Tag: Bottles

  • 1,028 ಬಾಕ್ಸ್‌ಗಳಲ್ಲಿದ್ದ16 ಲಕ್ಷ ಮೌಲ್ಯದ ಮದ್ಯ ನಾಶ

    1,028 ಬಾಕ್ಸ್‌ಗಳಲ್ಲಿದ್ದ16 ಲಕ್ಷ ಮೌಲ್ಯದ ಮದ್ಯ ನಾಶ

    ಯಾದಗಿರಿ: ನಗರದ ಹೊರವಲಯದಲ್ಲಿರುವ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ ಮದ್ಯ ಸಂಗ್ರಹ ಆವರಣದಲ್ಲಿ ಮಾರಾಟವಾಗದೆ ಉಳಿದುಕೊಂಡಿದ್ದ 16 ಲಕ್ಷ ಮೌಲ್ಯದ ಮದ್ಯವನ್ನು ಅಧಿಕಾರಿಗಳು ಇಂದು ನಾಶಪಡಿಸಿದ್ದಾರೆ.

    ನಾಕ್ ಔಟ್ ಕಂಪನಿಯ ಪೋಸ್ಟರ್ ಗೋಲ್ಡ್, ಲಾಗರ್, ನಾಕೌಟ್ ಸ್ಟ್ರಾಂಗ್‍ಗೆ ಸೇರಿದ ಒಟ್ಟು 1,028 ಬಾಕ್ಸ್‌ಗಳಲ್ಲಿದ್ದ ಲಕ್ಷಕ್ಕೂ ಅಧಿಕ ಬಿಯರ್ ಬಾಟಲಿಗಳನ್ನು ನಾಶಪಡಿಸಲಾಗಿದೆ. ಯಾದಗಿರಿ ನಗರದ ಹೊರ ವಲಯದಲ್ಲಿರುವ ಅಬಕಾರಿ ಉಗ್ರಾಣದ ಮುಂಭಾಗದಲ್ಲಿ ಅಧಿಕಾರಿಗಳು ಅವಧಿ ಮುಗಿದಿದ್ದ ಈ ಮದ್ಯವನ್ನು ನಾಶಪಡಿಸಿದ್ದಾರೆ. ಜಾನುವಾರುಗಳಿಗೆ ಹಾಗೂ ಪರಿಸರಕ್ಕೆ ತೊಂದರೆ ಆಗದಂತೆ ಇಲಾಖೆಯಿಂದ ಅಗತ್ಯ ಮುಂಜಾಗ್ರತೆ ಕ್ರಮ ಕೂಡ ಕೈಗೊಳ್ಳಲಾಗಿತ್ತು.

    ಅಬಕಾರಿ ಇಲಾಖೆಯ ಉಪ ನೀರಿಕ್ಷರಾದ, ಶ್ರೀರಾಮ್ ರಾಠೋಡ್, ಮಳಿಗೆ ಅಬಕಾರಿ ನೀರಿಕ್ಷಕ ಪ್ರಕಾಶ ಮಾಕೊಂಡ ನೇತೃತ್ವದ ತಂಡ ಪರಿಸರಕ್ಕೆ ಹಾನಿ ಆಗದಂತೆ ಎಚ್ಚರಿಕೆ ವಹಿಸಿ ದೊಡ್ಡ ಗುಂಡಿ ತೆಗೆದು ಅದರಲ್ಲಿ ಮದ್ಯವನ್ನು ಸುರಿದು ನಂತರ ಮಣ್ಣು ಮುಚ್ಚಲಾಯಿತು.

    ಈ ಸಂದರ್ಭದಲ್ಲಿ ಮಳಿಗೆ ವ್ಯವಸ್ಥಾಪಕ ವಿ.ಡಿ.ವೆಂಕಟೇಶ್, ಸಹಾಯಕ ವ್ಯವಸ್ಥಾಪಕ ಅಡಿವೆಪ್ಪ ಭಜಂತ್ರಿ, ಎಮ್.ಎಸ್.ಪಾಟೀಲ್, ಶಿವರಾಜ್ ಕುಮಾರ್ ಮುಂಡರಗಿಮಠ, ದೇವಿಂದ್ರ ಗೋನಾಳ, ಹತ್ತಿಕುಣಿ ನಾಡ ಕಛೇರಿ ಉಪ ತಹಶೀಲ್ದಾರ್ ಬಸವರಾಜ ಮತ್ತು ಕಂಪನಿಯ ಪ್ರತಿನಿಧಿ ಶಿವಕುಮಾರ್ ಹೇರೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.

  • ಮದ್ಯದ ಬಾಟಲ್‍ನಲ್ಲಿ ಕಲಾಕೃತಿ- ಕುಮಟಾ ಯುವ ಬ್ರಿಗೇಡ್‍ನಿಂದ ಪರಿಸರ ಜಾಗೃತಿ

    ಮದ್ಯದ ಬಾಟಲ್‍ನಲ್ಲಿ ಕಲಾಕೃತಿ- ಕುಮಟಾ ಯುವ ಬ್ರಿಗೇಡ್‍ನಿಂದ ಪರಿಸರ ಜಾಗೃತಿ

    ಕಾರವಾರ: ಸಮುದ್ರ ತೀರದಲ್ಲಿ ಮೋಜು ಮಸ್ತಿ ಮಾಡಿ ಬಿಸಾಡಿದ ಮದ್ಯದ ಬಾಟಲ್‍ನಲ್ಲಿ ಕುಮಟಾ ಯುವ ಬ್ರಿಗೇಡ್ ಕಲಾಕೃತಿ ನಿರ್ಮಾಣ ಮಾಡಿ ಪರಿಸರ ಜಾಗೃತಿ ಮೂಡಿಸಿದ್ದಾರೆ.

    ಕರಾವಳಿಯ ಕಡಲ ತೀರ, ಇಲ್ಲಿನ ಸುಂದರ ಸಮುದ್ರಗಳನ್ನು ನೋಡಲು ರಾಜ್ಯ ಹೊರ ರಾಜ್ಯದ ಜನರು ಇಲ್ಲಿಗೆ ಬರುತ್ತಾರೆ. ಕೆಲವರು ಪ್ರಕೃತಿ ಸೌಂದರ್ಯ ಸವಿಯಲು ಬಂದರೆ, ಕೆಲವರು ಮೋಜು ಮಸ್ತಿ ಮಾಡಲು ಕಡಲ ಕಿನಾರೆಗೆ ಬರುತ್ತಾರೆ. ಹೀಗೆ ಪ್ರವಾಸದ ನೆಪದಲ್ಲಿ ಸಮುದ್ರ ತೀರಕ್ಕೆ ಬಂದು ಮದ್ಯ ಸೇವಿಸಿ ಬಾಟಲ್‍ಗಳನ್ನು ಕಡಲ ಕಿನಾರೆಯಲ್ಲಿಯೇ ಬಿಸಾಡಿ ಹೋಗುತ್ತಾರೆ. ಹೀಗೆ ಬಿಸಾಡಿದ ಮದ್ಯದ ಬಾಟಲ್‍ಗಳು ಸಮುದ್ರ ತೀರದ ಸೌಂದರ್ಯವನ್ನು ಹಾಳು ಮಾಡುವ ಜೊತೆಗೆ ಇಲ್ಲಿನ ಪರಿಸರದ ಜೀವಿಗಳಿಗೂ ತೊಂದರೆ ಉಂಟುಮಾಡುತ್ತವೆ. ಇದಕ್ಕಾಗಿ ಕುಮಟಾ ಯುವ ಬ್ರಿಗೇಡ್ ವತಿಯಿಂದ ಕುಮಟದ ವನ್ನಳ್ಳಿ ಸಮುದ್ರ ತೀರದಲ್ಲಿ ಪ್ರತಿದಿನ ಮದ್ಯದ ಬಾಟಲ್‍ಗಳನ್ನು ಹೆಕ್ಕಿ ಸ್ವಚ್ಛ ಮಾಡುತ್ತಿದ್ದರು.

    ಹೀಗೆ ಹೆಕ್ಕಿದ ಮದ್ಯದ ಬಾಟಲ್‍ಗಳೇ ಸಾವಿರಾರು ಇದ್ದು, ಇದನ್ನು ತ್ಯಾಜ್ಯ ಘಟಕಕ್ಕೆ ರವಾನೆ ಮಾಡುವುದೇ ದೊಡ್ಡ ಸಮಸ್ಯೆಯಾಗಿತ್ತು. ಈ ಕಾರಣದಿಂದ ಕುಮಟಾ ಯುವ ಬ್ರಿಗೇಡ್ ಯುವಕರು ವನಳ್ಳಿ ಕಡಲ ತೀರದ ಸುತ್ತಮುತ್ತ ಬಿದ್ದಿರುವ ಮದ್ಯ ಬಾಟಲ್‍ಗಳನ್ನು ತಂದು ಶೇಕರಿಸಿ ಸುಮುದ್ರ ತೀರದಲ್ಲಿ ಮದ್ಯದ ಬಾಟಲ್‍ಗಳಲ್ಲಿ ಕಲಾಕೃತಿ ನಿರ್ಮಿಸುತ್ತಿದ್ದಾರೆ.

    ಕುಡಿದು ಬಿಸಾಡಿದ ಮದ್ಯದ ಬಾಟಲ್‍ನಿಂದ ಇಡೀ ಕಡಲ ತೀರದಲ್ಲಿ ಕಲಾಕೃತಿ ನಿರ್ಮಾಣ ಮಾಡುತಿದ್ದು, ಸಮುದ್ರ ತೀರವನ್ನು ಸ್ವಚ್ಛವಾಗಿಡಿ ಎನ್ನುವ ಸಂದೇಶವನ್ನು ಸಾರಿದ್ದಾರೆ. ಜೊತೆಗೆ ಪರಿಸರ ಜಾಗೃತಿ ಮೂಡಿಸಲು ಯುವ ಬ್ರಿಗೇಡ್ ಹೊರಟಿದ್ದು, ಮೊದಲ ಹಂತವಾಗಿ ಮದ್ಯದ ಬಾಟಲ್‍ಗಳ ಕಲಾಕೃತಿ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಈ ಕಲಾಕೃತಿ ನೋಡಿಯಾದರೂ ಪ್ರವಾಸಿಗರು ಸಮುದ್ರ ತೀರವನ್ನು ಸ್ವಚ್ಛವಾಗಿಡಲಿ ಎಂಬುದು ಬ್ರಿಗೇಡ್ ಟೀಮ್‍ನ ಯುವಕರ ಆಶಯವಾಗಿದೆ.