Tag: BS Yeddiurappa

  • ಈಶ್ವರಪ್ಪ, ಜಗದೀಶ್ ಶೆಟ್ಟರ್ ಎರಡು ಕಣ್ಣುಗಳಿದ್ದಂತೆ: ನಳಿನ್ ಕುಮಾರ್ ಕಟೀಲ್

    ಈಶ್ವರಪ್ಪ, ಜಗದೀಶ್ ಶೆಟ್ಟರ್ ಎರಡು ಕಣ್ಣುಗಳಿದ್ದಂತೆ: ನಳಿನ್ ಕುಮಾರ್ ಕಟೀಲ್

    – ಸಿಎಂ ಯಡಿಯೂರಪ್ಪ ನಮ್ಮ ಪಕ್ಷದ ಆತ್ಮ

    ಮಂಗಳೂರು: ಯಡಿಯೂರಪ್ಪನವರು ನಮ್ಮ ಪಕ್ಷದ ಆತ್ಮವಿದ್ದಂತೆ, ಈಶ್ವರಪ್ಪ ಮತ್ತು ಜಗದೀಶ್ ಶೆಟ್ಟರ್ ಎರಡು ಕಣ್ಣುಗಳಿದ್ದಂತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

    ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋ ಕಮಲ ಪಾಳಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಆಡಿಯೋದಲ್ಲಿ ಈಗಾಗಲೇ ಮೂವರ ಹೆಸರು ಅಂತಿಮ ರೇಸ್ ನಲ್ಲಿದೆ ಎಂಬ ಮಾತುಗಳು ಕೇಳಿ ಬಂದಿವೆ.

    ಈ ವಿಚಾರವಾಗಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಆಡಿಯೋಗೂ ನನಗೂ ಯಾವುದೇ ಸಂಬಂಧವಿಲ್ಲ. ಇಂದೇ ನಾನು ಮುಖ್ಯಮಂತ್ರಿಗಳಿಗೆ ಈ ಬಗ್ಗೆ ತನಿಖೆ ಆಗಬೇಕೆಂದು ಪತ್ರ ಬರೆಯುತ್ತೇನೆ. ಸತ್ಯ ಅಸತ್ಯತೆಗಳು ತನಿಖೆಯಿಂದಲೇ ಹೊರಬರಲಿ. ರಾಜಕಾರಣದಲ್ಲಿ ಈ ರೀತಿಯ ಅನೇಕ ಪ್ರಕರಣಗಳು ಈ ಹಿಂದೆ ಕೂಡ ಆಗಿದ್ದವು. ಇದು ಸರಿಯಲ್ಲ ಹಾಗಾಗಿ ತನಿಖೆಯಾಗಲಿ ಎಂದು ಹೇಳಿದ್ದಾರೆ.

    ನಮ್ಮಲ್ಲಿ ನಾಯಕತ್ವ ಆಗಲಿ ಬೇರೆ ಯಾವುದೇ ಬದಲಾವಣೆಯ ಚರ್ಚೆಗಳೇ ಇಲ್ಲ. ಈ ವಿಷಯ ಅಪ್ರಸ್ತುತ. ನಮ್ಮ ಪಾರ್ಟಿಯ ಆತ್ಮ ಯಡಿಯೂರಪ್ಪನವರು, ಹತ್ತಾರು ವರ್ಷ ಹೋರಾಟ ಮಾಡಿ ನಮ್ಮ ಪಾರ್ಟಿಯನ್ನು ಇಷ್ಟು ಎತ್ತರಕ್ಕೆ ಬೆಳೆಸಿದ್ದಾರೆ. ಈಶ್ವರಪ್ಪ ಹಾಗೂ ಜಗದೀಶ್ ಶೆಟ್ಟರ್ ಎರಡು ಕಣ್ಣುಗಳಿದ್ದಂತೆ, ಅವರೆಲ್ಲಾ ಹಿರಿಯರ ಮಾರ್ಗದರ್ಶನದಲ್ಲಿ ನಮ್ಮ ಪಾರ್ಟಿ, ಸರ್ಕಾರ ನಡೆಯುತ್ತಿದೆ. ಹಾಗಾಗಿ ಇಂತಹ ಯಾವುದೇ ಮಾತುಕತೆಗಳು ನಮ್ಮ ಪಾರ್ಟಿಯಲ್ಲಿ ಎಲ್ಲೂ ಚರ್ಚೆ ನಡೆದಿಲ್ಲ. ಹಾಗಾಗಿ ತನಿಖೆಯ ನಂತರ ಇದರ ಸತ್ಯ ಬಹಿರಂಗವಾಗಲಿ ಎಂದಿದ್ದಾರೆ.

    ಈ ವಿಚಾರವಾಗಿ ತನಿಖೆಯಾಗದೇ ನಾನು ಯಾರ ಬಗ್ಗೆಯೂ ಸಂಶಯ ವ್ಯಕ್ತಪಡಿಸುವುದಿಲ್ಲ. ಯಾರೇ ಆದರೂ ತನಿಖೆಯಾಗಿ ನಿಜ ಹೊರಗೆಬರುತ್ತದೆ. ಸದ್ಯ ಇಂದು ಅಧಿವೇಶನ ಇರುವುದರಿಂದ ದೆಹಲಿಗೆ ಹೋಗುತ್ತಿದ್ದೇನೆ. ಇನ್ನೂ ತನಿಖೆಗೆ ನಾನು ಸಂಪೂರ್ಣ ಸಹಕಾರವನ್ನು ನೀಡುತ್ತೇನೆ. ಇದನ್ನೂ ಓದಿ: ಮುಂದಿನ ಸಿಎಂ ಸ್ಥಾನಕ್ಕೆ ಹೆಸರುಗಳು ಪಟ್ಟಿ ರೆಡಿಯಾಗಿದೆಯಾ? ಆಡಿಯೋದಲ್ಲಿ ಹೇಳಿದ ಮೂವರು ಯಾರು?

  • ಇವರದ್ದು ಅವರ ಬಳಿ, ಅವರದೆಲ್ಲ ಇವರ ಬಳಿ, ಫಲಿತಾಂಶ ಶೂನ್ಯ: ಯತ್ನಾಳ್

    ಇವರದ್ದು ಅವರ ಬಳಿ, ಅವರದೆಲ್ಲ ಇವರ ಬಳಿ, ಫಲಿತಾಂಶ ಶೂನ್ಯ: ಯತ್ನಾಳ್

    – ಬಿಎಸ್‍ವೈ, ಡಿಕೆಶಿ ನಡುವೆ ಒಳ ಒಪ್ಪಂದ

    ವಿಜಯಪುರ: ಸಿಡಿ ಪ್ರಕರಣದಲ್ಲಿ ಇಬ್ಬರು ಪ್ರಬಲ ನಾಯಕರಿದ್ದಾರೆ. ಒಬ್ಬರದ್ದು ಮತ್ತೊಬ್ಬರ ಬಳಿಯಲ್ಲಿದೆ. ಒಬ್ಬರಿಗೊಬ್ಬರು ಬ್ಲ್ಯಾಕ್‍ಮೇಲ್ ಮಾಡಿಕೊಂಡಿದ್ದಾರೆ. ಹಾಗಾಗಿ ಈ ಪ್ರಕರಣದ ಫಲಿತಾಂಶ ಶೂನ್ಯ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

    ರಾಜಕೀಯ ಪ್ರಭಾವ ಹೆಚ್ಚಿರುವ ಕಾರಣ ಪ್ರಕರಣದ ತನಿಖೆ ಸರಿಯಾಗಿ ನಡೆಯುತ್ತಿಲ್ಲ. ಪೊಲೀಸರ ಕೈಗಳನ್ನ ಕಟ್ಟಿ ಹಾಕಿ ಇದೇ ಪ್ರಶ್ನೆ ಕೇಳಬೇಕೆಂಬ ಒತ್ತಡಗಳಿವೆ. ಸಿಡಿ ಪ್ರಕರಣದಲ್ಲಿ ಓರ್ವ ಕಾಂಗ್ರೆಸ್ ಮತ್ತು ಮತ್ತೋರ್ವ ಬಿಜೆಪಿಗ ಇರೋದು ನಿಜ. ಡಿ.ಕೆ.ಶಿವಕುಮಾರ್ ಹೆಸರು ಹೊರ ಬಂದಿದ್ದು, ಸಿಎಂ ಯಡಿಯೂರಪ್ಪ ಇರೋವರೆಗೂ ಮತ್ತೊಬ್ಬ ಬಿಜೆಪಿಗನ ಹೆಸರು ಬೆಳಕಿಗೆ ಬರಲ್ಲ. ಆ ಹೆಸರನ್ನ ಮುಚ್ಚಿ ಹಾಕುವ ಕೆಲಸವನ್ನ ಸಿಎಂ ಮಾಡುತ್ತಿದ್ದಾರೆ ಎಂದು ಯತ್ನಾಳ್ ಆರೋಪಿಸಿದರು.

    ಇನ್ನುಳಿದ ಬಿಜೆಪಿ ನಾಯಕರೆಲ್ಲರೂ ಒಳ್ಳೆಯವರು. ಸಿಡಿ ಪ್ರಕರಣದಲ್ಲಿ ಸಿಎಂ ಕುಟುಂಬದವರೇ ಒಬ್ಬರಿದ್ದಾರೆ. ಈ ಪ್ರಕರಣದಲ್ಲಿ ಯಡಿಯೂರಪ್ಪ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಒಳ್ಳೆಯ ಬಾಂಧವ್ಯವಿದೆ. ನನ್ನ ವಿರುದ್ಧ ವಿಚಾರಣೆ ನಡೆಸಲು ಕಾರಣ ಇರಬೇಕು. ನನ್ನ ಮೇಲೆ ಭೂ ಹಗರಣದ ಕೇಸ್ ಇದೆಯಾ ಅಥವಾ ಭ್ರಷ್ಟಾಚಾರದ ಆರೋಪಗಳಿವೆಯಾ ಎಂದು ಪರೋಕ್ಷವಾಗಿ ಸಿಎಂ ವಿರುದ್ಧವೇ ವಾಗ್ದಾಳಿ ನಡೆಸಿದರು.

    ಯಾವ ಶಾಸಕರು ನನ್ನ ವಿರುದ್ಧ ಸಹಿ ಮಾಡಿಲ್ಲ. ಮುಖ್ಯಮಂತ್ರಿಗಳಿಗೆ ಬದ್ಧವಾಗಿದ್ದೇನೆ ಅನ್ನೋದನ್ನ ತೋರಿಸಿಕೊಳ್ಳಲು ಶಾಸಕ ರೇಣುಕಾಚಾರ್ಯ ಈ ರೀತಿ ಊಹಾಪೋಹ ಸುದ್ದಿಗಳನ್ನ ಹರಿ ಬಿಡುತ್ತಿದ್ದಾರೆ. ಸಿಎಂ ಬದಲಾವಣೆ ಆಗೋದು ಖಚಿತ. ಮುಖ್ಯಮಂತ್ರಿಗಳ ಬದಲಾವಣೆ ಆಗದಿದ್ರೆ ಪಕ್ಷ ನಡೆಯಲ್ಲ. ಕೇಂದ್ರಕ್ಕೂ ಈಗಿರುವ ಸಿಎಂ ಸಾಕಾಗಿದ್ದಾರೆ. ಕೇಂದ್ರವೇ ಮುಖ್ಯಮಂತ್ರಿಯನ್ನ ಬದಲಿಸುತ್ತಾರೆ ಎಂದು ಭವಿಷ್ಯ ನುಡಿದರು.