Tag: bsnl

  • ಒಡಿಶಾ | 60,000 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗೆ ಮೋದಿ ಚಾಲನೆ

    ಒಡಿಶಾ | 60,000 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗೆ ಮೋದಿ ಚಾಲನೆ

    • 97,500 4G ಮೊಬೈಲ್ ಟವರ್‌ಗಳಿಗೆ ಚಾಲನೆ
    • ರ‍್ಯಾಲಿಯಲ್ಲಿ ಮಕ್ಕಳು ತಂದ ಚಿತ್ರ ಸಂಗ್ರಹಿಸಲು ಸೂಚನೆ

    ಭುವನೇಶ್ವರ್‌: ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಒಡಿಶಾದ (Odisha) ಜಾರ್ಸುಗುಡದಲ್ಲಿ 60,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಿದ್ದಾರೆ. ಈ ವೇಳೆ ಜನರನ್ನುದ್ದೇಶಿಸಿ ಮಾತನಾಡುವಾಗ ಮಕ್ಕಳು ಹಿಡಿದಿದ್ದ ಚಿತ್ರಗಳನ್ನು ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಪ್ರಧಾನಿಗಳು ಉದ್ಘಾಟಿಸಿದ ಹಾಗೂ ಶಂಕುಸ್ಥಾಪನೆ ನೆರವೇರಿಸಿದ ಅಭಿವೃದ್ಧಿ ಯೋಜನೆಗಳಲ್ಲಿ ದೂರಸಂಪರ್ಕ, ರೈಲ್ವೆ, ಉನ್ನತ ಶಿಕ್ಷಣ, ಆರೋಗ್ಯ, ಕೌಶಲ್ಯ ಅಭಿವೃದ್ಧಿ, ಗ್ರಾಮೀಣ ವಸತಿ ಕ್ಷೇತ್ರಗಳು ಸೇರಿದಂತೆ ಇತರ ಕ್ಷೇತ್ರಗಳಿಗೆ ಸಂಬಂಧಿಸಿದ ಯೋಜನೆಗಳು ಸೇರಿವೆ. ಸ್ವದೇಶಿ ತಂತ್ರಜ್ಞಾನದೊಂದಿಗೆ ಸುಮಾರು 37,000 ಕೋಟಿ ರೂ. ವೆಚ್ಚದ 97,500 BSNL 4G ಮೊಬೈಲ್ ಟವರ್‌ಗಳನ್ನು (ಭಾರತದಾದ್ಯಂತ) ಉದ್ಘಾಟಿಸಿದ್ದಾರೆ.

    ಡಿಜಿಟಲ್ ಭಾರತ್ ನಿಧಿಯಡಿಯಲ್ಲಿ 18,900 ಕ್ಕೂ ಹೆಚ್ಚು 4G ಸೈಟ್‌ಗಳಿಗೆ ಹಣಕಾಸಿನ ನೆರವು ನೀಡಲಾಗಿದೆ. ಇದರಿಂದ ಸುಮಾರು 26,700 ಸಂಪರ್ಕವಿಲ್ಲದ ಹಳ್ಳಿಗಳಿಗೆ ಸಂಪರ್ಕ ಸಾಧಿಸಲು ಅನುಕೂಲವಾಗುತ್ತದೆ. 20 ಲಕ್ಷಕ್ಕೂ ಹೆಚ್ಚು ಬಳಕೆದಾರರಿಗೆ ಇದರಿಂದ ಉಪಯೋಗವಾಗಲಿದೆ. ಈ ಟವರ್‌ಗಳು ಸೌರಶಕ್ತಿ ಚಾಲಿತವಾಗಿದ್ದು ಪರಿಸರ ಸ್ನೇಹಿಯಾಗಿವೆ.

    ಸಂಬಲ್‌ಪುರ-ಸರ್ಲಾದಲ್ಲಿ ರೈಲು ಮೇಲ್ಸೇತುವೆಗೆ ಶಂಕು ಸ್ಥಾಪನೆ ನೆರವೇರಿದ್ದು, ಈ ಯೋಜನೆಗಳು ಒಡಿಶಾ ಮತ್ತು ನೆರೆಯ ರಾಜ್ಯಗಳಿಗೆ ಸರಕು ಸಾಗಾಟ ಮತ್ತು ಪ್ರಯಾಣಿಕರ ಸಂಚಾರ ಸುಗಮಗೊಳಿಸುತ್ತದೆ. ಸ್ಥಳೀಯ ಕೈಗಾರಿಕೆಗಳು ಮತ್ತು ವ್ಯಾಪಾರ ಅಭಿವೃದ್ಧಿ ಹೊಂದಲಿದೆ.

    ಬೆರ್ಹಾಂಪುರ ಮತ್ತು ಉಧ್ನಾ (ಸೂರತ್) ನಡುವಿನ ಅಮೃತ್ ಭಾರತ್ ಎಕ್ಸ್‌ಪ್ರೆಸ್‌ಗೆ ಮೋದಿ ಹಸಿರು ನಿಶಾನೆ ತೋರಲಿದ್ದಾರೆ. ಈ ಯೋಜನೆ ರಾಜ್ಯದ ಪ್ರವಾಸೋದ್ಯಮವನ್ನು ಉತ್ತೇಜಿಸಲಿದೆ. ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ.

    ರಾಜ್ಯದಲ್ಲಿ ಡಿಜಿಟಲ್ ಶಿಕ್ಷಣವನ್ನು ಹೆಚ್ಚಿಸಲು, ಪ್ರಧಾನಿ ಮೋದಿ 130 ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವೈ-ಫೈ ಸೌಲಭ್ಯಗಕ್ಕೆ ಚಾಲನೆ ನೀಡಲಿದ್ದಾರೆ. ಇದರಿಂದ 2.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

    ಒಡಿಶಾದ ಜನರಿಗೆ ಸಮಗ್ರ ಆರೋಗ್ಯ ಸೇವೆಗಳನ್ನು ಒದಗಿಸಲು ಅಪಘಾತ ಆರೈಕೆ ಘಟಕಗಳು, ದಂತ ಕಾಲೇಜುಗಳು, ಮಾತೃ ಮತ್ತು ಮಕ್ಕಳ ಆರೈಕೆ ಘಟಕಗಳಿಗೆ ಚಾಲನೆ ನೀಡಲಿದ್ದಾರೆ.

    ಅಂತ್ಯೋದಯ ಗೃಹ ಯೋಜನೆಯಡಿ 50,000 ಫಲಾನುಭವಿಗಳಿಗೆ ಮಂಜೂರಾತಿ ಆದೇಶಗಳನ್ನು ವಿತರಿಸಲಿದ್ದಾರೆ. ಈ ಯೋಜನೆಯು ಅಂಗವಿಕಲರು, ವಿಧವೆಯರು, ಮಾರಕ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳು ಮತ್ತು ನೈಸರ್ಗಿಕ ವಿಕೋಪಗಳ ಸಂತ್ರಸ್ತರು ಸೇರಿದಂತೆ ದುರ್ಬಲ ಗ್ರಾಮೀಣ ಕುಟುಂಬಗಳಿಗೆ ಮನೆ ಮತ್ತು ಆರ್ಥಿಕ ಸಹಾಯ ನೀಡಲಿದೆ.

  • ಬಿಎಸ್‌ಎನ್‌ಎಲ್‌ 4ಜಿಯಿಂದ 5ಜಿ ಸಿಮ್‌ ಕಾರ್ಡ್‌ಗೆ ಆನ್‌ಲೈನಿನಲ್ಲಿ ಅಪ್‌ಗ್ರೇಡ್‌ ಮಾಡೋದು ಹೇಗೆ?

    ಬಿಎಸ್‌ಎನ್‌ಎಲ್‌ 4ಜಿಯಿಂದ 5ಜಿ ಸಿಮ್‌ ಕಾರ್ಡ್‌ಗೆ ಆನ್‌ಲೈನಿನಲ್ಲಿ ಅಪ್‌ಗ್ರೇಡ್‌ ಮಾಡೋದು ಹೇಗೆ?

    ಬಿಎಸ್‌ಎನ್‌ಎಲ್‌ (BSNL) ಇತ್ತೀಚಿಗೆ 5ಜಿ ಸೇವೆಯನ್ನು (5G) ಆರಂಭಿಸಿದೆ. ಈಗಾಗಲೇ ಹೈದರಾಬಾದ್‌ (Hyderabad) ಮತ್ತು ದೆಹಲಿಯಲ್ಲಿ ಸೇವೆ ಆರಂಭಿಸಿದ್ದು ಶೀಘ್ರವೇ ಉಳಿದ ನಗರಗಳಲ್ಲಿ ಈ ಸೇವೆ ಆರಂಭವಾಗಲಿದೆ. ಹೀಗಾಗಿ ಇಲ್ಲಿ  3ಜಿಯಿಂದ 4ಜಿ,  4ಜಿ ಯಿಂದ  5ಜಿಗೆ ಅಪ್‌ಗ್ರೇಡ್‌ ಮಾಡುವ ವಿಧಾನವನ್ನು ತಿಳಿಸಲಾಗಿದೆ.

    ಗ್ರಾಹಕರು ಆಫ್‌ಲೈನ್‌ ಅಥವಾ ಆನ್‌ಲೈನ್‌ (Online) ಮೂಲಕ ತಮ್ಮ ಸಿಮ್‌ ಕಾರ್ಡ್‌ (Sim Card) ಅನ್ನು 5ಜಿಗೆ ಅಪ್‌ಗ್ರೇಡ್‌ ಮಾಡಬಹುದು.

    ಆಫ್‌ಲೈನ್‌ ಹೇಗೆ?
    1. ನಿಮ್ಮ ಹತ್ತಿರದ ಬಿಎಸ್‌ಎನ್‌ಎಲ್‌ ಕಚೇರಿಗೆ ಹೋಗಿ.
    2.ಕಚೇರಿಗೆ ಹೋಗುವಾಗ ಆಧಾರ್‌ ಕಾರ್ಡ್‌ ಅಥವಾ ಸರ್ಕಾರಿ ದಾಖಲೆಗಳನ್ನು ತೆಗೆದುಕೊಂಡು ಹೋಗಿ.
    3. ಗ್ರಾಹಕ ಸೇವಾ ಸಿಬ್ಬಂದಿಗೆ ಅಗತ್ಯ ಕೆವೈಸಿ ಮಾಹಿತಿಗಳನ್ನು ನೀಡಿ.
    4. ನೀವು ನೀಡಿದ ವಿವರಗಳು ಹಳೆಯ ಸಿಮ್‌ ಕಾರ್ಡ್‌ಗೆ ನೀಡಿದ ವಿವರಗಳಿಗೆ ತಾಳೆಯಾದರೆ ನಿಮಗೆ ಹೊಸ ಬಿಎಸ್‌ಎನ್‌ಎಲ್‌ 5ಜಿ ಸಿಮ್‌ ಸಿಗುತ್ತದೆ.

    ಬಹಳಷ್ಟು ಗ್ರಾಹಕರು ಬಿಎಸ್‌ಎನ್‌ಎಲ್‌ ಕಚೇರಿಗೆ ಭೇಟಿ ನೀಡುತ್ತಿರುವ ಕಾರಣ ಜನಸಂದಣಿ ಹೆಚ್ಚಾಗುತ್ತಿದೆ. ಹೀಗಾಗಿ ನೀವು ಮನೆಯಲ್ಲೇ ಕುಳಿತು ನಿಮ್ಮ ಸಿಮ್‌ ಕಾರ್ಡ್‌ ಅನ್ನು 5ಜಿಗೆ ಅಪ್‌ಗ್ರೇಡ್‌ ಮಾಡಬಹುದು. ಇದನ್ನೂ ಓದಿ: ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌25 ಆಲ್ಟ್ರಾ, ಎಸ್‌24 ಆಲ್ಟ್ರಾ, ಎಸ್‌23 ಆಲ್ಟ್ರಾ ಬೆಲೆ ದಿಢೀರ್ಭಾರೀ ಇಳಿಕೆ

    ಆನ್‌ಲೈನಿನಲ್ಲಿ ಹೇಗೆ?
    1. ಬಿಎಸ್‌ಎನ್‌ಎಲ್‌ ವೆಬ್‌ಸೈಟ್‌ಗೆ ಭೇಟಿ ನೀಡಿ – ಲಿಂಕ್‌
    2. ಇಲ್ಲಿ ಎಲ್ಲಾ ವಿವರಗಳನ್ನು ತುಂಬಿಸಿ. ಮುಖ್ಯವಾಗಿ ನಿಮಗೆ ಪ್ರಿ ಪೇಯ್ಡ್‌ ಬೇಕೋ ಪೋಸ್ಟ್‌ ಪೇಯ್ಡ್‌ ಬೇಕೋ ಎಂಬುದನ್ನು ಆರಿಸಿಕೊಳ್ಳಿ.
    3. ಪರ್ಯಾಯ ಮೊಬೈಲ್‌ ನಂಬರ್‌ ನೀಡಿದ ಬಳಿ ಅದು ಯಾರದ್ದು ಎಂಬುದನ್ನು ಆಯ್ಕೆ ಮಾಡಿ.
    4.ಎಲ್ಲಾ ವಿವರಗಳನ್ನು ನೀಡಿದ ಮೇಲೆ ಸೆಂಡ್‌ ಒಟಿಪಿ ಬಟನ್‌ ಕ್ಲಿಕ್‌ ಮಾಡಿ.
    5. ಒಟಿಪಿ ಸೇರಿದಂತೆ ವಿವರಗಳನ್ನು ಟೈಪ್‌ ಮಾಡಿದ ನಂತರ ನೀವು ನೀಡಿದ ವಿಳಾಸಕ್ಕೆ ಕೆಲವೇ ದಿನಗಳಲ್ಲಿ 5ಜಿ ಸಿಮ್‌ ಕಾರ್ಡ್‌ ಬರುತ್ತದೆ.

  • ಕೊಡಗಿನಲ್ಲಿ BSNL ಸೇವೆ ಸರಿಪಡಿಸಲು ಕೇಂದ್ರ ಸಚಿವರಿಗೆ ಯದುವೀರ್‌‌ ಒಡೆಯರ್‌ ಮನವಿ

    ಕೊಡಗಿನಲ್ಲಿ BSNL ಸೇವೆ ಸರಿಪಡಿಸಲು ಕೇಂದ್ರ ಸಚಿವರಿಗೆ ಯದುವೀರ್‌‌ ಒಡೆಯರ್‌ ಮನವಿ

    ಮಡಿಕೇರಿ: ಕೊಡಗಿನಲ್ಲಿ ತುರ್ತಾಗಿ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ (BSNL Network) ವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ದೂರ ಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಮೈಸೂರು-ಕೊಡಗು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ (Yaduveer Wadiyar) ಮನವಿ ಮಾಡಿದ್ದಾರೆ.

    ನವದೆಹಲಿಯಲ್ಲಿ (New Delhi) ಕೇಂದ್ರ ಸಚಿವರನ್ನು ಭೇಟಿಯಾದ ಸಂಸದ ಯದುವೀರ್‌, ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಇದರಿಂದ ವಿದ್ಯುತ್‌ ಕಂಬಗಳು, ಟೆಲಿಫೋನ್‌ ಕಂಬಗಳು ನೆಲಕ್ಕುರುಳಿವೆ. ಅವುಗಳ ದುರಸ್ತಿಗೂ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕೆಲಸದ ಅವಧಿ 9ರಿಂದ 10ಗಂಟೆಗೆ ಹೆಚ್ಚಳಕ್ಕೆ ಸರ್ಕಾರ ಚಿಂತನೆ – ಕಾರ್ಮಿಕ ಸಂಘಟನೆಗಳ ವಿರೋಧ

    ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿ, ಕೊಡಗಿನಲ್ಲಿ (Kodagu) ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ ಸೇವೆ ಅತ್ಯಂತ ಕಳಪೆಯಾಗಿದೆ. ಇಲ್ಲಿ ಟವರ್‌ಗಳನ್ನು ಬದಲಿಸಬೇಕು, ಉತ್ತಮ ಕನೆಕ್ಟಿವಿಟಿ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈ ಬಗ್ಗೆಯೂ ಸಚಿವರ ಗಮನಕ್ಕೆ ತರಲಾಗಿದೆ. ಕಳಪೆ ನೆಟ್‌ವರ್ಕ್ ಸಂಪರ್ಕದಿಂದ ವಿದ್ಯಾರ್ಥಿಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ, ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಅಥವಾ ಡಿಜಿಟಲ್ ಕೋರ್ಸ್‌ ಮಾಡಲು ಸಾಧ್ಯವಾಗುತ್ತಿಲ್ಲ. ಅಷ್ಟೇ ಅಲ್ಲದೇ, ಸರ್ಕಾರಿ ಕಚೇರಿಗಳ ದಿನನಿತ್ಯದ ಕೆಲಸಗಳಿಗೂ ತೊಂದರೆಯಾಗುತ್ತಿದೆ ಎಂದು ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮದುವೆಯಾಗಲು ಗೋವಾಕ್ಕೆ ತೆರಳಿದ್ದ ಜೋಡಿ – ಗಂಟಲು ಸೀಳಿ ಪ್ರೇಯಸಿಯ ಕೊಲೆ

    ಕೊಡಗಿನಲ್ಲಿ ನನ್ನ ಗಮನಕ್ಕೆ ಬಂದಿರುವ ಪ್ರಮುಖ ವಿಷಯ ಎಂದರೆ ಪವರ್‌ ಬ್ಯಾಕ್‌ ಅಪ್‌. ಬ್ಯಾಕ್‌ ಅಪ್‌ ಬ್ಯಾಟರಿಗಳು ಸಂಪೂರ್ಣ ನಿಷ್ಕ್ರಿಯವಾದರೆ, ಅವುಗಳನ್ನು ಮತ್ತೆ ಸರಿಪಡಿಸಲು ಸಾಕಷ್ಟು ಸಮಯ ಮತ್ತು ಪ್ರಯಾಸದ ಕೆಲಸವಾಗಿದೆ. ಕಳೆದ ಮಾರ್ಚ್‌ 8ರಂದು ದಿಶಾ ಸಭೆ ನಡೆಸಿದ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿ ಎಲ್ಲವನ್ನೂ ಸರಿಪಡಿಸಲು ತಿಳಿಸಿದ್ದೆ. ಆದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಯದುವೀರ್‌ ವಿವರಿಸಿದ್ದಾರೆ. ಇದನ್ನೂ ಓದಿ: ಕೇದಾರನಾಥ ಟ್ರಕ್ಕಿಂಗ್ ದಾರಿಯಲ್ಲಿ ಭೂಕುಸಿತ – ಇಬ್ಬರು ಸಾವು, ಮೂವರಿಗೆ ಗಾಯ

  • 2007ರ ನಂತ್ರ ಇದೇ ಮೊದಲ ಬಾರಿಗೆ BSNLಗೆ ಭಾರೀ ಲಾಭ

    2007ರ ನಂತ್ರ ಇದೇ ಮೊದಲ ಬಾರಿಗೆ BSNLಗೆ ಭಾರೀ ಲಾಭ

    – ಆರ್ಥಿಕ ವರ್ಷದ ತ್ರೈಮಾಸಿಕದಲ್ಲಿ 262 ಕೋಟಿ ರೂ. ಗಳಿಕೆ

    ನವದೆಹಲಿ: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಭಾರತ್‌ ಸಂಚಾರ್‌ ನಿಗಮ್‌ ಲಿಮಿಟೆಡ್‌ (BSNL) 2007ರ ಬಳಿಕ ಇದೇ ಮೊದಲ ಬಾರಿಗೆ ಲಾಭದತ್ತ ಮರಳಿದೆ. ಜಿಯೋ, ಏರ್‌ಟೆಲ್‌ ಸೇವೆಗಳಲ್ಲಿ ಏರಿಕೆ ಕಂಡ ಬಳಿಕ ಗ್ರಾಹಕರು ಬಿಎಸ್‌ಎನ್‌ಎಲ್‌ನತ್ತ ಮರಳುತ್ತಿದ್ದು, ಲಾಭ ಗಳಿಕೆಗೆ ಕಾರಣವಾಗಿದೆ.

    ಹೌದು. 2025ರ ಆರ್ಥಿಕ ವರ್ಷದ 3ನೇ ತ್ರೈಮಾಸಿಕದಲ್ಲಿ ಬರೋಬ್ಬರಿ 262 ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಆಕ್ರಮಣಕಾರಿ ನೆಟ್‌ವರ್ಕ್ ವಿಸ್ತರಣೆ ಮತ್ತು ಗ್ರಾಹಕ ಸೇರ್ಪಡೆಯಂತಹ ಕ್ರಮಗಳು ಲಾಭ ಗಳಿಕೆಗೆ ಕಾರಣವಾಗಿದೆ. ಇದರಿಂದ ಅರ್ಥಿಕ ವರ್ಷದ ಅಂತ್ಯದ ವೇಳೆಗೆ ಆದಾಯ ಬೆಳವಣಿಗೆಯು ಶೇ.20ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಸುಧಾರಣೆಯಾಗಲಿದೆ ಎಂದು ಸಂಸ್ಥೆ ಹೇಳಿದೆ.

    ಈ ಕುರಿತು ಬಿಎಸ್‌ಎನ್‌ಎಲ್‌ CMD ಎ. ರಾಬರ್ಟ್ J. ರವಿ, ಇಂತಹ ಪ್ರಯತ್ನಗಳೊಂದಿಗೆ ಅರ್ಥಿಕ ವರ್ಷಾಂತ್ಯದ ವೇಳೆಗೆ ಆದಾಯ ಬೆಳವಣಿಗೆ ಶೇ.20ಕ್ಕಿಂತ ಹೆಚ್ಚು ಸುಧಾರಿಸಲಿದೆ ಎಂದು ನಾವು ನಿರೀಕ್ಷಿಸುತ್ತೇವೆ. ಅಲ್ಲದೇ ಹೆಚ್ಚುವರಿಯಾಗಿ ಬಿಎಸ್‌ಎನ್‌ಎಲ್‌ ತನ್ನ ಹಣಕಾಸಿನ ವೆಚ್ಚ ಮತ್ತು ಒಟ್ಟಾರೆ ವೆಚ್ಚವನ್ನು ಕಡಿಮೆ ಮಾಡಿದೆ. ಹೀಗಾಗಿ ಕಳೆದ ವರ್ಷಕ್ಕೆ ಹೋಲಿಸಿದ್ರೆ ಪ್ರಸಕ್ತ ವರ್ಷದಲ್ಲಿ 1,800 ಕೋಟಿ ರೂ. ನಷ್ಟ ಇಳಿಕೆಯಾಗಿದೆ ಎಂದು ತಿಳಿಸಿದ್ದಾರೆ.

    BSNLನ ಮೊಬಿಲಿಟಿ ಸೇವೆಗಳ ಆದಾಯವು ವರ್ಷದಿಂದ ವರ್ಷಕ್ಕೆ 15% ರಷ್ಟು ಹೆಚ್ಚಾಗಿದೆ. ಆದ್ರೆ ಫೈಬರ್-ಟು-ದಿ-ಹೋಮ್ (FTTH) ಮತ್ತು ಲೀಸ್ಡ್ ಲೈನ್ ಸೇವೆಗಳ ಆದಾಯವು ಅನುಕ್ರಮವಾಗಿ 18% ಮತ್ತು 14% ವರ್ಷದಿಂದ ವರ್ಷಕ್ಕೆ ಏರಿಕೆಯಾಗಿದೆ ಎಂದು ಹೇಳಿದೆ.

    ಮುಂದುವರಿದು ಮಾತನಾಡಿರುವ ಜೆ. ರವಿ, ನಮ್ಮ ಗ್ರಾಹಕರ ಅನುಭವವನ್ನು ಹೆಚ್ಚಿಸಲು, ಬಿಎಸ್ಎನ್ಎಲ್ ಇತ್ತೀಚೆಗೆ ರಾಷ್ಟ್ರೀಯ ವೈಫೈ ರೋಮಿಂಗ್, ಎಲ್ಲಾ ಮೊಬೈಲ್ ಗ್ರಾಹಕರಿಗೆ ಉಚಿತ ಮನರಂಜನೆ ನೀಡುವ ಬಿಐಟಿವಿ ಮತ್ತು ಎಲ್ಲಾ ಎಫ್‌ಟಿಟಿಎಚ್ ಗ್ರಾಹಕರಿಗೆ ಐಎಫ್‌ಟಿವಿ ಮುಂತಾದ ನಾವೀನ್ಯತೆಗಳನ್ನು ಪರಿಚಯಿಸಿದೆ. ಸೇವೆಯ ಗುಣಮಟ್ಟ ಮತ್ತು ಸೇವಾ ಭರವಸೆಯ ಮೇಲಿನ ನಮ್ಮ ನಿರಂತರ ಗಮನವು ಗ್ರಾಹಕರ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿದೆ. ಭಾರತದಲ್ಲಿ ಪ್ರಮುಖ ಟೆಲಿಕಾಂ ಸೇವಾ ಪೂರೈಕೆದಾರರಾಗಿ ಬಿಎಸ್‌ಎನ್‌ಎಲ್‌ನ ಸ್ಥಾನವನ್ನು ಬಲಪಡಿಸಿದೆ ಎಂದು ಹೇಳಿದ್ದಾರೆ.

    ಕೇಂದ್ರ ಸರ್ಕಾರವು ಟೆಲಿಕಾಂ ಕಂಪನಿಗೆ ಸಾಕಷ್ಟು ಬೆಂಬಲ ನೀಡಿದೆ. 2023ರಲ್ಲಿ ಕೇಂದ್ರ ಸರ್ಕಾರ 89,000 ಕೋಟಿ ರೂ.ಗಳ ಪ್ಯಾಕೇಜ್‌ಗೆ ಅನುಮೋದನೆ ನೀಡಿತ್ತು. ಅದಕ್ಕೂ ಮುನ್ನ 2021ರಲ್ಲಿ 1.64 ಲಕ್ಷ ಕೋಟಿ ರೂ. ಹಾಗೂ 2019ರಲ್ಲಿ 69,000 ಕೋಟಿ ರೂ. ಗಳ ಪ್ಯಾಕೇಜ್‌ ಅನ್ನು ಘೋಷಣೆ ಮಾಡಿತ್ತು ಎಂಬುದು ಗಮನಾರ್ಹ.

  • BSNL ಟವರ್‌ಗೆ ಜಾಗ ನೀಡಿದ ಆದೇಶ ವಾಪಸ್ ಪಡೆದ ಉತ್ತರ ಕನ್ನಡ ಡಿಸಿ

    BSNL ಟವರ್‌ಗೆ ಜಾಗ ನೀಡಿದ ಆದೇಶ ವಾಪಸ್ ಪಡೆದ ಉತ್ತರ ಕನ್ನಡ ಡಿಸಿ

    ಕಾರವಾರ: ಮೊಬೈಲ್ ನೆಟ್‍ವರ್ಕ್ (Mobile Network) ಸಮಸ್ಯೆ ಹೆಚ್ಚಿರುವ ಉತ್ತರ ಕನ್ನಡ (Uttara Kannada) ಜಿಲ್ಲೆಗೆ ಕೇಂದ್ರ ಸರ್ಕಾರ ದೂರಸಂಪರ್ಕ ಇಲಾಖೆಯಿಂದ 232 ಹೊಸ ಮೊಬೈಲ್ ಟವರ್ ಗಳನ್ನು ಮಂಜೂರು ಮಾಡಲಾಗಿತ್ತು.

    232 ಟವರ್ ಗಳ ಪೈಕಿ 18 ಟವರ್ ಗಳನ್ನು 2G ಇಂದ 3G ಮೇಲ್ದರ್ಜೆಗೆ ಏರಿಸಲಾಗಿದ್ದು, ಇದುವರೆಗೂ ಮೊಬೈಲ್ ಸಿಗ್ನಲ್ ಸಿಗದ 196 ಹಳ್ಳಿಗಳನ್ನು ಗುರುತಿಸಿ ಟವರ್ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು. ಇವುಗಳಲ್ಲಿ ಕಾರವಾರ-08, ಅಂಕೋಲಾ-12, ಜೋಯಿಡಾ – 42, ಕುಮಟಾ-19, ಹೊನ್ನಾವರ-8, ಭಟ್ಕಳ-13, ಸಿದ್ದಾಪುರ -17, ಶಿರಸಿ -24, ಮುಂಡಗೋಡು- 10 ಹೊಸ ಟವರ್ ಗೆ ಮಂಜೂರು ದೊರಕಿದ ನಂತರ ಜಿಲ್ಲಾಡಳಿತ ಉಚಿತವಾಗಿ ಅರಣ್ಯ ಭೂಮಿಯನ್ನು ಆಯಾ ತಾಲೂಕು ವ್ಯಾಪ್ತಿಯಲ್ಲಿ ಟವರ್ ನಿರ್ಮಾಣಕ್ಕೆ 30 ವರ್ಷದ ಲೀಸ್ ನೊಂದಿಗೆ ನೀಡಿತ್ತು.

    ಆದರೆ ಇದೀಗ ಅರಣ್ಯ ಕಾಯ್ದೆ ಅಡ್ಡಿಯಾದ್ದರಿಂದ ಮೊದಲ ಹಂತದಲ್ಲಿ ಶಿರಸಿಯ 06 ಹಾಗೂ ಜಿಲ್ಲೆಯ ಒಟ್ಟು 72 ಸ್ಥಳಗಳಲ್ಲಿ ನೀಡಿದ್ದ ಜಾಗದ ಮಂಜೂರಾತಿ ಆದೇಶವನ್ನು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ರವರು ಹಿಂಪಡೆದುಕೊಂಡಿದ್ದಾರೆ. ಇದರಿಂದ ಹಲವು ವರ್ಷದಿಂದ ನೆಟ್ವರ್ಕ ಸಮಸ್ಯೆ ಎದುರಿಸುತಿದ್ದ ಗ್ರಾಮಗಳಿಗೆ ಟವರ್ ನಿರ್ಮಾಣ ವಾಗುವ ಮುಂಚೆಯೇ ವಿಘ್ನ ಎದುರಾಗಿದೆ. ಇದನ್ನೂ ಓದಿ: ತಮಿಳುನಾಡು ಕೇಳಿದಷ್ಟು ನೀರು ಹರಿಸಲು ಸಾಧ್ಯವಿಲ್ಲ: ಅಫಿಡವಿಟ್‌ನಲ್ಲಿ ಕರ್ನಾಟಕ ಹೇಳಿದ್ದೇನು?

    ಶಿರಸಿಯ ಹುಲೇಕಲ್ ಭಾಗದ -3, ಸಂಪಖಂಡ ಭಾಗದ 2, ಬನವಾಸಿ ಭಾಗದ -1 ಟವರ್ ಗಳನ್ನು ಜಿಲ್ಲಾಧಿಕಾರಿ ಆದೇಶದಿಂದ ನಿರ್ಮಾಣ ಹಂತದಲ್ಲೇ ಕೈ ಬಿಡಲಾಗಿದೆ. ಮೊಬೈಲ್ ನೆಟ್‍ವರ್ಕ್ ಇಲ್ಲದ ಜೋಯಿಡಾ ಭಾಗಕ್ಕೂ ಈ ಸಮಸ್ಯೆ ಎದುರಾಗಿದ್ದು, ಜಿಲ್ಲಾಧಿಕಾರಿಗಳು ಆದೇಶ ಹಿಂಪಡೆದಿದ್ದರಿಂದ ಇಲ್ಲಿನ ಜನತೆಗೂ ಮೊಬೈಲ್ ನೆಟ್‍ವರ್ಕ್ ಸಮಸ್ಯೆ ಎದುರಾಗಿದೆ.

    ಶಿರಸಿಯಲ್ಲಿ ಮಂಜೂರಾಗಿದ್ದ ಟವರ್ ಗಳನ್ನು ಬಿಎಸ್‍ಎನ್‍ಎಲ್ ಇಲಾಖೆ ಯಿಂದ ಕಾಮಗಾರಿ ಸಹ ಪ್ರಾರಂಭಮಾಡಲಾಗಿತ್ತು. ಆದರೆ ಇದೀಗ ಆದೇಶ ಹಿಂಪಡೆದಿದ್ದರಿಂದ ಬಿಎಸ್‍ಎನ್‍ಎಲ್‍ಗೂ ದೊಡ್ಡ ನಷ್ಟ ಎದುರಾಗುವ ಜೊತೆ ಮೊಬೈಲ್ ನೆಟ್‍ವರ್ಕ್ ಆಗುವ ಆಸೆ ಹೊಂದಿದ್ದ ಜಿಲ್ಲೆಯ ಜನರು ಇದೀಗ ಬೇಸರ ವ್ಯಕ್ತಪಡಿಸುವಂತಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ 225 ಮೊಬೈಲ್ ಟವರ್ ಮಂಜೂರು : ಬಿವೈ ರಾಘವೇಂದ್ರ

    ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ 225 ಮೊಬೈಲ್ ಟವರ್ ಮಂಜೂರು : ಬಿವೈ ರಾಘವೇಂದ್ರ

    ಶಿವಮೊಗ್ಗ: ಮಲೆನಾಡಿನ ಭಾಗದಲ್ಲಿ ಮೊಬೈಲ್ ನೆಟ್‍ವರ್ಕ್ (Mobile Network) ಹಾಗೂ ಇಂಟರ್ನೆಟ್ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಶಿವಮೊಗ್ಗ (Shivamogga) ಲೋಕಸಭಾ ಕ್ಷೇತ್ರಕ್ಕೆ 4ಜಿ ಆಧಾರಿತ 225 ಮೊಬೈಲ್ ಟವರ್ ಸ್ಥಾಪನೆಗೆ ಸರ್ಕಾರ ಅನುಮತಿ ನೀಡಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ (BY Raghavendra) ತಿಳಿಸಿದ್ದಾರೆ.

    ಶನಿವಾರ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಸಾಗರ ತಾಲೂಕಿಗೆ 89, ಹೊಸನಗರಕ್ಕೆ 35, ತೀರ್ಥಹಳ್ಳಿಗೆ 27, ಶಿವಮೊಗ್ಗಕ್ಕೆ 18, ಶಿಕಾರಿಪುರಕ್ಕೆ 13, ಭದ್ರಾವತಿ ಹಾಗೂ ಸೊರಬ ತಾಲೂಕಿಗೆ ತಲಾ 8 ಮತ್ತು ಬೈಂದೂರಿಗೆ 25 ಟವರ್‍ಗಳು ಮಂಜೂರಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಖಾದರ್ ವಿರುದ್ಧ ಅವಹೇಳನಕಾರಿ ಪೋಸ್ಟ್ – ಶ್ರೀರಾಮಸೇನೆ ಮುಖಂಡನ ವಿರುದ್ಧ ದೂರು

    ಮೊದಲ ಮೂರು ಹಂತಗಳಲ್ಲಿ ಶಿವಮೊಗ್ಗ ಜಿಲ್ಲೆಯ 112 ಹಾಗೂ ಬೈಂದೂರು ಕ್ಷೇತ್ರದಲ್ಲಿ 25 ಟವರ್ ಸ್ಥಾಪನೆಗೆ ಅನುಮತಿ ದೊರಕಿದೆ. ಈಗಾಗಲೇ ಬಿಎಸ್‍ಎನ್‍ಎಲ್ (BSNL) ಸಂಸ್ಥೆಯು ಟವರ್ ಸ್ಥಾಪನೆಗೆ ಸೂಕ್ತ ಜಾಗಗಳ ಗುರುತಿಸಲಾಗಿದೆ. ಭೂಮಿ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯ್ತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

    ಪ್ರತಿ ಟವರ್ ನಿರ್ಮಾಣಕ್ಕೆ 75 ಲಕ್ಷ ರೂ.ಗಳಿಂದ 1 ಕೋಟಿ ರೂ.ವರೆಗೆ ವೆಚ್ಚವಾಗಲಿದೆ. 225 ಟವರ್ ನಿರ್ಮಾಣಕ್ಕೆ ಸುಮಾರು 200 ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನವನ್ನು ಕೇಂದ್ರ ಸರ್ಕಾರ ಭರಿಸಲಿದೆ. ಅನುಮತಿ ದೊರಕಿರುವ ಸ್ಥಳಗಳಲ್ಲಿ 2023ರ ಡಿಸೆಂಬರ್ ಒಳಗಾಗಿ ಮೊಬೈಲ್ ಟವರ್ ಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

    ಮಲೆನಾಡಿನ ಕುಗ್ರಾಮಗಳಲ್ಲಿ ಸಂಪರ್ಕ ಸುಧಾರಣೆಗೆ ಕ್ರಮಕೈಗೊಳ್ಳುವಂತೆ ಹಾಗೂ ಹೊಸ ಮೊಬೈಲ್ ಟವರ್ ನಿರ್ಮಿಸುವಂತೆ ಸಂಸದರು ಕೇಂದ್ರಕ್ಕೆ ಮನವಿ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಹೆಚ್ಚಿನ ಸಂಖ್ಯೆಯ ಮೊಬೈಲ್ ಟವರ್ ನಿರ್ಮಾಣಕ್ಕೆ ಅನುಮತಿ ನೀಡಿದ ಕೇಂದ್ರ ದೂರ ಸಂಪರ್ಕ (Department of Telecommunication) ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಸಂಸದ ರಾಘವೇಂದ್ರ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಭಾರತದ ನೂತನ ಸಂಸತ್ ಭವನಕ್ಕೆ ದೇಶದ ವಿವಿಧತೆಯ ಮೆರುಗು

  • ಪೊಲೀಸ್ ಇಲಾಖೆಯಿಂದ BSNL ಗೆ ಗುಡ್ ಬೈ – ಜಿಯೋಗೆ ಹಾಯ್

    ಪೊಲೀಸ್ ಇಲಾಖೆಯಿಂದ BSNL ಗೆ ಗುಡ್ ಬೈ – ಜಿಯೋಗೆ ಹಾಯ್

    ಬೆಂಗಳೂರು: ರಾಜ್ಯ ಪೊಲೀಸರು (Karnataka State Police) ಇದೀಗ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ (BSNL) ನೆಟ್‌ವರ್ಕ್ ಬಿಟ್ಟು ರಿಲಯನ್ಸ್ ಜಿಯೋಗೆ ಪೋರ್ಟ್ ಆಗಲು ನಿರ್ಧರಿಸಿದ್ದಾರೆ. ಪೊಲೀಸ್ ಇಲಾಖೆ ಬಳಸುತ್ತಿದ್ದ ಬಿಎಸ್‌ಎನ್‌ಎಲ್ ಸಿಮ್‌ಕಾರ್ಡ್ನಿಂದ ಮುಕೇಶ್ ಅಂಬಾನಿ (Mukesh Ambani) ಒಡೆತನದ ಜಿಯೋಗೆ ಶಿಫ್ಟ್ ಆಗಲು ನಿರ್ಧರಿಸಲಾಗಿದೆ.

    ಭಾರತ್ ಸಂಚಾರ ನಿಗಮ ನಿಯಮಿತ (BSNL) ರಾಜ್ಯಾದ್ಯಂತ ಸರಿಯಾಗಿ ನೆಟ್‌ವರ್ಕ್ ಸಿಗುತ್ತಿಲ್ಲ, ಇದರಿಂದ ಅಧಿಕಾರಿಗಳ ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ರಾಜ್ಯ ಪೊಲೀಸ್ ಇಲಾಖೆ ಈ ಮಹತ್ವದ ನಿರ್ಧಾರ ಕೈಗೊಂಡಿದ್ದು, ಸುಮಾರು 38,347 ಸಿಮ್‌ಕಾರ್ಡ್‌ಗಳನ್ನು (SIM Card) ಬದಲಾಯಿಸಲು ಸರ್ಕಾರ ಅನುಮತಿ ನೀಡಿದೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಓಲಾದಿಂದ 7,614 ಕೋಟಿ ಹೂಡಿಕೆ- ಸಿಎಂ ಸ್ಟಾಲಿನ್‌ ಸಹಿ

    ಸಿಬ್ಬಂದಿಯ ಅಸ್ತಿತ್ವದಲ್ಲಿರುವ ಮೊಬೈಲ್ ಸಂಖ್ಯೆಯನ್ನು ಉಳಿಸಿಕೊಳ್ಳಲು ಜಿಯೋಗೆ ಪೋರ್ಟ್ ಮಾಡಬೇಕಾಗುತ್ತದೆ. ಬಿಎಸ್‌ಎನ್‌ಎಲ್ ಪೋರ್ಟಿಂಗ್ ಪ್ರಕ್ರಿಯೆಯು ಪೂರ್ವಾಪೇಕ್ಷಿತವಾಗಿದ್ದು, ಮುಂಚಿತವಾಗಿಯೇ ಜಿಯೋ ಸಿಮ್‌ಕಾರ್ಡ್ಗಳನ್ನು ಒದಗಿಸಲಾಗುತ್ತದೆ. ಪ್ರತಿ ಸಿಮ್‌ಕಾರ್ಡ್ನಿಂದ ಪೂರ್ಟ್ ರಿಕ್ವೆಸ್ಟ್ ಸಂಗ್ರಹಿಸುವ ಅಗತ್ಯವಿದ್ದು, ಆರಂಭವಾದ 4 ದಿನಗಳ ಒಳಗೆ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗುತ್ತದೆ. 38,347 ಸಕ್ರಿಯ ಸಂಪರ್ಕ ಸಂಖ್ಯೆಗಳನ್ನು ಹೊಂದಿರುವುದರಿಂದ ಎಲ್ಲ ಘಟಕಗಳನ್ನು ಒಳಗೊಳ್ಳಲು ಹಂತ ಹಂತವಾಗಿ ಪೋರ್ಟ್ ಪ್ರಕ್ರಿಯೆ ಮಾಡಲಾಗುತ್ತದೆ ಎಂದು ಪೊಲೀಸ್ ಮಹಾನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    38,347 ಸಂಪರ್ಕಗಳಲ್ಲಿ ಹೆಚ್ಚಿನ ಸಂಪರ್ಕ ಸಂಖ್ಯೆಗಳು ಗ್ರಾಮೀಣ ಪ್ರದೇಶಗಳಲ್ಲಿವೆ. ಅಲ್ಲಿ ಉತ್ತಮ ನೆಟ್‌ವರ್ಕ್ ಕೊರತೆ ಕಂಡುಬಂದಿದೆ. ಇದರಿಂದ ಫೋಟೋ, ವೀಡಿಯೋ ಸೇರಿದಂತೆ ಇತರ ದತ್ತಾಂಶಗಳನ್ನು ವರ್ಗಾಯಿಸುವುದು ಕಷ್ಟಸಾಧ್ಯವಾಗುತ್ತಿತ್ತು. ಪೊಲೀಸ್ ತುರ್ತು ಸೇವೆಗಳಿಗಾಗಿ ಲಭ್ಯವಿರುವ ನೆಟ್‌ವರ್ಕ್‌ಗಳ ದಕ್ಷತೆ ಹೆಚ್ಚಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್‌ನಂತೆ ಇನ್ನು ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಲ್ಲೂ ವೆರಿಫೈಡ್ ಖಾತೆಗಳಿಗೆ ದುಡ್ಡು ಪಾವತಿಸಬೇಕು

    ಖಾಸಗಿ ಸಂಸ್ಥೆಗಳು ಈಗಾಗಲೇ 5ಜಿ ಸೇವೆ ನೀಡುತ್ತಿವೆ. ಆದರೆ ಬಿಎಸ್‌ಎನ್‌ಎಲ್ 4ಜಿ ಸೇವೆಯನ್ನೂ ನೀಡುತ್ತಿಲ್ಲ. ಇದರಿಂದ ತುರ್ತು ಸೇವೆಗಳಿಗೆ ಸಮಸ್ಯೆಯಾಗಿದೆ. ಹಾಗಾಗಿ ಸಾರ್ವಜನಿಕ ಸಂಗ್ರಹಣೆಯಲ್ಲಿ ಕರ್ನಾಟಕ ಪಾರದರ್ಶಕ ಕಾಯ್ದೆ 1999ರ ಪ್ರಕಾರ ವಾಣಿಜ್ಯ ಮೌಲ್ಯಮಾಪನದ ನಂತರ ರಿಲಯನ್ಸ್ ಜಿಯೋವನ್ನು ಆಯ್ಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಚೀನಾ ಗಡಿ ಸಂಘರ್ಷ – ಮೊಬೈಲ್ ಸಂಪರ್ಕ ಸುಧಾರಣೆಗೆ ತವಾಂಗ್‌ನಲ್ಲಿ 22 ಟವರ್

    ಚೀನಾ ಗಡಿ ಸಂಘರ್ಷ – ಮೊಬೈಲ್ ಸಂಪರ್ಕ ಸುಧಾರಣೆಗೆ ತವಾಂಗ್‌ನಲ್ಲಿ 22 ಟವರ್

    ಇಟಾನಗರ: ಭಾರತ-ಚೀನಾ (India – China) ಬೆನ್ನಲ್ಲೇ ಅರುಣಾಚಲ ಪ್ರದೇಶದ (Arunachal Pradesh) ತವಾಂಗ್ ಜಿಲ್ಲೆಯ ಚೀನಾ ಗಡಿರೇಖೆ (LAC) ಬಳಿ ಉತ್ತಮ ಸಂಪರ್ಕಕ್ಕಾಗಿ 22 ಮೊಬೈಲ್ ಟವರ್‌ಗಳನ್ನು (Mobile Towers) ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ.

    ಈ ಕುರಿತು ಮಾತನಾಡಿದ ತವಾಂಗ್ ಜಿಲ್ಲಾಧಿಕಾರಿ ಕೆಸಾಂಗ್ ಗ್ನುರುಪ್ ದಾಮೊ, `ಈಗಿರುವ ಟವರ್‌ಗಳು ನಿರೀಕ್ಷಿತ ಸೇವೆ ನೀಡುತ್ತಿಲ್ಲ. ರಕ್ಷಣಾ ಪಡೆ ಮಾತ್ರವಲ್ಲದೇ ನಾಗರಿಕರಿಗೂ ಇದರಿಂದ ತೊಂದರೆಯುಂಟಾಗುತ್ತಿದೆ. ಹಾಗಾಗಿ ಗಡಿ ಪ್ರದೇಶಗಳಲ್ಲಿ ಮೊಬೈಲ್ ಸಂಪರ್ಕವನ್ನು ಸುಧಾರಿಸಲು 22 ಟವರ್‌ಗಳ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ಒಟ್ಟು 43 ಟವರ್‌ಗಳ ಸ್ಥಾಪನೆಗೆ ಬೇಡಿಕೆ ಸಲ್ಲಿಸಲಾಗಿತ್ತು. ಈ ಪೈಕಿ ಕೇಂದ್ರ ಸರ್ಕಾರ 22 ಟವರ್ ಸ್ಥಾಪಿಸಲು ಅನುಮತಿಸಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಅಫ್ಘಾನ್‌ ವಿದ್ಯಾರ್ಥಿನಿಯರಿಗೆ ವಿಶ್ವವಿದ್ಯಾನಿಲಯ ಶಿಕ್ಷಣಕ್ಕೂ ಅವಕಾಶವಿಲ್ಲ

    ಚುನಾ, ಯಾಂಗ್‌ಟ್ಸೆ, ದಮ್‌ಟೆಂಗ್ ಬುಮ್ಲಾ, ಕ್ಲೆಮ್ಟಾ, ವೈ ಜಂಕ್ಷನ್, ಟಿ ಗೊಂಪಾ ಪ್ರದೇಶ, ಲುಂಪೊ, ಜೆಮಿತಾಂಗ್ ಗಡಿ ಪ್ರದೇಶಗಳಲ್ಲಿ ಏರ್‌ಟೇಲ್ ಹಾಗೂ ಬಿಎಸ್‌ಎನ್‌ಎಲ್ ಸಂಸ್ಥೆಗಳಿಗೆ ಟವರ್ ನಿರ್ಮಾಣ ಮಾಡುವ ಜವಾಬ್ದಾರಿ ನೀಡಿದೆ. ಈ ಪೈಕಿ ಬಿಎಸ್‌ಎನ್‌ಎಲ್ (BSNL) 18 ಟವರ್ ಹಾಗೂ ಏರ್‌ಟೆಲ್ (Airtel) 4 ಟವರ್‌ಗಳನ್ನು ನಿರ್ಮಾಣ ಮಾಡಲಿದೆ ಎಂದು ದಾಮೊ ತಿಳಿಸಿದ್ದಾರೆ. ಇದನ್ನೂ ಓದಿ: ಆಸ್ಪತ್ರೆಗಳು ಭರ್ತಿ, ಸ್ಮಶಾನದಲ್ಲಿ ಶವಗಳ ರಾಶಿ – ಚೀನಾದಲ್ಲಿ ಕೋವಿಡ್‌ ಸುನಾಮಿಗೆ ಕಾರಣ ಏನು?

    Live Tv

    [brid partner=56869869 player=32851 video=960834 autoplay=true]

  • 10 ಸಾವಿರ ಟವರ್‌ ಮಾರಾಟಕ್ಕೆ ಮುಂದಾದ ಬಿಎಸ್‌ಎನ್‌ಎಲ್‌

    10 ಸಾವಿರ ಟವರ್‌ ಮಾರಾಟಕ್ಕೆ ಮುಂದಾದ ಬಿಎಸ್‌ಎನ್‌ಎಲ್‌

    ನವದೆಹಲಿ: ಭಾರತ್ ಸಂಚಾರ್ ನಿಗಮ್ ಲಿಮಿಟೆಡ್(BSNL) ತನ್ನ 10 ಸಾವಿರ ಟೆಲಿಕಾಂ ಟವರ್‌ಗಳನ್ನು ಮಾರಾಟ ಮಾಡಲು ಮುಂದಾಗಿದೆ.

    ಕೇಂದ್ರ ಸರ್ಕಾರದ ರಾಷ್ಟ್ರೀಯ ಆಸ್ತಿ ನಗದೀಕರಣ(NMP) ಭಾಗವಾಗಿ ನಿಗದಿ ಪಡಿಸಿದ ಗುರಿಗಳನ್ನು ಪೂರೈಸಲು ಟವರ್‌ ಮಾರಾಟ ಮಾಡುವ ಪ್ರಕ್ರಿಯೆಯನ್ನು ಬಿಎಸ್‌ಎನ್‌ಎಲ್‌ ಆರಂಭಿಸಿದೆ ಎಂದು ವರದಿಯಾಗಿದೆ.

    ಟವರ್‌ ಮಾರಾಟದಿಂದ 4 ಸಾವಿರ ಕೋಟಿ ರೂ. ಆದಾಯವನ್ನು ಬಿಎಸ್‌ಎನ್‌ಎಲ್‌ ನಿರೀಕ್ಷಿಸುತ್ತಿದೆ. ಮಾರಾಟ ನಿರ್ವಹಣೆಗೆ ಹಣಕಾಸು ಸಲಹೆ ಪಡೆಯಲು ಹಣಕಾಸು, ವ್ಯಾಪಾರ, ತೆರಿಗೆ ಇತ್ಯಾದಿ ಸೇವೆಗಳನ್ನು ನೀಡುತ್ತಿರುವ ಜಾಗತಿಕ ಕೆಪಿಎಂಜಿ(KPMG) ಕಂಪನಿ ಜೊತೆ ಬಿಎಸ್‌ಎನ್‌ಎಲ್‌ ಈಗ ಮಾತುಕತೆ ನಡೆಸುತ್ತಿದೆ.

    ಮುಂಬೈ ಮತ್ತು ದೆಹಲಿ ಹೊರತುಪಡಿಸಿ ದೇಶದ ಎಲ್ಲಾ ಭಾಗಗಳಲ್ಲಿ ಟೆಲಿಕಾಂ ಸೇವೆಗಳನ್ನು ಒದಗಿಸುವ ಬಿಎಸ್‌ಎನ್‌ಎಲ್‌ 68 ಸಾವಿರ ಟೆಲಿಕಾಂ ಟವರ್‌ಗಳನ್ನು ಹೊಂದಿದೆ. ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್‌ನಂತಹ ಥರ್ಡ್ ಪಾರ್ಟಿ ಟೆಲಿಕಾಂ ಸೇವಾ ಪೂರೈಕೆದಾರರೊಂದಿಗೆ ಸಹ-ಸ್ಥಳ ವ್ಯವಸ್ಥೆಯನ್ನು ಹೊಂದಿರುವ ಟವರ್‌ಗಳನ್ನು ಮಾತ್ರ ಮಾರಾಟ ಮಾಡಲು ಬಿಎಸ್‌ಎನ್‌ಎಲ್‌ ಮುಂದಾಗಿದೆ. ಇದನ್ನೂ ಓದಿ: ಕೆಲ್ಸ ಮಾಡಿ, ಇಲ್ದೇ ಇದ್ರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ : BSNL ಉದ್ಯೋಗಿಗಳಿಗೆ ಅಶ್ವಿನಿ ವೈಷ್ಣವ್‌ ಲಾಸ್ಟ್‌ ವಾರ್ನಿಂಗ್‌

    ಈ ವಿಚಾರದ ಬಗ್ಗೆ ಬಿಎಸ್‌ಎನ್‌ಎಲ್‌ ಮತ್ತು ಕೆಪಿಎಂಜಿಯನ್ನು ಸಂರ್ಪಕಿಸಲಾಗಿದ್ದು ಯಾವುದೇ ಪ್ರತಿಕ್ರಿಯೆಗಳನ್ನು ನೀಡಿಲ್ಲ. ಬಿಎಸ್‌ಎನ್‌ಎಲ್‌ನ ಟವರ್ ಪೋರ್ಟ್‌ಫೋಲಿಯೊ ದೇಶದಲ್ಲೇ ಅತ್ಯುತ್ತಮವಾದದ್ದು ಎಂದು ಹೇಳಲಾಗುತ್ತದೆ. ಯಾಕೆಂದರೆ ಅದರ ಸುಮಾರು ಶೇ.70 ಟವರ್‌ಗಳು ಫೈಬರ್ ಆಗಿದ್ದು 4G ಮತ್ತು 5G ಸೇವೆಗಳ ನಿಯೋಜನೆಗೆ ಸಿದ್ಧವಾಗಿವೆ.

    ಎನ್‌ಎಂಪಿ ಗುರಿಗಳ ಭಾಗವಾಗಿ ಬಿಎಸ್‌ಎನ್‌ಎಲ್‌ 2025 ರ ಹಣಕಾಸು ವರ್ಷದ ಒಳಗಡೆ 13,567 ಟವರ್‌ಗಳನ್ನು ಮಾರಾಟ ಮಾಡಬೇಕಾಗಿದೆ ಮತ್ತು ದೆಹಲಿ ಮತ್ತು ಮುಂಬೈನಲ್ಲಿ ಕಾರ್ಯನಿರ್ವಹಿಸುವ ಎಂಟಿಎನ್‌ಎಲ್‌ 1,350 ಟವರ್‌ಗಳನ್ನು ಮಾರಾಟ ಮಾಡಬೇಕಾಗಿದೆ. ಒಟ್ಟಾರೆಯಾಗಿ ಎರಡು ಸರ್ಕಾರಿ ಸ್ವಾಮ್ಯದ ಟೆಲಿಕಾಂಗಳು 14,917 ಟವರ್‌ಗಳನ್ನು ಹಂತ ಹಂತವಾಗಿ ಮಾರಾಟ ಮಾಡಲಿವೆ.

    Live Tv
    [brid partner=56869869 player=32851 video=960834 autoplay=true]

  • ಕೆಲ್ಸ ಮಾಡಿ, ಇಲ್ದೇ ಇದ್ರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ : ಅಶ್ವಿನಿ ವೈಷ್ಣವ್‌ ಲಾಸ್ಟ್‌ ವಾರ್ನಿಂಗ್‌

    ಕೆಲ್ಸ ಮಾಡಿ, ಇಲ್ದೇ ಇದ್ರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ : ಅಶ್ವಿನಿ ವೈಷ್ಣವ್‌ ಲಾಸ್ಟ್‌ ವಾರ್ನಿಂಗ್‌

    ನವದೆಹಲಿ: ಕೇಂದ್ರ ಸರ್ಕಾರ ಸಹಕಾರ ನೀಡುತ್ತಿದ್ದರೂ ಮುಂದಿನ 24 ತಿಂಗಳಿನಲ್ಲಿ ಸರಿಯಾಗಿ ಕೆಲಸ ಮಾಡದೇ ಇದ್ದರೆ ಬಿಎಸ್‌ಎನ್‌ಎಲ್‌ ಉದ್ಯೋಗಿಗಳು ಸ್ವಯಂ ನಿವೃತ್ತಿ ತೆಗೆದುಕೊಂಡು ಮನೆಗೆ ಹೋಗುತ್ತಾರೆ ಎಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್‌ ಎಚ್ಚರಿಕೆ ನೀಡಿದ್ದಾರೆ.

    ಮುಖ್ಯ ಜನರಲ್ ಮ್ಯಾನೇಜರ್‌ಗಳೊಂದಿಗಿನ ಸಭೆಯಲ್ಲಿ ವೈಷ್ಣವ್‌, ಸರ್ಕಾರ ಬಿಎಸ್‌ಎನ್‌ಎಲ್‌ ಹಿಂದೆ ಬಂಡೆಯಾಗಿ ನಿಂತಿದ್ದು, ಕೆಲಸ ಮಾಡುತ್ತಿರುವ 62 ಸಾವಿರ ಉದ್ಯೋಗಿಗಳಿಂದ ಅದೇ ಮಟ್ಟದ ಬದ್ಧತೆಯನ್ನು ನಿರೀಕ್ಷಿಸುತ್ತಿದೆ. ನಾನು ಪ್ರತಿ ತಿಂಗಳು ಕಾರ್ಯಕ್ಷಮತೆಯ ಫಲಿತಾಂಶವನ್ನು ಪರಿಶೀಲಿಸುತ್ತೇನೆ. ಕೆಲಸ ಮಾಡದಿರುವವರು ವಿಆರ್‌ಎಸ್ ತೆಗೆದುಕೊಂಡು ಮನೆಗೆ ಹೋಗಬಹುದು ಎಂದು ಖಡಕ್‌ ಆಗಿಯೇ ಹೇಳಿದ್ದಾರೆ.

    ಸಭೆಯಲ್ಲಿ ಉದ್ಯೋಗಿಗಳಿಗೆ perform or perish ಆಯ್ಕೆ ನೀಡಿದ ಸಚಿವರು, ವಿಆರ್‌ಎಸ್‌ ತೆಗೆದುಕೊಳ್ಳಲು ಹಿಂಜರಿಯುವವರಿಗೆ 56(ಜೆ) ನಿಯಮ ಪ್ರಯೋಗಿಸಿ ಕಡ್ಡಾಯ ನಿವೃತ್ತಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

    ಈ ಸಂದರ್ಭದಲ್ಲಿ ಕಳಪೆ ಕಾರ್ಯಕ್ಷಮತೆಯ ಆಧಾರದ ಮೇಲೆ ಭಾರತೀಯ ರೈಲ್ವೆಯ ಸುಮಾರು 70 ಅಧಿಕಾರಿಗಳಿಗೆ ಕೆಲಸ ತೊರೆಯುವಂತೆ ಸೂಚಿಸಲಾಗಿದೆ ಎಂದು ಉಲ್ಲೇಖಿಸಿದರು. ಬಿಎಸ್‌ಎನ್‌ಎಲ್‌ಗೆ 1.64 ಲಕ್ಷ ಕೋಟಿ ರೂ. ಪ್ಯಾಕೇಜ್‌ ಘೋಷಣೆ ಮಾಡಿದ ಬೆನ್ನಲ್ಲೇ ಕೇಂದ್ರ ಈಗ ಉದ್ಯೋಗಿಗಳಿಗೆ ಖಡಕ್‌ ಸಂದೇಶವನ್ನು ರವಾನಿಸಿದೆ. ಇದನ್ನೂ ಓದಿ: 4Gಗಿಂತ 5G ಎಷ್ಟು ಭಿನ್ನ, ಪರಿಣಾಮಕಾರಿ? ಇಲ್ಲಿದೆ ಮಾಹಿತಿ

    ಪ್ರಧಾನಿ ನರೇಂದ್ರ ಮೋದಿಯವರು ಪುನರುಜ್ಜೀವನದ ಪ್ಯಾಕೇಜ್ ನೀಡಿದಂತೆ ಯಾವುದೇ ಸರ್ಕಾರವು ಅಂತಹ ಅಪಾಯವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ನಾವು ಅಂತಹ ದೊಡ್ಡ ಪ್ಯಾಕೇಜ್ ಅನ್ನು ಅನುಮತಿಸುವಾಗ ಹಣಕಾಸು, ಆದಾಯ, ಬ್ಯಾಲೆನ್ಸ್ ಶೀಟ್‌ ಅಂಶಗಳನ್ನು ಪರಿಗಣಿಸಿದ್ದೇವೆ. ಈ ಕಾರಣದಿಂದ ಬಿಎಸ್‌ಎನ್‌ಎಲ್‌ ಉದ್ಯೋಗಿಗಳ ಮೇಲೆ ದೊಡ್ಡ ಜವಾಬ್ದಾರಿಯಿದೆ ಎಂದು ವೈಷ್ಣವ್‌ ತಿಳಿಸಿದರು.

    ನಾವು ಈಗ ಪ್ರತಿಯೊಬ್ಬ ಉದ್ಯೋಗಿಯಿಂದ ಗುಣಮಟ್ಟದ ಕಾರ್ಯಕ್ಷಮತೆಯನ್ನು ಬಯಸುತ್ತೇವೆ. ಕಚೇರಿಗಳು ಅಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿ ಇರಬೇಕು. ತಕ್ಷಣ ಗ್ರಾಹಕರ ಕರೆಗಳನ್ನು ಸ್ವೀಕರಿಸಬೇಕು. ಖಾಸಗಿ ಟೆಲಿಕಾಂ ಕಂಪನಿಗಳಿಗಿಂತ 100 ಪಟ್ಟು ಉತ್ತಮ ಸೇವೆಯನ್ನು ನೀಡಬೇಕು ಎಂದು ಸೂಚಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]