Tag: breathing problem

  • ಉಸಿರಾಟದ ತೊಂದರೆಯಿಂದಾಗಿ ವಿಮಾನದಲ್ಲೇ ಮೃತಪಟ್ಟ ಹಸುಗೂಸು

    ಉಸಿರಾಟದ ತೊಂದರೆಯಿಂದಾಗಿ ವಿಮಾನದಲ್ಲೇ ಮೃತಪಟ್ಟ ಹಸುಗೂಸು

    ಹೈದರಾಬಾದ್: ಉಸಿರಾಟದ ಸಮಸ್ಯೆಯಿಂದಾಗಿ ನಾಲ್ಕು ತಿಂಗಳ ಹಸುಗೂಸೊಂದು ವಿಮಾನದಲ್ಲೇ ಮೃತಪಟ್ಟಿದೆ.

    ಬೆಂಗಳೂರಿನಿಂದ ಪಾಟ್ನಾಗೆ ತೆರಳುತ್ತಿದ್ದ ವಿಮಾನದಲ್ಲಿ 4 ತಿಂಗಳ ಮಗುವೊಂದು ಉಸಿರಾಟದ ತೊಂದರೆಯಿಂದ ಮೃತಪಟ್ಟಿದೆ. ಮಂಗಳವಾರ ಬೆಳಗ್ಗೆ 6.15 ಕ್ಕೆ 4 ತಿಂಗಳ ಮಗುವಿನೊಂದಿಗೆ ಪೋಷಕರು ಇಂಡಿಗೋದ 6E-897 ವಿಮಾನದಲ್ಲಿ ಬೆಂಗಳೂರಿನಿಂದ ಪಾಟ್ನಾಗೆ ತೆರಳುತ್ತಿದ್ದರು. ಸುಮಾರು 7.30ರ ಹೊತ್ತಿಗೆ ಮಗುವಿಗೆ ಏಕಾಏಕಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ.

    ಕೂಡಲೇ ಎಚ್ಚೆತ್ತ ವಿಮಾನ ಸಿಬ್ಬಂದಿ ಮಗುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ತುರ್ತು ಕಾರಣದಿಂದ ವಿಮಾನದ ಮಾರ್ಗವನ್ನು ಬದಲಾಯಿಸಿ, ಹೈದರಬಾದ್ ನಲ್ಲಿ ಲ್ಯಾಂಡ್ ಮಾಡಿದ್ದಾರೆ. ವಿಮಾನ ಲ್ಯಾಂಡ್ ಆಗುತ್ತಿದ್ದಂತೆಯೇ ಮಗುವನ್ನು ಅಂಬುಲೆನ್ಸ್ ಮೂಲಕ ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಆದರೆ ಮಗುವನ್ನು ಪರೀಕ್ಷಿಸಿದ ವೈದ್ಯರು, ಈಗಾಗಲೇ ಮಗು ಮೃತಪಟ್ಟಿದೆ ಎಂದು ತಿಳಿಸಿದ್ದಾರೆ.

    ಘಟನೆ ಕುರಿತು ಪ್ರತಿಕ್ರಿಯಿಸಿದ ಇಂಡಿಗೋ ವಿಮಾನಯಾನ ಅಧಿಕಾರಿಗಳು, ಮಂಗಳವಾರ ಬೆಂಗಳೂರಿನಿಂದ ಪಾಟ್ನಾಗೆ ತೆರಳುತಿದ್ದ ವಿಮಾನದಲ್ಲಿ 4 ತಿಂಗಳ ಮಗುವೊಂದು ತೀವ್ರ ಉಸಿರಾಟ ತೊಂದರೆಯಿಂದ ಬಳಲಿತ್ತು. ಹೀಗಾಗಿ ವಿಮಾನವನ್ನು ಕೂಡಲೇ ಹೈದರಾಬಾದ್‍ನಲ್ಲಿ ಲ್ಯಾಂಡ್ ಮಾಡಿ, ಆಸ್ಪತ್ರೆಗೆ ದಾಖಲಿಸಿದರೂ, ಮಗು ಮೃತಪಟ್ಟಿದೆ ಎಂದು ಸಂತಾಪ ಸೂಚಿಸಿದ್ದಾರೆ.

    ಘಟನೆ ಸಂಬಂಧ ಪೊಲೀಸರು ಸಿಆರ್ ಪಿಸಿ ಸೆಕ್ಷನ್ 174ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.