Tag: brook

  • ಹಳ್ಳ ತುಂಬಿ ರಸ್ತೆ ಮಾರ್ಗ ಬಂದ್ – ಪರೀಕ್ಷೆಗೆ ತೆರಳಲು SSLC ವಿದ್ಯಾರ್ಥಿಗಳ ಪರದಾಟ

    ಹಳ್ಳ ತುಂಬಿ ರಸ್ತೆ ಮಾರ್ಗ ಬಂದ್ – ಪರೀಕ್ಷೆಗೆ ತೆರಳಲು SSLC ವಿದ್ಯಾರ್ಥಿಗಳ ಪರದಾಟ

    ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ದೇವರಗುಡಿ ಗ್ರಾಮದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ಪರೀಕ್ಷೆಗೆ ತೆರಳಲು ಪರದಾಡಿದ ಘಟನೆ ನಡೆದಿದೆ.

    ಮಳೆಯಿಂದ ಗ್ರಾಮದ ಹಳ್ಳತುಂಬಿ ಹರಿಯುತ್ತಿದ್ದು ರಸ್ತೆ ಮಾರ್ಗ ಬಂದ್ ಆಗಿರುವ ಹಿನ್ನೆಲೆ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರ ಕೇವಲ ಮೂರು ಕಿ.ಮೀ ದೂರ ಇದ್ದರೂ, ತೆರಳಲು ಅಸಾಧ್ಯವಾಗಿದೆ. ಹಳ್ಳ ದಾಟಲು ವಿಫಲಯತ್ನ ನಡೆಸಿ ವಿದ್ಯಾರ್ಥಿಗಳು ವಾಪಸ್ ಬಂದಿದ್ದಾರೆ.

    ಪಗಡದಿನ್ನಿ ಗ್ರಾಮದಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ತೆರಳಲು ಸದ್ಯ ರಸ್ತೆಯಿಲ್ಲ. ಹೀಗಾಗಿ ದೇವರಗುಡಿ ಗ್ರಾಮದ 10 ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಬೇರೆ ದಾರಿಯಿಲ್ಲದೆ ಸುಮಾರು 25 ಕಿ.ಮೀ ಸುತ್ತುವರೆದು ಪರೀಕ್ಷಾ ಕೇಂದ್ರಕ್ಕೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದ್ದು, ವಿದ್ಯಾರ್ಥಿಗಳು ಸುತ್ತುವರಿದುಕೊಂಡು ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದಾರೆ. ಹಳ್ಳಕ್ಕೆ ಸೇತುವೆ ನಿರ್ಮಿಸದ ಹಿನ್ನೆಲೆ ವಿದ್ಯಾರ್ಥಿಗಳು ಗ್ರಾಮಸ್ಥರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

    ಗ್ರಾಮಕ್ಕೆ ರಸ್ತೆ ನಿರ್ಮಾಣ ಮಾಡಲಾಗಿದ್ದು, ಸೇತುವೆ ಕಾಮಗಾರಿ ಬಗ್ಗೆ ಮಾತ್ರ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಜಮೀನುಗಳಿಗೆ ತೆರಳಲು ರೈತರು ಸಹ ನಿತ್ಯ ಹರಸಾಹಾಸ ಪಡುವಂತಾಗಿದೆ. ಈಗಾಗಲೇ ಅಧಿಕಾರಿಗಳು ಹಾಗೂ ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಅಂತ ಗ್ರಾಮಸ್ಥ ಪ್ರಭು ದೇವರಗುಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನೀವು ನೋಡಿಕೊಂಡ ಹಾಗೆ, ನಿಮ್ಮ ಮಕ್ಕಳನ್ನು ನೋಡಿಕೊಳ್ಳುತ್ತೇವೆ: ಸಚಿವ ಸುರೇಶ್ ಕುಮಾರ್

  • ಮಳೆಯಿಂದಾಗಿ ಹಳ್ಳದಾಟಲು ರೈತರ ಪರದಾಟ – ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ

    ಮಳೆಯಿಂದಾಗಿ ಹಳ್ಳದಾಟಲು ರೈತರ ಪರದಾಟ – ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ

    ಬೀದರ್: ಮುಂಗಾರು ಮಳೆಯ ಆರ್ಭಟಕ್ಕೆ ಬೀದರ್ ನಲ್ಲಿ ಮಳೆಯ ಅವಾಂತರ ಸೃಷ್ಟಿಯಾಗಿದ್ದು, ಹಳ್ಳದಾಟಲು ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

    ಔರಾದ್ ತಾಲೂಕಿನಲ್ಲಿ ನಿನ್ನೆ ಸಂಜೆ ಸುರಿದ ಮಳೆಗೆ ತಾಲೂಕಿನ ಜೋಜನಾ ಗ್ರಾಮದ ರೈತರು ಹಳ್ಳದಾಟಲು ಕೆಲವು ಗಂಟೆಗಳ ಕಾಲ ಪರದಾಡಿದ್ದಾರೆ. ಕೂಲಿ ಕೆಲಸಕ್ಕಾಗಿ ಜಮೀನಿಗೆ ಹೋಗಿದ್ದ ರೈತರು ಸಂಜೆ ಬರುವ ವೇಳೆಗೆ ಹಳ್ಳ ತುಂಬಿ ಜೀವ ಕೈಯಲ್ಲಿ ಹಿಡಿದು ಹಳ್ಳ ದಾಟಿದ್ದಾರೆ.

    ರೈತರು ಜಮೀನಿಗೆ ಹೋಗಲು ಕಷ್ಟವಾಗುತ್ತಿದ್ದು, ಇಲ್ಲಿ ಸೇತುವೆ ನಿರ್ಮಾಣ ಮಾಡಿ ಎಂದು ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ರೈತರು ಮನವಿ ಸಲ್ಲಿಸಿದ್ದರು. ಆದರೆ ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಪ್ರತಿ ಬಾರಿ ಮಳೆ ಬಂದಾಗ ರೈತರು ಹಳ್ಳ ದಾಟಲು ಹರ ಸಾಹಸಪಡುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಸ್ವಕ್ಷೇತ್ರದಲ್ಲಿ ಜನರು ಪರದಾಡುತ್ತಿದ್ದು ಮಹಾ ನಿರ್ಲಕ್ಷ್ಯಕ್ಕೆ ರೈತರು ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಇದನ್ನೂ ಓದಿ:ಹಿಮಾಚಲ ಪ್ರದೇಶದ ಮಾಜಿ ಸಿಎಂ ವೀರಭದ್ರ ಸಿಂಗ್ ನಿಧನ

  • ಭಾರೀ ಮಳೆ- ಹಳ್ಳದಲ್ಲಿ ಕೊಚ್ಚಿಹೋದ ದಂಪತಿ

    ಭಾರೀ ಮಳೆ- ಹಳ್ಳದಲ್ಲಿ ಕೊಚ್ಚಿಹೋದ ದಂಪತಿ

    ವಿಜಯನಗರ: ಕಳೆದ ರಾತ್ರಿ ಬಳ್ಳಾರಿ ಹಾಗೂ ವಿಜಯನಗರ ಅವಳಿ ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆ ಅವಾಂತರ ಸೃಷ್ಟಿಸಿದ್ದು, ದಂಪತಿ ಹಳ್ಳದಲ್ಲಿ ಕೊಚ್ಚಿ ಹೋದ ಧಾರುಣ ಘಟನೆ ನಡೆದಿದೆ.

    ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕಾಲ್ವಿ ಗ್ರಾಮದ ಮಾರ್ಗ ಮಧ್ಯದಲ್ಲಿರುವ ಹಳ್ಳದ ಸೇತುವೆಯಿಂದ ದಂಪತಿ ಕೊಚ್ಚಿ ಹೋಗಿದ್ದಾರೆ. ಹಗರಿಬೊಮ್ಮಹಳ್ಳಿ ತಾಲೂಕಿನ ತಂಬ್ರಹಳ್ಳಿ-ಮುತ್ಕೂರು ಗ್ರಾಮದ ನಿವಾಸಿಗಳಾದ ಮಲ್ಲಿಕಾರ್ಜುನ (55) ಹಾಗೂ ಸುಮಂಗಲಾ(48) ಸಾವಿಗೀಡಾದ ದಂಪತಿ.

    ಮಂಗಳವಾರ ಮುಂಡರಗಿ ತಾಲೂಕಿನ ತಳಕಲ್ ಗ್ರಾಮದಿಂದ ಮುತ್ಕೂರು ಗ್ರಾಮಕ್ಕೆ ವಾಪಾಸಾಗುವ ವೇಳೆ ಈ ದುರ್ಘಟನೆ ನಡೆದಿದೆ. ತಡ ರಾತ್ರಿ ಹಳ್ಳವನ್ನು ದಾಟುವಾಗ ಬೈಕ್ ಸಮೇತ ಕೊಚ್ಚಿಹೋಗಿದ್ದು, ಬೆಳಗಿನ ಜಾವ ಪತಿಯ ಮೃತದೇಹ ಪತ್ತೆಯಾಗಿದೆ. ಪತ್ನಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.

    ನಿನ್ನೆ ತಡರಾತ್ರಿ ಸುರಿದ ಭಾರೀ ಮಳೆಗೆ ಹಳ್ಳ ತುಂಬಿ ಹರಿದಿದ್ದು, ನೀರು ರಭಸವಾಗಿ ಹರಿಯುತ್ತಿರುವಾಗಲೇ ಬೈಕ್ ನಲ್ಲಿ ಹಳ್ಳ ದಾಟಲು ಹೋಗಿ ದಂಪತಿ ಕೊಚ್ಚಿಹೋಗಿದ್ದಾರೆ. ನೀರು ರಭಸವಾಗಿ ಹರಿಯುತ್ತಿರುವುದನ್ನು ಗಮನಿಸದೆ ಸೇತುವೆ ದಾಟಲು ಯತ್ನಿಸಿದ್ದಾರೆ. ಹೀಗಾಗಿ ಅವಘಡ ಸಂಭವಿಸಿದೆ.

  • ಹಳ್ಳದಲ್ಲಿ ಮೀನು ಹಿಡಿಯಲು ಹೋದ ಇಬ್ಬರು ಬಾಲಕರು ನಾಪತ್ತೆ

    ಹಳ್ಳದಲ್ಲಿ ಮೀನು ಹಿಡಿಯಲು ಹೋದ ಇಬ್ಬರು ಬಾಲಕರು ನಾಪತ್ತೆ

    ಚಿತ್ರದುರ್ಗ: ಮೀನು ಹಿಡಿಯಲು ಹೋದ ಇಬ್ಬರು ಬಾಲಕರು ನಾಪತ್ತೆಯಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ನರಸೀಪುರ ಗ್ರಾಮದ ಹಿರೇಹಳ್ಳದಲ್ಲಿ ನಡೆದಿದೆ.

    ಗುರುವಾರ ಮಧ್ಯಾಹ್ನ ಮೀನು ಹಿಡಿಯಲು ತೆರಳಿದ್ದ, ದೇವಪುರ ಗ್ರಾಮದ ಜಯಂತ್ (13) ಹಾಗು ಗೌನಹಳ್ಳಿಯ ಪ್ರಜ್ವಲ್ (12) ಸಂಜೆಯ ಬಳಿಕ ನಾಪತ್ತೆಯಾಗಿದ್ದಾರೆ. ಹೀಗಾಗಿ ನಾಪತ್ತೆಯಾದ ಬಾಲಕರಿಗಾಗಿ ತಡರಾತ್ರಿಯವರೆಗೆ ಶೋಧ ಕಾರ್ಯ ಚುರುಕಾಗಿ ನಡೆದಿದ್ದು ಘಟನಾ ಸ್ಥಳಕ್ಕೆ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಭೇಟಿ ನೀಡಿದ್ದರು.

    ಶಾಸಕರು ಕೂಡ ಶೋಧ ಕಾರ್ಯದಲ್ಲಿ ಭಾಗಿಯಾಗಿದ್ದರು. ಆದರೆ ಕತ್ತಲಾದ ಕಾರಣ ಕಾರ್ಯಚರಣೆಯನ್ನು ನಿಲ್ಲಿಸಲಾಗಿತ್ತು. ಆದರೆ ಮತ್ತೆ ಇಂದು ಬೆಳಿಗ್ಗೆ 6 ಗಂಟೆಯಿಂದಲೇ ಬಾಲಕರ ಪತ್ತೆಗಾಗಿ, ಅಗ್ನಿಶಾಮಕದಳ ಸಿಬ್ಬಂದಿ, ಪೊಲೀಸರು ಹಾಗೂ ಕ್ರೀಡಾ ಇಲಾಖೆ ಅಧಿಕಾರಿಗಳೆಲ್ಲರೂ ಒಟ್ಟಾಗಿ ಹಳ್ಳದಲ್ಲಿ ಸರ್ಚ್ ಹುಡುಕುತ್ತಿದ್ದಾರೆ. ಈ ಪ್ರಕರಣ ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

  • ಸ್ವಲ್ಪ ಯಾಮಾರಿದ್ರೂ ನೀರುಪಾಲು- ಮೇಲ್ಸೆತುವೆ ಇಲ್ಲದ ಹಳ್ಳ ದಾಟಿ ಶಾಲೆಗೆ ಹೋಗ್ತಿದ್ದಾರೆ ವಿದ್ಯಾರ್ಥಿಗಳು

    ಸ್ವಲ್ಪ ಯಾಮಾರಿದ್ರೂ ನೀರುಪಾಲು- ಮೇಲ್ಸೆತುವೆ ಇಲ್ಲದ ಹಳ್ಳ ದಾಟಿ ಶಾಲೆಗೆ ಹೋಗ್ತಿದ್ದಾರೆ ವಿದ್ಯಾರ್ಥಿಗಳು

    ಕೊಪ್ಪಳ: ಜಿಲ್ಲೆಯ ಬಳಗೇರಿ ಗ್ರಾಮದಲ್ಲಿರುವ ಹಳ್ಳಕ್ಕೆ ಮೇಲ್ಸೆತುವೆ ಇರದ ಪರಿಣಾಮ ಜೀವ ಕೈಯಲ್ಲಿ ಇಟ್ಟುಕೊಂಡು, ಭಯದಿಂದ ತುಂಬಿ ಹರಿಯುವ ಹಳ್ಳವನ್ನು ದಾಟಿ ನೂರಾರು ವಿದ್ಯಾರ್ಥಿಗಳು ಶಾಲೆಗೆ ಹೋಗುತ್ತಿದ್ದಾರೆ.

    ಜಿಲ್ಲೆಯ ಕುಕನೂರು ತಾಲೂಕಿನ ಬಳಗೇರಿ ಗ್ರಾಮದಲ್ಲಿರುವ ಮೇಲ್ಸೆತುವೆ ಇರದ ಹಳ್ಳವನ್ನು ದಾಟಿ ವಿದ್ಯಾರ್ಥಿಗಳು ಶಾಲೆಗೆ ಹೋಗಬೇಕಾದ ಪರಸ್ಥಿತಿ ಎದುರಾಗಿದೆ. ಗುರುವಾರ ಸುರಿದ ಮಳೆಗೆ ಹಳ್ಳ ತುಂಬಿ ಹರಿಯುತ್ತಿದ್ದು, ಈ ಹಳ್ಳಕ್ಕೆ ಮೇಲ್ಸೆತುವೆ ಇರದ ಕಾರಣ ಜನರು ಹಳ್ಳದಾಚೆಗೆ ತಲುಪಬೇಕೆಂದರೆ ಹರಿಯುವ ನೀರಿನಲ್ಲೇ ನಡೆದು ಸಾಗಿ ಮತ್ತೊಂದು ಕಡೆಗೆ ಹೋಗಬೇಕಿದೆ.

    ಪ್ರತಿನಿತ್ಯ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಗೆ ಹೋಗುವಾಗ ಹಾಗೂ ಶಾಲೆಯಿಂದ ಮರಳಿ ಗ್ರಾಮಕ್ಕೆ ಹಿಂದಿರುಗುವಾಗ ಇದೇ ಹಳ್ಳದಲ್ಲಿಯೇ ಸಂಚರಿಸುತ್ತಿದ್ದಾರೆ. ಹಳ್ಳವನ್ನು ದಾಟುವ ವೇಳೆಯಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ಏನಾದರೂ ಅನಾಹುತ ಆಗುವ ಮೊದಲು ಜಿಲ್ಲಾಡಳಿತ ಎಚ್ಚೆತ್ತುಕೊಂಡು ಮೇಲ್ಸೆತುವೆ ನಿರ್ಮಿಸಬೇಕಿದೆ.