Tag: BSY

  • ಯಡಿಯೂರಪ್ಪ, ಶೋಭಾ, ಸದಾನಂದ ಗೌಡರಿಂದ ಹಿಂದೂ ಕಾರ್ಯಕರ್ತರ ಕೊಲೆ:ಶ್ರೀರಾಮುಲು ಎಡವಟ್ಟು

    ಯಡಿಯೂರಪ್ಪ, ಶೋಭಾ, ಸದಾನಂದ ಗೌಡರಿಂದ ಹಿಂದೂ ಕಾರ್ಯಕರ್ತರ ಕೊಲೆ:ಶ್ರೀರಾಮುಲು ಎಡವಟ್ಟು

    ಮಂಗಳೂರು: ಬಿಜೆಪಿ ನಾಯಕರಿಂದ ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ ಎಂದು ಹೇಳುವ ಮೂಲಕ ಬಳ್ಳಾರಿ ಸಂಸದ ಬಿ. ಶ್ರೀರಾಮುಲು ಎಡವಟ್ಟು ಮಾಡಿಕೊಂಡಿದ್ದಾರೆ.

    ಇಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಏರ್ಪಡಿಸಲಾಗಿದ್ದ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿದ ಸಂಸದ ಶ್ರೀರಾಮುಲು, ಮೊನ್ನೆ ಮೊನ್ನೆ ಶೋಭಾ ಕರಂದ್ಲಾಜೆ, ಬಿ.ಎಸ್ ಯಡಿಯೂರಪ್ಪ ಮತ್ತು ಸದಾನಂದ ಗೌಡ ಅವರು ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡುವಂತಹ ಕೆಲಸ ಮಾಡಿದರು. ಇದನ್ನು ನೀವೆಲ್ಲರೂ ನೋಡಿದ್ದೀರಿ ಎಂದು ಹೇಳಿದ್ದಾರೆ.

    ಕರಾವಳಿಯ ಕೊಲೆ ರಾಜಕೀಯದ ಬಗ್ಗೆ ಮಾತನಾಡುವ ಭಾಷಣ ಮಾಡುವ ಮಾತಿನ ಭರದಲ್ಲಿ ಸಂಸದ ಶ್ರೀ ರಾಮುಲು ಅವರು ಏನೋ ಹೇಳಲು ಹೋಗಿ ಇನ್ನೇನೋ ಹೇಳಿಬಿಟ್ಟಿದ್ದಾರೆ. ಮರು ಕ್ಷಣವೇ ತಮ್ಮ ಹೇಳಿಕೆ ಬಗ್ಗೆ ಎಚ್ಚೆತ್ತಾ ಅವರು ಕರ್ನಾಟಕದಲ್ಲಿ ಜಾತಿ ವಿಭಜನೆ ಮಾಡುವ ಹಾಗೂ ಆರ್‍ಎಸ್‍ಎಸ್, ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಹೇಳಿದರು.

    ಸಂಸದ ಶ್ರೀ ರಾಮುಲು ಅವರ ಮಾತನ್ನು ಕೇಳಿ ವೇದಿಕೆ ಮೇಲಿದ್ದ ಬಿಜೆಪಿ ಮುಖಂಡರು ಕ್ಷಣ ಕಾಲ ಕಂಗಾಲು ಆಗಿದ್ದರು.

    https://www.youtube.com/watch?v=dwZiNKvyUug

     

  • ಬಿಜೆಪಿಯ ನವಕರ್ನಾಟಕ ಯಾತ್ರೆಗೆ ಗುರುವಾರ ಚಾಲನೆ: ಯಾತ್ರೆ ಹೇಗಿರುತ್ತೆ? ಯಾರೆಲ್ಲ ನಾಯಕರು ಭಾಗವಹಿಸ್ತಾರೆ?

    ಬಿಜೆಪಿಯ ನವಕರ್ನಾಟಕ ಯಾತ್ರೆಗೆ ಗುರುವಾರ ಚಾಲನೆ: ಯಾತ್ರೆ ಹೇಗಿರುತ್ತೆ? ಯಾರೆಲ್ಲ ನಾಯಕರು ಭಾಗವಹಿಸ್ತಾರೆ?

    ಬೆಂಗಳೂರು: ಬಿಜೆಪಿಯ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಗೆ ಗುರುವಾರ ಚಾಲನೆ ಸಿಗಲಿದ್ದು, ಬೆಂಗಳೂರು ಅಂತರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಯಾತ್ರೆಗೆ ಚಾಲನೆ ನೀಡಲಿದ್ದಾರೆ.

    ಗುರುವಾರ ಬೆಳಗ್ಗೆ 11ಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಿಐಇಸಿಗೆ ಬರಲಿರುವ ಅಮಿತ್ ಶಾ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ನಾಳೆ ನಡೆಯುವ ಬೈಕ್ ಯಾತ್ರೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸುವ ಸಾಧ್ಯತೆಯಿದೆ. ದಕ್ಷಿಣ ಕರ್ನಾಟಕ ಭಾಗದ 17 ಜಿಲ್ಲೆಗಳ 27 ಸಾವಿರ ಬೂತ್ ಗಳಿಂದ ಕಾರ್ಯಕರ್ತರು ಆಗಮಿಸಲಿದ್ದಾರೆ. ಒಂದು ಬೂತ್ ನಿಂದ ಕನಿಷ್ಠ 3 ಬೈಕ್ ಗಳಲ್ಲಿ 6 ಕಾರ್ಯರ್ತರು ಭಾಗವಹಿಸುವಂತೆ ಸೂಚನೆ ನೀಡಲಾಗಿದೆ.

    ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ 224 ಕ್ಷೇತ್ರಗಳಲ್ಲಿ 75 ದಿನಗಳ ಕಾಲ ಯಾತ್ರೆ ಸಂಚರಿಸಲಿದೆ. ಕೇರಳದ ಜನ ರಕ್ಷಾ ಯಾತ್ರೆಯ ಸ್ವರೂಪದಲ್ಲಿ ರಾಜ್ಯದಲ್ಲೂ ಯಾತ್ರೆ ನಡೆಯಲಿದೆ. ಈ ಯಾತ್ರೆಯಲ್ಲಿ ಪ್ರಯಾಣಿಸಲು ಬಿಎಸ್‍ವೈ ಅವರಿಗೆ ವಿಶೇಷವಾಗಿ ವಾಹನ ಸಿದ್ದಪಡಿಸಲಾಗಿದ್ದು, ಅದರಲ್ಲಿಯೇ ಅವರು ಪ್ರಯಾಣ ಬೆಳಸಲಿದ್ದಾರೆ. ಪ್ರತಿ ದಿನ ಸುಮಾರು ನೂರು ಕಿ.ಮೀ. ಗೂ ಹೆಚ್ಚು ಸಂಚಾರ ಮಾಡಲಿರುವ ಯಾತ್ರೆ, 25 ದಿನಗಳಲ್ಲಿ ಒಟ್ಟು ಸುಮಾರು 11 ಸಾವಿರ ಕಿ.ಮೀ. ಸುತ್ತಲಿದೆ.

    ಪರಿವರ್ತನಾ ಯಾತ್ರೆಯಲ್ಲಿ ವಾರಕ್ಕೆ ಒಬ್ಬರು ಕೇಂದ್ರದ ದಿಗ್ಗಜ್ಜರು ಭಾಗವಹಿಸಲಿದ್ದಾರೆ. ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅರುಣ್ ಜೇಟ್ಲಿ, ನಿತಿನ್ ಗಡ್ಕರಿ ಸೇರಿದಂತೆ ಕೇಂದ್ರ ಸಚಿವರ ದಂಡು ಯಾತ್ರೆಯಲ್ಲಿ ಬಂದು ಪ್ರಚಾರ ನಡೆಸಲಿದೆ. ಅಲ್ಲದೇ ಕಟು ಹಿಂದುತ್ವವಾದಿಗಳಾದ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಉಮಾಭಾರತಿ, ಸಾಧ್ವಿ ನಿರಂಜನ್ ಅವರು ಕೂಡ ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಅಷ್ಟೇ ಅಲ್ಲ ವಿವಿಧ ರಾಜ್ಯಗಳ ಬಿಜೆಪಿ ಸಿಎಂಗಳು ಕೂಡ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.

    ರಾಜ್ಯ ಸರ್ಕಾರವು ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಆಚರಣೆ ಹಿನ್ನೆಲೆ ಪರಿವರ್ತನಾ ಯಾತ್ರೆಗೆ ಅನುಮತಿ ನೀಡಿಲ್ಲ. ಹಾಗಾಗಿ ಯಾತ್ರೆ ಕೊಡಗು ಜಿಲ್ಲೆಯಲ್ಲಿ ಸಂಚಾರ ಮಾಡುವ ಸಾಧ್ಯತೆ ಕಡಿಮೆಯಿದೆ. ನಿಗದಿ ಪ್ರಕಾರ ನವೆಂಬರ್ 8 ರಂದು ಕೊಡಗು ಜಿಲ್ಲೆಗೆ ಯಾತ್ರೆ ಪ್ರವೇಶ ಮಾಡಬೇಕು. ನವೆಂಬರ್ 10, 11, 12 ಹಾಗೂ 13 ರಂದು ಮಂಗಳೂರು ಜಿಲ್ಲೆಯಲ್ಲಿ ಯಾತ್ರೆ ಸಂಚಾರ ನಡೆಯಲಿದ್ದು, ಮಂಗಳೂರಿನಲ್ಲೇ ಕೋರ್ ಕಮಿಟಿ ಸಭೆ ನಡೆಯಲಿದೆ. ಜನವರಿ 18, 2018 ರಂದು ಉಡುಪಿ ಅಷ್ಟ ಮಠ ಪರ್ಯಾಯದಲ್ಲಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಪಕ್ಷದ ಪ್ರಮುಖರು ಭಾಗವಹಿಸಲಿದ್ದಾರೆ. ಜನವರಿ 25, 2018 ರಂದು ಮೈಸೂರಿನಲ್ಲಿ ಬೃಹತ್ ಸಮಾವೇಶ ನಡೆಯಲಿದೆ.

    ಬಿಜೆಪಿಯ ಪರಿವರ್ತನಾ ಯಾತ್ರೆಯು ಅಂತಿಮವಾಗಿ ಜನವರಿ 28 ರಂದು ಬೆಂಗಳೂರಿನಲ್ಲಿ ಯಾತ್ರೆ ಅಂತ್ಯಗೊಳ್ಳಲಿದೆ. ಅಂದು ಬೆಂಗಳೂರಿನಲ್ಲಿ ಬೃಹತ್ ಸಮಾರೋಪ ಸಮಾರಂಭ ಏರ್ಪಡಿಸಲಾಗಿದ್ದು, ಸಮಾವೇಶದ ಉಸ್ತುವಾರಿ ಮಾಜಿ ಡಿಸಿಎಂ ಆರ್. ಅಶೋಕ್ ಅವರಿಗೆ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಮಾವೇಶದಲ್ಲಿ ಭಾಗವಹಿಸಲಿದ್ದು, ವಿಧಾನ ಸಭಾ ಚುನಾವಣೆಗೆ ರಣಕಹಳೆ ಮೊಳಗಿಸಲಿದ್ದಾರೆ. ಇದಕ್ಕೂ ಮುನ್ನ ಡಿಸೆಂಬರ್ 21 ರಂದು ಉತ್ತರ ಕರ್ನಾಟಕ ಭಾಗದ ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಸಾಧ್ಯತೆ ಇದೆ.

     

     

     

  • ಬಿಎಸ್‍ವೈ-ಅನಂತ್ ಕುಮಾರ್ ಸಿಡಿ ಪ್ರಕರಣ- ಸಿಎಂಗೇ ಶಾಕ್ ಕೊಟ್ಟ ಎಸಿಬಿ

    ಬಿಎಸ್‍ವೈ-ಅನಂತ್ ಕುಮಾರ್ ಸಿಡಿ ಪ್ರಕರಣ- ಸಿಎಂಗೇ ಶಾಕ್ ಕೊಟ್ಟ ಎಸಿಬಿ

    ಬೆಂಗಳೂರು: ಸಿಡಿ ಕೇಸ್ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ಎಸಿಬಿಯೇ ಶಾಕ್ ಕೊಟ್ಟ ವಿಚಾರವೊಂದು ಬೆಳಕಿಗೆ ಬಂದಿದೆ.

    ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತ್‍ಕುಮಾರ್ ಅವರು ಹೈಕಮಾಂಡ್‍ಗೆ ಕಪ್ಪ ಸಲ್ಲಿಸಿರುವ ಕುರಿತು ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಮತ್ತು ಆಡಿಯೋ ಸಂಭಾಷಣೆ ಕೇಸ್ ತೆಗೆದುಕೊಳ್ಳೊಲ್ಲ ಅಂತ ಎಸಿಬಿ ಹೇಳಿರುವುದಾಗಿ ತಿಳಿದುಬಂದಿದೆ.

    ಪ್ರಕರಣ ತೆಗೆದುಕೊಳ್ಳುವ ಮುನ್ನ ಎಸಿಬಿ ಕಾನೂನು ತಜ್ಞರ ಸಲಹೆ ಪಡೆದಿದೆ. ಈ ವೇಳೆ ಪ್ರಕರಣವನ್ನು ತೆಗೆದುಕೊಂಡ್ರೆ ತನಿಖೆ ನಡೆಸೋದಕ್ಕೆ ಸಾಕ್ಷಿಗಳ ಕೊರತೆ ಇರುವುದು ಬೆಳಕಿಗೆ ಬಂದಿದೆ. ಹೀಗಾಗಿ ಈ ಕೇಸ್ ತೆಗೆದುಕೊಳ್ಳೊದಕ್ಕೆ ಆಗೋಲ್ಲ. ಕೇಸ್ ತೆಗೆದುಕೊಂಡ್ರೆ ನಮಗೆ ಕೆಟ್ಟ ಹೆಸರು ಬರುತ್ತೆ ಅಂತ ಹೇಳಿದೆ.

    ಇದನ್ನೂ ಓದಿ: ಹೈಕಮಾಂಡ್‍ಗೆ ಕಪ್ಪ ವಿವಾದ – ಬಿಎಸ್‍ವೈ, ಅನಂತ್ ವಿರುದ್ಧ ಚಾರ್ಜ್‍ಶೀಟ್ ಸಾಧ್ಯತೆ

    ಹಣದ ಬಗ್ಗೆ ಮಾತನಾಡಿದ್ದಾರೆ ಹೊರತು, ಹಣ ಕೊಡೋದಾಗ್ಲಿ ಪಡೆದುಕೊಳ್ಳೊದಾಗ್ಲಿ ಇಲ್ಲ. ಸೈಬರ್ ಕ್ರೈಂ ಪೊಲೀಸರು ಧ್ವನಿಯ ಬಗ್ಗೆ ಮಾತ್ರ ತನಿಖೆ ನಡೆಸಿದ್ದಾರೆ. ಬೇರೆ ಯಾವ ವಿಚಾರಕ್ಕೂ ತನಿಖೆಯಾಗಿಲ್ಲ. ಪ್ರಕರಣ ತೆಗೆದುಕೊಂಡ್ರೆ ಯಾವುದೇ ಸಾಕ್ಷಿ ಸಿಕ್ಕೊಲ್ಲ ಹೆಸರು ಹಾಳಾಗುತ್ತೆ ಅನ್ನೋ ಕಾನೂನು ತಜ್ಞರಿಂದ ಸಲಹೆ ಪಡೆದ ಬಳಿಕ ಎಸಿಬಿ ಸರ್ಕಾರಕ್ಕೆ ಉಲ್ಟಾ ಹೊಡೆದಿದೆ ಎಂಬುವುದಾಗಿ ಮೂಲಗಳಿಂದ ತಿಳಿದುಬಂದಿದೆ.

    https://www.youtube.com/watch?v=t_IzZbNc9OM

     

  • ಮಾಜಿ ಶಾಸಕ ನೆಲ ನರೇಂದ್ರ ಬಾಬು, ಕಿರುತೆರೆ ನಟಿಯರು ಬಿಜೆಪಿಗೆ ಸೇರ್ಪಡೆ

    ಮಾಜಿ ಶಾಸಕ ನೆಲ ನರೇಂದ್ರ ಬಾಬು, ಕಿರುತೆರೆ ನಟಿಯರು ಬಿಜೆಪಿಗೆ ಸೇರ್ಪಡೆ

    ಬೆಂಗಳೂರು: ಮಾಜಿ ಶಾಸಕ ನೆಲ ನರೇಂದ್ರ ಬಾಬು ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದರು.

    ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನರೇಂದ್ರ ಬಾಬು ಅವರಿಗೆ ಬಾವುಟ ನೀಡಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ಅವರ ಜೊತೆಯಲ್ಲಿ ಕಿರುತೆರೆ ನಟಿಯರಾದ ಜ್ಯೋತಿ, ಆಶಾಲತಾ, ಸಂಗೀತಾ ಅವರೂ ಬಿಜೆಪಿ ಸೇರಿಕೊಂಡರು.

    ಈ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ನರೇಂದ್ರ ಬಾಬು ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ ಬಳಿಕ ಕಾಂಗ್ರೆಸ್ ಪಕ್ಷ ನನ್ನನ್ನು ನಿರ್ಲಕ್ಷಿಸಿದೆ. ಕಾಂಗ್ರೆಸ್ ನಿರ್ಲಕ್ಷ್ಯ ಧೋರಣೆಯಿಂದ ನನಗೆ ನೋವಾಗಿದೆ. ಕುತಂತ್ರ ಬುದ್ದಿ ಹಾಗೂ ಪಕ್ಷ ದ್ರೋಹಿಗಳಿಗೆ ಬೆಲೆಯಿದೆ ಹೊರತು ನನ್ನಂತಹ ನಿಷ್ಠಾವಂತ, ಪ್ರಾಮಾಣಿಕರಿಗೆ ಬೆಲೆಯಿಲ್ಲ. ಹೀಗಾಗಿ ಮುಂಬರುವ ದಿನಗಳಲ್ಲಿ ಅಧಿಕೃತವಾಗಿ ಬೇರೆ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆಂದು ತಿಳಿಸಿದ್ದರು.

    ಪಕ್ಷದಲ್ಲಿ 35 ವರ್ಷಗಳಿಂದ ಸಕ್ರಿಯ ಕಾರ್ಯಕರ್ತನಾಗಿ ದುಡಿದಿದ್ದೇನೆ. ಮೂರು ಬಾರಿ ಕಾರ್ಪೊರೇಟರ್, ಎರಡು ಬಾರಿ ಶಾಸಕನಾಗಿ ಕೆಲಸ ಮಾಡಿರುವ ನನ್ನನ್ನು ಕಾಂಗ್ರೆಸ್ ನಿರ್ಲಕ್ಷಿಸಿದೆ ಎಂದು ಹೇಳಿದರು.

    ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಮಾಜಿ ಡಿಸಿಎಂ ಆರ್ ಅಶೋಕ್, ಬಿಜೆಪಿ ಉಪಾಧ್ಯಕ್ಷ ಕೆಪಿ ನಂಜುಂಡಿ, ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಉಪಸ್ಥಿತರಿದ್ದರು.

    ಈ ವೇಳೆ ಮಾತನಾಡಿದ ಯಡಿಯೂರಪ್ಪ, ಬಿಜೆಪಿಯ ಗಾಳಿ ಕರ್ನಾಟಕದ ಉದ್ದಗಲಕ್ಕೆ ಬೀಸುತ್ತಿದೆ. ರಾಮಕೃಷ್ಣ ಹೆಗ್ಡೆಯವರ ಕಾಲದಲ್ಲಿ ಪಕ್ಷದಲ್ಲಿದ್ದ ನರೇಂದ್ರ ಬಾಬು ಕಾಂಗ್ರೆಸ್ ಪಕ್ಷಕ್ಕೆ ಹೋಗಿದ್ದರು. ಆದರೆ ಮರಳಿ ಬಿಜೆಪಿಗೆ ಪಕ್ಷಕ್ಕೆ ಆಗಮಿಸಿರುವುದಕ್ಕೆ ಸ್ವಾಗತ ಕೋರುತ್ತೇನೆ. ಅವರಿಗೆ ಸೂಕ್ತ ಸ್ಥಾನಮಾನವನ್ನು ನೀಡಿ ಪಕ್ಷ ಸಂಘಟನೆಗೆ ಬಳಸಿಕೊಳ್ಳುತ್ತೇವೆ ಎಂದು ತಿಳಿಸಿದರು.

    ಪ್ರಧಾನಿ ಕಾರ್ಯಕ್ರಮದ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ಪರ್ಯಾಯವಾಗಿ, ಸಿಎಂ ಸಿದ್ದರಾಮಯ್ಯ ಕಾಮ್ ಕಿ ಬಾತ್ ಮಾಡ್ತಿರುವುದು ಮೂರ್ಖತನದ ಪರಮಾವಧಿ ಎಂದು ವಗ್ವಾದ ನಡೆಸಿದರು.

    ಸಚಿವ ಹೆಚ್ ಆಂಜನೇಯ ಆಯುಧ ಪೂಜೆ ಬಗ್ಗೆ ಕೆಟ್ಟದಾಗಿ ಮಾತನಾಡುವ ಮೂಲಕ ಸಂಪ್ರದಾಯ, ಧರ್ಮಾಚರಣೆಗೆ ಅಪಮಾನ ಮಾಡಿದ್ದಾರೆ. ದುರಂಹಕಾರ ದರ್ಪದಿಂದ ಮಾತನಾಡುತ್ತಿರುವ ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆದು, ರಾಜ್ಯದಲ್ಲಿ ಬಿಜೆಪಿ ಅಧಿಕಾರ ತರುತ್ತೇವೆಂದು ಯಡಿಯೂರಪ್ಪ ತಿಳಿಸಿದರು.

    ನರೇಂದ್ರ ಬಾಬು ಮಾತನಾಡಿ, ಕೇಂದ್ರ ಸರ್ಕಾರ ಗಾಂಧಿ ತತ್ವಗಳನ್ನು ಜಾರಿಗೊಳಿಸುತ್ತಿದೆ. ನನ್ನನ್ನು ಕಾಯ ವಾಚ ಮನಸ ಪಕ್ಷದ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇನೆಂದು ತಿಳಿಸಿದರು.

    ಬೈಕ್ ರ್ಯಾಲಿ: ನವೆಂಬರ್ 2 ರಿಂದ ನವ ಕರ್ನಾಟಕ ಪರಿವರ್ತನಾ ಯಾತ್ರೆಯನ್ನು ಬೆಂಗಳೂರು ಮತ್ತು ಹುಬ್ಬಳ್ಳಿಗೆ ಬೃಹತ್ ಬೈಕ್ ರ್ಯಾಲಿ ನಡೆಸಲು ತೀರ್ಮಾನಿಸಲಾಯಿತು. ನವಕರ್ನಾಟಕ ಪರಿವರ್ತನಾ ಯಾತ್ರೆ ಬಗ್ಗೆ ಪ್ರಚಾರ ಕಾರ್ಯ ಕೈಗೊಳ್ಳುವ ರೀತಿ ಬಗ್ಗೆಯೂ ಚರ್ಚಿಸಲಾಯಿತು ಎಂದು ಯಡಿಯೂರಪ್ಪ ತಿಳಿಸಿದರು.

    ನವ ಕರ್ನಾಟಕ ಪರಿವರ್ತನಾ ಯಾತ್ರೆ: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ನವ ಕರ್ನಾಟಕ ಪರಿವರ್ತನಾ ಯಾತ್ರೆ ವಿಚಾರವಾಗಿ, ಬಿಜೆಪಿ ಕಚೇರಿಯಲ್ಲಿ ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಪ್ರಚಾರ ತಂಡಗಳ ಸದಸ್ಯರ ಸಭೆ ನಡೆಯಿತು. ಈ ಸಭೆಯಲ್ಲಿ ಬಿಜೆಪಿ ಉಸ್ತುವಾರಿ ಮುರುಳೀಧರ ರಾವ್, ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಅರವಿಂದ ಲಿಂಬಾವಳಿ,  ಬಿ.ಸೋಮಶೇಖರ್, ಕುಮಾರ್ ಬಂಗಾರಪ್ಪ, ಪ್ರತಾಪ್ ಸಿಂಹ ಭಾಗಿಯಾಗಿದ್ದರು.

  • ಬಿಎಸ್‍ವೈ, ಸಂತೋಷ್ ನಡುವೆ ಬಿಜೆಪಿ ಕಚೇರಿಯಲ್ಲೇ ನಡೆದಿತ್ತಾ ಗಲಾಟೆ?

    ಬಿಎಸ್‍ವೈ, ಸಂತೋಷ್ ನಡುವೆ ಬಿಜೆಪಿ ಕಚೇರಿಯಲ್ಲೇ ನಡೆದಿತ್ತಾ ಗಲಾಟೆ?

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಾಗೂ ಆರ್‍ಎಸ್‍ಎಸ್ ಸಂಘಟನಾ ಸಹ ಕಾರ್ಯದರ್ಶಿ ಸಂತೋಷ್ ನಡುವೆ ಬಿಜೆಪಿ ಕಚೇರಿಯಲ್ಲಿಯೇ ಗಲಾಟೆ ನಡೆದಿತ್ತು ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ.

    ಸೆಪ್ಟೆಂಬರ್ 16ರಂದು ಸುಮಾರು 9.30 ಗಂಟೆಗೆ ಆಗ ತಾನೇ ಬಿಎಸ್‍ವೈ ಕಚೇರಿಗೆ ಆಗಮಿಸಿದ್ದರು. ಅದಕ್ಕೂ ಮೊದಲೇ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಸಂತೋಷ್ ಕಚೇರಿಯಲ್ಲಿದ್ದರು. ಕಚೇರಿಯ ಮೂರನೇ ಮಹಡಿಯಲ್ಲಿ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಆಯೋಜಿಸಲಾಗಿತ್ತು. ಮೊದಲನೇ ಮಹಡಿಯ ರಾಜ್ಯಾಧ್ಯಕ್ಷರ ಕೊಠಡಿಯಲ್ಲಿ ಬಿಎಸ್‍ವೈ ಇದ್ದರು. ಸಂತೋಷ್ ಕೂಡ ಮೊದಲ ಮಹಡಿಯಲ್ಲಿಯೇ ಇದ್ದರು. ಆಗ ಇದ್ದಕ್ಕಿದ್ದಂತೆ ಇಬ್ಬರ ನಡುವೆ ಗಲಾಟೆ ಶುರುವಾಗಿತ್ತು.

    ಕೇಂದ್ರ ನಾಯಕರಿಗೆ ಚಾಡಿ ಹೇಳ್ತೀರಾ? ಚಾಡಿ ಹೇಳೋದನ್ನ ನಿಲ್ಲಿಸಿ. ಇನ್ನಾದ್ದರೂ ನನ್ನ ಮುಗಿಸೋ ಪ್ರಯತ್ನ ನಿಲ್ಲಿಸಿ. ನಾನು ಏನು ಅಂತಹ ಕೆಲಸ ಮಾಡಿದ್ದೀನಿ? ಸುಮ್ನೆ ಇಲ್ಲಸಲ್ಲದನ್ನ ಹೇಳಿ ಏಕೆ ಗೊಂದಲ ಸೃಷ್ಟಿಸ್ತೀರಾ ಎಂದು ಬಿಎಸ್‍ವೈ ಕೆಂಡಾಮಂಡಲರಾಗಿದ್ದರು ಎನ್ನಲಾಗಿದೆ.

    ನೀವು ಕಿರುಚಾಡೋದನ್ನ, ಅರುಚಾಡೋದನ್ನ ನಿಲ್ಲಿಸಿ. ನಾನು ಸಂಘಟನೆಗೆ ಏನು ಕೆಲಸ ಮಾಡಬೇಕು ಅದನ್ನು ಮಾಡ್ತಾ ಇದೀನಿ. ನಿಮ್ಮ ಕೆಲಸ ನಿಮಗೆ, ನನ್ನ ಕೆಲಸ ನನಗೆ ಎಂದು ಬಿಎಸ್‍ವೈಗೆ ಅಲ್ಲಿಯೇ ಸಂತೋಷ್ ತಿರುಗೇಟು ನೀಡಿ ಹೊರನಡೆದರು ಎಂದು ಹೇಳಲಾಗಿದೆ.

    ಆಗ ಇಡೀ ಕಚೇರಿಯೇ ಸ್ತಬ್ಧ ಆಗಿತ್ತು. ಬಳಿಕ ಅವತ್ತೇ ಮಧ್ಯಾಹ್ನ ನಡೆದ ಸಭೆಯಲ್ಲೂ ಸಂತೋಷ್ ಮುನಿಸಿಕೊಂಡಿದ್ದರು. ರಾಜ್ಯ ಚುನಾವಣಾ ಉಸ್ತುವಾರಿ ಜಾವ್ಡೇಕರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಂತೋಷ್ ವೇದಿಕೆಯನ್ನು ಕೂಡ ಏರಲಿಲ್ಲ. ಸಂತೋಷ್ ಅವರನ್ನು ವೇದಿಕೆಗೆ ಆಹ್ವಾನಿಸಿದರೂ ವೇದಿಕೆ ಕೆಳಗೆ ಹಿಂದಿನ ಸಾಲಿನಲ್ಲಿ ಕುಳಿತಿದ್ದರು ಎಂದು ಮೂಲಗಳು ತಿಳಿಸಿವೆ.

  • ಕೋರ್ಟ್ ಸ್ಟೇ ನೀಡದೇ ಇದ್ರೆ ಬಿಎಸ್‍ವೈ ವಿರುದ್ಧ 30 ಎಫ್‍ಐಆರ್ ಆಗ್ತಿತ್ತು: ಗೋ ಮಧುಸೂದನ್

    ಕೋರ್ಟ್ ಸ್ಟೇ ನೀಡದೇ ಇದ್ರೆ ಬಿಎಸ್‍ವೈ ವಿರುದ್ಧ 30 ಎಫ್‍ಐಆರ್ ಆಗ್ತಿತ್ತು: ಗೋ ಮಧುಸೂದನ್

    ಬೆಂಗಳೂರು: ಬಿಎಸ್ ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಹಾಕಿದ್ದ ಎಫ್‍ಐಆರ್‍ಗಳಿಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡುವ ಮೂಲಕ ಸರ್ಕಾರಕ್ಕೆ ತಪರಾಕಿ ಹಾಕಿದೆ ಎಂದು ಬಿಜೆಪಿ ವಕ್ತಾರ ಗೋ ಮಧುಸೂದನ್ ಹೇಳಿದ್ದಾರೆ.

    ಹೈಕೋರ್ಟ್ ಆದೇಶ ಪ್ರಕಟವಾದ ಬಳಿಕ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಡಿಯೂರಪ್ಪ ಅವರ ಮೇಲೆ ಒಂಂದೇ ಪ್ರಕರಣಕ್ಕೆ ಎರಡು ಎಫ್‍ಐಆರ್‍ಗಳನ್ನು ಎಸಿಬಿ ಹಾಕಿರುವುದು ಸರಿಯಲ್ಲ ಅಂತಾ ಕೋರ್ಟ್ ತಿಳಿಸಿದೆ. ಅಷ್ಟೇ ಅಲ್ಲದೇ ಇನ್ನೂ 25-30 ಎಫ್‍ಐಆರ್‍ಯನ್ನು ಬಿಎಸ್‍ವೈ ವಿರುದ್ಧ ಹಾಕುವುದು ಎಸಿಬಿನ ಉದ್ದೇಶವಾಗಿತ್ತು. ಆದರೆ ಅದಕ್ಕೆಲ್ಲಾ ಕೋರ್ಟ್ ತಡೆ ನೀಡಿದೆ ಎಂದು ಸಂತಸದಿಂದ ಹೇಳಿದರು.

    ಶಿವರಾಂ ಕಾರಂತ ಬಡಾವಣೆಗೆ ನೋಟಿಫಿಕೇಷನ್ ಆಗಿದ್ದ ಭೂಮಿಯಲ್ಲಿ ಒಂದಿಂಚೂ ಭೂಮಿಯನ್ನು ಬಿಡಿಎ ಬಿಟ್ಟುಕೊಟ್ಟಿಲ್ಲ. ಹಾಗಾಗಿ ನೊಟಿಫೈ ಆಗಿದ್ದ ಭೂಮಿ ಡಿನೊಟಿಫೈ ಆಗೇ ಇಲ್ಲ. ಆದ್ದರಿಂದ ಎಸಿಬಿ ಎಫ್‍ಐಆರ್ ಹಾಕಿರುವುದೇ ಕಾನೂನು ಬಾಹಿರವಾಗಿದೆ. ಇನ್ನೂ ಮುಂದೆ ಅವರ ವಿರುದ್ಧ ದೂರು ದಾಖಲಿಸಿಕೊಳ್ಳಲು ಎಸಿಬಿಗೆ ಅಧಿಕಾರವೇ ಇಲ್ಲ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

    ಯಡಿಯೂರಪ್ಪ ಅವರು ರಾಜ್ಯಾದ್ಯಂತ ಪ್ರವಾಸ ಮಾಡಲು ನಿರ್ಧಾರ ಮಾಡಿದ್ದರು. ಆದರೆ ಅದನ್ನು ಸಿಎಂ ಸಿದ್ದರಾಮಯ್ಯ ತಡೆಯುವ ಉದ್ದೇಶವನ್ನು ಇಟ್ಟುಕೊಂಡಿದ್ದರು. ಆದರೆ ಇಂದು ಕೋರ್ಟ್ ನೀಡಿರುವ ತೀರ್ಪಿನಿಂದಾಗಿ ಸಿಎಂಗೆ ಮುಖಭಂಗವಾಗಿದೆ ಎಂದರು.

    ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಡಾ.ಶಿವರಾಮ ಖಾರಂತ ಬಡಾವಣೆ ನಿರ್ಮಾಣಕ್ಕಾಗಿ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಬಿಡಿಎ) ವಶಪಡಿಸಿಕೊಂಡಿದ್ದ ಜಮೀನಿನಲ್ಲಿ 257 ಎಕರೆ 20.5 ಗುಂಟೆ ಜಮೀನನ್ನು ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಲು ಆದೇಶಿಸಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಎಸಿಬಿ ಎಫ್‍ಐಆರ್ ದಾಖಲಾಗಿತ್ತು.

    ಹೈಕೋರ್ಟ್ ತಡೆಯಾಜ್ಞೆ:
    ಎಫ್‍ಐಆರ್ ದಾಖಲಿಸಲು ವಿಳಂಬ ಮಾಡಲಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಆರೋಪ ಸಾಬೀತು ಮಾಡುವ ದಾಖಲೆಗಳಿಲ್ಲ ಎಂದು ಹೇಳಿ ನ್ಯಾ. ಅರವಿಂದ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ ಬಿಎಸ್‍ವೈ ವಿರುದ್ಧ ದಾಖಲಾಗಿದ್ದ ಎಫ್‍ಐಆರ್‍ಗೆ ತಡೆಯಾಜ್ಞೆ ನೀಡಿದೆ. ಡಿನೋಟಿಫೈ ಮಾಡಿ ಲಾಭ ಮಾಡಿಕೊಂಡಿರುವ ಬಗ್ಗೆ ಸೂಕ್ತ ಸಾಕ್ಷ್ಯಗಳಿಲ್ಲ. ಅಷ್ಟೇ ಅಲ್ಲದೇ ಒಂದೇ ದೂರಿನಲ್ಲಿ ಎರಡು ಎಫ್‍ಐಆರ್ ದಾಖಲಿಸುವುದು ಕಾನೂನು ಬಾಹಿರ ಎಂದು ನ್ಯಾ. ಅರವಿಂದ್ ಕುಮಾರ್ ಅಭಿಪ್ರಾಯಪಟ್ಟು ತಡೆಯಾಜ್ಞೆ ನೀಡಿದ್ದಾರೆ.

  • ಅಲ್ಲಿನೂ ಆಗೋದಿಲ್ಲ, ಇಲ್ಲಿನೂ ಆಗೋದಿಲ್ಲ, ಬಂದು ಏನ್ಮಾಡ್ತಾರೆ: ಬಿಎಸ್‍ವೈಗೆ ತಿಮ್ಮಾಪುರ ಟಾಂಗ್

    ಅಲ್ಲಿನೂ ಆಗೋದಿಲ್ಲ, ಇಲ್ಲಿನೂ ಆಗೋದಿಲ್ಲ, ಬಂದು ಏನ್ಮಾಡ್ತಾರೆ: ಬಿಎಸ್‍ವೈಗೆ ತಿಮ್ಮಾಪುರ ಟಾಂಗ್

    ಬಾಗಲಕೋಟೆ: ಶಿವಮೊಗ್ಗದಲ್ಲಿ ಆಗಲಾರದ್ದಕ್ಕೆ ಇಲ್ಲಿ ಬರ್ತಾರೆ ಅಂದ್ರೆ ಬಿಎಸ್‍ವೈ ಅವರಿಗೆ ಅಥವಾ ಕಾರ್ಯಕರ್ತರಿಗೆ ಭಯ ಆತಂಕ ಇರಬಹುದೇನೋ ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ಟಾಂಗ್ ನೀಡಿದ್ದಾರೆ.

    ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಉತ್ತರ ಕರ್ನಾಟಕ ಭಾಗದಿಂದ ಸ್ಪರ್ಧಿಸಲಿದ್ದಾರೆ ಎನ್ನುವ ವಿಚಾರಕ್ಕೆ ಬಾಗಲಕೋಟೆ ರೈಲು ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ತಿಮ್ಮಾಪುರ ಅವರು, ಯಾರೊ ಒಬ್ಬರು ಬಂದು ಸ್ಪರ್ಧಿಸುತ್ತಾರೆ ಅಂದಾಕ್ಷಣ ಇಲ್ಲಿ ಬದಲಾವಣೆ ಆಗೋದಿಲ್ಲ. ಶಾ ಬಂದು ಬಿಡ್ತಾರೆ, ಶಾ ಬಂದು ಬಿಡ್ತಾರೆ ಅಂತಾರಲ್ಲ ಬಂದು ಏನ್ ಮಾಡ್ತಾರೆ ಎಂದು ಪ್ರಶ್ನಿಸಿದ್ರು.

    ಸಿಎಂ ಸಿದ್ದರಾಮಯ್ಯ ಬಾಗಲಕೋಟೆಯಿಂದ ಸ್ಪರ್ಧಿಸಲಿ ಎಂದು ನಾವೆಲ್ಲ ಮನವೊಲಿಸುತ್ತಿದ್ದೇವೆ. ಅವರು ಜಿಲ್ಲೆಯ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಅವರನ್ನು ಗೆಲ್ಲಿಸುತ್ತೇವೆ. ಗೆದ್ದೆ ಗೆಲ್ತಾರೆ ಎಂದು ತಿಳಿಸಿದರು.

    ಅಬಕಾರಿ ಇಲಾಖೆಯ ಬಗ್ಗೆ ಮಾತನಾಡಿ ಅವರು, ಕಳ್ಳಬಟ್ಟಿ ಸರಾಯಿಯನ್ನು ಬಂದ್ ಮಾಡಬೆಕಾಗುತ್ತದೆ. ಅದರ ಜೊತೆಗೆ ನಕಲಿ ಮದ್ಯ ಹಾಗೂ ಅದರಲ್ಲೂ ವಿಶೇಷವಾಗಿ ಡ್ರಗ್ ಮಾಫಿಯಾದಿಂದ ಮಕ್ಕಳು ಹಾಳಾಗುತ್ತಿದ್ದಾರೆ. ಆದ್ದರಿಂದ ಅದಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ಈಗಾಗಲೇ ಅದನ್ನು ತಡೆಯಲು ನಾವು ಅಧಿಕಾರಿಗಳ ವಿಶೇಷ ವಿಂಗ್ ತಯಾರಿಸಿ ನಿರ್ದೇಶನ ನೀಡಿದ್ದೇವೆ. ಅವರು ಅವರ ಕೆಲಸವನ್ನು ಪ್ರಾರಂಭಿಸುತ್ತಾರೆ. ಅಷ್ಟೆ ಅಲ್ಲದೆ ಯಾವುದೇ ಹೊಸ ಬಾರ್‍ಗಳಿಗೆ, ಲೈಸೆನ್ಸ್ ನೀಡುವ ಬಗ್ಗೆ ಪ್ರಸ್ತಾವನೆ ಇಲ್ಲ ಎಂದು ತಿಳಿಸಿದರು.

    ಕೊನೆಯದಾಗಿ ಸನ್ಮಾನ್ಯ ಮುಖ್ಯ ಮಂತ್ರಿಗಳು ಅವರು ನನ್ನನ್ನು ಮಂತ್ರಿಯನ್ನಾಗಿ ಮಾಡಿದ್ದಾರೆ. ರಾಜ್ಯದ ಜನತೆಯ ಸೇವೆಯನ್ನು ಮಾಡಲು ಅವಕಾಶ ಮಾಡಿಕೊಟ್ಟ ಮುಖ್ಯಮಂತ್ರಿಗಳಿಗೆ ನಾನು ವಿಶೇಷವಾಗಿ ಅಭಿನಂದನೆ ಹೇಳುತ್ತೇನೆ. ಅವರ ಆಶೋತ್ತರಗಳು ಈ ರಾಜ್ಯದ ಜನತೆಗೆ ಯಾವ ಭರವಸೆಯನ್ನು ನೀಡಿದ್ದಾರೆ ಯಾವ ರೀತಿಯ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾರೋ ಅದರ ಜೊತೆ ಜೊತೆಯಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

  • ಕರಂದ್ಲಾಜೆ ಹಿಂದೂಗಳ ಪರ ಇಲ್ಲ `ಇವ್ರ’ ಪರ ಇದ್ದಾರೆ: ಸಿಎಂ

    ಕರಂದ್ಲಾಜೆ ಹಿಂದೂಗಳ ಪರ ಇಲ್ಲ `ಇವ್ರ’ ಪರ ಇದ್ದಾರೆ: ಸಿಎಂ

    ಬೆಂಗಳೂರು: ಶೋಭಾ ಕರಂದ್ಲಾಜೆ ಹಿಂದೂಗಳ ಪರ ಇಲ್ಲ. ಸಮಾಜ ಹಾಳು ಮಾಡುವವರ ಪರ ಇದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಬಿಜೆಪಿ ಮಂಗಳೂರು ಚಲೋ ವಿಚಾರಕ್ಕೆ ಸಂಬಂಧಿಸಿದಂತೆ ಅಂಬೇಡ್ಕರ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಹಿಂದುತ್ವ ಪರವಾಗಿಲ್ಲ. ಶಾಂತಿ ಕದಡುವ ಪ್ರಯತ್ನ ಮಾಡ್ತಿದ್ದಾರೆ. ಬೈಕ್ ರ‍್ಯಾಲಿಯಿಂದ ಸಾಮರಸ್ಯ ಹಾಳಾಗುತ್ತೆ ಅಂದ್ರು.

    ಇದನ್ನೂ ಓದಿ: ಬಿಜೆಪಿಯ ‘ಸ್ಟಾರ್’ಗಳು ಇವರಂತೆ: ದರ್ಶನ್ ಕೈ ಸೇರ್ಪಡೆಗೆ ಸಿಟಿ ರವಿ ಹೇಳಿದ್ದು ಹೀಗೆ

    ಬೈಕ್ ರ‍್ಯಾಲಿಯಿಂದಾಗಿ ಟ್ರಾಫಿಕ್ ಗೆ ತೊಂದರೆಯಾಗುತ್ತೆ, ಹಾಗಾಗಿ ಬೈಕ್ ರ‍್ಯಾಲಿಗೆ ಅನುಮತಿ ನೀಡಿಲ್ಲ. ಸಮಾವೇಶಕ್ಕೆ ನಮ್ಮ ಅಭ್ಯಂತರವಿಲ್ಲ. ಮಂಗಳೂರು ಚಲೋ ಮಾಡೋ ಬದಲು ದೆಹಲಿ ಚಲೋ ಮಾಡಲಿ ನಾವು ಕೈ ಜೋಡಿಸುತ್ತೇವೆ. ರೈತರ ಸಾಲ ಮನ್ನಾಕ್ಕಾಗಿ ದೆಹಲಿ ಚಲೋ ಮಾಡಲಿ. ನಾವು ಬಳ್ಳಾರಿಗೆ ಪಾದಯಾತ್ರೆ ಮಾಡಿದ್ವಿ. ಬೇಕಿದ್ರೆ ಪಾದಯಾತ್ರೆ ಮಾಡಿಕೊಳ್ಳಲಿ. ನಮ್ಮ ಅಭ್ಯಂತರ ಇಲ್ಲ. ಶಾಂತಿ ಕದಡುವ ಯಾವುದೇ ಕೆಲಸವನ್ನ ಸರ್ಕಾರ ಸಹಿಸಲ್ಲ ಎಂದರು.

    ಯಾರಪ್ಪ ಬಂದ್ರು ರ‍್ಯಾಲಿ ತಡೆಯೊಲ್ಲ ಅನ್ನೊ ಬಿಎಸ್ ವೈ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ ಅವರು, ಯಡಿಯೂರಪ್ಪ ಹಾಗೇ ಏಕವಚನ ದಲ್ಲಿ ನನಗೆ ಮಾತನಾಡಲು ಬರಲ್ಲ. ಅವರ ಭಾಷೆ, ಕೆಟ್ಟಪದ ನಮಗೆ ಬರಲ್ಲ. ಅವರು ಶಾಂತಿ ಕಾಪಾಡುವ ಪರ ಇಲ್ಲ ಎಂದರು.

    https://www.youtube.com/watch?v=nWAl5y1BfXw

    https://www.youtube.com/watch?v=CDVIA-TBxKk

     

  • ಬಿಎಸ್‍ವೈ ಹಿಂದೆ ಯಾಕೆ ಇರ್ತಿರಾ ಅನ್ನೋ ಪ್ರಶ್ನೆಗೆ ಶೋಭಾ ಉತ್ತರಿಸಿದ್ದು ಹೀಗೆ

    ಬಿಎಸ್‍ವೈ ಹಿಂದೆ ಯಾಕೆ ಇರ್ತಿರಾ ಅನ್ನೋ ಪ್ರಶ್ನೆಗೆ ಶೋಭಾ ಉತ್ತರಿಸಿದ್ದು ಹೀಗೆ

    ಬೆಂಗಳೂರು: ರಾಜಕೀಯದಲ್ಲಿ ಕೊಟ್ಟ ಮಾತಿಗೆ ತಪ್ಪುವುದಿಲ್ಲ ಅನ್ನೋದಿಕ್ಕೆ ಬಿಎಸ್ ಯಡಿಯೂರಪ್ಪ ತಾಜಾ ಉದಾಹರಣೆ ಅಂತ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

    ಶನಿವಾರ ನಗರದ ಪುರಭವನದಲ್ಲಿ ಬಸವ ಕ್ರಾಂತಿ ವೇದಿಕೆ ವತಿಯಿಂದ ನಡೆದ ಬಸವಣ್ಣನವರ ಹಾದಿಯಲ್ಲಿ ಜನನಾಯಕರು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಎಸ್‍ವೈ ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ. ಹೀಗಾಗಿ ನಾವು ಅವರ ಹಿಂದೆ ಇದ್ದೀವಿ ಅಂತಾ ಹೇಳಿದ್ರು.

    ಇಂದ್ರಜಿತ್ ರಾಜಕೀಯಕ್ಕೆ ಎಂಟ್ರಿ?: ಪಿ.ಲಂಕೇಶ್ ಪುತ್ರ ಸಿನಿಮಾ ನಿರ್ದೇಶಕ ಇಂದ್ರಜಿತ್ ಲಂಕೇಶ್ ರಾಜಕೀಯ ಪ್ರವೇಶ ಮಾಡ್ತಾರಾ ಎನ್ನುವ ಪ್ರಶ್ನೆ ಈಗ ಎದ್ದಿದೆ. ಶನಿವಾರ ಅವರಾಡಿದ ಮಾತುಗಳು ರಾಜಕೀಯ ಪ್ರವೇಶದ ಆಸೆಯನ್ನು ಬಹಿರಂಗೊಳಿಸಿದೆ.

    ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪರನ್ನು ಹಾಡಿಹೊಗಳಿದರು. ಇದೇ ಹೊತ್ತಲ್ಲಿ ನಿಮ್ಮ ಹಿಂಬಾಲಕನಾಗಿ ಇರುತ್ತೇನೆ, ನಿಮ್ಮ ಆರ್ಶೀವಾದ ಬೇಕು ಎಂದು ವೇದಿಕೆಯಲ್ಲಿ ಬಿಎಸ್‍ವೈ ಜೊತೆ ಮನವಿ ಮಾಡಿದರು.

  • `ಕೈ’ ಬಿಟ್ಟು ಕಮಲ ಹಿಡಿದ ವಿಶ್ವಕರ್ಮ ಸಮುದಾಯದ ಮುಖಂಡ ಕೆಪಿ ನಂಜುಂಡಿ

    `ಕೈ’ ಬಿಟ್ಟು ಕಮಲ ಹಿಡಿದ ವಿಶ್ವಕರ್ಮ ಸಮುದಾಯದ ಮುಖಂಡ ಕೆಪಿ ನಂಜುಂಡಿ

    ಬೆಂಗಳೂರು: ವಿಶ್ವಕರ್ಮ ಸಮುದಾಯದ ಮುಖಂಡ ಕೆ.ಪಿ.ನಂಜುಂಡಿ ಅವರು ಇಂದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

    ಡಾಲರ್ಸ್ ಕಾಲೋನಿಯ ಕೆ.ಪಿ.ನಂಜುಂಡಿ ನಿವಾಸಕ್ಕೆ ಬಿಎಸ್‍ವೈ ಭೇಟಿ ನೀಡಿ ಮಾತುಕತೆಯ ಬಳಿಕ ವಿಶ್ವಕರ್ಮ ಸಮುದಾಯದ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಬಿಜೆಪಿ ಪಕ್ಷ ಸೇರಿದ್ದಾರೆ.

    ಬಳಿಕ ಮಾತನಾಡಿದ ಅವರು, ಕಳೆದ 16 ವರ್ಷಗಳಿಂದ ನಾನು ಕಾಂಗ್ರೆಸ್‍ನಲ್ಲಿದ್ದೆ. ಆದರೆ ಈಗ ಬಿಜೆಪಿ ಸೇರುತ್ತಿದ್ದೇನೆ. 16 ವರ್ಷದಲ್ಲೇ ಏನನ್ನೂ ನಾನು ಬಯಸಿಲ್ಲ. ಇಂದು ಬಿಜೆಪಿಗೆ ಸೇರಿ, ಈಗಲೇ ಏನನ್ನು ಕೇಳುವುದಿಲ್ಲ. ಬಿಜೆಪಿಯಲ್ಲಿ ನಾನು ಒಬ್ಬ ಸಾಮಾನ್ಯ ಅಟೆಂಡರ್ ಆಗಿ ಕೆಲಸ ಮಾಡಲು ಸಿದ್ಧ ಅಂತಾ ಹೇಳಿದ್ದಾರೆ.

    ಯಾವುದೇ ಬೇಡಿಕೆಗಳನ್ನು ಪಕ್ಷದ ಮುಂದೆ ಇಡದೇ ಬಿಜೆಪಿಗೆ ಸೇರುತ್ತಿದ್ದೇನೆ. ಯಡಿಯೂರಪ್ಪ ಮಾತು ಕೊಟ್ಟರೇ ಸತ್ಯ ಹರಿಶ್ಚಂದ್ರ ಮಾತು ಕೊಟ್ಟಂತೆ. ಅವರು ಸೂಕ್ತ ಸ್ಥಾನಮಾನ ನೀಡುವುದಾಗಿ ಹೇಳಿದ್ದಾರೆ ಎಂದು ನಂಜುಂಡಿ ತಿಳಿಸಿದ್ದಾರೆ.

    ಇದೇ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ವೈ ಮಾತನಾಡಿ, ಈ ಕ್ಷಣದಿಂದಲೇ ನಂಜುಂಡಿ ಬಿಜೆಪಿ ಸೇರಿದ್ದಾರೆ. ಮುಂದಿನ ಚುನಾವಣೆ ಬಳಿಕ ನಂಜುಂಡಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದು. ಯಾವುದೇ ಬೇಡಿಕೆಯನ್ನು ಇಡದೇ ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ. ಅವರ ಅಧಿಕೃತ ಬಿಜೆಪಿ ಸೇರ್ಪಡೆ ಕೆಲಸ ಎರಡ್ಮೂರು ದಿನಗಳಲ್ಲಿ ಆಗುತ್ತೆ. ಇನ್ಮುಂದೆ ವಿಶ್ವಕರ್ಮ ಸಮುದಾಯ ನಮ್ಮ ಜೊತೆಗೆ ಇರಲಿದೆ ಅಂತಾ ಹರ್ಷ ವ್ಯಕ್ತಪಡಿಸಿದ್ರು.

    ಇದನ್ನೂ ಓದಿ: ನಮ್ಮ ಸಮಾಜವನ್ನು ಕಡೆಗಣಿಸಿ ಹೇಗೆ ಪಕ್ಷ ಬೆಳೆಸುತ್ತೀರಿ : ಸಿಎಂಗೆ ನಂಜುಂಡಿ ಸವಾಲು