Tag: book

  • ‘ಜ್ಞಾನಾರ್ಜನೆ ಎಂದೂ ಮುಗಿಯದ ಕಾಯಕ’- ಕ್ವಾರಂಟೈನ್‍ನಲ್ಲಿ ಪುಸ್ತಕದ ಮೊರೆಹೋದ ಸಿಎಂ

    ‘ಜ್ಞಾನಾರ್ಜನೆ ಎಂದೂ ಮುಗಿಯದ ಕಾಯಕ’- ಕ್ವಾರಂಟೈನ್‍ನಲ್ಲಿ ಪುಸ್ತಕದ ಮೊರೆಹೋದ ಸಿಎಂ

    ಬೆಂಗಳೂರು: ಕೊರೊನಾ ಭೀತಿಯಿಂದ ಸ್ವಯಂ ಕ್ವಾರಂಟೈನ್ ಅಗಿರುವ ಸಿಎಂ ಯಡಿಯೂರಪ್ಪನವರು ಪುಸ್ತಕಗಳನ್ನು ಓದುವ ಮೂಲಕ ಕಾಲಕಳೆಯುತ್ತಿದ್ದಾರೆ.

    ಸಿಎಂ ಅವರ ಗೃಹ ಕಚೇರಿ ಕೃಷ್ಣಾ, ಅಧಿಕೃತ ನಿವಾಸ ಕಾವೇರಿ ಮತ್ತು ಅವರ ಧವಳಗಿರಿಯ ನಿವಾಸದಲ್ಲಿ ಕೆಲಸ ಮಾಡುವ ಕೆಲ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ಕಾರಣದಿಂದ ಯಡಿಯೂರಪ್ಪನವರು ಶುಕ್ರವಾದಿಂದ ಐದು ದಿನಗಳ ಕಾಲ ತಮ್ಮ ಕಾವೇರಿ ನಿವಾಸದಲ್ಲಿ ಕ್ವಾರಂಟೈನ್ ಆಗಿದ್ದಾರೆ.

    ಈ ವೇಳೆ ಪುಸ್ತಕಗಳನ್ನು ಓದುತ್ತಾ ಸಮಯ ದೂಡುತ್ತಿರುವ ಬಿಎಸ್‍ವೈ, ಬಿಡುವಿನ ವೇಳೆಯಲ್ಲಿ ನನಗೆ ಅತ್ಯಂತ ಪ್ರಿಯವಾದ ಕಾಲಕ್ಷೇಪವೆಂದರೆ ಓದುವುದು. ನೂರಾರು ಸಂಗತಿಗಳ ಬಗ್ಗೆ ತಿಳಿದಷ್ಟೂ ತಿಳಿಯಬಹುದಾದ ವಿಷಯಗಳಿವೆ, ಜ್ಞಾನಾರ್ಜನೆ ಎಂದೂ ಮುಗಿಯದ ಕಾಯಕ. ಇಂದಿನ ಭಾನುವಾರದ ಲಾಕ್‍ಡೌನ್ ಮತ್ತು ಸ್ವಯಂ ಕ್ವಾರಂಟೈನ್‍ನಲ್ಲಿರುವ ವೇಳೆ ಸಿಕ್ಕ ಸ್ವಲ್ಪ ಬಿಡುವಿನ ಸಮಯವನ್ನು ಖಾಂಡೇಕರ್ ಅವರ ಯಯಾತಿಯ ಜೊತೆಗೆ ಕಳೆಯುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

    ತಾವು ಕ್ವಾರಂಟೈನ್ ಆಗುತ್ತಿರುವ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ್ದ ಸಿಎಂ, ಗೃಹ ಕಚೇರಿ ಕೃಷ್ಣಾದಲ್ಲಿ ಕೆಲ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ಬಂದಿರುವ ಕಾರಣ ಇಂದಿನಿಂದ ಕೆಲ ದಿನಗಳ ಕಾಲ ಮನೆಯಿಂದಲೇ ನನ್ನ ಕರ್ತವ್ಯಗಳನ್ನು ನಿರ್ವಹಿಸಲಿದ್ದೇನೆ. ವೀಡಿಯೋ ಕಾನ್ಫರೆನ್ಸ್ ಮುಖಾಂತರ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಿದ್ದೇನೆ ಎಂದು ತಿಳಿಸಿದ್ದರು. ಜೊತೆಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ ನಾನು ಆರೋಗ್ಯವಾಗಿದ್ದೇನೆ. ಎಲ್ಲರೂ ಮುನ್ನೆಚ್ಚರಿಕೆಯ ಕ್ರಮಗಳು ಹಾಗೂ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ ಎಂದಿದ್ದರು.

  • ಆ ಲೇಖಕಿಯ ಪುಸ್ತಕ 39 ಬಾರಿ ರಿಜೆಕ್ಟ್ ಆಗಿತ್ತು- ಇದು ಪ್ರಯತ್ನಕ್ಕಿರೋ ಅದ್ಭುತ ತಾಕತ್ತು!

    ಆ ಲೇಖಕಿಯ ಪುಸ್ತಕ 39 ಬಾರಿ ರಿಜೆಕ್ಟ್ ಆಗಿತ್ತು- ಇದು ಪ್ರಯತ್ನಕ್ಕಿರೋ ಅದ್ಭುತ ತಾಕತ್ತು!

    ನಾದರೊಂದು ಸಾಧಿಸೋ ಕನಸಿಟ್ಟುಕೊಳ್ಳದವರು ಬಹುಶಃ ಜಗತ್ತಿನಲ್ಲಿ ಯಾರೂ ಇರಲಿಕ್ಕಿಲ್ಲ. ಆದರೆ ಅಂತಹ ಕನಸಿಗಿಂತ ವಾಸ್ತವ ಕಠೋರವಾಗಿರುತ್ತೆ. ಕೂತಲ್ಲೇ ಚೆಂದದ ಕನಸು ಕಾಣೋದು ಸಲೀಸು. ಆದರೆ ಅದನ್ನ ನನಸು ಮಾಡಿಕೊಳ್ಳಬೇಕೆಂದರೆ ಕಲ್ಲುಮುಳ್ಳಿನ ಹಾದಿ ತುಳಿಯಬೇಕಾಗುತ್ತೆ. ಅವಮಾನ ಎದುರಿಸಿ, ಪದೇ ಪದೇ ಕಣ್ಣೀರಾಗಬೇಕಾಗುತ್ತೆ. ಆ ಘಳಿಗೆಯಲ್ಲಿ ಕುಸಿದು ಕೂತರೆ ಪರವಾಗಿಲ್ಲ. ಮೇಲೇಳಲು ಪ್ರಯತ್ನಿಸದಿದ್ದರೆ ಜಗತ್ತಿನ ಯಾವ ಶಕ್ತಿಯೂ ನಿಮ್ಮ ಬಳಿ ಸುಳಿಯೋದಿಲ್ಲ. ಬಹುಶಃ ಅಂತಹ ಸ್ಥಿತಿಯಿಂದ ಎದ್ದು ನಿಲ್ಲದೇ ಹೋಗಿದ್ದರೆ ಈ ವಿಶ್ವದ ಬಹಳಷ್ಟು ಗೆಲುವುಗಳು ಸಾಧ್ಯವಾಗುತ್ತಲೇ ಇರಲಿಲ್ಲ.

    ಹಾಗೆ ಸೋಲನ್ನೇ ಗೆಲುವಿನ ಮೆಟ್ಟಿಲಾಗಿಸಿಕೊಂಡ ಖ್ಯಾತನಾಮರು ಅನೇಕರಿದ್ದಾರೆ. ಅದರಾಚೆಗೂ ವಿವಿಧ ಕ್ಷೇತ್ರಗಳಲ್ಲಿ ಇನ್ನೊಂದಷ್ಟು ರೋಲ್ ಮಾಡೆಲ್‍ಗಳಿವೆ. ಅದರಲ್ಲಿ ಅಮೆರಿಕದ ಖ್ಯಾತ ಲೇಖಕಿ, ಉದ್ಯಮಿ ಅರಿಯನ್ನಾ ಸ್ಟಾಸಿನೋಪೌಲಸ್ ಹೆಸರೂ ಉಲ್ಲೇಖಾರ್ಹ. ಈಕೆ ಅಮೆರಿಕನ್ ಲೇಖಕಿ. ಸರಿ ಸುಮಾರು ಹದಿನೈದಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುವಾಕೆ. ಜೊತೆಗೆ ದಿ ಹಫಿಂಗ್ಟನ್ ಪೋಸ್ಟ್ ಸಹ ಸಂಸ್ಥಾಪಕಿಯೂ ಹೌದು. ಈಕೆ ಲೇಖಕಿಯಾಗಿ ನಡೆದು ಬಂದ ಆರಂಭಿಕ ಹಾದಿಯಲ್ಲಿ ಭರ್ಜರಿ ಸ್ವಾಗತ ಕೋರಿದ್ದದ್ದು ಸೋಲು ಮತ್ತು ಅವಮಾನಗಳು ಮಾತ್ರ.

    ಈಕೆ ಮೊದಲ ಪುಸ್ತಕ ಬರೆದು ಅದು ಹೇಗೋ ಪ್ರಕಟಿಸಿದ್ದರು. ಆ ನಂತರ ಎರಡನೇ ಪುಸ್ತಕ ಬರೆದು ಅದೆಷ್ಟೇ ಅಲೆದಾಡಿದರೂ ಒಬ್ಬನೇ ಒಬ್ಬ ಪಬ್ಲಿಷರ್ ಕೂಡ ಪ್ರಕಟಿಸಲು ಮುಂದೆ ಬರಲಿಲ್ಲ. ಹಾಗಂತ ಅರಿಯನ್ನಾ ಪ್ರಯತ್ನ ನಿಲ್ಲಿಸಲಿಲ್ಲ. ಆಕೆ ಅದೆಷ್ಟು ಪ್ರಯತ್ನಿಸಿದ್ದರೆಂದರೆ ಸರಿ ಸುಮಾರು ಮೂವತ್ತೊಂಬತ್ತು ಪ್ರಕಟಣಾ ಸಂಸ್ಥೆಗಳು ಅವರ ಪುಸ್ತಕವನ್ನು ನಿರಾಕರಿಸಿದ್ದವು. ಆ ನಂತರವೂ ಒಂದು ಸಂಸ್ಥೆ ಪುಸ್ತಕವನ್ನು ಪ್ರಕಟಿಸಿತ್ತು. ನಂತರ ಅದರ ಗುಣಮಟ್ಟದ ಬಗ್ಗೆ ಟೀಕೆಗಳು ಬಂದವು.

    ಆದರೂ ಪಟ್ಟು ಬಿಡದೆ ಮೂರನೇ ಪುಸ್ತಕ ಪ್ರಕಟಿಸಿದರು ನೋಡಿ ಅರಿಯನ್ನಾ… ಅದಕ್ಕೆ ವ್ಯಾಪಕ ಮೆಚ್ಚುಗೆ ಕೇಳಿ ಬಂದಿತ್ತು. ಒಂದಷ್ಟು ಓದುಗರೂ ಹುಟ್ಟಿಕೊಂಡರು. ಆ ಬಳಿಕ ಹದಿನೈದು ಪುಸ್ತಕ ಬರೆಯೋ ಹೊತ್ತಿಗೆಲ್ಲ ಅರಿಯನ್ನಾ ಇಷ್ಟದ ಲೇಖಕಿಯಾಗಿ ಹೊರಹೊಮ್ಮಿದ್ದರು. ನಂತರ ದಿ ಹಫಿಂಗ್ಟನ್ ಪೋಸ್ಟ್ ಮೂಲಕವೂ ಪ್ರಸಿದ್ಧಿ ಪಡೆದುಕೊಂಡಿದ್ದರು. ಆಕೆ ಏನಾದರೂ ಆರಂಭಿಕವಾದ ನಿರಾಕರಣೆ, ಅವಮಾನದಿಂದ ಕುಸಿದಿದ್ದರೆ ಲೇಖಕಿಯಾಗಿ ಹೆಸರು ಮಾಡಲು ಸಾಧ್ಯವೇ ಇರುತ್ತಿರಲಿಲ್ಲ.!

  • ‘ಬಾಂಬೆ ಡೇಸ್’ನಲ್ಲಿ ಹಲವು ಸತ್ಯ ಸ್ಫೋಟ- ಎಚ್.ವಿಶ್ವನಾಥ್

    ‘ಬಾಂಬೆ ಡೇಸ್’ನಲ್ಲಿ ಹಲವು ಸತ್ಯ ಸ್ಫೋಟ- ಎಚ್.ವಿಶ್ವನಾಥ್

    – ಯಾರೇ ವಿರೋಧಿಸಿದ್ರೂ ಪುಸ್ತಕ ಬಿಡುಗಡೆ ನಿಲ್ಲಲ್ಲ

    ಮೈಸೂರು: ಮಾಜಿ ಸಚಿವ ಎಚ್.ವಿಶ್ವನಾಥ್ ‘ಬಾಂಬೆ ಡೇಸ್’ ಎಂಬ ಪುಸ್ತಕ ಬರೆಯುತ್ತಿದ್ದಾರೆ. ಮೈತ್ರಿ ಸರ್ಕಾರ ಪತನದ ಕುರಿತು ಪುಸ್ತಕ ಇದ್ದಾಗಿದೆ. ಹೀಗಾಗಿ ಅನೇಕ ಸತ್ಯಗಳು ಸ್ಫೋಟಗೊಳ್ಳಲಿವೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಮೈತ್ರಿ ಸರ್ಕಾರ ಪತನವಾಗಿ ಬಿ.ಎಸ್.ಯಡಿಯೂರಪ್ಪನವರ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ. ಇದಕ್ಕೆ ಯಾರ ಪಾತ್ರವೇನು. ಏನೆಲ್ಲಾ ಘಟನೆಗಳು ನಡೆದವು ಎಂಬ ವಿಚಾರವನ್ನು ಬಾಂಬೆ ಡೇಸ್ ಪುಸ್ತಕದಲ್ಲಿ ಬರೆಯುತ್ತೇನೆ ಎಂದರು.

    2006ರಲ್ಲಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿ.ಎಸ್.ಯಡಿಯೂರಪ್ಪ ಅವರು ಸೇರಿ ಮಾಜಿ ಮುಖ್ಯಮಂತ್ರಿ ಧರಮ್ ಸಿಂಗ್ ಅವರ ಸರ್ಕಾರವನ್ನು ಪತನಗೊಳಿಸಿದ್ದರು. ಅಂದು ಮತ್ತೊಂದು ಸರ್ಕಾರ ರಚನೆ ಮಾಡಿದರು. ಅದರಂತೆ ಈಗ ನಡೆದ ರಾಜಕೀಯ ಕ್ರಾಂತಿಯನ್ನು ಸಾಹಿತಿಯಾಗಿ ಜನರಿಗೆ ತಿಳಿಸುವ ಕೆಲಸ ಮಾಡುತ್ತೇನೆ. 17 ಜನ ಶಾಸಕರು ಬಿಜೆಪಿಗೆ ಸೇರಿದರು ಎನ್ನುವುದನ್ನು ತೆರೆದಿಡುತ್ತೇನೆ ಎಂದು ತಿಳಿಸುತ್ತೇನೆ.

    ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಶ್ರಮಿಸಿದ ಎಲ್ಲರ ಹೆಸರನ್ನು ಯಥಾವತ್ತಾಗಿ ಬರೆಯುತ್ತೇನೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಪಾರದರ್ಶಕವಾಗಿ ರಾಜಕಾರಣ ಮಾಡಿದ್ದೇನೆ. ಹೀಗಾಗಿ ಯಾವುದೇ ಹೆಸರು, ವಿಚಾರವನ್ನು ಮುಚ್ಚಿಡುವ ಮಾತೇ ಇಲ್ಲ ಎಂದು ತಿಳಿಸಿದರು.

    ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನದ ಮುಹೂರ್ತ ನಿಗದಿ ಮಾಡಿದ್ದು ಯಾರು? ಎಲ್ಲೆಲ್ಲಿ ಸಭೆ ನಡೆದವು, ಸಭೆಯಲ್ಲಿ ಇದ್ದವರು ಯಾರು ಎಂಬದನ್ನು ಹೆಸರು ಸಮೇತ ಬರೆಯುತ್ತೇನೆ. ಕೆಲವೇ ವಾರಗಳಲ್ಲಿ ಅದರ ಕೆಲವು ಅಧ್ಯಾಯಗಳನ್ನು ಮಾಧ್ಯಮದವರ ಜೊತೆ ಹಂಚಿಕೊಳ್ಳುತ್ತೇನಿ. ಈ ಪುಸ್ತಕ ವಿವಾದವಾದರೆ ಅದಕ್ಕೆ ನಾನು ಹೊಣೆಯಲ್ಲ. ಸತ್ಯ ಹೇಳುವುದಷ್ಟೆ ನನ್ನ ಕೆಲಸ. ಯಾರೇ ವಿರೋಧ ಮಾಡಿದರು ಈ ಪುಸ್ತಕ ಬಿಡುಗಡೆ ನಿಲ್ಲುವುದಿಲ್ಲ. ಈ ಪುಸ್ತಕದಿಂದ ಸರ್ಕಾರಕ್ಕೆ ಸಮಸ್ಯೆ ಆಗಲ್ಲ ಎಂದು ವಿಶ್ವನಾಥ್ ಹೇಳಿದರು.

  • ಕೊರೊನಾ ಲಾಕ್‍ಡೌನ್- ಮನೆಮನೆಗೆ ತೆರಳಿ ಉಚಿತವಾಗಿ ಪುಸ್ತಕ ವಿತರಣೆ

    ಕೊರೊನಾ ಲಾಕ್‍ಡೌನ್- ಮನೆಮನೆಗೆ ತೆರಳಿ ಉಚಿತವಾಗಿ ಪುಸ್ತಕ ವಿತರಣೆ

    ಬೆಂಗಳೂರು: ಲಾಕ್‍ಡೌನ್‍ನಿಂದ ಮನೆಯಿಂದ ಹೊರಗೆ ಬರದೆ ಕಾಲ ಕಳೆಯುತ್ತಿರುವ ಜನರಿಗೆ ಬೇಸರವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ದಾಸರಹಳ್ಳಿಯಲ್ಲಿ ಕನ್ನಡ ಪುಸ್ತಕಗಳನ್ನು ವಿತರಣೆ ಮಾಡಲಾಯಿತು.

    ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಬಿ.ಆರ್ ಸತೀಶ್ ನೇತೃತ್ವದಲ್ಲಿ ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ದಾಸರಹಳ್ಳಿಯ ಮನೆ ಮನೆಗೆ ಹಾಗೂ ಆಟೋ ಚಾಲಕರು, ಅಂಗಡಿ ಮಾಲೀಕರು ಬೀದಿ ಬದಿ ವ್ಯಾಪಾರಿಗಳಿಗೂ ವಿತರಣೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಪ್ರೊಫೆಸರ್ ಹಾಗೂ ಸಾಹಿತಿಗಳಾದ ಪ್ರಸನ್ನಕುಮಾರ್ ಬರೆದಿರುವಂತಹ ಮಾಸದ ನೆನಪು, ಪ್ರೇಮ ಜ್ಯೋತಿ, ನೆನಪುಗಳ ಮಾತು ಮಧುರ ಮಾತಿನಲ್ಲಿಹೇಳಲಾರೆನು, ಬಾಳೊಂದು ಹೂಬನ ಹಾಗೂ ವಿವೇಕಾನಂದರ ಪುಸ್ತಕಗಳು ಸೇರಿದಂತೆ ನಾನಾ ವಿಚಾರದ ವಿವಿಧ ಪುಸ್ತಕಗಳನ್ನ ವಿತರಿಸಲಾಯಿತು.

    ಈ ಕಾರ್ಯಕ್ರಮವನ್ನು ದಾಸರಹಳ್ಳಿ ಕ್ಷೇತ್ರದ ಮಾಜಿ ಶಾಸಕ ಎಸ್.ಮುನಿರಾಜು ಉದ್ಘಾಟಿಸಿ ಮಾತನಾಡಿ, ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬಳಸಿಕೊಂಡು ಕನ್ನಡದ ಅಭಿಮಾನವನ್ನು ಹೆಚ್ಚು ಮಾಡಬೇಕು. ಕನ್ನಡ ಪುಸ್ತಕಗಳನ್ನು ನೀವೆಲ್ಲರೂ ಓದಿ ಇತರರಿಗೂ ಪುಸ್ತಕವನ್ನು ನೀಡಿ ಎಂದರು.

    ಇದೇ ವೇಳೆ ಸಾಹಿತಿಗಳಾದ ದ್ವಾರಾನುಕುಂಟೆ ಪಾತಣ್ಣ, ವೈ.ವಿ.ಹೆಚ್.ಜಯದೇವ್, ಪ್ರಸನ್ನ ಕುಮಾರ್, ನಾಗರಾಜ್ ಜಿ. ನಾಗಸಂದ್ರ, ಪಾಲಿಕೆ ಸದಸ್ಯ ಎನ್. ಲೋಕೇಶ್. ಟಿ.ಎಸ್.ಗಂಗರಾಜು, ಸಂದೀಪ್ ಸಿಂಗ್, ಬಿ.ಟಿ.ಶ್ರೀನಿವಾಸ್.ಪಿ.ಹೆಚ್.ರಾಜು ಇದ್ದರು.

  • ಹಣ, ಆಭರಣ ಬದ್ಲು ಪುಸ್ತಕ ಕೇಳಿದ ಮಗಳು- ಎತ್ತಿನಗಾಡಿ ತುಂಬಾ ತಂದೆಯಿಂದ ಬುಕ್ಸ್ ಗಿಫ್ಟ್

    ಹಣ, ಆಭರಣ ಬದ್ಲು ಪುಸ್ತಕ ಕೇಳಿದ ಮಗಳು- ಎತ್ತಿನಗಾಡಿ ತುಂಬಾ ತಂದೆಯಿಂದ ಬುಕ್ಸ್ ಗಿಫ್ಟ್

    – ಮಗಳ ಮದ್ವೆಗೆ 2,400 ಪುಸ್ತಕ ಗಿಫ್ಟ್ ಕೊಟ್ಟ ತಂದೆ
    – ವಿವಿಧ ದೇಶ ಸುತ್ತಾಡಿ ಪುಸ್ತಕ ಸಂಗ್ರಹಣೆ

    ಗಾಂಧಿನಗರ: ಸಾಮಾನ್ಯವಾಗಿ ಮಗಳು ಮದುವೆಯಾಗಿ ಗಂಡನ ಮನೆಗೆ ಹೋಗುವಾಗ ಪೋಷಕರು ಹಣ, ಆಭರಣ ಅಥವಾ ಮಗಳಿಗೆ ಇಷ್ಟವಾಗುವ ವಸ್ತುಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಆದರೆ ಗುಜರಾತ್‍ನಲ್ಲಿ ತಂದೆಯೊಬ್ಬರು ಮದುವೆಯಾದ ಮಗಳಿಗೆ ಎತ್ತಿನಗಾಡಿಯಲ್ಲಿ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಈ ಅಪರೂಪದ ಘಟನೆ ರಾಜ್‍ಕೋಟ್‍ನಲ್ಲಿ ನಡೆದಿದೆ. ವಧು ಕಿನ್ನರಿ ತಮ್ಮ ತಂದೆ ಹರ್ದೇವ್ ಸಿಂಗ್ ಬಳಿ ನನ್ನ ಮದುವೆಗೆ ಹಣ, ಆಭರಣ ಕೊಡುವ ಬದಲಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ಕೊಡಿ ಎಂದು ಕೇಳಿಕೊಂಡಿದ್ದಳು. ಮಗಳ ಇಷ್ಟದಂತೆ ತಂದೆ ದೇಶದ ವಿವಿಧ ನಗರಗಳಲ್ಲಿ ಸಂಚರಿಸಿ ಪುಸ್ತಕಗಳನ್ನು ಸಂಗ್ರಹಿಸಿ ಎತ್ತಿನಗಾಡಿಯಲ್ಲಿ ಉಡುಗೊರೆಯಾಗಿ ನೀಡಿದ್ದಾರೆ.

    ಹರ್ವೇದ್ ಸಿಂಗ್ ವೃತ್ತಿಯಿಂದ ಶಿಕ್ಷಕ. ಇವರು ದೆಹಲಿ, ಕಾಶಿ ಮತ್ತು ಬೆಂಗಳೂರಿನಂತಹ ನಗರಗಳಲ್ಲಿ ದೀರ್ಘಕಾಲ ಸುತ್ತಾಡಿ ತಮ್ಮ ಮಗಳಿಗೆ ಪುಸ್ತಕಗಳನ್ನು ಸಂಗ್ರಹಿಸಿದ್ದರು. ಒಟ್ಟಾರೆ ತಮ್ಮ ಮಗಳು ಕಿನ್ನರಿಗೆ 2400 ಪುಸ್ತಕಗಳನ್ನು ಮದುವೆಯ ದಿನ ಎತ್ತಿಗಾಡಿಯಲ್ಲಿ ತುಂಬಿ ಉಡುಗೊರೆಯಾಗಿ ನೀಡಿದ್ದಾರೆ. ಕಿನ್ನರಿ ಸ್ವಲ್ಪ ಪುಸ್ತಕಗಳನ್ನು ತನ್ನೊಂದಿಗೆ ಪತಿಯ ಮನೆಗೆ ತೆಗೆದುಕೊಂಡು ಹೋಗಲಿದ್ದಾಳೆ. ಇತರ ಪುಸ್ತಕಗಳನ್ನು ವಿವಿಧ ಶಾಲೆಗಳಿಗೆ ನೀಡಲಾಗುವುದು.

    ನನ್ನ ಮಗಳು ಬಾಲ್ಯದಿಂದ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಿದ್ದಳು. ಹೀಗಾಗಿ ಮದುವೆಗೆ ಪುಸ್ತಕಗಳನ್ನ ಉಡುಗೊರೆಯಾಗಿ ನೀಡಬೇಕೆಂದು ಕೇಳಿಕೊಂಡಿದ್ದಳು. ಅದರಂತೆಯೇ ಪುಸ್ತಕಗಳನ್ನು ಕೊಡಿಸಿದ್ದೇನೆ. ನಮ್ಮ ಮನೆಯಲ್ಲಿ ಒಂದು ಪ್ರತ್ಯೇಕ ಗ್ರಂಥಾಲಯ ನಿರ್ಮಾಣ ಮಾಡಿದ್ದಾಳೆ ಎಂದು ತಂದೆ ಸಂತಸದಿಂದ ಮಗಳ ಬಗ್ಗೆ ಹೇಳಿಕೊಂಡಿದ್ದಾರೆ.

    ಭಾರತದ ಇತಿಹಾಸ, ಮಹಾಭಾರತ, ವಿಷ್ಣುಪುರಾಣದ ಜೊತೆಗೆ ಗುಜರಾತಿ ಹಾಗೂ ಇಂಗ್ಲೀಷ್‍ನ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಪ್ರಸ್ತುತ ಜನರು ಪುಸ್ತಕಗಳಿಂದ ದೂರವಾಗುತ್ತಿವಾಗ ಕಿನ್ನರಿ ತಮ್ಮ ಮದುವೆಯಲ್ಲಿ ವರದಕ್ಷಿಣೆ ಎಂದು ಚಿನ್ನ, ಬೆಳ್ಳಿ  ಮತ್ತು ಆಭರಣಗಳ ಬದಲು ಪೋಷಕರಿಂದ ಪುಸ್ತಕಗಳನ್ನು ತೆಗೆದುಕೊಂಡಿದ್ದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ಹಳ್ಳಿ ಹಕ್ಕಿ ಬರಿತಿದೆ ಮೈತ್ರಿ ಸರ್ಕಾರ ಕೆಡವಿದ ಪುಸ್ತಕ

    ಹಳ್ಳಿ ಹಕ್ಕಿ ಬರಿತಿದೆ ಮೈತ್ರಿ ಸರ್ಕಾರ ಕೆಡವಿದ ಪುಸ್ತಕ

    ಮೈಸೂರು: ಮೈತ್ರಿ ಸರ್ಕಾರ ಕೆಡವಿದ ವಿವರವು ಪುಸ್ತಕ ರೂಪದಲ್ಲಿ ಬರಲಿದೆ. ಮಾಜಿ ಸಚಿವ ಎಚ್. ವಿಶ್ವನಾಥ್ ಈ ಪುಸ್ತಕ ಬರೆಯುತ್ತಿದ್ದಾರೆ.

    ಮೈಸೂರಿನಲ್ಲಿ ಮಾತನಾಡಿದ ಎಚ್. ವಿಶ್ವನಾಥ್ ಈ ವಿಷಯ ತಿಳಿಸಿದರು. ಸರ್ಕಾರ ಬೀಳಿಸುವುದಕ್ಕೆ ಯಾರು ಯಾರು ಸಹಾಯ ಮಾಡಿದರು. ಮಾಜಿ ಸಿಎಂ ಆಗಿದ್ದವರು, ಮಾಜಿ ಮಂತ್ರಿ ಆಗಿದ್ದವರು ಹೇಗೆಲ್ಲ ಇದರಲ್ಲಿ ಪಾತ್ರವಹಿಸಿದರು ಎಂಬ ಎಲ್ಲಾ ಮಾಹಿತಿಗಳನ್ನು ಬಯಲು ಮಾಡುತ್ತೇನೆ ಎಂದರು.

    ನಾನು ಇದ್ದದ್ದನ್ನು ಇದ್ದ ಹಾಗೇ ಹೇಳುವ ಮನುಷ್ಯ. ಈಗ ಬರೆಯುತ್ತಿರುವ ಪುಸ್ತಕದಲ್ಲಿ ಸತ್ಯ ದಾಖಲಾಗುತ್ತದೆ. ಎರಡು ತಿಂಗಳಲ್ಲಿ ಪುಸ್ತಕ ಬಿಡುಗಡೆ ಆಗಲಿದೆ. ಸರ್ಕಾರ ಪತನ ಜನ ಅಂದು ಕೊಂಡ ರೀತಿ ಏಕ ಪಾತ್ರ ಅಭಿನಯ ಅಲ್ಲ. ಅದರಲ್ಲಿ ಬಹಳಷ್ಟು ಪಾತ್ರ ಬರುತ್ತವೆ. ಮೇಲ್ನೋಟಕ್ಕೆ ನನಗೆ ಏನೂ ಗೊತ್ತಿಲ್ಲ ಅಂದವರ ಬಣ್ಣವೂ ಇಲ್ಲಿ ಬಯಲಾಗುತ್ತದೆ. ಎಲ್ಲವನ್ನೂ ನೋಟ್ ಮಾಡಿಕೊಂಡಿದ್ದೇನೆ. ನೋಟ್ ಮುಗಿದ ಮೇಲೆ ಬರಹ ಶುರುವಾಗುತ್ತೆ. ಎರಡು ತಿಂಗಳಲ್ಲಿ ಪುಸ್ತಕ ಹೊರ ಬರುತ್ತೆ ಎಂದು ತಿಳಿಸಿದರು.

    ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿ, ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆ. ರಾಜಕಾರಣ ನಂಬಿಕೆ, ಆತ್ಮವಿಶ್ವಾಸ, ಆಶಾವಾದದ ಮೇಲೆಯೇ ನಡೆಯಬೇಕು. ನಾನು ಈಗಲೂ ಆಶಾವಾದ ಹೊಂದಿದ್ದೇನೆ. ಸಚಿವ ಸ್ಥಾನ ಸಿಗುವ ನಿರೀಕ್ಷೆ ಹೊಂದಿದ್ದೇನೆ. ಯಡಿಯೂರಪ್ಪ ದೆಹಲಿಗೆ ಹೋಗಿ ಬಂದಿದ್ದಾರೆ. ಯಾರ ಹೆಸರುಗಳು ಇವೆ, ಯಾರು ಇಲ್ಲ ಎಂಬುದು ಯಾರಿಗೂ ಗೊತ್ತಿಲ್ಲ. ಏನಾಗುತ್ತೋ ಕಾದು ನೋಡೋಣ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಶ್ರೀರಾಮುಲುಗೆ “ತೆಲುಗಿನಿಂದ ಕನ್ನಡ ಕಲಿಯಿರಿ” ಪುಸ್ತಕ ಕಳುಹಿಸಿದ ಕವಿತಾ ರೆಡ್ಡಿ

    ಶ್ರೀರಾಮುಲುಗೆ “ತೆಲುಗಿನಿಂದ ಕನ್ನಡ ಕಲಿಯಿರಿ” ಪುಸ್ತಕ ಕಳುಹಿಸಿದ ಕವಿತಾ ರೆಡ್ಡಿ

    ರಾಯಚೂರು: ನಗರದ ಪೊಲೀಸ್ ಮೈದಾನದಲ್ಲಿ ಗಣರಾಜ್ಯೋತ್ಸವ ವೇಳೆ ಧ್ವಜಾರೋಹಣ ಬಳಿಕ ಮಾತನಾಡಿದ ಭಾಷಣ ವೇಳೆ ಕನ್ನಡ ತಪ್ಪುತಪ್ಪಾಗಿ ಉಚ್ಛರಿಸಿದ್ದ ಆರೋಗ್ಯ ಸಚಿವ ಶ್ರೀರಾಮುಲುಗೆ ಕಾಗಜ್ ಇಂಡಿಯಾ ಸಂಸ್ಥಾಪಕಿ, ಪರ್ವತಾರೋಹಿ ಕವಿತಾ ರೆಡ್ಡಿ “ತೆಲುಗಿನಿಂದ ಕನ್ನಡ ಕಲಿಯಿರಿ” ಪುಸ್ತಕವನ್ನು ಕಳುಹಿಸುವ ಮೂಲಕ ಅಣುಕಿಸಿದ್ದಾರೆ.

    ಗೌರವಾನ್ವಿತ ರಾಮುಲು ಅಣ್ಣನವರೇ ಕನ್ನಡ ಕೊಲ್ಲಬೇಡಿ. ನಿಮಗಾಗಿ ತೆಲುಗಿನಿಂದ ಕನ್ನಡ ಕಲಿಯಿರಿ ಪುಸ್ತಕ ಕಳುಹಿಸುವೆ. ಮುಂದಿನ ಆಗಸ್ಟ್ 15 ರೊಳಗಾಗಿ ಕನ್ನಡ ಕಲಿಯಿರಿ. ಮತ್ತೊಮ್ಮೆ ಕನ್ನಡ ಕೊಲ್ಲದಿರಿ. ಕುಮಾರಸ್ವಾಮಿಯವರನ್ನು ಪಾಕಿಸ್ತಾನಕ್ಕೆ ಹೋಗು ಎಂದು ಹೇಳುವ ಮುಂಚೆ ಕನ್ನಡ ಕಲಿಯಿರಿ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಈ ಮೂಲಕ ಶ್ರೀರಾಮುಲು ಕನ್ನಡ ಉಚ್ಛಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತವಾಗಿದೆ. 75 ರೂಪಾಯಿ ಬೆಲೆಯ ಪುಸ್ತಕವನ್ನು ರಾಮುಲು ಬಳ್ಳಾರಿ ನಿವಾಸದ ವಿಳಾಸಕ್ಕೆ ಕವಿತಾ ರೆಡ್ಡಿ ಆರ್ಡರ್ ಮಾಡಿದ್ದಾರೆ.

  • ಡಾ. ಚಿದಾನಂದಮೂರ್ತಿ ಅವರ ಕಿರು ಪರಿಚಯ

    ಡಾ. ಚಿದಾನಂದಮೂರ್ತಿ ಅವರ ಕಿರು ಪರಿಚಯ

    ಬೆಂಗಳೂರು: ಖ್ಯಾತ ಸಾಹಿತಿ, ಲೇಖಕ, ಸಂಶೋಧಕ ಡಾ. ಚಿದಾನಂದಮೂರ್ತಿ(88) ಅವರು ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.

    ಬಾಲ್ಯ ಮತ್ತು ಶಿಕ್ಷಣ:
    ಚಿದಾನಂದಮೂರ್ತಿಗಳು 1931 ಮೇ 10ರಂದು ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲೂಕಿನ ಹಿರೆಕೋಗಲೂರಿನಲ್ಲಿ ಜನಿಸಿದರು. ನಂತರ ಮೂರ್ತಿಗಳ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾಭ್ಯಾಸ ಕೋಗಲೂರು, ಸಂತೆಬೆನ್ನೂರುಗಳಲ್ಲಿ ಮಾಡಿದರು. ಇಂಟರ್ ಪರೀಕ್ಷೆಯಲ್ಲಿ ಇಡೀ ರಾಜ್ಯಕ್ಕೆ ಅವರು 10ನೇ ಸ್ಥಾನಗಳಿಸಿದರು. ಆದರೆ ಮೆಡಿಕಲ್ ಎಂಜಿನಿಯರಿಂಗ್ ಸೇರದೆ ಕನ್ನಡ ಆನರ್ಸ್ ಸೇರಿದರು. ಅಂದಿನ ಪ್ರಸಿದ್ಧ ಅಧ್ಯಾಪಕರ ಮಾರ್ಗದರ್ಶನ ಮತ್ತು ಸುತ್ತೂರು ಸಂಸ್ಥಾನದ ಉಚಿತ ವಿದ್ಯಾರ್ಥಿನಿಲಯದ ಪೋಷಣೆಯಲ್ಲಿ ಪ್ರಥಮ ವರ್ಗ, ಪ್ರಥಮ ಶ್ರೇಣಿ ಅಲ್ಲದೆ ಆಲ್ ಆನರ್ಸ್ ಚಿನ್ನದ ಪದಕ ಕೂಡ ಪಡೆದರು. ಬಳಿಕ ಎರಡು ವರ್ಷಗಳ ಕಾಲ ಬೆಂಗಳೂರು, ತುಮಕೂರು, ಕೋಲಾರದ ಪದವಿ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕರಾದರು. ಮತ್ತ ರಜೆ ಹಾಕಿ ಮೈಸೂರಿನಲ್ಲಿ ಕನ್ನಡ ಎಂ.ಎ ಪದವಿಯನ್ನು ಪ್ರಥಮ ಸ್ಥಾನದೊಂದಿಗೆ ಗಳಿಸಿದರು.

    ಶಾಸನ ಕ್ಷೇತ್ರದೆಡೆಗೆ:
    ಎಂ.ಎ ಓದುವಾಗಲೇ ಡಿ.ಎಲ್. ನರಸಿಂಹಾಚಾರ್ಯರ ಸೂಚನೆಯ ಮೇರೆಗೆ ಪಂಪನಿಗೆ ಹಿನ್ನೆಲೆಯಾಗಿದ್ದ ಸಾಮಾಜಿಕ ಬದುಕನ್ನು ಶಾಸನಗಳನ್ನು ಆಧರಿಸಿ ಪುನಃರಚಿಸುವ ಪ್ರಯತ್ನಕ್ಕೆ ಮೂರ್ತಿಗಳು ತೊಡಗಿದರು. ಅದರ ಫಲವಾಗಿ ಬಂದ ಲೇಖನ ‘ಪಂಪಕವಿ ಮತ್ತು ಮೌಲ್ಯಪ್ರಸಾರ’. ಆ ಮೂಲಕ ಶಾಸನ ಕ್ಷೇತ್ರದೆಡೆಗೆ ಹೊರಳಿದ ಮೂರ್ತಿಗಳು ‘ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’ ಎಂಬ ನಿಬಂಧ ಸಿದ್ಧಪಡಿಸಿ ತೀ.ನಂ. ಶೀಕಂಠಯ್ಯನವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ ಪದವಿ ಪಡೆದರು. ಈ ನಿಬಂಧ ಕನ್ನಡ ಸಂಶೋಧನ ಕ್ಷೇತ್ರದ ಮಹತ್ವಪೂರ್ಣ ಕೃತಿಯಾಗಿದೆ.

    ಅಧ್ಯಾಪಕರಾಗಿ ಸೇವೆ:
    ಆರಂಭದ ಕೆಲವು ವರ್ಷ ಪದವಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿದ್ದ ಚಿದಾನಂದಮೂರ್ತಿಗಳು 1957ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಯುವರಾಜ ಕಾಲೇಜಿನಲ್ಲಿ ಅಧ್ಯಾಪಕರಾದರು. 1960ರ ಹೊತ್ತಿಗೆ ಮೈಸೂರಿನ ಮಾನಸಗಂಗೋತ್ರಿಯ ಸ್ನಾತಕೋತ್ತರ ಕನ್ನಡ ವಿಭಾಗದ ಅಧ್ಯಾಪಕರಾದರು. 1968ರವರೆಗೆ ಅಲ್ಲಿ ಅಧ್ಯಾಪಕರಾಗಿ, ಕನ್ನಡ ರೀಡರ್ ಆಗಿದ್ದು, ನಂತರ ಬೆಂಗಳೂರು ವಿಶ್ವವಿದ್ಯಾಲಯವನ್ನು ಸೇರಿದರು. ಅಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕೆಲಸಮಾಡಿ 1990ರ ಅಕ್ಟೋಬರ್ 10ರಂದು ಸ್ವಯಂಸೇವಾ ನಿವೃತ್ತಿ ಪಡೆದರು.

    ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಇಟಲಿ, ಗ್ರೀಸ್, ಈಜಿಪ್ಟ್, ಥೈಲಾಂಡ್, ಜಪಾನ್, ಹವಾಯ್, ಸ್ವಿಟ್ಜರ್ಲ್ಯಾಂಡ್ ಮುಂತಾದ ದೇಶಗಳನ್ನು ಅವರು ಸುತ್ತಿದ್ದಾರೆ. ಸಂಶೋಧನೆಗೆ ಕನ್ನಡದ ಕಾರಣಕ್ಕೆ ಕರ್ನಾಟಕದ ಬೇರೆ ಬೇರೆ ಪ್ರಾಂತ್ಯಗಳನ್ನು ಅವರು ವ್ಯಾಪಕವಾಗಿ ಸುತ್ತಿದ್ದಾರೆ. ಬಕ್ರ್ಲಿ, ಫಿಲಡೆಲ್ಫಿಯ, ಸ್ಟಾನ್ಫೊರ್ಡ್ ಮುಂತಾದ ಹಲವಾರು ವಿಶ್ವವಿದ್ಯಾಲಯಗಳು ಮತ್ತು ವಿಶ್ವಮಟ್ಟದ ಐತಿಹಾಸಿಕ ಭಾಷಾವಿಜ್ಞಾನ ಸಮ್ಮೇಳನಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಈ ಎಲ್ಲವೂ ಅವರ ನಿರಂತರ ಅಧ್ಯಯನ ಶೀಲತೆ ಮತ್ತು ವಿದ್ವತ್ತಿನ ಸೂಚಕಗಳಾಗಿವೆ.

    ಕನ್ನಡ ಸಂಶೋಧನ ಕ್ಷೇತ್ರದಲ್ಲಿ ಚಿದಾನಂದಮೂರ್ತಿ ಅವರದು ಚಿರಸ್ಮರಣೀಯವಾದ ದೊಡ್ಡ ಹೆಸರು. ಯುಗಪ್ರವರ್ತನೆಯ ಸಂಶೋಧಕ, ಸಂಶೋಧನೆಯ ಸಂಶೋಧಕ, ಸಂಸ್ಕೃತಿ ಸಂಶೋಧಕ, ತೀ.ನಂ.ಶ್ರೀ ಉತ್ತರಾಧಿಕಾರಿ ಎಂಬೆಲ್ಲ ಹೊಗಳಿಕೆಗೆ ಮೂರ್ತಿಗಳು ಪಾತ್ರರಾಗಿದ್ದಾರೆ. ಸುಮಾರು ನಾಲ್ಕು ದಶಕಗಳವರೆಗೆ ಅವರು ಸಂಶೋಧನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ಸಂಶೋಧನೆಗಳ ಕುರಿತಾದ ಮಹತ್ವದ ಬರಹಗಳನ್ನು ಪ್ರಕಟಿಸಿದ್ದಾರೆ.

    ಚಿದಾನಂದಮೂರ್ತಿಗಳು 25ಕ್ಕೂ ಹೆಚ್ಚು ಪುಸ್ತಕಗಳನ್ನೂ, 400ಕ್ಕೂ ಹೆಚ್ಚು ಸಂಪ್ರಬಂಧಗಳನ್ನೂ ಪ್ರಕಟಿಸಿದ್ದಾರೆ. ಭಾಷೆ, ವ್ಯಾಕರಣ, ಸ್ಥಳನಾಮ, ಛಂದಸ್ಸು, ಗ್ರಂಥ ಸಂಪಾದನೆ, ಸಾಹಿತ್ಯ ಚರಿತ್ರೆ, ಜಾನಪದ, ಶಾಸನ, ಕರ್ನಾಟಕ ಇತಿಹಾಸ ಸಂಸ್ಕೃತಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸಂಶೋಧನೆ ಕೈಗೊಂಡಿದ್ದಾರೆ. 1960ರ ದಶಕಗಳಲ್ಲಿ ತಾವು ಪ್ರಕಟಿಸಿದ ಹಲವಾರು ಲೇಖನಗಳಲ್ಲೇ ಉಂಬರಿ, ಇರ್, ಡುಂಡುಚಿ, ಅಮ್ಮ, ಅಬ್ಬೆ, ಅಲ್ಲಮ, ಬಾಮಬ್ಬೆ, ಶಬ್ದಗಳನ್ನು ಕನ್ನಡ ಭಾಷೆ, ವ್ಯಾಕರಣ, ಅವಸ್ಥಾಂತರಗಳ ಹಿನ್ನೆಲೆಯಲ್ಲಿ ಮೂರ್ತಿಗಳು ಪರಿಶೀಲಿಸಿದ್ದಾರೆ. ಅನಂತರ ‘ಭಾಷಾ ವಿಜ್ಞಾನದ ಮೂಲತತ್ವಗಳು’ (1965), ‘ವಾಗಾರ್ಥ'(1981) ಎಂಬ ಎರಡು ಮುಖ್ಯವಾದ ಅವರ ಭಾಷಾಸಂಬಂಧವಾದ ಕೃತಿಗಳು ಪ್ರಕಟವಾದವು.

    ಸಾಧನೆ:
    ಕನ್ನಡದ ಬಗೆಗಿನ ಚಿದಾನಂದಮೂರ್ತಿಗಳ ಚರಿತ್ರಾರ್ಹ ಸಾಧನೆ ಎಂದರೆ ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆ. 1985ರಲ್ಲಿ ಕಾಲ್ನಡಿಗೆಯ ಮೂಲಕ ಬೆಂಗಳೂರಿನಿಂದ ಹಂಪಿಗೆ ಪ್ರಯಾಣ ಮಾಡುವಾಗ ಮೂರ್ತಿಗಳಿಗೆ ಕನ್ನಡಕ್ಕೆ ಏಕೆ ಒಂದು ಪ್ರತ್ಯೇಕ ವಿಶ್ವವಿದ್ಯಾನಿಲಯ ಅಸ್ತಿತ್ವಕ್ಕೆ ಬರಬಾರದು ಎನಿಸಿತು. ಸಾಹಿತಿಗಳ, ಕಲಾವಿದರ ಬಳಗದ ಮೂಲಕ ಆಗಿನ ಮುಖ್ಯಮಂತ್ರಿ, ಸಚಿವಸಂಪುಟ, ಶಾಸಕರ ಮೇಲೆ ಒತ್ತಾಯ ತಂದು ಅದರ ಸ್ಥಾಪನೆಗೆ ಓಡಾಡಿ ಮುಂದಿನ ಒಂದೆರಡು ವರ್ಷಗಳಲ್ಲಿ ಅದರ ಕಾರ್ಯಾರಂಭಕ್ಕೆ ಕಾರಣರಾದರು. ಕರ್ನಾಟಕದ ಬಾಷೆ, ಸಾಹಿತ್ಯ, ಇತಿಹಾಸ, ಭೂಶೋಧ, ಲಲಿತಕಲೆ, ಸಮಾಜಶಾಸ್ತ್ರ, ಜಾನಪದ, ಅರ್ಥಶಾಸ್ತ್ರ, ವಿಜ್ಞಾನ, ಸಮೂಹ ಮಾಧ್ಯಮ ಮುಂತಾದವುಗಳ ಅಧ್ಯಯನ ನಡೆಯಲು ಪೂರ್ಣಪ್ರಮಾಣದ ಉನ್ನತ ವಿಶ್ವವಿದ್ಯಾನಿಲಯವನ್ನು ಅಸ್ತಿತ್ವಕ್ಕೆ ತಂದು ಕನ್ನಡದ ಕೆಲಸಗಳಿಗೆ ಹೊಸ ಚಾಲನೆ ಕೊಟ್ಟರು.

    ಪ್ರಶಸ್ತಿ:
    ಚಿದಾನಂದಮೂರ್ತಿಗಳಿಗೆ ಅನೇಕ ಗೌರವಗಳು, ಅವರ ಕೃತಿಗಳಿಗೆ ಸಾಹಿತ್ಯ ಆಕಾಡೆಮಿ ಪುರಸ್ಕಾರಗಳು, ಗೌರವಗಳು ದೊರೆತಿವೆ. ಅಲ್ಲದೇ ಅವರ ಹೆಸರಿನಲ್ಲಿ ‘ಚಿದಾನಂದ ಪ್ರಶಸ್ತಿ’ ಎಂಬುದನ್ನು ಸ್ಥಾಪಿಸಿ ಚಿದಾನಂದಮೂರ್ತಿಯವರ ಜನ್ಮದಿನವಾದ ಮೇ 10ರಂದು ಪ್ರತೀವರ್ಷ ಕನ್ನಡ ಸಂಶೋಧನ ಕ್ಷೇತ್ರದಲ್ಲಿ ಕೆಲಸ ಮಾಡಿದ ವಿದ್ವಾಂಸರಿಗೆ ಅದನ್ನು ನೀಡುತ್ತ ಬಂದಿದ್ದಾರೆ.

  • ಟಿಪ್ಪು ಪಠ್ಯ ಗೊಂದಲದಲ್ಲಿ ಸರ್ಕಾರ

    ಟಿಪ್ಪು ಪಠ್ಯ ಗೊಂದಲದಲ್ಲಿ ಸರ್ಕಾರ

    ಬೆಂಗಳೂರು: ಭಾರೀ ವಿವಾದಕ್ಕೆ ಕಾರಣವಾಗಿರುವ ಟಿಪ್ಪು ಸುಲ್ತಾನ್ ಪಠ್ಯ ವಿಚಾರ ಸರ್ಕಾರಕ್ಕೆ ಗೊಂದಲ ತಂದಿದೆ. ಯಾವ ನಿರ್ಧಾರ ತೆಗೆದುಕೊಳ್ಳಬೇಕು ಅನ್ನೋ ಗೊಂದಲದಲ್ಲಿ ಸರ್ಕಾರ ಇದ್ದು, ಅಂತಿಮ ನಿರ್ಧಾರಕ್ಕಾಗಿ ತಲೆ ಕೆಡಿಸಿಕೊಂಡಿದೆ.

    ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಪಠ್ಯದಲ್ಲಿ ಟಿಪ್ಪು ಸುಲ್ತಾನ್ ಪಠ್ಯವನ್ನು ತೆಗೆಯಬೇಕು ಅಂತ ಬಿಜೆಪಿ ಸರ್ಕಾರ ಬಂದಾಗ ಸಿಎಂ ಯಡಿಯೂರಪ್ಪಗೆ ಮನವಿ ಮಾಡಿದ್ರು. ಟಿಪ್ಪು ದೇಶದ್ರೋಗಿ, ಮತಾಂಧ, ನರಹಂತಕ ಅನ್ನೋದು ಶಾಸಕ ಅಪ್ಪಚ್ಚು ರಂಜನ್ ವಾದವಾಗಿದೆ. ಶಾಸಕರ ಮನವಿ ಮೇರೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪಠ್ಯ ಇರಬೇಕೋ ಬೇಡವೋ ಅನ್ನೋ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ಕಮಿಟಿ ನೇಮಕ ಮಾಡಿ ವರದಿ ನೀಡುವಂತೆ ಸೂಚನೆ ನೀಡಿದರು. ಈಗಾಗಲೇ ಪಠ್ಯಪುಸ್ತಕ ಕಮಿಟಿ ತನ್ನ ವರದಿಯನ್ನ ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ಕಮಿಟಿ ಅಭಿಪ್ರಾಯದಲ್ಲಿ ಪಠ್ಯ ತೆಗೆಯೋದು ಬೇಡ ಅಂತ ಸಲಹೆ ನೀಡಲಾಗಿದೆ.

    ವರದಿ ಈಗ ಸರ್ಕಾರದ ಮುಂದೆ ಇದೆ. ಈಗಾಗಲೇ ಟಿಪ್ಪು ಜಯಂತಿ ರದ್ದು ಮಾಡಿರುವ ಸರ್ಕಾರಕ್ಕೆ ಪಠ್ಯವನ್ನು ತೆಗೆಯೋದು ದೊಡ್ಡ ಚಾಲೆಂಜ್ ಆಗಿದೆ. ಅನೇಕ ವರ್ಷಗಳಿಂದ ಟಿಪ್ಪು ಪಠ್ಯ ಇದೆ. ಈಗ ದಿಢೀರ್ ಅಂತ ತೆಗೆದರೆ ವಿರೋಧಗಳು ವ್ಯಕ್ತವಾಗೋದು ಸಹಜ. ಹೀಗಾಗಿ ತಾಳ್ಮೆಯಿಂದ ಪ್ರಕರಣ ಬಗೆಹರಿಸಲು ಸರ್ಕಾರ ತೀರ್ಮಾನ ಮಾಡಿದೆ. ಈಗಾಗಲೇ ವರದಿ ಸಂಬಂಧ ಸಿಎಂ ಜೊತೆ ಚರ್ಚೆ ಮಾಡೋದಾಗಿ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಸಿಎಂ ಜೊತೆ ಚರ್ಚೆ ಬಳಿಕ ಅಂತಿಮ ನಿರ್ಧಾರ ಸರ್ಕಾರ ತೆಗೆದುಕೊಳ್ಳುತ್ತೆ. ಆದ್ರೆ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಅನ್ನೋದು ಮಾತ್ರ ಕುತೂಹಲಕ್ಕೆ ಕಾರಣವಾಗಿದೆ.

  • ನೆರೆ ಪರಿಶೀಲನೆಗೆ ಬಂದು ಹುಡುಗನ ಪುಸ್ತಕದಲ್ಲಿರುವ ವಾಕ್ಯ ನೋಡಿ ದಂಗಾದ ಡಿಸಿ

    ನೆರೆ ಪರಿಶೀಲನೆಗೆ ಬಂದು ಹುಡುಗನ ಪುಸ್ತಕದಲ್ಲಿರುವ ವಾಕ್ಯ ನೋಡಿ ದಂಗಾದ ಡಿಸಿ

    ಧಾರವಾಡ: ನೆರೆ ಸಂತ್ರಸ್ತರ ಮನೆಗಳ ಪರಿಶೀಲನೆಗೆಂದು ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮಕ್ಕೆ ಬಂದಿದ್ದ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು, ಅಲ್ಲಲ್ಲಿ ನಿಂತಿದ್ದ ವಿದ್ಯಾರ್ಥಿಗಳನ್ನು ಮಾತನಾಡಿಸುತ್ತ ಹೋಗುತ್ತಿದ್ದರು.

    ಈ ವೇಳೆ ಮನೆಯ ಕಟ್ಟೆಯ ಮೇಲೆ ಬುಕ್ ಹಿಡಿದು ಜಿಲ್ಲಾಧಿಕಾರಿಗಳು ಹೋಗುವುದನ್ನು ನೋಡುತ್ತ ನಿಂತಿದ್ದ ಹುಡುಗನೊಬ್ಬನನ್ನು ಕಂಡ ಜಿಲ್ಲಾಧಿಕಾರಿಗಳು, ಆ ಹುಡುಗನ ಬಳಿ ಹೋಗಿ ಎಷ್ಟನೇ ತರಗತಿ ಓದುತ್ತಿದ್ದೀಯ ಎಂದು ಮಾತನಾಡಿಸಿ ಆತ ಹಿಡಿದಿದ್ದ ಪುಸ್ತಕವನ್ನು ತೆಗೆದುಕೊಂಡು ನೋಡಲಾರಂಭಿಸಿದರು.

    ಜಿಲ್ಲಾಧಿಕಾರಿಯವರು ಪುಸ್ತಕವನ್ನು ಪಡೆದುಕೊಳ್ಳುತ್ತಿದ್ದಂತೆ ಆ ವಿದ್ಯಾರ್ಥಿ ಅಲ್ಲಿಂದ ಕಾಲ್ಕಿತ್ತ. ಜಿಲ್ಲಾಧಿಕಾರಿಗಳು ಆಶ್ಚರ್ಯಗೊಂಡು ಆ ಬುಕ್ ತೆಗೆದು ನೋಡುತ್ತಿದ್ದಂತೆ ಆ ಬುಕ್ ನಲ್ಲಿ ಆ ಹುಡುಗ ಯಾರಿಗೋ ಐ ಲವ್ ಯೂ ಎಂದು ಬರೆದಿದ್ದು, ಕಂಡುಬಂದಿದೆ. ಇದನ್ನು ನೋಡಿ ದಂಗಾದ ಜಿಲ್ಲಾಧಿಕಾರಿಗಳು, ನೋಡಿ ಇಲ್ಲಿ ಎಂದು ಉಪವಿಭಾಗಾಧಿಕಾರಿಗಳಿಗೂ ಅದನ್ನು ತೋರಿಸಿದರು.

    ಆದರೆ ಆ ಬಾಲಕ ಅವರ ಕೈಗೆ ಸಿಗದೇ ಪರಾರಿಯಾಗಿದ್ದ. ಜಿಲ್ಲಾಧಿಕಾರಿಗಳು ನಸುನಕ್ಕು ಅಲ್ಲಿಂದ ಹೋಗಿದ್ದಾರೆ. ಜಿಲ್ಲಾಧಿಕಾರಿ ಆ ಪುಸ್ತಕವನ್ನು ತನ್ನ ಕೈಯಲ್ಲೇ ಹಿಡಿದುಕೊಂಡು ಹೋಗಿದ್ದಾರೆ.