Tag: Brinjal

  • ಬೆಲೆ ಏರಿಕೆ ವಿರೋಧಿಸಿ ಸದನದಲ್ಲಿ ಹಸಿ ಬದನೆಕಾಯಿ ತಿಂದ ಸಂಸದೆ

    ಬೆಲೆ ಏರಿಕೆ ವಿರೋಧಿಸಿ ಸದನದಲ್ಲಿ ಹಸಿ ಬದನೆಕಾಯಿ ತಿಂದ ಸಂಸದೆ

    ನವದೆಹಲಿ: ಬೆಲೆ ಏರಿಕೆ ವಿರೋಧಿಸಿ ತೃಣಮೂಲ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಲೋಕಸಭೆಯಲ್ಲಿ ಎದ್ದು ನಿಂತು ಹಸಿ ಬದನೆಕಾಯಿಯನ್ನು ತಿಂದಿದ್ದಾರೆ.

    ಮಳೆಗಾಲದ ಸಂಸತ್ ಅಧಿವೇಶನ ಶುರುವಾಗಿ ಎರಡು ವಾರ ಮುಗಿದ ನಂತರ ಸುಗಮ ಕಲಾಪ ನಡೆದಿದೆ. ಕಾಂಗ್ರೆಸ್‍ನ ನಾಲ್ವರು ಸಂಸದರ ಮೇಲಿನ ಅಮಾನತು ರದ್ದು ಬೆನ್ನಲ್ಲೇ ಸುಗಮ ಕಲಾಪಕ್ಕೆ ವಿಪಕ್ಷಗಳು ಅವಕಾಶ ಮಾಡಿಕೊಟ್ಟಿದೆ. ಇಂದು ಜಿಎಸ್‍ಟಿ ಹೇರಿಕೆ, ಹಣದುಬ್ಬರ ಮೇಲೆ ಚರ್ಚೆಗೆ ಕೇಂದ್ರ ಸರ್ಕಾರ ಕೊನೆಗೂ ಅವಕಾಶ ಮಾಡಿಕೊಟ್ಟಿದೆ. ಇವತ್ತು ಬೆಳಗ್ಗೆ ಕಲಾಪ ಶುರುವಾಗುತ್ತಲೇ ದರ ಏರಿಕೆ ಪ್ರಸ್ತಾಪಿಸಿ ಸಂಸತ್‍ನ ಉಭಯ ಸದನಗಳಲ್ಲೂ ವಿಪಕ್ಷಗಳು ಗದ್ದಲ ಎಬ್ಬಿಸಿದರು.

    ಹಣದುಬ್ಬರ, ತೈಲ ಬೆಲೆ ಏರಿಕೆ ಪ್ರಸ್ತಾಪಿಸಿದ ಕಾಂಗ್ರೆಸ್‍ನ ಮನೀಶ್ ತಿವಾರಿ, ಡಿಎಂಕೆಯ ಕನಿಮೋಳಿ, ಟಿಎಂಸಿಯ ಕಕೊಳಿ ಘೋಷ್ ದಸ್ತಿದಾರ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕಕೊಳಿ ಘೋಷ್ ಅವರಂತೂ, ಹಸಿ ಬದನೆ ಕಚ್ಚಿ, ಜನ ಹಸಿ ತರಕಾರಿ ತಿನ್ನಬೇಕೆಂದು ಬಯಸ್ತಿದ್ಯಾ ಎಂದು ಆಕ್ರೋಶ ಹೊರಹಾಕಿದರು.

    ಇತ್ತೀಚಿಗೆ ಕಡಿಮೆ ಅವಧಿಯಲ್ಲಿಯೇ ಸಿಲಿಂಡರ್ ದರ ನಾಲ್ಕು ಬಾರಿ ಹೆಚ್ಚಾಗಿದೆ. ಒಂದೊಮ್ಮೆ 600 ರೂ. ಇದ್ದ ಗ್ಯಾಸ್ ಬೆಲೆ ಈಗ 1,100 ರೂಪಾಯಿ ದಾಟಿದೆ. ಸಾಮಾನ್ಯರಿಗೆ ಅಡುಗೆ ಮಾಡಿಕೊಳ್ಳುವುದು ಭಾರವಾಗಿದೆ. ನಾವು ಹಸಿ ತರಕಾರಿಗಳನ್ನು ತಿನ್ನಬೇಕೆಂದು ಸರ್ಕಾರ ಬಯಸುತ್ತದೆಯೇ ಎಂದು ಪ್ರಶ್ನಿಸಿದ ಅವರು, ಕಳೆದ ಕೆಲವು ತಿಂಗಳುಗಳಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆಗಳನ್ನು ನಾಲ್ಕು ಬಾರಿ ಹೆಚ್ಚಿಸಲಾಗಿದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

    ಬಡವರಿಗೆ ಹಾಗೂ ಸಾಮಾನ್ಯರಿಗೆ ತೊಂದರೆ ಆಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕೂಡಲೇ ಸಿಲಿಂಡರ್ ದರವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಪರ್ವತಮುಖಿಯಲ್ಲಿ ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿದ ಐವರು – ನಾಗರಪಂಚಮಿಯಂದು ಸುಬ್ರಹ್ಮಣ್ಯಕ್ಕೆ ಪ್ರವೇಶವಿಲ್ಲ

    ಬಿಜೆಪಿಯ ನಿಶಿಕಾಂತ್ ದುಬೇ, ಕೇಂದ್ರದ ಕ್ರಮಗಳನ್ನು ಸಮರ್ಥನೆ ಮಾಡಿಕೊಂಡರು. ಶ್ರೀಲಂಕಾ, ಬಾಂಗ್ಲಾ, ಭೂತಾನ್, ಬಾಂಗ್ಲಾ ನೋಡಿ. ನಮ್ಮಲ್ಲಿನ ಬಡವರಿಗೆ ಎರಡು ಹೊತ್ತಿನ ಊಟವಾದರೂ ಸಿಗುತ್ತದೆ. ಅದಕ್ಕೆ ನಾವು ಪ್ರಧಾನಿ ಮೊದಿಗೆ ಧನ್ಯವಾದ ಹೇಳ್ಬೇಕು ಎಂದರು. ಇದನ್ನೂ ಓದಿ: ಕಸದ ಜೊತೆ ಡಂಪಿಂಗ್ ಯಾರ್ಡ್‍ಗೆ ಡಂಪ್ ಆದ ಗಾರ್ಬೇಜ್ ಆಟೋ – ಚಾಲಕ ಅಪಾಯದಿಂದ ಪಾರು

    Live Tv
    [brid partner=56869869 player=32851 video=960834 autoplay=true]

  • ಅಕ್ಕಿ ರೊಟ್ಟಿ ಜೊತೆಗೆ ಸವಿಯಲು ಮಾಡಿ ಬದನೆಕಾಯಿ ಚಟ್ನಿ

    ಅಕ್ಕಿ ರೊಟ್ಟಿ ಜೊತೆಗೆ ಸವಿಯಲು ಮಾಡಿ ಬದನೆಕಾಯಿ ಚಟ್ನಿ

    ಹೋಟೆಲ್ ಆಹಾರದಿಂದ ಕೆಲವರಿಗೆ ಕೊಬ್ಬು, ಆಸಿಡಿಟಿ, ಹೊಟ್ಟೆಯ ಸಮಸ್ಯೆಗಳನ್ನು ನೀವು ಅನುಭವಿಸುವುದು ಸಾಮಾನ್ಯವಾಗಿದೆ. ಇದಕ್ಕೆ ತಕ್ಕ ಪರಿಹಾರ ಎಂದರೆ ಮನೆಯಲ್ಲೇ ನಿಮಗೆ ಬೇಕಾದ ಸ್ವಾದಿಷ್ಟ ಖಾದ್ಯವನ್ನು ತಯಾರಿಸುವುದಾಗಿದೆ. ಮನೆಯಲ್ಲಿ ತಯಾರಿಸುವ ರೆಸಿಪಿ ಹೇಗಿರಬೇಕೆಂದರೆ ಸಮಯವನ್ನು ಉಳಿಸಿ ಎಲ್ಲರಿಂದಲೂ ನಿಮಗೆ ಮೆಚ್ಚುಗೆಯನ್ನು ನೀಡುವಂತೆ ಮಾಡುಬೇಕು. ಬಾಯಲ್ಲಿ ನೀರೂರಿಸುವ ಬದನೆಕಾಯಿ ಚಟ್ನಿ ರೊಟ್ಟಿ, ಚಪಾತಿ ದೋಸೆಗೆ ಸೂಪರ್ ಕಾಂಬಿನೇಷನ್ ಆಗಿದೆ.

    ಬೇಕಾದ ಸಾಮಾಗ್ರಿಗಳು:
    * ಬದನೆಕಾಯಿ – 4
    * ನೆಲಗಡಲೆ ಹುರಿದದ್ದು – ಎರಡು ಚಮಚ
    * ಹಸಿಮೆಣಸು – 2
    * ಕೊತ್ತಂಬರಿ ಸೊಪ್ಪು – ಸ್ವಲ್ಪ
    * ತೆಂಗಿನಕಾಯಿ ತುರಿ – 1 ಕಪ್
    * ಬೆಳ್ಳುಳ್ಳಿ – 2 ಎಸಳು
    * ರುಚಿಗೆ ತಕ್ಕಷ್ಟು ಉಪ್ಪು
    * ಅಡುಗೆ ಎಣ್ಣೆ – 1 ಚಮಚ
    * ಸಾಸಿವೆ – 1 ಚಮಚ
    * ಕರಿಬೇವು – ಸ್ವಲ್ಪ ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್

    ಮಾಡುವ ವಿಧಾನ:
    * ಮೊದಲಿಗೆ ಬದನೆಕಾಯಿ ಮತ್ತು ಬೆಳ್ಳುಳ್ಳಿಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ.
    * ಬೇಯಿಸಿದ ಬದನೆ, ಬೆಳ್ಳುಳ್ಳಿಯೊಂದಿಗೆ ಹಸಿಮೆಣಸು, ಕೊತ್ತಂಬರಿ ಸೊಪ್ಪು, ಹುರಿದ ನೆಲಗಡಲೆ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ತೆಂಗಿನ ಕಾಯಿಯನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಇದನ್ನೂ ಓದಿ:  ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ

    * ಬದನೆ ಬೇಯಿಸಿದ ನೀರನ್ನು ರುಬ್ಬುವಾಗ ಬಳಸಿಕೊಳ್ಳಿ.
    *ನಂತರ ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿ, ಇದಕ್ಕೆ ಸಾಸಿವೆಯನ್ನು ಹಾಕಿ. ಇದು ಸಿಡಿಯುತ್ತಿದ್ದಂತೆ ಕರಿಬೇವು ಇದಕ್ಕೆ ಸೇರಿಸಿ. ಚಟ್ನಿಗೆ ಒಗ್ಗರಣೆಯನ್ನು ಮಾಡಿಕೊಂಡು ಮೇಲೆ ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಿ ಬೇಯಿಸಿದರೆ ರುಚಿಯಾದ ಬದನೆಕಾಯಿ ಚಟ್ನಿ ಸವಿಯಲು ಸಿದ್ದವಾಗುತ್ತದೆ. ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

  • ಪಾತಾಳಕ್ಕೆ ಕುಸಿದ ಬದನೆಕಾಯಿ ಬೆಲೆ- ರೈತರಿಂದಲೇ ಬೆಳೆ ನಾಶ

    ಪಾತಾಳಕ್ಕೆ ಕುಸಿದ ಬದನೆಕಾಯಿ ಬೆಲೆ- ರೈತರಿಂದಲೇ ಬೆಳೆ ನಾಶ

    ರಾಯಚೂರು: ಏಕಾಏಕಿ ಬೆಲೆ ಇಳಿಕೆಯಾದ ಹಿನ್ನೆಲೆ ರಾಯಚೂರಿನ ಮನ್ಸಲಾಪುರದಲ್ಲಿ ರೈತ ತಾನೇ ಬೆಳೆದ ಬೆಳೆಯನ್ನ ಕಿತ್ತಿ ಹಾಕಿದ್ದಾರೆ. ಐದು ಎಕರೆ ಜಮೀನಿನಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಬದನೆಗಿಡವನ್ನ ರೈತ ಶ್ರೀಧರ ಸಾಗರ್ ಕಿತ್ತು ಹಾಕಿದ್ದಾರೆ.

    ಸಂಪೂರ್ಣ 5 ಎಕರೆ ಬದನೆ ಬಿತ್ತನೆ ಮಾಡಿ, ಹನಿನೀರಾವರಿ ಅಳವಡಿಸಿ ಸುಮಾರು 4 ಲಕ್ಷ ರೂಪಾಯಿ ಖರ್ಚು ಮಾಡಿದ್ದರು. ಆದ್ರೆ ದರ ಇಳಿಕೆ ಹಿನ್ನೆಲೆ ಬದನೆಗಿಡ ಕಿತ್ತಿದ್ದಾರೆ. ಈ ಮೊದಲು ಪ್ರತಿ ಚೀಲಕ್ಕೆ 1,500 ರೂಪಾಯಿವರೆಗೆ ಬೆಲೆ ಇತ್ತು. ಆದ್ರೆ ಈಗ 300 ರಿಂದ 600 ರೂಪಾಯಿವರೆಗೆ ಮಾರಾಟವಾಗುತ್ತಿದೆ. ಈಗ ಇನ್ನಷ್ಟು ಖರ್ಚು ಮಾಡಿ ಬೆಳೆ ಬೆಳೆದರೆ ನಷ್ಟದ ಪ್ರಮಾಣವು ಹೆಚ್ಚಾಗುವುದು. ಹಾಗಾಗಿ ರೈತ ಬೆಳೆಯನ್ನ ನಾಶ ಮಾಡುತ್ತಿದ್ದಾರೆ.

    ಹದಿನೈದು ದಿನಗಳ ಹಿಂದೆ ಮಾರುಕಟ್ಟೆಯಲ್ಲಿ 60 ರೂಪಾಯಿಗೆ ಒಂದು ಕೆ.ಜಿ ಇದ್ದ, ಬದನೆಕಾಯಿ ಈಗ 15 ಗೆ ಒಂದು ಕೆ.ಜಿ ಆಗಿದೆ. ಶ್ರಾವಣಮಾಸದ ಬಳಿಕ ತರಕಾರಿ ಬೆಲೆಯಲ್ಲಿ ಏರುಪೇರಾಗಿದ್ದು ಬದನೆಕಾಯಿ ಬೆಲೆಯಂತೂ ಪಾತಾಳಕ್ಕೆ ಕುಸಿದಿದೆ. ಹೀಗಾಗಿ ತರಕಾರಿ ಬೆಳೆಗಾರರು ನಷ್ಟದಲ್ಲಿದ್ದಾರೆ.

  • ಲಾಕ್‍ಡೌನ್‍ನಿಂದ ಸರಳವಾದ ಮದ್ವೆಗಳು- ಬದನೆಕಾಯಿ ಬೆಳೆದ ರೈತನಿಗೆ ನಷ್ಟ

    ಲಾಕ್‍ಡೌನ್‍ನಿಂದ ಸರಳವಾದ ಮದ್ವೆಗಳು- ಬದನೆಕಾಯಿ ಬೆಳೆದ ರೈತನಿಗೆ ನಷ್ಟ

    ರಾಯಚೂರು: ತಾಲೂಕಿನ ಪಲ್ಕಂದೊಡ್ಡಿಯ ರೈತ ಬಸವರಾಜ ಎರಡು ಎಕರೆಯಲ್ಲಿ ಬೆಳೆದಿದ್ದ ಬದನೆಕಾಯಿ ಬೆಳೆಯನ್ನು ಲಾಕ್‍ಡೌನ್ ಹಿನ್ನೆಲೆ ತಾನೇ ಕಿತ್ತು ಹಾಕುತ್ತಿದ್ದಾರೆ.

    ಮೂರು ತಿಂಗಳ ಹಿಂದೆ ರೈತ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬದನೆ ನಾಟಿಮಾಡಿದ್ದರು. ಕಳೆದೊಂದು ತಿಂಗಳಿನಿಂದ ಬದನೆಕಾಯಿ ಇಳುವರಿ ಬರುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ಬೆಲೆಯಿಲ್ಲ. ಹೀಗಾಗಿ ಬೆಳೆಯನ್ನೇ ಕಿತ್ತುಹಾಕಿದ್ದಾರೆ. ಬೇಸಿಗೆಯ ಕಾಲ ಮದುವೆಗಳ ಕಾಲ ಎನ್ನುವ ವಾಡಿಕೆ. ಆದರೆ ಈ ಬಾರಿ ಬೇಸಿಗೆಯಲ್ಲಿ ಕೊರೊನಾ ತಡೆಯಲು ಲಾಕ್‍ಡೌನ್ ಮಾಡಲಾಗಿದೆ. ಇದರಿಂದ ಕೆಲ ಮದುವೆಗಳು ಸರಳವಾಗಿ ನಡೆದರೆ, ಬಹಳಷ್ಟು ಜನ ಮುಹೂರ್ತವನ್ನು ಮುಂದೂಡಿದ್ದಾರೆ.

    ಮದುವೆಯ ಊಟಕ್ಕೆ ಬದನೆಕಾಯಿ ಸಾಕಷ್ಟು ಪ್ರಮಾಣದಲ್ಲಿ ಬಳಕೆಯಾಗುತ್ತೆ. ಇದರಿಂದ ಬೇಸಿಗೆಯಲ್ಲಿ ಇಳುವರಿ ಬರುವ ಬದನೆಕಾಯಿಯು ಲಾಭ ತರುತ್ತದೆ ಎಂಬ ಭರವಸೆಯಿಂದ ಬದನೆ ಬೆಳೆದಿದ್ದರು. ಈಗ ಮಾರುಕಟ್ಟೆಯಲ್ಲಿ 16 ಕೆಜಿಯ ಬದನೆಕಾಯಿ ಒಂದು ಚೀಲಕ್ಕೆ ಕೇವಲ 30ರೂ ದರ ನಿಗದಿಯಾಗುತ್ತಿದೆ. ಲಾಕ್‍ಡೌನ್ ಹಿನ್ನೆಲೆ ಮದುವೆ, ಇತರೆ ಕಾರ್ಯಕ್ರಮಗಳೂ ಇಲ್ಲದಿರುವುದರಿಂದ ಕೊಳ್ಳುವವರೂ ಇಲ್ಲ. ಉತ್ತಮ ಬೆಲೆ ಸಿಗುವ ಭರವಸೆಯಿಲ್ಲದ ಹಿನ್ನೆಲೆ ಬದನೆ ಗಿಡವನ್ನು ಕಿತ್ತು ಹಾಕುತ್ತಿದ್ದಾರೆ.

    ಒಂದು ವೇಳೆ ಬೆಳೆಯನ್ನು ಹಾಗೆ ಬಿಟ್ಟರೆ ಔಷಧಿ, ಗೊಬ್ಬರಕ್ಕೆ ಖರ್ಚು ಮಾಡಬೇಕಾಗುತ್ತದೆ. ಆಗ ಆಗುವ ಹಾನಿಗೆ ದೊಡ್ಡ ಸಾಲಗಾರನಾಗಬೇಕಾಗುತ್ತದೆ ಎಂದು ಈಗಲೇ ಬೆಳೆಯನ್ನು ತೆಗೆಯುತ್ತಿರುವುದಾಗಿ ರೈತ ಬಸವರಾಜ್ ತಮ್ಮ ಅಳಲು ತೋಡಿಕೊಂಡಿದ್ದಾರೆ.

  • ಉತ್ತರ ಕರ್ನಾಟಕ ಶೈಲಿಯ ಬದನೆಕಾಯಿ ಚಟ್ನಿ ಮಾಡುವ ವಿಧಾನ

    ಉತ್ತರ ಕರ್ನಾಟಕ ಶೈಲಿಯ ಬದನೆಕಾಯಿ ಚಟ್ನಿ ಮಾಡುವ ವಿಧಾನ

    ದನೆಕಾಯಿ ಅಂದ್ರೆ ಮೂಗು ಮುರಿಯುವವರೇ ಹೆಚ್ಚು. ಆದರೂ ಬದನೆಕಾಯಿ ಬಾತ್ ಅಂದ್ರೆ ಕೆಲವರಿಗೆ ಬಲು ಇಷ್ಟ. ಖಡಕ್ ರೊಟ್ಟಿ ಜೊತೆ ಎಣ್ಣೆಗಾಯಿ ಇದ್ರೆ ಆ ಊಟದ ಗಮ್ಮತ್ತೇ ಬೇರೆ. ಉತ್ತರ ಕರ್ನಾಟಕದ ಭಾಗಗಳಲ್ಲಿ ಬದನೆಕಾಯಿಗೆ ವಿಶೇಷ ಸ್ಥಾನಮಾನ. ಗೃಹಿಣಿಯರು ಬದನೆಕಾಯಿ ಬಳಸಿ ವಿವಿಧ ರಸಾಯನಗಳನ್ನ ಮಾಡ್ತಾರೆ. ಅಂತಹ ವಿಶೇಷ ಪಾಕಗಳಲ್ಲೊಂದು ಬದನೆಕಾಯಿ ಚಟ್ನಿ. ದಿನನಿತ್ಯ ದೋಸೆ, ರೊಟ್ಟಿ, ಚಪಾತಿ ಜೊತೆ ಒಂದೇ ರೀತಿಯ ಚಟ್ನಿ ತಿಂದು ಬೇಜಾರಾಗಿದ್ರೆ ಒಮ್ಮೆ ಬದನೆಕಾಯಿ ಚಟ್ನಿ ತಯಾರಿಸಿ ನೋಡಿ.

    ಬೇಕಾಗುವ ಸಾಮಗ್ರಿಗಳು
    * ಬದನೆಕಾಯಿ(ಕೆಂಪು)- 2-3
    * ಕಾಯಿ ತುರಿ – 1 ಕಪ್
    * ಹುರಿಗಡಲೆ – 2-3 ಸ್ಪೂನ್
    * ಹಸಿಮೆಣಸಿನಕಾಯಿ – 5-6
    * ಬೆಳ್ಳುಳ್ಳಿ – 6 ಎಸಳು
    * ಕೊತ್ತಂಬರಿ – ಸ್ವಲ್ಪ
    * ಎಣ್ಣೆ – ಒಗ್ಗರಣೆಗೆ
    * ಸಾಸಿವೆ – ಸ್ವಲ್ಪ
    * ಕರಿಬೇವು – ಸ್ವಲ್ಪ

    ಮಾಡುವ ವಿಧಾನ
    * ಮೊದಲಿಗೆ ಬದನೆಕಾಯಿಯನ್ನು ಚೆನ್ನಾಗಿ ತೊಳೆಯಿರಿ.
    * ಒಂದು ಪಾತ್ರೆ ಬಿಸಿಗಿಟ್ಟು ನೀರು ಕುದಿಯಲು ಬಿಡಿ
    * ಈಗ ಕುದಿಯುತ್ತಿರುವ ನೀರಿಗೆ ಬೆಳ್ಳುಳ್ಳಿ, ಬದನೆಕಾಯಿ ಸೇರಿಸಿ ಬೇಯಿಸಿಕೊಳ್ಳಿ.
    * ಬದನೆ, ಬೆಳ್ಳುಳ್ಳಿ ಬೆಂದ ಬಳಿಕ ನೀರು ಸೋಸಿಕೊಳ್ಳಿ
    * ಈಗ ಒಂದು ಜಾರ್‍ಗೆ ಬೆಂದ ಬದನೆ, ಬೆಳ್ಳುಳ್ಳಿ, ಕಾಯಿ ತುರಿ, ಹಸಿಮೆಣಸಿನಕಾಯಿ, ಹುರಿಗಡಲೆ, ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ.
    * ಚಟ್ನಿ ನುಣ್ಣಗೆ ಆಗಿದೆ ಅನ್ನೋವಾಗ ಕೊನೆಗೇ ಕೊತ್ತಂಬರಿ ಸೊಪ್ಪು ಸೇರಿಸಿ ಒಂದು ಸುತ್ತು ಮಿಕ್ಸಿ ಆಡಿಸಿ.
    (ಕೊತ್ತಂಬರಿ ಸೊಪ್ಪು ಪೂರ್ತಿ ನುಣ್ಣಗೆ ಆಗದಿರಲಿ, ಸೊಪ್ಪು ತರಿತರಿಯಾಗಿ ಕಾಣುತ್ತಿದ್ದರೆ ಚಟ್ನಿ ಸವಿಯಲು ಚೆಂದ ಮತ್ತು ನೋಡೋಕು ಚೆಂದ)
    * ಒಂದು ಪ್ಯಾನ್‍ಗೆ ಎಣ್ಣೆ ಹಾಕಿ ಒಗ್ಗರಣೆಗೆ ಸಾಸಿವೆ, ಕರಿಬೇವು ಹಾಕಿ ಸಿಡಿಸಿ.
    * ಈಗ ಒಗ್ಗರಣೆಯನ್ನು ಚಟ್ನಿಗೆ ಮಿಶ್ರಣ ಮಾಡಿ.. ಸರ್ವ್ ಮಾಡಿ.
    ಇದು ಚಪಾತಿ, ದೋಸೆ, ರೊಟ್ಟಿಗೆ ಮ್ಯಾಚ್ ಆಗುವಂತ ಚಟ್ನಿ, ಜೊತೆಗೆ ಬಿಸಿಬಿಸಿ ಅನ್ನಕ್ಕೂ ಹೊಂದಿಕೊಳ್ಳುತ್ತದೆ.