Tag: brothers

  • ಸೋದರಿಯನ್ನು ಕಾರಿನಿಂದ ತಳ್ಳಿ ಆ್ಯಸಿಡ್ ಎರಚಿದ ಸೋದರರು

    ಸೋದರಿಯನ್ನು ಕಾರಿನಿಂದ ತಳ್ಳಿ ಆ್ಯಸಿಡ್ ಎರಚಿದ ಸೋದರರು

    ಲಕ್ನೋ: ಇಬ್ಬರು ದುಷ್ಕರ್ಮಿಗಳು ತಮ್ಮ ಸಹೋದರಿಯನ್ನು ಕಾರಿನಿಂದ ಹೊರ ತಳ್ಳಿ ಆ್ಯಸಿಡ್ ದಾಳಿ ಮಾಡಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.

    ಸಂತ್ರಸ್ತೆಯು 22 ವರ್ಷದವಳಾಗಿದ್ದು, ಬುಲಂದರ್ ಶಹರ್ ಜಿಲ್ಲೆಯ ಗುಲೋತಿ ಗ್ರಾಮದ ನಿವಾಸಿಯಾಗಿದ್ದಾರೆ. ಗುರುವಾರ ಘಟನೆ ನಡೆದಿದ್ದು, ಯುವತಿಯು ಎರಡೂ ಕಣ್ಣುಗಳನ್ನು ಕಳೆದುಕೊಂಡಿದ್ದಾಳೆ.

    ಇಬ್ಬರು ಸಹೋದರರು ನನ್ನನ್ನು ಬಲವಂತವಾಗಿ ಕಾರಿನಲ್ಲಿ ಕರೆದುಕೊಂಡು ಬಂದಿದ್ದರು. ಬಳಿಕ ಕೋಟ್ ಗ್ರಾಮದ ಹೊರ ವಲಯದಲ್ಲಿ ಕಾರಿನಿಂದ ನನ್ನನ್ನು ಹೊರ ತಳ್ಳಿ ಆ್ಯಸಿಡ್ ದಾಳಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಕೊಲೆ ಮಾಡಲು ಯತ್ನಿಸಿದ್ದರು ಅಂತ ಯುವತಿ ದೂರು ನೀಡಿದ್ದಾಳೆ ಎಂದು ದಾದ್ರಿ ಪೊಲೀಸ್ ಠಾಣೆಯ ಅಧಿಕಾರಿ ನೀರಜ್ ಮಲಿಕ್ ತಿಳಿಸಿದ್ದಾರೆ.

    ದುಷ್ಕರ್ಮಿಗಳು ಆ್ಯಸಿಡ್ ದಾಳಿ ಮಾಡಿ ಪರಾರಿಯಾದ ಕೆಲವೇ ನಿಮಿಷದಲ್ಲಿ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆ್ಯಸಿಡ್ ದಾಳಿಯಿಂದಾಗಿ ಯುವತಿಯ ದೇಹದ ಮೇಲೆ ಶೇ.50ರಷ್ಟು ಸುಟ್ಟ ಗಾಯಗಳಾಗಿವೆ. ಅಷ್ಟೇ ಅಲ್ಲದೆ ಎರಡೂ ಕಣ್ಣುಗಳನ್ನು ಕಳೆದುಕೊಂಡಿದ್ದಾಳೆ.

    ಆರೋಪಿಗಳು ತಲೆಮರೆಸಿಕೊಂಡಿದ್ದು, ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ಸಂಬಂಧ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 326 (ಆ್ಯಸಿಡ್ ದಾಳಿ) ಹಾಗೂ 307 (ಕೊಲೆಗೆ ಯತ್ನ) ಅಡಿ ಪ್ರಕರಣ ದಾಖಲಾಗಿದೆ. ಆ್ಯಸಿಡ್ ದಾಳಿಗೆ ನಿಖರ ಕಾರಣ ವರದಿಯಾಗಿಲ್ಲ.

  • ಬೆಳ್ಳಂಬೆಳಗ್ಗೆ ಸಹೋದರರಿಬ್ಬರ ಭೀಕರ ಕೊಲೆ – ಶವಗಳನ್ನ ಬೇರೆ ಬೇರೆ ಕಡೆ ಎಸೆದ ಆರೋಪಿಗಳು

    ಬೆಳ್ಳಂಬೆಳಗ್ಗೆ ಸಹೋದರರಿಬ್ಬರ ಭೀಕರ ಕೊಲೆ – ಶವಗಳನ್ನ ಬೇರೆ ಬೇರೆ ಕಡೆ ಎಸೆದ ಆರೋಪಿಗಳು

    ವಿಜಯಪುರ: ಬೆಳ್ಳಂಬೆಳಗ್ಗೆ ಸಹೋದರರಿಬ್ಬರನ್ನು ಭೀಕರವಾಗಿ ಕೊಲೆ ಮಾಡಿದ್ದು, ಆರೋಪಿಗಳು ಶವಗಳನ್ನು ಬೇರೆ ಬೇರೆ ಕಡೆ ಎಸೆದಿರುವ ಘಟನೆ ವಿಜಯಪುರ ನಗರದ ಜೈ ಕರ್ನಾಟಕ ಕಾಲನಿಯಲ್ಲಿ ನಡೆದಿದೆ.

    ಅಣ್ಣ ಸಲೀಂ ಅಬ್ದುಲ ಗಣಿ ಕೋಚಮನ(35) ಹಾಗೂ ತಮ್ಮ ರಜಾಕ್ ಅಬ್ದುಲ್ ಗಣಿ ಕೋಚಮನ(28) ಕೊಲೆಯಾದ ಸಹೋದರರು. ಅಣ್ಣನನ್ನು ಕೊಲೆ ಮಾಡಿ ಜೈ ಕರ್ನಾಟಕ ಕಾಲನಿಯ ಮನೆಯ ಬಳಿಯೇ ಎಸೆದಿದ್ದಾರೆ. ತಮ್ಮನನ್ನು ಕೊಲೆ ಮಾಡಿ ವಿಜಯಪುರ ನಗರದ ಗೋರ್ನಮೆಂಟ್ ಕಾಲೇಜಿನ ಆವರಣದಲ್ಲಿ ಎಸೆದಿದ್ದಾರೆ.

    ಸಹೋದರರಿಬ್ಬರು ಕೂಲಿ ಕಾರ್ಮಿಕರಾಗಿದ್ದರು. ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಇಬ್ಬರನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ. ಜೋಡಿ ಕೊಲೆಯಿಂದ ವಿಜಯಪುರ ನಗರದ ಜನತೆ ಬೆಚ್ಚಿ ಬಿದ್ದಿದ್ದಾರೆ. ಗೋಳಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಣ್ಣನ ಕೊಲೆ ಮತ್ತು ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಮ್ಮನ ಕೊಲೆ ನಡೆದಿದೆ.

    ಘಟನಾ ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜೋಪಾನ, ಧೈರ್ಯವಾಗಿರಿ ಎನ್ನುತ್ತಿದ್ದ ಅಣ್ಣನೇ ಇಲ್ಲ- ಗುರು ತಮ್ಮ ಮಧು

    ಜೋಪಾನ, ಧೈರ್ಯವಾಗಿರಿ ಎನ್ನುತ್ತಿದ್ದ ಅಣ್ಣನೇ ಇಲ್ಲ- ಗುರು ತಮ್ಮ ಮಧು

    – ಮತ್ತೊಮ್ಮ ತಮ್ಮ ಆನಂದ್ ಅಸ್ವಸ್ಥ

    ಮಂಡ್ಯ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರನ ಆತ್ಮಾಹುತಿ ದಾಳಿಯಲ್ಲಿ ಮಂಡ್ಯದ ಯೋಧ ಗುರು ಹುತಾತ್ಮರಾಗಿದ್ದು, ಇದೀಗ ಜಿಲ್ಲೆಯಲ್ಲಿ ನೀರವ ಮೌನ ಆವರಿಸಿದೆ. ಇತ್ತ ಯೋಧ ಗುರು ಅವರ ತಮ್ಮ ಆನಂದ್ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ.

    ಗುರು ಅವರ 2ನೇ ತಮ್ಮ ಮಧು ಅವರು ಅಣ್ಣನನ್ನು ನೆನಪಿಸಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ. ಅಣ್ಣ ನಮಗೆಲ್ಲ ಜೋಪಾನ, ಧೈರ್ಯವಾಗಿ ಇರಿ ಎನ್ನುತ್ತಿದ್ದನು. ಆದರೆ ಈಗ ಅಣ್ಣನೇ ಇಲ್ಲ. ಯಾರಿಗೆ ಏನೇ ಹೇಳಿದ್ರೂ ಮತ್ತೆ, ಮತ್ತೆ ಇಂತಹ ಪರಿಸ್ಥಿತಿ ಮರುಕಳಿಸುತ್ತೆ ಎಂದು ದಾಳಿ ಬಗ್ಗೆ ನೋವನ್ನು ಹೊರ ಹಾಕಿದ್ದಾರೆ. ಇದನ್ನೂ ಓದಿ: ನಂಗೆ ಅವರು ಬೇಕು ಅಮ್ಮಾ..- ಮುಗಿಲು ಮುಟ್ಟಿದೆ ಹುತಾತ್ಮ ಗುರು ಪತ್ನಿಯ ಆಕ್ರಂದನ

    ಹುತಾತ್ಮ ಗುರು ಅವರ ಮನೆಯಲ್ಲಿ ಪೋಷಕರ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ನಡುವೆ ಗುರು ಅವರ ಸಹೋದರ ಆನಂದ್ ಅವರು ಅಸ್ವಸ್ಥಗೊಂಡಿದ್ದಾರೆ. ಆನಂದ್ ಅವರನ್ನು ಸಂಬಂಧಿಗಳು ಬೈಕಿನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: 2 ನಿಮಿಷ ಬಿಟ್ಟು ಕರೆ ಮಾಡ್ತೀನಿ ಅಂದೋನು ಮಾಡ್ಲೇ ಇಲ್ಲ- ಗುರು ಗೆಳೆಯ ಯೋಧ ಕಣ್ಣೀರು

    ಗುರುವಾರ ಮಧ್ಯಾಹ್ನ 3.30ರ ಸುಮಾರಿಗೆ ಜೈಶ್-ಎ- ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಅದಿಲ್ ದರ್ ಎಂಬ ಉಗ್ರ ಸ್ಕಾರ್ಪಿಯೋ ಕಾರಿನಲ್ಲಿ ಸ್ಫೋಟಕ ತುಂಬಿ ಆತ್ಮಾಹುತಿ ದಾಳಿ ಮಾಡಿದ್ದನು. ಈ ದಾಳಿಯಲ್ಲಿ ಇದೂವರೆಗೆ 44 ಯೋಧರು ಹುತಾತ್ಮರಾಗಿದ್ದು, ಹಲವರು ಗಾಯಗೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 3 ತಿಂಗ್ಳ ಹಿಂದೆ ಮೃತಪಟ್ಟ ಮಗನ ಮೃತದೇಹಕ್ಕಾಗಿ ಈಗ್ಲೂ ಕಾಯ್ತಿದ್ದಾರೆ ಅಮ್ಮ!

    3 ತಿಂಗ್ಳ ಹಿಂದೆ ಮೃತಪಟ್ಟ ಮಗನ ಮೃತದೇಹಕ್ಕಾಗಿ ಈಗ್ಲೂ ಕಾಯ್ತಿದ್ದಾರೆ ಅಮ್ಮ!

    ಲಕ್ನೋ: ತಮ್ಮ 25 ವರ್ಷದ ಮಗ ಮೂರು ತಿಂಗಳ ಹಿಂದೆ ಸೌದಿ ಅರೇಬಿಯಾದಲ್ಲಿ ಮೃತಪಟ್ಟಿದ್ದು, ಇನ್ನೂ ಆತನ ಮೃತದೇಹ ತವರಿಗೆ ವಾಪಸ್ಸಾಗಿಲ್ಲ. ಹೀಗಾಗಿ ಸೆಪ್ಟೆಂಬರ್ ತಿಂಗಳಿನಿಂದ ತಾಯಿ, ಮಗನ ಮೃತದೇಹಕ್ಕಾಗಿ ಕಾಯುತ್ತಿರುವ ಮನಕಲಕುವ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ.

    ಮೃತನ ಕುಟುಂಬಸ್ಥರು ಅಮೇಥಿ ಜಿಲ್ಲೆಯ ಬಝಾರ್ ಶುಕುಲ್ ಪೊಲೀಸ್ ಠಾಣೆಗೆ ಮಗ ದಿನೇಶ್ ಕುಮಾರ್ ಸಿಂಗ್ ಮೃತದೇಹಕ್ಕಾಗಿ ಪತ್ರಗಳ ಮೇಲೆ ಪತ್ರ ಬರೆದು ಸುಸ್ತಾಗಿದ್ದಾರೆ. ತಾಯಿ ತನ್ನ ಇಬ್ಬರು ನಿರುದ್ಯೋಗಿಗಳಾಗಿರುವ ಗಂಡು ಮಕ್ಕಳ ಜೊತೆ ಮನೆಗೆ ಆಧಾರ ಸ್ತಂಭವಾಗಿದ್ದ ಮಗನ ಮೃತದೇಹವನ್ನು ಕಾಣಲು ನಿದ್ದೆಗೆಟ್ಟು ಕಾಯುತ್ತಿದ್ದಾರೆ.

    2018ರ ಜನವರಿ ತಿಂಗಳಿನಲ್ಲಿ ಸಿಂಗ್ ಉದ್ಯೋಗಕ್ಕಾಗಿ ಸೌದಿ ಅರೇಬಿಯಾಕ್ಕೆ ತೆರಳಿದ್ದನು. ಅಲ್ಲಿ ದಮ್ಮಾಮ್ ನಗರದಲ್ಲಿರುವ ಖಾಸಗಿ ಕಂಪನಿಯೊಂದರಲ್ಲಿ ಚಾಲಕನಾಗಿ ಕೆಲಸಕ್ಕೆ ಸೇರಿದ್ದನು. ಸೆಪ್ಟೆಂಬರ್ 23ರಂದು ಸಿಂಗ್ ಗೆಳೆಯನೊಬ್ಬ ಕರೆ ಮಾಡಿ, ಹೃದಯಾಘಾತವಾಗಿ ಮೃತಪಟ್ಟಿರುವುದಾಗಿ ಮಾಹಿತಿ ನಿಡಿದ್ದಾನೆ. ಅಲ್ಲದೇ ಆತನ ಮೃತದೇಹವನ್ನು ತವರಿಗೆ ಕಳುಹಿಸಲು ಎಲ್ಲಾ ಸಿದ್ಧತೆಗಳನ್ನು ನಡೆಸುತ್ತಿರುವುದಾಗಿಯೂ ಹೇಳಿದ್ದಾನೆ ಅಂತ ದಿನೇಶ್ ತಾಯಿ ಪ್ರಭಾ ದೇವಿ ಕಣ್ಣೀರು ಹಾಕುತ್ತಾ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

    ನನ್ನ ದುರಾದೃಷ್ಟವೋ ಏನೋ, ಇದೂವರೆಗೂ ನನ್ನ ಮಗನ ಶವವನ್ನು ಕಣ್ಣಾರೆ ನೋಡಲು ತವರಿಗೆ ವಾಪಸ್ಸಾಗಿಲ್ಲ ಅಂತ ಪ್ರಭಾ ಗದ್ಗದಿತರಾದ್ರು.

    ಆತ ಸೌದಿಯಲ್ಲಿ ತಿಂಗಳಿಗೆ 90 ಸಾವಿರ ಸಂಪಾದನೆ ಮಾಡುತ್ತಿದ್ದನು. ಅದರಲ್ಲಿ 50 ಸಾವಿರ ಮನೆಗೆ ಕಳುಹಿಸುತ್ತಿದ್ದನು. ಈ ಮೂಲಕ ಮನೆಗೆ ಆಧಾರಸ್ತಂಭವಾಗಿದ್ದನು. ನನ್ನ ದೊಡ್ಡ ಮಗ ನಿರುದ್ಯೋಗಿಯಾಗಿದ್ದಾನೆ. ಸಣ್ಣ ಮಗ ಇನ್ನೂ ಚಿಕ್ಕವನಾಗಿದ್ದು, ಓದುತ್ತಿದ್ದಾನೆ. ಪತಿ ಕೂಡ ಕೆಲ ವರ್ಷಗಳ ಹಿಂದೆಯೇ ತೀರಿಕೊಂಡಿದ್ದಾರೆ. ಇದೀಗ ಮಗನನ್ನು ಕಳೆದುಕೊಂಡ ನಾವು ನಿರ್ಗತಿಕರಾಗಿದ್ದೇವೆ ಅಂತ ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.

    ದಿನೇಶ್ ಮೃತದೇಹವನ್ನು ತವರಿಗೆ ತರುವಲ್ಲಿ ಪ್ರಯತ್ನಿಸುತ್ತಿದ್ದೆ. ಇದಕ್ಕಾಗಿ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರ ಹೆಚ್ಚುವರಿ ಖಾಸಗಿ ಕಾರ್ಯದರ್ಶಿಯ ಜೊತೆ ಸೆ. 26ರಂದು ಮನವಿ ಮಾಡಿಕೊಂಡಿದ್ದೇವೆ. ಆದ್ರೆ ಇದೂವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬಳಿಕ ನಾವು ಸೆ. 28ರಂದು ಸಂಸದ ವರುಣ್ ಗಾಂಧಿಯವರನ್ನು ಸಂಪರ್ಕಿಸಿದ್ದೇವೆ. ಅವರು ವಿದೇಶಾಂಗ ಸಚಿವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ ಅಂತ ಮುಕೇಶ್ ಹೇಳಿದ್ದಾರೆ.

    ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೂ ಈ ಬಗ್ಗೆ ತಿಳಿಸಿದ್ದೇವೆ. `ರಿಯಾದ್ ನಲ್ಲಿರುವ ವಿದೇಶಾಂಗ ಸಚಿವರಿಗೆ ಮಾಹಿತಿ ನೀಡಿದ್ದೇವೆ. ಅವರು ಈ ಬಗ್ಗೆ ಮಾಹಿತಿ ಪಡೆದು ತನಿಖೆ ನಡೆಸಿ ಬಳಿಕ ಕ್ರಮಕೈಗೊಳ್ಳಲಿದ್ದಾರೆ’ ಅಂತ ಅಕ್ಟೋಬರ್ 16ರಂದು ನಮಗೊಂದು ಪತ್ರ ಕಳುಹಿಸಿದ್ದಾರೆ. ಆದ್ರೆ ಆ ಬಳಿಕವೂ ದಿನೇಶ್ ಮೃತದೇಹ ತವರಿಗೆ ರವಾನೆಯಾಗುತ್ತಿರುವ ಬಗ್ಗೆ ಯಾವುದೇ ಸುಳೀವು ಸಿಕ್ಕಿರಲಿಲ್ಲ. ಹೀಗಾಗಿ ಮತ್ತೆ ನಾನು ನವೆಂಬರ್ 15ರಂದು ಪತ್ರ ಬರೆದೆ. ಮೃತದೇಹ ರವಾನೆಗೆ ಅವರು ಇನ್ನೂ ಎಷ್ಟು ದಿನ ತೆಗೆದುಕೊಳ್ಳುತ್ತಾರೆ ಎಂಬುದು ನನಗೆ ಗೊತ್ತಿಲ್ಲ. ಸಚಿವಾಲಯ ನಮಗೆ ಭರವಸೆ ನೀಡುತ್ತಲೇ ಇದೆ. ಆದ್ರೆ ಮೃತದೇಹ ಮಾತ್ರ ಇಂದೂ ಮನೆ ಸೇರಿಲ್ಲ. ನಮಗೆ ನಮ್ಮ ಅಣ್ಣನ ಶವ ಮಾತ್ರ ಬೇಕು. ಅಲ್ಲದೇ ಮೃತ ದೇಹ ಕಳುಹಿಸಲು ಯಾಕೆ ತಡಮಾಡುತ್ತಿದ್ದಾರೆ ಎಂಬುದಕ್ಕೆ ಉತ್ತರ ಕೂಡ ನೀಡಬೇಕು ಅಂತ ಮುಕೇಶ್ ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಸ್ತಿ ವಿಚಾರಕ್ಕೆ ಅಣ್ಣ – ತಮ್ಮನ ನಡುವೆ ಜಗಳ ಕೊಲೆಯಲ್ಲಿ ಅಂತ್ಯ

    ಆಸ್ತಿ ವಿಚಾರಕ್ಕೆ ಅಣ್ಣ – ತಮ್ಮನ ನಡುವೆ ಜಗಳ ಕೊಲೆಯಲ್ಲಿ ಅಂತ್ಯ

    ಶಿವಮೊಗ್ಗ: ಆಸ್ತಿ ವಿಚಾರಕ್ಕೆ ಸಹೋದರರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಾಲೂಕಿನ ಹೊಳಲೂರು ಗ್ರಾಮದಲ್ಲಿ ನಡೆದಿದೆ.

    45 ವರ್ಷದ ರೇವಣ್ಣ ಅಣ್ಣನಿಂದಲೇ ಕೊಲೆಯಾದ ದುರ್ದೈವಿ. ಅಣ್ಣ ಪ್ರಕಾಶ್ ಹಾಗೂ ತಮ್ಮ ರೇವಣ್ಣ ನಡುವೆ ಅಡಿಕೆ ತೋಟದ ಜಮೀನು ವಿವಾದ ಕೋರ್ಟ್‍ನಲ್ಲಿತ್ತು. ಇದೇ ವಿಚಾರವಾಗಿ ಇಬ್ಬರಿಗೂ ಪದೇ ಪದೇ ಜಗಳ ನಡೆಯುತ್ತಿತ್ತು. ಇಂದು ಬೆಳಗ್ಗೆ ಜಮೀನಿಗೆ ಬಂದಿದ್ದ ರೇವಣ್ಣ ಹಾಗೂ ಪ್ರಕಾಶ್ ನಡುವೆ ಇದೇ ವಿಷಯಕ್ಕೆ ಜಗಳ ಏರ್ಪಟಿತ್ತು. ಈ ವೇಳೆ ಸಿಟ್ಟಿಗೆದ್ದ ಪ್ರಕಾಶ್ ಕೈಯಲ್ಲಿದ್ದ ಮಚ್ಚಿನಿಂದ ರೇವಣ್ಣನ ಮೇಲೆ ಹಲ್ಲೆ ನಡೆಸಿದ್ದ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ರೇವಣ್ಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಆರೋಪಿ ಪ್ರಕಾಶ್‍ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಹೋದರರ ಕಾಮಾಂಧಕ್ಕೆ 5 ವರ್ಷದಿಂದ ಅಪ್ರಾಪ್ತೆ ಬಲಿ

    ಸಹೋದರರ ಕಾಮಾಂಧಕ್ಕೆ 5 ವರ್ಷದಿಂದ ಅಪ್ರಾಪ್ತೆ ಬಲಿ

    ಲಕ್ನೋ: ಸತತ ಐದು ವರ್ಷಗಳಿಂದ ತನ್ನ ತಂಗಿ ಎಂದು ನೋಡದೇ ಸಹೋದರರು ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ.

    15 ವರ್ಷದ ಅಪ್ರಾಪ್ತೆ ಈ ಬಗ್ಗೆ ದೂರ ದಾಖಲಿಸಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯಕ್ಕೆ ಆರೋಪಿಗಳಿಬ್ಬರು ತಲೆ ಮೆರೆಸಿಕೊಂಡಿದ್ದಾರೆ. ಅವರಿಗಾಗಿ ಶೋಧಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಂತ್ರಸ್ತೆಯ ಮೇಲೆ ಆತನ ಇಬ್ಬರು ಸಹೋದರರು ಕಳೆದ ಐದು ವರ್ಷದಿಂದ ಸತತವಾಗಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಇದಕ್ಕೆ ಸಂತ್ರಸ್ತೆ ವಿರೋಧ ವ್ಯಕ್ತಪಡಿಸಿದ್ದರಿಂದ ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ತಾಯಿಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾರೆ. ಆದ್ದರಿಂದ ಈವರೆಗೂ ಸಂತ್ರಸ್ತೆ ದೂರು ದಾಖಲಿಸಲಿಲ್ಲ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

    ಈ ಘಟನೆ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ಏರಿಯಾದಲ್ಲಿ ಘಟನೆ ನಡೆದಿದೆ. ಸಂತ್ರಸ್ತೆ ಮೇಲೆ ಸಹೋದರರು ಸತತ ಅತ್ಯಾಚಾರ ಎಸಗಿದ್ದಾರೆ. ಸದ್ಯ ಈ ಬಗ್ಗೆ ಬುಧವಾರ ಸಂತ್ರಸ್ತೆ ದೂರು ದಾಖಲಿಸಿದ್ದಾಳೆ. ದೂರು ದಾಖಲಾಗುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ ಎಂದು ಮೀರತ್ ನಗರ ಎಸ್ಪಿ ರಣ್ ವಿಜಯ್ ಸಿಂಗ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರೇಮ ವಿವಾಹವಾದ ತಂಗಿಯ ಜೀವನ ಸರಿಪಡಿಸಲು ಆಗಮಿಸ್ತಿದ್ದ ಸಹೋದರರ ಕಾರು ಪಲ್ಟಿ

    ಪ್ರೇಮ ವಿವಾಹವಾದ ತಂಗಿಯ ಜೀವನ ಸರಿಪಡಿಸಲು ಆಗಮಿಸ್ತಿದ್ದ ಸಹೋದರರ ಕಾರು ಪಲ್ಟಿ

    ಚಿತ್ರದುರ್ಗ: ಅನ್ಯ ಧರ್ಮದೊಂದಿಗೆ ಪ್ರೇಮ ವಿವಾಹವಾದ ತಂಗಿಯ ಜೀವನ ಸರಿಪಡಿಸಲು ಶಿವಮೊಗ್ಗದಿಂದ ಚಿತ್ರದುರ್ಗಕ್ಕೆ ಆಗಮಿಸುತ್ತಿದ್ದ ಸಹೋದರರ ಕಾರು ಪಲ್ಟಿಯಾಗಿ ಒಂದೇ ಕುಟುಂಬದ ಇಬ್ಬರು ಅಣ್ತಮ್ಮಂದಿರು ಮೃತಪಟ್ಟಿರುವ ಘಟನೆ ಚಿತ್ರದುರ್ಗ ಹೊರವಲಯದಲ್ಲಿ ನಡೆದಿದೆ.

    ಅಕ್ರಂ(27) ಹಾಗೂ ಇರ್ಫಾನ್(24) ಮೃತಪಟ್ಟ ಸಹೋದರರು. ಶಿವಮೊಗ್ಗದಿಂದ ತಂಗಿಯ ಭೇಟಿಗಾಗಿ ತಾಯಿ ಸಹಿತ ಇಬ್ಬರು ಮಕ್ಕಳು ಚಿತ್ರದುರ್ಗಕ್ಕೆ ಆಗಮಿಸುತ್ತಿದ್ದರು. ಆಗ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಅಕ್ರಂ ಸ್ಥಳದಲ್ಲಿಯೇ ಬುಧವಾರ ರಾತ್ರಿ ಅಸುನೀಗಿದ್ದನು.

    ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ತಾಯಿ ಹಾಗು ಇನ್ನೊಬ್ಬ ಮಗನಾದ ಇರ್ಫಾನ್‍ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇರ್ಫಾನ್ ಕೂಡ ಕೊನೆಯುಸಿರೆಳೆದಿದ್ದಾನೆ. ತಾಯಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ದಾವಣಗೆರೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

    ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಲ್ಲದೇ ಸಹೋದರಿ ಬದುಕನ್ನು ಸರಿಮಾಡಲು ಬಂದ ಸೋದರರು ಸ್ಮಶಾನ ಸೇರುವಂತಾಗಿದ್ದು, ಹೊಸ ಬಾಳಿಗೆ ಕಾಲಿಟ್ಟ ಯುವತಿಗೆ ಶುಭ ಹಾರೈಸಬೇಕಿದ್ದ ಕುಟುಂಬಸ್ಥರು ಹಿಡಿಶಾಪ ಹಾಕುವಂತಾಗಿದೆ.

    ಸದ್ಯ ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಮ್ಮಿಶ್ರ ಸರ್ಕಾರಕ್ಕೆ ಸಹೋದರರಿಂದ ಕಂಟಕ: ಕೋಡಿ ಶ್ರೀ ಭವಿಷ್ಯ

    ಸಮ್ಮಿಶ್ರ ಸರ್ಕಾರಕ್ಕೆ ಸಹೋದರರಿಂದ ಕಂಟಕ: ಕೋಡಿ ಶ್ರೀ ಭವಿಷ್ಯ

    ಹಾಸನ: ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಸಹೋದರರಿಂದ ಕಂಟಕ ಇದೆ ಎಂದು ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಭವಿಷ್ಯ ನುಡಿದಿದ್ದಾರೆ.

    ತಾಳೆಗರಿ ಮೂಲಕ ಭವಿಷ್ಯ ನುಡಿಯುವ ಶ್ರೀಗಳು ಬುಧವಾರ ಅರಸೀಕೆರೆ ತಾಲೂಕಿನ ಮಾಡಾಳು ಗ್ರಾಮದಲ್ಲಿ ಮಾತನಾಡಿ, ರಾಜ್ಯ ಸರ್ಕಾರಕ್ಕೆ ಸಹೋದರರಿಂದ ಕಂಟಕವಿದ್ದು, ನವೆಂಬರ್ ತಿಂಗಳವರೆಗೂ ರಾಜಕೀಯ ಪರಿಸ್ಥಿತಿ ಡೋಲಾಯಮಾನವಾಗಿರುತ್ತದೆ. ಬೆಳಗಾವಿ ಸಹೋದರರಂತೆ ಅಧಿಕಾರಕ್ಕಾಗಿ ಮತ್ತೋರ್ವ ಅಣ್ಣ ಹುಟ್ಟಿಕೊಳ್ಳುತ್ತಾನೆ ನೋಡುತ್ತಿರಿ ಎಂದು ಹೇಳಿದ್ದಾರೆ.

    ದೇಶದಲ್ಲಿ ಪ್ರಾಕೃತಿಕ ವಿಕೋಪಗಳು ಇನ್ನೂ ಹೆಚ್ಚಾಗಲಿವೆ. ಭೂ-ಕಂಪನದ ಹೊಡೆತಕ್ಕೆ ದೊಡ್ಡ ದೊಡ್ಡ ನಗರಗಳು ತತ್ತರಿಸುತ್ತವೆ. ಸಾವು-ನೋವುಗಳ ಸರಣಿ ಹೆಚ್ಚಾಗಲಿದೆ. ರಾಜ್ಯದಲ್ಲಿಯೂ ಮಳೆಯ ಆರ್ಭಟ ಮುಂದವರಿಯಲಿದೆ ಎಂದು ಭವಿಷ್ಯ ನುಡಿದರು.

    ಈ ಮೊದಲು ಖಗ್ರಾಸ ಚಂದ್ರಗ್ರಹಣದ ವೇಳೆ `ಅರಸನ ಆಯಸ್ಸು ಉಸಿರಲ್ಲಿ ನಿಂತೀತು, ಪರಸಕ್ಕೆ ಭಂಗ ಪ್ರಸಂಗಕ್ಕೆ ಹಾನಿ, ಭ್ರಾತೃ ಬೆಂಕಿ ಹಿಡಿದಾನು. ರಾಜಕೀಯ ವಿಪ್ಲವವಾಗಲಿದೆ’ ಎಂದು ಒಗಟಾಗಿ ತಿಳಿಸಿದ್ದರು. ಅಂದರೆ `ಸಹೋದರ ಬೆಂಕಿ ಹಿಡಿದಾನು ಎಂದರೆ ಸಿಎಂ ಎಚ್.ಡಿ.ಕುಮಾರಸ್ವಾಮಿಯವರ ಸಹೋದರ ಎಚ್.ಡಿ.ರೇವಣ್ಣ ಮುಖ್ಯಮಂತ್ರಿಯಾಗಲಿದ್ದಾರಾ ಎನ್ನುವ ವಿಶ್ಲೇಷಣೆ ಕೇಳಿಬಂದಿತ್ತು. ಅಲ್ಲದೇ ಪ್ರಾಕೃತಿಕ ಸಂಪನ್ಮೂಲಗಳು ನಾಶವಾಗಲಿದ್ದು, ಮುಂದಿನ ದಿನಗಳಲ್ಲಿ ಭೂಕಂಪನವಾಗಲಿದೆ. ಇನ್ನೂ ಹೆಚ್ಚು ಮಳೆಯಾಗಲಿದ್ದು, ಬರುವ ವಿಶೇಷ ದಿನಗಳು ಕಷ್ಟಕರವಾಗಲಿದೆ ಎಂದು ಭವಿಷ್ಯ ನುಡಿದಿದ್ದರು. ಇದನ್ನೂ ಓದಿ: ಗ್ರಹಣದಿಂದಾಗಿ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಕೋಡಿ ಶ್ರೀ ಭವಿಷ್ಯ

    ಶ್ರೀಗಳ ಭವಿಷ್ಯದಂತೆ ದೇಶದಲ್ಲಿ ಮಳೆಯ ರೌದ್ರನರ್ತನ ಹೆಚ್ಚಾಗಿ ಅನೇಕ ಸಾವು-ನೋವುಗಳು ಸಂಭವಿಸಿದ್ದವು. ರಾಜ್ಯದಲ್ಲಿಯೂ ಸಹ ಕಂಡು ಕೇಳರಿಯದ ಭೀಕರ ಮಳೆಗೆ ಕೊಡುಗು ಜಿಲ್ಲೆ ತತ್ತರಿಸಿ ಹೋಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಮ್ಮನಿಗೆ ಥಳಿಸ್ತಿದ್ದ ಅಣ್ಣನ ಕೊಂದ ತಮ್ಮ!

    ಅಮ್ಮನಿಗೆ ಥಳಿಸ್ತಿದ್ದ ಅಣ್ಣನ ಕೊಂದ ತಮ್ಮ!

    ಬೆಂಗಳೂರು: ಕುಡಿತದ ಜಗಳದಲ್ಲಿ ಅಮ್ಮನಿಗೆ ಥಳಿಸುತ್ತಿದ್ದ ಸಹೋದರನನ್ನೇ ತಮ್ಮ ಕೊಲೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಕೋಣನಕುಂಟೆ ಕ್ರಾಸ್‍ನ ಬೀರೇಶ್ವರ ನಗರದಲ್ಲಿ ಈ ಘಟನೆ ನಡೆದಿದೆ. ವಿನಯ್ ತಮ್ಮ ಸಂಜೀವ್ ನಿಂದ ಕೊಲೆಯಾದ ಸಹೋದರ. ವಿನಯ್ ಪ್ರತಿದಿನ ಕುಡಿದುಕೊಂಡು ಬಂದು ಅಮ್ಮನ ಜೊತೆ ಆಸ್ತಿ ವಿಚಾರಕ್ಕೆ ಗಲಾಟೆ ಮಾಡುತ್ತಿದ್ದನು. ಆದ್ದರಿಂದ ಕೋಪಕೊಂಡು ಸಂಜೀವ್ ಕೊಲೆ ಮಾಡಿದ್ದಾನೆ.

    ವಿನಯ್ ಮತ್ತು ಸಂಜೀವ್ ಸಹೋದರರು. ಕೋಣನಕುಂಟೆ ಕ್ರಾಸ್‍ನ ಬೀರೇಶ್ವರ ನಗರದ ಮನೆಯಲ್ಲಿ ವಾಸವಿದ್ದರು. ತಂದೆ ಅಕಾಲಿಕ ಮರಣ ಹೊಂದಿ ವರ್ಷವಾಗಿರಲಿಲ್ಲ. ಆದರೆ ವಿನಯ್ ಆಸ್ತಿ ವಿಚಾರವಾಗಿ ಅಮ್ಮನ ಬಳಿ ಕ್ಯಾತೆ ತೆಗೆದಿದ್ದಾನೆ. ದಿನ ಕುಡಿದು ಬಂದ ಗಲಾಟೆ ಮಾಡಿ ಥಳಿಸುತ್ತಿದ್ದನು. ಶುಕ್ರವಾರ ರಾತ್ರಿ ಸಹ 10.30ರ ಸುಮಾರಿಗೆ ಕುಡಿದುಕೊಂಡು ಬಂದು ತಾಯಿಯನ್ನು ಥಳಿಸಲು ಶುರು ಮಾಡಿದ್ದನು. ಆಗ ಕೋಪಗೊಂಡ ಸಂಜೀವ್ ಚಾಕುವಿನಿಂದ ಇರಿದು ಕೊಂದಿದ್ದಾನೆ ಎಂದು ದಕ್ಷಿಣ ವಿಭಾಗ ಡಿಸಿಪಿ ಶರಣಪ್ಪ ಅವರು ಹೇಳಿದ್ದಾರೆ.

    ಈ ಘಟನೆ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸದ್ಯಕ್ಕೆ ಆರೋಪಿ ಸಂಜೀವ್‍ನನ್ನ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದಾಯಾದಿಗಳ ಕಲಹಕ್ಕೆ 200 ಅಡಿಕೆ ಮರಗಳು ಬಲಿ!

    ದಾಯಾದಿಗಳ ಕಲಹಕ್ಕೆ 200 ಅಡಿಕೆ ಮರಗಳು ಬಲಿ!

    ದಾವಣಗೆರೆ: ದಾಯಾದಿಗಳ ದ್ವೇಷಕ್ಕೆ ನೂರಾರು ಅಡಿಕೆ ಮರಗಳು ಬಲಿಯಾದ ಅಮಾನವೀಯ ಘಟನೆಯೊಂದು ದಾವಣಗೆರೆಯಲ್ಲಿ ನಡೆದಿದೆ.

    ಈ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನವಿಲೇಹಾಳ್ ಗ್ರಾಮದಲ್ಲಿ ನಡೆದಿದೆ. ಚಿಕ್ಕರಾಜು ಹಾಗೂ ಆತನ ತಮ್ಮನ ನಡುವೆ ಆಸ್ತಿ ವಿವಾದವಿತ್ತು. ಆಸ್ತಿ ವಿವಾದ ಕೋರ್ಟ್ ಮೆಟ್ಟಲೇರಿತ್ತು.

    ಕೆಲ ದಿನಗಳ ಹಿಂದೆ ಚನ್ನಗಿರಿ ಕೋರ್ಟ್ ನಲ್ಲಿ ಚಿಕ್ಕರಾಜು ಸಹೋದರನಿಗೆ ಜಮೀನು ಉಳುಮೆ ಮಾಡುವಂತೆ ಆದೇಶವಾಗಿತ್ತು. ಇದರಿಂದ ಚಿಕ್ಕರಾಜು ಜಿಲ್ಲಾ ಕೋರ್ಟ್ ನಿಂದ ಇಂಜೆಕ್ಷನ್ ಆರ್ಡರ್ ತಂದಿದ್ದರು. ಅದನ್ನು ಲೆಕ್ಕಿಸದೆ ಚಿಕ್ಕರಾಜು ಸಹೋದರ 17 ವರ್ಷದ ಫಲಕ್ಕೆ ಬಂದಿರುವ 200 ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಜೆಸಿಬಿಯಿಂದ ನಾಶ ಮಾಡಿದ್ದಾರೆ.

    ದಾಯಾದಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv