Tag: Boxing Day Test

  • ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ಭಾರತದ ದಿಗ್ಗಜ ಆಟಗಾರರ ಪಟ್ಟಿಗೆ ರಾಹುಲ್ ಸೇರ್ಪಡೆ

    ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ಭಾರತದ ದಿಗ್ಗಜ ಆಟಗಾರರ ಪಟ್ಟಿಗೆ ರಾಹುಲ್ ಸೇರ್ಪಡೆ

    ಮುಂಬೈ: ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಎಲ್ಲಾ ತಂಡಗಳಿಗೂ ವಿಶೇಷ. ಅದರಲ್ಲೂ ಭಾರತ ತಂಡ ವಿದೇಶಕ್ಕೆ ತೆರಳಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನಾಡಿ ಶತಕ ಸಿಡಿಸಿದ ಆಟಗಾರರ ಪಟ್ಟಿಗೆ ಇದೀಗ ಕನ್ನಡಿಗ ಕೆ.ಎಲ್ ರಾಹುಲ್ ಸೇರ್ಪಡೆಗೊಂಡಿದ್ದಾರೆ.

    ಬಾಕ್ಸಿಂಗ್ ಡೇ ಎಂದು ಕರೆಯಲು ಕಾರಣವಿದೆ. ಇಂಗ್ಲೆಂಡ್ ಹಾಗೂ ಹಲವು ದೇಶಗಳಲ್ಲಿ ಕ್ರಿಸ್‍ಮಸ್ ಮರುದಿನ ಅಂದರೆ ಡಿಸೆಂಬರ್ 26ರ ರಜಾದಿನವನ್ನೂ ಬಾಕ್ಸಿಂಗ್ ಡೇ ಎಂದು ಕರೆಯಲಾಗುತ್ತದೆ. ಆ ದಿನ ಕ್ರಿಸ್‍ಮಸ್ ದಿನ ಸಿಗುವ ಗಿಫ್ಟ್ ಬಾಕ್ಸ್‌ನ್ನು ತೆರೆಯುವ ದಿನ ಹಾಗಾಗಿ ಬಾಕ್ಸಿಂಗ್ ಡೇ ಎಂಬ ಹೆಸರು ಬಂದಿದೆ. ಈ ದಿನ ನಡೆಯುವ ಟೆಸ್ಟ್ ಪಂದ್ಯಕ್ಕೆ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಎಂದು ಕರೆಯಲಾಗುತ್ತದೆ. ಟೀಂ ಇಂಡಿಯಾ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್ ಅಥವಾ ದಕ್ಷಿಣ ಆಫ್ರಿಕಾ ವಿರುದ್ಧ ಬಾಕ್ಸಿಂಗ್ ಡೇ ಪಂದ್ಯವನ್ನು ಆಡುತ್ತದೆ. ಈ ಬಾರಿ ದಕ್ಷಿಣ ಆಫ್ರಿಕಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಶತಕ ಸಿಡಿಸಿ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ಭಾರತದ 3ನೇ ಆರಂಭಿಕ ಆಟಗಾರ ಎಂಬ ಮೈಲಿಗಲ್ಲು ನೆಟ್ಟಿದ್ದಾರೆ. ಇದನ್ನೂ ಓದಿ: ಬಾಕ್ಸಿಂಗ್ ಡೇ ಟೆಸ್ಟ್ – ಒಂದೂ ಎಸೆತ ಕಾಣದೇ ಎರಡನೇ ದಿನದಾಟ ರದ್ದು

    ಈ ಹಿಂದೆ ಭಾರತದ ಪರ 1998ರಲ್ಲಿ ನ್ಯೂಜಿಲೆಂಡ್ ವಿರುದ್ಧ ಮೊಹಮ್ಮದ್ ಅಜರುದ್ದೀನ್ 103 ರನ್ ಸಿಡಿಸಿದ್ದರು. ಆ ಬಳಿಕ ಆಸ್ಟ್ರೇಲಿಯಾ ವಿರುದ್ಧ ವೀರೇಂದ್ರ ಸೆಹ್ವಾಗ್ 195 ರನ್ ಸಿಡಿಸಿ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ಎರಡನೇ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದರು ಇದೀಗ ರಾಹುಲ್ ದಕ್ಷಿಣ ಆಫ್ರಿಕಾ ವಿರುದ್ಧ ಬಾಕ್ಸಿಂಗ್ ಡೇ  ಟೆಸ್ಟ್‌ನಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ. ಇದನ್ನೂ ಓದಿ: ರಾಹುಲ್ ಶತಕದಾಟ – ಆಫ್ರಿಕಾ ನೆಲದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ವೈಭವ

  • ಬಾಕ್ಸಿಂಗ್‌ ಡೇ ಟೆಸ್ಟ್‌ – 11 ವಿಕೆಟ್‌ ಪತನ, ಚರ್ಚೆಗೆ ಗ್ರಾಸವಾದ ರನೌಟ್‌ ನಿರ್ಧಾರ

    ಬಾಕ್ಸಿಂಗ್‌ ಡೇ ಟೆಸ್ಟ್‌ – 11 ವಿಕೆಟ್‌ ಪತನ, ಚರ್ಚೆಗೆ ಗ್ರಾಸವಾದ ರನೌಟ್‌ ನಿರ್ಧಾರ

    – ಆಸ್ಟ್ರೇಲಿಯಾ 195 ರನ್‌ಗಳಿಗೆ ಆಲೌಟ್‌
    – ಭಾರತ 1 ವಿಕೆಟ್‌ ನಷ್ಟಕ್ಕೆ 36 ರನ್‌

    ಮೆಲ್ಬರ್ನ್‌: ಬಾಕ್ಸಿಂಗ್‌ ಡೇ ಕ್ರಿಕೆಟ್‌ ಟೆಸ್ಟ್‌ ಪಂದ್ಯದ ಮೊದಲ ದಿನವೇ 11 ವಿಕೆಟ್‌ಗಳು ಪತನಗೊಂಡಿದೆ. ಈ ಮೂಲಕ ಎರಡನೇ ಟೆಸ್ಟ್‌ ಪಂದ್ಯದಲ್ಲೂ ಬೌಲರ್‌ಗಳ ಆರ್ಭಟ ಮುಂದುವರಿದಿದೆ.

    ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ನಾಯಕ ಟಿಮ್ ಪೈನೆ ರನೌಟ್‌ ನೀಡದಿರುವ ನಿರ್ಧಾರ ಚರ್ಚೆಗೆ ಗ್ರಾಸವಾಗಿದೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ 72.3 ಓವರ್‌ಗಳಲ್ಲಿ 195 ರನ್‌ಗಳಿಗೆ ಆಲೌಟ್‌ ಆಯ್ತು.

    ಬುಮ್ರಾ 56 ರನ್‌ ನೀಡಿ 4 ವಿಕೆಟ್‌ ಕಿತ್ತರೆ ಅಶ್ವಿನ್‌ 35 ರನ್‌ ನೀಡಿ 3 ವಿಕೆಟ್‌ ಕಿತ್ತರು. ಮೊದಲ ಟೆಸ್ಟ್‌ ಪಂದ್ಯವಾಡಿದ ಮೊಹಮ್ಮದ್‌ ಸಿರಾಜ್‌ 40 ರನ್‌ ನೀಡಿ 2 ವಿಕೆಟ್‌ ಕಿತ್ತರು. ಇದನ್ನೂ ಓದಿ: ಬಾಕ್ಸಿಂಗ್‌ ಡೇ ಟೆಸ್ಟ್‌ ಎಂದರೇನು? ಯಾಕೆ ಈ ಹೆಸರು ಬಂತು?

    ಆಸ್ಟ್ರೇಲಿಯಾದ ಪರವಾಗಿ ಮ್ಯಾಥ್ಯೂ ವೇಡ್‌ 30 ರನ್‌, ಮಾರ್ನಸ್‌ ಲಬುಶೇನ್‌ 48 ರನ್‌, ಟ್ರಾವಿಸ್‌ ಹೆಡ್‌ 38 ರನ್‌, ನಥನ್‌ ಲಿಯಾನ್‌ 20 ರನ್‌ ಹೊಡೆದರು.

    ಅಶ್ವಿನ್‌ ಎಸೆದ 55ನೇ ಓವರಿನ ಕೊನೆಯ ಎಸೆತವನ್ನು ಕ್ಯಾಮರಾನ್‌ ಗ್ರೀನ್‌ ಆಫ್‌ ಸೈಡಿಗೆ ಹೊಡೆದು ಓಡಿದರು. ಈ ವೇಳೆ ಬಾಲ್‌ ಉಮೇಶ್‌ ಯಾದವ್‌ ಕೈ ಸೇರಿತ್ತು. ಯಾದವ್‌ ನೇರವಾಗಿ ಕೀಪರ್‌ ರಿಷಬ್‌ಪಂತ್‌ಗೆ ಎಸೆದರು. ಮೂರನೇ ಅಂಪೈರ್‌ ಔಟ್‌ ಎಂದು ತೀರ್ಮಾನಿಸಲು ಸಾಧ್ಯವಿಲ್ಲ ಎಂದು ಹೇಳಿ ನಾಟೌಟ್‌ ತೀರ್ಪು ನೀಡಿದರು.

    ರಿಪ್ಲೇಯಲ್ಲಿ ಬೇಲ್ಸ್‌ ಹಾರುವ ಸಮಯದಲ್ಲಿ ಬ್ಯಾಟ್‌ ಗೆರೆಯಿಂದ ಹಿಂದೆ ಇರುವುದು ಸ್ಪಷ್ಟವಾಗಿತ್ತು. ಈ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಈಗ ಚರ್ಚೆ ನಡೆಯುತ್ತಿದೆ.

    ಆರಂಭದಲ್ಲೇ ಕುಸಿತ:
    ಮೊದಲ ಇನ್ನಿಂಗ್ಸ್‌ ಆರಂಭಿಸಿದ ಭಾರತ ಆರಂಭದಲ್ಲೇ ಕುಸಿತ ಕಂಡಿದ್ದು 11 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 36 ರನ್‌ ಗಳಿಸಿದೆ. ಆರಂಭಿಕ ಆಟಗಾರ ಮಾಯಂಕ್‌ ಅಗರವ್‌ವಾಲ್‌ ಮೊದಲ ಓವರಿನಲ್ಲಿ ಶೂನ್ಯಕ್ಕೆ ಔಟಾಗಿದ್ದಾರೆ. ಮೊದಲ ಪಂದ್ಯ ಆಡುತ್ತಿರುವ ಶುಭಮನ್‌ ಗಿಲ್‌ 28 ರನ್‌ ಚೇತೇಶ್ವರ ಪೂಜಾರ 7 ರನ್‌ಗಳಿಸಿ ನಾಳೆ ಬ್ಯಾಟಿಂಗ್‌ ಮುಂದುವರಿಸಲಿದ್ದಾರೆ.

  • ಇಂಡೋ, ಆಸೀಸ್‌ ಮ್ಯಾಚ್‌ – ಬಾಕ್ಸಿಂಗ್‌ ಡೇ ಟೆಸ್ಟ್‌ ಎಂದು ಯಾಕೆ ಕರೆಯುತ್ತಾರೆ?

    ಇಂಡೋ, ಆಸೀಸ್‌ ಮ್ಯಾಚ್‌ – ಬಾಕ್ಸಿಂಗ್‌ ಡೇ ಟೆಸ್ಟ್‌ ಎಂದು ಯಾಕೆ ಕರೆಯುತ್ತಾರೆ?

    ಮೆಲ್ಬರ್ನ್‌:  ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರುವ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯ ವೀಕ್ಷಿಸಲು ಅಭಿಮಾನಿಗಳಿಗೆ ಅವಕಾಶ ಸಿಗುವ ಸಾಧ್ಯತೆಯಿದೆ.
    ಆಸ್ಟ್ರೇಲಿಯಾದಲ್ಲಿ ಕೋವಿಡ್‌ 19 ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೇರಲಾಗಿರುವ ನಿರ್ಬಂಧಗಳನ್ನು ತೆಗೆಯಲಾಗುತ್ತಿದೆ. ವಿಕ್ಟೋರಿಯಾ ರಾಜ್ಯದ ಪ್ರೀಮಿಯರ್‌ ಡೇನಿಯಲ್‌ ಆಂಡ್ರ್ಯೂಸ್‌ ಪ್ರತಿಕ್ರಿಯಿಸಿ, ಮೆಲ್ಬರ್ನ್‌ನಲ್ಲಿ ನಡೆಯಲಿರುವ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದಲ್ಲಿ ವೀಕ್ಷಕರು ಇರುತ್ತಾರೆ ಎಂದು ನಾನು ವಿಶ್ವಾಸದಿಂದ ಹೇಳುತ್ತೇನೆ ಎಂದು ಹೇಳಿದ್ದಾರೆ.
    ಬಾಕ್ಸಿಂಗ್‌ ಡೇ ಯಾಕೆ?
    ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯಲಿರುವ ಟೆಸ್ಟ್‌ ಪಂದ್ಯಕ್ಕೆ ಬಾಕ್ಸಿಂಗ್‌ ಡೇ ಎಂದು ಕರೆಯಲು ಕಾರಣವಿದೆ.  ಇಂಗ್ಲೆಂಡ್ ಹಾಗೂ ಹಲವು ದೇಶಗಳಲ್ಲಿ ಕ್ರಿಸ್‌ಮಸ್ ಮರುದಿನ ಅಂದರೆ ಡಿಸೆಂಬರ್ 26ರ ರಜಾದಿನವನ್ನೂ ಬಾಕ್ಸಿಂಗ್ ಡೇ ಎಂದು ಕರೆಯಲಾಗುತ್ತದೆ.  ಜರ್ಮನಿ, ಪೊಲೆಂಡ್,  ರೋಮೆನಿಯಾ, ಹಂಗೇರಿ, ನೆದರ್ಲೆಂಡ್ಸ್ ಸೇರಿದಂತೆ ಕೆಲ ದೇಶಗಳಲ್ಲಿ ಡಿಸೆಂಬರ್ 26ರನ್ನು ಸೆಕೆಂಡ್ ಕ್ರಿಸ್‌ಮಸ್ ಡೇ ಎಂದು ಆಚರಿಸಲಾಗುತ್ತಿದೆ.  ಈ ದಿನ ಸಾರ್ವಜನಿಕ ರಜಾ ದಿನವಾಗಿದ್ದು, ಐರ್ಲೆಂಡ್‌ ಹಾಗೂ ಸ್ಪೇನ್‌ನ ಕ್ಯಾಟಲೋನಿಯಾ ರೀಜನ್‌ನಲ್ಲಿ ʼಸೈಂಟ್ ಸ್ಟೀಫನ್ ಡೇʼ ಎಂದು ಕರೆಯಲಾಗುತ್ತದೆ.
    ಈ ಹಿಂದೆ ಆಸ್ಟ್ರೇಲಿಯಾ ಬ್ರಿಟಿಷರ ವಸಹತು ಆಗಿತ್ತು. ಈ ಸಮಯದಲ್ಲಿ ಇಂಗ್ಲೆಂಡ್‌ ರಾಜಮನೆತನದವರು ಕ್ರಿಸ್ಮಸ್‌ ಸಮಯದಲ್ಲಿ ಕೆಲಸ ಮಾಡಿದ ನೌಕರರಿಗೆ ಡಿ.26 ರಂದು ಬಾಕ್ಸ್‌ ಮೂಲಕ ಉಡುಗೊರೆ ನೀಡುತ್ತಿದ್ದರು. ಬಾಕ್ಸ್‌ಗಳಲ್ಲಿ ಸಿಹಿ ತಿಂಡಿ ಸೇರಿದಂತೆ ಹಲವು ಉಡುಗೊರೆ ಡಿ.26 ರಂದು ಸಿಗುತ್ತಿದ್ದ ಕಾರಣ ಈ ದಿನಕ್ಕೆ ‘ಬಾಕ್ಸಿಂಗ್‌ ಡೇ’ ಎಂಬ ಹೆಸರು ಬಂತು. ಹೀಗಾಗಿ ಈ ದಿನ ನಡೆಯುವ ಟೆಸ್ಟ್ ಪಂದ್ಯಕ್ಕೆ ‘ಬಾಕ್ಸಿಂಗ್ ಡೇ ಟೆಸ್ಟ್’ ಪಂದ್ಯ ಎಂಬ ಹೆಸರು ಬಂದಿದೆ.
    ಮೆಲ್ಬರ್ನ್‌ನಲ್ಲೇ ಯಾಕೆ?
    ಬಹಳ ಹಿಂದೆ ಕ್ರಿಸ್ಮಸ್‌ ಸಮಯದಲ್ಲಿ ಶೆಫೀಲ್ಡ್ ಶೀಲ್ಡ್ (ಆಸ್ಟ್ರೇಲಿಯಾದ ಪ್ರಥಮ ದರ್ಜೆ ಕ್ರಿಕೆಟ್‌) ಕ್ರಿಕೆಟ್‌ ಟೂರ್ನಿ ವಿಕ್ಟೋರಿಯಾ  ಮತ್ತು ನ್ಯೂ ಸೌತ್‌ ವೇಲ್ಸ್‌  ತಂಡಗಳ ನಡುವೆ ಮೆಲ್ಬರ್ನ್‌ನಲ್ಲಿ ನಡೆಯುತ್ತಿತ್ತು. 1950-51 ರಲ್ಲಿ ಆಶಸ್‌ ಸರಣಿ ಡಿ.22 ರಿಂದ 27 ರವರೆಗೆ ಮೆಲ್ಬರ್ನ್‌ ಅಂಗಳದಲ್ಲಿ ನಡೆದಿತ್ತು. ಈ ಪಂದ್ಯದ ನಾಲ್ಕನೇ ದಿನವನ್ನು(ಡಿ.26) ಬಾಕ್ಸಿಂಗ್ ಡೇ ಎಂದು ಕರೆಯಲಾಗುತ್ತಿತ್ತು.  ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಮೊದಲ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಆಡಿತ್ತು. ಪಂದ್ಯದ ನಾಲ್ಕನೇ ದಿನವಾದ ಬಾಕ್ಸಿಂಗ್ ಡೆ ದಿನ ಬರೋಬ್ಬರಿ 60,486 ಮಂದಿ ಕ್ರಿಕೆಟ್‌  ವೀಕ್ಷಿಸಿದ್ದರು.
    1980ರಲ್ಲಿ ಡಿಸೆಂಬರ್ 22 ರಿಂದ 27 ರವರೆಗೆ ನಡೆಯತ್ತಿದ್ದ ಟೆಸ್ಟ್ ಪಂದ್ಯದ ದಿನಾಂಕವನ್ನು ಬದಲಾಯಿಸಿ ಡಿ.26 ರಂದು ಟೆಸ್ಟ್ ಕ್ರಿಕೆಟ್ ಆಯೋಜಿಸಲು ಮೆಲ್ಬರ್ನ್‌ ಕ್ರಿಕೆಟ್ ಕ್ಲಬ್ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಧರಿಸಿತು. ಬಳಿಕ ಪ್ರತಿ ವರ್ಷ ಡಿಸೆಂಬರ್ 26 ರಂದು ಆಸ್ಟ್ರೇಲಿಯಾ ಬಾಕ್ಸಿಂಗ್ ಡೇ ಟೆಸ್ಟ್‌ ಪಂದ್ಯ ಆಯೋಜಿಸುತ್ತಿದೆ.  ಇಂಗ್ಲೆಂಡ್, ಭಾರತ, ದಕ್ಷಿಣ  ಆಫ್ರಿಕಾ, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಪಾಕಿಸ್ತಾನ ತಂಡಗಳು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ಆಡಿದೆ. 1985ರಲ್ಲಿ  ಭಾರತ ಮೊದಲ ಬಾಕ್ಸಿಂಗ್‌ ಡೇ ಟೆಸ್ಟ್‌ ಆಡಿತ್ತು. ಈ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತ್ತು.
    ಭಾರತದ ಸಾಧನೆ ಏನು?
    ಭಾರತ ಮೊದಲು ಬಾಕ್ಸಿಂಗ್ ಡೆ ಟೆಸ್ಟ್ ಪಂದ್ಯ ಆಡಿದ್ದು 1985ರಲ್ಲಿ. 1985, 1991, 1999, 2003, 2007, 2011, 2014, 2018 ರಲ್ಲಿ ಭಾರತ ಬಾಕ್ಸಿಂಗ್‌ ಡೇ ಟೆಸ್ಟ್‌ ಆಡಿದೆ. ಈ ಪೈಕಿ 1985 ಮತ್ತು 2014ರ ಪಂದ್ಯ ಡ್ರಾ ಗೊಂಡಿತ್ತು. 2018ರ ಪಂದ್ಯವನ್ನು 137 ರನ್‌ಗಳಿಂದ ಗೆದ್ದುಕೊಂಡಿತ್ತು.  ಉಳಿದ 5 ಪಂದ್ಯಗಳನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿದೆ.
    2018ರಲ್ಲಿ ಕೊಹ್ಲಿ ನೇತೃತ್ವದ ಭಾರತ ಮೊದಲ ಇನ್ನಿಂಗ್ಸ್‌ ಅನ್ನು  443 ರನ್‌ಗಳಿಗೆ ಡಿಕ್ಲೇರ್‌ ಮಾಡಿಕೊಂಡಿತ್ತು.  ಆಸ್ಟ್ರೇಲಿಯಾ 151 ರನ್‌ಗಳಿಗೆ ಆಲೌಟ್‌ ಆಗಿತ್ತು. ಭಾರತ ಎರಡನೇ ಇನ್ನಿಂಗ್ಸ್‌ ಅನ್ನು 106 ರನ್‌ಗಳಿಗೆ ಡಿಕ್ಲೇರ್‌ ಮಾಡಿಕೊಂಡಿದ್ದರೆ  ಆಸ್ಟ್ರೇಲಿಯಾ 261 ರನ್‌ಗಳಿಗೆ ಆಲೌಟ್‌ ಆಗಿತ್ತು.  ಬುಮ್ರಾ ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ ಪಡೆದಿದ್ದರೆ ಎರಡನೇ ಇನ್ನಿಂಗ್ಸ್‌ನಲ್ಲಿ 3 ವಿಕೆಟ್‌  ಪಡೆದು ಮಿಂಚಿದ್ದರು. 9 ವಿಕೆಟ್‌ ಪಡೆದು ಆಸ್ಟ್ರೇಲಿಯಾ ಸೋಲಿಗೆ ಕಾರಣವಾಗಿದ್ದ ಬುಮ್ರಾಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.
  • ಮೂರನೇ ಪಂದ್ಯಕ್ಕೆ ಇತ್ತಂಡಗಳು ರೆಡಿ- `ಬಾಕ್ಸಿಂಗ್ ಡೇ’ ಟೆಸ್ಟ್ ಕರೆಯೋದು ಯಾಕೆ?

    ಮೂರನೇ ಪಂದ್ಯಕ್ಕೆ ಇತ್ತಂಡಗಳು ರೆಡಿ- `ಬಾಕ್ಸಿಂಗ್ ಡೇ’ ಟೆಸ್ಟ್ ಕರೆಯೋದು ಯಾಕೆ?

    ಮೆಲ್ಬರ್ನ್: ಪ್ರತಿಷ್ಠೆಯ ಕಣವಾಗಿರುವ ‘ಬಾಕ್ಸಿಂಗ್ ಡೇ’ ಪಂದ್ಯಕ್ಕೆ ಆಸ್ಟ್ರೇಲಿಯಾ ಹಾಗೂ ಟೀಂ ಇಂಡಿಯಾ ಕಸರತ್ತು ನಡೆಸುತ್ತಿದ್ದು ಆರಂಭಿಕ ಬ್ಯಾಟ್ಸ್ ಮನ್‍ಗಳಾದ ಕೆ.ಎಲ್.ರಾಹುಲ್ ಮತ್ತು ಮುರಳಿ ವಿಜಯ್ ಅವರ ಬದಲಾಗಿ ಕರ್ನಾಟಕದ ಮಯಾಂಕ್ ಅಗರ್ವಾಲ್ ಹಾಗೂ ಆಂಧ್ರದ ಹನುಮ ವಿಹಾರಿ ಅವರು ಕಣಕ್ಕೆ ಇಳಿಯುವ ಸಾಧ್ಯತೆಯಿದೆ.

    ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳು ತಲಾ ಒಂದು ಜಯ ಸಾಧಿಸಿದ್ದು, ಬುಧವಾರದಿಂದ ಮೆಲ್ಬರ್ನ್ ನಲ್ಲಿ ನಡೆಯಲಿರುವ ಸಾಂಪ್ರದಾಯಿಕ ಬಾಕ್ಸಿಂಗ್ ಡೇ ಟೆಸ್ಟ್ ಉಭಯ ತಂಡಗಳಿಗೆ ಸವಾಲಾಗಿದೆ.

    ಅಡಿಲೇಡ್‍ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ನಲ್ಲಿ ಭಾರತ 31 ರನ್‍ಗಳಿಂದ ಗೆದ್ದಿದ್ದರೆ, ಪರ್ತ್‍ನಲ್ಲಿ ನಡೆದ ಎರಡನೇ ಪಂದ್ಯವನ್ನು ಆಸ್ಟ್ರೇಲಿಯಾ 146 ರನ್‍ಗಳಿಂದ ಗೆದ್ದು ಸಮಬಲದ ಹೋರಾಟ ನೀಡಿದೆ.

    ಬಾಕ್ಸಿಂಗ್ ಡೇ ಅಂದ್ರೆ ಏನು?:
    ಕ್ರಿಸ್ಮಸ್ ನಂತರದ ದಿನವನ್ನು ಬಾಕ್ಸಿಂಗ್ ಡೇ ಎಂದು ಕರೆಯಲಾಗುತ್ತದೆ. ಈ ಪರಿಕಲ್ಪನೆ ಆರಂಭಗೊಂಡದ್ದು ಇಂಗ್ಲೆಂಡ್‍ನಲ್ಲಿ. ಆದರೆ ಈ ದಿನವನ್ನು ಐರ್ಲೆಂಡ್ ಮತ್ತು ಸ್ಪೇನ್‍ನಲ್ಲಿ ಸೇಂಟ್ ಸ್ಟೀಫನ್ಸ್ ದಿನ ಎಂದು ಹೆಸರಿನಿಂದ ಕರೆಯಲಾಗುತ್ತದೆ. ಪೋಲೆಂಡ್, ರೊಮೇನಿಯಾ, ಹಂಗೇರಿ, ಜರ್ಮನಿ ಮತ್ತು ನೆದರ್ಲೆಂಡ್ಸ್‍ನಲ್ಲಿ ಬಾಕ್ಸಿಂಗ್ ಡೇ ಬದಲಾಗಿದೆ ಎರಡನೇ ಕ್ರಿಸ್‍ಮಸ್ ದಿನ ಎಂದು ಸಂಭ್ರಮಿಸಲಾಗುತ್ತದೆ.

    ಯುರೋಪ್ ರಾಷ್ಟ್ರಗಳ ಚರ್ಚ್ ನಲ್ಲಿ ವರ್ಷಾಂತ್ಯದ ಕೊನೆಯ ವಾರವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಈ ವೇಳೆ ಚರ್ಚ್‍ಗಳಲ್ಲಿ ಪೊಟ್ಟಣಗಳನ್ನು (ಬಾಕ್ಸ್) ಇಟ್ಟು ಹಣ ಮತ್ತು ವಸ್ತುಗಳನ್ನು ಕಾಣಿಕೆ ರೂಪದಲ್ಲಿ ಪಡೆಯಲಾಗುತ್ತದೆ. ಈ ಪೊಟ್ಟಣಗಳಿಂದಲೇ ಬಾಕ್ಸಿಂಗ್ ಡೇ ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ. ಆಸ್ಟ್ರೇಲಿಯಾ ಕ್ರಿಕೆಟ್ ಕ್ಲಬ್ ಡಿಸೆಂಬರ್ 26 ರಂದು ಟೆಸ್ಟ್ ಪಂದ್ಯವನ್ನು ನಡೆಸುತ್ತಾ ಬಂದಿರುವ ಕಾರಣ ಈ ಟೆಸ್ಟ್ ಪಂದ್ಯವನ್ನು `ಬಾಕ್ಸಿಂಗ್ ಡೇ’ ಪಂದ್ಯ ಎಂದೇ ಕರೆಯಲಾಗುತ್ತದೆ.

    ಲಕ್ಕಿ ಕ್ರೀಡಾಂಗಣ:
    ಮೆಲ್ಬರ್ನ್ ಮೈದಾನ ಆಸ್ಟ್ರೇಲಿಯಾ ತಂಡದ ಲಕ್ಕಿ ಕ್ರೀಡಾಂಗಣವಾಗಿದೆ. ಇಲ್ಲಿ ಆತಿಥೇಯರು ಉತ್ತಮ ಸಾಧನೆ ಮಾಡಿದ್ದು, ಆಡಿದ ಎಲ್ಲ ತಂಡಗಳ ಮೇಲೆಯೂ ಆಧಿಪತ್ಯ ಸ್ಥಾಪಿಸಿದ್ದಾರೆ. ಉಭಯ ತಂಡಗಳು ಒಂದೊಂದು ಪಂದ್ಯವನ್ನು ಗೆದ್ದಿರುವ ಕಾರಣ ಬಾಕ್ಸಿಂಗ್ ಡೇ ಪಂದ್ಯ ಕುತೂಹಲವನ್ನು ಮೂಡಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv