Tag: BSP Candidate

  • ಬಿಎಸ್‍ಪಿ ಅಭ್ಯರ್ಥಿ ಕಾಂಗ್ರೆಸ್ ಸೇರ್ಪಡೆ: ಮಧ್ಯಪ್ರದೇಶ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದ ಮಾಯಾವತಿ

    ಬಿಎಸ್‍ಪಿ ಅಭ್ಯರ್ಥಿ ಕಾಂಗ್ರೆಸ್ ಸೇರ್ಪಡೆ: ಮಧ್ಯಪ್ರದೇಶ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದ ಮಾಯಾವತಿ

    ಭೋಪಾಲ್: ತಮ್ಮ ಪಕ್ಷದ ಅಭ್ಯರ್ಥಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಕ್ಕೆ ಬಹುಜನ ಸಮಾಜದ ಪಕ್ಷದ (ಬಿಎಸ್‍ಪಿ) ನಾಯಕಿ ಮಾಯಾವತಿ ಫುಲ್ ಗರಂ ಆಗಿದ್ದಾರೆ.

    ಮಧ್ಯಪ್ರದೇಶದ ಗುನಾ ಲೋಕಸಭಾ ಕ್ಷೇತ್ರದ ಎಸ್‍ಪಿ-ಬಿಎಸ್‍ಪಿ ಅಭ್ಯರ್ಥಿ ಲೋಕೇಂದ್ರ ಸಿಂಗ್ ರಜಪೂತ್ ಅವರು ನಿನ್ನೆಯಷ್ಟೇ ಕಾಂಗ್ರೆಸ್ ಸೇರಿದ್ದಾರೆ. ಇದರಿಂದ ಕೋಪಗೊಂಡ ಮಾಯಾವತಿ ಅವರು, ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ಅವರ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂದಕ್ಕೆ ಪಡೆಯುತ್ತೇವೆ ಎಂದು ಟ್ವೀಟ್ ಮೂಲಕ ಎಚ್ಚರಿಕೆ ನೀಡಿದ್ದಾರೆ.

    ಸರ್ಕಾರ ವ್ಯವಸ್ಥೆಯನ್ನು ದುರುಪಯೋಗ ಮಾಡಿಕೊಳ್ಳುವಲ್ಲಿ ಕಾಂಗ್ರೆಸ್ ಕೂಡ ಬಿಜೆಪಿಗಿಂತ ಕಡಿಮೆ ಇಲ್ಲ. ಕಾಂಗ್ರೆಸ್ ಬಿಎಸ್‍ಪಿ ಅಭ್ಯರ್ಥಿಯನ್ನು ಬೆದರಿಸಿದೆ. ಆದರೆ ಬಿಎಸ್‍ಪಿ ಚಿಹ್ನೆ ಮೇಲೆಯ ಸ್ಪರ್ಧೆ ಮುಂದುವರಿಸಿ ಉತ್ತರಿಸಲಿದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‍ಗೆ ನೀಡಿರುವ ಬೆಂಬಲವನ್ನು ಪುನರ್ ಪರಿಗಣಿಸಲಾಗುತ್ತದೆ ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ.

    ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ನಾಯಕರ ಪ್ರಚಾರವು ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಅವಕಾಶ ಮಾಡಿಕೊಡುತ್ತಿದೆ. ಆದರೆ ಬಿಎಸ್‍ಪಿ-ಎಸ್‍ಪಿ ಮೈತ್ರಿ ಗೆಲ್ಲಬಾರದು ಎನ್ನುವ ಕಾಂಗ್ರೆಸ್‍ನ ವಿಚಾರವು, ಜಾತಿ ಹಾಗೂ ಸಂಕುಚಿತ ಗುಣವನ್ನು ಪ್ರತಿಫಲಿಸುತ್ತದೆ. ಬಿಜೆಪಿ ಮಾತ್ರ ನಮ್ಮ ಒಕ್ಕೂಟವನ್ನು ಸೋಲಿಸಬಹುದೆಂದು ಜನರು ನಂಬುವುದು ಸರಿಯಾಗಿದೆ. ಜನರು ಜಾಗರೂಕರಾಗಿರಿ ಎಂದು ಮತದಾರರಿಗೆ ಮಾಯಾವತಿ ಟ್ವೀಟ್ ಮೂಲಕ ಕೇಳಿಕೊಂಡಿದ್ದಾರೆ.

    ಮಧ್ಯಪ್ರದೇಶದ ಗುನಾ, ಭೋಪಾಲ್ ಸೇರಿದಂತೆ 8 ಲೋಕಸಭಾ ಕ್ಷೇತ್ರಗಳ ಮತದಾನವು ಮೇ 12ರಂದು ನಡೆಯಲಿದೆ.

    ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಯು ನವೆಂಬರ್ 2018ರಂದು ನಡೆದಿತ್ತು. ನವೆಂಬರ್ 28ರಂದು ಬಂದ ಫಲಿತಾಂಶದಲ್ಲಿ ಯಾವುದೇ ಪಕ್ಷಕ್ಕೂ ಬಹುಮತ (116 ಕ್ಷೇತ್ರಗಳಲ್ಲಿ) ಜಯ ಸಿಕ್ಕಿರಲಿಲ್ಲ. ಒಟ್ಟು 231 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 113 ಸ್ಥಾನಗಳಿತ್ತು. ಬಿಜೆಪಿ 109, ಬಿಎಸ್‍ಪಿ 2, ಎಸ್‍ಪಿ 1 ಹಾಗೂ ಪಕ್ಷೇತರ ಅಭ್ಯರ್ಥಿಗಳು 4 ಕ್ಷೇತ್ರಗಳಲ್ಲಿ ಜಯಗಳಿಸಿದ್ದರು.

    ಕಾಂಗ್ರೆಸ್ ಬಿಎಸ್‍ಪಿ, ಎಸ್‍ಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳ ಬೆಂಬಲ ಪಡೆದು ಸರ್ಕಾರ ರಚನೆ ಮಾಡಿದೆ. ಈಗ ಮಾಯಾವತಿ ಅವರು ಪರೋಕ್ಷವಾಗಿ ಕಾಂಗ್ರೆಸ್‍ಗೆ ನೀಡಿರುವ ಬೆಂಬಲವನ್ನು ಹಿಂಪಡೆಯುವ ಸಂದೇಶವನ್ನು ರವಾನಿಸಿದ್ದಾರೆ.