Tag: BRTS

  • ಬಹುಕೋಟಿ ವೆಚ್ಚದ BRTS ಬಸ್‌ಗಳಲ್ಲಿ ಇಲ್ಲ ಮಹಿಳೆಯರಿಗೆ ಉಚಿತ ಪ್ರಯಾಣ

    ಬಹುಕೋಟಿ ವೆಚ್ಚದ BRTS ಬಸ್‌ಗಳಲ್ಲಿ ಇಲ್ಲ ಮಹಿಳೆಯರಿಗೆ ಉಚಿತ ಪ್ರಯಾಣ

    – ಅಧಿಕಾರಿಗಳು ಸರ್ಕಾರದ ಅನುಮತಿ ಕೇಳಿದರೂ ಬಾರದ ಪ್ರತಿಕ್ರಿಯೆ

    ಹುಬ್ಬಳ್ಳಿ: ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡಕ್ಕೆ ಶೀಘ್ರವಾಗಿ ಸಂಪರ್ಕ ಮಾಡುವ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿ ಐಷಾರಾಮಿ ಎಸಿ ಬಸ್ ಸಂಚಾರಕ್ಕೆ ಚಿಗರಿ (Chigari) ಸಂಪರ್ಕ ವ್ಯವಸ್ಥೆ ಮಾಡಲಾಗಿದೆ. ನಿತ್ಯ ನೂರಾರು ಚಿಗರಿ ಬಸ್‌ಗಳು ಅವಳಿ ನಗರಗಳ ಮಧ್ಯೆ ಓಡಾಡುತ್ತವೆ. ಈ ಚಿಗರಿ ಬಸ್‌ಗಳು ಹವಾನಿಯಂತ್ರಿತವಾಗಿದ್ದು, ಮಹಿಳೆಯರ ಉಚಿತ ಬಸ್ (Bus) ಪ್ರಯಾಣ ಯೋಜನೆಗೆ ಈಗ ಇದೆ ಮುಳುವಾಗಿ ಪರಿಣಿಮಿಸಿದೆ. ಒಂದು ಕಡೆ ಜನರ ಒತ್ತಾಯ ಮತ್ತೊಂದು ಕಡೆ ಸರ್ಕಾರದ ಜಾಣ ನಡೆಯಿಂದ ಅಧಿಕಾರಿಗಳು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.

    ಕಾಂಗ್ರೆಸ್ (Congress) ಸರ್ಕಾರ 5 ಗ್ಯಾರಂಟಿ ಹೆಸರು ಹೇಳಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದಿದೆ. ಆದರೆ ಈಗ 5 ಯೋಜನೆ ಜಾರಿಗೆ ದಿನಕ್ಕೆ ಒಂದೊಂದು ಷರತ್ತು ಹಾಕುತ್ತಿರುವುದು ಜನರ ಅಸಮಾಧಾನಕ್ಕೆ ಸಹ ಕಾರಣವಾಗಿದೆ. ಈ ತಿಂಗಳ 11 ರಿಂದ ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡಬಹುದಾಗಿದ್ದು, ಇದು ರಾಜ್ಯದ ಮಹಿಳೆಯರಿಗೆ ಕೊಂಚ ಸಮಾಧಾನಕರ ವಿಷಯ. ಆದರೆ ಈ ಖುಷಿ ಹುಬ್ಬಳ್ಳಿ ಧಾರವಾಡದ ಮಹಿಳೆಯರಿಗೆ ಕೊಟ್ಟು ಕಸಿದಂತಾಗಿದೆ. ಬಹು ಕೋಟಿ ವೆಚ್ಚದ ಮತ್ತು ಜನ ಬಹಳಷ್ಟು ನೆಚ್ಚಿಕೊಂಡಿರುವ ಬಿಆರ್‌ಟಿಎಸ್ (BRTS) ಸಾರಿಗೆಯಲ್ಲಿ ಉಚಿತ ಪ್ರಯಾಣ ಇನ್ನೂ ಕಗ್ಗಂಟಾಗಿದೆ.

    ಸರ್ಕಾರದ ಆದೇಶದಲ್ಲಿ ಹವಾನಿಯಂತ್ರಿತ, ರಾಜಹಂಸ ಸೇರಿ ಕೆಲ ಬಸ್‌ಗಳಲ್ಲಿ ಉಚಿತ ಪ್ರಯಾಣ ಇಲ್ಲ. ಆದರೆ ಚಿಗರಿ ಬಸ್ ವ್ಯವಸ್ಥೆ ರಾಜ್ಯದಲ್ಲಿ ಮೊದಲ ವಿಭಿನ್ನ ಸಿಟಿ ಬಸ್ ಸಂಚಾರವಾಗಿದೆ. ನಿತ್ಯ ಸಾವಿರಾರು ಜನ ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಇಂತಹ ಸಂಪರ್ಕ ಯೋಜನೆ ಉಚಿತ ಬಸ್ ಪ್ರಯಾಣ ಯೋಜನೆ ವ್ಯಾಪ್ತಿಗೆ ಬಾರದೆ ಇರುವುದು ಜಿಲ್ಲೆಯ ಮಹಿಳೆಯರ ಅಸಮಾಧಾನಕ್ಕೆ ಕಾರಣವಾಗಿದೆ. ನಿತ್ಯ ಸುಮಾರು 96 ಚಿಗರಿ ಬಸ್‌ಗಳಲ್ಲಿ 80 ಸಾವಿರ ಪ್ರಯಾಣಿಕರು ಸಂಚಾರ ಮಾಡುತ್ತಾರೆ. ಹೀಗಾಗಿ ಚಿಗರಿ ಬಸ್‌ಗಳಲ್ಲಿ ಮಹಿಳೆಯರು ಫ್ರೀ ಸಂಚಾರಕ್ಕೆ ಅವಕಾಶ ಕೊಡಬೇಕು ಎನ್ನುವುದು ಮಹಿಳೆಯರ ವಾದ. ಇದನ್ನೂ ಓದಿ: 500 ರೂ. ನೋಟ್ ಬ್ಯಾನ್ ಮಾಡಲ್ಲ – 1,000 ರೂ. ನೋಟ್ ಪರಿಚಯಿಸುವ ಉದ್ದೇಶ ಇಲ್ಲ: RBI

    ಇನ್ನೂ ಬಿಆರ್‌ಟಿಎಸ್ ವ್ಯಾಪ್ತಿಯ ಚಿಗರಿ ಬಸ್ ಸೇವೆಗೆ ಮೊದಲಿಂದಲೂ ಒಂದಲ್ಲಾ ಒಂದು ಸಮಸ್ಯೆಗಳಿದ್ದು, ವ್ಯವಸ್ಥೆ ಈಗ ನಷ್ಟದಲ್ಲಿ ನಡೆಯುತ್ತಿದೆ. ಮಾಹಿತಿ ಪ್ರಕಾರ ತಿಂಗಳಿಗೆ 2 ಕೋಟಿ ರೂ. ಯಷ್ಟು ನಷ್ಟದ ಹೊರೆ ಬಿಆಆರ್‌ಟಿಎಸ್ ಇಲಾಖೆ ಮೇಲೆ ಬೀಳುತ್ತಿದೆ. ಇಂತಹ ಸಂದರ್ಭದಲ್ಲಿ ಶಕ್ತಿ ಯೋಜನೆಯ ವ್ಯಾಪ್ತಿಗೆ ಚಿಗರಿ ಬಸ್ ಒಳಪಡಿಸಿದರೆ ಇದು ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಎಂಬುವುದು ಅಧಿಕಾರಿಗಳ ವಾದವಾಗಿದೆ. ಹೀಗಿದ್ದರೂ ಸಹ ಜನರ ಒತ್ತಾಯದ ಮೇರೆಗೆ ಬಿಆರ್‌ಟಿಎಸ್ ಎಂಡಿ ಭರತ್ ಶಕ್ತಿ ಯೋಜನೆಯಲ್ಲಿ ಚಿಗರಿ ಬಸ್ ತರಲು ಅನುಮತಿ ನೀಡಿ ಎಂದು ಸರ್ಕಾರಕ್ಕೆ ಕೋರಿಕೊಂಡಿದ್ದಾರೆ. ಆದರೆ ಸರ್ಕಾರ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದು ಅಧಿಕಾರಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇದನ್ನೂ ಓದಿ: ಈ ವರ್ಷವೇ ಪಠ್ಯ ಪುಸ್ತಕ ಪರಿಷ್ಕರಣೆ: ಮಧು ಬಂಗಾರಪ್ಪ ಸ್ಪಷ್ಟನೆ

  • ಚಿಗರಿ ಬಸ್‍ಗಳ ಮಾಸಿಕ ಪಾಸ್, ಸ್ಮಾರ್ಟ್ ಕಾರ್ಡ್ ಸೇವೆ ಪ್ರಾರಂಭ

    ಚಿಗರಿ ಬಸ್‍ಗಳ ಮಾಸಿಕ ಪಾಸ್, ಸ್ಮಾರ್ಟ್ ಕಾರ್ಡ್ ಸೇವೆ ಪ್ರಾರಂಭ

    ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಡುವೆ ಐಷಾರಾಮಿ ಚಿಗರಿ ಬಸ್ ಓಡಾಟ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಬಸ್ ಸಂಚಾರ ಸ್ಥಗಿತವಾಗಿತ್ತು. ಲಾಕ್‍ಡೌನ್ ಸಡಿಲಿಕೆಯಿಂದ ಬಸ್ ಸಂಚಾರ ಪುನರಾಂಭಗೊಂಡಿದ್ದು, ಈಗ ಮತ್ತೆ ಸಂಚಾರ ಪ್ರಾರಂಭಿಸಿವೆ. ಅಲ್ಲದೇ ಬಿ.ಆರ್.ಟಿ.ಎಸ್ ಬಸ್ಸುಗಳಲ್ಲಿ ಪ್ರಯಾಣಿಸಲು ಲಭ್ಯವಿರುವ ಮಾಸಿಕ ರಿಯಾಯಿತಿ ಸ್ಮಾರ್ಟ್ ಕಾರ್ಡ್ ವಿತರಣೆಗೆ ಬಿ.ಆರ್.ಟಿ.ಎಸ್ ಮುಂದಾಗಿದೆ.

    ಪ್ರತಿನಿತ್ಯ ಬಿ.ಆರ್.ಟಿ.ಎಸ್ ಬಸ್ಸುಗಳಲ್ಲಿ ಪ್ರಯಾಣಿಸುವ ನೌಕರರಿಗೆ ಹಾಗೂ ಇತರೇ ಶೈಕ್ಷಣಿಕ ವಾಣಿಜ್ಯ ಕೆಲಸ ಕಾರ್ಯಗಳಿಗಾಗಿ ಮೇಲಿಂದ ಮೇಲೆ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ವಾಕರಸಾಸಂಸ್ಥೆ ಹಾಗೂ ಬಿ.ಆರ್.ಟಿ.ಎಸ್ ವತಿಯಿಂದ ಮಾಸಿಕ ರಿಯಾಯಿತಿ ಸ್ಮಾರ್ಟ್ ಕಾರ್ಡ್, ನಗದು ರಹಿತವಾಗಿ ಪ್ರಯಾಣಿಸಲು ಇ-ಪಾಸ್ ಹಾಗೂ ಮಾಸಿಕ ರಿಯಾಯಿತಿ ಸ್ಮಾರ್ಟ್ ಕಾರ್ಡ್‍ದಾರರಿಗೆ ನಗರ, ಉಪನಗರ ಸಾರಿಗೆಗಳಲ್ಲಿ ವಿಶೇಷ ರಿಯಾಯಿತಿ ಮಾಸಿಕ ಪಾಸುಗಳನ್ನು ಜಾರಿಗೆ ತರಲಾಗಿದೆ.

    ಹುಬ್ಬಳ್ಳಿ ಸಿ.ಬಿ.ಟಿ ಧಾರವಾಡ ಹೊಸ ನಿಲ್ದಾಣ 1,280 ರೂ., ಹುಬ್ಬಳ್ಳಿ ರೈಲ್ವೇ ಸ್ಟೇಷನ್ ಹಾಗೂ ಸಿ.ಬಿ.ಟಿ, ಧಾರವಾಡ ಬಿ.ಆರ್.ಟಿ.ಎಸ್ ಟರ್ಮಿನಲ್ 1200 ರೂ, ಹುಬ್ಬಳ್ಳಿ ಎಚ್.ಡಿ.ಎಮ್.ಸಿ ಧಾರವಾಡ ಬಿ.ಆರ್.ಟಿ.ಎಸ್ ಟರ್ಮಿನಲ್ 1,120 ರೂ., ಹುಬ್ಬಳ್ಳಿ ಎಚ್.ಡಿ.ಎಮ್.ಸಿ ಧಾರವಾಡ ಹೊಸ ನಿಲ್ದಾಣ 1200ರೂ., ಹುಬ್ಬಳ್ಳಿ ಸಿ.ಬಿ.ಟಿ ಸತ್ತೂರ ನಿಲ್ದಾಣ 880 ರೂ., ಹುಬ್ಬಳ್ಳಿ ಸಿ.ಬಿ.ಟಿ ನವನಗರ 720 ರೂ., ಧಾರವಾಡ ಹೊಸ ಬಸ್ ನಿಲ್ದಾಣ ನವನಗರ 880 ರೂ., ಧಾರವಾಡ ಬಿ.ಆರ್.ಟಿ.ಎಸ್ ಟರ್ಮಿನಲ್ ನವನಗರ 840 ರೂ., ಧಾರವಾಡ ಹೊಸ ಬಸ್ ನಿಲ್ದಾಣ ಎಸ್.ಡಿ.ಎಮ್. ಆಸ್ಪತ್ರೆ 800 ರೂ., ಧಾರವಾಡ ಬಿ.ಆರ್.ಟಿ.ಎಸ್ ಟರ್ಮಿನಲ್ ಎಸ್.ಡಿ.ಎಮ್.ಆಸ್ಪತ್ರೆ 720 ರೂ., ಪಾಸಿನ ದರವನ್ನು ನಿಗದಿಪಡಿಸಲಾಗಿದೆ.

    ಮೊದಲ ಬಾರಿಗೆ ಮಾಸಿಕ ರಿಯಾಯಿತಿ ಸ್ಮಾರ್ಟ್ ಕಾರ್ಡ್ ಪಡೆಯುವರು ಆಧಾರ ಕಾರ್ಡ್ ಪ್ರತಿ ಹಾಗೂ ಒಂದು ಬಾರಿ ರೂ.150 ಸಂಸ್ಕರಣಾ ಶುಲ್ಕ ಪಾವತಿಸಬೇಕಾಗುತ್ತದೆ. ಅಲ್ಲದೇ ಧಾರವಾಡದಲ್ಲಿನ ಬಿ.ಆರ್.ಟಿ.ಎಸ್ ನಿಲ್ದಾಣ (ಮಿತ್ರ ಸಮಾಜ) ಹಾಗೂ ಹೊಸ ಬಸ್ ನಿಲ್ದಾಣ, ಹುಬ್ಬಳ್ಳಿಯಲ್ಲಿನ ಸಿಬಿಟಿ ಹಾಗೂ ಹಳೇ ಬಸ್ ನಿಲ್ದಾಣಗಳಲ್ಲಿ ಸ್ಮಾರ್ಟ್ ಕಾರ್ಡ್ ಪಡೆಯಬಹುದಾಗಿದೆ.

  • ವಲಸೆ ಕಾರ್ಮಿಕರನ್ನು ಸ್ವ-ಸ್ಥಳಕ್ಕೆ ತಲುಪಿಸಿದ ಸಾರಿಗೆ ಸಿಬ್ಬಂದಿಗೆ ಹೂ ಮಳೆ ಸ್ವಾಗತ

    ವಲಸೆ ಕಾರ್ಮಿಕರನ್ನು ಸ್ವ-ಸ್ಥಳಕ್ಕೆ ತಲುಪಿಸಿದ ಸಾರಿಗೆ ಸಿಬ್ಬಂದಿಗೆ ಹೂ ಮಳೆ ಸ್ವಾಗತ

    ಹುಬ್ಬಳ್ಳಿ: ಲಾಕ್‍ಡೌನ್‍ನಿಂದಾಗಿ ಪರ ಊರುಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರನ್ನು ಅವರ ಸ್ವ-ಸ್ಥಳಗಳಿಗೆ ತಲುಪಿಸಲು ಶ್ರಮ ವಹಿಸಿದ ಸಾರಿಗೆ ಸಂಸ್ಥೆಯ ಚಾಲಕ, ನಿರ್ವಾಹಕರು ಇತರೆ ಸಿಬ್ಬಂದಿಗೆ ಹೂ ಮಳೆಗರೆದು ಅಭಿನಂದನೆ ಸಲ್ಲಿಸಲಾಯಿತು. ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್, ಎನ್.ಡಬ್ಲ್ಯೂ.ಕೆ.ಆರ್.ಟಿ.ಸಿ ಹಾಗೂ ಬಿ.ಆರ್.ಟಿ.ಎಸ್. ವ್ಯವಸ್ಥಾಕ ನಿರ್ದೇಶಕರಾದ ರಾಜೇಂದ್ರ ಚೋಳನ್ ಆಗಮಿಸಿ ಹುಬ್ಬಳ್ಳಿ ವಿಭಾಗದ ಚಾಲಕರು ಹಾಗೂ ನಿರ್ವಾಹಕರುಗಳ ಸಾರ್ಥಕ ಕಾರ್ಯಕ್ಕೆ ಮನದುಂಬಿ ಹರಿಸಿದರು.

    ಕಳೆದ ಮೂರು ದಿನಗಳಿಂದ ಸರ್ಕಾರದ ನಿರ್ದೇಶನದಂತೆ ವಲಸೆ ಕಾರ್ಮಿಕರನ್ನು ಜಿಲ್ಲೆಗೆ ಬರಮಾಡಿಕೊಳ್ಳುವ ಹಾಗೂ ಜಿಲ್ಲೆಯಿಂದ ತೆರಳಲು ಅವಕಾಶ ಮಾಡಿಕೊಡಲಾಗಿದೆ. ಸಾರಿಗೆ ಹಾಗೂ ವೈದ್ಯಕೀಯ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ಹಗಲು ರಾತ್ರಿ ಈ ಕರ್ತವ್ಯದಲ್ಲಿ ನಿರ್ವಹಿಸಿದ್ದಾರೆ. ಇವರುಗಳಿಗೆ ಕೃತಜ್ಞನೆ ಸಲ್ಲಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದರು.

    ಬಳಿಕ ಮಾತನಾಡಿದ ಎನ್.ಡಬ್ಲ್ಯೂ.ಕೆ.ಆರ್.ಟಿ.ಸಿ ಹಾಗೂ ಬಿ.ಆರ್.ಟಿ.ಎಸ್. ವ್ಯವಸ್ಥಾಕ ನಿರ್ದೇಶಕರಾದ ರಾಜೇಂದ್ರ ಚೋಳನ್, ಬೆಂಗಳೂರಿನಿಂದ 148 ಬಸ್‍ಗಳಲ್ಲಿ ವಲಸೆ ಕಾರ್ಮಿಕರನ್ನು ಆಗಮಿಸಿದ್ದಾರೆ. 200 ಬಸ್‍ಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ಜಿಲ್ಲೆಗಳಿಗೆ 14 ಸಾವಿರಕ್ಕೂ ಹೆಚ್ಚು ಕಾರ್ಮಿಕರನ್ನು ಎನ್.ಡಬ್ಲ್ಯೂ.ಕೆ.ಆರ್.ಟಿ.ಸಿ ವ್ಯಾಪ್ತಿಯ 8 ಜಿಲ್ಲೆಗಳಿಂದ ಕಳುಹಿಸಿಕೊಡಲಾಗಿದೆ. ಅಲ್ಲದೆ ಇತರೆ ರಾಜ್ಯಗಳಿಗೂ ವಲಸೆ ಕಾರ್ಮಿಕರನ್ನು ಸಂಸ್ಥೆಯ ಬಸ್‍ಗಳಲ್ಲಿ ಕಳುಹಿಸಲಾಗಿದೆ. ಈ ಕಾರ್ಯದಲ್ಲಿ ಸಂಸ್ಥೆಯ ಚಾಲಕ ನಿರ್ವಾಹಕ ಹಾಗೂ ವೈದ್ಯಕೀಯ ಸಿಬ್ಬಂದಿ ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಿದ್ದಾರೆ. ಇವರಿಗೆ ಸಾವಿರ ರೂಪಾಯಿಗಳ ಗೌರವಧನ ನೀಡಿ ಅಭಿನಂದಿಸಲಾಗಿದೆ. ಸಂಸ್ಥೆಯ ಇತರೆ ಜಿಲ್ಲಾ ಘಟಕಗಳಲ್ಲೂ 1,500ಕ್ಕೂ ಹೆಚ್ಚು ಚಾಲಕ ನಿರ್ವಾಹಕರಿಗೆ ಅಭಿನಂದನೆ ಸಲ್ಲಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

    240 ಕೋಟಿ ರೂಪಾಯಿಗಳ ನಷ್ಟ: ಪ್ರತಿದಿನ ಸಂಸ್ಥೆಯಲ್ಲಿ ಬಸ್‍ಗಳು 5 ಸಾವಿರ ವೇಳಾಪಟ್ಟಿಗಳಲ್ಲಿ 16 ಲಕ್ಷ ಕಿ.ಮೀ. ಸಂಚಾರ ಮಾಡುತ್ತಿದ್ದವು. ಇದರಿಂದ 6 ಕೋಟಿ ಸಾರಿಗೆ ಆದಾಯ ಬರುತ್ತಿತ್ತು. ಕಳೆದ 40 ದಿನಗಳ ಲಾಕ್‍ಡೌನ್ ನಿಂದಾಗಿ ಸುಮಾರು 240 ಕೋಟಿ ರೂ. ನಷ್ಟ ಸಂಸ್ಥೆಗೆ ಉಂಟಾಗಿದೆ. ಬಿ.ಆರ್.ಟಿ.ಎಸ್ ನಗರ ಸಾರಿಗೆಯಿಂದ ಪ್ರತಿದಿನ 15 ಲಕ್ಷ, ತಿಂಗಳಿಗೆ 5 ಕೋಟಿ ಆದಾಯ ಬರುತ್ತಿತ್ತು. ಇದರಲ್ಲೂ ಕೂಡ ನಷ್ಟ ಉಂಟಾಗಿದೆ. ಸಾರಿಗೆ ಮಂತ್ರಿಗಳು ಹಾಗೂ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ನೌಕರರ ಪೂರ್ಣ ಪ್ರಮಾಣ ವೇತನ ನೀಡಲು ಆದೇಶ ನೀಡಿದ್ದಾರೆ.

    ಮೇ 17 ನಂತರ ಸಾಮಾಜಿಕ ಅಂತರದೊಂದಿಗೆ ಬಸ್‍ಗಳನ್ನು ಓಡಿಸಲು ಚಿಂತನೆ ನಡೆಸಲಾಗಿದೆ. ಪ್ರತಿ ಬಸ್ ತನ್ನ ಪೂರ್ಣ ಪ್ರಮಾಣ ಪ್ರಯಾಣಿಕರೊಂದಿಗೆ ಸಂಚರಿಸಿದರೆ ಪ್ರತಿ ಕಿ.ಮೀ. 36 ರೂಪಾಯಿ ವೆಚ್ಚ ಬರುತ್ತದೆ. ಸಾಮಾಜಿಕ ಅಂತರದಡಿ ಪ್ರಯಾಣಿಕರ ಪ್ರಮಾಣವನ್ನು ಶೇ.50 ನಿಗದಿಪಡಿಸಿದೆ ವೆಚ್ಚ 80 ರೂಪಾಯಿಗಳಾಗುತ್ತಿದೆ. ಈ ಕುರಿತು ಸರ್ಕಾರಕ್ಕೆ ವರದಿ ನೀಡಲಾಗಿದೆ. ಸದ್ಯ ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಲಾಗುತ್ತಿದ್ದು ಬಸ್ ದರ ಏರಿಸಿಲ್ಲ ಎಂದು ಹೇಳಿದರು.

    ಈ ಸಂದರ್ಭದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ವಿವೇಕಾನಂದ ವಿಶ್ವಜ್ಞ, ಹೆಚ್ .ಆರ್.ರಾಮನ ಗೌಡರ್, ಹುಬ್ಬಳ್ಳಿ ನಗರ ತಹಶೀಲದಾರರಾದ ಶಶಿಧರ ಮಾಢ್ಯಾಳ, ಡಿ.ಟಿ.ಓ. ಅಶೋಕ್ ಪಾಟೀಲ್ ಸೇರಿದಂತೆ ಇತರೆ ಅಧಿಕಾರಿಗಳು ಚಾಲಕರು, ನಿರ್ವಾಹಕರು, ವೈದ್ಯಾಧಿಕಾರಿಗಳು ಉಪಸ್ಥಿತಿದ್ದರು.