Tag: BS Lingadevaru

  • ಶರಣು ಹುಲ್ಲೂರು, ಬಿ.ಎಸ್.ಲಿಂಗದೇವರಿಗೆ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ

    ಶರಣು ಹುಲ್ಲೂರು, ಬಿ.ಎಸ್.ಲಿಂಗದೇವರಿಗೆ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ

    ಬ್ಲಿಕ್ ಟಿವಿ ಡಿಜಿಟಲ್ ಸಿನಿಮಾ ವಿಭಾಗದ ಶರಣು ಹುಲ್ಲೂರು ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಬಿ.ಎಸ್.ಲಿಂಗದೇವರು ಅವರಿಗೆ ಜಂಟಿಯಾಗಿ ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ದೊರೆತಿದೆ. ಶರಣು ಹುಲ್ಲೂರು (Sharanu Hullur) ಮತ್ತು ಬಿ.ಎಸ್.ಲಿಂಗದೇವರು (BS Lingadevaru) ಜೊತೆಯಾಗಿ ‘ವಿರಾಟಪುರ ವಿರಾಗಿ’ (Viratpura Viragi) ಚಿತ್ರಕ್ಕೆ ಸಂಭಾಷಣೆ ಬರೆದಿದ್ದರು. ಈ ಚಿತ್ರದ ಸಂಭಾಷಣೆಗಾಗಿ ಖ್ಯಾತ ಚಿತ್ರ ಸಾಹಿತಿ ಶ್ರೀಹುಣಸೂರು ಕೃಷ್ಣಮೂರ್ತಿ ಸ್ಮರಣಾರ್ಥ ಪ್ರಶಸ್ತಿ ಸಂದಿದೆ.

    ಹಾನಗಲ್ಲ (Hanagalla) ಕುಮಾರಸ್ವಾಮಿಗಳ (Kumaraswamy) ಜೀವನವನ್ನು ಆಧರಿಸಿದ ಸಿನಿಮಾ ವಿರಾಟಪುರ ವಿರಾಗಿ. ಭಾರೀ ಬಜೆಟ್ ಸಿನಿಮಾಗಳೇ ಸೋಲಿನ ಹಾದಿ ಹಿಡಿದಿರುವ ಸಂದರ್ಭದಲ್ಲಿ ವಿರಾಟಪುರ ವಿರಾಗಿ ಸಿನಿಮಾ ಭಾರೀ ಯಶಸ್ಸು ಕಂಡಿತ್ತು. ಕಲಬುರಗಿ ನಗರವೊಂದರಲ್ಲೇ ನೂರು ಪ್ರದರ್ಶನಗಳನ್ನು ಕಂಡು ದಾಖಲೆ ಬರೆದಿತ್ತು. ಕರ್ನಾಟಕದಾದ್ಯಂತ ಮೂರು ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿತ್ತು.

    ಸಿನಿಮಾ ಬಿಡುಗಡೆಗೆ ಮುನ್ನವೇ 75 ಸಾವಿರಕ್ಕೂ ಅಧಿಕ ಟಿಕೆಟ್ ಮಾರಾಟವಾಗಿ ಹೊಸ ದಾಖಲೆ ಬರೆದಿದ್ದ  ಈ ಸಿನಿಮಾ 750ಕ್ಕೂ ಹೆಚ್ಚು ಶೋಗಳು ಹೌಸ್ ಫುಲ್ ಆಗಿವೆ. 62ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಕಲಬುರಗಿಯಲ್ಲೇ 82 ಶೋಗಳು ಹೌಸ್ ಫುಲ್ ಪ್ರದರ್ಶನ ಕಂಡಿತ್ತು. ಈ ವರ್ಷದಲ್ಲಿ ಹೆಚ್ಚು ಸದ್ದು ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ ಈ ಚಿತ್ರ ಕೂಡ ಕಾಣಿಸಿಕೊಂಡಿತ್ತು.

     

    ಕನ್ನಡ ಚಿತ್ರರಂಗದ ಪ್ರಥಮ ಪ್ರಚಾರಕರ್ತ ದಿವಂಗತ ಶ್ರೀ ಡಿ.ವಿ. ಸುಧೀಂದ್ರ ಅವರು ತಮ್ಮ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಗೆ 25 ವರ್ಷ ತುಂಬಿದ  ಸುಸಂದರ್ಭದಲ್ಲಿ ನಿರ್ಮಾಪಕರಿಗೆ ಮತ್ತು ಹಿರಿಯ ಪತ್ರಕರ್ತರಿಗೆ ಪ್ರಶಸ್ತಿ ನೀಡುವ ಪರಿಪಾಠ ಆರಂಭಿಸಿದರು. ಈಗ ಪ್ರಶಸ್ತಿಗಳ ಸಂಖ್ಯೆ 11ಕ್ಕೇರಿದೆ. ಸಂಸ್ಥೆಯ 48ನೇ ವಾರ್ಷಿಕೋತ್ಸವ ಹಾಗೂ 23ನೇ ವರ್ಷದ  ಪ್ರಶಸ್ತಿ ಪ್ರದಾನ ಸಮಾರಂಭ ಜನವರಿ  27ರ ಶನಿವಾರ ಸಂಜೆ 5.30ಕ್ಕೆ ಚಾಮರಾಜಪೇಟೆಯ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ನಡೆಯಲಿದೆ. ಅಂದು ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.

  • ಸಿಂಗಾಪುರದಲ್ಲಿ ‘ವಿರಾಟಪುರ ವಿರಾಗಿ’ ಶೋ: ಮೂಕವಿಸ್ಮಿತರಾದ ಪ್ರೇಕ್ಷಕರು

    ಸಿಂಗಾಪುರದಲ್ಲಿ ‘ವಿರಾಟಪುರ ವಿರಾಗಿ’ ಶೋ: ಮೂಕವಿಸ್ಮಿತರಾದ ಪ್ರೇಕ್ಷಕರು

    ನ್ನಡ ಸಂಘ ಸಿಂಗಾಪುರ (Singapore) ಆಯೋಜಿಸಿದ್ದ, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬಿ.ಎಸ್. ಲಿಂಗದೇವರು (BS Lingadevaru) ನಿರ್ದೇಶನದ ‘ವಿರಾಟಪುರ ವಿರಾಗಿ’ (Viratpura Viragi) ಸಿನಿಮಾದ ಪ್ರದರ್ಶನ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಸಿನಿಮಾ ಪ್ರದರ್ಶನದ ನಂತರ ಪ್ರೇಕ್ಷಕರು ಭಾವುಕರಾಗಿದ್ದರು. ಹಾನಗಲ್ ಕುಮಾರಸ್ವಾಮಿಗಳ ಚರಿತೆಯನ್ನು ಕಣ್ತುಂಬಿಕೊಂಡು ಪುಳಕಿತರಾಗಿದ್ದರು.

    ಸಿಂಗಾಪುರ ಕನ್ನಡ ಸಂಘವು ಈ ಬಾರಿ ವಚನಾಂಜಲಿಯನ್ನು ವಿಶೇಷವಾಗಿ ಆಯೋಜಿಸಿತ್ತು. ಇದರ ಭಾಗವಾಗಿ ಶಿವಯೋಗಿಗಳಾದ ಶ್ರೀ ಹಾನಗಲ್ ಕುಮಾರಸ್ವಾಮಿಯವರ ಜೀವನಾಧಾರಿತ ಚಲನಚಿತ್ರ ‘ವಿರಾಟಪುರ ವಿರಾಗಿ’ಯ ಪ್ರದರ್ಶನವನ್ನು ಏರ್ಪಡಿಸಿ, ಅಲ್ಲಿನ ಕನ್ನಡಿಗರಿಗೆ ಕುಮಾರಸ್ವಾಮಿಗಳ ಚರಿತೆಯನ್ನು ತಿಳಿಸಿದ್ದು ವಿಶೇಷವಾಗಿತ್ತು. ಈ ಪ್ರದರ್ಶನದಲ್ಲಿ ನಿರ್ದೇಶಕರಾದ ಲಿಂಗದೇವರು, ಕುಮಾರಸ್ವಾಮಿಗಳ ಪಾತ್ರ ಮಾಡಿದ್ದ ಸುಚೇಂದ್ರ ಪ್ರಸಾದ್ (Suchendra Prasad)  ಭಾಗಿಯಾಗಿದ್ದರು.

    ಜನಸಾಮಾನ್ಯರ ಬದುಕನ್ನು ಉನ್ನತಗೊಳಿಸಲು ಹನ್ನೆರಡನೆಯ ಶತಮಾನದ ಶಿವಶರಣರು ಶ್ರಮಿಸಿರುವುದು ನಮಗೆಲ್ಲಾ ತಿಳಿದೇ ಇದೆ. ಶರಣರು ಸಾಹಿತ್ಯ ರಚಿಸಬೇಕೆಂಬ ಉದ್ದೇಶದಿಂದ ವಚನಗಳನ್ನು ಬರೆಯದೆ ದಿನನಿತ್ಯದ ತಮ್ಮ ಅನುಭವಗಳನ್ನು ವಚನದ ರೂಪದಲ್ಲಿ ಹೇಳಿದ್ದರಿಂದ ವಚನ ಸಾಹಿತ್ಯ ಒಂದು ಚಳಿವಳಿಯಾಯಿತು ಎಂಬುದು ಇತಿಹಾಸ. ವರ್ಣ-ಆಧಾರಿತ, ಜಾತಿ ಆಧಾರಿತ, ಲಿಂಗ-ಆಧಾರಿತ ಅಸಮಾನತೆಯನ್ನು ನಿರ್ಮೂಲಗೊಳಿಸಿ ಸರ್ವ ಸಮಾನತೆಯ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದವರು ಶಿವ ಶರಣರು. ಈ ಹಿನ್ನಲೆಯಲ್ಲಿ ಶ್ರೀ ಹಾನಗಲ್ ಕುಮಾರಸ್ವಾಮಿಯವರು ಎಲ್ಲರನ್ನು ಒಳಗೊಳ್ಳುವ ಮತ್ತು ಬಹುತ್ವ ಪರಂಪರೆಗೆ ಒತ್ತುಕೊಟ್ಟು ಸಮಸಮಾಜ ನಿರ್ಮಿಸಲು ಸ್ವಾತಂತ್ರ್ಯಪೂರ್ವದಲ್ಲಿ ಶ್ರಮಿಸಿದವರು. ಅಂತಹವರ  ಜೀವನಾಧಾರಿತ  ವಿರಾಟಪುರ ವಿರಾಗಿ ಸಿನಿಮಾವು ಶರಣರ ವಚನಗಳ ಅರ್ಥ ಮತ್ತು ಅಂತರಂಗದ ಅರಿವನ್ನು ಮೂಡಿಸುವಂಥದ್ದು.

    ಸಿನಿಮಾದಲ್ಲಿ ವಚನಗಳನ್ನು ಸನ್ನಿವೇಶಗಳಿಗೆ ಹೊಂದುವಂತೆ ಆಯ್ಕೆ ಮಾಡಿಕೊಂಡು, ಅದಕ್ಕೆ ಅತ್ಯುತ್ತಮ ಸಂಗೀತ ಸಂಯೋಜನೆ ಮಾಡಿರುವುದು ಪ್ರೇಕ್ಷಕರ ಹೃದಯವನ್ನು ಗೆಲ್ಲುವಲ್ಲಿ ಸಹಾಯವಾಗಿದೆ. ಇಡೀ ತಂಡವು ನಮ್ಮನ್ನು ಸ್ವಾತಂತ್ರ್ಯ ಪೂರ್ವ ಕಾಲಘಟ್ಟಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದೆ. ಜನಸಾಮಾನ್ಯರನ್ನು ಆಧ್ಯಾತ್ಮದತ್ತ ಕರೆದುಕೊಳ್ಳಲು, ನೈತಿಕ ಮೌಲ್ಯಗಳನ್ನು ಹೆಚ್ಚಿಸಲು, ಅನುಭಾವದ ಚಿಂತನೆಗೆ ತೊಡಗಿಸಲು ಈ ಚಿತ್ರ ಕನ್ನಡಿಗರ ಹೆಮ್ಮೆಯ ಚಿತ್ರವಾಗಿದೆ ಎನ್ನುವ ಅಭಿಪ್ರಾಯ ಪ್ರದರ್ಶನದ ನಂತರ ವ್ಯಕ್ತವಾಯಿತು.

    ಸುಮಾರು ನಾಲ್ಕಾರು ದಶಕಗಳಿಂದ ಕನ್ನಡಿಗರು ಸಿಂಗಾಪೂರದಲ್ಲಿ ನೆಲೆಸಿದ್ದಾರೆ. ಕನ್ನಡಿಗರು ಸಂಘ ಜೀವಿಗಳು ಮತ್ತು ತಮ್ಮ ಸಂಸ್ಕೃತಿ,  ಪರಂಪರೆ ಮತ್ತು ಕನ್ನಡ ಭಾಷೆ ನಮ್ಮ ಅಸ್ಮಿತೆಯೆಂದು ನಂಬಿರುವವರು. ಈ ಹಿನ್ನೆಲೆಯಲ್ಲಿ 11ನೇ ಸೆಪ್ಟೆಂಬರ್ 1996 ರಂದು ಸಿಂಗಾಪೂರದ ರಿಜಿಸ್ಟ್ರಾರ್ ಆಫ್ ಸೊಸೈಟಿಯಲ್ಲಿ ನೋಂದಾಯಿಸುವ ಮೂಲಕ ಕನ್ನಡ ಸಂಘ ಉದಯವಾಯಿತು. ಅಂದಿನಿಂದ ಇಂದಿನವರೆಗೂ ಕನ್ನಡಿಗರ ಸಂಸ್ಕೃತಿ,  ಪರಂಪರೆ ಮತ್ತು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಲು ಅನೇಕ ಕಾರ್ಯಕ್ರಮ ಗಳನ್ನು ಆಯೋಜಿಸುವ ಮೂಲಕ ಶ್ರಮಿಸುತ್ತಿದ್ದಾರೆ.

    ಕನ್ನಡ ಸಂಘ (ಸಿಂಗಾಪುರ)ವು ವಚನ ಸಾಹಿತ್ಯದ ಸಾರಾಮೃತವನ್ನು ಹರಡುವ, ಹಂಚುವ ಸದುದ್ದೇಶದಿಂದ ಸುಮಾರು 13 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಕಾರ್ಯಕ್ರಮವೇ ವಚನಾಂಜಲಿ.  ಪ್ರತೀ ವರ್ಷ ವಿವಿಧ ರೂಪಗಳಲ್ಲಿ ಆಚರಿಸಿಕೊಂಡು ಬಂದಂತಹ ವಚನಾಂಜಲಿ, ಶಾಸ್ತ್ರೀಯ ಸಂಗೀತ, ಜನಪದ ಶೈಲಿಯ ಹಾಡುಗಳ ಮೂಲಕ, ಭರತ ನಾಟ್ಯದಲ್ಲಿನ ನೃತ್ಯ ರೂಪಕಗಳಲ್ಲಿ, ಸಾಂಸ್ಕೃತಿಕವಾಗಿ ಆಚರಿಸಿಕೊಂಡು ಬಂದಿರುವುದು ಒಂದೆಡೆಯಾದರೆ, ಸಾಹಿತ್ಯದ ಒಳ ಅರಿವನ್ನು ಅರಿಯುವ ಹಾದಿಯಲ್ಲಿ ವಿಚಾರ ಗೋಷ್ಠಿಗಳು, ವಿಚಾರ ಸಂಕಿರಣ, ಸಂವಾದಗಳ ಮೂಲಕ ಅರ್ಥಪೂರ್ಣವಾಗಿ ನಡೆಸಿಕೊಂಡು ಬರುತ್ತಿದೆ. ಅದರ ಭಾಗವಾಗಿ ಈ ಬಾರಿ ವಿರಾಟ ಪುರ ವಿರಾಗಿ ಸಿನಿಮಾ ಪ್ರದರ್ಶನವಾಯಿತು.

    ತುಂಬಿದ ಸಭಾಂಗಣದಲ್ಲಿ ವಿರಾಟಪುರ ವಿರಾಗಿ  ಚಲನಚಿತ್ರ ಪ್ರದರ್ಶನ, ವಚನ ಸಾಹಿತ್ಯದ ಬಗೆಗಿನ ವಿಚಾರ ಗೋಷ್ಠಿ, ವಚನ ಸ್ಪರ್ಧೆಗಳಲ್ಲಿನ ವಿಜೇತರಿಗೆ ಬಹುಮಾನ ವಿತರಣೆ ಕೊನೆಯಲ್ಲಿ ದಾಸೋಹದೊಂದಿಗೆ ಅನೇಕ ವಿಚಾರಗಳ ವಿವರಣೆ, ವಿಮರ್ಶೆ, ವಿತರಣೆ ಕಾರ್ಯಗಳು ಜರುಗಿದವು. ಕನ್ನಡ ಸಂಘ ಸಿಂಗಾಪುರ ಅಧ್ಯಕ್ಷ ವೆಂಕಟ ರತ್ನಯ್ಯ (Venkata Ratnaya)ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಾ.19ರಂದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ‘ವಿರಾಟಪುರ ವಿರಾಗಿ’ ಚಿತ್ರ ಪ್ರದರ್ಶನ

    ಮಾ.19ರಂದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ‘ವಿರಾಟಪುರ ವಿರಾಗಿ’ ಚಿತ್ರ ಪ್ರದರ್ಶನ

    ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬಿ.ಎಸ್.ಲಿಂಗದೇವರು (BS Lingadevaru) ನಿರ್ದೇಶನದಲ್ಲಿ ಮೂಡಿ ಬಂದಿರುವ ‘ವಿರಾಟಪುರ ವಿರಾಗಿ’ (Viratpur Viragi) ಸಿನಿಮಾ ಮಾರ್ಚ್ 19ರಂದು ಆಸ್ಟ್ರೇಲಿಯಾದ (Australia) ಸಿಡ್ನಿಯಲ್ಲಿ(Sydney) ಪ್ರದರ್ಶನ ಕಾಣುತ್ತಿದೆ. ಅಂದು ಮಧ್ಯಾಹ್ನ 3.30ಕ್ಕೆ ಇವೆಂಟ್ ಸಿನಿಮಾಸ್ ಲೈವರ್ ಪೋಲ್ ಆಸ್ಟ್ರೇಲಿಯಾದಲ್ಲಿ ಸಿನಿಮಾ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಂಡಿರುವುದಾಗಿ ಬಿ.ಎಸ್.ಲಿಂಗದೇವರು ತಿಳಿಸಿದ್ದಾರೆ.

    ಹಾನಗಲ್ಲ (Hanagalla) ಕುಮಾರಸ್ವಾಮಿಗಳ (Kumaraswamy) ಜೀವನವನ್ನು ಆಧರಿಸಿದ ಸಿನಿಮಾ ಇದಾಗಿದ್ದು, ಭಾರೀ ಬಜೆಟ್ ಸಿನಿಮಾಗಳೇ ಸೋಲಿನ ಹಾದಿ ಹಿಡಿದಿರುವ ಸಂದರ್ಭದಲ್ಲಿ ವಿರಾಟಪುರ ವಿರಾಗಿ ಸಿನಿಮಾ ಭಾರೀ ಯಶಸ್ಸು ಕಂಡಿದೆ. ಸತತ ಮೂವತ್ತೈದು ದಿನಗಳಿಂದ ಹಲವು ಕಡೆ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಕಲಬುರಗಿ ನಗರವೊಂದರಲ್ಲೇ ನೂರು ಪ್ರದರ್ಶನಗಳನ್ನು ಕಂಡು ದಾಖಲೆ ಬರೆದಿದೆ. ಕರ್ನಾಟಕದಾದ್ಯಂತ ಈವರೆಗೂ ಮೂರು ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ. ಇದನ್ನೂ ಓದಿ: 800 ವರ್ಷದ ಹಳೆಯ ಮನೆಯಲ್ಲಿ ಶುಭಾ ಪೂಂಜಾ ದಿಢೀರ್ ಮದುವೆ

    ಸಿನಿಮಾ ಬಿಡುಗಡೆಗೆ ಮುನ್ನವೇ 75 ಸಾವಿರಕ್ಕೂ ಅಧಿಕ ಟಿಕೆಟ್ ಮಾರಾಟವಾಗಿ ಹೊಸ ದಾಖಲೆ ಬರೆದಿದ್ದ  ಈ ಸಿನಿಮಾ ಈವರೆಗೂ 750ಕ್ಕೂ ಹೆಚ್ಚು ಶೋಗಳು ಹೌಸ್ ಫುಲ್ ಆಗಿವೆ. 62ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಕಲಬುರಗಿಯಲ್ಲೇ 82 ಶೋಗಳು ಹೌಸ್ ಫುಲ್ ಪ್ರದರ್ಶನ ಕಂಡಿದೆ. ಈ ವರ್ಷದಲ್ಲಿ ಹೆಚ್ಚು ಸದ್ದು ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ ಈ ಚಿತ್ರ ಕೂಡ ಕಾಣಿಸಿಕೊಂಡಿದೆ.

    ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ಹಾಡುಗಳು ಕೂಡ ಕೇಳುಗರ ಗಮನ ಸೆಳೆದಿದ್ದು, ಈ ಸಿನಿಮಾವನ್ನು ಜನರಿಗೆ ತಲುಪಿಸುವುದಕ್ಕಾಗಿಯೇ ಹಾನಗಲ್ಲ ಕುಮಾರಸ್ವಾಮಿಗಳ ಭಕ್ತರು ರಥಯಾತ್ರೆ ಮತ್ತು ಗದಗ ಸೇರಿದಂತೆ ಹಲವು ಕಡೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದರು. ರಾಜ್ಯಾದ್ಯಂತ ರಥೆಯಾತ್ರೆ ಪ್ರವಾಸ ಮಾಡಿ, ಸಿನಿಮಾ ಮುಟ್ಟಿಸುವಲ್ಲಿ ಗೆದ್ದಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ‘ವಿರಾಟಪುರ ವಿರಾಗಿ’ ಚಿತ್ರವನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ತೋರಿಸುವೆ : ಸಚಿವ ಸಿ.ಸಿ. ಪಾಟೀಲ್

    ‘ವಿರಾಟಪುರ ವಿರಾಗಿ’ ಚಿತ್ರವನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ತೋರಿಸುವೆ : ಸಚಿವ ಸಿ.ಸಿ. ಪಾಟೀಲ್

    ಹಾನಗಲ್ಲ ಕುಮಾರ ಶಿವಯೋಗಿಗಳ ಜೀವನ ಚರಿತ್ರೆ ಆಧಾರಿತ ‘ವಿರಾಟಪುರ ವಿರಾಗಿ’ (Viratapur Viragi) ಸಿನಿಮಾ ವೀಕ್ಷಿಸಿ, ಯುವಕರು ತಮ್ಮ ವರ್ತನೆಗಳನ್ನು ತಿದ್ದುಕೊಳ್ಳಬೇಕು. ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಹಾಗಾಗಿ ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ ಒಂದು ವಾರ ಚಿತ್ರಮಂದಿರದಲ್ಲಿ ಈ ಸಿನಿಮಾವನ್ನು ಉಚಿತವಾಗಿ ವೀಕ್ಷಿಸಲು ಅವಕಾಶ ಕಲ್ಪಿಸುತ್ತೇನೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲೋಕೋಪಯೋಗಿ ಸಚಿವರಾದ ಸಿ.ಸಿ.ಪಾಟೀಲ್ (C.C. Patil) ಹೇಳಿದ್ದಾರೆ. ವಿರಾಟಪುರ ವಿರಾಗಿ ಸಿನಿಮಾದ ಟ್ರೈಲರ್ (Trailer) ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ್ದಾರೆ.

     

    ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಬಿ.ಎಸ್.ಲಿಂಗದೇವರು (BS Lingadevaru) ನಿರ್ದೇಶನದಲ್ಲಿ ಮೂಡಿ ಬಂದಿರುವ, ಹಾನಗಲ್ಲ ಕುಮಾರಸ್ವಾಮಿಗಳ (Hanagalla Kumaraswamy) ಜೀವನವನ್ನು ಆಧರಿಸಿದ ‘ವಿರಾಟಪುರ ವಿರಾಗಿ’ ಸಿನಿಮಾದ ಟ್ರೈಲರ್ ಗದಗನಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಯಿತು. ಈ ಟ್ರೈಲರ್ ಬಿಡುಗಡೆ ಸಮಾರಂಭಕ್ಕೆ ಐದು ಸಾವಿರಕ್ಕೂ ಹೆಚ್ಚು ಜನರು, ನಾಡಿನ ಅನೇಕ ಮಠಾಧೀಶರು ಹಾಗೂ ಜನಪ್ರತಿನಿಧಿಗಳು ಸಾಕ್ಷಿಯಾಗಿದ್ದರು. ಕಾರ್ಯಕ್ರಮಕ್ಕೂ ಮುನ್ನ 6 ರಥಗಳು ರಾಜ್ಯದ ವಿವಿಧ ಭಾಗಗಳಿಂದ ಹೊರಟು 7000 ಕಿಮೀ ಪ್ರಯಾಣ ಮಾಡಿ, ಗದಗಿಗೆ ಆಗಮಿಸಿದ್ದವು. 500ಕ್ಕೂ ಹೆಚ್ಚು ಮಹಿಳೆಯರು ಪೂರ್ಣ ಕುಂಬದಿಂದ ಅವುಗಳನ್ನು ಸ್ವಾಗತ ಮಾಡಲಾಯಿತು.

    ವಿರಾಟಪುರ ವಿರಾಗಿ ಸಿನಿಮಾದ ಟ್ರೈಲರ್ ಅನ್ನು ಬಿಡುಗಡೆ ಮಾಡಿ ಮಾತನಾಡಿದ ಜನಪ್ರಿಯ ಯುವ ನಾಯಕ ಬಿ.ವೈ ವಿಜಯೇಂದ್ರ ‘ಇಂಥದ್ದೊಂದು ಸಿನಿಮಾ ಆಗಿದೆ ಎನ್ನುವುದೇ ನಮಗೊಂದು ಹೆಮ್ಮೆ. ಈ ಸಿನಿಮಾವನ್ನು ನಾವೆಲ್ಲರೂ ಗೆಲ್ಲಿಸಬೇಕು. ಟ್ರೈಲರ್ ನೋಡಿದ ಮೇಲೆ ಸಿನಿಮಾ ನೋಡಬೇಕು ಎನ್ನುವ ಕುತೂಹಲ ಇನ್ನೂ ಹೆಚ್ಚಾಗಿದೆ. ಅಪರೂಪದ ಸಿನಿಮಾ ಮಾಡಿರುವ ಬಿ.ಎಸ್.ಲಿಂಗದೇವರು ಮತ್ತು ಮೌನತಪಸ್ವಿ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳಿಗೆ ನಾವೆಲ್ಲರೂ ಋಣಿಯಾಗಿರಬೇಕು’ ಎಂದರು. ಇದನ್ನೂ ಓದಿ: ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ, ನೀವು ನನ್ನನ್ನು ಗೆಲ್ಲಿಸಿದ್ದೀರಿ: ರೂಪೇಶ್ ಶೆಟ್ಟಿ

    ನಿರ್ದೇಶಕ ಬಿ.ಎಸ್.ಲಿಂಗದೇವರು ಮಾತನಾಡುತ್ತಾ, ‘ಆಧುನಿಕ ಜಗತ್ತಿನಲ್ಲಿ ಧಾರ್ಮಿಕ, ಭಕ್ತಿಪ್ರಧಾನ ಸಿನಿಮಾಗಳನ್ನು ಜನರಿಗೆ ಮುಟ್ಟಿಸುವುದೇ ಸವಾಲಿನ ಕೆಲಸವಾಗಿದೆ. ಹಾಗಾಗಿ ಈ ಸಿನಿಮಾವನ್ನು ಜನರಿಗೆ ತಲುಪಿಸುವ ಕೆಲಸ ಎಲ್ಲರಿಂದಲೂ ನಡೆಯಬೇಕು. ಈ ಸಿನಿಮಾವಾಗಲು ಅನೇಕ ಗುರುಗಳ, ಪಂಡಿತರು ಮಾರ್ಗದರ್ಶನ ಮಾಡಿದ್ದಾರೆ. ಜನವರಿ 13ರಂದು ಸಿನಿಮಾ ತೆರೆಗೆ ಬರಲಿದೆ’ ಎಂದರು.

    ಈ ಸಿನಿಮಾಗೆ ಸರಕಾರವು ತೆರಿಗೆ ವಿನಾಯಿತಿ ಜೊತೆಗೆ ಸರ್ಕಾರದಿಂದ ಸಬ್ಸಿಡಿ ಕೊಡಿಸಲು ಸಚಿವರಾದ ಸಿ.ಸಿ. ಪಾಟೀಲ್ ಅವರಿಗೆ ಮನವಿ ಮಾಡಿಕೊಂಡರು ಮುಖಂಡ ಅಲ್ಲಂ ವೀರಭದ್ರಪ್ಪ. ಈ ಕಾರ್ಯಕ್ರಮದಲ್ಲಿ ತೋಂಟದಾರ್ಯ ಮಠದ ಡಾ.ಸಿದ್ದರಾಮ ಸ್ವಾಮೀಜಿ, ಹುಬ್ಬಳ್ಳಿಯ ಮೂರುಸಾವಿರ ಮಠದ ಗುರುಸಿದ್ದೇಶ್ವರ ರಾಜಯೋಗೀಂದ್ರ ಸ್ವಾಮೀಜಿ, ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು, ಸಮಾಜಸೇವಕಿ ಸಂಯುಕ್ತಾ ಕಳಕಪ್ಪ ಬಂಡಿ, ಶಾಸಕ ಎಚ್.ಕೆ.ಪಾಟೀಲ್, ಯುವ ಮುಖಂಡ ಅನಿಲ್ ಮೆಣಸಿನಕಾಯಿ, ಮಾಜಿ ಶಾಸಕ ಜಿ.ಎಸ್.ಪಾಟೀಲ್, ಕಲಾವಿದ ಸುಚೇಂದ್ರ ಪ್ರಸಾದ್, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಜಡೆಯ ಶಾಂತಲಿಂಗೇಶ್ವರ ಸ್ವಾಮೀಜಿಗಳು ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದರು.

    Live Tv
    [brid partner=56869869 player=32851 video=960834 autoplay=true]