Tag: BSY Audio

  • BSY ಆಡಿಯೋ ಪ್ರಕರಣ: ತನಿಖಾ ವರದಿಯಲ್ಲಿ ನ್ಯಾಯ ಸಿಗುವ ವಿಶ್ವಾಸವಿಲ್ಲ ಅಂದ್ರು ಕಂದಕೂರು

    BSY ಆಡಿಯೋ ಪ್ರಕರಣ: ತನಿಖಾ ವರದಿಯಲ್ಲಿ ನ್ಯಾಯ ಸಿಗುವ ವಿಶ್ವಾಸವಿಲ್ಲ ಅಂದ್ರು ಕಂದಕೂರು

    – ವಿಚಾರಣೆಗೆ ಹಾಜರಾದ ಶರಣಗೌಡ ಕಂದಕೂರು ಅಸಮಧಾನ

    ರಾಯಚೂರು: ಜಿಲ್ಲೆಯ ದೇವದುರ್ಗ ಪ್ರವಾಸಿ ಮಂದಿರದಲ್ಲಿ ನಡೆದ ಆಪರೇಷನ್ ಕಮಲ ಆಡಿಯೋ ಪ್ರಕರಣ ಹಿನ್ನೆಲೆ ಗುರುಮಿಠಕಲ್ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರು ಪುತ್ರ ದೂರುದಾರ ಶರಣಗೌಡರನ್ನ ಇಂದು ವಿಚಾರಣೆಗೆ ಒಳಪಡಿಸಲಾಗಿದೆ. ವಿಚಾರಣೆಗೆ ಹಾಜರಾಗುವ ವೇಳೆ ಮಾತನಾಡಿರುವ ಶರಣೇಗೌಡ ನನಗೆ ನೂರಕ್ಕೆ ನೂರು ನ್ಯಾಯ ಸಿಗಲ್ಲ ಎಂಬ ವಿಶ್ವಾಸವಿದೆ. ಆದ್ರೂ ಪೊಲೀಸ್ ಅಧಿಕಾರಿಗಳ ಮೇಲೆ ವಿಶ್ವಾಸವಿದೆ ಅಂತ ಹೇಳಿದ್ದಾರೆ.

    ಜನಪ್ರತಿನಿಧಿಗಳ ಕೋರ್ಟ್ ನಿಂದ ಸಿಎಂ ಯಡಿಯೂರಪ್ಪ ವಿರುದ್ಧ ತನಿಖೆ ಮಾಡಬೇಕೆಂದು ಆದೇಶ ಬಂದ ಹಿನ್ನೆಲೆ ತನಿಖಾ ಅಧಿಕಾರಿಯಾಗಿ ರಾಯಚೂರು ಡಿವೈಎಸ್ ಪಿ ಯವರನ್ನ ನೇಮಕ ಮಾಡಿದ್ದಾರೆ. ಡಿವೈಎಸ್ ಪಿ ಶಿವನಗೌಡ ಪಾಟೀಲ್ ನೋಟಿಸ್ ನೀಡಿ ನಮಗೆ ಬರಲು ಹೇಳಿದ್ರು, ಇದರಿಂದಾಗಿ ಇಂದು ವಿಚಾರಣೆ ಬಂದಿದ್ದೇನೆ. ನಾವು ಮಾಡಿರುವ ಆಡಿಯೋ ಹಾಗೂ ನಮ್ಮ ಹೇಳಿಕೆಗಳು ಪಡೆದುಕೊಂಡಿದ್ದಾರೆ. ಒಬ್ಬ ಡಿವೈಎಸ್ ಪಿ ಸಿಎಂ ವಿರುದ್ಧ ಯಾವ ರೀತಿ ತನಿಖೆ ಮಾಡಲು ಆಗುತ್ತೆ. ಸಿಎಂ ಯಡಿಯೂರಪ್ಪ ರಾಜೀನಾಮೆ ಕೊಟ್ಟು ತನಿಖೆಗೆ ಸಹಕಾರ ನೀಡಬೇಕಾಗಿತ್ತು ಅಂತ ಶರಣಗೌಡ ಹೇಳಿದ್ದಾರೆ.

    ರಾಜೀನಾಮೆ ನೀಡದೆ ತನಿಖೆ ನಡೆಯುತ್ತಿರುವುದರಿಂದ ಮುಂದೆ ಏನಾಗುತ್ತೆ ಎಂಬುವುದು ನಮಗೆ ಗೊತ್ತು. ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಬಿ ರಿಪೋರ್ಟ್ ಹಾಕಬಹುದು. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ವಕೀಲರ ಜೊತೆಗೆ ಈಗಾಗಲೇ ಮಾತುಕತೆ ಆಗಿದೆ. ಈ ತನಿಖಾ ವರದಿಯಲ್ಲಿ ನನಗೆ ನ್ಯಾಯ ಸಿಗಲ್ಲ ಎಂಬ ವಿಶ್ವಾಸವಿದೆ. ಸತ್ಯಕ್ಕೆ ನ್ಯಾಯ ಸಿಗದೇ ಇದ್ದಾಗ ಮುಂದೆ ಹೈಕೋರ್ಟ್, ಸುಪ್ರೀಂ ಕೋರ್ಟ್ ಅಥವಾ ಇಡಿ ಇದೆ. ಆಡಿಯೋದಲ್ಲಿ ಎಲ್ಲವೂ ಇದ್ದು, ನ್ಯಾಯ ಸಿಗದೇ ಇದ್ದರೆ ಕಾನೂನು ಹೋರಾಟ ಮುಂದುವರಿಸುವುದಾಗಿ ಜೆಡಿಎಸ್ ಮುಖಂಡ ಶರಣಗೌಡ ಹೇಳಿದ್ದಾರೆ. ಇದನ್ನೂ ಓದಿ: ಬಿಎಸ್‍ವೈ ಅಸ್ತಿತ್ವ ನನ್ನ ಕೈಲಿದೆ: ಶರಣಗೌಡ

  • ಬಿಎಸ್‌ವೈ ಆಡಿಯೋ ಪ್ರಕರಣ-ತನಿಖೆ ವೇಳೆ ಮತ್ತೊಂದು ಸತ್ಯ ಬಯಲು

    ಬಿಎಸ್‌ವೈ ಆಡಿಯೋ ಪ್ರಕರಣ-ತನಿಖೆ ವೇಳೆ ಮತ್ತೊಂದು ಸತ್ಯ ಬಯಲು

    ಹುಬ್ಬಳ್ಳಿ: ಸಿಎಂ ಬಿಎಸ್ ಯಡಿಯೂರಪ್ಪ ಆಡಿಯೋ ಬಿಡುಗಡೆ ಪ್ರಕರಣಕ್ಕೆ ಇದೀಗ ಬಿಗ್ ಟಿಸ್ಟ್ ದೊರೆತಿದೆ. ಸಿಎಂ ಬಿಎಸ್‌ವೈ ಸಂಭಾಷಣೆ ರೆಕಾರ್ಡ್ ಮಾಡಿದ್ಯಾರು ಅಂತಾ ತನಿಖೆ ನಡೆಸುತ್ತಿರುವ ಅಧಿಕಾರಿಗಳೇ ಬೆಚ್ಚಿಬೀಳುವ ಸತ್ಯವೊಂದು ಇದೀಗ ಬಯಲಾಗಿದೆ.

    ಅಕ್ಟೋಬರ್ 26ರಂದು ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಚುನಾವಣಾ ಸಮಿತಿ ಸಭೆ ಹಾಗೂ ಕೋರ್ ಕಮಿಟಿ ಸಭೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಸಂಭಾಷಣೆ ರೆಕಾರ್ಡ್ ಆಗಿದ್ದು, ವೈರಲ್ ಆಗಿತ್ತು. ಸಭೆಯಲ್ಲಿ ಅನರ್ಹ ಶಾಸಕರ ಬಗ್ಗೆ ಸಿಎಂ ಬಿಎಸ್‌ವೈ ಮಾತನಾಡಿದ ಆಡಿಯೋ ಇದೀಗ ಸುಪ್ರೀಂಕೋರ್ಟ್ ಸಾಕ್ಷ್ಯವಾಗಿ ಪರಿಗಣಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸುಳಿವು ಸಿಕ್ಕಿದೆ.

    ಸಭೆ ನಡೆದ ದಿನದಂದು ಹುಬ್ಬಳ್ಳಿಯ ಡೆನಿಸನ್ಸ್ ಹೋಟೆಲ್‌ನ ಎಲ್ಲಾ ಸಿಸಿ ಕ್ಯಾಮೆರಾಗಳು ಆನ್ ಆಗಿದ್ರು, ಸಭೆ ನಡೆದ ಹಾಲ್‌ನಲ್ಲಿನ ಸಿಸಿ ಕ್ಯಾಮೆರಾಗಳು ಆಫ್ ಆಗಿರೋದು ಇದೀಗ ತನಿಖೆಗೆ ಅಡ್ಡಿಯಾಗಿದೆ. ಸಭೆಯ ನಡೆದ ಹಾಲ್‌ನಲ್ಲಿನ ಕ್ಯಾಮೆರಾಗಳನ್ನ ಆಫ್ ಮಾಡಲು ಸೂಚಿಸಿದ್ಯಾರು ಎಂಬ ಪ್ರಶ್ನೆ ಹುಟ್ಟುಕೊಂಡಿದೆ. ಈ ಬಗ್ಗೆ ವಿವರಣೆ ನೀಡುವಂತೆ ಹೋಟೆಲ್ ಮ್ಯಾನೇಜರ್‌ಗೆ ನೋಟಿಸ್ ಜಾರಿ ಮಾಡಲಾಗಿದ್ದು, ಇಂದು ಹೋಟೆಲ್ ಮ್ಯಾನೇಜರ್ ಬೆಂಗಳೂರಿಗೆ ಬರಲಿದ್ದಾರೆ ಎಂದು ತಿಳಿದು ಬಂದಿದೆ.

    ಬಿಜೆಪಿ ಸಭೆಯಲ್ಲಿ ನಡೆಯೋ ವಿಚಾರಗಳನ್ನ ರೆಕಾರ್ಡ್ ಮಾಡಲೆಂದೇ ಹಾಲ್‌ನಲ್ಲಿದ್ದ ಸಿಸಿ ಕ್ಯಾಮೆರಾಗಳನ್ನ ಆಫ್ ಮಾಡಿಸಲಾಗಿತ್ತು ಅನ್ನೋದು ಪ್ರಾಥಮಿಕ ತನಿಖೆಯ ವೇಳೆ ಬಯಲಾಗಿದೆ. ಹಾಲ್ ಹೊರಭಾಗದ ಕಾರಿಡಾರ್ ಸೇರಿದಂತೆ ಎಲ್ಲಡೆಯ ಸಿಸಿ ಕ್ಯಾಮೆರಾಗಳು ಆನ್ ಆಗಿದ್ರೂ, ಹಾಲ್ ಒಳಗಿದ್ದ ಸಿಸಿ ಕ್ಯಾಮೆರಾಗಳು ಆಫ್ ಮಾಡಲು ಸೂಚಿಸಿದ್ಯಾರು ಎಂಬುದರ ಬಗ್ಗೆ ಇದೀಗ ತನಿಖೆ ತೀವ್ರಗೊಂಡಿದೆ.

    ಗುಪ್ತಚರ ಇಲಾಖೆ ಅಧಿಕಾರಿಗಳು ಹಾಲ್ ಒಳಗೆ ಯರ‍್ಯಾರು ಹೋಗಿದ್ರು. ಯರ‍್ಯಾರು ಯಾವ ಸಮಯಕ್ಕೆ ಹೊರಬಂದರು. ಸಭೆಯ ಹಿಂದಿನ ಸಾಲಿನಲ್ಲಿದ್ದವರು ಯಾರು? ಯಾರು ಆಡಿಯೋ ಲೀಕ್ ಮಾಡಿದ್ರು ಅನ್ನೋ ಬಗ್ಗೆ ಕೆಲವರ ಹೆಸರುಗಳ ಪಟ್ಟಿ ಸಹ ರೆಡಿಯಾಗಿದೆ. ಇಂದು ಹೊಟೇಲ್ ಮ್ಯಾನೇಜರ ವಿಚಾರಣೆ ನಂತರ ತನಿಖೆ ಪೂರ್ಣಗೊಳಲಿದೆ ಎನ್ನಲಾಗಿದೆ.

  • ಬಿಎಸ್‌ವೈ ಆಡಿಯೋ ಸಂಚಲನ- ರಾಜ್ಯ ಬಿಜೆಪಿಗೆ ‘ಶಾ’ಕಿಂಗ್ ಸಂದೇಶ!

    ಬಿಎಸ್‌ವೈ ಆಡಿಯೋ ಸಂಚಲನ- ರಾಜ್ಯ ಬಿಜೆಪಿಗೆ ‘ಶಾ’ಕಿಂಗ್ ಸಂದೇಶ!

    ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸಿಎಂ ಯಡಿಯೂರಪ್ಪನವರ ಆಡಿಯೋ ಸಂಚಲನ ಸೃಷ್ಟಿಸಿದೆ. ಈ ಬಗ್ಗೆ ರಾಜ್ಯದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಯಡಿಯೂರಪ್ಪ ಅವರಿಂದ ಮಾಹಿತಿ ಪಡೆದುಕೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಖಡಕ್ ಸೂಚನೆಯನ್ನು ರವಾನಿಸಿದ್ದಾರೆ. ಶಾ ಸಂದೇಶ ನೋಡಿ ರಾಜ್ಯ ಬಿಜೆಪಿ ನಾಯಕರು ಗೊಂದಲಕ್ಕೊಳಗಾಗಿದ್ದಾರೆ ಎಂದು ತಿಳಿದು ಬಂದಿದೆ.

    ಏನದು ‘ಶಾ’ಕಿಂಗ್ ಸಂದೇಶ?
    ಆಡಿಯೋಗೆ ಸಂಬಂಧಿಸಿದಂತೆ ಪಕ್ಷದಲ್ಲಿ ರಹಸ್ಯವಾಗಿ ಆಂತರಿಕ ತನಿಖೆ ನಡೆಸಿ ರೆಕಾರ್ಡ್ ಮಾಡಿದವರ ಹೆಸರು ಬಹಿರಂಗ ಪಡಿಸಬೇಡಿ. ಸದ್ಯ ಆಡಿಯೋ-ವಿಡಿಯೋ ಮಾಡಿದವರ ಹೆಸರು ಬಹಿರಂಗಪಡಿಸಲು ಸೂಕ್ತ ಸಮಯ ಇಲ್ಲ. ತನಿಖೆ ಪೂರ್ಣಗೊಂಡ ನಂತರ ವರದಿಯನ್ನು ಕಳುಹಿಸಬೇಕು ಮತ್ತು ತಪ್ಪಿತಸ್ಥರ ಹೆಸರು ಎಲ್ಲಿಯೂ ಲೀಕ್ ಆಗದಂತೆ ನೋಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ತಪ್ಪಿತಸ್ಥರ ವಿರುದ್ಧ ನಾವೇ ಸೂಕ್ತ ಕ್ರಮಕೈಗೊಳ್ಳುತ್ತೇವೆ. ಎಲ್ಲರೂ ಉಪಚುನಾವಣೆಯತ್ತ ಗಮನ ಕೊಡಿ ಅಮಿತ್ ಶಾ ಸಂದೇಶವನ್ನು ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಸೋಮವಾರ ಸುಪ್ರೀಂಕೋರ್ಟ್ ಕದ ತಟ್ಟಿರುವ ಕಾಂಗ್ರೆಸ್, ಸಿಎಂ ಯಡಿಯೂರಪ್ಪರ ಆಡಿಯೋವನ್ನು ಪರಿಗಣಿಗಣಿಸಿ ಮತ್ತೆ ವಿಚಾರಣೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿತ್ತು. ಮನವಿ ಪುರಸ್ಕರಿಸಿದ್ದ ಸುಪ್ರೀಂಕೋರ್ಟ್ ಇಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ಈಗಾಗಲೇ ವಿಡಿಯೋ ತುಣುಕು ಮತ್ತು ಅದರಲ್ಲಿನ ಸಂಭಾಷಣೆಯನ್ನು ಭಾಷಾಂತರ ಮಾಡಿ ಸುಪ್ರೀಂಕೋರ್ಟ್ ಗೆ ಸಲ್ಲಿಸಲಾಗಿದೆ. ಈ ಅಂಶಗಳನ್ನು ನ್ಯಾ.ಎನ್.ವಿ.ರಮಣ, ನ್ಯಾ. ಸಂಜೀವ್ ಖನ್ನಾ, ನ್ಯಾ. ಕೃಷ್ಣ ಮುರಾರಿ ಸಮ್ಮುಖದ ಪೀಠ ಪರಿಶೀಲನೆ ಮಾಡಲಿದೆ.