Tag: bribery

  • ಎಸಿಬಿ ದಾಳಿ – ರೆಡ್‌ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದ ಕಂಪ್ಯೂಟರ್‌ ಆಪರೇಟರ್‌

    ಎಸಿಬಿ ದಾಳಿ – ರೆಡ್‌ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದ ಕಂಪ್ಯೂಟರ್‌ ಆಪರೇಟರ್‌

    ಗದಗ: ಜಿಲ್ಲೆಯ ಶಿರಹಟ್ಟಿ ಪಟ್ಟಣ ಪಂಚಾಯತ್ ಕಂಪ್ಯೂಟರ್ ಆಪರೇಟರ್ ಶರಣಪ್ಪ ಗೌಳಿ ಎಂಬಾತ ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾನೆ.

    ಶರಣಪ್ಪ ಗೌಳಿ ಆಸ್ತಿ ಖಾತಾ ಬದಲಾವಣೆ ಹಾಗೂ ಕಂಪ್ಯೂಟರ್ ಉತಾರ ನೀಡಲು ಫಲಾನುಭವಿಗೆ ಲಂಚದ ಬೇಡಿಕೆ ಇಟ್ಟಿದ್ದ. ಸ್ಥಳೀಯ ಮಹೇಶ್ ಎಂಬುವರು ತಮ್ಮ ಆಸ್ತಿಯ ಖಾತಾ ಬದಲಾವಣೆ ಮಾಡಿ ಕಂಪ್ಯೂಟರ್ ಉತಾರ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಸಿ ಹಲವು ತಿಂಗಳು ಕಳೆದರೂ, ಉತಾರ ಒದಗಿಸಿರಲಿಲ್ಲ. ಉತಾರ ನೀಡಲು 3,500 ರೂಪಾಯಿ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ.

    ಈ ಕುರಿತು ಅರ್ಜಿದಾರ ಮಹೇಶ್ ನೀಡಿರುವ ದೂರಿನ ಮೇರೆಗೆ ಎಸಿಬಿ ಅಧಿಕಾರಿಗಳು ಇಂದು ಮಧ್ಯಾಹ್ನ ಕಚೇರಿಯಲ್ಲಿ ಲಂಚ ಪಡೆಯುವ ವೇಳೆ ದಾಳಿ ಮಾಡಿದ್ದಾರೆ. ಎಸಿಬಿ ಡಿ.ಎಸ್ಪಿ ವಾಸುದೇವರಾಮ್ ಎನ್ ಅವರ ನೇತೃತ್ವದ ತಂಡ ದಾಳಿಮಾಡಿ ಆರೋಪಿ ಶರಣಪ್ಪ ಗೌಳಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

  • ಮೊಬೈಲ್ ಕಳ್ಳತನ ಪ್ರಕರಣ- 1 ಲಕ್ಷ ಲಂಚ ಕೇಳಿದ್ದ ಲೇಡಿ ಎಸ್‍ಐ ಎಸಿಬಿ ಬಲೆಗೆ

    ಮೊಬೈಲ್ ಕಳ್ಳತನ ಪ್ರಕರಣ- 1 ಲಕ್ಷ ಲಂಚ ಕೇಳಿದ್ದ ಲೇಡಿ ಎಸ್‍ಐ ಎಸಿಬಿ ಬಲೆಗೆ

    ಬೆಂಗಳೂರು: 1 ಲಕ್ಷ ರೂ. ಲಂಚ ಕೇಳಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಯಪ್ಪನಹಳ್ಳಿ ಪೊಲೀಸ್ ಠಾಣೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಸಬ್ ಇನ್‍ಸ್ಪೆಕ್ಟರ್ ಸೌಮ್ಯ ಹಾಗೂ ಹೆಡ್ ಕಾನ್‍ಸ್ಟೇಬಲ್ ಜೆಪಿ ರೆಡ್ಡಿಯವರನ್ನು ಟ್ರ್ಯಾಪ್ ಮಾಡಿದ್ದಾರೆ.

    ಮೊಬೈಲ್ ಕಳ್ಳತನ ಪ್ರಕರಣದಲ್ಲಿ ಸಬ್ ಇನ್ಸ್‍ಪೆಕ್ಟರ್ ಸೌಮ್ಯ 1 ಲಕ್ಷ ರೂ. ಲಂಚ ಕೇಳಿದ್ದರು. ಲಂಚ ಪಡೆಯುವ ವೇಳೆ ಪಿಎಸ್‍ಐ ಮತ್ತು ಹೆಡ್ ಕಾನ್‍ಸ್ಟೇಬಲ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಇಬ್ಬರನ್ನೂ ಬಂಧಿಸಿ ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

    ಎಸಿಬಿ ಅಧಿಕಾರಿಗಳನ್ನು ಕಂಡು ತಪ್ಪಿಸಿಕೊಳ್ಳಲು ಯತ್ನಿಸಿ ಪೇದೆ ಕುಮಾರ್ ಸ್ಟೇಷನ್ ಮೇಲಿಂದ ಕೆಳಗೆ ಜಿಗಿದಿದ್ದು, ಘಟನೆಯಲ್ಲಿ ಕಾನ್‍ಸ್ಟೆಬಲ್ ಕುಮಾರ್ ಕಾಲು ಮುರಿದಿದೆ. ಒಂದು ಲಕ್ಷ ರೂ. ಲಂಚ ಪಡೆದಿದ್ದ ಹಣವನ್ನು ಪಿಎಸ್‍ಐ ಸೌಮ್ಯ ಕುಮಾರ್ ಕೈಗೆ ಕೊಟ್ಟಿದ್ದರು. ಹೀಗಾಗಿ ಕುಮಾರ್ ಎಸಿಬಿ ಅಧಿಕಾರಿಗಳನ್ನು ಕಂಡು ತಪ್ಪಿಸಿಕೊಳ್ಳುವ ಭರದಲ್ಲಿ ಮೇಲಿಂದ ಜಿಗಿದು ಕಾಲು ಮುರಿದುಕೊಂಡಿದ್ದಾರೆ.

  • ನೀರಿನ ವಿಚಾರಕ್ಕೂ ಲಂಚ – ಅಧಿಕಾರಿಗಳು ಎಸಿಬಿ ಬಲೆಗೆ

    ನೀರಿನ ವಿಚಾರಕ್ಕೂ ಲಂಚ – ಅಧಿಕಾರಿಗಳು ಎಸಿಬಿ ಬಲೆಗೆ

    ಬೆಂಗಳೂರು: ನೀರಿನ ವಿಚಾರಕ್ಕೂ ಲಂಚ ಕೇಳಿ ಅಧಿಕಾರಿಗಳಿಬ್ಬರು ಎಸಿಬಿ ಬಲೆಗೆ ಬಿದ್ದಿರುವ ಘಟನೆ ಸಿಲಿಕಾನ್ ಸಿಟಿಯ ಪೀಣ್ಯದಲ್ಲಿ ನಡೆದಿದೆ.

    ಎಸಿಬಿ ಬಲೆಗೆ ಬಿದ್ದ ಅಧಿಕಾರಿಯನ್ನು ಮಾಲಿನ್ಯ ನಿಯಂತ್ರಣ ಮಂಡಳಿಯ ಇಓ ಶಿವಕುಮಾರ್ ಮತ್ತು ಸಿಬ್ಬಂದಿ ಸೋಮಶೇಖರ್ ಎಂದು ಗುರುತಿಸಲಾಗಿದೆ. ಈ ಇಬ್ಬರು ಬೆಂಗಳೂರಿನ ಪೀಣ್ಯದಲ್ಲಿರುವ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯಲ್ಲಿ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

    ಲೋಕೇಶ್ ಎಂಬುವರು ವಾಟರ್ ಪ್ಲ್ಯಾಂಟ್ ನಿರ್ಮಿಸುವ ಸಲುವಾಗಿ ಲೈಸೆನ್ಸ್ ಪಡೆಯಲು ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಗೆ ಬಂದಿದ್ದಾರೆ. ಈ ವೇಳೆ ಲೈಸೆನ್ಸ್ ನೀಡಲು ಶಿವಕುಮಾರ್ ಮತ್ತು ಸೋಮಶೇಖರ್ ಲೋಕೇಶ್ ಅವರ ಬಳಿ 50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಇಂದು ಕಚೇರಿಯಲ್ಲೇ ಲೋಕೇಶ್ ಅವರಿಂದ 25 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.

  • ಸ್ಥಳೀಯರಿಂದ 3.40 ಲಕ್ಷ ಲಂಚ- ಪಿಎಸ್‍ಐ ಸೇರಿ 8 ಜನ ಪೊಲೀಸರು ಅಮಾನತು

    ಸ್ಥಳೀಯರಿಂದ 3.40 ಲಕ್ಷ ಲಂಚ- ಪಿಎಸ್‍ಐ ಸೇರಿ 8 ಜನ ಪೊಲೀಸರು ಅಮಾನತು

    – ಗಾಂಜಾ ಕೇಸ್‍ನಲ್ಲಿ ಫಿಟ್ ಮಾಡೋದಾಗಿ ಸ್ಥಳೀಯರಿಗೆ ಬೆದರಿಕೆ

    ಚಿಕ್ಕಮಗಳೂರು: ಕರ್ತವ್ಯ ಲೋಪ ಆರೋಪದಡಿ ಜಿಲ್ಲೆಯಲ್ಲಿ ಓರ್ವ ಪೊಲೀಸ್ ಸಬ್‍ ಇನ್‍ಸ್ಪೆಕ್ಟರ್ ಹಾಗೂ ಏಳು ಜನ ಪೇದೆಗಳನ್ನು ಅಮಾನತು ಮಾಡಲಾಗಿದೆ.

    ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದು, ನಗರದ ಬಸವನಹಳ್ಳಿ ಪೊಲೀಸ್ ಠಾಣೆಯ ಪಿಎಸ್‍ಐ ಸುಖೇತ್ ಸೇರಿದಂತೆ ಯುವರಾಜ್, ಲಕ್ಷ್ಮಣ್, ಪ್ರದೀಪ್ ಎಂಬ ಮೂವರು ಪೇದೆಗಳನ್ನ ಅಮಾನತು ಮಾಡಲಾಗಿದೆ. ಮತ್ತೊಂದು ಪ್ರಕರಣದಲ್ಲೂ ಕರ್ತವ್ಯ ಲೋಪ ಆರೋದಡಿಯೇ ತಾಲೂಕಿನ ಆಲ್ದೂರು ಪೊಲೀಸ್ ಠಾಣೆಯ ಪೇದೆಗಳಾದ ಶಶಿಧರ್, ಸ್ವಾಮಿ, ಅರುಣ್ ಕುಮಾರ್, ನವೀನ್ ಅವರನ್ನು ಅಮಾನತು ಮಾಡಲಾಗಿದೆ.

    ಅಮಾನತುಗೊಂಡ ಬಸವನಹಳ್ಳಿ ಪೊಲೀಸರು ಗಾಂಜಾ ಕೇಸ್‍ನಲ್ಲಿ ಫಿಕ್ಸ್ ಮಾಡುವುದಾಗಿ ಬೆದರಿಸಿ ಸ್ಥಳೀಯರಿಬ್ಬರಿಂದ 3.40 ಲಕ್ಷ ರೂ. ಪಡೆದಿದ್ದರು ಎಂದು ಹೇಳಲಾಗಿದೆ. ಇನ್ನು ಆಲ್ದೂರು ಠಾಣೆಯ ಪೊಲೀಸರು ಸಹ ಹೋಮ್ ಸ್ಟೇ ಮಾಲೀಕನಿಗೆ ಬೆದರಿಸಿ ಲಂಚ ಪಡೆದಿದ್ದರು ಎನ್ನಲಾಗಿದೆ. ಈ ಎರಡೂ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಓರ್ವ ಪಿಎಸ್‍ಐ ಹಾಗೂ ಏಳು ಸಿಬ್ಬಂದಿಯನ್ನು ಅಮಾನತು ಮಾಡಿದ್ದು, ಅಮಾನತಾದ ಎಲ್ಲರೂ ಇಲಾಖಾ ತನಿಖೆ ಎದುರಿಸಬೇಕಿದೆ.

  • ಅಂಗನವಾಡಿ ಕಾರ್ಯಕರ್ತೆಯ ಬಳಿ ಲಂಚ – ಎಸಿಬಿ ಬಲೆಗೆ ಬಿದ್ದ ಲೇಡಿ ಆಫೀಸರ್

    ಅಂಗನವಾಡಿ ಕಾರ್ಯಕರ್ತೆಯ ಬಳಿ ಲಂಚ – ಎಸಿಬಿ ಬಲೆಗೆ ಬಿದ್ದ ಲೇಡಿ ಆಫೀಸರ್

    ಬೀದರ್: ವರ್ಗಾವಣೆ ಮಾಡಿಸಲು ಅಂಗನವಾಡಿ ಕಾರ್ಯಕರ್ತೆಯ ಬಳಿ ಲಂಚ ಪಡೆಯುವಾಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಹಿಳಾ ತಾಲೂಕಾಧಿಕಾರಿ ಎಸಿಬಿ ಬಲೆಗೆ ಬಿದಿದ್ದಾರೆ.

    ವರ್ಗಾವಣೆ ಮಾಡಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಶೋಭಾ 50 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಇಂದು ಮುಂಗಡವಾಗಿ 30 ಸಾವಿರ ಲಂಚ ಪಡೆಯುತ್ತಿರುವಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ತಾಲೂಕಾಧಿಕಾರಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದಾರೆ.

    ಹುಮ್ನಬಾದ್ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಶೋಭಾ ವಿರುದ್ಧ ಸಿದ್ದಾರ್ಥ ಧಾನಾಜೀ ಎಂಬುವರು ಎಸಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಎಸಿಬಿ ಪೊಲೀಸರು ದಾಳಿ ಮಾಡಿ ಲಂಚದ ಸಮೇತ ತಾಲೂಕಾಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ. ಎಸಿಬಿ ಎಸ್‍ಪಿ ಮಹೇಶ್ ಮೇಗಣ್ಣನವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.

  • 7 ಲಕ್ಷ ಲಂಚ – ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಲೇಡಿ ತಹಶೀಲ್ದಾರ್

    7 ಲಕ್ಷ ಲಂಚ – ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಲೇಡಿ ತಹಶೀಲ್ದಾರ್

    ಬೆಂಗಳೂರು: 7 ಲಕ್ಷ ಲಂಚ ಪಡೆಯುವ ವೇಳೆ ಮಹಿಳಾ ತಹಶೀಲ್ದಾರ್ ಒಬ್ಬರು ಎಸಿಬಿ ಬಲೆಗೆ ಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಬೆಂಗಳೂರಿನ ಕೆಜಿ ರೋಡ್‍ನಲ್ಲಿರುವ ತಹಶೀಲ್ದಾರ್ ಕಚೇರಿ ವಿಶೇಷ ಮಹಿಳಾ ತಹಶೀಲ್ದಾರ್ ಲಕ್ಷ್ಮೀ ಮತ್ತು ಕ್ಲರ್ಕ್ ಪ್ರಸನ್ನಕುಮಾರ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿಗಳು. ಅಜಂ ಪಾಷಾ ಎಂಬುವರ ಬಳಿ 7 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ವಿಶೇಷ ತಹಶೀಲ್ದಾರ್ ಲಕ್ಷ್ಮೀ, 5 ಲಕ್ಷ ಹಣ ಪಡೆಯುವಾಗ ರೇಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.

    ಜಮೀನು ಆರ್.ಟಿ.ಸಿ ಮಾಡಿ ಕೊಡುವ ಕೆಲಸಕ್ಕೆ ಲಕ್ಷ್ಮೀ ಮತ್ತು ಪ್ರಸನ್ನ ಕುಮಾರ್ ಸೇರಿಕೊಂಡು 7 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದರಲ್ಲಿ 5 ಲಕ್ಷ ತಹಶೀಲ್ದಾರ್ ಲಕ್ಷ್ಮೀಗೆ ಹಾಗೂ ಉಳಿದ ಎರಡು ಲಕ್ಷ ಕ್ಲರ್ಕ್ ಪ್ರಸನ್ನಕುಮಾರಿಗೆ ಎಂದು ಹಂಚಿಕೊಂಡಿದ್ದಾರೆ. ಈ ವೇಳೆ ಲಕ್ಷ್ಮೀ 5 ಲಕ್ಷ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದು, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

    ಜೊತೆಗೆ 2 ಲಕ್ಷ ಲಂಚ ಪಡೆದ ಪ್ರಸನ್ನಕುಮಾರ್ ಕೂಡ ಎಸಿಬಿ ಬಲೆಗೆ ಬಿದ್ದಿದ್ದಾರೆ. ಇನ್ನೂ ಕೇವಲ 20 ದಿನದಲ್ಲಿ ವಿಶೇಷ ತಹಶೀಲ್ದಾರ್ ಲಕ್ಷ್ಮೀ ನಿವೃತ್ತಿ ಹೊಂದಬೇಕಿತ್ತು. ಇವರು ಕೆ.ಜಿ ರಸ್ತೆಯಲ್ಲಿರುವ ಕಂದಾಯ ಭವನದಲ್ಲಿರುವ ವಿಶೇಷ ತಶೀಲ್ದಾರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

  • ಮಾಸ್ಕ್ ಹಾಕಿಲ್ಲ ಯಾಕೆ? ಯುವಕರಿಂದ ಲಂಚ ಪಡೆದ ಪೇದೆ

    ಮಾಸ್ಕ್ ಹಾಕಿಲ್ಲ ಯಾಕೆ? ಯುವಕರಿಂದ ಲಂಚ ಪಡೆದ ಪೇದೆ

    -ಕೈಯಲ್ಲಿ ಲಂಚದ ಹಣ ಮುಟ್ಟದ ಪೊಲೀಸಪ್ಪ
    -ಲಂಚ ಪಡೆಯಲು ಪೇದೆಯ ಸೂಪರ್ ಪ್ಲ್ಯಾನ್
    -ಪೊಲೀಸಪ್ಪನ ಕಳ್ಳಾಟ ಕ್ಯಾಮೆರಾದಲ್ಲಿ ಸೆರೆ

    ಲಕ್ನೋ: ಮಾಸ್ಕ್ ಹಾಕದ ಯುವಕರಿಂದ ಪೊಲೀಸ್ ಪೇದೆ ಲಂಚ ಪಡೆದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಹರ್ದೌಯಿ ಜಿಲ್ಲೆಯಲ್ಲಿ ಪೇದೆಯೋರ್ವ ಅತ್ಯಂತ ಚಾಣಕ್ಷತನದಿಂದ ಲಂಚ ಪಡೆದಿರುವ ವಿಡಿಯೋ ಸಾರ್ವಜನಿಕರ ಮೊಬೈಲಿನಲ್ಲಿ ಸೆರೆಯಾಗಿದೆ. ಪೇದೆಗೆ ಅಲ್ಲಿಯ ಟ್ರಾಫಿಕ್ ಪೊಲೀಸ್ ಸಹ ಸಾಥ್ ನೀಡಿದ್ದಾರೆ ಎನ್ನಲಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ಪೊಲೀಸರ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಸೋಮವಾರ ಘಟನೆ ನಡೆದಿದ್ದು, ಮಂಗಳವಾರ ಪೊಲೀಸಪ್ಪ ಲಂಚದ ಕಳ್ಳಾಟ ಬಯಲಾಗಿದೆ.

    ವಿಡಿಯೋದಲ್ಲಿ ಏನಿದೆ?: ಮಾಸ್ಕ್ ಧರಿಸದ ಇಬ್ಬರು ಯುವಕರನ್ನ ಪೇದೆ ತಡೆದಿದ್ದಾನೆ. ಕೊರೊನಾ ನಿಯಮ ಪಾಲಿಸದಕ್ಕೆ ದಂಡ ಹಾಕೋದಾಗಿ ಬೆದರಿಕೆ ಹಾಕಿದ್ದಾರೆ. ನಂತರ ನಿಧಾನವಾಗಿ ತನ್ನ ಕೈಯಲ್ಲಿ ಡೈರಿಯೊಂದನ್ನ ಬೈಕ್ ಮೇಲಿಟ್ಟು ಪೇದೆ ಸ್ವಲ್ಪ ಮುಂದೆ ಹೋಗುತ್ತಾನೆ. ಯುವಕರಿಬ್ಬರು ಹಣವನ್ನ ಪೇದೆಯ ಡೈರಿಯಲ್ಲಿಟ್ಟು ತೆರಳುತ್ತಾರೆ. ಯುವಕರು ಹೋದ ನಂತರ ಪೇದೆ ಡೈರಿಯನ್ನ ಎತ್ತಿಕೊಂಡು ಹೋಗಿದ್ದಾನೆ.

    ವಿಡಿಯೋ ವೈರಲ್ ಬಳಿಕ ಪ್ರತಿಕ್ರಿಯಿಸಿರುವ ಎಸ್‍ಎಸ್‍ಪಿ, ಪೊಲೀಸರು ಲಂಚ ಪಡೆಯುವ ಬಗ್ಗೆ ಸಾರ್ವಜನಿಕರಿಂದ ದೂರುಗಳ ಬಂದಿವೆ. ವೈರಲ್ ಆಗಿರುವ ವಿಡಿಯೋ ಸಹ ನಮ್ಮ ಗಮನಕ್ಕೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

    ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯ ಮಾಸ್ಕ್ ಧರಿಸಿವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಹೇಳುತ್ತಿದೆ. ಕೊರೊನಾ ನಿಯಮಗಳ ಪಾಲನೆ ಮಾಡದಿದ್ದಲ್ಲಿ ದಂಡ ವಿಧಿಸಲಾಗುವುದು ಎಂದು ಸಾರ್ವಜನಿಕರಿಗೆ ಎಚ್ಚರಿಕೆ ಸಹ ನೀಡಿದೆ. ಆದ್ರೆ ಇದೇ ಆದೇಶವನ್ನ ಕೆಲ ಪೊಲೀಸರು ಬಂಡವಾಳ ಮಾಡಿಕೊಂಡು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಅಂತಹವುದು ಒಂದು ಘಟನೆ ಉತ್ತರ ಪ್ರದೇಶದ ಹರ್ದೌಯಿ ಜಿಲ್ಲೆಯಲ್ಲಿ ನಡೆದಿದೆ.

  • ಜೋಯಿಡಾ ತಹಶೀಲ್ದಾರ್ ಕಚೇರಿಗೆ ಎಸಿಬಿ ದಾಳಿ – ಲಂಚ ಪಡೆಯುತ್ತಿದ್ದ ಅಧಿಕಾರಿ ಬಲೆಗೆ

    ಜೋಯಿಡಾ ತಹಶೀಲ್ದಾರ್ ಕಚೇರಿಗೆ ಎಸಿಬಿ ದಾಳಿ – ಲಂಚ ಪಡೆಯುತ್ತಿದ್ದ ಅಧಿಕಾರಿ ಬಲೆಗೆ

    ಕಾರವಾರ: ಲಂಚ ಸ್ವೀಕರಿಸುತಿದ್ದ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಮೇಲೆ ಎಸಿಬಿ ದಾಳಿ ನೆಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಹಶೀಲ್ದಾರ್ ಕಚೇರಿಯಲ್ಲಿ ನಡೆದಿದೆ.

    ಎಸಿಬಿ ಡಿವೈಎಸ್ಪಿ ಶ್ರೀಕಾಂತ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಜೋಯಿಡಾ ತಹಶೀಲ್ದಾರ್ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಮಂಜುನಾಥ್ ಹುಚ್ಚಣ್ಣನವರ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ಆತನ್ನು ವಶಕ್ಕೆ ಪಡೆದು ತನಿಖೆ ಮಾಡಲಾಗುತ್ತಿದೆ.

    ಗೋಪಿಕಾ ಶಾಂತ ಸಾವಂತ್ ಇವರ ಹೆಸರು ಬದಲಾವಣೆಗೆ ಇವರ ಸಂಬಂಧಿ ಮೋಹನ್ ದೇಸಾಯಿ ಬಳಿ 11 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ. ಮುಂಜುನಾಥ್ ಹುಚ್ಚಣ್ಣನವರ್ ಇಂದು ಮೋಹನ್ ದೇಸಾಯಿಯಿಂದ ಜೋಯಿಡಾ ತಹಶೀಲ್ದಾರ್ ಕಚೇರಿಯಲ್ಲಿ ಮುಂಗಡ ಹಣವಾಗಿ ಎರಡು ಸಾವಿರ ಲಂಚ ಸ್ವೀಕರಿಸುವಾಗ ಹಣದ ಸಮೇತ ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ದೂರು ನೀಡಿದ ದೂರುದಾರರ ಜೊತೆ ಮೋಹನ ದೇಸಾಯಿ, ಅಧ್ಯಕ್ಷರು ಕಾಳಿ ಬ್ರಿಗೇಡ್ ಅವುರ್ಲಿ ಫಟಕ. ರವಿ ರೇಡಕರ ಮುಖ್ಯ ಸಂಚಾಲಕರು ಕಾಳಿ ಬ್ರಿಗೇಡ್, ಸತೀಶ ನಾಯ್ಕ, ಪ್ರಭಾಕರ ನಾಯ್ಕ, ವಿಷ್ಣು ದೇಸಾಯಿ, ಕಿರಣ ನಾಯ್ಕ, ಅಜೀತ ಟೆಂಗ್ಸೆ, ರಾಜೇಶ ದೇಸಾಯಿ ಈ ಸಂದರ್ಭದಲ್ಲಿ ಇದ್ದರು.

  • ಲಂಚಕ್ಕೆ ಬೇಡಿಕೆ ಇಟ್ಟ ತಹಶೀಲ್ದಾರ್ ಅಮಾನತು

    ಲಂಚಕ್ಕೆ ಬೇಡಿಕೆ ಇಟ್ಟ ತಹಶೀಲ್ದಾರ್ ಅಮಾನತು

    ಬಳ್ಳಾರಿ: ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ತಹಶೀಲ್ದಾರ್ ಮೇಲೆ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ತಹಶೀಲ್ದಾರ್ ವಿಜಯಕುಮಾರನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಆದೇಶ ಹೊರಡಿಸಿದ್ದಾರೆ.

    ಮರಳು ಲಾರಿಗೆ ಅನುಮತಿ ನೀಡುವ ಸಲುವಾಗಿ ತಾಲೂಕು ತಹಶೀಲ್ದಾರ್ ವಿಜಯಕುಮಾರ್ ಲಂಚ ಕೇಳಿದ್ದರು. ತಹಶೀಲ್ದಾರ್ ಲಂಚ ಕೇಳಿದ ವಿಡಿಯೋ ಮೊಬೈಲ್‍ನಲ್ಲಿ ಸೆರೆಯಾಗಿದೆ. ಕಳೆದ 20 ದಿನಗಳ ಹಿಂದೆ ಹೂವಿನ ಹಡಗಲಿ ತಾಲೂಕಿನ ಉಮೇಶ್ ನಾಯಕ್ ಎಂಬವರ ಮರಳು ಲಾರಿಯನ್ನು ಸೀಜ್ ಮಾಡಲಾಗಿತ್ತು. ಮರಳು ಲಾರಿ ಬಿಡುವ ಸಲುವಾಗಿ ಉಮೇಶ್ ನಾಯಕ್ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿಜಯಕುಮಾರ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

    ನನ್ನದು ವಾರದ ಲೆಕ್ಕ ಇಲ್ಲ, ನನ್ನ ಜೊತೆಯಲ್ಲಿ ಮಾತನಾಡಬೇಡಿ. 50-50 ಆದರೂ ಕೊಡುತ್ತೀರಾ ಎಂದು ಬೇಡಿಕೆ ಇಟ್ಟಿದ್ದರು. ತಹಶೀಲ್ದಾರ್ ವಿಜಯಕುಮಾರ್ ಲಂಚಕ್ಕೆ ಬೇಡಿಕೆ ಇಟ್ಟಿರುವ ವಿಡಿಯೋ ವೈರಲ್ ಆಗಿತ್ತು. ಅಲ್ಲದೇ ಕರ್ಣಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾ ಅಧ್ಯಕ್ಷ ಚಂದ್ರಶೇಖರ ದೊಡ್ಡಮನಿ ಅವರು ಪತ್ರಿಕಾಗೋಷ್ಠಿ ನಡೆಸಿ ಕೂಡಲೇ ತಹಶೀಲ್ದಾರನ್ನು ಅಮಾನತು ಮಾಡುವಂತೆ ಒತ್ತಾಯ ಮಾಡಿ, ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಹೀಗಾಗಿ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಅವರು ವಿಜಯಕುಮಾರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

  • ಕಥೆ ಕಟ್ಟುವುದರಲ್ಲಿ ಕಾಂಗ್ರೆಸ್ ಎತ್ತಿದ ಕೈ – ಆರೋಪ ತಳ್ಳಿ ಹಾಕಿದ ಸಿಎಂ ಪುತ್ರ

    ಕಥೆ ಕಟ್ಟುವುದರಲ್ಲಿ ಕಾಂಗ್ರೆಸ್ ಎತ್ತಿದ ಕೈ – ಆರೋಪ ತಳ್ಳಿ ಹಾಕಿದ ಸಿಎಂ ಪುತ್ರ

    ಬೆಂಗಳೂರು: ಸಿಎಂ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ವಿರುದ್ಧ ಕಾಂಗ್ರೆಸ್ 5 ಸಾವಿರ ಕೋಟಿ ರೂ. ಸಂಗ್ರಹ ಮಾಡಿದ್ದಾರೆ ಎಂದು ಆರೋಪ ಮಾಡಿತ್ತು. ಈ ಆರೋಪವನ್ನು ಸಿಎಂ ಪುತ್ರ ತಳ್ಳಿ ಹಾಕಿದ್ದಾರೆ.

    ಇಂದು ಬೆಳಗ್ಗೆ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ 5 ಸಾವಿಕ ಕೋಟಿ ಸಂಗ್ರಹ ಮಾಡಿದ್ದಾರೆ ಎಂದು ಆರೋಪಿಸಿ ಪತ್ರವನ್ನು ಬಿಡುಗಡೆ ಮಾಡಿದ್ದರು. ಇದಕ್ಕೆ ಉತ್ತರಿಸಿರುವ ವಿಜಯೇಂದ್ರ, ಕಥೆ ಕಟ್ಟುವುದರಲ್ಲಿ ಕಾಂಗ್ರೆಸ್ ಎತ್ತಿದ ಕೈ ಎಂದಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ವಿಜಯೇಂದ್ರ, ಕಟ್ಟು ಕಥೆ ಕಟ್ಟುವುದರಲ್ಲಿ, ಹಸಿ ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್ಸಿಗರು ಎತ್ತಿದ ಕೈ, ನನ್ನನ್ನು ಗುರಿಯಾಗಿಸಿಕೊಂಡು ಮೈಸೂರಿನಲ್ಲಿಂದು ಇಂಥದ್ದೇ ಒಂದು ಹಾಸ್ಯಾಸ್ಪದವಾದ ಟೊಳ್ಳು ಆರೋಪವನ್ನು ಮಾಡಲಾಗಿದೆ. ದುರುದ್ದೇಶ ಪೂರಿತ, ರಾಜಕೀಯ ಪಿತೂರಿಯ ಆರೋಪಗಳಿಗೆ ನಾನೆಂದೂ ಬೆನ್ನು ತೋರುವುದಿಲ್ಲ. ಅಪಪ್ರಚಾರಗಳು ನನ್ನ ನೈತಿಕ ಸ್ಥೈರ್ಯ ಕುಂದಿಸದು ಎಂದು ಕಿಡಿಕಾರಿದ್ದಾರೆ.

    ಇಂದು ಬೆಳಗ್ಗೆ ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್, ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ಕಳೆದ ಒಂದು ವರ್ಷದಲ್ಲಿ 5 ಸಾವಿರ ಕೋಟಿ ಸಂಗ್ರಹ ಮಾಡಿದ್ದಾರೆ. ಈ ಕುರಿತು ಬಿಜೆಪಿ ಪಕ್ಷದ ಶಾಸಕರು ಹೈಕಮಾಂಡ್‍ಗೆ ಬರೆದಿದ್ದಾರೆ. ಪತ್ರದಲ್ಲಿ ಬಿಜೆಪಿ ಶಾಸಕರೇ ಆರೋಪ ಮಾಡಿದ್ದಾರೆ ಎಂದು ಲಕ್ಷ್ಮಣ್ ಹೇಳಿದ್ದರು.

    ವಿಜಯೇಂದ್ರ ಅವರ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟ ಆಡಿಯೋ ಮತ್ತು ವಿಡಿಯೋ ಕ್ಲೀಪಿಂಗ್‍ಗಳನ್ನು ನಾವು ಸಂಗ್ರಹಿಸಿದ್ದೇವೆ. ಆದರೆ ಬಿಜೆಪಿ ಶಾಸಕರು ಬರೆದಿದ್ದಾರೆ ಎನ್ನಲಾದ ಪತ್ರದ ಬಗ್ಗೆ ತನಿಖೆಯನ್ನು ಸಿಬಿಐ ಅಥವಾ ನ್ಯಾಯಾಂಗ ತನಿಖೆ ನಡೆಸಲು ರಾಜ್ಯ ಸರ್ಕಾರಕ್ಕೆ 20 ದಿನಗಳ ಸಮಯ ನೀಡುತ್ತಿದ್ದೇವೆ. ಯಾವುದೇ ಕ್ರಮಕೈಗೊಳ್ಳದಿದ್ದಾರೆ ಸೆಪ್ಟೆಂಬರ್ ತಿಂಗಳ ಎರಡು ಅಥವಾ ಮೂರನೇ ವಾರದಲ್ಲಿ ದೆಹಲಿಯಲ್ಲಿ ಆಡಿಯೋ, ವಿಡಿಯೋ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದು ಲಕ್ಷ್ಮಣ್ ಅವರು ಆರೋಪಿಸಿದ್ದರು.