಈಗ, ಮೊದಲು ಬಜೆಟ್ ಅರ್ಥ ಮಾಡಿಕೊಳ್ಳುವುದು, ಉಳಿದದ್ದು ನಂತರ ಅನ್ನುವಂತಾಗಿದೆ ಎನ್ನಲಾಗಿದೆ.

    ರಾಜ್ಯ ಬಜೆಟ್‍ನ ವಲಯವಾರು ವಿಂಗಡಣೆ ಹೀಗಿದೆ:
    1) ಕೃಷಿ ಮತ್ತು ಪೂರಕ ಚಟುವಟಿಕೆಗಳು
    2) ಸರ್ವೋದಯ ಮತ್ತು ಕ್ಷೇಮಾಭಿವೃದ್ದಿ
    3) ಆರ್ಥಿಕ ಅಭಿವೃದ್ಧಿಗೆ ಪ್ರಚೋದನೆ
    4) ಬೆಂಗಳೂರು ಸಮಗ್ರ ಅಭಿವೃದ್ಧಿ
    5) ಸಂಸ್ಕೃತಿ ಪರಂಪರೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ
    6) ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆಗಳು

  • ರಾಮೋಜಿ ರಾವ್ ಫಿಲ್ಮ್ ಸಿಟಿಯಂತೆ ರಾಜ್ಯದಲ್ಲೂ ಫಿಲ್ಮ್ ಸಿಟಿ ಆದ್ರೆ ಒಳ್ಳೆಯದು: ಪುನೀತ್

    ರಾಮೋಜಿ ರಾವ್ ಫಿಲ್ಮ್ ಸಿಟಿಯಂತೆ ರಾಜ್ಯದಲ್ಲೂ ಫಿಲ್ಮ್ ಸಿಟಿ ಆದ್ರೆ ಒಳ್ಳೆಯದು: ಪುನೀತ್

    – ಪಿವಿಆರ್​​​​​ನಲ್ಲೂ ಕನ್ನಡ ಸಿನಿಮಾಗೆ ಒಳ್ಳೆಯ ಅವಕಾಶ ಕೊಡಿ

    ಬೆಂಗಳೂರು: ಹೈದರಾಬಾದ್‍ನ ರಾಮೋಜಿ ರಾವ್ ಫಿಲ್ಮ್ ಸಿಟಿಯಂತೆ ರಾಜ್ಯದಲ್ಲೂ ಫಿಲ್ಮ್ ಸಿಟಿ ಆದರೆ ಒಳ್ಳೆಯದು ಎಂದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹೇಳಿದ್ದಾರೆ.

    ಕೆ.ಆರ್.ಪುರಂ ಬಳಿಯ ಒರಾಯನ್ ಅಪ್ ಟೌನ್ ಮಾಲ್‍ನಲ್ಲಿ ಪಿವಿಆರ್​​​​​ನ ನೂರನೇ ಸ್ಕ್ರೀನ್ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಫಿಲ್ಮ್ ಸಿಟಿ ನಿರ್ಮಾಣಕ್ಕಾಗಿ ಬಜೆಟ್‍ನಲ್ಲಿ 500 ಕೋಟಿ ರೂ. ಘೋಷಣೆ ಖುಷಿ ತಂದಿದೆ. ರಾಮೋಜಿ ರಾವ್ ಫಿಲ್ಮ್ ಸಿಟಿಯಂತೆ ಇಲ್ಲೂ ಫಿಲ್ಮ್ ಸಿಟಿ ಆದರೆ ಚೆನ್ನಾಗಿರುತ್ತೆ. ಇದರಿಂದ ಸಿನಿಮಾ ನಿರ್ಮಾಣಕ್ಕೆ ಅನುಕೂಲವಾಗಲಿದೆ. ಜೊತೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯಕ್ಕೆ ಬರುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಮನವಿಯಂತೆ ಚಿತ್ರನಗರಿಗೆ 500 ಕೋಟಿ ರೂ. ಅನುದಾನ- ಸಿಎಂಗೆ ಅಭಿನಂದನೆ ಸಲ್ಲಿಸಿದ ಯಶ್

    ಫಿಲ್ಮ್ ಸಿಟಿ ಎಲ್ಲಿ ನಿರ್ಮಾಣವಾದ್ರೆ ಉತ್ತಮ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾವ ಸ್ಥಳದಲ್ಲಿ ಆದರೂ ಖುಷಿನೇ. ನಮ್ಮಗೆ ಒಳ್ಳೆಯ ವ್ಯವಸ್ಥೆ ಸಿಗಲಿದೆ. ಬೆಂಗಳೂರಿನಲ್ಲೇ ಆಗಬೇಕು, ಮೈಸೂರಿನಲ್ಲೇ ಆಗಬೇಕು ಅನ್ನೋದು ಏನು ಇಲ್ಲ ಎಂದು ತಿಳಿಸಿದರು.

    ಪಿವಿಆರ್​​​​​ನಲ್ಲೂ ಕನ್ನಡ ಸಿನಿಮಾಗೆ ಒಳ್ಳೆಯ ಅವಕಾಶ ಕೊಡಿ. ನನಗೆ ಥಿಯೇಟರ್‌ನಲ್ಲಿ ಸಿನಿಮಾ ನೋಡುವುಕ್ಕೆ ತುಂಬಾ ಖುಷಿಯಾಗುತ್ತದೆ. ಅಲ್ಲಿ ಜನಗಳ ನಡುವೆ ಸಿನಿಮಾ ನೋಡುವ ಖುಷಿಯೇ ಬೇರೆ. ಅಪ್ಪಾಜಿ ಡಾ.ರಾಜ್‍ಕುಮಾರ್ ಮತ್ತು ನಟ ರಜನಿಕಾಂತ್ ಸರ್ ಜೊತೆಗೆ ಪಿವಿಆರ್​​​​​ನಲ್ಲಿ ಜೋಗಿ ಸಿನಿಮಾ ವೀಕ್ಷಿಸಿದ ನೆನಪಿದೆ ಎಂದರು. ಇದೇ ವೇಳೆ ಪಿವಿಆರ್​​​​​ನಲ್ಲಿ ಕನ್ನಡ ಸಿನಿಮಾಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಅಂತ ಪುನೀತ್ ಮನವಿ ಮಾಡಿಕೊಂಡರು.

  • ನಮ್ ಪತಿ ಮೇಲೆ ಬಿಎಸ್‍ವೈ ದ್ವೇಷ ಸಾಧಿಸಿದ್ರು ಬಿಡಿ – ಸಿಎಂ ಮೇಲೆ ಅನಿತಾ ಕುಮಾರಸ್ವಾಮಿ ಗರಂ

    ನಮ್ ಪತಿ ಮೇಲೆ ಬಿಎಸ್‍ವೈ ದ್ವೇಷ ಸಾಧಿಸಿದ್ರು ಬಿಡಿ – ಸಿಎಂ ಮೇಲೆ ಅನಿತಾ ಕುಮಾರಸ್ವಾಮಿ ಗರಂ

    ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ನಮ್ಮ ಪತಿ ಕುಮಾರಸ್ವಾಮಿ ಮೇಲೆ ದ್ವೇಷ ಸಾಧಿಸಿದ್ರು ಎಂದು ಬಜೆಟ್ ಬಗ್ಗೆ ಶಾಸಕಿ ಅನಿತಾ ಕುಮಾರಸ್ವಾಮಿ ಮಾತನಾಡಿದರು.

    ಮಾಧ್ಯಮಗಳ ಜೊತೆ ಜೊತೆ ಮಾತನಾಡಿತ ಅನಿತಾ ಕುಮಾರಸ್ವಾಮಿ, ಇದೊಂದು ನಿರಾಸೆಯ ಬಜೆಟ್ ಆಗಿದೆ. ಯಾವುದೇ ವರ್ಗದವರಿಗೂ ಅನುಕೂಲ ಆಗುವ ಲಕ್ಷಣಗಳ ಕಾಣುತ್ತಿಲ್ಲ. ಯಡಿಯೂರಪ್ಪ ಹಸಿರು ಶಾಲು ಹಾಕೊಂಡು ಬಂದಾಗ ರೈತನಿಗೆ ಬಜೆಟ್‍ನಲ್ಲಿ ಏನೋ ಇರುಬೇಕು ಅಂದುಕೊಂಡಿದ್ವಿ. ಆದರೆ ಮಹಿಳೆಯರಿಗೆ, ರೈತರಿಗೆ, ಕೊನೆಗೆ ಯುವಕರಿಗೂ ಇಲ್ಲ. ಒಟ್ಟಿನಲ್ಲಿ ಯಾವುದೇ ಒಂದು ವರ್ಗದವರಿಗೂ ಅನುಕೂಲ ಇಲ್ಲ ಎಂದರು.

    ಮೈತ್ರಿ ಸರ್ಕಾರದಲ್ಲಿ ಘೋಷಿಸಿದ್ದ ಬಡವರ ಬಂಧು, ಸಾಲಮನ್ನಾದ ವಿಚಾರ ಬಜೆಟ್‍ನಲ್ಲಿ ಪ್ರಸ್ತಾಪವೇ ಮಾಡಿಲ್ಲ. ಇದನ್ನು ಬಿಜೆಪಿ ಕೈಬಿಡುತ್ತಿದೆ. ಸಿಎಂ ಯಡಿಯೂರಪ್ಪ ಕುಮಾರಸ್ವಾಮಿ ಮೇಲೆ ವೈಯಕ್ತಿಕ ದ್ವೇಷಕ್ಕೆ ಹಿಂಗೆಲ್ಲ ಮಾಡಿದರು. ಆದರೆ ರೈತರಿಗೋಸ್ಕರ ಸಾಲಮನ್ನಾ ಯೋಜನೆಯನ್ನು ಜಾರಿಗೆ ಮಾಡಲಾಗಿತ್ತು. ಹೀಗಾಗಿ ಅದನ್ನಾದರೂ ಮುಂದುವರಿಸಿಕೊಂಡು ಹೋಗಬೇಕಿತ್ತು ಎಂಬುದು ನಮ್ಮ ಅಭಿಪ್ರಾಯ ಎಂದು ಅನಿತಾ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

    ಈ ಬಾರಿಯ ಬಜೆಟ್‍ನಲ್ಲಿ ನನೆಗೆ ಯಾವುದೇ ಗುಡ್ ಅನಿಸುವ ಯಾವ ಅಂಶವೂ ಇಲ್ಲ. ಇದೊಂದು ನೀರಸ ಬಜೆಟ್ ಎಂದು ಸಿಎಂ ಯಡಿಯೂರಪ್ಪ ಅವರು ಮಂಡಿಸಿದ್ದ ಬಜೆಟ್‍ ಬಗ್ಗೆ ಅನಿತಾ ಕುಮಾರಸ್ವಾಮಿ ಕಿಡಿಕಾರಿದರು.

  • ಹಸಿರು ಶಾಲು ಹಾಕಿದ್ರೆ ರೈತರು ಉದ್ದಾರ ಆಗುತ್ತಾರಾ?: ಬಿಎಸ್‍ವೈಗೆ ಸಿದ್ದರಾಮಯ್ಯ ಟಾಂಗ್

    ಹಸಿರು ಶಾಲು ಹಾಕಿದ್ರೆ ರೈತರು ಉದ್ದಾರ ಆಗುತ್ತಾರಾ?: ಬಿಎಸ್‍ವೈಗೆ ಸಿದ್ದರಾಮಯ್ಯ ಟಾಂಗ್

    – ಬಿಎಸ್‍ವೈ ಮಂಡ್ಯದಲ್ಲಿ ಲಿಂಬೆಹಣ್ಣಿನ ವ್ಯಾಪಾರ ಮಾಡಿದವ್ರು
    – ಮಹದಾಯಿಯಲ್ಲಿ ಬಿಜೆಪಿಯವರ ಪಾತ್ರ ಏನಿದೆ?

    ಬೆಂಗಳೂರು: ದೇಶದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಹೋಗಿದೆ. ಕೇಂದ್ರ ಸರ್ಕಾರದ ಜಿಡಿಪಿ ಶೇ.4.6 ಇದೆ. ನಮ್ಮ ಪ್ರಕಾರ ಶೇ.4 ಇದೆ. ರಾಜ್ಯದಲ್ಲಿ 19-20ಕ್ಕೆ ನಿರೀಕ್ಷೆಗಿಂತ ಶೇ.1 ರಷ್ಟು ಕಡಿಮೆಯಾಗಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

    ಬಜೆಟ್ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೃಷಿ, ಕೈಗಾರಿಕೆ ಸೇವಾವಲಯ ಮೂರು ಕ್ಷೇತ್ರದಲ್ಲಿ ಕಡಿಮೆಯಾಗಿದೆ. ಕೈಗಾರಿಕೆಯಲ್ಲಿ ಶೇ.5.6 ಇತ್ತು, ಈಗ 5.6 ಆಗಿದೆ. ಸೇವಾ ವಲಯ ಶೇ.9.9 ಇತ್ತು, ಈಗ ಶೇ.7 ಕ್ಕೆ ಇಳಿದಿದೆ. ಕೃಷಿಗೆ ಏನೇನು ಕೊಟ್ಟಿಲ್ಲ. ನೀರಾವರಿಗೆ 21 ಸಾವಿರ ಕೋಟಿ ನೀಡಿದ್ದಾರೆ. ಅದೂ ಸಣ್ಣ ನೀರಾವರಿ ಸೇರಿ ಮಹದಾಯಿಗೆ 500 ಕೋಟಿ ರೂ. ಎತ್ತಿನಹೊಳೆಗೆ 1500 ಕೋಟಿ ರೂ. ನೀಡಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ 40 ಸಾವಿರ ಕೋಟಿ ಬೇಕು ಎಂದು ಹೇಳಿದರು.  ಇದನ್ನೂ ಓದಿ: ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್, ಸಣ್ಣ ರೈತರಿಗೆ 10 ಸಾವಿರ – ಕೃಷಿಗೆ ಸಿಕ್ಕಿದ್ದು ಏನು?

    ಹಸಿರು ಶಾಲು ಹಾಕಿದರೆ ರೈತರು ಉದ್ದಾರ ಆಗುತ್ತಾರಾ? ಯಡಿಯೂರಪ್ಪ ವ್ಯವಸಾಯ ಮಾಡಿದ್ದಾರೊ ಗೊತ್ತಿಲ್ಲ. ಏಕೆಂದ್ರೆ ಅವರು ಮಂಡ್ಯದಲ್ಲಿ ಲಿಂಬೆಹಣ್ಣಿನ ವ್ಯಾಪಾರ ಮಾಡಿಕೊಂಡಿದ್ದರು. ನಾನೂ ಮೂರು ವರ್ಷ ಹಸಿರು ಶಾಲು ಹಾಕಿಕೊಂಡಿದ್ದೆ. ಅವರು ಯಾವುದಾದರೂ ಶಾಲು ಹಾಕಿಕೊಳ್ಳಲಿ. ಬಜೆಟ್‍ನಲ್ಲಿ ಸುಳ್ಳು ಹೇಳುವುದೇಕೆ? ನೀರಾವರಿ ಕೃಷಿಗೆ ಯಾವುದೇ ವಿಶೇಷ ಅನುದಾನ ನೀಡಿಲ್ಲ ಎಂದು ತಿಳಿಸಿದರು.

    ಮಹದಾಯಿ ಕ್ರೆಡಿಟ್ ಅನ್ನು ಬಿಜೆಪಿಯವರು ತೆಗೆದುಕೊಳ್ಳುತ್ತಿದ್ದಾರೆ. ನಮ್ಮ ಅವಧಿಯಲ್ಲಿ ಹೋರಾಟ ಮಾಡಿದ್ದೇವೆ. ಸುಪ್ರೀಂಕೋರ್ಟ್ ನಮ್ಮ ಪರವಾಗಿ ತೀರ್ಪು ನೀಡಿತ್ತು. ಇದರಲ್ಲಿ ಬಿಜೆಪಿಯವರ ಪಾತ್ರ ಏನಿದೆ? ಗೋವಾ ಸಿಎಂ ಜೊತೆ ಮಾತನಾಡಲು ಇವರಿಗೆ ಆಗಲಿಲ್ಲ. ಮಹದಾಯಿ ಯೋಜನೆಯನ್ನು ಕನಿಷ್ಠ 2 ವರ್ಷದಲ್ಲಿ ಪೂರ್ಣಗೊಳಿಸಬೇಕು. ಆದ್ಯತೆ ಮೇಲೆ ಹೆಚ್ಚಿನ ಅನುದಾನ ನೀಡಬೇಕು. ಹೊಸ ಕಾರ್ಯಕ್ರಮ ಯಾವುದೂ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ಮಹದಾಯಿಗೆ 500 ಕೋಟಿ, ಎತ್ತಿನಹೊಳೆಗೆ 1500 ಕೋಟಿ – ನೀರಾವರಿಗೆ ಸಿಕ್ಕಿದ್ದು ಏನು?

    2021ರ ಹೊಸ ಘೋಷಣೆಗಳು ಎಂದು ಹೇಳುತ್ತಾರೆ. ಭಾಗ್ಯಲಕ್ಷ್ಮಿ, ಸೈಕಲ್ ಯೋಜನೆ ಮಾತ್ರ ಹೇಳಿದ್ದಾರೆ. ಆಹಾರ ಇಲಾಖೆಗೆ ಶೇ. 1 ಅನುದಾನ ಕಡಿಮೆ ಮಾಡಿದ್ದಾರೆ. ಯಾವ ಯೋಜನೆ ನಿಲ್ಲಿಸುತ್ತಾರೊ ಗೊತ್ತಿಲ್ಲ. ಎಸ್‍ಸಿಪಿಟಿಎಸ್‍ಪಿಯಲ್ಲಿ 30,150 ಕೋಟಿ ರೂ. ಇತ್ತು. ಈಗ 26,131 ಕೋಟಿ ರೂ. ಇದೆ. ಸುಮಾರು 4 ಸಾವಿರ ಕೋಟಿ ಹೆಚ್ಚಳವಾಗಬೇಕಿತ್ತು. ಬಜೆಟ್ ಗಾತ್ರ ಹೆಚ್ಚಾದಂತೆ ಆ ಯೋಜನೆಗೂ ಹೆಚ್ಚಿನ ಅನುದಾನ ನೀಡಬೇಕಿತ್ತು. ಮೂಗಿಗೆ ತುಪ್ಪ ಹಚ್ಚಲು ಘೋಷಣೆ ಮಾಡಿದ್ದಾರೆ.

    ರೈತರ ಸಾಲ ಮನ್ನಾ ಯೋಜನೆ ಏನಾಯಿತು ಎಂದು ಹೇಳಬೇಕಿತ್ತು. ಈ ಬಗ್ಗೆ ಎಲ್ಲಿಯೂ ಪ್ರಸ್ತಾಪವಿಲ್ಲ. ಲ್ಯಾಂಡ್ ಬ್ಯಾಂಕ್‍ಗಳ ಸುಸ್ತಿ ಬಡ್ಡಿ ಮನ್ನಾ ಮಾಡುವುದಾಗಿ ಹೇಳಿದ್ದರು ಅದನ್ನೂ ಪ್ರಸ್ತಾಪಿಸಿಲ್ಲ. ಇವರು ರೈತರ ಪರಾನಾ ಅಥವಾ ವಿರೋಧಿನಾ? ಇದು ರೈತ ವಿರೋಧಿ ಬಜೆಟ್ ಎಂದು ದೂರಿದರು.

    ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂತ ಹೇಳುತ್ತಿದ್ದಾರೆ. ಆದರೆ ಅಲ್ಪ ಸಂಖ್ಯಾತರಿಗೆ ಯಾವುದೇ ಯೋಜನೆ ನೀಡಿಲ್ಲ. ಹಿಂದುಳಿದವರು, ಪರಿಶಿಷ್ಟರಿಗೆ ಯಾವುದೇ ವಿಶೇಷ ಯೋಜನೆ ಘೊಷಣೆ ಇಲ್ಲ. ಕಲ್ಯಾಣ ಕರ್ನಾಟಕ ಅಂತ ಘೋಷಣೆ ಮಾಡಿದ್ದರು. ನಾವು ಎಷ್ಟು ಹಣ ಇಟ್ಟಿದ್ದೇವು ಅಷ್ಟೇ ಹಣ ಇಟ್ಟಿದ್ದಾರೆ. ಎಲ್ಲ ಪಕ್ಷದವರು ಸೇರಿ 2,500 ಕೋಟಿ ರೂ. ನೀಡುವಂತೆ ಮನವಿ ಮಾಡಿದ್ದರು. 371-ಜೆ,ಗೆ ವಿರೋಧ ಮಾಡಿದವರು ಬಿಜೆಪಿಯವರು. ಕಲ್ಯಾಣ ಕರ್ನಾಟಕ ಘೋಷಣೆ ಮಾಡಿ ಅಭಿವೃದ್ಧಿ ಮಾಡಬೇಕಲ್ಲ. ಬರಿ ಢೋಂಗಿ ಘೋಷಣೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಬೆಂಗಳೂರಿಗೆ 10 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದೆ. ಇವರು 8 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದಾರೆ. ಮೆಟ್ರೋ ಫೆರಿಫರೆಲ್ ರಿಂಗ್ ರೋಡ್ ಬಗ್ಗೆ ಪ್ರಸ್ತಾಪವಿಲ್ಲ. ಬೆಂಗಳೂರು ಚಿತ್ರವನ್ನು ಆರು ತಿಂಗಳಲ್ಲಿ ಬದಲಾವಣೆ ಮಾಡುವುದಾಗಿ ಸಿಎಂ ಹೇಳಿದ್ದರು. ಸಬ್ ಅರ್ಬನ್ ರೈಲು ಮೂರು ವರ್ಷದಿಂದ ಹೇಳುತ್ತಿದ್ದಾರೆ. ಕೇಂದ್ರದವರು 1 ಕೋಟಿ ರೂ. ಇಟ್ಟಿದ್ದಾರೆ. ಇವರು 500 ಕೋಟಿ ಮೀಸಲಿಟ್ಟಿದ್ದಾರೆ. ಇದು ಟೇಕ್ ಆಪ್ ಆಗಲ್ಲ ಎಂದು ಹೇಳಿದರು.

    ಸಾಲ ತೆಗೆದುಕೊಳ್ಳಲು ಅವಕಾಶ ಇದೆ. ಜಿಡಿಪಿಯ ಶೇ.25 ರಷ್ಟು ಸಾಲ ತೆಗೆದುಕೊಳ್ಳಬೇಕು. 16.99 ಲಕ್ಷ ರೂ. ಜಿಡಿಪಿ ಇದೆ. ಆರ್ಥಿಕ ಶಿಸ್ತು ಮೀರಿಲ್ಲ. ಹೊಸ ಕಾರ್ಯಕ್ರಮ ಯಾವುದೂ ಇಲ್ಲ. ಸಾಮಾಜಿಕ ನ್ಯಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಹೆಸರು ಬದಲಾಯಿಸಿದಷ್ಟೇ ಬದಲಾವಣೆ. ಈ ಬಜೆಟ್ ಯಾವುದೇ ಮುನ್ನೋಟವಿಲ್ಲ ಎಂದು ಹೇಳಿದರು.

    ಪೆಟ್ರೋಲ್, ಡೀಸೆಲ್ ತೆರಿಗೆ ಹೆಚ್ಚಳ ಮಾಡಿದ್ದಾರೆ. ಕುಡಯೋರಿಗೆ ತೆರಿಗೆ ಹೆಚ್ಚಳ ಮಾಡಿದ್ದಾರೆ. ಬಜೆಟ್ ಮೂಲಕ ಬಿಜೆಪಿಯವರು ಜನರಿಗೆ ದ್ರೋಹ ಮಾಡಲು ಹೊರಟಿದ್ದಾರೆ. ಕೇಂದ್ರದಲ್ಲಿ ಇವರದ್ದೇ ಸರ್ಕಾರ ಇದೆ. ರಾಮರಾಜ್ಯ ಮಾಡುವುದಾಗಿ ಹೇಳಿದ್ದರು. ಅಲ್ಲಿಂದಲೂ ಯಾವುದೇ ಹಣ ಬರುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

  • ಬಜೆಟ್‍ನಲ್ಲಿ ಕೊಟ್ಟಿರುವ ಅನುದಾನ ಸುಣ್ಣ-ಬಣ್ಣ ಬಳಿಯಲೂ ಸಾಕಾಗೋಲ್ಲ: ಕುಮಾರಸ್ವಾಮಿ

    ಬಜೆಟ್‍ನಲ್ಲಿ ಕೊಟ್ಟಿರುವ ಅನುದಾನ ಸುಣ್ಣ-ಬಣ್ಣ ಬಳಿಯಲೂ ಸಾಕಾಗೋಲ್ಲ: ಕುಮಾರಸ್ವಾಮಿ

    ಬೆಂಗಳೂರು: ಬಜೆಟ್‍ನಲ್ಲಿ ಕೊಟ್ಟಿರುವ ಅನುದಾನ ಸುಣ್ಣ-ಬಣ್ಣ ಬಳಿಯಲೂ ಸಾಕಾಗೋಲ್ಲ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸಿಎಂ ಯಡಿಯೂರಪ್ಪ ಅವರ ಬಜೆಟ್ ಮಂಡನೆಯನ್ನು ಟೀಕಿಸಿದರು.

    ಮಾಧ್ಯಮಗಳ ಜೊತೆ ಮಾತನಾಡಿದ ಕುಮಾರಸ್ವಾಮಿ, ಬಜೆಟ್‍ನ ಎರಡನೇ ಪುಟದಲ್ಲೋ 3ನೇ ಪುಟದಲ್ಲೋ ನರೇಂದ್ರ ಮೋದಿ ಅವರ ಮಾರ್ಗದಲ್ಲಿ ಹೋಗುತ್ತೇವೆ ಎಂದು ಹೇಳಿಕೊಂಡಿದ್ದಾರೆ. ಕೇಂದ್ರದ ಅನುದಾನ ಬರಲ್ಲ, ಅದಕ್ಕೆ ಹೀಗೆ ಬಜೆಟ್‍ನಲ್ಲಿ ಏನು ಇಲ್ಲ ಎಂದರು. ಇದನ್ನೂ ಓದಿ: ಮಾರಾಟ ತೆರಿಗೆ ಏರಿಕೆ – ಹೆಚ್ಚಳವಾಗಲಿದೆ ಪೆಟ್ರೋಲ್, ಡೀಸೆಲ್ ದರ

    ನಮ್ಮ ರಾಜ್ಯ ತೆರೆಗೆ ಸಂಗ್ರಹದಲ್ಲಿ ಇಷ್ಟೆಲ್ಲಾ ಬಿಕ್ಕಟ್ಟು ಇದ್ದರೂ ಹಿಂದೆ ಬಿದ್ದಿಲ್ಲ. ಕಳೆದ ಬಾರಿ ನಾವು ಬಜೆಟ್ ಮಂಡನೆ ಮಾಡಿದಾಗ ಏನು ನಿರೀಕ್ಷೆ ಇಟ್ಟುಕೊಂಡಿದ್ದೆವೋ, ಆ ನಿರೀಕ್ಷೆ ಹತ್ತಿರ ಹೋಗಿದ್ದೇವೆ. ಶೇ. 14 ರಷ್ಟು ಹೆಚ್ಚಿನ ತೆರೆಗೆ ಸಂಗ್ರಹ ಕೂಡ ಆಗಿದೆ ಎಂದರು.

    ಈಗ ಕೊಟ್ಟಿರುವ ಹಣ ನೋಡಿದರೆ, ಅದರಲ್ಲೂ ಆರೋಗ್ಯ ಇಲಾಖೆಗೆ ಕೊಟ್ಟಿರುವ ಅನುದಾನದಲ್ಲಿ ಸುಣ್ಣ-ಬಣ್ಣ ಬಳಿಯಲು ಸಾಧ್ಯವಿಲ್ಲ. ಬಜೆಟ್‍ನಲ್ಲಿ ಯಾವುದು ಸ್ಪಷ್ಟನೆ ಆಗಿಲ್ಲ. ನಮ್ಮ ಯೋಜನೆಯನ್ನು ಈ ಸರ್ಕಾರ ಮುಂದುವರಿಸುವುದಕ್ಕೆ ಸಾಧ್ಯನೆ ಇಲ್ಲ. ಹೀಗಾಗಿ ಈ ಸರ್ಕಾರ ಜನರಿಗೆ ಯಾವುದೇ ರೀತಿಯ ಸ್ಪಷ್ಟನೆ ಕೊಡಲು ಸಾಧ್ಯವಾಗಿಲ್ಲ ಎಂದು ಕುಮಾರಸ್ವಾಮಿ ಬಜೆಟ್ ಅನ್ನು ಟೀಕಿಸಿದರು.

  • ಕೇಂದ್ರ ಬಜೆಟ್ ಮಂಡನೆ ರಾಜ್ಯಕ್ಕೆ ಸಿಕ್ಕಿದ್ದೇನು?

    ಕೇಂದ್ರ ಬಜೆಟ್ ಮಂಡನೆ ರಾಜ್ಯಕ್ಕೆ ಸಿಕ್ಕಿದ್ದೇನು?

    ನವದೆಹಲಿ : ಎರಡನೇ ಬಾರಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ನಲ್ಲಿ ಬೆಂಗಳೂರಿನ ಸಬ್ ಅರ್ಬನ್ ರೈಲು ಯೋಜನೆಗೆ ಒತ್ತು ನೀಡಲಾಗಿದೆ. ಯೋಜನೆಗೆ 18,600 ಕೋಟಿಗೆ ಅನುದಾನ ನೀಡುವ ಮೂಲಕ ಕಾಮಗಾರಿಗೆ ವೇಗ ನೀಡಲಾಗಿದೆ.

    ಇದಲ್ಲದೇ ರಾಜ್ಯದಲ್ಲಿ ರೈಲ್ವೇ ಯೋಜನೆಗಳು ಮುಂದುವರಿಸಲು ಅನುದಾನ ನೀಡಿದ್ದು ಅಳ್ನಾವರ – ತಾವರಗಟ್ಟಿ (22 ಕಿಮೀ) ಹುಬ್ಬಳ್ಳಿ ಬೈಪಾಸ್ (20.6ಕಿಮೀ) ತುಮಕೂರು – ಗುಬ್ಬಿ (18 ಕಿಮೀ) ಡಬ್ಲಿಂಗ್ ಕಾಮಗಾರಿ ಯೋಜನೆಗಳನ್ನು ಮುಂದುವರಿಸಲಾಗಿದೆ. ಚೆನ್ನೈ-ಬೆಂಗಳೂರು ಕಾರಿಡಾರ್ ಎಕ್ಸ್ ಪ್ರೆಸ್ ವೇ ಕೂಡಾ ಪ್ರಾರಂಭಿಸಲಾಗಿದೆ.

    ಇನ್ನು ರಾಜ್ಯದ ಹಲವು ಸಂಸ್ಥೆಗಳಿಗೆ ವಾರ್ಷಿಕ ಅನುದಾನ ಹಂಚಿಕೆ ಮಾಡಿದ್ದು ಈ ಪೈಕಿ ಬೆಂಗಳೂರಿನ ರಾಷ್ಟ್ರೀಯ ಯೂನಾನಿ ಔಷಧಿ ಸಂಸ್ಥೆಗೆ 23.50 ಕೋಟಿ, ಕಾಫಿ ಮಂಡಳಿಗೆ 2 ಕೋಟಿ, ನಿಮ್ಹಾನ್ಸ್ ಸಂಸ್ಥೆಗೆ 39.19 ಕೋಟಿ, ಮೈಸೂರಿನ ಸ್ಪೀಚ್ ಅಂಡ್ ಹಿಯರಿಂಗ್ ಸಂಸ್ಥೆಗೆ 55.66 ಕೋಟಿ, ಬೆಂಗಳೂರಿನ ಐಐಎಂಎಸ್‍ಗೆ 20 ಕೋಟಿ ನೀಡಲಾಗಿದೆ.

    ಸೆಂಟರ್ ಫಾರ್ ನ್ಯಾನೋ ಅಂಡ್ ಸಾಫ್ಟ್ ಮ್ಯಾಟರ್ ಸೈನ್ಸ್ ಗೆ 28.27 ಕೋಟಿ, ಭಾರತೀಯ ವಿಜ್ಞಾನ ಅಕಾಡೆಮಿಗೆ 14.52 ಕೋಟಿ, ಭಾರತೀಯ ಆ್ಯಸ್ಟ್ರೋ ಫಿಸಿಕ್ಸ್ ಸಂಸ್ಥೆಗೆ 71.72 ಕೋಟಿ, ರಾಮನ್ ಸಂಶೋಧನಾ ಸಂಸ್ಥೆಗೆ 58.77 ಕೋಟಿ, ಸೆಂಟರ್ ಆಫ್ ಎಕ್ಸ್ ಲೆನ್ಸ್ ಫಾರ್ ಎನರ್ಜಿ ಸ್ಥಾಪನೆಗೆ 1 ಕೋಟಿ ಹಂಚಿಕೆಯಾಗಿದ್ದು, ಐಐಐಟಿ ನಿರ್ವಹಣೆಗೆ 180 ಕೋಟಿ, ಐಐಟಿ ನಿರ್ವಹಣೆಗೆ 585 ಕೋಟಿ ನೀಡಿದೆ.

    100 ಸ್ಮಾರ್ಟ್ ಸಿಟಿ ಯೋಜನೆಗೆ 6,252 ಕೋಟಿ ನೀಡಲಾಗಿದೆ ಅಮೃತ ಯೋಜನೆಗೆ 5,841 ಕೋಟಿ ನೀಡಿದ್ದು ಕರ್ನಾಟಕ ಸಂಯೋಜಿತ ನಗರ ನೀರು ನಿರ್ವಹಣೆ ಹೂಡಿಕೆ ಯೋಜನೆಗೆ 100 ಕೋಟಿ ಅನುದಾನ ಕೇಂದ್ರ ಸರ್ಕಾರ ಈಬಾರಿಯ ಬಜೆಟ್ ನಲ್ಲಿ ನೀಡಿದೆ.

  • ಕರ್ನಾಟಕಕ್ಕೆ ಕೊಡೋ ಸಾಲ ಕೊಟ್ರೆ ಸಾಕು: ಕೇಂದ್ರವನ್ನ ಕುಟುಕಿದ ಡಿ.ಕೆ.ಸುರೇಶ್

    ಕರ್ನಾಟಕಕ್ಕೆ ಕೊಡೋ ಸಾಲ ಕೊಟ್ರೆ ಸಾಕು: ಕೇಂದ್ರವನ್ನ ಕುಟುಕಿದ ಡಿ.ಕೆ.ಸುರೇಶ್

    – ಸುಳ್ಳನ್ನ ನಿಜದ ತಲೆಯ ಮೇಲೆ ಹೊಡೆದಂತಿದೆ ಬಜೆಟ್
    – ಇದೊಂದು ಜುಮ್ಲಾ ಬಜೆಟ್: ‘ಕೈ’ ಸಂಸದರ ವಾಗ್ದಾಳಿ

    ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಸುಳ್ಳನ್ನ ನಿಜದ ತಲೆಯ ಮೇಲೆ ಹೊಡೆದಂತಿದೆ. ಇದೊಂದು ಸುಳ್ಳು ಭರವಸೆಗಳ ಬಜೆಟ್ ಎಂದು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.

    ಬಜೆಟ್ ಮಂಡನೆ ಬಳಿಕ ದೆಹಲಿಯಲ್ಲಿ ಮಾತನಾಡಿದ ಅವರು, ಉದ್ಯೋಗ ಸೃಷ್ಟಿ ಬಗ್ಗೆ ಮಾತನಾಡಿಲ್ಲ, ಜಿಡಿಪಿ 10 ಪರ್ಸೆಂಟ್ ಏರುತ್ತದೆ ಎನ್ನುತ್ತಾರೆ. ಅದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು ಇದೊಂದು ಜುಮ್ಲಾ ಬಜೆಟ್ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಬೆಂಗ್ಳೂರಿಗೆ ಸಬ್ ಅರ್ಬನ್ ಯೋಜನೆ ನೀಡಿದಕ್ಕೆ ಸೀತಾರಾಮನ್‍ಗೆ ಧನ್ಯವಾದ: ಜ್ಯೋಶಿ

    ಬೆಂಗಳೂರಿಗೆ ನೀಡಿರುವ ಸಬ್ ಅರ್ಬನ್ ರೈಲು ಕೂಡ ಮೂರು ವರ್ಷಗಳ ಹಿಂದಿನ ಘೋಷಣೆಯಾಗಿದ್ದು, ಅದಕ್ಕೆ ಅನುದಾನ ನೀಡಿದ್ದಾರೆ. ರಾಜ್ಯಕ್ಕೆ ಯಾವುದೇ ಹೊಸ ಯೋಜನೆ ಘೋಷಿಸಿಲ್ಲ. ಬೆಲೆ ಏರಿಕೆ ಹೆಚ್ಚಿದೆ. ರೈತರ ಆದಾಯ ದ್ವಿಗುಣ ಅಂತಾರೆ. ಅದು ಹೇಗೆ ಎನ್ನುವುದು ಎಲ್ಲೂ ಹೇಳಿಲ್ಲ. ಕರ್ನಾಟಕ ದೃಷ್ಟಿಯಿಂದ ಹೇಳುವುದಾದರೆ ರಾಜ್ಯಕ್ಕೆ ಕೊಡೋ ಸಾಲ ಕೊಟ್ರೆ ಸಾಕು ಎಂದು ಟೀಕಿಸಿದರು. ಇದನ್ನೂ ಓದಿ: ಆದಾಯ ತೆರಿಗೆಯಲ್ಲಿ ಭಾರೀ ಕಡಿತ

    ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಮಕ್ಕಳು ಪಾಠ ಒಪ್ಪಿಸುವ ರೀತಿ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಿದ್ದಾರೆ. ಬಜೆಟ್‍ನಲ್ಲಿ ಹೊಸತನ ಯಾವುದು ಇಲ್ಲ. ಮೂರು ವರ್ಷದಿಂದ ಹೇಳಿದ್ದನ್ನೇ ಮತ್ತೆ ಹೇಳುತ್ತಿದ್ದಾರೆ. ಇದೊಂದು ಜುಮ್ಲಾ ಬಜೆಟ್ ಎಂದರು.

    ಏರ್ ಇಂಡಿಯಾ ಮಾರಲು ಹೊರಟಿರುವ ಸರ್ಕಾರ ಈಗ ಎಲ್‍ಐಸಿಯನ್ನು ಮಾರಾಲು ನಿರ್ಧರಿಸಿದೆ. ಎಲ್ಲವನ್ನೂ ಖಾಸಗೀಕರಣ ಮಾಡಲು ಕೇಂದ್ರ ಮುಂದಾಗಿದ್ದು ಜನರು ಹೆಚ್ಚು ನಂಬಿದ್ದ ಎಲ್‍ಐಸಿಯ ಶೇರು ಮಾರಾಟ ಸರಿಯಲ್ಲ ಎಂದು ರಾಜ್ಯಸಭಾ ಸಂಸದ ಜಿ.ಸಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.

  • ಹೊಸ ತೆರಿಗೆ ಪದ್ಧತಿ ಕಡ್ಡಾಯವೂ ಅಲ್ಲ – ತೆರಿಗೆ ಪಾವತಿದಾರರಿಗೆ ಎರಡು ಆಯ್ಕೆ ಕೊಟ್ಟ ನಮೋ ಸರ್ಕಾರ

    ಹೊಸ ತೆರಿಗೆ ಪದ್ಧತಿ ಕಡ್ಡಾಯವೂ ಅಲ್ಲ – ತೆರಿಗೆ ಪಾವತಿದಾರರಿಗೆ ಎರಡು ಆಯ್ಕೆ ಕೊಟ್ಟ ನಮೋ ಸರ್ಕಾರ

    ನವದೆಹಲಿ: ಇದು ಜನಸಾಮಾನ್ಯರ ಬಜೆಟ್ ಎನ್ನುತ್ತಾ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಯವ್ಯಯ ಮಂಡಿಸಿದ್ದಾರೆ. 2 ಗಂಟೆ 40 ನಿಮಿಷಗಳ ಸುದೀರ್ಘ ಬಜೆಟ್ ಭಾಷಣದಲ್ಲಿ ಮೇಲ್ನೋಟಕ್ಕೆ ಹಲವು ವರಗಳನ್ನು ಘೋಷಣೆ ಮಾಡಿದರು. ಆದರೆ ಎಲ್ಲಾ ಮುಗಿದ ಮೇಲೆ ಬಜೆಟ್ ಆಳಕ್ಕೆ ಇಳಿದಾಗ ಅಸಲಿಯತ್ತು ಬಯಲಾಯ್ತು. ಮಧ್ಯಮವರ್ಗಕ್ಕೆ ಸೀತಮ್ಮ ವರಗಳನ್ನು ಕೊಟ್ಟಂತೆ ಕೊಟ್ಟು ಹಾಗೆಯೇ ಕಸಿದುಕೊಂಡಿದ್ದಾರೆ. ಇದ್ದುದರಲ್ಲಿ ಕೃಷಿ ಮತ್ತು ಗ್ರಾಮೀಣಾ ಭಾಗಕ್ಕೆ ಹೆಚ್ಚು ಒತ್ತು ನೀಡಿದ್ದಾರೆ.

    ವಿತ್ತಿಯ ಕೊರತೆ ನೀಗಿಸಲು ಸರ್ಕಾರಿ ಸ್ವಾಮ್ಯದ ಎಲ್‍ಐಸಿಯಂತಹ ಕಂಪನಿಗಳಲ್ಲಿ ಹೂಡಿಕೆ ಹಿಂತೆಗೆತಕ್ಕೆ ಅವಕಾಶ ನೀಡಿದೆ. ಏರಿಕೆ ಕಾಣುತ್ತಿರುವ ಬಂಗಾರ, ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡುವ ಯಾವುದೇ ಮುನ್ಸೂಚನೆ ನೀಡಿಲ್ಲ. ರಿಯಲ್ ಎಸ್ಟೇಟ್, ಆಟೋ ಮೊಬೈಲ್ ರಂಗಕ್ಕೆ ಹೆಚ್ಚು ಒತ್ತು ನೀಡಿಲ್ಲ. ಭಾಷಣದ ಮಧ್ಯೆ ಹಲವು ಬಾರಿ ತಮಿಳುಕವಿ ತಿರುವಳ್ಳುವರ್, ಅವ್ವಯ್ಯಾರ್, ಕವಿರತ್ನ ಕಾಳಿದಾಸನ ಶ್ಲೋಕ, ಕವಿತೆ, ಶಾಯಿರಿಗಳನ್ನು ಉಲ್ಲೇಖಿಸಿದ ನಿರ್ಮಲಾ ಕವಿ ಹೃದಯಿಯೂ ಆದರು. ಮೋದಿಯ ಆಡಳಿತವನ್ನು ಹೊಗಳಿ ಅಟ್ಟಕ್ಕೆ ಏರಿಸಿದರು.

    ಆದಾಯ ತೆರಿಗೆಯಲ್ಲಿ ಹಳೆ ಪದ್ಧತಿಯನ್ನು ಮುಂದುವರೆಸುತ್ತಲೇ, ಹೊಸ ವಿಧಾನವನ್ನು ಪರಿಚಯ ಮಾಡಿರೋ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಿರೋ ನಿಮಗೆ ಬಿಟ್ಟಿದ್ದು ಎಂದಿದ್ದಾರೆ. ಹೊಸ ತೆರಿಗೆ ವಿಧಾನವನ್ನು ಆಯ್ಕೆ ಮಾಡಿಕೊಳ್ಳುವುದು ಐಚ್ಛಿಕ ಎಂದಿದ್ದಾರೆ. ತೆರಿಗೆ ವಿನಾಯಿತಿಗಳನ್ನು ಹೊಂದಬೇಕೋ ಅಥವಾ ಬೇಡವೋ? ಎನ್ನುವುದು ವೇತನದಾರನ ನಿರ್ಣಯದ ಮೇಲೆ ಅವಲಂಬಿತವಾಗಿರುತ್ತದೆ. ಹೊಸ ಆದಾಯ ತೆರಿಗೆ ವಿಧಾನವನ್ನು ನೀವು ಬಯಸಿದಲ್ಲಿ 80 ಸಿ ಅಡಿ ಬರುವ ವಿನಾಯಿತಿಗಳು ನಿಮಗೆ ಸಿಗಲ್ಲ.

    ಆದಾಯ ತೆರಿಗೆ ಲೆಕ್ಕಾಚಾರ ಹೇಗೆ?
    * 2.5 ಲಕ್ಷದಿಂದ 5 ಲಕ್ಷದವರೆಗೆ ಶೇ.5 ತೆರಿಗೆ
    * 5 ಲಕ್ಷ ರೂ.ಯಿಂದ 7.5 ಲಕ್ಷ ರೂ.ವರೆಗೆ ತೆರಿಗೆ ಶೇ.20ರ ಬದಲಾಗಿ ಶೇ.10 ಅನ್ವಯವಾಗುವುದು
    * 7.5 ಲಕ್ಷ ನಿಂದ 10 ಲಕ್ಷವರೆಗೆ ಶೇ.20ರ ಬದಲಾಗಿ ಶೇ.15 ಅನ್ವಯ
    * 10 ಲಕ್ಷದಿಂದ 12.5 ಲಕ್ಷಕ್ಕೆ ತೆರಿಗೆ ಶೇ.30ರ ಬದಲಾಗಿ ಶೇ.20 ಅನ್ವಯ
    * 12.5 ಲಕ್ಷದಿಂದ 15 ಲಕ್ಷದವರೆಗೆ ಶೇ.30ರ ಬದಲಾಗಿ ಶೇ. 25 ಅನ್ವಯ
    * 15 ಲಕ್ಷಕ್ಕಿಂತ ಅಧಿಕ ಆದಾಯಕ್ಕೆ ಶೇ.30 ಅನ್ವಯ
    * ಹೊಸ ತೆರಿಗೆಯಿಂದಾಗಿ 15 ಲಕ್ಷ ಅಧಿಕ ಆದಾಯ ಹೊಂದಿದ ತೆರಿಗೆದಾರನಿಗೆ 78 ಸಾವಿರ ರೂ. ಲಾಭವಾಗಲಿದೆ
    * ಹೊಸ ವ್ಯವಸ್ಥೆಯಲ್ಲಿ ವಿವಿಧ 70 ಕಡಿತಗಳನ್ನು ತೆಗೆದು ಹಾಕಲಾಗಿದೆ. ಒಂದು ವೇಳೆ ತೆರಿಗೆದಾರ ಬಯಸಿದ್ರೆ ಹಳೆಯ ವ್ಯವಸ್ಥೆಯ ಲಾಭ ಪಡೆಯಬಹುದು.
    * ಡೈರೆಕ್ಟ್ ಟ್ಯಾಕ್ಸ್ (ನೇರ ತೆರಿಗೆ) ಹೊಂದಿರುವ ವಿವಾದಗಳನ್ನು ಶಮನಗೊಳಿಸುವದಕ್ಕಾಗಿ `ವಿವಾದ ಸೇ ವಿಶ್ವಾಸ್ ಯೋಜನೆ’ಯಲ್ಲಿ ಬಡ್ಡಿ ಮತ್ತು ದಂಡದಿಂದ ವಿನಾಯ್ತಿ

    * ಕಂಪನಿಯ ಡಿವಿಡೆಂಟ್ ಮೇಲಿನ ಲಾಭಾಂಶ ತೆರಿಗೆ ಕಂಪನಿಗಳ ಬದಲಾಗಿ ಶೇರುದಾರನಿಗೆ ಅನ್ವಯವಾಗಲಿದೆ. ಲಾಭಾಂಶ ತೆರಿಗೆಯನ್ನು ಶೇರುದಾರ ಪಾವತಿಸೋದು.
    * ಆಧಾರ್ ಕಾರ್ಡ್ ಮೂಲಕ ಅರ್ಜಿ ಸಲ್ಲಿಸುವ ಅರ್ಜಿದಾರನಿಗೆ ಕಡಿಮೆ ಸಮಯದಲ್ಲಿ ಪ್ಯಾನ್ ಕಾರ್ಡ್ ನೀಡಲಾಗುವುದು.

    80 ಸಿ ಶಾಕ್: ಹೊಸ ತೆರಿಗೆ ಪದ್ಧತಿಯನ್ನು ನೀವು ಆಯ್ಕೆ ಮಾಡಿಕೊಂಡ್ರೆ ನಿಮಗೆ 80 ಸಿ ಅನ್ವಯ ಸಿಗಬೇಕಾದ ಯಾವುದೇ ವಿನಾಯಿತಿಗಳು ಸಿಗಲ್ಲ. ಯಾವುದಕ್ಕೆ ತೆರಿಗೆ ವಿನಾಯಿತಿ ಸಿಗಲ್ಲ ಎಂಬುವುದು ಈ ಕೆಳಗಿನಂತಿದೆ.

    * ಮನೆ ಬಾಡಿಗೆ ಭತ್ಯೆಗೆ ತೆರಿಗೆ ವಿನಾಯಿತಿ ಇರಲ್ಲ.
    * ಟಿಎ, ಡಿಎಗಳಿಗೆ ತೆರಿಗೆ ವಿನಾಯಿತಿ ಇರಲ್ಲ.
    * ವಿಕಲಚೇತನರಿಗೆ ಸಿಗುತ್ತಿದ್ದ ತೆರಿಗೆ ವಿನಾಯಿತಿ ಇರಲ್ಲ.
    * 50 ಸಾವಿರ ರೂ. ಸ್ಟಾಂಡರ್ಡ್ ಡಿಡಕ್ಷನ್‍ಗೆ ತೆರಿಗೆ ವಿನಾಯಿತಿ ಇರಲ್ಲ.
    * ಕುಟುಂಬ ಪಿಂಚಣಿ ಅಡಿ 15 ಸಾವಿರ ಡಿಡಕ್ಷನ್‍ಗೆ ಅವಕಾಶ ಇರಲ್ಲ.
    * ಜೀವವಿಮೆಗೆ ತೆರಿಗೆ ವಿನಾಯಿತಿ ಇರಲ್ಲ.
    * ಸುಕನ್ಯ ಸಮೃದ್ಧಿ ಯೋಜನೆ ತೆರಿಗೆ ವಿನಾಯಿತಿ ಇರಲ್ಲ.
    * ಪಿಪಿಎಫ್‍ಗೆ ತೆರಿಗೆ ವಿನಾಯಿತಿ ಇರಲ್ಲ.
    * ಈಕ್ವಿಟಿ ಲಿಂಕ್ಡ್ ಉಳಿತಾಯ ಯೋಜನೆಗೆ ತೆರಿಗೆ ವಿನಾಯಿತಿ ಇರಲ್ಲ.
    * ನಿಶ್ಚಿತ ಠೇವಣಿಗೆ ತೆರಿಗೆ ವಿನಾಯಿತಿ ಇರಲ್ಲ.
    * ಹಿರಿಯ ನಾಗರಿಕರ ಉಳಿತಾಯಕ್ಕೆ ತೆರಿಗೆ ವಿನಾಯಿತಿ ಇರಲ್ಲ.
    * ಮನೆ ಸಾಲಗಳಿಗೆ ತೆರಿಗೆ ವಿನಾಯಿತಿ ಇರಲ್ಲ.
    * ಸಂಸ್ಥೆಗಳಿಗೆ ನೀಡುವ ಡೊನೇಷನ್‍ಗೆ ತೆರಿಗೆ ವಿನಾಯಿತಿ ಇರಲ್ಲ.

    ಯಾವುದೆಲ್ಲ ಏರಿಕೆ?
    * ಪೆಟ್ರೋಲ್, ಡೀಸೆಲ್, ಚಿನ್ನ ದರ ಏರಿಕೆಯಾಗಲಿದೆ
    * ಗೃಹ ಉಪಯೋಗಿ ವಸ್ತುಗಳ ಮೇಲಿನ ಜಿಎಸ್‍ಟಿ ದುಪ್ಪಟ್ಟಾಗಿದೆ.
    * ಸಿಗರೇಟ್ ಸೇರಿದಂತೆ ತಂಬಾಕು ಉತ್ಪನ್ನಗಳ ಮೇಲೆನ ತೆರಿಗೆ ಏರಿಕೆ ಮಾಡಲಾಗಿದೆ.
    * ಚೀನಾ ಸೆರಾಮಿಕ್, ಜೇಡಿ ಮಣ್ಣಿನಿಂದ ತಯಾರಿಸಿದ ಗೃಹ ಉಪಯೋಗಿ ವಸ್ತುಗಳ ಮೇಲಿನ ತೆರಿಗೆ ಏರಿಕೆಯಾಗಿದೆ.
    * ಗೃಹ ಉಪಯೋಗಿ ವಸ್ತುಗಳ ಮೇಲಿನ ಜಿಎಸ್‍ಟಿ ಶೇ.10ರಿಂದ ಶೆ. 20ರಷ್ಟು ಏರಿಕೆಯಾಗಿದೆ.
    * ಪಿಂಗಾಣಿ ಕಪ್, ಮಗ್, ತಾಮ್ರ, ಸ್ಟೀಲ್ ಪಾತ್ರೆಗಳ ಮೇಲಿನ ತೆರಿಗೆ ಏರಿಕೆಯಾಗಿದೆ.
    * ವಾಣಿಜ್ಯ ವಾಹನಗಳ ಬಿಡಿ ಭಾಗಗಳ ಮೇಲಿನ ತೆರಿಗೆ ಹಾಗೂ ವಾಣಿಜ್ಯ ವಾಹನಗಳ ಮೇಲಿನ ತೆರಿಗೆಯಲ್ಲಿ ಏರಿಕೆ.
    * ಆಟೋ, ಬೈಕ್, ಕಾರು ದುಬಾರಿ
    * ಚಪ್ಪಲಿ, ಫರ್ನಿಚರ್ ದುಬಾರಿ
    * ಪೀಠೋಪಕರಣಗಳು ಹಾಗೂ ಗೃಹೋಪಯೋಗಿ ವಸ್ತುಗಳ ದರ ಏರಿಕೆಯಾಗಿದೆ
    * ಕೆನೆ ತೆಗೆದ ಹಾಲಿನ ಉತ್ಪನ್ನಗಳು ಇನ್ಮುಂದೆ ಮತ್ತಷ್ಟು ತುಟ್ಟಿಯಾಗಲಿವೆ
    * ಸಕ್ಕರೆ ಬೆಲೆ ಏರಿಕೆಯಾಗಿದೆ
    * ಸೋಯಾ ಫೈಬರ್ ಉತ್ಪನ್ನಗಳ ದರ ಏರಿಕೆಯಾಗಿದೆ
    * ವೈದ್ಯಕೀಯ ಸಲಕರಣೆಗಳ ಮೇಲಿನ ತೆರಿಗೆ ಏರಿಕೆ ಆಗಿರೋದ್ರಿಂದ ಆಸ್ಪತ್ರೆ ಖರ್ಚು ಹೆಚ್ಚಲಿದೆ.

    ಇಳಿಕೆ ಕಂಡಿದ್ದು ಯಾವುದು?:
    * ನ್ಯೂಸ್ ಪ್ರಿಂಟ್‍ಗಳ ದರ ಇಳಿಕೆ
    * ಹಗುರ ಕೋಟೆಡ್ ಕಾಗಗದ ದರ ಇಳಿಕೆ