Tag: BSY Cabinet

  • ಬಿಎಸ್‍ವೈ ಷರತ್ತು – ನಾಲ್ವರ ಭವಿಷ್ಯ ಹೈಕಮಾಂಡ್ ಕೈಯಲ್ಲಿ!

    ಬಿಎಸ್‍ವೈ ಷರತ್ತು – ನಾಲ್ವರ ಭವಿಷ್ಯ ಹೈಕಮಾಂಡ್ ಕೈಯಲ್ಲಿ!

    ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಸಂಪುಟ ಸೇರುವವರ ಹೆಸರು ಇಂದು ಅಧಿಕೃತವಾಗಲಿದ್ದು, ಸಂಜೆಯೊಳಗೆ ಪಟ್ಟಿ ಪ್ರಕಟವಾಗಲಿದೆ. ರಾಜೀನಾಮೆಗೂ ಮುನ್ನ ಯಡಿಯೂರಪ್ಪ ಹಾಕಿದ ಷರತ್ತುಗಳಿಂದಾಗಿ ನಾಲ್ವರಿಗೆ ಸಚಿವ ಸ್ಥಾನ ನೀಡಬೇಕಾ ಅಥವಾ ಬೇಡ್ವಾ ಅನ್ನೋ ಗೊಂದಲದಲ್ಲಿ ಹೈಕಮಾಂಡ್ ಸಿಲುಕಿದೆ ಎನ್ನಲಾಗಿದೆ. ಹಾಗಾಗಿ ಆ ನಾಲ್ವರ ಭವಿಷ್ಯ ಹೈಕಮಾಂಡ್ ನಲ್ಲಿದ್ದು, ಯಾರಿಗೆ ಮಂತ್ರಿಗಿರಿ ಅನ್ನೋದು ಸಂಜೆ ಫೈನಲ್ ಆಗಲಿದೆ.

    ಮೂರು ಪಟ್ಟಿ:
    ತಮ್ಮ ವಿರೋಧಿ ಬಣಕ್ಕೆ ಸೆಡ್ಡು ಹೊಡೆಯಲು ತೆರೆಮರೆಯಲ್ಲಿ ರಾಜಾಹುಲಿ ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗಿದೆ. ಹಾಗಾಗಿ ಸಂಪುಟದಲ್ಲಿ ಯಾರಿರಬೇಕು ಮತ್ತು ಯಾರು ಇರಬಾರದು ಅನ್ನೋ ಪಟ್ಟಿಯನ್ನು ಸಿಎಂ ಬೊಮ್ಮಾಯಿ ಮೂಲಕವೇ ಹೈಕಮಾಂಡ್‍ಗೆ ತಲುಪಿಸಿದ್ದಾರೆ. ಇತ್ತ ಬೊಮ್ಮಾಯಿ ಸಹ ತಮ್ಮದೊಂದು ಪಟ್ಟಿ ಸಹ ನೀಡಿದ್ದಾರೆ. ಇತ್ತ ಆರ್‍ಎಸ್‍ಎಸ್ ಜೊತೆ ಸೇರಿ ಹೈಕಮಾಂಡ್ ತನ್ನದೇ ಆದ ಪಟ್ಟಿಯೊಂದನ್ನು ಸಿದ್ಧ ಮಾಡಿಕೊಂಡಿದೆ ಎನ್ನಲಾಗಿದೆ. ಈ ಮೂರು ಪಟ್ಟಿಯಲ್ಲಿಯ ಕೆಲ ಹೆಸರುಗಳು ಮಂತ್ರಿಮಂಡಲ ಸೇರಿಕೊಳ್ಳಲಿವೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ಬೊಮ್ಮಾಯಿ ಸಂಪುಟ ರಚನೆಗೆ 60:20:20 ಸೂತ್ರ

    ನಾಲ್ವರ ಭವಿಷ್ಯ:
    ತಮಗೆ ಆಡಳಿತ ನಡೆಸಲು ಅಡ್ಡಿಯಾಗಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಸಿ.ಪಿ.ಯೋಗೇಶ್ವರ್ ಮತ್ತು ಅರವಿಂದ್ ಬೆಲ್ಲದ್‍ಗೆ ಸಚಿವ ಸ್ಥಾನ ನೀಡಬಾರದು. ನನ್ನ ತ್ಯಾಗಕ್ಕೆ ಪ್ರತಿಫಲವಾಗಿ ಪುತ್ರ ವಿಜಯೇಂದ್ರಗೆ ಸಂಪುಟದಲ್ಲಿ ಸ್ಥಾನ ನೀಡಬೇಕೆಂಬ ಷರತ್ತು ಬಿ.ಎಸ್.ಯಡಿಯೂರಪ್ಪ ಹೈಕಮಾಂಡ್ ಮುಂದೆ ಇರಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ನಾಲ್ವರಿಗೆ ಸಚಿವ ಸ್ಥಾನ ನೀಡಬೇಕಾ ಅಥವಾ ಬೇಡ್ವಾ ಅನ್ನೋ ಇಕ್ಕಟ್ಟಿನಲ್ಲಿ ಹೈಕಮಾಂಡ್ ಸಿಲುಕಿದೆ ಎನ್ನಲಾಗಿದೆ.

    ಸಂಜೆಯೊಳಗೆ ಪಟ್ಟಿ ರಿಲೀಸ್:
    ಸೋಮವಾರ ರಾತ್ರಿ ದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ, ನಾವು ಬೇರೆ ಬೇರೆ ವಿಂಗಡನೆ ಮಾಡಿರುವ ಎರಡ್ಮೂರು ಪಟ್ಟಿಗಳನ್ನು ಕೊಟ್ಟಿದ್ದೇನೆ. ನಮ್ಮ ಪಕ್ಷದಲ್ಲಿ ಯಾರೂ ವಲಸಿಗರಲ್ಲ, ಎಲ್ಲರೂ ಬಿಜೆಪಿಯವರೇ. ನಾವು ಹೇಳಿದ್ದನ್ನು ಕೇಳಿಸಿಕೊಂಡು ನಾಳೆ ಹೈಕಮಾಂಡ್‍ನಿಂದ ಪಟ್ಟಿ ಬಿಡುಗಡೆ ಮಾಡುತ್ತಾರೆ. ಡಿಸಿಎಂ ಹುದ್ದೆ ಸೃಷ್ಟಿ ಕುರಿತು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಮಂಗಳವಾರ ಸಂಜೆಯೊಳಗೆ ಸಚಿವ ಸಂಪುಟ ಸೇರುವವರ ಪಟ್ಟಿಯನ್ನು ಬಿಡುಗಡೆ ಮಾಡುತ್ತಾರೆ. ಸಂಪುಟ ರಚನೆ ಕುರಿತು ಚರ್ಚೆ ಮಾಡಿದ್ದೇವೆ. ಎಷ್ಟು ಜನ ಮಂತ್ರಿಗಳಾಗಬೇಕು? ಎಷ್ಟು ಜನರು ಸಂಪುಟದಲ್ಲಿರಬೇಕು ಎಂಬುದನ್ನು ಹೈಕಮಾಂಡ್ ತಿಳಿಸಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದರು. ಇದನ್ನೂ ಓದಿ: ಬಿಜೆಪಿ ಹೈಕಮಾಂಡ್ ಮುಂದೆ ‘ವಿಜಯ’ ಪ್ರಸ್ತಾಪದ ಇನ್‍ಸೈಡ್ ಸ್ಟೋರಿ

  • ಮುಂದುವರಿದ ‘ಸಂಪುಟ’ ಸಸ್ಪೆನ್ಸ್ – ಸಚಿವಾಕಾಂಕ್ಷಿಗಳಿಗೆ ಮತ್ತೆ ನಿರಾಸೆ

    ಮುಂದುವರಿದ ‘ಸಂಪುಟ’ ಸಸ್ಪೆನ್ಸ್ – ಸಚಿವಾಕಾಂಕ್ಷಿಗಳಿಗೆ ಮತ್ತೆ ನಿರಾಸೆ

    – ಅರುಣ್ ಸಿಂಗ್ ಮೂಲಕ ಬಂದ ಹೈಕಮಾಂಡ್ ಸಂದೇಶ ಏನು?
    – ಸಂಪುಟ ಸರ್ಜರಿಗೆ ಬ್ರೇಕ್ ಹಾಕಿದ್ಯಾಕೆ ಹೈಕಮಾಂಡ್?

    ಬೆಂಗಳೂರು: ಬಿಜೆಪಿ ಮನೆಯ ಸಚಿವಾಕಾಂಕ್ಷಿ ಹಕ್ಕಿಗಳಿಗೆ ಇವತ್ತು ಬೆಳಗ್ಗೆ ಇದ್ದ ನಿರೀಕ್ಷೆ, ಕಾತರ ಸಂಜೆ ಹೊತ್ತಿಗೆ ಇಳಿದಿತ್ತು. ಬೆಂಗಳೂರಿಗೆ ಆಗಮಿಸಿದ್ದ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಜತೆ ಸಿಎಂ ಯಡಿಯೂರಪ್ಪ ಚರ್ಚಿಸಿ ನಮ್ಮನ್ನ ನಾಳೆ ಬೆಳಗ್ಗೆಯೊಳಗೆ ಸಚಿವರಾಗಿ ಮಾಡೇಬಿಡ್ತಾರೆಂಬ ನಿರೀಕ್ಷೆ ಠುಸ್ ಆಗಿದೆ. ಕಾವೇರಿ ನಿವಾಸದಲ್ಲಿ ಮಧ್ಯಾಹ್ನ ಸಿಎಂ ಮತ್ತು ಅರುಣ್ ಸಿಂಗ್ ನಡುವಿನ ಸಂಪುಟ ವಿಸ್ತರಣೆ ಕುರಿತ ಮಾತುಕತೆ ವಿಫಲವಾಗಿದೆ. ಹೈಕಮಾಂಡ್ ಸಂಪುಟ ವಿಸ್ತರಣೆಗೆ ಒಪ್ಪಿಗೆ ಕೊಡದೇ ತನ್ನ ಎಂದಿನ ಧೋರಣೆ ಪ್ರದರ್ಶಿಸಿದೆ ಎಂದು ತಿಳಿದು ಬಂದಿದೆ.

    ಕಾವೇರಿ ನಿವಾಸದಲ್ಲಿ ಅರುಣ್ ಸಿಂಗ್ ಜೊತೆ ಸಿಎಂ ಯಡಿಯೂರಪ್ಪ ಇಪ್ಪತ್ತು ನಿಮಿಷ ಕಾಲ ಮಾತುಕತೆ ನಡೆಸಿದರು. ಸಂಪುಟಕ್ಕೆ ಮೂವರು ವಲಸಿಗರ ಸೇರ್ಪಡೆಯ ಅನಿವಾರ್ಯತೆ ಬಗ್ಗೆ ಸಿಎಂ ಮನವರಿಕೆ ಮಾಡಿದ್ದರು. ವಲಸಿಗರ ಸೇರ್ಪಡೆಯಿಂದ ಮೂಲ ಬಿಜೆಪಿಗರಿಂದ ಅಸಮಧಾನ ಸೃಷ್ಟಿಯಾಗದಂತೆ ನೋಡಿಕೊಳ್ಳುವುದಾಗಿ ಸಿಎಂ ಭರವಸೆ ಕೊಟ್ಟಿದ್ದರು ಎನ್ನಲಾಗಿದೆ. ಸಿಎಂ ಅವರ ಮಾತುಗಳನ್ನ ಶಾಂತಿಯಿಂದ ಕೇಳಿಸಿಕೊಂಡ ಅರುಣ್ ಸಿಂಗ್ ಹೈಕಮಾಂಡ್ ಸದ್ಯಕ್ಕೆ ಈ ವಿಚಾರದಲ್ಲಿ ತಕ್ಷಣಕ್ಕೆ ನಿರ್ಧಾರ ಕೈಗೊಳ್ಳುವುದು ಅನುಮಾನ. ನಿಮ್ಮ ಭಾವನೆಗಳನ್ನು ವರಿಷ್ಠರ ಗಮನಕ್ಕೆ ತರೋದಾಗಿ ಹೇಳಿ ಅರುಣ್ ಸಿಂಗ್ ಕಾವೇರಿಯಿಂದ ನಿರ್ಗಮಿಸಿದರು ಎಂದು ಬಿಜೆಪಿ ಮೂಲಗಳು ತಿಳಿಸಿವೆ.

    ಸಂಪುಟ ಸರ್ಜರಿಗೆ ಬ್ರೇಕ್ ಹಾಕಿದ್ಯಾಕೆ?: ಅರುಣ್ ಸಿಂಗ್ ಮೂಲಕ ಒಪ್ಪಿಗೆ ಕೊಡೋ ಅನಿವಾರ್ಯತೆ ಹೈಕಮಾಂಡ್ ಗೆ ಇರಲಿಲ್ಲ. ಅರುಣ್ ಸಿಂಗ್ ಪಕ್ಷ ಮತ್ತು ಸರ್ಕಾರದೊಳಗಿನ ಮಾಹಿತಿ ಸಂಗ್ರಹಿಸಲು ರಾಜ್ಯಕ್ಕೆ ಆಗಮಿಸಿದ್ದರು. ಈಗಾಗಲೇ ಇರುವ ಗೊಂದಲಗಳನ್ನು ಮೊದಲು ಬಗೆಹರಿಸೋಣವೆಂಬ ಉದ್ದೇಶದಿಂದ ಸರ್ಜರಿ ದಿನಾಂಕ ಮುಂದೂಡಿರುವ ಸಾಧ್ಯತೆಗಳಿವೆ.

    ರಾಜ್ಯ ಬಿಜೆಪಿಯೊಳಗಿನ ಪರಿಸ್ಥಿತಿ ಸರಿಹೋಗಲೆಂಬ ಲೆಕ್ಕಕ್ಕೆ ಹೈಕಮಾಂಡ್ ಬದ್ಧವಾಗಿದ್ದರಿಂದ ಸಂಪುಟ ವಿಸ್ತರಣೆಗೆ ಇನ್ನೂ ಗ್ರೀನ್ ಸಿಕ್ಕಿಲ್ಲ ಎನ್ನಲಾಗ್ತಿದೆ. ಹೈಕಮಾಂಡ್ ಸರ್ಕಾರದಲ್ಲಿ ಮಹತ್ವದ ಬದಲಾವಣೆ ಮಾಡಬೇಕೆಂಬ ಲೆಕ್ಕಾಚಾರಗಳಿದ್ದು, ಗ್ರಾಮ ಪಂಚಾಯ್ತಿ ಚುನಾವಣೆ, ಉಪಚುನಾವಣೆಗಳು ಮುಗಿಯಲಿ ಎಂಬ ಆಲೋಚನೆ ಇರಬಹುದು. ವಿಸ್ತರಣೆ ಬದಲು ಪುನಾರಚನೆಯ ಉದ್ದೇಶ. ಇದಕ್ಕೆ ಸಮಯದ ಅಗತ್ಯ ಇದೆ ಅನ್ನೋದು ದೆಹಲಿ ನಾಯಕರ ಅಭಿಪ್ರಾಯ ಆಗಿರಬಹುದು. ಯಡಿಯೂರಪ್ಪ ವಿಚಾರದಲ್ಲಿ ಹೈಕಮಾಂಡ್ ಗೆ ಇನ್ನೂ ಇರುವ ಅತೃಪ್ತಿ ಸಹ ಎನ್ನಲಾಗಿದೆ.

    ಸಿಎಂ ಬಿಎಸ್‍ವೈ ಬೇಸರ: ಕಳೆದ ಮೂರು ದಿನಗಳಿಂದಲೂ ಸಿಎಂ ಯಡಿಯೂರಪ್ಪ ಸಂಪುಟ ವಿಸ್ತರಣೆ ಅಧಿವೇಶನಕ್ಕೂ ಮುನ್ನ ಮುಗಿಸಲು ಸಾಕಷ್ಟು ಕಸರತ್ತು ನಡೆಸಿದ್ದರು. ಬೆಳಗಾವಿಯಲ್ಲೂ ಅರುಣ್ ಸಿಂಗ್ ಜತೆ ಚರ್ಚೆ ನಡೆಸಿ ಮೂವರ ಹೆಸರಿನ ಪಟ್ಟಿ ನೀಡಿ ವಿಸ್ತರಣೆಯ ಅನಿವಾರ್ಯತೆ ಬಗ್ಗೆ ವಿವರಣೆ ಕೊಟ್ಟಿದ್ರು. ಬೆಂಗಳೂರಿನ ಭೇಟಿ ವೇಳೆ ವರಿಷ್ಠರ ಸಂದೇಶ ತಲುಪಿಸುವುದಾಗಿ ಅರುಣ್ ಸಿಂಗ್ ಭರವಸೆ ಕೊಟ್ಟಿದ್ದರು ಎನ್ನಲಾಗಿದೆ. ಆದರೆ ಅರುಣ್ ಸಿಂಗ್ ಬೆಂಗಳೂರಿಗೆ ಬಂದ್ರೂ ಏನೂ ಪ್ರಯೋಜನ ಆಗ್ಲಿಲ್ಲ. ಹೀಗಾಗಿ ಸಿಎಂ ಯಡಿಯೂರಪ್ಪಗೂ ಬೇಸರವಾಗಿದ್ದು, ಅವರು ಈಗ ವಿಸ್ತರಣೆ ವಿಚಾರ ಬದಿಗೊತ್ತಿ ಅಧಿವೇಶನ, ಗ್ರಾ.ಪಂ. ಚುನಾವಣೆಯತ್ತ ಗಮನ ಕೊಡುವಂತಾಗಿದೆ.

    ನಿರಾಸೆಯ ಕಾರ್ಮೋಡ: ಈ ಮಧ್ಯೆ ಶಾಸಕ ಮುನಿರತ್ನ, ಪರಿಷತ್ ಸದಸ್ಯರಾದ ಎಂಟಿಬಿ ನಾಗರಾಜ್ ಮತ್ತು ಆರ್ ಶಂಕರ್ ಇವತ್ತು ಮಧ್ಯಾಹ್ನ ಸಿಎಂ ಭೇಟಿ ಮಾಡಿ ಮಾತುಕತೆ ನಡೆಸಿದ್ರು. ಕಾವೇರಿ ನಿವಾಸಕ್ಕೆ ಅರುಣ್‍ಸಿಂಗ್ ಭೇಟಿಗೂ ಮುನ್ನ ಈ ಮೂವರೂ ಸಿಎಂ ಭೇಟಿ ಮಾಡಿ, ವಿಸ್ತರಣೆಗೆ ಮತ್ತೆ ಒತ್ತಾಯ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಸಿಗದ ಹಿನ್ನೆಲೆಯಲ್ಲಿ ಆಕಾಂಕ್ಷಿಗಳಲ್ಲಿ ಮತ್ತೆ ನಿರಾಸೆಯ ಕಾರ್ಮೋಡ ಕವಿದಿದೆ. ಮತ್ತೊಂದು ಅವಕಾಶಕ್ಕಾಗಿ ಆಕಾಂಕ್ಷಿಗಳು ಎದುರು ನೋಡುತ್ತಿದ್ದಾರೆ.

  • ಸರ್ಕಾರ ಟ್ರ್ಯಾಕ್ ತಪ್ಪಿದೆ, ಸರಿ ಮಾಡ್ಲೇಬೇಕು – ಬಿಎಸ್‍ವೈ ವಿರುದ್ಧ ದೂರುಗಳ ಸುರಿಮಳೆ!

    ಸರ್ಕಾರ ಟ್ರ್ಯಾಕ್ ತಪ್ಪಿದೆ, ಸರಿ ಮಾಡ್ಲೇಬೇಕು – ಬಿಎಸ್‍ವೈ ವಿರುದ್ಧ ದೂರುಗಳ ಸುರಿಮಳೆ!

    ಬೆಂಗಳೂರು: ರಾಜ್ಯ ಬಿಜೆಪಿಯಲ್ಲೀಗ ಎಲ್ಲವೂ ಕುದಿಮೌನ. ಉಗುಳುವಂತಿಲ್ಲ, ನುಂಗುವಂತಿಲ್ಲ. ಬರೀ ಸೌಂಡ್ ಮಾಡಿ ಕೆಲಸ ಮಾಡದ ಆಡಳಿತ ಯಂತ್ರದ ರಿಪೇರಿ ಮಾಡಬೇಕು ಎನ್ನುವ ಕೂಗು ಕೇಳಿಬಂದಿದೆ. ಸಂಪುಟ ವಿಸ್ತರಣೆ ಗೊಂದಲ, ನಿಗಮ ಮಂಡಳಿ ನೇಮಕಾತಿ ಗೊಂದಲ, ಸರ್ಕಾರದ ನಿರ್ಧಾರಗಳ ಗೊಂದಲಗಳ ಬಗ್ಗೆ ಇವತ್ತು ಪಕ್ಷದ ವೇದಿಕೆಯಲ್ಲಿ ಭರ್ಜರಿಯಾಗಿಯೇ ಸೌಂಡ್ ಮಾಡಿತ್ತು. ಬಿಜೆಪಿ ಕಚೇರಿಯಲ್ಲಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು 6ಕ್ಕೂ ಹೆಚ್ಚು ಸಚಿಚರು, ಇಬ್ಬರು ಸಂಸದರು, ಇಬ್ಬರು ಶಾಸಕರು ಭೇಟಿ ಮಾಡಿ ಚರ್ಚೆ ನಡೆಸಿದ್ರು. ಈ ವೇಳೆ ಸರ್ಕಾರ ಟ್ರ್ಯಾಕ್‍ನಲ್ಲಿ ಇಲ್ಲ ಎಂಬ ದೂರುಗಳು ಸುರಿಮಳೆಗೈದಿದ್ದಾರೆ ಎನ್ನಲಾಗಿದೆ. ಆದರಲ್ಲೂ ಓರ್ವ ಶಾಸಕ ಸಿಎಂ ಯಡಿಯೂರಪ್ಪ ಅವರ ಸುತ್ತಲಿನವರ ಬಗ್ಗೆಯೇ ಹೆಚ್ಚು ಅಭಿಪ್ರಾಯ ಮಂಡಿಸಿದ್ದಾರೆ ಎನ್ನಲಾಗಿದೆ.

    ಅರುಣ್ ಸಿಂಗ್ ಎದುರು ದೂರು: ನಾವು ಬಿಜೆಪಿ ನಾಯಕರನ್ನೂ ಯಾರನ್ನೂ ದೂರುವುದಿಲ್ಲ. ಆದರೆ ಸರ್ಕಾರ ಟ್ರ್ಯಾಕ್ ನಲ್ಲಿ ಇಲ್ಲ. ಸರ್ಕಾರ ಟ್ರ್ಯಾಕ್ ಗೆ ಬರಬೇಕು. ಈ ನಿಟ್ಟಿನಲ್ಲಿ ಹೈಕಮಾಂಡ್ ರಿಪೇರಿ ಕೆಲಸಕ್ಕೆ ಕೈ ಹಾಕಬೇಕು. ಆಗಿದ್ದಾಗ ಮಾತ್ರ ಬಿಜೆಪಿ ಶಕ್ತಿ ವೃದ್ಧಿಸುತ್ತೆ. ಇಲ್ಲದಿದ್ದರೆ ನಮ್ಮ ಪಕ್ಷಕ್ಕೆ ಕಷ್ಟ ಹೊರತು, ಸರ್ಕಾರ ನಡೆಸುವವರಿಗೆ ಕಷ್ಟ ಆಗಲ್ಲ. ದಯಮಾಡಿ ರಾಜ್ಯದ ಕಡೆ ಗಮನಿಸಿ, ಸರಿಪಡಿಸುವ ಕೆಲಸ ಮಾಡಿ ಎಂದು ಕೆಲ ಸಚಿವರು ಸಿಎಂ ವಿರುದ್ಧವೇ ದೂರು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

    ಈ ನಡುವೆ ದೂರುಗಳನ್ನು ಕೇಳಿಸಿಕೊಂಡ ಬಳಿಕ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಮಾಧಾನದ ಮಾತುಗಳನ್ನಾಡಿದ್ದಾರೆ ಎನ್ನಲಾಗಿದೆ. ಹೈಕಮಾಂಡ್ ಎಲ್ಲವನ್ನೂ ರಿಪೇರಿ ಮಾಡುತ್ತೆ. ನೀವು ನಿಮ್ಮ ನಿಮ್ಮ ಕೆಲಸಗಳನ್ನು ಮಾಡಿ ಎಂದು ಪಕ್ಷದ ಕೆಲ ಸಚಿವರು, ಶಾಸಕರಿಗೆ ಅರುಣ್ ಸಿಂಗ್ ರಿಪೇರಿ ಅಭಯ ನೀಡಿದ್ದಾರೆ ಅಂತಾ ಬಿಜೆಪಿ ಮೂಲಗಳು ತಿಳಿಸಿವೆ.

    ರಿಪೇರಿ ನಮ್ಮ ಕೆಲಸ: ರಿಪೇರಿ ನಾವು ಮಾಡುತ್ತೇವೆ. ಹೈಕಮಾಂಡ್ ತನ್ನ ಕೆಲಸ ಮಾಡುತ್ತೆ. ಹೈಕಮಾಂಡ್ ಗಮನದಲ್ಲಿ ಎಲ್ಲ ಸಂಪೂರ್ಣ ಮಾಹಿತಿ ಇದೆ. ಯಾವುದನ್ನು ರಿಪೇರಿ ಮಾಡಬೇಕು, ಯಾರನ್ನು ರಿಪೇರಿ ಮಾಡಬೇಕು ಅನ್ನೋದು ಗೊತ್ತಿದೆ. ಪಕ್ಷದ ಪ್ರತಿ ನಿರ್ಧಾರಗಳು, ಸರ್ಕಾರದ ಪ್ರತಿ ನಿರ್ಧಾರಗಳು ಹೈಕಮಾಂಡ್ ಗಮನದಲ್ಲಿ ಇವೆ. ಆದಷ್ಟು ಶೀಘ್ರ ರಿಪೇರಿ ಕೆಲಸ ಪೂರ್ಣ ಆಗುತ್ತೆ. ಯಾರೂ ಬಹಿರಂಗವಾಗಿ ಮಾತಾಡಬೇಡಿ, ಪಕ್ಷದ ವೇದಿಕೆಯಲ್ಲಿ ಚರ್ಚಿಸಿ. ನನಗೆ ಏನೇ ಇದ್ದರೂ ಪತ್ರ ಬರೆಯಿರಿ, ನನ್ನ ಗಮನಕ್ಕೆ ತನ್ನಿ. ನಾನು ಯಾವುದನ್ನೂ ಮುಚ್ಚಿಡದೇ ಹೈಕಮಾಂಡ್ ಗಮನಕ್ಕೆ ತರುತ್ತೇನೆ ಎಂದು ಅರುಣ್ ಸಿಂಗ್ ಹೇಳಿದ್ದಾರೆ ಎನ್ನಲಾಗಿದೆ.

    ಇನ್ನೊಂದೆಡೆ ಇವತ್ತು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಕೇಶವಕೃಪಾಗೆ ತೆರಳಿ ಆರ್ ಎಸ್‍ಎಸ್ ಮುಖಂಡರ ಜತೆ ಮಾತುಕತೆ ನಡೆಸಿದ್ದಾರೆ. ಆರ್ ಸ್‍ಎಸ್ ಮುಖಂಡರು ಸಹ ಸರ್ಕಾರ ಮತ್ತು ಪಕ್ಷದ ನಡವಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

    ಒಟ್ಟಿನಲ್ಲಿ ಬಿಜೆಪಿಯಲ್ಲೀನ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿಗೆ ವಾಟರ್ ಸ್ಪ್ರೇ ಮಾಡಲು ಅರುಣ್ ಸಿಂಗ್‍ಗೂ ಕೂಡ ಸಾಧ್ಯವಾಗಿಲ್ಲ, ಆದರೂ ಶೀಘ್ರ ವಾಟರ್ ಸ್ಪ್ರೇ ಮಾಡದಿದ್ದರೆ ಬಿಜೆಪಿ ಸ್ಥಿತಿ ಚಿಂತಾಜನಕ ಎಂದು ಹೈಕಮಾಂಡ್‍ಗೆ ವರದಿ ಸಲ್ಲಿಸುವುದಕ್ಕಂತೂ ತಡೆ ಇಲ್ಲ ಅನ್ನೋದು ಸ್ಪಷ್ಟ.

  • ನೂತನ ಸಚಿವರ ಪ್ರಮಾಣ ವಚನಕ್ಕೆ ನಿಗದಿಯಾಯ್ತಾ ಮುಹೂರ್ತ?

    ನೂತನ ಸಚಿವರ ಪ್ರಮಾಣ ವಚನಕ್ಕೆ ನಿಗದಿಯಾಯ್ತಾ ಮುಹೂರ್ತ?

    – ಹೈಕಮಾಂಡ್ ಭೇಟಿಗೆ ಜಾರಕಿಹೊಳಿ ಪ್ಲಾನ್!

    ಬೆಂಗಳೂರು: ಜಿಲ್ಲಾ ಪ್ರವಾಸದಿಂದ ಹಿಂದಿರುಗಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಸಂಪುಟ ಸರ್ಜರಿ ಕುರಿತಾಗಿ ಸಾಲು ಸಾಲು ಸಭೆ ನಡೆಸಲಿದ್ದಾರೆ. ಇಂದು ಸಂಜೆ ಆಪ್ತ ಸಚಿವರಿಗೆ ಕಾವೇರಿ ನಿವಾಸಕ್ಕೆ ಆಗಮಿಸುವಂತೆ ಸಿಎಂ ಬುಲಾವ್ ನೀಡಿದ್ದಾರೆ. ಇಂದು ಸಂಜೆ ನಡೆಯುವ ಸಭೆಯಲ್ಲಿಯೇ ನೂತನ ಸಚಿವ ಪ್ರಮಾಣ ವಚನಕ್ಕೆ ಮುಹೂರ್ತ ನಿಗದಿಯಾಗಲಿದೆ ಎನ್ನಲಾಗಿದೆ.

    ಇಂದು ಸಂಜೆ ಸಭೆಯಲ್ಲಿ ಸಿಎಂ ಲೆಕ್ಕಚಾರದಂತೆ ಎಲ್ಲವೂ ನಡೆದ್ರೆ ಸಂಜೆಯೇ ನೂತನ ಸಚಿವರ ಹೆಸರನ್ನು ಫೈನಲ್ ಮಾಡಿ, ಪದಗ್ರಹಣದ ದಿನಾಂಕವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಗಮನಕ್ಕೆ ತರಲಿದ್ದಾರೆ. ಗ್ರೀನ್ ಸಿಗ್ನಲ್ ಸಿಕ್ಕರೆ ನಾಳೆಯೇ ಅಂದ್ರೆ ಶುಭ ಶುಕ್ರವಾರ ಪ್ರಮಾಣ ವಚನ ಕಾರ್ಯಕ್ರಮ ನಡೆಯುವ ಸಾಧ್ಯತೆಗಳು ದಟ್ಟವಾಗಿವೆ.

    ಯಾರಿಗೆ ಕುತ್ತು?: ಸಂಪುಟ ಸರ್ಜರಿ ವೇಳೆ ಕಳಪೆ ಸಾಧನೆ ಮಾಡಿರುವ ಸಚಿವರ ಸ್ಥಾನಕ್ಕೆ ಕುತ್ತು ಬರಲಿದೆ. ಕಳೆದ 5 ತಿಂಗಳ ಸಚಿವರ ರಿಪೋರ್ಟ್ ಕಾರ್ಡ್ ಪಡೆದಿರುವ ಹೈಕಮಾಂಡ್ ಯಾರನ್ನು ಕೈ ಬಿಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದೆ ಎನ್ನಲಾಗಿದೆ. ಇದೀಗ ಅದೇ ಪಟ್ಟಿ ಜೊತೆ ಸಿಎಂ ಅಪ್ತ ಸಚಿವರ ಜೊತೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

    ಜಾರಕಿಹೊಳಿ ಪ್ಲಾನ್: ಇನ್ನು ಸಚಿವ ರಮೇಶ್ ಜಾರಕಿಹೊಳಿ ಹೈಕಮಾಂಡ್ ಭೇಟಿಗೆ ಸಮಯ ಕೇಳಿದ್ದಾರೆ. ಕೇಂದ್ರ ಸಚಿವ ಅಮಿತ್ ಶಾ, ಜೆ.ಪಿ.ನಡ್ಡಾ ಭೇಟಿಗೆ ಸಮಯ ಕೇಳಿರುವ ರಮೇಶ್ ಜಾರಕಿಹೊಳಿ, ತಮ್ಮ ಜೊತೆ ಬಿಜೆಪಿಗೆ ಬಂದವರಿಗೆ ಸಚಿವ ಸ್ಥಾನಕ್ಕೆ ಪಟ್ಟು ಹಿಡಿಯುವ ಸಾಧ್ಯತೆಗಳಿವೆ. ಕಳಪೆ ಸಾಧನೆ ಮಾಡಿದವರನ್ನು ಕೈ ಬಿಡುವಂತೆ ಒತ್ತಾಯ ಸಾಧ್ಯತೆಗಳಿದ್ದು, ಸಚಿವ ಶ್ರೀಮಂತ ಪಾಟೀಲ್ ಕೈ ಬಿಟ್ಟು ಕುಮಟಹಳ್ಳಿಗೆ ಮಂತ್ರಿ ಸ್ಥಾನ ಕೇಳಬಹುದು ಎಂಬ ಚರ್ಚೆಗಳು ಜೋರಾಗಿವೆ.