Tag: border

  • 14 ದಿನಗಳ ಕಾಲ ಉಡುಪಿ ಗಡಿಗಳು ಸೀಲ್‍ಡೌನ್- ಜಿಲ್ಲಾಧಿಕಾರಿ ಆದೇಶ

    14 ದಿನಗಳ ಕಾಲ ಉಡುಪಿ ಗಡಿಗಳು ಸೀಲ್‍ಡೌನ್- ಜಿಲ್ಲಾಧಿಕಾರಿ ಆದೇಶ

    – ನಾಳೆ ರಾತ್ರಿ 8ರ ವರೆಗೆ ಮಾತ್ರ ಅಂತರ್ ಜಿಲ್ಲಾ ಓಡಾಟಕ್ಕೆ ಅವಕಾಶ

    ಉಡುಪಿ: ಇಂದು ರಾತ್ರಿಯಿಂದ ಜಿಲ್ಲೆಯ ಎಲ್ಲ ಗಡಿಗಳು ಸೀಲ್‍ಡೌನ್ ಆಗಲಿದ್ದು, ಜೆಲ್ಲೆಯೊಳಗೆ ಜನಜೀವನ ಯಥಾಸ್ಥಿತಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

    ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ರಾಜ್ಯದ ಎಲ್ಲ ಜಿಲ್ಲೆಗಳು ಪರಿಸ್ಥಿತಿಗನುಣವಾಗಿ ಕ್ರಮ ಕೈಗೊಳ್ಳಲಾಗುತ್ತಿದ್ದು, ಕೆಲ ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್‍ಡೌನ್ ಘೋಷಿಸಿದರೆ, ಇನ್ನೂ ಕೆಲ ಗಡಿಗಳನ್ನು ಸೀಲ್ ಮಾಡಲಾಗುತ್ತಿದೆ. ಇನ್ನೂ ಹಲವು ಜಿಲ್ಲೆಗಳಲ್ಲಿ ಹೆಚ್ಚು ಪ್ರಕರಣಗಳಿರುವ ತಾಲೂಕುಗಳನ್ನಷ್ಟೇ ಲಾಕ್ ಮಾಡಲಾಗುತ್ತಿದೆ. ಹೀಗಾಗಿ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಉಡುಪಿಗೆ ಸಂಪರ್ಕ ಕಲ್ಪಿಸುವ ಎಲ್ಲ ಗಡಿಗಳನ್ನು ಸೀಲ್ ಮಾಡಲು ಆದೇಶಿಸಿದ್ದಾರೆ.

    ಮಂಗಳವಾರ ರಾತ್ರಿಯಿಂದ ಉಡುಪಿ ಗಡಿ ಸೀಲ್‍ಡೌನ್ ಆಗಲಿದ್ದು, ಜಿಲ್ಲೆಯೊಳಗೆ ಕೆಲ ನಿರ್ಬಂಧ ವಿಧಿಸಿಲಾಗಿದೆ. ಆದರೆ ಜನ ಜೀವನ ಯಥಾಸ್ಥಿತಿ ಇರಲಿದೆ. 14 ದಿನಗಳ ಕಾಲ ಉಡುಪಿಯಲ್ಲಿ ಯಾವುದೇ ಬಸ್ ಸಂಚಾರ ಇರುವುದಿಲ್ಲ. ಸಂತೆ ಮಾರುಕಟ್ಟೆಗಳನ್ನು ನಡೆಸುವಂತಿಲ್ಲ, ಸಭೆ ಸಮಾರಂಭಕ್ಕೆ ಜಿಲ್ಲೆಯಲ್ಲಿ ಅವಕಾಶ ಇಲ್ಲ, ಮದುವೆಯಲ್ಲಿ 50 ಜನ ಸೇರಿಸಬಹುದು, ಸಾರ್ವಜನಿಕ ಹಬ್ಬ ಆಚರಣೆಗೆ ಅವಕಾಶ ಇಲ್ಲ, ದೇವಸ್ಥಾನ, ಚರ್ಚ್, ಮಸೀದಿಯೊಳಗೆ 20 ಜನಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಅಲ್ಲದೆ ವಿಶೇಷ ಪೂಜೆಗೆ ಅವಕಾಶ ಇಲ್ಲ. ಸ್ವಯಂ ನಿರ್ಬಂಧಗಳಿಗೆ ಜಿಲ್ಲಾಡಳಿತ ಹೊಣೆಯಲ್ಲ. ಭಾನುವಾರ ಸಂಪೂರ್ಣ ಲಾಕ್‍ಡೌನ್ ಇರಲಿದೆ. ಹೋಟೆಲ್‍ಗಳಲ್ಲಿ ಪಾರ್ಸೆಲ್‍ಗೆ ಅವಕಾಶ ಇದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

    ಗಡಿಗಳನ್ನು ಸೀಲ್‍ಡೌನ್ ಮಾಡುವುದರಿಂದಾಗಿ ತುರ್ತು ವೈದ್ಯಕೀಯ ವಾಹನಗಳಿಗೆ ಮಾತ್ರ ವಿನಾಯಿತಿ ಇದೆ. ಉಳಿದೆಲ್ಲ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಜಿಲ್ಲೆಯ ಎಲ್ಲ ಶಾಸಕರು, ಅಧಿಕಾರಗಳು, ಎಸ್‍ಪಿ ಸಭೆಯಲ್ಲಿ ಭಾಗಿಯಾಗಿದ್ದರು. ಅಂತರ್ ಜಿಲ್ಲೆಗೆ ಹೋಗುವವರಿಗೆ, ಬರುವವರಿಗೆ ನಾಳೆ ರಾತ್ರಿ ಎಂಟು ಗಂಟೆಯವರೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

  • ಚೀನಾ ಪುಂಡಾಟಕ್ಕೆ ಭಾರತ ತಕ್ಕ ಉತ್ತರ ನೀಡಿದೆ- ಅಮೆರಿಕ ವಿದೇಶಾಂಗ ಕಾರ್ಯದರ್ಶಿ

    ಚೀನಾ ಪುಂಡಾಟಕ್ಕೆ ಭಾರತ ತಕ್ಕ ಉತ್ತರ ನೀಡಿದೆ- ಅಮೆರಿಕ ವಿದೇಶಾಂಗ ಕಾರ್ಯದರ್ಶಿ

    ನವದೆಹಲಿ: ಚೀನಾದ ಆಕ್ರಮಣಕಾರಿ ಕ್ರಮಗಳಿಗೆ ಭಾರತ ತಕ್ಕ ಉತ್ತರ ನೀಡಿದ್ದು, ಇಂತಹ ಗೊಡ್ಡು ಬೆದರಿಕೆಗಳಿಗೆ ಜಗತ್ತು ಆಸ್ಪದ ಕೊಡಬಾರದು ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೋ ಭಾರತದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಚೀನಾ ಗಡಿ ವಿವಾದಗಳನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದು ವಿಶ್ವ ಇದಕ್ಕೆ ಆಸ್ಪದ ಕೊಡಬಾರದು. ಅಲ್ಲದೆ ಚೀನಾದ ಆಕ್ರಮಣಕಾರಿ ಕ್ರಮಗಳಿಗೆ ಭಾರತ ತಕ್ಕ ಉತ್ತರ ನೀಡಿದೆ ಎಂದು ಶ್ಲಾಘಿಸಿದ್ದಾರೆ.

    ಚೀನಾದ ಆಕ್ರಮಣಕಾರಿ ಕ್ರಮಗಳ ಕುರಿತು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಬಳಿ ಹಲವು ಬಾರಿ ಚರ್ಚಿಸಿದ್ದೇನೆ. ಚೀನಿಯರು ನಂಬಲಾಗದಷ್ಟು ಆಕ್ರಮಣಕಾರಿ ಕ್ರಮಗಳನ್ನು ಕೈಗೊಂಡರು. ಭಾರತ ಅದಕ್ಕೆ ತಕ್ಕ ಉತ್ತರ ನೀಡಿದೆ. ಚೀನಾದ ಪ್ರಧಾನ ಕಾರ್ಯದರ್ಶಿ ಕ್ಸಿ ಜಿನ್‍ಪಿಂಗ್ ನಡೆ ಹಾಗೂ ಗಡಿ ಪ್ರದೇಶದಲ್ಲಿನ ಅವರ ವರ್ತನೆ ಪ್ರಪಂಚದಾದ್ಯಂತ ವಿಸ್ತರಿಸಿದೆ. ಚೀನೀಯ ಕಮ್ಯೂನಿಸ್ಟ್ ಪಾರ್ಟಿಯ ಆಕ್ರಮಣಶೀಲತೆಯನ್ನು ನಾವು ಪ್ರತ್ಯೇಕವಾಗಿ ನೋಡುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಇದನ್ನು ನೀವು ದೊಡ್ಡ ಸನ್ನಿವೇಶದಲ್ಲಿ ಚರ್ಚಿಸಬೇಕು ಎಂದು ಭಾರತಕ್ಕೆ ಸಲಹೆ ನೀಡಿದ್ದಾರೆ.

    ಜಗತ್ತು ಇಂತಹ ಬೆದರಿಕೆಗಳನ್ನು ಹೆದರಬಾರದು. ಅಲ್ಲದೆ ಇಂತಹ ಕೃತ್ಯವನ್ನು ಮುಂದುವರಿಸಲು ಬಿಡಬಾರದು. ಚೀನಾದ ಕಮ್ಯುನಿಸ್ಟ್ ಪಕ್ಷ ಈ ಕೃತ್ಯಗಳಿಗೆ ತಕ್ಕ ಪ್ರತಿಕ್ರಿಯೆ ನೀಡಲು ಜಗತ್ತು ಒಟ್ಟಾಗಬೇಕು. ಇದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ತಿಳಿಸಿದ್ದಾರೆ.

    ಲಡಾಕ್‍ನ ಗಲ್ವಾನ್ ವ್ಯಾಲಿಯಲ್ಲಿ ನಡೆದ ಭಾರತೀಯ ಸೇನೆ ಹಾಗೂ ಚೀನಾ ಮಧ್ಯೆ ನಡೆದ ಗುಂಡಿನ ಚಕಮಕಿ ವೇಳೆ ಭಾರತೀಯ ಸೇನೆಯ 20 ಯೋಧರು ಹುತಾತ್ಮರಾಗಿದ್ದಾರೆ. ಇದಾದ ಬಳಿಕ ಎರಡೂ ದೇಶಗಳು ತಮ್ಮ ಗಡಿ ಪ್ರದೇಶದಲ್ಲಿ ಅಪಾರ ಸಂಖ್ಯೆಯಲ್ಲಿ ಸೇನೆಯನ್ನು ಜಮಾವಣೆ ಮಾಡಿದ್ದವು. ಎಲ್‍ಎಸಿ ಸುತ್ತ ಅಪಾರ ಪ್ರಮಾಣದ ಸೇನೆಯನ್ನು ಜಮಾವಣೆ ಮಾಡಲಾಗಿತ್ತು. ಹೀಗಾಗಿ ಯುದ್ಧದ ಭೀತಿ ಎದುರಾಗಿತ್ತು.

    ಇದಾದ ಬಳಿಕ ಭಾನುವಾರವಷ್ಟೇ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ನಡುವೆ ಉನ್ನತ ಮಟ್ಟದ ಸುದೀರ್ಘ ಮಾತುಕತೆ ನಡೆದಿತ್ತು. ಅಲ್ಲದೆ ದೋವಲ್ ಹಾಗೂ ವಾಂಗ್ ಭಾರತ ಹಾಗೂ ಚೀನಾದ ವಿಶೇಷ ಪ್ರತಿನಿಧಿಗಳಾಗಿ ಸಭೆ ನಡೆಸಿದ್ದರು. ಇದಾದ ಬಳಿಕ ಇದೀಗ ಚೀನಾ ಸೇನೆ ಗಡಿಯಿಂದ ಹಿಂದೆ ಸರಿಯುತ್ತಿದೆ.

  • ಪಾಯಿಂಟ್ ನಂ 15ನಿಂದಲೂ ಕಾಲ್ಕಿತ್ತ ಚೀನಾ

    ಪಾಯಿಂಟ್ ನಂ 15ನಿಂದಲೂ ಕಾಲ್ಕಿತ್ತ ಚೀನಾ

    ನವದೆಹಲಿ: ಪೂರ್ವ ಲಡಾಕ್‍ನ ಗಾಲ್ವಾನ್ ನದಿ ಕಣಿವೆ ಗಡಿಯಲ್ಲಿ ಸೃಷ್ಟಿಯಾಗಿದ್ದ ಉದ್ವಿಗ್ನ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಗಡಿ ಪ್ರದೇಶದಲ್ಲಿರುವ ಪಾಯಿಂಟ್ 15 ರಿಂದ ಇಂದು ಚೀನಾ ಸೇನೆ ಎರಡು ಕಿ.ಮೀ ಹಿಂದೆ ಸರಿದಿದೆ ಎಂದು ಭಾರತೀಯ ಸೇನಾ ಮೂಲಗಳು ತಿಳಿಸಿವೆ.

    ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಜೊತೆಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವೇಲ್ ಮಾತುಕತೆ ಬಳಿಕ ಉಭಯ ಸೇನೆಗಳು ಜಾಗದಿಂದ ಹಿಂದಕ್ಕೆ ಸರಿಯಲು ಒಪ್ಪಿಗೆ ಸೂಚಿಸಿದ್ದವು. ಸೋಮವಾರ ಪಾಯಿಂಟ್ 14, ಬಿಸಿ ನೀರಿನ ಬುಗ್ಗೆ ಹಾಗೂ ಗೋರ್ಗಾ ಪ್ರದೇಶದಿಂದ ಚೀನಾ 1.5 ಕಿಮೀ ಹಿಂದೆ ಸರಿದಿತ್ತು. ಇಂದು ಪಾಯಿಂಟ್ ನಂ 15ರಿಂದಲೂ ಚೀನಾ ಖಾಲಿ ಮಾಡಿದೆ.

    ಚೀನಾ ಸೈನ್ಯದ ಚಲನವಲನಗಳ ಬಗ್ಗೆ ಭಾರತೀಯ ಸೇನೆ ಎಚ್ಚರಿಕೆ ವಹಿಸಿದೆ. ಚೀನಾ ಸೇನೆ ಪ್ರಮಾಣಿಕವಾಗಿ ಹಿಂದಕ್ಕೆ ಹೋಗುತ್ತಿದೆಯೇ ಎಂಬುದನ್ನು ಭಾರತ ಪರಿಶೀಲನೆ ನಡೆಸಲಾಗುತ್ತಿದೆ.

    ಈ ಮಧ್ಯೆ ಐಎಎಫ್ ತನ್ನ ಮುಂಚೂಣಿಯ ಯುದ್ಧ ವಿಮಾನ ಮತ್ತು ಹೆಲಿಕಾಪ್ಟರ್‌ಗಳನ್ನು ಹಗಲು ಮತ್ತು ರಾತ್ರಿ ಕಾರ್ಯಾಚರಣೆ ಮಾಡುವ ಮೂಲಕ ಚೀನಾದ ಮೇಲೆ ಒತ್ತಡ ಹೇರುತ್ತಲೇ ಇದೆ ಎಂದು ಮೂಲಗಳು ತಿಳಿಸಿವೆ.

  • ಭಾರತಕ್ಕೆ ಭಯೋತ್ಪಾದಕರ ಭೀತಿ- ಗಡಿಯಲ್ಲಿ ಭದ್ರತೆ ಹೆಚ್ಚಿಸಿದ ಸೇನೆ

    ಭಾರತಕ್ಕೆ ಭಯೋತ್ಪಾದಕರ ಭೀತಿ- ಗಡಿಯಲ್ಲಿ ಭದ್ರತೆ ಹೆಚ್ಚಿಸಿದ ಸೇನೆ

    ನವದೆಹಲಿ: ಭಾರತ-ಚೀನಾ ಗಡಿ ಸಂಘರ್ಷ ಬೆನ್ನಲೆ ದೇಶಕ್ಕೆ ಭಯೋತ್ಪಾದಕರ ಭೀತಿ ಆರಂಭವಾಗಿದೆ. ದೇಶದಲ್ಲಿ ದುಷ್ಕೃತ್ಯ ಎಸೆಗಲು ಸಂಚು ನಡೆದಿದ್ದು, ಇದಕ್ಕಾಗಿ ಉಗ್ರರರು ಗಡಿ ನುಸುಳಲು ಪ್ರಯತ್ನಿಸುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

    ಪಾಕ್ ಆಕ್ರಮಿತ ಗಡಿ ಅಥವಾ ಬಿಹಾರ ಮಾರ್ಗವಾಗಿ ಭಾರತ-ನೇಪಾಳ ಗಡಿ ಮೂಲಕ ಉಗ್ರರು ಭಾರತಕ್ಕೆ ನುಸುಳಬಹುದು ಎಂದು ಜೂನ್ 22 ರಂದು ಭದ್ರತಾ ಪಡೆಗಳಿಗೆ ಎಚ್ಚರಿಕೆ ನೀಡಲಾಗಿತ್ತು. ಇದೀಗ ಗಡಿಯಲ್ಲಿ ಭದ್ರತೆ ಹೆಚ್ಚು ಮಾಡಲಾಗಿದೆ.

    ಗುಪ್ತಚರ ಮೂಲಗಳ ಪ್ರಕಾರ, ಪಾಕಿಸ್ತಾನದ ಐಎಸ್‍ಐ ತಾಲಿಬಾನ್ ಮತ್ತು ಜೈಶ್ ಭಯೋತ್ಪಾದಕರ ಸಹಾಯದಿಂದ ಉಗ್ರರು ಭಾರತದಲ್ಲಿ ದೊಡ್ಡ ಭಯೋತ್ಪಾದಕ ದಾಳಿಗೆ ಸಂಚು ರೂಪಿಸಿದೆ. ಅವರ ಗುರಿ ದೆಹಲಿ ಮತ್ತು ಪ್ರಮುಖ ರಾಜಕೀಯ ವ್ಯಕ್ತಿಗಳು ಆಗಿರಬಹುದು ಎಂದು ಊಹಿಸಿದೆ.

    ಈ ಹಿನ್ನೆಲೆಯಲ್ಲಿ ಕಾಶ್ಮೀರ ಮತ್ತು ಭಾರತ ನೇಪಾಳ ಗಡಿಯಲ್ಲಿ ಹೆಚ್ಚು ಭದ್ರತೆಯನ್ನು ನಿಯೋಜನೆ ಮಾಡಿದ್ದು, ಹದ್ದಿನ ಕಣ್ಣಿಡಲಾಗಿದೆ. ಚೀನಾ-ಭಾರತ ನಡುವಿನ ಸಂಘರ್ಷ ಹೊತ್ತಲ್ಲಿ ಗುಪ್ತಚರ ಇಲಾಖೆ ಮಾಹಿತಿ ಆತಂಕ ಮೂಡಿಸಿದೆ.

  • ನೇಪಾಳದ 10 ಪ್ರದೇಶಗಳನ್ನು ಅತಿಕ್ರಮಿಸಿಕೊಂಡಿದೆ ಚೀನಾ- ನೇಪಾಳ ಸರ್ಕಾರದ ವರದಿ

    ನೇಪಾಳದ 10 ಪ್ರದೇಶಗಳನ್ನು ಅತಿಕ್ರಮಿಸಿಕೊಂಡಿದೆ ಚೀನಾ- ನೇಪಾಳ ಸರ್ಕಾರದ ವರದಿ

    – ನದಿಗಳ ಹರಿವು ಬದಲಿಸಿ, 33 ಹೆಕ್ಟೇರ್ ಅತಿಕ್ರಮಣ
    – ಈಗಾಗಲೇ ರಸ್ತೆ ನಿರ್ಮಿಸುತ್ತಿದೆ ಪಾಪಿ ಚೀನಾ

    ಕಠ್ಮಂಡು: ಚೀನಾ ತನ್ನ ನೆರೆಯ ಎಲ್ಲ ದೇಶಗಳ ಗಡಿಯನ್ನು ಅತಿಕ್ರಮಣ ಮಾಡಿಕೊಳ್ಳುತ್ತಿರುವುದು ತಿಳಿದ ವಿಚಾರ. ಇತ್ತೀಚೆಗೆ ಭಾರತದೊಂದಿಗೆ ತಂಟೆ ತೆಗೆದಿದೆ. ಇದೀಗ ಇನ್ನೊಂದು ಭಯಾನಕ ಅಂಶವನ್ನು ನೇಪಾಳ ಸರ್ಕಾರ ಬಹಿರಂಗಪಡಿಸಿದೆ. ನೇಪಾಳದ ಬರೋಬ್ಬರಿ 10 ಪ್ರದೇಶಗಳನ್ನು ಚೀನಾ ಈಗಾಗಲೇ ಆಕ್ರಮಿಸಿಕೊಂಡಿದೆ ಎಂದು ನೇಪಾಳ ಸರ್ಕಾರ ತನ್ನ ವರದಿಯಲ್ಲಿ ತಿಳಿಸಿದೆ.

    ಲಡಾಖ್‍ನ ಗಲ್ವಾನ್ ವ್ಯಾಲಿಯಲ್ಲಿ ಭಾರತದ-ಚೀನಾದ ಗಡಿ ತಂಟೆ ನಡೆದ ಕೆಲವೇ ದಿನಗಳ ನಂತರ ನೇಪಾಳ ಈ ಕುರಿತು ಸರ್ವೇ ವರದಿಯನ್ನು ಬಿಡುಗಡೆ ಮಾಡಿದ್ದು, ಈ ವೇಳೆ 10 ಪ್ರದೇಶಗಳನ್ನು ವಶಪಡಿಸಿಕೊಂಡಿರುವ ಕುರಿತು ಬಹಿರಂಗವಾಗಿದೆ. ನೇಪಾಳದ ಜಾಗವನ್ನು ಅತಿಕ್ರಮಣ ಮಾಡಿಕೊಳ್ಳಲೆಂದೇ ಟಿಬೆಟ್‍ನಲ್ಲಿ ಚೀನಾ ರಸ್ತೆ ನಿರ್ಮಾಣ ಮಾಡುತ್ತಿದ್ದು, ನಂತರ ಮುಂದಿನ ದಿನಗಳಲ್ಲಿ ತನ್ನ ಗಡಿಯಲ್ಲಿ ಚೆಕ್ ಪೋಸ್ಟ್ ನಿರ್ಮಿಸಲು ಉದ್ದೇಶಿಸಿದೆ.

    ನೇಪಾಳದ ಕೃಷಿ ಸಚಿವಾಲಯದ ಸರ್ವೇ ಇಲಾಖೆ ಒಟ್ಟು 11 ಸ್ಥಳಗಳನ್ನು ಪಟ್ಟಿ ಮಾಡಿದ್ದು, ಇದರಲ್ಲಿ 10 ಪ್ರದೇಶಗಳನ್ನು ಚೀನಾ ವಶಪಡಿಸಿಕೊಂಡಿದೆ. ಸುಮಾರು 33 ಹೆಕ್ಟೇರ್‍ನಷ್ಟು ಪ್ರದೇಶವನ್ನು ಚೀನಾ ಅತಿಕ್ರಮಣ ಮಾಡಿಕೊಂಡಿದೆ. ಇನ್ನೂ ಅಚ್ಚರಿಯ ಸಂಗತಿ ಎಂದರೆ ತನ್ನ ಪ್ರದೇಶವನ್ನು ಹೆಚ್ಚಳ ಮಾಡಿಕೊಳ್ಳಲು ನದಿಗಳ ಹರಿವಿನ ದಿಕ್ಕನ್ನೂ ಬದಲಿಸಿದೆಯಂತೆ.

    ಹುಮ್ಲಾ ಜಿಲ್ಲೆಯಲ್ಲಿ ಬಗ್ದಾರೆ ಖೊಲಾ ಹಾಗೂ ಕರ್ನಾಲಿ ನದಿಗಳನ್ನು ತಿರುಗಿಸಿ ಚೀನಾ ನಿರ್ಮಾಣ ಕಾರ್ಯ ನಡೆಸುತ್ತಿದ್ದು, ಒಟ್ಟು 10 ಹೆಕ್ಟೇರ್ ಪ್ರದೇಶವನ್ನು ಅತಿಕ್ರಮಿಸಿಕೊಂಡಿದೆ. ಅಲ್ಲದೆ ಟಿಬೆಟ್‍ನಲ್ಲಿ ನಡೆಯುತ್ತಿದ್ದ ನಿರ್ಮಾಣ ಕಾರ್ಯವನ್ನು ರಸುವಾ ಜಿಲ್ಲೆಯ ಸಿಂಜೆನ್, ಭುರ್ಜುಕ್ ಜಾಗೂ ಜಂಬು ಖೊಲಾ ಪ್ರದೇಶಗಳ ಮಾಡಿದ್ದು, ಇದರಿಂದಾಗಿ ಆರು ಹೆಕ್ಟೇರ್ ಪ್ರದೇಶವನ್ನು ಚೀನಾ ವಶಪಡಿಸಿಕೊಂಡಿದೆ.

    ಚೀನಾ ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿ ತನ್ನ ರಸ್ತೆ ಸಂಪರ್ಕವನ್ನು ಭಾರೀ ಪ್ರಮಾಣದಲ್ಲಿ ವಿಸ್ತರಿಸುತ್ತಿದ್ದು, ಈ ಮೂಲಕ ನೇಪಾಳದ ಕಡೆ ಹರಿಯುತ್ತಿದ್ದ ಕೆಲ ನದಿಗಳ ದಿಕ್ಕನ್ನು ಬದಲಿಸುತ್ತಿದೆ. ನದಿಗಳು ಕ್ರಮೇಣವಾಗಿ ನೇಪಾಳಿ ಪ್ರದೇಶವನ್ನು ಆಕ್ರಮಿಸಿಕೊಳ್ಳುತ್ತಿದ್ದು, ಹೀಗೆ ಮುಂದುವರಿದರೆ ನದಿಗಳು ನೇಪಾಳದ ಭೂಮಿಯ ಗರಿಷ್ಟ ಭಾಗ ಚೀನಾದ ಟೆಬೆಟ್ ವಶವಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ನದಿಗಳ ಹರಿವನ್ನು ಹೀಗೆ ಬದಲಿಸಿದರೆ ನೇಪಾಳದ ನೂರಾರು ಹೆಕ್ಟೇರ್ ಭೂಮಿ ಸ್ವಾಭಾವಿಕವಾಗಿ ಟೆಬೆಟ್‍ಗೆ ಒಳಪಡುತ್ತದೆ. ಕಾಲಾನಂತರದಲ್ಲಿ ಚೀನಾ ತನ್ನ ಸಶಸ್ತ್ರ ಪೊಲೀಸ್ ಪಡೆಗಳ ಮೂಲಕ ಬಾರ್ಡರ್ ಅಬ್ಸರ್ವೇಶನ್ ಪೋಸ್ಟ್ ನಿರ್ಮಿಸುವ ಸಾಧ್ಯತೆ ಹೆಚ್ಚಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

    ಲಡಾಖ್‍ನ ಕಲ್ವಾನ್ ವ್ಯಾಲಿಯಲ್ಲಿ ನಡೆದ ಭಾರತ-ಚೀನಾ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ನೇಪಾಳ ಈ ವರದಿಯನ್ನು ಬಿಡುಗಡೆ ಮಾಡಿರುವುದು ಅಚ್ಚರಿ ಮೂಡಿಸಿದೆ. ಚೀನಾದ ಪುಂಡಾಟಿಕೆ ಇಲ್ಲಿಗೇ ನಿಲ್ಲುವುದಲ್ಲ ವಿಯಟ್ನಾಂ, ಮಲೇಶಿಯಾ, ತೈವಾನ್ ದೇಶಗಳ ಗಡಿ ವಿಚಾರದಲ್ಲಿ ಸಹ ವಿವಾದ ಹೊಂದಿದೆ.

  • ನೇಪಾಳದ ಗಡಿಯನ್ನು ವಶಪಡಿಸಿಕೊಂಡಿದೆ ಚೀನಾ- ಬುದ್ಧಿ ಕಲಿಯದ ನೇಪಾಳ

    ನೇಪಾಳದ ಗಡಿಯನ್ನು ವಶಪಡಿಸಿಕೊಂಡಿದೆ ಚೀನಾ- ಬುದ್ಧಿ ಕಲಿಯದ ನೇಪಾಳ

    – ಭಾರತದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ನೇಪಾಳ

    ನವದೆಹಲಿ: ಚೀನಾ ಕೇವಲ ಭಾರತ ಮಾತ್ರವಲ್ಲ ಇತರೆ ನೆರೆ ದೇಶಗಳ ಗಡಿಗಳನ್ನು ಅತಿಕ್ರಮಿಸಿಕೊಳ್ಳುತ್ತಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ನೇಪಾಳದ ಗೂರ್ಖಾದ ಪ್ರದೇಶವನ್ನು ಚೀನಾ ಅತಿಕ್ರಮಿಸಿಕೊಂಡಿರುವ ಕುರಿತು ವರದಿಯಾಗಿದೆ. ಆದರೆ ಇದೆಲ್ಲವನ್ನು ಬಿಟ್ಟು ನೇಪಾಳ ಭಾರತದ ಗಡಿ ಕುರಿತು ಇದೀಗ ಹೆಚ್ಚು ಚರ್ಚೆ ನಡೆಸುತ್ತಿದೆ. ಅಲ್ಲದೆ ನೇಪಾಳದ ಜನರಲ್ಲಿ ಭಾರತ ವಿರೋಧಿ ಅಲೆಯನ್ನು ಎಬ್ಬಿಸುತ್ತಿದೆ.

    ಮ್ಯಾಪ್‍ನಲ್ಲಿ ರುಯಿ ಗೌನ್ ಪ್ರದೇಶ ನೇಪಾಳಕ್ಕೆ ಒಳಪಟ್ಟಿದೆ. ಆದರೆ ಗೂರ್ಖಾದ ರುಯಿ ಭೋಟ್ ಅಧೀನದಲ್ಲಿದ್ದ ರುಯಿ ಗೌನ್ ಪ್ರದೇಶವನ್ನು ಚೀನಾ ಸ್ವಾಯತ್ತ ಪ್ರದೇಶಕ್ಕೆ ಒಳಪಡಿಸಿದೆ. 60ಕ್ಕೂ ಹೆಚ್ಚು ವರ್ಷಗಳಿಂದ ಇದನ್ನು ಟಿಬೆಟ್ ಅಧೀನಕ್ಕೆ ಒಳಪಡಿಸಲಾಗಿದೆ. ಸರ್ಕಾರಗಳ ದಿವ್ಯ ನಿರ್ಲಕ್ಷ್ಯ ಹಾಗೂ ಸರ್ಕಾರದ ಉನ್ನತ ಅಧಿಕಾರಿಗಳ ಅಸಡ್ಡೆಯಿಂದಾಗಿ 72 ಮನೆಗಳಿರುವ ಹಳ್ಳಿಗೆ ಚೀನಾ ಒಳ ನುಸುಳಲು ಅವಕಾಶ ಮಾಡಿಕೊಡಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

    ಈ ಪ್ರದೇಶವೀಗ ಸಂಪೂರ್ಣವಾಗಿ ಚೀನಾ ಹಿಡಿತದಲ್ಲಿದ್ದು, ಗಡಿ ಕಂಬಗಳನ್ನು ಸಹ ಸ್ಥಳಾಂತರಿಸುವ ಮೂಲಕ ಚೀನಾ ಒತ್ತುವರಿ ಮಾಡಿಕೊಂಡಿದೆ. ಆದರೆ ಗೂರ್ಖಾ ಭೂ ಕಂದಾಯ ಅಧಿಕಾರಿಗಳ ಮಾಹಿತಿ ಪ್ರಕಾರ, ರುಯಿ ಗ್ರಾಮದ ನಿವಾಸಿಗಳಿಂದ ಕಂದಾಯ ಸಂಗ್ರಹಿಸಿದ ಕುರಿತು ಈಗಲೂ ದಾಖಲೆಗಳಿವೆ ಎಂದು ತಿಳಿಸಿದ್ದಾರೆ.

    ಇತಿಹಾಸ ತಜ್ಞ ರಮೇಶ್ ಧುಂಗಲ್ ಸಹ ಈ ಕುರಿತು ಸ್ಪಷ್ಟಪಡಿಸಿದ್ದು, ರುಯಿ ಹಾಗೂ ಟೈಘಾ ಗ್ರಾಮಗಳು ಗೂರ್ಖಾ ಜಿಲ್ಲೆಯ ಉತ್ತರ ಭಾಗಗಳು. ರುಯಿ ಗೌನ್ ಸಹ ನೇಪಾಳದ ಭಾಗ ಎಂದು ಹೇಳಿದ್ದಾರೆ. ಅಲ್ಲದೆ ಚೀನಾ ಗಡಿ ಕಂಬಗಳನ್ನು ನೆಡುವಾಗ ನೇಪಾಳ ಸರ್ಕಾರ ದಿವ್ಯ ನಿರ್ಲಕ್ಷ್ಯ ವಹಿಸಿದೆ. ಹೀಗಾಗಿ ನೇಪಾಳ ರುಯಿ ಹಾಗೂ ಟೆಘಾ ಗ್ರಾಮಗಳನ್ನು ಕಳೆದುಕೊಂಡಿದೆ. ಇದೀಗ ಇವು ಟಿಬೆಟ್‍ಗೆ ಒಳಪಟ್ಟಿವೆ ಎಂದು ವಿವರಿಸಿದ್ದಾರೆ.

    ಕೆಲ ಭ್ರಷ್ಠ ನೇಪಾಳಿ ಅಧಿಕಾರಿಗಳ ಕೃತ್ಯದಿಂದಾಗಿ ಚೀನಾ 35ನೇ ನಂಬರ್ ಪಿಲ್ಲರ್‍ನ್ನು ಸ್ಯಾಂಬೋ ಹಾಗೂ ರುಯಿ ಗೌನ್ ಪ್ರದೇಶದಲ್ಲಿ ನೆಟ್ಟಿದೆ. ಇದರಿಂದಾಗಿ ಈ ಪ್ರದೇಶಗಳು ಚೀನಾ ನಿಯಂತ್ರಣದಲ್ಲಿವೆ. ಅಲ್ಲದೆ ಗೌನ್, ಸ್ಯಾಂಬ್ಡೊ, ರುಯಿ ಪ್ರದೇಶಗಳ ಭಾಷೆ, ಸಂಸ್ಕøತಿ, ಸಂಪ್ರದಾಯ ಹಾಗೂ ಆಚರಣೆಗಳು ಒಂದೇಯಾಗಿವೆ. ಪ್ರಾರ್ಥನಾ ಮಂದಿರಗಳು ಸಹ ಒಂದೇ ರೀತಿ ಇವೆ ಎಂದು ಚುಮನುಬ್ರಿ ಗ್ರಾಮೀಣ ಮುನ್ಸಿಪಾಲಿಟಿ ವಾರ್ಡ್ ನಂ.1ರ ಅಧ್ಯಕ್ಷ ಬಿರ್ ಬಹದ್ದೂರ್ ಲಾಮಾ ತಿಳಿಸಿದ್ದಾರೆ.

    ಟಿಬೆಟ್ ಜೊತೆಗೆ ಸೇರಿಕೊಳ್ಳಲು ಇಷ್ಟವಾಗದವರು ಸ್ಯಾಂಬ್ಡೊಗೆ ವಲಸೆ ಹೋದರು. ಅವರೆಲ್ಲರೂ ನಮ್ಮೊಂದಿಗೆ ಸಾವಿರಾರು ವರ್ಷಗಳ ಐತಿಹಾಸಿಕ ಹಾಗೂ ಸಾಂಸ್ಕøತಿಕ ದಾಖಲೆಗಳನ್ನು ಹೊಂದಿದ್ದಾರೆ ಎಂದು ಬಿರ್ ಬಹದ್ದೂರ್ ಲಾಮಾ ವಿವರಿಸಿದ್ದಾರೆ.

    ಚೀನಾದೊಂದಿಗೆ ಇಷ್ಟೆಲ್ಲ ಗಡಿ ವಿವಾದಗಳಿದ್ದರೂ ಹೊಸ ಭೂಪಟದ ಸಂಬಂಧ ನೇಪಾಳ ವಿವಾದ ಹೆಚ್ಚಿಸುತ್ತಿದೆ. ಅಲ್ಲದೆ ಸರ್ಕಾರ ನೇಪಾಳದ ಜನರಲ್ಲಿ ಭಾರತದ ವಿರುದ್ಧ ದ್ವೇಷವನ್ನು ಹೆಚ್ಚಿಸಲು ರೇಡಿಯೋಗಳಲ್ಲಿ ಭಾರತ ವಿರೋಧಿ ಹಾಡುಗಳನ್ನು ಪ್ರಸಾರ ಮಾಡುತ್ತಿದೆ ಎಂದು ವರದಿಯಾಗಿತ್ತು. ಗಡಿ ಪ್ರದೇಶದಲ್ಲಿರುವ ಭಾರತದ ಉತ್ತರಾಖಂಡ ರಾಜ್ಯದ ಹಳ್ಳಿಗಳಲ್ಲಿ ನೇಪಾಳ ರೇಡಿಯೋ ಸಿಗ್ನಲ್ ಲಭ್ಯವಾಗುತ್ತವೆ. ಈ ವೇಳೆ ಭಾರತ ವಿರೋಧಿ ಹಾಡುಗಳು ಪ್ರಸಾರವಾಗುತ್ತಿರುವುದು ಖಚಿತವಾಗಿತ್ತು. ಈ ಮೂಲಕ ಭಾರತದ ವಿರುದ್ಧ ವ್ಯವಸ್ಥಿತವಾಗಿ ಜನರಿಗೆ ಅಪಪ್ರಚಾರ ನಡೆಸುವತ್ತ ನೇಪಾಳ ಸರ್ಕಾರ ಮುಂದಾಗಿದೆ.

  • ರಾಯಚೂರಿನ ಅಂತರರಾಜ್ಯ ಚೆಕ್‌ಪೋಸ್ಟ್‌ನಲ್ಲಿ ವಸೂಲಿ ದಂಧೆ- ಹಣ ಕೊಟ್ರೆ ಎಲ್ಲರಿಗೂ ಎಂಟ್ರಿ

    ರಾಯಚೂರಿನ ಅಂತರರಾಜ್ಯ ಚೆಕ್‌ಪೋಸ್ಟ್‌ನಲ್ಲಿ ವಸೂಲಿ ದಂಧೆ- ಹಣ ಕೊಟ್ರೆ ಎಲ್ಲರಿಗೂ ಎಂಟ್ರಿ

    ರಾಯಚೂರು: ಜಿಲ್ಲೆಯಲ್ಲಿ 50, 100 ರೂಪಾಯಿ ಆಸೆಗೆ ಅಂತರರಾಜ್ಯ ಚೆಕ್‌ಪೋಸ್ಟ್‌ನಲ್ಲಿನ ಸಿಬ್ಬಂದಿ ಕೊರೊನಾ ವೈರಸ್ ಹರಡಿಸುತ್ತಿದ್ದಾರಾ ಎನ್ನುವ ಆತಂಕ ಮೂಡಿದೆ.

    ಆಂಧ್ರ ಪ್ರದೇಶದಿಂದ ಬರುವವರು ಚೆಕ್‌ಪೋಸ್ಟ್‌ನಲ್ಲಿನ ಪೊಲೀಸರಿಗೆ 100 ರೂ. ಕೊಟ್ಟರೆ ಸಾಕು ಹೋಂ ಕ್ವಾರಂಟೈನ್ ಭೀತಿಯೇ ಇಲ್ಲ. ಕೊರೊನಾ ಹರಡುವಿಕೆ ತಡೆಗಾಗಿ ಮಾಡಿರುವ ಚೆಕ್‍ಪೋಸ್ಟ್ ಸಿಬ್ಬಂದಿಯೇ ರಾಯಚೂರಿನಲ್ಲಿ ಕೊರೊನಾ ಹರಡುವುದಕ್ಕೆ ಕಾರಣರಾಗುತ್ತಿದ್ದಾರೆ. ಜಿಲ್ಲೆಯ ಗಿಲ್ಲೆಸುಗೂರು ಚೆಕ್‍ಪೋಸ್ಟ್‍ನಲ್ಲಿ ಪೋಲೀಸರು, ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಸಿಬ್ಬಂದಿ ಕೃತ್ಯ ಈಗ ಬಟಾಬಯಲಾಗಿದೆ.

    ಆಂಧ್ರದ ಗಡಿಭಾಗದಲ್ಲಿನ ಗಿಲ್ಲೆಸುಗೂರು ಚೆಕ್‌ಪೋಸ್ಟ್‌ನಲ್ಲಿ ಹಣ ಕೊಟ್ಟರೆ ಸಾಕು ಆರಾಮಾಗಿ ಆಂಧ್ರಪ್ರದೇಶಕ್ಕೂ ಹೋಗಬಹುದು, ಆಂಧ್ರದಿಂದ ರಾಜ್ಯಕ್ಕೂ ಬರಬಹುದು ಅನ್ನೋ ಸ್ಥಿತಿ ನಿರ್ಮಾಣವಾಗಿದೆ. ಅಷ್ಟೇ ಅಲ್ಲದೆ ಚೆಕ್‌ಪೋಸ್ಟ್‌ನಲ್ಲಿ ಯಾವುದೇ ವಾಹನಗಳ ತಪಾಸಣೆಯಾಗಲಿ, ಆರೋಗ್ಯ ತಪಾಸಣೆಯಾಗಲಿ ನಡೆಯುತ್ತಲೇ ಇಲ್ಲ. ಈಗ ಮಂತ್ರಾಲಯಕ್ಕೆ ಬಸ್ ಓಡಾಟ ಆರಂಭವಾಗಿದ್ದರೂ ಹೋಂ ಕ್ವಾರಂಟೈನ್ ಜಾರಿಯಲ್ಲಿದೆ. ಸೇವಾಸಿಂಧುವಿನಲ್ಲಿ ಅರ್ಜಿ ಹಾಕಿದವರಿಗೆ ಮಾತ್ರ ಸಾರಿಗೆ ಬಸ್‍ನಲ್ಲಿ ಅವಕಾಶ ಮಾಡಿಕೊಡಲಾಗಿದೆ. ಆದರೆ ಚೆಕ್‌ಪೋಸ್ಟ್‌ನಲ್ಲಿ ಎಲ್ಲಾ ನಿಯಮಗಳನ್ನ ಗಾಳಿಗೆ ತೂರಿರುವ ಪೊಲೀಸ್ ಸಿಬ್ಬಂದಿ ಹಣ ತೆಗೆದುಕೊಂಡು ಜನರನ್ನ ಒಳ ಬಿಡುತ್ತಿದ್ದಾರೆ. ಅಂತರರಾಜ್ಯ ಗಡಿಯಲ್ಲಿ ಬೈಕ್, ಕಾರ್, ಟಂಟಂಗಳು ಯಾವುದೇ ಆತಂಕವಿಲ್ಲದೆ ಓಡಾಡುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ.

    ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 414ಕ್ಕೆ ಏರಿದ್ದು, ದಿನೇ ದಿನೇ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಹೀಗಾಗಿ ಜಿಲ್ಲಾಡಳಿತ ಖಾಸಗಿ ವೈದ್ಯರ ಮೊರೆ ಹೋಗಿದ್ದು ನಗರದ ನವೋದಯ ವೈದ್ಯಕೀಯ ಬೋಧಕ ಕಾಲೇಜಿನ ವೈದ್ಯರು ಹಾಗೂ ವಿದ್ಯಾರ್ಥಿಗಳನ್ನ ವೈದ್ಯಕೀಯ ಸೇವೆಗೆ ಬಳಸಿಕೊಳ್ಳಲು ಮುಂದಾಗಿದೆ. ಇಂತಹ ಸಂದರ್ಭದಲ್ಲಿ ಚೆಕ್ ಪೋಸ್ಟ್ ಗಳಲ್ಲಿನ ಸಿಬ್ಬಂದಿ ಹಣ ವಸೂಲಿ ಮಾಡಿ ಆಂಧ್ರಪ್ರದೇಶದಿಂದ ಬರುವವರನ್ನ ರಾಜ್ಯಕ್ಕೆ ಬಿಡುತ್ತಿರುವುದು ಜಿಲ್ಲೆಯಲ್ಲಿ ಆತಂಕವನ್ನ ಹೆಚ್ಚಿಸಿದೆ ಎಂದು ಸ್ಥಳೀಯರು ದೂರಿದ್ದಾರೆ.

  • ಗಾಲ್ವಾನ್ ಕಣಿವೆಯ ಸಾರ್ವಭೌಮತ್ವ ಯಾವಗಲೂ ನಮಗೆ ಸೇರಿದ್ದು- ಮತ್ತೆ ಕೆಣಕಿದ ಚೀನಾ

    ಗಾಲ್ವಾನ್ ಕಣಿವೆಯ ಸಾರ್ವಭೌಮತ್ವ ಯಾವಗಲೂ ನಮಗೆ ಸೇರಿದ್ದು- ಮತ್ತೆ ಕೆಣಕಿದ ಚೀನಾ

    – ಭಾರತದ ಕಡೆಯಿಂದಲೇ ತಪ್ಪು ನಡೆದಿದೆ
    – ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸೋಣ

    ನವದೆಹಲಿ: ಚೀನಾ ಪದೇ ಪದೇ ಭಾರತವನ್ನು ಕೆರಳಿಸುವ ಕೆಲಸವನ್ನು ಮಾಡುತ್ತಿದೆ. ಈಗ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗಾಲ್ವಾನ್ ನದಿ ಕಣಿವೆಯ ಸಾರ್ವಭೌಮತ್ವ ಯಾವಗಲೂ ಚೀನಾಗೆ ಸೇರಿದ್ದು, ಎಂದು ಹೇಳಿದ್ದಾರೆ.

    ಗಾಲ್ವಾನ್ ಕಣುವೆಯಲ್ಲಿ ಖ್ಯಾತೆ ತೆಗೆಯುತ್ತಿರುವ ಚೀನಾ, ತನ್ನ ಹೇಳಿಕೆಗಳ ಮೂಲಕ ಭಾರತವನ್ನು ಕೆರಳಿಸುವ ಕೆಲಸ ಮಾಡುತ್ತಿದೆ. ಈಗ ಈ ವಿಚಾರವಾಗಿ ಮಾತನಾಡಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಜೀವೋ ಲಿಜಿಯಾನ್, ನಾವು ಭಾರತದ ಜೊತೆಗೆ ಹೆಚ್ಚಿನ ಸಂಘರ್ಷ ಬಯಸುವುದಿಲ್ಲ. ಆದರೆ ಗಾಲ್ವಾನ್ ಕಣಿವೆಯ ಸಾರ್ವಭೌಮತ್ವ ಯಾವಗಲೂ ಚೀನಾಗೆ ಸೇರಿದ್ದು ಎಂದು ಹೇಳಿದ್ದಾರೆ.

    ಭಾರತವು ಗಡಿಯಲ್ಲಿರುವ ತಮ್ಮ ಮುಂಚೂಣಿ ಸೈನಿಕರಿಗೆ ಶಿಸ್ತುಬದ್ಧವಾಗಿ ಇರಲು ತಿಳಿಸಬೇಕು ಮತ್ತು ಗಡಿಭಾಗದಲ್ಲಿ ಪ್ರಚೋದನೆ ಮಾಡುವುದು ಹಾಗೂ ನಿಯಮವನ್ನು ಉಲ್ಲಂಘನೆ ಮಾಡುವುದನ್ನು ಸೈನಿಕರು ನಿಲ್ಲಸಬೇಕು. ಮೊದಲಿನಂತೆ ಚೀನಾದ ಜೊತೆ ಕೆಲಸ ಮಾಡಿಕೊಂಡು ಮಾತುಕತೆಯ ಮೂಲಕ ಭಾರತ ಸಮಸ್ಯೆಯನ್ನು ಬಗಹರಿಸಿಕೊಳ್ಳಬೇಕು ಎಂದು ಚೀನಾ ಭಾರತಕ್ಕೆ ಉಪದೇಶ ಮಾಡಿದೆ.

    ನಾವು ರಾಜತಾಂತ್ರಿಕ ಮತ್ತು ಮಿಲಿಟರಿ ಮಾರ್ಗಗಳ ಮೂಲಕ ಭಾರತದ ಜೊತೆಗೆ ನಾವು ಸಂವಹನ ನಡೆಸುತ್ತಿದ್ದೇವೆ. ಇದರ ಸರಿ ಮತ್ತು ತಪ್ಪು ಬಹಳ ಸ್ಪಷ್ಟವಾಗಿದೆ. ಈ ಘಟನೆ ಚೀನಾದ ಎಲ್‍ಎಸಿಯ ಕಡೆಯಿಂದ ನಡೆದಿದ್ದು, ಇದಕ್ಕೆ ಚೀನಾ ಕಾರಣವಲ್ಲ. ಚೀನಾ ಇನ್ನೂ ಮುಂದೆ ಸಂಘರ್ಷವನ್ನು ಬಯಸುವುದಿಲ್ಲ. ಗಡಿ-ಸಂಬಂಧಿತ ವಿಚಾರದಲ್ಲಿ ನಮ್ಮ ಗಡಿ ನಿಯಮಾವಳಿಗಳನ್ನು ಮತ್ತು ನಮ್ಮ ಕಮಾಂಡರ್ ಮಟ್ಟದ ಮಾತುಕತೆಯ ಒಮ್ಮತವನ್ನು ಭಾರತೀಯ ಸೈನಿಕರು ಗಂಭೀರವಾಗಿ ಉಲ್ಲಂಘಿಸಿದ್ದಾರೆ ಎಂದು ಜೀವೋ ವಿತ್ತಂಡ ವಾದವನ್ನು ಮುಂದಿಟ್ಟಿದ್ದಾರೆ.

    ಗಾಲ್ವಾನ್ ಕಣಿವೆಯಲ್ಲಿ ಚೀನಾದೊಂದಿಗೆ ನಡೆದ ಸಂಘರ್ಷದಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಅಲ್ಲದೆ 17 ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ದಾಳಿಗೆ ಪ್ರತ್ಯುತ್ತರ ನೀಡಿರುವ ಭಾರತೀಯ ಸೇನೆಯು ಚೀನಾದ 40ಕ್ಕೂ ಹೆಚ್ಚು ಮಂದಿ ಯೋಧರನ್ನು ಸೆದೆಬಡಿದಿದೆ. ಇದರಲ್ಲಿ 100ಕ್ಕೂ ಹೆಚ್ಚು ಚೀನಾ ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ತನ್ನ ಯೋಧರ ಮೃತದೇಹವನ್ನು ಹೊತ್ತೊಯ್ಯಲು ಚೀನಾ ಹೆಲಿಕಾಪ್ಟರ್ ಗಳು ಎಲ್‍ಎಸಿ ಬಳಿ ಹಾರಾಟ ನಡೆಸಿವೆ ಎಂದು ವರದಿಯಾಗಿದೆ.

  • ಗಡಿ ವಿಚಾರದಲ್ಲಿ ರಾಜಿ ಮಾತೇ ಇಲ್ಲ- ಜೆಪಿ ನಡ್ಡಾ

    ಗಡಿ ವಿಚಾರದಲ್ಲಿ ರಾಜಿ ಮಾತೇ ಇಲ್ಲ- ಜೆಪಿ ನಡ್ಡಾ

    ನವದೆಹಲಿ: ಗಡಿ ವಿಚಾರದಲ್ಲಿ ಯಾವುದೇ ರೀತಿಯ ರಾಜಿ ಮಾತೇ ಇಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಚೀನಾ ಕುತಂತ್ರದ ವಿರುದ್ಧ ಗುಡುಗಿದ್ದಾರೆ.

    ಟ್ವೀಟ್ ಮಾಡಿರುವ ಜೆ.ಪಿ.ನಡ್ಡಾ ಅವರು, ಚೀನಾ ಕುತಂತ್ರದಿಂದ ನಮ್ಮ ಕೆಚ್ಚೆದೆಯ ಸೈನಿಕರನ್ನು ಕಳೆದುಕೊಂಡಿದ್ದೇವೆ. ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತದ ಪ್ರಾದೇಶಿಕ ಸಮಗ್ರತೆಗೆ ಧಕ್ಕೆಯಾಗುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡಬಲ್ಲೆ. ನಮ್ಮ ಸೈನ್ಯವು ಎಲ್ಲದಕ್ಕೂ ಸಂಪೂರ್ಣವಾಗಿ ಸಜ್ಜುಗೊಂಡಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನನಗೆ ಒಬ್ಬನೇ ಮಗ- ಕಣ್ಣೀರಿಟ್ಟ ಕರ್ನಲ್ ಸಂತೋಷ್ ಬಾಬು ತಾಯಿ

    ಪೂರ್ವ ಲಡಾಕ್‍ನ ಗಾಲ್ವಾನ್ ಕಣಿವೆಯಲ್ಲಿ ಚೀನಾದೊಂದಿಗೆ ನಡೆದ ಸಂಘರ್ಷದಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಅಷ್ಟೇ ಅಲ್ಲದೆ 17 ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಭಾರತೀಯ ಸೇನೆಯು ಖಚಿತಪಡಿಸಿದೆ.

    ದಾಳಿಗೆ ಪ್ರತ್ಯುತ್ತರ ನೀಡಿರುವ ಭಾರತೀಯ ಸೇನೆಯು ಚೀನಾದ 43 ಮಂದಿ ಯೋಧರನ್ನು ಸೆದೆಬಡಿದಿದೆ. ಅಷ್ಟೇ ಅಲ್ಲದೆ 100ಕ್ಕೂ ಹೆಚ್ಚು ಚೀನಾ ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ತನ್ನ ಯೋಧರ ಮೃತದೇಹವನ್ನು ಹೊತ್ತೊಯ್ಯಲು ಚೀನಾ ಹೆಲಿಕಾಪ್ಟರ್ ಗಳು ಎಲ್‍ಎಸಿ ಬಳಿ ಹಾರಾಟ ನಡೆಸಿವೆ ಎಂದು ವರದಿಯಾಗಿದೆ.

  • ನನಗೆ ಒಬ್ಬನೇ ಮಗ- ಕಣ್ಣೀರಿಟ್ಟ ಕರ್ನಲ್ ಸಂತೋಷ್ ಬಾಬು ತಾಯಿ

    ನನಗೆ ಒಬ್ಬನೇ ಮಗ- ಕಣ್ಣೀರಿಟ್ಟ ಕರ್ನಲ್ ಸಂತೋಷ್ ಬಾಬು ತಾಯಿ

    ಹೈದರಾಬಾದ್: ನನಗೆ ಒಬ್ಬನೇ ಮಗ ಎಂದು ಹುತಾತ್ಮ ಯೋಧ ಕರ್ನಲ್ ಸಂತೋಷ್ ಬಾಬು ಅವರ ತಾಯಿ ಕಣ್ಣೀರಿಟ್ಟಿದ್ದಾರೆ.

    ಭಾರತ-ಚೀನಾ ಮಧ್ಯೆ ಯುದ್ಧದ ಕಾರ್ಮೋಡ ಆವರಿಸುತ್ತಿದೆ. ಪದೇ ಪದೇ ಕಿರಿಕ್ ಮಾಡುವ ಚೀನಾ, ಯುದ್ಧೋನ್ಮಾದದಲ್ಲೇ ತೇಲಾಡುತ್ತಿದೆ. ಸೋಮವಾರ ರಾತ್ರಿ ನಡೆದ ದಾಳಿಯಲ್ಲಿ ಭಾರತೀಯ ಸೇನೆ ಕರ್ನಲ್ ಮತ್ತು ಇಬ್ಬರು ಸೈನಿಕರು ಹುತಾತ್ಮರಾಗಿದ್ದರು. ಇಂದು ರಾತ್ರಿ ಬಂದ ಮಾಹಿತಿ ಪ್ರಕಾರ ಒಟ್ಟು 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ.  ಇದನ್ನೂ ಓದಿ: ಚೀನಾದ 43 ಸೈನಿಕರು ಮಟಾಶ್- ಭಾರತದ 20 ಮಂದಿ ಯೋಧರು ಹುತಾತ್ಮ

    ಮಾಧ್ಯಮಗಳ ಜೊತೆಗೆ ಮಾತನಾಡಿದ ಕರ್ನಲ್ ಸಂತೋಷ್ ಬಾಬು ಅವರ ತಾಯಿ ಮಂಜುಳಾ ಅವರು, ನನ್ನ ಸೊಸೆ ಹಾಗೂ ಮೊಮ್ಮಕ್ಕಳು ದೆಹಲಿಯಲ್ಲೇ ಇರುತ್ತಾರೆ. ಮಗನ ಸಾವಿನ ಸುದ್ದಿ ಕೇಳಿ ಒಂದು ಕಡೆ ದುಃಖವಾಗ್ತಿದೆ. ಮತ್ತೊಂದು ಕಡೆ ಸಂತೋಷವಾಗ್ತಿದೆ. ದೇಶಕ್ಕಾಗಿ ಮಗ ಪ್ರಾಣ ಕೊಟ್ಟ ಅನ್ನೋದು ಒಂದೆಡೆಯಾದರೆ, ಮಗನ ಅಗಲಿಕೆ ನೋವಿನ ಸಂಗತಿಯಾಗಿದೆ. ನನಗೆ ಒಬ್ಬನೇ ಮಗ ಎಂದು ಕಣ್ಣೀರಾದರು.

    ಮಗನ ಸಾವಿನ ಸುದ್ದಿ ಸೊಸೆಗೆ ಸೋಮವಾರ ರಾತ್ರಿಯೇ ತಿಳಿದಿತ್ತು. ಆದರೆ ನಾನು ಆಘಾತಕ್ಕೆ ಒಳಗಾಗುತ್ತೇನೆ ಎಂದು ಹೇಳಿರಲಿಲ್ಲ. ಈಗ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ ಎಂದು ಭಾವುಕರಾದರು.

    ಹುತಾತ್ಮ ಕರ್ನಲ್ ಸಂತೋಷ್ ಬಾಬು ತೆಲಂಗಾಣದ ಸೂರ್ಯಪೇಟೆ ನಿವಾಸಿ. ಸಂತೋಷ್ ಅವರಿಗೆ 9 ವರ್ಷದ ಮಗಳು ಅಭಿಜ್ಞಾ ಮತ್ತು ಮಗ ನಾಲ್ಕು ವರ್ಷದ ಅನಿಲ್ ತೇಜ್ ಇದ್ದಾರೆ. ಸಂತೋಷ್ ಪ್ರಾಥಮಿಕ ಶಿಕ್ಷಣವನ್ನು ಸೂರ್ಯಪೇಟ್‍ನಲ್ಲಿ ಮುಗಿಸಿ ಪುಣೆಯಲ್ಲಿ ಡಿಗ್ರಿ ಮಾಡಿದ್ದರು. ಬಳಿಕ ಭಾರತೀಯ ಸೇನೆಗೆ ಆಯ್ಕೆಯಾಗಿದ್ದರು.

    ಜಮ್ಮು ಮತ್ತು ಕಾಶ್ಮೀರದಲ್ಲಿ ಸಂತೋಷ್ ಅವರು ಮೊದಲು ತಮ್ಮ ದೇಶಸೇವೆ ಆರಂಭಿಸಿದ್ದರು. ಇತ್ತೀಚೆಗೆ ಹೈದರಾಬಾದ್‍ಗೆ ವರ್ಗಾವಣೆ ಕೇಳಿದ್ದರು. ಆದರೆ ನಡೆಸಿ ಕುತಂತ್ರಕ್ಕೆ ಸಂತೋಷ್ ಬಾಬು ಹುತಾತ್ಮರಾಗಿದ್ದಾರೆ.