Tag: brothers

  • ಅಕ್ರಮ ಮರಳು ಸಾಗಾಟದ ಟ್ರ್ಯಾಕ್ಟರ್ ಪಲ್ಟಿ- ಸಹೋದರರಿಬ್ಬರ ಸಾವು

    ಅಕ್ರಮ ಮರಳು ಸಾಗಾಟದ ಟ್ರ್ಯಾಕ್ಟರ್ ಪಲ್ಟಿ- ಸಹೋದರರಿಬ್ಬರ ಸಾವು

    ರಾಯಚೂರು: ತಾಲೂಕಿನ ಬುಳ್ಳಾಪುರ ಗ್ರಾಮದ ಬಳಿ ರಾತ್ರಿ ವೇಳೆ ಮರಳು ಸಾಗಣೆ ಟ್ರ್ಯಾಕ್ಟರ್ ಪಲ್ಟಿಯಾಗಿ ಸಹೋದರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಗಿಲ್ಲೆಸುಗೂರು ಕ್ಯಾಂಪ್ ನ ಸಾಮುವೆಲ್( 29) ಹಾಗೂ ಶಾಂತರಾಜ್(25) ಮೃತ ಸಹೋದರರು. ತುಂಗಭದ್ರಾ ನದಿಯಿಂದ ಅಕ್ರಮವಾಗಿ ಮರಳು ಸಾಗಿಸುವಾಗ ದುರ್ಘಟನೆ ನಡೆದಿದೆ. ಸಂಜೆ 6ಋ ಬಳಿಕ ಮರಳು ಸಾಗಣೆ ನಿಷೇಧವಿದ್ದರೂ ಜಿಲ್ಲೆಯಲ್ಲಿ ಅಹೋರಾತ್ರಿ ಮರಳು ಸಾಗಣೆ ದಂಧೆ ನಡೆದಿದೆ. ಅಕ್ರಮದಂಧೆ ತಡೆಯುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.

    ರಾತ್ರಿ ಅವಸರದಲ್ಲಿ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಹೋಗಿದ್ದಕ್ಕೆ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಘಟನಾ ಸ್ಥಳಕ್ಕೆ ರಾಯಚೂರು ಡಿವೈಎಸ್‍ಪಿ ಶಿವನಗೌಡ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಇಡಪನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಕ್ಷುಲ್ಲಕ ಕಾರಣಕ್ಕೆ ತಮ್ಮನಿಂದಲೇ ಅಣ್ಣನ ಕೊಲೆ

    ಕ್ಷುಲ್ಲಕ ಕಾರಣಕ್ಕೆ ತಮ್ಮನಿಂದಲೇ ಅಣ್ಣನ ಕೊಲೆ

    ಹಾಸನ: ಕ್ಷುಲ್ಲಕ ಕಾರಣಕ್ಕೆ ಅಣ್ಣನನ್ನೇ ತಮ್ಮ ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೇವಾಲದಕೆರೆ ಗ್ರಾಮದಲ್ಲಿ ನಡೆದಿದೆ.

    ಮೃತಪಟ್ಟ ವ್ಯಕ್ತಿ ರವಿ (47) ಎಂದು ಗುರುತಿಸಲಾಗಿದೆ. ಕಡೂರು ಮೂಲದ ರವಿ ಕಾಫಿ ಪ್ಲಾಂಟರ್ ಸುದೀಶ್ ಎಂಬವವರ ತೋಟದಲ್ಲಿ ಕಾಫಿ ಕುಯ್ಲು ಮಾಡಲು ಹೋಗಿದ್ದು, ಈ ವೇಳೆ ಕಾಫಿ ಬೀಜ ಕುಯ್ಲು ಮಾಡಲು ಚಿಕ್ಕಪ್ಪನ ಮಗ ಪ್ರದೀಪ್(29)ನನ್ನು ಕೆಲಸಕ್ಕೆ ಕರೆದುಕೊಂಡು ಹೋಗಿದ್ದಾರೆ.

    ನಿನ್ನೆ ಇಬ್ಬರು ಕೆಲಸ ಮುಗಿಸಿ ಮದ್ಯಪಾನ ಮಾಡಿ ಮನೆಗೆ ಬಂದು ನಾನ್ ವೆಜ್ ಅಡುಗೆ ಮಾಡಿ ಊಟ ಮುಗಿಸಿದ ನಂತರ ರವಿ ಜಗಳ ಆರಂಭಿಸಿದ್ದಾನೆ. ನಾನೇ ಅಡುಗೆ ಪದಾರ್ಥಗಳನ್ನೆಲ್ಲಾ ತಂದಿದ್ದೀನಿ, ನೀನು ರಾಗಿಹಿಟ್ಟನ್ನು ಕೂಡ ತಂದಿಲ್ಲ ಎಂದು ಬಾಯಿಗೆ ಬಂದಂತೆ ಬೈದು ಪ್ರದೀಪ್‍ನನ್ನು ಮನೆಯಿಂದ ಹೊರಹಾಕಿದ್ದಾನೆ. ರವಿ ಪಾತ್ರೆಗಳನ್ನೆಲ್ಲಾ ಸಹೋದರನ ಮೇಲೆ ಎಸೆದು ಹಲ್ಲೆಗೆ ಮುಂದಾಗಿದ್ದಾನೆ.

    ಇದರಿಂದ ಕೋಪಗೊಂಡ ಪ್ರದೀಪ್ ಕೋಣೆಯೊಳಗೆ ಹೋಗಿ ದೊಣ್ಣೆಯಿಂದ ರವಿ ತಲೆಯ ಭಾಗಕ್ಕೆ ಹೊಡೆದು ಕೊಲೆ ಮಾಡಿ ಶವದ ಪಕ್ಕದಲ್ಲಿಯೇ ಕುಳಿತಿದ್ದಾನೆ. ಇಂದು ಬೆಳಗ್ಗೆ ತೋಟದ ಮಾಲೀಕ ಇಬ್ಬರನ್ನು ಕೆಲಸಕ್ಕೆ ಕರೆಯಲು ಬಂದಾಗ ಕೊಲೆ ನಡೆದಿರುವುದು ವಿಚಾರ ತಿಳಿದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೀಗ ಪೊಲೀಸರು ಆರೋಪಿ ಪ್ರದೀಪ್ ನನ್ನು ಬಂಧಿಸಿದ್ದು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಸಲಾಗಿದೆ.

  • ತಮ್ಮನ ಆತ್ಮಹತ್ಯೆ ಸುದ್ದಿ ಕೇಳಿ ನೇಣಿಗೆ ಕೊರಳೊಡ್ಡಿದ ಅಣ್ಣ

    ತಮ್ಮನ ಆತ್ಮಹತ್ಯೆ ಸುದ್ದಿ ಕೇಳಿ ನೇಣಿಗೆ ಕೊರಳೊಡ್ಡಿದ ಅಣ್ಣ

    ಮೈಸೂರು: ತಮ್ಮನ ಆತ್ಮಹತ್ಯೆ ಸುದ್ದಿ ಕೇಳಿ ಅಣ್ಣ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಮನಕಲಕುವ ಘಟನೆ ಮೈಸೂರಿನ ಎಚ್.ಡಿ.ಕೋಟೆ ತಾಲೂಕಿನ ಎಲೆಗುಂಡಿ ಗ್ರಾಮದಲ್ಲಿ ನಡೆದಿದೆ.

    ವೆಂಕಟೇಶ್(28) ಮತ್ತು ಹರೀಶ್(26) ಮೃತ ಸೋದರರು. ರೈತನಾಗಿದ್ದ ಹರೀಶ್ ಟ್ರ್ಯಾಕ್ಟರ್ ಚಾಲಕ ಸಹ ಆಗಿದ್ದನು. ಹರೀಶ್ ಟ್ರ್ಯಾಕ್ಟರ್ ವೇಗವಾಗಿ ಚಲಾಯಿಸುತ್ತಿದ್ದರಿಂದ ತಂದೆ ಚಿನ್ಮಯಿಗೌಡ ಬುದ್ಧಿ ಹೇಳಿದ್ದರು. ಇತ್ತ ಮೈಸೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಹರೀಶ್ ತಮ್ಮನಿಗೆ ಕರೆ ಮಾಡಿ ನಿಧಾನವಾಗಿ ಟ್ರ್ಯಾಕ್ಟರ್ ಚಲಾಯಿಸುವಂತೆ ತಿಳಿ ಹೇಳಿದ್ದರು. ಆತ್ಮೀಯ ಅಣ್ಣ ತನಗೆ ಬೈದನೆಂದು ನೊಂದ ಹರೀಶ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

    ತಮ್ಮ ಸಾವಿನ ಸುದ್ದಿ ತಿಳಿದ ವೆಂಕಟೇಶ್ ಮಾನಸಿಕವಾಗಿ ಕುಸಿದಿದ್ದರು. ಈ ವೇಳೆ ಮೊಬೈಲ್ ಗೆ ತಮ್ಮನ ಸಾವಿನ ಫೋಟೋಗಳು ಬಂದಿವೆ. ಫೋಟೋ ನೋಡಿ ಮತ್ತಷ್ಟು ಆಘಾತಕ್ಕೊಳಾದ ವೆಂಕಟೇಶ್, ನನ್ನಿಂದಲೇ ತಮ್ಮನ ಸಾವು ಆಯ್ತು ಎಂದು ನೊಂದು ಊರಿಗೆ ಬರುವ ಬದಲು ಸರಗೂರು ರಸ್ತೆ ಕಡೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಅಕ್ಕ-ಪಕ್ಕದಲ್ಲಿ ಸೋದರರ ಅಂತ್ಯಕ್ರಿಯೆ ಮಾಡಲಾಗಿದೆ. ಈ ಸಂಬಂಧ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸೊಂಟಕ್ಕೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿ ಸಹೋದರರು ಆತ್ಮಹತ್ಯೆ

    ಸೊಂಟಕ್ಕೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿ ಸಹೋದರರು ಆತ್ಮಹತ್ಯೆ

    ಕಲಬುರಗಿ: ಸಹೋದರರಿಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಭೂಸನೂರ ಗ್ರಾಮದಲ್ಲಿ ನಡೆದಿದೆ.

    ಸುನೀಲ್ (17) ಹಾಗೂ ಶೇಖರ್ (12) ಆತ್ಮಹತ್ಯೆಗೆ ಶರಣಾದ ಸಹೋದರರು. ಇವರಿಬ್ಬರು ಮನೆಯಲ್ಲಿ ತಂದೆ-ತಾಯಿಯೊಂದಿಗೆ ಜಗಳವಾಡಿದ್ದಾರೆ. ಬಳಿಕ ಹೊಲಕ್ಕೆ ಬಂದು ಸೊಂಟಕ್ಕೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಮೊಬೈಲ್ ವಿಷಯವಾಗಿ ಹೆತ್ತವರ ಜೊತೆ ಜಗಳವಾಡಿಕೊಂಡಿದ್ದಾರೆ. ಇದೇ ಕಾರಣದಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಬ್ಬರಿಗೂ ಈಜು ಬರುವ ಹಿನ್ನೆಲೆ ಸೊಂಟಕ್ಕೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿ ಪ್ರಾಣ ಬಿಟ್ಟಿದ್ದಾರೆ.

    ಘಟನೆ ಸಂಬಂಧ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅತ್ತಿಗೆ ಜೊತೆ ಅಣ್ಣ ಜಗಳ – ಸಹೋದರನ ಎದೆಗೆ ಚಾಕು ಇರಿದ ತಮ್ಮ

    ಅತ್ತಿಗೆ ಜೊತೆ ಅಣ್ಣ ಜಗಳ – ಸಹೋದರನ ಎದೆಗೆ ಚಾಕು ಇರಿದ ತಮ್ಮ

    ಬೆಂಗಳೂರು: ಹಬ್ಬದ ದಿನವೇ ಅಣ್ಣ ತಮ್ಮಂದಿರು ಮಾರಾಕಾಸ್ತ್ರಗಳಿಂದ ಬಡಿದಾಡಿಕೊಂಡಿದ್ದು, ಈ ಗಲಾಟೆಯಲ್ಲಿ ಅಣ್ಣ ಬರ್ಬರವಾಗಿ ಕೊಲೆಯಾಗಿರುವ ಘಟನೆ ಸಿಲಿಕಾನ್ ಸಿಟಿಯ ಶ್ರೀರಾಂಪುರದಲ್ಲಿ ನಡೆದಿದೆ.

    ಕೊಲೆಯಾದ ಅಣ್ಣನನ್ನು ರವಿ (36) ಎಂದು ಗುರುತಿಸಲಾಗಿದೆ. ರವಿ ತಮ್ಮ ಆದಿಶಂಕರ್ ಅಣ್ಣನ ಎದೆಗೆ ಚಾಕು ಹಾಕಿ ಕೊಲೆ ಮಾಡಿದ್ದಾನೆ. ಅದಿಶಂಕರ್ ಎದೆ ಭಾಗಕ್ಕೆ ಚಾಕು ಹಾಕಿರುವ ಕಾರಣ ರವಿ ತೀವ್ರ ರಕ್ತಸಾವ್ರದಿಂದ ಆಸ್ಪತ್ರೆಗೆ ಕರೆತರುವ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದಾನೆ.

    ಇಂದು ಹಬ್ಬವಾದರು ಕುಡಿದು ಬಂದಿದ್ದ ರವಿ ಕುಡಿದ ಅಮಲಿನಲ್ಲಿ ಪತ್ನಿ ರಾಧಿಕಾ ಜೊತೆ ಜಗಳವಾಡುತ್ತಿದ್ದ. ಈ ಜಗಳ ಬಿಡಿಸಲು ರವಿ ಕಿರಿಯ ಸಹೋದರರಾದ ಆದಿಶಂಕರ್ ಹಾಗೂ ಕಾರ್ತಿಕ್ ಮಧ್ಯ ಪ್ರವೇಶಿಸಿದ್ದಾರೆ. ಇದರಿಂದ ಕೋಪಗೊಂಡ ರವಿ ಸಹೋದರರ ಮೇಲೆ ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಚಾಕು ಕಿತ್ತುಕೊಂಡ ಆದಿಶಂಕರ್ ಅಣ್ಣನ ಎದೆಗೆ ಇರಿದು ಕೊಲೆ ಮಾಡಿದ್ದಾನೆ.

    ಈ ಸಂಬಂಧ ಸ್ಥಳಕ್ಕೆ ಶ್ರೀರಾಂಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ಆದಿಶಂಕರ್ ಅನ್ನು ವಶಕ್ಕೆ ಪಡೆದಿದ್ದಾರೆ. ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನಾಲ್ವರು ಮಕ್ಕಳು ಸೇರಿ ಆರು ಮಂದಿಯ ಶವ ಫ್ಲ್ಯಾಟ್‍ನಲ್ಲಿ ಪತ್ತೆ

    ನಾಲ್ವರು ಮಕ್ಕಳು ಸೇರಿ ಆರು ಮಂದಿಯ ಶವ ಫ್ಲ್ಯಾಟ್‍ನಲ್ಲಿ ಪತ್ತೆ

    – ಮಕ್ಕಳನ್ನ ಹೊರಗೆ ಕರ್ಕೊಂಡು ಹೋಗಿದ್ದ ಸಹೋದರು
    – ಎಲ್ಲರೂ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

    ಗಾಂಧಿನಗರ: ನಾಲ್ಕು ಮಕ್ಕಳು ಸೇರಿದಂತೆ ಕುಟುಂಬದ ಆರು ಸದಸ್ಯರು ಖಾಲಿ ಫ್ಲ್ಯಾಟ್‍ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಗುಜರಾತ್‍ನ ಅಹಮದಾಬಾದ್ ನಗರದಲ್ಲಿ ನಡೆದಿದೆ.

    ಅಮ್ರಿಶ್ ಪಟೇಲ್ (42) ಮತ್ತು ಗೌರಂಗ್ ಪಟೇಲ್ (40) ಮೃತ ಸಹೋದರರು. ಇವರ ಮಕ್ಕಳನ್ನು ಕೀರ್ತಿ (9) ಮತ್ತು ಸಾನ್ವಿ (7) ಮಯೂರ್ (12) ಮತ್ತು ಧ್ರುವ್ (12) ಎಂದು ಗುರುತಿಸಲಾಗಿದೆ.

    ಅಮ್ರಿಶ್ ಮತ್ತು ಗೌರಂಗ್ ಇಬ್ಬರು ಸಹೋದರರು ಹಾಗೂ ಅವರ ನಾಲ್ವರು ಮಕ್ಕಳು ಇಂದು ಮುಂಜಾನೆ ಅಹಮದಾಬಾದ್ ನಗರದ ಖಾಲಿ ಫ್ಲ್ಯಾಟ್‍ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಇನ್ಸ್ ಪೆಕ್ಟರ್ ಡಿ.ಆರ್.ಗೋಹಿಲ್ ತಿಳಿಸಿದ್ದಾರೆ.

    ಪಟೇಲ್ ಸಹೋದರರು ಅಹಮದಾಬಾದ್ ನಗರದ ಬೇರೆ ಬೇರೆ ಪ್ರದೇಶಗಳಲ್ಲಿ ವಾಸಿಸುತ್ತಿದ್ದರು. ಬುಧವಾರ ಸಹೋದರರು ಔಟಿಂಗ್ ಹೋಗುವುದಾಗಿ ತಮ್ಮ ಪತ್ನಿಯರಿಗೆ ತಿಳಿಸಿ ತಮ್ಮ ಮಕ್ಕಳೊಂದಿಗೆ ಮನೆಯಿಂದ ಕರೆದುಕೊಂಡು ಹೋಗಿದ್ದಾರೆ. ಇಬ್ಬರು ಗುರುವಾರ ರಾತ್ರಿಯವರೆಗೂ ಮನೆಗೆ ವಾಪಸ್ ಬಂದಿರಲಿಲ್ಲ. ಹೀಗಾಗಿ ಅವರ ಪತ್ನಿಯರು ಖಾಲಿ ಫ್ಲ್ಯಾಟ್‍ಗೆ ಹೋಗಿದ್ದಾರೆ. ಅಲ್ಲಿ ಫ್ಲ್ಯಾಟ್ ಒಳಗಿನಿಂದ ಲಾಕ್ ಆಗಿತ್ತು ನಂತರ ಮಧ್ಯರಾತ್ರಿ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ ಎಂದು ಅಧಿಕಾರಿ ಹೇಳಿದರು.

    ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಬಾಗಿಲು ಮುರಿದು ಒಳಗೆ ಹೋಗಿದ್ದಾರೆ. ಅಲ್ಲಿ ನಾಲ್ವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಡ್ರಾಯಿಂಗ್ ರೂಮಿನಲ್ಲಿ ಇಬ್ಬರು ಸಹೋದರರ ಮೃತದೇಹ ಪತ್ತೆಯಾಗಿದೆ. ಕೀರ್ತಿ, ಸಾನ್ವಿ, ಮಯೂರ್ ಮತ್ತು ಧ್ರುವ್ ಮೃತದೇಹ ಬೆಡ್‍ರೂಮಿನಲ್ಲಿ ಪತ್ತೆಯಾಗಿವೆ. ಎಲ್ಲರೂ ನೇಣು ಬಿಗಿದು ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಗೋಹಿಲ್ ತಿಳಿಸಿದರು.

    ಸಹೋದರರಿಬ್ಬರು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಮಕ್ಕಳಿಗೆ ಊಟದಲ್ಲಿ ನಿದ್ದೆ ಬರುವ ಔಷಧಿಯನ್ನು ನೀಡಿದ್ದಾರೆ. ಅದನ್ನು ತಿಂದು ಮಕ್ಕಳು ನಿದ್ದೆ ಮಾಡುವಾಗ ಅವರನ್ನು ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

    ಸದ್ಯಕ್ಕೆ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ಕಳುಹಿಸಲಾಗಿದ್ದು, ತನಿಖೆ ತನಿಖೆ ಮುಂದುವರಿದಿದೆ.

  • ರಂಭಾಪುರಿ ಮಠಕ್ಕೆ ನಟ ಜಗ್ಗೇಶ್, ಕೋಮಲ್ ಭೇಟಿ

    ರಂಭಾಪುರಿ ಮಠಕ್ಕೆ ನಟ ಜಗ್ಗೇಶ್, ಕೋಮಲ್ ಭೇಟಿ

    ಚಿಕ್ಕಮಗಳೂರು: ಸ್ಯಾಂಡಲ್‍ವುಡ್ ನಟರು ಹಾಗೂ ಸಹೋದರರು ಅದ ನಟ ಜಗ್ಗೇಶ್ ಹಾಗೂ ಕೋಮಲ್ ರಂಭಾಪುರಿ ಪೀಠಕ್ಕೆ ಭೇಟಿ ನೀಡಿ ರಂಭಾಪುರಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.

    ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಗೌರಿಗದ್ದೆ ಗ್ರಾಮದ ವಿನಯ್ ಗುರೂಜಿಯ ಭೇಟಿಗೆ ಬಂದು ಸ್ಯಾಂಡಲ್‍ವುಡ್ ಸಹೋದರರು ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ಪಂಚಪೀಠಗಳಲ್ಲೇ ಮೊದಲನೇ ಪೀಠ ರಂಭಾಪುರಿ ಭೇಟಿ ನೀಡಿ ರಂಭಾಪುರಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.

    ಮಠದ ಆವರಣದಲ್ಲಿ ಸ್ವಲ್ಪ ಹೊತ್ತು ಕಾಲಕಳೆದ ಚಂದನವನದ ಸಹೋದರರು ರಂಭಾಪುರಿ ಶ್ರೀಗಳ ಆಶೀರ್ವಾದದ ಬಳಿಕ ಕೆಲ ಹೊತ್ತು ಶ್ರೀಗಳ ಜೊತೆ ಮಾತುಕತೆ ನಡೆಸಿದ್ದಾರೆ. ಸುಮಾರು ಅರ್ಧ ಗಂಟೆಗಳ ಕಾಲ ಮಠದ ಆವರಣದಲ್ಲಿ ಕಾಲಕಳೆದಿದ್ದಾರೆ. ಮಠದ ಆವರಣದಲ್ಲಿರೋ ಶಕ್ತಿಮಾತೆ ಚೌಡೇಶ್ವರಿ, ರೇಣುಕಾಚಾರ್ಯ ಮಂದಿರ, ವೀರಭದ್ರಸ್ವಾಮಿ ದೇವಾಲಯ, ಜೀವನ್ಮುಕ್ತಿ ಸ್ಥಳ ಹಾಗೂ ಮಠದ ಆವರಣದಲ್ಲಿ ವಿಭೂತಿಯಲ್ಲಿ ಬರೆದ ಬಸವಣ್ಣ ಅದೇ ಆಕಾರದಲ್ಲಿ ಬೆಳೆಯುತ್ತಿದ್ದು, ಆ ಹರಕೆಯ ನಂದಿಯ ದರ್ಶನ ಪಡೆದಿದ್ದಾರೆ.

    ಮಠದ ಆವರಣದಲ್ಲಿನ ಎಲ್ಲಾ ದೇವಾಲಗಳಿಗೂ ಭೇಟಿ ಕೊಟ್ಟ ಜಗ್ಗೇಶ್ ಸಹೋದರರು ಮಠದಲ್ಲಿ ಕಾಫಿ ಕುಡಿದು, ರಂಭಾಪುರಿ ಶ್ರೀಗಳ ದರ್ಶನ ಪಡೆದಿದ್ದಾರೆ. ರಂಭಾಪುರಿ ಮಠದ ಬಳಿಕ ವಿನಯ್ ಗುರೂಜಿಯವರ ದರ್ಶನಕ್ಕಾಗಿ ಕೊಪ್ಪ ತಾಲೂಕಿನ ಗೌರಿಗದ್ದೆ ಆಶ್ರಮಕ್ಕೆ ತೆರಳಿದ್ದಾರೆ.

  • ತಾಯಿಯೊಂದಿಗೆ ಜಗಳವಾಡಿದ ಅಣ್ಣನನ್ನೇ ಗುಂಡಿಕ್ಕಿ ಕೊಂದ ತಮ್ಮ

    ತಾಯಿಯೊಂದಿಗೆ ಜಗಳವಾಡಿದ ಅಣ್ಣನನ್ನೇ ಗುಂಡಿಕ್ಕಿ ಕೊಂದ ತಮ್ಮ

    ಮಡಿಕೇರಿ: ತಾಯಿಯೊಂದಿಗೆ ಜಗಳವಾಡಿದ ಅಣ್ಣನನ್ನೇ ತಮ್ಮನೊಬ್ಬ ಗುಂಡಿಕ್ಕಿ ಕೊಲೆಗೈದ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಬಿಳಗುಂದದಲ್ಲಿ ಇಂದು ನಡೆದಿದೆ.

    ಬಿಳಗುಂದದ ಸುರೇಶ್ (48) ಹತ್ಯೆಯಾದ ವ್ಯಕ್ತಿ. ಕುಮಾರ್ ಕೊಲೆಗೈದ ಆರೋಪಿ. ಇಬ್ಬರು ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳಾಗಿದ್ದು, ಕುಮಾರ್ ಮದ್ಯದ ಮತ್ತಿನಲ್ಲಿ ಕೊಲೆಗೈದಿದ್ದಾನೆ ಎನ್ನಲಾಗಿದೆ.

    ಸುರೇಶ್ ಇಂದು ಕುಮಾರ್ ತಾಯಿಯೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡುತ್ತಿದ್ದ. ಈ ವೇಳೆ ಮದ್ಯದ ಅಮಲಿನಲ್ಲಿದ್ದ ಕುಮಾರ್ ಏಕಾಏಕಿ ಮನೆಯಿಂದ ಗನ್ ತಂದು ಸುರೇಶ್ ಎದೆಗೆ ಶೂಟ್ ಮಾಡಿದ್ದಾನೆ. ಪರಿಣಾಮ ಎದೆಗೆ ಹೊಕ್ಕು ಸುರೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಆದರೆ ಇದನ್ನು ತಿಳಿಯದೆ ವಿರಾಜಪೇಟೆ ಆಸ್ಪತ್ರೆಗೆ ಸುರೇಶ್ ಮೃತದೇಹವನ್ನು ಸಾಗಿಸಲಾಗಿತ್ತು.

    ಕ್ಷುಲ್ಲಕ ಕಾರಣಕ್ಕೆ ಗುಂಡು ಹಾರಿಸಿ ಹತ್ಯೆಗೈದಿದ್ದ ಪಾಪಿ ಕುಮಾರ್ ಘಟನಾ ಸ್ಥಳದಿಂದ ಪರಾರಿಯಾಗಿದ್ದ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ವಿರಾಜಪೇಟೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸುರೇಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಯಲ್ಲೇ ಇರಿಸಿ, ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದರು.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ವಿರಾಜಪೇಟೆ ಪೊಲೀಸರು ಕೆಲವೇ ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಸುರೇಶ್‍ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

  • ಅಣ್ಣನನ್ನು ಕೊಂದು ಹುಣಸೆಮರಕ್ಕೆ ನೇತು ಹಾಕಿದ ತಮ್ಮ

    ಅಣ್ಣನನ್ನು ಕೊಂದು ಹುಣಸೆಮರಕ್ಕೆ ನೇತು ಹಾಕಿದ ತಮ್ಮ

    ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ತಮ್ಮನೊಬ್ಬ ತನ್ನ ಸ್ವಂತ ಅಣ್ಣನನ್ನು ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಮಾವನೂರಿನಲ್ಲಿ ನಡೆದಿದೆ.

    ಅಣ್ಣ ಮಂಜುನಾಥ ಸುಳ್ಳದ ಕೊಲೆಯಾದ ವ್ಯಕ್ತಿ. ಆರೋಪಿಯನ್ನು ಕಲ್ಮೇಶ ಸುಳ್ಳದ ಎಂದು ಗುರುತಿಸಲಾಗಿದೆ. ಮೇ 9ರಂದು ಪಾನಮತ್ತನಾಗಿ ಮನೆಗೆ ಬಂದಿದ್ದ ಮಂಜುನಾಥ, ಆಸ್ತಿ ಮತ್ತು ಮನೆಯಲ್ಲಿ ತನಗೆ ಪಾಲು ಕೊಡುವಂತೆ ತಾಯಿ ಶಿವಲಿಂಗವ್ವ ಜೊತೆ ಜಗಳವಾಡಿ ಅವರ ಮೇಲೆ ಹಲ್ಲೆ ನಡೆಸಿದ್ದಾನೆ.

    ಈ ವಿಚಾರ ತಿಳಿದು ಕೆರಳಿದ ತಮ್ಮ ಕಲ್ಮೇಶ ಅಣ್ಣನ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ಶವವನ್ನು ಜಮೀನಿಗೆ ಹೊತ್ತುಕೊಂಡು ಹೋಗಿ, ಹುಣಸೆಮರಕ್ಕೆ ನೇತು ಹಾಕಿ, ಅಣ್ಣ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನಂಬಿಸಲು ಯತ್ನಿಸಿದ್ದಾನೆ. ಆದರೆ ತಲೆಗೆ ಪೆಟ್ಟುಬಂದಿದ್ದ ಕಾರಣ ಇಂದು ಆತ್ಮಹತ್ಯೆ ಅಲ್ಲ ಕೊಲೆ ಎಂದು ತಿಳಿದು ಬಂದಿದೆ.

    ಈ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • ಆಸ್ತಿಗಾಗಿ ಅಣ್ಣನಿಗೆ ಗುಂಡಿಕ್ಕಿದ ತಮ್ಮ

    ಆಸ್ತಿಗಾಗಿ ಅಣ್ಣನಿಗೆ ಗುಂಡಿಕ್ಕಿದ ತಮ್ಮ

    ಚಿಕ್ಕಮಗಳೂರು: ಕೊರೊನಾ ಭೀತಿ ನಡುವೆ ಆಸ್ತಿಗಾಗಿ ಕಿತ್ತಾಟ ನಡೆದಿದ್ದು, ಕೊಲೆಯಲ್ಲಿ ಅಂತ್ಯವಾದ ಘಟನೆ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.

    ಮೂಡಿಗೆರೆ ತಾಲೂಕಿನ ಚೇಗು ಗ್ರಾಮದ ನಿವಾಸಿ ಮಂಜಯ್ಯ (58) ಮೃತ ದುರ್ದೈವಿ. ಲಕ್ಷ್ಮಣ ಕೊಲೆಗೈದ ಆರೋಪಿ. ಸೋಮವಾರ ರಾತ್ರಿ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ತೋಟದ ವಿಚಾರವಾಗಿ ಮಂಜಯ್ಯ ಹಾಗೂ ಲಕ್ಷ್ಮಣ ಸಹೋದರರ ನಡುವೆ ಕಳೆದ ಕೆಲವು ದಿನಗಳಿಂದ ಜಗಳ ನಡೆದಿತ್ತು. ಈ ವಿಚಾರವಾಗಿ ಸೋಮವಾರವೂ ಸಹೋದರರು ಪರಸ್ಪರ ಗಲಾಟೆ ಮಾಡಿಕೊಂಡಿದ್ದರು. ಈ ವೇಳೆ ಕೋಪಗೊಂಡ ಲಕ್ಷ್ಮಣ ನಾಡ ಬಂದೂಕಿನಿಂದ ಅಣ್ಣನ ಮೇಲೆ ಪೈರಿಂಗ್ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡ ಮಂಜಯ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.