Tag: book

  • ಚುನಾವಣೆ ಸೋತ ಮೇಲೆ ಪುಸ್ತಕ ಪ್ರೇಮಿ ಆಗಿದ್ದಾರೆ ಮಾಜಿ ಸಿಎಂ ಎಚ್‍ಡಿಕೆ

    ಚುನಾವಣೆ ಸೋತ ಮೇಲೆ ಪುಸ್ತಕ ಪ್ರೇಮಿ ಆಗಿದ್ದಾರೆ ಮಾಜಿ ಸಿಎಂ ಎಚ್‍ಡಿಕೆ

    ಬೆಂಗಳೂರು: ಜೀವನದಲ್ಲಿ ಒಂದೊಂದು ಸೋಲು ಒಂದೊಂದು ಪಾಠವನ್ನು ಕಲಿಸುತ್ತೆ. ಇಂತಹದ್ದೆ ಪಾಠವನ್ನ ಮಾಜಿ ಸಿಎಂ ಕುಮಾರಸ್ವಾಮಿ ಅವ್ರಿಗೂ ಚುನಾವಣೆ ಸೋಲು ಕಲಿಸಿದೆ. ಚುನಾವಣೆ ಸೋಲಿನ ಬಳಿಕ ರಾಜಕೀಯದಿಂದ ದೂರವೇ ಇರುವ ಕುಮಾರಸ್ವಾಮಿ ಹೊಸ ಹವ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಸದ್ಯಕ್ಕಂತು ರಾಜಕೀಯವಾಗಿ ಮಾಡಲು ಏನು ಕೆಲಸವಿಲ್ಲ. ಹೀಗಾಗಿ ಹೆಚ್ಚು ಸಮಯ ಕುಮಾರಸ್ವಾಮಿ ಅವರಿಗೆ ಸಿಗುತ್ತಿದೆಯಂತೆ. ಈ ಸಮಯವನ್ನ ಪುಸ್ತಕ ಓದೋಕೆ ಕಳೆಯುತ್ತಿದ್ದಾರಂತೆ ಮಾಜಿ ಸಿಎಂ ಕುಮಾರಸ್ವಾಮಿ.

    ಪುಸ್ತಕ ಓದೋ ಹವ್ಯಾಸ ಪ್ರಾರಂಭ ಮಾಡಿಕೊಂಡಿರೋ ಬಗ್ಗೆ ಸ್ವತಃ ಕುಮಾರಸ್ವಾಮಿ ಅವ್ರೇ ಹೇಳಿದ್ದಾರೆ. ಇಂದು ಜೆಡಿಎಸ್ ಕಚೇರಿಯಲ್ಲಿ ಪೌರತ್ವ ಕಾಯ್ದೆ ವಿರುದ್ಧ ಸುದ್ದಿಗೋಷ್ಠಿ ನಡೆಸಿದ್ರು. ಈ ವೇಳೆ ‘ಇಂಡಿಯಾ ಆಫ್ಟರ್ ಇಂಡಿಪೆಂಡೆನ್ಸ್’ ಪುಸ್ತಕವನ್ನು ಕುಮಾರಸ್ವಾಮಿ ತಮ್ಮ ಜೊತೆಗೆ ತಂದಿದ್ರು. ಪೌರತ್ವ ಕಾಯ್ದೆ ವೇಳೆ ವಿವರಣೆ ನೀಡುವಾಗ ಈ ಪುಸ್ತಕದ ಅಂಶಗಳನ್ನು ಸ್ವತಃ ಕುಮಾರಸ್ವಾಮಿ ಉಲ್ಲೇಖ ಮಾಡಿದ್ರು. ಸುದ್ದಿಗೋಷ್ಠಿ ಮಧ್ಯೆ ನಾನು ಪುಸ್ತಕ ಓದೋಕೆ ಪ್ರಾರಂಭ ಮಾಡಿದ್ದೇನೆ ಅಂತ ಎಚ್ಡಿಕೆ ಹೇಳಿದ್ರು.

    ಈಗ ರಾಜಕೀಯವಾಗಿ ನನಗೇನು ಮಾಡೋಕೆ ಕೆಲಸ ಇಲ್ಲ. ಹೀಗಾಗಿ ಹೆಚ್ಚು ಸಮಯ ಸಿಗುತ್ತಿದೆ. ಈ ಸಮಯವನ್ನ ಇತಿಹಾಸ, ಜಗತ್ತು, ವಿಶೇಷ ಲೇಖನ ಸೇರಿದಂತೆ ಹೆಚ್ಚು ಹೆಚ್ಚು ಪುಸ್ತಕ ಓದಲು ಮೀಸಲಿಟ್ಟಿದ್ದೇನೆ ಅಂತ ಕುಮಾರಸ್ವಾಮಿ ತಿಳಿಸಿದ್ರು. ದಾಖಲೆಗಳನ್ನ ಹೆಕ್ಕಿ ತೆಗೆಯೋ ಚಾಲಕಿ ಕುಮಾರಸ್ವಾಮಿ ಅವ್ರಿಗೆ ಮೊದಲಿನಿಂದಲೂ ಇದೆ. ದಾಖಲೆಗಳ ಅಧ್ಯಯನ ಮಾಡೋದು ಕುಮಾರಸ್ವಾಮಿ ಅವ್ರಿಗೆ ಹೆಚ್ಚು ಆಸಕ್ತಿ. ಆದ್ರೆ ಈಗ ಸರ್ಕಾರದ ದಾಖಲೆಗಳನ್ನು ಬಿಟ್ಟು ಇತಿಹಾಸದ ಪುಸ್ತಕಗಳ ಅಧ್ಯಾಯನದ ಮೂಲಕ ಜ್ಞಾನಾರ್ಜನೆಗೆ ಕುಮಾರಸ್ವಾಮಿ ಮುಂದಾಗಿದ್ದಾರೆ.

  • ಮುಂದಿನ ವರ್ಷದಿಂದ ಬ್ಯಾರಿ ಭಾಷೆ ತೃತೀಯ ಭಾಷೆಯಾಗಿ ಪಠ್ಯ ಪುಸ್ತಕಕ್ಕೆ

    ಮುಂದಿನ ವರ್ಷದಿಂದ ಬ್ಯಾರಿ ಭಾಷೆ ತೃತೀಯ ಭಾಷೆಯಾಗಿ ಪಠ್ಯ ಪುಸ್ತಕಕ್ಕೆ

    ಮಂಗಳೂರು: ರಾಜ್ಯದ ಮುಸ್ಲಿಂ ಸಮುದಾಯದ ಮಾತೃ ಭಾಷೆಯಾದ ಬ್ಯಾರಿ ಭಾಷೆ ಇನ್ನು ಪಠ್ಯಪುಸ್ತಕದಲ್ಲಿ ಅಚ್ಚಾಗಲಿದ್ದು, ಐಚ್ಛಿಕ ತೃತೀಯ ಭಾಷೆಯಾಗಲಿದೆ.

    ಮುಂದಿನ ಶೈಕ್ಷಣಿಕ ವರ್ಷ(2020-21)ದಿಂದ ಆರನೇ ತರಗತಿಯಿಂದ ಪಿಯುಸಿ ತನಕ ತೃತೀಯ ಭಾಷೆಯಾಗಿ ಬ್ಯಾರಿ ಭಾಷೆಯನ್ನು ಅನುಮೋದಿಸಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ತಿಳಿಸಿದ್ದಾರೆ.

    ಈಗಾಗಲೇ 12 ತಜ್ಞರನ್ನು ಒಳಗೊಂಡ ಪಠ್ಯ ಪುಸ್ತಕ ರಚನಾ ಸಮಿತಿಯನ್ನು ರಚಿಸಲಾಗಿದೆ. ಬ್ಯಾರಿ ಭಾಷೆಯ ಅಸ್ಮಿತೆ ದೃಷ್ಟಿಯಿಂದ ಶಾಲೆಗಳಲ್ಲಿ ಪಠ್ಯ ಆರಂಭಗೊಳಿಸೋದು ಅನಿವಾರ್ಯ. ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹಾಗೂ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೊಂದಿಗೆ ಚರ್ಚೆ ನಡೆಸಿ ರಚನಾ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಈ ಪಠ್ಯ ಪುಸ್ತಕ ವಿದ್ಯಾರ್ಥಿಗಳಿಗೆ ಸಿಗಲಿದೆ ಎಂದರು.

    ವಿದ್ಯಾರ್ಥಿಗಳು ತೃತೀಯ ಭಾಷೆಯನ್ನು ಕಡ್ಡಾಯವಾಗಿ ಕಲಿಯಬೇಕಿರೋದ್ರಿಂದ ಮುಸ್ಲಿಂ ವಿದ್ಯಾರ್ಥಿಗಳಿಗೆ ಐಚ್ಛಿಕ ವಿಷಯವಾಗಿ ಬ್ಯಾರಿ ಭಾಷೆಯನ್ನೇ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ರಾಜ್ಯದ ಎಲ್ಲಾ ಮುಸ್ಲಿಂ ವಿದ್ಯಾರ್ಥಿಗಳಿಗೆ ಇದು ಸಹಕಾರಿಯಾಗಲಿದೆ .

  • ಔರಂಗಜೇಬ್ ಹೆಸರು, ಪಠ್ಯವನ್ನು ತೆಗೆಯಿರಿ- ಶಿರೋಮಣಿ ಅಕಾಲಿದಳ ಒತ್ತಾಯ

    ಔರಂಗಜೇಬ್ ಹೆಸರು, ಪಠ್ಯವನ್ನು ತೆಗೆಯಿರಿ- ಶಿರೋಮಣಿ ಅಕಾಲಿದಳ ಒತ್ತಾಯ

    ನವದೆಹಲಿ: ರಾಜ್ಯದಲ್ಲಿ ಬಿಜೆಪಿ ಟಿಪ್ಪು ಪಠ್ಯವನ್ನು ತೆಗೆಯುವಂತೆ ಒತ್ತಾಯಿಸಿದ ನಂತರ ಇದೀಗ ಮೊಘಲ್ ದೊರೆ ಔರಂಗಜೇಬನ ಹೆಸರನ್ನು ಸಹ ತೆಗೆದು ಹಾಕಬೇಕು ಎಂದು ಶಿರೋಮಣಿ ಅಕಾಲಿ ದಳ ಒತ್ತಾಯಿಸಿದೆ.

    ದೆಹಲಿಯ ಔರಂಗಜೇಬ್ ರಸ್ತೆ ಎಂಬ ಹೆಸರಿನ ನಾಮಫಲಕಕ್ಕೆ ಶಿರೋಮಣಿ ಅಕಾಲಿದಳ ಕಪ್ಪು ಬಣ್ಣ ಬಳಿಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ. ಮೊಘಲ್ ದೊರೆ ಔರಂಗಜೇಬ್ ಹೆಸರಿನ ರಸ್ತೆಯ ನಾಮಫಲಕಗಳು ಹಾಗೂ ವಿದ್ಯಾರ್ಥಿಗಳ ಇತಿಹಾಸದ ಪುಸ್ತಕಗಳಲ್ಲಿನ ಔರಂಗಜೇಬನ ಪಠ್ಯವನ್ನು ತೆಗೆಯಬೇಕು ಎಂದು ಶಿರೋಮಣಿ ಅಕಾಲಿ ದಳದ ಶಾಸಕ ಮಂಜಿಂದರ್ ಸಿಂಗ್ ಸಿರ್ಸಾ ಹಾಗೂ ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ(ಡಿಎಸ್‍ಜಿಎಂಸಿ) ಸದಸ್ಯರು ಒತ್ತಾಯಿಸಿದ್ದಾರೆ. ಅಲ್ಲದೆ ಔರಂಗಜೇಬ್ ಹೆಸರಿನ ರಸ್ತೆಗಳ ನಾಮಫಲಕಕ್ಕೆ ಕಪ್ಪು ಬಣ್ಣ ಬಳಿದಿದ್ದಾರೆ.

    ಔರಂಗಜೇಬ್ ಒಬ್ಬ ಹಂತಕ, ಅವನ ಒತ್ತಾಯಪೂರ್ವಕ ಮತಾಂತರದಿಂದ ಗುರು ತೇಜ್ ಬಹದ್ದೂರ್ ಅವರು ತಮ್ಮ ಪ್ರಾಣವನ್ನೇ ತ್ಯಜಿಸಿದರು. ಹೀಗಾಗಿ ನಾವು ರಸ್ತೆಗಳಿಗೆ ಔರಂಗಜೇಬನ ಹೆಸರಿಡುವುದು ಹಾಗೂ ವಿದ್ಯಾರ್ಥಿಗಳ ಇತಿಹಾಸ ಪುಸ್ತಕದಲ್ಲಿ ಆತನ ಪಠ್ಯ ಇರುವುದನ್ನು ವಿರೋಧಿಸುತ್ತೇವೆ. ಆತ ಒಬ್ಬ ಹಂತಕ, ಆತನ ಹೆಸರನ್ನು ರಸ್ತೆಗಳಿಗೆ ಇಡುವುದರಿಂದ ನಮ್ಮ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕೆಲ ದಿನಗಳ ಹಿಂದೆ ಬೆಂಗಾಳಿ ಮಾರುಕಟ್ಟೆಯ ಬಾಬರ್ ರಸ್ತೆಯ ಹೆಸರಿಗೆ ಹಿಂದೂ ಸೇನೆಯವರು ಕಪ್ಪು ಬಣ್ಣ ಬಳಿದಿದ್ದರು. ರಸ್ತೆಯ ಹೆಸರನ್ನು ಬದಲಿಸುವಂತೆ ಸಂಘಟನೆಯು ಒತ್ತಾಯಿಸಿತ್ತು.

    ದಕ್ಷಿಣ ಭಾರತದ ಕರ್ನಾಟಕದಲ್ಲಿ ಟಿಪ್ಪು ವಿರುದ್ಧ ಹೋರಾಟ ನಡೆಯುತ್ತಿದ್ದರೆ, ಉತ್ತರ ಭಾರತದಲ್ಲಿ ಔರಂಗಜೇಬನ ಕುರಿತು ಅಸಮಾಧಾನ ಎದ್ದಿದೆ. ಟಿಪ್ಪು ಜಯಂತಿಯನ್ನು ಸರ್ಕಾರ ನಿಲ್ಲಿಸಿದ್ದು, ಆತನ ಬಗ್ಗೆ ಇರುವ ಪಠ್ಯವನ್ನೂ ಪುಸ್ತಕದಿಂದ ತೆಗೆಯಬೇಕು ಎಂದು ಬಿಜೆಪಿ ಸರ್ಕಾರ ಚಿಂತನೆ ನಡೆಸಿದೆ.

  • ನಾನೇ ಖುದ್ದು ಭೇಟಿಯಾಗಿ, ಸಿದ್ದರಾಮಯ್ಯಗೆ ಸಾವರ್ಕರ್ ಪುಸ್ತಕ ನೀಡುತ್ತೇನೆ- ಸಿಟಿ ರವಿ

    ನಾನೇ ಖುದ್ದು ಭೇಟಿಯಾಗಿ, ಸಿದ್ದರಾಮಯ್ಯಗೆ ಸಾವರ್ಕರ್ ಪುಸ್ತಕ ನೀಡುತ್ತೇನೆ- ಸಿಟಿ ರವಿ

    ಧಾರವಾಡ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆಯ ಸಚಿವ ಸಿ.ಟಿ.ರವಿ ಮಧ್ಯೆ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವ ಕುರಿತು ವಾಗ್ವಾದ ಮುಂದುವರಿದಿದೆ. ಸಿದ್ದರಾಮಯ್ಯನವರಿಗೆ ಪುಸ್ತಕ ತಲುಪಿಸಲು ಸಾಧ್ಯವಾಗಿಲ್ಲ, ನಾನೇ ಖುದ್ದಾಗಿ ತೆರಳಿ ಪುಸ್ತಕ ನೀಡುತ್ತೇನೆ ಸಿ.ಟಿ.ರವಿ ತಿಳಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವರ್ಕರ್ ಪುಸ್ತಕವನ್ನು ಸಿದ್ದರಾಮಯ್ಯನವರಿಗೆ ತಲುಪಿಸುತ್ತೇನೆಂದು ಹೇಳಿದ್ದೆ. ಕೆಲಸದ ಒತ್ತಡದಿಂದ ಪುಸ್ತಕ ತಲುಪಿಸಲು ಸಾಧ್ಯವಾಗಿಲ್ಲ. ಶೀಘ್ರದಲ್ಲೇ ಸಿದ್ದರಾಮಯ್ಯನವರನ್ನು ಖುದ್ದು ಭೇಟಿಯಾಗಿ ಪುಸ್ತಕ ನೀಡಿ, ಮಾತನಾಡುತ್ತೇನೆ ಎಂದರು.

    ಸಿದ್ದರಾಮಯ್ಯನವರು ಸಾವರ್ಕರ್ ಅವರ ಆತ್ಮಾಹುತಿ ಪುಸ್ತಕವನ್ನು ಓದಲಿ, ಅಭಿನವ ಭಾರತ ಸಂಘಟನೆ ಯಾಕೆ ಕಟ್ಟಿದರು ತಿಳಿದು ನಂತರ ಅವರ ಬಗ್ಗೆ ಮಾತನಾಡಲಿ. ಅಧಿಕಾರ ಹಿಡಿಯುತ್ತಿದ್ದ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮ ಕುಟುಂಬವನ್ನೇ ಸಾವರ್ಕರ್ ಅರ್ಪಿಸಿದರು. ಸತ್ಯ ಸಂಗತಿ ತಿಳಿದರೆ ಸಾವರ್ಕರ್ ಗೆ ಅಪಮಾನ ಮಾಡುವ ಕೆಲಸವಾಗುವುದಿಲ್ಲ. ಇದು ಸಾವರ್ಕರ್ ಗೆ  ಮಾಡುವ ಅಪಮಾನ ಅಲ್ಲ, ಅವರಷ್ಟಕ್ಕೆ ಅವರೇ ಮಾಡಿಕೊಂಡ ಅಪಮಾನ ಎಂದರು.

    ಸಾವರ್ಕರ್ ಬಗ್ಗೆ ಸತ್ಯ ಸಂಗತಿ ತಿಳಿದರೆ ಭಾರತ ಮಾತೆಗೆ ಅವಮಾನ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡುವುದಿಲ್ಲ. ಇದು ಅವರಿಗೆ ಮಾಡುವ ಅಪಮಾನ ಅಲ್ಲ. ಇಂಥವರ ಬಗ್ಗೆ ಮಾತನಾಡಿದರೆ ಅವರ ಮುಖಕ್ಕೆ ಅವರೇ ಉಗಿದುಕೊಂಡಂತೆ ಎಂದು ಕಿಡಿಕಾರಿದರು.

    ಇನ್ನೊಂದು ವಿಚಾರವೆಂದರೆ ನಾಥೂರಾಮ್ ಗೋಡ್ಸೆ ಗಾಂಧಿ ದೇಹಕ್ಕೆ ಮಾತ್ರ ಗುಂಡು ಹಾಕಿದ. ಆದರೆ ಮಹಾತ್ಮ ಗಾಂಧಿ ತತ್ವಾದರ್ಶಗಳನ್ನು ಜನಮಾನಸದಿಂದ ದೂರ ಮಾಡಿದವರು ಯಾರು ಎಂದು ಚರ್ಚೆಯಾಗಬೇಕು. ಗಾಂಧೀಜಿಯ ಪಕ್ಷದವರು ನಾವು ಎಂದು ಹೇಳುತ್ತಾರೆ. ಆದರೆ ನಿಜವಾಗಿಯೂ ಇವರು ಗಾಂಧೀಜಿಯ ತತ್ವದ ವಾರಸುದಾರರಾಗಿದ್ದಾರಾ ಎಂದು ಪ್ರಶ್ನಿಸಿದ್ದಾರೆ.

    ಮಹಾರಾಷ್ಟ್ರ, ಹರಿಯಾಣ ಚುನಾವಣಾ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ ಅವರು, ಸೋಲುತ್ತೇವೆ ಎಂದು ಗೊತ್ತಾಗಿಯೇ ಮುಂಚಿತವಾಗಿಯೇ ಇವಿಎಂ ಮೇಲೆ ಬೆರಳು ಮಾಡುತ್ತಿದ್ದಾರೆ. ಅವರು ಗೆದ್ದರೆ ಜನಾದೇಶ, ಬಿಜೆಪಿ ಗೆದ್ದರೆ ಇವಿಎಂ ದೋಷ ಎನ್ನುತ್ತಾರೆ. ಇವರು ಸೋತ ತಕ್ಷಣ ಇವಿಎಂನಲ್ಲಿ ಲೋಪ ಎನ್ನುತ್ತಾರೆ. ಹಿಂದೆ ಗಾಂಧೀಜಿ ಕಾಂಗ್ರೆಸ್ ವಿಸರ್ಜನೆ ಮಾಡಿ ಅಂದಿದ್ದರು. ಅದನ್ನು ಈಗ ಜನರೇ ಮಾಡುತ್ತಿದ್ದಾರೆ ಎಂದು ಹೇಳಿ ತಿರುಗೇಟು ನೀಡಿದರು.

  • ಸರ್ಕಾರಿ ಶಾಲೆಯಲ್ಲಿ ಮತಾಂತರ ಆರೋಪ – ಕ್ರಮಕೈಗೊಳ್ಳಲು ಹಿಂದೂ ಸಂಘಟನೆಗಳ ಆಗ್ರಹ

    ಸರ್ಕಾರಿ ಶಾಲೆಯಲ್ಲಿ ಮತಾಂತರ ಆರೋಪ – ಕ್ರಮಕೈಗೊಳ್ಳಲು ಹಿಂದೂ ಸಂಘಟನೆಗಳ ಆಗ್ರಹ

    ಸಾಂದರ್ಭಿಕ ಚಿತ್ರ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಿಷನರಿಗಳು ಸರ್ಕಾರಿ ಶಾಲೆಗಳ ಮೂಲಕ ಮತಾಂತರದ ಹುನ್ನಾರ ನಡೆಸಿವೆ ಎಂದು ಜಿಲ್ಲಾ ಹಿಂದೂ ಪರ ಸಂಘಟನೆಗಳು ಆರೋಪ ಮಾಡಿವೆ.

    ಜಿಲ್ಲೆಯ ಹಲವು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಅಂಚೆಯ ಮೂಲಕ ಕೆಲವು ವಿವಾದಾತ್ಮಕ ಪುಸ್ತಕಗಳು ತಲುಪಿದ್ದು, ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹಿಂದೂ ಪರ ಸಂಘಟನೆಗಳ ಮುಖಂಡರು, ಕೊಡಗಿನಲ್ಲಿ ಧರ್ಮ ಪ್ರಚಾರ ಮಾಡಲು ಈ ರೀತಿ ಪುಸ್ತಕಗಳನ್ನು ಸರ್ಕಾರಿ ಶಾಲೆಗಳಿಗೆ ನೀಡಲಾಗಿದೆ. ಜಿಲ್ಲಾಡಳಿದ ಗಮನಕ್ಕೆ ಬಾರದೇ ಪುಸ್ತಕ ವಿತರಣೆ ಆಗಿದ್ದು, ಇದರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಜಿಲ್ಲೆಯ ನಾಲ್ಕೇರಿ, ಬಾಳೆಲೆ, ಬಿರುನಾಣಿ, ಶೆಟ್ಟಿಗೇರಿ, ಕುರ್ಚಿ, ಕಿರಗೂರು, ಬಾಡಗ, ಕಾನ್‍ಬೈಲ್, ಶ್ರೀಮಂಗಲ ಸೇರಿದಂತೆ ಜಿಲ್ಲೆಯ ಹಲವು ಸರ್ಕಾರಿ ಶಾಲೆಗಳಿಗೆ ಕನ್ನಡ ಭಾಷೆಯಲ್ಲಿ ಸತ್ಯಮೇವ ಜಯತೆ, ಯೋಹಾನನು ಬರೆದ ಸುವಾರ್ತೆ ಹಾಗೂ ಕೊಡವ ಭಾಷೆಯಲ್ಲಿ ತರ್ಜುಮೆಗೊಂಡಿರುವ ಬೈಬಲ್ ದೇವಡ ಪುದಿಯ ಒಪ್ಪಂದ ಪುಸ್ತಕಗಳನ್ನು ಅಂಚೆ ಮೂಲಕ ಶಿವಮೊಗ್ಗದಿಂದ ಸಂಸ್ಥೆಯೊಂದು ತಲುಪಿಸಿದೆ. ಈ ಹಿನ್ನಲೆಯಲ್ಲಿ ಹಿಂದೂ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

    ಸರ್ಕಾರದ ಆದೇಶವನ್ನು ದುರ್ಬಳಕ್ಕೆ ಮಾಡಿಕೊಂಡು ಕೇವಲ ಕ್ರಿಶ್ಚಿಯನ್ ಧರ್ಮಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಸರ್ಕಾರಿ ಶಾಲೆಗಳ ಗ್ರಂಥಾಲಯಗಳಿಗೆ ಆಂಚೆ ಮೂಲಕ ಕಳುಹಿಸಿಕೊಟ್ಟಿರುವುದರ ಹಿಂದೆ ವ್ಯವಸ್ಥಿತ ಮತಾಂತರಿಗಳ ಜಾಲವಿದೆ. ಈ ಕೊಡಲೇ ಪುಸ್ತಕಗಳನ್ನು ಹಿಂಪಡೆದು ಸೂಕ್ತ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಜರುಗಿಸಬೇಕು ಎಂದು ಹಿಂದೂಪರ ಸಂಘಟನೆಯ ಪ್ರಮುಖರು ಒತ್ತಾಯಿಸಿದ್ದಾರೆ.

  • ಈ ಭಾನುವಾರ ಮಾಹಿತಿ ಸಾಹಿತ್ಯದ ಎರಡು ಕೃತಿ ಲೋಕಾರ್ಪಣೆ

    ಈ ಭಾನುವಾರ ಮಾಹಿತಿ ಸಾಹಿತ್ಯದ ಎರಡು ಕೃತಿ ಲೋಕಾರ್ಪಣೆ

    – ಸಾಹಿತ್ಯ ಪರಿಷತ್ತಿನಲ್ಲಿ ಟೆಕ್ ಲೋಕ ಹಾಗೂ ವಿತ್ತಜಗತ್ತಿನ ಅನಾವರಣ

    ಬೆಂಗಳೂರು: ದೈನಂದಿನ ಬದುಕಿನ ಎಲ್ಲ ಕ್ಷೇತ್ರಗಳ ಮಾಹಿತಿಯೂ ಮಾತೃಭಾಷೆಯಲ್ಲೇ ಸಿಗಬೇಕಿರುವುದು ಇಂದಿನ ಪ್ರಮುಖ ಅಗತ್ಯಗಳಲ್ಲೊಂದು. ಈ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮವೊಂದನ್ನು ಬರುವ ಭಾನುವಾರ (ಜುಲೈ 14) ಬೆಳಿಗ್ಗೆ 10 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

    ಇಜ್ಞಾನ ಟ್ರಸ್ಟ್, ಮೂಕನಹಳ್ಳಿ ಪ್ರತಿಷ್ಠಾನ ಹಾಗೂ ಸಮನ್ವಿತ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಟಿ. ಜಿ. ಶ್ರೀನಿಧಿ ಅವರ ‘ಟೆಕ್ ಲೋಕದ ಹತ್ತು ಹೊಸ ಮುಖಗಳು’ ಹಾಗೂ ರಂಗಸ್ವಾಮಿ ಮೂಕನಹಳ್ಳಿಯವರ ‘ವಿತ್ತ ಜಗತ್ತು: ತಿಳಿಯಬೇಕಾದ ವಿಷಯ ಹಲವು ಹತ್ತು’ ಕೃತಿಗಳು ಲೋಕಾರ್ಪಣೆಯಾಗಲಿವೆ. ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್ ಹಾಗೂ ಸಾಹಿತಿ ವಸುಧೇಂದ್ರ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

    ‘ಟೆಕ್ ಲೋಕ…’ ಕೃತಿ ಐಟಿ ಕ್ಷೇತ್ರದ ಇತ್ತೀಚಿನ ಬೆಳವಣಿಗೆಗಳನ್ನು (ಅನಲಿಟಿಕ್ಸ್, ಕ್ಲೌಡ್, ಎಐ, ಐಓಟಿ, 5ಜಿ, ಬ್ಲಾಕ್‍ಚೈನ್, ರೋಬಾಟ್‍ಗಳು, ಸೆನ್ಸರ್ ತಂತ್ರಜ್ಞಾನ ಇತ್ಯಾದಿ) ಪರಿಚಯಿಸುತ್ತದೆ. ಅದೇರೀತಿ ಬಿಜಿನೆಸ್ ವ್ಯಾಲ್ಯುಯೇಶನ್, ಶೇರ್ ಬೈಬ್ಯಾಕ್, ಎನ್‍ಪಿಎ, ಹಣದುಬ್ಬರ ಮುಂತಾದ ವಿಷಯಗಳನ್ನೆಲ್ಲ ‘ವಿತ್ತಜಗತ್ತು…’ ಸರಳವಾಗಿ ವಿವರಿಸುತ್ತದೆ.

    ಈ ಎರಡು ಪುಸ್ತಕಗಳು ಒಟ್ಟಿಗೆ ಬಿಡುಗಡೆ ಆಗುತ್ತಿರುವ ಸಂದರ್ಭದಲ್ಲಿ ಇಂತಹ ಮಾಹಿತಿಯ ಮಹತ್ವದ ಬಗ್ಗೆ, ಅದು ಕನ್ನಡದಲ್ಲಿ ಹೆಚ್ಚುಹೆಚ್ಚು ಬರಬೇಕಿರುವ ಅಗತ್ಯದ ಬಗ್ಗೆ ವಸುಧೇಂದ್ರ ಮಾತನಾಡಲಿದ್ದಾರೆ.

  • ವಿಶ್ವನಾಥ್ ಬರೆದ ಪುಸ್ತಕದಲ್ಲಿ ದಾಖಲಿಸಿದ್ದ ಸಾಲುಗಳು ವೈರಲ್

    ವಿಶ್ವನಾಥ್ ಬರೆದ ಪುಸ್ತಕದಲ್ಲಿ ದಾಖಲಿಸಿದ್ದ ಸಾಲುಗಳು ವೈರಲ್

    ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಳ್ಳಿಹಕ್ಕಿ ವಿಶ್ವನಾಥ್ ಮುಂಬೈನಲ್ಲಿ ಹೋಗಿದ್ದಾರೆ. ಈ ಹೊತ್ತಿನಲ್ಲಿ ವಿಶ್ವನಾಥ್ ಅವರು ಪಕ್ಷಾಂತರಕ್ಕೆ ಸಂಬಂಧಿಸಿದಂತೆ `ಮಲ್ಲಿಗೆಯ ಮಾತು’ ಎಂಬ ಪುಸ್ತಕವೊಂದರಲ್ಲಿ ದಾಖಲಿಸಿದ್ದ ಸಾಲುಗಳು ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.

    `ತಾವು ಹುಟ್ಟಿ ಬೆಳೆದ ಮನೆಯನ್ನು ಧಿಕ್ಕರಿಸಿ, ಶತ್ರುಗಳ ಮನೆಗೆ ಆಶ್ರಯ ಬೇಡಿ ಹೋಗುವವರನ್ನು ಏನೆನ್ನಬೇಕು?. ಪಕ್ಷಾಂತರಿಗಳು ಬೇಕಾದಷ್ಟು ಕಾರಣಗಳನ್ನು ತಮ್ಮ ಸಮರ್ಥನೆಗೆ ಕೊಡುತ್ತಾರೆ. ನಮ್ಮವರೇ ನನಗೆ ಮೋಸ ಮಾಡಿದರು. ಸ್ಥಾನಮಾನ ಕೊಡಲಿಲ್ಲ. ನನ್ನ ಜಾತಿಯಲ್ಲಿ ಕಡೆಗಣಿಸಿದ್ರು ಇತ್ಯಾದಿ. ಅವರು ಕೊಡುವ ಕಾರಣಗಳು ಎಷ್ಟು ಪೊಳ್ಳು ಎನ್ನುವುದು ಸ್ವತಃ ಅವರಿಗೆ ಗೊತ್ತಿರುತ್ತದೆ. ಅವರು ಹೊಸ ಹುಲ್ಲುಗಾವಲಿನಲ್ಲಿ ಸಮೃದ್ಧವಾಗಿ ಮೇಯಲು ಹೊರಟಿರುತ್ತಾರೆ ಅಷ್ಟೇ’ ಎಂದು ವಿಶ್ವನಾಥ್ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

    ವಿಶ್ವನಾಥ್ ಸೇರಿದಂತೆ ಹಲವು ಶಾಸಕರು ರಾಜೀನಾಮೆ ನೀಡಿ ಮುಂಬೈಗೆ ತೆರಳಿದ್ದರು. ಬಳಿಕ ಅತೃಪ್ತ ಶಾಸಕರು ಖುದ್ದಾಗಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ರಾಜೀನಾಮೆ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಶಾಸಕರು ವಿಶೇಷ ವಿಮಾನದಲ್ಲಿ ಗುರುವಾರ ಸಂಜೆ 5ಕ್ಕೆ ಎಚ್‍ಎಎಲ್ ತಲುಪಿದ್ದರು.

    ಬಳಿಕ ಅವರು ಆದಷ್ಟು ಬೇಗ ಸ್ಪೀಕರ್ ಕಚೇರಿ ತಲುಪಬೇಕೆಂದು ಎಚ್‍ಎಎಲ್‍ನಿಂದ ವಿಧಾನಸೌಧದವೆರಗೂ ಜೀರೋ ಟ್ರಾಫಿಕ್ ಮಾಡಿಸಿಕೊಂಡು ಬಂದರು. ಕಚೇರಿಗೆ ಓಡೋಡಿ ಬಂದು ತಮ್ಮ ರಾಜೀನಾಮೆ ಪತ್ರವನ್ನು ಸ್ಪೀಕರ್ ಕೈಗಿತ್ತರು. ನಂತರ ಸ್ಪೀಕರ್ ಅವರು ಸುಮಾರು 1 ಗಂಟೆಗಳ ಕಾಲ ಅತೃಪ್ತರನ್ನು ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ ಬಳಿಕ ಅತೃಪ್ತರು ಮುಂಬೈಗೆ ತೆರಳಿದ್ದಾರೆ.

  • 135 ಪುಸ್ತಕ ಬರೆದು, 4 ವಿಶ್ವದಾಖಲೆ ನಿರ್ಮಿಸಿದ 13ರ ಪೋರ

    135 ಪುಸ್ತಕ ಬರೆದು, 4 ವಿಶ್ವದಾಖಲೆ ನಿರ್ಮಿಸಿದ 13ರ ಪೋರ

    ಅಯೋಧ್ಯೆ: ಉತ್ತರ ಪ್ರದೇಶದ 13 ವರ್ಷದ ಬಾಲಕನೊಬ್ಬ ಧರ್ಮ ಹಾಗೂ ಗಣ್ಯರ ಜೀವನಚರಿತ್ರೆ ಕುರಿತು ಸುಮಾರು 135 ಪುಸ್ತಕಗಳನ್ನು ಬರೆದು, 4 ವಿಶ್ವದಾಖಲೆಗಳನ್ನು ಮಾಡಿ ಚಿಕ್ಕ ವಯಸ್ಸಿನಲ್ಲೇ ಅದ್ವಿತೀಯ ಸಾಧನೆಗೈದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ.

    ಈ ಅಪರೂಪದ ಸಾಧನೆಗೈದ ಬಾಲಕನ ಹೆಸರು ಮೃಗೇಂದ್ರ ರಾಜ್. ಈತ ತನ್ನ 6ನೇ ವಯಸ್ಸಿನಲ್ಲೇ ಪುಸ್ತಕ ಬರೆಯುವ ಹವ್ಯಾಸ ಆರಂಭಿಸಿದ್ದ ಈತ ಮೊದಲು ಕವನ ಸಂಕಲನವನ್ನು ಬರೆದಿದ್ದನು. ಆ ನಂತರ ಕಾಲ ಕಳೆಯುತ್ತಿದ್ದಂತೆ ಬಾಲಕನ ಜೊತೆ ಆತನ ಪುಸ್ತಕ ಬರೆಯುವ ಆಸಕ್ತಿ ಕೂಡ ಹೆಚ್ಚಾಗುತ್ತಾ ಬಂತು. ಈವರೆಗೆ ಮೃಗೇಂದ್ರ ಬರೋಬ್ಬರಿ 135 ಪುಸ್ತಕಗಳನ್ನು ಬರೆದಿದ್ದಾನೆ. `ಆಜ್ ಕಾ ಅಭಿಮನ್ಯು’ ಎಂಬ ಕಾವ್ಯನಾಮದಲ್ಲಿ ಮೃಗೇಂದ್ರ ಪುಸ್ತಕಗಳನ್ನು ಬರೆಯುತ್ತಿದ್ದಾನೆ.

    ಮೃಗೇಂದ್ರನ ತಾಯಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ತಮ್ಮ ಮಗ ಪುಸ್ತಕಗಳನ್ನು ಬರೆಯುವ ಬಗ್ಗೆ ತೋರಿಸುತ್ತಿದ್ದ ಆಸಕ್ತಿಯನ್ನು ಗುರುತಿಸಿ ಆತನನ್ನು ಬೆಂಬಲಿಸಿದ್ದಾರೆ. ಜೊತೆಗೆ ಆತನ ತಂದೆ ರಾಜ್ಯ ಸಕ್ಕರೆ ಕಾರ್ಖಾನೆ ಹಾಗೂ ಕಬ್ಬು ಅಭಿವೃದ್ಧಿ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾರೆ.

    ಈ ಬಗ್ಗೆ ಮಾತನಾಡಿದ ಬಾಲಕ, ನಾನು ರಾಮಾಯಣದಲ್ಲಿರುವ 51 ಪಾತ್ರಗಳ ಬಗ್ಗೆ ವಿಶ್ಲೇಷಿಸಿ ಪುಸ್ತಕಗಳನ್ನು ಬರೆದಿದ್ದೇನೆ. ನಾನು ಬರೆದ ಎಲ್ಲಾ ಪುಸ್ತಕಗಳು 25 ರಿಂದ 100 ಪುಟಗಳನ್ನು ಹೊಂದಿದೆ. ನನ್ನ ಈ ಪ್ರತಿಭೆಯನ್ನು ಮೆಚ್ಚಿ ಡಾಕ್ಟರೇಟ್ ಪದವಿ ನೀಡುವುದಾಗಿ ಲಂಡನ್ ವರ್ಲ್ಡ್ ಯೂನಿವರ್ಸಿಟಿ ಆಫ್ ರೆಕಾರ್ಡ್ಸ್ ಆಫರ್ ನೀಡಿತ್ತು ಎಂದು ತಿಳಿಸಿದ್ದಾನೆ.

    ದೊಡ್ಡವನಾದ ಮೇಲೆ ನಾನು ಬರಹಗಾರನಾಗಲು ಇಷ್ಟಪಡುತ್ತೇನೆ. ವಿವಿಧ ವಿಷಯಗಳ ಬಗ್ಗೆ, ಬೇರೆ ಬೇರೆ ಆಯಾಮದಲ್ಲಿ ಇನ್ನೂ ಹಲವಾರು ಪುಸ್ತಕಗಳನ್ನು ಬರೆಯಲು ಬಯಸುತ್ತೇನೆ ಎಂದಿದ್ದಾನೆ.

    ಉತ್ತರ ಪ್ರದೇಶ ಸಿಎಂ ಯೋಗಿ ಆಧಿತ್ಯನಾಥ್ ಸೇರಿದಂತೆ ಹಲವು ಗಣ್ಯರ ಬಗ್ಗೆ ಈ ಪೋರ ಪುಸ್ತಕ ಬರೆದಿದ್ದು, ಚಿಕ್ಕವಯಸ್ಸಿನಲ್ಲೇ ಈ ಮಟ್ಟಿಗೆ ಸಾಧನೆ ಮಾಡಿರುವುದಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

  • ರಾಮ ಒಬ್ಬ ಕುಡುಕ, ಮಾಂಸ ತಿನ್ತಿದ್ದ- ಮತ್ತೆ ಕೆಂಗಣ್ಣಿಗೆ ಗುರಿಯಾದ ಪ್ರೊ. ಭಗವಾನ್

    ರಾಮ ಒಬ್ಬ ಕುಡುಕ, ಮಾಂಸ ತಿನ್ತಿದ್ದ- ಮತ್ತೆ ಕೆಂಗಣ್ಣಿಗೆ ಗುರಿಯಾದ ಪ್ರೊ. ಭಗವಾನ್

    – ಮಹಾತ್ಮ ಗಾಂಧಿ ಒಬ್ಬ ಮತಾಂಧ

    ಮೈಸೂರು: ವಿಚಾರವಾದಿ ಪ್ರೊಫೆಸರ್ ಭಗವಾನ್ ಮತ್ತೊಂದು ವಿವಾದಾತ್ಮಕ ಪುಸ್ತಕ ಬರೆದಿದ್ದು, ಅದರಲ್ಲಿ ರಾಮ ಒಬ್ಬ ಕುಡುಕ, ಮಾಂಸ ತಿನ್ನುತ್ತಿದ್ದನೆಂದು ಉಲ್ಲೇಖಿಸುವ ಮೂಲಕ ಇದೀಗ ಮತ್ತೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಭಗವಾನ್‍ರವರು ರಾಮ ಮಂದಿರ ಏಕೆ ಬೇಡ? ಎಂಬ ವಿವಾದಾತ್ಮಕ ಪುಸ್ತಕವನ್ನು ಬರೆದಿದ್ದಾರೆ. ಅದರಲ್ಲಿ ರಾಮನ ಬಗ್ಗೆ ವಿವಾದಾತ್ಮಕವಾಗಿ ಬರೆದುಕೊಂಡಿದ್ದಾರೆ. ರಾಮ, ಮಹಾತ್ಮ ಗಾಂಧೀಜಿ ಹಾಗೂ ಚಾಮುಂಡಿ ದೇವಿಯನ್ನು ಟೀಕಿಸಿದ್ದಾರೆ.

    ವಿವಾದಾತ್ಮಕ ಅಂಶಗಳೇನು?
    ರಾಮ ಹಾಗೂ ಸೀತೆ ಮಾಂಸವನ್ನು ಸೇವಿಸುತ್ತಿದ್ದರು. ಮದ್ಯಪಾನವನ್ನು ಮಾಡುತ್ತಿದ್ದರು. ರಾಮ ತನ್ನ ಕೈಯಿಂದ ಸೀತೆಗೆ ಮದ್ಯಪಾನ ಮಾಡಿಸುತ್ತಿದ್ದ. ರಾಮ ಏಕಪತ್ನಿವ್ರತಸ್ಥ ಎನ್ನುವುದು ಕಟ್ಟುಕತೆ. ರಾಮ ಹುಡುಗಿಯರ ಹಾಗೂ ವನಿತೆಯರ ಜೊತೆ ಕುಡಿದು ನೃತ್ಯ ಮಾಡಿ, ಅವರನ್ನು ಸಂತೋಷ ಪಡಿಸುತ್ತಿದ್ದ. ರಾಮ ದೇವರೇ ಅಲ್ಲ, ಅವನೊಬ್ಬ ಕೊಲೆಗಡುಕ. ದಾಳಿಕೋರರಿಂದ ತಪ್ಪಿಸಿಕೊಳ್ಳಲಾಗದವರು, ದೇವರುಗಳೇ ಅಲ್ಲವೆಂದು ಉಲ್ಲೇಖಿಸಿದ್ದಾರೆ.

    ಇದಲ್ಲದೇ ಕೃಷ್ಣ, ಶಿವ, ಚಾಮುಂಡಿ ಹಾಗೂ ಮಾರಮ್ಮರನ್ನು ಕಸದಂತೆ ತಿರಸ್ಕರಿಸಿ ಎಸೆಯಿರಿ. ಮಹಾತ್ಮ ಗಾಂಧೀಜಿಯೂ ಒಬ್ಬ ಮತಾಂಧ ಹಾಗೂ ಮೂಲಭೂತವಾದಿಯಾಗಿದ್ದಾನೆ. ಗಾಂಧೀಜಿ, ರಾಮ, ಗೀತೆ, ಚಾತುರ್ವರ್ಣ ಪ್ರತಿಪಾದಿಸಿದ್ದು, ಶೂದ್ರರಿಗೆ ಮಾಡಿದ ಮಹಾ ದ್ರೋಹ ಎಂದು ಬರೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದರಾಮಯ್ಯ ಸರ್ಕಾರದಿಂದ 35 ಸಾವಿರ ಕೋಟಿ ರೂ. ಅವ್ಯವಹಾರ: ಬಿಜೆಪಿಯಿಂದ ಸಿಎಜಿ ವರದಿ ಆಧರಿಸಿ ಆರೋಪ

    ಸಿದ್ದರಾಮಯ್ಯ ಸರ್ಕಾರದಿಂದ 35 ಸಾವಿರ ಕೋಟಿ ರೂ. ಅವ್ಯವಹಾರ: ಬಿಜೆಪಿಯಿಂದ ಸಿಎಜಿ ವರದಿ ಆಧರಿಸಿ ಆರೋಪ

    ಬೆಂಗಳೂರು: ಕಳೆದ ಬಾರಿಯ ಸಿದ್ದರಾಮಯ್ಯನವರ ಸರ್ಕಾರದಿಂದ 35 ಸಾವಿರ ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎನ್ನುವ ಪ್ರಧಾನ ಮಹಲೇಖಪಾಲರ (ಕಂಟ್ರೋಲರ್ ಆ್ಯಂಡ್ ಆಡಿಟರ್ ಜನರಲ್) ವರದಿ ಆಧರಿಸಿ ಬಿಜೆಪಿ ಕಿರು ಪುಸ್ತಕವನ್ನು ಬಿಡುಗಡೆ ಮಾಡಿದೆ.

    ವಿಧಾನಸೌಧದ ಬಿಜೆಪಿ ಶಾಸಕಾಂಗ ಪಕ್ಷದ ಕೊಠಡಿಯಲ್ಲಿ ಶಾಸಕ ಅಶ್ವಥ್ ನಾರಾಯಣ್ ಹಾಗೂ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಅವರು, ಭ್ರಷ್ಟ ಕಾಂಗ್ರೆಸ್ ಸರ್ಕಾರದ ಲೂಟಿ ಅವಧಿ 2016-17 ಎಂಬ ಶೀರ್ಷಿಕೆಯಡಿಯಲ್ಲಿ 36 ಪುಟಗಳ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದ್ದಾರೆ.

    ಸಿಎಜಿ ವರದಿಯಾಧರಿಸಿ ಬಿಡುಗಡೆ ಮಾಡಿರುವ ಪುಸ್ತಕದ ಮುಖಪುಟದಲ್ಲಿ ಸಿದ್ದರಾಮಯ್ಯನವರು ಕರ್ನಾಟಕ ಸರ್ಕಾರದ ಖಜಾನೆಯಿಂದ ಹಣ ಹೊತ್ತುಕೊಂಡು ಹೋಗಿ, ಪಾರ್ಟಿ ಫಂಡ್‍ಗೆ ಕೊಡುವುದನ್ನು ಚಿತ್ರಿಸಲಾಗಿದೆ.

    2016-17ನೇ ಆಯ-ವ್ಯಯದಲ್ಲಿ 35 ಸಾವಿರ ಕೋಟಿ ರೂಪಾಯಿಯಷ್ಟು ವೆಚ್ಚ ಹಾಗೂ ಸ್ವೀಕೃತಿಯ ಲೆಕ್ಕ ತಾಳೆ ಆಗುತ್ತಿಲ್ಲ. ಇದೇ ಸಿಎಜಿ ವರದಿ ಆಧರಿಸಿ ಸಿದ್ದರಾಮಯ್ಯನವರ ಮೇಲೆ ಕ್ರಮಕ್ಕೆ ಬಿಜೆಪಿ ಶಾಸಕರು ಆಗ್ರಹಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಸಿಎಜಿ ವರದಿ ಆಧರಿಸಿ ಬಿಜೆಪಿ ಬಿಡುಗಡೆ ಮಾಡಿದ ಕಿರುಹೊತ್ತಿಗೆಯಲ್ಲಿರುವ ಪ್ರಮುಖ ಆರೋಪಗಳು

    * 788 ಕೆರೆಗಳಿಗೆ ನೀರು ತುಂಬಲಿಲ್ಲ. ಆದರೆ 1433.41 ಕೋಟಿ ರೂ. ಬಿಡುಗಡೆಯಾಗಿದೆ
    * ಶಾಸಕಾಂಗದ ಅನುಮೋದನೆ ಇಲ್ಲದೆ ಸಾವಿರಾರು ಕೋಟಿ ಹಣ ಬಿಡುಗಡೆ.
    * ಬಡ್ಡಿ ಹಣದಲ್ಲಿ ಅಧಿಕಾರಿಗಳ ಮೋಜು
    * ಯೂನಿಫಾರಂ ಖರೀದಿಯಲ್ಲಿ 1.72 ಕೋಟಿ ರೂ. ಹಗರಣ
    * 115.10 ಕೋಟಿ ರೂ. ಲ್ಯಾಪ್ ಟಾಪ್ ಹಗರಣ
    * ಬಳಕೆಯಾಗದ 1199.81 ಕೋಟಿ ರೂ. ಸರ್ಕಾರಕ್ಕೆ ಮರು ಪಾವತಿ ಮಾಡಿಲ್ಲ
    * 254.34 ಕೋಟಿ ರೂ. ಗಳಿಗೆ ಬಳಕೆ ಪ್ರಮಾಣ ಪತ್ರ ಕೊಟ್ಟಿಲ್ಲ
    * 7378.34 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡದೆ ಕಾಮಗಾರಿಗೆ ಅವಕಾಶ

    ಈ ಕುರಿತು ಮಾತನಾಡಿದ ರವಿಕುಮಾರ್, ಕಳೆದ 3 ತಿಂಗಳ ಹಿಂದೆ ನಡೆದ ಅಧಿವೇಶನದಲ್ಲಿ ಸಿಎಜಿ ವರದಿಯನ್ನು ಮಂಡಿಸಲಾಗಿದೆ. 2016-17ರ ಆಯವ್ಯಯದ ವೆಚ್ಚದಲ್ಲಿ ಸಾವಿರಾರು ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ. ವರದಿ ಆಧರಿಸಿ ಮಾಜಿ ಸಿಎಂ ಸಿದ್ದರಾಮಯ್ಯನವರ ಮೇಲೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕ್ರಮ ಕೈಗೊಳ್ಳಬೇಕು. ಸಾಕಷ್ಟು ಹಗರಣದ ವರದಿಯು ಕಿರು ಹೊತ್ತಿಗೆಯಲ್ಲಿ ನೀಡಲಾಗಿದೆ. ಸಿಎಜಿ ವರದಿ ಮತ್ತೊಮ್ಮೆ ಪಬ್ಲಿಕ್ ಡಿಬೇಟ್ ಆಗಬೇಕು. ಅಲ್ಲದೇ ಚಳಿಗಾಲದ ಅಧಿವೇಶನದಲ್ಲಿ ಈ ವರದಿಯ ಬಗ್ಗೆ ಚರ್ಚೆಯಾಗಬೇಕು. ರಮೇಶ್ ಕುಮಾರ್ ನಮ್ಮ ಮಾವನ ಮಗ ಅಲ್ಲ. ರಮೇಶ್ ಕುಮಾರ್ ಸಚಿವರಾಗಿರುವಾಗಲೇ, ಆರೋಗ್ಯ ಇಲಾಖೆಯಲ್ಲಿ ಹಗರಣ ನಡೆದಿದೆ. ಈ ಬಗ್ಗೆ ಸಿಎಜಿ ವರದಿಯಲ್ಲಿ ಪ್ರಕರಣ ಸಾಬೀತಾಗಿದೆ. ಹೀಗಾಗಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

    ಇದೇ ವೇಳೆ ಮಾತನಾಡಿದ ಅಶ್ವಥ್ ನಾರಾಯಣ್, 2016-17ರ ಸಿಎಜಿ ವರದಿಯಲ್ಲಿ 35 ಸಾವಿರ ಕೋಟಿ ರೂಪಾಯಿ ಹಣ ಟ್ಯಾಲಿ ಆಗಿಲ್ಲವೆಂದು ಉಲ್ಲೇಖಿಸಲಾಗಿದೆ. ಹೀಗಾಗಿ ವಿವಿಧ ಇಲಾಖೆಗಳಲ್ಲಿ ಆಗಿರುವ ಹಗರಣಗಳನ್ನು ಕಿರುಹೊತ್ತಿಗೆ ರೂಪದಲ್ಲಿ ತರಲಾಗಿದೆ. ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯನವರು ಲೆಕ್ಕ ನೀಡಬೇಕು. ಈ ಬಗ್ಗೆ ಕೂಡಲೇ ಸಿಎಂ ಎಚ್‍ಡಿಕೆ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಪಟ್ಟುಹಿಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv