Tag: BSY

  • ಆಪರೇಷನ್ ಸಕ್ಸಸ್ – ‘ಕೈ’ ಹಿಡಿದು ನಾನು ಚಿಕ್ಕಮಗುವಲ್ಲ, ಸ್ಪರ್ಧಿಸುತ್ತೇನೆ ಎಂದ ರಾಜು ಕಾಗೆ

    ಆಪರೇಷನ್ ಸಕ್ಸಸ್ – ‘ಕೈ’ ಹಿಡಿದು ನಾನು ಚಿಕ್ಕಮಗುವಲ್ಲ, ಸ್ಪರ್ಧಿಸುತ್ತೇನೆ ಎಂದ ರಾಜು ಕಾಗೆ

    ಬೆಂಗಳೂರು: ಉಪ ಚುನಾವಣೆ ಹೊತ್ತಲ್ಲೇ ಆಪರೇಷನ್ ಯಶಸ್ವಿಯಾಗಿದ್ದು ರಾಜು ಕಾಗೆ(ಭರಮ ಗೌಡ ಕಾಗೆ) ಬಿಜೆಪಿ ತೊರೆದು ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿ ಕಾಗವಾಡ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

    ಬಿಜೆಪಿಯಲ್ಲಿನ ಬೆಳವಣಿಗೆ ನನಗೆ ನೋವು ತಂದಿದ್ದು, ಶ್ರೀಮಂತ ಪಾಟೀಲ್‍ಗೆ ಟಿಕೆಟ್ ನೀಡುತ್ತಿರುವುದು ಬೇಸರ ತಂದಿದೆ. ಹೀಗಾಗಿ ನ.18ಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಎಂದು ರಾಜು ಕಾಗೆ ತಿಳಿಸಿದ್ದಾರೆ.

    ಇಂದು ಬಿಜೆಪಿ ತೊರೆಯುವ ಬಗ್ಗೆ ಪಬ್ಲಿಕ್ ಟಿವಿಯ ಜೊತೆ ಮಾತನಾಡಿದ ಅವರು, ಇದೇ ತಿಂಗಳು 13 ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರುತ್ತೇನೆ ಮತ್ತು ಇದೇ ತಿಂಗಳ 18 ರಂದು ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾನು ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

    ಇದೇ ವೇಳೆ ಬಿಜೆಪಿಯವರು ಬೇರೆ ಅಧಿಕಾರ ನೀಡುತ್ತೇವೆ ಎಂದು ಹೇಳಿದರು ಯಾಕೆ ಈ ತೀರ್ಮಾನ ತೆಗೆದುಕೊಂಡಿದ್ದೀರಾ ಎಂದು ಕೇಳಿದಾಗ, ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ (ಕಾಡಾ) ಅಧಿಕಾರವನ್ನು ತೆಗೆದುಕೊಳ್ಳಲು ನಾನು ಚಿಕ್ಕ ಮಗು ಅಲ್ಲ. ಚಿಕ್ಕಮಕ್ಕಳು ಅತ್ತಾಗ ಚಾಕ್ಲೇಟ್ ಕೊಡುವ ರೀತಿಯಲ್ಲಿ ನನಗೆ ಅದನ್ನು ಅವರು ಕೊಡಲು ಬಂದಿದ್ದಾರೆ. ನಾನು 15 ವರ್ಷದಿಂದ ಬಿಜೆಪಿಯಲ್ಲಿ ಇದ್ದೇನೆ ಮೂರು ಬಾರಿ ಶಾಸಕ ಆಗಿದ್ದೇನೆ. ಶಾಸಕನಾದ ಸಮಯದಲ್ಲೂ ಬಿಜೆಪಿಯಲ್ಲಿ ನನಗೆ ಬಹಳ ನೋವು ನೀಡಿದ್ದರು ಎಂದು ತಮ್ಮ ಬೇಸರವನ್ನು ವ್ಯಕ್ತಪಡಿಸಿದರು.

    ಅನರ್ಹ ಶಾಸಕರಿಂದ ಬಿಜೆಪಿ ಸರ್ಕಾರ ರಚನೆಯಾಗಿರಬಹುದು ಆದರೆ ಅದಕ್ಕೂ ನನಗೂ ಸಂಬಂಧವಿಲ್ಲ. ನಮ್ಮ ಕ್ಷೇತ್ರದ ಅನರ್ಹ ಶಾಸಕರಾದ ಶ್ರೀಮಂತ ಪಾಟೀಲರನ್ನು ನಾನು ಹಿಂದಿನಿಂದಲೂ ವಿರೋಧ ಮಾಡುತ್ತಾ ಬಂದಿದ್ದೇನೆ. ಆದರೆ ಇವರು ನನಗೆ ಹೇಳದೆ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಅನರ್ಹ ಮಾಡಿಸಿ ಈಗ ನನ್ನ ಕ್ಷೇತ್ರದಿಂದಲೇ ಅವರಿಗೆ ಟಿಕೆಟ್ ನೀಡುತ್ತಿರುವುದು ನನಗೆ ಬಹಳ ಬೇಸರವಾಗಿದೆ. ನಾನು ಕಾಂಗ್ರೆಸ್ ಸೇರುವ ಬಗ್ಗೆ ಕಾಂಗ್ರೆಸ್ ನಾಯಕರ ಜೊತೆ ಮಾತನಾಡಿದ್ದೇನೆ ಅವರು ಬನ್ನಿ ಎಂದು ಹೇಳಿದ್ದಾರೆ. ನಾನು ಕಾಂಗ್ರೆಸ್ ಪಕ್ಷ ಸೇರುತ್ತೇನೆ ಎಂದು ಸ್ಪಷ್ಟಪಡಿಸಿದರು.

    ನನ್ನ 20 ವರ್ಷದ ರಾಜಕೀಯ ಜೀವನದಲ್ಲಿ ಯಾವ ಕಾಂಗ್ರೆಸ್ ನಾಯಕರ ಜೊತೆ ವಿರೋಧ ಕಟ್ಟಿಕೊಂಡಿಲ್ಲ. ಈಗ ನಾನು ಒಬ್ಬನೇ ಕಾಂಗ್ರೆಸ್ ಸೇರುತ್ತೇನೆ ನಂತರ ಊರಿಗೆ ಹೋಗಿ ಬೇರೆಯದನ್ನು ತೀರ್ಮಾನ ಮಾಡುತ್ತೇನೆ. ಬಿಎಸ್‍ವೈ ಅವರು ಕಳೆದ ಒಂದೂವರೆ ತಿಂಗಳಿಂದ ನನ್ನ ಸಂಪರ್ಕ ಮಾಡಿಲ್ಲ. ಬಿಜೆಪಿ ನಾಯಕರು ನನಗೆ ತುಂಬ ಅವಮಾನ ಮಾಡಿದ್ದಾರೆ ಎಂದು ಕಮಲ ನಾಯಕರ ಮೇಲೆ ಕಿಡಿಕಾರಿದರು.

  • ದೇವೇಗೌಡರ ಒತ್ತಡಕ್ಕೆ ಮಣಿದು ಯಾದಗಿರಿ ಎಸ್‌ಐ ಎತ್ತಂಗಡಿ

    ದೇವೇಗೌಡರ ಒತ್ತಡಕ್ಕೆ ಮಣಿದು ಯಾದಗಿರಿ ಎಸ್‌ಐ ಎತ್ತಂಗಡಿ

    ಯಾದಗಿರಿ: ರಾಜಕೀಯ ವಿಚಾರವಾಗಿ ನಮ್ಮದು ದೋಸ್ತಿ ಇಲ್ಲ ಅನ್ನೋ ಯಡಿಯೂರಪ್ಪ ಅವರು ಆಡಳಿತಾತ್ಮಕ ವಿಷಯದಲ್ಲಿ ದೇವೇಗೌಡರ ಒತ್ತಡಕ್ಕೆ ಮಣಿದಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.

    ಯಾದಗಿರಿ ಸಿಟಿ ಸ್ಟೇಷನ್ ಪಿಎಸ್‌ಐ ಬಾಪುಗೌಡ ಪಾಟೀಲ್‌ರನ್ನ ಕಲಬುರಗಿಯ ಐಜಿ ಕಚೇರಿಗೆ ಸರ್ಕಾರ ಎತ್ತಂಗಡಿ ಮಾಡಿದೆ. ದೇವೇಗೌಡರು ಹೇಳಿದ್ದರಿಂದಾಗಿ ನಾನು ಕ್ರಮ ತೆಗೆದುಕೊಂಡಿದ್ದೇನೆ ಎಂದು ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದಾರೆ. ಸಿಎಂ ಅವರ ಈ ಕ್ರಮವನ್ನು ದೇವೇಗೌಡರು ಸ್ವಾಗತಿಸಿದ್ದಾರೆ.

    ಪೊಲೀಸರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಯಡಿಯೂರಪ್ಪಗೆ ನಾನು ಪತ್ರ ಬರೆದಿದ್ದೆ. ಇದನ್ನೇ ಏನೋ ಸಾಧನೆ ಎಂದು ನಮ್ಮ ಕಾರ್ಯಕರ್ತರು ಹಿಗ್ಗೋದು ಬೇಡ. ದ್ವೇಷ ಸಾಧಿಸೋದೂ ಬೇಡ. ಶಾಂತವಾಗಿರಿ ಅಂತ ಸಲಹೆ ನೀಡಿದ್ದಾರೆ. ಆದರೆ ರಾಜಕೀಯ ಒತ್ತಡಕ್ಕೆ ಎಸ್‌ಐ ವರ್ಗಾವಣೆ ಮಾಡಿರೋದು ಈಗ ವ್ಯಾಪಕ ಚರ್ಚೆಗೀಡಾಗಿದೆ. ಇದನ್ನು ಓದಿ: ಯಾದಗಿರಿ ನಗರದಲ್ಲಿ ಸೆಕ್ಷನ್ 144 ಜಾರಿ- ಪ್ರತಿಭಟನೆಗೆ ಕೈಜೋಡಿಸಲಿರುವ ಮಾಜಿ ಪ್ರಧಾನಿ ಎಚ್‍ಡಿಡಿ

    ಪಿಎಸ್‌ಐ ಅಮಾನತಿಗಾಗಿ ದೇವೇಗೌಡ ಹೋರಾಟವನ್ನು ಸಚಿವ ಸಿ.ಟಿ ರವಿ ಅಣಕಿಸಿದ್ದಾರೆ. ದೊಡ್ಡವರು ದೊಡ್ಡವರ ರೀತಿ ನಡೆದುಕೊಳ್ಳಬೇಕು. ದೊಡ್ಡವರು ಸಣ್ಣವರ ರೀತಿಯಲ್ಲಿ ನಡೆದುಕೊಳ್ಳಬಾರದು ಅಂದಿದ್ದಾರೆ. ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ಕಡಿತ ಪ್ರಶ್ನಿಸಿ ಯಾದಗಿರಿಯಲ್ಲಿ ಜೆಡಿಎಸ್ ಕಾರ್ಯಕರ್ತರು ಶರಣಗೌಡ ಕಂದಕೂರು ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ್ದರು. ಈ ವೇಳೆ ಜೆಡಿಎಸ್ ಕಾರ್ಯಕರ್ತರನ್ನು ಎಸ್‌ಐ ಬಂಧಿಸಿದ್ದರು. ಬೇಲ್ ಮೇಲೆ ಹೊರ ಬಂದಿದ್ದ ಕಾರ್ಯಕರ್ತರು, ಎಸ್‌ಐ ವರ್ಗಾವಣೆಗೆ ದೇವೇಗೌಡರ ನೇತೃತ್ವದಲ್ಲಿ ಧರಣಿ ಮಾಡಿದ್ದರು. ಇದನ್ನು ಓದಿ: ಪಿಎಸ್‍ಐ ಅಮಾನತಿಗೆ ಜೆಡಿಎಸ್ ಪಟ್ಟು – ಅಮಾನತುಗೊಳಿಸಿದ್ರೆ ನಮ್ಮನ್ನೂ ಸಸ್ಪೆಂಡ್ ಮಾಡುವಂತೆ ಸಿಬ್ಬಂದಿ ಒತ್ತಡ

    ಅಂದು ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ್ದ ಹೆಚ್‌ಡಿಡಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ದೂರಿದ್ದರು. ಯಾದಗಿರಿ ಪೊಲೀಸ್ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಕೆಲಸ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ದೇವದುರ್ಗ ಆಡಿಯೋ ಪ್ರಕರಣದ ಹಿನ್ನೆಲೆ ನಮ್ಮ ಪಕ್ಷದ ಯುವ ಮುಖಂಡ ಶರಣಗೌಡ ಕಂದಕೂರ ವಿರುದ್ಧ ದ್ವೇಷ ಸಾಧಿಸಲಾಗುತ್ತಿದೆ. ನಮ್ಮ ಹೋರಾಟ ಇಷ್ಟಕ್ಕೆ ಕೊನೆಯಾಗದು. ನಮ್ಮ ಪಕ್ಷದ ಯಾವುದೇ ಕಾರ್ಯಕರ್ತರ ವಿರುದ್ಧ ಈ ರೀತಿ ಹಗೆತನ ನಡೆದರೆ ನಾನು ಸಹಿಸಲಾರೆ. ನಮ್ಮ ಕಾರ್ಯಕರ್ತರ ಮೇಲೆ ಹಾಕಿರುವ ಪ್ರಕರಣಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದರು.

  • ಆಡಿಯೋ ಲೀಕ್ ಮಾಡಿದವ್ರ ವಿರುದ್ಧ ಕ್ರಮ ಕೈಗೊಳ್ಳಿ- ಸಿಎಂಗೆ ಕತ್ತಿ ಮನವಿ

    ಆಡಿಯೋ ಲೀಕ್ ಮಾಡಿದವ್ರ ವಿರುದ್ಧ ಕ್ರಮ ಕೈಗೊಳ್ಳಿ- ಸಿಎಂಗೆ ಕತ್ತಿ ಮನವಿ

    ಬೆಂಗಳೂರು: ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ್ದ ಆಡಿಯೋ ಲೀಕ್ ಮಾಡಿದವರ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳಿ ಎಂದು ಮಾಜಿ ಸಚಿವ ಉಮೇಶ್ ಕತ್ತಿಯವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬಳಿ ಮನವಿ ಮಾಡಿಕೊಂಡಿದ್ದಾರೆ.

    ಇಂದು ಸಿಎಂ ಅವರ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಬಿಎಸ್‌ವೈ ಅವರನ್ನು ಭೇಟಿಯಾದ ಕತ್ತಿ ಸುಮಾರು ಒಂದು ಗಂಟೆಗಳ ಕಾಲ ಜೊತೆ ಚರ್ಚೆ ನಡೆಸಿದರು. ಸಿಎಂ ಹಾಗೂ ಕತ್ತಿ ಚರ್ಚೆ ತೀವ್ರ ಕುತೂಹಲ ಮೂಡಿಸಿದ್ದು, ಆಡಿಯೋ ರೆಕಾರ್ಡ್ ಮಾಡಿದೋರು ಬೆಳಗಾವಿಯ ಅತೃಪ್ತ ಬಣ ಎಂಬ ಶಂಕೆ ಹಿನ್ನೆಲೆಯಲ್ಲಿ ಈ ಚರ್ಚೆ ನಡೆದಿದೆ ಎನ್ನಲಾಗಿದೆ.

    ಚರ್ಚೆಯ ವೇಳೆ ಆಡಿಯೊ ಲೀಕ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಿ. ನಮ್ಮ ಜಿಲ್ಲೆ ಬಗ್ಗೆ ಹೆಚ್ಚು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಯಾರ ಕಡೆಯವರೇ ಆಗಲಿ ಕ್ರಮ ಕೈಗೊಳ್ಳಿ ಎಂದು ಸಿಎಂಗೆ ಉಮೇಶ್ ಕತ್ತಿ ಮನವಿ ಮಾಡಿದ್ದಾರೆ. ಅಲ್ಲದೆ ಅವರನ್ನು ಸುಮ್ಮನೆ ಬಿಡಬಾರದು ಎಂದು ಇದೇ ವೇಳೆ ಸಿಎಂ ಮೇಲೆ ಕತ್ತಿ ಒತ್ತಡ ಹಾಕಿದ್ದಾರೆ.

    ಬೆಳಗಾವಿ ರಾಜಕೀಯ ಕಿತ್ತಾಟವೇ ಆಡಿಯೋ ಲೀಕ್ ಗೆ ಕಾರಣ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ಕತ್ತಿ ಇಂದು ಸಿಎಂ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಹಾಗಾದ್ರೆ ಆಡಿಯೋ ಲೀಕ್ ನಿಂದ ಬೆಳಗಾವಿ ಬಿಜೆಪಿಯಲ್ಲಿ ಮತ್ತಷ್ಟು ಫೈಟ್ ಹೆಚ್ಚಾಗುತ್ತಾ ಅನ್ನೋ ಪ್ರಶ್ನೆ ಎದುರಾಗಿದೆ. ಇದನ್ನೂ ಓದಿ: ಈ ಆಡಿಯೋದಲ್ಲಿ ಹೊಸದಾಗಿ ಏನಿದೆ? – ಸುಪ್ರೀಂನಲ್ಲಿ ಏನಾಯ್ತು? ಕಾಂಗ್ರೆಸ್ಸಿಗೆ ಜಯವೋ? ಹಿನ್ನಡೆಯೋ?

    ಆಡಿಯೋದಲ್ಲಿ ಬಿಎಸ್‌ವೈ ಹೇಳಿದ್ದೇನು?
    ಅ.26ರಂದು ಹುಬ್ಬಳ್ಳಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ್ದ ಬಿಎಸ್‌ವೈ, ಯಾಕೋ ಇವತ್ತು ನೀವು ಮಾತಾಡಿದಂತ ಧಾಟಿ ಸರ್ಕಾರ ಉಳಿಸೋಕೆ ಇದೆ ಅಂತ ಅನ್ನಿಸುತ್ತಿಲ್ಲ. ರಾಷ್ಟ್ರೀಯ ಅಧ್ಯಕ್ಷರೇ ಮುಂದೆ ನಿಂತು 17 ಜನರು 2-3 ತಿಂಗಳು ಮುಂಬೈಯಲ್ಲಿರಿಸಿದ್ದರು. ಅವರೆಲ್ಲರು ಕ್ಷೇತ್ರಕ್ಕೂ ಬರಲಿಲ್ಲ. ಹೆಂಡ್ತಿ ಮಕ್ಕಳ ಮುಖ ನೋಡಿರಲಿಲ್ಲ. 3-4 ವರ್ಷ ವಿಪಕ್ಷದಲ್ಲಿ ಇರಬೇಕಾದ ನಮ್ಮನ್ನ ಆಡಳಿತ ಪಕ್ಷಕ್ಕೆ ಬರುವಂತೆ ಮಾಡಿದರು. ನಿಮ್ಮ ಬಾಯಲ್ಲಿ ಅನರ್ಹ ಪರ ಗಟ್ಟಿಯಾಗಿ ನಿಂತುಕೊಳ್ಳುತ್ತೇವೆ ಅನ್ನೋ ಮಾತು ಬರಲಿಲ್ಲ. ಇದನ್ನ ನಾನು ಖಂಡಿತಾ ನಿಮ್ಮಿಂದ ನಿರೀಕ್ಷೆ ಮಾಡಿರಲಿಲ್ಲ. ಐ ಆಮ್ ಸಾರಿ. ನನಗೇನೂ ಸಿಎಂ ಗಿರಿ ಬೇಕಾಗಿರಲಿಲ್ಲ. ಈಗಾಗಲೇ 3-4 ಬಾರಿ ಸಿಎಂ ಆಗಿದ್ದೇನೆ. ದೊಡ್ಡತನ, ಧಾರಾಳತನ, ವಾಸ್ತವ ಸ್ಥಿತಿಯನ್ನ ತಿಳಿಯದೆ ನೀವು ಮಾತಾಡಿದ್ದೀರಾ ಗೋಕಾಕ್ ಬಗ್ಗೆ ನೀವೇಕೆ ಮಾತಾಡಿಲ್ಲ? ಅದರಲ್ಲಿ ಅಂತಹ ವಿಶೇಷ ಏನಿದೆ? ಅವರನ್ನೆಲ್ಲ ನಂಬಿಸಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತು ನಾನು ಅಪರಾಧ ಮಾಡಿದ್ದೇನೆ ಅಂತ ಈಗ ಅನ್ನಿಸುತ್ತಿದೆ ಎಂದು ಹೇಳಿದ್ದರು.

    ಸಿಎಂ ಅವರ ಈ ಆಡಿಯೋ ಅಕ್ಟೋಬರ್ 31ರಂದು ಲೀಕ್ ಆಗಿದ್ದು, ದೇಶದ್ಯಾಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ ಕಾಂಗ್ರೆಸ್ ಕೂಡ ಈ ಸಂಬಂಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಆಡಿಯೋವನ್ನು ಸಾಕ್ಷ್ಯವಾಗಿ ಪರಿಗಣಿಸಲಾಗುವುದು ಎಂದು ಮಂಗಳವಾರ ಹೇಳಿತ್ತು.

  • ರಾಜೀನಾಮೆ ಕೊಡೋಕೆ ಹೇಳಿದ್ದೇ ಬಿಎಸ್‌ವೈ- ಸ್ಫೋಟಕ ರಹಸ್ಯ ಬಿಚ್ಚಿಟ್ಟ ನಾರಾಯಣಗೌಡ

    ರಾಜೀನಾಮೆ ಕೊಡೋಕೆ ಹೇಳಿದ್ದೇ ಬಿಎಸ್‌ವೈ- ಸ್ಫೋಟಕ ರಹಸ್ಯ ಬಿಚ್ಚಿಟ್ಟ ನಾರಾಯಣಗೌಡ

    – ಹಿರಿಯ ಮಗಳು ಅಕೌಂಟಿಗೆ 2 ಲಕ್ಷ ಹಾಕ್ತಿದ್ದಾಳೆ

    ಮಂಡ್ಯ: ಅನರ್ಹ ಶಾಸಕರಿಗೆ ಸಂಬಂಧಿಸಿದಂತೆ ಬಿಎಸ್‌ವೈ ಮಾತನಾಡಿದ್ದ ಆಡಿಯೋ ಇದೀಗ ಭಾರೀ ಸದ್ದು ಮಾಡುತ್ತಿದೆ. ಈ ಮಧ್ಯೆ ಕಾಂಗ್ರೆಸ್ ಹಾಗೂ ಜೆಡಿಎಸ್ 17 ಮಂದಿ ಶಾಸಕರು ರಾಜೀನಾಮೆ ಕೊಟ್ಟಿರುವ ಅಸಲಿ ಕಾರಣವನ್ನು ಅನರ್ಹ ಶಾಸಕ ನಾರಾಯಣಗೌಡ ಬಿಚ್ಚಿಟ್ಟಿದ್ದಾರೆ.

    ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ನನ್ನನ್ನು ಯಡಿಯೂರಪ್ಪ ಮನೆಗೆ ಕರೆದೊಯ್ದಿದ್ದರು. ಆಗ ಬಿಎಸ್‌ವೈ ಅವರು ಏನಪ್ಪ ಸಿಎಂ ಆಗೋ ಚಾನ್ಸ್ ಇದೆ ಬೆಂಬಲಿಸ್ತೀಯಾ ಅಂತ ಕೇಳಿದರು. ಅಲ್ಲದೆ ನನ್ನ ತಂದೆ ವೀರಭದ್ರ ಸ್ವಾಮಿ ಪೂಜೆ ಮಾಡಿಕೊಂಡು ಬೆಳೆಸಿದ್ದಾರೆ. ಆದರೆ ಕೆಆರ್‌ಪೇಟೆ ಅಭಿವೃದ್ಧಿಯಾಗಿಲ್ಲ. ಈಗಲೂ ಕನಸಲ್ಲಿ ಬಂದು ಕಾಡ್ತಿದ್ದಾರೆ. ನೀನು ಕೈ ಜೋಡಿಸಿದರೆ ಕೆಆರ್‌ಪೇಟೆ ಅಭಿವೃದ್ಧಿ ಮಾಡೋಣ. ಏನಂತೀಯಾ ಎಂದು ಯಡಿಯೂರಪ್ಪ ನನ್ನನ್ನು ಕೇಳಿದ್ದರು. ಅದಕ್ಕೆ ನಾನು ತಾಲೂಕಿನ ಅಭಿವೃದ್ಧಿಗೆ 700 ಕೋಟಿ ಕೇಳಿದ್ದೆ. ಆದರೆ ಯಡಿಯೂರಪ್ಪನವರು ಸಾವಿರ ಕೋಟಿ ಕೊಡುವುದಾಗಿ ಹೇಳಿದ್ದರು ಎಂದು ಸ್ಫೋಟಕ ಸತ್ಯವನ್ನು ಬಯಲು ಮಾಡಿದರು.

    ರೇವಣ್ಣಗೆ ಟಾಂಗ್:
    ಇದೇ ವೇಳೆ, ರೇವಣ್ಣ ಸಾಹೇಬರು ಹೇಳ್ತಾರೆ ಎಂಜಲು ಲೋಟ ತೊಳೆಯೋನು ಅಂತ. ನನಗೆ ಅದೇ ಆಶೀರ್ವಾದ ಮಾಡಿರೋದು. ಎಂಜಲು ತೊಳಿಯೋದಕ್ಕಿಂತ ಪುಣ್ಯ ಕೆಲಸ ಇನ್ನೊಂದಿಲ್ಲ. ಎಂಜಲು ಎತ್ತೋಕೆ ಸುಲಭವಾಗಿ ಸಿಗಲ್ಲ. ನನಗೆ ಇದೇ ಶಕ್ತಿ ಕೊಡಲಿ. ಸದಾ ನಾನು ಸೇವಕನಾಗಿ, ಲಕ್ಷಾಂತರ ಜನರಿಗೆ ಅನ್ನದಾನ ಮಾಡಿ ಎಂಜಲು ಎತ್ತುತ್ತೇನೆ ಎಂದು ಹೇಳುವ ಮೂಲಕ ರೇವಣ್ಣಗೆ ಟಾಂಗ್ ನೀಡಿದರು.

    ದಳಪತಿಗಳಿಗೆ ಸವಾಲು:
    ಕೆಆರ್‌ಪೇಟೆಗೆ ರಾಜಕೀಯ ಮಾಡಲು ನೀವು ಬರುತ್ತಿದ್ದೀರಾ. ನಾನು ನನ್ನ ಅರ್ಧ ಆಸ್ತಿಯನ್ನು ನನ್ನ ಕ್ಷೇತ್ರಕ್ಕೆ ಬರೆದು ಕೊಡುತ್ತೇನೆ. ನೀವು ನಿಮ್ಮ ಅರ್ಧ ಆಸ್ತಿಯನ್ನು ಬರೆದುಕೊಡಿ ಎಂದು ನಾರಾಯಣಗೌಡರು ದಳಪತಿಗಳಿಗೆ ಸವಾಲು ಹಾಕಿದರು.

    ಸುಮ್ಮನೆ ನಾರಾಯಣಗೌಡ ಗೆದ್ದರು, ಸೋತರೂ ಮುಂಬೈಗೆ ಹೋಗುತ್ತಾನೆ ಅಂತಾರೆ. ನಾನು ಹೋದರೂ ನನ್ನ ಹೊಟ್ಟೆ ಪಾಡಿಗೆ ಹೋಗೋದು. ನನಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಒಬ್ಬಳು ಮದುವೆಯಾಗಿದ್ದಾಳೆ. ಇನ್ನೊಬ್ಬಳು ಉನ್ನತ ವ್ಯಾಸಂಗ ಮಾಡುತ್ತಿದ್ದಾಳೆ. ನನ್ನ ಹಿರಿಯ ಮಗಳು ನನ್ನ ಅಕೌಂಟ್‌ಗೆ 2 ಲಕ್ಷ ಹಾಕುತ್ತಿದ್ದಾಳೆ. ನನಗೆ ಇನ್ನೇನು ಬೇಕು ಹೇಳಿ ಎಂದರು.

  • ಯಾರ ಜೊತೆಗೂ ಹೊಂದಾಣಿಕೆ ಮಾಡಿಕೊಳ್ಳಲ್ಲ- ಬಿಎಸ್‍ವೈ

    ಯಾರ ಜೊತೆಗೂ ಹೊಂದಾಣಿಕೆ ಮಾಡಿಕೊಳ್ಳಲ್ಲ- ಬಿಎಸ್‍ವೈ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಬಿಜೆಪಿ ಜೊತೆ ಸಾಫ್ಟ್ ಕಾರ್ನರ್ ಆಗಿದ್ದು, ಇದೀಗ ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ. ಆದರೆ ಇತ್ತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಾತ್ರ ಯಾರ ಜೊತೆಗೂ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

    ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 100 ದಿನವಾದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿಯ ನೇರ ಸಂದರ್ಶನದಲ್ಲಿ ಮಾತನಾಡಿದ ಸಿಎಂ, ನನಗೆ ಯಾರೂ ಶತ್ರುಗಳಿಲ್ಲ. ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷವಾಗಿ ಎಲ್ಲರ ಹಿತ ಕಾಯಬೇಕು. ಎಲ್ಲರ ಪರವಾಗಿ ಕೆಲಸ ಮಾಡಬೇಕು. ಅದು ನನ್ನ ಕರ್ತವ್ಯವಾಗಿದ್ದು, ನಾನು ಮಾಡುತ್ತಿದ್ದೇನೆ ಎಂದರು.

    ವಿರೋಧ ಪಕ್ಷವಾಗಿ ಸಂದರ್ಭಕ್ಕೆ ಅನುಕೂಲಕರವಾಗಿ ಅವರವರದ್ದೇ ಆದಂತಹ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ. ಅದಕ್ಕೆ ನಾವು ವಿರೋಧ ಮಾಡಲು ಆಗಲ್ಲ ಎಂದು ತಿಳಿಸಿದರು.

    ಜೆಡಿಎಸ್ ಜೊತೆ ಮುಂದೆ ಹೊಂದಾಣಿಕೆ ಮಾಡಿಕೊಳ್ಳಲ್ಲ ಎಂಬುದನ್ನು ಜನ ಹೇಗೆ ನಂಬಬೇಕು ಅನ್ನೋ ಪ್ರಶ್ನೆಗೆ ಉತ್ತರಿಸಿದ ಸಿಎಂ, ಯಾರ ಜೊತೆಗೂ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆ ಇಲ್ಲ. ಡಿಸೆಂಬರ್ 9ರ ಫಲಿತಾಂಶ ಬಂದ ಬಳಿಕ ನಾನು ಯಾವ ರೀತಿ ಮುಂದೆ ಹೆಜ್ಜೆ ಇಡುತ್ತೇನೆ ಎಂದು ನಿಮಗೇ ಅರ್ಥವಾಗುತ್ತದೆ ಎಂದರು.

  • ಅಧ್ಯಕ್ಷ ಕಟೀಲ್ ಜೊತೆಗಿನ ಸಮನ್ವಯತೆಯ ಸೂತ್ರ ಬಿಚ್ಚಿಟ್ಟ ಬಿಎಸ್‍ವೈ

    ಅಧ್ಯಕ್ಷ ಕಟೀಲ್ ಜೊತೆಗಿನ ಸಮನ್ವಯತೆಯ ಸೂತ್ರ ಬಿಚ್ಚಿಟ್ಟ ಬಿಎಸ್‍ವೈ

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನಳಿನ್ ಕುಮಾರ್ ಕಟೀಲ್ ಅವರನ್ನು ಹೈಕಮಾಂಡ್ ಆಯ್ಕೆ ಮಾಡಿದ ಬಳಿಕ ಬಿಎಸ್‍ವೈ ಹಾಗೂ ನಳಿನ್ ಮಧ್ಯೆ ವೈಮನಸ್ಸು ಇದೆ ಎಂಬ ಮಾತುಗಳು ಕೇಳಿಬರುತ್ತಿತ್ತು. ಆದರೆ ನಾವಿಬ್ಬರೂ ಫ್ರೆಂಡ್ಸ್. ಇಬ್ಬರೂ ಸರ್ಕಾರ ಹಾಗೂ ಪಕ್ಷದ ಕುರಿತು ಚರ್ಚೆ ನಡೆಸಿಯೇ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳುವ ಮೂಲಕ ಅಂತೆಕಂತೆಗಳಿಗೆ ಬಿಎಸ್‍ವೈ ತೆರೆ ಎಳೆದಿದ್ದಾರೆ.

    ಬಿಜೆಪಿ ಸರ್ಕಾರ ಇಂದಿಗೆ 100 ದಿನ ಪೂರೈಸಿದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ನಡೆಸಿದ ಸಂದರ್ಶನದಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಪಕ್ಷ ಮತ್ತು ಸರ್ಕಾರದ ನಡುವೆ ಹೊಂದಾಣಿಕೆ ಇಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದು ಈ ವಿಚಾರಕ್ಕೆ ಸಿಎಂ ಪ್ರತಿಕ್ರಿಯಿದ್ದಾರೆ. ನಳಿನ್ ಕುಮಾರ್ ಕಟೀಲ್ ಹಾಗೂ ನಾನು ಒಟ್ಟಾಗಿ ಒಂದಾಗಿ ಕೂತು ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತಿದ್ದೇವೆ. 15 ದಿನಕ್ಕೊಮ್ಮೆ ಕೋರ್ ಕಮಿಟಿ ಸಭೆ ಕರೆದು ಅಲ್ಲಿ ಸರ್ಕಾರ ಏನು ಮಾಡುತ್ತಿದೆ? ಪಕ್ಷ ಏನು ಮಾಡುತ್ತಿದೆ ಎಂಬ ಚರ್ಚೆಗಳು ನಡೆಯುತ್ತಿವೆ ಎಂದರು.

    ಸುಮ್ನೆ ಅಲ್ಲೊಂದು ಇಲ್ಲೊಂದು ಸುದ್ದಿ ಬರುತ್ತಿರುವುದನ್ನು ಜನ ನಂಬುವ ಅಗತ್ಯವಿಲ್ಲ. ಯಾವುದೇ ಸಣ್ಣ ಭಿನ್ನಾಭಿಪ್ರಾಯವೂ ಇಲ್ಲದೆ ಅಧ್ಯಕ್ಷರು ಹಾಗೂ ನಾವು ಒಟ್ಟಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ ಎಂದು ಊಹಾಪೋಹಗಳನ್ನು ತಳ್ಳಿ ಹಾಕಿದರು.

    ಇದೇ ವೇಳೆ ಪಕ್ಷದಲ್ಲಿ ನಿಮ್ಮನ್ನು ತುಳಿಯುವಂತಹ ಪ್ರಯತ್ನವಾಗುತ್ತಿದೆ. ಅಧ್ಯಕ್ಷರು ಮತ್ತು ನಿಮ್ಮ ನಡುವೆ ಹೊಂದಾಣಿಕೆಯಿಲ್ಲ ಅಂತಾರೆ. ಪಕ್ಷದ ಕಚೇರಿಯಲ್ಲೇ ಲಿಂಗಾಯತ ಸಮುದಾಯದ ಬೆಂಬಲಿಗರನ್ನು ದೂರ ಇಡುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, ಬಿಜೆಪಿ ಕಚೇರಿಯಲ್ಲಿ ಯಾರನ್ನು ಇಟ್ಟುಕೊಳ್ಳಬೇಕು. ಯಾರನ್ನು ಇಟ್ಟುಕೊಳ್ಳಬಾರದು ಎಂಬುದು ರಾಜ್ಯದ ಅಧ್ಯಕ್ಷರ ಜವಾಬ್ದಾರಿಯಾಗಿದೆ. ನಾನು ಬಂದಾಗ ನನಗೆ ಬೇಕಾದವರನ್ನು ಇಟ್ಟುಕೊಳ್ಳುತ್ತೇನೆ. ಈ ಬಗ್ಗೆ ಜನ ಗೊಂದಲಕ್ಕೀಡಾಗುವ ಅಗತ್ಯವೇ ಇಲ್ಲ. ರಾಜ್ಯದ ಅಧ್ಯಕ್ಷರು ಹೊಸ ವ್ಯವಸ್ಥೆಯಲ್ಲಿ ಅವರಿಗೆ ಅನುಕೂಲಕರವಾದ ರೀತಿಯಲ್ಲಿ ಬೇಕಾದವರ ಮೇಲೆ ವಿಶ್ವಾಸ ಇಟ್ಟುಕೊಳ್ಳುತ್ತಾರೆ. ಯಾರನ್ನು ಬಿಟ್ಟಿದ್ದಾರೆಯೋ ಅವರಿಗೂ ಬೇರೆ ವ್ಯವಸ್ಥೆ ಮಾಡುವುದಾಗಿ ಸಿಎಂ ತಿಳಿಸಿದರು.

  • ವರ್ಷಧಾರೆ ನಡುವೆಯೂ ಉ.ಕರ್ನಾಟಕದಲ್ಲಿ ಮೋಡಬಿತ್ತನೆ – ಸಿಎಂ ಆದೇಶಕ್ಕೂ ಕಿಮ್ಮತ್ತಿಲ್ಲ

    ವರ್ಷಧಾರೆ ನಡುವೆಯೂ ಉ.ಕರ್ನಾಟಕದಲ್ಲಿ ಮೋಡಬಿತ್ತನೆ – ಸಿಎಂ ಆದೇಶಕ್ಕೂ ಕಿಮ್ಮತ್ತಿಲ್ಲ

    – 45 ಕೋಟಿಯ ವಂಚನೆ ಆರೋಪ

    ಹುಬ್ಬಳ್ಳಿ: ಭೀಕರ ಮಳೆಯ ಪ್ರವಾಹದಿಂದ ಉತ್ತರ ಕರ್ನಾಟಕ ತತ್ತರಿಸಿ ಹೋಗಿದ್ದು, ಇಂದಿಗೂ ಮಳೆರಾಯನ ಆರ್ಭಟ ನಿಂತಿಲ್ಲ. ಉತ್ತರದಲ್ಲಿ ಮಳೆಗೆ ಜನರು ತತ್ತರಿಸಿ ಹೋದರೂ ಮತ್ತಷ್ಟೂ ಮಳೆ ತರಿಸಲು ಸರ್ಕಾರ ಮುಂದಾಗಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಲ್ಲದೆ ಮೋಡ ಬಿತ್ತನೆ ನಿಲ್ಲಿಸುವಂತೆ ಸ್ವತ: ಸಿಎಂ ಬಿಎಸ್‍ವೈ ಆದೇಶಿಸಿದರೂ ಮೋಡ ಬಿತ್ತನೆ ಮುಂದುವರಿದಿದೆ. ಮಳೆಗಾಲದಲ್ಲಿ ಮೋಡ ಬಿತ್ತನೆ ಹೆಸರಿನಲ್ಲಿ 45 ಕೋಟಿ ರೂ. ಮಹಾವಂಚನೆ ನಡೆಯುತ್ತಿದೆ ಎಂಬ ಆರೋಪವೊಂದು ಕೇಳಿಬಂದಿದೆ.

    ಹೌದು. ಉತ್ತರ ಕರ್ನಾಟಕ ಸೇರಿದಂತೆ ಬರಪೀಡಿತ ಪ್ರದೇಶಗಳಲ್ಲಿ ಮೋಡಬಿತ್ತನೆ ಮೂಲಕ ಮಳೆ ತರಿಸುವ ಯೋಜನೆ ರಾಜ್ಯದಲ್ಲಿ ಸಾಕಷ್ಟು ವರ್ಷಗಳಿಂದ ನಡೆಯುತ್ತಿದೆ. ಆದರೆ ಈ ಬಾರಿ ರಾಜ್ಯದಲ್ಲಿ ಸಾಕಪ್ಪ ಸಾಕು ಅನ್ನುವಷ್ಟೂ ಮಳೆರಾಯನ ಆರ್ಭಟ ಮುಂದುವರಿದಿದೆ. ಆದಾಗ್ಯೂ, ಮೋಡಬಿತ್ತನೆ ಕಾರ್ಯ ನಡೆದಿರೋದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

    ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮೋಡ ಬಿತ್ತನೆ ಮಾಡಲು `ಕ್ಯಾತಿ ಕ್ಲೈಮೇಟ್ ಮಾಡಿಫಿಕೇಷನ್ ಕನ್ಸಲ್ಟೆಂಟ್’ ಸಂಸ್ಥೆಯು ಮೋಡ ಬಿತ್ತನೆಯ ಗುತ್ತಿಗೆ ಪಡೆದಿದೆ. ಮಾಜಿ ಸ್ಪೀಕರ್ ಕೆಬಿ ಕೋಳಿವಾಡರ ಪುತ್ರ ಪ್ರಕಾಶ್ ಕೋಳಿವಾಡರ ಈ ಕಂಪನಿ 45 ಕೋಟಿ ರೂ. ವೆಚ್ಚದಲ್ಲಿ 90 ದಿನಗಳಲ್ಲಿ 400 ಗಂಟೆ ಮೋಡ ಬಿತ್ತನೆ ಮಾಡಲು ಗುತ್ತಿಗೆ ಪಡೆದಿದೆ. ಆದರೆ ಉತ್ತರ ಕರ್ನಾಟಕದಲ್ಲಿ ಇನ್ನೂ ಭಾರೀ ಮಳೆ ಮುಂದುವರಿದಿರುವುದರಿಂದ ಮೋಡ ಬಿತ್ತನೆ ನಿಲ್ಲಿಸುವಂತೆ ಸಚಿವ ಜಗದೀಶ್ ಶೆಟ್ಟರ್, ಸಿಎಂ ಬಿಎಸ್‍ವೈಗೆ ಮನವಿ ಮಾಡಿದ್ದಾರೆ. ಶೆಟ್ಟರ್ ಮನವಿಯಂತೆ ಸಿಎಂ ಬಿಎಸ್‍ವೈ ಸಹ ಮೋಡಬಿತ್ತನೆ ನಿಲ್ಲಿಸುವಂತೆ ಆದೇಶಿಸಿದ್ದರು. ಆದರೂ ಮೋಡ ಬಿತ್ತನೆ ಮಾತ್ರ ನಿಂತಿಲ್ಲ.

    ಮಹಾಪ್ರವಾಹದ ನಂತರ ಉತ್ತರ ಕರ್ನಾಟಕದಲ್ಲಿ ಇನ್ನೂ ಮಳೆ ಮುಂದುವರಿದಿದೆ. ಆದರೂ ಅತಿವೃಷ್ಟಿಯ ನಡುವೆಯೂ ಉತ್ತರ ಕರ್ನಾಟಕದ ವಿವಿಧೆಡೆ ಇನ್ನೂ ಮೋಡಬಿತ್ತನೆ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ಸೆಪ್ಟೆಂಬರ್ 19 ರಂದು ಜಮಖಂಡಿ, ಬೀಳಗಿ, ವಿಜಯಪುರ, ಇಂಡಿ ಭಾಗದಲ್ಲಿ ಮೋಡ ಬಿತ್ತನೆ ನಡೆಸಲಾಗಿದೆ. ಅಕ್ಟೋಬರ್ 28ರವರೆಗೆ ಮೋಡಬಿತ್ತನೆ ಕಾರ್ಯ ಮುಂದುವರಿಯಲಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಈಗಾಗಲೇ 194 ಗಂಟೆಗಳ ಕಾಲ ಮೋಡ ಬಿತ್ತನೆ ಮಾಡಲಾಗಿದ್ರೂ, ಇದೀಗ ಮಳೆಗಾಲದಲ್ಲೂ ಮೋಡಬಿತ್ತನೆ ಮುಂದುವರಿದಿರುದನ್ನ ನೋಡಿದರೆ 90 ದಿನಗಳ ಅವಧಿಯಲ್ಲಿ 400 ಗಂಟೆ ಮೋಡಬಿತ್ತನೆಯ ಕೋಟಾ ಮುಗಿಸಿ 45 ಕೋಟಿ ರೂಪಾಯಿ ಬಾಚಿಕೊಳ್ಳಲು ಗುತ್ತಿಗೆ ಪಡೆದ ಸಂಸ್ಥೆ ಹವಣಿಸುತ್ತಿದೆ ಎನ್ನಲಾಗಿದೆ. ಜೊತೆಗೆ ಮೋಡಬಿತ್ತನೆಯಿಂದಲೇ ಮಳೆಯಾಯ್ತು ಅನ್ನೋ ಬಿರುದನ್ನ ಪಡೆಯಲು ಗುತ್ತಿಗೆ ಸಂಸ್ಥೆ ಮುಂದಾಗಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

    ಈ ಬಗ್ಗೆ ಗುತ್ತಿಗೆದಾರ ಪ್ರಕಾಶ್ ಕೋಳಿವಾಡ ಅವರನ್ನು ಕೇಳಿದಾಗ, ಕರ್ನಾಟಕ-ಮಹಾರಾಷ್ಟ್ರ ಸರ್ಕಾರದ ಅಗ್ರಿಮೆಂಟ್ ಇದೆ. ಮೂರು ಸರ್ಕಾರಗಳ ಜೊತೆ ಅಗ್ರಿಮೆಂಟ್ ಇದೆ. ಅಗ್ರಿಮೆಂಟ್ ಪ್ರಕಾರ ನಾನು ಗುತ್ತಿಗೆದಾರನಾಗಿ ಪ್ರೆಸ್ ಜೊತೆ ಮಾತನಾಡಬಾರದು. ನೀವೂ ಚೀಫ್ ಎಂಜಿನಿಯರ್ ಜೊತೆ ಮಾತನಾಡಿ. ನಾನು ಪೇಪರ್, ಟಿವಿ ಜೊತೆ ಮಾತನಾಡಬಾರದು ಅಂತ ಸಹಿ ಮಾಡಿಸಿಕೊಂಡಿದ್ದಾರೆ. ನೀವೂ ಅವರ ಜೊತೆ ಮಾತನಾಡಿ. ಚೀಫ್ ಇಂಜಿನಿಯರ್ ಪ್ರಕಾಶ್ ಅಂತ ಇದ್ದಾರೆ. ಅವರ ಜೊತೆ ಮಾತನಾಡಿ ಎಂದು ಹೇಳಿದ್ದಾರೆ.

    ಒಟ್ಟಿನಲ್ಲಿ ಮಳೆ ನಡುವೆಯೂ ಮೋಡ ಬಿತ್ತನೆ ಮಾಡುತ್ತಿರೋದು ಹಾಗೂ ಸಿಎಂ ಬಿಎಸ್‍ವೈ ಆದೇಶದ ನಂತರವೂ ಮೊಡ ಬಿತ್ತನೆ ಮುಂದುವರಿದಿರುವುದನ್ನ ನೋಡಿದರೆ ಗುತ್ತಿಗೆದಾರರು ಗುತ್ತಿಗೆ ಹಣ ಪಡೆಯಲು ಮುಂದುವರಿಸಿದ್ದಾರೆ ಅನ್ನೋ ಆರೋಪಗಳು ಕೇಳಿಬರುತ್ತಿದೆ.

  • ಕೇಂದ್ರದ ಪರಿಹಾರ ಬಕಾಸುರನ ಹೊಟ್ಟೆಗೆ ಮೂರು ಕಾಸಿನ ಮಜ್ಜಿಗೆ: ಸಿದ್ದರಾಮಯ್ಯ

    ಕೇಂದ್ರದ ಪರಿಹಾರ ಬಕಾಸುರನ ಹೊಟ್ಟೆಗೆ ಮೂರು ಕಾಸಿನ ಮಜ್ಜಿಗೆ: ಸಿದ್ದರಾಮಯ್ಯ

    – ಬಿಎಸ್‍ವೈಗೆ ಹಣಕಾಸಿನ ಜ್ಞಾನವಿಲ್ಲ

    ಮಂಗಳೂರು: ಕೇಂದ್ರದ ಪರಿಹಾರ ಬಕಾಸುರನ ಹೊಟ್ಟೆಗೆ ಮೂರು ಕಾಸಿನ ಮಜ್ಜಿಗೆ ಎಂದು ಕೇಂದ್ರ ಸರ್ಕಾರದ ನೆರೆ ಪರಿಹಾರದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 1 ಲಕ್ಷ ಕೋಟಿ ರೂ. ನಷ್ಟವಾಗಿದ್ದು 2.5 ಲಕ್ಷ ಮನೆ ನಾಶವಾಗಿದೆ. ಎರಡು ತಿಂಗಳ ನಂತರ 1,200 ಕೋಟಿ ಬಿಡುಗಡೆ ಮಾಡಿದ್ದಾರೆ. ಕನಿಷ್ಠ 5 ಸಾವಿರ ಕೋಟಿ ಬಿಡುಗಡೆ ಮಾಡಬೇಕಾಗಿತ್ತು. ಇವರು ಬಿಡುಗಡೆ ಮಾಡಿದ ಹಣ ಬಕಾಸುರನ ಹೊಟ್ಟೆಗೆ 3 ಕಾಸಿನ ಮಜ್ಜಿಗೆ ರೀತಿಯಲ್ಲಿ ಇದೆ ಎಂದು ಹೇಳಿದರು.

    ಕೇಂದ್ರ ಸರ್ಕಾರದಲ್ಲಿ ಖಜಾನೆ ಖಾಲಿಯಾಗಿದೆ. ಅದ್ದರಿಂದ ರಾಜ್ಯ ಸರ್ಕಾರದ ಖಜಾನೆಯಿಂದ ಖರ್ಚು ಮಾಡಬೇಕಿದೆ. ಯಡಿಯೂರಪ್ಪ ಪೆದ್ದು ಪೆದ್ದಾಗಿ ಹೇಳಿಕೆ ನೀಡುತ್ತಿದ್ದಾರೆ. ಸರಿಯಾಗಿ ತೆರಿಗೆ ವಸೂಲಿ ಮಾಡಿದರೆ ಹಣಕಾಸಿನ ಸಮಸ್ಯೆ ಆಗುವುದಿಲ್ಲ. ಯಡಿಯೂರಪ್ಪ ತಂತಿ ಮೇಲೆ ನಡಿಯೋದು ಬೇಡ. ವಯಸ್ಸಾಗಿದೆ ಬಿದ್ದರೆ ತುಂಬಾ ಕಷ್ಟ ಆಗುತ್ತೆ. ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ. 2020ಕ್ಕೆ ರಾಜ್ಯದಲ್ಲಿ ಚುನಾವಣೆ ನಡೆಯುತ್ತದೆ ಎಂದು ತಿಳಿಸಿದರು.

    ರಾಜ್ಯದಲ್ಲಿ ಪ್ರವಾಹಕ್ಕೆ ತುಂಬಾ ನಷ್ಟವಾಗಿದೆ. ಪ್ರಾರ್ಥಮಿಕ ಹಂತದಲ್ಲಿ 5 ಸಾವಿರ ಕೋಟಿ ಬಿಡುಗಡೆ ಮಾಡಬೇಕಿತ್ತು. ಈಗ ಕೇಂದ್ರ ಸರ್ಕಾರ 1,200 ಕೋಟಿ ಕೊಟ್ಟಿದ್ದು ಎಲ್ಲಿಗೂ ಸಾಕಾಗುವುದಿಲ್ಲ. ಕೇಂದ್ರ ಸರ್ಕಾರ ಇನ್ನೂ ಹೆಚ್ಚಿನ ಹಣ ಬಿಡುಗಡೆ ಮಾಡಬೇಕು. ರಾಜ್ಯದಲ್ಲಿ ಬೊಕ್ಕಸ ಖಾಲಿಯಾಗಿದೆ ಎನ್ನುವುದಕ್ಕೆ ಅರ್ಥ ಇಲ್ಲ. ಯಡಿಯೂರಪ್ಪಗೆ ಹಣಕಾಸಿನ ಜ್ಞಾನ ಇಲ್ಲ. ಜನ ತೆರಿಗೆ ಕಟ್ಟೋದಿಲ್ವಾ? ಪ್ರತಿ ತಿಂಗಳು ತೆರಿಗೆ ಸಂಗ್ರಹ ಆಗುತ್ತಿಲ್ಲವೇ? ಬೊಕ್ಕಸ ಖಾಲಿಯಂದ್ರೆ ತೆರಿಗೆ ಸಂಗ್ರಹವಾಗುತ್ತಿಲ್ಲ ಎಂದರ್ಥ ಎಂದು ಬಿಎಸ್‍ವೈ ಅವರನ್ನು ಟೀಕೆ ಮಾಡಿದರು.

    ಇದೇ ವೇಳೆ ಮೋದಿಯನ್ನ ಪ್ರಶ್ನೆ ಮಾಡಿದ್ದಕ್ಕೆ ದೇಶದ್ರೋಹಿ ಎಂಬ ಟೀಕೆ ವಿಚಾರವಾಗಿ ಮಾತನಾಡಿದ ಅವರು, ಇದು ಸರ್ವಾಧಿಕಾರಿ ಸರ್ಕಾರದ ಲಕ್ಷಣ. ಜರ್ಮನಿಯಲ್ಲಿ ಹಿಟ್ಲರ್ ಕೂಡ ಇದೇ ನೀತಿ ಅನುಸರಿಸಿದ್ದ. ಯಾರಾದರೂ ಅವನನ್ನು ಪ್ರಶ್ನೆ ಮಾಡಿದರೆ ಕೇಸು ಹಾಕಿಸಿ ಬಂಧಿಸುತ್ತಿದ್ದ. ಹಿಟ್ಲರ್ ಕಾಲದಲ್ಲೂ ವಿರೋಧಿಗಳಿಗೆ ದೇಶದ್ರೋಹಿ ಪಟ್ಟ ಕಟ್ಟುತ್ತಿದ್ದರು. ಈಗ ಮೋದಿ ಸರ್ಕಾರವೂ ಅದನ್ನೇ ಮಾಡುತ್ತಿದೆ ಎಂದು ಮೋದಿ ವಿರುದ್ಧ ಆಕ್ರೋಶ ಹೊರಹಾಕಿದರು.

  • 148 ಕೋಟಿ ವೆಚ್ಚದಲ್ಲಿ ಸಿದ್ಧಪಡಿಸಿದ ವರದಿಗೆ ಎಳ್ಳು ನೀರು ಬಿಟ್ಟ ಬಿಎಸ್‍ವೈ ಸರ್ಕಾರ?

    148 ಕೋಟಿ ವೆಚ್ಚದಲ್ಲಿ ಸಿದ್ಧಪಡಿಸಿದ ವರದಿಗೆ ಎಳ್ಳು ನೀರು ಬಿಟ್ಟ ಬಿಎಸ್‍ವೈ ಸರ್ಕಾರ?

    ಬೆಂಗಳೂರು: ಸಾಮಾಜಿಕ ಹಾಗೂ ಶೈಕ್ಷಣಿಕ ವರದಿಗೆ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಎಳ್ಳು ನೀರು ಬಿಡಲು ಮುಂದಾಗಿದೆ.

    ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರ ಗಣತಿ ಮಾಡಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರದಿಂದ ಕಾಂತರಾಜು ನೇತೃದಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಕಾಂತರಾಜು ನೇತೃತ್ವದ ಸಮೀತಿ ಸತತ ನಾಲ್ಕು ವರ್ಷಗಳ ಸ್ಟಡಿ ಮಾಡಿ ವರದಿ ಸಿದ್ಧಪಡಿಸಿದೆ.

    ಬರೋಬ್ಬರಿ 148 ಕೋಟಿ ವೆಚ್ಚದಲ್ಲಿ ಸಿದ್ಧಪಡಿಸಿರುವ ವರದಿಯನ್ನು ಬಿಜೆಪಿ ಸರ್ಕಾರ ಕಸದ ಬುಟ್ಟಿಗೆ ಹಾಕಲು ರೆಡಿಯಾಗಿದೆ. ಸಿದ್ಧಗೊಂಡಿರುವ ವರದಿಯನ್ನು ಸರ್ಕಾರ ಪಡೆದು ಜಾರಿಗೊಳಿಸಿದರೆ ಎಲ್ಲಾ ಜಾತಿ ಅವರಿಗೂ ಅನುಕೂಲವಾಗಲಿದೆ ಎಂದು ಹಿಂದುಳಿದ ಆಯೋಗದ ಚೇರ್ಮೆನ್ ಎಂ.ಹೆಚ್ ಕಾಂತರಾಜು ಪಬ್ಲಿಕ್ ಟಿವಿಗೆ ತಿಳಿಸಿದರು.

  • ಡಿಕೆಶಿಯ ಮಾನನಷ್ಟ ಮೊಕದ್ದಮೆ ಬಗ್ಗೆ  ಕೋರ್ಟಿನಲ್ಲಿ ಉತ್ತರ ನೀಡುತ್ತೇನೆ: ಯತ್ನಾಳ್

    ಡಿಕೆಶಿಯ ಮಾನನಷ್ಟ ಮೊಕದ್ದಮೆ ಬಗ್ಗೆ ಕೋರ್ಟಿನಲ್ಲಿ ಉತ್ತರ ನೀಡುತ್ತೇನೆ: ಯತ್ನಾಳ್

    -ಕರ್ನಾಟಕದ ಬ್ರಹ್ಮ ಸಿಎಂ ಬಿಎಸ್‍ವೈ

    ವಿಜಯಪುರ: ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕನಕಪುರ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದು, 204 ಕೋಟಿ ಮೊತ್ತದ ಪರಿಹಾರ ಕೋರಿದ್ದಾರೆ. ಈ ವಿಚಾರಕ್ಕೆ ಪತ್ರಿಕ್ರಿಯಿಸಿರುವ ಯತ್ಮಾಳ್ ಇದರ ಬಗ್ಗೆ ಕೋರ್ಟ್ ನಲ್ಲಿ ಉತ್ತರ ನೀಡುತ್ತೇನೆ ಎಂದು ಹೇಳಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರ ಮಾನನಷ್ಟ ಮೊಕದ್ದಮೆ ಬಗ್ಗೆ ನಾನು ಮಾತನಾಡುವುದಿಲ್ಲ. ಅದು ಕೋರ್ಟ್ ನಲ್ಲಿರುವ ವಿಷಯ ಈಗ ಅದರ ಬಗ್ಗೆ ಮಾತಾಡಿದರೆ ಅದು ನ್ಯಾಯಾಂಗ ನಿಂದನೆ ಆಗುತ್ತೆ ಎಂದು ಹೇಳಿದರು.

    ಇದೇ ವೇಳೆ ಕೇಂದ್ರ ಸರ್ಕಾರದಿಂದ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ 370 ಕಲಂ ರದ್ದು ಮಾಡಿರುವ ವಿಚಾರದ ಬಗ್ಗೆ ಮಾತನಾಡಿ, ಕೇಂದ್ರದ ಈ ನಿರ್ಧಾರವನ್ನು ಸ್ವಾಗತ ಮಾಡುತ್ತೇವೆ. ದೇಶದ ಜನರು ಭಾರತದ ಯಾವುದೇ ಮೂಲೆಯಲ್ಲಿ ಬೇಕಾದರೂ ಆಸ್ತಿ ಹೊಂದಲು ಅವಕಾಶ ಇರಬೇಕು ಎನ್ನುವ ಸರ್ದಾರ್ ಪಟೇಲ್ ಮತ್ತು ಶ್ಯಾಮ್ ಪ್ರಸಾದ ಮುಖರ್ಜಿ ಕನಸು ನನಸು ಮಾಡಿದ್ದಾರೆ. ನಮಗೆ ಲೋಕಸಭೆಯಲ್ಲಿ ಬಹುಮತ ಬಂದಿರುವದರಿಂದ ಭರವಸೆ ಈಡೇರಿಸಲಾಗಿದೆ. ಇವತ್ತು ಸಂಜೆ ಸಿದ್ದೇಶ್ವರ ದೇವಸ್ಥಾನ ಬಳಿ ವಿಜಯೋತ್ಸವ ಆಚರಿಸಲಾಗುವುದು ಎಂದು ತಿಳಿಸಿದರು.

    ಸಿಎಂ ಆದ ಬಳಿಕ ಬಿ.ಎಸ್ ಯೂಡಿಯೂರಪ್ಪ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಮಳೆಹಾನಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಈ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸಲಿದ್ದಾರೆ. ಜಲಾವೃತ ಗೊಂಡಿರುವ ಹಳ್ಳಿಗಳ ಜನರಿಗೆ ಸೂಕ್ತ ಸೌಲಭ್ಯ ಒದಗಿಸುವ ಕೆಲಸ ಸಿಎಂ ಮಾಡಲಿದ್ದಾರೆ ಎಂದು ಯತ್ನಾಳ್ ಭರವಸೆ ನೀಡಿದರು.

    ಸಿಎಂ ಏಕಾಂಗಿ ಸಂಚಾರ ಹಾಗೂ ಒನ್ ಮ್ಯಾನ್ ಶೋ ವಿಚಾರವಾಗಿ ಮಾತನಾಡಿ, ಕೇಂದ್ರದ ನಾಯಕರ ಜೊತೆಗೆ ಚರ್ಚಿಸಿ ಸಿಎಂ ಖಾತೆ ಹಂಚಿಕೆ ಮಾಡುತ್ತಾರೆ. ಬ್ರಹ್ಮ ಇದ್ರೆ ಸೃಷ್ಠಿಕರ್ತ ಇದ್ದಂತೆ ಹಾಗೆಯೇ ಸಿಎಂ ಬಿಎಸ್‍ವೈ ಕೂಡ ಬ್ರಹ್ಮ. ಸೃಷ್ಠಿಯ ಸೃಷ್ಠಿಕರ್ತ ಬ್ರಹ್ಮ, ಹಾಗೆ ಕರ್ನಾಟಕದ ಬ್ರಹ್ಮ ಸಿಎಂ ಬಿಎಸ್‍ವೈ. ಮುಖ್ಯಮಂತ್ರಿಯೇ ಕರ್ನಾಟಕದ ನಂಬರ್ ಒನ್ ಆಗಿರುತ್ತಾರೆ. ಅವರ ಅಡಿಯಲ್ಲೇ ಎಲ್ಲ ಮಂತ್ರಿಗಳು ಇರುತ್ತಾರೆ. ಹಾಗಾಗಿ ಶಾಸಕರುಗಳಿಗೆ ಮಂತ್ರಿಯಾಗುವ ಗಡಿಬಿಡಿ ಇಲ್ಲ. ಎಲ್ಲ ಇಲಾಖೆಗಳು ಸಿಎಂ ಅಡಿಯಲ್ಲೇ ಇರುವುದರಿಂದ ಅತಿವೃಷ್ಠಿಯ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.