Tag: Box

  • ಪವಿತ್ರಾ ಗೌಡ ತಾಯಿ ಜೈಲಿಗೆ ತಂದಿದ್ದ ಬಾಕ್ಸ್ ವಾಪಸ್

    ಪವಿತ್ರಾ ಗೌಡ ತಾಯಿ ಜೈಲಿಗೆ ತಂದಿದ್ದ ಬಾಕ್ಸ್ ವಾಪಸ್

    ರೇಣುಕಾಸ್ವಾಮಿ ಕೊಲೆ ಕೇಸ್‍ ನಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಮುರೀತಾ ಇರೋ ದರ್ಶನ್ ಅವರ ಆಪ್ತ ಸ್ನೇಹಿತೆ ಪವಿತ್ರಾ ಗೌಡಗಾಗಿ ತಂದಿದ್ದ ಬಾಕ್ಸ್ ಅನ್ನು ಜೈಲು ಸಿಬ್ಬಂದಿ ವಾಪಸ್ಸು ಕಳುಹಿಸಿದ್ದಾರೆ. ಜೈಲಿನಲ್ಲಿ ತಿಂಡಿ ಇಟ್ಟುಕೊಳ್ಳುವುದಕ್ಕಾಗಿ ಪವಿತ್ರಾ ಗೌಡ ತಾಯಿ ಬಾಕ್ಸ್ ತಂದಿದ್ದರು.

    ಪವಿತ್ರಾ ಗೌಡ ಇರೋ ಕೋಣೆಯಲ್ಲಿ 13ಕ್ಕೂ ಹೆಚ್ಚು ಕೈದಿಗಳು ಇದ್ದಾರೆ ಎನ್ನೋ ಮಾಹಿತಿ ಇದೆ. ಹಾಗಾಗಿ ಮನೆಯಿಂದ ತಂದ ತಿಂಡಿಯನ್ನು ಇಟ್ಟುಕೊಳ್ಳಲು ಬಾಕ್ಸ್ ಬೇಕು ಅಂತ ತಾಯಿಗೆ ಪವಿತ್ರ ಗೌಡ ಹೇಳಿದ್ದರಂತೆ. ಮಗಳ ಮಾತಿನಂತೆ ಇಂದು ಜೈಲಿಗೆ ಬಾಕ್ಸ್ ಸಮೇತ ಬಂದಿದ್ದರು ಪವಿತ್ರಾ ಗೌಡ ತಾಯಿ. ಆದರೆ, ಬಾಕ್ಸ್ ಅನ್ನು ಒಳಗೆ ಕಳುಹಿಸಲು ಜೈಲು ಸಿಬ್ಬಂದಿ ಒಪ್ಪಿಲ್ಲ.

     

    ಜೈಲು ನಿಯಮದ ಪ್ರಕಾರ ಹೊರಗಿನ ಪಾತ್ರೆಗಳಿಗೆ ಅವಕಾಶವಿಲ್ಲ. ಇದನ್ನು ಪವಿತ್ರಾ ತಾಯಿಗೆ ತಿಳಿಹೇಳಿ ವಾಪಸ್ಸು ಕಳುಹಿಸಿದ್ದಾರೆ. ಪವಿತ್ರಾ ನೋಡಲು ತಾಯಿ, ತಂದೆ ಮತ್ತು ಮಗಳು ಪಾತ್ರ ಬರುತ್ತಿರುವುದು ಸಹಜವಾಗಿಯೇ ಪವಿತ್ರಾಗೆ ಆತಂಕ ತಂದೊಡ್ಡಿದೆ. ತನ್ನ ಸಪೋರ್ಟಿಗೆ ದರ್ಶನ್ ನಿಲ್ಲುತ್ತಾರೆ ಎಂದು ಪವಿತ್ರಾ ಅಂದುಕೊಂಡಿದ್ದಳು. ಆದರೆ, ದರ್ಶನ್ ಅಂತರ ಕಾಪಾಡಿಕೊಂಡಿದ್ದಾರೆ ಎಂದು ಗೊತ್ತಾಗಿದೆ.

  • ರೈಲ್ವೆ ನಿಲ್ದಾಣದ ಬಳಿ 2 ಅನಾಮಧೇಯ ಬಾಕ್ಸ್ ಪತ್ತೆ – ಸ್ಥಳದಲ್ಲಿ ಆತಂಕ

    ರೈಲ್ವೆ ನಿಲ್ದಾಣದ ಬಳಿ 2 ಅನಾಮಧೇಯ ಬಾಕ್ಸ್ ಪತ್ತೆ – ಸ್ಥಳದಲ್ಲಿ ಆತಂಕ

    ಶಿವಮೊಗ್ಗ: ನಗರದ ರೈಲ್ವೆ ನಿಲ್ದಾಣದ (Shivamogga Railway Station) ಪಾರ್ಕಿಂಗ್ ಸ್ಥಳದಲ್ಲಿ 2 ಅನಾಮಧೇಯ ಬಾಕ್ಸ್‌ಗಳು (Anonymous Boxes) ಪತ್ತೆಯಾಗಿದ್ದು, ಸ್ಥಳದಲ್ಲಿ ಆತಂಕ ಉಂಟುಮಾಡಿದೆ.

    ರೈಲ್ವೆ ನಿಲ್ದಾಣದಲ್ಲಿ ಅನಾಮಧೇಯ ಬಾಕ್ಸ್ ಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಹಾಗೂ ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅನಾಮಧೇಯ ಬಾಕ್ಸ್ ಪತ್ತೆಯಾಗಿರುವ ಸ್ಥಳದ ಸುತ್ತ ಬ್ಯಾರಿಕೇಡ್ ಹಾಕಲಾಗಿದ್ದು, ಸಾರ್ವಜನಿಕರು ಹತ್ತಿರ ಹೋಗದಂತೆ ನಿರ್ಬಂಧ ವಿಧಿಸಲಾಗಿದೆ.

    ಸದ್ಯ ಬಾಕ್ಸ್ ಸುತ್ತ ಮರಳಿನ ಚೀಲ ಜೋಡಿಸಲಾಗಿದೆ. ಬಾಕ್ಸ್ ಪರಿಶೀಲನೆ ನಡೆಸಲು ಬೆಂಗಳೂರಿನಿಂದ ಬಾಂಬ್ ನಿಷ್ಕ್ರಿಯ ತಂಡ ಹೊರಟ್ಟಿದ್ದು, ಸಂಜೆ ವೇಳೆಗೆ ಶಿವಮೊಗ್ಗ ತಲುಪುವ ಸಾಧ್ಯತೆ ಇದೆ. ಬಾಂಬ್ ನಿಷ್ಕ್ರಿಯ ತಂಡ ಆಗಮಿಸಿದ ನಂತರ ಬಾಕ್ಸ್ ಓಪನ್ ಮಾಡಲಿದ್ದಾರೆ. ಇದನ್ನೂ ಓದಿ: ನಾಪತ್ತೆಯಾಗಿರೋ 3 ಬೀದಿ ನಾಯಿಗಳಿಗಾಗಿ ತೀವ್ರ ಹುಡುಕಾಟ – ಹುಡುಕಿ ಕೊಟ್ಟವರಿಗೆ 35 ಸಾವಿರ ಬಹುಮಾನ!

    ಈ ಅನಾಮಧೇಯ ಬಾಕ್ಸ್‌ಗಳನ್ನು ಕಾರೊಂದರಲ್ಲಿ ತಂದು ಇಳಿಸಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸರು ಸಿಸಿ ಕ್ಯಾಮೆರಾ ದೃಶ್ಯವನ್ನು ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕೋಲ್ಕತ್ತಾ ಪೊಲೀಸರಿಂದ ಬಿಸಿಸಿಐಗೆ ನೋಟಿಸ್

  • ಕರ್ಫ್ಯೂ ವೇಳೆ ಪೆಟ್ಟಿಗೆಯೊಳಗೆ ಲಾಕ್ ಆದ ಬಾಲಕ – ಪೊಲೀಸರಿಂದ ರಕ್ಷಣೆ

    ಕರ್ಫ್ಯೂ ವೇಳೆ ಪೆಟ್ಟಿಗೆಯೊಳಗೆ ಲಾಕ್ ಆದ ಬಾಲಕ – ಪೊಲೀಸರಿಂದ ರಕ್ಷಣೆ

    ವಿಜಯಪುರ: ಕೊರೊನಾ ಭೀತಿ ಹಿನ್ನೆಲೆ ಭಾರತ ಸಂಪೂರ್ಣ ಲಾಕ್ ಡೌನ್ ಆಗಿದೆ. ಹಾಗಾಗಿ ವಿಜಯಪುರ ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿದೆ. ಈ ವೇಳೆ ಬಾಲಕನೊರ್ವ ಕಬ್ಬಿನ ಹಾಲಿನ ಗಾಡಿಯೊಳಗೆ ಲಾಕ್ ಆದ ಘಟನೆ ವಿಜಯಪುರದ ಕೇಂದ್ರ ಬಸ್ ನಿಲ್ದಾಣದ ಬಳಿ ನಡೆದಿದೆ.

    ಆಟವಾಡುತ್ತ ಕಬ್ಬಿನ ಗಾಡಿಯ ಪೆಟ್ಟಿಗೆಯೊಳಗೆ ಬಾಲಕ ಹೋಗಿದ್ದಾನೆ. ನಂತರ ಗಾಡಿ ಮಾಲೀಕ ಬಾಲಕನನ್ನು ಗಮನಿಸದೆ ಪೆಟ್ಟಿಗೆಗೆ ಬೀಗ ಜಡಿದು ಮನೆಗೆ ತೆರಳಿದ್ದಾನೆ. ಬಳಿಕ ಟ್ರಾಫಿಕ್ ಪೊಲೀಸರು ಸ್ಥಳದಲ್ಲಿ ಮುಕ್ಕಾಂ ಹೂಡಿದ್ದಾರೆ. ಆಗ ಟ್ರಾಫಿಕ್ ಪೊಲೀಸ್ ಅರವಿಂದ ನಾಟೀಕರ ಅವರಿಗೆ ಯಾರೋ ಕಿರುಚುತ್ತಿರುವ ಶಬ್ದ ಕೇಳಿದೆ.

    ಶಬ್ದ ಎಲ್ಲಿಂದ ಬರುತ್ತಿದೆ ಎಂದು ಗಮನಿಸಿದಾಗ ಪೆಟ್ಟಿಗೆ ಒಳಗೆ ಬಾಲಕ ಕೂಗುತ್ತಿರುವುದು ಕೇಳಿಸಿದೆ. ಆಗ ಟ್ರಾಫಿಕ್ ಪೊಲೀಸ್ ಬೀಗ ಹಾಕಿದ ಪೆಟ್ಟಿಗೆಯನ್ನು ಮುರಿದು ಬಾಲಕನ್ನು ಹೊರತೆಗೆದಿದ್ದಾರೆ. ಹೊರಬರಲಾಗದೆ ಬಾಲಕ ಉಸಿರಾಟದ ತೊಂದರೆಯಿಂದ ಒದ್ದಾಡುತ್ತಿದ್ದಾಗ ಅದೃಷ್ಟವಶಾತ್ ಅರವಿಂದ ಅವರು ನೋಡಿ ಒಂದು ಪುಟ್ಟ ಜೀವವನ್ನು ಉಳಿಸಿದ್ದಾರೆ. ಪೇದೆ ಅರವಿಂದವರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.

  • ಔಷಧ, ಪಡಿತರ ಖರೀದಿ ಸೇರಿದಂತೆ ಅಗತ್ಯ ವಸ್ತುಗಳ ಅಂಗಡಿ ಮುಂದೆ ಬಾಕ್ಸ್

    ಔಷಧ, ಪಡಿತರ ಖರೀದಿ ಸೇರಿದಂತೆ ಅಗತ್ಯ ವಸ್ತುಗಳ ಅಂಗಡಿ ಮುಂದೆ ಬಾಕ್ಸ್

    – ಸಾಮಾಜಿಕ ಅಂತರ ಕಾಯ್ದುಕೊಳ್ಳಿ

    ಹಾವೇರಿ: ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಹೀಗಾಗಿ ಜನರಿಗೆ ಈ ಬಗ್ಗೆ ಅರಿವು ಮೂಡಿಸಲು ಜಿಲ್ಲೆಯ ಹಿರೇಕೆರೂರು ತಾಲೂಕಿನ ಅಧಿಕಾರಿಗಳು ಹೊಸ ಪ್ಲಾನ್ ಮಾಡಿದ್ದಾರೆ.

    ಔಷಧ ಖರೀದಿ, ಪಡಿತರ ಖರೀದಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಅಂಗಡಿಗಳಿಗೆ ಬರುವ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಅಧಿಕಾರಿಗಳು ಹೊಸ ಪ್ಲಾನ್ ಮಾಡಿದ್ದಾರೆ. ಅದೇನೆಂದರೆ ಔಷಧಿ, ಪಡಿತರ ಅಂಗಡಿ, ದಿನಸಿ ವಸ್ತುಗಳ ಅಂಗಡಿಗಳ ಮುಂದೆ ಸುಣ್ಣದಿಂದ ಬಾಕ್ಸ್ ಚಿತ್ರ ಬರೆಸಿದ್ದಾರೆ. ಅದರಲ್ಲೇ ಜನರು ನಿಂತುಕೊಂಡು ಸಾಮಾಜಿಕ ಅಂತರ ಕಾಯ್ದುಕೊಂಡು ದಿನಸಿ ವಸ್ತುಗಳನ್ನ ತೆಗೆದುಕೊಂಡು ಹೋಗುವಂತೆ ಸೂಚನೆ ನೀಡಿದ್ದಾರೆ.

    ಹಿರೇಕೆರೂರು ತಹಶೀಲ್ದಾರ ಆರ್.ಎಚ್.ಬಾಗವಾನ್, ಸಿಪಿಐ ಮಂಜುನಾಥ್ ಪಂಡಿತ ಮಾಡಿರುವ ಈ ಪ್ಲಾನ್‍ನಿಂದ ಪಟ್ಟಣದ ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಔಷಧಿ, ಪಡಿತರ ಸೇರಿದಂತೆ ದಿನಸಿ ವಸ್ತುಗಳನ್ನ ಖರೀದಿಸಿಕೊಂಡು ಮನೆಗೆ ಹೋಗುತ್ತಿದ್ದಾರೆ.

  • ದೇವರ ಪ್ರಸಾದವೆಂದು ಒಡೆದಿದ್ದಕ್ಕೆ ಕೈ ಹೋಯ್ತು- ಸ್ಫೋಟದಲ್ಲಿ ಕೈ ಕಳೆದುಕೊಂಡ ಯುವಕ

    ದೇವರ ಪ್ರಸಾದವೆಂದು ಒಡೆದಿದ್ದಕ್ಕೆ ಕೈ ಹೋಯ್ತು- ಸ್ಫೋಟದಲ್ಲಿ ಕೈ ಕಳೆದುಕೊಂಡ ಯುವಕ

    – ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಆತಂಕದ ವಾತಾವರಣ
    – ಎಂಟು ಬಾಕ್ಸ್‌ಗಳಲ್ಲಿ 12 ಸಕ್ರಿಯ ಬಾಂಬ್

    ಹುಬ್ಬಳ್ಳಿ: ದೇವರ ಪ್ರಸಾದವೆಂದು ತಿಳಿದು ಬಾಕ್ಸ್ ನಲ್ಲಿದ್ದ ವಸ್ತವನ್ನು ಒಡೆದಿದ್ದಕ್ಕೆ ಕೈ ಹೋಯಿತು ಎಂದು ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಗಾಯಗೊಂಡ ಗಾಯಳು ಹುಸೇನ್‍ಸಾಬ್ ಹೇಳಿದ್ದಾರೆ.

    ವಿಜಯವಾಡ-ಅಮರಾವತಿ ಎಕ್ಸ್‌ಪ್ರೆಸ್ ರೈಲು ಹುಬ್ಬಳ್ಳಿ ನಿಲ್ದಾಣಕ್ಕೆ ಬಂದು ನಿಂತಿತ್ತು. ಈ ವೇಳೆ ಅನುಮಾನಾಸ್ಪದ ಬಾಕ್ಸ್‌ವೊಂದನ್ನು ಆರ್‌ಪಿಎಫ್‌ ಪೇದೆ ರವಿಕುಮಾರ್ ರಾಥೋಡ್ ವಶಕ್ಕೆ ಪಡೆದು, ರೈಲ್ವೇ ಮ್ಯಾನೇಜರ್ ಕಚೇರಿಗೆ ಒಪ್ಪಿಸಿದ್ದರು. ರಟ್ಟಿನ ಬಾಕ್ಸ್‍ನೊಳಗೆ ಬಕೀಟ್‍ನಲ್ಲಿ ಚಿಕ್ಕಚಿಕ್ಕದಾದ 8 ಬಾಕ್ಸ್‌ನಲ್ಲಿದ್ದ ನಿಂಬೆಹಣ್ಣಿನ ಗಾತ್ರದ ಬಾಂಬ್‍ಗಳ ಪೈಕಿ ಒಂದನ್ನು ಓಪನ್ ಮಾಡಲು ಪೇದೆ ಹಾಗೂ ರೈಲ್ವೆ ಮಾನೇಜರ್ ಮುಂದಾಗಿದ್ದರು.

    ಈ ವೇಳೆ ಪೇದೆ ರವಿಕುಮಾರ್ ತಮಗೆ ಪರಿಚಯವಿದ್ದ ಹುಸೇನ್‍ಸಾಬ್ (22) ಅವರನ್ನು ಕರೆದು ಬಾಕ್ಸ್ ಓಪನ್ ಮಾಡುವಂತೆ ಸೂಚನೆ ನೀಡಿದ್ದರು. ಬಾಕ್ಸ್ ತೆಗೆದ ಹುಸೇನ್‍ಸಾಬ್ ನಿಂಬೆಹಣ್ಣು ಗಾತ್ರದ ವಸ್ತುವನ್ನು ಕಲ್ಲಿನಿಂದ ಒಡೆಯುತ್ತಿದ್ದಂತೆ ಬ್ಲಾಸ್ಟ್ ಆಗಿದೆ. ಪರಿಣಾಮ ಹುಸೇನ್‍ಸಾಬ್ ಕೈ ಕಟ್ ಆಗಿದೆ. ರಕ್ತಸ್ರಾವದಿಂದ ಬಿದ್ದು ಕಣ್ಣೀರು ಹಾಕುತ್ತಿದ್ದ ಹುಸೇನ್‍ಸಾಬ್ ಅವರನ್ನು ತಕ್ಷಣವೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಬಾಕ್ಸ್‍ನಲ್ಲಿ ಇದ್ದ 12 ಬಾಂಬ್‍ಗಳು ಸಕ್ರಿಯವಾಗಿದ್ದು, ಸ್ಥಳಕ್ಕೆ ಬರುವಂತೆ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗೆ ತಿಳಿಸಲಾಗಿತ್ತು. ರೈಲು ನಿಲ್ದಾಣದ ಗಾರ್ಡನ್ ನಲ್ಲಿ ಮರಳಿನ ಮೂಟೆಗಳ ಮಧ್ಯೆ ಬಾಂಬ್‍ಗಳನ್ನು ಇರಿಸಲಾಗಿದೆ.

    ಬಕೀಟ್ ಮೇಲೆ ನೋ ಬಿಜೆಪಿ, ನೋ ಆರ್‌ಎಸ್‍ಎಸ್ ಒನ್ಲೀ ಶಿವಸೇನಾ ಎಂದು ಬರೆಯಲಾಗಿದೆ. ಜೊತೆ ಕೊಲ್ಲಾಪುರ ಶಾಸಕರ ಹೆಸರನ್ನು ನಮೂದಿಸಲಾಗಿರುವುದು ಭಾರೀ ಅನುಮಾನಕ್ಕೆ ಕಾರಣವಾಗಿದೆ. ಸೋಮವಾರ ಎನ್‍ಐಎ ಅಧಿಕಾರಿಗಳು ಹುಬ್ಬಳ್ಳಿಗೆ ಆಗಮಿಸಿ ಹೆಚ್ಚಿನ ತನಿಖೆ ನಡೆಸುವ ಸಾಧ್ಯತೆ ದಟ್ಟವಾಗಿದೆ.

    ಮಾಧ್ಯಮಗಳ ಜೊತೆಗೆ ಮಾತನಾಡಿದ ಗಾಯಾಳು ಹುಸೇನ್‍ಸಾಬ್, ಗದಗನಿಂದ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಬಂದಿದ್ದೆ. ಈ ವೇಳೆ ಆರ್‌ಪಿಎಫ್‌ ಪೇದೆ ರವಿಕುಮಾರ್ ಅವರು ಕರೆದು, ಇದನ್ನು ತಗೊಂಡು ಆಫೀಸ್ ಹೊರಗೆ ಹೋಗಿ ಏನು ಅಂತ ನೋಡು ಅಂದ್ರು. ದೇವರ ಪ್ರಸಾದ ಗಟ್ಟಿಯಾಗಿದೆ ಅಂತ ತಿಳಿದು ಕಲ್ಲಿನಿಂದ ಒಂದು ಪೆಟ್ಟು ಹಾಕಿದ್ದೆ ತಡ ಬ್ಲಾಸ್ಟ್ ಆಯಿತು. ಪರಿಣಾಮ ನನ್ನ ಕೈಗೆ ಗಂಭೀರವಾಗಿ ಗಾಯವಾಗಿದೆ ಎಂದು ಹೇಳಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು, ಅಮರಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಂದ ಅನುಮಾನಾಸ್ಪದ ಬಾಕ್ಸ್ ಪತ್ತೆ ವಿಚಾರವಾಗಿ ಸಮಗ್ರ ತನಿಖೆಗೆ ಸೂಚನೆ ನೀಡಲಾಗಿದೆ. ಆರ್‌ಪಿಎಫ್‌ ಪೇದೆ ರವಿಕುಮಾರ್ ರಾಥೋಡ್ ಬಾಕ್ಸ್ ಪತ್ತೆ ಹಚ್ಚಿದ್ದಾರೆ. ಬಕೆಟ್ ಆಕಾರದಲ್ಲಿ ಸ್ಫೋಟಕ ವಸ್ತು ಇತ್ತು. ಅದರಲ್ಲಿ ಸಣ್ಣಸಣ್ಣ ಬಾಕ್ಸ್ ಇಡಲಾಗಿದ್ದು, ಅವುಗಳಲ್ಲಿ ನಿಂಬೆಹಣ್ಣು ತರದ ವಸ್ತು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಸ್ಫೋಟಕಗಳು ಪ್ಲಾಸ್ಟಿಕ್ ಚೀಲದಲ್ಲಿ ಪತ್ತೆಯಾಗಿದ್ದು, ಯುವಕ ಹುಸೇನ್‍ಸಾಬ್ ಅದನ್ನು ತೆಗೆಯಲು ಹೋದಾಗ ಸ್ಫೋಟವಾಗಿದೆ. ಆತನಿಗೆ ಕೈಗೆ ಗಾಯವಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಈ ಸಂಬಂಧ ತನಿಖೆ ಆರಂಭಿಸಿರುವ ಪೊಲೀಸರು ವಿಜಯವಾಡದ ಪೊಲೀಸರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಆ ಬಾಕ್ಸ್ ಮೇಲೆ ಗಾರ್ಗೋಟಿ ಶಾಸಕ ಹೆಸರು ಬರೆಯಲಾಗಿದೆ. ಹೀಗಾಗಿ ಮಹಾರಾಷ್ಟ್ರ ಪೊಲೀಸರ ಜೊತೆ ಸಂಪರ್ಕ ಸಾಧಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

    ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರದ ಪೊಲೀಸರ ಜೊತೆಗೆ ನಿರಂತರ ಸಂಪರ್ಕ ಇಟ್ಟುಕೊಂಡು ತನಿಖೆ ಮಾಡುತ್ತೇವೆ. ಬಾಂಬ್ ನಿಷ್ಕ್ರಿಯ ದಳ ಹುಬ್ಬಳ್ಳಿಗೆ ಬಂದಿದ್ದು, ಬಾಂಬ್‍ಗಳನ್ನು ನಿಷ್ಕ್ರಿಯಗೊಳಿಸಲಿದ್ದಾರೆ. ಹುಬ್ಬಳ್ಳಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ತನಿಖೆ ಪ್ರಾರಂಭವಾಗಿದೆ ಎಂದು ಮಾಹಿತಿ ನೀಡಿದರು.

  • ಎಲೆಕ್ಟ್ರಾನಿಕ್ ವಸ್ತುಗಳ ಜೊತೆ ಹಾವು ಗಿಫ್ಟ್..!

    ಎಲೆಕ್ಟ್ರಾನಿಕ್ ವಸ್ತುಗಳ ಜೊತೆ ಹಾವು ಗಿಫ್ಟ್..!

    ಬೆಂಗಳೂರು: ಎಲೆಕ್ಟ್ರಾನಿಕ್ ವಸ್ತುಗಳ ಜೊತೆಗೆ ಹಾವು ಕೂಡ ಗಿಫ್ಟ್ ಆಗಿ ಬಂದು, ಆತಂಕ ಸೃಷ್ಟಿಸಿದ್ದ ಘಟನೆ ನಗರದಲ್ಲಿ ನಡೆದಿದೆ.

    ಮೆಜೆಸ್ಟಿಕ್‍ನ ಎಲೆಕ್ಟ್ರಾನಿಕ್ ಅಂಗಡಿಯೊಂದಕ್ಕೆ ದೆಹಲಿಯಿಂದ ಲೈಟ್ಸ್ ಸೇರಿದಂತೆ ಎಲೆಕ್ಟ್ರಾನಿಕ್ಸ್ ವಸ್ತುಗಳು ಪಾರ್ಸೆಲ್ ಬಂದಿದ್ದವು. ಜೊತೆಗೆ ಒಂದು ಹಾವು ಕೂಡ ಬಂದಿದೆ. ಬೆಳಗ್ಗೆ 10:30ಕ್ಕೆ ಪಾರ್ಸಲ್ ಬಾಕ್ಸ್ ತೆಗೆದು ನೋಡಿದಾಗ ಹಾವನ್ನು ಕಂಡು ಅಂಗಡಿಯ ಮಾಲೀಕ ಬೆಚ್ಚಿ ಬಿದ್ದಿದ್ದಾರೆ.

    ಅದೃಷ್ಟವಶಾತ್ ಬಾಕ್ಸ್ ತೆಗೆದಿದ್ದ ಅಂಗಡಿ ಮಾಲೀಕನಿಗೆ ಹಾವು ಕಚ್ಚಿಲ್ಲ. ಹಾವನ್ನು ನೋಡಿದ ತಕ್ಷಣವೇ ಮಾಲೀಕ ಉರಗ ತಜ್ಞರಿಗೆ ಕರೆ ಮಾಡಿದ್ದಾರೆ. ಮಾಹಿತಿ ಪಡೆದು ಸ್ಥಳಕ್ಕೆ ಬಂದ ಉರಗತಜ್ಞರು ಸುಮಾರು ಎರಡು ಅಡಿ ಉದ್ದದ ಹಾವನ್ನು ಹಿಡಿದಿದ್ದಾರೆ. ಬಳಿಕ ಅದನ್ನು ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದಿದ್ದಾರೆ.

    ಈ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಉರಗತ್ಞ ಜಯರಾಜ್ ಅವರು, ಅಂಗಡಿ ಮಾಲೀಕರು ಫೋನ್ ಮಾಡಿದ ತಕ್ಷಣವೇ ಅಲ್ಲಿಗೆ ಹೋಗಿ ನೋಡಿಗಾದ ಅದು ಮಣ್ಣಮುಕ್ಕ ಹಾವು ಎನ್ನುವುದು ತಿಳಿಯಿತು. ಈ ಹಾವು ಯಾವುದೇ ಹಾನಿ ಮಾಡುವುದಿಲ್ಲ ಅಂತ ಅಂಗಡಿಯವರಿಗೆ ತಿಳಿಸಿದ್ದೇವೆ.  ಅಷ್ಟೇ ಅಲ್ಲದೆ ಮೆಜೆಸ್ಟಿಕ್ ನಲ್ಲಿ ಈ ಹಾವು ಬಂದಿರುವುದು ಅಪರೂಪ ಎಂದು ಹೇಳಿದರು.

  • ಮೋದಿ ಹೆಲಿಕಾಪ್ಟರ್‌ನಿಂದ ಕಾರಿಗೆ ತುಂಬಿದ ಟ್ರಂಕ್ ರಹಸ್ಯ ಬಯಲು

    ಮೋದಿ ಹೆಲಿಕಾಪ್ಟರ್‌ನಿಂದ ಕಾರಿಗೆ ತುಂಬಿದ ಟ್ರಂಕ್ ರಹಸ್ಯ ಬಯಲು

    ಚಿತ್ರದುರ್ಗ: ರ‍್ಯಾಲಿ ವೇಳೆ ಮೋದಿ ಹೆಲಿಕಾಪ್ಟರ್ ನಿಂದ ಟ್ರಂಕ್ ಒಂದನ್ನು ಇನ್ನೋವಾ ಕಾರಿಗೆ ತುಂಬಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ ಅರುಣ್ ಸ್ಪಷ್ಟನೆ ನೀಡಿದ್ದಾರೆ.

    ಆ ಟ್ರಂಕ್ ನಲ್ಲಿ ಭದ್ರತೆಗೆ ಸಂಬಂಧಿಸಿದ ಸಲಕರಣೆಗಳು ಇದ್ದವು. ಆ ಕಾರು ಕೂಡ ಬೆಂಗಾವಲು ಪಡೆಯ ವಾಹನವಾಗಿತ್ತು ಎಂದು ಭದ್ರತಾ ಸಂಸ್ಥೆಗಳಿಂದ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಸಂಗ್ರಹಿಸುತ್ತಿದ್ದೇವೆ ಎಂದು ಅರುಣ್ ತಿಳಿಸಿದ್ದಾರೆ.

    ಏನಿದು ವಿವಾದ?
    ಏಪ್ರಿಲ್ 9 ರಂದು ಚಿತ್ರದುರ್ಗಕ್ಕೆ ಆಗಮಿಸಿದ್ದ ಮೋದಿ ಅವರ ಹೆಲಿಕಾಪ್ಟರ್ ನಲ್ಲಿ ದೊಡ್ಡ ಟ್ರಂಕ್ ಒಂದನ್ನು ತರಲಾಗಿತ್ತು. ಈ ವೇಳೆ ಹೆಲಿಕಾಪ್ಟರ್ ಲ್ಯಾಂಡ್ ಆಗುತ್ತಿದಂತೆ ಅಲ್ಪ ದೂರದಲ್ಲಿ ನಿಂತಿದ್ದ ಇನ್ನೋವಾ ಕಾರಿಗೆ ಟ್ರಂಕ್ ಅನ್ನು ತರಾತುರಿಯಲ್ಲಿ ಶಿಫ್ಟ್ ಮಾಡಲಾಗಿತ್ತು. ರಕ್ಷಣಾ ಪಡೆ ಸಿಬ್ಬಂದಿ ಟ್ರಂಕ್ ಅನ್ನು ಕ್ಷಣಾರ್ಧದಲ್ಲಿ ತೆಗೆದು ಕಾರಿಗೆ ತುಂಬಿಸಿದ್ದರು. ಅಲ್ಲದೆ ಪರಿಶೀಲನೆ ಮಾಡದೇ ಕಾರನ್ನು ಅಲ್ಲಿಂದ ತೆರಳಲು ಅನುಮತಿ ನೀಡಲಾಗಿತ್ತು.

    ಇನ್ನೋವಾ ಕಾರು ಮೋದಿಯ ಬೆಂಗಾವಲು ವಾಹನದ ಸಾಲಿನಲ್ಲಿ ಇರಲಿಲ್ಲ. ಆದರೂ ಅದು ಹೇಗೆ ಅಲ್ಲಿಗೆ ಆಗಮಿಸಿತು. ಆ ಕಾರಿನ ಮಾಲೀಕರು ಯಾರು? ಅಲ್ಲದೇ ಯಾವ ಸೆಕ್ಯೂರಿಟಿ ಪರಿಶೀಲನೆ ಇಲ್ಲದೇ ತರಾತುರಿಯಲ್ಲಿ ತೆಗೆದುಕೊಂಡು ಹೋಗಿದ್ದು ಏಕೆ ಎಂಬ ಪ್ರಶ್ನೆಗಳನ್ನು ಕಾಂಗ್ರೆಸ್ ಮುಂದಿಟ್ಟಿತ್ತು. ಕಾಂಗ್ರೆಸ್ ನಾಯಕರು ಚುನಾವಣೆ ಸಮಯದಲ್ಲಿ ಮೋದಿ ಹಣ ಹಂಚಿಕೆ ಮಾಡಲು ಮೋದಿ ಟ್ರಂಕ್ ನಲ್ಲಿ ಹಣವನ್ನು ತಂದಿದ್ದಾರೆ ಎಂದು ಆರೋಪಿಸಿದ್ದರು.

    ಕಾಂಗ್ರೆಸ್ ದೂರು:
    ಮೋದಿ ಹೆಲಿಕಾಪ್ಟರ್ ಮೂಲಕ ಅಕ್ರಮವಾಗಿ ಹಣ ಸಾಗಾಟ ಮಾಡುವ ಶಂಕೆ ಕೇಳಿ ಬಂದಿದೆ. ಹೀಗಾಗಿ ಈ ಘಟನೆಯನ್ನು ಗಂಭೀರವಾಗಿ ಸ್ವೀಕರಿಸಿ ಪ್ರಧಾನಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕೆಂದು ಚಿತ್ರದುರ್ಗ ಕಾಂಗ್ರೆಸ್ ವಕ್ತಾರ ಶಿವು ಯಾದವ್ ಚುನಾವಣಾ ಅಧಿಕಾರಿಗೆ ದೂರು ನೀಡಿದ್ದಾರೆ.

     

  • 3 ಲಕ್ಷ ರೂ. ನಲ್ಲಿ ತಯಾರಾಯ್ತು ಇಶಾಅಂಬಾನಿ ಮದ್ವೆ ಆಮಂತ್ರಣ- ವಿಡಿಯೋ

    3 ಲಕ್ಷ ರೂ. ನಲ್ಲಿ ತಯಾರಾಯ್ತು ಇಶಾಅಂಬಾನಿ ಮದ್ವೆ ಆಮಂತ್ರಣ- ವಿಡಿಯೋ

    ಮುಂಬೈ: ಭಾರತದ ಖ್ಯಾತ ಮತ್ತು ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮಗಳು ಇಶಾ ಅಂಬಾನಿ ಹಾಗೂ ಆನಂದ್ ಪಿರಾಮಾಲ್ ಮದುವೆಯ ಭಾರೀ ಮೊತ್ತದ ಆಮಂತ್ರಣ ಪತ್ರಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಜನಾರ್ದನ ರೆಡ್ಡಿ ಮಗಳ ಮದುವೆಯ ಆಮಂತ್ರಣದ ವೆಚ್ಚವನ್ನ ನೋಡಿ ಜನರು ಸುಸ್ತಾಗಿದ್ದರು. ಈಗ ಮುಖೇಶ್ ಅಂಬಾನಿ ಮಗಳ ಮದುವೆಯ ಆಮಂತ್ರಣ ಪತ್ರಿಕೆಯ ಬೆಲೆ ಕೇಳಿದರೆ ಎಲ್ಲರಿಗೂ ಆಶ್ಚರ್ಯವಾಗುತ್ತೆ. ಇಶಾ ಅಂಬಾನಿ ಮತ್ತು ಆನಂದ್ ಪಿರಾಮಾಲ್ ಅವರ ಮದುವೆಯ ಆಮಂತ್ರಣ ಪತ್ರಿಕೆಯ ಬೆಲೆ ಬರೊಬ್ಬರಿ 3 ಲಕ್ಷ ರೂ.

    ಇನ್‍ಸ್ಟಾಗ್ರಾಂನಲ್ಲಿರುವ ವಿಡಿಯೋದಲ್ಲಿ ಆಮಂತ್ರಣ ಪತ್ರಿಕೆಯನ್ನು ಎರಡು ಬಾಕ್ಸ್‍ಗಳಲ್ಲಿ ಕಾಣಬಹುದು. ಮೊದಲ ಬಾಕ್ಸ್ ನ ಮೇಲೆ ಇಶಾ ಮತ್ತು ಆನಂದ್ ಅವರ ಮೊದಲ ಅಕ್ಷರಗಳನ್ನು ಸೇರಿಸಿ ‘ಐಎ’ ಎಂದು ಮುದ್ರಿಸಲಾಗಿದ್ದು, ಬಿಳಿ ಮತ್ತು ತಿಳಿ ಗುಲಾಬಿ ಬಣ್ಣದ ಹೂಗಳಿಂದ ಅಲಂಕೃತವಾಗಿದೆ. ಈ ಬಾಕ್ಸ್ ತೆರೆದರೆ ಒಂದು ಚೆಂದದ ಚಿತ್ತಾರದ ಆಹ್ವಾನ ಪತ್ರಿಕೆಯಲ್ಲಿ ಮದುವೆಗೆ ಆಹ್ವಾನ ಮಾಡಲಾಗಿದೆ. ಚಿನ್ನದ ಬಣ್ಣದ ದ್ವಾರಗಳಿಂದ ಕೂಡಿದ ಹಾಳೆಗಳು ಅದರಲ್ಲಿದ್ದು, ಈ ಆಮಂತ್ರಣ ಪತ್ರಿಕೆಯ ನಾಲ್ಕನೇ ಪುಟದಲ್ಲಿ ಇಶಾ ಮತ್ತು ಆನಂದ್ ಬರೆದ ಪತ್ರವೊಂದಿದೆ. ಇತರೆ ಪುಟಗಳಲ್ಲಿ ನಾನಾ ಸಂಗತಿಗಳಿದ್ದು, ‘ಶುಭ್ ಅಭಿನಂದನ್’ ಎಂದು ಬರೆಯಲಾಗಿದೆ.

    https://www.instagram.com/p/BpwL0xPDOwi/?utm_source=ig_embed

    ಇನ್ನೂ ಎರಡನೇ ಬಾಕ್ಸ್ ಗುಲಾಬಿ ಮತ್ತು ಚಿನ್ನದ ಹೂಗಳಿಂದ ಅಲಂಕೃತವಾಗಿದ್ದು, ಬಾಕ್ಸ್ ತೆರೆದ ಕೂಡಲೇ ಗಾಯತ್ರಿ ದೇವಿಯ ಮಂತ್ರ ಕೇಳಿಸುತ್ತದೆ. ಇದರಲ್ಲಿ ಲಕ್ಷ್ಮಿ ಫೋಟೋವನ್ನ ಇರಿಸಲಾಗಿದೆ. ಈ ವೈಭೋಗದ ಮದುವೆಗೆ ಗಣ್ಯಾತೀಗಣ್ಯರು ಆಗಮಿಸಲಿದ್ದು, ಅವರಿಗೆ ಆಮಂತ್ರಣ ನೀಡಲು ಈ ಅದ್ಧೂರಿಯ ಕರೆಯೋಲೆ ತಯಾರಾಗಿದೆ.

    ಕಳೆದ ಸೆಪ್ಟೆಂಬರ್‍ನಲ್ಲಿ ಇಟಲಿಯ ಲೇಕ್ ಕೊಮುನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥವನ್ನ ಮಾಡಿಕೊಂಡ ಇಶಾ ಅಂಬಾನಿ ಮತ್ತು ಆನಂದ್ ಪಿರಾಮಾಲ್, ಇದೇ ಡಿಸೆಂಬರ್ 12 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮುಖೇಶ್ ಅಂಬಾನಿ ಕುಟುಂಬ ಈಗಾಗಲೇ ದೇವರಿಗೆ ಆಮಂತ್ರಣ ಪತ್ರಿಕೆ ಅರ್ಪಿಸಿ ಗಣ್ಯರಿಗೆ ಕಾರ್ಡ್ ಹಂಚುವ ಕೆಲಸವನ್ನ ಶುರು ಮಾಡಿದ್ದಾರೆ ಎನ್ನಲಾಗಿದೆ.

    https://www.instagram.com/p/Bp_GI4qHvN3/?utm_source=ig_embed

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಸ್ಟ್ರಾಂಗ್ ರೂಂನಲ್ಲಿರಬೇಕಿದ್ದ ವಿವಿಪ್ಯಾಟ್ ಬಾಕ್ಸ್ ಗಳು ರಸ್ತೆಬದಿಯ ಶೆಡ್‍ನಲ್ಲಿ ಪತ್ತೆ – ಚುನಾವಣಾ ಅಕ್ರಮ ಶಂಕೆ!

    ಸ್ಟ್ರಾಂಗ್ ರೂಂನಲ್ಲಿರಬೇಕಿದ್ದ ವಿವಿಪ್ಯಾಟ್ ಬಾಕ್ಸ್ ಗಳು ರಸ್ತೆಬದಿಯ ಶೆಡ್‍ನಲ್ಲಿ ಪತ್ತೆ – ಚುನಾವಣಾ ಅಕ್ರಮ ಶಂಕೆ!

    ವಿಜಯಪುರ: ಚುನಾವಣೆಯಲ್ಲಿ ಬಳಕೆ ಮಾಡಿದ್ದಾರೆ ಎನ್ನಲಾಗಿದ್ದ ವಿವಿ ಪ್ಯಾಟ್ ದೃಡೀಕರಣ ಬಾಕ್ಸ್ ಗಳು ಹೆದ್ದಾರಿ ಪಕ್ಕದ ಶೆಡ್‍ನಲ್ಲಿ ಪತ್ತೆಯಾಗಿದ್ದು, ಚುನಾವಣೆಯ ಅಕ್ರಮ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ರಾಷ್ಟ್ರೀಯ ಹೆದ್ದಾರಿ ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರದ ಬಳಿ ರಸ್ತೆ ಕಾಮಗಾರಿ ನಡೆಸುವ ಕಾರ್ಮಿಕರು ವಾಸಿಸುವ ಶೆಡ್ ನಲ್ಲಿ ವಿವಿ ಪ್ಯಾಟ್ ಖಾಲಿ ಬಾಕ್ಸ್ ಗಳು ಪತ್ತೆಯಾಗಿವೆ. ಇದರಲ್ಲಿ ಕಾರ್ಮಿಕರು ಆಹಾರ ಪದಾರ್ಥ, ಬಟ್ಟೆಗಳನ್ನು ಸಂಗ್ರಹಿಸಿದ್ದಾರೆ.

    ಸ್ಥಳೀಯ ಜೆಡಿಎಸ್ ಕಾರ್ಯಕರ್ತರು ಇವುಗಳನ್ನು ಪತ್ತೆ ಮಾಡಿದ್ದು ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಮಾಡಿದ್ದಾರೆ. ಈ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

    ಚುನಾವಣೆಯ ಬಳಿಕ 45 ದಿನಗಳವರೆಗೂ ವಿವಿ ಪ್ಯಾಟ್ ಬಾಕ್ಸ್ ಗಳನ್ನು ಸ್ಟ್ರಾಂಗ್ ರೂಂ ನಲ್ಲಿ ರಕ್ಷಿಸಬೇಕು ಎಂಬ ನಿಯಮವಿದೆ. ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿಗಳು ಶೆಡ್ ನಲ್ಲಿ ಪತ್ತೆಯಾಗಿರುವ ಬಾಕ್ಸ್ ಗಳು ಚುನಾವಣೆಗೂ ಮುನ್ನ ಶಿಕ್ಷಕರಿಗೆ ತರಬೇತಿ ನೀಡುವ ವೇಳೆ ಬಳಕೆ ಮಾಡಿದ್ದ ಬಾಕ್ಸ್ ಎಂದು ಸ್ಪಷ್ಟನೆ ನೀಡಿದ್ದು, ಈ ಕುರಿತು ಹೆಚ್ಚಿನ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.

    ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಶಿವಾನಂದ್ ಪಾಟೀಲ್ ಅವರು ಜಯಗಳಿಸಿದ್ದರು. ಅಲ್ಲದೇ ಕಾರ್ಮಿಕರು ನಿರ್ಮಿಸಿರುವ ಶೆಡ್ ಗಳು ಕಾಂಗ್ರೆಸ್ ಕಾರ್ಯಕರ್ತರೊಬ್ಬರಿಗೆ ಸೇರಿದೆ ಎನ್ನಲಾಗಿದ್ದು, ಇದರಿಂದ ಜೆಡಿಎಸ್ ಕಾರ್ಯಕರ್ತರು ಅಕ್ರಮದ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

  • 3ರ ಬಾಲಕಿಯನ್ನು ಅತ್ಯಾಚಾರ ಮಾಡಿ, ಬಾಕ್ಸ್ ನಲ್ಲಿ ತುಂಬ್ಸಿ ಪರಾರಿಯಾದ!

    3ರ ಬಾಲಕಿಯನ್ನು ಅತ್ಯಾಚಾರ ಮಾಡಿ, ಬಾಕ್ಸ್ ನಲ್ಲಿ ತುಂಬ್ಸಿ ಪರಾರಿಯಾದ!

    ಲಕ್ನೋ: ಮೂರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ನಂತರ ಆಕೆಯನ್ನು ಬಾಕ್ಸ್ ನಲ್ಲಿ ಲಾಕ್ ಮಾಡಿ ಆರೋಪಿ ಪರಾರಿಯಾಗಿದ್ದ ಪ್ರಕರಣ ಉತ್ತರ ಪ್ರದೇಶದ ರಾಮ್ಪುರ ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆ ಏಪ್ರಿಲ್ 2 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಯನ್ನು ನೆರೆಮನೆಯ 18 ವರ್ಷದ ಯುವಕ ಎಂದು ಗುರುತಿಸಲಾಗಿದ್ದು, ಈಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.

    ನಡೆದಿದ್ದೇನು?
    ಸೋಮವಾರ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಳು. ಈ ವೇಳೆ ಆರೋಪಿ ಬಾಲಕಿಗೆ ಬಳಿ ಬಂದು ಚಾಕ್ಲೇಟ್ ಆಮಿಷ ಒಡ್ಡಿ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಅತ್ಯಾಚಾರ ಬಳಿಕ ಅಳಲು ಪ್ರಾರಂಭಿಸಿದ್ದಾಳೆ. ಆಗ ಆರೋಪಿ ಒಂದು ಬಾಕ್ಸ್ ನಲ್ಲಿ ತುಂಬಿ ಲಾಕ್ ಮಾಡಿ ಮನೆಯಿಂದ ಪರಾರಿಯಾಗಿದ್ದಾನೆ.

    ನೆರೆಹೊರೆಯವರಿಗೆ ಬಾಲಕಿಯ ಕಿರುಚುವ ಶಬ್ದ ಕೇಳಿಸಿದೆ. ನಂತರ ಅವರು ಆರೋಪಿ ಮನೆಗೆ ಹೋಗಿ ಹುಡುಕಾಡಿದ್ದಾರೆ. ಆದರೆ ಮನೆಯಲ್ಲಿ ಆತ ಇರಲಿಲ್ಲ. ನಂತರ ಶಬ್ದ ಬರುತ್ತಿದ್ದ ಕಡೆ ಹುಡುಕಿದಾಗ ಬಾಕ್ಸ್ ನಲ್ಲಿ ಬಾಲಕಿ ಪತ್ತೆಯಾಗಿದ್ದಾಳೆ. ಇದನ್ನು ನೋಡಿದ ನೆರೆಹೊರೆಯವರು ಆಘಾತಕೊಂಡು ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಆರೋಪಿ ಬಾಲಕಿಯ ಪೋಷಕರು ಮನೆಯಲ್ಲಿ ಇಲ್ಲದಿರುವುದನ್ನು ತಿಳಿದುಕೊಂಡು ಚಾಕ್ಲೇಟ್ ಆಸೆ ತೋರಿಸಿ ತನ್ನ ಮನೆಗೆ ಕರೆದುಕೊಂಡು ಅತ್ಯಾಚಾರ ಎಸಗಿದ್ದಾನೆ. ನಂತರ ಬಾಲಕಿ ನೋವಿನಿಂದ ಕೂಗುತ್ತಾ ಅಳುತ್ತಿದ್ದಾಗ ಬಾಕ್ಸ್ ನಲ್ಲಿ ಲಾಕ್ ಮಾಡಿ ಭಯಗೊಂಡು ಅಲ್ಲಿಂದ ಪರಾರಿಯಾಗಿದ್ದಾನೆ. ನಂತರ ನೆರೆಹೊರೆಯವರು ಹೋಗಿ ಬಾಲಕಿಯನ್ನು ರಕ್ಷಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಆರೋಪಿ ವಿರುದ್ಧ ಪೋಕ್ಸೋ ಕಾಯ್ಡೆಯಡಿ ಪ್ರಕರಣವನ್ನು ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.