Tag: BS Yediurappa

  • ಜನಸಾಮಾನ್ಯರು ಕೋವಿಡ್ ಚಿಕಿತ್ಸೆಗೆ ಕಟ್ಟಿರುವ ಹಣ ಹಿಂದಿರುಗಿಸಿ ಸರ್ಕಾರಕ್ಕೆ ಡಿ.ಕೆ.ಶಿವಕುಮಾರ್ ಮನವಿ

    ಜನಸಾಮಾನ್ಯರು ಕೋವಿಡ್ ಚಿಕಿತ್ಸೆಗೆ ಕಟ್ಟಿರುವ ಹಣ ಹಿಂದಿರುಗಿಸಿ ಸರ್ಕಾರಕ್ಕೆ ಡಿ.ಕೆ.ಶಿವಕುಮಾರ್ ಮನವಿ

    ಬೆಂಗಳೂರು: ಆಸ್ಪತ್ರೆಗೆ ಹಣ ಕಟ್ಟಲಾಗದೆ ಪರದಾಡುತ್ತಿರುವವರಿಗೆ ನೆರವಾಗಿ. ಆಸ್ಪತ್ರೆ ಬಿಲ್ ಕಟ್ಟಲಾಗದೆ, ಹೆಣ ತರಲಾಗದ ಸ್ಥಿತಿಯೂ ಹಲವರಿಗಿದೆ. ಹೀಗಾಗಿ ಜನಸಾಮಾನ್ಯರು ಕೋವಿಡ್ ಚಿಕಿತ್ಸೆಗೆ ವೆಚ್ಚ ಮಾಡಿರುವ ಹಣವನ್ನು ಹಿಂದಿರುಗಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಾಜ್ಯ ಸರ್ಕಾರವನ್ನು ಮನವಿ ಮಾಡಿದ್ದಾರೆ.

    ಬೆಂಗಳೂರಿನ ಜಯನಗರ, ಬಿಟಿಎಂ ಬಡಾವಣೆಯಲ್ಲಿ ಶಾಸಕಿ ಸೌಮ್ಯಾ ರೆಡ್ಡಿ, ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅವರು ಆಯೋಜಿಸಿದ್ದ ಆಹಾರ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಿಷ್ಟು;

    ಮಾಧ್ಯಮಗಳ ವರದಿ ಪ್ರಕಾರ ಶೇ.47 ರಷ್ಟು ಜನಸಾಮಾನ್ಯರು ತಮ್ಮ ಬಳಿ ಇದ್ದ ಸಣ್ಣ-ಪುಟ್ಟ ಚಿನ್ನಾಭರಣ ಒತ್ತೆ ಇಟ್ಟು ಜೀವನ ನಡೆಸುತ್ತಿದ್ದಾರೆ. ಅದು ಅವರ ತಪ್ಪಲ್ಲ, ಅವರ ಸಾಲ ಮನ್ನಾ ಮಾಡಿ ಎಂದು ನಾನು ಕೇಳುವುದಿಲ್ಲ. ಆದರೆ ಆಸ್ಪತ್ರೆ ಬಿಲ್ ಕಟ್ಟಲಾಗದೆ ಒದ್ದಾಡುತ್ತಿರುವವರಿಗೆ ನೆರವಾಗಿ. ಆಸ್ಪತ್ರೆ ಸೇರಿದವರ ಖರ್ಚು 5 ಲಕ್ಷ ರೂಪಾಯಿಗಿಂತ ಕಡಿಮೆ ಆಗಿಲ್ಲ. ಸಾಕಷ್ಟು ಜನ ಹಣ ಕಟ್ಟಲಾಗುತ್ತಿಲ್ಲ ಅಂತಾ ನನ್ನ ಬಳಿಯೇ ಅಳಲು ತೋಡಿಕೊಂಡಿದ್ದಾರೆ. ಆಸ್ಪತ್ರೆಗೆ ಹೋದವರಲ್ಲಿ ಸಾಕಷ್ಟು ಜನ ಹೆಣವಾಗಿ ಬಂದರು. ಕುಟುಂಬ ಸದಸ್ಯರು ಸತ್ತರೆ, ಆಸ್ಪತ್ರೆ ಬಿಲ್ ಕಟ್ಟಿ ಹೆಣ ತರಲಾಗದ ಸ್ಥಿತಿ ಹಲವರಿಗಿದೆ. ಇವರಿಗೆ ಸರ್ಕಾರ ನೆರವಾಗಬೇಕು.

    ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜನ ತಮ್ಮ ಹಣ ತೆಗೆದುಕೊಳ್ಳುವುದರಿಂದ ಹಿಡಿದು ಆಸ್ಪತ್ರೆಯಲ್ಲಿ ಚಿಕಿತ್ಸೆ, ಆಕ್ಸಿಜನ್, ಔಷಧ ಪಡೆಯಲು ಮಾತ್ರವಲ್ಲದೆ, ಕಡೆಗೆ ಶವಸಂಸ್ಕಾರಕ್ಕೂ ಕ್ಯೂ ನಿಲ್ಲುವಂತ ದುಸ್ಥಿತಿ ನಿರ್ಮಾಣವಾಯಿತು. ಇಂತಹ ಕೆಟ್ಟ ಸರ್ಕಾರವನ್ನು ನಾವು ಇದುವರೆಗೂ ನೋಡಿಲ್ಲ. ಈ ಸಮಸ್ಯೆಯಿಂದ ಮುಕ್ತಿ ಸಿಗಬೇಕಾದರೆ ಜನ ಈ ಸರ್ಕಾರವನ್ನು ಕಿತ್ತೊಗೆಯಬೇಕು.

    ಕೊರೊನಾ ಮೊದಲ ಹಾಗೂ ಎರಡನೇ ಅಲೆಯಲ್ಲಿ ಬೆಂಗಳೂರಿನ ಜನ ಸಾಮಾನ್ಯರಿಗೆ ಸತತ ನೆರವು ಕಾರ್ಯಕ್ರಮ ಮುಂದುವರಿಸಿಕೊಂಡು ಬಂದಿದ್ದು, ಬಿಟಿಎಂ ಹಾಗೂ ಜಯನಗರ ಕ್ಷೇತ್ರದಲ್ಲಿ. ಕಳೆದ ವರ್ಷವೂ ನಾನು ಇಲ್ಲಿಗೆ ನಾಲ್ಕು ಬಾರಿ ಆಗಮಿಸಿದ್ದೆ. ಈ ವರ್ಷವೂ ಬಂದಿದ್ದೇನೆ. 50 ಸಾವಿರ ಬಡ ಕುಟುಂಬಗಳಿಗೆ ನಮ್ಮ ನಾಯಕರು ಈ ಸಹಾಯ ಮಾಡುತ್ತಿದ್ದಾರೆ. ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಎಲ್ಲದಕ್ಕೂ ಕ್ಯೂ: ಡಿ.ಕೆ.ಶಿವಕುಮಾರ್ ತರಾಟೆ

    ಆಹಾರ ಕಿಟ್, ತರಕಾರಿ ಹಾಗೂ ಮೆಡಿಕಲ್ ಕಿಟ್ ಗಳನ್ನು ತಮ್ಮ ಸ್ವಂತ ಹಣದಿಂದ ನೀಡುತ್ತಿದ್ದಾರೆಯೇ ಹೊರತು, ಇವರಾರಿಗೂ ಸರ್ಕಾರದಿಂದ ಅನುದಾನ ಸಿಕ್ಕಿಲ್ಲ. ಕಾರ್ಮಿಕ ಸಚಿವಾಲಯದಿಂದ ಬಂದ ಫುಡ್ ಕಿಟ್ ಮೇಲೆ ತಮ್ಮ ಫೋಟೋ ಹಾಕಿಕೊಂಡು ಹಂಚುತ್ತಿಲ್ಲ. ಮತದಾರರ ಬದುಕು ಉಳಿಸಲು ನಮ್ಮ ನಾಯಕರು ತಮ್ಮ ಶ್ರಮದ ಹಣದಿಂದ ನೆರವು ನೀಡಿ, ಅಮೋಘ ಸೇವೆ ಮಾಡುತ್ತಿದ್ದಾರೆ.

    100 ನಾಟೌಟ್ ಜನರ ಹೋರಾಟ:
    ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಮಾಡಿದ 100 ನಾಟೌಟ್ ಪ್ರತಿಭಟನೆ ಕೇವಲ ಪಕ್ಷದ ಕಾರ್ಯಕ್ರಮ ಅಲ್ಲ. ಅದು ಜನರ ಆಕ್ರೋಶದ ಪ್ರತಿಧ್ವನಿ. ಈ ವರ್ಷ 50 ಕ್ಕೂ ಹೆಚ್ಚು ಬಾರಿ ಪೆಟ್ರೋಲ್ ಬೆಲೆ ಹೆಚ್ಚಳ ಮಾಡಲಾಗಿದೆ. ಅಮೆರಿಕದಲ್ಲೂ ಇಲ್ಲಿಗಿಂತ ಕಡಿಮೆ ಬೆಲೆ ಇದೆ. ಇಲ್ಲಿನ ಬೆಲೆ ಹೆಚ್ಚಳದಿಂದ ದಿನಬಳಕೆ ವಸ್ತುಗಳಿಂದ ಹಿಡಿದು ಎಲ್ಲ ಪದಾರ್ಥಗಳ ಬೆಲೆ ಏರಿಕೆಯಾಗಿದೆ. ಆದರೆ ಜನರ ಆದಾಯದಲ್ಲಿ ಏನಾದರೂ ಏರಿಕೆಯಾಗಿದೆಯಾ..? ಇಲ್ಲವೇ ಇಲ್ಲ. ಆದರೆ ಸರ್ಕಾರದ ಬೊಕ್ಕಸ ಮಾತ್ರ ತುಂಬುತ್ತಿದೆ. ಅದೇ ಕಾರಣಕ್ಕೆ ನಾವು ಈ ಸರ್ಕಾರ ಜನಸಾಮಾನ್ಯರನ್ನು ಪಿಕ್ ಪಾಕೆಟ್ ಮಾಡುತ್ತಿದೆ ಎಂದು ಹೇಳುತ್ತಿದ್ದೇವೆ.

    ಕೊರೋನಾ ವಿಚಾರದಲ್ಲಿ ಡೆತ್ ಆಡಿಟ್ ಮಾಡಿ ಎಂದು ನಾವು ಆಗ್ರಹಿಸಿದೆವು. ಈಗ ನಮ್ಮ ಒತ್ತಾಯದ ಮೇರೆಗೆ ಕೆಲವು ಮೃತರಿಗೆ 1 ಲಕ್ಷ ರುಪಾಯಿ ಪರಿಹಾರ ನೀಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಎಸ್‍ವೈಗೆ ಆಡಳಿತ ನಡೆಸಲು ಆಗುತ್ತಿಲ್ಲ,ಅವರ ಪುತ್ರ ಆಡಳಿತ ನಡೆಸುತ್ತಿದ್ದಾರೆ: ಶಾಸಕ ಶರಣಬಸಪ್ಪ ದರ್ಶನಾಪುರ

    ಯಡಿಯೂರಪ್ಪನವರೆ, ಕೋವಿಡ್ ಚಿಕಿತ್ಸೆಗಾಗಿ ಯಾರೆಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಹಣ ಖರ್ಚು ಮಾಡಿದ್ದಾರೋ, ಅವರಿಗೆ ಆ ಹಣ ಹಿಂದುರಿಗಿಸಿ. ನಿಮ್ಮ ಆಯುಷ್ಮಾನ್ ಭಾರತ ಯೋಜನೆ ಮೂಲಕವಾಗಲಿ ಅಥವಾ ಬೇರೆ ಯಾವುದೇ ಯೋಜನೆಗಳ ಮೂಲಕವಾಗಲಿ ಜನರಿಗೆ ಅವರ ಹಣ ಹಿಂದಿರುಗಿಸಿ ಎಂದು ಕಾಂಗ್ರೆಸ್ ಪರವಾಗಿ ಕೈ ಮುಗಿದು ಕೇಳಿಕೊಳ್ಳುತ್ತೇನೆ.

    ಬಿಜೆಪಿಗೆ ಅಧಿಕಾರ ಕೊಟ್ಟ ಜನರಿಗೆ ವೈರಾಗ್ಯ ಬಂದಿದೆ:
    ಕಾರ್ಯಕ್ರಮ ನಂತರ ಬಿಜೆಪಿ ಆಂತರಿಕ ಕಚ್ಚಾಟದ ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಬಿಜೆಪಿ ಬಂದಾಗಲೆಲ್ಲ ಈ ಸಮಸ್ಯೆ ಉದ್ಭವಿಸುತ್ತಿದೆ. ನಮ್ಮಲ್ಲಿಯೂ ಈ ಹಿಂದೆ ಇಂತಹ ಪರಿಸ್ಥಿತಿ ಇತ್ತು. ಅದರಿಂದ ಪಾಠ ಕಲಿತು ನಾವು ತಪ್ಪು ತಿದ್ದುಕೊಂಡಿದ್ದೇವೆ ಎಂದರು.

    ಪಕ್ಷದ ಗೊಂದಲ ಆಡಳಿತ ಯಂತ್ರದ ಮೇಲೆ ಪರಿಣಾಮ ಬೀರುತ್ತದೆ. ಜನರಿಗೆ ಇದು ಮಾರಕ. ಮಂತ್ರಿಗಳು ಹಾಗೂ ಶಾಸಕರು ಮುಖ್ಯಮಂತ್ರಿ ವಿರುದ್ಧ ಮಾತನಾಡುತ್ತಿದ್ದಾರೆ. ಯಡಿಯೂರಪ್ಪ ಅವರು ಬಲಿಷ್ಠ ನಾಯಕ ಅಂದುಕೊಂಡಿದ್ದೆ. ಆದರೆ ಆಡಳಿತ ವಿಚಾರದಲ್ಲಿ ಬಹಳ ದುರ್ಬಲರಾಗಿದ್ದಾರೆ. ಬಿಜೆಪಿಗೆ ಯಾಕಾದರೂ ಅಧಿಕಾರ ಕೊಟ್ಟೆವು ಎಂದು ಜನರಿಗೆ ವೈರಾಗ್ಯ ಬಂದಿದೆ ಎಂದು ತಿಳಿಸಿದರು.

    ಸರ್ಕಾರದ ದೌರ್ಬಲ್ಯ ಕುರಿತು ಸತ್ಯಾಂಶ ಒಪ್ಪಿಕೊಂಡ ಈಶ್ವರಪ್ಪ ಅವರಿಗೆ ಅಭಿನಂದನೆಗಳು. ಈ ಪರಿಸ್ಥಿತಿಯನ್ನು ಬಳಸಿಕೊಳ್ಳುವ ಬಗ್ಗೆ ಮಾತನಾಡುವುದಿಲ್ಲ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಬೇಡ. ಕಾಂಗ್ರೆಸ್ ಇದನ್ನು ಉಪಯೋಗಿಸಿಕೊಳ್ಳುತ್ತದೋ ಇಲ್ಲವೋ ಅದು ಬೇರೆ ವಿಚಾರ. ಮೊದಲು ಅವರ ಆಟ ಮುಗಿಯಲಿ.

    ಬಾಂಬೆ ಟೀಮ್ ನಿಂದ ಗೊಂದಲವಾಗುತ್ತಿದೆ ಎಂಬ ಈಶ್ವರಪ್ಪ ಅವರ ಈಗಿನ ಹೇಳಿಕೆ ಬಗ್ಗೆ ನಾನು ಈ ಹಿಂದೆಯೇ ವಿಧಾನಸಭೆಯಲ್ಲೇ ಭವಿಷ್ಯ ನುಡಿದಿದ್ದೆ. ಈಶ್ವರಪ್ಪ ಅವರ ಈ ಟೀಕೆಗೆ ಬಿ.ಸಿ. ಪಾಟೀಲ್ ಉತ್ತರ ಕೊಟ್ಟಿದ್ದಾರೆ ಎಂದರು.

  • ಸ್ಮಾರ್ಟ್ ಸಿಟಿ ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿದ ಸಿಎಂ

    ಸ್ಮಾರ್ಟ್ ಸಿಟಿ ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿದ ಸಿಎಂ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಅವರು ಈ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಮುಖ್ಯಮಂತ್ರಿಗಳು ರೇಸ್ ಕೋರ್ಸ್ ರಸ್ತೆ, ರಾಜಾರಾಮ್ ಮೋಹನ್ ರಾಯ್ ರಸ್ತೆ, ಹೇಯ್ಸ್ ರಸ್ತೆ, ಹುಡ್ ಸ್ಟ್ರೀಟ್, ಟಾಟಾ ಲೇನ್, ಕ್ಯಾಪಿಟಲ್ ಹೋಟೆಲ್-ರಾಜಭವನ ಜಂಕ್ಷನ್ ಮತ್ತು ಪ್ಲಾನೆಟೇರಿಯಂ ರಸ್ತೆಗಳ ಕಾಮಗಾರಿಗಳ ಪರಿಶೀಲನೆ ನಡೆಸಿದರು.

    ಸ್ಮಾರ್ಟ್ ಸಿಟಿ ಯೋಜನೆಯಡಿ ಬೆಂಗಳೂರಿನಲ್ಲಿ 37 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. ಅದರಲ್ಲಿ ರಸ್ತೆ ಅಭಿವೃದ್ಧಿ, ಕೋವಿಡ್ ಆಸ್ಪತ್ರೆಗಳಿಗೆ ನೆರವು, ಐಟಿ-ಯೋಜನೆಗಳು, ಕಟ್ಟಡ ನಿರ್ಮಾಣ ಮತ್ತು ಇತರ ಕಾಮಗಾರಿಗಳು ಸೇರಿವೆ. ಇದರ ಅಂದಾಜು ವೆಚ್ಚ 930 ಕೋಟಿ ರೂ.ಗಳು. ಈವರೆಗೆ 4 ಕಾಮಗಾರಿಗಳು ಪೂರ್ಣಗೊಂಡಿವೆ. 29 ಕಾಮಗಾರಿಗಳು ಪ್ರಗತಿಯಲ್ಲಿವೆ. 4 ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ವರೆಗೆ 103 ಕೋಟಿ ರೂ. ವೆಚ್ಚವಾಗಿದೆ.

    ಈ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಹಾಗೂ ಗುಣಮಟ್ಟದ ಕಾಮಗಾರಿಯನ್ನು ಖಾತರಿಪಡಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.

  • ಸರ್ಕಾರಿ ಕಚೇರಿಗಳಿಗಾಗಿ 50 ಮಹಡಿಗಳ ಅವಳಿಗೋಪುರ ನಿರ್ಮಾಣ: ಗೋವಿಂದ ಕಾರಜೋಳ

    ಸರ್ಕಾರಿ ಕಚೇರಿಗಳಿಗಾಗಿ 50 ಮಹಡಿಗಳ ಅವಳಿಗೋಪುರ ನಿರ್ಮಾಣ: ಗೋವಿಂದ ಕಾರಜೋಳ

    – ಬಾಡಿಗೆ ಕಟ್ಟಡದಲ್ಲಿರುವ ಕಚೇರಿಗಳಿಗೆ ಹೊಸ ಕಟ್ಟಡ

    ಬೆಂಗಳೂರು: ಬೆಂಗಳೂರಿನಲ್ಲಿ ಬಾಡಿಗೆ ಕಟ್ಟಡಗಳಲ್ಲಿರುವ ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರುವ ಸದುದ್ದೇಶದಿಂದ ನಗರದ ಹೃದಯಭಾಗವಾಗಿರುವ ಆನಂದರಾವ್ ಸರ್ಕಲ್ ಬಳಿ 1,250 ಕೋಟಿ ರೂ. ವೆಚ್ಚದ ಸುಸಜ್ಜಿತ 50 ಮಹಡಿಗಳ ಅವಳಿಗೋಪುರವನ್ನು ನಿರ್ಮಿಸಲಾಗುವುದು ಎಂದು ಉಪಮುಖ್ಯಮಂತ್ರಿಗಳಾದ ಗೋವಿಂದ ಎಂ ಕಾರಜೋಳ ತಿಳಿಸಿದ್ದಾರೆ.

    ಕಾಮಗಾರಿ ಉದ್ದೇಶಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಹಲವು ಸರ್ಕಾರಿ ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತಿರುವುದಲ್ಲದೇ ಸಕಾಲದಲ್ಲಿ ಸಮನ್ವಯತೆಯಿಂದ ಕಾರ್ಯನಿರ್ವಹಿಸಲು ಕಷ್ಟಕರವಾಗುತ್ತಿದೆ. ಸಾರ್ವಜನಿಕರಿಗೂ ಅನಾನುಕೂಲವಾಗುತ್ತಿದೆ. ಇದನ್ನು ಮನಗಂಡು ಸಿಎಂ ಯಡಿಯೂರಪ್ಪ ಅವರು 2020-21 ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದ್ದರು. ಕಳೆದ ಸಚಿವ ಸಂಪುಟದಲ್ಲಿ ಈ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ. ನಗರದ ಹೃದಯ ಭಾಗದಲ್ಲಿರುವ ಈ ಪ್ರದೇಶವು ವಿಧಾನಸೌಧ, ವಿಕಾಸಸೌಧ, ಮೆಜೆಸ್ಟಿಕ್, ರೈಲ್ವೆ ನಿಲ್ದಾಣ, ಮೆಟ್ರೋ ನಿಲ್ದಾಣಕ್ಕೆ ಸಮೀಪದಲ್ಲಿರುವುದರಿಂದ ನೌಕರರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದರು.

    ಈ ಕಾಮಗಾರಿಯನ್ನು ಪಿಪಿಪಿ ಮಾದರಿಯಲ್ಲಿ ರಾಷ್ಟ್ರೀಯ ಕಟ್ಟಡಗಳ ನಿರ್ಮಾಣ ನಿಗಮ ಲಿಮಿಟೆಡ್ (ಎನ್‍ಬಿಸಿಸಿ) ಇವರ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲಾಗುವುದು. 8.5 ಎಕರೆ ಸರ್ಕಾರಿ ನಿವೇಶನದಲ್ಲಿ 23.94 ಲಕ್ಷ ಚದುರ ಅಡಿ ವಿಸ್ತೀರ್ಣದಲ್ಲಿ ಈ ಬೃಹತ್ ಕಟ್ಟಡವನ್ನು ನಿರ್ಮಿಸಲಾಗುವುದು. ಶೇ. 60: 40 ಅನುಪಾತದಲ್ಲಿ ಭಾಗಶ: ಕಟ್ಟಡಗಳನ್ನು ನಿರ್ಮಿಸಲಾಗುವುದು. ಎನ್‍ಬಿಸಿಸಿಗೆ 30 ವರ್ಷಗಳ ಲೀಸ್ ನೀಡುವ ಮೂಲಕ ನಿರ್ಮಿಸಲಾಗುವುದು. ಎನ್‍ಬಿಸಿಸಿ ಅವರೊಂದಿಗೆ ಶೀಘ್ರವಾಗಿ ಒಡಂಬಡಿಕೆ ಮಾಡಿಕೊಳ್ಳಲಾಗುವುದು ಎಂದು ಡಿಸಿಎಂ ಮಾಹಿತಿ ನೀಡಿದರು.

    ಶೇ. 60 ರಷ್ಟು ಕಟ್ಟಡ ಪ್ರದೇಶವನ್ನು ರಾಜ್ಯ ಸರ್ಕಾರಕ್ಕೆ ನೀಡಲಾಗುವುದು. ರಾಜ್ಯ ಸರ್ಕಾರಕ್ಕೆ ಯಾವುದೇ ವೆಚ್ಚವಿಲ್ಲದೇ ಕಟ್ಟಡ ನಿರ್ಮಾಣವಾಗುತ್ತದೆ. ಕಟ್ಟಡ ನಿರ್ವಹಣೆಯ ವೆಚ್ಚವನ್ನು ಕಟ್ಟಡದ ವಾಸಿಗಳಿಂದಲೇ ಭರಿಸಲು ಉದ್ದೇಶಿಸಿರುವುದರಿಂದ ನಿರ್ವಹಣೆಯ ವೆಚ್ಚವೂ ಉಳಿಕೆಯಾಗಲಿದೆ. ಯಾವುದೇ ವೆಚ್ಚವಿಲ್ಲದೇ ಸರ್ಕಾರಕ್ಕೆ 263 ಕೋಟಿ ರೂ. ನಿವ್ವಳ ಲಾಭವಾಗಲಿದೆ. ಈ ಕಾಮಗಾರಿಯನ್ನು 2 ವರ್ಷಗಳ ಅವಧಿಯಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಈ ನಿವೇಶನದಲ್ಲಿ 1940 ಕ್ಕಿಂತಲೂ ಹಿಂದೆ ನಿರ್ಮಿಸಲಾದ ಲೋಕೋಪಯೋಗಿ ಇಲಾಖೆಯ ಕಟ್ಟಡಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಟ್ಟಡಗಳು ಸೇರಿದಂತೆ ವಿವಿಧ ಇಲಾಖೆಗಳ ಕಟ್ಟಡಗಳಿದ್ದು, ಇವುಗಳನ್ನು ಶೀಘ್ರವಾಗಿ ತೆರವುಗೊಳಿಸಲಾಗುತ್ತದೆ.

    ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್, ಮುಖ್ಯಅಭಿಯಂತರರಾದ ಶಿವಯೋಗಿ ಹಿರೇಮಠ, ಅಧೀಕ್ಷಕ ಅಭಿಯಂತರರಾದ ಎಲ್. ಶ್ರೀಧರ ಮೂರ್ತಿ, ಕಾರ್ಯನಿರ್ವಾಹಕ ಅಭಿಯಂತರ ಜಿ. ಡಿ. ಕುಮಾರ್ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

  • ಆಡಿಯೋ ಅಸ್ತ್ರಕ್ಕೆ ಅನರ್ಹ ಶಾಸಕರ ಪ್ರತ್ಯಾಸ್ತ್ರ

    ಆಡಿಯೋ ಅಸ್ತ್ರಕ್ಕೆ ಅನರ್ಹ ಶಾಸಕರ ಪ್ರತ್ಯಾಸ್ತ್ರ

    ಬೆಂಗಳೂರು: ಕಾಂಗ್ರೆಸ್ ಆಡಿಯೋ ಅಸ್ತ್ರಕ್ಕೆ ಅನರ್ಹ ಶಾಸಕರು ಪ್ರತ್ಯಾಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ. ಧರ್ಮಸ್ಥಳದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿದ್ದ ವಿಡಿಯೋವನ್ನು ಸುಪ್ರೀಂಕೋರ್ಟಿಗೆ ಸಲ್ಲಿಸುವ ಸಾಧ್ಯತೆಗಳಿವೆ.

    ಸಿಎಂ ಯಡಿಯೂರಪ್ಪನವರು ಮಾತನಾಡಿದ್ದ ಆಡಿಯೋಗೆ ಸಂಬಂಧಿಸಿದಂತೆ ಮಂಗಳವಾರ ಸುಪ್ರೀಂಕೋರ್ಟಿನಲ್ಲಿ ವಿಚಾರಣೆ ನಡೆಯಲಿದೆ. ಈ ಹಿಂದೆ ಧರ್ಮಸ್ಥಳದ ಶಾಂತಿವನದಲ್ಲಿ ಲೋಕಸಭಾ ಚುನಾವಣೆ ಬಳಿಕ ಮೈತ್ರಿ ಸರ್ಕಾರ ಇರಲ್ಲ ಎಂದು ಹೇಳಿದ್ದ ವಿಡಿಯೋ ಬಿಡುಗಡೆ ಆಗಿತ್ತು. ಈ ಹಿನ್ನೆಲೆಯಲ್ಲಿ ಶಾಸಕರ ರಾಜೀನಾಮೆಗೆ ಸಿದ್ದರಾಮಯ್ಯನವರೇ ಕಾರಣ. ಈ ವಿಡಿಯೋವನ್ನು ಅಸ್ತçವಾಗಿ ಬಿಜೆಪಿ ಪರ ವಕೀಲರು ಬಳಸಿಕೊಳ್ಳುವ ಸಾಧ್ಯತೆಗಳಿವೆ.

    ಯಡಿಯೂರಪ್ಪನವರ ಆಡಿಯೋಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಿಯೋಗ ರಾಜ್ಯಪಾಲರಿಗೆ ದೂರು ಸಲ್ಲಿಸಿದೆ. ಮೈತ್ರಿ ಸರ್ಕಾರ ಪತನಕ್ಕೆ ಬಿಜೆಪಿ ನಾಯಕರು ಕಾರಣ ಎಂದು ಕಾಂಗ್ರೆಸ್ ಆರೋಪಿಸಿತ್ತು. ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಹುಬ್ಬಳ್ಳಿ ಸಭೆ ಆಡಿಯೋದಲ್ಲಿರುವ ಧ್ವನಿ ನನ್ನದೇ ಎಂದು ಒಪ್ಪಿಕೊಂಡಿದ್ದ ಸಿಎಂ, ಭಾನುವಾರ ಅನರ್ಹ ಶಾಸಕರಿಗೂ ಮತ್ತು ನಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುವ ಮೂಲಕ ಡ್ಯಾಮೇಜ್ ಕಂಟ್ರೋಲಿಗೆ ಮುಂದಾಗಿದ್ದರು.

  • ವರ್ಗಾವಣೆ ಪರ್ವ- ಸಿಎಂ ಆಪರೇಷನ್ ಕಾರ್ಯಾಚರಣೆ ಹಿಂದಿದೆ ರಹಸ್ಯ

    ವರ್ಗಾವಣೆ ಪರ್ವ- ಸಿಎಂ ಆಪರೇಷನ್ ಕಾರ್ಯಾಚರಣೆ ಹಿಂದಿದೆ ರಹಸ್ಯ

    ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಬಂದಾಗಿನಿಂದ ವರ್ಗಾವಣೆ ಸದ್ದು ಮಾಡುತ್ತಿದೆ. ಸಿಎಂ ಸಚಿವಾಲಯ ಸೇರಿದಂತೆ ಬೇರೆ ಇಲಾಖೆಗಳಲ್ಲಿ ವರ್ಗಾವಣೆ ಪರ್ವ ಮುಂದುವರಿದಿದೆ. ಈಗಾಗಲೇ 250ಕ್ಕೂ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸಿಎಂ ಆಯಾ ಸ್ಥಳಕ್ಕೆ ಹೊಸಬರನ್ನು ತಂದಿದ್ದಾರೆ. ಸಿಎಂ ಸಚಿವಾಲಯ, ಆಯಕಟ್ಟಿನ ಸ್ಥಳಗಳು, ಬೇರೆ ಬೇರೆ ಇಲಾಖೆಗಳಲ್ಲಿ ವರ್ಗಾವಣೆ ನಡೆಯುತ್ತಿದೆ.

    ಸಿದ್ದರಾಮಯ್ಯ ಮತ್ತು ಹೆಚ್.ಡಿ.ಕುಮಾರಸ್ವಾಮಿ ಅಧಿಕಾರದಲ್ಲಿ ನೇಮಕಗೊಂಡಿರುವ ಸಿಬ್ಬಂದಿಯನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ವರ್ಗಾವಣೆ ಮಾಡುತ್ತಿದ್ದಾರಂತೆ. ಈ ಎಲ್ಲ ಅಧಿಕಾರಿಗಳು ಮಾಜಿ ಸಿಎಂಗಳ ನಿಕಟ ಸಂಪರ್ಕದಲ್ಲಿದ್ದು, ಆಡಳಿತದ ರಹಸ್ಯಗಳನ್ನು ವಿಪಕ್ಷಗಳಿಗೆ ನೀಡಿದ್ರೆ ಹೇಗೆ ಎಂಬ ಪ್ರಶ್ನೆ ಯಡಿಯೂರಪ್ಪರಿಗೆ ತಲೆ ನೋವಾಗಿದೆ ಎಂದು ತಿಳಿದು ಬಂದಿದೆ.

    ಮಾಜಿ ಸಿಎಂಗಳ ಕಾಲಾವಧಿಯಲ್ಲಿ ಕಾರ್ಯನಿರ್ವಹಿಸಿರುವ ಸಿಬ್ಬಂದಿ ವಿಪಕ್ಷ ನಾಯಕರಿಗೆ ರಹಸ್ಯ ಮಾಹಿತಿದಾರರಾಗಿ ಕೆಲಸ ಮಾಡಿದ್ರೆ ಹೇಗೆ ಎಂಬ ಅನುಮಾನ ಯಡಿಯೂರಪ್ಪರನ್ನ ಕಾಡುತ್ತಿದೆ. ಇತ್ತ ಅನುಮಾನ ಬಂದ ಅಧಿಕಾರಿಗಳನ್ನು ಸಿಎಂ ವರ್ಗಾವಣೆ ಮೂಲಕ ಕೊಕ್ ಕೊಡುತ್ತಿದ್ದಾರೆ. ಸದ್ಯ ನೇಮಕಗೊಂಡಿರುವ ಸಿಬ್ಬಂದಿಯ ಮೇಲೆಯೂ ಸಿಎಂ ರಹಸ್ಯ ಕಣ್ಣಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

  • ಬಿಜೆಪಿ ಸರ್ಕಾರ ಅನೈತಿಕ ಶಿಶು: ಸಿದ್ದರಾಮಯ್ಯ

    ಬಿಜೆಪಿ ಸರ್ಕಾರ ಅನೈತಿಕ ಶಿಶು: ಸಿದ್ದರಾಮಯ್ಯ

    -ಒಂದು ತಿಂಗಳಿನಿಂದ ರಾಜ್ಯದಲ್ಲಿ ಸರ್ಕಾರ ಇಲ್ಲ

    ಮೈಸೂರು: ಬಿಜೆಪಿ ಸರ್ಕಾರ ಅನೈತಿಕ ಶಿಶುವಾಗಿದ್ದು, ಹಿಂಬಾಗಿಲಿನಿಂದ ಬಂದು ಅಧಿಕಾರದಲ್ಲಿ ಕುಳಿತಿದ್ದಾರೆ. ಒಂದು ಅತೃಪ್ತ ಶಾಸಕರು ಬಿಜೆಪಿ ನಾಯಕರಿಗೆ ಧಮ್ಕಿ ಹಾಕುತ್ತಿದ್ದಾರೆ. ಹಾಗಾಗಿ ಸಚಿವರಾದರೂ ಖಾತೆ ಹಂಚಿಕೆ ಆಗಿಲ್ಲ. ಕಳೆದ ಒಂದು ತಿಂಗಳಿನಿಂದ ರಾಜ್ಯದಲ್ಲಿ ಸರ್ಕಾರವೇ ಇಲ್ಲ. ಭೀಕರವಾದ ಪ್ರವಾಹ ಮತ್ತು 42 ತಾಲೂಕುಗಳಲ್ಲಿ ಬರಗಾಲವಿದೆ. ಯಡಿಯೂರಪ್ಪನವರಿಂದ ಕೇಂದ್ರ ಸರ್ಕಾರದಿಂದ ಹಣ ತರಲು ಸಾಧ್ಯವಾಗುತ್ತಿಲ್ಲ. ಪ್ರಧಾನಿಗಳು ಸಹ ಒಂದು ದಿನ ಪ್ರವಾಹದ ಸ್ಥಳಗಳಿಗೆ ಭೇಟಿ ನೀಡಲಿಲ್ಲ ಎಂದು ಆಕ್ರೋಶ ಹೊರಹಾಕಿದರು.

    ಬಿಜೆಪಿಯವರಿಗೆ ಜನರು 113 ಸ್ಥಾನಗಳನ್ನು ನೀಡಿಲ್ಲ. ಜನಾದೇಶ ಮತ್ತು ಸಂವಿಧಾನಾತ್ಮಕವಾಗಿ ಈ ಸರ್ಕಾರ ರಚನೆಯಾಗಿಲ್ಲ. ಹಿಂಬಾಗಿಲಿನಿಂದ ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಹಾಗಾಗಿ ಅತೃಪ್ತರ ಗುಂಪು ಬಿಜೆಪಿಯವರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದೆ. ಹಾಗಾಗಿ ಸಚಿವರಿಗೆ ಖಾತೆ ಹಂಚಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಬಿಜೆಪಿ ಹೈಕಮಾಂಡ್ ಗೆ ಯಡಿಯೂರಪ್ಪನವರು ಒಲ್ಲದ ಶಿಶು. ನಮ್ಮ ಪಕ್ಷಕ್ಕೆ ದ್ರೋಹ ಮಾಡಿದ ಅತೃಪ್ತ ಶಾಸಕರನ್ನು ಅನರ್ಹಗೊಳಿಸಬೇಕೆಂದು ದಿನೇಶ್ ಗುಂಡೂರಾವ್ ಮತ್ತು ನಾನು ಸ್ಪೀಕರ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ನಮ್ಮ ಅರ್ಜಿ ಹಿನ್ನೆಲೆಯಲ್ಲಿ ಸ್ಪೀಕರ್ ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದರು ಎಂದರು.

    ಸಂತ್ರಸ್ತರಿಗೆ ತಾತ್ಕಲಿಕ ವ್ಯವಸ್ಥೆ ಮಾಡುವ ಬದಲು ಸಿಎಂ ಪದೇ ಪದೇ ದೆಹಲಿಗೆ ಹೋಗುತ್ತಿದ್ದಾರೆ. ಅಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ಇವರನ್ನ ಭೇಟಿ ಆಗುತ್ತಿಲ್ಲ. ಅಧಿಕಾರವನ್ನು ಕೇಂದ್ರಿಕೃತ ಮಾಡಿಕೊಳ್ಳುವುದು ಮತ್ತು ಸರ್ವಾಧಿಕಾರದಲ್ಲಿ ನಂಬಿಕೆ ಹೊಂದಿರುವ ಪಕ್ಷ ಬಿಜೆಪಿ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದ ಬಿಜೆಪಿಯವರಿಗೆ ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ಏನು ಗೊತ್ತು ಎಂದು ವ್ಯಂಗ್ಯ ಮಾಡಿದರು.

  • ಇಂದಲ್ಲ, ನಾಳೆ ನಾನು ಮಂತ್ರಿಯಾಗ್ತೀನಿ: ಬಾಲಚಂದ್ರ ಜಾರಕಿಹೊಳಿ

    ಇಂದಲ್ಲ, ನಾಳೆ ನಾನು ಮಂತ್ರಿಯಾಗ್ತೀನಿ: ಬಾಲಚಂದ್ರ ಜಾರಕಿಹೊಳಿ

    -ಉಮೇಶ್ ಕತ್ತಿಗೆ ಅನ್ಯಾಯವಾಗಿದೆ

    ಬೆಂಗಳೂರು: ಅರಭಾವಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಹೆಸರು ಸಚಿವ ಸ್ಥಾನದ ಪಟ್ಟಿಯಲ್ಲಿ ಕೇಳಿ ಬಂದಿತ್ತು. ಆದ್ರೆ ಬಾಲಚಂದ್ರ ಜಾರಕಿಹೊಳಿ ಅವರ ಹೆಸರನ್ನು ಸಚಿವರ ಪಟ್ಟಿಯಿಂದ ಬಿಜೆಪಿ ಹೈಕಮಾಂಡ್ ಕೈ ಬಿಟ್ಟಿತ್ತು. ಈ ಕುರಿತು ಬಾಲಚಂದ್ರ ಜಾರಕಿಹೊಳಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಇಂದಲ್ಲ, ನಾಳೆ ನಾನು ಮಂತ್ರಿಯಾಗುತ್ತೇನೆ ಎಂದು ಹೇಳಿದ್ದಾರೆ.

    ನಿನ್ನೆ ತಡರಾತ್ರಿ ಬೆಂಗಳೂರಿಗೆ ಬಂದಿದ್ದೇನೆ. ಮಾಧ್ಯಮಗಳಲ್ಲಿ ಸಚಿವ ಸ್ಥಾನದಲ್ಲಿ ನನ್ನ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಬೆಂಬಲಿಗರು ಬೆಂಗಳೂರಿಗೆ ಬಂದಿದ್ದಾರೆ. ನನ್ನನ್ನು ಮಂತ್ರಿ ಮಾಡಿ ಎಂದು ಸಿಎಂ ಬಳಿ ಕೇಳಿಲ್ಲ. ಸಚಿವ ಸ್ಥಾನ ನೀಡಿದ್ರೆ ನಿರ್ವಹಿಸಲು ಸಿದ್ಧನಿದ್ದೇನೆ. ಸಚಿವ ಸ್ಥಾನ ನೀಡಿಲ್ಲ, ಹಾಗಾಗಿ ನಮ್ಮ ಕೆಲಸಗಳಲ್ಲಿ ತೊಡಗಿಕೊಳ್ಳುತ್ತೇವೆ. ಕಳೆದ ಮೂರು ದಿನಗಳಿಂದ ಮಾಧ್ಯಮಗಳು ನನ್ನನ್ನು ಮಂತ್ರಿ ಮಾಡಿದಕ್ಕೆ ಧನ್ಯವಾದ ಹೇಳುತ್ತೇನೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ನಕ್ಕರು.

    2005ರಿಂದಲೂ ಜಾರಕಿಹೊಳಿ ಕುಟುಂಬದಲ್ಲಿ ಒಬ್ಬರು ಮಂತ್ರಿಯಾಗುತ್ತಾ ಬಂದಿದ್ದಾರೆ. ಇಂದಲ್ಲ ಅಥವಾ ನಾಳೆ ನಾನು ಮಂತ್ರಿಯಾಗುತ್ತೇನೆ ಎಂಬ ನಂಬಿಕೆ ಹೊಂದಿದ್ದೇನೆ. ಲಕ್ಷ್ಮಣ್ ಸವದಿ ಅಥಣಿ ಮತ್ತು ಕಾಗವಾಡ ಕ್ಷೇತ್ರದ ವ್ಯಕ್ತಿ. ಹಾಗಾಗಿ ಮುಂದೆ ನಡೆಯುವ ಉಪಚುನಾವಣೆಯನ್ನು ಗೆಲ್ಲುವ ಉದ್ದೇಶದಿಂದ ಲಕ್ಷ್ಮಣ್ ಸವದಿಯವರಿಗೆ ಹೈಕಮಾಂಡ್ ಸಚಿವ ಸ್ಥಾನ ನೀಡಿರುವ ಸಾಧ್ಯತೆಗಳಿವೆ. ಸಚಿವ ಸ್ಥಾನದ ಯಾವುದೇ ಆಸೆಯೂ ನನಗಿಲ್ಲ, ಪಕ್ಷಕ್ಕೆ ನಿಷ್ಠನಾಗಿರುತ್ತೇನೆ ಎಂದರು.

    ಕ್ಷೇತ್ರದ ಜನತೆಗೆ ಮತ್ತು ಬೆಂಬಲಿಗರಿಗೆ ನಮ್ಮ ನಾಯಕ ಸಚಿವ ಆಗಬೇಕೆಂದು ಆಸೆ ಇರುತ್ತದೆ. ಅಂತಿಮ ಆದೇಶ ಬರೋವರೆಗೂ ಬೆಂಗಳೂರಿಗೆ ಬರೋದು ಬೇಡ ಅಂತಾ ಹೇಳಿದ್ದರೂ ಬಂದಿದ್ದಾರೆ. ಸಹಜವಾಗಿಯೇ ಕ್ಷೇತ್ರದ ಜನತೆಗೆ ನಿರಾಸೆಯುಂಟಾಗಿದ್ದರಿಂದ ಆಕ್ರೋಶ ಹೊರ ಹಾಕುತ್ತಿದ್ದಾರೆ. ದೈವ ಬಲ ನಮಗಿದ್ದು, ಜಾರಕಿಹೊಳಿ ಕುಟುಂಬದಿಂದ ಒಬ್ಬರು ಖಂಡಿತ ಮಂತ್ರಿ ಆಗುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.

    ಉಮೇಶ್ ಕತ್ತಿಯವರು ನನ್ನ ಆಪ್ತರು. ಒಂಬತ್ತು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಉಮೇಶ್ ಕತ್ತಿಯವರ ಸೋದರನಿಗೆ ಟಿಕೆಟ್ ನೀಡಿರಲಿಲ್ಲ. ಅಂದು ಯಡಿಯೂರಪ್ಪನವರು ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ನೀಡುವುದಾಗಿ ಭರವಸೆ ನೀಡಿದ್ದರು. ಉಮೇಶ್ ಕತ್ತಿ ಅವರಿಗೆ ಸಚಿವ ಸ್ಥಾನ ನೀಡಬೇಕಿತ್ತು ಎಂಬುವುದು ನನ್ನ ವೈಯಕ್ತಿಯ ಅಭಿಪ್ರಾಯ. ಸಂಪುಟ ರಚನೆಯಲ್ಲಿ ಉಮೇಶ್ ಕತ್ತಿಯವರಿಗೆ ಅನ್ಯಾಯವಾಗಿದೆ ಎಂದು ಬಾಲಚಂದ್ರ ಜಾರಕಿಹೊಳಿ ಬೇಸರ ಹೊರ ಹಾಕಿದರು.

  • ಸಚಿವ ಸಂಪುಟಕ್ಕೆ ಮುಹೂರ್ತ ಫಿಕ್ಸ್

    ಸಚಿವ ಸಂಪುಟಕ್ಕೆ ಮುಹೂರ್ತ ಫಿಕ್ಸ್

    ನವದೆಹಲಿ: ರಾಜ್ಯ ಸರ್ಕಾರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪವರ ಸಂಪುಟ ರಚನೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ.

    ಇಂದು ಸಂಜೆ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಅಮಿತ್ ಶಾ ಅವರನ್ನು ಸಿಎಂ ಯಡಿಯೂರಪ್ಪನವರು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ವೇಳೆ ರಾಜ್ಯ ಸಂಪುಟ ರಚನೆಗೆ ಅಮಿತ್ ಶಾ ಕೊನೆಗೂ ಹಸಿರು ನಿಶಾನೆ ತೋರಿಸಿದ್ದಾರೆ. ಇದೇ ಮಂಗಳವಾರ ಅಂದ್ರೆ ಆಗಸ್ಟ್ 20ರಂದು ಹೈಕಮಾಂಡ್ ಸಂಪುಟ ರಚನೆಗೆ ಸಮಯವನ್ನು ನಿಗದಿ ಮಾಡಿದೆ. ಅಂದು ಬೆಳಗ್ಗೆ 10 ಗಂಟೆಗೆ ಬಿಜೆಪಿ ಶಾಸಕಾಂಗ ಸಭೆ ನಡೆಯಲಿದ್ದು, ಸಭೆಯ ಬಳಿಕ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ.

    ಮೊದಲ ಬಾರಿಗೆ 16ರಿಂದ 18 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಗಳಿವೆ. ಭೇಟಿಯ ವೇಳೆ ಯಡಿಯೂರಪ್ಪನವರು ತಾವು ಸಿದ್ಧಪಡಿಸಿಕೊಂಡಿದ್ದ ಮಂತ್ರಿ ಸ್ಥಾನದ ಆಕಾಂಕ್ಷಿಗಳು ಪಟ್ಟಿಯನ್ನು ಅಮಿತ್ ಶಾವರಿಗೆ ಮತ್ತೊಮ್ಮೆ ನೀಡಿದ್ದಾರೆ ಎನ್ನಲಾಗುತ್ತಿದೆ. ಇತ್ತ ಅಮಿತ್ ಶಾ ಯಾರನ್ನು, ಯಾವ ಕಾರಣಕ್ಕೆ, ಯಾವ ಸ್ಥಾನ ನೀಡಬೇಕೆಂಬ ವಿಚಾರವನ್ನು ಯಡಿಯೂರಪ್ಪನವರಿಗೆ ತಿಳಿಸಿದ್ದಾರೆ. ಭಾನುವಾರ ಅಥವಾ ಸೋಮವಾರ ಪ್ರಮಾಣ ವಚನ ಸ್ವೀಕರಿಸುವ ನಾಯಕರ ಪಟ್ಟಿಯನ್ನು ಅಮಿತ್ ಶಾ ರವಾನಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿವೆ.