Tag: boy bay

  • ಮಂಡ್ಯದಲ್ಲಿ ನಾಮಕರಣಕ್ಕೆ ಮೊದಲೇ ಗಂಡು ಮಗು ದುರ್ಮರಣ

    ಮಂಡ್ಯದಲ್ಲಿ ನಾಮಕರಣಕ್ಕೆ ಮೊದಲೇ ಗಂಡು ಮಗು ದುರ್ಮರಣ

    ಮಂಡ್ಯ: ಪೆಂಟಾವಲೆಂಟ್ ಚುಚ್ಚುಮದ್ದು ನೀಡಿದ ನಂತರ ಮಗು ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕಾಡುಕೊತ್ತನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಜ್ಯೋತಿ ಮತ್ತು ಸ್ವಾಮಿ ದಂಪತಿಯ ಒಂದೂವರೆ ತಿಂಗಳ ಗಂಡು ಮಗುವಿಗೆ ಗುರುವಾರ ಕಾಡುಕೊತ್ತನಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚುಚ್ಚುಮದ್ದು ಕೊಡಿಸಲಾಗಿತ್ತು. ಚುಚ್ಚುಮದ್ದು ಕೊಡಿಸಿದ ನಂತರ ಅಸ್ವಸ್ಥಗೊಂಡಿದ್ದ ಮಗು ಶುಕ್ರವಾರ ಬೆಳಗ್ಗೆ ಮೃತಪಟ್ಟಿದೆ ಅಂತ ಪೋಷಕರು ಆರೋಪಿಸಿದ್ದಾರೆ.

    ಪೋಷಕರಿಗೆ ಎರಡು ಹೆಣ್ಣು, ಒಂದು ಗಂಡು ಮಗುವಿತ್ತು. ಇದೇ ಭಾನುವಾರ ಮೃತ ಮಗುವಿನ ನಾಮಕರಣ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಮಗುವನ್ನು ಕಳೆದುಕೊಂಡು ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು. ಮಗು ಸಾವಿಗೆ ತನಿಖೆ ನಡೆಸುವಂತೆ ಪೋಷಕರು ಒತ್ತಾಯಿಸುತ್ತಿದ್ದಾರೆ. ಆದ್ರೆ ಮಗು ಸಾವಿಗೂ ಚುಚ್ಚುಮದ್ದಿಗೂ ಸಂಬಂಧವಿಲ್ಲ ಅಂತ ಡಿಎಚ್‍ಒ ನಾಗರಾಜ್ ತಿಳಿಸಿದ್ದಾರೆ.

    ಮಗು ಸಾವಿನ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ವರದಿ ನೀಡುವಂತೆ ಪೋಷಕರು ಆಗ್ರಹಿಸುತ್ತಿದ್ದಾರೆ. ಈ ಹಿಂದೆಯೂ ಪೆಂಟವಲೆಂಟ್ ಚುಚ್ಚುಮದ್ದು ಪಡೆದ ನಂತರ ಮಂಡ್ಯದ ಚಿಂದಗಿರಿದೊಡ್ಡಿಯಲ್ಲಿ ಎರಡು ಮಕ್ಕಳು ಮೃತಪಟ್ಟಿದ್ದವು. ತನಿಖೆ ನಂತರ ಚುಚ್ಚುಮದ್ದಿಗೂ ಮಕ್ಕಳ ಸಾವಿಗೂ ಸಂಬಂಧವಿಲ್ಲ ಎಂಬ ವರದಿ ಬಂದಿತ್ತು.

    ಪೆಂಟಾವಲೆಂಟ್ ನೀಡುವುದೇಕೆ?:
    ಹುಟ್ಟಿದ ಪ್ರತಿಯೊಂದು ಮಗುವಿಗೂ ಒಂದೂವರೆ, ಎರಡೂವರೆ, ಮೂರೂವರೆ ತಿಂಗಳಲ್ಲಿ ಕಡ್ಡಾಯವಾಗಿ ಪೆಂಟಾವಲೆಂಟ್ ಚುಚ್ಚುಮದ್ದು ನೀಡಲಾಗುತ್ತದೆ. ಇದು ನಾಯಿ ಕೆಮ್ಮು, ಗಂಟಲು ಮಾರಿ, ಧನುರ್ವಾಯು, ಹೆಪಟೈಟೀಸ್ ಬಿ, ಇನ್‍ಫ್ಲುಯೆಂಜಾ ಮೊದಲಾದ ಕಾಯಿಲೆಗಳನ್ನು ಹೋಗಲಾಡಿಸುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 20 ಸಾವಿರ ರೂ.ಗಾಗಿ ಸ್ವಂತ ಮಗುವನ್ನೇ ಮಾರಾಟ ಮಾಡಿದ ತಾಯಿ!

    20 ಸಾವಿರ ರೂ.ಗಾಗಿ ಸ್ವಂತ ಮಗುವನ್ನೇ ಮಾರಾಟ ಮಾಡಿದ ತಾಯಿ!

    ಹಾಸನ: ಮಹಿಳೆಯೊಬ್ಬಳು ಹಣಕ್ಕಾಗಿ ತನ್ನ ಮೂರು ತಿಂಗಳ ಮಗುವನ್ನು ಮಾರಾಟ ಮಾಡಿರುವ ಘಟನೆ ಹಾಸನದ ಬೇಲೂರಿನಲ್ಲಿ ನಡೆದಿದೆ.

    ಮಗುವಿನ ಸ್ವಂತ ತಾಯಿಯೇ ನಿವೃತ್ತ ನರ್ಸ್‍ವೊಬ್ಬರ ಸಹಾಯದೊಂದಿದೆ ಇಪ್ಪತ್ತು ಸಾವಿರ ರೂ. ಹಣಕ್ಕೆ ಮಾರಾಟ ಮಾಡಿದ್ದು, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಇದೀಗ ಮಗುವನ್ನು ರಕ್ಷಿಸಿದ್ದಾರೆ.

    ಬೇಲೂರು ಪಟ್ಟಣದ ನಿವಾಸಿ ಮಂಜುಳಾ ಚಂದ್ರಶೇಖರ್ ಎಂಬವರಿಗೆ ಮಗುವನ್ನು ಮಾರಾಟ ಮಾಡಲಾಗಿತ್ತು. ನರ್ಸ್ ಶಾಂತಮ್ಮ ಹಾಗೂ ಮಂಜುಳ ಬಳಿ ಮಗುವಿನ ಸೂಕ್ತ ದಾಖಲೆ ಇಲ್ಲದ ಕಾರಣ ಮಗುವನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಮಗುವಿನ ತಂದೆ-ತಾಯಿ ಬಂದಲ್ಲಿ ಮಗುವನ್ನು ವಾಪಾಸ್ ಕೊಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಎಎಸ್‍ಐವೊಬ್ಬರ ಪತ್ನಿಯಾದ ಮಂಜುಳ ಮಗುವನ್ನು ಮಾರಟಕ್ಕೆ ತೆಗೆದುಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮಹಿಳಾ ಮತ್ತು ಮಕ್ಕಳ ಇಲಾಖೆಯ ನಿಯಮಗಳ ಪ್ರಕಾರ ಮಗುವನ್ನು ದತ್ತು ತೆಗೆದುಕೊಳ್ಳಬೇಕು. ಆದ್ರೆ ಇದ್ಯಾವುದನ್ನು ಮಾಡದೇ ಗಂಡು ಮಗುವನ್ನು ಮೂರು ಜನ ಬದಲಿಸಿದ್ದಾರೆ. ಇದು ಅಪರಾಧ ಅಂತ ಅಧಿಕಾರಿಗಳು ತಿಳಿಸಿದ್ದಾರೆ.

    ಸದ್ಯ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗು ಮಕ್ಕಳ ಕಲ್ಯಾಣ ಇಲಾಖೆಯ ಸುಪರ್ದಿಯಲ್ಲಿದೆ.

  • 1 ವರ್ಷದ ಮಗನನ್ನೇ ಸೀಮೆಎಣ್ಣೆ ಸುರಿದು ಸುಟ್ಟು ಕೊಂದ್ಳು ಪಾಪಿ ತಾಯಿ!

    1 ವರ್ಷದ ಮಗನನ್ನೇ ಸೀಮೆಎಣ್ಣೆ ಸುರಿದು ಸುಟ್ಟು ಕೊಂದ್ಳು ಪಾಪಿ ತಾಯಿ!

    ಚಿಕ್ಕಬಳ್ಳಾಪುರ: ಹೆತ್ತ ತಾಯಿಯೇ 1 ವರ್ಷದ ಮಗನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಿರೋ ಹೃದಯವಿದ್ರಾವಕ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಕೇಶವಾರ ಗ್ರಾಮದಲ್ಲಿ ನಡೆದಿದೆ.

    1 ವರ್ಷದ ವಿನಯ್ ಕೊಲೆಯಾದ ದುರ್ದೈವಿ ಪುಟಾಣಿ. ಈ ಮಗುವಿನ ತಾಯಿ ನಿರ್ಮಲಾ ಜನ್ಮ ಕೊಟ್ಟ ಮಗನ ಮೇಲೆಯೇ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ. ಬಳಿಕ ತಾನೇ ಮನೆಯಿಂದ ಕೆಳಗಡೆ ಓಡಿ ಬಂದು ಅಯ್ಯೋ.. ಅಯ್ಯೋ.. ಕಾಪಾಡಿ.. ನನ್ನ ಮಗನನ್ನ.. ದೆವ್ವ ಕೊಂದು ಬಿಟ್ಟಿದೆ ಅಂತ ಕೂಗಿಕೊಂಡಿದ್ದಾಳೆ. ಆತಂಕಗೊಂಡ ಗ್ರಾಮಸ್ಥರು ಮನೆಗೆ ಹೋಗಿ ಗಮನಿಸಿದಾಗ ಪಟ್ಟ ಮಗು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದ್ರೆ ಇದೆಲ್ಲಾ ಮಾಡಿದ್ದು ಮಾತ್ರ ನಾನಲ್ಲ ದೆವ್ವ ಅಂತಾ ನಿರ್ಮಲಾ ಹೇಳುತ್ತಿದ್ದಾಳೆ.

    ಮೂಲತಃ ಆಂಧ್ರದ ಪುಂಗನೂರು ಮೂಲದ ರಾಜೇಶ್ ಹಾಗೂ ನಿರ್ಮಲ ಕಳೆದ ಆರು ತಿಂಗಳ ಹಿಂದೆಯಷ್ಟೇ ಕೇಶವಾರ ಗ್ರಾಮಕ್ಕೆ ಬಂದು ಬಾಡಿಗೆ ಮನೆ ಮಾಡಿಕೊಂಡು ನೆಲೆಸಿದ್ದರು. ಗಂಡ ರಾಜೇಶ್ ಬೋರ್ ವೆಲ್ ರೀ ಡ್ರಿಲ್ಲಿಂಗ್ ಕೆಲಸ ಮಾಡುತ್ತಿದ್ದು ಮನೆಯಲ್ಲಿ ಮಗುವಿನ ಜೊತೆ ನಿರ್ಮಲ ಮಾತ್ರ ಇರುತ್ತಿದ್ದಳು. ಹೀಗೆ ಮಗುವಿನ ಜೊತೆ ಒಂಟಿಯಾಗಿದ್ದ ನಿರ್ಮಲಾಳಿಗೆ ಅದೇನಾಯ್ತೋ ಏನೋ ತಾನು 9 ತಿಂಗಳು ಹೊತ್ತು ಎದೆಯಾಲು ಉಣಿಸಿ ಬೆಳೆಸಿದ ಮಗನನ್ನೆ ಬಲಿ ಪಡೆದುಕೊಂಡಿದ್ದಾಳೆ. ಮನೆಯಲ್ಲಿನ ದೇವರ ಫೋಟೋ ಇದ್ದಕ್ಕಿದತೆ ಓಡೆದು ಹೋಗಿದೆ. ದೆವ್ವ ಮನೆಗೆ ಬಂದು ಮೊದಲು ಮಗುವನ್ನ ಕೊಂದು, ನಂತ್ರ ನನ್ನನ್ನ ನೇಣಿಗೆ ಹಾಕಲು ಪ್ರಯತ್ನಿಸಿತ್ತು.. ನಾನು ಆಗ ತಪ್ಪಿಸಿಕೊಂಡು ಓಡಿ ಹೋದೆ ಅಂತ ಗಂಡನ ಬಳಿ ಹೇಳಿದ್ದಾಳೆ. ಆದ್ರೆ ಇತ್ತ ಗಂಡ ರಾಜೇಶ್, ನನ್ನ ಹೆಂಡಿತಿ ಗರ್ಭಿಣಿ ಆಗಿದ್ದಾಗಲೂ ಹೀಗೆ ವಿಚಿತ್ರವಾಗಿ ವರ್ತಿಸುತ್ತಿದ್ದಳು.

    ಪ್ರಕರಣ ಸಂಬಂಧ ಚಿಕ್ಕಬಳ್ಳಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮಗುವಿನ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಶವಾಗಾರಕ್ಕೆ ಸಾಗಿಸಿದ್ದಾರೆ. ಮತ್ತೊಂದೆಡೆ ಮಗುವನ್ನ ಕೊಂದ ಪಾಪಿ ನಿರ್ಮಲಾಳನ್ನ ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.