Tag: borewell

  • ಜೆಡಿಎಸ್ ಮುಖಂಡನಿಂದ ಕುಡಿಯುವ ನೀರಿನ ಸ್ವಿಚ್ಛ್ ಬೋರ್ಡ್ ಧ್ವಂಸ!

    ಜೆಡಿಎಸ್ ಮುಖಂಡನಿಂದ ಕುಡಿಯುವ ನೀರಿನ ಸ್ವಿಚ್ಛ್ ಬೋರ್ಡ್ ಧ್ವಂಸ!

    ಮಂಡ್ಯ: ಗ್ರಾಮದ ಕುಡಿಯುವ ನೀರಿನ ಬೋರ್ ವೆಲ್‍ಗೆ ಅಳವಡಿಸಿದ್ದ ಸ್ವಿಚ್ ಬೋರ್ಡ್ ಮೇಲೆ ಜೆಡಿಎಸ್ ಮುಖಂಡನೊಬ್ಬ ಕಲ್ಲು ಎತ್ತಿ ಹಾಕಿ ನಾಶ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನ ನಾರ್ಗೋನಹಳ್ಳಿ ಗ್ರಾಮದಲ್ಲಿ ನಡೆದಿದೆ. ಘಟನೆಯ ದೃಶ್ಯ ಸ್ಥಳೀಯರ ಮೊಬೈಲ್‍ನಲ್ಲಿ ಸೆರೆಯಾಗಿದೆ.

    ತಾಲೂಕು ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಸೋಮಯ್ಯ ಅವರ ಮಗ ಸೋಮೇಶ್ ಗ್ರಾಮದ ಕುಡಿಯುವ ನೀರಿನ ಕೊಳವೆ ಬಾವಿಯ ಎಲೆಕ್ಟ್ರಾನಿಕ್ ಸ್ವಿಚ್ ಬೋರ್ಡ್ ಮತ್ತು ಪೈಪ್‍ಗಳನ್ನು ಧ್ವಂಸಗೊಳಿಸಿದ್ದಾರೆ. ಸೋಮೇಶ್ ಅವರ ಜಮೀನಿನ ಪಕ್ಕದಲ್ಲೇ ಗ್ರಾಮದ ಕುಡಿಯುವ ನೀರಿನ ಕೊಳವೆ ಬಾವಿ ಇತ್ತು. ಹೀಗಾಗಿ ಕುಡಿಯುವ ನೀರಿನ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸೋಮೇಶ್ ಅವರ ಜಮೀನಿನ ಮೇಲಿಂದ ವೈರ್ ಎಳೆದು ತರಲಾಗಿತ್ತು. ಆದರೆ ಈ ವೈರ್ ಗಳು ತಳಮಟ್ಟದಲ್ಲಿದ್ದು, ಜಮೀನು ಉಳುಮೆ ಮಾಡಲು ಕಷ್ಟವಾಗುತ್ತಿತ್ತು.

    ಈ ಬಗ್ಗೆ ಪಿಡಿಓ ಮತ್ತು ವಾಟರ್ ಮ್ಯಾನ್ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇದರಿಂದ ಆಕ್ರೋಶಗೊಂಡ ಸೋಮೇಶ್, ಜಮೀನು ಉಳುವ ಸಂದರ್ಭದಲ್ಲಿ ಆಕ್ರೋಶಗೊಂಡು ಗ್ರಾಮಕ್ಕೆ ನೀರು ಪೂರೈಸುವ ಕೊಳವೆಬಾವಿಯ ಎಲೆಕ್ಟ್ರಾನಿಕ್ ಸ್ವಿಚ್ ಬೋರ್ಡ್ ಮೇಲೆ ಕಲ್ಲು ಎತ್ತಿಹಾಕಿ ಧ್ವಂಸ ಮಾಡಿ, ಗ್ರಾಮ ಪಂಚಾಯ್ತಿ ಅಧಿಕಾರಿಗಳನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.

    ಸೋಮೇಶ್ ಆಕ್ರೋಶದಿಂದ ಕಲ್ಲು ಎತ್ತಿ ಹಾಕುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್‍ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • ಸ್ವಂತ ಹಣದಿಂದ ಜನರಿಗಾಗಿ ಕೊಳವೆಬಾವಿ ಕೊರೆಸಿದ ನಗರಸಭಾ ಸದಸ್ಯೆ

    ಸ್ವಂತ ಹಣದಿಂದ ಜನರಿಗಾಗಿ ಕೊಳವೆಬಾವಿ ಕೊರೆಸಿದ ನಗರಸಭಾ ಸದಸ್ಯೆ

    ಚಿಕ್ಕಬಳ್ಳಾಪುರ: ಬರದ ನಾಡು ಅಂತಲೇ ಖ್ಯಾತಿ ಪಡೆದಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಗರಸಭಾ ಸದಸ್ಯೆ ಭಾರತಿ ಅನಂದ್ ಅವರು ಸಾರ್ವಜನಿಕರಿಗೋಸ್ಕರ ತಮ್ಮ ಸ್ವಂತ ಹಣದಿಂದ ಕೊಳವೆ ಬಾವಿಯನ್ನು ಕೊರೆಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.

    ಬಯಲುಸೀಮೆ ಆಗುರುವುದರಿಂದ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಸಾಕಷ್ಟಿದೆ. ಆದರಿಂದ ಸರ್ಕಾರ ಹಲವು ಕೊಳವೆಬಾವಿಯನ್ನು ತೋಡಿಸಿದರು ಸ್ಪಲ್ಪ ಮಟ್ಟಿನಲ್ಲಿ ಮಾತ್ರ ನೀರು ಸಿಗುತ್ತಿತ್ತು. ಕೆಲವೆಡೆ ಸ್ವಲ್ಪ ನೀರು ಕೂಡ ಸಿಗದೇ ಇರೋದು ಇದೆ. ಸರ್ಕಾರದಿಂದ 1000-1200 ಅಡಿ ಕೊಳವೆಬಾವಿ ಕೊರೆಸಿದ್ರೂ ನೀರು ಸಿಗೋದು ಅಪರೂಪ. ಆದ್ರೆ ಸಾರ್ವಜನಿಕರಿಗಾಗಿ ಭಾರತಿ ಅನಂದ್ ಹಾಗೂ ಅವರ ಕುಟುಂಬಸ್ಥರು ಕೊರಸಿರುವ ಕೊಳವೆಬಾವಿಯಲ್ಲಿ ಕೇವಲ 200 ಅಡಿಗೆ ನೀರು ಸಿಕ್ಕಿದೆ.

    ಜಿಲ್ಲೆಯ 12 ನೇ ವಾರ್ಡಿನ ನಗರಸಭಾ ಸದಸ್ಯೆ ಭಾರತಿ ಅನಂದ್ ಹಾಗೂ ಕುಟುಂಬಸ್ಥರು ತಮ್ಮ ಸ್ವಂತ ಹಣದಿಂದ ಕೊರೆಸಿದ ಕೊಳವೆಬಾವಿಯಲ್ಲಿ ಕೇವಲ 200 ಅಡಿಗೆ 4 ಇಂಚು ನೀರು ಸಿಕ್ಕಿದೆ. ಚಿಕ್ಕಬಳ್ಳಾಪುರ ನಗರದ ಪ್ರಮುಖ ರುದ್ರಭೂಮಿಯಾಗಿರುವ ನಕ್ಕಲಕುಂಟೆ ಸ್ಮಶಾನದಲ್ಲಿ ಕೊಳವೆಬಾವಿ ಕೊರೆಸಲಾಗಿದೆ. ವಿಪರ್ಯಾಸ ಅಂದ್ರೆ ನಗರದ ಹಲವೆಡೆ ಕೊಳವೆಬಾವಿ ಕೊರೆಸಿದ್ರೂ ನೀರು ಸಿಗೋದು ಅನುಮಾನ. ಆದ್ರೆ ಸ್ಮಶಾನದಲ್ಲಿ ಸಾರ್ವಜನಿಕರ ಅನುಕೂಲಕ್ಕೆ ಅಂತ ಕೊರೆಸಿದ ಕೊಳವೆಬಾವಿಯಲ್ಲಿ ನೀರು ಸಿಕ್ಕಿರೋದು ಒಂದು ಕಡೆ ಆಶ್ಚರ್ಯವಾದರು ಎಲ್ಲರಿಗೂ ಸಂತಸ ತಂದಿದೆ.

    ಅಂತ್ಯ ಸಂಸ್ಕಾರಕ್ಕೆ ಅಂತ ಸ್ಮಶಾನಕ್ಕೆ ಬರುವವರು ನೀರಿಲ್ಲದೆ ಸಾಕಷ್ಟು ಕಷ್ಟ ಅನುಭವಿಸುತ್ತಿದ್ದರು. ಇದನ್ನ ಮನಗಂಡ ನಗರಸಭಾ ಸದಸ್ಯೆ ಹಾಗೂ ಕುಟುಂಬಸ್ಥರು ಕೊಳವೆಬಾವಿ ಕೊರೆಸಿ ಸಾರ್ವಜನಿಕರಿಗೆ ಸಹಾಯ ಮಾಡಿದ್ದಾರೆ. ತಮ್ಮ ಸ್ವಂತ ಹಣವನ್ನು ಖರ್ಚು ಮಾಡಿ ಜನರಿಗೆ ಸಹಾಯ ಮಾಡಿರುವ ಭಾರತಿ ಆನಂದ್ ಹಾಗೂ ಅವರ ಕುಟುಂಬಸ್ಥರ ಕೆಲಸಕ್ಕೆ ಸಾರ್ವಜನಿಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೋರ್ ವೆಲ್‍ನಲ್ಲಿ ಬರ್ತಿದೆ ಬಿಸಿ ನೀರು- ಭದ್ರಾವತಿಯಲ್ಲಿ ಕೌತುಕ

    ಬೋರ್ ವೆಲ್‍ನಲ್ಲಿ ಬರ್ತಿದೆ ಬಿಸಿ ನೀರು- ಭದ್ರಾವತಿಯಲ್ಲಿ ಕೌತುಕ

    ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕಿನ ತಡಸ ಗ್ರಾಮದ ಬೋರ್ ವೆಲ್‍ನಲ್ಲಿ ಕುದಿಯುವ ನೀರು ಬರುತ್ತಿದ್ದು ಜನರಿಗೆ ಕೌತುಕದ ಜೊತೆಗೆ ಆತಂಕ ಮೂಡಿಸಿದೆ.

    ಗ್ರಾಮದ ಪರಮೇಶ್ವರಪ್ಪ ಎಂಬವರ ಮನೆ ಹಿತ್ತಲಿನಲ್ಲಿದ್ದ ಬೋರ್ ವೆಲ್‍ನಲ್ಲಿ ಕುದಿಯುವ ನೀರು ಬರುತ್ತಿದೆ. ಮೊದಲು 2 ರಿಂದ 3 ನಿಮಿಷ ಬಿಸಿನೀರು ಬಂದು ನಂತರ ಮತ್ತೆ ತಣ್ಣೀರು ಬರುತ್ತಿದೆ. ಸುಮಾರು 34 ವರ್ಷದ ಹಿಂದೆ ಈ ಕೊಳವೆ ಬಾವಿ ಕೊರೆಸಲಾಗಿದ್ದು ಇದು ಊರಿನವರ ನೀರಿನ ಅವಶ್ಯಕತೆ ಪೂರೈಸುತ್ತಿತ್ತು.

    ಇತ್ತೀಚೆಗೆ ಈ ಬಾವಿಯಲ್ಲಿ ಬಿಸಿ ನೀರು ಬಂದಿರುವುದು ಅಚ್ಚರಿ ತಂದಿದೆ. ಗ್ರಾಮದ ಈ ಬೋರ್ ವೆಲ್ ಒಂದರಲ್ಲಿ ಮಾತ್ರ ಈ ರೀತಿಯ ಅಚ್ಚರಿ ಕಾಣಿಸಿಕೊಂಡಿದ್ದು, ಬೇರೆ ಯಾವುದೇ ಬೋರ್ ವೆಲ್‍ಗಳಲ್ಲೂ ಬಿಸಿನೀರು ಬಂದಿಲ್ಲ. ಬೋರ್ ವೆಲ್‍ನಲ್ಲಿ ಬಿಸಿ ನೀರು ಬರಲು ತಾಂತ್ರಿಕ ಸಮಸ್ಯೆ ಅಥವಾ ಅಂತರ್ಜಲದಲ್ಲಿ ಏರುಪೇರಾಗಿದೆಯಾ ಎಂಬ ಅನುಮಾನ ಸದ್ಯ ಗ್ರಾಮಸ್ಥರಲ್ಲಿ ಮೂಡಿದೆ. ಇತ್ತ ಸುತ್ತಮುತ್ತಲಿನ ಬೆಟ್ಟಗುಡ್ಡಗಳಲ್ಲಿ ಇಂತಹ ಬಿಸಿನೀರಿನ ಒರತೆ ಇದೆಯ ಎಂಬ ಬಗ್ಗೆ ಭೂಗರ್ಭ ಶಾಸ್ತ್ರಜ್ಞರು ಪತ್ತೆ ಹಚ್ಚಬೇಕೆಂದು ಗ್ರಾಮಸ್ಥರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಾಶ್ವತ ಬರದನಾಡಲ್ಲಿ ನೆಲದಿಂದ ಉಕ್ಕುತ್ತಿದೆ ಜಲ – ಕಡೂರಿನ ದೇವಾಲಯದಲ್ಲಿ ವಿಸ್ಮಯ

    ಶಾಶ್ವತ ಬರದನಾಡಲ್ಲಿ ನೆಲದಿಂದ ಉಕ್ಕುತ್ತಿದೆ ಜಲ – ಕಡೂರಿನ ದೇವಾಲಯದಲ್ಲಿ ವಿಸ್ಮಯ

    ಚಿಕ್ಕಮಗಳೂರು: ಶಾಶ್ವತ ಬರಗಾಲಕ್ಕೆ ತುತ್ತಾದ ತಾಲೂಕು ಎಂದೇ ಕರೆಯುವ ಕಡೂರಿನ ಖಂಡುಗದಹಳ್ಳಿಯ ದೇವಾಲಯದಲ್ಲಿನ ಬೋರ್‌ವೆಲ್‌ನಲ್ಲಿ ಎರಡು ದಿನಗಳಿಂದ ನಿರಂತರವಾಗಿ ನೀರು ಉಕ್ಕಿಬರುತ್ತಿದೆ.

    ಖಂಡುಗದಹಳ್ಳಿಯ ಸೋಮೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಒಂದು ವರ್ಷದ ಹಿಂದೆ ಬೋರ್‌ವೆಲ್‌ ಕೊರೆಸಿದ್ದರು. ಬೋರ್‌ವೆಲ್‌ ಕೊರೆದಾಗಿನಿಂದ ಅರ್ಧ ಇಂಚು ನೀರು ಬರುತ್ತಿತ್ತು. ಆದರೆ ಎರಡು ದಿನಗಳಿಂದ ಬೋರ್‌ನಿಂದ ನಿರಂತರವಾಗಿ ನೀರು ಉಕ್ಕಿ ಹರಿಯುತ್ತಿದೆ. ಬರದ ನಾಡಲ್ಲಿ ಈ ವಿಸ್ಮಯ ನಡೆದಿರುವುದು ಸೋಮೇಶ್ವರ ಸ್ವಾಮಿಯ ಮಹಿಮೆ ಎಂದು ಭಕ್ತರು ಹಾಡಿ ಹೊಗಳುತ್ತಿದ್ದಾರೆ.

     

    ಹಿಂದೊಮ್ಮೆ ದೇವಾಲಯದಲ್ಲಿ ನೀರಿನಲ್ಲಿ ದೀಪ ಹಚ್ಚಿದ್ದು ಜನರನ್ನು ಅಚ್ಚರಿಗೊಳಿಸಿತ್ತು. ಈಗ ಬೋರ್‌ವೆಲ್‌ನಲ್ಲಿ ನೀರು ಉಕ್ಕುತ್ತಿರುವುದು ಜನರ ಆಶ್ಚರ್ಯಕ್ಕೆ ಕಾರಣವಾಗಿದೆ. ಹೀಗೆ ಈ ಭಾಗದಲ್ಲಿ ಸೋಮೇಶ್ವರ ಸ್ವಾಮಿಯಿಂದ ಹಲವು ವಿಸ್ಮಯಗಳು ನಡೆಯುತ್ತಲೇ ಇರುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ವಿದ್ಯುತ್ ಸ್ಪರ್ಶ: ಸ್ಥಳದಲ್ಲೇ ಇಬ್ಬರು ಸಾವು, ಓರ್ವ ಗಂಭೀರ

    ವಿದ್ಯುತ್ ಸ್ಪರ್ಶ: ಸ್ಥಳದಲ್ಲೇ ಇಬ್ಬರು ಸಾವು, ಓರ್ವ ಗಂಭೀರ

    ಚಿಕ್ಕಬಳ್ಳಾಪುರ: ಕೊಳವೆ ಬಾವಿ ದುರಸ್ತಿ ವೇಳೆ ವಿದ್ಯುತ್ ಸ್ಪರ್ಶಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಓರ್ವ ರೈತರ ಸ್ಥಿತಿ ಗಂಭೀರವಾಗಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ವಡ್ಡಹಳ್ಳಿ ಗ್ರಾಮದಲ್ಲಿ ನಡೆದಿದೆ.

    ವಿನೋದ್ (28) ಮತ್ತು ವೆಂಕಟರೆಡ್ಡಿ (40) ಸ್ಥಳದಲ್ಲೇ ಮೃತಪಟ್ಟಿದ್ದು, ಗೋಪಾಲಪ್ಪ ಎಂಬವರು ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

    ರೈತ ಗೋಪಾಲಪ್ಪ ಅವರ ಹೊಲದಲ್ಲಿ ಕೊಳವೆ ಬಾವಿಯ ಮೋಟಾರ್ ಕೆಟ್ಟು ಹೋಗಿತ್ತು. ಹೀಗಾಗಿ ಟ್ರ್ಯಾಕ್ಟರ್ ಯಂತ್ರದ ಮೂಲಕ ಕೊಳವೆ ಬಾವಿಯಿಂದ ಮೋಟಾರ್ ಹೊರ ತೆಗೆಯಲಾಗುತ್ತಿತ್ತು. ಆದರೆ ಮೇಲೆ ಇದ್ದ ವಿದ್ಯುತ್ ತಂತಿಯ ಬಗ್ಗೆ ಯಾರೊಬ್ಬರು ಗಮನಿಸರಿಲ್ಲ. ಯಂತ್ರವು ಎತ್ತರಕ್ಕೆ ಹೋಗುತ್ತಿದ್ದಂತೆ 11 ಕೆ.ವಿ ವಿದ್ಯುತ್ ತಂತಿಗೆ ತಗುಲಿದ್ದು, ಸಂಪೂರ್ಣ ಟ್ರಾಕ್ಟರ್ ಗೆ ವಿದ್ಯುತ್ ಪ್ರವಹಿಸಿ ಟ್ರಾಕ್ಟರ್ ಮಾಲೀಕ ವೆಂಕಟರೆಡ್ಡಿ, ಕೆಲಸಕ್ಕೆ ಬಂದಿದ್ದ ವಿನೋದ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಅಲ್ಲಿಯೇ ಇದ್ದ ರೈತ ಗೋಪಾಲಪ್ಪ ಅವರಿಗೂ ವಿದ್ಯುತ್ ತಗುಲಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮನೆ ಕಟ್ಟಲು ಬೋರ್ ವೆಲ್ ಕಟ್ ಮಾಡಿ ಮುಚ್ಚಿದ!

    ಮನೆ ಕಟ್ಟಲು ಬೋರ್ ವೆಲ್ ಕಟ್ ಮಾಡಿ ಮುಚ್ಚಿದ!

    ಬೆಂಗಳೂರು: ಆನೇಕಲ್‍ನಲ್ಲಿ ವ್ಯಕ್ತಿಯೊಬ್ಬ ಬೋರ್ ವೆಲ್ ಕಟ್ ಮಾಡಿ ಮುಚ್ಚಿದ್ದಾನೆ. ಇಲ್ಲಿನ ಸುರಗಜಕ್ಕನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊನ್ನಕಳಸಾಪುರ ಗ್ರಾಮದ ಗೋಮಾಳ ಜಾಗದಲ್ಲಿ ಹಲವು ಬಡವರು ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ.

    1999ರಲ್ಲಿ ಇಲ್ಲಿನ ನೀರಿನ ಸಮಸ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಇದೇ ಸರ್ಕಾರಿ ಜಾಗದಲ್ಲಿ ಬೋರ್ ವೆಲ್ ಕೊರೆಸಿ ಅದಕ್ಕೆ ಹ್ಯಾಂಡ್ ಪಂಪ್ ಹಾಕಿಸಲಾಗಿತ್ತು. ಆದ್ರೆ ಇದೇ ಜಾಗದಲ್ಲಿ ಆನಂದ್ ಎಂಬಾತ ಮನೆ ಕಟ್ಟುತ್ತಿದ್ದು ಬೋರ್ ವೆಲ್ ಕಟ್ ಮಾಡಿ ಮುಚ್ಚಿ ಹಾಕಿದ್ದಾನೆ. ಇವನಿಗೆ ಪಂಚಾಯ್ತಿಯ ಕೆಲವರ ಬೆಂಬಲವಿದ್ದು, ನ್ಯಾಯ ಕೇಳೋಕೆ ಹೋದ್ರೆ ಜನರನ್ನು ಬೆದರಿಸ್ತಿದ್ದಾನಂತೆ.

    20 ವರ್ಷಗಳಿಂದ ಈ ಜಾಗದಲ್ಲಿ ವಾಸವಿರುವ ಜನ 94 ಸಿ ಅಡಿ ಅರ್ಜಿ ಹಾಕಿಕೊಂಡಿದ್ದಾರೆ. ಆದ್ರೆ ಈತ ಯಾವುದೇ ದಾಖಲೆಯಿಲ್ಲದೆ ಮನೆ ಕಟ್ಟುತ್ತಿದ್ದು, ಜನರ ಕುಡಿಯುವ ನೀರಿಗೂ ಕಂಟಕವಾಗಿದ್ದಾನೆ. ದೂರು ನೀಡಿದ ಬಳಿಕ ಸ್ಥಳಕ್ಕೆ ಬಂದ ಪಿಡಿಓ ಗಂಗಾಧರ್ ದಾಖಲೆ ಪರಿಶೀಲಿಸಿ ಕ್ರಮ ಕೈಗೊಳ್ಳೋದಾಗಿ ತಿಳಿಸಿದ್ರು.

  • ಕೊಳವೆ ಬಾವಿಯೊಳಗೆ ಬಿದ್ದ 3 ವರ್ಷದ ಬಾಲಕಿ ಸಾವು ಗೆದ್ದಳು!

    ಕೊಳವೆ ಬಾವಿಯೊಳಗೆ ಬಿದ್ದ 3 ವರ್ಷದ ಬಾಲಕಿ ಸಾವು ಗೆದ್ದಳು!

    – 30 ಗಂಟೆಗಳ ಕಾರ್ಯಾಚರಣೆ ಯಶಸ್ವಿ

    ಪಾಟ್ನಾ: ಮನೆಯ ಬಳಿ ಆಟವಾಡುತ್ತಾ 110 ಅಡಿ ಆಳದ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ ಮೂರು ವರ್ಷದ ಬಾಲಕಿಯನ್ನು ಯಶಸ್ವಿ ಕಾರ್ಯಾಚರಣೆ ನಡೆಸಿ ರಕ್ಷಿಸಿರುವ ಘಟನೆ ಬಿಹಾರ್‍ನ ಮುಂಗೇರಾ ಜಿಲ್ಲೆಯಲ್ಲಿ ನಡೆದಿದೆ.

    ಮೂರು ವರ್ಷದ ಸನ್ನೊ ಮಂಗಳವಾರ ಸಂಜೆ 4 ಗಂಟೆ ವೇಳೆ ಮನೆಯ ಬಳಿ ಇದ್ದ ತೆರೆದ ಕೊಳವೆ ಬಾವಿಗೆ ಬಿದ್ದಿದ್ದಳು. ವಿಷಯ ತಿಳಿದ ಪೋಷಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ರಾಷ್ಟ್ರಿಯ ವಿಪತ್ತು ನಿರ್ವಹಣಾ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯವನ್ನು ಆರಂಭಿಸಿತ್ತು. ಸತತ 30 ಗಂಟೆಗಳ ಕಾರ್ಯಾಚರಣೆ ಬಳಿಕ ಬಾಲಕಿಯನ್ನು ರಕ್ಷಣೆ ಮಾಡಲಾಗಿದೆ.

    ಕೊಳವೆ ಬಾವಿಯಿಂದ ಸನ್ನೋಳನ್ನು ರಕ್ಷಿಸಿದ ಬಳಿಕ ತಜ್ಞ ವೈದ್ಯರು ಬಾಲಕಿಯ ಆರೋಗ್ಯ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬಾಲಕಿಯ ಆರೋಗ್ಯ ಉತ್ತಮವಾಗಿದ್ದು, ಬಳಿಕ ಸನ್ನೋಳನ್ನು ಪೋಷಕರ ವಶಕ್ಕೆ ನೀಡಿದ್ದಾರೆ.

    ಕಾರ್ಯಾಚರಣೆ ವೇಳೆ ರಕ್ಷಣಾ ತಂಡ ಬಾಲಕಿ ಉಸಿರಾಟಕ್ಕೆ ಆಮ್ಲಜನಕವನ್ನು ಪೂರೈಸಿತ್ತು. ಅಲ್ಲದೇ ಬಾಲಕಿಯು ಇನ್ನೂ ಕೆಳಗೆ ಕುಸಿಯದಂತೆ ಮುಂಜಾಗ್ರತೆ ವಹಿಸಿದ್ದರು. ಬಳಿಕ ಕೊಳವೆಬಾವಿಯ ಪಕ್ಕದಲ್ಲಿ ಜೆಸಿಬಿ ಯಂತ್ರಗಳ ಸಹಾಯದಿಂದ ಬೃಹತ್ ಹೊಂಡ ನಿರ್ಮಿಸಿ ಬಾಲಕಿಯನ್ನು ಆದಷ್ಟು ಬೇಗ ರಕ್ಷಿಸುವ ಕಾರ್ಯ ನಡೆಸಿದ್ದರು.

    ಬಾಲಕಿ ಮಂಗಳವಾರ ತನ್ನ ಪೋಷಕರೊಂದಿಗೆ ಮುಂಗೇರಾದ ಮುರ್ಗಿಚಕ್ ಎಂಬಲ್ಲಿರುವ ಅಜ್ಜನ ಮನೆಗೆ ಬಂದಿದ್ದಳು. ಈ ವೇಳೆ ಮನೆಯ ಹತ್ತಿರ ಆಟವಾಡುತ್ತಿರುವಾಗ ಕೊಳವೆ ಬಾವಿಗೆ ಬಿದ್ದಿದ್ದಳು. ಕೊಳವೆಬಾವಿಯಲ್ಲಿ ಬಾಲಕಿಯು ಅಳುತ್ತಿರುವ ಧ್ವನಿ ಕೇಳಿದ ಬಳಿಕ ಬಾಲಕಿ ಜೀವಂತವಾಗಿದ್ದು ಖಚಿತವಾಗಿತ್ತು. ಕೂಡಲೇ ಎಚ್ಚೆತ್ತ ರಕ್ಷಣಾ ಪಡೆಯ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದರು.

  • ಆಟವಾಡುತ್ತಾ 110 ಅಡಿ ಆಳದ ಕೊಳವೆಬಾವಿಗೆ ಬಿದ್ದ ಬಾಲಕಿ

    ಆಟವಾಡುತ್ತಾ 110 ಅಡಿ ಆಳದ ಕೊಳವೆಬಾವಿಗೆ ಬಿದ್ದ ಬಾಲಕಿ

    ಪಾಟ್ನಾ: ಆಟವಾಡುತ್ತಾ ಮೂರು ವರ್ಷದ ಬಾಲಕಿಯು 110 ಅಡಿ ಆಳದ ಬೋರ್‍ವೆಲ್‍ಗೆ ಬಿದ್ದ ಘಟನೆ ಬಿಹಾರ್‍ನ ಮುಂಗೇರಾ ಜಿಲ್ಲೆಯಲ್ಲಿ ನಡೆದಿದೆ.

    ಮೂರು ವರ್ಷದ ಸನ್ನೊ ಕೊಳವೆಬಾವಿಗೆ ಬಿದ್ದ ಬಾಲಕಿ. ಮಂಗಳವಾರ ತನ್ನ ಪೋಷಕರೊಂದಿಗೆ ಸನ್ನೊ ಅಜ್ಜನಾದ ಉಮೇಶ್ ನಂದನ್ ರವರನ್ನು ನೋಡಲು ಮುಂಗೇರಾದ ಮುರ್ಗಿಚಕ್ ಏರಿಯಾಕ್ಕೆ ಬಂದಿದ್ದಳು. ಈ ವೇಳೆ ಮನೆಯ ಹತ್ತಿರ ಆಟವಾಡುತ್ತಿರುವಾಗ ಸಂಜೆ 4ರ ಸುಮಾರಿಗೆ ಮನೆಯ ಬಳಿಯಿದ್ದ ಸುಮಾರು 110 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದಾಳೆ.

    ವಿಷಯ ತಿಳಿದ ಪೋಷಕರು ಕೂಡಲೇ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ರಕ್ಷಣಾ ತಂಡಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಕೊಳವೆಬಾವಿಯಲ್ಲಿ ಬಾಲಕಿಯು ಅಳುತ್ತಿರುವ ಧ್ವನಿ ಕೇಳಿದೆ. ಕೂಡಲೇ ಎಚ್ಚೆತ್ತ ರಕ್ಷಣಾ ಪಡೆಯ ಅಧಿಕಾರಿಗಳು ಕೊಳವೆಬಾವಿಯ ಸುತ್ತ ಬಿಗಿಭದ್ರತೆ ಕೈಗೊಂಡಿದ್ದಾರೆ.

    ಘಟನೆ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದ ರಾಜ್ಯ ವಿಪತ್ತು ನಿರ್ವಹಣ ತಂಡದ ಅಧಿಕಾರಿಯಾದ ಸಂಜೀವ್ ಕುಮಾರ್ ರವರು, ಬಾಲಕಿಗೆ ಈಗಾಗಲೇ ಆಮ್ಲಜನಕವನ್ನು ಪೂರೈಕೆ ಮಾಡಿದ್ದು, ಬಾಲಕಿಯು ಇನ್ನೂ ಕೆಳಗೆ ಕುಸಿಯದಂತೆ ಮುಂಜಾಗ್ರತೆ ವಹಿಸಿದ್ದೇವೆ. ಅಲ್ಲದೇ ಕೂಡಲೇ ಆಕೆಯನ್ನು ಕೊಳವೆಬಾವಿಯಿಂದ ಹೊರತೆಗೆಯುತ್ತೇವೆ ಎಂದು ಹೇಳಿದ್ದಾರೆ.

    ರಾಜ್ಯ ವಿಪತ್ತು ನಿರ್ವಹಣಾ ತಂಡ ಈಗಾಗಲೇ ಕೊಳವೆಬಾವಿಯ ಪಕ್ಕದಲ್ಲಿ ಜೆಸಿಬಿ ಯಂತ್ರಗಳ ಸಹಾಯದಿಂದ 40 ಅಡಿಗೂ ಹೆಚ್ಚಿನ ಬೃಹತ್ ಹೊಂಡ ನಿರ್ಮಿಸಿದ್ದು, ಬಾಲಕಿಯನ್ನು ಆದಷ್ಟು ಬೇಗ ರಕ್ಷಿಸುವುದಾಗಿ ತಿಳಿಸಿವೆ.

    ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ವರಿಷ್ಠಾಧಿಕಾರಿಯಾದ ಹರಿಶಂಕರ್ ಕುಮಾರ್ ರವರು, ಈಗಾಗಲೇ ಘಟನಾ ಸ್ಥಳದಲ್ಲಿ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದ್ದು, 2 ಪೊಲೀಸ್ ತಂಡಗಳನ್ನು ಸ್ಥಳದಲ್ಲಿ ನಿಯೋಜಿಸಿದ್ದೇವೆ. ರಕ್ಷಣಾ ಕಾರ್ಯಚರಣೆಗೆ ಪೊಲೀಸ್ ಇಲಾಖೆಯಿಂದ ಬೇಕಾಗುವ ಸಹಾಯವನ್ನು ಮಾಡಲಾಗುತ್ತದೆ ಎಂದು ಹೇಳಿದರು.

  • ಕುಡಿಯುವ ನೀರಿನ ಬೋರ್ ವೆಲ್ ನಲ್ಲಿ ವಿದ್ಯುತ್ ಪ್ರವಹಿಸಿ ಯುವಕ ದುರ್ಮರಣ!

    ಕುಡಿಯುವ ನೀರಿನ ಬೋರ್ ವೆಲ್ ನಲ್ಲಿ ವಿದ್ಯುತ್ ಪ್ರವಹಿಸಿ ಯುವಕ ದುರ್ಮರಣ!

    ಹಾವೇರಿ: ಕುಡಿಯುವ ನೀರಿನ ಬೋರ್ ವೆಲ್ ನಲ್ಲಿ ವಿದ್ಯುತ್ ಪ್ರವಹಿಸಿ ಯುವಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ನಡೆದಿದೆ.

    ಸುರೇಶ ಸುಂಕದ(22) ಮೃತ ಯುವಕ. ಬೋರ್ ವೆಲ್ ಮೆಷಿನ್ ಸ್ಟಾರ್ಟ್ ಮಾಡಲು ಹೋದಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಯುವಕನ ಸಾವಿಗೆ ಪುರಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.

    ಅಷ್ಟೇ ಅಲ್ಲದೇ ಪುರಸಭೆಯ ಮುಂದೆ ಸ್ಥಳೀಯರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಬಂಕಾಪುರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಈ ಘಟನೆ ಬಂಕಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • 150 ಅಡಿ ಆಳದ ಬೋರ್ ವೆಲ್‍ ಗೆ ಬಿದ್ದು 35 ಗಂಟೆಗಳ ಬಳಿಕ ಬದುಕಿ ಬಂದ 4ರ ಬಾಲಕ – ವಿಡಿಯೋ

    150 ಅಡಿ ಆಳದ ಬೋರ್ ವೆಲ್‍ ಗೆ ಬಿದ್ದು 35 ಗಂಟೆಗಳ ಬಳಿಕ ಬದುಕಿ ಬಂದ 4ರ ಬಾಲಕ – ವಿಡಿಯೋ

    ಭೋಪಾಲ್: 40 ಅಡಿ ಆಳದ ಬೋರ್ ವೆಲ್‍ ಗೆ ಸಿಲುಕಿದ್ದ 4 ವರ್ಷದ ಹುಡುಗ 35 ಗಂಟೆಗಳ ನಂತರ ಬದುಕಿ ಬಂದಿರುವ ಘಟನೆ ಮಧ್ಯ ಪ್ರದೇಶದ ದಿವಾಸ್ ಜಿಲ್ಲೆಯಲ್ಲಿ ನಡೆದಿದೆ.

    ರೋಷನ್ ಬೋರ್ ವೆಲ್‍ ಗೆ ಬಿದ್ದು ಬದುಕಿ ಬಂದ ಬಾಲಕ. ಈತ ಶನಿವಾರ ಬೆಳಗ್ಗೆ ಜಿಲ್ಲೆಯ ಉಮಾರಿಯಾ ಗ್ರಾಮದಲ್ಲಿ ಆಟವಾಡುತ್ತಿದ್ದನು. ಈ ವೇಳೆ ಸುಮಾರು 11 ಗಂಟೆಗೆ ರೋಷನ್ ಆಕಸ್ಮಿಕವಾಗಿ ತೆರೆದ ಬೋರ್ ವೆಲ್‍ ಗೆ ಬಿದ್ದಿದ್ದಾನೆ. ತಕ್ಷಣ ಬಾಲಕ ಬೋರ್ ವೆಲ್‍ ಗೆ ಬಿದ್ದಿರುವ ಮಾಹಿತಿಯನ್ನು ಸೇನಾ ಪಡೆಗೆ ಮಾಹಿತಿ ತಿಳಿಸಲಾಗಿದೆ.

    ಮಾಹಿತಿ ತಿಳಿದ ಸೇನಾ ತಂಡ ಸ್ಥಳಕ್ಕೆ ದೌಡಾಯಿಸಿದೆ. ನಂತರ ಸಿಬ್ಬಂದಿ ರಕ್ಷಣಾ ಕಾರ್ಯಚರಣೆಯನ್ನು ಆರಂಭಿಸಿದ್ದಾರೆ. ಆ ಬೋರ್ ವೆಲ್‍  ಸುಮಾರು 150 ಅಡಿ ಆಳವಿದ್ದು, ರೋಷನ್ ಸುಮಾರು 40 ಅಡಿ ಆಳಕ್ಕೆ ಸಿಲುಕಿದ್ದ ಮಾಹಿತಿ ದೊರೆತಿದೆ. ನಂತರ ಬಾಲಕನಿಗೆ ಪೈಪ್ ಮೂಲಕ ಆಮ್ಲಜನಕ ಒದಗಿಸಲಾಗಿತ್ತು.

    ಬಾಲಕನಿಗೆ ಪೈಪ್ ಮೂಲಕವೇ ಹಾಲು ಮತ್ತು ನೀರನ್ನು ನೀಡಲಾಯಿತು. ಪೋಷಕರು ಕಾರ್ಯಚರಣೆ ಮುಗಿಯುವರೆಗೂ ಮಗನ ಜೊತೆ ಮಾತನಾಡುತ್ತಿದ್ದರು. ಬಾಲಕನು ಕೂಡ ಅವರ ಮಾತಿಗೆ ಪ್ರತಿಕ್ರಿಯೆ ನಿಡುತ್ತಿದ್ದನು.

    ರಕ್ಷಣಾ ಪಡೆ ಮೊದಲಿಗೆ ಒಂದು ಅನ್ಯ ಮಾರ್ಗ ಅಗೆದು ಆ ಸುರಂಗದ ಮೂಲಕ ಕೊಳವೆ ಬಾವಿಯನ್ನು ಸಂಪರ್ಕಿಸಿ ಬಾಲಕನನ್ನು ಮೇಲೆ ತಳ್ಳುವ ಯೋಚನೆಯನ್ನು ಮಾಡಿದ್ದರು.

    ಸುರಂಗ ಮಾರ್ಗ ಅಗೆದಿದ್ದು, ಆದರೆ ಶೀಘ್ರದಲ್ಲೇ ಬಾಲಕನನ್ನು ಪಾರು ಮಾಡಬೇಕಾಗುತ್ತದೆ. ಇಲ್ಲದ್ದಿದ್ದರೆ ಬಾಲಕನ ಜೀವಕ್ಕೆ ಅಪಾಯವಿದೆ ಎಂದು ಸೇನಾ ಪಡೆ ತಿಳಿದುಕೊಂಡು ತಕ್ಷಣ ಹಗ್ಗವನ್ನು ಕೊಳವೆಯೊಳಗೆ ಇಳಿಸಿದ್ದಾರೆ. ಬಾಲಕನಿಗೆ ತನ್ನ ತೋಳಿನ ಸುತ್ತಿಕೊಳ್ಳಲು ತಿಳಿಸಲಾಗಿದ್ದು, ಹುಡುಗ ನಾವು ಹೇಳಿದ ಸೂಚನೆಗಳನ್ನು ಅನುಸರಿಸಿ, ನಂತರ ಯಶಸ್ವಿಯಾಗಿ ಹೊರಬಂದನು ಎಂದು ಎಸ್ ಪಿ ಹೇಳಿದ್ದಾರೆ.

    ಬಾಲಕ ಬೋರ್ ವೆಲ್‍ ನಿಂದ ಹೊರ ಬಂದ ತಕ್ಷಣ ಆತನನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಸದ್ಯಕ್ಕೆ ಹುಡುಗ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಎಲ್ಲ ಕಾರ್ಯಚರಣೆ ನಡೆಯಲು ಸುಮಾರು 35 ಗಂಟೆಗಳ ಸಮಯವಾಗಿದ್ದು, ಭಾನುವಾರ ರಾತ್ರಿ 10.45 ರ ವೇಳೆಗೆ ಬಾಲಕನನ್ನು ರಕ್ಷಿಸಲಾಗಿದೆ ಎಂದು ದೆವಾಸ್ ಜಿಲ್ಲಾ ಪೊಲೀಸ್ ಅಧೀಕ್ಷಕ ಅನ್ಸುಮನ್ ಸಿಂಗ್ ಹೇಳಿದ್ದಾರೆ.

    https://www.youtube.com/watch?v=lw3NHCkW7Bk&feature=youtu.be&a=