Tag: Brahmagiri Hill

  • ತಲಕಾವೇರಿ ಬ್ರಹ್ಮಗಿರಿ ಬೆಟ್ಟ ಕುಸಿತ ಪ್ರಕರಣ – ಕಾರ್ಯಾಚರಣೆ ಸ್ಥಗಿತ?

    ತಲಕಾವೇರಿ ಬ್ರಹ್ಮಗಿರಿ ಬೆಟ್ಟ ಕುಸಿತ ಪ್ರಕರಣ – ಕಾರ್ಯಾಚರಣೆ ಸ್ಥಗಿತ?

    ಮಡಿಕೇರಿ: ಕೊಡಗಿನ ತಲಕಾವೇರಿ ಬ್ರಹ್ಮಗಿರಿ ಬೆಟ್ಟ ಕುಸಿದು ಇಬ್ಬರು ನಾಪತ್ತೆಯಾಗಿ 15 ದಿನಗಳೇ ಕಳೆದಿವೆ. ಈ ಇಬ್ಬರ ಹುಡುಕಾಟಕ್ಕಾಗಿ ಎನ್.ಡಿ.ಆರ್.ಎಫ್, ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಸೇರಿದ್ದಂತೆ 100ಕ್ಕೂ ಹೆಚ್ಚು ಜನರು ನಿರಂತರ ಹುಡುಕಾಟ ನಡೆಸುತ್ತಲೇ ಇದ್ದಾರೆ.

    ಭೂಕುಸಿತದಲ್ಲಿ ಕಣ್ಮರೆಯಾಗಿದ್ದ ಕೇರಳದ ಶ್ರೀನಿವಾಸ್ ಮತ್ತು ನಾರಾಯಣ ಆಚಾರ್ ಅವರ ಪತ್ನಿ ಶಾಂತಾ ಈ ಇಬ್ಬರು ಇನ್ನೂ ಪತ್ತೆಯಾಗಿಲ್ಲ. ಹುಡುಕಾಟ ನಡೆಸಿರುವ ಎನ್.ಡಿ.ಆರ್.ಎಫ್ ತಂಡದ ಕಮಾಂಡರ್ ಇದುವರೆಗೆ ಎಷ್ಟು ಸಾಧ್ಯವೋ ಅಷ್ಟು ಹುಡುಕಿದ್ದೇವೆ. ಮಳೆ ಕೂಡ ಬಿಟ್ಟು ಬಿಟ್ಟು ಬರುತ್ತಲೇ ಇದ್ದು, ಭಾರೀ ಪ್ರಮಾಣದ ಮಂಜು ಸುರಿಯುತ್ತಿದೆ. ಹೀಗಾಗಿ ಇನ್ನೂ ಹುಡುಕಾಡುವುದು ಸವಾಲಿನ ಕೆಲಸ ಎನ್ನುತ್ತಿದ್ದಾರೆ.

    ಒಂದು ವೇಳೆ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಂಡಲ್ಲಿ ಕಳೆದ ಎರಡು ವರ್ಷಗಳಲ್ಲಿ ಭೂಕುಸಿತದಲ್ಲಿ ಕಣ್ಮರೆ ಆಗಿರುವವರನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿದ ರೀತಿಯಲ್ಲಿ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗುವುದು ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಬ್ರಹ್ಮಗಿರಿ ಬೆಟ್ಟ ಕುಸಿದು ಐದು ಜನರು ಕಣ್ಮರೆಯಾಗಿದ್ದರು. ಬಳಿಕ ಅರ್ಚಕ ನಾರಾಯಣ ಆಚಾರ್ ಅವರ ಸಹೋದರ ಆನಂದತೀರ್ಥ ಮತ್ತು ಸಹಾಯಕ ಅರ್ಚಕ ರವಿಕಿರಣ್ ಅವರ ಮೃತದೇಹಗಳು ಪತ್ತೆಯಾಗಿದ್ದವು. ಇನ್ನುಳಿದ ಇಬ್ಬರಿಗಾಗಿ ರಕ್ಷಣಾ ತಂಡಗಳು ನಿರಂತರ ಹುಡುಕಾಟ ನಡೆಸುತ್ತಿದ್ದವು. ಅದರೆ ಇಂದಿಗೂ ಮೃತ ದೇಹ ದೊರಕ್ಕಿಲ್ಲ. ಹೀಗಾಗಿ ಬಹುತೇಕ ಇಂದು ಸಂಜೆಯಿಂದ ಕಾರ್ಯಚರಣೆ ಸ್ಥಗಿತ ಮಾಡುವುದಾಗಿ ಎನ್.ಡಿ.ಆರ್.ಎಫ್ ತಿಳಿಸಿದೆ.

  • ಬ್ರಹ್ಮಗಿರಿ ಬೆಟ್ಟದಲ್ಲಿ ಮತ್ತೊಂದು ಮೃತದೇಹ ಪತ್ತೆ – ಗುರುತಿಸಲಾಗದಷ್ಟು ಕೊಳೆತ ಶವ

    ಬ್ರಹ್ಮಗಿರಿ ಬೆಟ್ಟದಲ್ಲಿ ಮತ್ತೊಂದು ಮೃತದೇಹ ಪತ್ತೆ – ಗುರುತಿಸಲಾಗದಷ್ಟು ಕೊಳೆತ ಶವ

    ಮಡಿಕೇರಿ: ಸತತ 10 ದಿನಗಳ ನಂತರ ಪತ್ತೆ ಹಚ್ವಲು ಸಾಧ್ಯವಾಗದಂತಹ ಸ್ಥಿತಿಯಲ್ಲಿ ಮತ್ತೊಂದು ಮೃತದೇಹ ನಾಗತೀರ್ಥ ಸಮೀಪ ಪತ್ತೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

    ಬ್ರಹ್ಮಗಿರಿ ಬೆಟ್ಟದಲ್ಲಿ ಇಂದು ಮತ್ತೊಂದು ಶವ ಪತ್ತೆಯಾಗಿದ್ದು, ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಅರ್ಚಕ ನಾರಾಯಣಾಚಾರ್ ಪತ್ತೆಯಾದ ಸ್ಥಳದಿಂದ ಬಹುದೂರದಲ್ಲಿ ಮೃತದೇಹ ಪತ್ತೆಯಾಗಿದೆ. ಆದರೆ ಮೃತದೇಹ ಹೆಣ್ಣು ಅಥವಾ ಗಂಡು ಎಂದು ಗುರುತಿಸಲಾಗದಷ್ಟು ಕೊಳೆತಿದೆ. ಮಾಹಿತಿ ತಿಳಿದ  ಸಚಿವ ಸೋಮಣ್ಣ ಮತ್ತು ಸಂಸದ ಪ್ರತಾಪ ಸಿಂಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಕೊಡಗಿನ ತಲಕಾವೇರಿಯಲ್ಲಿ ಭೂಕುಸಿತ ಸಂಭವಿಸಿ ಕಣ್ಮರೆಯಾಗಿದ್ದ ಐವರ ಪೈಕಿ ಪ್ರಸ್ತುತ ಮೂವರ ಮೃತದೇಹಗಳು ಸಿಕ್ಕಿದೆ. ಹತ್ತು ದಿನಗಳ ಬಳಿಕ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಮತ್ತೊಂದು ಮೃತದೇಹ ಪತ್ತೆಯಾಗಿದೆ. ನಾರಾಯಣ ಆಚಾರ್ ಮೃತದೇಹ ಪತ್ತೆಯಾದ ಜಾಗದ ಅನತಿ ದೂರದಲ್ಲಿ ಪತ್ತೆಯಾಗಿದೆ. ಆದರೆ ಅದು ಮಹಿಳೆ ಅಥವಾ ಪುರುಷನದೋ ಎಂದು ತಿಳಿಯುತ್ತಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹ ಯಾರದ್ದೆಂದು ತಿಳಿಯಲಿದೆ. ಸಂಜೆ ಶವ ಸಂಸ್ಕಾರ ನಡೆಯಲಿದೆ. ಯಾವುದೇ ಕಾರಣಕ್ಕೂ ಕಾರ್ಯಾಚರಣೆಯನ್ನು ಕೈ ಬಿಡುವುದಿಲ್ಲ ಎಂದು ಸಚಿವ ಸೋಮಣ್ಣ ತಿಳಿಸಿದರು.

    ಈ ಹಿಂದೆ ಬೆಟ್ಟ ಕುಸಿದ ಆರು ದಿನಗಳ ನಂತರ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದ ಕಾರ್ಯಾಚರಣೆಯಲ್ಲಿ ಪ್ರಪಾತದಲ್ಲಿ ನಾರಾಯಣಾಚಾರ್ ಆಚಾರ್ಯ ಮೃತದೇಹ ಪತ್ತೆಯಾಗಿತ್ತು. ನಾರಾಯಣಾಚಾರ್ ಆಚಾರ್ಯ ಮೃತದೇಹ ಮನೆಯಿಂದ ಅರ್ಧ ಕಿ.ಮೀ ದೂರಕ್ಕೆ ಕೊಚ್ಚಿಕೊಂಡು ಹೋಗಿತ್ತು. ಹೀಗಾಗಿ ಪ್ರಪಾತದಲ್ಲಿ ಶವ ಪತ್ತೆಯಾಗಿತ್ತು.

  • ಸ್ವಯಂಕೃತ ಅಪರಾಧದಿಂದ ‘ಕಾವೇರಿ’ ಕೋಪಕ್ಕೆ ತುತ್ತಾದರಾ ಕೊಡಗಿನ ಜನ?

    ಸ್ವಯಂಕೃತ ಅಪರಾಧದಿಂದ ‘ಕಾವೇರಿ’ ಕೋಪಕ್ಕೆ ತುತ್ತಾದರಾ ಕೊಡಗಿನ ಜನ?

    ಮಡಿಕೇರಿ: ಕೊಡಗಿನ ಕುಲದೇವತೆ ಕಾವೇರಿ ಮಾತೆಯ ಭಕ್ತರು ನಾಡಿನೆಲ್ಲೆಡೆ ಇದ್ದಾರೆ. ತಲಕಾವೇರಿಯಲ್ಲಿ ಹುಟ್ಟಿ ನಾಡಿನುದ್ದಕ್ಕೂ ಜೀವಕಳೆ ತುಂಬುವ ಜೀವನದಿ. ಆದರೆ ಕೊಡಗಿನ ಜನರಿಗೆ ಮಾತ್ರ ಕಣ್ಣೀರು ತರಿಸುತ್ತಿದ್ದಾಳೆ. ಕಾವೇರಿ ನದಿ ಹೀಗೆ ತನ್ನೊಡಲ ಜನರಿಗೆ ಸಂಕಷ್ಟ ತಂದಿಟ್ಟಿರುವುದಕ್ಕೆ ಜನರ ಸ್ವಯಂಕೃತ ಅಪರಾಧವೇ ಕಾರಣ ಎಂದು ತಲಕಾವೇರಿ ಮೂಲಸ್ವರೂಪ ರಕ್ಷಣಾ ಸಮಿತಿ ಆರೋಪ ಮಾಡಿದೆ.

    2005 ರಲ್ಲಿ ತಲಕಾವೇರಿಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಹಲವು ಕಾಮಗಾರಿಗಳನ್ನು ಮಾಡಲಾಯಿತು. ಇದರ ಪರಿಣಾಮ ಬ್ರಹ್ಮಗಿರಿ ಬೆಟ್ಟದಲ್ಲಿ ಹುಟ್ಟಿ ಬ್ರಹ್ಮಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗುತ್ತಿದ್ದಳು. ಆದರೆ ಅಭಿವೃದ್ಧಿ ಹೆಸರಿನಲ್ಲಿ ಬ್ರಹ್ಮಕುಂಡಿಕೆ ಮತ್ತು ತೀರ್ಥಕೊಳಗಳಿಗೆ ಕಲ್ಲು ಮತ್ತು ಸಿಮೆಂಟ್ ನಿಂದ ಕಾಮಗಾರಿ ಮಾಡಲಾಯಿತು. ಇದರಿಂದಾಗಿ ಕಾವೇರಿ ಜಲಮೂಲವೇ ಬದಲಾಯಿತು. ಇದರಿಂದಾಗಿ ಇಡೀ ಬೆಟ್ಟವೇ ಕುಸಿದು ಇಂತಹ ಘನಘೋರ ಸ್ಥಿತಿ ನಿರ್ಮಾಣವಾಗಿದೆ ಎಂದು ಸಮಿತಿ ಮುಖಂಡರು ಗಂಭೀರ ಆರೋಪ ಮಾಡುತ್ತಿದ್ದಾರೆ.

    ತಲಕಾವೇರಿಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಮಾಡಿದ ಕಾಮಗಾರಿಯಿಂದ ಜಲಮೂಲ ದಿಕ್ಕು ಬದಲಾಯಿಸಿ, ಕುಸಿದಿರುವ ಗಜಗಿರಿ ಬೆಟ್ಟದ ಕಡೆಗೆ ಭೂಮಿಯೊಳಗೆ ಹರಿಯಲು ಆರಂಭಿಸಿತ್ತು. ಈ ಕುರಿತು ಅಷ್ಟಮಂಗಲ ಪ್ರಶ್ನೆಯಲ್ಲೂ ಗೊತ್ತಾಗಿತ್ತು. ಬಳಿಕ ಭೂಗರ್ಭಶಾಸ್ತ್ರಜ್ಞರು ಕೂಡ ಸ್ಪಷ್ಟಪಡಿಸಿದ್ದರು. ಗಜಗಿರಿ ಬೆಟ್ಟದ ಕಡೆಗೆ ಹರಿಯುತ್ತಿದ್ದ ಜಲಮೂಲ ಕಳೆದ ಒಂದು ವರ್ಷದಿಂದ ಅರ್ಚಕ ನಾರಾಯಣ ಆಚಾರ್ ಅವರ ಮನೆ ಬಳಿ ಬರಲು ಆರಂಭಿಸಿತ್ತು. ಆಗಲೇ ಅಷ್ಟಮಂಗಲ ಪ್ರಶ್ನೆ ಸಂದರ್ಭ ಇಲ್ಲಿ ಜಲಗಂಡಾಂತರ ಇದೆ ಎಂದು ಗೊತ್ತಾಗಿತ್ತು. ತಕ್ಷಣವೇ ತಮ್ಮ ಮನೆಯನ್ನು ಖಾಲಿ ಮಾಡುವಂತೆ ಅರ್ಚಕರಿಗೆ ಹಲವು ಬಾರಿ ಹೇಳಿದ್ದೆವು ಎಂದು ಸಮಿತಿ ಸದಸ್ಯರು ತಿಳಿಸಿದ್ದಾರೆ.

    ಈಗ ಗಜಗಿರಿ ಬೆಟ್ಟ ಕುಸಿದಿರುವ ಸ್ಥಳದಲ್ಲಿ ಭಾರೀ ಪ್ರಮಾಣದಲ್ಲಿ ಹರಿಯುತ್ತಿರುವ ಜಲವೇ ಅದೆಲ್ಲವನ್ನೂ ಸ್ಪಷ್ಟಪಡಿಸುತ್ತದೆ ಎನ್ನುತ್ತಾರೆ ಮೂಲ ಸ್ವರೂಪ ರಕ್ಷಣಾ ವೇದಿಕೆ ಮುಖಂಡ ಸೋಮಣ್ಣ.

  • ಸರ್ಕಾರ ಹೇಳಿದ್ರೂ ಸಂಪತ್ತಿನ ಆಸೆಯಿಂದ ಮನೆ ತೊರೆಯಲಿಲ್ವಾ ನಾರಾಯಣಾಚಾರ್?

    ಸರ್ಕಾರ ಹೇಳಿದ್ರೂ ಸಂಪತ್ತಿನ ಆಸೆಯಿಂದ ಮನೆ ತೊರೆಯಲಿಲ್ವಾ ನಾರಾಯಣಾಚಾರ್?

    – ಬೆಂಗಳೂರಲ್ಲಿ 2 ಸೈಟ್, ಮಡಿಕೇರಿಯಲ್ಲಿ 100 ಎಕರೆ ಕಾಫಿ ತೋಟ
    – ಮನೆಯಲ್ಲಿ 30 ಕ್ವಿಂಟಾಲ್ ಕಾಳು ಮೆಣಸು, 10 ಕ್ವಿಂಟಾಲ್ ಏಲಕ್ಕಿ
    – ಮನೆ ತೊರೆಯದ ಬಗ್ಗೆ ಸ್ಥಳೀಯ ನಿವಾಸಿಗಳ ಮಾತು

    ಮಡಿಕೇರಿ: ಬ್ರಹ್ಮಗಿರಿ ಬೆಟ್ಟ ಕುಸಿದು ಪ್ರಾಣ ಕಳೆದುಕೊಂಡಿರುವ ನಾರಾಯಣಾಚಾರ್ ಅಪಾರ ಸಂಪತ್ತು ಹೊಂದಿದ್ದಾರೆ. ಹೀಗಾಗಿ ಸಂಪತ್ತನ್ನು ಉಳಿಸಲು ಹೋಗಿ ಮನೆ ಖಾಲಿ ಮಾಡದೇ ಅರ್ಚಕರು ಜೀವ ಕಳೆದುಕೊಂಡಿರಬಹುದು ಎಂಬ ಮಾತು ಕೇಳಿ ಬರುತ್ತಿದೆ. ಇದನ್ನೂ ಓದಿ: ಮನೆಯಿಂದ ಅರ್ಧ ಕಿ.ಮೀ ದೂರದಲ್ಲಿ ನಾರಾಯಣಾಚಾರ್ ಮೃತದೇಹ ಪತ್ತೆ

    ಮನೆ ಖಾಲಿ ಮಾಡುವಂತೆ ಮಡಿಕೇರಿ ತಹಶೀಲ್ದಾರ್ ಎಚ್ಚರಿಕೆ ಕೊಟ್ಟಿದ್ದರು. ಆದರೆ ಅಪಾರ ಆಸ್ತಿ ಹೊಂದಿದ್ದ ನಾರಾಯಣಚಾರ್ ಅವರು ಮನೆ ತೊರೆದರೆ ಸಂಗ್ರಹಿಸಿದ ಸಂಪತ್ತು ಮತ್ತು ಕೃಷಿ ಉತ್ಪನ್ನಗಳು ಏನಾಗಬಹುದು ಎಂಬ ಚಿಂತೆ ಕಾಡಿರಬಹುದು. ಈ ಕಾರಣಕ್ಕೆ ಅವರು ಮನೆಯನ್ನು ತೊರೆಯಲು ಹಿಂದೇಟು ಹಾಕಿರಬಹುದು ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

    ಸಂಪತ್ತು ಎಷ್ಟಿತ್ತು?
    ನಾರಾಯಣಾಚಾರ್ ಮನೆಯಲ್ಲಿ 30 ಕ್ವಿಂಟಾಲ್ ಕಾಳು ಮೆಣಸು, 10 ಕ್ವಿಂಟಾಲ್ ಏಲಕ್ಕಿ ಇತ್ತು. ಇವೆರಡೂ ಪದಾರ್ಥಗಳ ಬೆಲೆಯೇ ಬರೋಬ್ಬರಿ 35 ಲಕ್ಷಕ್ಕೂ ಅಧಿಕ ಇತ್ತು. 50 ಬಾಟಲಿ ಜೇನು ಇತ್ತು. ಹೀಗಾಗಿ ಪದಾರ್ಥಗಳನ್ನು ಬಿಟ್ಟು ಮನೆ ಖಾಲಿ ಮಾಡಲು ಅರ್ಚಕರು ಹಿಂದೇಟು ಹಾಕುತ್ತಿದ್ದರು.

    ಒಂದು ಡಸ್ಟರ್, ಅಂಬಾಸಿಡರ್ ಕಾರು, 30ಕ್ಕೂ ಹಸುಗಳನ್ನ ಹೊಂದಿದ್ದರು. ಅಲ್ಲದೇ ಕೊಡಗಿನ ಸುತ್ತ ಮುತ್ತ 100 ಎಕರೆ ಕಾಫಿ ತೋಟ ಹೊಂದಿದ್ದರು. ಜೊತೆಗೆ ಬೆಂಗಳೂರಿನಲ್ಲಿ 2 ಸೈಟ್ ಹೊಂದಿದ್ದಾರೆ. ಈ ಮೂಲಕ ನಾರಾಯಣಾಚಾರ್ ಕೋಟ್ಯಂತರ ರೂಪಾಯಿ ಆಸ್ತಿಯ ಒಡೆಯರಾಗಿದ್ದರು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಆಸ್ತಿ ಇದೆ ಎಂಬುದರ ಬಗ್ಗೆ ಅಧಿಕೃತವಾಗಿ ದೃಢಪಟ್ಟಿಲ್ಲ.

    ಆಚಾರ್ ಮನೆಯಲ್ಲಿ ಅಪಾರ ಪ್ರಮಾಣದ ನಾಣ್ಯಗಳು ಇರಬಹುದು. ಬ್ರಹ್ಮಕುಂಡಿಕೆಯಲ್ಲಿ ಹಾಕಲಾಗುತ್ತಿದ್ದ ನಾಣ್ಯಗಳನ್ನು ಆಚಾರ್ ಕೊಂಡ್ಯೊಯುತ್ತಿದ್ದರು. ಈ ಹಿನ್ನೆಲೆಯಲ್ಲಿ ಒಂದು ಕೋಣೆಯಲ್ಲಿ ನಾಣ್ಯಗಳನ್ನು ಸಂಗ್ರಹಿಸಿ ಇಟ್ಟಿರಬಹುದು ಎಂಬ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

    ತಲಕಾವೇರಿ ದೇವಸ್ಥಾನದ ಮುಖ್ಯಸ್ಥ ಕೋಡಿ ಮೋಟಯ್ಯ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನಾರಾಯಣಾಚಾರ್ ಮೂಲತಃ ಅರ್ಚಕ ಹಾಗೂ ಕೃಷಿಕ ಕುಟುಂಬದಿಂದ ಬಂದಿದ್ದಾರೆ. ಹೀಗಾಗಿ ಸಂಪತ್ತು ಹೊಂದಿರುವುದು ಸಹಜ. ಅವರಿಗೆ ಕಾಫಿ, ಏಲಕ್ಕಿ ತೋಟವಿದೆ. ಹಾಗೆಯೇ ಅವರ ಕುಟುಂಬ ತಲೆ, ತಲಾಂತರಗಳಿಂದ ಅರ್ಚಕ ವೃತ್ತಿಯನ್ನು ಮಾಡುತ್ತಿದೆ. ಅಲ್ಲದೆ ಮಕ್ಕಳಿಬ್ಬರು ವಿದೇಶದಲ್ಲಿ ಇರುವುದರಿಂದ ಸಹಜವಾಗಿಯೇ ಹಣವನ್ನು ಸಂಗ್ರಹಿಸಿರಬಹುದು ಎಂದಿದ್ದಾರೆ.

    ನಾರಾಯಣಾಚಾರ್ ಅವರಿಗೆ ಬೆಂಗಳೂರಿನಲ್ಲೂ ಸ್ವಂತ ಮನೆ ಆಸ್ತಿ ಇದೆ. ಅದನ್ನು ಅವರೇ ನನ್ನ ಬಳಿ ಹೇಳಿದ್ದರು. ಅತೀವ ಪ್ರಮಾಣದಲ್ಲಿ ಏಲಕ್ಕಿ, ಮೆಣಸು ಬೆಳೆಯುತ್ತಿದ್ದರು. ದೇವಸ್ಥಾನದಿಂದಲೂ ಅವರಿಗೆ ಹೆಚ್ಚು ಆದಾಯವಿತ್ತು. ಅಷ್ಟು ಪ್ರಮಾಣದ ಆಸ್ತಿ ಇಲ್ಲದಿದ್ದರೂ ಮನೆಯಲ್ಲಿ ಹೆಣ್ಣುಮಕ್ಕಳು ಇದ್ದ ಕಾರಣ ಒಡವೆಗಳನ್ನು ಇಟ್ಟಿರಬಹುದು ಎಂದು ನಾರಾಯಣಾಚಾರ್ ಅಪಾರ ಸಂಪತ್ತನ್ನು ಹೊಂದಿದ್ದಾರೆ ಎನ್ನುವ ಊಹಾಪೋಹಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ.

  • ಮನೆಯಿಂದ ಅರ್ಧ ಕಿ.ಮೀ ದೂರದಲ್ಲಿ ನಾರಾಯಣಾಚಾರ್ ಮೃತದೇಹ ಪತ್ತೆ

    ಮನೆಯಿಂದ ಅರ್ಧ ಕಿ.ಮೀ ದೂರದಲ್ಲಿ ನಾರಾಯಣಾಚಾರ್ ಮೃತದೇಹ ಪತ್ತೆ

    ಮಡಿಕೇರಿ: ಸತತ ಆರು ದಿನಗಳ ನಂತರ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದ ಕಾರ್ಯಾಚರಣೆಯಲ್ಲಿ ಪ್ರಪಾತದಲ್ಲಿ ಮತ್ತೊಂದು ಮೃತದೇಹ ಪತ್ತೆಯಾಗಿದೆ.

    ಮಣ್ಣಿನಡಿ ಸಿಲುಕಿದ್ದ ಮತ್ತೊಂದು ಮೃತ ದೇಹ ಪತ್ತೆಯಾಗಿದ್ದು, ನಾರಾಯಣಾಚಾರ್ ಆಚಾರ್ಯ ಮೃತದೇಹ ಎಂದು ಗುರುತಿಸಲಾಗಿದೆ. ಕಂದಕದ ಕೆಳಗಿರುವ ಸಿಬ್ಬಂದಿ ಈ ಬಗ್ಗೆ ಮಾಹಿತಿ ನೀಡಿದ್ದು, ಸ್ಥಳಿಯ ಸರ್ಕಲ್ ಇನ್ಸ್‌ಪೆಕ್ಟರ್ ನಾರಾಯಣಾಚಾರ್ ಆಚಾರ್ಯ ಮೃತದೇಹ ಎಂದು ಗುರುತು ಪತ್ತೆ ಮಾಡಿದ್ದಾರೆ.

    ನಾರಾಯಣಾಚಾರ್ ಆಚಾರ್ಯ ಮೃತದೇಹ ಮನೆಯಿಂದ ಅರ್ಧ ಕಿ.ಮೀ ದೂರಕ್ಕೆ ಕೊಚ್ಚಿಕೊಂಡು ಹೋಗಿತ್ತು. ಹೀಗಾಗಿ ಪ್ರಪಾತದಲ್ಲಿ ಶವ ಪತ್ತೆಯಾಗಿದೆ. ಸಿಬ್ಬಂದಿ ಮೃತದೇಹ ಹೊರತೆಗೆದು ಮೇಲಕ್ಕೆ ತರುತ್ತಿದ್ದಾರೆ. ಇತ್ತ ಆಪರೇಷನ್ ಬ್ರಹ್ಮಗಿರಿ ನಡೆಯುತ್ತಿರುವ ಸ್ಥಳದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಇದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.

    ಇಂದು ಬೆಳಗ್ಗೆ ನಾರಾಯಣ ಆಚಾರ್ ಬಳಸುತ್ತಿದ್ದ ರೆನಾಲ್ಟ್ ಡಸ್ಟರ್ ಮತ್ತು ಓಮ್ನಿ ಎರಡು ಕಾರುಗಳು ಪತ್ತೆಯಾಗಿದ್ದವು. ಜೊತೆಗೆ ಒಂದು ಬೈಕ್ ಮತ್ತು ನಾಯಿಯ ಮೃತದೇಹ ಪತ್ತೆಯಾಗಿತ್ತು. ಎರಡು ಕಾರುಗಳು ಸಂಪೂರ್ಣ ನುಜ್ಜು-ಗುಜ್ಜಾಗಿದ್ದವು.

  • ಬ್ರಹ್ಮಗಿರಿ ಬೆಟ್ಟ ಕುಸಿತ ಪ್ರಕರಣ – 60 ಅಡಿ ಆಳದಲ್ಲಿ ಅರ್ಚಕರ ಎರಡು ಕಾರು ಪತ್ತೆ

    ಬ್ರಹ್ಮಗಿರಿ ಬೆಟ್ಟ ಕುಸಿತ ಪ್ರಕರಣ – 60 ಅಡಿ ಆಳದಲ್ಲಿ ಅರ್ಚಕರ ಎರಡು ಕಾರು ಪತ್ತೆ

    ಮಡಿಕೇರಿ: ತಲಕಾವೇರಿಯ ಬ್ರಹ್ಮಗಿರಿಯಲ್ಲಿ ಬೆಟ್ಟ ಕುಸಿದು ಕಣ್ಮರೆಯಾಗಿದ್ದವರಿಗೆ ಎನ್‌ಡಿಆರ್‌ಎಫ್ ತಂಡ ತೀವ್ರ ಶೋಧ ನಡೆಸುತ್ತಿದೆ. ಇದೀಗ ಕಣ್ಮರೆಯಾದ ಪ್ರಧಾನ ಅರ್ಚಕರಾದ ನಾರಾಯಣ ಆಚಾರ್ ಅವರು ಬಳಸುತ್ತಿದ್ದ ಎರಡು ಕಾರುಗಳು ಪತ್ತೆಯಾಗಿವೆ.

    ಕಳೆದ ನಾಲ್ಕು ದಿನಗಳಿಂದ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್‌, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೆಳಗ್ಗೆಯಿಂದಲೇ ಕಣ್ಮರೆಯಾದವರಿಗೆ ತೀವ್ರವಾದ ಹುಡುಕಾಟವನ್ನು ಪ್ರಾರಂಭಿಸಿದ್ದಾರೆ. ಈ ವೇಳೆ ನಾರಾಯಣ ಆಚಾರ್ ಬಳಸುತ್ತಿದ್ದ ರೆನಾಲ್ಟ್ ಡಸ್ಟರ್ ಹಾಗೂ ಮತ್ತೊಂದು ಓಮ್ನಿ ಎರಡು ಕಾರುಗಳು ಪತ್ತೆಯಾಗಿವೆ.

    ಎರಡು ಕಾರುಗಳು ಸಂಪೂರ್ಣ ನುಜ್ಜು-ಗುಜ್ಜಾಗಿವೆ. ನಾರಾಯಣ ಆಚಾರ್ ಶೆಡ್‍ನಲ್ಲಿ ಇದ್ದ ಎರಡು ಕಾರುಗಳು ಇಂದು ಕಾರ್ಯಾಚರಣೆ ವೇಳೆ ಪತ್ತೆಯಾಗಿದೆ. ಜೊತೆಗೆ ಅರ್ಚಕರಿಗೆ ಸೇರಿದ ವಸ್ತುಗಳು ಪತ್ತೆಯಾಗುತ್ತಿವೆ. ಆದರೆ ಇನ್ನೂ ನಾರಾಯಣ ಆಚಾರ್ ಹಾಗೂ ಉಳಿದ ನಾಲ್ವರ ಮೃತದೇಹ ಪತ್ತೆಯಾಗಿಲ್ಲ.

    ಈಗಾಗಲೇ ಘಟನಾ ಸ್ಥಳದಲ್ಲಿ ಜೆಸಿಬಿ ಹಾಗೂ ಹಿಟಾಚಿಗಳು ತೀವ್ರ ಶೋಧ ನಡೆಸುತ್ತಿವೆ. ಒಟ್ಟು 60 ಸಿಬ್ಬಂದಿ ಉಳಿದ ನಾಲ್ವರ ಕುರುಹುಗಾಗಿ ಶೋಧ ಮಾಡುತ್ತಿದ್ದಾರೆ. ಅನಂದ್ ತೀರ್ಥ ಅವರ ಮೃತದೇಹವನ್ನು ಇಂದು ಅಂತ್ಯಕ್ರಿಯೆ ಮಾಡುವ ಸಾಧ್ಯತೆ ಇದೆ.

  • ನಾಲ್ಕು ಮೃತದೇಹ ಸಿಗೋವರೆಗೂ ಕಾರ್ಯಾಚರಣೆ ನಿಲ್ಲಿಸಲ್ಲ: ಸಚಿವ ಸೋಮಣ್ಣ

    ನಾಲ್ಕು ಮೃತದೇಹ ಸಿಗೋವರೆಗೂ ಕಾರ್ಯಾಚರಣೆ ನಿಲ್ಲಿಸಲ್ಲ: ಸಚಿವ ಸೋಮಣ್ಣ

    ಮಡಿಕೇರಿ: ಕೊಡಗಿನ ಭಾಗಮಂಡಲ ಬ್ರಹ್ಮಗಿರಿ ಬೆಟ್ಟದಲ್ಲಿ ನಡೆಯುತ್ತಿರುವ ಆಪರೇಷನ್ ಬ್ರಹ್ಮಗಿರಿ ಕಾರ್ಯಾಚರಣೆ ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ. ಮಣ್ಣಿನಲ್ಲಿ ಹೂತು ಹೋಗಿರುವ ನಾಲ್ಕು ಮೃತದೇಹಗಳು ಸಿಗುವವರೆಗೂ ಕಾರ್ಯಚರಣೆ ಮಾಡುತ್ತೀವಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವಿ.ಸೋಮಣ್ಣ ಅವರು, ಬೆಟ್ಟ ಕುಸಿತವಾದ ನಂತರ ಸರ್ಕಾರ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದೆ. ಒಬ್ಬರ ಮೃತದೇಹ ಸಿಕ್ಕಿದ ಮೇಲೆ ಮೂರು ದಿನಗಳಿಂದ ಎನ್‍ಡಿಎಫ್‍ಆರ್ ತಂಡ, ಪೊಲೀಸ್, ಅಗ್ನಿಶಾಮಕ ದಳದವರು ಸೇರಿ ನಿರಂತರವಾಗಿ ಕಾರ್ಯಾಚರಣೆ ಮಾಡುತ್ತಿದೆ. ಅರ್ಚಕರ ಮನೆಯ ಮಂಚ, ಕುರ್ಚಿಗಳು 60 ಅಡಿಯ ಆಳದಲ್ಲಿ ಬಿದ್ದಿವೆ. ಈಗ ಆ ಪ್ರದೇಶದಲ್ಲೂ ಹುಡುಕಾಟ ಮಾಡುತ್ತಿದ್ದೀವಿ ಎಂದರು.

    ಮಣ್ಣಿನಲ್ಲಿ ಹೂತು ಹೋಗಿರುವ ನಾಲ್ಕು ಮೃತ ದೇಹಗಳು ಸಿಗುವವರೆಗೂ ಕಾರ್ಯಚರಣೆ ಮಾಡುತ್ತೀವಿ. ಸ್ಥಳಕ್ಕೆ ಶ್ವಾನ ದಳವನ್ನು ಕರೆಸಲಾಗಿದೆ. ಆದರೆ ಮಳೆ ಬರುತ್ತಿರುವುದರಿಂದ ವಾಸನೆ ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲ. ಯಾವ ಯಾವ ರೀತಿ ಶೋಧಕಾರ್ಯ ಮಾಡಬೇಕೋ ಎಲ್ಲವನ್ನು ಸರ್ಕಾರ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಕಾರ್ಯಾಚರಣೆ ನಿಲ್ಲಿಸುವ ತೀರ್ಮಾನಕ್ಕೆ ಬರುವುದಿಲ್ಲ ಎಂದು ಸೋಮಣ್ಣ ಸ್ಪಷ್ಟಪಡಿಸಿದರು.

    ಪೂಜೆ ನಿಂತಿರುವ ತಲಕಾವೇರಿಯಲ್ಲಿ ಇವತ್ತು ಅಥವಾ ನಾಳೆಯಿಂದ ಪೂಜೆ ಆರಂಭ ಮಾಡುತ್ತೀವಿ. ಮೃತದೇಹ ಸಿಗುವವರೆಗೂ ಪೂಜೆ ಬೇಡ ಎಂಬ ತೀರ್ಮಾನ ಮಾಡಿಲ್ಲ. ನಾಳೆಯೊಳಗೆ ಪೂಜೆ ಶುರು ಮಾಡುತ್ತೀವಿ ಎಂದು ಹೇಳಿದ್ದಾರೆ.

  • ಬ್ರಹ್ಮಗಿರಿ ಬೆಟ್ಟ ಕುಸಿದು ಇಂದಿಗೆ ಆರು ದಿನ – ಆಸ್ಟ್ರೇಲಿಯಾದಿಂದ ಬಂದ ಮಕ್ಕಳ ಆಕ್ರಂದನ

    ಬ್ರಹ್ಮಗಿರಿ ಬೆಟ್ಟ ಕುಸಿದು ಇಂದಿಗೆ ಆರು ದಿನ – ಆಸ್ಟ್ರೇಲಿಯಾದಿಂದ ಬಂದ ಮಕ್ಕಳ ಆಕ್ರಂದನ

    – ಕಾರ್ಯಾಚರಣೆ ಮುಂದುವರಿಕೆ

    ಮಡಿಕೇರಿ: ಕೊಡಗಿನ ಭಾಗಮಂಡಲದ ಬ್ರಹ್ಮಗಿರಿ ಬೆಟ್ಟ ಕುಸಿದು ಆರು ದಿನಗಳಾಗಿವೆ. ದುರಂತದಲ್ಲಿ ಐವರು ಭೂ ಸಮಾಧಿಯಾಗಿದ್ದಾರೆ. ಇದುವರೆಗೂ ಒಂದು ಮೃತ ದೇಹ ಮಾತ್ರ ಪತ್ತೆಯಾಗಿದೆ. ಇಂದು ಕೂಡ ಮೃತದೇಹ ಹುಡುಕುವ ಕಾರ್ಯಾಚರಣೆ ಮುಂದುವರಿಯಲಿದೆ.

    ಕೊಡಗಿನಲ್ಲಿ ಸುರಿದ ಭಾರೀ ಮಳೆ ಪರಿಣಾಮ ಭಾಗಮಂಡಲದ ಬ್ರಹ್ಮಗಿರಿ ಬೆಟ್ಟದ ಒಂದು ಭಾಗ ಕುಸಿದಿತ್ತು. ಪರಿಣಾಮ ಬೆಟ್ಟದಲ್ಲಿ ಮನೆ ಕೊಂಡಿದ್ದ ಅರ್ಚಕ ನಾರಾಯಣ್ ಆಚಾರ್ ಅವರ ಮನೆಯೂ ಈ ಬೆಟ್ಟದ ಮಣ್ಣಿನಲ್ಲಿ ಮುಚ್ಚಿ ಹೋಗಿ ಮನೆಯಲ್ಲಿದ್ದ ಅರ್ಚಕರು ಸೇರಿದಂತೆ ಐವರು ಮೃತಪಟ್ಟಿದ್ದರು. ಇದರಲ್ಲಿ ಓರ್ವರ ಶವ ಪತ್ತೆಯಾಗಿದೆ. ಉಳಿದ ನಾಲ್ವರ ಶವದ ಹುಡುಕಾಟ ನಿರಂತರವಾಗಿ ನಡೆಯುತ್ತಿದೆ. ಆದರೆ ಕಾರ್ಯಾಚರಣೆಗೆ ಫಲ ಸಿಗುತ್ತಿಲ್ಲ.

    ಮಳೆ ಕಡಿಮೆಯಾಗಿದ್ದರೂ ಕೂಡ ಮಂಜು ಆಗಾಗ ಆವರಿಸಿ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಎನ್‌ಡಿಆರ್‌ಎಫ್ ತಂಡ, ಎಸ್‌ಡಿಆರ್‌ಎಫ್ ತಂಡ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಈ ಪತ್ತೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬಹು ದೊಡ್ಡ ಮಟ್ಟದಲ್ಲಿ ಬೆಟ್ಟ ಕುಸಿದಿರುವ ಕಾರಣ ಮಣ್ಣು, ಕಲ್ಲಿನ ರಾಶಿ ದೊಡ್ದದಿದ್ದು, ಇದರ ಅಡಿಯಲ್ಲಿ ಮೃತದೇಹಗಳು ಸಿಲುಕಿವೆ. ಈ ಮಣ್ಣನ್ನು ತೆಗೆಯಲು ಎರಡು ಹಿಟಾಚಿ ಬಳಸಲಾಗಿದೆ.

    ಆಸ್ಟ್ರೇಲಿಯಾದಿಂದ ಬಂದ ಮಕ್ಕಳ ಆಕ್ರಂದನ
    ಈ ನಡುವೆ ಸೋಮವಾರ ಮೃತ ಅರ್ಚಕರ ಇಬ್ಬರು ಹೆಣ್ಣು ಮಕ್ಕಳು ಹಾಗೂ ಮೊಮ್ಮಕ್ಕಳು ಆಸ್ಟ್ರೇಲಿಯಾದಿಂದ ಬಂದಿದ್ದಾರೆ. ಬಂದವರು ನೇರವಾಗಿ ತಮ್ಮ ಮನೆಯಿದ್ದ ಜಾಗಕ್ಕೆ ಭೇಟಿ ನೀಡಿದರು. ಕಾರ್ಯಾಚರಣೆ ವೇಳೆ ಸಿಕ್ಕಿರುವ ಮನೆಯ ಸಾಮಾಗ್ರಿಗಳನ್ನು ನೋಡುತ್ತಾ ಮಕ್ಕಳು ಕಣ್ಣೀರಿಟ್ಟರು.

    ದುರಂತಕ್ಕೆ ಮುನ್ನ ನಾರಾಯಣ ಆಚಾರ್ ಎರಡು ದಿನ ಬಿಟ್ಟು ಮನೆ ಖಾಲಿ ಮಾಡುವ ಚಿಂತನೆ ನಡೆಸಿದ್ದರು. ಮನೆಯಲ್ಲಿದ್ದ 30 ಕ್ವಿಂಟಾಲ್ ಕಾಳುಮೆಣಸು, 5 ಕ್ವಿಂಟಾಲ್‍ನಷ್ಟು ಏಲಕ್ಕಿ ಬಿಟ್ಟು ಹೋಗೋದು ಹೇಗೆ ಎಂಬ ಚಿಂತೆಯಲ್ಲಿದ್ದರು ಎಂದು ಅರ್ಚಕರ ಕಾರು ಚಾಲಕರಾಗಿದ್ದ ಜಯಂತ್ ತಿಳಿಸಿದ್ದಾರೆ.

    ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಕೆ.ಜೆ. ಬೋಪಯ್ಯ ಕಾರ್ಯಾಚರಣೆ ಸ್ಥಳದಲ್ಲಿ ಮೊಕ್ಕಾಂ ಹೂಡಿ ಕಾರ್ಯಾಚರಣೆ ಪರಿಶೀಲಿಸುತ್ತಿದ್ದಾರೆ. ಇಂದು ಕೂಡ ಕಾರ್ಯಾಚರಣೆ ಮುಂದುವರಿಯಲಿದೆ.

  • ಕೊಡಗಿನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆ- ಹಾಲೇರಿಯಲ್ಲಿ ಭೂ ಕುಸಿತ

    ಕೊಡಗಿನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆ- ಹಾಲೇರಿಯಲ್ಲಿ ಭೂ ಕುಸಿತ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮತ್ತೆ ಮಳೆಯಾಗುತ್ತಿದ್ದು ಗುಡ್ಡ ಕುಸಿತ ಉಂಟಾಗಿ ಮಡಿಕೇರಿ – ಸೋಮವಾರಪೇಟೆ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಡಿಕೇರಿ ತಾಲೂಕಿನ ಹಾಲೇರಿಯಲ್ಲಿ ಭೂಕುಸಿತ ಸಂಭವಿಸಿದೆ

    ಸ್ಥಳಕ್ಕೆ ಕೊಡಗು ಜಿಲ್ಲಾಡಳಿತದ ಅಧಿಕಾರಿಗಳು ದೌಡಾಯಿಸಿದ್ದು ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಳೆದ ವರ್ಷವೂ ಇದೇ ಪ್ರದೇಶದಲ್ಲಿ ಭೂಕುಸಿತ ಉಂಟಾಗಿದ್ದು ಇದೀಗ ಮತ್ತೊಮ್ಮೆ ಗುಡ್ಡ ಕುಸಿದಿದೆ. ರಸ್ತೆಗೆ ಬಿದ್ದ ಮಣ್ಣನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ. ಮಡಿಕೇರಿ- ಸೋಮವಾರಪೇಟೆ ಮಾರ್ಗ ಬಂದ್ ಆಗಿರುವುದರಿಂದ ವಾಹನ ಸವಾರರು ಪರ್ಯಾಯ ಮಾರ್ಗವನ್ನು ಬಳಕೆ ಮಾಡುತ್ತಿದ್ದಾರೆ. ಮಡಿಕೇರಿಯಿಂದ ಸಿಂಕೋನ ಮಾರ್ಗವಾಗಿ ಸೋಮವಾರಪೇಟೆ ತೆರಳಬಹುದಾಗಿದೆ. ಇದನ್ನೂ ಓದಿ:ಗುಡ್ಡ ಕುಸಿತ: ಮಡಿಕೇರಿ-ಸೋಮವಾರಪೇಟೆ ನಡುವಿನ ರಾಜ್ಯ ಹೆದ್ದಾರಿ ಬಂದ್

    ಅಷ್ಟೇ ಅಲ್ಲದೇ ಬೆಳಿಗ್ಗೆಯಿಂದಲೂ ಮಡಿಕೇರಿ ಸುತ್ತಮುತ್ತಲೂ ಎಡೆಬಿಡದೆ ಮಳೆಯಾಗುತ್ತಿದ್ದು, ಜನರು ಕಂಗಲಾಗಿದ್ದಾರೆ. ಮಳೆಗೆ ಕೊಡಗಿನ ಬ್ರಹ್ಮಗಿರಿ ಬೆಟ್ಟದಲ್ಲೂ ಬಿರುಕು ಕಾಣಿಸಿಕೊಂಡಿದ್ದು, ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇದನ್ನೂ ಓದಿ:ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಸೇತುವೆ ಮೇಲೆಯೇ ಜನರ ‘ಸಾವಿನ ನಡಿಗೆ’

    ಮುಂಜಾಗೃತ ಕ್ರಮವಾಗಿ ಬೆಟ್ಟದ ತಪ್ಪಲಲ್ಲಿರುವ ಅಂಗಡಿಗಳನ್ನು ತೆರವು ಮಾಡುವಂತೆ ಸೂಚಿಸಲಾಗಿದೆ. ಮಳೆ ಮುಂದುವರಿಯುವ ಕುರಿತಾಗಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದರಿಂದ ಕೊಡಗು ಜಿಲ್ಲಾಡಳಿತ ಸೂಕ್ತ ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.

  • ಬ್ರಹ್ಮಗಿರಿ ಬೆಟ್ಟದಲ್ಲಿ ಬಿರುಕು- ಪ್ಲಾಸ್ಟಿಕ್ ಹೊದಿಸಿ ಮುಚ್ಚುತ್ತಿರೋ ಜಿಲ್ಲಾಡಳಿತ, ಅರಣ್ಯ ಇಲಾಖೆ

    ಬ್ರಹ್ಮಗಿರಿ ಬೆಟ್ಟದಲ್ಲಿ ಬಿರುಕು- ಪ್ಲಾಸ್ಟಿಕ್ ಹೊದಿಸಿ ಮುಚ್ಚುತ್ತಿರೋ ಜಿಲ್ಲಾಡಳಿತ, ಅರಣ್ಯ ಇಲಾಖೆ

    ಮಡಿಕೇರಿ: ಕೊಡಗಿನ ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕ್ಷಣ ಕ್ಷಣಕ್ಕೂ ಅದು ದೊಡ್ಡದಾಗುತ್ತಿರುವುದನ್ನು ಕಂಡ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.

    ತಲಕಾವೇರಿ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬ್ರಹ್ಮಗಿರಿ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡಿದೆ. ಎರಡು ಅಡಿ ಅಗಲದಷ್ಟು ಬೆಟ್ಟ ಬಾಯ್ದೆರೆದುಕೊಂಡಿದೆ. 10 ಅಡಿ ಆಳ, 200 ಮೀಟರ್ ಉದ್ದದವರೆಗೂ ಬೆಟ್ಟ ಬಿರುಕು ಬಿಟ್ಟುಕೊಂಡಿದೆ. ಅರಣ್ಯ ಇಲಾಖೆ ಎಡವಟ್ಟಿನಿಂದ ಬ್ರಹ್ಮಗಿರಿ ಬೆಟ್ಟಕ್ಕೆ ಕುತ್ತು ಬಂದಿದೆ. ಅರಣ್ಯ ಇಲಾಖೆ ಬೆಟ್ಟದ ಅಲ್ಲಲ್ಲಿ ಸಾಕಷ್ಟು ಇಂಗು ಗುಂಡಿ ತೆಗೆದಿದೆ. ಇಂಗು ಗುಂಡಿ ತೆಗೆದಿರುವುದೇ ಬೆಟ್ಟ ಕುಸಿಯಲು ಕಾರಣ ಎಂದು ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.

    ಬೆಟ್ಟ ಕುಸಿಯದಂತೆ ಕ್ರಮಕ್ಕೆ ಮುಂದಾಗಿರುವ ಜಿಲ್ಲಾಡಳಿತ ಬಿರುಕು ಬಿಟ್ಟ ಜಾಗಕ್ಕೆ ಪ್ಲಾಸ್ಟಿಕ್ ಹೊದಿಸಿ ಮುಚ್ಚುತ್ತಿದೆ. ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಯ ಈ ಕ್ರಮಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಕ್ಷಣದಲ್ಲಾದರೂ ಬ್ರಹ್ಮಗಿರಿ ಬೆಟ್ಟ ಕುಸಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದ್ದರಿಂದ ಕಾವೇರಿ ಭಕ್ತರು ಹಾಗೂ ಗ್ರಾಮದಲ್ಲಿ ಆತಂಕದ ಸೃಷ್ಟಿಯಾಗಿದೆ.

    ಒಂದು ವೇಳೆ ಬೆಟ್ಟ ಕುಸಿದರೆ, ತಲಕಾವೇರಿಯಲ್ಲಿ ಹುಟ್ಟಿ ನಾಡಿನ ಜನರಿಗೆ ನೀರು ಉಣಿಸುವ ಕಾವೇರಿ ಮಾತೆ ತನ್ನ ದಿಕ್ಕು ಬದಲಾಯಿಸುತ್ತಾಳೆ. ಗುಪ್ತಗಾಮಿನಿಯಾಗಿ ಹೋಗುವ ಜಾಗದಲ್ಲಿ ಬೆಟ್ಟ ಕುಸಿದರೆ, ಪಕ್ಕದ ಕೇರಳಕ್ಕೆ ಕಾವೇರಿ ನದಿ ದಿಕ್ಕು ಬದಲಾಯಿಸುತ್ತದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.