Tag: breakfast

  • ಏರ್ ಪೋರ್ಟ್ ನಲ್ಲಿ ತಿಂಡಿ ಮಾಡೋ ಮುನ್ನ ಈ ಸುದ್ದಿ ನೋಡಿ

    ಏರ್ ಪೋರ್ಟ್ ನಲ್ಲಿ ತಿಂಡಿ ಮಾಡೋ ಮುನ್ನ ಈ ಸುದ್ದಿ ನೋಡಿ

    ಚಿಕ್ಕಬಳ್ಳಾಪುರ: ಕ್ಯಾಬ್ ಚಾಲಕನೋರ್ವ ತಿನ್ನುತ್ತಿದ್ದ ಪೊಂಗಲ್ ನಲ್ಲಿ ಹುಳ ಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದಲ್ಲಿ ನಡೆದಿದೆ.

    ಕೆಐಎಎಲ್ ನ ಕಾರ್ ಪಾರ್ಕಿಂಗ್ ಬಳಿ ಇರುವ ಸತೀಶ್ ಡೈನಿಂಗ್ ಕ್ಯಾಂಟೀನ್ ನಲ್ಲಿ ಕ್ಯಾಬ್ ಚಾಲಕ ಗಣೇಶ್ 50 ರೂ. ಕೊಟ್ಟು ಒಂದು ಪ್ಲೇಟ್ ಪೊಂಗಲ್ ಖರೀದಿಸಿದ್ದಾರೆ. ಪೊಂಗಲ್ ತಿನ್ನುತ್ತಿದ್ದ ವೇಳೆ ಪೊಂಗಲ್ ಜೊತೆಗೆ ತಟ್ಟೆಯಲ್ಲಿ ಹುಳ ಪತ್ತೆಯಾಗಿದೆ. ಇದರಿಂದ ಬೆಚ್ಚಿಬಿದ್ದ ಕ್ಯಾಬ್ ಚಾಲಕ ಗಣೇಶ್, ಕ್ಯಾಂಟೀನ್ ಸಿಬ್ಬಂದಿ ವಿರುದ್ಧ ತಿರುಗಿಬಿದ್ದಿದ್ದಾರೆ.

    ವಿಷಯ ತಿಳಿದು ಗುಂಪುಗೂಡಿದ ಕ್ಯಾಬ್ ಚಾಲಕರು ಕ್ಯಾಂಟೀನ್ ಮಾಲೀಕ ಹಾಗೂ ಸಿಬ್ಬಂದಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಕಳಪೆ ಗುಣಮಟ್ಟದ ಆಹಾರ ಕೊಡ್ತಿರೋದಲ್ಲದೇ ಒಂದು ಪ್ಲೇಟ್ ಪೊಂಗಲ್ ಗೆ 50 ರೂ. ವಸೂಲಿ ಮಾಡಿ ಹಣ ದೋಚುತ್ತಿದ್ದಾರೆ ಅಂತ ಕ್ಯಾಬ್ ಚಾಲಕರು ಆಕ್ರೋಶ ಹೊರಹಾಕಿದ್ದಾರೆ.

    ಇದೇ ವೇಳೆ ಅಡುಗೆ ಕೊಠಡಿಗೆ ತೆರಳಿ ಕ್ಯಾಬ್ ಚಾಲಕರು ಪರಿಶೀಲನೆ ನಡೆಸಿದ್ದು, ಕೊಳೆತ ಟೊಮೆಟೋ, ತರಕಾರಿಗಳು ಸಹ ಪತ್ತೆಯಾಗಿವೆ. ಇದರಿಂದ ಮತ್ತಷ್ಟು ಕೆಂಡಾಮಂಡಲರಾಗಿರೋ ಕ್ಯಾಬ್ ಚಾಲಕರು ಕ್ಯಾಂಟೀನ್ ಮುಚ್ಚಬೇಕು ಹಾಗೂ ಬೇರೆಯವರಿಗೆ ಕ್ಯಾಂಟೀನ್ ನಡೆಸಲು ಅವಕಾಶ ಮಾಡಿಕೊಡಬೇಕು ಅಂತ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಂತ್ರಿಗಳೊಂದಿಗೆ ಇಂದು ಡಿಸಿಎಂ ಉಪಹಾರ ಸಭೆ – ಸಿದ್ದು ಅನುಪಸ್ಥಿತಿಯಲ್ಲಿ ನಡೀತಿದ್ಯಾ ಶಕ್ತಿಪ್ರದರ್ಶನ?

    ಮಂತ್ರಿಗಳೊಂದಿಗೆ ಇಂದು ಡಿಸಿಎಂ ಉಪಹಾರ ಸಭೆ – ಸಿದ್ದು ಅನುಪಸ್ಥಿತಿಯಲ್ಲಿ ನಡೀತಿದ್ಯಾ ಶಕ್ತಿಪ್ರದರ್ಶನ?

    ಬೆಂಗಳೂರು: ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಇಂದು ಕಾಂಗ್ರೆಸ್ ಸಚಿವರುಗಳಿಗೆ ಬೆಳಗ್ಗಿನ ಉಪಹಾರ ಕೂಟ ಏರ್ಪಡಿಸಿದ್ದಾರೆ.

    ಬೆಂಗಳೂರಿನ ಸದಾಶಿವ ನಗರದ ಪರಮೇಶ್ವರ್ ಸರ್ಕಾರಿ ಬಂಗಲೆಯಲ್ಲಿ ಕಾಂಗ್ರೆಸ್‍ನ ಎಲ್ಲಾ 16 ಸಚಿವರಿಗೆ ಉಪಹಾರ ಕೂಟ ನಡೆಯಲಿದೆ. ಬೆಳಗ್ಗೆ 08-30ಕ್ಕೆ ಆಯೋಜಿಸಿರುವ ಉಪಹಾರ ಕೂಟದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ಭಾಗವಹಿಸಲಿದ್ದಾರೆ.

    ಸರ್ಕಾರದಲ್ಲಿನ ಇತ್ತೀಚಿನ ಬೆಳವಣಿಗೆ, ಕಾಂಗ್ರೆಸ್ ಸಚಿವರುಗಳಿಗೆ ಸಿಎಂ ಕುಮಾರಸ್ವಾಮಿ ಹೇಗೆ ಸ್ಪಂದಿಸುತ್ತಿದ್ದಾರೆ. ಇದೆಲ್ಲದರ ಬಗ್ಗೆ ಇಂದಿನ ಉಪಹಾರ ಕೂಟದಲ್ಲಿ ಚರ್ಚೆ ನಡೆಯಲಿದೆ. ಇನ್ನೊಂದೆಡೆ ಸಿಎಲ್‍ಪಿ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ವಿದೇಶ ಪ್ರವಾಸದ ಸಂದರ್ಭದಲ್ಲೇ ಈ ಉಪಹಾರ ಕೂಟ ಏರ್ಪಡಿಸಿರುವುದು ಪರಮೇಶ್ವರ್ ಶಕ್ತಿ ಪ್ರದರ್ಶನದ ಯತ್ನ ಎನ್ನಲಾಗುತ್ತಿದೆ. ಇದನ್ನೂ ಓದಿ: 10 ದಿನದ ಯುರೋಪ್ ಪ್ರವಾಸ ಹೊರಟ ಸಿದ್ದರಾಮಯ್ಯ- ಕಾಂಗ್ರೆಸ್ ಮುಖಂಡರು ಏನ್ ಹೇಳಿದ್ರು?

    ಆದರೆ ಪರಮೇಶ್ವರ್ ಆಪ್ತ ವಲಯ ಮಾತ್ರ ಸರ್ಕಾರ 100 ದಿನ ಪೂರೈಸಿದ ಹಿನ್ನೆಲೆಯಲ್ಲಿ ಈ ಉಪಹಾರ ಕೂಟ ಏರ್ಪಡಿಸಲಾಗಿದೆ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇಂದಿನ ಈ ಉಪಹಾರ ಕೂಟದಲ್ಲಿ ಎಲ್ಲಾ 16 ಕಾಂಗ್ರೆಸ್ ಸಚಿವರು ಭಾಗವಹಿಸ್ತಾರಾ..? ಇಲ್ಲಾ ಯಾರಾದರು ಅಂತರ ಕಾಯ್ದುಕೊಳ್ತಾರಾ ಅನ್ನೋದೆ ಸದ್ಯದ ಕುತೂಹಲವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸ್ವಂತ ಖರ್ಚಿನಲ್ಲಿ 120 ವಿದ್ಯಾರ್ಥಿಗಳಿಗೆ ಶಿಕ್ಷಕನಿಂದ ಪ್ರತಿದಿನ ಉಪಹಾರ!

    ಸ್ವಂತ ಖರ್ಚಿನಲ್ಲಿ 120 ವಿದ್ಯಾರ್ಥಿಗಳಿಗೆ ಶಿಕ್ಷಕನಿಂದ ಪ್ರತಿದಿನ ಉಪಹಾರ!

    ಚೆನ್ನೈ: ಗುರುಗಳು ತಮ್ಮ ವಿದ್ಯಾರ್ಥಿಗಳು ಕಲಿತು ದೇಶದಲ್ಲಿ ಉತ್ತಮ ಪ್ರಜೆಯಾಗಬೇಕೆಂದು ಅವರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಾರೆ. ಆದರೆ ತಮಿಳುನಾಡಿನಲ್ಲಿ ಶಿಕ್ಷಕರೊಬ್ಬರು ಪ್ರತಿದಿನ ತಮ್ಮ ಸ್ವಂತ ಹಣದಲ್ಲಿ 120 ವಿದ್ಯಾರ್ಥಿಗಳಿಗೆ ಬೆಳಗಿನ ಉಪಹಾರವನ್ನು ಒದಗಿಸುತ್ತಿದ್ದಾರೆ.

    ಕೊಡುಂಗಾಯೂರಿನಲ್ಲಿರುವ ಚೆನ್ನೈ ಹೈಸ್ಕೂಲಿನ ಶಿಕ್ಷಕ ಪಿ.ಕೆ. ಇಲಾಮಾರನ್ ಅವರು ಪ್ರತಿದಿನ 120 ಮಕ್ಕಳಿಗೆ ಬೆಳಗ್ಗಿನ ಉಪಹಾರವನ್ನು ನೀಡುತ್ತಿದ್ದಾರೆ. ಮುಂಜಾನೆ ಶಾಲೆಗೆ ಬರುವ ಆತುರದಲ್ಲಿ ವಿದ್ಯಾರ್ಥಿಗಳು ತಿಂಡಿ ತಿನ್ನದೇ ಬರುವುದು ಅಥವಾ ಮನೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದೇ ಬೆಳಗ್ಗೆ ಖಾಲಿ ಹೊಟ್ಟೆಯಿಂದ ಬರೋದನ್ನು ಕಂಡು ಇಲಾಮಾರನ್ ಈ ಕೆಲಸಕ್ಕೆ ಮುಂದಾಗಿದ್ದಾರೆ. ಇಲಾಮಾರನ್ ಅವರು ಸುಮಾರು 2 ವರ್ಷದಿಂದ ವಿದ್ಯಾರ್ಥಿಗಳಿಗೆ ಉಪಹಾರ ನೀಡುತ್ತಿದ್ದಾರೆ.

    ಮುಂಜಾನೆ ವಿದ್ಯಾರ್ಥಿಗಳಿಗೆ ತಿಂಡಿ ಬಡಿಸುವಾಗ ಅವರ ಜೊತೆ ಇದ್ದು ಸ್ವಲ್ಪ ಸಮಯ ಕಳೆಯುತ್ತೇನೆ. ಇದು ನನಗೆ ತುಂಬಾ ಖುಷಿ ತಂದಿದೆ. ಶಾಲೆಯ ಸಮೀಪದ ಅಂಗಡಿಯಿಂದ ಪ್ರತಿದಿನ ಇಡ್ಲಿ ಮತ್ತು ಪೊಂಗಲ್ ತಿಂಡಿಯನ್ನು ತಂದು ಬಡಿಸುತ್ತೇವೆ ಎಂದು ಇಲಾಮಾರನ್ ಹೇಳಿದ್ದಾರೆ.

    ಶಿಕ್ಷಕ ಇಲಾಮಾರನ್ 7 ಮತ್ತು 9ನೇ ತರಗತಿಗೆ ಪಾಠ ಮಾಡುತ್ತಿದ್ದು, ಇವರು ಶಿಕ್ಷಕರ ಸಂಘದ ಅಧ್ಯಕ್ಷರು ಆಗಿದ್ದಾರೆ. ಆದರೆ ಒಂದನೇ ತರಗತಿಯಿಂದ ಹತ್ತನೇ ತರಗತಿಯ ಮಕ್ಕಳಿಗೆ ಉಚಿತ ಉಪಹಾರ ನೀಡುತ್ತಾರೆ. ಬೆಳಗ್ಗೆ 7.30 ರಿಂದ 8 ಗಂಟೆಯವರೆಗೆ 10 ನೇ ಕ್ಲಾಸ್ ವಿದ್ಯಾರ್ಥಿಗಳಿಗೆ ಉಪಹಾರ ನೀಡಿದರೆ, ಉಳಿದ ವಿದ್ಯಾರ್ಥಿಗಳಿಗೆ 8.20 ರಿಂದ 8.50 ರ ವರೆಗೂ ನೀಡುತ್ತಾರೆ. ಇದು ಶಾಲೆ ಮತ್ತು ಅಲ್ಲಿನ ಶಿಕ್ಷಕರು ಅನುಸರಿಸುವ ಅನೇಕ ಉಪಕ್ರಮಗಳಲ್ಲಿ ಒಂದಾಗಿದೆ.

    ನಾನು ಈ ಶಾಲೆಗೆ ಸೇರಿಕೊಂಡಾಗ ಕೇವಲ 370 ವಿದ್ಯಾರ್ಥಿಗಳು ಮಾತ್ರ ಇದ್ದರು. ಆದರೆ ನಾಲ್ಕು ವರ್ಷದಲ್ಲಿ ಈ ಸಂಖ್ಯೆ 270 ರಿಂದ 980ಕ್ಕೆ ಹೆಚ್ಚಾಗಿದೆ. ವಿದ್ಯಾರ್ಥಿಗಳು ಮಾತ್ರವಲ್ಲದೇ ಶಿಕ್ಷಕರ ಸಂಖ್ಯೆಯೂ ಅಧಿಕವಾಗಿದ್ದು, 11 ರಿಂದ 35ಕ್ಕೆ ಏರಿದೆ ಎಂದು ಶಾಲೆಯ ಪ್ರಿನ್ಸಿಪಾಲ್ ಮುನಿರಾಮಯ್ಯ ಹೇಳಿದ್ದಾರೆ.

    ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸಲು ಪ್ಲಾನ್ ಹಾಕಿಕೊಂಡಿರುವ ಇವರು ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಟ್ಯೂಶನ್ ನೀಡಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೇ ಶಾಲೆಯ ಆಡಳಿತ ಮಂಡಳಿ ಸಹಾಯದಿಂದ ಶಾಲೆಯ ಎಂಟು ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಶಿಕ್ಷಕ ಮತ್ತು ವಿದ್ಯಾರ್ಥಿ ಹಾಜರಾತಿಗಳನ್ನು ಮೇಲ್ವಿಚಾರಣೆ ಮಾಡಲು ಬಯೋಮೆಟ್ರಿಕ್ ವ್ಯವಸ್ಥೆಯನ್ನು ಬಳಸುವ ಏಕೈಕ ಸರ್ಕಾರಿ ಶಾಲೆ ನಮ್ಮದಾಗಿದೆ ಎಂದ ಮುನಿರಾಮಯ್ಯ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೇಳಿದಾಗ ಉಪಹಾರ ಕೊಟ್ಟಿಲ್ಲವೆಂದು ಮಕ್ಕಳ ಮುಂದೆಯೇ ಪತ್ನಿಯನ್ನ ಬರ್ಬರವಾಗಿ ಕೊಲೆಗೈದ!

    ಕೇಳಿದಾಗ ಉಪಹಾರ ಕೊಟ್ಟಿಲ್ಲವೆಂದು ಮಕ್ಕಳ ಮುಂದೆಯೇ ಪತ್ನಿಯನ್ನ ಬರ್ಬರವಾಗಿ ಕೊಲೆಗೈದ!

    ಲಕ್ನೋ: ಸಮಯಕ್ಕೆ ಸರಿಯಾಗಿ ಬೆಳಗಿನ ತಿಂಡಿ ಮಾಡಿಕೊಟ್ಟಿಲ್ಲವೆಂದು ಸಿಟ್ಟಿಗೆದ್ದ ಪತಿಮಹಾಶಯನೊಬ್ಬ ಪತ್ನಿ ಧರಿಸಿದ್ದ ಸ್ಕಾರ್ಫ್ ನಿಂದಲೇ ಆಕೆಯ ಕುತ್ತಿಗೆ ಬಿಗಿದು ಕೊಲೆಗೈದ ಘಟನೆ ಗ್ರೇಟರ್ ನೊಯ್ಡಾದಲ್ಲಿ ನಡೆದಿದೆ.

    ಪತಿ 32 ವರ್ಷದ ಮುಕೇಶ್ ಕುಮಾರ್, ತನ್ನ ಪತ್ನಿ 28 ವರ್ಷದ ರೇಖಾರನ್ನು ಕೊಲೆಗೈದಿದ್ದಾನೆ. ಈ ದಂಪತಿ 7 ವರ್ಷದ ಮಗ ಹಾಗೂ 5 ವರ್ಷದ ಮಗಳೊಂದಿಗೆ ಕುಲೇಸ್ರಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಘಟನೆ ನಡೆದ ಕೂಡಲೇ ನೆರೆಮನೆಯವರು ಮಹಿಳೆಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆದ್ರೆ ಆಕೆ ಅದಾಗಲೇ ಮೃತಪಟ್ಟಿದ್ದಾರೆ ಅಂತ ವೈದ್ಯರು ತಿಳಿಸಿದ್ದಾರೆ.

    ಘಟನೆ ವಿವರ:
    ಮುಕೇಶ್ ಕುಮಾರ್ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಈತನ ಪತ್ನಿ ಮನೆಯಲ್ಲೇ ಇದ್ದು, ಮುಕೇಶ್ ಪ್ರತೀ ದಿನ ಆಕೆಯೊಂದಿಗೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಮಾಡುತ್ತಿದ್ದನು. ಆದ್ರೆ ಶನಿವಾರ ಇವರಿಬ್ಬರ ಮಧ್ಯೆ ಉಪಹಾರದ ವಿಚಾರವಾಗಿ ಗಲಾಟೆ ನಡೆದಿದೆ. ಸಮಯಕ್ಕೆ ಸರಿಯಾಗಿ ಬೆಳಗ್ಗಿನ ತಿಂಡಿ ಮಾಡಿಕೊಟ್ಟಿಲ್ಲವೆಂದು ಪತಿ ತಗಾದೆ ತೆಗೆದಿದ್ದಾನೆ. ಈ ವಿಚಾರವಾಗಿ ಇವರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದೆ.

    ಪರಿಣಾಮ ಗಂಡನ ಮನೆ ಬಿಟ್ಟು ತವರು ಮನೆಗೆ ತೆರಳಲು ಪತ್ನಿ ನಿರ್ಧರಿಸಿದ್ದರು. ಅಲ್ಲದೇ ತವರು ಮನೆಗೆ ಹೋಗಲೆಂದು ಬ್ಯಾಗ್ ಪ್ಯಾಕ್ ಮಾಡಿ ಹೊರಡಲು ಸಿದ್ಧರಾದ್ರು. ಈ ವೇಳೆ ಆಕೆಯನ್ನು ಮಕ್ಕಳು ಹಾಗೂ ಪತಿ ತಡೆದಿದ್ದಾರೆ. ಪತ್ನಿಯ ವರ್ತನೆಯಿಂದ ಸಿಟ್ಟುಗೊಂಡ ಪತಿ ಮುಕೇಶ್ ಆಕೆ ಧರಿಸಿದ್ದ ಸ್ಕಾರ್ಫ್ ಅನ್ನು ಕುತ್ತಿಗೆಗೆ ಬಿಗಿಯಾಗಿ ಸುತ್ತಿದ್ದಾನೆ. ಪರಿಣಾಮ ರೇಖಾ ಕುಸಿದುಬಿದ್ದಿದ್ದಾರೆ. ಇಬ್ಬರು ಪುಟ್ಟ ಮಕ್ಕಳ ಎದುರೇ ಪತ್ನಿಯನ್ನು ಪತಿ ಕೊಲೆಗೈದಿದ್ದಾನೆ. ಬಳಿಕ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಘಟನೆಯಿಂದ ಭಯಭೀತರಾದ ಮಕ್ಕಳು ಜೋರಾಗಿ ಕಿರುಚಿಕೊಂಡಿದ್ದಾರೆ. ಹೀಗಾಗಿ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ನೆರೆಮನೆಯವರು ಮಹಿಳೆಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ ಅದಾಗಲೇ ರೇಖಾ ಮೃತಪಟ್ಟಿದ್ದರು ಅಂತ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ

    ಪ್ರಕರಣದ ಬಳಿಕ ತನಿಖೆಗೆ ಪೊಲೀಸರ ತಂಡವೊಂದು ಕುಲೆಸ್ರಾ ಗ್ರಾಮಕ್ಕೆ ತೆರಳಿ, ಮನೆಯಲ್ಲಿ ಆರೋಪಿಯನ್ನು ಹುಡುಕಾಡಿದ್ದಾರೆ. ಆದ್ರೆ ಮುಕೇಶ್ ತಲೆಮರೆಸಿಕೊಂಡಿದ್ದಾನೆ. ತನಿಖೆ ಮುಂದುವರಿಸಿದ ಪೊಲೀಸರು ಭಾನುವಾರ ಬೆಳಗ್ಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಸದ್ಯ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ ಯತ್ನ) ಪ್ರಕರಣ ದಾಖಲಿಸಲಾಗಿದೆ ಅಂತ ಪೊಲೀಸ್ ಅಧಿಕಾರಿ ತೋಮಸ್ ಹೇಳಿದ್ದಾರೆ.

  • ರಸ್ತೆ ಬದಿ ತಿಂಡಿ ತಿಂದು ಮಾಲಕಿಗೆ 10 ಸಾವಿರ ರೂ. ಕೊಟ್ಟ ಸುದೀಪ್!

    ರಸ್ತೆ ಬದಿ ತಿಂಡಿ ತಿಂದು ಮಾಲಕಿಗೆ 10 ಸಾವಿರ ರೂ. ಕೊಟ್ಟ ಸುದೀಪ್!

    ಚಿತ್ರದುರ್ಗ: ಹೆಬ್ಬುಲಿ ಕಿಚ್ಚ ಸುದೀಪ್ ಗೆ ಸಾವಿರಾರು ಅಭಿಮಾನಿಗಳಿದ್ದಾರೆ, ಆದರೆ ಸುದೀಪ್ ಮಾತ್ರ ಅತ್ಯಂತ ಸರಳ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ರೋಡ್ ಬದಿಯಲ್ಲಿರುವ ಹೋಟೆಲ್ ನಲ್ಲಿ ತಿಂಡಿ ಸವಿದು, ಟೀ ಕುಡಿದು ಸುದೀಪ್ ಸರಳತೆ ಮೆರೆದಿದ್ದಾರೆ.

    ಬಳ್ಳಾರಿಯಲ್ಲಿಂದು ಶ್ರೀರಾಮುಲು ಹಾಗೂ ಸೋಮಶೇಖರ್ ರೆಡ್ಡಿ ಪರ ಪ್ರಚಾರಕ್ಕೆ ಬಂದ ವೇಳೆ ಸುದೀಪ್ ಮೊಳಕಾಲ್ಮೂರು ಗೆ ತೆರಳುವ ಮುನ್ಮ ಆಂಧ್ರ ಗಡಿಭಾಗದ ಒಬಳಾಪುರಂ ಬಳಿಯ ರೋಡ್ ಬದಿಯಲ್ಲಿರುವ ಹೊಟೇಲ್‍ನಲ್ಲಿ ತಿಂಡಿ ತಿಂದು ಟೀ ಕುಡಿದರು.

    ರಾಧಾ ಎನ್ನುವ ಬಡ ಮಹಿಳೆಯ ಚಪ್ಪರದ ಹೊಟೇಲಿನಲ್ಲಿ ಸುದೀಪ್ ಚಿತ್ರಾನ್ನ, ಟೀ ಕುಡಿದರು. ಬಳಿಕ 10 ಸಾವಿರ ರೂಪಾಯಿ ಹಣ ನೀಡಿದ್ದಾರೆ. ಈ ವೇಳೆ ಮಹಿಳೆ ಹಣ ಪಡೆಯಲು ನಿರಾಕರಿಸಿದಾಗ ಒತ್ತಾಯಪೂರ್ವಕವಾಗಿ ಸುದೀಪ್, ಈ ಹಣದಲ್ಲಿ ಮಕ್ಕಳಿಗೆ ಎನಾದರೂ ಗಿಫ್ಟ್ ತಗೆದುಕೊಳ್ಳಿ ಎಂದು ಹೇಳಿದರು.

    ಹೋಟೆಲ್ ಮಾಲಕಿ ರಾಧಾ ಅವರು 2 ಸಾವಿರ ರೂ. ಸಾಕು ಎಂದರೂ ಸುದೀಪ್ 10 ಸಾವಿರ ರೂ. ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸುದೀಪ್, ಚುನಾವಣಾ ಪ್ರಚಾರದ ದೃಷ್ಟಿಯಿಂದ ನಾನು ಕೊಟ್ಟಿಲ್ಲ. ಪ್ರೀತಿಯಿಂದ ನಾನು ಕೊಟ್ಟದ್ದೇನೆ ಅಷ್ಟೇ ಎಂದರು.

    ಈ ವೇಳೆ ಮ್ಯಾನೇಜರ್ ಕಾಸ್ಟ್ಲಿ ಕಪ್ ನಲ್ಲಿ ಟೀ ಕೊಡಲು ಮುಂದಾದ ವೇಳೆ ಸುದೀಪ್ ಪೇಪರ್ ಕಪ್‍ನಲೇ ಟೀ ಕುಡಿದು ಸರಳತೆ ಮೆರೆದರು. ಈ ವೇಳೆ ಸುದೀಪ್ ಗುರುತಿಸಿ ಅಭಿಮಾನಿಗಳು ಅವರ ಜೊತೆ ಸೆಲ್ಫಿ ಕೂಡ ತಗೆಸಿಕೊಂಡು ಹರ್ಷ ವ್ಯಕ್ತಪಡಿಸಿದರು.

  • ತಿಂಡಿ ತಡವಾಗಿ ಕೊಟ್ಟಿದ್ದಕ್ಕೆ ತಾಯಿಯನ್ನೇ ಕೊಂದ ಮಗ!

    ತಿಂಡಿ ತಡವಾಗಿ ಕೊಟ್ಟಿದ್ದಕ್ಕೆ ತಾಯಿಯನ್ನೇ ಕೊಂದ ಮಗ!

    ಜಾರ್ಖಂಡ್‍: ಮಾನಸಿಕ ಅಸ್ವಸ್ಥನೊಬ್ಬ ತನ್ನ ತಾಯಿ ತಿಂಡಿ ಕೊಡಲು ತಡ ಮಾಡಿದ್ದಕ್ಕೆ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕೊಂದ ಘಟನೆ ಜಾರ್ಖಂಡ್‍ನ ದನ್ಬಾದ್‍ನಲ್ಲಿ ನಡೆದಿದೆ.

    21 ವರ್ಷದ ಯುವಕ ಬೆಳಗ್ಗೆ 10 ಗಂಟೆಗೆ ತನ್ನ ತಾಯಿಯ ಹತ್ತಿರ ತಿಂಡಿ ಕೇಳಿದ್ದಾನೆ. ಆದರೆ ತಿಂಡಿ ಕೊಡಲು ತಡವಾದಾಗ ಆತ ತನ್ನ ತಾಯಿ ಸಾಯುವರೆಗೂ ಬಿದಿರಿನ ಕೋಲಿನಿಂದ ಹೊಡೆದಿದ್ದಾನೆ ಎಂದು ವರದಿಯಾಗಿದೆ.

    ತನ್ನ ತಾಯಿಯನ್ನು ಕೊಲೆ ಮಾಡಿದ ನಂತರ ಯುವಕ ತನ್ನ ಸಹೋದರಿ ಹಾಗೂ ಅತ್ತಿಗೆ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಆದರೆ ಅವರು ಆತನಿಂದ ತಪ್ಪಿಸಿಕೊಂಡಿದ್ದಾರೆ. ಆಗ ಅಕ್ಕಪಕ್ಕದ ಮನೆಯವರು ಆತನನ್ನು ಹಿಡಿದು, ರೂಮಿನಲ್ಲಿ ಕೂಡಿ ಹಾಕಿ, ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

    ಗೋವಿಂದ್‍ಪುರ ಪೊಲೀಸ್ ಠಾಣೆಯ ಅಧಿಕಾರಿ ಮನೋಜ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಆರೋಪಿ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದಾನೆಂದು ಆತನ ಕುಟುಂಬದವರು ತಿಳಿಸಿದ್ದಾರೆ.

  • ಪವರ್ ಸ್ಟಾರ್ ಫುಟ್‍ಪಾತ್‍ ನಲ್ಲಿ ನಿಂತು ತಿಂಡಿ ತಿಂದಿದ್ದರ ಹಿಂದಿನ ಸ್ಟೋರಿ ಓದಿ

    ಪವರ್ ಸ್ಟಾರ್ ಫುಟ್‍ಪಾತ್‍ ನಲ್ಲಿ ನಿಂತು ತಿಂಡಿ ತಿಂದಿದ್ದರ ಹಿಂದಿನ ಸ್ಟೋರಿ ಓದಿ

    ಬೆಂಗಳೂರು: ದೊಡ್ಮನೆ ಮಕ್ಕಳಿಗೆ ಯಾವತ್ತೂ ದೊಡ್ಡ ಮನಸೇ ಇರುತ್ತದೆ. ಅಣ್ಣಾವ್ರ ಕುಡಿಗಳಾದರೂ ಅದನ್ನು ತೋರಿಸಿದವರಲ್ಲ. ಆ ಹೆಸರನ್ನು ಇಟ್ಟುಕೊಂಡು ಮೆರೆದವರಲ್ಲ. ಅದಕ್ಕೆ ಇಂದಿಗೂ ಕನ್ನಡಿಗರು ದೊಡ್ಮನೆಗೆ ಅದೇ ಪ್ರೀತಿ, ಗೌರವ ತೋರಿಸುತ್ತಾರೆ. ಅದಕ್ಕೆ ಈಗ ಮತ್ತೊಂದು ಸಾಕ್ಷಿ ಸಿಕ್ಕಿದೆ. ಪುನೀತ್ ರಾಜ್‍ಕುಮಾರ್ ಅಂಥದ್ದೊಂದು ಘಟನೆಗೆ ಕಾರಣರಾಗಿ ಅಚ್ಚರಿ ಮೂಡಿಸಿದ್ದಾರೆ.

    ಇದು ರಾಜಕುಮಾರನ ಇನ್ನೊಂದು ಮುಖ. ಇದು ನಡೆದಿದ್ದು ಹೊಸಪೇಟೆಯ ಹೈವೇ ರೋಡಿನಲ್ಲಿ. ಟಗರು ಸಿನಿಮಾ ಆಡಿಯೋ ರಿಲೀಸ್ ಸಮಾರಂಭಕ್ಕಾಗಿ ಪುನೀತ್ ಹೊಸಪೇಟೆಗೆ ಹೋಗಿದ್ದರು. ಆದರೆ ಅದೇ ದಿನ ರಾತ್ರಿ ಲೇಟಾಗಿದ್ದರಿಂದ ಅಲ್ಲಿಂದ ಬೆಂಗಳೂರಿಗೆ ಮರಳಲು ಆಗಲಿಲ್ಲ. ಬೆಳಗ್ಗೆ ಬೇಗ ಎದ್ದು ಅಲ್ಲಿಂದ ಹೊರಟಿದ್ದಾರೆ. ಜೊತೆಗೆ ನಿರ್ಮಾಪಕ ರಾಜಕುಮಾರ್ ಮತ್ತು ಸ್ಥಿರ ಚಿತ್ರ ಛಾಯಾಗ್ರಾಹಕ ಚಂದನ್ ಕೂಡ ಇದ್ದರು.

    ಹೋಟೆಲ್‍ ನಲ್ಲಿ ತಿಂಡಿ ತಿನ್ನುತ್ತಾ ಕುಳಿತರೆ ತಡವಾಗುತ್ತದೆಂದು ದಾರಿಯಲ್ಲಿ ಎಲ್ಲಾದರೂ ತಿಂಡಿ ಮುಗಿಸಿದರಾಯಿತೆಂದು ಕಾರು ಏರಿದ್ದಾರೆ. ಹೊಸಪೇಟೆ ದಾಟಿ ಹೈವೇಗೆ ಬರುತ್ತಿದ್ದಂತೆಯೇ ಕಣ್ಣಿಗೆ ಬಿದ್ದಿದೆ ಆ ಮೊಬೈಲ್ ಕ್ಯಾಂಟೀನ್. ಹೋಟೆಲ್ ನಲ್ಲಿ ತಿಂದರೂ, ರೋಡಿನ ಪಕ್ಕ ನಿಂತು ತಿಂದರೂ ಅದು ಅನ್ನವೇ ಎನ್ನುವುದು ಅಣ್ಣಾವ್ರು ಹೇಳುತ್ತಿದ್ದ ತೂಕದ ಮಾತು. ಅದಕ್ಕೆ ಸಾಕ್ಷಿ ಎನ್ನುವಂತೆ ಪುನೀತ್ ಕೂಡ ಮೊಬೈಲ್ ಕ್ಯಾಂಟೀನ್ ಮುಂದೆ ಗಾಡಿ ನಿಲ್ಲಿಸಿ ಇಡ್ಲಿ, ವಡೆ ಇತ್ಯಾದಿ ತಿಂಡಿಗಳನ್ನು ತಿಂದರು.

    ಖುದ್ದು ಅಪ್ಪು ಅಂಥದ್ದೊಂದು ಜಾಗದಲ್ಲಿ ಬಂದು ನಿಂತರೆ ಯಾರಿಗೆ ತಾನೇ ಶಾಕ್ ಆಗುವುದಿಲ್ಲ ಹೇಳಿ? ಕ್ಯಾಂಟೀನ್ ಮಾಲೀಕನಿಗೂ ಅದೇ ಆಗಿದೆ. ಓಡಾಡುತ್ತಿದ್ದ ಜನರೂ ಕುತೂಹಲದಿಂದ ಪುನೀತ್ ಅವರನ್ನು ಮಾತನಾಡಿಸಿ ಖುಷಿ ಪಟ್ಟಿದ್ದಾರೆ. ಈ ರೀತಿ ಅಪ್ಪ ಹಾಕಿಕೊಟ್ಟ ಹಾದಿಯಲ್ಲಿ ನಡೆಯುತ್ತಿದ್ದಾರೆ ಅಂಜನಿಪುತ್ರ.

     

     

     

  • ಕರಾವಳಿಯ ಖಾದ್ಯಕ್ಕೆ ಮನಸೋತ ಮೋದಿ – ತಿಂಡಿ ಬಡಿಸಿದವರಿಗೆ ಪ್ರಧಾನಿಯಿಂದ ಪ್ರಶಂಸೆ

    ಕರಾವಳಿಯ ಖಾದ್ಯಕ್ಕೆ ಮನಸೋತ ಮೋದಿ – ತಿಂಡಿ ಬಡಿಸಿದವರಿಗೆ ಪ್ರಧಾನಿಯಿಂದ ಪ್ರಶಂಸೆ

    -ನೀರುದೋಸೆ, ಕಡುಬು, ಅವಲಕ್ಕಿ ಉಪ್ಪಿಟ್ಟು ಸವಿದ್ರು

    ಮಂಗಳೂರು: ಓಖಿ ಚಂಡಮಾರುತದಿಂದ ಹಾನಿಗೀಡಾದ ಲಕ್ಷದ್ವೀಪದ ಪ್ರದೇಶಗಳಿಗೆ ಭೇಟಿ ನೀಡಲು ಬಂದಿದ್ದ ಪ್ರಧಾನಿ ನರೇಂದ್ರ ಮೋದಿಯವರು ಕರಾವಳಿಯ ಖಾದ್ಯಕ್ಕೆ ಮನಸೋತಿದ್ದಾರೆ.

    ಪ್ರಧಾನಿಯವರಿಗೆ ಬೆಳಗ್ಗಿನ ಉಪಹಾರಕ್ಕೆ ಓಷಿಯನ್ ಪರ್ಲ್ ಹೋಟೆಲ್ ನಿಂದ ತಿಂಡಿಯನ್ನು ಸಿದ್ಧತೆ ಮಾಡಲಾಗಿತ್ತು. ಹೀಗಾಗಿ ಪ್ರಧಾನಿಯವರು ನೀರುದೋಸೆ, ಕಡುಬು, ಅವಲಕ್ಕಿ ಮತ್ತು ಉಪ್ಪಿಟ್ಟನ್ನು ಸವಿದಿದ್ದಾರೆ. ತಾವು ತಿಂದ ತಿಂಡಿಯಲ್ಲಿ ಕಡುಬಿನ ರುಚಿಗೆ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದು, ನಂತರ ಹೋಟೆಲ್‌ ಸಿಬ್ಬಂದಿ ಜೊತೆ ಫೋಟೋ ತೆಗಿಸಿಕೊಂಡಿದ್ದಾರೆ. ಕೊನೆಗೆ ತಮಗೆ ತಿಂಡಿ ಬಡಿಸಿದವರಿಗೆ ಪ್ರಶಂಸೆ ಕೂಡ ವ್ಯಕ್ತಪಡಿಸಿದ್ದಾರೆ.

    ಮೋದಿಯವರು ಸೋಮವಾರ ತಡಾರಾತ್ರಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಬಳಿಕ ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ತಂಗಿದ್ದು, ಉಪಹಾರ ಸೇವನೆ ಬಳಿಕ ಬೆಳಗ್ಗೆ 7.30 ಕ್ಕೆ ರಸ್ತೆ ಮಾರ್ಗದ ಮೂಲಕ ತೆರಳಿ ಬಜ್ಪೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ, ಭಾರತೀಯ ವಾಯುಸೇನೆಯ ವಿಶೇಷ ವಿಮಾನದ ಮೂಲಕ ಲಕ್ಷದ್ವೀಪಕ್ಕೆ ತೆರಳಿದ್ದಾರೆ.

    ಮಂಗಳೂರು ವಿಮಾನ ನಿಲ್ದಾಣದಲ್ಲಿ ಮುಂಜಾಗ್ರತಾ ಕ್ರಮವಾಗಿ ಪ್ರಯಾಣಿಕರನ್ನು ಕೆಲ ನಿಮಿಷಗಳ ಕಾಲ ತಡೆಹಿಡಿಯಲಾಗಿತ್ತು. ಮೋದಿಯವರ ಲಕ್ಷದ್ವೀಪ ಪ್ರವಾಸಕ್ಕೆ ಎರಡು ವಿಶೇಷ ವಿಮಾನಗಳನ್ನು ಸಿದ್ಧಪಡಿಸಲಾಗಿತ್ತು. ಈ ಪೈಕಿ ಒಂದು ವಿಮಾನದ ಮೂಲಕ ಮೋದಿ ಲಕ್ಷದ್ವೀಪಕ್ಕೆ ತೆರಳಿದ್ದಾರೆ. ಮೋದಿ ಲಕ್ಷದ್ವೀಪಕ್ಕೆ ಹಾರಿದ ಕೆಲವೇ ನಿಮಿಷಗಳಲ್ಲಿ ಮತ್ತೊಂದು ವಿಶೇಷ ವಿಮಾನ ಕೂಡ ಲಕ್ಷದ್ವೀಪಕ್ಕೆ ಪ್ರಯಾಣ ಬೆಳೆಸಿದೆ.

    ಇತ್ತೀಚೆಗೆ ಓಖಿ ಚಂಡಮಾರುತದಿಂದ ಹಾನಿಗೀಡಾದ ಲಕ್ಷದ್ವೀಪದ ಪ್ರದೇಶಗಳಿಗೆ ಮೋದಿ ಭೇಟಿ ನೀಡಿ ಪುನರ್ವಸತಿ ಕಾರ್ಯಗಳನ್ನು ವೀಕ್ಷಿಸಲಿದ್ದಾರೆ.

     

  • ‘ನಾವು ದಲಿತರ ಮನೆಯ ಅಡುಗೆ ತಿಂದಿದ್ದೇವೆ’ ಎಂದು ಪೋಸು ಕೊಟ್ಟ ಬಿಜೆಪಿ ನಾಯಕರ ಬಣ್ಣ ಬಯಲು

    ‘ನಾವು ದಲಿತರ ಮನೆಯ ಅಡುಗೆ ತಿಂದಿದ್ದೇವೆ’ ಎಂದು ಪೋಸು ಕೊಟ್ಟ ಬಿಜೆಪಿ ನಾಯಕರ ಬಣ್ಣ ಬಯಲು

    ತುಮಕೂರು: ಗುರುವಾರ ತುಮಕೂರಿನಲ್ಲಿ ನಡೆದ ಜನಸಂಪರ್ಕ ಅಭಿಯಾನದಲ್ಲಿ ‘ನಾವು ದಲಿತರ ಮನೆಯ ಅಡುಗೆ ತಿಂದಿದ್ದೇವೆ’ ಎಂದು ಪೋಸು ಕೊಟ್ಟ ಬಿಜೆಪಿ ನಾಯಕರ ಮುಖವಾಡ ಬಯಲಾಗಿದೆ.

    ಮರಳೂರು ದಿಣ್ಣೆಯ ನಿವಾಸಿ ಬಿಜೆಪಿ ದಲಿತ ಕಾರ್ಯಕರ್ತ ಮಧು ಎನ್ನುವವರ ಮನೆಯಲ್ಲಿ  ತಟ್ಟೆ ಇಡ್ಲಿ, ಚಿತ್ರಾನ್ನ, ಕೇಸರಿ ಬಾತ್‍ನ್ನು ಹಲವು ನಾಯಕರು ಸೇವಿಸಿದ್ರು. ಹೋಟೆಲಿನಿಂದ ತಿಂಡಿಯನ್ನು ತಂದು ದಲಿತರ ಮನೆಯಲ್ಲಿ ಸೇವಿಸಿ, ದಲಿತರೆಂದರೇ ತಮಗೆ ಬೇಧವಿಲ್ಲ ಅಂದು ಬಿಜೆಪಿ ನಾಯಕರು ಹೇಳಿಕೊಂಡಿದ್ದರು.

    ಅಸಲಿಗೆ ಬಿಜೆಪಿ ನಾಯಕರು ಸೇವಿಸಿದ ಉಪಹಾರವನ್ನು ತುಮಕೂರು ನಗರದ ಅರಳೂರು ಹೋಟೆಲಿನಿಂದ ತರಿಸಲಾಗಿತ್ತು. ಈ ಹೋಟೆಲಿನಿಂದ 500 ತಟ್ಟೆ ಇಡ್ಲಿ, ಚಿತ್ರಾನ್ನ ಪಾರ್ಸೆಲ್ ತೆಗೆದುಕೊಂಡು ಹೋಗಲಾಗಿತ್ತು.

    ಯಡಿಯೂರಪ್ಪ ಅವರಿಗೆ ನಮ್ಮ ಹೋಟೆಲ್ ಟೀ ಅಂದ್ರೆ ತುಂಬಾ ಇಷ್ಟ. ಇಲ್ಲಿಗೆ ಬಂದಾಗ ಟೀ ಕುಡಿದು ಹೋಗ್ತಾರೆ. ನಿನ್ನೆಯೂ ನಮ್ಮ ಹೋಟೆಲ್ ನಿಂದ 500 ಇಡ್ಲಿ, 500 ವಡೆ, ಚಿತ್ರಾನ್ನವನ್ನು ಕಳುಹಿಸಿದ್ದೇವೆ ಎಂದು ಹೋಟೆಲ್ ಮಾಲೀಕ ಶಿವಕುಮಾರ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.

    ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಈಶ್ವರಪ್ಪ, ಸದಾನಂದ ಗೌಡ, ಅನಂತಕುಮಾರ್, ಶೋಭಾಕರಂದ್ಲಾಜೆ ಸೇರಿದಂತೆ ಪಕ್ಷದ ಎಲ್ಲಾ ಪ್ರಮುಖ ನಾಯಕರು ದಲಿತರ ಮನೆ ಊಟ ಮಾಡಿದ್ದೇವೆ ಎಂದು ಬೀಗಿದ್ರು. ಆದ್ರೆ ಈಗ ಅದರ ಅಸಲಿಯತ್ತು ಅನಾವರಣಗೊಂಡಿದೆ.

    https://youtu.be/nX1JPNJLW68