Tag: bovine jugular vein

  • ಮಗುವಿಗೆ ಯಕೃತ್ ಶಸ್ತ್ರ ಚಿಕಿತ್ಸೆಯಲ್ಲಿ ಹಸುವಿನ ರಕ್ತನಾಳ ಬಳಕೆ

    ಮಗುವಿಗೆ ಯಕೃತ್ ಶಸ್ತ್ರ ಚಿಕಿತ್ಸೆಯಲ್ಲಿ ಹಸುವಿನ ರಕ್ತನಾಳ ಬಳಕೆ

    – ವಿಶ್ವದಲ್ಲೇ ಮೊದಲ ಬಾರಿಗೆ ವಿಶಿಷ್ಟವಾದ ಪಿತ್ತಜನಕಾಂಗದ ಕಸಿ

    ಗುರುಗ್ರಾಮ್‍: ಹರಿಯಾಣದ ಗುರುಗ್ರಾಮ್‍ನ ಖಾಸಗಿ ಆಸ್ಪತ್ರೆಯಲ್ಲಿ ವಿಶ್ವದಲ್ಲೇ ಮೊದಲ ಬಾರಿಗೆ ವಿಶಿಷ್ಟವಾದ ಪಿತ್ತಜನಕಾಂಗದ ಕಸಿಯನ್ನು ಮಾಡಲಾಗಿದೆ.

    ಸೌದಿ ಅರೇಬಿಯಾದ ಒಂದು ವರ್ಷದ ಬಾಲಕಿ ಬೇಬಿ ಹರ್ ಯಕೃತ್ ಕಸಿಗೆ ಹಸುವಿನ ರಕ್ತನಾಳಗಳನ್ನು ಬಳಸಲಾಗಿದೆ. 14 ಗಂಟೆಗಳ ಕಾಲ ನಡೆದ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯ ತಂಡವು ಬಾಲಕಿಯನ್ನು ಎರಡು ವಾರಗಳ ಕಾಲ ಮೇಲ್ವಿಚಾರಣೆಯಲ್ಲಿ ಇಟ್ಟು, ಬುಧವಾರ ಡಿಸ್ಚಾರ್ಜ್ ಮಾಡಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಿತ್ತಜನಕಾಂಗದ ಕಸಿ ಶಸ್ತ್ರಚಿಕಿತ್ಸಕ ಡಾ.ಗಿರಿರಾಜ್ ಬೋರಾ ಅವರು, ಸೌದಿ ಅರೇಬಿಯಾದ ಬೇಬಿ ಹರ್ ಪಿತ್ತರಸ ನಾಳಗಳಿಲ್ಲದೆ ಜನಿಸಿದೆ. ಬಳಿಕವೂ ಅವಳ ಪಿತ್ತರಸ ನಾಳ ಅಭಿವೃದ್ಧಿಯಾಗಲಿಲ್ಲ. ಆದ್ದರಿಂದ ಬೋವಿನ್ ಜುಗುಲಾರ್ ಸಿರೆ (ಹಸುವಿನ ಗಂಟಲು ಅಬಿಧಮನಿ) ಅನ್ನು ಶಸ್ತ್ರಚಿಕಿತ್ಸೆಯಲ್ಲಿ ಬಳಸಲಾಗಿದೆ. ಈ ರಕ್ತನಾಳವು ಯಕೃತ್ತಿಗೆ ರಕ್ತವನ್ನು ತಲುಪಿಸಲು ಸಹಾಯ ಮಾಡುತ್ತದೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಮಗುವನ್ನು ನೋಡಿಕೊಳ್ಳುವುದು ಒಂದು ಸವಾಲಿನ ಕೆಲಸವಾಗಿತ್ತು. ಈ ಕೆಲಸವನ್ನು ವೈದ್ಯರ ತಂಡವು ಚೆನ್ನಾಗಿ ನಿರ್ವಹಿಸಿದೆ ಎಂದು ಮಾಹಿತಿ ನೀಡಿದ್ದಾರೆ.

    ಸಾರಾ ಮತ್ತು ಅಹ್ಮದ್ ದಂಪತಿಯ ಮೂರನೇ ಮಗು ಬೇಬಿ ಹರ್. ಅವಳು ಜನಿಸಿದ ಮೂರು ತಿಂಗಳ ನಂತರ ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದಳು. ಸೌದಿ ಅರೆಬಿಯಾದ ವೈದ್ಯರು ಸಮಸ್ಯೆಯನ್ನು ಎದುರಿಸಲು ಮುಂದಾಗಲಿಲ್ಲ. ಬಳಿಕ ನಡೆಸಿದ ಬಿಲಿಯರಿ ಬೈಪಾಸ್ ಶಸ್ತ್ರಚಿಕಿತ್ಸೆ ವಿಫಲವಾದ ನಂತರ ಅಲ್ಲಿನ ವೈದ್ಯರು, ಭಾರತದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಲು ಸಲಹೆ ನೀಡಿದರು. ಹೀಗಾಗಿ ಭಾರತಕ್ಕೆ ಕರೆತಂದ ಸಾರಾ ದಂಪತಿ ಹರಿಯಾಣದ ಗುರುಗ್ರಾಮ್‍ನ ಆಸ್ಪತ್ರೆಗೆ ದಾಖಲಿಸಿದ್ದರು. ಶಸ್ತ್ರಚಿಕಿತ್ಸೆಗೆ ಯಶಸ್ವಿಯಾಗಿದ್ದು, ಮಗುವಿನ ತಂದೆ ಅಹ್ಮದ್ ಭಾರತ ಮತ್ತು ಆಸ್ಪತ್ರೆಯ ವೈದ್ಯರಿಗೆ ಧನ್ಯವಾದ ತಿಳಿಸಿದ್ದಾರೆ.

    ಡಾ. ಗಿರಿರಾಜ್ ಬೋರಾ ಮಾತನಾಡಿ, ಸೌದಿ ಅರೆಬಿಯಾದ ವೈದ್ಯರು ದ್ವಿಪಕ್ಷೀಯ ಅಟ್ರೆಸಿಯಾ ಎಂಬ ಕಾಯಿಲೆಯಿಂದ ಬಳಲುತ್ತಿರುವ ಬಾಲಕಿಯನ್ನು ಗುರುತಿಸಿದರು. ಈ ರೋಗವು 16 ಸಾವಿರದಲ್ಲಿ ಒಂದು ನವಜಾತ ಶಿಶುವಿನಲ್ಲಿ ಕಂಡುಬರುತ್ತದೆ. ಅಂತಹ ಮಕ್ಕಳಲ್ಲಿ ಪಿತ್ತರಸ ನಾಳಗಳು ಬೆಳೆಯುವುದಿಲ್ಲ. ಮಗುವಿನ ತೂಕ 5.2 ಕೆ.ಜಿ. ಇರುತ್ತದೆ ಎಂದು ಹೇಳಿದ್ದಾರೆ.