Tag: brothers

  • ಲಾಕ್‍ಡೌನ್ ಇದ್ದರೂ ಮನೆಯಿಂದ ಹೊರಹೋದ ತಮ್ಮ – ಚುಚ್ಚಿಚುಚ್ಚಿ ಕೊಂದ ಅಣ್ಣ

    ಲಾಕ್‍ಡೌನ್ ಇದ್ದರೂ ಮನೆಯಿಂದ ಹೊರಹೋದ ತಮ್ಮ – ಚುಚ್ಚಿಚುಚ್ಚಿ ಕೊಂದ ಅಣ್ಣ

    – ದಿನಸಿ ತರಲು ಹೋಗಿದ್ದೆ ತಪ್ಪಾಯ್ತು
    – ತಮ್ಮನ ಪತ್ನಿಗೂ ಕಪಾಳಮೋಕ್ಷ

    ಮುಂಬೈ: ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯಲು ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಆದರೆ ಕೆಲವರು ನಿಯಮ ಪಾಲಿಸದೆ ಸೋಂಕು ಹರಡುವಿಕೆಗೆ ಕಾರಣರಾಗುತ್ತಿದ್ದಾರೆ. ಹೀಗೆ ಮುಂಬೈನಲ್ಲಿ ಲಾಕ್‍ಡೌನ್ ಇದ್ದರೂ ಮನೆಯಿಂದ ತಮ್ಮ ಹೋರಹೋದ ಎಂದು ರೊಚ್ಚಿಗೆದ್ದ ಅಣ್ಣ ಆತನನ್ನು ಚಾಕು ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ.

    ಮುಂಬೈನ ಕಾಂದಿವಲಿ(ಪೂರ್ವ) ನಿವಾಸಿ ದುರ್ಗೇಶ್ ಥಾಕೂರ್ ತನ್ನ ತಮ್ಮ ರಾಜೇಶ್(21) ಅನ್ನು ಕೊಲೆ ಮಾಡಿದ್ದಾನೆ. ಮನೆಯಲ್ಲಿ ದಿನಸಿ ಸಾಮಾಗ್ರಿ ಖಾಲಿಯಾಗಿದಕ್ಕೆ ರಾಜೇಶ್ ತನ್ನ ಪತ್ನಿ ಜೊತೆ ದಿನಸಿ ಅಂಗಡಿಗೆ ಹೊರಟಿದ್ದನು. ಈ ವೇಳೆ ಆತನನ್ನು ದುರ್ಗೇಶ್ ತಡೆದು, ಹೊರಗೆ ಹೋಗಬೇಡ ಸುಮ್ಮನೆ ರಿಸ್ಕ್ ಯಾಕೆ? ಮನೆಯಲ್ಲಿಯೇ ಇರು. ಹೊರಗಡೆ ಹೋದರೆ ಕೊರೊನಾ ವೈರಸ್ ತಗಲುವ ಸಾಧ್ಯತೆ ಇದೆ ಎಂದು ತಡೆದಿದ್ದನು.

    ಮನೆಯಲ್ಲಿ ದಿನಸಿ ಇರದ ಕಾರಣ ದುರ್ಗೇಶ್ ಕಣ್ಣು ತಪ್ಪಿಸಿ ರಾಜೇಶ್ ಹಾಗೂ ಆತನ ಪತ್ನಿ ಅಂಗಡಿಗೆ ಹೋಗಿದ್ದರು. ಆದರೆ ಸಾಮಾಗ್ರಿ ಖರೀದಿ ಮಾಡಿಕೊಂಡು ಇಬ್ಬರು ಮನೆಗೆ ವಾಪಸ್ ಬಂದಾಗ ದುರ್ಗೇಶ್ ಇಬ್ಬರ ಮೇಲೆ ರೇಗಾಡಿದ್ದಾನೆ. ಇದರಿಂದ ಅಣ್ಣ, ತಮ್ಮನ ನಡುವೆ ಜಗಳ ನಡೆದಿದ್ದು, ಮಾತಿಗೆ ಮಾತು ಬೆಳೆದು ಸಹೋದರರ ಕಿತ್ತಾಟ ತಾರಕ್ಕಕ್ಕೇರಿದೆ. ಸಿಟ್ಟಿಗೆದ್ದ ಅಣ್ಣ ತಮ್ಮನ ಪತ್ನಿ ಕೆನ್ನೆಗೆ ಹೊಡೆದು, ತಮ್ಮನ ಹೊಟ್ಟೆಗೆ ಚಾಕು ಇರಿದಿದ್ದಾನೆ.

    ತಕ್ಷಣ ರಾಜೇಶ್‍ನನ್ನು ಆಸ್ಪತ್ರಗೆ ಕರೆದುಕೊಂಡು ಹೋದರೂ ಏನೂ ಪ್ರಯೋಜನವಾಗಲಿಲ್ಲ, ಆಸ್ಪತ್ರೆಗೆ ಮುಟ್ಟುವ ಮೊದಲೇ ಆತ ಮೃತಪಟ್ಟಿದ್ದನು. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.

  • ಅಂತರ್ಜಾತಿ ಮದ್ವೆಯಾದ ತಂಗಿ – 11 ವರ್ಷದ ಬಳಿಕ ಸೋದರಿ ಪತಿ ಮೇಲೆ ಅಣ್ಣಂದಿರಿಂದ ಹಲ್ಲೆ

    ಅಂತರ್ಜಾತಿ ಮದ್ವೆಯಾದ ತಂಗಿ – 11 ವರ್ಷದ ಬಳಿಕ ಸೋದರಿ ಪತಿ ಮೇಲೆ ಅಣ್ಣಂದಿರಿಂದ ಹಲ್ಲೆ

    ಯಾದಗಿರಿ: ತಂಗಿ ಅಂತರ್ಜಾತಿ ವಿವಾಹವಾದ ಹಳೆ ದ್ವೇಷ ಹಿನ್ನೆಲೆ 11 ವರ್ಷದ ಬಳಿಕ ತಂಗಿ ಪತಿಯ ಮೇಲೆ ಅಣ್ಣಂದಿರು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಯಾದಗಿರಿಯಲ್ಲಿ ನಡೆದಿದೆ.

    ಜಿಲ್ಲೆಯ ಹಳಿಗೇರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. 11 ವರ್ಷದ ಹಿಂದೆ ಗ್ರಾಮದ ಶರಣಮ್ಮ ಮತ್ತು ವಿಶ್ವನಾಥ್ ಅಂತರ್ಜಾತಿ ವಿವಾಹವಾಗಿದ್ದರು. ಈಗಾಗಲೇ ಈ ಇಬ್ಬರಿಗೆ ಎರಡು ಮಕ್ಕಳಿದ್ದಾರೆ. ಆದರೆ ಮೊದಲಿಂದಲೂ ಶರಣಮ್ಮ ಮತ್ತು ವಿಶ್ವನಾಥ್ ಮೇಲೆ ಶರಣಮ್ಮನ ಮನೆಯವರು ದ್ವೇಷ ಸಾಧಿಸುತ್ತಿದ್ದರು ಎನ್ನಲಾಗಿದೆ.

    ಬುಧವಾರ ವಿನಾಕಾರಣ ವಿಶ್ವನಾಥ್‍ನ ಜೊತೆಗೆ ಜಗಳ ಮಾಡಿದ ಶರಣಮ್ಮನ ಅಣ್ಣಂದಿರು ಹಿಗ್ಗಾ-ಮುಗ್ಗ ಥಳಿಸಿ, ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಸದ್ಯ ತೀವ್ರವಾಗಿ ಗಾಯಗೊಂಡಿದ್ದ ವಿಶ್ವನಾಥ್‍ನನ್ನು ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಈ ಸಮಯದಲ್ಲೂ ಕೂಡ ಜಿಲ್ಲಾಸ್ಪತ್ರೆಗೆ ಬಂದ ಶರಣಮ್ಮ ಅಣ್ಣಂದಿರು ಮತ್ತೊಮ್ಮೆ ಹಿಗ್ಗಾ ಮುಗ್ಗಾ ವಿಶ್ವನಾಥ್‍ನಿಗೆ ಥಳಿಸಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

  • ರೇಣುಕಾಚಾರ್ಯ, ಸಹೋದರರ ದುರಾಡಳಿತ ಖಂಡಿಸಿ ಏಕಾಂಗಿ ಹೋರಾಟ – ಗುರುಪಾದಯ್ಯ ಮಠದ್

    ರೇಣುಕಾಚಾರ್ಯ, ಸಹೋದರರ ದುರಾಡಳಿತ ಖಂಡಿಸಿ ಏಕಾಂಗಿ ಹೋರಾಟ – ಗುರುಪಾದಯ್ಯ ಮಠದ್

    ದಾವಣಗೆರೆ: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿರುವ ಎಂ.ಪಿ.ರೇಣುಕಾಚಾರ್ಯ ಹಾಗೂ ಅವರ ಸಹೋದರರು ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನಲ್ಲಿ ಆಡಳಿತ ಮತ್ತು ಕಾನೂನು ಸುವ್ಯವಸ್ಥೆ ಹದಗೆಡುವಂತೆ ಮಾಡುತ್ತಿದ್ದಾರೆ. ಇವರ ದುರಾಡಳಿತದಿಂದ ಬೇಸತ್ತು ಫೆಬ್ರವರಿ 13 ರಂದು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಏಕಾಂಗಿಯಾಗಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಭ್ರಷ್ಟಾಚಾರ ವಿರೋಧಿ ವೇದಿಕೆ ಗೌರವಾಧ್ಯಕ್ಷ ಗುರುಪಾದಯ್ಯ ಮಠದ್ ಹೇಳಿದ್ದಾರೆ.

    ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಶಾಸಕರು ಹಾಗೂ ಅವರ ಸಹೋದರ ಸ್ವಜನ ಪಕ್ಷಪಾತ, ಸರ್ವಾಧಿಕಾರ ಧೋರಣೆ, ಅಸಂಬದ್ಧ ಮತ್ತು ಪ್ರಚೋದನಾತ್ಮಕ ಹೇಳಿಕೆಗಳಿಂದ ಅವಳಿ ತಾಲೂಕಿನಲ್ಲಿ ಅಶಾಂತಿ ಉಂಟಾಗಿ ಕೋಮುಸಾಮರಸ್ಯಕ್ಕೆ ಧಕ್ಕೆ ಒದಗುವ ಲಕ್ಷಣಗಳು ಗೋಚರಿಸುತ್ತವೆ. ಶಾಸಕರಿಗೆ ಮತ ಹಾಕದವರ ಹಾಗೂ ಅವರ ದುರಾಡಳಿತದ ಬಗ್ಗೆ ಮಾತನಾಡಿದರೆ ಹೊನ್ನಾಳಿ ವಿಧಾನಸಭೆ ಕ್ಷೇತ್ರವನ್ನು ತೊರೆದು ಹೋಗುವ ಸ್ಥಿತಿ ನಿರ್ಮಿಸಿ ರಿಪಬ್ಲಿಕ್ ಆಫ್ ಹೊನ್ನಾಳಿ ಮಾಡಲು ಹೊರಟಿದ್ದಾರೆ ಎಂದು ದೂರಿದರು.

    ಸರ್ಕಾರ ರೂಪಿಸಿದ ಮರಳು ನೀತಿಯನ್ನು ಉಲ್ಲಂಘಿಸಿ ಹಿಂಬಾಲಕರೊಂದಿಗೆ ಕಾನೂನು ಬಾಹಿರ ಮರಳು ಮಾಫಿಯಕ್ಕೆ ಉತ್ತೇಜನ ನೀಡುತ್ತಿದ್ದಾರೆ. ಉದ್ಯೋಗ ಖಾತ್ರಿ ಮತ್ತು ವಿವಿಧ ಕ್ಷೇತ್ರದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಅಣ್ಣ ತಮ್ಮಂದಿರಂತೆ ಬದುಕುತ್ತಿರುವ ಹಿಂದು ಮುಸ್ಲಿಮರ ಮಧ್ಯೆ ಕಿಚ್ಚು ಹಚ್ಚುವ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಹುನ್ನಾರ ನಡೆಸುತ್ತಿದ್ದಾರೆ. ಇದೆಲ್ಲವನ್ನು ಖಂಡಿಸಿ ಏಕಾಂಕಿಯಾಗಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದೇನೆ. ಹೊನ್ನಾಳಿಯ ಭ್ರಷ್ಟಾಚಾರದ ಬಗ್ಗೆ ಜಿಲ್ಲಾಧಿಕಾರಿ, ಮುಖ್ಯಮಂತ್ರಿಗಳಿಗೆ, ಪ್ರಧಾನಮಂತ್ರಿ ಹಾಗೂ ಬಿಜೆಪಿಯ ರಾಷ್ಟ್ರ ಹಾಗೂ ರಾಜ್ಯಾಧ್ಯಕ್ಷರಿಗೆ ಪತ್ರ ಬರೆಯಲು ತೀರ್ಮಾನ ಮಾಡಿದ್ದೇನೆ ಎಂದು ತಿಳಿಸಿದರು.

  • ನೀರು ಕುಡಿಯಲು ಹೋಗಿ ನಾಲೆಗೆ ಬಿದ್ದ ಅಣ್ಣ – ರಕ್ಷಿಸಲು ಹೋಗಿ ನೀರುಪಾಲಾದ ತಮ್ಮ

    ನೀರು ಕುಡಿಯಲು ಹೋಗಿ ನಾಲೆಗೆ ಬಿದ್ದ ಅಣ್ಣ – ರಕ್ಷಿಸಲು ಹೋಗಿ ನೀರುಪಾಲಾದ ತಮ್ಮ

    ದಾವಣಗೆರೆ: ನೀರು ಕುಡಿಯಲು ಹೋಗಿ ಕಾಲು ಜಾರಿ ಭದ್ರಾ ನಾಲೆಗೆ ಬಿದ್ದ ಅಣ್ಣನನ್ನ ರಕ್ಷಿಸಲು ಹೋಗಿ ತಮ್ಮ ಸಹ ನೀರು ಪಾಲಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮೆದಿಕೆರೆ ಗ್ರಾಮದಲ್ಲಿ ನಡೆದಿದೆ.

    ಕೃಷ್ಣಮೂರ್ತಿ (21) ಬೀರಲಿಂಗೇಶ್ (19) ಸಾವನ್ನಪ್ಪಿದ ಸಹೋದರರು. ದಾವಣಗೆರೆ ತಾಲೂಕಿನ ನೀರ್ಥಡಿ ಗ್ರಾಮದ ನಿವಾಸಿಗಳಾದ ಕೃಷ್ಣಮೂರ್ತಿ ಹಾಗೂ ಬೀರಲಿಂಗೇಶ್ ಹಬ್ಬಕ್ಕಾಗಿ ಸಂಬಂಧಿಕರ ಮೆದಿಕೆರೆ ಗ್ರಾಮಕ್ಕೆ ಬಂದಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.

    ಮೆದಿಕೆರೆ ಗ್ರಾಮದಲ್ಲಿ ಹರಿಯುವ ನಾಲೆಗೆ ನೀರು ಕುಡಿಯಲು ಹೋದಂತಹ ಸಂದರ್ಭದಲ್ಲಿ ಅಣ್ಣ ಕೃಷ್ಣಮೂರ್ತಿ ಕಾಲು ಜಾರಿ ನಾಲೆಗೆ ಬಿದ್ದಿದ್ದು, ಅಣ್ಣನನ್ನು ರಕ್ಷಿಸಲು ಹೋಗಿ ತಮ್ಮ ಬೀರಲಿಂಗೇಶ್ ಸಹ ನೀರು ಪಾಲಾಗಿದ್ದಾನೆ. ಶವಕ್ಕಾಗಿ ಹುಡುಕಾಟ ನಡೆದಿದ್ದು, ಸ್ಥಳಕ್ಕೆ ಸಂತೆಬೆನ್ನೂರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ದಾಯಾದಿಗಳ ಕಲಹ- ಅಡಿಕೆ ಗಿಡಗಳ ಮಾರಣಹೋಮ

    ದಾಯಾದಿಗಳ ಕಲಹ- ಅಡಿಕೆ ಗಿಡಗಳ ಮಾರಣಹೋಮ

    ದಾವಣಗೆರೆ: ದಾವಣಗೆರೆ ತಾಲೂಕಿನ ಅಲೂರು ಗ್ರಾಮದಲ್ಲಿ ದಾಯಾದಿಗಳ ಜಗಳಕ್ಕೆ ಬೆಳೆದು ನಿಂತ 800ಕ್ಕೂ ಹೆಚ್ಚು ಅಡಿಕೆ ಗಿಡಗಳು ಬಲಿಯಾಗಿವೆ.

    ಅಲೂರು ಗ್ರಾಮದ ನಟರಾಜ್ ಎಂಬವರಿಗೆ ಸೇರಿದ್ದ 800ಕ್ಕೂ ಹೆಚ್ಚು ಅಡಿಕೆ ಗಿಡಗಳು ನಾಶವಾಗಿವೆ. ನಟರಾಜ್ ಮೂರು ಎಕರೆ ಭೂಮಿಗೆ 8 ತಿಂಗಳ ಅಡಿಕೆ ಗಿಡಗಳನ್ನು ಹಾಕಿ, ಅವುಗಳಿಗೆ ಡ್ರಿಪ್ ಮೂಲಕ ನೀರು ಹಾಕಿ ಬೆಳೆಸುತ್ತಿದ್ದರು. ಜಮೀನು ವ್ಯಾಜ್ಯದಲ್ಲಿದ್ದ ಹಿನ್ನಲೆ ನಟರಾಜ್ ಅವರ ಚಿಕ್ಕಪ್ಪ ಪಾಲಾಕ್ಷಪ್ಪ ಗಿಡಗಳನ್ನು ಕಿತ್ತು ಹಾಕಿದ್ದಾರೆ. ಪಾಲಾಕ್ಷಪ್ಪ ಧಾರವಾಡ ವಿವಿಯಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದು, ಬೆಳೆದು ನಿಂತ ಅಡಿಕೆ ಗಿಡಗಳನ್ನು ತಮ್ಮದ ಕೈಯಾರೇ ಕಿತ್ತು ಹಾಕಿದ್ದಾರೆ ಎಂದು ನಟರಾಜ್ ಆರೋಪಿಸುತ್ತಿದ್ದಾರೆ.

    ಕಷ್ಟ ಪಟ್ಟು ಅಡಿಕೆ ಗಿಡಗಳನ್ನು ಬೆಳೆಸಿದ್ದು, ಈಗ ದಾಯಾದಿಗಳೇ ನಾಶ ಮಾಡಿದ್ದಕ್ಕೆ ಜಮೀನು ಮಾಲೀಕರು ಕಣ್ಣೀರು ಹಾಕುತ್ತಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪಾಲಾಕ್ಷಪ್ಪ ವಿರುದ್ಧ ದೂರು ದಾಖಲು ಮಾಡಲು ಜಮೀನು ಮಾಲೀಕರು ಮುಂದಾಗಿದ್ದಾರೆ.

  • ಮಾಜಿ ಶಾಸಕ ಕೆ.ಬಿ ಚಂದ್ರಶೇಖರ್ ಸಹೋದರರಿಂದ ಪಿಎಸ್‍ಐಗೆ ಬೆದರಿಕೆ

    ಮಾಜಿ ಶಾಸಕ ಕೆ.ಬಿ ಚಂದ್ರಶೇಖರ್ ಸಹೋದರರಿಂದ ಪಿಎಸ್‍ಐಗೆ ಬೆದರಿಕೆ

    ಮಂಡ್ಯ: ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಮಾಜಿ ಶಾಸಕನ ಸಹೋದರರು ಪಿಎಸ್‍ಐಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

    ಕೆ.ಆರ್ ಪೇಟೆ ಕಾಂಗ್ರೆಸ್ ಮಾಜಿ ಶಾಸಕ ಕೆ.ಬಿ ಚಂದ್ರಶೇಖರ್ ಅವರ ಸಹೋದರರಾದ ಕೆ.ಬಿ ರವಿ ಹಾಗೂ ಕೆ.ಬಿ ಈಶ್ವರ್ ಪ್ರಸಾದ್ ಕೆ.ಆರ್ ಪೇಟೆ ಪಟ್ಟಣ ಪೊಲೀಸ್ ಠಾಣೆಯ ಪಿಎಸ್‍ಐ ಬ್ಯಾಟರಾಯಗೌಡರಿಗೆ ಬೆದರಿಕೆ ಹಾಕಿದ್ದಾರೆ. ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಹಲ್ಲೆಗೆ ಮುಂದಾಗಿದ್ದರು ಎಂದು ಈ ಇಬ್ಬರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಮಧ್ಯರಾತ್ರಿ 2:15ರ ಸುಮಾರಿಗೆ ರವಿ ಹಾಗೂ ಈಶ್ವರ್ ಪ್ರಸಾದ್‍ಗೆ ಪಾರ್ಟಿ ಮುಗಿಸಿ ಮನೆಗೆ ತೆರಳುವಂತೆ ಪಿಎಸ್‍ಐ ಬ್ಯಾಟರಾಯಗೌಡ ಅವರು ಹೇಳಿದ್ದರು. ಈ ವೇಳೆ ಕುಡಿದ ಮತ್ತಿನಲ್ಲಿ ಇದ್ದ ರವಿ ಹಾಗೂ ಈಶ್ವರ್ ಪ್ರಸಾದ್ ಪಿಎಸ್‍ಐ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಹಾಕಿದ್ದಾರೆ.

    ಜನವರಿ 1ರಂದು ಈ ಇಬ್ಬರ ಮೇಲೂ ಕೆ.ಆರ್ ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪಿಎಸ್‍ಐಗೆ ಅವಾಚ್ಯ ಶಬ್ದಗಳಿಂದ ನಿಂದನೆ, ಬೆದರಿಕೆ ಒಡ್ಡಿ ಕರ್ತವ್ಯಕ್ಕೆ ಅಡ್ಡಿ ಆರೋಪದ ಅಡಿ ದೂರು ದಾಖಲಿಸಿದ್ದು ಎಫ್‍ಐಆರ್ ದಾಖಲಾಗಿದೆ. ಸದ್ಯ ರವಿ ಪರಾರಿಯಾಗಿದ್ದು, ಈಶ್ವರ್ ಪ್ರಸಾದ್ ಪೊಲೀಸರ ವಶದಲ್ಲಿ ಇದ್ದಾರೆ. ಈ ಬಗ್ಗೆ ಗುರುವಾರ ಜಾಮೀನಿಗೆ ಆರೋಪಿಗಳು ಅರ್ಜಿ ಸಲ್ಲಿಸಿದ್ದು, ಸೆಷನ್ ಕೋರ್ಟ್ ಅರ್ಜಿಯನ್ನು ನಿರಾಕರಿಸಿದೆ.

  • ನಡುರಸ್ತೆಯಲ್ಲೇ ಬಡಿದಾಡ್ಕೊಂಡ ಅಣ್ಣ, ತಮ್ಮ- ಚಿಕ್ಕಪ್ಪನೊಂದಿಗೆ ಸೇರಿ ತಂದೆಗೇ ಥಳಿಸಿದ ಮಗ

    ನಡುರಸ್ತೆಯಲ್ಲೇ ಬಡಿದಾಡ್ಕೊಂಡ ಅಣ್ಣ, ತಮ್ಮ- ಚಿಕ್ಕಪ್ಪನೊಂದಿಗೆ ಸೇರಿ ತಂದೆಗೇ ಥಳಿಸಿದ ಮಗ

    ಚಿಕ್ಕಬಳ್ಳಾಪುರ: ಹಾಡಹಗಲೇ ನಡುರಸ್ತೆಯಲ್ಲೇ ಅಣ್ಣ-ತಮ್ಮ ಹೊಡೆದಾಡಿಕೊಂಡಿದ್ದು, ಈವೇಳೆ ಮಗ ಕೂಡ ತಂದೆಗೆ ಹಿಗ್ಗಾಮುಗ್ಗ ಥಳಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜೋಗು ಪೇಟೆಯಲ್ಲಿ ನಡೆದಿದೆ.

    ಶಿಡ್ಲಘಟ್ಟ ಪಟ್ಟಣದ ನಾಗರಾಜ್ ಹಲ್ಲೆಗೊಳಗಾದ ವ್ಯಕ್ತಿ. ನಾಗರಾಜ ಸಹೋದರ ಕೃಷ್ಣಪ್ಪ ಹಾಗೂ ನಾಗರಾಜ್ ಮಗ ಚಂದ್ರಶೇಖರ್ ಹಲ್ಲೆ ಮಾಡಿರುವವರು. ನಾಗರಾಜ್‍ಗೆ ಇಬ್ಬರು ಪತ್ನಿಯರಿದ್ದಾರೆ. ಮೊದಲನೇ ಪತ್ನಿ ಹೆಸರು ಕಮಲಮ್ಮ ಹಾಗೂ ಎರಡನೇ ಪತ್ನಿ ಹೆಸರು ರತ್ನಮ್ಮ. ನಾಗರಾಜ್ ಸರಿಸುಮಾರು 25 ವರ್ಷಗಳ ಹಿಂದೆ ಕಮಲಮ್ಮ ಹೆಸರಿನಲ್ಲಿ ಕೆಎಸ್‍ಎಫ್‍ಸಿ ಬ್ಯಾಂಕಿನಲ್ಲಿ 1,16,000 ರೂಪಾಯಿ ಸಾಲ ಹಾಗೂ ಶಿಡ್ಲಘಟ್ಟ ಕೋ-ಆಪರೇಟಿವ್ ಬ್ಯಾಂಕಿನಲ್ಲಿ 4,60,000 ರೂಪಾಯಿ ಸಾಲ ಪಡೆದಿದ್ದು, ಈ ಹಣದಿಂದ ಜೋಗು ಪೇಟೆಯ ಮನೆಯಲ್ಲಿ ರೇಷ್ಮೆ ಉರಿ ಮಿಷಿನ್ ಕಾರ್ಖಾನೆ(ರೇಷ್ಮೆ ನೂಲು ತೆಗೆಯುವ ಕಾರ್ಖಾನೆ) ಆರಂಭಿಸಿದ್ದನು.

    ಆದರೆ ಕೆಲ ವರ್ಷಗಳ ನಂತರ ನಾಗರಾಜ್ ಅನಾರೋಗ್ಯದ ಹಿನ್ನೆಲೆಯಲ್ಲಿ ಕಾರ್ಖಾನೆಯನ್ನು ಎರಡನೇ ಪತ್ನಿ ರತ್ನಮ್ಮಳಿಗೆ ಬಿಟ್ಟು ಕೊಟ್ಟಿದ್ದನು. ಕಾರ್ಖಾನೆಯಲ್ಲಿ ದುಡಿಮೆ ಮಾಡಿಕೊಂಡು ಹಣ ಗಳಿಸುತ್ತಿದ್ದ ರತ್ನಮ್ಮ ಬ್ಯಾಂಕಿನ ಸಾಲವನ್ನು ಮರುಪಾವತಿ ಮಾಡಲಿಲ್ಲ. ಈ ಮಧ್ಯೆ ಕೆಎಸ್‍ಎಫ್‍ಸಿ ಬ್ಯಾಂಕಿನ 1,16,000 ರೂಪಾಯಿ ಸಾಲವನ್ನು ಮೊದಲ ಹೆಂಡತಿ ಕಮಲಮ್ಮ ಪಾವತಿ ಮಾಡಿದ್ದಾಳೆ. ಇನ್ನೂ ಶಿಡ್ಲಘಟ್ಟ ಕೋ-ಆಪರೇಟಿವ್ ಬ್ಯಾಂಕ್‍ನಲ್ಲಿದ್ದ ಸಾಲವನ್ನು ಪಾವತಿ ಮಾಡುವಂತೆ ಬ್ಯಾಂಕಿನ ಅಧಿಕಾರಿಗಳು ಕಮಲಮ್ಮಗೆ ನೋಟಿಸ್ ನೀಡಿದ್ದಾರೆ. ಹೀಗಾಗಿ ನಾಗರಾಜ ಬ್ಯಾಂಕಿನ ಸಾಲವನ್ನು ಮರುಪಾವತಿ ಮಾಡುವಂತೆ ಕಾರ್ಖಾನೆ ಪಡೆದುಕೊಂಡಿರುವ ಎರಡನೇ ಪತ್ನಿ ರತ್ನಮ್ಮಳಿಗೆ ಹೇಳಿದ್ದಾನೆ. ಆದರೆ ರತ್ನಮ್ಮ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಆಗ ನಾಗರಾಜ್ ಫ್ಯಾಕ್ಟರಿ ವಾಪಸ್ ಬಿಟ್ಟುಕೊಡುವಂತೆ ಒತ್ತಾಯ ಮಾಡಿದ್ದಾನೆ. ಇದಕ್ಕೂ ರತ್ನಮ್ಮ ವಿರೋಧ ವ್ಯಕ್ತಪಡಿಸಿದ್ದಾಳೆ.

    ಹೀಗಾಗಿ ರತ್ನಮ್ಮ ಮೇಲೆ ಕೋಪಗೊಂಡ ಪತಿ ನಾಗರಾಜ್, ತಾನು ಆರಂಭ ಮಾಡಿದ್ದ ರೇಷ್ಮೆ ಉರಿ ಮಿಷನ್ ಕಾರ್ಖಾನೆಗೆ ತನ್ನ ಹೆಸರಿನಲ್ಲಿ ನೀಡಿದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವಂತೆ ಬೆಸ್ಕಾಂಗೆ ಮನವಿ ಮಾಡಿದ್ದನು. ಹೀಗಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಬೆಸ್ಕಾಂ ಅಧಿಕಾರಿಗಳ ಜೊತೆ ರೇಷ್ಮೆ ಉರಿ ಕಾರ್ಖಾನೆ ಬಳಿ ಬಂದಿದ್ದ ನಾಗರಾಜ್, ಎರಡನೇ ಪತ್ನಿ ರತ್ನಮ್ಮಳ ಜೊತೆ ಜಗಳ ಮಾಡಿದ್ದನು. ಈ ವೇಳೆ ರತ್ನಮ್ಮ ತನ್ನ ಮೈದುನ ಕೃಷ್ಣಪ್ಪಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಬಂದ ನಾಗರಾಜ್ ಸಹೋದರ ಕೃಷ್ಣಪ್ಪ ಹಾಗೂ ನಾಗರಾಜ್ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ನಾಗರಾಜ್ ಕೃಷ್ಣಪ್ಪರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದು ಇಬ್ಬರು ಪರಸ್ಪರ ಕೈ ಕೈ ಮಿಲಾಯಿಸಿ ಹೊಡೆದಾಡಿಕೊಂಡಿದ್ದಾರೆ.

    ಈ ಹೊಡೆದಾಟದಲ್ಲಿ ಕೃಷ್ಣಪ್ಪನಿಗೆ ಹಲ್ಲೆಗೊಳಗಾದ ನಾಗರಾಜನ ಸ್ವಂತ ಮಗ ಚಂದ್ರಶೇಖರ್ ಸಹ ಸಾಥ್ ನೀಡಿದ್ದಾನೆ. ಈ ಸಂಬಂಧ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ನಾಗರಾಜ್ ಹಾಗೂ ಕೃಷ್ಣಪ್ಪ ಇಬ್ಬರು ದೂರು, ಪ್ರತಿದೂರು ದಾಖಲಿಸಿದ್ದಾರೆ. ಈ ಘಟನೆ ಕಳೆದ ಭಾನುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸ್ಥಳೀಯರೊಬ್ಬರು ಗಲಾಟೆ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

  • ಬೆಳೆಯ ಮೇಲೆ ಟ್ರ್ಯಾಕ್ಟರ್ ಹರಿಸಿದ್ದಕ್ಕೆ ಅಣ್ಣನನ್ನೇ ಕೊಲೆಗೈದ ತಮ್ಮ

    ಬೆಳೆಯ ಮೇಲೆ ಟ್ರ್ಯಾಕ್ಟರ್ ಹರಿಸಿದ್ದಕ್ಕೆ ಅಣ್ಣನನ್ನೇ ಕೊಲೆಗೈದ ತಮ್ಮ

    ಚಾಮರಾಜನಗರ: ಜಮೀನಿನ ಬೆಳೆ ಮೇಲೆ ಟ್ರ್ಯಾಕ್ಟರ್ ಹರಿಸಿದ್ದಕ್ಕೆ ತಮ್ಮನೊಬ್ಬ ಅಣ್ಣನನ್ನೇ ಕೊಲೆ ಮಾಡಿದ ಘಟನೆ ಚಾಮರಾಜನಗರ ತಾಲೂಕಿ ಕೊತ್ತಲವಾಡಿ ಗ್ರಾಮದಲ್ಲಿ ನಡೆದಿದೆ.

    ಕೊತ್ತಲವಾಡಿ ಗ್ರಾಮದ ನಿವಾಸಿ ಪುಟ್ಟಸ್ವಾಮಪ್ಪ (65) ಕೊಲೆಯಾದ ಅಣ್ಣ. ಅದೇ ಗ್ರಾಮದ ಸೋಮಪ್ಪ ಕೊಲೆಗೈದ ತಮ್ಮ. ಸೋಮಪ್ಪ ಹಾಗೂ ಆತನ ದೊಡ್ಡಪ್ಪನ ಮಗ ಪುಟ್ಟಸ್ವಾಮಪ್ಪ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ಆದರೆ ಮಂಗಳವಾರ ಪುಟ್ಟಸ್ವಾಮಪ್ಪ ಟ್ರ್ಯಾಕ್ಟರ್ ಚಾಲನೆ ಮಾಡಿಕೊಂಡು ಜಮೀನಿಗೆ ಹೋಗುತ್ತಿದ್ದ. ಈ ವೇಳೆ ತಮ್ಮನ ಜಮೀನಿನ ಬೆಳೆಯ ಮೇಲೆ ಟ್ರ್ಯಾಕ್ಟರ್ ಹರಿಸಿದ್ದಾನೆ. ಇದರಿಂದ ಕೋಪಗೊಂಡ ಸೋಮಪ್ಪ ಅಣ್ಣನ ಜೊತೆಗೆ ಜಗಳಕ್ಕೆ ಇಳಿದಿದ್ದಾನೆ.

    ಸೋಮಪ್ಪ ಹಾಗೂ ಪುಟ್ಟಸ್ವಾಮಪ್ಪ ಮಧ್ಯೆ ಮಾತಿಗೆ ಮಾತು ಬೆಳೆದು, ಪರಿಸ್ಥಿತಿ ವಿಕೋಪಕ್ಕೆ ತಲಿಪಿದೆ. ಈ ವೇಳೆ ಸೋಮಪ್ಪ ಕಲ್ಲಿನಿಂದ ಪುಟ್ಟಸ್ವಾಮಪ್ಪಗೆ ಹೊಡೆದಿದ್ದಾನೆ. ಕಲ್ಲಿನಿಂದ ಪೆಟ್ಟು ತಿಂದ ಪುಟ್ಟಸ್ವಾಮಪ್ಪ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತ ಪುಟ್ಟಸ್ವಾಮಪ್ಪನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಗೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬಳಿಕ ಆರೋಪಿ ಸೋಮಪ್ಪನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಕೊಲೆ ನಡೆದಿದೆ ಎನ್ನುವುದು ಪೋಲಿಸರ ಪ್ರಾಥಮಿಕ ಹಂತದ ಮಾಹಿತಿಯಾಗಿದೆ.

    ಇಂತಹ ಸಣ್ಣಪುಟ್ಟ ವಿಚಾರಕ್ಕೆ ಜಗಳವಾಡಿಕೊಳ್ಳದಂತೆ ಚಾಮರಾಜನಗರ ಎಸ್‍ಪಿ ಆನಂದ್ ಕುಮಾರ್ ಅವರು ಜನರಿಗೆ ತಿಳಿ ಹೇಳಿದ್ದಾರೆ. ಅಷ್ಟೇ ಅಲ್ಲದೆ ಪ್ರಕರಣದ ಸಂಬಂಧ ಸೋಮಪ್ಪನನ್ನು ಬಂಧಿಸಿ, ವಿಚಾರಣೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

  • ಸೈಕಲ್ ರಿಪೇರಿ ತಡವಾಗಿದೆ ಎಂದು ಪತ್ರ ಬರೆದ ಮಕ್ಕಳು – ಸಹಾಯಕ್ಕೆ ಬಂದ ಪೊಲೀಸ್

    ಸೈಕಲ್ ರಿಪೇರಿ ತಡವಾಗಿದೆ ಎಂದು ಪತ್ರ ಬರೆದ ಮಕ್ಕಳು – ಸಹಾಯಕ್ಕೆ ಬಂದ ಪೊಲೀಸ್

    ತಿರುವನಂತಪುರಂ: ಸೈಕಲ್ ರಿಪೇರಿ ಮಾಡಿಕೊಡಲು ತಡಮಾಡುತ್ತಿದ್ದಾರೆ ಎಂದು ಪುಟ್ಟ ಸಹೋದರರು ಬರೆದ ಪತ್ರಕ್ಕೆ ಸ್ಪಂದಿಸಿದ ಕೇರಳ ಪೊಲೀಸರಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತದೆ.

    ಕೇರಳದ ಕೋಜಿಕೋಡ್‍ನ ಐದನೇ ತರಗತಿ ಓದುತ್ತಿರುವ ಅಬಿನ್ ಪೊಲೀಸರಿಗೆ ಪತ್ರ ಬರೆದಿದ್ದು, ಈ ಪತ್ರದಲ್ಲಿ ನಾನು ಮತ್ತು ನನ್ನ ಸಹೋದರನ ಸೈಕಲ್ ಅನ್ನು ಎರಡು ತಿಂಗಳ ಹಿಂದೆ ರಿಪೇರಿಗೆ ಕೊಟ್ಟಿದ್ದೆವು. ಆದರೆ ಅವರು ನಮಗೆ ಸೈಕಲ್ ವಾಪಸ್ ಮಾಡುತ್ತಿಲ್ಲ ನಮಗೆ ಸಹಾಯ ಮಾಡಿ ಎಂದು ಪೊಲೀಸರಿಗೆ ಪತ್ರ ಬರೆದಿದ್ದಾನೆ.

    https://www.facebook.com/keralapolice/photos/a.135262556569242/2504084799686994/?type=3

    ಇದೇ ತಿಂಗಳ 25 ರಂದು ಮಲಯಾಳಂ ಭಾಷೆಯಲ್ಲಿ ಬರೆದಿರುವ ಪತ್ರದಲ್ಲಿ, ನಾನು ಮತ್ತು ನನ್ನ ಸಹೋದರನ ಸೈಕಲ್ ಅನ್ನು ರಿಪೇರಿ ಮಾಡಿಸಲು ಶಾಪ್‍ಗೆ ನೀಡಿದ್ದೇವೆ. ಆದರೆ ನಾವು ಶಾಪ್ ಬಳಿ ಹೋಗಿ ಅನೇಕ ಬಾರಿ ಸೈಕಲ್ ಕೇಳಿದರೆ ಮಾಲೀಕರು ನೀಡುತ್ತಿಲ್ಲ. ಇನ್ನೂ ನಿಮ್ಮ ಸೈಕಲ್ ಸರಿಯಾಗಿಲ್ಲ ಎನ್ನುತ್ತಿದ್ದಾರೆ. ಈ ವಿಚಾರವಾಗಿ ನಮ್ಮ ಮನೆಯವರು ನಮಗೆ ಸಹಾಯ ಮಾಡುತ್ತಿಲ್ಲ ಎಂದು ಪತ್ರ ಬರೆದಿದ್ದಾರೆ.

    ಪತ್ರ ಬಂದು ತಲುಪಿದ ನಂತರ ಈ ಪತ್ರವನ್ನು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಶೇರ್ ಮಾಡಿರುವ ಕೇರಳ ಪೊಲೀಸರು, ನಾವು ದೂರನ್ನು ದಾಖಲಿಸಿಕೊಂಡಿದ್ದೇವೆ. ನಮ್ಮ ಪೊಲೀಸ್ ಅಧಿಕಾರಿ ರಾಧಿಕಾ ಎನ್‍ಪಿ ಸೈಕಲ್ ಶಾಪ್‍ಗೆ ಹೋಗಿ ವಿಚಾರಣೆ ಮಾಡಿದ್ದಾರೆ. ಮಾಲೀಕರು ಅನಾರೋಗ್ಯ ಮತ್ತು ಅವರ ಮಗನ ಮದುವೆಯಲ್ಲಿ ಬ್ಯುಸಿ ಇದ್ದ ಕಾರಣ ರಿಪೇರಿ ಮಾಡಲು ಆಗಿಲ್ಲ. ಆದರೆ ಅದಷ್ಟೂ ಬೇಗ ಸೈಕಲ್ ಗಳನ್ನು ರೆಡಿ ಮಾಡಿಕೊಡುವುದಾಗಿ ಹೇಳಿದ್ದಾರೆ ಎಂದು ಬರೆದುಕೊಂಡಿದ್ದಾರೆ.

    https://www.facebook.com/keralapolice/photos/p.2504086796353461/2504086796353461/?type=3

    ಇದಾದ ನಂತರ ಇನ್ನೊಂದು ಫೇಸ್ ಬುಕ್ ಪೋಸ್ಟ್ ಹಾಕಿರುವ ಕೇರಳ ಪೊಲೀಸರು, ಈ ಇಬ್ಬರು ಪುಟ್ಟ ಸಹೋದರರ ಸೈಕಲ್ಸ್ ವಾಪಸ್ ಬಂದಿವೆ ಎಂದು ಬರೆದುಕೊಂಡು, ಅಬಿನ್ ಮತ್ತು ಆತನ ಸಹೋದರ ಸೈಕಲ್ ಬಳಿ ನಿಂತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.

    ಪೊಲೀಸರ ಈ ಸಹಾಯಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದು, ಈ ಪೋಸ್ಟ್ ಅನ್ನು 70 ಸಾವಿರ ಜನ ಲೈಕ್ ಮಾಡಿದ್ದರೆ ಮತ್ತು 4 ಸಾವಿರ ಜನ ಶೇರ್ ಮಾಡಿದ್ದಾರೆ. ಪೊಲೀಸರು ಈ ಕೆಲಸವನ್ನು ಶ್ಲಾಘಿಸಿ ಸಾವಿರಕ್ಕೂ ಹೆಚ್ಚು ಜನರು ಕಮೆಂಟ್ ಮಾಡಿದ್ದು, ಪುಟ್ಟು ಸಹೋದರರಿಗೆ ಸಹಾಯ ಮಾಡಿದ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ.

  • ಅಣ್ಣ ತಮ್ಮನ ಜಗಳ, ಪೊಲೀಸರಿಗೆ ಲಾಭ – ಖಾಕಿ ಪಾಲಾದ ಅಡಿಕೆ ಬೆಳೆ

    ಅಣ್ಣ ತಮ್ಮನ ಜಗಳ, ಪೊಲೀಸರಿಗೆ ಲಾಭ – ಖಾಕಿ ಪಾಲಾದ ಅಡಿಕೆ ಬೆಳೆ

    – ಆತ್ಮಹತ್ಯೆಯೊಂದೇ ದಾರಿ ಎನ್ನುತ್ತಿರುವ ರೈತ

    ಬೆಂಗಳೂರು: ಅಣ್ಣ ತಮ್ಮನ ಜಗಳದಿಂದ ಪೊಲೀಸರು ಲಾಭ ಪಡೆದಿದ್ದು, ಖಾಕಿ ದರ್ಪದಿಂದ ರೈತರೊಬ್ಬರು ಕಂಗಾಲಾಗಿರುವ ಘಟನೆ ನೆಲಮಂಗಲ ತಾಲೂಕಿನ ಹಲ್ಕೂರು ಗ್ರಾಮದಲ್ಲಿ ನಡೆದಿದೆ.

    ಅನ್ನದಾತನ ಮೇಲೆ ಪೊಲೀಸರು ದರ್ಪ ಮೆರೆದಿರುವ ಆರೋಪ ಕೇಳಿಬರುತ್ತಿದೆ. ಗ್ರಾಮದ ಹನುಮಂತರಾಯಪ್ಪ ಮತ್ತು ಸಿದ್ದಗಂಗಯ್ಯ ಇಬ್ಬರು ಅಣ್ಣ ತಮ್ಮಂದಿರು. ಈ ಇಬ್ಬರು ಸಹೋದರರ ಜಗಳ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ನ್ಯಾಯ ತೀರ್ಮಾನಕ್ಕೆಂದು ಬಂದಿದ್ದ ನೆಲಮಂಗಲ ಗ್ರಾಮಾಂತರ ಪೊಲೀಸರು ಕೈಗೆ ಬಂದಿದ್ದ ಅಡಿಕೆ ಫಸಲನ್ನು ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ. ಇದರಿಂದ ತೀವ್ರ ನಷ್ಟಕ್ಕೆ ತುತ್ತಾದ ರೈತ ಹನುಮಂತಪ್ಪ ನನಗೆ ಆತ್ಮಹತ್ಯೆಯೊಂದೇ ಉಳಿದಿರೋ ದಾರಿ ಎಂದು ಗೋಳಾಡುತ್ತಿದ್ದಾರೆ.

    ಜಮೀನಿನ ವಿಚಾರಕ್ಕೆ ಹನುಮಂತರಾಯಪ್ಪ ಮತ್ತು ಸಿದ್ದಗಂಗಯ್ಯ ನಡುವೆ ಜಗಳ ನಡೆಯುತ್ತಿತ್ತು. ಈ ಸಂಬಂಧ ಹಿಂದೆ ತಹಶೀಲ್ದಾರ್ ಅವರು ಜಗಳ ಇತ್ಯರ್ಥಗೊಳಿಸಿ ಈ ಜಮೀನು ಹನುಮಂತರಾಯಪ್ಪ ಅವರಿಗೆ ಸೇರಿದ್ದು, ಅವರಿಗೆ ಯಾವುದೇ ತೊಂದರೆ ಕೊಡುವ ಹಾಗಿಲ್ಲ ಎಂದು ಸಿದ್ದಗಂಗಯ್ಯನಿಗೆ ಎಚ್ಚರಿಸಿದ್ದರು. ಹಠ ಬಿಡದ ಸಿದ್ದಗಂಗಯ್ಯ ಅಣ್ಣನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದನು. ಹೀಗಾಗಿ ಅಣ್ಣ ತಮ್ಮನ ಸಮಸ್ಯೆ ಬಗೆಹರಿಸಲು ಪೊಲೀಸರು ಬಂದಿದ್ದರು.

    ಕಟಾವು ವೇಳೆ ಬೇಕಾಬಿಟ್ಟಿ ಜಮೀನಿನಲ್ಲಿ ಅಡಿಕೆ ಸುರಿದು ಮೊದಲೇ ರೈತ ನಷ್ಟ ಅನುಭವಿಸುತ್ತಿದ್ದರು. ಈ ವೇಳೆ ಹನುಮಂತರಾಯಪ್ಪ ಅವರ ಜಮೀನಿಗೆ ಬಂದ ಪೊಲೀಸರು ಸಹೋದರರ ಸಮಸ್ಯೆ ಬಗೆಹರಿಸುವ ಬದಲು ಹನುಮಂತರಾಯಪ್ಪ ಮಾರಾಟ ಮಾಡಿದ 4 ಲಕ್ಷದ ಅಡಿಕೆ ಬೆಳೆ ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ. ಇದರಿಂದ ಕಂಗಾಲಾಗಿರು ರೈತ ಕಣ್ಣೀರು ಹಾಕುತ್ತಿದ್ದಾರೆ. ತಮ್ಮನ ಜೊತೆ ಪೊಲೀಸರು ಕೈಜೋಡಿಸಿ ಹೀಗೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.