Tag: bribery

  • ರೈತನಿಂದ 14 ಸಾವಿರ ಪಡೆಯೋವಾಗ ಎಸಿಬಿ ಬಲೆಗೆ ಬಿದ್ದ ಗ್ರಾಮಲೆಕ್ಕಾಧಿಕಾರಿ

    ರೈತನಿಂದ 14 ಸಾವಿರ ಪಡೆಯೋವಾಗ ಎಸಿಬಿ ಬಲೆಗೆ ಬಿದ್ದ ಗ್ರಾಮಲೆಕ್ಕಾಧಿಕಾರಿ

    ಗದಗ: ರೈತನ ಜಮೀನಿನ ಪಹಣಿ ಬದಲಾವಣೆಗೆ ಲಂಚದ ಬೇಡಿಕೆಯಿಟ್ಟಿದ್ದ ಗ್ರಾಮಲೆಕ್ಕಾಧಿಕಾರಿ ಮನೆಯ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿರೋ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ.

    ಲಕ್ಷ್ಮೇಶ್ವರ ತಾಲೂಕಿನ ಪುಟ್ಟಗಾಂವ್ ಬಡ್ನಿ ಪಂಚಾಯ್ತಿಯ ಗ್ರಾಮ ಲೆಕ್ಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಫಿರೋಜ್‍ಖಾನ್ ಗೋರಿಖಾನ್ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಫಿರೋಜ್‍ಖಾನ್ ಪುಟಂಗಾವ್ ಬಡ್ನಿ ಗ್ರಾಮದ ರೈತ ರಾಮಪ್ಪ ಅಣ್ಣಿಗೇರಿ ಅನ್ನುವರ ಜಮೀನಿನ ಪಹಣಿ ಬದಲಾವಣೆಗೆ 14 ಸಾವಿರ ರೂಪಾಯಿ ಲಂಚ ಇಟ್ಟಿದ್ದನು.

    ಮನೆಗೆ ಬಂದು ಹಣ ಕೊಟ್ಟರೆ ಪಹಣಿ ಮನೆಯಲ್ಲಿ ಕೊಡುತ್ತೇನೆ. ಹಣ ಮನೆಗೆ ತೆಗೆದುಕೊಂಡು ಬಾ ಎಂದು ರೈತನಿಗೆ ಗ್ರಾಮ ಲೆಕ್ಕಾಧಿಕಾರಿ ಫಿರೋಜ್‍ಖಾನ್ ಹೇಳಿದ್ದನು. ಮನೆಯಲ್ಲಿ ಹಣ ನೀಡುವ ವೇಳೆ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಎಸಿಬಿ ಡಿ.ವೈಎಸ್ಪಿ ವಾಸುದೇವರಾಮ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಎಸಿಬಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

  • ಸರ್ಕಾರಿ ಯೋಜನೆಗೆ ಒಳಪಡುವ ಎಲ್ಲರೂ ಎಸಿಬಿ ಚೌಕಟ್ಟಿಗೆ: ಡಿವೈಎಸ್ಪಿ ಗೋಪಾಲ್

    ಸರ್ಕಾರಿ ಯೋಜನೆಗೆ ಒಳಪಡುವ ಎಲ್ಲರೂ ಎಸಿಬಿ ಚೌಕಟ್ಟಿಗೆ: ಡಿವೈಎಸ್ಪಿ ಗೋಪಾಲ್

    ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ವತಿಯಿಂದ ಸಾರ್ವಜನಿಕ ಸಭೆಯನ್ನ ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ಗ್ರಾಮ ಪಂಚಾಯತಿ ಆವರಣದಲ್ಲಿ ಆಯೋಜಿಸಿದ್ದರು.

    ಸರ್ಕಾರಿ ಯೋಜನೆ ಮತ್ತು ಅನುದಾನದ ಹಣಕ್ಕೆ ಒಳಪಡುವವರು ಎಲ್ಲರೂ ಎಸಿಬಿ ಚೌಕಟ್ಟಿಗೆ ಬರುತ್ತಾರೆ. ಯಾರು ಲಂಚ ಕೇಳುವ ಹಾಗೂ ಸರ್ಕಾರಿ ಅಧಿಕಾರಿಗಳು ಕೆಲಸವನ್ನು ಮುಂದೂಡಿ ಹಣಕ್ಕೆ ಬೇಡಿಕೆ ಇಟ್ಟರೆ ಕ್ರಮ ಕೈಗೊಳ್ಳುತ್ತವೆ. ಸಾರ್ವಜನಿಕ ಸಭೆಯಲ್ಲಿ ಆ ಸ್ಥಳದಲ್ಲಿ ಪರಿಹಾರ ಜನರಿಗೆ ದೊರೆಯುತ್ತದೆ ಇಂತಹ ಸಭೆಗಳನ್ನು ಸದುಪಯೋಗಪಡಿಸುಕೊಳ್ಳಬೇಕೆಂದು ಡಿವೈಎಸ್ಪಿ ಗೋಪಾಲ್ ಜೋಗಿನ್ ನಾಗರಿಕರಿಗೆ ಸಲಹೆ ನೀಡಿದರು.

    ನಂತರ ಮಾತನಾಡಿದ ಎಸಿಬಿ ನಿರೀಕ್ಷಕ ಕುಮಾರಸ್ವಾಮಿ, ಸರ್ಕಾರಿ ಅಧಿಕಾರಿಗಳು ಯಾರೇ ಆಗಲಿ, ಸರ್ಕಾರಿ ಯೋಜನೆ ರೂಪಿಸಲು ಹಾಗೂ ಕೆಲಸ ನಿರ್ವಹಿಸಲು ಹಣಕ್ಕೆ ಬೇಡಿಕೆಯಿಟ್ಟಾಗ ದೂರು ನೀಡಿ. ದೂರು ನೀಡಿದವರ ಹೆಸರು ಗೌಪ್ಯವಾಗಿಡುಲಾಗುವುದು. ಜನರಿಗೆ ಕೆಲಸ ವಿಳಂಬ ಮಾಡಿದ್ದಾರೆ ಸರ್ಕಾರಿ ನೌಕರರ ವಿರುದ್ಧ ಸಾರ್ವಜನಿಕರು ಮೃದು ಧೋರಣೆ ತೋರಬಹುದು. ಆದರೆ ಭಯ ಪಡದೇ ಭ್ರಷ್ಟಚಾರಕ್ಕೆ ಇಳಿದಾಗ ದೂರು ನೀಡಿ ಎಂದರು.

    ಸಭೆಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸೋಂಪುರ ಸುತ್ತಮುತ್ತ ಗ್ರಾಮ ಪಂಚಾಯತಿ ಪಿಡಿಓಗಳನ್ನು ಸಭೆಗೆ ಕರೆದಿದ್ದರೂ ಗೈರದಾವರೆ ಹೆಚ್ಚು. ಇದಕ್ಕೆ ಡಿವೈಎಸ್ಪಿ ಗೋಪಾಲ್ ಜೋಗಿನ್ ಮುಂದಿನ ಸಾರ್ವಜನಿಕ ಸಭೆಗಳಿಗೆ ಅಧಿಕಾರಿಗಳು ಗೈರಾಗಬಾರದು ಎಂದು ಸಂಬಂಧಪಟ್ಟ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತಿ ಸಿಇಓಗಳಿಗೆ ಪತ್ರ ಬರೆದು ಎಚ್ಚರಿಸುತ್ತೇವೆ. ಎಲ್ಲಾ ಸರ್ಕಾರಿ ಕಚೇರಿ ಮುಂದೆ ಎಸಿಬಿ ಕಚೇರಿ ಹಾಗೂ ಅಧಿಕಾರಿಗಳ ವಿಳಾಸ ಮತ್ತು ದೂರವಾಣಿ ಸಂಖ್ಯೆ ಇರಬೇಕು. ಯಾವ ಕಚೇರಿ ಮುಂದೆ ಈ ಎಸಿಬಿ ಕಚೇರಿ ವಿಳಾಸ ಇರದಿದ್ದರೆ ಕ್ರಮಕ್ಕೆ ಮುಂದಾಗುತ್ತೇವೆ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಪಂಚಾಯತಿ ಪಿಡಿಓಗಳಾದ ರವೀಂದ್ರ, ಗಂಗರಂಗಯ್ಯ, ಗ್ರಾಮ ಪಂಚಾಯತಿ ಸದಸ್ಯರು, ಕೃಷಿ ಅಧಿಕಾರಿಗಳು, ಇನ್ನಿತರರು ಹಾಜರಿದ್ದರು.

  • ಕಾಂಟ್ರಾಕ್ಟರ್ ಬಳಿ ಲಂಚ ಪಡೆಯುತ್ತಿದ್ದ ಗ್ರಾ.ಪಂ ಸದಸ್ಯ, ಪಿಡಿಓ ಎಸಿಬಿ ಬಲೆಗೆ

    ಕಾಂಟ್ರಾಕ್ಟರ್ ಬಳಿ ಲಂಚ ಪಡೆಯುತ್ತಿದ್ದ ಗ್ರಾ.ಪಂ ಸದಸ್ಯ, ಪಿಡಿಓ ಎಸಿಬಿ ಬಲೆಗೆ

    ರಾಮನಗರ: ಕಾಂಟ್ರಾಕ್ಟರ್ ಬಳಿ ಲಂಚ ಪಡೆಯುತ್ತಿದ್ದ ಗ್ರಾಮ ಪಂಚಾಯತಿ ಸದಸ್ಯ ಹಾಗೂ ಪಿಡಿಓ ಎಸಿಬಿ ಬಲೆಗೆ ಬಿದ್ದ ಘಟನೆ ಚನ್ನಪಟ್ಟಣ ತಾಲೂಕಿನ ಮುದುಗೆರೆ ಗ್ರಾಮ ಪಂಚಾಯತ್‍ನಲ್ಲಿ ನಡೆದಿದೆ.

    ಮುದುಗೆರೆ ಗ್ರಾಮ ಪಂಚಾಯತ್‍ನ ಪಿಡಿಓ ಮಂಜುಳಾ ಹಾಗೂ ಗ್ರಾಮ ಪಂಚಾಯತಿ ಸದಸ್ಯ ಮಹೇಶ್ ಎಸಿಬಿ ಬಲೆಗೆ ಬಿದ್ದವರು. ಚನ್ನಪಟ್ಟಣ ತಾಲೂಕಿನ ಮಾಕಳಿ ಗ್ರಾಮದ ನಿವಾಸಿಯೊಬ್ಬರು ಮುದುಗೆರೆ ಗ್ರಾಮ ಪಂಚಾಯತಿಯಿಂದ ನರೇಗಾ ಯೋಜನೆಯ ಪೈಪ್‍ಲೈನ್ ಕಾಮಗಾರಿ ಗುತ್ತಿಗೆ ಪಡೆದು ಕಾಮಗಾರಿ ಮುಗಿಸಿದ್ದರು. ಆದರೆ ಅವರಿಗೆ ಕಾಮಗಾರಿಯ 65 ಸಾವಿರ ಬಿಲ್ ಹಣವನ್ನ ಮಂಜೂರು ಮಾಡಲು ಶೇ.17ರಷ್ಟು ಕಮಿಷನ್ ನೀಡುವಂತೆ ಗ್ರಾಮ ಪಂಚಾಯತಿ ಸದಸ್ಯ ಮಹೇಶ್ ಬೇಡಿಕೆ ಇಟ್ಟಿದ್ದರು.

    ಈ ಬಗ್ಗೆ ಪಿಡಿಓ ಬಳಿ ಪ್ರಶ್ನಿಸಿದರೆ ಮಹೇಶ್ ಹೇಳಿದಂತೆ ಮಾಡು. ಕಮಿಷನ್ ಕೊಟ್ಟು ಬಿಲ್ ಮಂಜೂರು ಮಾಡಿಕೊಳ್ಳುವಂತೆ ತಿಳಿಸಿದ್ದರು. ಹೀಗಾಗಿ ಗುತ್ತಿಗೆದಾರ ರಾಮನಗರ ಎಸಿಬಿ ಅಧಿಕಾರಿಗಳಿಗೆ ಸಲ್ಲಿಸಿದ್ದ.

    ಗ್ರಾಮ ಪಂಚಾಯತ್ ಕಚೇರಿಯಲ್ಲಿ ಪಿಡಿಓ ಮಂಜುಳಾ ಹಾಗೂ ಗ್ರಾಮ ಪಂಚಾಯತ್ ಸದಸ್ಯ ಮಹೇಶ್ ಮಂಗಳವಾರ ಲಂಚವಾಗಿ 11 ಸಾವಿರ ರೂಪಾಯಿ ಪಡೆಯುತ್ತಿದ್ದರು. ಈ ವೇಳೆ ಎಸಿಬಿ ಡಿವೈಎಸ್‍ಪಿ ಮಲ್ಲೇಶ್ ನೇತೃತ್ವದ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನೂ ಬಂಧಿಸಿದ್ದಾರೆ. ಈ ಘಟನೆ ಸಂಬಂಧ ಎಸಿಬಿ ಅಧಿಕಾರಿಗಳು ಇಬ್ಬರನ್ನೂ ವಿಚಾರಣೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಪಿಡಿಒ, ಕಂಪ್ಯೂಟರ್ ಆಪರೇಟರ್

    ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಪಿಡಿಒ, ಕಂಪ್ಯೂಟರ್ ಆಪರೇಟರ್

    ಬೆಂಗಳೂರು: ಇ-ಖಾತೆ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟ ಪಂಚಾಯತಿ ಪಿಡಿಒ ಹಾಗೂ ಕಂಪ್ಯೂಟರ್ ಆಪರೇಟರ್ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಚೊಕ್ಕಹಳ್ಳಿ ಪಂಚಾಯತಿಯಲ್ಲಿ ನಡೆದಿದೆ.

    ಪಂಚಾಯಿತಿಯಲ್ಲಿ ಹಲವು ದಿನಗಳಿಂದ ಕಾರ್ಯನಿರ್ವಹಿಸುತ್ತಿದ್ದ ಪಿಡಿಒ ನರ್ಮದಾ ಹಾಗೂ ಕಂಪ್ಯೂಟರ್ ಆಪರೇಟರ್ ಮುನಿರಾಜು ಎಸಿಬಿ ಬಲೆಗೆ ಬಿದ್ದ ಅಧಿಕಾರಿಗಳಾಗಿದ್ದಾರೆ. ಇ-ಖಾತೆಯನ್ನು ಮಾಡಿಕೊಡಲು 6 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಇಂದು ಮುಂಗಡವಾಗಿ 4 ಸಾವಿರ ರೂ.ಗಳನ್ನು ಪಡೆಯುತ್ತಿದ್ದರು. ಈ ವೇಳೆ ಬೆಂಗಳೂರು ಗ್ರಾಮಾಂತರ ಎಸಿಬಿ ಡಿವೈಎಸ್‍ಪಿ ಗೋಪಾಲ್ ಜಗ್ಗಿನ್ ನೇತೃತ್ವದ ತಂಡ ದಾಳಿ ನಡೆಸಿ ಹಣದ ಸಮೇತ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.

    ಪಂಚಾಯಿತಿಯಲ್ಲಿ ಸಾಮಾನ್ಯ ಜನರು ಯಾವುದೇ ಕೆಲಸ ಮಾಡಿಕೊಡಿ ಎಂದು ಕೇಳಿದರೂ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಡುತ್ತಿದ್ದರು. ಈ ಬಗ್ಗೆ ಹಲವು ದಿನಗಳಿಂದ ಎಸಿಬಿ ಕಚೇರಿಗೆ ದೂರುಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ದಾಳಿ ವೇಳೆ ಲಂಚ ಪಡೆಯುತ್ತಿದ್ದ ಅಧಿಕಾರಿಗಳು ಸದ್ಯ ಎಸಿಬಿ ಬಲೆಗೆ ಬಿದ್ದಿದ್ದಾರೆ.

  • ರೋಗಿಯ ಬಳಿ ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಸಿಕ್ಕಿಬಿದ್ದ ಸರ್ಕಾರಿ ವೈದ್ಯ

    ರೋಗಿಯ ಬಳಿ ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಸಿಕ್ಕಿಬಿದ್ದ ಸರ್ಕಾರಿ ವೈದ್ಯ

    ರಾಮನಗರ: ಸರ್ಕಾರಿ ವೈದ್ಯರೊಬ್ಬರು ರೋಗಿಯ ಬಳಿ ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಸಿಕ್ಕಿಬಿದ್ದ ಘಟನೆ ರಾಮನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

    ರಾಮನಗರ ಸರ್ಕಾರಿ ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ನಾರಾಯಣಸ್ವಾಮಿ ಎಸಿಬಿ ಬಲೆಗೆ ಬಿದ್ದ ವೈದ್ಯ. ನಾರಾಯಣಸ್ವಾಮಿ ಅವರು ರೋಗಿಯನ್ನು ಡಿಸ್ಚಾರ್ಜ್ ಮಾಡಲು ಮೂರು ಸಾವಿರ ರೂಪಾಯಿಗೆ ಭೇಟಿಕೆ ಇಟ್ಟಿದ್ದ. ಹೀಗಾಗಿ ರೋಗಿಯ ಸಂಬಂಧಿಕರಿಂದ ಮಂಗಳವಾರ ಜಿಲ್ಲಾಸ್ಪತ್ರೆಯಲ್ಲಿಯೇ ಹಣ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.

    ಸರ್ಕಾರಿ ಜಿಲ್ಲಾಸ್ಪತ್ರೆಗೆ ಅಪೆಂಡಿಕ್ಸ್ ಹಿನ್ನೆಲೆಯಲ್ಲಿ ರೋಗಿಯೊಬ್ಬರು ದಾಖಲಾಗಿದ್ದರು. ರೋಗಿಗೆ ಶಸ್ತ್ರಚಿಕಿತ್ಸೆ ಒಳಗಾಗಬೇಕು ಎಂದು ಡಾ.ನಾರಾಯಣಸ್ವಾಮಿ ತಿಳಿಸಿದ್ದಲ್ಲದೇ, ಖಾಸಗಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿದರೆ ಸಾವಿರಾರು ರೂಪಾಯಿಗಳು ಖರ್ಚಾಗುತ್ತೆ. ಹೀಗಾಗಿ ನಾನು ಮಾಡಿರುವ ಶಸ್ತ್ರಚಿಕಿತ್ಸೆಗೆ 10 ಸಾವಿರ ರೂಪಾಯಿ ನೀಡಬೇಕು ಎಂದು ಡಿಮ್ಯಾಂಡ್ ಮಾಡಿದ್ದರು.

    ಎಸಿಬಿ ಬಲೆಗೆ ಬಿದ್ದಿರುವ ವೈದ್ಯ ನಾರಾಯಣಸ್ವಾಮಿ ಅವರು ಏಳು ಸಾವಿರ ರೂಪಾಯಿಗಳನ್ನು ಮುಂಗಡವಾಗಿ ಪಡೆದುಕೊಂಡು ಶಸ್ತ್ರಚಿಕಿತ್ಸೆ ಮಾಡಿದ್ದರು. ಉಳಿದ 3,000 ರೂ.ಯನ್ನು ಶಸ್ತ್ರಚಿಕಿತ್ಸೆ ವೇಳೆ ಒದಗಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ರೋಗಿಯನ್ನು ಡಿಸ್ಚಾರ್ಜ್ ಮಾಡುವುದನ್ನು ತಡೆದಿದ್ದರು. ಅಷ್ಟೇ ಅಲ್ಲದೆ ಹಣ ನೀಡಿಯೇ ರೋಗಿಯನ್ನು ಕರೆದುಕೊಂಡು ಹೋಗುವಂತೆ ಪಟ್ಟು ಹಿಡಿದಿದ್ದರು. ಅದರಂತೆ ಇಂದು ರೋಗಿಯನ್ನ ಡಿಸ್ಚಾರ್ಜ್ ಮಾಡುವಾಗ ಹಣವನ್ನ ಪಡೆಯುತ್ತಿದ್ದ ವೈದ್ಯ ನಾರಾಯಣಸ್ವಾಮಿ ಅವರನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದ್ದಾರೆ.

  • ರೈತನಿಂದ ಲಂಚ ಪಡೆಯುತ್ತಿದ್ದ ಹೆಸ್ಕಾಂ ಸೆಕ್ಷನ್ ಆಫೀಸರ್ ಎಸಿಬಿ ಬಲೆಗೆ

    ರೈತನಿಂದ ಲಂಚ ಪಡೆಯುತ್ತಿದ್ದ ಹೆಸ್ಕಾಂ ಸೆಕ್ಷನ್ ಆಫೀಸರ್ ಎಸಿಬಿ ಬಲೆಗೆ

    ಹಾವೇರಿ: ಹದಿನೈದು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಹೆಸ್ಕಾಂ ಸೆಕ್ಷನ್ ಆಫೀಸರ್ ಎಸಿಬಿ ಬಲೆಗೆ ಬಿದ್ದ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಚಿಕ್ಕೇರೂರು ಗ್ರಾಮದಲ್ಲಿ ನಡೆದಿದೆ.

    ಹಂಸಭಾವಿ ವಿಭಾಗದ ಸೆಕ್ಷನ್ ಆಫೀಸರ್ ಮಂಜುನಾಥ್ ಬೂದಿಹಾಳ ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ರೈತರ ಪಂಪಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಮಂಜುನಾಥ್ ಶೆಟ್ಟರ್ ಎಂಬುವರಿಗೆ ಇಪ್ಪತ್ತೈದು ಸಾವಿರ ರೂಪಾಯಿ ಲಂಚಕ್ಕೆ ಅಧಿಕಾರಿ ಮಂಜುನಾಥ್ ಬೇಡಿಕೆ ಇಟ್ಟಿದ್ದ.

    ಆದರೆ ಕೊನೆಗೆ ಹದಿನೈದು ಸಾವಿರ ರೂಪಾಯಿಗೆ ಡೀಲ್ ಕುದುರಿಸಿ ಹಣ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಅಧಿಕಾರಿ ಮಂಜುನಾಥ್ ನನ್ನು ವಶಕ್ಕೆ ಪಡೆದಿದ್ದಾರೆ. ಎಸಿಬಿ ಡಿವೈಎಸ್ಪಿ ಸೋಮಲಿಂಗ ಕುಂಬಾರ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಹಾವೇರಿ ಎಸಿಬಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

  • ಸಾಲ ತೀರುವಳಿ ಪತ್ರ ನೀಡಲು 15 ಸಾವಿರ ಲಂಚ – ಬ್ಯಾಂಕ್ ಮ್ಯಾನೇಜರ್ ಎಸಿಬಿ ಬಲೆಗೆ

    ಸಾಲ ತೀರುವಳಿ ಪತ್ರ ನೀಡಲು 15 ಸಾವಿರ ಲಂಚ – ಬ್ಯಾಂಕ್ ಮ್ಯಾನೇಜರ್ ಎಸಿಬಿ ಬಲೆಗೆ

    ಚಾಮರಾಜನಗರ: ರೈತರಿಗೆ ಸಾಲ ತಿರುವಳಿ ಪತ್ರ ನೀಡಲು ಲಂಚ ಕೇಳಿದ ಬ್ಯಾಂಕ್ ಮ್ಯಾನೇಜರ್ ಎಸಿಬಿ ಬಲೆಗೆ ಬಿದ್ದಿದ್ದಾನೆ.

    ಚಾಮರಾಜನಗರ ತಾಲೂಕಿನ ಆಲೂರು ಶಾಖೆಯ ವಿಜಯಾ ಬ್ಯಾಂಕ್ ಮ್ಯಾನೇಜರ್ ಪ್ರವೀಣ್ ಚಂದನ್ ಲಂಚ ಸ್ವೀಕರಿಸುವ ವೇಳೆ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾನೆ. ಎಸಿಬಿ ಡಿವೈಎಸ್ಪಿ ನೇತೃತ್ವದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಇದೀಗ ಬ್ಯಾಂಕ್ ಮ್ಯಾನೇಜರ್ ಪ್ರವೀಣ್ ಚಂದನ್ ರನ್ನು ಬಂಧಿಸಲಾಗಿದೆ

    ರೈತರಾದ ಸಿಂಗನಪುರದ ಸಿದ್ದಪ್ಪಾಜಿ ಬಳಿ ವಿಜಯಾ ಬ್ಯಾಂಕ್ ಮ್ಯಾನೇಜರ್ ಪ್ರವೀಣ್ ಚಂದನ್ ಸಾಲ ತೀರುವಳಿ ಪತ್ರ ನೀಡಲು 15 ಸಾವಿರ ರೂ. ಹಣದ ಬೇಡಿಕೆ ಇಟ್ಟಿದ್ದು, ಮೊದಲಿಗೆ 3 ಸಾವಿರ ರೂ. ಹಣವನ್ನು ಮುಂಗಡವಾಗಿ ನೀಡಿದ್ದಾರೆ. ಆದರೆ ಬಾಕಿ ಹಣವನ್ನು ನೀಡುವಂತೆ ಸಿದ್ದಪ್ಪಾಜಿ ಬಳಿ ಬೇಡಿಕೆಯಿಟ್ಟಿದ್ದು, ಬ್ಯಾಂಕ್ ಮ್ಯಾನೇಜರ್ ನಡವಳಿಕೆಯಿಂದ ಬೇಸತ್ತು ಸಿದ್ದಪ್ಪಾಜಿ ಎಸಿಬಿಗೆ ದೂರು ದಾಖಲಿಸಿದ್ದರು.

  • ಲಂಚ ಪಡೆಯುತ್ತಿದ್ದಾಗಲೇ ಎಸಿಬಿ ಬಲೆಗೆ ಬಿದ್ದ ಪೊಲೀಸ್ ಪೇದೆ

    ಲಂಚ ಪಡೆಯುತ್ತಿದ್ದಾಗಲೇ ಎಸಿಬಿ ಬಲೆಗೆ ಬಿದ್ದ ಪೊಲೀಸ್ ಪೇದೆ

    ಶಿವಮೊಗ್ಗ: ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಣಿಕೆಯಲ್ಲಿ ಕೆಲವು ಪೊಲೀಸರು ಶಾಮೀಲಾಗಿದ್ದಾರೆ ಎಂಬ ಆರೋಪ ಈ ಹಿಂದಿನಿಂದಲೂ ಕೇಳಿ ಬಂದಿತ್ತು. ಈ ಆರೋಪಕ್ಕೆ ಇಂದು ಪೊಲೀಸ್ ಪೇದೆಯೋರ್ವ ಎಸಿಬಿ ಬಲೆಗೆ ಬಿದ್ದಿರುವುದು ಮತ್ತಷ್ಟು ಪುಷ್ಠಿ ನೀಡಿದೆ.

    ಹೌದು. ಶಿವಮೊಗ್ಗದಲ್ಲಿ ಇಂದು ಎಸಿಬಿ ಡಿವೈಎಸ್‍ಪಿ ಮನೋಜ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಈ ವೇಳೆ ಅಕ್ರಮ ಮರಳು ಸಾಗಾಣಿಕೆಗೆ ಅನುಕೂಲ ಮಾಡಿಕೊಡುವ ಸಂಬಂಧ ವ್ಯಕ್ತಿಯೊಬ್ಬರಿಂದ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದ ಪೊಲೀಸ್ ಪೇದೆಯೋರ್ವನನ್ನು ಎಸಿಬಿ ಅಧಿಕಾರಿಗಳು ಬಲೆಗೆ ಬೀಳಿಸಿದ್ದಾರೆ.

    ತುಂಗಾನಗರ ಠಾಣೆಯ ಪೇದೆ ನಾರಾಯಣಸ್ವಾಮಿ ಎಸಿಬಿ ಬಲೆಗೆ ಬಿದ್ದ ಪೇದೆ. ದಾಳಿಯಲ್ಲಿ ಎಸಿಬಿ ಡಿವೈಎಸ್‍ಪಿ ಮನೋಜ್‍ಕುಮಾರ್, ಇನ್ಸ್‌ಪೆಕ್ಟರ್ ತಿಪ್ಪೇಸ್ವಾಮಿ ಸೇರಿದಂತೆ ಇತರೆ ಸಿಬ್ಬಂದಿ ಭಾಗಿಯಾಗಿದ್ದರು. ನಾರಾಯಣಸ್ವಾಮಿ ಶಿವಮೊಗ್ಗದ ಟಿಪ್ಪು ನಗರದ ನಿವಾಸಿ ಅಬ್ದುಲ್ ಸಲೀಂ ಬಳಿ ಇಂದು ಗೋಪಾಳ ಬಸ್ ನಿಲ್ದಾಣ ಸಮೀಪ 7 ಸಾವಿರ ರೂ. ಲಂಚ ಪಡೆಯುತ್ತಿದ್ದರು. ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಲಂಚ ಪಡೆಯುತ್ತಿದ್ದ ಪೇದೆಯನ್ನು ಹಾಗೂ ಲಂಚದ ಹಣವನ್ನು ವಶಕ್ಕೆ ಪಡೆದಿದ್ದಾರೆ.

  • ಸಂಬಳ ಆಗಿಲ್ಲ, ಜನ್ರು ಕೊಟ್ಟರು ತೊಗೊಂಡೆ- ಲಂಚ ಪಡೆದಿದ್ದನ್ನ ಸಮರ್ಥಿಸಿಕೊಳ್ಳುವ ವೈದ್ಯ

    ಸಂಬಳ ಆಗಿಲ್ಲ, ಜನ್ರು ಕೊಟ್ಟರು ತೊಗೊಂಡೆ- ಲಂಚ ಪಡೆದಿದ್ದನ್ನ ಸಮರ್ಥಿಸಿಕೊಳ್ಳುವ ವೈದ್ಯ

    -ಸಂಬಳ ಆಗದ್ದಕ್ಕೆ ಹಣ ಪಡೆದರಂತೆ ವೈದ್ಯರು

    ತುಮಕೂರು: ವೃದ್ಧೆಯೊಬ್ಬರು ಹಣವಿಲ್ಲ ಎಂದು ಎಷ್ಟೇ ಬೇಡಿಕೊಂಡರೂ ವೈದ್ಯರು ಅವರ ಬಳಿ ಲಂಚ ಪಡೆಯುವ ಮೂಲಕ ಅಮಾನವೀಯತೆ ಮೆರೆದಿದ್ದಾರೆ. ಇದನ್ನು ಸ್ಥಳಿಯರು ವಿಡಿಯೋ ಮಾಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜಿಲ್ಲೆಯ ಪಾವಗಡ ತಾಲೂಕಿನ ತಿರುಮಣಿ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ನಾಗೇಶ್ ರೋಗಿಗಳಿಂದ ಲಂಚ ಪಡೆಯುತ್ತಿರುವ ದೃಶ್ಯಗಳು ಸೆರೆಯಾಗಿವೆ.

    ವಿಡಿಯೋದಲ್ಲಿ ಏನಿದೆ?
    ಡಾಕ್ಟರ್ ಚಿಕಿತ್ಸೆ ನೀಡುವಾಗ ವ್ಯಕ್ತಿಯೊಬ್ಬ ಯಾಕೆ ಹಣ ಪಡಿತೀರಿ ಎಂದು ಪ್ರಶ್ನೆ ಮಾಡ್ತಾರೆ. ನೀನು ಹಣ ಕೊಟ್ಟಿದ್ದರೆ ಬಂದು ಕೇಳು ಎಂದು ಅಹಂಕಾರದಿಂದ ಡಾಕ್ಟರ್ ಹೇಳ್ತಾರೆ. ಹೌದು, ನಾನು ಕೊಟ್ಟಿದ್ದೇನೆ ಅಂದಾಗ ವೈದ್ಯ ನಾಗೇಶ್, ಯಾವ ಊರಿನವನು ನೀನು ಎಂದು ಪ್ರಶ್ನೆ ಮಾಡಿದ್ದಾರೆ. ವ್ಯಕ್ತಿ ಇದೇ ಊರಿನವನು ಅಂದಾಗ, ಕಳೆದ 10 ತಿಂಗಳಿನಿಂದ ನನ್ನನು ಸೇರಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ಸಂಬಳ ಅಗಿಲ್ಲ. ಈ ಬಗ್ಗೆ ಕಳೆದ 5 ತಿಂಗಳಿನಿಂದ ನಮ್ಮ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಅದ್ರೂ ಏನು ಪ್ರಯೋಜನ ಅಗಿಲ್ಲ. ಊರಿನಲ್ಲಿ ಜ್ವರ ಹರಡುತ್ತಿದೆ. ಆಸ್ಪತ್ರೆಯ ಕೆಲವು ಸಿಬ್ಬಂದಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅದರೂ ನಾವು ಜನರಿಗೆ ಚಿಕಿತ್ಸೆ ನೀಡುತ್ತೇವೆ. ಅವರು ಹಣ ಕೊಡುತ್ತಾರೆ ನಾವು ತೆಗೆದುಕೊಳ್ಳುತ್ತೇವೆ ಇದರಲ್ಲಿ ನಮ್ಮದೇನು ತಪ್ಪಿಲ್ಲ ಎಂದು ಡಾಕ್ಟರ್ ನಾಗೇಶ್ ದುಡ್ಡು ಪಡೆದಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.

    ವೃದ್ಧೆಯೊಬ್ಬರಿಂದ 50 ರೂ. ಪಡೆದು ಜೇಬಿಗಿಳಿಸಿಕೊಳ್ಳುತಿದ್ದ ದೃಶ್ಯವನ್ನು ಸಾರ್ವಜನಿಕರೊಬ್ಬರು ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ನರ್ಸ್ ಪ್ರತಿಯೊಂದಕ್ಕೂ ಹಣ ಕೇಳುತ್ತಾರೆ ಎಂಬ ದೂರುಗಳು ಕೇಳಿಬಂದಿವೆ. ರೋಗಿಗಳಿಗೆ ಮಾತ್ರೆ, ಗ್ಲೂಕೋಸ್, ಇಂಜೆಕ್ಷನ್ ಸೇರಿದಂತೆ ಇನ್ನಿತರೆ ಯಾವುದೇ ಸೌಲಭ್ಯ ಒದಗಿಸಬೇಕಾದಲ್ಲಿ ವೈದ್ಯರಿಗೆ ರೋಗಿಗಳು ಲಂಚದ ರೂಪದಲ್ಲಿ ಹಣ ನೀಡಬೇಕಾಗಿದೆ.

    ಆಸ್ಪತ್ರೆಯ ಸಿಬ್ಬಂದಿ ಹಾಗೂ ವೈದ್ಯರ ಲಂಚಾವತಾರದಿಂದ ಸಾರ್ವಜನಿಕರು ರೋಸಿಹೋಗಿದ್ದಾರೆ. ವೃದ್ಧೆಯ ಬಳಿಯೇ ಲಂಚ ಪಡೆದಿರುವುದು ಸ್ಥಳೀಯರ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಸಂಬಂಧಿಸಿದ ಹಿರಿಯ ಅಧಿಕಾರಿಗಳು ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

  • ನೆರೆಯಿಂದ ತತ್ತರಿಸಿದ ರೈತರು – ಜಾನುವಾರಗಳ ಚಿಕಿತ್ಸೆಗೂ ಲಂಚ ಕೇಳುತ್ತಿರೋ ವೈದ್ಯರು

    ನೆರೆಯಿಂದ ತತ್ತರಿಸಿದ ರೈತರು – ಜಾನುವಾರಗಳ ಚಿಕಿತ್ಸೆಗೂ ಲಂಚ ಕೇಳುತ್ತಿರೋ ವೈದ್ಯರು

    ಹುಬ್ಬಳ್ಳಿ: ಇತ್ತೀಚೆಗಷ್ಟೇ ಸಂಭವಿಸಿದ ನೆರೆ ಪ್ರವಾಹದಿಂದ ರೈತರು ತತ್ತರಿಸಿದ್ದಾರೆ. ಆ ರೈತರ ಜಾನುವಾರುಗಳಿಗೆ ಚಿಕಿತ್ಸೆ ನೀಡಲು ಪಶು ವೈದ್ಯರು ಲಂಚ ಕೇಳುತ್ತಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

    ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಲಂಚಬಾಕ ಪಶು ವೈದ್ಯ ಡಾ. ನಿಂಗಪ್ಪ ಮಾಯಾಗೋಳ್ ಕೈ ತುಂಬಾ ಸರ್ಕಾರಿ ಸಂಬಳ ಬರುತ್ತಿದ್ದರೂ ರೈತರು ಹಣ ಕೊಡದಿದ್ದರೆ ಜಾನುವಾರುಗಳಿಗೆ ಚಿಕಿತ್ಸೆಯನ್ನೇ ನೀಡುತ್ತಿಲ್ಲ. ರೈತರ ಜಾನುವಾರುಗಳಿಗೆ ಚಿಕಿತ್ಸೆ ನೀಡಬೇಕಾದರೆ ಇನ್ನೂರು ಮುನ್ನೂರರಿಂದ ಸಾವಿರ ಸಾವಿರ ರೂಪಾಯಿವರೆಗೂ ಲಂಚ ಕೊಡುವಂತೆ ಕೇಳುತ್ತಿದ್ದಾರೆ.

    ಇತ್ತೀಚೆಗಷ್ಟೇ ಸಂಭವಿಸಿದ ನೆರೆಪ್ರವಾಹದಿಂದ ತತ್ತರಿಸಿ ಹೋಗಿರುವ ರೈತರ ಗೋಳು ಒಂದೆಡೆಯಾದರೆ ಧನದಾಹಿ ಪಶು ವೈದ್ಯ ಡಾ. ನಿಂಗಪ್ಪ ವೈದ್ಯನ ಲಂಚದಾಹದಿಂದ ಕುಂದಗೋಳ ತಾಲೂಕಿನ ರೈತರು ಬೇಸತ್ತು ಹೋಗಿದ್ದಾರೆ. ಮಾನವೀಯತೆಯನ್ನೇ ಮರೆತ ಈ ಲಂಚಬಾಕ ವೈದ್ಯ ರಾಜಾರೋಷವಾಗಿ ರೈತರಿಂದ ಹಣ ತೆಗೆದುಕೊಳ್ಳುವ ಸಂಪೂರ್ಣ ವೀಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು, ರೈತರು ತಮ್ಮ ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಬೇಕೆಂದರೆ ಈ ಪಶು ವೈದ್ಯರಿಗೆ ಲಂಚ ನೀಡಲೇಬೇಕು.

    ಪ್ರತಿ ತಿಂಗಳು ಈ ಪಶು ವೈದ್ಯರಿಗೆ ಸರ್ಕಾರದಿಂದ ಸರಿಯಾಗಿ ಸಂಬಳ ಬರುತ್ತಿದ್ದರೂ ಪಶುಗಳಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಇಲ್ಲಿನ ರೈತರ ಜೀವವನ್ನೇ ಹಿಂಡುತ್ತಿದ್ದಾರೆ. ತಾಲೂಕಿನಾದ್ಯಂತ 60 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಾವಿರಾರು ಜಾನುವಾರುಗಳನ್ನ ರೈತರು ಸಾಕಿದ್ದಾರೆ. ಆದರೆ ಆ ಜಾನುವಾರುಗಳಿಗೆ ಅನಾರೋಗ್ಯ ಎದುರಾದರೆ ಈ ವೈದ್ಯರು ಚಿಕಿತ್ಸೆ ನೀಡಬೇಕಾದರೆ ನೂರರಿಂದ ಸಾವಿರದವರೆಗೆ ಹಣ ನೀಡಿದರೆ ಮಾತ್ರ ಚಿಕಿತ್ಸೆ ನೀಡಲು ಬರುತ್ತಾರೆ. ಹೀಗಾಗಿ ಈ ಭಾಗದ ರೈತರು ವೈದ್ಯರ ಈ ನಡೆಗೆ ಬೇಸತ್ತಿದ್ದು, ತಮ್ಮ ನೋವನ್ನು ಯಾರಿಗೂ ಹೇಳಿಕೊಳ್ಳದೆ ಒದ್ದಾಡುತ್ತಿದ್ದಾರೆ.