Tag: BSY

  • ನಂಬರ್ ಗೇಮ್‍ನಲ್ಲಿ ಯಡಿಯೂರಪ್ಪ ಸರ್ಕಾರ ಸೇಫ್

    ನಂಬರ್ ಗೇಮ್‍ನಲ್ಲಿ ಯಡಿಯೂರಪ್ಪ ಸರ್ಕಾರ ಸೇಫ್

    ಬೆಂಗಳೂರು: ಸ್ಪೀಕರ್ ರಮೇಶ್ ಕುಮಾರ್ ಅವರು ಇಂದು 14 ಮಂದಿ ಶಾಸಕರನ್ನು ಅನರ್ಹಗೊಳಿಸಿ ಆದೇಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಮವಾರ ವಿಶ್ವಾಸಮತ ಯಾಚನೆ ಸಾಬೀತುಪಡಿಸುವಲ್ಲಿ ಬಿ.ಎಸ್ ಯಡಿಯೂರಪ್ಪ ಅವರು ಯಶಸ್ವಿಯಾಗುತ್ತಾರೆ.

    ಗುರುವಾರ 3 ಮಂದಿ ಹಾಗೂ ಇಂದು 14 ಮಂದಿ ಶಾಸಕರು ಒಟ್ಟು 17 ಮಂದಿ ಶಾಸಕರು ಅನರ್ಹತೆಯಿಂದಾಗಿ ಇದೀಗ ವಿಧಾನ ಸಭೆಯ ಸಂಖ್ಯಾಬಲ ಕುಸಿದಿದೆ. 224ರಿಂದ 207ಕ್ಕೆ ವಿಧಾನಸಭೆ ಬಲಾಬಲ ಕುಸಿದಿದೆ. ಹೀಗಾಗಿ ಈಗಾಗಲೇ ಬಿಜೆಪಿ ಸಂಖ್ಯಾಬಲ 105 ಇದ್ದು, ಪಕ್ಷೇತರ ಶಾಸರ ಆರ್ ಶಂಕರ್ ಬೆಂಬಲದಿಂದಾಗಿ 106 ಆಗಿದೆ. ಇತ್ತ ದೋಸ್ತಿ ಸಂಖ್ಯಾಬಲ 100 ಇದೆ. ಬಹುಮತ ಸಾಬೀತು ಪಡಿಸಲು ಬೇಕಾಗಿರುವ ಮ್ಯಾಜಿಕ್ ಸಂಖ್ಯೆ 104 ಆಗಿದೆ. ಬಹುಮತ ಸಾಬೀತಿಗೆ ಅಗತ್ಯವಾದ ಮ್ಯಾಜಿಕ್ ನಂಬರ್ ಕುಸಿದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ನಾಳೆ ಸದನಸದಲ್ಲಿ ವಿಶ್ವಾಸಮತ ಸಾಬೀತು ಪಡಿಸಲಿದ್ದಾರೆ.

    ಗುರುವಾರದಂದು ಸಂಜೆ ಸುದ್ದಿಗೋಷ್ಠಿ ಕರೆದಿದ್ದ ಸ್ಪೀಕರ್ ಅವರು ಕಾಂಗ್ರೆಸ್ಸಿನ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಮಸ್ಕಿಯ ಪ್ರತಾಪ್ ಗೌಡ ಪಾಟೀಲ್, ರಾಣೆಬೆನ್ನೂರು ಶಾಸಕ ಆರ್ ಶಂಕರ್ ಅವರನ್ನು ಅನರ್ಹ ಗೊಳಿಸಿದ್ದರು. ಆ ಬಳಿಕ ಇಂದು ಮತ್ತೆ ಸುದ್ದಿಗೋಷ್ಠಿ ಕರೆದು, ಮಸ್ಕಿ ಶಾಸಕ ಪ್ರತಾಪ್‍ಗೌಡ ಪಾಟೀಲ್, ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್, ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ವಿಜಯನಗರದ ಆನಂದ್ ಸಿಂಗ್, ರಾಜರಾಜೇಶ್ವರಿ ನಗರದ ಮುನಿರತ್ನ, ಚಿಕ್ಕಬಳ್ಳಾಪುರದ ಕೆ.ಸುಧಾಕರ್, ಹೊಸಕೋಟೆಯ ಎಂಟಿಬಿ ನಾಗರಾಜ್, ಯಲ್ಲಾಪುರದ ಶಿವರಾಂ ಹೆಬ್ಬಾರ್, ಶಿವಾಜಿನಗರದ ರೋಷನ್ ಬೇಗ್, ಕೆ.ಆರ್.ಪುರಂನ ಬೈರತಿ ಬಸವರಾಜ್, ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ, ಕಾಗವಾಡದ ಶ್ರೀಮಂತ್ ಪಾಟೀಲ್, ಹುಣಸೂರಿನ ಹೆಚ್.ವಿಶ್ವನಾಥ್ ಮತ್ತು ಕೆ.ಆರ್.ಪೇಟೆಯ ನಾರಾಯಣಗೌಡ ಹೀಗೆ ಎಲ್ಲ 14 ಶಾಸಕರನ್ನೂ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ.

    ಸ್ಪೀಕರ್ ರಮೇಶ್ ಕುಮಾರ್ ಅವರು ಸಾಕಷ್ಟು ಒತ್ತಡಕ್ಕೆ ಒಳಗಾಗಿ ಈ ಆದೇಶ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಒಟ್ಟಿನಲ್ಲಿ 14 ಮತ್ತು 3 ಒಟ್ಟು 17 ಮಂದಿ ಶಾಸಕರು ಅನರ್ಹಗೊಂಡಿದ್ದು, ಇದರಲ್ಲಿ ಮೂವರು ಈಗಾಗಲೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದೀಗ ಮತ್ತೆ 14 ಮಂದಿ ನಾಳೆ ಸುಪ್ರೀಂ ಕದ ತಟ್ಟಲಿದ್ದಾರೆ. ಹೀಗಾಗಿ ಕೋರ್ಟ್ 17 ಮಂದಿಯ ಕೇಸನ್ನು ಒಟ್ಟಿಗೆ ತೆಗೆದುಕೊಂಡು ಏನ್ ತೀರ್ಪು ಕೊಡುತ್ತದೆ ಎಂಬುದು ಸದ್ಯದ ಕುತೂಹಲವಾಗಿದೆ.

  • ಸಿಎಂ ಗಾದಿಗೇರಿದ್ರೂ ಬಿಎಸ್‍ವೈಗೆ ತಪ್ಪಿಲ್ಲ ಟೆನ್ಶನ್

    ಸಿಎಂ ಗಾದಿಗೇರಿದ್ರೂ ಬಿಎಸ್‍ವೈಗೆ ತಪ್ಪಿಲ್ಲ ಟೆನ್ಶನ್

    ಬೆಂಗಳೂರು: ಮೈತ್ರಿ ಸರ್ಕಾರ ಬೀಳಿಸಿದ್ದಾಯ್ತು, ಸಿಎಂ ಆಗಿದ್ದೂ ಆಯ್ತು. ಆದರೆ ಯಡಿಯೂರಪ್ಪ ಅವರಿಗೆ ಬಹುಮತ ಸಾಬೀತು ಮಾಡುವ ತನಕ ಆತಂಕ ತಪ್ಪಿಲ್ಲ.

    ಹೌದು. ಬಿಎಸ್‍ವೈ ಅವರಿಗೆ ರಿವರ್ಸ್ ಆಪರೇಷನ್ ನದ್ದೇ ಭಯವಂತೆ. ಹೀಗಾಗಿ ಅವರು ಸೂಪರ್ ಪ್ಲಾನ್ ಒಂದನ್ನು ಸಿದ್ಧ ಮಾಡಿಕೊಂಡಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಸೋಮವಾರ ಸದನದಲ್ಲಿ ಬಹುಮತ ತೋರಿಸಲು ಬಿಎಸ್‍ವೈ ಪ್ಲಾನ್ ರೂಪಿಸಿದ್ದಾರೆ. ತಮ್ಮದೇ ಪಕ್ಷದ ಶಾಸಕರ ಕಾವಲಿಗೆ ಕಾವಲುಗಾರರನ್ನು ನೇಮಿಸಿದ್ದಾರೆ. 105 ಜನ ಶಾಸಕರ ಮೇಲೆ ಕಣ್ಗಾವಲಿಡಲು ಕಾವಲುಗಾರರನ್ನು ನೇಮಕ ಮಾಡಿದ್ದಾರೆ ಎನ್ನಲಾಗಿದೆ.

    ತಲಾ 10 ಶಾಸಕರಿಗೆ ಒಬ್ಬ ಕಾವಲುಗಾರ ಮುಖಂಡನನ್ನು ನೇಮಿಸುವ ಮೂಲಕ ನಂಬಿಕಸ್ತ ಆಪ್ತರನ್ನೇ ಕಾವಲುಗಾರರಾಗಿ ನೇಮಿಸಿದ್ದಾರೆ. ಶಾಸಕರು ಈ ಕಾವಲುಗಾರರ ಕಣ್ಣಳತೆಯಲ್ಲೇ ಇರಬೇಕೆಂದು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಎಸ್‍ವೈ ಅವರು ಸೋಮವಾರ ಬಹುಮತ ಸಾಬೀತು ಪಡಿಸೋವರೆಗೂ ಕಾವಲುಗಾರ ಮುಖಂಡರ ಸುಪರ್ದಿಯಲ್ಲೇ ಇರುತ್ತಾರಂತೆ. ಅಲ್ಲದೆ ಮೈತ್ರಿ ಪಕ್ಷಗಳ ಯಾವ ನಾಯಕನಿಗೂ ಪಕ್ಷದ ಶಾಸಕರು ಸಿಗದಂತೆಯೂ ಎಚ್ಚರಿಕೆ ವಹಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

  • ಮೈತ್ರಿ ನಾಯಕರು ಅತೃಪ್ತರನ್ನು ಏನು ಬೇಕಾದರೂ ಮಾಡಲಿ, ನಮ್ಮ ಬಳಿ ಸಂಖ್ಯಾಬಲವಿದೆ- ಸುಕುಮಾರ್ ಶೆಟ್ಟಿ

    ಮೈತ್ರಿ ನಾಯಕರು ಅತೃಪ್ತರನ್ನು ಏನು ಬೇಕಾದರೂ ಮಾಡಲಿ, ನಮ್ಮ ಬಳಿ ಸಂಖ್ಯಾಬಲವಿದೆ- ಸುಕುಮಾರ್ ಶೆಟ್ಟಿ

    ಬೆಂಗಳೂರು: ಸಮ್ಮಿಶ್ರ ಸರ್ಕಾರ ಬೇಡ ಎಂಬುದು ಜನರ ಆದೇಶ. ಅಲ್ಲದೆ ಸಮ್ಮಿಶ್ರ ಸರ್ಕಾರದ ಆಡಳಿತದಿಂದ ಬೇಸತ್ತು ಅವರ ಶಾಸಕರೇ ರಾಜೀನಾಮೆ ಕೊಟ್ಟಿದ್ದಾರೆ ಎಂದು ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಆರೋಪಿಸಿದ್ದಾರೆ.

    ಯಡಿಯೂರಪ್ಪನವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಆಗಮಿಸಿರುವ ಶಾಸಕ ಸುಕುಮಾರ್ ಶೆಟ್ಟಿ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರ ಜೊತೆ ಮಾತನಾಡಿದರು.

    ನಮ್ಮಲ್ಲಿ 105 ಶಾಸಕರಿದ್ದು, ಮೈತ್ರಿ ಸರ್ಕಾರದ 20 ಶಾಸಕರು ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಸಂಖ್ಯಾ ಬಲ ನಮ್ಮ ಪರವಾಗಿದೆ. ಮೈತ್ರಿ ನಾಯಕರು ಅವರ ಶಾಸಕರನ್ನು ಏನು ಬೇಕಾದರೂ ಮಾಡಲಿ ಎಂದು ಹೇಳುವ ಮೂಲಕ ಶಾಸಕರ ಅನರ್ಹ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

    ಬಿ.ಎಸ್.ಯಡಿಯೂರಪ್ಪನವರ ಅಧಿಕಾರಾವಧಿಯಲ್ಲಿ ರಾಜ್ಯ ಸುಭೀಕ್ಷೆಯಿಂದರಲಿ ಎಂದು ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಬಂದಿದ್ದೇನೆ. ಕಾಂಗ್ರೆಸ್‍ನವರು ಅವರ ಶಾಸಕರನ್ನು ಏನು ಬೇಕಾದರೂ ಮಾಡಿಕೊಳ್ಳಲಿ, ನಮ್ಮ ಬಳಿ ಸಂಖ್ಯಾಬಲವಿದೆ. ಅಲ್ಲದೆ, ಅತೃಪ್ತ ಶಾಸಕರಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಆದರೆ ಮುಂಬೈನಲ್ಲಿರುವ ಶಾಸಕರಿಗೂ ಕಾಂಗ್ರೆಸ್‍ಗೂ ಸಂಬಂಧವಿದೆ ಎಂದು ಗುಡುಗಿದ್ದಾರೆ.

    ಕ್ಷೇತ್ರದ ಜನತೆ ಸರ್ಕಾರ ರಚನೆ ಮಾಡಿಯೇ ಕ್ಷೇತ್ರಕ್ಕೆ ಬರಬೇಕೆಂದು ಹೇಳಿ ಕಳುಹಿಸಿದ್ದಾರೆ. ಕುಡಿಯುವ ನೀರಿಗೆ ನಮ್ಮ ಮೊದಲ ಆದ್ಯತೆ, ನಾಲ್ಕು ವರ್ಷ ಸುಭದ್ರ ಸರ್ಕಾರ ನಡೆಸುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದರು. ಬಿಎಸ್‍ವೈ ಪ್ರಮಾಣವಚನ ಸ್ವಿಕಾರ ಸಮಾರಂಭ ಹಿನ್ನೆಲೆ ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಬೆಂಗಳೂರಿಗೆ ಆಗಮಿಸಿದ್ದಾರೆ.

  • ಗೊಂದಲಗಳ ನಡುವೆ ಹೇಗೆ ಆಡಳಿತ ನಡೆಸುತ್ತಾರೋ ನೋಡುತ್ತೇನೆ: ಪರಮೇಶ್ವರ್

    ಗೊಂದಲಗಳ ನಡುವೆ ಹೇಗೆ ಆಡಳಿತ ನಡೆಸುತ್ತಾರೋ ನೋಡುತ್ತೇನೆ: ಪರಮೇಶ್ವರ್

    ತುಮಕೂರು: ಒಂದೆಡೆ ಅತೃಪ್ತ ಶಾಸಕರ ಗೊಂದಲ, ಇನ್ನೊಂದೆಡೆ ಮನಿ ಬಿಲ್ ಪಾಸ್ ಮಾಡುವುದು ಸೇರಿದಂತೆ ವಿವಿಧ ಅಡೆತಡೆಗಳಿದ್ದು, ಈ ಎಲ್ಲ ಗೊಂದಲಗಳ ನಡುವೆ ಹೇಗೆ ಆಡಳಿತ ನಡೆಸುತ್ತಾರೋ ನೋಡುತ್ತೇನೆ ಎಂದು ನಿರ್ಗಮಿತ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕುಟುಕಿದ್ದಾರೆ.

    ತುಮಕೂರಿನ ಗೊಲ್ಲಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಎಂಟು ತಿಂಗಳಲ್ಲಿ ಹಣಕಾಸು ಆಯವ್ಯಯದ ಅನುಮತಿಯನ್ನು ಸದನದಲ್ಲಿ ಪಡೆದುಕೊಳ್ಳಬೇಕು. ಹೀಗಾಗಿ ಅವರು ಅಧಿಕಾರ ಸ್ವೀಕರಿಸಿದ ತಕ್ಷಣವೇ ಮನಿ ಬಿಲ್ ಪಾಸ್ ಮಾಡಿಕೊಳ್ಳಬೇಕಾಗುತ್ತದೆ. ಸಂಖ್ಯಾ ಬಲದ ಮೇಲೆ ಬಿಲ್ ಪಾಸ್ ಆಗುತ್ತದೆ. ಒಂದು ಸರ್ಕಾರ ಅಸ್ತಿತ್ವಕ್ಕೆ ಬರಬೇಕಾದಲ್ಲಿ 113 ಸ್ಥಾನ ಇರಬೇಕು. ಇದನ್ನು ಅವರು ಸಾಬೀತು ಮಾಡಬೇಕು. ಯಾವ ರೀತಿ ಸಾಬೀತು ಮಾಡುತ್ತಾರೆ. ಇಂತಹ ಹಲವು ಸವಾಲುಗಳನ್ನು ಹೇಗೆ ಬಗೆಹರಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡುತ್ತೇವೆ ಎಂದು ತಿಳಿಸಿದ್ದಾರೆ.

    ಇದೀಗ ರಾಜ್ಯದಲ್ಲಿ ಹೊಸ ರಾಜಕಾರಣವನ್ನು ನೋಡ್ತಿದ್ದೇವೆ. ಶಾಸಕರನ್ನು ಮನವೊಲಿಸಿ, ಆಸೆ, ಆಮೀಷಗಳನ್ನೊಡ್ಡಿ ರಾಜೀನಾಮೆ ಕೊಡಿಸಿ ಪಕ್ಷ ಬದಲಾಯಿಸೋ ಘಟನೆಗಳು ನಡೆಯುತ್ತಿವೆ. 2008ರಲ್ಲಿ ಬಿ.ಎಸ್.ಯಡಿಯೂರಪ್ಪನವರ ಆಡಳಿತಾವಧಿಯಲ್ಲಿ ಇಂತಹ ಘಟನೆಗಳು ನಡೆದಿದ್ದವು. ಇಂದು ಅದೇ ರೀತಿಯ ಕೆಟ್ಟ ವಾತಾವರಣವನ್ನು ನೋಡುತ್ತಿದ್ದೇವೆ. ವೈಯಕ್ತಿಕವಾಗಿ ಇಂತಹ ಬೆಳವಣಿಗೆಗಳು ಪ್ರಜಾಪ್ರಭುತ್ವಕ್ಕೆ ಒಳ್ಳೇಯದಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಈಗಿನ್ನು ಮೂವರು ಶಾಸಕರನ್ನು ಮಾತ್ರ ಸ್ಪೀಕರ್ ಅಮಾನತು ಮಾಡಿದ್ದಾರೆ. ಬಹುಶಃ ಉಳಿದವರ ಭವಿಷ್ಯ ಏನಾಗುತ್ತೋ ಗೊತ್ತಿಲ್ಲ. ಅಮಾನತುಗೊಳಿಸಿದ ಆಧಾರದ ಮೇಲೆ ಕೂಡ 113 ಸಂಖ್ಯಾಬಲ ಕಡಿಮೆ ಆಗಬಹುದು. ಉಳಿದವರ ರಾಜೀನಾಮೆ ವಿಚಾರದಲ್ಲಿ ಸ್ಪಿಕರ್ ಏನಾದರೂ ತೀರ್ಮಾನ ಕೈಗೊಳ್ಳಲೇಬೇಕು. ಅವರ ರಾಜೀನಾಮೆಯನ್ನು ಪುರಸ್ಕರಿಸಬೇಕು ಇಲ್ಲವೆ ತಿರಸ್ಕರಿಸಬೇಕು. ಹತ್ತನೇ ಶೆಡ್ಯೂಲ್ ಪ್ರಕಾರ ಅವರನ್ನು ಅನರ್ಹ ಮಾಡಬೇಕಾಗುತ್ತದೆ. ಈಗಾಗಲೇ ಸ್ಪೀಕರ್ ಪ್ರಕ್ರಿಯೆ ಶುರು ಮಾಡಿದ್ದಾರೆ. ಸ್ಪೀಕರ್ ಗೆ 14 ದಿನಗಳ ಕಾಲ ಸಮಯ ಕಾಲಾವಕಾಶವಿದೆ. ಇವತ್ತು, ನಾಳೆ ಯಾವ ತೀರ್ಮಾನ ಮಾಡುತ್ತಾರೆ ಎಂಬುದನ್ನು ಕಾದು ನೋಡುತ್ತೇವೆ ಎಂದು ತಿಳಿಸಿದರು.

    ಹೊಸ ಸರ್ಕಾರ ಬಂದ ನಂತರ, ಹೊಸ ಸ್ಪೀಕರ್ ಅಯ್ಕೆಗೆ ಈಗಿನ ಸ್ಪೀಕರ್ ಅನುವು ಮಾಡಿಕೊಡಬೇಕು. ಅಷ್ಟರೊಳಗೆ ಅತೃಪ್ತರ ಬಗ್ಗೆ ನಿರ್ಧಾರ ಮಾಡಬೇಕು. ನಾವು ಅತೃಪ್ತರ ಮನವೊಲಿಸಿಲ್ಲ. ಅವರು ನಮಗೆ ಕೊಟ್ಟಿರುವ ಸಂದೇಶಗಳು ಉತ್ತೇಜನಕಾರಿಯಾಗಿಲ್ಲ. ರಾಜಿನಾಮೆಯನ್ನು ವಾಪಸ್ ಪಡೆಯಲ್ಲ ಎಂಬ ಸಂದೇಶ ಮಾತ್ರ ಕಳುಹಿಸಿದ್ದಾರೆ. ಹೀಗಾಗಿ ಅವರಿಗೆ ಪದೇ ಪದೆ ಒತ್ತಾಯ ಮಾಡುವುದು ಸರಿಯಲ್ಲ ಎಂದರು.

    ನನ್ನ ಪಾತ್ರವಿಲ್ಲ
    ರಾಜಣ್ಣ ನಾನು ಆತ್ಮೀಯ ಸ್ನೇಹಿತರು. ಯಾವ ಕಾರಣಕ್ಕೆ ಸೂಪರ್ ಸೀಡ್ ಆಗಿದೆ ಎನ್ನುವುದು ಅವರಿಗೆ ತಿಳಿದಿದೆ. ಅನಾವಶ್ಯಕವಾಗಿ ನನ್ನನ್ನು ಹೊಣೆ ಮಾಡುವುದು, ದೂಷಣೆ ಮಾಡುವುದು, ಸರಿಯಲ್ಲ. ಅವರು ನಮ್ಮ ಸಂಸ್ಥೆಗಳ ವಿರುದ್ಧ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ. ಇದು ಸಾರ್ವಜನಿಕರ ಆಸ್ತಿ ರಾಜಣ್ಣ ಮಾತ್ರವಲ್ಲ, ಯಾರು ಬೇಕಾದರೂ ತನಿಖೆ ಮಾಡಬಹುದು ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.

  • ಚದುರಂಗದಾಟದಲ್ಲಿ ಸಿಲುಕಿದೆಯಾ ಬಿಎಸ್‍ವೈ ಸಿಎಂ ಕುರ್ಚಿ ಕನಸು?

    ಚದುರಂಗದಾಟದಲ್ಲಿ ಸಿಲುಕಿದೆಯಾ ಬಿಎಸ್‍ವೈ ಸಿಎಂ ಕುರ್ಚಿ ಕನಸು?

    ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಯಡಿಯೂರಪ್ಪ ಆಸೆ ನಿರಾಸೆಯಾಗುತ್ತಿದ್ದು, ಮೋದಿ-ಅಮಿತ್ ಶಾ ತಂತ್ರಕ್ಕೆ ಬಿಎಸ್‍ವೈ ಕುರ್ಚಿ ಕಳೆದುಕೊಳ್ತಾರಾ ಅನ್ನೋ ಪ್ರಶ್ನೆಯೊಂದು ಇದೀಗ ಬಿಜೆಪಿ ನಾಯಕರನ್ನು ಕಾಡುತ್ತಿದೆ.

    ಹೌದು. ದೋಸ್ತಿ ಸರ್ಕಾರ ಬೀಳಿಸುವ ಸಾಹಸಕ್ಕಿಳಿದ ಬಿಎಸ್‍ವೈ ಅವರ ಸಿಎಂ ಕುರ್ಚಿಯ ಕನಸು ಕನಸಾಗಿಯೇ ಉಳಿಯುತ್ತಾ ಎಂಬ ಅನುಮಾನವೊಂದು ಎದ್ದಿದೆ. ಯಾಕಂದರೆ ಆಪರೇಷನ್ ಕಮಲ ಮತ್ತೆ ಕೈಗೂಡುವುದು ಸದ್ಯಕ್ಕಂತೂ ಅನುಮಾನವಾಗಿದೆ. ಈ ಹೊತ್ತಲ್ಲೇ ಯಡಿಯೂರಪ್ಪಗೆ ಹೈಕಮಾಂಡ್ ನಿಂದ ಶಾಕ್‍ಂಗ್ ಸುದ್ದಿ ಸಿಕ್ಕಿದೆಯಂತೆ.

    ಏನದು ಶಾಕಿಂಗ್ ನ್ಯೂಸ್?
    ಶೀಘ್ರವೇ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರು ಬದಲಾವಣೆಯಾಗುವ ಸಾಧ್ಯತೆಗಳಿವೆ. ಸಂಸತ್ ಅಧಿವೇಶನ ಬಳಿಕ ಯಡಿಯೂರಪ್ಪ ಜಾಗದಲ್ಲಿ ಹೊಸಬರ ನೇಮಕವಾಗಲಿದ್ದು, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ರಾಜ್ಯಾಧ್ಯಕ್ಷ ಸ್ಥಾನ ಕೈ ತಪ್ಪಿದರೆ ಬಿಎಸ್‍ವೈ ಪಾಲಿಗೆ ವಿರೋಧ ಪಕ್ಷ ನಾಯಕ ಸ್ಥಾನವಷ್ಟೇ ಉಳಿಯುತ್ತದೆ. ಆಪರೇಷನ್ ಕಮಲ ವರ್ಕೌಟ್ ಆಗಬೇಕಾದರೆ ಕಾಂಗ್ರೆಸ್-ಜೆಡಿಎಸ್‍ನ 15 ಶಾಸಕರು ರಾಜೀನಾಮೆ ಕೊಡಲೇ ಬೇಕು. ಆಗ ವಿಧಾನಸಭೆ ಬಲಾಬಲ 209ಕ್ಕೆ ಕುಸಿಯುತ್ತೆ, ಸಹಜವಾಗಿಯೇ ಬಿಜೆಪಿ ಅಧಿಕಾರ ಹಿಡಿಯಬಹುದು. ಆದರೆ ಆ 15 ಶಾಸಕರು ಬಿಜೆಪಿಗೆ ಸಿಗುತ್ತಿಲ್ಲ. ಹೀಗಾಗಿ ಕಷ್ಟವಾಗುತ್ತದೆ ಎಂದು ಆಪರೇಷನ್ ಆಪರೇಟಿಂಗ್ ಸ್ಟಾರ್ಸ್ ಹೇಳುತ್ತಿದ್ದಾರೆ.

    ಒಟ್ಟಿನಲ್ಲಿ ಮತ್ತೆ ಸಿಎಂ ಆಗಲು ನಡೆಸುತ್ತಿರುವ ಆಪರೇಷನ್ ಕಮಲ ಸದ್ಯಕ್ಕೆ ಫಲಕೊಡುವುದು ಅನುಮಾನವಾಗಿದೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ರಾಜಕೀಯ ಭವಿಷ್ಯ ಮಂಕು ಕವಿತಿದೆಯಾ ಎಂಬ ಚರ್ಚೆ ಬಿಜೆಪಿ ವಲಯದಲ್ಲಿ ಆರಂಭವಾಗಿದೆ.

  • ಲೋಕಸಮರದ ಬಳಿಕ ಬಿಎಸ್‍ವೈಗೆ ಫುಲ್ ರೆಸ್ಟ್- ಸಚಿವ ಡಿಕೆಶಿ ಭವಿಷ್ಯ

    ಲೋಕಸಮರದ ಬಳಿಕ ಬಿಎಸ್‍ವೈಗೆ ಫುಲ್ ರೆಸ್ಟ್- ಸಚಿವ ಡಿಕೆಶಿ ಭವಿಷ್ಯ

    ಶಿವಮೊಗ್ಗ: ಕಾಂಗ್ರೆಸ್ ನಾಯಕ ಹಾಗೂ ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ ರಾಘವೇಂದ್ರ ಅವರ ಮೇಲೆ ದಿಢೀರ್ ಪ್ರೀತಿ, ಅನುಕಂಪ ಹುಟ್ಟಿದೆ. ಲೋಕಸಭಾ ಚುನಾವಣೆಯ ನಂತರ ಬಿಎಸ್‍ವೈ ಫುಲ್ ರೆಸ್ಟ್ ತೆಗೆದುಕೊಳ್ಳುತ್ತಾರೆ ಎಂದು ಡಿಕೆಶಿ ಭವಿಷ್ಯ ನುಡಿದಿದ್ದಾರೆ.

    ಶಿವಮೊಗ್ಗ ಮೈತ್ರಿ ಅಭ್ಯರ್ಥಿಯಾಗಿರುವ ಮಧು ಬಂಗಾರಪ್ಪ ಅವರ ಪರವಾಗಿ ಪ್ರಚಾರಕ್ಕೆ ಶಿವಮೊಗ್ಗ ಜಿಲ್ಲೆಗೆ ಡಿಕೆಶಿ ಕಾಲಿಟ್ಟಿದ್ದಾರೆ. ಶನಿವಾರ ಭದ್ರಾವತಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಂಗೆ ಬೇಸರ ಇರೋದು ಬಿಜೆಪಿ ಹೈಕಮಾಂಡ್ ಮೇಲೆ ಹೊರತಾಗಿ ಬಿಎಸ್‍ವೈ, ಬಿವೈಆರ್ ಮೇಲಲ್ಲ. ಬಿಎಸ್‍ವೈ ಮೇಲೆ ಬಿಜೆಪಿ ಹೈಕಮಾಂಡ್‍ಗೆ ಲವ್ ಇದ್ದಿದ್ರೆ ಕೇಂದ್ರದಲ್ಲಿ ಮಂತ್ರಿ ಆಗಿರುತ್ತಿದ್ದರು. ಆದ್ರೆ ಇನ್ನೂ ರಾಜ್ಯ ರಾಜಕಾರಣದಲ್ಲೇ ಇದ್ದಾರೆ. ಪಾರ್ಲಿಮೆಂಟ್‍ನಲ್ಲಿ ಇಲ್ಲಿವರೆಗೂ ರಾಘವೇಂದ್ರ ಒಂದೂ ಮಾತಾಡಿಲ್ಲ. ಅದಕ್ಕೆ ನನ್ನ ತಮ್ಮ ರಾಘವೇಂದ್ರ ಸ್ವಲ್ಪ ರೆಸ್ಟ್ ತೆಗೆದುಕೊಳ್ಳಲಿ. ಅಣ್ಣ ವಿಪಕ್ಷ ನಾಯಕರಾಗೇ ಇರಲಿ. ನಾನು ಮಂತ್ರಿಯಾಗೇ ಇರುತ್ತೇನೆ ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:ಬಿಎಸ್‍ವೈ ಭದ್ರಕೋಟೆಗೆ ಡಿಕೆಶಿ ಎಂಟ್ರಿ

    ಬೆಂಗಳೂರು ದಕ್ಷಿಣದಿಂದ ತೇಜಸ್ವಿನಿ ಅನಂತ್‍ಕುಮಾರ್‍ಗೆ ಬಿಜೆಪಿ ಟಿಕೆಟ್ ನೀಡದಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ತೇಜಸ್ವಿನಿ ಅನಂತ್‍ಕುಮಾರ್ ಗೆ ಎಂಥಾ ಸ್ಥಿತಿ ಬಂತು ನೋಡಿ. ಇನ್ನು ಬಿಎಸ್‍ವೈ ಸ್ಥಿತಿ ಏನಾಗುತ್ತೇ ಯೋಚನೆ ಮಾಡಿ ಎಂದು ಕುಟುಕಿದ್ದಾರೆ.

    ಡಿಕೆಶಿ ಅವರ ಈ ಮಾತುಗಳಿಂದ ಯಡಿಯೂರಪ್ಪ ಬಗ್ಗೆ ಬಿಜೆಪಿ ಹೈಕಮಾಂಡ್‍ಗೆ ಪ್ರೀತಿ ಇಲ್ವಾ, ಲೋಕಸಮರದ ಬಳಿಕ ಬಿಎಸ್‍ವೈರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಹೈಕಮಾಂಡ್ ಕಿತ್ತೊಗೆಯುತ್ತಾ ಅನ್ನೋ ಪ್ರಶ್ನೆ ಮೂಡಿದೆ. ಅಲ್ಲದೆ ಯಡಿಯೂರಪ್ಪನ ಬಗ್ಗೆ ಸಚಿವ ಡಿಕೆ ಶಿವಕುಮಾರ್‍ಗೆ ಬೇಸರಾನೇ ಇಲ್ವಾ, ಡಿಕೆ ಶಿವಕುಮಾರ್ ತಮ್ಮನಾ ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರ ಎನ್ನುವ ಹಲವು ಪ್ರಶ್ನೆ ಸದ್ಯ ಹುಟ್ಟುಕೊಂಡಿದ್ದು, ರಾಜಕೀಯ ಪಾಳಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

  • ಬಿಎಸ್‍ವೈ ಡೈರಿ ಪ್ರಕರಣ- ಈಶ್ವರಪ್ಪ ಆಪ್ತ ವಿನಯ್ ಪ್ರತಿಕ್ರಿಯೆ

    ಬಿಎಸ್‍ವೈ ಡೈರಿ ಪ್ರಕರಣ- ಈಶ್ವರಪ್ಪ ಆಪ್ತ ವಿನಯ್ ಪ್ರತಿಕ್ರಿಯೆ

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೇಂದ್ರಕ್ಕೆ ಹಣ ಸಂದಾಯ ಮಾಡಿದ್ದಾರೆ ಎಂದು ಹೇಳಲಾದ ಡೈರಿಯೊಂದನ್ನು ಕಾಂಗ್ರೆಸ್ ಬಿಡುಗಡೆ ಮಾಡಿದ್ದು, ಇದೀಗ ರಾಜ್ಯ ರಾಜಕಾರಣದಲ್ಲಿ ಭಾರೀ ತಲ್ಲಣವೇರ್ಪಟ್ಟಿದೆ. ಈ ಕುರಿತು ಈಶ್ವರಪ್ಪ ಆಪ್ತ ವಿನಯ್ ಪ್ರತಿಕ್ರಿಯಿಸಿದ್ದಾರೆ.

    ಕಾಂಗ್ರೆಸ್ ನಾಯಕರಿಗೆ ವಿನಯ್ ಅವರೇ ಡೈರಿ ನೀಡಿದ್ದಾರೆ ಎಂಬ ವಿಚಾರ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಅವರವರ ವೈಯಕ್ತಿಕ ವಿಚಾರವಾಗಿದೆ. ಅಲ್ಲಿ ಏನೇನ್ ಆಗಿದೆ ಎಂದು ನನಗೆ ಗೊತ್ತಿಲ್ಲ. ಇತ್ತೀಚೆಗೆ ಒಂದು ಆಡಿಯೋ ಕೂಡ ರಿಲೀಸ್ ಆಗಿತ್ತು. ಇದೀಗ ಡೈರಿ ಕೇಸ್ ನಲ್ಲಿ ಸಿಕ್ಕಾಕ್ಕೊಂಡಿದ್ದಾರೆ. ಇದರ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ ಎಂದರು.

    ಆ ಡೈರಿ ಎಲ್ಲಿತ್ತು ಅನ್ನೋದೇ ನನಗೆ ಗೊತ್ತಿಲ್ಲ. ಆ ಡೈರಿಗೂ ನಮಗೂ ಸಂಬಂಧವಿಲ್ಲ. ನಾನೇ ಆ ಡೈರಿಯನ್ನು ನೋಡಿಲ್ಲ. ಹೀಗಾಗಿ ನಾನು ಕೊಟ್ಟಿದ್ದೀನಿ ಎಂದು ಹೇಗೆ ಹೇಳುತ್ತಾರೆ. ಅದಕ್ಕೆ ಅರ್ಥನೂ ಇಲ್ಲ ಅಂದ್ರು.

    ನನ್ನನ್ನು ಕಿಡ್ನಾಪ್ ಮಾಡಿಸಿದ್ದು ಇದೇ ಯಡಿಯೂರಪ್ಪ ಅವರ ಪಿಎ. ಅದರಲ್ಲಿ ಯಾವುದೇ ಅನುಮಾನನೇ ಇಲ್ಲ. ಅದಾದ ಬಳಿಕ ನಾನು ಕಿಡ್ನಾಪ್ ವಿಚಾರವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಕೇಸ್ ಇತ್ತೀಚೆಗೆ ಸಿಸಿಬಿ ಹಸ್ತಾಂತರ ಆದ ಬಳಿಕ ಎಲ್ಲ ವಿಚಾರಣೆ ಆರಂಭವಾದ ನಂತರ ಸಂತೋಷ್, ಸಿಸಿಬಿಗೆ ಹಸ್ತಾಂತರ ಮಾಡಿದುದರ ಬಗ್ಗೆ ಪ್ರಶ್ನೆ ಮಾಡಿ ಹೈ ಕೋರ್ಟ್ ನಲ್ಲಿ ಸ್ಟೇ ತಂದಿದ್ದಾರೆ. ಹೀಗಾಗಿ ಈ ಲೈನ್ ನಲ್ಲಿ ನಾನು ಹೋರಾಟ ಮಾಡುತ್ತಾ ಬರುತ್ತಿದ್ದೇನೆ. ಈ ಮಧ್ಯೆ ಯಾವುದೋ ಡೈರಿ ವಿಚಾರದ ಕುರಿತು ನನ್ನ ವಿರುದ್ಧ ಆರೋಪ ಮಾಡಲಾಗುತ್ತಿದೆ ಅಂದ್ರು.

    ಡೈರಿ ಬಗ್ಗೆ ನನಗೇನೂ ಗೊತ್ತಿಲ್ಲ. ಈ ಬಗ್ಗೆ ನಾನು ಎಲ್ಲಿ ಬೇಕಾದ್ರೂ ಪ್ರಮಾಣ ಮಾಡಲು ರೆಡಿಯಾಗಿದ್ದೇನೆ. ನಾನು ಇಂದಿನವರೆಗೂ ಡಿಕೆ ಶಿವಕುಮಾರ್ ಅವರನ್ನು ಭೇಟಿಯೇ ಮಾಡಿಲ್ಲ. ನನ್ನನ್ನು ಕಿಡ್ನಾಪ್ ಮಾಡಲು ಸುಪಾರಿ ಕೊಟ್ಟಿದ್ದೇ ಸಂತೋಷ್. ಆತ ಯಾಕೆ ಮಾಡಿದ ಅನ್ನೋದಕ್ಕೆ ಅವನೇ ಬಾಯಿ ಬಿಡಬೇಕು ಎಂದು ವಾಗ್ದಾಳಿ ನಡೆಸಿದ್ರು.

    ಇದೇ ವೇಳೆ ಅವರು ಕಾಂಗ್ರೆಸ್ ನವರು ಬಿಡುಗಡೆ ಮಾಡಿರುವ ಡೈರಿಯ ಮೂಲ(ಒರಿಜಿನಲ್) ಕಾಪಿ ಎಲ್ಲಿದೆ ಎಂದು ಪ್ರಶ್ನಿಸಿದ್ರು. ಐಟಿ ದಾಳಿಯಾದ ಸಂದರ್ಭದಲ್ಲಿ ಅವರ ಮನೆಯಿಂದ ವಶಪಡಿಸಿಕೊಂಡಿರುವ ಎಲ್ಲದಕ್ಕೂ ಒಂದು ನೋಟ್ ಮಾಡಿ ದಾಖಲಾತಿಗಳನ್ನು ಎಂಟ್ರಿ ಮಾಡುತ್ತಾರೆ. ಅಲ್ಲದೆ ಆ ದಾಖಲಾತಿಗೆ ಇವರ ಬಳಿ ಸಹಿ ಹಾಕಿಸಿಕೊಂಡು ಹೋಗುತ್ತಾರೆ. ಹೀಗಾಗಿ ಆ ಮಹರು ಪಟ್ಟಿಯಲ್ಲಿ ಡೈರಿ ವಿಚಾರ ಇರಬೇಕಲ್ವ ಎಂದು ವಿನಯ್ ಹೇಳಿದ್ರು.

    ಇಂದು ಯಡಿಯೂರಪ್ಪ ಅವರಿಗೆ ಈ ಪರಿಸ್ಥಿತಿ ಬರಲು ಅವರು ಪಕ್ಕದಲ್ಲಿ ಇಟ್ಟುಕೊಂಡ ಶನಿಯೇ ಕಾರಣ. ಆ ಶನಿ ಪ್ರಭಾವ ಬಿಎಸ್‍ವೈ ಮೇಲೆ ಪರಿಣಾಮ ಬೀಳುತ್ತಿದೆ. ಹೀಗಾಗಿ ಅವರು ಮುಂದಿನ ದಿನಗಳಲ್ಲಿ ಈ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ ಇನ್ನಷ್ಟು ಕಷ್ಟಗಳನ್ನು ಅನುಭವಿಸುತ್ತಾರೆ ಎಂದು ಹೇಳಿದ್ರು.

    ಬಿಎಸ್‍ವೈ ಆಪ್ತ ಸಂತೋಷ್ ಹಾಗೂ ಈಶ್ವರಪ್ಪ ಆಪ್ತ ವಿನಯ್ ಒಡನಾಟ ಚೆನ್ನಾಗಿಯೇ ಇತ್ತು. ಆ ಸಂದರ್ಭದಲ್ಲಿ ಡೈರಿ ವಿನಯ್ ಬಳಿ ಇತ್ತು. ಹೀಗಾಗಿ ಆ ಡೈರಿ ಪಡೆದುಕೊಳ್ಳಲು ಸಂತೋಷ್ ವಿನಯ್ ನನ್ನು ಕಿಡ್ನಾಪ್ ಮಾಡಲು ಯತ್ನಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಕೆಲ ಬಿಜೆಪಿ ನಾಯಕರು ಸಹ ವಿನಯ್ ಸಂಪರ್ಕ ಮಾಡಿ ಡೈರಿ ಕೊಟ್ಬಿಡು ಎಂದಿದ್ದರು. ಡೈರಿಯನ್ನ ಬಿಎಸ್ ವೈ ಆಪ್ತರೇ ಕಾಂಗ್ರೆಸ್ ನಾಯಕರಿಗೆ ತಲುಪಿಸಿದ್ದಾರೆ ಎಂದು ಈಶ್ವರಪ್ಪ ಆಪ್ತ ವಿನಯ್ ಹೊಸ ಬಾಂಬ್ ಹಾಕಿದ್ದಾರೆ.

  • ಬಿಎಸ್‍ವೈ ಡೈರಿ ಪ್ರಕರಣಕ್ಕೆ ಟ್ವಿಸ್ಟ್ – ಬಿಜೆಪಿಯಿಂದ ದಾಖಲೆ ಬಿಡುಗಡೆ

    ಬಿಎಸ್‍ವೈ ಡೈರಿ ಪ್ರಕರಣಕ್ಕೆ ಟ್ವಿಸ್ಟ್ – ಬಿಜೆಪಿಯಿಂದ ದಾಖಲೆ ಬಿಡುಗಡೆ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವಿರುದ್ಧ 1800 ಕೋಟಿ ಡೈರಿ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಟ್ವಿಸ್ಟ್ ದೊರೆತಿದೆ.

    ಡೈರಿಯಲ್ಲಿರೋದು ಯಡಿಯೂರಪ್ಪ ಸಹಿ ಅಲ್ಲವೇ ಅಲ್ಲ ಎಂದು ಹೇಳಲಾಗುತ್ತಿದೆ. ಡೈರಿಯಲ್ಲಿರುವ ಸಹಿಗೂ ಬಿಎಸ್‍ವೈ ಸಹಿಗೂ ವ್ಯತ್ಯಾಸ ಇದೆ ಎಂದು ಸಹಿಯ ಅಸಲಿ, ನಕಲಿ ಬಗ್ಗೆ ದಾಖಲೆಯನ್ನು ಯಡಿಯೂರಪ್ಪ ಆಪ್ತರು ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: 1800 ಕೋಟಿ ಬಿಎಸ್‌ವೈ ಡೈರಿ ಬಾಂಬ್ – ಗಡ್ಕರಿಗೆ 150 ಕೋಟಿ, ಅಡ್ವಾಣಿಗೆ 50 ಕೋಟಿ!

    2009ರಲ್ಲಿ ಸಚಿವರಾಗಿದ್ದ ಶರದ್ ಪವಾರ್‍ಗೆ ಬಿಎಸ್‍ವೈ ಪತ್ರ ಬರೆದಿದ್ದರು. ಈ ಪತ್ರವನ್ನು ಇಂದು ಬಿಎಸ್‍ವೈ ಆಪ್ತರು ಬಿಡುಗಡೆ ಮಾಡುವ ಮೂಲಕ ಕಾಂಗ್ರೆಸ್ ರಿಲೀಸ್ ಮಾಡಿದ ಡೈರಿಯಲ್ಲಿರುವ ಸಹಿಗೂ ಈ ಸಹಿಗೂ ಇರುವ ವ್ಯತ್ಯಾಸವನ್ನು ವಿವರಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ಯೂರಿಯಾ ಬಗ್ಗೆ ಜುಲೈ 2009ರಲ್ಲಿ ಬಿಎಸ್‍ವೈ ಬರೆದಿದ್ದ ಪತ್ರವನ್ನೂ ಬಿಡುಗಡೆ ಮಾಡುವ ಮೂಲಕ ಸಹಿಯ ಪ್ರತಿ ಅಕ್ಷರ ವ್ಯತ್ಯಾಸ ತೋರಿಸಿ ಮಾರ್ಕ್ ಮಾಡಿ ದಾಖಲೆ ಬಿಡುಗಡೆಗೊಳಿಸಿದ್ದಾರೆ. ಇದನ್ನೂ ಓದಿ: ದಾಳಿ ನಡೆಯದೇ ಇದ್ದರೂ ಬಿಎಸ್‍ವೈ ಡೈರಿ ಐಟಿಗೆ ಸಿಕ್ಕಿದ್ದು ಹೇಗೆ?

    ಹಾಗಾದ್ರೆ ಶುಕ್ರವಾರ ಕಾಂಗ್ರೆಸ್ ಬಿಡುಗಡೆ ಮಾಡಿದ ಡೈರಿಯಲ್ಲಿರುವ ಯಡಿಯೂರಪ್ಪ ಸಹಿ ನಕಲಿಯೋ ಅಥವಾ ಅಸಲಿಯೋ ಎಂಬುದು ತನಿಖೆಯ ಬಳಿಕವಷ್ಟೇ ತಿಳಿದುಬರಬೇಕಿದೆ. ಇತ್ತ ಸಿಬಿಡಿಟಿ ಕೂಡ ಇದು ಬಿಎಸ್‍ವೈ ಅವರ `ಕೈ’ ಬರಹ ಅಲ್ಲ ಅಂತ ಸ್ಪಷ್ಟನೆ ನೀಡುತ್ತಿದೆ.

    ಒಟ್ಟಿನಲ್ಲಿ ರಾಷ್ಟ್ರೀಯ ಪಕ್ಷಗಳ ಆರೋಪ ಕೇವಲ ರಾಜಕೀಯ ಕೆಸರೆರಚಾಟಕ್ಕೆ ಮಾತ್ರನಾ. ಹಾಗೂ ತಾರ್ಕಿಕ ಅಂತ್ಯಕ್ಕೆ ಈ ಪ್ರಕರಣವನ್ನು ತೆಗೆದುಕೊಂಡು ಹೋಗೋದಿಲ್ಲವಾ ಎಂಬ ಪ್ರಶ್ನೆ ಇದೀಗ ಜನಸಾಮಾನ್ಯರನ್ನು ಕಾಡುತ್ತಿದೆ. ಇದನ್ನೂ ಓದಿ: ಬಿಎಸ್‍ವೈ ಡೈರಿ ಡಿಕೆಶಿ ಮನೆ ಸೇರಿದ್ದು ಹೇಗೆ?

     

  • ಏರ್​ಸ್ಟ್ರೈಕ್​​ನಿಂದ 22 ಸೀಟ್ ಗೆಲ್ತೇವೆ – ಪಾಕಿಸ್ತಾನದಲ್ಲೂ ಡಿಬೇಟ್ ಆಯ್ತು ಬಿಎಸ್‍ವೈ ಹೇಳಿಕೆ

    ಏರ್​ಸ್ಟ್ರೈಕ್​​ನಿಂದ 22 ಸೀಟ್ ಗೆಲ್ತೇವೆ – ಪಾಕಿಸ್ತಾನದಲ್ಲೂ ಡಿಬೇಟ್ ಆಯ್ತು ಬಿಎಸ್‍ವೈ ಹೇಳಿಕೆ

    ಇಸ್ಲಾಮಾಬಾದ್: ಕರ್ನಾಟಕದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತನಾಮರಾಗಿದ್ದಾರೆ.

    ಏರ್​ಸ್ಟ್ರೈಕ್​​ನಿಂದ 22 ಲೋಕಸಭಾ ಸೀಟ್ ಗೆಲ್ತೇವೆ ಅಂದಿರೋದನ್ನು ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಿಟಿಐ (ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್‌) ಪಕ್ಷ, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದೆ. 22 ಸೀಟ್ ಗೆಲ್ಲೋ ಸಲುವಾಗಿ ಇಷ್ಟು ಪ್ರಾಣಗಳ ಜೊತೆ ಬಿಜೆಪಿ ಚೆಲ್ಲಾಟ ಆಡ್ತಿದೆ. ಯುದ್ಧ ಅನ್ನೋದು ಚುನಾವಣೆಯ ಆಯ್ಕೆನಾ ಎಂದು ಪ್ರಶ್ನಿಸಿದೆ.

    ಅಲ್ಲದೆ, ಪಾಕಿಸ್ತಾನದ ಚಾನೆಲ್‍ಗಳಲ್ಲಿ ಕೂಡ ಈ ಕುರಿತು ಡಿಬೇಟ್ ಆಗಿದೆ. ಇದು ಬಿಜೆಪಿ ಹೈಕಮಾಂಡ್ ನಾಯಕರಿಗೆ ತೀವ್ರ ಮುಜುಗರ ತಂದಿದೆ. ಈ ಕೂಡಲೇ ಕೇಂದ್ರ ಸಚಿವ ವಿಕೆ ಸಿಂಗ್, ಬಿಎಸ್‍ವೈಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಬಿಎಸ್‍ವೈ ಹೇಳಿಕೆಯಿಂದ ಭಿನ್ನವಾಗಿರಲು ಬಯಸುತ್ತೇನೆ. ಕೇವಲ ಹೆಚ್ಚುವರಿ ಸೀಟ್ ಗೆಲ್ಲಲು ಇಷ್ಟೆಲ್ಲ ಮಾಡ್ತಿಲ್ಲ. ಇದು ದೇಶವನ್ನು ಕಾಪಾಡಿಕೊಳ್ಳುವ ಕ್ರಮ ಎಂದಿದ್ದಾರೆ.

    ಇತ್ತ ಆರ್‍ಎಸ್‍ಎಸ್ ಸಹ, ಸೇನೆಯ ಕಾರ್ಯಾಚರಣೆಯನ್ನು ರಾಜಕೀಯದೊಂದಿಗೆ ಬೆಸೆಯಬೇಡಿ ಅಂತ ಖಡಕ್ ವಾರ್ನಿಂಗ್ ಕೊಟ್ಟು ಸ್ಪಷ್ಟನೆ ಕೇಳಿದೆ.

    ಬಿಎಸ್‍ವೈ ಹೇಳಿದ್ದೇನು..?
    ಭಾರತೀಯ ವಾಯುಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ. ಉಗ್ರರ ಮೇಲೆ ಭಾರತದ ವಾಯುಸೇನೆ ದಾಳಿಯ ಪರಿಣಾಮ ರಾಜ್ಯದಲ್ಲಿ 22 ಕ್ಕೂ ಹೆಚ್ಚು ಲೋಕಸಭೆ ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ. ಉಗ್ರರ ನೆಲೆಗಳ ಮೇಲೆ ಯಶಸ್ವಿಯಾಗಿ ನಡೆದ ಏರ್ ಸ್ಟ್ರೈಕ್ ನಿಂದಾಗಿ ದೇಶದಲ್ಲಿ ಬಿಜೆಪಿ ಪರ ಉತ್ತಮ ಅಲೆಯಿದೆ. ಭಾರತದಲ್ಲಿ ಇಂದಿನ ವಾತಾವರಣ ಭಾರತೀಯ ಜನತಾ ಪಕ್ಷದ ಪರವಾಗಿದೆ. ಪಾಕಿಸ್ತಾನದ ಒಳಗೆ ನುಗ್ಗಿ ನಮ್ಮ ವಾಯುಸೇನೆ ಉಗ್ರರ ನೆಲೆ ನಾಶ ಮಾಡಿದ್ದು ಸಂತೋಷವಾಗಿದೆ. ಅಲ್ಲದೇ 40 ವರ್ಷದ ಬಳಿಕ ಉಗ್ರ ನೆಲೆಗಳನ್ನು ಉಡೀಸ್ ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಪರ ಅಲೆ ಇದೆ. ರಾಜ್ಯದಿಂದ 22 ಸಂಸದರನ್ನು ಕರೆದ್ಯೊಯ್ದು ಮೋದಿ ಅವರಿಗೆ ನಮ್ಮ ಕಾಣಿಕೆ ಕೊಡಬೇಕಿದೆ. ಅಲ್ಲಿಯವರೆಗೂ ನಾನು ಮನೆ ಸೇರುವುದಿಲ್ಲ ಎಂದು ಯಡಿಯೂರಪ್ಪ ಅವರು ಬುಧವಾರ ಚಿತ್ರದುರ್ಗದಲ್ಲಿ ಹೇಳಿದ್ದರು.

    https://www.youtube.com/watch?v=-HDTIgjGwJg

    https://www.youtube.com/watch?v=LLIlyAySnxg

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುಳ್ಳೇ ಸುಳ್ಳು…! ಮತ್ತೆ ಸುಳ್ಳು ಹೇಳಿದ ಯಡಿಯೂರಪ್ಪ! – ನೀವು ಹೇಳಿದ್ದನ್ನು ಮತ್ತೊಮ್ಮೆ ಕೇಳಿಸ್ಕೊಳ್ಳಿ

    ಸುಳ್ಳೇ ಸುಳ್ಳು…! ಮತ್ತೆ ಸುಳ್ಳು ಹೇಳಿದ ಯಡಿಯೂರಪ್ಪ! – ನೀವು ಹೇಳಿದ್ದನ್ನು ಮತ್ತೊಮ್ಮೆ ಕೇಳಿಸ್ಕೊಳ್ಳಿ

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಬಿಜೆಪಿಯ ಮರ್ಯಾದೆಯನ್ನು ರಾಷ್ಟ್ರ ಮಟ್ಟದಲ್ಲಿ ಹರಾಜು ಹಾಕಿದ್ದಾರೆ. ಆದರೆ ಈ ಹೇಳಿಕೆಯ ಕಸಿವಿಸಿ ಬಿಜೆಪಿ ರಾಷ್ಟ್ರ ಮಟ್ಟದ ನಾಯಕರಿಗೆ ಆಗಿದೆ ಎಂದು ಅರಿವಾಗುತ್ತಿದ್ದಂತೆಯೇ, ಬಿ.ಎಸ್.ವೈ ಈಗ ತಮ್ಮ ಮೇಲಿನ ಆರೋಪವನ್ನು ಮಾಧ್ಯಮಗಳ ಮೇಲೆ ಹಾಕುವ ಯತ್ನ ಮಾಡಿದ್ದಾರೆ. ಆದರೆ ಯಡಿಯೂರಪ್ಪನವರೇ ನೀವು ನಿನ್ನೆ ಅರ್ಥಾತ್ ಬುಧವಾರ ಏನು ಮಾತಾಡಿದ್ದೀರಿ ಎಂದು ನಿಮಗೆ ಮರೆತಿದ್ದರೆ ನಿನ್ನೆ ನೀವು ಚಿತ್ರದುರ್ಗದಲ್ಲಿ ಏನ್ ಹೇಳಿದ್ರಿ ಅನ್ನೋದನ್ನು ನೀವೇ ಒಂದ್ಸಾರಿ ಕೇಳಿಸಿಕೊಳ್ಳಿ.

    ರಾಷ್ಟ್ರಮಟ್ಟದಲ್ಲಿ ಬಿಜೆಪಿ ನಾಯಕರು ತಲೆ ತಗ್ಗಿಸುವಂತಹ ಹೇಳಿಕೆ ನೀಡಿದ ಯಡಿಯೂರಪ್ಪ ಅವರು ಇಂದು ಟ್ವಿಟ್ಟರ್ ನಲ್ಲಿ, ನನ್ನ ಹೇಳಿಕೆಯನ್ನು ಬೇರೆ ರೀತಿ ಅರ್ಥೈಸಲಾಗಿದೆ. ನಾನು ಪರಿಸ್ಥಿತಿ ಬಿಜೆಪಿ ಪರವಾಗಿದೆ ಅಂತಾ ಹೇಳಿದ್ದೇನೆ. ಇದನ್ನ ನಾನು ಹಲವು ತಿಂಗಳಿನಿಂದ ಹೇಳುತ್ತಾ ಬಂದಿದ್ದೇನೆ. ಮೋದಿ ನಾಯಕತ್ವದಲ್ಲಿ ಕನಿಷ್ಠ 22 ಸೀಟು ಗೆಲ್ಲುವುದಾಗಿ ಹೇಳುತ್ತಿದ್ದೇನೆ. ಈ ರೀತಿ ನಾನು ಹೇಳಿರೋದು ಇದೇ ಮೊದಲಲ್ಲ ಎಂದು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದರು.

    ಆದರೆ ಈ ಟ್ವೀಟ್ ಮಾಡುವುದಕ್ಕೂ ಮುನ್ನ ಇಂದು ಯಾದಗಿರಿಯಲ್ಲಿದ್ದ ಯಡಿಯೂರಪ್ಪ, ನಾನು ಏನೂ ಪ್ರತಿಕ್ರಿಯೆ ನೀಡಲು ಇಷ್ಟಪಡುವುದಿಲ್ಲ ಎಂದು ಹೇಳಿದ್ದರು. ಇದಾಗಿ ಗಂಟೆಗಳು ಕಳೆಯುವ ಮುನ್ನವೇ ನಿನ್ನೆ ನೀಡಿದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎನ್ನುತ್ತಿದ್ದಾರೆ.

    https://www.youtube.com/watch?v=LLIlyAySnxg

    ಈ ಎಲ್ಲದರ ನಡುವೆಯೇ ವಿದೇಶಾಂಗ ಇಲಾಖೆಯ ರಾಜ್ಯ ಸಚಿವರಾಗಿರುವ ವಿ.ಕೆ.ಸಿಂಗ್ ಅವರು ಟ್ವಿಟ್ಟರ್ ನಲ್ಲೇ ಯಡಿಯೂರಪ್ಪಗೆ ಮಂಗಳಾರತಿ ಮಾಡಿದ್ದಾರೆ. ನಮ್ಮ ದೇಶದ ಕಾರ್ಯಾಚರಣೆ ಚುನಾವಣೆಯಲ್ಲಿ ಕೆಲವು ಎಕ್ಸ್ ಟ್ರಾ ಸೀಟುಗಳನ್ನು ಗೆಲ್ಲಲು ಮಾಡಿದ್ದಲ್ಲ. ನಾವೆಲ್ಲಾ ಜೊತೆಯಾಗಿದ್ದೇವೆ. ದೇಶದ ಹಿತದೃಷ್ಟಿಯಿಂದ ಹಾಗೂ ಜನರ ಸುರಕ್ಷತೆಗಾಗಿ ನಾವು ಈ ಕಾರ್ಯಾಚರಣೆ ಮಾಡಿದ್ದೇವೆ ಎಂದು ಯಡಿಯೂರಪ್ಪ ಅವರ ಹೇಳಿಕೆಯನ್ನು ಖಂಡಿಸಿದ್ದರು.

    ಅಲ್ಲದೆ ಇದರ ಜೊತೆಗೆ ಮಾಜಿ ಪ್ರಧಾನಿ ವಾಜಪೇಯಿಯವರು ಲೋಕಸಭೆಯಲ್ಲಿ ಮಾಡಿದ್ದ ಭಾಷಣದ ತುಣುಕು ಇರುವ ಯೂಟ್ಯೂಬ್ ಲಿಂಕ್ ಹಾಕಿದ್ದರು. ಅಂದಿನ ಭಾಷಣದಲ್ಲಿ ಮೋದಿಯವರು ಏನು ಹೇಳಿದ್ದರು ಎಂಬುದನ್ನೂ ಒಂದು ಸಾರಿ ಕೇಳಿಸ್ಕೊಳ್ಳಿ.

    ಈ ಮಧ್ಯೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು, ಇಡೀ ದೇಶ ಕೇಂದ್ರ, ಸೇನೆಗೆ ಬೆಂಬಲಿಸುತ್ತಿದೆ. ಆದರೆ ಬಿಜೆಪಿ ನಾಯಕರು ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ವೈ ಹೆಚ್ಚು ಸೀಟಿನ ಲೆಕ್ಕಾಚಾರದಲ್ಲಿದ್ದಾರೆ. ಉಗ್ರರ ದಾಳಿ, ಯುದ್ಧವನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಿದೆ. ಇದು ನಾಚಿಕೆಗೇಡಿನ ವಿಚಾರ. ಸೈನಿಕರಿಗೆ ಮಾಡುತ್ತಿರುವ ಅವಮಾನ ಎಂದು ಯಡಿಯೂರಪ್ಪರನ್ನು ಟ್ವೀಟ್ ನಲ್ಲಿ ಕುಟುಕಿದ್ದರು.

    ಈ ಎಲ್ಲ ಬೆಳವಣಿಗೆಗಳ ನಡುವೆಯೇ ಯಡಿಯೂರಪ್ಪ ಅವರ ಟ್ವಿಟ್ಟರ್ ಖಾತೆಯಲ್ಲಿ ನಾನು ಹಾಗೆ ಹೇಳಿದ್ದಲ್ಲ ಎಂಬ ಟ್ವೀಟ್ ಕಾಣಿಸಿಕೊಂಡಿದೆ. ಯಡಿಯೂರಪ್ಪ ಅವರ 22 ಸೀಟಿನ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.

    ಕೆಟ್ಟ ಮೇಲೆ ಬುದ್ಧಿ ಬಂತು ಎಂಬಂತೆ ನಿಮ್ಮ ತಪ್ಪನ್ನು ಒಪ್ಪಿಕೊಂಡು ನೀವು ಇನ್ನಷ್ಟು ದೊಡ್ಡವರಾಗಬಹುದಿತ್ತು. ಆದರೆ ನಿಮ್ಮ ತಪ್ಪನ್ನು ಬೇರೆಯವರ ಮೇಲೆ ಹಾಕಿದ್ಯಾಕೆ ಯಡಿಯೂರಪ್ಪನವರೇ..?

    ಯಡಿಯೂರಪ್ಪ ಅವರ ಹೇಳಿಕೆಯನ್ನು ಕೇಳಿಸಿಕೊಂಡ ಮೇಲೆ ನಿಮಗೇನನ್ನಿಸಿತು ಎಂಬುದನ್ನು ಕಮೆಂಟ್ ಮಾಡಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv