Tag: bribery

  • ಸಿಎಂ ಪುತ್ರ ವಿಜಯೇಂದ್ರ ವಿರುದ್ಧ 5 ಸಾವಿರ ಕೋಟಿ ರೂ. ಲಂಚ ಆರೋಪ

    ಸಿಎಂ ಪುತ್ರ ವಿಜಯೇಂದ್ರ ವಿರುದ್ಧ 5 ಸಾವಿರ ಕೋಟಿ ರೂ. ಲಂಚ ಆರೋಪ

    – ಹೈಕಮಾಂಡ್‍ಗೆ ಬಿಜೆಪಿ ಶಾಸಕರಿಂದಲೇ ಪತ್ರ
    – ಸೆಪ್ಟೆಂಬರ್ ತಿಂಗಳಿನಲ್ಲಿ ದೆಹಲಿಯಲ್ಲಿ ದಾಖಲೆ ಬಿಡುಗಡೆ

    ಮೈಸೂರು: ಮುಖ್ಯಮಂತ್ರಿ ಸಿಎಂ ಬಿಎಸ್ ಯಡಿಯೂರಪ್ಪ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ 5 ಸಾವಿರ ಕೋಟಿ ರೂ. ಲಂಚ ಸಂಗ್ರಹಿಸಿರುವ ಆರೋಪ ಕೇಳಿಬಂದಿದೆ. ಈ ಕುರಿತ ಪತ್ರವೊಂದನ್ನು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಬಿಡುಗಡೆ ಮಾಡಿದ್ದಾರೆ.

    ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂ.ಲಕ್ಷ್ಮಣ್, ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ಕಳೆದ ಒಂದು ವರ್ಷದಲ್ಲಿ 5 ಸಾವಿರ ಕೋಟಿ ಸಂಗ್ರಹ ಮಾಡಿದ್ದಾರೆ. ಈ ಕುರಿತು ಬಿಜೆಪಿ ಪಕ್ಷದ ಶಾಸಕರು ಹೈಕಮಾಂಡ್‍ಗೆ ಬರೆದಿದ್ದಾರೆ. ಪತ್ರದಲ್ಲಿ ಬಿಜೆಪಿ ಶಾಸಕರೇ ಆರೋಪ ಮಾಡಿದ್ದಾರೆ ಎಂದು ಲಕ್ಷ್ಮಣ್ ಹೇಳಿದ್ದಾರೆ.

    ವಿಜಯೇಂದ್ರ ಅವರ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟ ಆಡಿಯೋ ಮತ್ತು ವಿಡಿಯೋ ಕ್ಲೀಪಿಂಗ್‍ಗಳನ್ನು ನಾವು ಸಂಗ್ರಹಿಸಿದ್ದೇವೆ. ಆದರೆ ಬಿಜೆಪಿ ಶಾಸಕರು ಬರೆದಿದ್ದಾರೆ ಎನ್ನಲಾದ ಪತ್ರದ ಬಗ್ಗೆ ತನಿಖೆಯನ್ನು ಸಿಬಿಐ ಅಥವಾ ನ್ಯಾಯಾಂಗ ತನಿಖೆ ನಡೆಸಲು ರಾಜ್ಯ ಸರ್ಕಾರಕ್ಕೆ 20 ದಿನಗಳ ಸಮಯ ನೀಡುತ್ತಿದ್ದೇವೆ. ಯಾವುದೇ ಕ್ರಮಕೈಗೊಳ್ಳದಿದ್ದಾರೆ ಸೆಪ್ಟೆಂಬರ್ ತಿಂಗಳ ಎರಡು ಅಥವಾ ಮೂರನೇ ವಾರದಲ್ಲಿ ದೆಹಲಿಯಲ್ಲಿ ಆಡಿಯೋ, ವಿಡಿಯೋ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದು ಲಕ್ಷ್ಮಣ್ ಅವರು ಆರೋಪಿಸಿದ್ದಾರೆ.

    ಸದ್ಯ ಕಾಂಗ್ರೆಸ್ ಬಿಡುಗಡೆ ಮಾಡಿರುವ ಪತ್ರವೂ ಬಿಜೆಪಿ ಶಾಸಕರೇ ಹೈಕಮಾಂಡ್‍ಗೆ ಬರೆದಿದ್ದು, 7 ಶಾಸಕರು ಪತ್ರಕ್ಕೆ ಸಹಿ ಮಾಡಿದ್ದಾರೆ ಎನ್ನಲಾಗಿದೆ. 32 ಜನರ ಕೂಟವನ್ನು ವಿಜಯೇಂದ್ರ ಮಾಡಿಕೊಂಡಿದ್ದು, ಪರ್ಯಾಯ ಸರ್ಕಾರ ನಡೆಸುತ್ತಿದ್ದಾರೆ ಎಂದು ಪತ್ರದಲ್ಲಿ ಆರೋಪ ಮಾಡಿದ್ದಾರೆ. 32 ಜನರ ಕೂಟದ ವಿವರ ಹಾಗೂ ಫೋಟೋ ಸಮೇತ ಪತ್ರದಲ್ಲಿ ವಿವರಣೆಯನ್ನು ಪತ್ರದಲ್ಲಿ ನೀಡಲಾಗಿದೆ. ಅವರ ಅಕ್ರಮ ಆಸ್ತಿ, ಹೂಡಿಕೆ ಬಗ್ಗೆಯೂ ಮಾಹಿತಿ ಲಭಿಸಿದೆ ಎಂದು ಆರೋಪಿಸಿದ್ದಾರೆ. ಪತ್ರದಲ್ಲಿ ವಿಜಯೇಂದ್ರ ಕುರಿತು ಗಂಭೀರ ಆರೋಪ ಕೇಳಿ ಬಂದಿದ್ದು, ಈ ಪತ್ರ ತನಿಖೆಗೆ ಒಳಪಡಿಸಬೇಕು. ಸರ್ಕಾರ ಈ ಬಗ್ಗೆ ತನಿಖೆ ನಡೆಸದಿದ್ದರೆ ನಾವು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಎಂದು ಲಕ್ಷ್ಮಣ್ ತಿಳಿಸಿದ್ದಾರೆ.

    ಪತ್ರದ ಕುರಿತು ವಿವರಣೆಯನ್ನು ನೀಡಿದ ಲಕ್ಷ್ಮಣ್ ಅವರು, 31 ಜನರ ಕೂಟವನ್ನು ವಿಜಯೇಂದ್ರ ಅವರು ಮಾಡಿಕೊಂಡಿದ್ದಾರೆ. ಅದರಲ್ಲಿ ರಾಜ್ಯ ಸರ್ಕಾರದ ನೌಕರರ ವರ್ಗಾವಣೆ ದಂಧೆ ನಡೆಸಲು ಷಡಕ್ಷರಿ ಅವರು ನೋಡಿಕೊಳ್ಳುತ್ತಾರೆ. ಇವರ ಕಚೇರಿ ರಾಜ್ಯ ಸರ್ಕಾರಿ ನೌಕರರ ಕಚೇರಿ ಕಬ್ಬನ್ ಪರ್ಕ್ ಯಲ್ಲಿದೆ. 2ನೇ ಅವರು ಉಮೇಶ್ ಜಲಸಂಪನ್ಮೂಲ ಮತ್ತು ಪಿಡಬ್ಲೂಡಿ ಇಲಾಖೆಯ ಟೆಂಡರ್ ನಿರ್ವಹಣೆ. ಇವರು ಗುತ್ತಿಗೆದಾರರ ಆಯ್ಕೆ, ಕಮಿಷನ್ ಸಾಗಣೆ, ಕಪ್ಪು ಹಣ ನಿರ್ವಹಣೆ ಹಾಗೂ ಎಲ್ಲಾ ಇಲಾಖೆಗಳಲ್ಲಿ ಮಾಸಿಕ ಕಂತು ವಸೂಲಿ ಮಾಡುವ ಕೆಲಸ ಮಾಡುತ್ತಾರೆ. 3ನೇ ಅವರು ರಾಜಪ್ಪ, ಅಬಕಾರಿ ಮತ್ತು ಶಿಕ್ಷಣ ಇಲಾಖೆ ವರ್ಗಾವಣೆ, ನೇಮಕಾತಿ ದಂಧೆ, ಮುಖ್ಯಮಂತ್ರಿ ಹಾಗೂ ಸೂಪರ್ ಸಿಎಂ ನಡುವೆ ಸಮನ್ವಯ ನೋಡಿಕೊಳ್ಳುವುದು, ವಿಜಯೇಂದ್ರ ಅವರ ಆದೇಶಗಳನ್ನು ವಿಧಾನಸೌಧದಲ್ಲಿ ಅನುಷ್ಠಾನ ಮಾಡುವುದು ಹೀಗೆ ಹಲವರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿಸಿದರು.

  • ಎಸಿಬಿ ಅಧಿಕಾರಿಗಳಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ತಹಶೀಲ್ದಾರ್ – 1.10 ಕೋಟಿ ಹಣ ವಶ

    ಎಸಿಬಿ ಅಧಿಕಾರಿಗಳಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ತಹಶೀಲ್ದಾರ್ – 1.10 ಕೋಟಿ ಹಣ ವಶ

    ಹೈದರಾಬಾದ್: ತಹಶೀಲ್ದಾರ್ ಲಂಚ ಪಡೆದುಕೊಳ್ಳುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳದವರಿಗೆ (ಎಸಿಬಿ) ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

    ಕೀಸರದ ತಹಶೀಲ್ದಾರ್ ಎರ್ವಾ ಬಲರಾಜು ನಾಗರಾಜು ಎಸಿಬಿ ಬಲೆಗೆ ಬಿದ್ದಿದ್ದಾನೆ. ಇವನು ಬರೋಬ್ಬರಿ 1.10 ಕೋಟಿಗಿಂತ ಹೆಚ್ಚು ಹಣವನ್ನು ಲಂಚವಾಗಿ ಪಡೆದುಕೊಳ್ಳುತ್ತಿದ್ದನು. ಆದರೆ ಶುಕ್ರವಾರ ರಾತ್ರಿ ಎಸಿಬಿ ಅಧಿಕಾರಿಗಳಿಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾನೆ.

    ಎಎಸ್ ರಾವ್ ನಗರದ ತಹಶೀಲ್ದಾರ್ ನಿವಾಸದಲ್ಲಿ ದಾಳಿ ಮಾಡಲಾಗಿದೆ. ಆಗ ಬರೋಬ್ಬರಿ 1.10 ಕೋಟಿ ನಗದು ಹಣ ಪತ್ತೆಯಾಗಿದೆ. ಆದರೆ ತಹಶೀಲ್ದಾರ್ ಹೆಚ್ಚಾಗಿ 500 ರೂ. ಮುಖಬೆಲೆಯ ನೋಟುಗಳನ್ನು ಲಂಚವಾಗಿ ಸ್ವೀಕರಿಸಿದ್ದನು. ಹೀಗಾಗಿ ಶುಕ್ರವಾರ ರಾತ್ರಿ ನೋಟುಗಳ ಎಣಿಕೆ ಶುರುವಾಗಿದ್ದು, ಇಂದು ಬೆಳಗ್ಗೆ ತನಕ ಮುಂದುವರಿದಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

    ರಾಂಪಲ್ಲಿ ದಯಾರದಲ್ಲಿ 28 ಎಕರೆ ಜಮೀನಿನ ವಿವಾದ ಇತ್ತು. ಇದನ್ನು ಅಧಿಕೃತ ಶ್ರೀ ಸತ್ಯ ಡೆವಲಪರ್ ಚೌಲಾ ಶ್ರೀನಾಥ್ ಪರವಾಗಿ ಕೆಲಸ ಮಾಡಿದ್ದಕ್ಕಾಗಿ ಈ ಹಣವನ್ನು ತಹಶೀಲ್ದಾರ್ ಲಂಚವಾಗಿ ಪಡೆದುಕೊಂಡಿದ್ದಾನೆ ಎಂದು ಹೇಳಲಾಗಿದೆ. ಹೀಗಾಗಿ ಚೌಲಾ ಶ್ರೀನಾಥ್, ತಹಶೀಲ್ದಾರ್ ನಾಗರಾಜು ಮತ್ತು ಲ್ಯಾಂಡ್ ಬ್ರೋಕರ್ ಕೆ.ಅಂಜಿ ರೆಡ್ಡಿಯನ್ನು ಎಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

    ನಾಗರಾಜು ನಿವಾಸದ ಹೊರತಾಗಿ ಆತನ ಕಚೇರಿ ಆವರಣದಲ್ಲಿಯೂ ಎಸಿಬಿ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮ ಕಂದಾಯ ಅಧಿಕಾರಿ ಬಿ.ಸೈರಾಜ್‍ರನ್ನು ಸಹ ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

  • ಅತ್ಯಾಚಾರಿ ಆರೋಪಿ ಬಳಿ 35 ಲಕ್ಷ ಲಂಚ ಕೇಳಿ ಸಿಕ್ಕಿಬಿದ್ದ ಲೇಡಿ ಪಿಎಸ್‍ಐ

    ಅತ್ಯಾಚಾರಿ ಆರೋಪಿ ಬಳಿ 35 ಲಕ್ಷ ಲಂಚ ಕೇಳಿ ಸಿಕ್ಕಿಬಿದ್ದ ಲೇಡಿ ಪಿಎಸ್‍ಐ

    ಅಹಮದಾಬಾದ್: ಅತ್ಯಾಚಾರಿ ಆರೋಪಿಯ ಬಳಿ ಲಂಚ ಕೇಳಿ ಮಹಿಳಾ ಪಿಎಸ್‍ಐ ಸಿಕ್ಕಿ ಬಿದ್ದಿರುವ ಘಟನೆ ಗುಜರಾತ್‍ನ ಅಹಮದಾಬಾದ್‍ನಲ್ಲಿ ನಡೆದಿದೆ.

    ಪಶ್ಚಿಮ ಅಹಮದಾಬಾದ್‍ನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಶ್ವೇತಾ ಜಡೇಜಾ ಲಂಚ ಕೇಳಿ ಸಿಕ್ಕಿಬಿದ್ದ ಪೊಲೀಸ್ ಅಧಿಕಾರಿ. ಆರೋಪಿಯ ವಿರುದ್ಧ ಸಾಮಾಜಿಕ ವಿರೋಧಿ ಚಟುವಟಿಕೆಗಳ ತಡೆ (ಪಿಎಎಸ್‍ಎ) ಕಾಯ್ದೆ ಆಡಿ ಪ್ರಕರಣ ದಾಖಲು ಮಾಡದೇ ಇರಲು ಶ್ವೇತಾ 35 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.

    ಆರೋಪಿ ಕೆನಾಲ್ ಶಾ 2019ರಲ್ಲಿ ಅತ್ಯಾಚಾರ ಮಾಡಿದ್ದ, ಈ ಪ್ರಕರಣವನ್ನು ಶ್ವೇತಾ ಜಡೇಜಾ ಅವರು ವಿಚಾರಣೆ ಮಾಡುತ್ತಿದ್ದರು. ಈ ವೇಳೆ ಪಿಎಎಸ್‍ಎ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸದೇ ಇರಲು ಆರೋಪಿ ಕೆನಾಲ್ ಶಾನ ಸಹೋದರನ ಬಳಿ 35 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಪಿಎಎಸ್‍ಎ ಕಾಯ್ದೆ ಅಡಿ ಪ್ರಕರಣ ದಾಖಲಿಸದೇ ಆರೋಪಿಯನ್ನು ಪೊಲೀಸರು ಜಿಲ್ಲಾ ಕಾರಾಗೃಹದಿಂದ ಬೇರೆ ಜೈಲಿಗೆ ಸ್ಥಳಾಂತರಿಸುವುದನ್ನು ತಡೆಯಲು ಶ್ವೇತಾ ಮುಂದಾಗಿದ್ದರು ಎನ್ನಲಾಗಿದೆ.

    ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಯ ಪ್ರಕಾರ, ಪೊಲೀಸ್ ಅಧಿಕಾರಿ ಶ್ವೇತಾ ಜಡೇಜಾ ಅವರು, ಆರೋಪಿ ಕಡೆಯ ಮಧ್ಯವರ್ತಿಯ ಬಳಿ ಈಗಾಗಲೇ 20 ಲಕ್ಷ ಹಣವನ್ನು ಪಡೆದುಕೊಂಡಿದ್ದಾರೆ. ಆದರೆ ಇದಾದ ನಂತರ ಹೆಚ್ಚುವರಿಯಾಗಿ ಇನ್ನೂ 15 ಲಕ್ಷ ಹಣವನ್ನು ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಈಗಾಗಲೇ 20 ಲಕ್ಷ ಪಡೆದು ಮತ್ತೆ 15 ಲಕ್ಷಕ್ಕೆ ಪೀಡಿಸುತ್ತಿದ್ದ ಕಾರಣ, ಆರೋಪಿ ಮಹಿಳಾ ಅಧಿಕಾರಿ ವಿರುದ್ಧ ದೂರು ನೀಡಿದ್ದಾನೆ.

    ಆರೋಪಿ ನೀಡಿದ ದೂರಿನ ಆಧಾರದ ಮೇಲೆ ಶ್ವೇತಾ ಜಡೇಜಾರನ್ನು ಪೊಲೀಸರು ಬಂಧಿಸಿದ್ದು, ಸೆಷನ್ಸ್ ನ್ಯಾಯಾಲಯದ ಮುಂದೆ ನಿಲ್ಲಿಸಿದ್ದಾರೆ. ಈ ವೇಳೆ ವಿಚಾರಣೆ ಮಾಡಿದ ನ್ಯಾಯಾಲಯ ಪೊಲೀಸ್ ಅಧಿಕಾರಿನ್ನು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

  • ವೈನ್ ಶಾಪ್ ತೆರೆಯಲು ಹಣದ ಬೇಡಿಕೆ- ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಪಿಡಿಒ!

    ವೈನ್ ಶಾಪ್ ತೆರೆಯಲು ಹಣದ ಬೇಡಿಕೆ- ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಪಿಡಿಒ!

    ಹುಬ್ಬಳ್ಳಿ: ವೈನ್ ಶಾಪ್ ತೆರೆಯಲು ಅನುಮತಿ ನೀಡಲು ಲಂಚ ಪಡೆಯುತ್ತಿದ್ದ ಪಿಡಿಒ ಅಧಿಕಾರಿಯನ್ನ ಎಸಿಬಿ ಬಲೆಗೆ ಬಿದಿದ್ದಾರೆ. ಜಿಲ್ಲೆಯ ವರೂರು ಗ್ರಾಮ ಪಂಚಾಯಿತಿ ಪಿಡಿಒ ಬಸವರಾಜ್ ಬಡಿಗೇರ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿ.

    ಗ್ರಾಮದ ‘ಗಾಯತ್ರಿ ವೈನ್ಸ್’ ಮುಚ್ಚಿಸಲು ಮಹಿಳಾ ಸಂಘದವರು, ಗ್ರಾಮಸ್ಥರು ಅರ್ಜಿ ಕೊಟ್ಟಿದ್ದರು. ಇದನ್ನೇ ಹಣ ಪೀಕಲು ಬಳಸಿಕೊಂಡ ಪಿಡಿಒ ಬಸವರಾಜ್, ಗ್ರಾಮಸ್ಥರು ನೀಡಿರುವ ಅರ್ಜಿ ತಿರಸ್ಕಾರ ಮಾಡಿ ವೈನ್ ಶಾಪ್ ತೆರಯಲು ತೊಂದರೆ ಇಲ್ಲದಂತೆ ಮಾಡಲು 50 ಸಾವಿರ ರೂ. ನೀಡುವಂತೆ ಶಾಪ್ ಮ್ಯಾನೇಜರ್ ಬಳಿ ಬೇಡಿಕೆ ಇಟ್ಟಿದ್ದ.

    ಮೊದಲು ಈ ಬಗ್ಗೆ ಶಾಪ್ ಮ್ಯಾನೇಜರ್ ಗಮನ ನೀಡದ ಸಂದರ್ಭದಲ್ಲಿ ಪದೇ ಪದೇ ಫೋನ್ ಮಾಡಿ ಈ ಬಗ್ಗೆ ಪಿಡಿಒ ಎಚ್ಚರಿಕೆ ನೀಡಿದ್ದ. ಅಲ್ಲದೇ ನೇರ ಶಾಪ್ ಬಳಿ ತೆರಳಿ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ. ಈ ಸಂದರ್ಭದಲ್ಲಿ ಮ್ಯಾನೇಜರ್ ವಿಶಾಲ್ ಕಲಾಲ್ ಪಿಡಿಒ ಬಳಿ ಮನವಿ ಮಾಡಿ 40 ಸಾವಿರ ರೂ. ನೀಡುವುದಾಗಿ ಒಪ್ಪಿಸಿದ್ದರು.

    ಇತ್ತ ವಿಶಾಲ್ ಕಲಾಲ್ ತಮ್ಮ ಸಮಸ್ಯೆಯನ್ನು ತಿಳಿಸಿ ಎಸಿಬಿಯ ಮೊರೆ ಹೋಗಿದ್ದರು. ಇದರಂತೆ ಇಂದು ಹಣ ಲಂಚ ಪಡೆಯುವಾಗ ಹುಬ್ಬಳ್ಳಿಯ ಕಾರವಾರ ರಸ್ತೆ ಗಣೇಶ್ ವೇ ಬ್ರಿಜ್ ಹತ್ತಿರ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಪಿಡಿಒ ಸಿಕ್ಕಿದಿದ್ದಾನೆ. ಎಸಿಬಿ ಡಿವೈಎಸ್‍ಪಿ ವಿಜಯಕುಮಾರ ಬಿಸ್ನಳಿ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಲಾಗಿದೆ.

  • ರಜೆ ಬೇಕಾ? ಮನೆಗೆ ಎಸಿ ಹಾಕ್ಸು: ತಹಶೀಲ್ದಾರ್ ಡಿಮ್ಯಾಂಡ್

    ರಜೆ ಬೇಕಾ? ಮನೆಗೆ ಎಸಿ ಹಾಕ್ಸು: ತಹಶೀಲ್ದಾರ್ ಡಿಮ್ಯಾಂಡ್

    ಚಿಕ್ಕಬಳ್ಳಾಪುರ: ತಹಶೀಲ್ದಾರ್ ದ್ವಿತೀಯ ದರ್ಜೆಯ ಸಹಾಯಕನಿಗೆ ಕರೆ ಮಾಡಿ ಮನೆಗೆ ಎಸಿ ಹಾಕಿಸಿಕೊಡು ಎಂದು ಡಿಮ್ಯಾಂಡ್ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ನಡೆದಿದೆ.

    ಗೌರಿಬಿದನೂರು ತಹಶೀಲ್ದಾರ್ ರಾಜಣ್ಣ, ದ್ವೀತಿಯ ದರ್ಜೆ ಸಹಾಯಕ ಮಹಮದ್ ಹಸನ್ ಮುಲ್ಲಾ ಅವರಿಗೆ ಕರೆ ಮಾಡಿದ್ದು, ಮನೆಗೆ ಎಸಿ ವ್ಯವಸ್ಥೆ ಮಾಡುವಂತೆ ಡಿಮ್ಯಾಂಡ್ ಮಾಡಿದ್ದಾರೆ.

    ಮಾರ್ಚ್ 23ರಂದು ಕರೆ ಮಾಡಿ, ಏನು ಕೆಲಸ ಮಾಡದೆ ನಿನಗೆ ಸಂಬಳ ಮಾಡಿಕೊಟ್ಟಿದ್ದೇನೆ. ಹಾಗಾಗಿ ನೀನು ನನ್ನ ಮನೆಗೆ ಎಸಿ ಹಾಕಿಸಿಕೊಡುವಂತೆ ಏರು ಧ್ವನಿಯಲ್ಲಿ ಡಿಮ್ಯಾಂಡ್ ಮಾಡಲಾಗಿದೆ. ತಹಶೀಲ್ದಾರ್ ಅಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಷ್ಟಕ್ಕೇ ಸುಮ್ಮನಾಗದೆ ಮನೆಗೆ ಎಸಿ ಹಾಕಿಸಿಕೊಡಲಿಲ್ಲ ಎಂದು ಮಹಮದ್ ಹಸನ್ ಮುಲ್ಲಾಗೆ ತಹಶೀಲ್ದಾರ್ ರಾಜಣ್ಣ ನೋಟಿಸ್ ನೀಡಿದ್ದಾರೆ. ಸಮರ್ಪಕವಾಗಿ ಕೆಲಸ ಮಾಡಿಲ್ಲ ಎಂದು ಆರೋಪಿಸಿ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.

    ಆಡಿಯೋದಲ್ಲಿ ಮಾತನಾಡಿರುವ ರಾಜಣ್ಣ, ನಾನು ಹೊಸದಾಗಿ ಮನೆ ಮಾಡಿದ್ದೇನೆ. ಈ ಬಿಸಿಲಲ್ಲಿ ಮನೆಯಲ್ಲಿ ಮಲ್ಕೊಳಕ್ಕೆ ಆಗುತ್ತಾ, ಬಿಸಿಲಲ್ಲಿ ಮಲಗಲು ಏನ್ ಬೇಕು ನಮಗೆ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ರಾಜಣ್ಣ ಎಸಿ ಬೇಕು ಎಂದು ಉತ್ತರಿಸಿದ್ದಾರೆ. ನಮಗೆ ಒಂದು ಎಸಿ ವ್ಯವಸ್ಥೆ ಮಾಡಿಸಿ ಮತ್ತೆ ಎಂದು ಕೇಳಿದ್ದಾರೆ. ಅಲ್ಲದೆ ಎಸಿ ಹಾಕಿಸಬೇಕ್ರೀ ಎಂದು ಏರು ಧ್ವನಿಯಲ್ಲಿ ಮಾತನಾಡಿದ್ದಾರೆ. ಅಲ್ಲದೆ ಎಸಿ ಹಾಕಿಸಿದರೆ ನಿಮಗೆ 28ರ ವರೆಗೂ ರಜೆ ಕೊಡುತ್ತೇನೆ ಎಂದು ಹೇಳಿದ್ದಾರೆ.

  • ಲಂಚ ಕೇಳಿದ ಎಫ್‍ಡಿಎ ಅಧಿಕಾರಿಯ ಬೆವರಿಳಿಸಿದ ನಿವೃತ್ತ ಯೋಧ

    ಲಂಚ ಕೇಳಿದ ಎಫ್‍ಡಿಎ ಅಧಿಕಾರಿಯ ಬೆವರಿಳಿಸಿದ ನಿವೃತ್ತ ಯೋಧ

    – 50 ಸಾವಿರಕ್ಕಾಗಿ 10 ವರ್ಷ ಕೆಲ್ಸ ಮಾಡಿಕೊಟ್ಟಿರಲಿಲ್ಲ

    ಕೋಲಾರ: ಲಂಚ ಕೇಳಿದ ತಾಲೂಕು ಕಚೇರಿಯ ಎಫ್‍ಡಿಎ ಕ್ಲಾರ್ಕ್ ಒಬ್ಬನಿಗೆ ಮಾಜಿ ಯೋಧರೊಬ್ಬರು ಕಚೇರಿಯಲ್ಲೇ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಕೋಲಾರ ಜಿಲ್ಲೆ ಮಾಲೂರು ತಾಲೂಕು ಕಚೇರಿಯಲ್ಲಿ ನಡೆದಿದೆ.

    ಮಾಲೂರು ತಾಲೂಕು ಮಣಿ ಶೆಟ್ಟಿಹಳ್ಳಿ ಗ್ರಾಮದ ಮಾಜಿ ಯೋಧ ವೆಂಕಟೇಶಪ್ಪನ ಜಮೀನಿನ ಕಡತ ವಿಲೇವಾರಿಗಾಗಿ ಕಳೆದ ಹತ್ತು ವರ್ಷಗಳಿಂದ ತಾಲೂಕು ಕಚೇರಿಗೆ ಬರುತ್ತಿದ್ದಾರೆ. ಹೀಗಿದರೂ ಎಫ್‍ಡಿಎ ಹಾಗೂ ತಾಲೂಕು ಕಚೇರಿ ಸಿಬ್ಬಂದಿ ಕೆಲಸ ಮಾಡಿಕೊಡದೆ ಸತಾಯಿಸುತ್ತಿದ್ದು, ಕೆಲಸ ಮಾಡಿಕೊಡಲು 50 ಸಾವಿರ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

    ಹಣ ಕೊಡದ ಹಿನ್ನೆಲೆ ಕೆಲಸ ಮಾಡಿಕೊಡದೆ ಇವತ್ತು ನಾಳೆ ಎಂದು ಸತಾಯಿಸುತ್ತಿದ್ದ ಸಿಬ್ಬಂದಿಗೆ ಕಚೇರಿಯಲ್ಲೇ ಇಂದು ಮಾಜಿ ಯೋಧ ತರಾಟೆಗೆ ತೆಗೆದುಕೊಂಡಿದ್ದಾರೆ. ನಿನ್ನ ಹೆಂಡತಿ ಮಕ್ಕಳನ್ನು ನೋಡಿಕೊಳ್ಳಲು ನೀನು ಲಂಚ ಕೇಳುವುದಾದರೆ ನಮ್ಮ ಮನೆಗೆ ಕಳಿಸು ಅವರನ್ನು ಕೂಲಿ ಮಾಡಿ ಸಾಕಿಕೊಳ್ಳುತ್ತೇನೆ. ನಾನೇನು ನಿಮ್ಮ ಮನೆ ಆಳಲ್ಲ, ನಿನಗ್ಯಾಕೆ ಲಂಚ ಕೊಡಬೇಕು ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಇದರಿಂದ ಅವಮಾನಿತರಾದ ತಾಲೂಕು ಕಚೇರಿ ಸಿಬ್ಬಂದಿ ಮಾಜಿ ಯೋಧನನ್ನು ಸಮಾಧಾನಪಡಿಸಿ ಉಳಿದ ಕೆಲಸವನ್ನು ಮಾಡಿ ಕೊಡುವುದಾಗಿ ತಿಳಿಸಿ ಕಳುಹಿಸಿ ಕೊಟ್ಟಿದ್ದಾರೆ.

  • ತೊಗರಿ ಖರೀದಿ ಕೇಂದ್ರದಲ್ಲಿ ರೈತರಿಂದ ಹಣ ವಸೂಲಿ- ವಿಡಿಯೋ ವೈರಲ್

    ತೊಗರಿ ಖರೀದಿ ಕೇಂದ್ರದಲ್ಲಿ ರೈತರಿಂದ ಹಣ ವಸೂಲಿ- ವಿಡಿಯೋ ವೈರಲ್

    ವಿಜಯಪುರ: ಜಿಲ್ಲೆಯ ತೊಗರಿ ಖರೀದಿ ಕೇಂದ್ರದಲ್ಲಿ ರೈತರಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ, ಇದೀಗ ಖರೀದಿ ಕೇಂದ್ರದ ಸಿಬ್ಬಂದಿ ರೈತರಿಂದ ಹಣ ವಸೂಲಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿನ ತೊಗರಿ ಖರೀದಿ ಕೇಂದ್ರದಲ್ಲಿ ಹಣ ವಸೂಲಿ ಮಾಡಿರುವ ವಿಡಿಯೋ ವೈರಲ್ ಆಗಿದೆ. ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿರುವ ಇಸಾಕ್ ಬಡಿಗೇರ್ ರೈತರಿಂದ ಪ್ರತಿ ಕ್ವಿಂಟಲ್ ಗೆ 100 ರಿಂದ 150 ರೂಪಾಯಿ ವಸೂಲಿ ಮಾಡುತ್ತಿದ್ದಾನೆ. ಕಾಖಂಡಕಿ ತೊಗರಿ ಖರೀದಿ ಕೇಂದ್ರ ದಲ್ಲಿನ ಸಿಬ್ಬಂದಿಯ ಈ ವರ್ತನೆಯಿಂದ ರೈತರು ಬೇಸತ್ತಿದ್ದಾರೆ.

    ಪ್ರತಿ ರೈತರಿಂದ ಉಚಿತವಾಗಿ ತೊಗರಿ ಖರೀದಿ ಮಾಡಿಕೊಳ್ಳಬೇಕು ಎಂದು ಸರ್ಕಾರ ಆದೇಶ ನೀಡಿದರೂ, ಈ ಕಂಪ್ಯೂಟರ್ ಆಪರೇಟರ್ ಮಾತ್ರ ರಾಜಾರೋಷವಾಗಿ ರೈತರಿಂದ ಸುಲಿಗೆ ಮಾಡುತ್ತಿದ್ದಾನೆ. ಒಬ್ಬ ರೈತರಿಂದ 10 ಕ್ವಿಂಟಲ್ ತೊಗರಿ ಖರೀದಿ ಮಾಡಬೇಕು ಎಂದು ಸರ್ಕಾರದ ಸೂಚನೆಯಿಂದ ಪ್ರತಿ ರೈತರಿಂದಲೂ 10 ಕ್ವಿಂಟಲ್ ಗೆ ಕಡಿಮೆ ಎಂದರೂ ಸಾವಿರ ರೂಪಾಯಿ ಸುಲಿಗೆ ಮಾಡಲಾಗುತ್ತಿದೆ.

    ಎರಡು ದಿನಗಳ ಹಿಂದಷ್ಟೇ ಇಂತಹ ಅಕ್ರಮ ದಂಧೆಯ ತೊಗರಿ ಖರೀದಿ ಕೇಂದ್ರದ ಮೇಲೆ ಎಸಿಬಿ ದಾಳಿ ನಡೆಸಿತ್ತು. ಆದರೂ ಎಚ್ಚೆತ್ತುಗಳ್ಳದ ಖದೀಮರು ಅದೇ ಕೆಲಸ ಮುಂದುವರಿಸಿದ್ದು, ರೈತರಿಂದ ಸುಲಿಗೆ ಮಾಡುತ್ತಿದ್ದಾರೆ.

  • ಲಂಚ ಪಡೆದ ಪೇದೆಗೆ 10 ಸಾವಿರ ದಂಡ, 2 ವರ್ಷ ಕಠಿಣ ಜೈಲು ಶಿಕ್ಷೆ – ಕೋರ್ಟ್ ಆದೇಶ

    ಲಂಚ ಪಡೆದ ಪೇದೆಗೆ 10 ಸಾವಿರ ದಂಡ, 2 ವರ್ಷ ಕಠಿಣ ಜೈಲು ಶಿಕ್ಷೆ – ಕೋರ್ಟ್ ಆದೇಶ

    ಚಿಕ್ಕಮಗಳೂರು: ಪಾಸ್‍ಪೋರ್ಟ್ ಪರಿಶೀಲನೆಗೆ ಲಂಚ ಪಡೆದ ಪೇದೆಗೆ ಕಠಿಣ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ನಗರದ ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ಹಾಗೂ ವಿಶೇಷ ನ್ಯಾಯಾಲಯ ಈ ತೀರ್ಪನ್ನ ಪ್ರಕಟಿಸಿದೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಹರಮಕ್ಕಿ ಗ್ರಾಮದ ಅಜಿತ್ ಎಂಬವರು ಪಾಸ್‍ಪೋರ್ಟ್‍ಗಾಗಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆ ಪರಿಶೀಲನೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿಯಿಂದ ಗೋಣಿಬೀಡು ಠಾಣೆಗೆ ಕಳುಹಿಸಲಾಗಿತ್ತು. ಗೋಣಿಬೀಡು ಪೊಲೀಸ್ ಠಾಣಾ ಪೇದೆ ಗಿರೀಶ್ ಕುಮಾರ್ ವರದಿನೀಡಲು 3 ಸಾವಿರ ಲಂಚ ಕೊಡುವಂತೆ ಅರ್ಜಿದಾರ ಅಜಿತ್‍ಗೆ ಆಗ್ರಹಿಸಿ, ಕೊನೆಗೆ 2,500 ರೂ. ಹಣವನ್ನು ನೀಡಿ ಎಂದಿದ್ದರು.

    ಪ್ರಕರಣ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತ ಪೊಲೀಸರು, ಮೇ 28 2013ರಂದು ಗೋಣಿಬೀಡಿನ ರಾಮೇಶ್ವರ ಬೇಕರಿ ಬಳಿ ಪೇದೆ ಗಿರೀಶ್ ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿದ್ದರು. ಇದೀಗ ಆರೋಪ ಸಾಬೀತಾದ ಹಿನ್ನೆಲೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಹಾಗೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಉಮೇಶ್.ಎಂ.ಅಡಿಗ ಆರೋಪಿ ಗಿರೀಶ್‍ಗೆ 2 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಲೋಕಾಯುಕ್ತ ವಿಶೇಷ ಅಭಿಯೋಜಕ ವಿ.ಟಿ.ಥಾಮಸ್ ವಾದ ಮಂಡಿಸಿದರು.

  • ಲಂಚಬಾಕ ಪಾಲಿಕೆ ಎಂಜಿನಿಯರ್ ಎಸಿಬಿ ಬಲೆಗೆ

    ಲಂಚಬಾಕ ಪಾಲಿಕೆ ಎಂಜಿನಿಯರ್ ಎಸಿಬಿ ಬಲೆಗೆ

    ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಪಾಲಿಕೆಯ ಸಹಾಯಕ ಎಂಜಿನಿಯರ್ ಲಂಚ ಪಡೆಯುವಾಗ ಅಧಿಕಾರಿಗಳು ಹಿಡಿದಿದ್ದಾರೆ.

    ಪಾಲಿಕೆ ಸಹಾಯಕ ಎಂಜಿನಿಯರ್ ಹಾಲೇಶಪ್ಪ 7 ಸಾವಿರ ರೂ. ಲಂಚ ಪಡೆಯುವಾದ ಎಸಿಬಿ ಬಲೆಗೆ ಸಿಕ್ಕ ಅಧಿಕಾರಿ. ನಗರದ ಗಾಂಧಿನಗರ ನಿವಾಸಿ ವೆಂಕಟೇಶ್ ಶೆಟ್ಟಿ ತಮ್ಮ ನಿವಾಸದ ಪಕ್ಕದಲ್ಲಿದ್ದ ಖಾಲಿ ನಿವೇಶವನ್ನು ವಾಣಿಜ್ಯ ಉದ್ದೇಶಕ್ಕೆ ಪರಿವರ್ತಿಸಿಕೊಡುವಂತೆ ಪಾಲಿಕೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಪಾಲಿಕೆ ಎಂಜಿನಿಯರ್ ಹಾಲೇಶಪ್ಪ ವಾಣಿಜ್ಯ ಉದ್ದೇಶಕ್ಕಾಗಿ ನಿವೇಶನ ಪರಿವರ್ತನೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರಂತೆ.

    ಲಂಚ ನೀಡಲು ನಿರಾಕರಿಸಿದ ಹಾಗೂ ಅಧಿಕಾರಿಗಳ ವರ್ತನೆಯಿಂದ ಬೇಸತ್ತ ನಿವೇಶನದ ಮಾಲೀಕ ವೆಂಕಟೇಶ್ ಶೆಟ್ಟಿ ಈ ಬಗ್ಗೆ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಪಾಲಿಕೆ ಸಹಾಯಕ ಎಂಜಿನಿಯರ್ ಹಾಲೇಶಪ್ಪ 7 ಸಾವಿರ ರೂ. ಲಂಚ ಪಡೆಯುವಾಗ ಕಚೇರಿಯಲ್ಲಿಯೇ ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

    ಲಂಚಬಾಕ ಎಂಜಿನಿಯರನ್ನು ವಶಕ್ಕೆ ಪಡೆದಿರುವ ಎಸಿಬಿ ಅಧಿಕಾರಿಗಳು, ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಈ ಭ್ರಷ್ಟ ಎಂಜಿನಿಯರ್ ಹಾಲೇಶಪ್ಪ ಈ ಹಿಂದೆ ಚಿಕ್ಕಮಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಲಂಚ ಪಡೆಯುವಾಗ ಲೋಕಾಯುಕ್ತ ದಾಳಿಗೂ ಒಳಗಾಗಿದ್ದ ಎನ್ನಲಾಗಿದೆ.

  • ಭೂ ಪರಿವರ್ತನೆಗೆ ರೈತರಿಂದ ಲಂಚ – ಎಸಿಬಿ ಬಲೆಗೆ ಅರಣ್ಯ ಇಲಾಖೆ ಗುಮಾಸ್ತ

    ಭೂ ಪರಿವರ್ತನೆಗೆ ರೈತರಿಂದ ಲಂಚ – ಎಸಿಬಿ ಬಲೆಗೆ ಅರಣ್ಯ ಇಲಾಖೆ ಗುಮಾಸ್ತ

    ಚಾಮರಾಜನಗರ: ಭೂ ಪರಿವರ್ತನೆ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅರಣ್ಯ ಇಲಾಖೆ ಗುಮಾಸ್ತನೋರ್ವ ಎಸಿಬಿ ಬಲೆಗೆ ಬಿದ್ದ ಘಟನೆ ಚಾಮರಾಜನಗರ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.

    ಚಾಮರಾಜನಗರ ಅರಣ್ಯ ಕಚೇರಿಯಲ್ಲಿನ ಗುಮಾಸ್ತ ಪುಟ್ಟಸ್ವಾಮಿ ಸಿಕ್ಕಿ ಬಿದ್ದ ಅರಣ್ಯ ಇಲಾಖೆ ಗುಮಾಸ್ತ. ಹರದನಹಳ್ಳಿಯ ರೈತ ಲಿಂಗರಾಜು ತಮ್ಮ ಜಮೀನಿನ ಭೂ ಪರಿವರ್ತನೆ ಮಾಡಿಕೊಡಲು ಅರ್ಜಿ ಸಲ್ಲಿಸಿದಾಗ, ಈತ ಆ ಕೆಲಸ ಮಾಡಿಕೊಡಲು 3 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಅದರಂತೆ ಇಂದು ಕೆ.ಎಸ್.ಆರ್.ಟಿ.ಸಿ ನಿಲ್ದಾಣಕ್ಕೆ ಬಂದು ಹಣ ಕೊಡಲು ಪುಟ್ಟಸ್ವಾಮಿ ಹೇಳಿದ್ದನಂತೆ.

    ಹೀಗಾಗಿ ಇಂದು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ರೈತನಿಂದ 2500 ರೂ. ಹಣ ಪಡೆಯುವಾಗ ಎಸಿಬಿ ಇನ್ಸ್ ಪೆಕ್ಟರ್ ದೀಪಕ್ ದಾಳಿ ನಡೆಸಿ ಹಣದ ಸಮೇತ ಪುಟ್ಟಸ್ವಾಮಿಯನ್ನು ಬಂಧಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪುಟ್ಟಸ್ವಾಮಿಯನ್ನು ವಿಚಾರಣೆಗೊಳಪಡಿಸಿದ್ದಾರೆ.