Tag: Brahma rathotsava

  • ಅರ್ಚಕ ಕುಟುಂಬಗಳ ನಡುವೆ ಪ್ರತಿಷ್ಠೆಯ ಜಗಳ  – ಗೌರಿಗಂಗಾಧರೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ರದ್ದು

    ಅರ್ಚಕ ಕುಟುಂಬಗಳ ನಡುವೆ ಪ್ರತಿಷ್ಠೆಯ ಜಗಳ – ಗೌರಿಗಂಗಾಧರೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ರದ್ದು

    ಕೋಲಾರ: ಎರಡು ಅರ್ಚಕ ಕುಟುಂಬಗಳ ನಡುವೆ ಇರುವ ಪ್ರತಿಷ್ಠೆಯಿಂದ ಗೌರಿಗಂಗಾಧರೇಶ್ವರ ಸ್ವಾಮಿ (Gowri Gangadhareshwara Swami Temple) ಬ್ರಹ್ಮರಥೋತ್ಸವಕ್ಕೆ (Brahma Rathotsava) ತಡೆಯಾಜ್ಞೆ ತಂದಿರುವ ಘಟನೆ ಕೋಲಾರದಲ್ಲಿ ನಡೆದಿದೆ.

    ಕೋಲಾರ (Kolara) ತಾಲೂಕು ತೇರಹಳ್ಳಿ ಗ್ರಾಮದ ಪುರಾತನ ಗೌರಿಗಂಗಾಧರೇಶ್ವರ ಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವ ಮಾರ್ಚ್‌ 17 ರಂದು ನಡೆಯಬೇಕಿತ್ತು. ಆದರೆ ಅರ್ಚಕರ ಕುಟುಂಬಗಳ ನಡುವಿನ ವಿವಾದದ ನಡೆದ ಕಾರಣ ಹೈಕೋರ್ಟ್‌ (High Court) ತಡೆಯಾಜ್ಞೆ ನೀಡಿದ್ದು ಬ್ರಹ್ಮರಥೋತ್ಸವವನ್ನು ಮುಂದೂಡಲಾಗಿದೆ. ಇದನ್ನೂ ಓದಿ: ಆಪರೇಷನ್‌ಗೆ ಸಿದ್ದರಿದ್ವಿ ಒಳ್ಳೆಯ ಹುಲಿಗಳು ಇದ್ದವು, ನಮ್ಮವರೇ ಕೆಲವರು ಒಪ್ಪಲಿಲ್ಲ: ಡಿಕೆಶಿ

    ಅರ್ಚಕರಾದ ಮಂಜುನಾಥ್ ದೀಕ್ಷಿತ್ ಹಾಗೂ ಚಂದ್ರಶೇಖರ ದೀಕ್ಷಿತ್ ನಡುವೆ ರಥೋತ್ಸವ ಮಾಡುವ ವಿಚಾರದಲ್ಲಿ ಮೊದಲಿನಿಂದಲೂ ವಿವಾದ ಇತ್ತು. ಆದರೆ ಮುಜರಾಯಿ ತಹಶಿಲ್ದಾರ್ ಮಾರ್ಚ್ 17 ರಂದು ಬ್ರಹ್ಮರಥೋತ್ಸವಕ್ಕೆ ಅನುಮತಿ ನೀಡಿದ್ದರು.

    ಆಗಮ ಶಾಸ್ತ್ರದ ಪ್ರಕಾರ ಒಂದೇ ವರ್ಷದಲ್ಲಿ ಎರಡು ಬಾರಿ ಬ್ರಹ್ಮರಥೋತ್ಸವ ಮಾಡಬಾರದೆಂದು ಕೋರಿ ಮಂಜುನಾಥ್ ದೀಕ್ಷಿತ್‌ ಕೋರ್ಟ್‌ ಮೊರೆ ಹೋಗಿದ್ದರು. ಹೈಕೋರ್ಟ್ ತಡೆಯಾಜ್ಞೆ ಹಿನ್ನಲೆ ನಿಗದಿ ಮಾಡಿದ್ದ ಬ್ರಹ್ಮರಥೋತ್ಸವ ರದ್ದು ಮಾಡಿ ತಹಶೀಲ್ದಾರ್ ಆದೇಶ ಮಾಡಿದ್ದಾರೆ. ಇದನ್ನೂ ಓದಿ: WPL 2024: ಅಂಪೈರ್‌ ಎಡವಟ್ಟು – ಫಿಕ್ಸಿಂಗ್‌ ಹಣೆಪಟ್ಟಿ ಕಟ್ಟಿಕೊಂಡ ಮುಂಬೈ ಇಂಡಿಯನ್ಸ್‌

    ಸದ್ಯ ಗ್ರಾಮಸ್ಥರ ಮನವೊಲಿಸಿ ಮುಜರಾಯಿ ಅಧಿಕಾರಿಗಳು ಬ್ರಹ್ಮರಥೋತ್ಸವವ ದಿನಾಂಕವನ್ನು ಮುಂದೂಡಿದ್ದಾರೆ.

  • ಕುಕ್ಕೆಯಲ್ಲಿ ಚಂಪಾ ಷಷ್ಠಿ ಸಂಪನ್ನ- ಬ್ರಹ್ಮರಥೋತ್ಸವಕ್ಕೆ ಸಾಕ್ಷಿಯಾದ ಭಕ್ತ ಸಮೂಹ

    ಕುಕ್ಕೆಯಲ್ಲಿ ಚಂಪಾ ಷಷ್ಠಿ ಸಂಪನ್ನ- ಬ್ರಹ್ಮರಥೋತ್ಸವಕ್ಕೆ ಸಾಕ್ಷಿಯಾದ ಭಕ್ತ ಸಮೂಹ

    ಮಂಗಳೂರು: ಪರುಶುರಾಮ ಸೃಷ್ಟಿಯ ಸಪ್ತ ಮಹಾ ಕ್ಷೇತ್ರಗಳಲ್ಲಿ ಒಂದಾಗಿರೋ ದೇಶದ ಪ್ರಸಿದ್ಧ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ. ಅದರಲ್ಲೂ ಚಂಪಾ ಷಷ್ಠಿ ಉತ್ಸವಕ್ಕೆ ಹೆಚ್ಚಿನ ವಿಶೇಷತೆಯಿದೆ. ಕಾರ್ತಿಕ ಬಹುಳ ದ್ವಾದಶಿಯಿಂದ ಆರಂಭಗೊಂಡು ಮಾರ್ಗಶಿರ ಶುದ್ಧ ಪೌರ್ಣಮಿಯವರೆಗೆ ಕುಕ್ಕೆ ಕ್ಷೇತ್ರದಲ್ಲಿ ಅತ್ಯಂತ ಸಂಭ್ರಮದ ಉತ್ಸವ ನಡೆಯುತ್ತೆ. ಈ ಬಾರಿಯೂ ಕುಕ್ಕೆಯಲ್ಲಿ ಸಂಭ್ರಮದ ಚಂಪಾ ಷಷ್ಠಿ ಆಚರಣೆ ನಡೆದಿದ್ದು, ಇಂದು ಬೆಳಿಗ್ಗೆ ಸುಬ್ರಹ್ಮಣ್ಯನ ಬ್ರಹ್ಮರಥೋತ್ಸವ ನಡೆಸುವ ಮೂಲಕ ಚಂಪಾ ಷಷ್ಠಿ ಸಂಪನ್ನಗೊಂಡಿದೆ.

    ಮಾರ್ಗಶಿರ ಶುದ್ಧ ಷಷ್ಠಿಯನ್ನ ಚಂಪಾ ಷಷ್ಠಿ ಎಂದು ಕರೆಯಲಾಗುತ್ತೆ. ಈ ದಿನ ಸುಬ್ರಹ್ಮಣ್ಯನಿಗೆ ಅತ್ಯಂತ ಪ್ರಿಯವಾದ ದಿನ. ಹೀಗಾಗಿ ಇಂದು ಉಮಾಮಹೇಶ್ವರ ದೇವರು ಮತ್ತು ಸುಬ್ರಹ್ಮಣ್ಯ ದೇವರು ಒಂದೇ ಪಲ್ಲಕ್ಕಿಯಲ್ಲಿ ಬಂದು ಉಮಾಮಹೇಶ್ವರ ದೇವರು ಪಂಚಮಿ ರಥದಲ್ಲಿ ಮತ್ತು ಸುಬ್ರಹ್ಮಣ್ಯ ದೇವರು ಬ್ರಹ್ಮರಥದಲ್ಲಿ ವಿರಾಜಮಾನರಾದರು. ನಂತರ ಎರಡು ರಥಗಳನ್ನ ಎಳೆಯೋ ಮೂಲಕ ಕ್ಷೇತ್ರದಲ್ಲಿನ ರಥಬೀದಿಯಲ್ಲಿ ಬ್ರಹ್ಮರಥೋತ್ಸವ ಅತ್ಯಂತ ಸಂಭ್ರಮದಿಂದ ನಡೆದಿದೆ.

    ಮೊದಲಿಗೆ ಪಂಚಮಿ ರಥವನ್ನ ಎಳೆಯಲಾಯಿತು. ನಂತರ ಬ್ರಹ್ಮರಥವನ್ನು ಎಳೆಯಲಾಯಿತು. ಈ ವೇಳೆ ಭಕ್ತಾಧಿಕಾರಿ ತಮ್ಮ ಹರಕೆಯಂತೆ ಕಾಫೀ ಬೀಜ, ಕಾಳಮೆಣಸು, ಹಣ, ಮತ್ತು ಏಲಕ್ಕಿಯನ್ನ ರಥಕ್ಕೆ ಎಸೆದು ಕೃತಾರ್ಥರಾದರು. ಅಲ್ಲದೆ ಅನೇಕ ಮಂದಿ ರಥವನ್ನ ಎಳೆದು ಧನ್ಯರಾದರು. ಹೀಗಾಗಿ ಕುಕ್ಕೆ ಸುಬ್ರಹ್ಮಣ್ಯನ ಬ್ರಹ್ಮರಥೋತ್ಸವ ಯಾವುದೇ ವಿಘ್ನಗಳಿಲ್ಲದೆ ನಿರ್ವಿಘ್ನವಾಗಿ ನಡೀತು.

    ಊರು-ಪರವೂರಿಗಳಿಂದ ಬಂದ ಅಪಾರ ಪ್ರಮಾಣದ ಭಕ್ತರು ಸುಬ್ರಹ್ಮಣ್ಯನ ಭವ್ಯ ರಥೋತ್ಸವವನ್ನ ಕಣ್ತುಂಬಿಕೊಂಡು ಧನ್ಯರಾದರು. ಇನ್ನು ಕುಕ್ಕೆಯ ಜಾತ್ರಾ ಸಂಭ್ರಮಕ್ಕೆ ಅದರದ್ದೇ ಆದ ವಿಶೇಷತೆಯಿದೆ. ಅದರಲ್ಲೂ ಇಲ್ಲಿ ದೇವರನ್ನ ತಲೆಯಲ್ಲಿ ಹೊತ್ತು ಸಾಗೋ ಬದಲು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಹೊತ್ತು ಸಾಗೋದನ್ನ ನೋಡೋದೇ ಪರಮಾನಂದ. ಇಂದು ಬೆಳಗ್ಗೆ ನಡೆದ ಬ್ರಹ್ಮರಥೋತ್ಸವವನ್ನ ಕಣ್ತುಂಬಿಕೊಳ್ಳಲು ನೂರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದರು. ಹೀಗಾಗಿ ಕ್ಷೇತ್ರದ ರಥಬೀದಿ ಭಕ್ತ ಗಡಣದಿಂದ ತುಂಬಿ ತುಳುಕುತ್ತಿತ್ತು.

    ಇಂದು ಮುಂಜಾನೆ 7.20ರ ಧನುರ್ ಲಗ್ನದಲ್ಲಿ, ಬ್ರಹ್ಮ ರಥೋತ್ಸವ ಸಂಪನ್ನಗೊಂಡಿತು. ಕೊರೊನಾ ಹಿನ್ನಲೆಯಲ್ಲಿ ಭಕ್ತರ ಪ್ರವೇಶ ನಿಷೇಧಿಸಲಾಗಿತ್ತು. ಅಂತರ್ ಜಿಲ್ಲೆ, ಅಂತರ್ ರಾಜ್ಯ ಭಕ್ತರಿಗೆ ಪ್ರವೇಶ ನಿಷೇಧ ಮಾಡಲಾಗಿತ್ತು. ಆದರೆ ರಥೋತ್ಸವ ಸೇವೆ ಮಾಡಿದವರಿಗೆ ಮಾತ್ರ ರಥ ಎಳೆಯಲು ಅವಕಾಶ ನೀಡಲಾಗಿತ್ತು. ರಥೋತ್ಸವದ ವೇಳೆ ಸಾಕಷ್ಟು ಭಕ್ತರು ಜಮಾಯಿಸಿದ್ರು. ನಿಯಾಮಾವಳಿಗಳ ಕಾರಣದಿಂದಾಗಿ ಪ್ರತಿ ವರ್ಷಕ್ಕಿಂತ ಈ ವರ್ಷ ಭಕ್ತರ ಸಂಖ್ಯೆ ಕಡಿಮೆಯಾಗಿತ್ತು. ಕುಕ್ಕೆಯಲ್ಲಿ ಚಂಪಾಷಷ್ಠಿ ಸಂಭ್ರಮಕ್ಕೆ ತೆರೆಬಿದ್ದಿದೆ. ಆದರೆ ವರ್ಷವಧಿ ಉತ್ಸವ ಮುಂದಿನ ಪೌರ್ಣಮಿ ಪರ್ಯಂತೆ ಕ್ಷೇತ್ರದಲ್ಲಿ ನಡೆಯುತ್ತೆ. ಅಂತಿಮ ದಿನ ಮಹಾ ಸಂಪ್ರೋಕ್ಷಣೆ ನಡೆದು ಕ್ಷೇತ್ರದ ಅದ್ಧೂರಿ ಸಂಭ್ರಮಕ್ಕೆ ಅಧಿಕೃತ ತೆರೆಬೀಳುತ್ತೆ.

  • ಹೊಸ ವರ್ಷದ ಅಂಗವಾಗಿ ಕೋಟಿ ಶಿವಲಿಂಗದಲ್ಲಿ ಬ್ರಹ್ಮ ರಥೋತ್ಸವ

    ಹೊಸ ವರ್ಷದ ಅಂಗವಾಗಿ ಕೋಟಿ ಶಿವಲಿಂಗದಲ್ಲಿ ಬ್ರಹ್ಮ ರಥೋತ್ಸವ

    ಕೋಲಾರ: ನೂತನ 2019ರ ವರ್ಷವನ್ನು ಲಕ್ಷಾಂತರ ಜನರು ಶಿವನ ಸನ್ನಿಧಿ ಕೋಟಿಶಿವಲಿಂಗ ಕ್ಷೇತ್ರದಲ್ಲಿ ವಿಶಿಷ್ಠವಾಗಿ ಆಚರಣೆ ಮಾಡಿದ್ರು. ಹೊಸ ವರ್ಷದ ವಿಶೇಷವಾಗಿ ಕ್ಷೇತ್ರದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನೆರೆವೇರಿತು.

    ಸೋಮವಾರ ಬೆಳಗ್ಗಿನಿಂದಲೇ ಕೋಲಾರದ ಜನರು ವಿವಿಧ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸುವ ಮೂಲಕ ಹೊಸ ವರ್ಷದ ಸಂಭ್ರಮವನ್ನು ಆಚರಣೆ ಮಾಡಿದರು. ಕೋಲಾರದ ಬಂಗಾರಪೇಟೆ ತಾಲೂಕಿನ ಕಮ್ಮಸಂದ್ರ ಶ್ರೀ ಕೋಟಿ ಶಿವಲಿಂಗ ಕ್ಷೇತ್ರಕ್ಕೆ ಲಕ್ಷಾಂತರ ಸಂಖ್ಯೆಯ ಭಕ್ತರು ಹಾಗೂ ಪ್ರವಾಸಿಗರು ಆಗಮಿಸಿ ಹೊಸ ವರ್ಷವನ್ನ ಬರಮಾಡಿಕೊಂಡರು. ಭಕ್ತರು ಕೋಟಿ ಶಿವಲಿಂಗಗಳ ದರ್ಶನ ಪಡೆದು, ಆ ಶಿವನ ನೆನೆಯುತ್ತಾ ಹೊಸ ವರ್ಷ ಹರುಷ ತರಲಿ ಎಂದು ಬೇಡಿಕೊಂಡಿದ್ದಾರೆ.

    ಕರ್ನಾಟಕದ ಜನರು ಮಾತ್ರವಲ್ಲದೆ ನೆರೆಯ ಆಂದ್ರ, ತಮಿಳುನಾಡು ಹಾಗೂ ಕೇರಳದಿಂದಲೂ ಲಕ್ಷಾಂತರ ಸಂಖ್ಯೆಯ ಪ್ರವಾಸಿಗರು ಕೋಟಿಲಿಂಗ ದರ್ಶನ ಪಡೆದು ಪುನೀತರಾದ್ರು. ಈ ಹೊಸ ವರ್ಷದ ನಿಮಿತ ಕ್ಷೇತ್ರದಲ್ಲಿ ನಡೆದ ಶ್ರೀ ವೆಂಕಟೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಈ ವೇಳೆ ರಥೋತ್ಸವದಲ್ಲಿ ಲಕ್ಷಾಂತರ ಮಂದಿ ಭಾಗಿಯಾಗಿ ಉತ್ಸವಕ್ಕೆ ಇನ್ನಷ್ಟು ಮೆರಗನ್ನು ತಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv