Tag: BRIMS hospital

  • ಬ್ರಿಮ್ಸ್ ಆಸ್ಪತ್ರೆ ಸುತ್ತಮುತ್ತ ಮಾಸ್ಕ್, ಗ್ಲೌಸ್, ಪಿಪಿಟಿ ಕಿಟ್- ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಮತ್ತಷ್ಟು ಸೋಂಕು ಹರಡೋ ಭೀತಿ!

    ಬ್ರಿಮ್ಸ್ ಆಸ್ಪತ್ರೆ ಸುತ್ತಮುತ್ತ ಮಾಸ್ಕ್, ಗ್ಲೌಸ್, ಪಿಪಿಟಿ ಕಿಟ್- ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಮತ್ತಷ್ಟು ಸೋಂಕು ಹರಡೋ ಭೀತಿ!

    ಬೀದರ್: ಸದಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಲ್ಲಿರುವ ಬೀದರ್‍ನ ಬ್ರಿಮ್ಸ್ ಮತ್ತೊಂದು ನಿರ್ಲಕ್ಷ್ಯ ಬೆಳಕಿಗೆ ಬಂದಿದೆ. ಸೋಂಕಿತರು ಬಳಸುವ ಮತ್ತು ವೈದ್ಯರು, ಸಿಬ್ಬಂದಿ ಬಳಸಿದ ಪಿಪಿಇ ಕಿಟ್, ಮಾಸ್ಕ್, ಗ್ಲೌಸ್‍ಗಳನ್ನ ಬೇಕಾಬಿಟ್ಟಿ ಎಸೆದು ನಿರ್ಲಕ್ಷ್ಯ ವಹಿಸಲಾಗಿದೆ. ಇದರಿಂದ ಮತ್ತಷ್ಟು ಸೋಂಕು ಹರಡುವ ಆತಂಕ ಎದುರಾಗಿದೆ.

    ಹೌದು. ಬ್ರೀಮ್ಸ್ ನ ಕೊರೊನಾ ವಿಶೇಷ ವಾರ್ಡಿನಲ್ಲಿರುವ ಸೋಂಕಿತರು ಬಳಸುವ ಬೆಡ್‍ಶೀಟ್ ಮತ್ತು ಇನ್ನಿತರ ಬಟ್ಟೆಗಳನ್ನು ಸಿಬ್ಬಂದಿ ಕ್ಲೀನ್ ಮಾಡುತ್ತಾರೆ. ಆಸ್ಪತ್ರೆಯ ಎಲ್ಲಾ ತ್ಯಾಜ್ಯವನ್ನು ಸಂಗ್ರಹ ಮಾಡ್ತಾರೆ. ಆದರೆ ಸೋಂಕಿತರ ಜೊತೆ ನೇರ ಸಂರ್ಪಕಕ್ಕೆ ಬರುವ ಇವರು ಕ್ಲೀನ್ ಮಾಡಿದ ನಂತರ ತಾವು ಧರಿಸಿರುವ ಮಾಸ್ಕ್, ಗ್ಲೌಸ್, ಪಿಪಿಟಿ ಕಿಟ್ ಸೇರಿದಂತೆ ಎಲ್ಲವನ್ನು ಬೇಕಾಬಿಟ್ಟಿ ಬಿಸಾಡುತ್ತಿದ್ದಾರೆ. ಬ್ರೀಮ್ಸ್ ಆಸ್ಪತ್ರೆಯ ಕ್ಲಿನಿಂಗ್ ಸ್ಥಳದಿಂದ ಸಾರ್ವಜನಿಕರು ಹಾಗೂ ಪ್ರಾಣಿಗಳು ಓಡಾಡುವ ಮುಖ್ಯ ರಸ್ತೆಗೆ ಎಸೆಯುತ್ತಿದ್ದಾರೆ. ಜೊತೆಗೆ ಸೋಂಕಿತರ ಬಟ್ಟೆಗಳನ್ನು ಕ್ಲೀನ್ ಮಾಡಿದ ನೀರನ್ನು ಚರಂಡಿಗೆ ಬಿಡುತ್ತಿದ್ದಾರೆ. ಆರೋಗ್ಯ ಇಲಾಖೆ ನಿಯಮದ ಪ್ರಕಾರ ಒಂದು ಸಾರಿ ಬಳಸಿದ ಎಲ್ಲಾ ವಸ್ತುಗಳನ್ನು ನಿಯಮಿತವಾಗಿ ಡಿಸ್ಪೋರೆಜ್ ಮಾಡಬೇಕು. ಆದರೆ ಇಲ್ಲಿನ ಸಿಬ್ಬಂದಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ಬಿಸಾಡುತ್ತಿದ್ದಾರೆ.

    ಈಗಾಗಲೇ ಜಿಲ್ಲೆಯಲ್ಲಿ 500 ಗಡಿ ದಾಟಿರುವ ಮಹಾಮಾರಿ ಕೊರೊನಾ 15 ಜನರನ್ನು ಬಲಿ ಪಡೆದಿದೆ. ಜೊತೆಗೆ ಅಂತರ್ ರಾಜ್ಯ ಕಂಟಕ ಜಿಲ್ಲೆಯನ್ನು ಬಿಟ್ಟು ಬಿಡದೆ ಕಾಡುತ್ತಿದೆ. ಇದರ ನಡುವೆ ಸೋಂಕನ್ನ ತಡೆಯಬೇಕಾದ ಬ್ರೀಮ್ಸ್ ಸಿಬ್ಬಂದಿ ನಿರ್ಲಕ್ಷ್ಯ ತೋರಿಸ್ತಿದಾರೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಸೋಂಕಿತರ ಅಷ್ಟೆ ಅಲ್ಲ, ಕೆಲ ಸಿಬ್ಬಂದಿ ಗ್ಲೌಸ್ ಹಾಕದೇ, ಪಿಪಿಟಿ ಕಿಟ್, ಮಾಸ್ಕ್ ಕೂಡ ಹಾಕದೆ ನಿರ್ಲಕ್ಷ್ಯವಹಿಸಿದ್ದಾರೆ. ಇದನ್ನ ಪ್ರಶ್ನಿಸಿದ್ರೆ ಜಿಲ್ಲಾ ಆರೋಗ್ಯಾಧಿಕಾರಿಗಳು ತೇಪೆ ಹಾಕುವ ಕೆಲಸ ಮಾಡಿದ್ದಾರೆ.

    ಇದೇ ರೀತಿ ನಿರ್ಲಕ್ಷ್ಯ ಮುಂದುವರಿದರೆ ಕೊರೊನಾ ತನ್ನ ಕದಂಬ ಬಾಹುಗಳನ್ನು ಜಿಲ್ಲೆಯಲ್ಲಿ ಚಾಚುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಇನ್ನಾದರೂ ಜಿಲ್ಲಾ ಆರೋಗ್ಯ ಇಲಾಖೆ ಎಚ್ಚರಗೊಂಡು ಇಂತಹ ನಿರ್ಲಕ್ಷ್ಯಗಳಿಗೆ ಬ್ರೇಕ್ ಹಾಕಬೇಕಿದೆ.

  • ಸ್ಟ್ರೆಚರ್ ನೀಡದ ಬ್ರಿಮ್ಸ್ ಸಿಬ್ಬಂದಿ- ನಡ್ಕೊಂಡೇ ಆಸ್ಪತ್ರೆಗೆ ದಾಖಲಾದ ತುಂಬು ಗರ್ಭಿಣಿ

    ಸ್ಟ್ರೆಚರ್ ನೀಡದ ಬ್ರಿಮ್ಸ್ ಸಿಬ್ಬಂದಿ- ನಡ್ಕೊಂಡೇ ಆಸ್ಪತ್ರೆಗೆ ದಾಖಲಾದ ತುಂಬು ಗರ್ಭಿಣಿ

    ಬೀದರ್: ನಗರದ ಬ್ರಿಮ್ಸ್ ಜಿಲ್ಲಾಸ್ಪತ್ರೆಯ ಸಿಬ್ಬಂದಿ ತುಂಬು ಗರ್ಭಿಣಿಯನ್ನು ನಿರ್ಲಕ್ಷಿಸಿದ ಘಟನೆ ಇಂದು ನಡೆದಿದೆ.

    ಮಹಿಳೆ ತಾಂಡದಿಂದ ಅಂಬುಲೆನ್ಸ್ ನಲ್ಲಿ ಹೆರಿಗೆಗಾಗಿ ಬ್ರಿಮ್ಸ್ ಆಸ್ಪತ್ರೆಗೆ ಬಂದಿದ್ದರು. ಆದರೆ ಆಸ್ಪತ್ರೆಯಲ್ಲಿ ಗರ್ಭಿಣಿಗೆ ಸ್ಟ್ರೆಚರ್ ನೀಡದೆ ಬ್ರಿಮ್ಸ್ ಸಿಬ್ಬಂದಿ ನಿರ್ಲಕ್ಷ್ಯ ತೋರಿರುವುದು ಇದೀಗ ಆಸ್ಪತ್ರೆ ವಿರುದ್ಧದ ಆಕ್ರೋಶಕ್ಕೆ ಕಾರಣವಾಗಿದೆ.

    ಇಂದು ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಚಿಮ್ಮೆಗಾಂವ್ ತಾಂಡದಿಂದ ಹೆರಿಗೆಗಾಗಿ ಬಂದಿದ್ದ ತುಂಬು ಗರ್ಭಿಣಿಗೆ ಸ್ಟ್ರೆಚರ್ ನೀಡಿ ಸಿಬ್ಬಂದಿ ವಾರ್ಡಿಗೆ ಕರೆದುಕೊಂಡು ಹೋಗಬೇಕಿತ್ತು. ಆದರೆ ಗರ್ಭಿಣಿ ಗಂಟೆಗಟ್ಟಲೆ ಕಾದು ಕಾದು ಸುಸ್ತಾದರೂ ಬ್ರಿಮ್ಸ್ ಸಿಬ್ಬಂದಿ ಸ್ಟ್ರೆಚರ್ ನೀಡದ ಕಾರಣ ನಡೆದುಕೊಂಡೇ ಹೋಗಿ ಆಸ್ಪತ್ರೆಗೆ ದಾಖಲಾಗುವಂತೆ ಮಾಡಿ ಎಡವಟ್ಟು ಮಾಡಿಕೊಂಡಿದ್ದಾರೆ.

    ಸಿಬ್ಬಂದಿ ಸ್ಟ್ರೆಚರ್ ನೀಡದಿರುವುದರಿಂದ ಹೈರಾಣಾದ ಗರ್ಭಿಣಿ ಭಾಗ್ಯಶಿರಾ ಅಕ್ಷರಃ ನರಕಯಾತನೆ ಅನುಭವಿಸಿದ್ದು ನಿರ್ಲಕ್ಷ್ಯ ತೋರಿದ ಸಿಬ್ಬಂದಿ ವಿರುದ್ಧ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ಬ್ರಿಮ್ಸ್ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವು

    ಬ್ರಿಮ್ಸ್ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವು

    ಬೀದರ್: ಹೆರಿಗೆಯ ನಂತರ ಬಾಣಂತಿಗೆ ವೈದ್ಯರು ಸೂಕ್ತ ಚಿಕಿತ್ಸೆ ನೀಡದೇ ನಿರ್ಲಕ್ಷಿಸಿದ್ದರಿಂದ ಮಹಿಳೆ ಪ್ರಾಣ ಕಳೆದುಕೊಂಡ ಘಟನೆ ಬೀದರ್ ನ ಬ್ರಿಮ್ಸ್ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

    ಬೀದರ್ ತಾಲೂಕಿನ ಚಟನ್ನಳ್ಳಿ ಗ್ರಾಮದ ನಾಗಮ್ಮ ಎರಡು ದಿನಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ತಡರಾತ್ರಿ ವೈದ್ಯರು ಸರಿಯಾದ ಚಿಕಿತ್ಸೆ ನೀಡದ ಕಾರಣ ನಾಗಮ್ಮ ಸಾವನ್ನಪ್ಪಿದ್ದಾಳೆ ಎಂದು ಸಂಬಂಧಿಕರು ಆರೋಪಿಸುತ್ತಿದ್ದಾರೆ.

    ಹೆರಿಗೆಯಾದಾಗಿನಿಂದ ನಾಗಮ್ಮ ಆರೋಗ್ಯವಾಗಿದ್ದು ನಿನ್ನೆ ಹೊಟ್ಟೆನೋವಿನಿಂದ ಬಳಲುತ್ತಿದ್ದಳು. ವೈದ್ಯರು ಸೂಕ್ತ ಚಿಕಿತ್ಸೆ ನೀಡದ ಕಾರಣ ಇಂದು ಸಾವನ್ನಪ್ಪಿದ್ದಾಳೆ ಎಂದು ಸಂಬಂಧಿಕರು ದೂರಿದ್ದಾರೆ.

    ಬ್ರಿಮ್ಸ್ ಜಿಲ್ಲಾಸ್ಪತ್ರೆಯಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು ವೈದ್ಯರ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಜಿಲ್ಲಾಧಿಕಾರಿ ಸ್ಥಳಕ್ಕಾಗಮಿಸಿ ನಿರ್ಲಕ್ಷ್ಯ ಮಾಡಿದ ವೈದ್ಯರು ಹಾಗೂ ಸಿಬ್ಬಂದಿಯನ್ನು ಅಮಾನತುಗೊಳಿಸಬೇಕು. ಅಲ್ಲಿಯವರೆಗೆ ಶವ ತೆಗೆದುಕೊಂಡು ಹೋಗುವುದಿಲ್ಲ ಎಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ.

  • ಬ್ರಿಮ್ಸ್​ನಲ್ಲಿ ಕೊಳಕು ಬೆಡ್, ಕೋಣೆಗಳು- ಅವ್ಯವಸ್ಥೆ ಕಂಡು ಸಚಿವರು ಕೆಂಡಾಮಂಡಲ

    ಬ್ರಿಮ್ಸ್​ನಲ್ಲಿ ಕೊಳಕು ಬೆಡ್, ಕೋಣೆಗಳು- ಅವ್ಯವಸ್ಥೆ ಕಂಡು ಸಚಿವರು ಕೆಂಡಾಮಂಡಲ

    ಬೀದರ್: ಬ್ರಿಮ್ಸ್ ಆಸ್ಪತ್ರೆಯಲ್ಲಿದ್ದ ಕೊಳಕು ಬೆಡ್, ಕೊಠಡಿಗಳು ಹಾಗೂ ಅವ್ಯವಸ್ಥೆಯನ್ನು ಕಂಡು ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಹಾಗೂ ವೈದ್ಯಕೀಯ ಸಚಿವ ಇ. ತುಕಾರಾಂ ಅವರು ಸಿಟ್ಟಿಗೆದ್ದು ಆಸ್ಪತ್ರೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

    ಇಂದು ಬ್ರಿಮ್ಸ್ ಆಸ್ಪತ್ರೆಯನ್ನು ಪರಿಶೀಲಿಸಲು ಮೂವರು ಸಚಿವರು ಹಾಗೂ ಎಂಪಿ ಭೇಟಿ ಕೊಟ್ಟಿದ್ದರು. ಆರೋಗ್ಯ ಸಚಿವ ಶಿವಾನಂದ ಪಾಟೀಲ್, ವೈದ್ಯಕೀಯ ಸಚಿವ ಇ ತುಕಾರಾಂ, ಕ್ರೀಡಾ ಸಚಿವ ರಹೀಂ ಖಾನ್ ಹಾಗೂ ಸಂಸದ ಭಗವಂತ್ ಖೂಬಾ ಅವರು ಆಸ್ಪತ್ರೆಗೆ ಭೇಟಿಕೊಟ್ಟು ಅಲ್ಲಿನ ಪರಿಸ್ಥಿತಿಯನ್ನು ಕಣ್ಣಾರೆ ಕಂಡು ಕೆಂಡಾಮಂಡಲರಾದರು.

    ಆಸ್ಪತ್ರೆಯ ಅವ್ಯವಸ್ಥೆ, ರೋಗಿಗಳಿಗೆ ನೀಡುತ್ತಿರುವ ಕೊಳಕು ಬೆಡ್‍ಗಳು, ಸ್ವಚ್ಛವಿಲ್ಲದ ಕೊಠಡಿಗಳನ್ನು ಕಂಡು ಸಚಿವರು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗೆ ಸಖತ್ ಕ್ಲಾಸ್ ತೆಗೆದುಕೊಂಡರು. ಹಾಗೆಯೇ ಆಸ್ಪತ್ರೆಯ ಮುಚ್ಚಿದ ಕೋಣೆಯ ಬೀಗ ತೆಗೆಯಲು ಸಚಿವರು ತಾಕೀತು ಮಾಡಿದ್ದು, ಕೊಣೆಯನ್ನು ಸಿಬ್ಬಂದಿಗಳು ತೆರೆದ ನಂತರ ಅಲ್ಲಿನ ದುಸ್ಥಿತಿ ಕಂಡು ಕೆಂಡಾಮಂಡಲರಾದರು. ಏನಿದು ಬ್ರಿಮ್ಸ್ ಪರಿಸ್ಥಿತಿ ಎಂದು ಪ್ರಶ್ನಿಸಿ ಜಿಲ್ಲಾ ಸರ್ಜನ್ ಡಾ. ರತಿಕಾಂತ್‍ಸ್ವಾಮಿ ಮೇಲೆ ಸಚಿವರು ಗರಂ ಆದರು.

    ಬಳಿಕ ಬೀದರ್ ಬ್ರಿಮ್ಸ್ ಮೆಡಿಕಲ್ ಕಾಲೇಜು ಮುಂಭಾಗದಲ್ಲಿ ಶಿವಾನಂದ ಪಾಟೀಲ್ ಅವರಿಗೆ ವ್ಯಕ್ತಿಯೊಬ್ಬ ಹೇಳಿದ ಮಾತು ಮುಜುಗರಕ್ಕೆ ಒಳಗಾಗುವಂತೆ ಮಾಡಿತು. ಸಚಿವರನ್ನು ಕಂಡ ವ್ಯಕ್ತಿ, ಬ್ರಿಮ್ಸ್ ಗೆ ಬೀಗ ಹಾಕಿಕೊಂಡು ಹೋಗಿ ಎಂದು ಕೀಲಿಕೈ ನೀಡಿದ್ದಾನೆ. ಅಲ್ಲದೆ ಬ್ರಿಮ್ಸ್ ಅವ್ಯವಸ್ಥೆ ನೋಡಿ ಸಾಕಾಗಿದೆ ಎಂದು ಸಚಿವರ ಬಳಿ ದೂರಿದ್ದಾನೆ. ಇದನ್ನು ಕಂಡು ಕಕ್ಕಾಬಿಕ್ಕಿಯಾದ ಶಿವಾನಂದ ಪಾಟೀಲ್ ಅವರು, ಇಲ್ಲಾ ಸರಿಪಡಿಸುತ್ತೇವೆ ಎಂದು ವ್ಯಕ್ತಿಯನ್ನು ಸಮಾಧಾನ ಮಾಡಿ, ಮುಜುಗರದಿಂದಲೇ ಕಾರು ಹತ್ತಿ ಹೋದರು.

  • ಕೆಲಸ ಮಾಡದಿದ್ರೆ ನಾಯಿ ಸಹ ಮೂಸಿ ನೋಡಲ್ಲ: ಭಗವಂತ್ ಖೂಬಾ

    ಕೆಲಸ ಮಾಡದಿದ್ರೆ ನಾಯಿ ಸಹ ಮೂಸಿ ನೋಡಲ್ಲ: ಭಗವಂತ್ ಖೂಬಾ

    ಬೀದರ್: ಸರಿಯಾಗಿ ಕೆಲಸ ಮಾಡದೇ ಇದ್ದರೆ ನಾಯಿಗಳು ಸಹ ಮೂಸಿ ನೋಡಲ್ಲ ಎಂದು ಬ್ರಿಮ್ಸ್ ಆಸ್ಪತ್ರೆಯ ವೈದ್ಯರನ್ನು ಮತ್ತು ಅಧಿಕಾರಿಗಳನ್ನು ಸಂಸದ ಭಗವಂತ್ ಖೂಬಾ ತರಾಟೆಗೆ ತೆಗೆದುಕೊಂಡಿದ್ದಾರೆ.

    ಬ್ರಿಮ್ಸ್ ಆಸ್ಪತ್ರೆಯ ಮೇಲ್ಛಾವಣಿ ಕುಸಿತ ಹಿನ್ನೆಲೆ ಇಂದು ಅಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಖೂಬಾ ಅವರು, ನೀವು ಸರಿಯಾಗಿ ಕೆಲಸ ಮಾಡದಿದ್ದರೆ ನಾಯಿ ಸಹ ಮೂಸಿ ನೋಡುವುದಿಲ್ಲ. 1 ವರ್ಷದ ಹಿಂದೆ 100 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಬ್ರಿಮ್ಸ್ ಆಸ್ಪತ್ರೆ ಮೇಲ್ಛಾವಣಿ ಮಳೆಯಿಂದಾಗಿ ಕುಸಿದಿತ್ತು. ಜಿಲ್ಲಾ ಆಸ್ಪತ್ರೆಯ ಕಳಪೆ ಕಾಮಗಾರಿ ನಡೆದಿದೆ ಎಂದು ಇಂದು ಖೂಬಾ ಅವರು ಭೇಟಿ ನೀಡಿ ಸಭೆ ನಡೆಸಿ ಬ್ರೀಮ್ಸ್ ನಿರ್ದೇಶಕ ಕ್ಷೀರ ಸಾಗರನ್ನು ಸೇರಿದಂತೆ ವೈದ್ಯರನ್ನು ತರಾಟೆಗೆ ತಗೆದುಕೊಂಡರು.

    ಕಾಮಗಾರಿಯಲ್ಲಿ ನಿರ್ಲಕ್ಷ್ಯ ತೋರಿದ್ದ ಸಿಬ್ಬಂದಿಗಳನ್ನು ಯಾಕೆ ಅಮಾನತು ಮಾಡಿಲ್ಲಾ.? ಆಸ್ಪತ್ರೆಯಲ್ಲಿ ಏನ್ ಕೆಲಸ ಮಾಡುತ್ತಿದ್ದೀರಾ. ನಿಮ್ಮ ಜೀವನಕ್ಕಾಗಿ ಕೆಲಸ ಮಾಡುತ್ತಿದ್ದೀರಾ ಇಲ್ಲಾ ಜನರಿಗಾಗಿ ಕೆಲಸ ಮಾಡುತ್ತಿದ್ದಿರಾ..? ನಿರ್ಲಕ್ಷ್ಯ ತೋರಿದವರನ್ನು ಅಮಾನತು ಮಾಡದೇ ಹೇಗೆ ತನಿಖೆ ನಡೆಸುತ್ತಿರಾ ಎಂದು ಪ್ರಶ್ನಿಸಿ ಅಧಿಕಾರಿಗಳ ಮೇಲೆ ಕೋಪಗೊಂಡರು.

  • ವೈದ್ಯರ ನಿರ್ಲಕ್ಷ್ಯಕ್ಕೆ ಹಸುಗೂಸು ಬಲಿ

    ವೈದ್ಯರ ನಿರ್ಲಕ್ಷ್ಯಕ್ಕೆ ಹಸುಗೂಸು ಬಲಿ

    ಬೀದರ್: ವೈದ್ಯರ ನಿರ್ಲಕ್ಷ್ಯದಿಂದ ಹಸಗೂಸು ಸಾವನ್ನಪ್ಪಿದೆ ಎಂದು ಬ್ರಿಮ್ಸ್ ಆಸ್ಪತ್ರೆ ವೈದ್ಯರ ವಿರುದ್ಧ ಮಗುವಿನ ಪೋಷಕರು ಆರೋಪಿಸಿದ್ದಾರೆ.

    ಎರಡು ದಿನಗಳ ಹಿಂದೆ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಮಗುವನ್ನು ಹೆತ್ತವರು ದಾಖಲಿಸಿದ್ದರು. ಆಗ ಆಸ್ಪತ್ರೆಯ ವೈದ್ಯರು ಐಸಿಯುನಲ್ಲಿ ಮಗುವಿಗೆ ಚಿಕಿತ್ಸೆ ನೀಡುತ್ತಿದ್ದರು. ಬುಧವಾರ ನಿಮ್ಮ ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದರು. ಆದ್ರೆ ಇಂದು ಮಗು ಸಾವನ್ನಪ್ಪಿದೆ ಎಂದಿದ್ದಾರೆ. ಮಗು ಮೃತಪಡಲು ವೈದ್ಯರ ನಿರ್ಲಕ್ಷ್ಯವೇ ಕಾರಣ. ನಿನ್ನೆ ಆರೋಗ್ಯವಾಗಿದ್ದ ಮಗು ಇಂದು ಸಾವನ್ನಪ್ಪಿದೆ ಎಂದರೇ ಏನರ್ಥ ಎಂದು ಹೆತ್ತವರು ಕಣ್ಣೀರಿಡುತ್ತಿದ್ದಾರೆ.

    ಸದ್ಯ ಬ್ರೀಮ್ಸ್ ಆಸ್ಪತ್ರೆ ಮುಂದೆ ಮಗುವಿನ ಹೆತ್ತವರು ಹಾಗೂ ಸಂಬಂಧಿಕರು ವೈದ್ಯರು ಹಾಗೂ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಹಸುಗೂಸು ಬಲಿಯಾಗಿದೆ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv