Tag: Brahmavara

  • ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ – ಕುಂದಾಪುರ, ಬ್ರಹ್ಮಾವರ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ

    ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ – ಕುಂದಾಪುರ, ಬ್ರಹ್ಮಾವರ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ

    ಉಡುಪಿ: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಆರ್ಭಟ (Heavy Rain) ಹೆಚ್ಚಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ಹಿನ್ನೆಲೆಯಲ್ಲಿ ಉಡುಪಿ (Udupi) ಜಿಲ್ಲೆಯ ಎರಡು ತಾಲೂಕುಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

    ಉಡುಪಿ ಜಿಲ್ಲೆಯ ಕುಂದಾಪುರ (Kundapura), ಬ್ರಹ್ಮಾವರ (Brahmavara) ತಾಲೂಕಿನಲ್ಲಿ ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿ ಪೂರ್ವ ವಿಭಾಗಕ್ಕೆ ರಜೆ (Holiday For School) ಘೋಷಿಸಲಾಗಿದೆ. ಪದವಿ, ಸ್ನಾತಕೊತ್ತರ ಪದವಿ, ಡಿಪ್ಲೊಮಾ, ಎಂಜಿನಿಯರಿಂಗ್, ಐಟಿಐ ವಿದ್ಯಾಸಂಸ್ಥೆಗಳು ಎಂದಿನಂತೆ ನಡೆಯಲಿವೆ. ಅಲ್ಲದೇ ಉಡುಪಿ, ಬೈಂದೂರು, ಕಾಪು, ಕಾರ್ಕಳ, ಹೆಬ್ರಿಯಲ್ಲಿ ಶಾಲಾ, ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.

    ಪ್ರವಾಹ ಪರಿಸ್ಥಿತಿ ನಿರ್ಮಾಣ:
    ಮಳೆಯ ಆರ್ಭಟ ಹೆಚ್ಚಿದ ಹಿನ್ನೆಲೆಯಲ್ಲಿ ಅಂಕೋಲದ ಸೇರಿ ವಿವಿಧೆಡೆ ಮಳೆಗೆ ಮನೆ, ಸೇತುವೆ, ರಸ್ತೆಗಳು ಜಲಾವೃತವಾಗಿದೆ. ಹೊನ್ನಾವರದ ವರ್ನಕ್ಕೇರಿ ಬಳಿ ಹೆದ್ದಾರಿ ಮೇಲೆ ಗುಡ್ಡ ಕುಸಿದಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ. ಹೊನ್ನಾವರದ ಗುಂಡಬಾಳ ನದಿ ಉಕ್ಕಿ ಹರಿದು, 50 ಮನೆಗಳಿಗೆ ನೀರು ನುಗ್ಗಿದೆ.

    ಮಳೆ ನೀರಿನೊಂದಿಗೆ ತೇಲಿಬಂತು ಹೆಬ್ಬಾವು:
    ಕದಂಬ ನೌಕಾನೆಲೆಯ ಕಾಂಪೌಂಡ್, ಅವೈಜ್ಞಾನಿಕ ಹೆದ್ದಾರಿ ಕಾಮಗಾರಿ ಕಾರಣ ಆರಗಾ ಗ್ರಾಮ ಜಲಾವೃತದ ಭೀತಿ ಎದುರಿಸ್ತಿದೆ. ಜನರ ರಕ್ಷಣೆಗೆ ಎನ್‌ಡಿಆರ್‌ಎಫ್, ಬೋಟ್ ನಿಯೋಜಿಸಲಾಗಿದೆ. ಈ ನಡುವೆ ಕಾರವಾರದ ಸೋನಾರವಾಡದಲ್ಲಿ ಮಳೆಯ ನೀರಿನೊಂದಿಗೆ 12 ಅಡಿ ಉದ್ದದ ಹೆಬ್ಬಾವು ಮನೆಯೊಳಕ್ಕೆ ತೇಲಿಬಂದ ದೃಶ್ಯವೂ ಕಂಡುಬಂದಿದೆ.

    ಇನ್ನು, ಉಡುಪಿಯಲ್ಲಿ ಸೌಪರ್ಣಿಕಾ ನದಿ ಮೈದುಂಬಿದೆ. ಬೈಂದೂರು ತಾಲೂಕಿನ ನಾವುಂದ ಬಡಾಕೆರೆ ಜಲಾವೃತವಾಗಿದೆ. 100ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಮಂಗಳೂರಿನ ಕೆತ್ತಿಕ್ಕಲ್‌ನಲ್ಲಿ ಗುಡ್ಡ ಕುಸಿಯುತ್ತಿದೆ. ಮಣ್ಣಿನ ದಿಬ್ಬ ರಸ್ತೆ ಮೇಲೆ ಬೀಳುವ ಆತಂಕ ಎದುರಾಗಿದೆ. ಪಶ್ಚಿಮಘಟ್ಟ ಪ್ರದೇಶದಲ್ಲಿಯೂ ಮಳೆ ಅಬ್ಬರಿಸುತ್ತಿದೆ. ಬೆಳಗಾವಿಯ ಸಪ್ತ ನದಿಗಳಿಗೆ ಜೀವ ಕಳೆ ಬಂದಿದೆ. ಗೋಕಾಕ್ ಫಾಲ್ಸ್‌ನಲ್ಲಿ ಜಲವೈಭವ ಕಂಡುಬರುತ್ತಿದೆ. ಬೆಳಗಾವಿ-ಸಾವಗಾಂವ ಜಿಲ್ಲಾ ಮುಖ್ಯರಸ್ತೆ ಬಿರುಕು ಬಿಟ್ಟಿರುವುದು ಕಂಡುಬಂದಿದೆ.

  • ವಿಶಾಲ ಗಾಣಿಗ ಮರ್ಡರ್ ಕೇಸ್- ಪೊಲೀಸರ ನಾಲ್ಕು ತಂಡ ರಚನೆ

    ವಿಶಾಲ ಗಾಣಿಗ ಮರ್ಡರ್ ಕೇಸ್- ಪೊಲೀಸರ ನಾಲ್ಕು ತಂಡ ರಚನೆ

    ಉಡುಪಿ: ಜಿಲ್ಲೆ ಬ್ರಹ್ಮಾವರದ ವಿಶಾಲ ಗಾಣಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗೆ ನಾಲ್ಕು ತಂಡ ರಚಿಸಲಾಗಿದೆ. ಉಡುಪಿ, ಮಣಿಪಾಲ ಮತ್ತು ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಜಾಲಾಡುತ್ತಿದ್ದು, ಆರೋಪಿಗೆ ಬಲೆ ಬೀಸಲಾಗಿದೆ.

    ಬ್ರಹ್ಮಾವರ ತಾಲೂಕಿನ ಕುಂಬ್ರಗೋಡು ಎಂಬಲ್ಲಿನ ಮಿಲನ್ ಅಪಾರ್ಟ್ ಮೆಂಟ್ ನಲ್ಲಿ ಸೋಮವಾರ ಮಧ್ಯಾಹ್ನ ವಿಶಾಲ ಗಾಣಿಗ ಅವರ ಕೊಲೆಯಾಗಿತ್ತು. ಮಗಳು ಮನೆಗೆ ಬಂದಿಲ್ಲ ಎಂದು ಹುಡುಕುತ್ತಾ ಬಂದಿದ್ದ ತಂದೆ ವಾಸು ಗಾಣಿಗ ಘಟನೆಯನ್ನು ಮೊದಲು ನೋಡಿ ಬ್ರಹ್ಮಾವರ ಪೊಲೀಸರಿಗೆ ದೂರು ನೀಡಿದ್ದರು.

    ಮಣಿಪಾಲದ ಕೆಎಂಸಿಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದೆ. ಕೊಲೆಗಾರ ಮೃತ ದೇಹದಿಂದ ಚಿನ್ನದ ಬಳೆ, ಕರಿಮಣಿ ಸರ, ಕಿವಿಯೋಲೆ ಕದ್ದು ಪರಾರಿಯಾಗಿದ್ದಾನೆ. ಬ್ಯಾಂಕಿನಿಂದ ತಂದಿದ್ದ ನಗದಿನ ಜೊತೆ ಆರೋಪಿ ಪರಾರಿಯಾಗಿದ್ದು ಮಾಹಿತಿ ಇದ್ದವರೇ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂಬ ಗುಮಾನಿ ಪೊಲೀಸರಿಗೆ ಇದೆ. ಇದನ್ನೂ ಓದಿ: ದೇಶದ ಮೊದಲ ಕೊರೊನಾ ಸೋಂಕಿತನಿಗೆ ಮತ್ತೆ ತಗುಲಿದ ಸೋಂಕು

    ಮಿಲನ್ ಅಪಾರ್ಟ್ ಮೆಂಟ್ ಹೊಸದಾಗಿ ನಿರ್ಮಾಣವಾಗಿದ್ದು ಕಟ್ಟಡಕ್ಕೆ ಇನ್ನೂ ಸಿಸಿಟಿವಿ ಅಳವಡಿಸಿರಲಿಲ್ಲ. ಆರೋಪಿ ಪತ್ತೆಗೆ ಇದು ಸವಾಲಾಗಿದೆ. ಅಪಾರ್ಟ್ ಮೆಂಟ್ ಸುತ್ತಲ ಕಟ್ಟಡಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಜಾಲಾಡುತ್ತಿದ್ದಾರೆ. ಕೊಲೆ ಪ್ರಕರಣದಲ್ಲಿ ಮಹತ್ವದ ಸುಳಿವು ಲಭ್ಯವಾಗಿದ್ದು, ಶೀಘ್ರ ಆರೋಪಿ ಬಂಧನ ಮಾಡುತ್ತೇವೆ ಎಂದು ಎಸ್.ಪಿ. ವಿಷ್ಣುವರ್ಧನ್ ಮಾಹಿತಿ ನೀಡಿದರು. ಇದನ್ನೂ ಓದಿ: ವಾರದ ಹಿಂದೆ ದುಬೈನಿಂದ ಉಡುಪಿಗೆ ಬಂದಿದ್ದ ಮಹಿಳೆ ನಿಗೂಢ ಸಾವು