Tag: border

  • ಕೇರಳದಲ್ಲಿ ಕೊರೊನಾ ಪ್ರಕರಣ ಹೆಚ್ಚಳ – ಕೊಡಗಿನ ಜನತೆಯಲ್ಲಿ ಆತಂಕ

    ಕೇರಳದಲ್ಲಿ ಕೊರೊನಾ ಪ್ರಕರಣ ಹೆಚ್ಚಳ – ಕೊಡಗಿನ ಜನತೆಯಲ್ಲಿ ಆತಂಕ

    -ಕೊಡಗಿಗೆ ಕೇರಳದಿಂದ ಬರುವವರೇ ಕಂಟಕವಾಗುತ್ತಾರಾ?
    -ಕೊಡಗಿನಲ್ಲಿ ಮತ್ತೆ ಹೆಚ್ಚಾಗ್ತಿದ್ಯಾ ಕೊರೊನಾ?

    ಮಡಿಕೇರಿ: ಗಡಿ ಜಿಲ್ಲೆ ಕೊಡಗಿಗೆ ಹೊಂದಿಕೊಂಡಂತಿರುವ ಕೇರಳ ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಕೊಡಗಿನ ಜನರಲ್ಲಿ ಆತಂಕ ಹುಟ್ಟಿಸಿದೆ.

    ಕೇರಳ ಮತ್ತು ಕೊಡಗಿಗೆ ಸಂಪರ್ಕ ಕಲ್ಪಿಸುವ ಕುಟ್ಟ, ಮಾಕುಟ್ಟ ಮತ್ತು ಕರಿಕೆ ಚೆಕ್ ಪೋಸ್ಟ್‍ಗಳಲ್ಲಿ ಕೇಂದ್ರದ ಕೊರೊನಾ ಹೊಸ ನಿಯಮದ ಪ್ರಕಾರ ಯಾವುದೇ ತಪಾಸಣೆಗಳು ನಡೆಯುತ್ತಿಲ್ಲ. ಜೊತೆಗೆ ಕೇರಳ ಕೊಡಗಿಗೆ ಹೋಗಿ ಬರಲು ಯಾವುದೇ ನಿರ್ಬಂಧಗಳಿಲ್ಲ. ಹೀಗಾಗಿ ನೂರಾರು ವಾಹನಗಳ ಮೂಲಕ ನಿತ್ಯ ಸಾವಿರಾರು ಜನರು ಕೊಡಗಿನಿಂದ ಕೇರಳಕ್ಕೆ, ಕೇರಳದಿಂದ ಕೊಡಗಿಗೆ ಓಡಾಡುತ್ತಿದ್ದಾರೆ. ಇದರಿಂದ ಕೊಡಗಿನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಮತ್ತೆ ಉಲ್ಬಣಗೊಂಡು ಬಿಡುತ್ತಾ ಎನ್ನುವ ಆತಂಕ ಎದುರಾಗಿದೆ.

    ಕಳೆದ ಮೂರು ದಿನಗಳ ಹಿಂದೆಯಷ್ಟೇ ಕೊಡಗಿನಲ್ಲಿ ಕೋವಿಡ್ ಪ್ರಕರಣಗಳು ಶೂನ್ಯಕ್ಕೆ ಇಳಿದಿತ್ತು. ಆದರೆ ಅದರ ಮಾರನೇ ದಿನವೇ ಮೂರರಿಂದ ನಾಲ್ಕು ಹೊಸ ಪ್ರಕರಣಗಳು ದಾಖಲಾಗಿವೆ. ಕೊಡಗಿನಿಂದ ಕರಿಕೆ, ಕುಟ್ಟ ಮತ್ತು ಮಾಕುಟ್ಟ ಈ ಮೂರು ಕಡೆಗಳಲ್ಲಿ ಇರುವ ಚೆಕ್‍ಪೋಸ್ಟ್‍ಗಳಲ್ಲಿ ಯಾವುದೇ ತಪಾಸಣೆ ನಡೆಯುತ್ತಿಲ್ಲ. ಬದಲಾಗಿ ಫೆಬ್ರವರಿ 2 ರ ನಂತರ ಕೇರಳದಿಂದ ಕೊಡಗಿಗೆ ಬಂದಿರುವವರು ತಮ್ಮ ಹತ್ತಿರದ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಕೊಡಗು ಜಿಲ್ಲಾಡಳಿತ ಸೂಚನೆ ನೀಡಿದೆ.

    ಕೇರಳ -ಕೊಡಗು ಗಡಿ ಭಾಗ ಆಗಿರುವುದರಿಂದ ದಿನ ನಿತ್ಯ ಕೇರಳದ ಕಣ್ಣೂರಿಗೆ ಕೆಎಸ್‍ಆರ್‍ಟಿಸಿ ಬಸ್ಸುಗಳು ಸಂಚಾರ ಮಾಡುತ್ತಿವೆ. ಇದರಲ್ಲಿ ಹೆಚ್ಚಾಗಿ ಕೇರಳದಿಂದ ಕೊಡಗಿಗೆ ಕನಿಷ್ಠ 25 ಪ್ರಯಾಣಿಕರು ಆಗಮಿಸುತ್ತಿದ್ದಾರೆ. ಇದರಿಂದಾಗಿ ಚಾಲಕ ಹಾಗೂ ನಿರ್ವಾಹಕರಿಗೆ ಕೊರೊನಾದ ಆತಂಕ ಮತ್ತಷ್ಟು ಹೆಚ್ಚಾಗಿದೆ. ಮುಂಜಾಗ್ರತ ಕ್ರಮವಾಗಿ ಕೇರಳದಿಂದ ಬಂದ ಬಸ್ಸಿಗೆ ಸ್ಯಾನಿಟೈಸ್ ಮಾಡಲಾಗುತ್ತಿದೆ. ಆದರೂ ದಿನ ನಿತ್ಯ ಭಯದಿಂದಲೇ ಹೋಗಿ ಬರುವ ಅನಿವಾರ್ಯತೆ ಇದೆ ಎಂದು ಕೆಎಸ್‍ಆರ್‍ಟಿಸಿ ಬಸ್ಸು ಸಿಬ್ಬಂದಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.

    ಕೊಡಗಿನಲ್ಲಿ ಕಳೆದ ಒಂದು ವಾದದಿಂದ ಒಂದು ಪ್ರಕರಣವು ಇಲ್ಲದೆ 0% ನಲ್ಲಿತ್ತು. ಆದರೆ ಕಳೆದ ನಾಲ್ಕು ಐದು ದಿನಗಳಿಂದ ಮೂರರಿಂದ ನಾಲ್ಕು ಪಾಸಿಟಿವ್ ಪ್ರಕರಣ ಮತ್ತೆ ದಾಖಲು ಆಗುತ್ತಿದೆ. ಅಲ್ಲದೆ ಹೊಸ ಎಸ್‍ಓಪಿ ಪ್ರಕಾರ ಅಂತರ ರಾಜ್ಯ ಚೆಕ್ ಪೋಸ್ಟ್‍ನಲ್ಲಿ ಯಾವುದೇ ತಪಾಸಣೆ ಇಲ್ಲ. ಹೀಗಾಗಿ ಕೇರಳದಿಂದ ಕೊಡಗಿಗೆ ಆಗಮಿಸುವವರು ಮುಕ್ತವಾಗಿ ಸಂಚಾರ ಮಾಡುತ್ತಿದ್ದಾರೆ. ಇದರಿಂದ ಕೊಡಗಿಗೆ ಮತ್ತೆ ಕಂಟಕವಾಗುತ್ತಾ ಎಂದು ಜನರಲ್ಲಿ ಆತಂಕ ಶುರುವಾಗಿದೆ.

  • ಒಂದು ಇಂಚು ಜಾಗವನ್ನು ಯಾರಿಗೂ ಬಿಟ್ಟುಕೊಡಲ್ಲ – ರಾಜನಾಥ್ ಸಿಂಗ್

    ಒಂದು ಇಂಚು ಜಾಗವನ್ನು ಯಾರಿಗೂ ಬಿಟ್ಟುಕೊಡಲ್ಲ – ರಾಜನಾಥ್ ಸಿಂಗ್

    – ಗಲ್ವಾನ್ ಕಣಿವೆಯಲ್ಲಿ ಎರಡು ದೇಶಗಳ ಸೈನ್ಯ ಹಿಂದಕ್ಕೆ
    – ನಿರಂತರವಾಗಿ ನಡೆಯುತ್ತಿದೆ ಮಾತುಕತೆ

    ನವದೆಹಲಿ: ಗಲ್ವಾನ್ ಘರ್ಷಣೆಯಿಂದಾಗಿ ಸೃಷ್ಟಿಯಾಗಿದ್ದ ಬಿಕ್ಕಟ್ಟು ಈಗ ತಿಳಿಯಾಗುತ್ತಿದ್ದು ಭಾರತ ಮತ್ತು ಚೀನಾ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ.

    ರಾಜ್ಯಸಭೆಯಲ್ಲಿ ಮಾತನಾಡಿದ ಗೃಹ ಸಚಿವ ರಾಜನಾಥ್ ಸಿಂಗ್, ಭಾರತ-ಚೀನಾ ಸಂಪೂರ್ಣವಾಗಿ ಹಿಂದೆ ಸರಿಯಲು ಒಪ್ಪಿಕೊಂಡಿದ್ದು, ಪೂರ್ವ ಲಡಾಕ್‍ನ ವಾಸ್ತವ ನಿಯಂತ್ರಣ ರೇಖೆಯ ಪಾಂಗ್ಯಾಂಗ್ ತ್ಸೋ ಸರೋವರದ ಬಳಿ ಪರಿಸ್ಥಿತಿ ಸುಧಾರಿಸಿದೆ. ಅಲ್ಲದೆ 48 ಗಂಟೆಗಳಲ್ಲಿ ಕಮಾಂಡರ್ ಮಟ್ಟದಲ್ಲಿ ಸಭೆ ನಡೆಯುಲಿದೆ ಎಂದು ಮಾಹಿತಿ ನೀಡಿದರು.

    ಸೇನೆಯನ್ನು ಫಿಂಗರ್ 8 ಪ್ರದೇಶಕ್ಕೆ ಹಿಂದಿರುಗಿಸಲು ಚೀನಾ ಒಪ್ಪಿಕೊಂಡಿದ್ದು, ನಮ್ಮ ಸೈನಿಕರನ್ನು ಸಹ ಫಿಂಗರ್ 3ರ ಧನ್ ಸಿಂಗ್ ಥಾಪಾ ಶಾಶ್ವತ ನೆಲೆಗೆ ಕಳುಹಿಸಲಾಗುತ್ತಿದೆ. ಚೀನಾ ತನ್ನ ಸೈನ್ಯವನ್ನು ಪಾಂಗ್ಯಾಂಗ್ ತ್ಸೋ ಸರೋವರದ ಉತ್ತರ ದಂಡೆಯ ಫಿಂಗರ್ 8ಕ್ಕೆ ಕಳುಹಿಸುತ್ತಿದೆ. ಭಾರತದ ಸೈನಿಕರನ್ನು ಸಹ ಫಿಂಗರ್ 3ರ ಶಾಶ್ವತ ನೆಲೆಗೆ ಕಳುಹಿಸಲಾಗುತ್ತಿದೆ ಎಂದು ತಿಳಿಸಿದರು.

    ಸರೋವರದ ಉತ್ತರ ಹಾಗೂ ದಕ್ಷಿಣ ದಂಡೆಯ ಬೇರ್ಪಡಿಸುವಿಕೆ ಒಪ್ಪಂದದ ಬಗ್ಗೆ ಚೀನಾದೊಂದಿಗಿನ ನಮ್ಮ ಮಾತುಕತೆ ನಿರಂತರವಾಗಿ ನಡೆಯುತ್ತಿದೆ. ಒಪ್ಪಂದದ ಬಳಿಕ ಈ ಪ್ರದೇಶದಲ್ಲಿ ಭಾರತ-ಚೀನಾ ಸೈನಿಕರನ್ನು ಹಿಂಪಡೆಯಲಾಗುವುದು. ಭಾರತದ ಒಂದು ಇಂಚು ಜಾಗವನ್ನು ಯಾರಿಗೂ ಬಿಟ್ಟು ಕೊಡುವುದಿಲ್ಲ. ಭದ್ರತೆಯ ವಿಚಾರ ಬಂದಾಗ ಯಾರೊಂದಿಗೂ ಭಾರತ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಇದೇ ವೇಳೆ ಭರವಸೆ ನೀಡಿದರು.

    ಎಲ್‍ಒಸಿ ಬಳಿ ಶಾಂತಿಯುತ ಪರಿಸ್ಥಿತಿಯನ್ನು ಮುಂದುವರಿಸಲು ನಾವು ಬದ್ಧರಾಗಿದ್ದೇವೆ. ಭಾರತ ಯಾವಾಗಲೂ ದ್ವಿಪಕ್ಷೀಯ ಸಂಬಂಧಗಳನ್ನು ಕಾಪಾಡಿಕೊಳ್ಳಲು ಒತ್ತು ನೀಡಿದೆ. ಮೊದಲನೇಯದಾಗಿ ಎರಡೂ ಕಡೆಯವರು ಎಲ್‍ಎಸಿ ನಿಯಮಗಳಿಗೆ ಬದ್ಧವಾಗಿರಬೇಕು ಹಾಗೂ ಗೌರವಿಸಬೇಕು, ಎರಡನೇಯದಾಗಿ ಯಾವುದೇ ಕಡೆಯಿಂದಲೂ ಸ್ಥಿತಿಗತಿ ಬದಲಿಸಲು ಯತ್ನಿಸಬಾರದು. ಮೂರನೇಯದಾಗಿ ಎಲ್ಲ ಹೊಂದಾಣಿಕೆಗಳನ್ನು ಎರಡೂ ಪಕ್ಷಗಳು ಸಂಪೂರ್ಣವಾಗಿ ಒಪ್ಪಿಕೊಳ್ಳಬೇಕು ಎಂದು ರಾಜನಾಥ್ ಸಿಂಗ್ ಹೇಳಿದರು.

    ಲಡಾಖ್ ಗಡಿಯಲ್ಲಿ ಜೂನ್ 15 ರಂದು ನಡೆದ ಘರ್ಷಣೆಯಲ್ಲಿ ಭಾರತದ 20 ಮಂದಿ ಯೋಧರು ಹುತಾತ್ಮರಾಗಿದ್ದರು. ಈ ಘಟನೆಯ ಬಳಿಕ ಭಾರತ ಚೀನಾ ನಡುವೆ ಯುದ್ಧದ ಸನ್ನಿವೇಶ ಸೃಷ್ಟಿಯಾಗಿತ್ತು.

    ಈ ವೇಳೆ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದ ಹೇಳಿಕೆಯಲ್ಲಿ ಭಾರತದ ಸೇನೆ ಚೀನಾ ಕಡೆಯಲ್ಲೂ ಅಪಾರ ಪ್ರಮಾಣದ ಸಾವು ನೋವು ಸಂಭವಿಸಿದೆ ಎಂದು ತಿಳಿಸಿತ್ತು. ಚೀನಾದ 43 ಯೋಧರು ಮೃತಪಟ್ಟಿದ್ದಾರೆ ಎಂದು ವರದಿಯಾಗಿತ್ತು.

  • ಉದ್ಧವ್ ಠಾಕ್ರೆಯಂತವರು ನೂರು ಮಂದಿ ಬಂದ್ರೂ ಬೆಳಗಾವಿ ನಮ್ಮದೇ: ನಾರಾಯಣ ಗೌಡ

    ಉದ್ಧವ್ ಠಾಕ್ರೆಯಂತವರು ನೂರು ಮಂದಿ ಬಂದ್ರೂ ಬೆಳಗಾವಿ ನಮ್ಮದೇ: ನಾರಾಯಣ ಗೌಡ

    ಬೆಂಗಳೂರು: ಉದ್ಧವ್ ಠಾಕ್ರೆ ಅಂತವರು ನೂರು ಮಂದಿ ಬಂದರೂ ಕರ್ನಾಟಕದಲ್ಲಿರೋ ಪ್ರದೇಶ ನಮ್ಮಲ್ಲೇ ಇರುತ್ತವೆ ಎಂದು ಕರವೇ ನಾರಾಯಣ ಗೌಡ ಹೇಳಿದ್ದಾರೆ. ಬಾಳ್ ಠಾಕ್ರೆ ನಂತರ ಈ ಅಧ್ಯಾಯ ಮುಗಿದಿದೆ ಎಂದುಕೊಂಡಿದ್ದೆ ಆದರೀಗ ಅವರ ಮಗ ಉದ್ಧವ್ ಠಾಕ್ರೆ ಗಡಿ ವಿವಾದವನ್ನು ಪ್ರಾರಂಭಿಸಿದ್ದಾರೆ.

    ಇಂದು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಮಹಾಜನ್ ವರದಿಯನ್ನು ಸರಿಯಾಗಿ ಓದಿ ತಿಳಿಯದುಕೊಳ್ಳದೇ ಇಂತಹ ಉದ್ಧಾಟತನದ ಹೇಳಿಕೆ ನೀಡುವುದು ಸಿಎಂ ಸ್ಥಾನಕ್ಕೆ ಯೋಗ್ಯತೆ ತರುವಂತಹದಲ್ಲ. ಅವರ ಉದ್ದೇಶ ಏನು ಅಂತ ಗೊತ್ತಿಲ್ಲ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧಾವ್ ಠಾಕ್ರೆ ಪದೇ ಪದೇ ಗಡಿ ವಿಚಾರದ ಬಗ್ಗೆ ಮಾತನಾಡುತ್ತಾರೆ. ಮರಾಠಿಗರನ್ನು ಓಲೈಸಿಕೊಳ್ಳುವ ಸಲುವಾಗಿ ಕನ್ನಡಿಗರನ್ನು ಕೆರಳಿಸುವಂತಹ ಹೇಳಿಕೆಗಳನ್ನು ಏಕೆ ನೀಡುತ್ತಾರೆ ಎಂದು ತಿಳಿದಿಲ್ಲ. ಬೆಳಗಾವಿಯಲ್ಲಿ ಒಂದೆಡೆ ಎಂಇಎಸ್ ಗಳಾದರೆ ಇನ್ನೊಂದೆಡೆ ಮಹಾರಾಷ್ಟ್ರದ ರಾಜಕಾರಣಿಗಳು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಬೆಳಗಾವಿ, ನಿಪ್ಪಾಣಿ, ಕಾರವಾರ ಇವು ಕರ್ನಾಟಕದ ಅವಿಭಾಜ್ಯ ಅಂಗಗಳು ಎಂದು ಮಹಾಜನ್ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಮಹಾಜನ್ ಕೂಡ ಮಹಾರಾಷ್ಟ್ರದವರೇ ಆಗಿದ್ದವರು. ಮಹಾಜನ್ ವರದಿಯನ್ನು ನೀಡಬೇಕೆಂದು ಒತ್ತಾಯಿಸಿದವರು ಕೂಡ ಮಹಾರಾಷ್ಟ್ರದವರೆ. ಮಹಾರಾಷ್ಟ್ರದ ಒತ್ತಾಯದ ಮೇರೆಗೆ ಅಂದು ಮಹಾಜನ್ ವರದಿಯನ್ನು ನೇಮಕ ಮಾಡಲಾಯಿತು. ಅದೇ ಮಹಾಜನ್ ನೀಡಿದ ವರದಿಯನ್ನು ಕರ್ನಾಟಕ ಸ್ವೀಕಾರ ಮಾಡಿದೆ. ಆದ್ರೆ ಮಹಾರಾಷ್ಟ್ರ ಸ್ವೀಕರಿಸಿಲ್ಲ ಎಂದರು.

    ಇಂತಹ ಸಂದರ್ಭದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ನಮ್ಮ ರಾಜ್ಯದ ರಾಜಕಾರಣಿಗಳು ಸರಿಯಾದ ರೀತಿಯಲ್ಲಿ ಉತ್ತರ ಕೊಡದ ಕಾರಣ ಅವರು ಪದೇ ಪದೇ ಕಾಲು ಕೆರೆದುಕೊಂಡು ಗಡಿ ವಿಚಾರಕ್ಕೆ ಬರುತ್ತಿದ್ದಾರೆ. ಬೆಳಗಾವಿಯಂತಹ ಪ್ರದೇಶಗಳಲ್ಲಿ ಜನರು ಗೂಂಡಾಗಿರಿ ಮಾಡುವಂತದ್ದು, ಪುಂಡಾಟಿಕೆ ನಡೆಸುವಂತಹದ್ದು, ಇದು ಕರ್ನಾಟಕದ ಗಡಿಭಾಗದಲ್ಲಿ ಇರುವಂತಹ ರಾಜಕಾರಣಿಗಳ ದೌರ್ಬಲ್ಯಗಳಾಗಿವೆ. ಇಂದು ಅವರನ್ನು ಇಷ್ಟರ ಮಟ್ಟಿಗೆ ಮಾತನಾಡಲು ಕಾರಣವಾಗಿದೆ. ಗಡಿ ಭಾಗದ ರಾಜಕಾರಣಿಗಳಿಗೆ ಒಂದು ಚೂರು ಕೂಡ ನನ್ನ ನಾಡು, ನನ್ನ ಭಾಷೆ, ನನ್ನ ಸಂಸ್ಕøತಿ ಎಂಬ ಸ್ವಾಭಿಮಾನವಿಲ್ಲ. ನಾಡು, ನುಡಿ, ಗಡಿ ವಿಚಾರ ಬಂದಾಗ ನಮ್ಮ ರಾಜ್ಯ ರಾಜಕಾರಣಿಗಳು ಉಗ್ರವಾಗಿ ಖಂಡಿಸುವ ಕೆಲಸ ಮಾಡಬೇಕು ಎಂದರು.

    ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಅಷ್ಟೆಲ್ಲಾ ಮಾತನಾಡುವಾಗ ಕರ್ನಾಟಕದ ಮುಖ್ಯಮಂತ್ರಿಗಳು ಏಕೆ ಮಾತನಾಡಬಾರದು, ಏಕೆ ಸರಿಯಾದ ರೀತಿಯಲ್ಲಿ ಉತ್ತರ ನೀಡಬಾರದು ಎಂದು ಪ್ರಶ್ನಿಸಿದರು. ನಮ್ಮ ರಾಜಕಾರಣಿಗಳು ಉತ್ತರ ನೀಡದ ಪರಿಣಾಮ ಇಂದು ಅವರು ಹೆಚ್ಚಾಗಿ ಮಾತನಾಡುತ್ತಿದ್ದಾರೆ. ಹಾಗಾಗಿ ಮಾನ್ಯ ಮುಖ್ಯಮಂತ್ರಿಗಳು ಮಾತನಾಡಿ ಮಹಾಜನ್ ವರದಿಯನ್ನು ಓದಿ ಅದನ್ನು ಒಪ್ಪಿಕೊಂಡಿದ್ದೇವೆ. ಮಹಾಜನ್ ವರದಿ ಪ್ರಕಾರ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು, ಅದನ್ನು ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ, ಅದು ಕರ್ನಾಟಕದ ಅವಿಭಾಜ್ಯ ಅಂಗ ಎಂದು ಹೇಳಬೇಕು. ಇಲ್ಲದೇ ಹೋದರೆ ಮತ್ತೆ ಮತ್ತೆ ಕ್ಯಾತೆ ತೆಗೆಯುವ ಕೆಲಸ ಮಾಡುತ್ತಾರೆ ಎಂದು ಹೇಳಿದರು.

    ಉದ್ಧವ್ ಠಾಕ್ರೆ ಅಂತವರು ನೂರು ಮಂದಿ ಬಂದರೂ ಕರ್ನಾಟಕದಲ್ಲಿರುವ ಬೆಳಗಾವಿ ಪ್ರದೇಶ ನಮ್ಮಲ್ಲೆ ಇರುತ್ತವೇ. ಇದೇ ರೀತಿ ಮಹಾರಾಷ್ಟ್ರ ಸರ್ಕಾರದವರು ಖ್ಯಾತೆ ತಗೆಯುತ್ತಿದ್ದರೆ ನಾವು ಹೋರಾಟ ಮಾಡುತ್ತೆವೇ ಎಂಬ ಎಚ್ಚರಿಕೆ ಸಂದೇಶವನ್ನ ಕರವೇ ನಾರಾಯಣ ಗೌಡ ರವಾನಿಸಿದ್ದಾರೆ.

  • ಗಡಿ ದಾಟಿ ಬಂದಿದ್ದ ಬಾಲಕನನ್ನು ಪಾಕ್‍ಗೆ ಹಸ್ತಾಂತರಿಸಿದ ಭಾರತೀಯ ಸೇನೆ

    ಗಡಿ ದಾಟಿ ಬಂದಿದ್ದ ಬಾಲಕನನ್ನು ಪಾಕ್‍ಗೆ ಹಸ್ತಾಂತರಿಸಿದ ಭಾರತೀಯ ಸೇನೆ

    ಶ್ರೀನಗರ: ಕಾಶ್ಮೀರ ಗಡಿಯನ್ನು ಅಜಾಗರೂಕತೆಯಿಂದ ದಾಟಿ ಭಾರತಕ್ಕೆ ಬಂದಿದ್ದ ಪಾಕಿಸ್ತಾನದ ಬಾಲಕನನ್ನು ಭಾರತೀಯ ಸೇನೆ ಶುಕ್ರವಾರ ವಾಪಸ್ ಕಳುಹಿಸುವ ಮೂಲಕ ಭಾರತೀಯ ಸೇನೆ ಮಾನವೀಯತೆಯನ್ನು ಮೆರೆದಿದ್ದಾರೆ.

    ಪಾಕಿಸ್ತಾನದ ಮಿರ್ಪುರ್ ಜಿಲ್ಲೆಯ ಅಲಿ ಹೈದರ್ (14) ಅಜಾಗರೂಕತೆಯಿಂದ ಪೂಂಚ್ ಜಿಲ್ಲೆಯ ಗಡಿ ದಾಟಿ ಜಮ್ಮು ಮತ್ತು ಕಾಶ್ಮೀರದ ಮೂಲಕ ಭಾರತಕ್ಕೆ ಬಂದಿದ್ದಾನೆ. ಬಾಲಕ ಮುಗ್ಧ ಹಾಗೂ ನಿರಾಪರಾಧಿಯಾಗಿದ್ದು, ಆತನಿಗೆ ಆಹಾರ, ಬಟ್ಟೆ ಮತ್ತು ಆಶ್ರಯವನ್ನು ನೀಡಲಾಯಿತು ಎಂದು ಭಾರತೀಯ ಸೇನೆ ತಿಳಿಸಿದೆ.

    ಮಾನವೀಯತೆಯ ದೃಷ್ಟಿಯಿಂದ ಅಲಿ ಹೈದರ್‍ನನ್ನು ವಾಪಸ್ ಕಳುಹಿಸುವಂತೆ ಜನವರಿ 3ರಂದು ಪಾಕಿಸ್ತಾನ ಅಧಿಕಾರಿಗಳು ಮನವಿ ಮಾಡಿರುವುದಾಗಿ ತಿಳಿಸಿದರು.

    ಇದೇ ರೀತಿ 2020ರ ಡಿಸೆಂಬರ್ 24ರಂದು ಪೂಂಚ್ ಸೆಕ್ಟರ್ ಮೂಲಕ ಅಜಾಗರೂಕತೆಯಿಂದ ಭಾರತೀಯ ಹುಡುಗ ಮೊಹಮ್ಮದ್ ಬಶೀರ್ ಪಾಕಿಸ್ತಾನಕ್ಕೆ ಹೋಗಿದ್ದನು. ಆತನನ್ನು ವಾಪಸ್ ಕಳುಹಿಸುವಂತೆ ಭಾರತವು ಮನವಿ ಮಾಡಿತ್ತು. ಪಾಕಿಸ್ತಾನ ಅಧಿಕಾರಿಗಳು 16 ದಿನಗಳ ಕಾಲ ಬಂಧನದಲ್ಲಿದ್ದ ಮೊಹಮ್ಮದ್ ಬಶೀರ್‍ನನ್ನು ಹಸ್ತಾಂತರಿಸಿದ್ದರು ಎಂದು ತಿಳಿಸಿದರು.

    ಪಾಕಿಸ್ತಾನ ಅಧಿಕಾರಿಗಳು ಪ್ರಸ್ತಾಪವನ್ನು 2021ರ ಜನವರಿ 6ರಂದು ಒಪ್ಪಿಕೊಂಡು ಇದೀಗ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮತ್ತು ನಾಗರಿಕ ಆಡಳಿತ ಬೆಂಬಲದೊಂದಿಗೆ, ಅಲಿ ಹೈದರ್‍ನನ್ನು ಪೂಂಚ್ ರಾವಲಕೋಟ್ ಕ್ರಾಸಿಂಗ್ ಪಾಯಿಂಟ್ ಮೂಲಕ ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಲಾಗಿದೆ. ಪಾಕಿಸ್ತಾನ ಅಧಿಕಾರಿಗಳು 16 ದಿನಗಳ ಕಾಲ ಬಂಧನದಲ್ಲಿದ್ದ ಮೊಹಮ್ಮದ್ ಬಶೀರ್ ಅವರನ್ನು ಹಸ್ತಾಂತರಿಸಿದ್ದರು ಎಂದು ತಿಳಿಸಿದರು.

  • ಮತ್ತೆ ಗಡಿಯಲ್ಲಿ ಚೀನಾ ಕ್ಯಾತೆ – ಅರುಣಾಚಲ ಪ್ರದೇಶದ ಗಡಿ ಭಾಗದಲ್ಲಿ 3 ಗ್ರಾಮ ನಿರ್ಮಾಣ

    ಮತ್ತೆ ಗಡಿಯಲ್ಲಿ ಚೀನಾ ಕ್ಯಾತೆ – ಅರುಣಾಚಲ ಪ್ರದೇಶದ ಗಡಿ ಭಾಗದಲ್ಲಿ 3 ಗ್ರಾಮ ನಿರ್ಮಾಣ

    ನವದೆಹಲಿ: ಮತ್ತೆ ಗಡಿಯಲ್ಲಿ ಚೀನಾ ತನ್ನ ಪುಂಡಾಟವನ್ನು ಮುಂದುವರಿಸಿದ್ದು, ಅರುಣಾಚಲ ಪ್ರದೇಶದ ಗಡಿ ಭಾಗದಲ್ಲಿ ಮೂರು ಹೊಸ ಗ್ರಾಮಗಳನ್ನು ನಿರ್ಮಾಣ ಮಾಡುತ್ತಿದೆ.

    ಪಶ್ಚಿಮ ಅರುಣಾಚಲ ಪ್ರದೇಶದ ಭಾರತ, ಚೀನಾ ಮತ್ತು ಭೂತಾನ್ ನಡುವಿನ ತ್ರಿ-ಜಂಕ್ಷನ್‍ಗೆ ಸಮೀಪದಲ್ಲಿರುವ ಬಮ್ ಲಾ ಪಾಸ್‍ನಿಂದ ಸುಮಾರು 5 ಕಿಲೋಮೀಟರ್ ದೂರದಲ್ಲಿ ಚೀನಾ 3 ಗ್ರಾಮಗಳನ್ನು ನಿರ್ಮಿಸಿದೆ. ಈ ಪ್ರದೇಶದಲ್ಲಿ ಭಾರತ ಮತ್ತು ಚೀನಾಗೆ ಗಡಿ ವಿವಾದವಿದೆ. ಹೀಗಾಗಿ ಇಲ್ಲಿ ಗ್ರಾಮಗಳನ್ನು ನಿರ್ಮಾಣ ಮಾಡಿ ಪ್ರಾದೇಶಿಕ ಹಕ್ಕುಗಳನ್ನು ಬಲಪಡಿಸುವ ಯೋಜನೆ ರೂಪಿಸಿದೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಜಿಯೋಸ್ಟ್ರಾಟೆಜಿಸ್ಟ್ ಡಾ. ಬ್ರಹ್ಮ ಚೆಲ್ಲಾನಿ ಚೀನಾ ತನ್ನ ಪ್ರಾದೇಶಿಕ ಹಕ್ಕುಗಳನ್ನು ಬಲಪಡಿಸಲು ಮತ್ತು ಗಡಿಯಲ್ಲಿ ಒಳನುಸುಳುವಿಕೆಯನ್ನು ಹೆಚ್ಚಿಸಲು ಹಾನ್ ಚೈನೀಸ್ ಮತ್ತು ಟಿಬೆಟಿಯನ್ ಸದಸ್ಯರನ್ನು ಭಾರತದ ಗಡಿಯಲ್ಲಿ ನೆಲೆಸುವ ತಂತ್ರವನ್ನು ಬಳಸುತ್ತಿದೆ. ಈ ಹಿಂದೆಯೂ ಕೂಡ ದಕ್ಷಿಣ ಚೀನಾ ಸಮುದ್ರದಲ್ಲಿ ಮೀನುಗಾರರನ್ನು ಈ ತಂತ್ರಗಾರಿಕೆಗೆ ಬಳಸಿಕೊಂಡಿತ್ತು ಎಂದು ಹೇಳಿದ್ದಾರೆ.

    ಸದ್ಯ ಲಭ್ಯವಾಗಿರುವ ಹೊಸ ಉಪಗ್ರಹ ಚಿತ್ರಗಳಲ್ಲಿ ಭೂತಾನ್ ಸಾರ್ವಭೌಮ ಭೂಪ್ರದೇಶದಲ್ಲಿ ಚೀನಾ ಗ್ರಾಮಗಳನ್ನು ನಿರ್ಮಾಣ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಈಗ ನಿರ್ಮಾಣವಾಗುತ್ತಿರುವ ಗ್ರಾಮಗಳು 2017ರಲ್ಲಿ ಭಾರತೀಯ ಮತ್ತು ಚೀನಾದ ನಡುವೆ ಗಲಾಟೆಯಾದ ಡೋಕ್ಲಾಮ್ ಸ್ಥಳದಿಂದ ಕೇವಲ ಏಳು ಕಿಲೋಮೀಟರ್ ದೂರದಲ್ಲಿದೆ. ಇದರ ಜೊತೆಗೆ ಪೂರ್ವ ಲಡಾಕ್‍ನಲ್ಲಿ ಇತ್ತೀಚೆಗೆ ಗಲಾಟೆಯಾದ ಸ್ಥಳದಲ್ಲೇ ಈ ಗ್ರಾಮಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

  • ನಕ್ಸಲ್ ಚಟುವಟಿಕೆ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಯುತ್ತಿದೆ – ಐಜಿ ವಿಫುಲ್ ಕುಮಾರ್

    ನಕ್ಸಲ್ ಚಟುವಟಿಕೆ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಯುತ್ತಿದೆ – ಐಜಿ ವಿಫುಲ್ ಕುಮಾರ್

    ಮಡಿಕೇರಿ: ಕೇರಳ-ಕೊಡಗಿನ ಗಡಿ ಭಾಗದಲ್ಲಿ ನಕ್ಸಲ್ ಚಟುವಟಿಕೆ ವಿರುದ್ಧ ಎಎನ್‍ಎಫ್, ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದೆ ಎಂದು ಐಜಿ ವಿಫುಲ್ ಕುಮಾರ್ ಹೇಳಿದ್ದಾರೆ.

    ಮಡಿಕೇರಿಯಲ್ಲಿ ಮಾದಕ ವಸ್ತು, ಅಪರಾಧ ತಡೆ ಕುರಿತು ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಜಾಗೃತಿ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೊರೊನಾ ಸಂದರ್ಭದಲ್ಲಿ ಜಿಲ್ಲೆಯ ಜನತೆ ಆತ್ಮಶಿಸ್ತಿನಿಂದ ವರ್ತಿಸಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಹೇಳುತ್ತೇನೆ ಎಂದರು.

    ಕೊರೊನಾ ಅಬ್ಬರ ಇನ್ನೂ ಕಡಿಮೆಯಾಗಿಲ್ಲ. ಆದ್ದರಿಂದ ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರವನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಇದೊಂದು ಜನಾಂದೋಲನದ ರೀತಿಯಲ್ಲಿ ಆಗಬೇಕಿದೆ. ಹಾಗೆಯೇ ರಾಜ್ಯದಲ್ಲಿ ಮಾದಕ ವಸ್ತುಗಳನ್ನು ಬೇರು ಸಹಿತ ಕಿತ್ತು ಹಾಕಲು ಸಂಕಲ್ಪ ಮಾಡಿದ್ದೇವೆ. ಮಾದಕ ವಸ್ತುಗಳ ಬಳಕೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆಯೂ ಅರಿವು ಮೂಡಿಸುತ್ತಿದ್ದೇವೆ ಎಂದು ತಿಳಿಸಿದರು.

    ಇದೇ ವೇಳೆ ಪೊಲೀಸ್ ಇಲಾಖೆಯಿಂದ 112 ತುರ್ತು ಸಹಾಯ ದೂರವಾಣಿಯನ್ನು ಪ್ರಾರಂಭಿಸಲಾಗಿದ್ದು, ಜನತೆ ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

  • ಶೈಕ್ಷಣಿಕ ಸೌಲಭ್ಯವಿಲ್ಲದೆ ಮುಚ್ಚುತ್ತಿವೆ ಗಡಿನಾಡಿನ ಕನ್ನಡ ಶಾಲೆಗಳು- ವಿದ್ಯಾರ್ಥಿಗಳು ಅನಾಥ

    ಶೈಕ್ಷಣಿಕ ಸೌಲಭ್ಯವಿಲ್ಲದೆ ಮುಚ್ಚುತ್ತಿವೆ ಗಡಿನಾಡಿನ ಕನ್ನಡ ಶಾಲೆಗಳು- ವಿದ್ಯಾರ್ಥಿಗಳು ಅನಾಥ

    ರಾಯಚೂರು: ನವೆಂಬರ್ ತಿಂಗಳು ಬಂದರೆ ರಾಜ್ಯದೆಲ್ಲಡೆ ಕನ್ನಡ ಕಹಳೆ ಮೊಳಗುತ್ತೆ, ಇಡೀ ತಿಂಗಳು ರಾಜ್ಯೋತ್ಸವ ಆಚರಣೆ ಮಾಡಲಾಗುತ್ತೆ. ಆದರೆ ಗಡಿನಾಡು ಕನ್ನಡಿಗರ ಸಮಸ್ಯೆಗಳಿಗೆ ಮಾತ್ರ ದಶಕಗಳೇ ಕಳೆದರು ಪರಿಹಾರ ಸಿಕ್ಕಿಲ್ಲ. ಹೀಗಾಗಿ ರಾಯಚೂರಿನ ಗಡಿಯ ತೆಲಂಗಾಣದಲ್ಲಿ ಶಾಲೆ ಸೇರಿದಂತೆ ಕನ್ನಡಿಗರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ.

    ಜಿಲ್ಲೆಯ ಗಡಿಯಲ್ಲಿ ಬರುವ ತೆಲಂಗಾಣದ 13 ಗ್ರಾಮಗಳಲ್ಲಿ ನಿತ್ಯದ ವ್ಯವಹಾರಿಕ ಭಾಷೆ ಈಗಲೂ ಕನ್ನಡವೇ ಆಗಿದೆ. ಇಲ್ಲಿ 13 ಕನ್ನಡ ಮಾಧ್ಯಮ ಶಾಲೆಗಳಿದ್ದು, 942 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆದರೆ ಹತ್ತನೆ ತರಗತಿ ಮುಗಿದ ನಂತರ ಇವರು ಕನ್ನಡಕ್ಕೆ ತಿಲಾಂಜಲಿ ಹಾಡಬೇಕಿದೆ. ಕರ್ನಾಟಕದಲ್ಲಿ ಈ ವಿದ್ಯಾರ್ಥಿಗಳಿಗೆ ಓದು ಮುಂದುವರೆಸಲು ಸಾಕಷ್ಟು ತೊಡಕುಗಳಿದ್ದು, ಸರ್ಕಾರ ತಲೆಕೆಡಿಸಿಕೊಳ್ಳುತ್ತಲೇ ಇಲ್ಲ. ತೆಲಂಗಾಣ, ಆಂಧ್ರ ಪ್ರದೇಶದ ಮೆದಕ್, ನಾರಾಯಣಪೇಟ, ಕರ್ನೂಲ್, ಮೆಹಬೂಬ್ ನಗರ ಜಿಲ್ಲೆಗಳಲ್ಲಿ ಒಟ್ಟು 24 ಸಾವಿರ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದಾರೆ.

    ಇವರ ಉನ್ನತ ವ್ಯಾಸಂಗಕ್ಕೆ ರಾಜ್ಯದಲ್ಲಿ ಯಾವುದೇ ಸೌಲಭ್ಯಗಳಿಲ್ಲ. ರಾಜ್ಯದಲ್ಲಿ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರವೇಶ ಸಿಗುತ್ತಿಲ್ಲ. ಪಿಯುಸಿಗೆ ಸೀಟ್ ಸಿಕ್ಕರೂ ಸೌಲಭ್ಯಗಳಿಲ್ಲ. ಸಿಇಟಿ ಬರೆಯಲು ಅವಕಾಶ ಸಿಗುತ್ತಿಲ್ಲ. ಕಡ್ಡಾಯವಾಗಿ ಏಳು ವರ್ಷ ಕರ್ನಾಟಕದಲ್ಲೇ ಓದಿರಬೇಕು ಅನ್ನೋ ನಿಯಮ ಅಡ್ಡಿ ಬರುತ್ತಿದೆ. ಎಷ್ಟೇ ಹತ್ತಿರದಲ್ಲಿ ಇದ್ದರೂ ವಿದ್ಯಾರ್ಥಿಗಳಿಗೆ ಸಿಟಿ ಬಸ್ ಸೌಕರ್ಯ ಇಲ್ಲ. ಆದಾಯ ಮತ್ತು ಜಾತಿ ಪ್ರಮಾಣ ಪತ್ರ ತೆಲಂಗಾಣದ್ದಾಗಿರುವುದರಿಂದ ಇಲ್ಲಿ ನಡೆಯೊದಿಲ್ಲ ಎಂದು ಅಧಿಕಾರಿಗಳು ವಸತಿ ನಿಲಯಗಳಲ್ಲಿ ಅವಕಾಶ ಕೊಡುವುದಿಲ್ಲ. ವಿದ್ಯಾರ್ಥಿ ವೇತನದನ ಮಾತಂತೂ ದೂರವೇ ಉಳಿದಿದೆ. ಹೀಗಾಗಿ ಗಡಿನಾಡಲ್ಲಿ ಕನ್ನಡ ಓದುತ್ತಿರುವ ವಿದ್ಯಾರ್ಥಿಗಳಿಗೆ ಸೌಲಭ್ಯ ಒದಗಿಸಬೇಕು ಎಂದು ಸುಮಾರು ವರ್ಷಗಳಿಂದ ಹೋರಾಟ ನಡೆದೇ ಇದೆ.

    2011 ರಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ಕೊಡಬೇಕು ಎಂದು ಗೆಜೆಟ್ ನೋಟಿಫಿಕೇಷನ್ ಕೂಡ ಆಗಿದೆ. ಆದರೆ ಆನ್ ಲೈನ್ ಅರ್ಜಿ ತುಂಬಲು ಹೋದಾಗ ಗಡಿನಾಡು ಎಂದು ನಮ್ಮ ಪ್ರದೇಶಗಳನ್ನು ತೋರಿಸುತ್ತಲೇ ಇಲ್ಲ ಎಂದು ಗಡಿನಾಡು ಜನ ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳಿಗೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೃಷ್ಣ, ಇಂದುಪುರ, ಗುರ್ಜಾಲ, ತಂಗಡಗಿ ಸೇರಿ ಗಡಿನಾಡಿನಲ್ಲಿರುವ ಕನ್ನಡ ಶಾಲೆಗಳು ಈಗ ಒಂದೊಂದಾಗಿ ಮುಚ್ಚುವ ಪರಸ್ಥಿತಿಯಿದೆ. 30 ಜನ ಶಿಕ್ಷಕರು ತೆಲಂಗಾಣ ಸರ್ಕಾರದಿಂದ ನೇಮಕಗೊಂಡರು ಕೆಲಸ ಮಾಡುತ್ತಿದ್ದಾರೆ. ಆದರೆ ಕನ್ನಡ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳ ಭವಿಷ್ಯವೇ ಮಂಕಾಗುತ್ತಿದೆ.

    ಸುಮಾರು ಹೋರಾಟಗಳ ಮೂಲಕ ಸರ್ಕಾರಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಗಡಿನಾಡ ಕನ್ನಡಿಗರ ಸಮಸ್ಯೆ ಕುರಿತು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ, ಕುಂ.ವೀರಭದ್ರಪ್ಪ ನೇತೃತ್ವದಲ್ಲಿ ಪ್ರತ್ಯೇಕ ವರದಿಗಳು ಸರ್ಕಾರಕ್ಕೆ ಸಲ್ಲಿಕೆಯಾದರೂ ಉಪಯೋಗವಾಗಿಲ್ಲ.

  • ಲಡಾಖನ್ನು ಕಾನೂನು ಬಾಹಿರವಾಗಿ ಕೇಂದ್ರಾಡಳಿತ ಪ್ರದೇಶವನ್ನಾಗಿಸಲಾಗಿದೆ- ಮತ್ತೆ ಚೀನಾ ಕ್ಯಾತೆ

    ಲಡಾಖನ್ನು ಕಾನೂನು ಬಾಹಿರವಾಗಿ ಕೇಂದ್ರಾಡಳಿತ ಪ್ರದೇಶವನ್ನಾಗಿಸಲಾಗಿದೆ- ಮತ್ತೆ ಚೀನಾ ಕ್ಯಾತೆ

    ನವದೆಹಲಿ: ಗಡಿ ಪ್ರದೇಶದಲ್ಲಿ 44 ಹೊಸ ಸೇತುವೆಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಚಾರಕ್ಕೆ ಮುಕ್ತಗೊಳಿಸಿದ ಬೆನ್ನಲ್ಲೇ ಇದೀಗ ಚೀನಾ ಲಡಾಖ್ ವಿಚಾರದಲ್ಲಿ ಮೂಗು ತೂರಿಸುತ್ತಿದೆ.

    ಭಾರತ ಅಕ್ರಮವಾಗಿ ಮಾಡಿರುವ ಲಡಾಖ್ ಕೇಂದ್ರಾಡಳಿತ ಪ್ರದೇಶವನ್ನು ಪರಿಗಣಿಸುವುದಿಲ್ಲ. ಆದರೆ ಆ ಪ್ರದೇಶದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸುವುದನ್ನು ಚೀನಾ ವಿರೋಧಿಸುತ್ತದೆ ಎಂದು ಚೀನಾ ಹೇಳಿದೆ. ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಈ ಕುರಿತು ಹೇಳಿಕೆ ನೀಡಿದ್ದು, ಗಡಿಯಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಎರಡೂ ಕಡೆಯ ಉದ್ವಿಗ್ನತೆಗೆ ಮೂಲ ಕಾರಣವಾಗಿದೆ. ಉದ್ವಿಗ್ನತೆ ಹೆಚ್ಚಿಸುವ ರೀತಿ ಯಾವುದೇ ದೇಶ ಕ್ರಮ ಕೈಗೊಳ್ಳಬಾರದು ಎಂದು ಹೇಳಿದ್ದಾರೆ.

    ಲಡಾಖ್‍ನಲ್ಲಿ 8 ಹಾಗೂ ಅರುಣಾಚಲ ಪ್ರದೇಶದಲ್ಲಿ 8 ಸೇತುವೆ ಸೇರಿದಂತೆ ಭಾರತದಲ್ಲಿ ಉದ್ಘಾಟಿಸಲಾಗಿರುವ ಹಲವು ಸೇತುವೆಗಳ ಕುರಿತು ಪ್ರತಿಕ್ರಿಯಿಸುವಂತೆ ಅವರು ಕೇಳಿದ್ದಾರೆ. ಕಾನೂನು ಬಾಹಿರವಾಗಿ ಲಡಾಖ್ ಕೇಂದ್ರಾಡಳಿತ ಪ್ರದೇಶವನ್ನಾಗಿಸಿರುವುದನ್ನು ಚೀನಾ ಪರಿಗಣಿಸುವುದಿಲ್ಲ. ಆದರೆ ಗಡಿಯುದ್ದಕ್ಕೂ ಸೇನೆ ಜಮಾವಣೆಗೊಳಿಸುವುದು ಹಾಗೂ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದನ್ನು ವಿರೋಧಿಸುತ್ತೇವೆ. ಪರಿಸ್ಥಿತಿ ಉದ್ವಿಗ್ನಗೊಳಿಸುವಂತೆ ಗಡಿಯಲ್ಲಿ ಕ್ರಮ ಕೈಗೊಳ್ಳಬಾರದು. ಈ ಮೂಲಕ ಗಡಿಯಲ್ಲಿ ಪರಿಸ್ಥಿತಿ ತಿಳಿಗೊಳಿಸುವ ಎರಡೂ ಕಡೆಯ ಪ್ರಯತ್ನಗಳನ್ನು ದುರ್ಬಲಗೊಳಿಸಬಾರದು ಎಂದು ಹೇಳಿದ್ದಾರೆ.

    ಗಡಿಯಲ್ಲಿ ಮೂಲಭುತ ಸೌಕರ್ಯ ನಿರ್ಮಿಸುವುದು ಹಾಗೂ ಗಡಿಯುದ್ದಕ್ಕೂ ಸೇನೆಯನ್ನು ಹಾಕುವುದರಿಂದ ಎರಡೂ ಕಡೆ ಒತ್ತಡ ಹೆಚ್ಚುತ್ತದೆ. ಒಮ್ಮತದ ಶ್ರದ್ಧೆಯನ್ನು ಕಾರ್ಯಗತಗೊಳಿಸಿ, ಪರಿಸ್ಥಿತಿ ಉಲ್ಬಣಿಸಬಹುದಾದ ಕ್ರಮಗಳಿಂದ ದೂರವಿರುವ ಮೂಲಕ ಗಡಿಯಲ್ಲಿ ಶಾಂತಿ ಕಾಪಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಝಾವೋ ಹೇಳಿದ್ದಾರೆ.

    ಹೊಸ ಸೇತುವೆಗಳ ನಿರ್ಮಾಣದಿಂದ ಸೇನೆ ಹಾಗೂ ಶಸ್ತ್ರಾಸ್ತ್ರಗಳನ್ನು ವೇಗವಾಗಿ ಗಡಿ ಬಳಿಗೆ ಕೊಂಡೊಯ್ಯಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಗಾಂಜಾ ಗಮ್ಮತ್ತಿಗೆ ಬ್ರೇಕ್ ಹಾಕಲು ಕರ್ನಾಟಕ ಆಂಧ್ರ ಗಡಿಯಲ್ಲಿ ಹದ್ದಿನ ಕಣ್ಣು

    ಗಾಂಜಾ ಗಮ್ಮತ್ತಿಗೆ ಬ್ರೇಕ್ ಹಾಕಲು ಕರ್ನಾಟಕ ಆಂಧ್ರ ಗಡಿಯಲ್ಲಿ ಹದ್ದಿನ ಕಣ್ಣು

    – ಚಿಕ್ಕಬಳ್ಳಾಪುರ ಪೊಲೀಸರಿಂದ ಗಡಿಯಲ್ಲಿ ಅಲರ್ಟ್

    ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಗಾಂಜಾ ಮತ್ತಿನ ಗಮ್ಮತ್ತು ಜೋರಾಗಿ ಸದ್ದು ಮಾಡುತ್ತಿರುವುದರಿಂದ ಜಿಲ್ಲೆಯ ಆಂಧ್ರ ಪ್ರದೇಶದ ಗಡಿಭಾಗಗಳಲ್ಲಿ ಪೊಲೀಸ್ ಕಣ್ಗಾವಲು ಹಾಕಿದ್ದು, ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ವಾಹನಗಳನ್ನು ತಪಾಸಣೆ ನಡೆಸುವ ಕಾರ್ಯ ನಡೆಸುತ್ತಿದ್ದೇವೆ ಎಂದು ಚಿಕ್ಕಬಳ್ಳಾಪುರ ಎಸ್‍ಪಿ ಮಿಥುನ್‍ಕುಮಾರ್ ಹೇಳಿದ್ದಾರೆ.

    ಇತ್ತೀಚೆಗೆ ಚಿಂತಾಮಣಿ ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮನೆ ಮೇಲೆ ದಾಳಿ ನಡೆಸಿ ಮೂವರನ್ನು ಬಂಧಿಸಲಾಗಿದೆ. ಘಟನೆಯಿಂದ ಎಚ್ಚೆತ್ತಿರುವ ಜಿಲ್ಲೆಯ ಪೊಲೀಸರು ಅಕ್ರಮ ಗಾಂಜಾ ಸಾಗಾಣಿಕೆ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳ ಮೇಲೆ ಸೂಕ್ಷ್ಮ ನಿಗಾ ವಹಿಸಿದ್ದು ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯ ಸಂಪರ್ಕಿತ ರಸ್ತೆಗಳಲ್ಲಿ ಚೆಕ್ ಪೋಸ್ಟ್ ಗಳನ್ನ ಅಳವಡಿಸಿ ತಪಾಸಣೆ ನಡೆಸುತ್ತಿದ್ದಾರೆ. ಅಲ್ಲದೇ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಆಂಧ್ರಪ್ರದೇಶದ ಅನಂತಪುರ, ಚಿತ್ತೂರು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಸಂಪರ್ಕ ಹೊಂದಿದ್ದು, ಗಾಂಜಾ ಸೇರಿದಂತೆ ಅಕ್ರಮ ಚಟುವಟಿಕೆಗಳ ಮೇಲೆ ಜಿಲ್ಲಾ ಪೊಲೀಸ್ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೇವೆ ಎಂದರು. ಇದನ್ನೂ ಓದಿ: ನಂದಿಗಿರಿಧಾಮ ಲಾಕ್‍ಡೌನ್ ಮುಕ್ತಾಯ – ಸೆ.7ರಿಂದ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ

    ಸದ್ಯ ಗಾಂಜಾ, ಶ್ರೀಗಂಧ, ರಕ್ತ ಚಂದನ ಸೇರಿದಂತೆ ಮತ್ತಿತರ ಅಕ್ರಮ ಚಟುವಟಿಕೆಗಳ ಆರೋಪಿಗಳ ಚಲನವಲನಗಳನ್ನು ಗಮನಿಸುತ್ತಿದ್ದು, ಈಗಾಗಲೇ ಎಚ್ಚರಿಕೆಯನ್ನು ಸಹ ನೀಡಲಾಗಿದೆ. ಗಾಂಜಾ ಪ್ರಕರಣಗಳನ್ನ ಪತ್ತೆ ಹಚ್ಚುವಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಂದು ವೇಳೆ ಕರ್ತವ್ಯ ಲೋಪ ಕಂಡು ಬಂದರೆ ಸಂಬಂಧಿಸಿದವರ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.

  • ಚೀನಾ ಪಾಕಿಸ್ತಾನದ ಜೊತೆ ಸೇರಿ ಬೇರೆಯದೇ ಪ್ಲಾನ್ ಮಾಡಬಹುದು: ರಾಹುಲ್ ಗಾಂಧಿ

    ಚೀನಾ ಪಾಕಿಸ್ತಾನದ ಜೊತೆ ಸೇರಿ ಬೇರೆಯದೇ ಪ್ಲಾನ್ ಮಾಡಬಹುದು: ರಾಹುಲ್ ಗಾಂಧಿ

    – ನರೇಂದ್ರ ಮೋದಿ ನಕಲಿ ಸ್ಟ್ರಾಂಗ್ ಮ್ಯಾನ್
    – ಚೀನಾ ದೊಡ್ಡ ಮಟ್ಟದಲ್ಲಿ ಯೋಚಿಸುತ್ತಿದೆ

    ನವದೆಹಲಿ: ಕಾಂಗ್ರೆಸ್ ನಾಯಕ ಹಾಗೂ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕೊರೊನಾ ವೈರಸ್ ನಿಯಂತ್ರಣ, ಚೀನಾ ಗಲಾಟೆ ಹಾಗೂ ಜಿಡಿಪಿ ಕುರಿತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದು, ಪ್ರಧಾನಿಗಳ ನಕಲಿ ಪ್ರಬಲ ನಾಯಕ ಎಂಬ ಇಮೇಜ್ ಭಾರತದ ಬಹುದೊಡ್ಡ ದೌರ್ಬಲ್ಯವಾಗಿದೆ ಎಂದು ಕಿಡಿಕಾರಿದ್ದಾರೆ.

    ವಿಡಿಯೋ ಟ್ವೀಟ್ ಮಾಡಿ, ಭಾರತ-ಚೀನಾ ಗಡಿ ವಿವಾದದ ಕುರಿತು ಮಾತನಾಡಿದ್ದಾರೆ. ಚೀನಾ ಜಗತ್ತನ್ನು ರೂಪಿಸಲು ಪ್ರಯತ್ನಿಸುತ್ತಿದೆ. ಚೀನಾ ಯುದ್ಧ ತಂತ್ರದ ಬಗ್ಗೆ ಯೋಜನೆ ರೂಪಿಸುತ್ತಿದೆ ಎಂಬುದರ ಕುರಿತು ಅವರ ಮಾತನಾಡಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರಲು ನಕಲಿ ಸ್ಟ್ರಾಂಗ್ ಮ್ಯಾನ್ ಎಂಬ ಚಿತ್ರಣವನ್ನು ರೂಪಿಸಿದಿದ್ದಾರೆ. ಇದೇ ಅವರ ದೊಡ್ಡ ಶಕ್ತಿಯಾಗಿದೆ, ಆಟದ ತಂತ್ರವಾಗಿದೆ ಎಂದು ಆರೋಪಿಸಿದ್ದಾರೆ.

    ಲಡಾಖ್‍ನಲ್ಲಿ ಚೀನಾ ಪಡೆ ಭಾರತದ ಭೂ ಪ್ರದೇಶವನ್ನು ಆಕ್ರಮಿಸಿಕೊಳ್ಳುತ್ತಿದೆ. ಆದರೆ ಇದು ಕೇವಲ ಗಡಿ ವಿಚಾರ ಮಾತ್ರವಲ್ಲ ಚೀನಾ ಜಗತ್ತನ್ನು ರೂಪಿಸಲು ಯತ್ನಿಸುತ್ತಿದೆ. ಇಂದು ಚೀನಾದವರು ನಮ್ಮ ಗಡಿ ಪ್ರದೇಶದಲ್ಲಿ ಮೊಕ್ಕಾಂ ಹೂಡಿರುವ ಕುರಿತು ಚಿಂತೆ ಕಾಡುತ್ತಿದೆ. ಕಾರ್ಯತಂತ್ರ ರೂಪಿಸದೆ ಚೀನಾ ಏನನ್ನೂ ಮಾಡುವುದಿಲ್ಲ. ವಿಶ್ವದ ಬಗ್ಗೆ ಈಗಾಗಲೇ ಅವರು ನಕ್ಷೆ ರೂಪಿಸಿದ್ದು, ಜಗತ್ತನ್ನು ರೂಪಿಸಲು ಹೊರಟಿದ್ದಾರೆ. ಹೀಗಾಗಿ ನೀವು ಚೀನಾದ ಬಗ್ಗೆ ಯೋಚಿಸುವ ಮೋದಲು ಅವರ ಯೋಚನಾ ಮಟ್ಟವನ್ನು ಅರಿಯಬೇಕಿದೆ ಎಂದು ಚೀನಾದ ಕಾರ್ಯತಂತ್ರ ಹಾಗೂ ಯುದ್ಧ ತಂತ್ರದ ಕುರಿತು ಮಾತನಾಡಿದ್ದಾರೆ.

    ಚೀನಾ ಗಲ್ವಾನ್ ವ್ಯಾಲಿ ಸೇರಿದಂತೆ ಲಡಾಖ್‍ನ ವಿವಿಧ ಪ್ರದೇಶಗಳಲ್ಲಿ ಎಲ್‍ಎಸಿ ಉದ್ದಕ್ಕೂ ತನ್ನ ಸೇನೆಯನ್ನು ಶಸ್ತ್ರಸಜ್ಜಿತವಾಗಿರಿಸಿದೆ. ಅಲ್ಲದೆ ನಾವು ಹೈವೇ ನಿರ್ಮಾಣ ಮಾಡಿದ್ದಕ್ಕೆ ಚೀನಾ ವಿಚಲಿತವಾಗಿದೆ. ಹೀಗಾಗಿ ನಮ್ಮ ಹೆದ್ದಾರಿಯ ಮೇಲೆ ಹಿಡಿತ ಸಾಧಿಸಬಹುದು. ಚೀನಾ ಏನಾದರೂ ದೊಡ್ಡ ಮಟ್ಟದಲ್ಲಿ ಯೋಚಿಸಿದರೆ. ಪಾಕಿಸ್ತಾನದೊಂದಿಗೆ ಸೇರಿಕೊಂಡು ಕಾಶ್ಮೀರದಲ್ಲಿ ಕಿತಾಪತಿ ನಡೆಸಿರೆ, ಇದು ಕೇವಲ ಗಡಿ ವಿಚಾರವಲ್ಲ. ಭಾರತದ ಪ್ರಧಾನಿ ಮೇಲೆ ಒತ್ತಡ ಹೇರುವ ತಂತ್ರವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

    ಚೀನಾ ದಾಳಿ ನಡೆಸುವ ನೈಜ ತಂತ್ರ ಇದೇ ಆಗಿದ್ದು, ನರೇಂದ್ರ ಮೋದಿ ನಾವು ಹೇಳಿದ ರೀತಿ ಮಾಡದಿದ್ದರೆ, ಬಲಶಾಲಿ ನಾಯಕ ಮೋದಿಯವರ ಐಡಿಯಾಗಳನ್ನು ನಾವು ನಾಶಪಡಿಸುತ್ತೇವೆ ಎಂದು ಚೀನಾ ಎಚ್ಚರಿಸಿದೆ ಎಂದು ರಾಹುಲ್ ಗಾಂಧಿ ವಿಡಿಯೋದಲ್ಲಿ ಹೇಳಿದ್ದಾರೆ.