Tag: brundavana

  • ಮರೆಯಲಾಗದಂತಹ ನೈಜ ಘಟನೆ ಹಂಚಿಕೊಂಡ ಜಗ್ಗೇಶ್

    ಮರೆಯಲಾಗದಂತಹ ನೈಜ ಘಟನೆ ಹಂಚಿಕೊಂಡ ಜಗ್ಗೇಶ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಜಗ್ಗೇಶ್ ಅವರು ಮಂತ್ರಾಲಯದ ಗುರುರಾಘವೇಂದ್ರ ಸ್ವಾಮಿಗಳ ಅಪ್ಪಟ ಭಕ್ತ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಪ್ರತಿ ದಿನ ರಾಯರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅಂತೆಯೇ ಇದೀಗ ರಾಯರು ಹಾಗೂ ಜಗ್ಗೇಶ್ ನಡುವೆ ನಡೆದ ಮರೆಯಲಾರದ ಸತ್ಯ ಘಟನೆಯೊಂದು ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದಾರೆ.

    ಈ ಸಂಬಂಧ ಇನ್‍ಸ್ಟಾದಲ್ಲಿ ಬರೆದುಕೊಂಡಿರುವ ನವರಸ ನಾಯಕ, ನೆನೆದವರ ಮನದಲ್ಲಿ ಗುರುರಾಯ ಎಂದು ಶೀರ್ಷಿಕೆ ಕೊಟ್ಟು ಸ್ನೇಹಿತರೆ ಇಂದು ನನ್ನ ರಾಯರ ನಡುವೆ ನಡೆದ ಮರೆಯಲಾಗದ ಘಟನೆ ಎಂದು ವಿವರಿಸಿದ್ದಾರೆ.

    ಘಟನೆ ಏನು..?
    ಪರಿಮಳ 9 ಗಂಟೆಗೆ ನನ್ನ ಏಕಾಂತ ಜಾಗದಲ್ಲಿ ಊಟ ಬಡಿಸಿ ಆನ್‍ಲೈನ್ ಕೆಲಸಕ್ಕೆ ತನ್ನ ಹಾಲಿಗೆ ಹೋದಳು. ನಾನು ಊಟ ಮುಗಿಸಿ ಒಂದು ಬಾರಿ ಸ್ಮರಣೆ ಸಾಲದೆ ಹಾಡು ಕೇಳುತ್ತಾ ರಾಯರ ಚಿತ್ರಪಟ ನೋಡುತ್ತ ಮಂತ್ರಮುಗ್ಧನಾಗಿ ಧ್ಯಾನದಲ್ಲಿ ಕೂತುಬಿಟ್ಟೆ. ಆಗ ನನ್ನ ಮನಸ್ಸಿನಲ್ಲಿ ರಾಯರ ಜೊತೆ ಸಂಭಾಷಣೆ ಶುರುವಾಯಿತು.

    ರಾಯರೆ ನಾನು ಬದುಕಲ್ಲಿ ಕೇಳಿದ್ದೆಲ್ಲಾ ಕೊಟ್ಟಿದ್ದೀರಿ, ಕೊಡುತ್ತಿದ್ದೀರಿ. ನಿಮ್ಮ ಭಿಕ್ಷೆಯಿಂದ ನಾನು ಕೋಟ್ಯಂತರ ಪ್ರೀತಿಸುವ ಯೋಗ ಪಡೆದಿರುವೆ. ಆದರೆ ಪಾಪಿಯಾದ ನಾನು ನಿಮ್ಮ ಶಾಸ್ತ್ರೋಕ್ತವಾಗಿ ಭಜಿಸುವ ವಿದ್ಯೆ ಪಡೆಯಲಿಲ್ಲ. ಕಲಿಯುವ ವಯಸ್ಸಲ್ಲಿ ಅಪ್ಪ ಬಿಡಲಿಲ್ಲ. ಅಲ್ಪಸ್ವಲ್ಪ ಚಿತ್ರ ಗೀತೆ ಹಾಡುವೆ. ದಯಮಾಡಿ ನಿಮ್ಮ ಮುಂದೆ ಕೂತು ಹಾಡಲು ಆಶೀರ್ವದಿಸಿ. ಮನತುಂಬಿ ಹಾಡುವಾಸೆ ದಯಮಾಡಿ ಕರುಣಿಸಿ ಎಂದು ಪ್ರಾರ್ಥಿಸುತ್ತಿದ್ದೆ.

    ಸ್ನೇಹಿತರೆ ಮಿಂಚಿನಂತೆ ಮಂತ್ರಾಲಯ ಆತ್ಮೀಯ ಸಹೋದರ ಮಠದ ಪಿಆರ್‍ಓ ನರಸಿಂಹಾಚಾರ್ ಅವರ ಮೊಬೈಲ್ ನಿಂದ ವಾಟ್ಸಾಪ್ ವೀಡಿಯೋ ಕಾಲ್ ಬಂತು. ಕರೆ ಸ್ವೀಕರಿಸಿದಾಗ ಬೃಂದಾವನ ದರ್ಶನ ಆಯಿತು. ಅಳು ತಡೆಯಲಾಗಲಿಲ್ಲ. ಮನ ಬಿಚ್ಚಿ ರಾಯರಿಗೆ ಹೇಳಿದೆ, ನನ್ನ ಮಾತು ಬೃಂದಾವನಕ್ಕೆ ಕೇಳುವ ಸೌಭಾಗ್ಯ ನನಗೆ ನೀಡಿದ ನಿಮ್ಮ ಕರುಣೆ ಸಾಕು. ಈ ಜನ್ಮಕ್ಕೆ ಇನ್ನೆಂದಿಗೂ ನನಗೆ ಮನುಜನ್ಮ ಬೇಡ. ನಿಮ್ಮ ಪಾದದಡಿಯ ಧೂಳಾಗಿ ಜನ್ಮಕೊಡಿ ಸಾಕು ಎಂದು ಪ್ರಾರ್ಥಿಸಿದೆ. ಈ ಸರಿಹೊತ್ತಲ್ಲಿ ರಾಯರ ಬೃಂದಾವನ ದರ್ಶನ ನನಗೆ ಮಾಡಿಸಲು ಏನು ಪ್ರೇರಣೆ ಆಯಿತು ಎಂದು ನರಸಿಂಹಾಜಾರ್ ಅವರನ್ನು ಕೇಳಿದೆ. ಅದಕ್ಕೆ ಅವರು ಬೃಂದಾವನ ಅಲಂಕಾರ ತೆಗೆಯಬೇಕಾದರೆ ಅಲ್ಲೆ ನಿಂತಿದ್ದೆ. ಇದ್ದಕ್ಕಿದ್ದಂತೆ ಜಗ್ಗೇಶನಿಗೆ ಬೃಂದಾವನ ತೋರಿಸುವಂತೆ ರಾಯರ ಪ್ರೇರಣೆ ಆಯಿತು ಎಂದರು.

    ಈ ಬರವಣಿಗೆಯಲ್ಲೂ ಕಣ್ಣೀರು ನಿಂತಿಲ್ಲ. ಜನ್ಮಪಾವನ ಹಾಗೂ ರಾಯರ ಪರಿಚಯಿಸಿ ಕಣ್ಣಿಗೆ ಕಾಣದ ಊರಿಗೆ ಹೋದ ನನ್ನ ದೇವತೆ ಅಮ್ಮನಿಗೆ ಉಸಿರು ನಿಲ್ಲುವವರೆಗೆ ಧನ್ಯವಾದ. ಮಾತೃದೇವೋಭವ ಗುರುದೇವೊಭವ. ಕೋಟಿ ಬಾರಿ ಪ್ರಮಾಣಿಸಿ ಹೇಳುವೆ ರಾಯರು ತಾಯಂತೆ ಮಕ್ಕಳು ಬಯಸಿದಾಗ ಬಂದು ಬಿಡುವರು. ಈ ಸಮಯ ಬದುಕಿನ ಆನಂದಮಯ.. ಎಂದು ಜಗ್ಗೇಶ್ ನಡೆದ ಘಟನೆಯನ್ನು ವಿವರಿಸಿದ್ದಾರೆ.

  • ಪ್ರವಾಸಿಗರಿಗೆ ಎರಡು ದಿನ ಕೆಆರ್ ಎಸ್, ಬೃಂದಾವನ ಪ್ರವೇಶ ನಿಷೇಧ

    ಪ್ರವಾಸಿಗರಿಗೆ ಎರಡು ದಿನ ಕೆಆರ್ ಎಸ್, ಬೃಂದಾವನ ಪ್ರವೇಶ ನಿಷೇಧ

    ಮಂಡ್ಯ: ಮಂಗಳವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಪ್ರಾಣ ಹಾನಿಯಾಗಿದ್ದ ಪರಿಣಾಮ ಎರಡು ದಿನಗಳ ಕಾಲ ಪ್ರವಾಸಿಗರಿಗೆ ಕೆಆರ್‍ಎಸ್, ಬೃಂದಾವನ ಪ್ರವೇಶ ನಿಷೇಧಿಸಲಾಗಿದೆ.

    ಮಂಗಳವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಶ್ರೀರಂಗಪಟ್ಟಣ ತಾಲೂಕಿನ ವಿಶ್ವವಿಖ್ಯಾತ ಕೆಆರ್ ಎಸ್‍ನ ಬೃಂದಾವನದ ಎರಡು ಮರಗಳು ಉರುಳಿಬಿದ್ದಿವೆ. 30 ಕ್ಕೂ ಹೆಚ್ಚು ಮರದ ರೆಂಬೆಕೊಂಬೆಗಳು ಮುರಿದು ಬಿದ್ದಿರುವುದರಿಂದ ಮರದಲ್ಲಿದ್ದ ನೂರಾರು ಪಕ್ಷಿಗಳು ಧರೆಗುರುಳಿ ನರಳಾಡುತ್ತಿವೆ. ತಮಿಳುನಾಡು ಮೂಲದ ಓರ್ವ, ಕೇರಳ ಮೂಲದ ಇಬ್ಬರು ಸೇರಿ ಮೂವರು ಮೃತಪಟ್ಟು, ಹನ್ನೊಂದು ಪ್ರವಾಸಿಗರು ಗಾಯಗೊಂಡಿದ್ದರು. ಈ ಹಿನ್ನೆಲೆ ಬೃಂದಾವನ ಪ್ರವೇಶ ನಿಷೇಧ ಮಾಡಲಾಗಿದೆ. ಮರಗಳ ತೆರವು ಕಾರ್ಯಾಚರಣೆ ನಡೆಯುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಪ್ರವೇಶ ನಿಷೇಧಿಸಲಾಗಿದೆ ಅಂತ ನಿಗಮದ ಇಇ ಬಸವರಾಜೇಗೌಡ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕೆಆರ್​ಎಸ್ ಬಳಿ ವರುಣನ ಅವಾಂತರ – ಮರ ಬಿದ್ದು ಮೂವರು ಪ್ರವಾಸಿಗರ ಸಾವು

    ಕೆಲವು ಪಕ್ಷಿಗಳು ಮರದಿಂದ ಬಿದ್ದು ಗಾಯಗೊಂಡು ನರಳಾಡುತ್ತಿವೆ. ಪಕ್ಷಿಗಳ ಸ್ಥಿತಿ ನೋಡಿ ಸಂಕಟಪಡುತ್ತಿರುವ ಸಾರ್ವಜನಿಕರು ಗಾಯಗೊಂಡಿರುವ ಪಕ್ಷಿಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕೆಂದು ಅಧಿಕಾರಿಗಳನ್ನು ಆಗ್ರಹಿಸುತ್ತಿದ್ದಾರೆ.

    ವಿಶ್ವವಿಖ್ಯಾತ ಕೆಆರ್ ಎಸ್ ಬೃಂದಾವನದಲ್ಲಿ ಮೊದಲ ಬಾರಿಗೆ ಈ ರೀತಿಯ ಅವಘಡ ನಡೆದಿದ್ದು, ಮುರಿದು ಬಿದ್ದ ಮರಗಳು, ರೆಂಬೆಕೊಂಬೆಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಹೀಗಾಗಿ ಯಾವುದೇ ರೀತಿಯ ತೊಂದರೆಯಾಗದಂತೆ ಪ್ರವಾಸಿಗರಿಗೆ ಎರಡು ದಿನ ಕೆಆರ್‍ಎಸ್ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.