Tag: Bramhachari

  • ನವಿರುಹಾಸ್ಯದೊಂದಿಗೆ ಪ್ರೇಕ್ಷಕರ ಮನಗೆದ್ದ ಬ್ರಹ್ಮಚಾರಿ!

    ನವಿರುಹಾಸ್ಯದೊಂದಿಗೆ ಪ್ರೇಕ್ಷಕರ ಮನಗೆದ್ದ ಬ್ರಹ್ಮಚಾರಿ!

    ಬೆಂಗಳೂರು: ಕೆಲವೇಕೆಲ ನಿರ್ದೇಶಕರಿಗೆ ಮಾತ್ರವೇ ಇಡೀ ಸಿನಿಮಾದ ತುಂಬಾ ಹಾಸ್ಯರಸವನ್ನು ಪರಿಣಾಮಕಾರಿಯಾಗಿ ಜಿನುಗಿಸುವ ಕಲೆ ಸಿದ್ಧಿಸಿರುತ್ತದೆ. ಅಂಥವರ ಸಾಲಿನಲ್ಲಿ ಚಂದ್ರಮೋಹನ್ ಕೂಡಾ ಸೇರಿಕೊಳ್ಳುತ್ತಾರೆ. ಈ ವಿಚಾರವನ್ನು ‘ಬ್ರಹ್ಮಚಾರಿ’ ಚಿತ್ರದ ಅಮೋಘ ಪ್ರದರ್ಶನವೇಸಾಕ್ಷೀಕರಿಸುವಂತಿದೆ. ಇದರೊಂದಿಗೆ ನೀನಾಸಂ ಸತೀಶ್ ಮತ್ತು ಅದಿತಿ ಪ್ರಭುದೇವಜೋಡಿಯೂ ಮಸ್ತಾಗಿರೋ ಕಥೆಯೊಂದಿಗೆ ಪ್ರೇಕ್ಷಕರ ಮನಗೆದ್ದಿದೆ.

    ಆರಂಭದಿಂದಕಡೇಯವರೆಗೂ ಕಚಗುಳಿಯಿಡುತ್ತಾ ಸಾಗುವ ನವಿರು ಹಾಸ್ಯ ಬೆರೆತ ಮನೋರಂಜನಾತ್ಮಕಕಥೆಗೆ ಪ್ರೇಕ್ಷಕರೆಲ್ಲ ಮನ ಸೋತಿದ್ದಾರೆ. ಈ ಬಲದಿಂದಲೇ ಭರ್ಜರಿ ಗೆಲುವುದಕ್ಕಿಸಿಕೊಳ್ಳುವ ಹುಮ್ಮಸ್ಸಿನೊಂದುಗೆ ಬ್ರಹ್ಮಚಾರಿ ಮುಂದುವರೆಯುತ್ತಿದ್ದಾನೆ. ಇದು ಉದಯ್ ಕೆ ಮೆಹ್ತಾ ನಿರ್ಮಾಣ ಮಾಡಿರುವ ಚಿತ್ರ. ಅವರು ನಿರ್ಮಾಣ ಮಾಡಿದ್ದಾರೆಂದರೆ ಅದ್ದೂರಿಯಾಗಿರುತ್ತದೆ, ಕಥೆಯೂ ಭಿನ್ನವಾಗಿರುತ್ತದೆಂಬ ಪ್ರೇಕ್ಷಕರ ನಂಬಿಕೆ ಬ್ರಹ್ಮಚಾರಿಯ ಮೂಲಕವೂ ಮುಂದುವರೆದಿದೆ.

    ಇದರೊಂದಿಗೆ ಅಯೋಗ್ಯ ಚಿತ್ರದಿಂದ ಶುರುವಾದ ನೀನಾಸಂ ಸತೀಶ್ ಅವರ ಮಹಾ ಗೆಲುವಿನ ಪರ್ವವೂ ಅನೂಚಾನವಾಗಿಯೇ ಮುಂದುವರೆಯುತ್ತಿದೆ. ಗಂಡಸರ ಬೆಡ್‍ರೂಂ ಸಮಸ್ಯೆಗಳನ್ನೇ ಕೇಂದ್ರವಾಗಿಟ್ಟುಕೊಂಡ ಚಿತ್ರಗಳು ಕಾಶೀನಾಥ್ ಜಮಾನದಲ್ಲಿಯೇ ಬಂದಿವೆ. ಇದೂ ಕೂಡಾ ಅದೇ ಜಾಡಿನದ್ದಾದರೂ ಬ್ರಹ್ಮಚಾರಿಯನ್ನು ಚಂದ್ರಮೋಹನ್ ಬೇರೆಯದ್ದೇ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಆರಂಭಿಕವಾಗಿ ಫಸ್ಟ್ ನೈಟ್ ಟೀಸರ್ ಮುಂತಾದವುಗಳ ಮೂಲಕ ಸದ್ದು ಮಾಡಿದ್ದ ಚಿತ್ರ ಬ್ರಹ್ಮಚಾರಿ. ನಂತರ ಟ್ರೇಲರ್‍ನಲ್ಲಿ ಕಾಣಿಸಿದ್ದ ಸಂಭಾಷಣೆಗಳನ್ನು ಕಂಡು ಫ್ಯಾಮಿಲಿ ಪ್ರೇಕ್ಷಕರು ಕೊಂಚ ಕಸಿವಿಸಿಗೊಂಡಂತಿದ್ದರು. ಆದರೆ ಇಡೀ ಚಿತ್ರದಲ್ಲಿ ಒಂದೇ ಒಂದು ವಲ್ಗರ್ ಅನ್ನಿಸುವಂಥಾದೃಷ್ಯ, ಡೈಲಾಗುಗಳಿಲ್ಲವೆಂದು ಚಿತ್ರತಂಡ ಅಡಿಗಡಿಗೆ ಹೇಳಿಕೊಂಡು ಬಂದಿತ್ತು. ಅದೂಕೂಡಾ ನಿಜವಾಗಿದೆ. ಈ ಕಾರಣದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಫ್ಯಾಮಿಲಿ ಪ್ರೇಕ್ಷಕರು ಈ ಸಿನಿಮಾನೋಡಿ ಎಂಜಾಯ್ ಮಾಡಲಾರಂಭಿಸಿದ್ದಾರೆ.

    ಯಾವುದೇ ಸಿನಿಮಾಗಳಿಗಾದರೂ ಫ್ಯಾಮಿಲಿಪ್ರೇಕ್ಷಕರ ಸಾಥ್ ಸಿಕ್ಕರೆ ಗೆಲುವು ಸಲೀಸಾಗುತ್ತದೆ. ಈ ಪ್ರೀತಿಯಿಂದಲೇ ಬ್ರಹ್ಮಚಾರಿಯಶಸ್ವಿಯಾಗಿ ಎರಡನೇ ವಾರವನ್ನು ಪೂರೈಸಿಕೊಂಡು ಮುಂದುವರೆಯೋತವಕದಲ್ಲಿದ್ದಾನೆ. ರಾಜ್ಯಾದ್ಯಂತ ಈ ಕ್ಷಣಕ್ಕೂ ಸದರಿ ಚಿತ್ರ ಹೌಸ್ ಪುಲ್ ಪ್ರದರ್ಶನವನ್ನೇಕಾಣುತ್ತಿದೆ.

  • ಬ್ರಹ್ಮಚಾರಿಯ ಸಖಿ ಅದಿತಿ ಪ್ರಭುದೇವ ಏನಂತಾರೆ?

    ಬ್ರಹ್ಮಚಾರಿಯ ಸಖಿ ಅದಿತಿ ಪ್ರಭುದೇವ ಏನಂತಾರೆ?

    ನೀನಾಸಂ ಸತೀಶ್ ಮತ್ತು ಅದಿತಿ ಪ್ರಭುದೇವ ಜೋಡಿಯಾಗಿ ನಟಿಸಿರುವ ಬ್ರಹ್ಮಚಾರಿ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಂದ್ರ ಮೋಹನ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಚಿತ್ರ ಔಟ್ ಆಂಡ್ ಔಟ್ ಮನೋರಂಜನಾತ್ಮಕ ಸಿನಿಮಾ ಅನ್ನೋದು ಈಗಾಗಲೇ ಪ್ರೇಕ್ಷಕರ ಪಾಲಿಗೆ ಪಕ್ಕಾ ಆಗಿದೆ. ಭರಪೂರ ಹಾಸ್ಯವಿದ್ದರೂ ವಲ್ಗಾರಿಟಿಯ ಸೋಂಕಿಲ್ಲದ ಈ ಚಿತ್ರ ಹಾಸ್ಯ ಧಾಟಿಯಾಚೆಗೂ ಗಹನವಾದ ಕಥೆಯೊಂದಿಗೆ ನಿರ್ದೇಶಕ ಚಂದ್ರಮೋಹನ್ ಈ ಚಿತ್ರವನ್ನು ರೂಪಿಸಿದ್ದಾರೆ. ಇದುವರೆಗೂ ಹಲವಾರು ಪಾತ್ರಗಳನ್ನು ನಿರ್ವಹಿಸಿರುವ ಅದಿತಿ ಪ್ರಭುದೇವ ಈ ಮೂಲಕ ಮೊದಲ ಬಾರಿ ಹಾಸ್ಯಾತ್ಮಕ ಸಿನಿಮಾದ ಭಾಗವಾಗಿದ್ದಾರೆ.

    ಅದಿತಿ ಪ್ರಭುದೇವ ಪಾಲಿಗೆ ಇದೊಂದು ಹೊಸ ಜಾನರಿನ ಸಿನಿಮಾ. ಆರಂಭದಲ್ಲಿ ಇದರ ಕಾಮಿಡಿ ಝಲಕ್ ಮತ್ತು ತಮ್ಮ ಪಾತ್ರದ ವಿಶೇಷತೆಗೆ ಮನಸೋತೇ ಅದಿತಿ ನಟಿಸಲು ಒಪ್ಪಿಕೊಂಡಿದ್ದರಂತೆ. ಪ್ರತಿ ಸಿನಿಮಾಗಳೂ ತನ್ನ ಪಾಲಿಗೆ ಹೊಸ ಕಲಿಕೆಗೆ ಕಾರಣವಾಗಬೇಕೆಂಬ ಹಂಬಲವಿಟ್ಟುಕೊಂಡಿರೋ ಅವರ ಪಾಲಿಗೆ ಬ್ರಹ್ಮಚಾರಿ ಚಿತ್ರದ ಮೂಲಕ ಹೊಸತನದ ಅನುಭವ ದಕ್ಕಿದೆಯಂತೆ. ಯಾವ ಪ್ರೇಕ್ಷಕರೇ ಆಗಿದ್ದರೂ ತಮ್ಮ ಖಾಸಗಿ ಬದುಕಿನ ಜಂಜಾಟಗಳಿಂದ ಮುಕ್ತವಾಗಿ ಎಲ್ಲವನ್ನೂ ಮರೆತು ಮೈ ಮರೆಯಲೋಸ್ಕರವೇ ಸಿನಿಮಾ ಮಂದಿರಗಳತ್ತ ಬರುತ್ತಾರೆ. ಹಾಗೆ ಬಂದ ಪ್ರತಿಯೊಬ್ಬರಿಗೂ ಭರ್ಜರಿ ಮನರಂಜನೆ ನೀಡುವಲ್ಲಿ ಬ್ರಹ್ಮಚಾರಿ ಗೆಲುವು ಕಾಣುತ್ತಾನೆಂಬ ನಂಬಿಕೆ ಅದಿತಿಯದ್ದು.

    ಇದೇ ಸಂದರ್ಭದಲ್ಲಿ ಅವರು ಇಡೀ ಚಿತ್ರದಲ್ಲಿ ಎಲ್ಲಿಯೂ ಮುಜುಗರ ಪಟ್ಟುಕೊಳ್ಳುವಂಥಾ ಸನ್ನಿವೇಶಗಳಿಲ್ಲ ಎಂಬುದನ್ನೂ ಒತ್ತಿ ಹೇಳುತ್ತಾರೆ. ಒಟ್ಟಾರೆಯಾಗಿ ಈ ಸಿನಿಮಾ ದೊಡ್ಡ ಗೆಲುವು ದಾಖಲಿಸೋದರೊಂದಿಗೆ ತನ್ನ ಕೆರಿಯರ್‍ನಲ್ಲಿಯೂ ಭಿನ್ನ ಸಿನಿಮಾವಾಗಿ ನೆಲೆಗೊಳ್ಳುತ್ತದೆಂಬ ನಂಬಿಕೆಯೂ ಅವರಲ್ಲಿದೆ. ಯಾವ ವೆರೈಟಿಯ ಪಾತ್ರಗಳನ್ನಾದರೂ ತುಸು ಕಷ್ಟವಾದರೂ ಮಾಡಿ ಬಿಡಬಹುದು. ಆದರೆ ಏಕಾಏಕಿ ಕಾಮಿಡಿ ಟೈಮಿಂಗಿಗೆ ಒಗ್ಗಿಕೊಳ್ಳೋದು ಮಾತ್ರ ಅಕ್ಷರಶಃ ಹರಸಾಹಸ. ಕೊಂಚ ಕಷ್ಟವಾದರೂ ಅದಿತಿ ಅದನ್ನು ಸಮರ್ಥವಾಗಿ ನಿಭಾಯಿಸಿದ್ದರಂತೆ. ಇಲ್ಲಿ ಅವರ ಪಾತ್ರ ಕೂಡಾ ಸೊಗಸಾಗಿದೆಯಂತೆ. ಅಂದಹಾಗೆ, ಉದಯ್ ಮೆಹ್ತಾ ನಿರ್ಮಾಣ ಮಾಡಿರೋ ಈ ಸಿನಿಮಾ ಇದೇ ವಾರ ತೆರೆ ಕಾಣುತ್ತಿದೆ.

  • ಇವನು ಫ್ಯಾಮಿಲಿ ಎಂಟರ್‌ಟೈನರ್ ಬ್ರಹ್ಮಚಾರಿ!

    ಇವನು ಫ್ಯಾಮಿಲಿ ಎಂಟರ್‌ಟೈನರ್ ಬ್ರಹ್ಮಚಾರಿ!

    ದಯ್ ಮೆಹ್ತಾ ನಿರ್ಮಾಣ ಮಾಡಿರುವ ಬ್ರಹ್ಮಚಾರಿ ಚಿತ್ರ ಈ ವಾರವೇ ರಾಜ್ಯಾದ್ಯಂತ ತೆರೆಗಾಣುತ್ತಿದೆ. ನೀನಾಸಂ ಸತೀಶ್ ನಟಿಸಿರೋ ಈ ಚಿತ್ರ ಈಗಾಗಲೇ ಟ್ರೇಲರ್, ಹಾಡುಗಳ ಮೂಲಕ ಬಹು ನಿರೀಕ್ಷಿತ ಚಿತ್ರವಾಗಿ ಹೊರ ಹೊಮ್ಮಿದೆ. ಫಸ್ಟ್ ನೈಟ್ ಟೀಸರ್ ನಿಂದ ಶುರುವಾಗಿ ಟ್ರೇಲರ್ ತನಕ ಬ್ರಹ್ಮಚಾರಿ ಪ್ರೇಕ್ಷಕರನ್ನು ಮರುಳು ಮಾಡಿಕೊಂಡು ಬಂದು ಇದೀಗ ಬಿಡುಗಡೆಯ ಹಂತ ತಲುಪಿಕೊಂಡಿದ್ದಾನೆ. ವಿಶೇಷವೆಂದರೆ, ಸಂಪೂರ್ಣ ಮನೋರಂಜನೆಯನ್ನೇ ಉದ್ದೇಶವಾಗಿಸಿಕೊಂಡಿರೋ ಈ ಸಿನಿಮಾ ಪಕ್ಕಾ ಫ್ಯಾಮಿಲಿ ಎಂಟರ್ ಟೈನ್ಮೆಂಟ್ ಪ್ಯಾಕೇಜಿನಂತೆ ಮೂಡಿ ಬಂದಿದೆಯಂತೆ. ಈ ಕಾರಣದಿಂದಲೇ ಚಿತ್ರತಂಡ ಕುಟುಂಬ ಸಮೇತರಾಗಿ ಬಂದು ನೋಡುವಂತೆ ಪ್ರೇಕ್ಷಕರಿಗೆ ಆಹ್ವಾನ ನೀಡುತ್ತಾ ಬಂದಿದೆ.

    ಈ ಹಿಂದೆ ಬಾಂಬೆ ಮಿಠಾಯಿ ಮತ್ತು ಡಬಲ್ ಇಂಜಿನ್ ಎಂಬ ಹಾಸ್ಯ ಪ್ರಧಾನ ಚಿತ್ರಗಳನ್ನು ನಿರ್ದೇಶನ ಮಾಡಿ ಗೆದ್ದಿದ್ದವರು ಚಂದ್ರ ಮೋಹನ್. ಈ ಥರದ ಸಿನಿಮಾಗಳನ್ನು ರೂಪಿಸೋದು, ಇಡೀ ಸಿನಿಮಾದಲ್ಲಿ ಪ್ರತೀ ಹಂತದಲ್ಲಿಯೂ ಪ್ರೇಕ್ಷಕರನ್ನು ನಗಿಸೋದೆಲ್ಲ ಅಷ್ಟು ಸಲೀಸಿನ ಸಂಗತಿಯಲ್ಲ. ಆದರೆ ಚಂದ್ರಮೋಹನ್ ಅದನ್ನು ಕರಗತ ಮಾಡಿಕೊಂಡಿದ್ದಾರೆ. ಈ ಕಾರಣದಿಂದಲೇ ಎರಡು ಸರಣಿ ಗೆಲುವುಗಳನ್ನು ತನ್ನದಾಗಿಸಿಕೊಂಡು, ಇದೀಗ ಬ್ರಹ್ಮಚಾರಿ ಮೂಲಕ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಿಂದಿದ್ದಾರೆ. ಈಗಾಗಲೇ ಈ ಸಿನಿಮಾ ಸೃಷ್ಟಿಸಿರುವ ಕ್ರೇಜ್ ಮತ್ತು ಅದರ ವಿಶಿಷ್ಟ ಕಂಟೆಂಟಿನ ವಿಚಾರಗಳೆಲ್ಲವೂ ಬ್ರಹ್ಮಚಾರಿಗೆ ಪ್ರೇಕ್ಷಕರೆಲ್ಲ ಬೇಷರತ್ತಾಗಿ ಫಿದಾ ಆಗುವಂಥಾ ಲಕ್ಷಣಗಳನ್ನೇ ಧ್ವನಿಸುವಂತಿವೆ.

    ಗುಪ್ತ ಸಮಸ್ಯೆಗಳನ್ನು ಒಳಗೇ ಇಟ್ಟುಕೊಂಡು, ಕನಿಷ್ಟ ಅದಕ್ಕೊಂದು ಚಿಕಿತ್ಸೆ ಪಡೆಯಲೂ ಮುಜುಗರ ಪಡುವ, ಹೇಗೋ ಅದು ಬಟಾಬಯಲಾದ ನಂತರ ಮಾನಸಿಕ ಹಿಂಸೆ ಅನುಭವಿಸುವಂಥಾ ಅದೆಷ್ಟೋ ಜನರಿದ್ದಾರೆ. ಅಂಥಾದ್ದೊಂದು ಗುಪ್ತ ಸಮಸ್ಯೆಯಿಂದ ಬಳಲೋ ನಾಯಕನ ಪಡಿಪಾಟಲುಗಳನ್ನು ಎಲ್ಲಿಯೂ ವಲ್ಗರ್ ಅನ್ನಿಸದಂತೆ, ಸಭ್ಯತೆಯ ಗೆರೆ ದಾಟದಂತೆ, ಪ್ರತೀ ಫ್ರೇಮಿನಲ್ಲಿಯೂ ನಗಿಸುವಂತೆ ಕಟ್ಟಿ ಕೊಡುವಲ್ಲಿ ಚಂದ್ರ ಮೋಹನ್ ಗೆದ್ದಿದ್ದಾರಂತೆ. ಚಿತ್ರತಂಡದಲ್ಲಿಯೂ ಆ ಬಗೆಗಿನ ಗಾಢವಾದ ವಿಶ್ವಾಸವಿದೆ. ಈಗಾಗಲೇ ಹೊರ ಬಂದಿರುವ ಟೀಸರ್ ಮತ್ತು ಟ್ರೇಲರ್ ಗಳಲ್ಲಿ ಅದರ ಕುರುಹುಗಳಿವೆ.

    ಉದಯ್ ಮೆಹ್ತಾ ನಿರ್ಮಾಣದ ಚಿತ್ರಗಳೆಂದ ಮೇಲೆ ಅಲ್ಲಿ ಅದ್ಧೂರಿತನದ ಹಾಜರಿ ಇದ್ದೇ ಇರುತ್ತದೆಂಬ ನಂಬಿಕೆ ಪ್ರೇಕ್ಷಕರಲ್ಲಿದೆ. ಬ್ರಹ್ಮಚಾರಿಯನ್ನೂ ಕೂಡಾ ಅವರು ಅಷ್ಟೇ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಹಾಡುಗಳಲ್ಲಿಯೇ ಅದಕ್ಕೆ ಸಾಕ್ಷಿಗಳು ಸಿಗುವಂತಿವೆ. ಟ್ರೇಲರ್ ಮತ್ತು ಟೀಸರ್ ಗಳಲ್ಲಿ ಕಚಗುಳಿ ಇಡುವಂತಾ ಸನ್ನಿವೇಶ, ಡೈಲಾಗುಗಳಿಂದಲೇ ಬ್ರಹ್ಮಚಾರಿ ಲಕಲಕಿಸಿದ್ದಾನೆ. ಹಾಗಂತ ಇದನ್ನೇನು ಡಬಲ್ ಮೀನಿಂಗ್‍ಗಳಿಂದ ತುಂಬಿರೋ ಸಿನಿಮಾ ಅಂದುಕೊಳ್ಳಬೇಕಿಲ್ಲ. ಇದು ಕುಟುಂಬ ಸಮೇತರಾಗಿ ನೋಡಿ ಎಂಜಾಯ್ ಮಾಡುವಂಥಾ ಚಿತ್ರ. ಒಂದೇ ಒಂದು ಮುಜುಗರದ ಸನ್ನಿವೇಶಗಳೂ ಈ ಸಿನಿಮಾದಲ್ಲಿಲ್ಲವಂತೆ. ಅಂತೂ ನೀನಾಸಂ ಸತೀಶ್ ಬ್ರಹ್ಮಚಾರಿಯಾಗಿ ತಮ್ಮ ಗೆಲುವಿನ ಸರಣಿಯನ್ನು ಮುಂದುವರೆಸೋದರಲ್ಲಿ ಯಾವ ಸಂದೇಹವೂ ಇಲ್ಲ.

  • ಮಂತ್ರಿ ಮಾಲ್‍ನಲ್ಲಿ ಬ್ರಹ್ಮಚಾರಿಯ ಲೈವ್ ಗಾನಾ!

    ಮಂತ್ರಿ ಮಾಲ್‍ನಲ್ಲಿ ಬ್ರಹ್ಮಚಾರಿಯ ಲೈವ್ ಗಾನಾ!

    – ಇದು ಚಿತ್ರತಂಡದ ವಿನೂತನ ಪ್ರಯೋಗ!

    ಬೆಂಗಳೂರು:  ನೀನಾಸಂ ಸತೀಶ್ ಅಭಿನಯದ ಬ್ರಹ್ಮಚಾರಿ ಚಿತ್ರ ಹಾಡು ಮತ್ತು ಟ್ರೇಲರ್ ಗಳೊಂದಿಗೆ ಭರ್ಜರಿಯಾಗಿಯೇ ಸದ್ದು ಮಾಡುತ್ತಿದೆ. ನೀನಾಸಂ ಸತೀಶ್ ಚಂಬಲ್‍ನಂಥಾ ರಿಯಲಿಸ್ಟಿಕ್ ಚಿತ್ರದಲ್ಲಿ ಖಡಕ್ ಅಧಿಕಾರಿಯಾಗಿ ಮಿಂಚಿ ಮತ್ತೆ ತಮ್ಮ ಅಭಿಮಾನಿಗಳಿಗೆ ಭರಪೂರ ಮನೋರಂಜನೆ ನೀಡಲು ಮುಂದಾಗಿದ್ದಾರೆ. ಮೊದಲಿನಿಂದಲೂ ಮಂಡ್ಯ ಶೈಲಿಯ ಮನೋರಂಜನಾತ್ಮಕ ಪಾತ್ರಗಳಲ್ಲಿ ಮಿಂಚುತ್ತಾ ಬಂದಿದ್ದ ಸತೀಶ್ ಈಗ ನಾಯಕನಾಗಿಯೂ ವೆರೈಟಿ ಪಾತ್ರಗಳಲ್ಲಿ ನಟಿಸಿ ಬಹ್ಮಚಾರಿ ಮೂಲಕ ಮತ್ತೊಂದು ಮಜಲಿನತ್ತ ಹೊರಳಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಟ್ರೇಲರ್ ಮೂಲಕ ಮಜಾ ಕೊಟ್ಟಿದ್ದ ಬ್ರಹ್ಮಚಾರಿ ಚಿತ್ರ ತಂಡವೀಗ ಕನ್ನಡ ಚಿತ್ರರಂಗಕ್ಕೆ ಹೊಸತಾದ ಪ್ರಯೋಗವೊಂದರ ಮೂಲಕ ಹಾಡೊಂದನ್ನು ಬಿಡುಗಡೆ ಮಾಡಲು ತಯಾರಾಗಿದೆ.

    ಯಾವುದೇ ಸಿನಿಮಾ ಹಾಡುಗಳನ್ನು ಯೂಟ್ಯೂಬ್ ಮೂಲಕ ನೇರವಾಗಿ ಬಿಡುಗಡೆ ಮಾಡೋ ಟ್ರೆಂಡ್ ಚಾಲ್ತಿಯಲ್ಲಿದೆ. ಆದರೆ ನಿರ್ದೇಶಕ ಚಂದ್ರಮೋಹನ್ ಮಾತ್ರ ಬ್ರಹ್ಮಚಾರಿಯ ಹಾಡೊಂದನ್ನು ಅತ್ಯಂತ ವಿಶಿಷ್ಟವಾದ ರೀತಿಯಲ್ಲಿ ಬಿಡುಗಡೆ ಮಾಡಲು ಯೋಜನೆ ರೂಪಿಸಿದ್ದಾರೆ. ಶನಿವಾರ ಮಂತ್ರಿ ಮಾಲ್‍ನಲ್ಲಿ ಈ ಲೈವ್ ಹಾಡಿನ ಕಾರ್ಯಕ್ರಮ ನಡೆಯಲಿದೆ. ಸಂಜೆ ಆರು ಘಂಟೆಗೆ ಸರಿಯಾಗಿ ಸಂಜಿತ್ ಹೆಗ್ಡೆ ಮತ್ತು ಸುಪ್ರಿಯಾ ಲೈವ್ ಆಗಿಯೇ ಈ ಹಾಡನ್ನು ಹಾಡಲಿದ್ದಾರೆ. ಸಾವಿರಾರು ಜನರ ಸಮ್ಮುಖದಲ್ಲಿ ಈ ಹಾಡನ್ನು ಬಿಡುಗಡೆ ಮಾಡಲಾಗುತ್ತದೆ.

    ಈ ಕಾರ್ಯಕ್ರಮ ಸುಮಾರು ಒಂದು ಘಂಟೆಗಳ ಕಾಲ ನಡೆಯಲಿದೆ. ಇದರ ವೀಡಿಯೋ ಕವರೇಜ್ ಮಾಡಿಕೊಳ್ಳುವ ಅವಕಾಶವನ್ನೂ ಸಹ ಚಿತ್ರತಂಡ ಕಲ್ಪಿಸಿದೆ. ಈ ಕಾರ್ಯಕ್ರಮದಲ್ಲಿ ನೀವುಗಳೂ ಭಾಗಿಯಾಗಿ ಬ್ರಹ್ಮಚಾರಿಯ ಹಾಡನ್ನು ಲೈವ್ ಆಗಿಯೇ ಆಸ್ವಾದಿಸಬಹುದು. ಚಿತ್ರತಂಡದೊಂದಿಗೆ ಬೆರೆತು ಈ ಅಪರೂಪದ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು. ಅಂದಹಾಗೆ ಇದು ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಮೊದಲ ಪ್ರಯೋಗ. ಇದು ಸಾಧ್ಯವಾಗುತ್ತಿರೋದು ನಿರ್ಮಾಪಕ ಉದಯ್ ಮೆಹ್ತಾರ ಮಹತ್ವಾಕಾಂಕ್ಷೆಯಿಂದ. ಅವರು ಇಡೀ ಚಿತ್ರ ವಿಶೇಷತೆಗಳಿಂದಲೇ ಮಿಂಚಬೇಕೆಂಬ ಹಂಬಲ ಹೊಂದಿರುವ ಅಪರೂಪದ ನಿರ್ಮಾಪಕ. ಈ ಕಾರಣದಿಂದಲೇ ಚಿತ್ರತಂಡದ ಈ ಹೊಸಬಗೆಯ ಆಲೋಚನೆಗೆ ಅವರು ಸಾಥ್ ಕೊಟ್ಟಿದ್ದಾರೆ.

    ಬ್ರಹ್ಮಚಾರಿಯ ನವೀನ್ ಸಜ್ಜು ಹಾಡಿರೋ ಹಾಡೊಂದು ಟ್ರೆಂಡ್ ಸೆಟ್ ಮಾಡಿದೆ. ಇದೀಗ ಈ ಹಾಡನ್ನು ಬಿಡುಗಡೆ ಮಾಡಲು ರೆಡಿಯಾಗಲಾಗಿದೆ. ಧರ್ಮವಿಶ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಈ ಹಾಡನ್ನು ಕವಿರತ್ನ ಡಾ ವಿ ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಸಂಜಿತ್ ಹೆಗ್ಡೆ ಮತ್ತು ಸುಪ್ರಿಯಾ ಅದಕ್ಕೆ ಧ್ವನಿಯಾಗಿದ್ದಾರೆ. ಆದರೆ ಈ ಹಾಡಿನ ಗುಣ ಲಕ್ಷಣಗಳೇನೆಂಬುದನ್ನು ಮಾತ್ರ ಚಿತ್ರತಂಡ ಸರ್‍ಪ್ರೈಸ್ ಆಗಿಟ್ಟಿದೆ. ಅಂತೂ ಈ ಹಾಡೂ ಕೂಡಾ ಬ್ರಹ್ಮಚಾರಿಯನ್ನು ಮತ್ತೆ ಪ್ರೇಕ್ಷಕ ವಲಯದಲ್ಲಿ ಮಿರ ಮಿರ ಮಿಂಚುವಂತೆ ಮೂಡಿ ಬರೋದಂತೂ ಖಚಿತ!