Tag: brijesh kalappa

  • ಕಾಂಗ್ರೆಸ್‌ಗೆ ಬ್ರಿಜೇಶ್‌ ಕಾಳಪ್ಪ ರಾಜೀನಾಮೆ

    ಕಾಂಗ್ರೆಸ್‌ಗೆ ಬ್ರಿಜೇಶ್‌ ಕಾಳಪ್ಪ ರಾಜೀನಾಮೆ

    ಬೆಂಗಳೂರು: ಕಾಂಗ್ರೆಸ್‌ ನಾಯಕ, ಸುಪ್ರೀಂ ಕೋರ್ಟ್‌ ವಕೀಲ ಬ್ರಿಜೇಶ್‌ ಕಾಳಪ್ಪ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ.

    ಕೆಪಿಸಿಸಿ ವಕ್ತಾರರಾಗಿದ್ದ ಬ್ರಿಜೇಶ್‌ ಕಾಳಪ್ಪ ಅವರು ಪರಿಷತ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅವಕಾಶ ಕೈ ತಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

    ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ನೇರವಾಗಿ ಪತ್ರ ಬರೆದು ತನ್ನ ನಿರ್ಧಾರವನ್ನು ತಿಳಿಸಿದ್ದಾರೆ. ಬ್ರಿಜೇಶ್‌ ಕಾಳಪ್ಪ ಆಮ್‌ ಆದ್ಮಿ ಪಕ್ಷವನ್ನು ಸೇರುವ ಸಾಧ್ಯತೆಯಿದೆ.

    ರಾಜೀನಾಮೆ ಪತ್ರದಲ್ಲಿ ಏನಿದೆ?
    ಗೌರವಾನ್ವಿತ ಮೇಡಂ,
    ಆರಂಭದಲ್ಲಿ ನೀವು ನನಗೆ ಒದಗಿಸಿದ ಹಲವಾರು ಅವಕಾಶಗಳಿಗಾಗಿ ನಾನು ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇನೆ. ರಾಷ್ಟ್ರದ ಎಲ್ಲಾ ಭಾಗಗಳಲ್ಲಿ ನಾನು ಪರಿಚಿತನಾಗಿ ಅದು ನಿಮ್ಮ ಪ್ರೋತ್ಸಾಹದಿಂದ. ಈ ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು.

    ಮತ್ತೊಮ್ಮೆ ನಿಮ್ಮ ಆಶೀರ್ವಾದದಿಂದ ನಾನು ಸಚಿವ ಸ್ಥಾನಮಾನ ಇರುವ ಕರ್ನಾಟಕ ಸರ್ಕಾರದ ಕಾನೂನು ಸಲಹೆಗಾರನಾಗಿ ನೇಮಕಗೊಂಡಿದ್ದೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ಗರ್ಭಗುಡಿಗೆ ಇಂದು ಯೋಗಿ ಶಂಕುಸ್ಥಾಪನೆ

    2013 ರಿಂದ ಹಿಂದಿ, ಇಂಗ್ಲಿಷ್ ಮತ್ತು ಕನ್ನಡ ಚಾನೆಲ್‌ಗಳಲ್ಲಿ ಯುಪಿಎ ಸರ್ಕಾರವನ್ನು ಪ್ರತಿನಿಧಿಸಿದ್ದೇನೆ. ಸುಮಾರು ಒಂದು ದಶಕದ ಕಾಲ ನಾನು 6,497 ಚರ್ಚೆಗಳನ್ನು ನಡೆಸಿದ್ದೇನೆ. ಪಕ್ಷ ನೀಡಿದ ರಾಜಕೀಯ ಕೆಲಸವನ್ನು ನಾನು ಸರಿಯಾಗಿ ನಿರ್ವಹಿಸಿದ್ದು, ನನಗೆ ತೃಪ್ತಿ ಸಿಕ್ಕಿದೆ. ಟಿವಿ ಚರ್ಚೆಗಳಲ್ಲಿ ನಾನು ಎಂದಿಗೂ ಪೂರ್ವ ತಯಾರಿ ಇಲ್ಲದೇ ಭಾಗವಹಿಸುತ್ತಿರಲಿಲ್ಲ.

    2014 ಮತ್ತು 2019ರ ಸೋಲಿನ ಬಳಿಕ ಪಕ್ಷಕ್ಕೆ ಕೆಟ್ಟ ಸಮಯ ಬಂದರೂ ನಾನು ಉತ್ಸಾಹವನ್ನು ಕಳೆದುಕೊಂಡಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ನಾನು ಉತ್ಸಾಹ ಕಳೆದುಕೊಂಡಿದ್ದೇನೆ. ಹೀಗಾಗಿ 1997 ರಿಂದ ಆರಂಭವಾದ ಪಕ್ಷ ನಂಟಿಗೆ ಕೊನೆ ಹೇಳುತ್ತಿದ್ದು,  ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ.

  • ನಿಮ್ಮದು ಬಚ್ಚಲಮನೆ ಚಪ್ಪಲಿ ನಾಲಿಗೆ- ಸಿ.ಟಿ.ರವಿ ವಿರುದ್ಧ ಬ್ರಿಜೇಶ್ ಕಾಳಪ್ಪ ಗುಡುಗು

    ನಿಮ್ಮದು ಬಚ್ಚಲಮನೆ ಚಪ್ಪಲಿ ನಾಲಿಗೆ- ಸಿ.ಟಿ.ರವಿ ವಿರುದ್ಧ ಬ್ರಿಜೇಶ್ ಕಾಳಪ್ಪ ಗುಡುಗು

    ಬೆಂಗಳೂರು: ಸಿಎಂ ಸ್ಥಾನ ಕೈ ತಪ್ಪಿದ ಹತಾಶೆಯಿಂದಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಏನೇನೋ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ಟೀಕಿಸಿದ್ದಾರೆ.

    ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿ.ಟಿ.ರವಿ, ಸಚಿವ ಈಶ್ವರಪ್ಪ, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಸಿಎಂ ಸ್ಥಾನದ ರೇಸ್ ನಲ್ಲಿ ಇದ್ದರು. ಬಸವರಾಜ ಬೊಮ್ಮಯಿ ಸಿಎಂ ಆದ ನಂತರ ಈ ಮೂವರಿಗೂ ಹತಾಶೆಯಾಗಿದೆ. ನೆಹರು ಬಗ್ಗೆ ತುಚ್ಛವಾಗಿ ಮಾತನಾಡಿದರು. ಸಿ.ಟಿ.ರವಿ ಗಾಜಿನ ಮನೆಯಲ್ಲಿ ಕೂತು ಕಲ್ಲು ಬೀಸುವ ಕೆಲಸ ಮಾಡಿದರು. ಅವರು ಮಾತನಾಡಿದಕ್ಕೆ ನಾವು ಮರು ಹೇಳಿಕೆ ಕೊಟ್ಟರೆ ಕೇಸ್ ಹಾಕುತ್ತೇವೆ ಎಂದು ಹೇಳಿದ್ದಾರೆ. ಜೈಲಿಗೆ ಹೋಗಿ ಬಂದರೆ ಕಾಂಗ್ರೆಸ್ ನಲ್ಲಿ ಪ್ರಮೋಷನ್ ಸಿಗುತ್ತೆ ಎಂದು ಮತ್ತೊಂದು ಎಡವಟ್ಟು ಹೇಳಿಕೆ ನೀಡಿದ್ದಾರೆ ಎಂದರು. ಇದನ್ನೂ ಓದಿ: ಸರ್ಕಾರದ ಆಸ್ತಿ ನಿರ್ವಹಣೆ ಹೆಸರಲ್ಲಿ ಬಿಳಿ ಆನೆ ಸಾಕುವ ಆಸಕ್ತಿ ಇಲ್ಲ: ಸಿ.ಟಿ.ರವಿ

    ಸದನದಲ್ಲಿ ನೀಲಿ ಚಿತ್ರ ನೋಡಿದ ಲಕ್ಷ್ಮಣ್ ಸವದಿ ಅವರನ್ನು ಬಿಜೆಪಿಯವರು ಡಿಸಿಎಂ ಮಾಡಿದರು. 2002 ರಿಂದ 2007 ರವರೆಗೂ ಮೋದಿ ನೇತೃತ್ವದ ಸರ್ಕಾರ ಎನ್‍ಕೌಂಟರ್ ಮಾಡಿಸಿ ಸಾಯಿಸಿದರು. ಪಾಕಿಸ್ತಾನದ ಉಗ್ರವಾದಿಗಳು ಮೋದಿ ಟಾರ್ಗೆಟ್ ಮಾಡುತ್ತಿದ್ದಾರೆಂದು 5 ವರ್ಷದಲ್ಲಿ 17 ಜನರನ್ನು ಎನ್‍ಕೌಂಟರ್ ಮಾಡಿದ್ದಾರೆ. ಗುಜರಾತ್ ಒಳಗಡೆ ಅಮಿತ್ ಶಾಗೆ ಎಂಟ್ರಿ ಕೊಡಲಿಲ್ಲ. ಇಂತಹವರನ್ನು ಕೇಂದ್ರ ಗೃಹ ಸಚಿವರನ್ನಾಗಿ ಮಾಡಿಕೊಂಡು ಸಿ.ಟಿ.ರವಿ ಮಾತನಾಡುತ್ತಿದ್ದಾರೆ ಎಂದರು.

    ಚುನಾವಣಾ ಪೂರ್ವದಲ್ಲಿ ಐಟಿ ಅವರು ಕಾಂಗ್ರೆಸ್ ನಾಯಕರ ಮನೆಗೆ ನುಗ್ಗುತ್ತಾರೆ. ಬಿಜೆಪಿ ರಹಿತ ಪಕ್ಷಗಳ ಮೇಲೆ ಐಟಿ ದಾಳಿಯಾಗುತ್ತದೆ. ಐಟಿ, ಇಡಿ, ಸಿಬಿಐ ಅಧಿಕಾರಿಗಳನ್ನು ಕಾಂಗ್ರೆಸ್ ನಾಯಕರ ಮೇಲೆ ಛೂ ಬಿಟ್ಟಿದ್ದಾರೆ. ಸಿಬಿಐ ನೋಟಿಸ್ ನನಗೂ ಬಂದಿತ್ತು. ಒಂದು ದಿನ ಪೂರ್ತಿ ವಿಚಾರಣೆಗೆ ಹೋಗಿದ್ದೆ ಎಂದೂ ಅವರು ಹೇಳಿದರು.

    ಬಿ.ಎಸ್.ಯಡಿಯೂರಪ್ಪ, ಕಟ್ಟಾ ಸುಬ್ರಮಣ್ಯ ನಾಯ್ಡು, ಜನಾರ್ದನ ರೆಡ್ಡಿ, ಹರತಾಳು ಹಾಲಪ್ಪ ಜೈಲಿಗೆ ಹೋಗಿರಲಿಲ್ಲವೇ? ಸಿಟಿ ರವಿಯವರನ್ನು ಚಿಕ್ಕಮಗಳೂರಿನಲ್ಲಿ ಲೂಟಿ ಎಂದು ಕರೆಯುತ್ತಾರೆ. ಬಿಜೆಪಿಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಹಲವು ಅಭ್ಯರ್ಥಿಗಳು ಇದ್ದರು. ಯತ್ನಾಳ್, ಸಿ.ಟಿ.ರವಿ, ಈಶ್ವರಪ್ಪ ಸಿಎಂ ಆಕಾಂಕ್ಷಿಯಾಗಿದ್ದರು. ಬೊಮ್ಮಾಯಿ ಆದ ಮೇಲೆ ಉಳಿದವರಿಗೆ ವಾಂತಿಯಾಗಿದೆ. ಹೀಗಾಗಿ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ. ಸಿಟಿ ರವಿ ತಲೆಯಲ್ಲಿ ಬುದ್ಧಿ ಇಟ್ಟುಕೊಂಡು ಮಾತನಾಡಬೇಕು. ಅಮಿತ್ ಶಾ, ಯಡಿಯೂರಪ್ಪ, ಅಶೋಕ್, ಹಾಲಪ್ಪ, ಜನಾರ್ದನ ರೆಡ್ಡಿ, ಕಟ್ಟಾ ಇವರೆಲ್ಲ ಜೈಲಿಗೆ ಹೋಗಿದ್ದಾರೆ. ಯಡಿಯೂರಪ್ಪ ಅವರ ಅರ್ಧ ಸಂಪುಟ ಜೈಲಿನಲ್ಲಿತ್ತು. ಇದನ್ನು ತಿಳಿದುಕೊಂಡು ಮಾತನಾಡಿ ಎಂದು ಕಿಡಿಕಾರಿದರು.

    ಸಿ.ಟಿ.ರವಿಯವರಿಗೆ ಸವಾಲು: ಇಂದಿರಾ, ನೆಹರು ಬಗ್ಗೆ ಮಾತನಾಡುತ್ತಿದ್ದೀರಿ. ಅವರ ಆಸ್ತಿ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದೀರಿ. ನಿಮಗೆ ಸಾವಿರ ಕೋಟಿ ಆಸ್ತಿ ಇದೆ. ಇದು ಎಲ್ಲಿಂದ ಬಂತು ಅಂತ ಜನರಿಗೆ ಹೇಳಿ. ನಮಗೂ ಎಲ್ಲಾ ಗೊತ್ತಿದೆ. ಹಾಗಾಗಿ ನೀವು ಮಾತನಾಡುವಾಗ ಎಚ್ಚರ ಇರಲಿ. ನೆಹರು, ಇಂದಿರಾಗೆ ನಿಮ್ಮ ತಂದೆ ಕೂಡ ಓಟ್ ಹಾಕಿದ್ದಾರೆ. ಹಾಗಾಗಿ ಗೌರವದಿಂದ ನಡೆದುಕೊಳ್ಳಿ. ಇಂದಲ್ಲ ನಾಳೆ ಸಿ.ಟಿ.ರವಿ ಸಿಎಂ ಆಗಬಹುದು. ಈಗಲೇ ಹತಾಶೆಯಿಂದ ಮಾತನಾಡಬಾರದು. ನಿಮ್ಮದೇ ನಾಯಕರೊಬ್ಬರು ನಿಮ್ಮ ಬಗ್ಗೆ ಮಾತನಾಡಿದ್ದರು. ರವಿಯವರದ್ದು ಎಲುಬಿಲ್ಲದ ನಾಲಿಗೆ ಎಂದು ನಮ್ಮ ಕಾರ್ಯಕರ್ತರು ಕೂಡ ಹೇಳುತ್ತಾರೆ. ನಿಮ್ಮದು ಬಚ್ಚಲಮನೆ ಚಪ್ಪಲಿ ನಾಲಿಗೆ, ನೀವು ಅದರಂತೆ ಮಾತನಾಡುತ್ತಿದ್ದೀರಿ ಎಂದು ರವಿ ವಿರುದ್ಧ ವ್ಯಂಗ್ಯವಾಡಿದರು.

  • ವೈ ಪ್ಲಸ್ ಸೆಕ್ಯುರಿಟಿಗಾಗಿ ತಿಂಗಳಿಗೆ 10 ಲಕ್ಷ ಖರ್ಚು- ಬ್ರಿಜೇಶ್ ಕಾಳಪ್ಪ ಟ್ವೀಟ್‍ಗೆ ಕಂಗನಾ ಪ್ರತಿಕ್ರಿಯೆ

    ವೈ ಪ್ಲಸ್ ಸೆಕ್ಯುರಿಟಿಗಾಗಿ ತಿಂಗಳಿಗೆ 10 ಲಕ್ಷ ಖರ್ಚು- ಬ್ರಿಜೇಶ್ ಕಾಳಪ್ಪ ಟ್ವೀಟ್‍ಗೆ ಕಂಗನಾ ಪ್ರತಿಕ್ರಿಯೆ

    ಬೆಂಗಳೂರು: ಬಾಲಿವುಡ್ ನಟಿ ಕಂಗನಾ ರಣಾವತ್ ಅವರಿಗೆ ಕಲ್ಪಿಸಲಾಗಿರುವ ವೈ ದರ್ಜೆಯ ಭದ್ರತೆಗೆ ಸರ್ಕಾರ ಮಾಸಿಕವಾಗಿ 10 ಲಕ್ಷ ರೂ. ಖರ್ಚು ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ಬ್ರಿಜೇಶ್ ಕಾಳಪ್ಪ ಟ್ವೀಟ್ ಮಾಡಿದ್ದರು. ಬ್ರಿಜೇಶ್ ಕಾಳಪ್ಪವರ ಟ್ವೀಟ್ ಗೆ ಕಂಗನಾ ರಣಾವತ್ ಪ್ರತಿಕ್ರಿಯೆ ನೀಡಿದ್ದಾರೆ.

    ಶಿವಸೇನೆ ನಾಯಕ ಸಂಜಯ್ ರಾವತ್ ಮತ್ತು ಕಂಗನಾ ನಡುವೆ ಟ್ವೀಟ್ ವಾರ್ ನಡೆದಿತ್ತು. ಈ ವೇಳೆ ಕಂಗನಾ ಮುಂಬೈ ಸುರಕ್ಷಿತವಲ್ಲ ಎಂದು ನಗರವನ್ನು ಪಿಓಕೆಗೆ ಹೋಲಿಕೆ ಮಾಡಿದ್ದರು. ಈ ಹಿನ್ನೆಲೆ ಸಂಜಯ್ ರಾವತ್ ಕಂಗನಾ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು. ಇದಾದ ಬಳಿಕ ಕಂಗನಾ ಮುಂಬೈ ಬರೋದಾಗಿ ಹೇಳಿದ್ದರಿಂದ ಕೇಂದ್ರ ಸರ್ಕಾರ ನಟಿಗೆ ವೈ ಪ್ಲಸ್ ದರ್ಜೆಯ ಭದ್ರತೆಯನ್ನು ನೀಡಿತ್ತು.

     

    ಮುಂಬೈನಿಂದ ಹಿಮಾಚಲ ಪ್ರದೇಶಕ್ಕೆ ಕಂಗನಾ ಹಿಂದಿರುಗಿದ್ದಾರೆ. ಆದ್ರೆ ಇನ್ನು ಕಂಗನಾ ಅವರಿಗೆ ನೀಡಲಾಗಿರುವ ಭದ್ರತೆ ಬಗ್ಗೆ ಸುಪ್ರೀಂಕೋರ್ಟ್ ವಕೀಲರಾಗಿರುವ ಬ್ರಿಜೇಶ್ ಕಾಳಪ್ಪ ಪ್ರಶ್ನೆ ಮಾಡಿದ್ದಾರೆ.

    ಬ್ರಿಜೇಶ್ ಕಾಳಪ್ಪ ಟ್ವೀಟ್: ಓರ್ವ ವ್ಯಕ್ತಿಗೆ ನೀಡಲಾಗುವ ವೈ ದರ್ಜೆಯ ಭದ್ರತೆಗಾಗಿ ಕೇಂದ್ರ ಸರ್ಕಾರ ಮಾಸಿಕವಾಗಿ 10 ಲಕ್ಷ ರೂ.ಗೂ ಅಧಿಕ ಖರ್ಚು ಮಾಡಬೇಕಾಗುತ್ತದೆ. ಈ ಹಣವನ್ನ ತೆರಿಗೆದಾರರಿಂದ ಸಂಗ್ರಹಿಸಲಾಗುತ್ತದೆ. ಆದ್ರೆ ಕಂಗನಾ ರಣಾವತ್ ಹಿಮಾಚಲ ಪ್ರದೇಶದಲ್ಲಿ ಸುರಕ್ಷಿತವಾಗಿದ್ದಾರೆ. (ಪಿಓಕೆಯಿಂದ ಬಹು ದೂರದಲ್ಲಿದ್ದಾರೆ). ಈ ಸಂದರ್ಭದಲ್ಲಿ ಮೋದಿ ಸರ್ಕಾರ ಕಂಗನಾ ಅವರಿಗೆ ನೀಡಿದ ಭದ್ರತೆಯನ್ನ ಹಿಂಪಡೆಯುತ್ತಾ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದರು. ಇದನ್ನೂ ಓದಿ: ಚಂಡೀಗಢ ತಲುಪ್ತಿದ್ದಂತೆ ನಾನು ಬದುಕುಳಿದೆ ಎಂದ ಕಂಗನಾ

    ಕಂಗನಾ ಪ್ರತಿಕ್ರಿಯೆ: ಬ್ರಿಜೇಶ್ ಜೀ, ನಾನು ಮತ್ತು ನೀವು ಏನು ಯೋಚನೆ ಮಾಡುತ್ತೇವೆ ಎಂಬುದರ ಮೇಲೆ ಭದ್ರತೆ ನೀಡಲ್ಲ. ಇಂಟಲಿಜೆನ್ಸ್ ಬ್ಯೂರೋ ಮಾಹಿತಿ ಆಧಾರದ ಮೇಲೆ ಭದ್ರತೆ ನೀಡಲಾಗುತ್ತದೆ. ಬ್ಯೂರೋಗೆ ಅಪಾಯದ ಸುಳಿವು ಸಿಕ್ಕಿದ್ರೆ ಭದ್ರತೆಯನ್ನ ಹೆಚ್ಚಿಸುವ ಸಾಧ್ಯತೆಗಳಿರುತ್ತವೆ ಎಂದು ಉತ್ತರಿಸಿದ್ದಾರೆ. ಇನ್ನು ಕಂಗನಾ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ಬ್ರಿಜೇಶ್ ಕಾಳಪ್ಪ, ಶಾಂತಿಯುತ ಸ್ಥಳ ಹಿಮಾಚಲ ಪ್ರದೇಶದಲ್ಲಿ ನಿಮ್ಮ ಭದ್ರತೆಯ ಡೌನ್ ಗ್ರೇಡಿಂಗ್ ಮಾಡಲು ಇಂಟಲಿಜೆನ್ಸ್ ಬ್ಯೂರೋ ಪರಿಗಣಿಸಲಿ ಎಂದಿದ್ದಾರೆ. ಇದನ್ನೂ ಓದಿ: ನಾನು ಡ್ರಗ್ಸ್ ಅಡಿಕ್ಟ್ ಆಗಿದ್ದೆ – ಕಂಗನಾ ಹಳೆ ವಿಡಿಯೋ ವೈರಲ್

    ಇನ್ನು ಸೋಮವಾರ ಹಿಮಾಚಲ ಪ್ರದೇಶ ತಲಪುತ್ತಿದ್ದಂತೆ ಟ್ವೀಟ್ ಮಾಡಿದ್ದ ಕಂಗನಾ, ಇಲ್ಲಿಗೆ ಬಂದ ಕೂಡಲೇ ಭದ್ರತೆ ಹೆಸರಿಗೆ ಮಾತ್ರವಿದೆ. ಇಲ್ಲಿ ನನಗೆ ಸುರಕ್ಷತೆ ಅನುಭವ ಆಗುತ್ತಿದ್ದು, ಜನರು ನನ್ನನ್ನು ಪ್ರೀತಿಯಿಂದ ಸ್ವಾಗತಿಸುತ್ತಿದ್ದಾರೆ. ಈ ಬಾರಿ ಬದುಕುಳಿದಿದ್ದೇನೆ. ಹಿಂದೊಮ್ಮೆ ಮುಂಬೈನಲ್ಲಿ ತಾಯಿಯ ನಿಷ್ಕಲ್ಮಶ ಪ್ರೀತಿಯನ್ನು ಕಂಡಿದ್ದೇನೆ. ಆದ್ರೆ ಸೋನಿಯಾ ಸೇನೆಯಿಂದಾಗಿ ಮುಂಬೈನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ ಎಂದು ಆರೋಪಿಸಿದ್ದರು. ಇದನ್ನೂ ಓದಿ: ಭಿಕ್ಷೆ ಬೇಡೋಕೆ ಮುಂಬೈಗೆ ಯಾಕೆ ಬಂದೆ- ಕಂಗನಾಗೆ ರಾಖಿ ಪ್ರಶ್ನೆ

  • ನಾಚಿಕೆ ಆಗ್ಬೇಕು, ನಿಮ್ಮ ವಿರುದ್ಧ ಕಾನೂನು ಸಮರ: ಬ್ರಿಜೇಶ್ ಕಾಳಪ್ಪ ವಿರುದ್ಧ ಸೋಮ್ ದತ್ತಾ ಗುಡುಗು

    ನಾಚಿಕೆ ಆಗ್ಬೇಕು, ನಿಮ್ಮ ವಿರುದ್ಧ ಕಾನೂನು ಸಮರ: ಬ್ರಿಜೇಶ್ ಕಾಳಪ್ಪ ವಿರುದ್ಧ ಸೋಮ್ ದತ್ತಾ ಗುಡುಗು

    ಬೆಂಗಳೂರು: ನಿಮಗೆ ನಾಚಿಕೆ ಆಗಬೇಕು. ನಿಮ್ಮ ವಿರುದ್ಧ ನಾನು ಕಾನೂನು ಸಮರ ಆರಂಭಿಸುತ್ತೇನೆ ಎಂದು ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ವಿರುದ್ಧ ಸೋಮ್ ದತ್ತಾ ಗುಡುಗಿದ್ದಾರೆ.

    ಇಂದು ಬೆಳಗ್ಗೆ ಬ್ರಿಜೇಶ್ ಕಾಳಪ್ಪ ಸುದ್ದಿಗೋಷ್ಠಿಯಲ್ಲಿ ಸೋಮ್ ದತ್ತಾ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋವನ್ನು ಬಿಡುಗಡೆ ಮಾಡಿ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಕಿಡಿ ಕಾರಿದ್ದರು. ಈ ಸಂಬಂಧ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಸೋಮ್ ದತ್ತಾ, ಮಹಿಳೆಗೆ ಗೌರವ ನೀಡದ ಬ್ರಿಜೇಶ್ ಕಾಳಪ್ಪರಿಗೆ ನಾಚಿಕೆ ಆಗಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ನಿಮ್ಮ ರಾಜಕೀಯ ಆಟದಲ್ಲಿ ನನ್ನ ಬಳಸಿಕೊಳ್ಳುವುದನ್ನು ನಿಲ್ಲಿಸಿ. ಈಗಾಗಲೇ ಮಹಿಳಾ ಆಯೋಗಕ್ಕೆ ಪತ್ರ ಬರೆದ ಈ ವಿಚಾರದಲ್ಲಿ ನನ್ನ ಪಾತ್ರವಿಲ್ಲ. ನನ್ನ ಇಚ್ಛೆಗೆ ವಿರುದ್ಧವಾಗಿ ಕೇಸ್ ದಾಖಲಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತೇನೆ. ಆಡಿಯೋ ಕ್ಲಿಪ್ ನಲ್ಲಿ ಹೆಚ್ಚಿನ ಮಾಹಿತಿಗಳು ನನ್ನ ಖಾಸಗಿತನಕ್ಕೆ ಧಕ್ಕೆಯುಂಟು ಮಾಡಿವೆ. ನನ್ನ ಹೇಳಿಕೆಗಳನ್ನು ರಾಜಕೀಯಗೊಳಿಸಿ ತಿರುಚಲಾಗಿದೆ. ಈ ಹಿನ್ನೆಲೆಯಲ್ಲಿ ನಾನು ಸ್ಪಷ್ಟನೆ ನೀಡುತ್ತಿದ್ದು, ಯಾವುದೇ ರಾಜಕೀಯ ಪಕ್ಷಗಳು ಈ ರೀತಿ ಮಾಡಬೇಡಿ ಎಂದು ಮನವಿ ಮಾಡಿಕೊಳ್ಳುತ್ತೇನೆ. ಈ ರೀತಿಯ ಸುಳ್ಳು ಸುದ್ದಿಗಳನ್ನು ಮಾಧ್ಯಮಗಳು ಬಿತ್ತರಿಸದಂತೆ ಮನವಿ ಮಾಡಿಕೊಳ್ಳುತ್ತೇನೆ.

    ನನ್ನ ಖಾಸಗಿ ಸಂಭಾಷಣೆಯನ್ನು ನನ್ನ ಅನುಮತಿ ಪಡೆಯದೇ ಪ್ರಕಟಿಸಲಾಗಿದೆ. ಇದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದ್ದು, ಇದನ್ನು ನಾನು ಖಂಡಿಸುತ್ತೇನೆ. ನನ್ನ ಖಾಸಗೀತನಕ್ಕೆ ಧಕ್ಕೆ ತಂದವರು ಬಹಿರಂಗವಾಗಿ ಕ್ಷಮೆ ಕೇಳಬೇಕೆಂದು ಆಗ್ರಹಿಸುತ್ತೇನೆ. ರಾಜಕೀಯಕ್ಕಾಗಿ ಮಹಿಳೆಯ ಗೌರವಕ್ಕೆ ಧಕ್ಕೆ ತಂದಿರುವ ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ಅವರಿಗೆ ನಾಚಿಕೆಯಾಗಬೇಕು. ನನ್ನ ಘನತೆಗೆ ಕುಂದು ತಂದಿದ್ದಕ್ಕೆ ಬ್ರಿಜೇಶ್ ಕಾಳಪ್ಪ ವಿರುದ್ಧ ಕಾನೂನು ಮೊರೆ ಹೋಗುತ್ತೇನೆ. ಇದನ್ನು ಓದಿ: ತೇಜಸ್ವಿ ಸೂರ್ಯ ವಿರುದ್ಧ ಎಫ್‍ಐಆರ್ ದಾಖಲಾಗಿಲ್ಲ: ಡಿಸಿಪಿ ಇಶಾ ಪಂತ್

    ಬ್ರಿಜೇಶ್ ಕಾಳಪ್ಪ ಹೇಳಿದ್ದೇನು?
    ಇಂದು ಸುದ್ದಿಗೋಷ್ಠಿ ನಡೆಸಿ ಸೋಮ್ ದತ್ತಾ ಅವರ ಆಡಿಯೋ ಕ್ಲಿಪ್ ಅನ್ನು ಬ್ರಿಜೇಶ್ ಕಾಳಪ್ಪ ಬಿಡುಗಡೆ ಮಾಡಿದ್ದರು. ಈ ವೇಳೆ ಮಾತನಾಡಿದ ಅವರು, ತೇಜಸ್ವಿ ಸೂರ್ಯ ವಿರುದ್ಧ ಲೈಂಗಿಕ ಕಿರುಕುಳದ ಆರೋಪಕ್ಕೆ ಸಂಬಂಧಿಸಿದಂತೆ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತೇಜಸ್ವಿ ಸೂರ್ಯ ತಮ್ಮ ಅಫಿಡವಿಟ್ ನಲ್ಲಿ ಪ್ರಕರಣ ಬಗ್ಗೆ ಹೇಳಿಕೊಂಡಿಲ್ಲ. ಈ ಎಲ್ಲ ವಿಚಾರಗಳು ಸಂಸದ ಪ್ರತಾಪ್ ಸಿಂಹ, ಬಿಜೆಪಿ ಮತ್ತು ಆರ್‍ಎಸ್‍ಎಸ್ ನಾಯಕರಿಗೆ ಗೊತ್ತಿದ್ರೂ ಸುಮ್ಮನಿದ್ದಾರೆ. ತೇಜಸ್ವಿ ಸೂರ್ಯ ಮೂರು ಮಹಿಳೆಯರಿಗೆ ಮೋಸ ಮಾಡಿದ್ದಾನೆ ಎಂಬುವುದು ಆಡಿಯೋ ಕ್ಲಿಪ್ ಹೇಳುತ್ತದೆ. ಸೋಮ್ ದತ್ತಾಗೆ ಬಿಜೆಪಿ ನಾಯಕರು ಕರೆ ಮಾಡಿ ಧಮ್ಕಿ ಹಾಕಿದ್ದು, ಹೀಗಾಗಿ ಮಾಧ್ಯಮಗಳ ಮುಂದೆ ಬರಲು ಸಾಧ್ಯ ಆಗುತ್ತಿಲ್ಲ ಎಂದು ಬ್ರಿಜೇಶ್ ಕಾಳಪ್ಪ ಆರೋಪಿಸಿದರು.

    ನನ್ನ ರೀತಿಯಲ್ಲಿಯೇ ಇನ್ನಿಬ್ಬರು ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ಸೋಮ್ ದತ್ತಾ ತಮ್ಮ ಸಂಭಾಷಣೆಯಲ್ಲಿ ತಿಳಿಸಿದ್ದಾರೆ. ತೇಜಸ್ವಿ ಸೂರ್ಯ ಉಮೇದುವಾರಿಕೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ದೂರಿನ ಬಗ್ಗೆ ಉಲ್ಲೇಖಿಸಿಲ್ಲ. ಡಾ. ಸೋಮ್ ದತ್ತಾ ದಾಖಲಿಸಿರುವ ದೂರಿನ ಬಗ್ಗೆ ತೇಜಸ್ವಿ ಸೂರ್ಯ ಎಲ್ಲಿಯೂ ಹೇಳಿಲ್ಲ. ತೇಜಸ್ವಿ ಸೂರ್ಯ ಮೂರು ಆರೋಪಗಳಿದ್ದು, ಬಿಜೆಪಿ ಸ್ಪಷ್ಟನೆ ನೀಡಬೇಕೆಂದು ಬ್ರಿಜೇಶ್ ಕಾಳಪ್ಪ ಆರೋಪಿಸಿದ್ದರು.

  • ತೇಜಸ್ವಿ ಸೂರ್ಯ ವಿರುದ್ಧ ಸ್ಫೋಟಕ ಆಡಿಯೋ ಕ್ಲಿಪ್ ರಿಲೀಸ್

    ತೇಜಸ್ವಿ ಸೂರ್ಯ ವಿರುದ್ಧ ಸ್ಫೋಟಕ ಆಡಿಯೋ ಕ್ಲಿಪ್ ರಿಲೀಸ್

    – ಆತ ಎಂಪಿ ಆದ್ರೆ ‘ಹಿ ಈಸ್ ಡೇಂಜರಸ್’ ಎಂದ ಸೋಮ್ ದತ್ತಾ!
    – ನಾನು ಗರ್ಲ್ ಫ್ರೆಂಡ್ ಅಲ್ಲ, ಭಾವಿ ಪತ್ನಿಯಾಗಿದ್ದೆ!

    ಬೆಂಗಳೂರು: ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ತಮ್ಮ ಸುದ್ದಿಗೋಷ್ಠಿ ನಡೆಸಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧದ ಸ್ಫೋಟಕ ಆಡಿಯೋ ರಿಲೀಸ್ ಮಾಡಿದ್ದಾರೆ. ಡಾ. ಸೋಮ್ ದತ್ತಾ ತಮ್ಮ ಪರಿಚಿತ ವ್ಯಕ್ತಿ ಜೊತೆ 14 ನಿಮಿಷಗಳ ಕಾಲ ಮಾತನಾಡಿರುವ ಆಡಿಯೋ ಕ್ಲಿಪ್ ಅನ್ನು ಕಾಂಗ್ರೆಸ್ ಬಿಡುಗಡೆಮಾಡಿದೆ.

    ತೇಜಸ್ವಿ ಸೂರ್ಯ ವಿರುದ್ಧ ಲೈಂಗಿಕ ಕಿರುಕುಳದ ಆರೋಪಕ್ಕೆ ಸಂಬಂಧಿಸಿದಂತೆ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತೇಜಸ್ವಿ ಸೂರ್ಯ ತಮ್ಮ ಅಫಿಡವಿಟ್ ನಲ್ಲಿ ಪ್ರಕರಣ ಬಗ್ಗೆ ಹೇಳಿಕೊಂಡಿಲ್ಲ. ಈ ಎಲ್ಲ ವಿಚಾರಗಳು ಸಂಸದ ಪ್ರತಾಪ್ ಸಿಂಹ, ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರಿಗೆ ಗೊತ್ತಿದ್ರೂ ಸುಮ್ಮನಿದ್ದಾರೆ. ತೇಜಸ್ವಿ ಸೂರ್ಯ ಮೂರು ಮಹಿಳೆಯರಿಗೆ ಮೋಸ ಮಾಡಿದ್ದಾನೆ ಎಂಬುವುದು ಆಡಿಯೋ ಕ್ಲಿಪ್ ಹೇಳುತ್ತದೆ. ಸೋಮ್ ದತ್ತಾಗೆ ಬಿಜೆಪಿ ನಾಯಕರು ಕರೆ ಮಾಡಿ ಧಮ್ಕಿ ಹಾಕಿದ್ದು, ಹೀಗಾಗಿ ಮಾಧ್ಯಮಗಳ ಮುಂದೆ ಬರಲು ಸಾಧ್ಯ ಆಗುತ್ತಿಲ್ಲ ಎಂದು ಬ್ರಿಜೇಶ್ ಕಾಳಪ್ಪ ಆರೋಪಿಸಿದರು.

    ಆಡಿಯೋದಲ್ಲಿ ಏನಿದೆ?
    ನಾನು ಮೊದಲಿನಿಂದಲೂ ಆ ಪಕ್ಷದಲ್ಲಿ ಕೆಲಸ ಮಾಡಿದ್ದೇನೆ. ಪಕ್ಷದ ಹಲವು ಮುಖಂಡರು ಸೇರಿದಂತೆ ತೇಜಸ್ವಿನಿ ಅನಂತ್‍ಕುಮಾರ್ ಅವರಿಗೂ ನಮ್ಮಿಬ್ಬರ ವಿಷಯ ಗೊತ್ತಿದೆ. ಎಂಪಿ ಟಿಕೆಟ್ ಸಿಕ್ಕ ಬಳಿಕ ಆತ ಪಾಪ್ಯೂಲರ್ ಆಗಿದ್ದು, ಅವನಿಗಿಂತ ಹೆಚ್ಚು ಗೌರವವನ್ನು ನಾನು ಸಮಾಜದಲ್ಲಿ ಹೊಂದಿದ್ದೇನೆ. ಆತನಿಂದಾಗಿ ನಾನೇಕೆ ನನ್ನ ಗೌರವವನ್ನು ಹಾಳು ಮಾಡಿಕೊಳ್ಳಲಿ. ಶಾಸಕರೊಬ್ಬರು ಕರೆ ಮಾಡಿ ನನ್ನ ಬಳಿ ಎಲ್ಲ ದಾಖಲೆಗಳಿವೆ. ಕೋರಮಂಗಲದಲ್ಲಿ ನಾನು ದೂರು ದಾಖಲಿಸಿರುವ ಎಫ್‍ಐಆರ್, ವಾಟ್ಸಪ್ ಮೆಸೇಜ್ ಗಳಿವೆ ಎಂದರು.

    ಆ ಶಾಸಕರ ಪರವಾಗಿ ಕ್ಯಾಂಪೇನ್ ಮಾಡಿದ್ದು, ನನ್ನನ್ನು ತಂಗಿಯಂತೆ ಕಾಣುತ್ತಾರೆ. ಶಾಸಕರೊಂದಿಗೆ ಇನ್ನಿಬ್ಬರು ಹುಡುಗಿಯರು ಸಹ ಮಾತನಾಡಿದ್ದಾರೆ. ಫೋನಿನಲ್ಲಿ ಇಬ್ಬರು ಹುಡುಗಿಯರ ಹೆಸರು ಹೇಳಲಾರೆ. ಒಬ್ಬ ಹುಡುಗಿ ಮ್ಯಾಗಜೀನ್ ನಲ್ಲಿ ಕೆಲಸ ಮಾಡಿಕೊಂಡಿದ್ದಳು. ಇದೀಗ ಆಕೆ ಮದುವೆಯಾಗಿ ಮುಂಬೈನಲ್ಲಿ ಸೆಟಲ್ ಆಗಿದ್ದಾಳೆ.

    ನನ್ನ ಹಣದಿಂದ ಬದುಕಿದ್ದ: ಆತ ಇಷ್ಟು ದಿನ ನನ್ನ ಹಣದಿಂದಲೇ ಬದುಕಿದ್ದ. ಬೇಕಾದ್ರೆ ಆತನ ಬ್ಯಾಂಕ್ ಅಕೌಂಟ್ ಚೆಕ್ ಮಾಡಿದ್ರೆ ನನ್ನಿಂದ ಎಷ್ಟು ಹಣ ಪಡೆದಿದ್ದಾನೆ ಎನ್ನುವುದು ಗೊತ್ತಾಗಲಿದೆ. ಹಣಕ್ಕಾಗಿ ನಾನು ಬ್ಲ್ಯಾಕ್ ಮೇಲ್ ಮಾಡುತ್ತೇನೆ ಎಂದು ಹೇಳುತ್ತಿರೋದು ಶುದ್ಧ ಸುಳ್ಳು. ನನ್ನ ಎಷ್ಟು ಶ್ರೀಮಂತಳು ಎಂಬುವುದು ಎಲ್ಲರಿಗೂ ಗೊತ್ತಿದೆ. ನನ್ನ ಕಂಪನಿಗಳು ಮುನ್ನೂರು ಮಿಲಿಯನ್ ಡಾಲರ್ ಮೌಲ್ಯವನ್ನು ಹೊಂದಿವೆ. ನಾನೇಕೆ ಹಣಕ್ಕಾಗಿ ಬೇರೆಯವರನ್ನ ಬ್ಲ್ಯಾಕ್ ಮೇಲ್ ಮಾಡಬೇಕು. ಕೋರಮಂಗಲ ಪೊಲೀಸ್ ಠಾಣೆಗೆ ತೆರಳಿದರೆ ನಿಮಗೆಲ್ಲ ಸಾಕ್ಷಿಗಳು ದೊರೆಯುತ್ತವೆ. ಈಗಾಗಲೇ ಕೆಲವು ಮಾಧ್ಯಮದವರಿಗೆ ಎಫ್‍ಐಆರ್ ಪ್ರತಿಯನ್ನು ತೆಗೆದುಕೊಂಡು ನನ್ನನ್ನು ಸಂಪರ್ಕಿಸಿದ್ದಾರೆ.

    ಟ್ವೀಟ್ ಡಿಲೀಟ್ ಮಾಡಿದ್ಯಾಕೆ?
    ಕಳೆದ ವರ್ಷ ಜೂನ್ ಅಥವಾ ಜುಲೈ ತಿಂಗಳಲ್ಲಿ ನಾನು ದೂರು ದಾಖಲಿಸಿದ್ದೇನೆ. ದೀಪಾವಳಿ ಹಬ್ಬದಂದು ನನ್ನ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾಗ ಪೊಲೀಸರು ಬಂದು ಆತನನ್ನು ಕರೆದುಕೊಂಡು ಹೋದರು. ಮಾರ್ಚ್ 12ನವರೆಗೂ ಆತನೊಂದಿಗೆ ಸಂಪರ್ಕದಲ್ಲಿದ್ದೆ. ನಾನು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತೇನೆ. ನನ್ನ ಮೇಲೆ ಈ ರೀತಿಯ ದೌರ್ಜನ್ಯ ನಡೆದಾಗ ನಾನು ಸಮ್ಮನೆ ಕುಳಿತರೆ ಹೇಗೆ ಎಂದು ಟ್ವೀಟ್ ಮಾಡಿದೆ. ಟ್ವೀಟ್ ಬಳಿಕ ನನ್ನ ಕುಟುಂಬದವರಿಗೆ ಅನಗತ್ಯವಾಗಿ ತೊಂದರೆ ಕೊಡುವುದು ಆರಂಭವಾಯಿತು. ನನ್ನ ಕುಟುಂಬದವರ ರಕ್ಷಣೆಗಾಗಿ ಟ್ವೀಟ್ ಡಿಲೀಟ್ ಮಾಡಿದೆ.

    ಆತನ ವಿರುದ್ಧ ಟ್ವೀಟ್ ಮಾಡಿ ಪ್ರಸಿದ್ಧಿ ಪಡೆಯಬೇಕೆಂಬ ಹುಚ್ಚು ಆಸೆ ನನಗಿಲ್ಲ. ನಾನು ಈಗಾಗಲೇ ಉದ್ಯಮದಲ್ಲಿ ಹೆಸರು ಮಾಡಿದ್ದೇನೆ. ಎಂಪಿ ಟಿಕೆಟ್ ಸಿಕ್ಕ ಬಳಿಕ ಆತ ನಾಲ್ಕು ಜನರಿಗೆ ಗೊತ್ತಾಗಿದ್ದಾನೆ. ಇ-ಮೇಲ್ ಮೂಲಕ ಸಹ ಆತ ನನಗೆ ಬೆದರಿಕೆ ಹಾಕುತ್ತಿದ್ದ. ಮೇಲ್ ನಲ್ಲಿಯೂ ನನಗೆ ತೊಂದರೆ ನೀಡಿರುವುದನ್ನು ಎಲ್ಲವನ್ನು ಒಪ್ಪಿಕೊಂಡಿದ್ದಾನೆ. ನಾನು ಇದೆಲ್ಲದರಿಂದ ಹೊರಬರಬೇಕಿತ್ತು. ನಾನು ಅವನನ್ನು ಬಹು ಹಿಂದೆಯೇ ತಡೆಯಬೇಕಿತ್ತು. ಒಬ್ಬ ತಪ್ಪು ಮನುಷ್ಯನಿಂದಾಗಿ ಅವರ ಇಡೀ ಕುಟುಂಬ ತೊಂದರೆಯನ್ನು ಅನುಭವಿಸಬಾರದು. ನನ್ನ ಕುಟುಂಬವು ಸಹ ತುಂಬಾ ಗೌರವಸ್ಥ ಕುಟುಂಬ. ಇಂದಿಗೂ ನಾನು ಅವನ ಕುಟುಂಬಸ್ಥರ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದೇನೆ.

    ಪ್ರತಾಪ್ ಸಿಂಹಗೆ ಗೊತ್ತಿತ್ತು:
    ಅವನೇ ನನ್ನ ಹಣದಿಂದ ಬದುಕುತ್ತಿದ್ದ, ನಾನು ಏಕೆ ಅವನಿಗೆ ಬ್ಲ್ಯಾಕ್ ಮೇಲ್ ಮಾಡಲಿ. ಬ್ಲ್ಯಾಕ್ ಮೇಲ್ ಮಾಡುವದರಿಂದ ಏನು ಉಪಯೋಗವಾಗಲಿದೆ. ನನಗೇನು ಅದರಿಂದ ಖ್ಯಾತಿ ಬರುತ್ತಾ? ಹೆಚ್ಚಿನ ಮಾಹಿತಿ ಬೇಕಾದ್ರೆ ಐಪಿಎಸ್ ಮಹಿಳಾ ಅಧಿಕಾರಿಯೊಬ್ಬರನ್ನು ಭೇಟಿ ಮಾಡಿ. ಅವರೊಂದಿಗೆ ಮಾತನಾಡಿ ಈ ವ್ಯಕ್ತಿಯ ಬಗ್ಗೆ ದೂರು ನೀಡಿದ್ದೇನೆ. ಈ ವಿಷಯ ಸಂಸದ ಪ್ರತಾಪ್ ಸಿಂಹರಿಗೂ ಗೊತ್ತಿದೆ. ಪ್ರತಾಪ್ ಸಿಂಹರಿಗೆ ನಮ್ಮಿಬ್ಬರ ಮಾತುಕತೆ ಸ್ಕ್ರೀನ್ ಶಾಟ್ ಕಳುಹಿಸಿದ್ದೇನೆ.

    ನಾನು ಭಾವಿಪತ್ನಿಯಾಗಿದ್ದೆ:
    ನಾನು ಅವನ ಗರ್ಲ್ ಫ್ರೆಂಡ್ ಅಲ್ಲ, ಭಾವಿಪತ್ನಿಯಾಗಿದ್ದವಳು. ನಮ್ಮಿಬ್ಬರ ನಿಶ್ಚಿತಾರ್ಥ ಸಹ ನಡೆದಿದೆ. ನಾವಿಬ್ಬರು ಮದುವೆ ಆಗಲಿದ್ದೇವೆ ಎಂದು ಇಡೀ ಜಗತ್ತಿಗೆ ಗೊತ್ತಿತ್ತು. ನಿಶ್ಚಿತಾರ್ಥದ ಬಳಿಕ ಪ್ರಪಂಚದಲ್ಲಿ ನಾವು ಒಟ್ಟಾಗಿ ಓಡಾಡುತ್ತಿದ್ದೇವು. ಈಗ ಎಲ್ಲವೂ ಸುಳ್ಳು ಎಂದು ಹೇಗೆ ತಪ್ಪಿಸಿಕೊಳ್ಳಲು ಸಾಧ್ಯ? ಎಲ್ಲರಿಗೂ ನಾವು ಜೊತೆಯಾಗಿ ಒಡಾಡುತ್ತಿದ್ದ ವಿಚಾರ ಗೊತ್ತಿತ್ತು. ಮಾತುಕತೆಯ ಸ್ಕ್ರೀನ್ ಶಾಟ್ ಗಳು, ಫೋಟೋಗಳು ಇದೆಲ್ಲವೂ ಎಲ್ಲರಿಗೂ ಗೊತ್ತಿದೆ. ಆದ್ರೆ ಈ ವಿಷಯ ಹೇಗೆ ಲೀಕ್ ಆಯ್ತು ಎಂಬುವುದು ನನಗೆ ಗೊತ್ತಿಲ್ಲ.

    ‘ಹಿ ಈಸ್ ಡೇಂಜರಸ್’:
    ಈ ಎಲ್ಲ ಬೆಳವಣಿಗೆಯ ಬಳಿಕ ನಾವಿಬ್ಬರು ಒಳ್ಳೆಯ ಸ್ನೇಹಿತರಾಗಿದ್ದೇವೆ. ಆತ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿರೋದು ಗೊತ್ತಿತ್ತು. ತೊಂದರೆ ಕೊಡುವುದಿದ್ದರೆ ಅಂದೆ ಕೊಡುತ್ತಿದ್ದೆ. ಸಂತೋಷ್ ಜೀ ಮತ್ತು ಮುಕುಂದ್ ಜೀ ಸಹಾಯದಿಂದ ಆತ ಟಿಕೆಟ್ ಪಡೆದುಕೊಂಡಿದ್ದಾನೆ. ನಾನು ಪ್ರಧಾನಿ ನರೇಂದ್ರ ಮೋದಿ ಸಲಹೆಗಾರರ ಮಾನಸ ಪುತ್ರಿ. ನಾವಿಬ್ಬರು ಮದುವೆ ಆಗಬೇಕು ಎಂದಿದ್ದವರು, ನಾನು ಅದರಿಂದ ಹೊರ ನಡೆದೆ ಅಷ್ಟೇ. ಸುರಭಿ ಎಂಬವರನ್ನು ನೀವು ಸಂಪರ್ಕ ಮಾಡಿ ಮಾತನಾಡಿ. ನನಗೆ ಬಿಜೆಪಿ ಶಾಸಕರೊಬ್ಬರು ಫೋನ್ ಮಾಡಿ, ಸುರಭಿ ಎಂಬವರು ಬಿಜೆಪಿ, ಆರ್‍ಎಸ್‍ಎಸ್ ಮುಖಂಡರೊಂದಿಗೆ ಮಾತನಾಡಿ ವಿಷಯ ತಿಳಿಸಿದ್ದಾರೆ. ತೇಜಸ್ವಿನಿ ಅನಂತ್ ಕುಮಾರ್ ಅವರೊಂದಿಗೆ ಮಾತನಾಡಿದ್ದಾರೆ. ಆಕೆಯೇ ಅವನಿಂದ ಮೊದಲು ದೌರ್ಜನ್ಯಕ್ಕೆ ತುತ್ತಾದವಳು. ಮುಂಬೈನಲ್ಲಿ ಐಶ್ವರ್ಯ ಎಂಬವರ ಬಗ್ಗೆ ಕೇಳಿದ್ದೇನೆ. ಒಂದು ವೇಳೆ ಆತ ಎಂಪಿ ಆದ್ರೆ ‘ಹಿ ಈಸ್ ಡೇಂಜರಸ್’ (He Is Dangerous) ಎಂದು ಆಡಿಯೋದಲ್ಲಿ ಸೋಮ್ ದತ್ತಾ ಹೇಳಿಕೊಂಡಿದ್ದಾರೆ.

    https://www.youtube.com/watch?v=b_yx7ATOliM

  • ವಿಯೆಟ್ನಾಂನಿಂದ ಬರೋ ಕಳಪೆ ಗುಣಮಟ್ಟದ ಕಾಳುಮೆಣಸಿನ ಆಮದುದಾರರು ಅಮಿತ್ ಶಾ ಸಂಬಂಧಿಕರು: ಬ್ರಿಜೇಶ್ ಕಾಳಪ್ಪ

    ವಿಯೆಟ್ನಾಂನಿಂದ ಬರೋ ಕಳಪೆ ಗುಣಮಟ್ಟದ ಕಾಳುಮೆಣಸಿನ ಆಮದುದಾರರು ಅಮಿತ್ ಶಾ ಸಂಬಂಧಿಕರು: ಬ್ರಿಜೇಶ್ ಕಾಳಪ್ಪ

    ಮಡಿಕೇರಿ: ವಿಯೆಟ್ನಾಂನಿಂದ ಆಮದಾಗುತ್ತಿರುವ ಕಳಪೆ ಗುಣಮಟ್ಟದ ಕಾಳುಮೆಣಸಿನ ಆಮದುದಾರರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಸಂಬಂಧಿಕರು. ಹೀಗಾಗಿ ಕೇಂದ್ರ ಸರ್ಕಾರ ಈ ಆಮದಿಗೆ ಆ್ಯಂಟಿ ಡಂಪಿಂಗ್ ಡ್ಯೂಟಿಯನ್ನು ಹಾಕುತ್ತಿಲ್ಲ ಎಂದು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಗಂಭೀರ ಆರೋಪ ಮಾಡಿದ್ದಾರೆ.

    ಭಾರತ ದೇಶಕ್ಕೆ ಆಮದಾಗುತ್ತಿರುವ ಕಳಪೆ ಗುಣಮಟ್ಟದ ವಿಯೆಟ್ನಾಂ ಕಾಳುಮೆಣಸು, ಕೊಡಗಿನ ಉತ್ತಮ ಗುಣಮಟ್ಟದ ಕಾಳುಮೆಣಸಿನೊಂದಿಗೆ ಕಲಬೆರಕೆಯಾಗುತ್ತಿದೆ. ಪರಿಣಾಮ ಕಾಳುಮೆಣಸು ಬೆಲೆ ಗಣನೀಯ ಕುಸಿತದಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲೂ ಕೇಂದ್ರ ಸರ್ಕಾರ ವಿಯೆಟ್ನಾಂ ಕಳಪೆ ಕಾಳುಮೆಣಸು ಆಮದಿನ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

    ಬೆಳೆಗಾರರ ಹಿತರಕ್ಷಣೆ ಕೇಂದ್ರ ಸರ್ಕಾರಕ್ಕೆ ಬೇಕಿಲ್ಲ. ಕಳಪೆ ಗುಣಮಟ್ಟದ ವಿಯೆಟ್ನಾಂ ಕಾಳುಮೆಣಸಿನ ಆಮದು ತಡೆಯಲು ಕೇಂದ್ರ ಸರ್ಕಾರ ಆ್ಯಂಟಿ ಡಂಪಿಂಗ್ ಡ್ಯೂಟಿಯನ್ನು ಹಾಕಬಹುದು. ಆದರೆ ಕಾಳುಮೆಣಸು ದೊಡ್ಡ ಆಮದುದಾರರು ಅಮಿತ್ ಶಾ ಅವರ ಸಂಬಂಧಿಕರಾಗಿರುವುದರಿಂದ ಕೇಂದ್ರ ಸರ್ಕಾರ ಆ್ಯಂಟಿ ಡಂಪಿಂಗ್ ಡ್ಯೂಟಿಯನ್ನು ಹಾಕುತ್ತಿಲ್ಲ ಎಂದು ದೂರಿದರು.

    ಸಿಯಾಚಿನ್ ನಲ್ಲಿ ಸೈನಿಕರು ಸ್ವಚ್ಛತೆ ಮಾಡಬೇಕಂತೆ, ಗನ್ ಹಿಡಿಯಬೇಕಾದ ಕೈಗೆ ಕೇಂದ್ರ ಸರ್ಕಾರ ಪೊರಕೆ ಕೊಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಸೈನಿಕರು ಇರುವುದು ದೇಶ ಕಾಯಲು, ಸ್ವಚ್ಛ ಭಾರತ್ ಕೆಲಸ ಮಾಡಲು ಅಲ್ಲ ಎಂದು ಕಾಳಪ್ಪ ಆಕ್ರೋಶ ವ್ಯಕ್ತಪಡಿಸಿದರು.

  • `ಕೈ’ ಬಿಟ್ಟ ಹಳ್ಳಿ ಹಕ್ಕಿ! – ಸಿಂಹಗೆ ಎದುರಾಗ್ತಾರಾ ಬ್ರಿಜೇಶ್?

    `ಕೈ’ ಬಿಟ್ಟ ಹಳ್ಳಿ ಹಕ್ಕಿ! – ಸಿಂಹಗೆ ಎದುರಾಗ್ತಾರಾ ಬ್ರಿಜೇಶ್?

    ಕೆ.ಪಿ.ನಾಗರಾಜ್
    ಮೈಸೂರು: ಪತ್ರಕರ್ತ ಕಂ ಸಂಸದ ಆಗಿರೋ ಪ್ರತಾಪ್ ಸಿಂಹಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ವಕೀಲ ಕಂ ರಾಜಕಾರಣಿ ಆಗಿರೋ ಬ್ರಿಜೇಶ್ ಕಾಳಪ್ಪ ಎದುರಾಳಿ ಆಗುತ್ತಾರಾ..?. ಇಂಥದ್ದೊಂದು ಪ್ರಶ್ನೆ ಈಗ ಮೈಸೂರು – ಕೊಡಗು ಭಾಗದಲ್ಲಿ ಹುಟ್ಟಿಕೊಂಡಿದೆ. ಯಾವಾಗ ಮಾಜಿ ಸಂಸದ ಎಚ್. ವಿಶ್ವನಾಥ್ ಕಾಂಗ್ರೆಸ್ ತೊರೆದು ಜೆಡಿಎಸ್ ಮನೆ ಸೇರಿದ್ರೋ ಅಲ್ಲಿಗೆ ಕಾಂಗ್ರೆಸ್‍ನಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಣಕ್ಕೆ ಇಳಿಯೋರು ಯಾರು ಎಂಬ ಚರ್ಚೆ ಶುರುವಾಗಿದೆ. ಆರಂಭಿಕ ಚರ್ಚೆಯಲ್ಲಿ ಕಾಂಗ್ರೆಸ್ ಪಾಳಯದಿಂದ ಕೇಳಿ ಬರುತ್ತಿರುವ ಮೊದಲ ಹೆಸರೇ ಬ್ರಿಜೇಶ್ ಕಾಳಪ್ಪ..!

    ಕೊಡಗು ಮೂಲದ ಬ್ರಿಜೇಶ್ ಕಾಳಪ್ಪ, ಸುಪ್ರೀಂಕೋರ್ಟ್‍ನಲ್ಲಿ ವಕೀಲರು. ಕಾಂಗ್ರೆಸ್ ಜೊತೆ ಬಹು ವರ್ಷದ ಸಾಂಗತ್ಯ ಬೆಳೆಸಿಕೊಂಡಿರೋ ಬ್ರಿಜೇಶ್, ಸಿಎಂ ಸಿದ್ದರಾಮಯ್ಯ ಅವರ ಆಪ್ತರು ಕೂಡ. ಸುಪ್ರೀಂ ಕೋರ್ಟ್‍ನಲ್ಲಿ ರಾಜ್ಯದ ನದಿ ನೀರಿನ ವಿವಾದ ಕೇಸ್ ಗಳ ವಕೀಲರ ಟೀಂನಲ್ಲಿ ಸಕ್ರಿಯರಾಗಿದ್ದು ಕೊಂಡೇ ಎಐಸಿಸಿಯ ಮಾಧ್ಯಮ ವಕ್ತಾರರಾಗಿದ್ದಾರೆ. ಕಾಂಗ್ರೆಸ್ ಎಷ್ಟೇ ಇರುಸು ಮುರಿಸಿನ ಸ್ಥಿತಿಯಲ್ಲಿದ್ದರೂ ಪಕ್ಷವನ್ನು ಮಾಧ್ಯಮಗಳಲ್ಲಿ ಸಮರ್ಥಿಸುತ್ತಾ ಹೈಕಮಾಂಡ್ ಕಣ್ಣಿಗೂ ಹತ್ತಿರವಾಗಿದ್ದಾರೆ.

    ಯಾವಾಗ, ಕಳೆದ ಲೋಕಸಭಾ ಚುನಾವಣೆಯಲ್ಲಿ ಎಚ್.ವಿಶ್ವನಾಥ್, ಪ್ರತಾಪ್ ಸಿಂಹ ಎದುರು ಸೋತರೋ ಅವತ್ತಿನಿಂದಲೇ ಬ್ರಿಜೇಶ್ ಕಾಳಪ್ಪ, ತಮ್ಮ ಒಂದು ಕಣ್ಣನ್ನು ಮೈಸೂರು ಲೋಕಸಭಾ ಕ್ಷೇತ್ರದ ಮೇಲೆ ಇಟ್ಟಿದ್ದರು. ಬ್ಯಾಕ್ ಟು ಬ್ಯಾಕ್ ಮೈಸೂರಿಗೆ ಬರುತ್ತಾ ಇಲ್ಲಿನ ಕಾರ್ಯಕರ್ತರ ಜೊತೆ ಸ್ನೇಹ ಬೆಳೆಸಿಕೊಂಡು ಮಾಧ್ಯಮದಲ್ಲೂ ಕಾಣಿಸಿಕೊಳ್ಳೋಕೆ ಶುರು ಮಾಡಿದ್ದರು. ಈಗ, ವಿಶ್ವನಾಥ್ ಅವರೇ ಪಕ್ಷದಿಂದ ಹೊರ ಹೋಗಿರೋ ಕಾರಣ ಬ್ರಿಜೇಶ್ ಕಾಳಪ್ಪ ಹಾದಿ ಸುಲಭವಾದಂತೆ ಕಾಣುತ್ತಿದೆ.

    60 ವರ್ಷಗಳ ಹಿಂದೆ ಕೊಡಗು ಮೂಲದ ಸಿ.ಎಂ. ಪೊನ್ನಚ್ಚ ಅವರಿಗೆ ಕಾಂಗ್ರೆಸ್ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಿತ್ತು. ಆನಂತರ, ಕೊಡಗು ಮೂಲದವರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿಲ್ಲ. 2009ರ ಚುನಾವಣೆಯಲ್ಲೇ ಬ್ರಿಜೇಶ್ ಕಾಳಪ್ಪ ಕ್ಷೇತ್ರದ ಟಿಕೆಟ್ ಕೇಳಿದ್ದರು. ಆದರೆ, 2008ರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಎಚ್. ವಿಶ್ವನಾಥ್ ಅವರು 2009ರ ಲೋಕಸಭಾ ಚುನಾವಣೆ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇದರಿಂದ, ಒಂದು ಹಂತದಲ್ಲಿ ಬ್ರಿಜೇಶ್ ಕ್ಷೇತ್ರದ ಆಸೆಯೇ ಬಿಟ್ಟು ರಾಜ್ಯಸಭಾ ಸ್ಥಾನದ ಕಡೆ ಕಣ್ಣಿಟ್ಟು ಕುಳಿತಿದ್ದರು. ಈಗ, ಯಾರು ಅವರ ಟಿಕೆಟ್‍ಗೆ ಬಲವಾದ ಅಡ್ಡಿಯಾಗಿದ್ದರೋ ಅವರೇ ಪಕ್ಷ ತೊರೆದಿರೋ ಕಾರಣ ಮತ್ತೆ ಅಖಾಡ ಪ್ರವೇಶಕ್ಕೆ ಮುಂದಾಗಿದ್ದಾರೆ.

    ಹೈಕಮಾಂಡ್ ಗೂ ಹತ್ತಿರ ಹತ್ತಿರ: ಕಾಂಗ್ರೆಸ್ ಹೈಕಮಾಂಡ್ ಜೊತೆ ಅದರಲ್ಲೂ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಜೊತೆ ಹಾಗೂ ಸಿಎಂ ಸಿದ್ದರಾಮಯ್ಯ ಮತ್ತು ಹಲವು ಕಾಂಗ್ರೆಸ್‍ನ ಘಟಾನುಘಟಿ ನಾಯಕರ ಜೊತೆ ನಿಕಟ ಸಂಪರ್ಕ ಹೊಂದಿರುವ ಬ್ರಿಜೇಶ್ ಕಾಳಪ್ಪ, ಲೋಕಸಭಾ ಕ್ಷೇತ್ರದ ಟಿಕೆಟ್ ಸುಲಭವಾಗಿಯೇ ಗಿಟ್ಟಿಸುತ್ತಾರೆ ಅನ್ನೋ ಮಾತು ಕಾಂಗ್ರೆಸ್ ವಲಯದಲ್ಲಿದೆ. ಅಲ್ಲದೆ, ಲೋಕಸಭಾ ಕ್ಷೇತ್ರವನ್ನು ದೃಷ್ಟಿಯಲ್ಲಿಟ್ಟುಕೊಂಡು ಯಾರು ಕೂಡಾ ಇದುವರೆಗೂ ಕ್ಷೇತ್ರದಲ್ಲಿ ಓಡಾಡದೆ ಇರೋದು ಕೂಡ ಬ್ರಿಜೇಶ್ ಕಾಳಪ್ಪಗೆ ಪ್ಲಸ್ ಪಾಯಿಂಟ್ ಆದಂತೆ ಕಾಣುತ್ತಿದೆ.

    ಈ ಎಲ್ಲಾ ಲೆಕ್ಕಚಾರ ಸರಿಯಾದರೆ ಪ್ರತಾಪ್ ಸಿಂಹಗೆ ಬ್ರಿಜೇಶ್ ಕಾಳಪ್ಪ ಎದುರಾಳಿ ಆಗೋದು ನಿಶ್ಚಿತ. ಟಿವಿ ಡಿಬೇಟ್ ಗಳಲ್ಲಿ ಪರಸ್ಪರ ಮುಖಾಮುಖಿಯಾಗಿ ನಾನೋ ನೀನೋ ಎಂಬಂತೆ ವಾದಿಸುವ ಈ ಇಬ್ಬರು ಚುನಾವಣಾ ಅಖಾಡದಲ್ಲಿ ಮುಖಾಮುಖಿಯಾದರೆ ಅದರ ಖದರ್ ಇನ್ನೂ ಹೆಚ್ಚಾಗುತ್ತೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರತಾಪ್ ಸಿಂಹ ಅವರ ಗೆಲುವಿಗೆ ದೊಡ್ಡ ಕೊಡುಗೆ ಕೊಟ್ಟಿದ್ದು ಕೊಡಗು. ಅದೇ ಕೊಡಗು ಮೂಲದ ಬ್ರಿಜೇಶ್ ಕಾಳಪ್ಪ, ಅಖಾಡ ಪ್ರವೇಶ ಮಾಡಿದರೆ ಅಲ್ಲಿನ ಮತದಾರನ ಪ್ರೀತಿ ಯಾರ ಮೇಲೆ ಇರುತ್ತೆ ಅನ್ನೋ ಕೂತುಹಲ ಕೂಡಾ ಇರುತ್ತೆ.

    ಇದರ ಜೊತೆಗೆ ಜೆಡಿಎಸ್ ಯಾರಿಗೆ ಪಟ್ಟ ಕಟ್ಟುತ್ತೆ ಅನ್ನೋದು ಕೂಡ ಮುಖ್ಯ. ಎಚ್. ವಿಶ್ವನಾಥ್ ಅವರನ್ನು ತೆಕ್ಕೆಗೆ ತೆಗೆದುಕೊಂಡಿರೋ ಜೆಡಿಎಸ್ ಸದ್ಯಕ್ಕೆ ವಿಧಾನಸಭಾ ಚುನಾವಣೆಗೆ ಮಾತ್ರ ರಣತಂತ್ರ ಸಿದ್ಧ ಮಾಡುತ್ತಿದೆ. ಹೀಗಾಗಿ, ಲೋಕಸಭಾ ಚುನಾವಣೆಯ ಅಭ್ಯರ್ಥಿ ಬಗ್ಗೆ ಇಲ್ಲಿ ಇನ್ನೂ ಎಳೆಯಷ್ಟು ಚರ್ಚೆ ಕೂಡಾ ಶುರುವಾಗಿಲ್ಲ. ಎಚ್. ವಿಶ್ವನಾಥ್ ಪಕ್ಷ ಬಿಟ್ಟ ಕಾರಣ ಕಾಂಗ್ರೆಸ್ ನಲ್ಲಿ ಖಾಲಿಯಾದ ಲೋಕಸಭಾ ಚುನಾವಣಾ ಅಭ್ಯರ್ಥಿ ಸೀಟಿಗೆ ಚರ್ಚೆ ಶುರುವಾಗಿ ಚುನಾವಣೆಗೆ ಇನ್ನೂ ಎರಡು ವರ್ಷ ಮುಂಚೆಯೇ ಲೆಕ್ಕಚಾರಗಳು ಆರಂಭವಾಗಿಬಿಟ್ಟಿವೆ. ಇವತ್ತು ಇರೋ ರಾಜಕಾರಣ ನಾಳೆ ಇರಲ್ಲ. ಅಂತಹದರಲ್ಲಿ ಇದು ಇನ್ನೂ ಎರಡು ವರ್ಷದ ನಂತರದ ಮಾತು. ಅಷ್ಟರಲ್ಲಿ ಇನ್ನೂ ಯಾರ್ಯಾರು ಯಾವ ಯಾವ ಪಕ್ಷ ಸೇರುತ್ತಾರೋ, ಯಾರ್ಯಾರೂ ಆಕಾಂಕ್ಷಿಗಳಾಗಿ ಹುಟ್ಟಿಕೊಳ್ಳುತ್ತಾರೋ ಗೊತ್ತಿಲ್ಲ. ಆದರೆ, ಸದ್ಯಕ್ಕೆ ಮಾತ್ರ ದೂರದ ದೆಹಲಿಯಲ್ಲಿ ಕಪ್ಪು ಕೋಟು ಹಾಕಿ ಕುಳಿತಿರೋ ಬ್ರಿಜೇಶ್ ಕಾಳಪ್ಪ ಮಾತ್ರ ಮೈಸೂರು – ಕೊಡಗಿನ ಮೇಲೆ ಪ್ರೀತಿ ಹೆಚ್ಚಿಸಿಕೊಂಡಿದ್ದಾರೆ.