Tag: Bommai Cabinet

  • ರಾಜುಗೌಡ, ಕುಮಾರ್ ಬಂಗಾರಪ್ಪಗೆ ಸಚಿವ ಸ್ಥಾನ ನೀಡುವಂತೆ ಅಭಿಮಾನಿಗಳ ಆಗ್ರಹ

    ರಾಜುಗೌಡ, ಕುಮಾರ್ ಬಂಗಾರಪ್ಪಗೆ ಸಚಿವ ಸ್ಥಾನ ನೀಡುವಂತೆ ಅಭಿಮಾನಿಗಳ ಆಗ್ರಹ

    – ರಾಜುಗೌಡ ಅಭಿಮಾನಿಗಳಿಂದ ಎಚ್ಚರಿಕೆಯ ಸಂದೇಶ

    ಯಾದಗಿರಿ/ಶಿವಮೊಗ್ಗ: ಶಾಸಕರಾದ ರಾಜೂಗೌಡ ಮತ್ತು ಕುಮಾರ್ ಬಂಗಾರಪ್ಪ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಅಭಿಮಾನಿಗಳು ಆಗ್ರಹಿಸಿದ್ದಾರೆ. ಕುಮಾರ್ ಬಂಗಾರಪ್ಪ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿ ಸಚಿವ ಸ್ಥಾನ ಸಿಗುವಂತೆ ಪ್ರಾರ್ಥಿಸಿದರು.

    ಸೊರಬ ತಾಲೂಕಿನ ಮತ್ತು ರಾಜ್ಯದ ಅಭಿವೃದ್ಧಿ, ಪಕ್ಷದ ಸಂಘಟನೆಗಾಗಿ, ಹಿಂದುಳಿದ ವರ್ಗದವರ ಕಲ್ಯಾಣಕ್ಕಾಗಿ ಅವರಿಗೆ ಸಚಿವ ಸ್ಥಾನ ಸಿಗಬೇಕು ಎಂಬ ಹಿನ್ನೆಲೆಯಲ್ಲಿ ಶಾಸಕ ಕುಮಾರ್ ಬಂಗಾರಪ್ಪ ಅವರ ಹೆಸರಿನಲ್ಲಿ ಅವರ ಕುಲ ದೇವರಾದ ತಾಲೂಕಿನ ಮಂಚಿ ಆಂಜನೇಯ ಸ್ವಾಮಿಗೆ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು. ಈ ಸಂಧರ್ಭದಲ್ಲಿ ಉದ್ರಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಹನುಮಂತಪ್ಪ, ಸುರೇಶ್, ಸುರೇಂದ್ರ, ಶಿವಮೂರ್ತಿ ಹಲವರು ಹಾಜರಿದ್ದರು. ಇದನ್ನೂ ಓದಿ: ಶೆಟ್ಟರ್ ರೀತಿ ಮಂತ್ರಿ ಸ್ಥಾನ ಬೇಡ ಎನ್ನಲ್ಲ: ಈಶ್ವರಪ್ಪ

     

    ರಾಜುಗೌಡ ಅಭಿಮಾನಿಗಳಿಂದ ಪ್ರತಿಭಟನೆ: ಸುರಪುರ ಶಾಸಕ ರಾಜುಗೌಡ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಯಾದಗಿರಿಯಲ್ಲಿ ಶಾಸಕ ರಾಜುಗೌಡ ಅಭಿಮಾನಿ ಬಳಗವು ಪ್ರತಿಭಟನೆ ನಡೆಸಲಾಯಿತು. ನಗರದ ವಾಲ್ಮೀಕಿ ವೃತ್ತದಲ್ಲಿ ಬಳಗದ ಸದಸ್ಯರು ಸೇರಿ ಹಿಂದುಳಿದ ಜಿಲ್ಲೆ ಯಾದಗಿರಿ ಸಮಗ್ರ ಅಭಿವೃದ್ಧಿ ಗಾಗಿ ಶಾಸಕ ರಾಜುಗೌಡ ಅವರಿಗೆ ಸಚಿವ ಸ್ಥಾನ ನೀಡಿ ಯಾದಗಿರಿ ಜಿಲ್ಲೆಗೆ ಪ್ರಾಮುಖ್ಯತೆ ನೀಡಬೇಕೆಂದು ಬಿಜೆಪಿ ಹೈಕಮಾಂಡಗೆ ಒತ್ತಾಯ ಮಾಡಿದರು.

    ಸಿಎಂ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ರಾಜುಗೌಡ ಅವರಿಗೆ ಸೂಕ್ತ ಸಚಿವ ಸ್ಥಾನ ಒದಗಿಸಿ ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿಗೆ ಸಚಿವ ಸ್ಥಾನ ಒದಗಿಸಬೇಕು. ಒಂದು ವೇಳೆ ಸಚಿವ ಸ್ಥಾನ ನೀಡದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಪ್ರತಿಭಟನೆ ನಿರತರು ಎಚ್ಚರಿಕೆ ನೀಡಿದರು.  ಇದನ್ನೂ ಓದಿ: ಡಿಸಿಎಂ ಪಟ್ಟಕ್ಕಾಗಿ ಮತ್ತೆ ಗಡೇ ದುರ್ಗಾದೇವಿ ಮೊರೆಹೋದ ಶ್ರೀರಾಮುಲು

  • Exclusive: ಉಸಿರಿರೋತನಕ ಕೇಳಿ ಸಚಿವ ಸ್ಥಾನ ಪಡೆಯಲ್ಲ- ಕುಂದಾಪುರದ ವಾಜಪೇಯಿ ಹಾಲಾಡಿ ನೇರ ನುಡಿ

    Exclusive: ಉಸಿರಿರೋತನಕ ಕೇಳಿ ಸಚಿವ ಸ್ಥಾನ ಪಡೆಯಲ್ಲ- ಕುಂದಾಪುರದ ವಾಜಪೇಯಿ ಹಾಲಾಡಿ ನೇರ ನುಡಿ

    – ಪಬ್ಲಿಕ್ ಟಿವಿ ಜೊತೆ ಮನಸ್ಸು ಬಿಚ್ಚಿಟ್ಟ ಹಾಲಾಡಿ ಶ್ರೀನಿವಾಸ್ ಶೆಟ್ಟಿ

    ಉಡುಪಿ: ನಾನು ಸಚಿವ ಸ್ಥಾನವನ್ನು ಯಾರ ಬಳಿಯೂ ಕೇಳಲು ಹೋಗುವುದಿಲ್ಲ. ನನ್ನ ಉಸಿರು ಇರೋತನಕ ನಾನು ಬೆಂಗಳೂರಿಗೆ ಹೋಗಿ ಸಚಿವ ಸ್ಥಾನ ಕೇಳಲ್ಲ. ಯಾರ ಕಾಲಿಗೂ ಬೀಳುವುದಿಲ್ಲ ಎಂದು ಉಡುಪಿ ಜಿಲ್ಲೆಯ ಕುಂದಾಪುರ ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಯಾವ ನಾಯಕನ ಹಿಂದೆ ಸುತ್ತು ಬರುತ್ತಾ ತಿರುಗಾಡಲು ಹೋಗುವುದಿಲ್ಲ. ನಾನು ರಾಜಕೀಯದಲ್ಲಿ ಸಮತೋಲನ ಕಳೆದುಕೊಳ್ಳುವುದಿಲ್ಲ. ನಾನು ರಾಜಕೀಯದಲ್ಲಿ ಸ್ವಾಭಿಮಾನ ಬಿಟ್ಟಿಲ್ಲ. ಈ ಹಿಂದೆ ನನ್ನನ್ನು ಕರೆದು ತಪ್ಪು ಮಾಡಿದ್ದರು. ಆಗಲೂ ನಾನು ಸಚಿವ ಸ್ಥಾನ ಕೇಳಿರಲಿಲ್ಲ. ಈಗಲೂ ಕೇಳಲು ಹೋಗಲ್ಲ ಎಂದರು.

    ಸರ್ಕಾರಿ ಕಾರು ಗನ್ ಮ್ಯಾನ್ ಮನೆ ಬೇಡ:
    ರಾಜಕೀಯ ಲಾಬಿ, ಜಾತಿವಾದಿತನ ನಾನು ಮಾಡುವುದಿಲ್ಲ. ಯಾರ ಕಾಲಿಗೆ ಬಿದ್ದು ನಾನು ಕೆಲಸ ತೆಗೆದುಕೊಳ್ಳುವುದಿಲ್ಲ. ಕೆಲಸ ಕೊಟ್ಟರೆ ನಾನು ಅದನ್ನು ನಿಭಾಯಿಸುತ್ತೇನೆ. ಶ್ರದ್ಧೆಯಿಂದ ಮಾಡುತ್ತೇನೆ. ಶಾಸಕನಾಗಿ ಜನ ಸೇವೆಯನ್ನು ಐದು ಅವಧಿಯಲ್ಲೂ ಮಾಡುತ್ತಿದ್ದೇನೆ ಎಂದು ಹಾಲಾಡಿ ಹೇಳಿದರು.

    ನಾನು ಮಂತ್ರಿಯಾದರೆ ಸರ್ಕಾರಿ ಕಾರು, ಎಸ್ಕಾರ್ಟ್, ಗನ್ ಮ್ಯಾನ್ ತೆಗೆದುಕೊಳ್ಳುವುದಿಲ್ಲ. ನಾನು ಜನರ ಜೊತೆ ಕೆಲಸ ಮಾಡುವವನು ನನಗೆ ಯಾವ ಜೀವ ಭಯವಿಲ್ಲ. ಜೀವ ಭಯ ಇದ್ದವರು ಜನಸೇವೆ ಮಾಡಲು ಸಾಧ್ಯವಿಲ್ಲ. ನನಗೆ ಈವರೆಗೆ ಯಾರಿಂದಲೂ ಯಾವುದೇ ಕರೆಗಳು ಮಾಹಿತಿಗಳು ಬಂದಿಲ್ಲ. ಕರೆ ಬಂದರೆ ನಾನು ಇದನ್ನು ಹೇಳಲು ಸಿದ್ಧನಿದ್ದೇನೆ ಎಂದರು. ನಾನು ಹೆಡ್ ರಾಜಕಾರಣಿ ಅಲ್ಲ. ನನ್ನದು ನೇರನುಡಿಯ ರಾಜಕಾರಣ. ದುರಹಂಕಾರ ಅಲ್ಲ, ಯಾರ ಭಯದಲ್ಲೂ ಇಲ್ಲ. ಮತದಾರರ ಮತ್ತು ಕಾರ್ಯಕರ್ತರ ಋಣದಲ್ಲಿ ಮಾತ್ರ ನಾನಿರೋದು ಎಂದರು.

    ಸ್ಥಾನಮಾನ ಕೇಳುವುದು ಪ್ರಜಾಪ್ರಭುತ್ವ ಅಲ್ಲ
    ಕೇಳಿ ಸಚಿವ ಸ್ಥಾನವನ್ನ ಪಡೆಯುವುದು ಪ್ರಜಾಪ್ರಭುತ್ವ ವ್ಯವಸ್ಥೆ ಅಲ್ಲ. ಕೇಳಿ ಅಧಿಕಾರವನ್ನು ಪಡೆಯುವುದು ಪ್ರಜಾಪ್ರಭುತ್ವ ವ್ಯವಸ್ಥೆಯೇ ಅಲ್ಲ. ಶ್ವಾಸ ಇದ್ದರೆ ಸಚಿವ ಸ್ಥಾನ ಕೇಳಲು ಹೋಗಲ್ಲ. ನಾನು ಜಾತ್ಯಾತೀತ ರಾಜಕಾರಣಿ. ನನ್ನ ಹುಟ್ಟಿನಿಂದ ನಾನು ಜಾತಿ ಸಂಘರ್ಷಕ್ಕೆ ಹೋಗಿಲ್ಲ. ಪ್ರಬಲ ಜಾತಿಯಲ್ಲಿ ಹುಟ್ಟಿದ್ದು ಆಕಸ್ಮಿಕ. ಎಲ್ಲಾ ಜಾತಿಯವರು ಮತ ಹಾಕಿ ನನ್ನನ್ನು ಗೆಲ್ಲಿಸಿದ್ದಾರೆ. ಒಂದು ಜಾತಿಯ ಉದ್ಧಾರಕ್ಕಾಗಿ ಜನ ನನ್ನನ್ನು ಗೆಲ್ಲಿಸಿದ್ದಲ್ಲ ಎಂದು ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು. ಇದನ್ನೂ ಓದಿ: ಇಂದಿನಿಂದ ಆಗಸ್ಟ್ 1ರವರೆಗೆ ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ

    ಜಾತಿವಾದಿಗಳು ಶಾಸಕರಾಗಲೇಬಾರದು
    ಜಾತಿವಾದಿಗಳು ಜಾತಿಯ ಸಂಘಕ್ಕೆ ಸಚಿವರಾಗಬೇಕು. ಜಾತಿವಾದಿಗಳು ಯಾವುದೇ ಕಾರಣಕ್ಕೂ ಶಾಸಕರಾಗಬಾರದು. ಜಾತಿವಾದಿಗಳು ಸಾರ್ವತ್ರಿಕ ಚುನಾವಣೆಗೆ ಬರಬಾರದು. ನನ್ನಲ್ಲಿ ಯಾವುದೇ ನಾಟಕೀಯ ಮಾತುಗಳು ಇಲ್ಲ. ಉಪಯೋಗಕ್ಕೆ ಇಲ್ಲದ್ದನ್ನ ಕೊಟ್ಟರೆ ಕಿಸೆಗೆ ಹಾಕಿಕೊಂಡು ಬರುವುದಿಲ್ಲ. ಶಾಸಕರು ಹೆರಿಗೆ ಕೋಣೆಯ ದಾದಿಯ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಮಾರ್ಮಿಕವಾಗಿ ಹೇಳಿದರು. ನನ್ನ ಮಾತುಗಳನ್ನು ನೀವು ಹೇಗೆ ಬೇಕಾದರೂ ವಿಶ್ಲೇಷಣೆ ಮಾಡಿಕೊಳ್ಳಬಹುದು. ವಿಶ್ಲೇಷಣೆ ಮಾಡಲು ಮಾಧ್ಯಮಗಳಿಗೆ ಹಕ್ಕು ಇದೆ ಎಂದರು. ಇದನ್ನೂ ಓದಿ: ಬೊಮ್ಮಾಯಿ ಸಂಪುಟದಲ್ಲಿ ಸಚಿವನಾಗೋದು ನನಗೆ ಇಷ್ಟವಿಲ್ಲ: ಜಗದೀಶ್ ಶೆಟ್ಟರ್

    ಹಾಲಾಡಿ ಶ್ರೀನಿವಾಸ್ ಶೆಟ್ಟಿ ಉಡುಪಿ ಜಿಲ್ಲೆಯ ಕುಂದಾಪುರದ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. ಸಚಿವ ಸ್ಥಾನ ಕೊಡುವುದಾಗಿ ಬೆಂಗಳೂರಿಗೆ ಕರೆಸಿಕೊಂಡು ಬಿಜೆಪಿ ಒಮ್ಮೆ ಮೋಸ ಮಾಡಿತ್ತು. ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಮಂತ್ರಿ ಸ್ಥಾನ ಕೊಡುವ ಬದಲು ಕೋಟ ಶ್ರೀನಿವಾಸ ಪೂಜಾರಿಗೆ ಸಚಿವ ಸ್ಥಾನ ನೀಡಿತ್ತು. ಆ ಬೇಸರದಿಂದ ಪಕ್ಷೇತರರಾಗಿ ಹಾಲಾಡಿ ಸ್ಪರ್ಧೆ ಮಾಡಿ ಸುಮಾರು 40,611 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಬಿ.ಎಸ್ ಯಡಿಯೂರಪ್ಪ ಮತ್ತು ಟೀಂ ಸಂಧಾನ ಮಾಡಿ ಹಾಲಾಡಿ ತಣ್ಣಗಾಗಿದ್ದರು. ಪಕ್ಷೇತರರಾಗಿ ಗೆದ್ದ ನಂತರ ಐದು ವರ್ಷದ ಅವಧಿಯ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ತೇಜಸ್ವಿನಿ ಅನಂತ್ ಕುಮಾರ್, ಮಗಳು ಜೆಡಿಎಸ್‍ಗೆ ಬಂದ್ರೆ ಸ್ವಾಗತ, ಪಕ್ಷದಲ್ಲಿ ಉತ್ತಮ ಗೌರವ: ಎಚ್‍ಡಿಕೆ