Tag: Brahmarathotsava

  • ಹುಟ್ಟೂರಿನ ಜಾತ್ರೆಯಲ್ಲಿ ಪಲ್ಲಕ್ಕಿ ಹೊತ್ತು ಸಾಗಿದ ನಟ ಅರ್ಜುನ್ ಸರ್ಜಾ ಕುಟುಂಬ

    ಹುಟ್ಟೂರಿನ ಜಾತ್ರೆಯಲ್ಲಿ ಪಲ್ಲಕ್ಕಿ ಹೊತ್ತು ಸಾಗಿದ ನಟ ಅರ್ಜುನ್ ಸರ್ಜಾ ಕುಟುಂಬ

    ತುಮಕೂರು: ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಹಾಗೂ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮ ಹುಟ್ಟೂರಿನ ಜಾತ್ರೆಯಲ್ಲಿ ದೇವರ ಪಲ್ಲಕ್ಕಿ ಹೊತ್ತು ಸಾಗಿ ಕೃತಾರ್ಥರಾಗಿದ್ದಾರೆ.

    ಮಧುಗಿರಿ ತಾಲೂಕಿನ ಜಕ್ಕೇನಹಳ್ಳಿ ಗ್ರಾಮದ ಅಹೋಬಲ ಲಕ್ಷ್ಮಿ ನರಸಿಂಹಸ್ವಾಮಿ ದೇವರ ಬ್ರಹ್ಮರಥೋತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಿದ್ದಾರೆ. ಅರ್ಜುನ್ ಸರ್ಜಾ ದಂಪತಿ ಹಾಗೂ ಧ್ರುವ ಸರ್ಜಾ ದಂಪತಿ ಈ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಅರ್ಜುನ್ ಸರ್ಜಾ ಹಾಗೂ ಧ್ರುವ ಸರ್ಜಾ ದಂಪತಿ ಮೊದಲು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಪಲ್ಲಕ್ಕಿ ಹೊತ್ತರು. ನಂತರ ತೇರು ಎಳೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ವೇಳೆ ಉಭಯ ನಟರಿಗೆ ಅಭಿಮಾನಿಗಳು ಸುತ್ತುವರೆದು ಸೆಲ್ಫಿಗಾಗಿ ಮುಗಿಬಿದ್ದರು.

    ಬ್ರಹ್ಮರಥೋತ್ಸವಕ್ಕೆ ಗ್ರಾಮಾಂತರ ಶಾಸಕ ಡಿ.ಸಿ ಗೌರಿಶಂಕರ್, ಮಾಜಿ ಶಾಸಕ ಸುರೇಶ್ ಗೌಡ, ಮಾಜಿ ಸಚಿವ ಸೊಗಡು ಶಿವಣ್ಣ, ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ಜಿಲ್ಲಾ ಪಂಚಾಯತ್ ಸದಸ್ಯ ಹುಚ್ಚಯ್ಯ, ತಹಶೀಲ್ದಾರ್ ಮೋಹನ್, ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಸವಿತಾ ಸೇರಿದಂತೆ ಮತ್ತಿತರ ಗಣ್ಯರು ಚಾಲನೆ ನೀಡಿದರು.

    ರಥೋತ್ಸವಕ್ಕೆ ರಾಜ್ಯದ ನಾನಾ ಭಾಗಗಳಿಂದ ಭಕ್ತಗಣ ಸಾವಿರಾರು ಸಂಖ್ಯೆಯಲ್ಲಿ ಹರಿದು ಬಂದಿತ್ತು. ರಥೋತ್ಸವದ ವೇಳೆ ಭಕ್ತರು ರಥಕ್ಕೆ ಬಾಳೆಹಣ್ಣು ಮತ್ತು ಹೂವನ್ನು ಎಸೆಯುವುದು ಕಂಡು ಬಂದಿತು. ಭಕ್ತರಿಗೆ ಅನ್ನ ದಾಸೋಹ, ಮಜ್ಜಿಗೆ, ಪಾನಕದ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾಡಳಿತವು ಜಾತ್ರೆಗೆ ಆಗಮಿಸುವ ಭಕ್ತರಿಗೆ ವಿಶೇಷ ಬಸ್‍ಗಳ ವ್ಯವಸ್ಥೆಯನ್ನು ಕಲ್ಪಿಸಿತ್ತು.

  • ಭಕ್ತನಿಂದ ತಿಮ್ಮಪ್ಪನಿಗೆ 1008 ಸ್ವರ್ಣ ನಾಣ್ಯಗಳ ಹಾರ ಕಾಣಿಕೆ!

    ಭಕ್ತನಿಂದ ತಿಮ್ಮಪ್ಪನಿಗೆ 1008 ಸ್ವರ್ಣ ನಾಣ್ಯಗಳ ಹಾರ ಕಾಣಿಕೆ!

    ತಿರುಪತಿ: ತಿಮ್ಮಪ್ಪನ ವಾರ್ಷಿಕ ಬ್ರಹ್ಮ ರಥೋತ್ಸವ ಶುರುವಾಗಿದ್ದು ಭಕ್ತಾಧಿಗಳು ಹಲವು ಕಾಣಿಕೆಯನ್ನು ಒಪ್ಪಿಸುತ್ತಿದ್ದಾರೆ. ಅಂತೆಯೇ ವಿಜಯವಾಡ ಮೂಲದ ಭಕ್ತರೊಬ್ಬರು ತಿರುಪತಿ ತಿಮ್ಮಪ್ಪನಿಗೆ ಸುಮಾರು 8.36 ಕೋಟಿ ರೂಪಾಯಿ ಮೌಲ್ಯದ ‘ಸಹಸ್ರ ನಾಮ ಮಾಲಾ’ (ಸ್ವರ್ಣ ಹಾರ) ಕಾಣಿಕೆಯಾಗಿ ಅರ್ಪಿಸಿದ್ದಾರೆ.

    ರಾಮಲಿಂಗ ರಾಜು ಎಂಬವರು ಹಬ್ಬ ಮೊದಲನೇ ದಿನದಂದೇ ಸುಮಾರು 28 ಕೆ.ಜಿ ತೂಕದ ವೆಂಕಟೇಶ್ವರನ 1008 ಪವಿತ್ರ ನಾಮಗಳ 1008 ಸ್ವರ್ಣ ನಾಣ್ಯಗಳಿಂದ ಸಿದ್ಧಪಡಿಸಿರುವ ಹಾರವನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಉಪಸ್ಥಿತಿಯಲ್ಲಿ ತಿಮ್ಮಪ್ಪನಿಗೆ ಸಮರ್ಪಿಸಿದ್ದಾರೆ.

    ದೇವಸ್ಥಾನದ ಆಡಳಿತ ಮಂಡಳಿ ಹೇಳುವಂತೆ, ಪ್ರತೀ ವರ್ಷದ ಬ್ರಹ್ಮ ರಥೋತ್ಸವ ಹಬ್ಬದಂದು ಭಕ್ತಾದಿಗಳು ವಿವಿಧ ರೀತಿಯ ಕಾಣಿಕೆಯನ್ನು ತಿಮ್ಮಪ್ಪನಿಗೆ ಒಪ್ಪಿಸುತ್ತಾರೆ. ಅಂತೆಯೆ ರಾಮಲಿಂಗ ರಾಜು ಕೂಡ ದೇವರಿಗೆ ಕಾಣಿಕೆ ನೀಡಿದ್ದಾರೆ.

    ಪ್ರತಿವರ್ಷ ಆಂಧ್ರ ಸರ್ಕಾರ ತಿಮ್ಮಪ್ಪನಿಗೆ ಹಲವಾರು ಕಾಣಿಕೆಯನ್ನು ನೀಡುತ್ತಾ ಬರುತ್ತಿದೆ. ಮೊದಲ ದಿನವಾದ್ದರಿಂದ ಸರ್ಕಾರದ ಪರವಾಗಿ ಚಂದ್ರಬಾಬು ನಾಯ್ಡು ತಿಮ್ಮಪ್ಪನಿಗೆ ರೇಷ್ಮೆ ಉಡುಪನ್ನು ಕಾಣಿಕೆ ನೀಡಿದೆ ಎಂದು ದೇವಸ್ಥಾನ ಮಂಡಳಿಯ ಮೂಲಗಳು ತಿಳಿಸಿವೆ.