Tag: Bommai Cabinet

  • ಕಚೇರಿಯ ಬೋರ್ಡ್ ತೆರವು – ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರಾ ಆನಂದ್ ಸಿಂಗ್?

    ಕಚೇರಿಯ ಬೋರ್ಡ್ ತೆರವು – ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರಾ ಆನಂದ್ ಸಿಂಗ್?

    ಬಳ್ಳಾರಿ: ಖಾತೆ ಬದಲಾವಣೆಗೆ ಪಟ್ಟು ಹಿಡಿದಿರುವ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಇದೀಗ ಅಸಮಾಧಾನದಿಂದ ತಮ್ಮ ಶಾಸಕರ ಕಚೇರಿಯ ಬೋರ್ಡ್ ತೆರವುಗೊಳಿಸುತ್ತಿದ್ದಾರೆ.

    ಪ್ರವಾಸೋದ್ಯಮ ಖಾತೆ ನೀಡಿದ ಹಿನ್ನೆಲೆ ಆನಂದ್ ಸಿಂಗ್ ಅಸಮಾಧಾನಗೊಂಡಿದ್ದು, ಖಾತೆ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಮಾತುಕತೆಯನ್ನೂ ನಡೆಸಿದ್ದರು. ಆದರೆ ಈ ವೇಳೆ ಸಿಎಂ ಎರಡು ದಿನ ಸಮಯ ಕೇಳಿದ್ದರು ಎನ್ನಲಾಗಿದೆ. ಇದೀಗ ಮುಖ್ಯಮಂತ್ರಿಗಳಿಂದ ಸಕಾರಾತ್ಮಕ ಸ್ಪಂದನೆ ದೊರೆಯದ ಹಿನ್ನೆಲೆ ಕಳೆದ 14 ವರ್ಷದಿಂದ ಹೊಸಪೇಟೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಮ್ಮ ಕಚೇರಿಯನ್ನು ತೆರವುಗೊಳಿಸಲು ಮುಂದಾಗಿದ್ದಾರೆ.

    ಹೊಸಪೇಟೆ ಶಾಸಕರ ಕಚೇರಿ ಬೋರ್ಡ್ ತೆರವುಗೊಳಿಸುತ್ತಿದ್ದು, ಸಂಪೂರ್ಣ ಕಚೇರಿ ಬಂದ್ ಮಾಡಲು ಆನಂದ್ ಸಿಂಗ್ ಮುಂದಾಗಿದ್ದಾರೆ. ಕ್ರೇನ್ ಮೂಲಕ ಕಚೇರಿಯನ್ನು ತೆರವುಗೊಳಿಸುತ್ತಿದ್ದಾರೆ. ಈ ಹಿಂದೆಯೂ ಸಮ್ಮಿಶ್ರ ಸರ್ಕಾರದಲ್ಲಿ ಮುನಿಸಿಕೊಂಡು ಆನಂದ ಸಿಂಗ್ ರಾಜೀನಾಮೆ ನೀಡಿದ್ದರು. ಇದೀಗ ಆನಂದ್ ಸಿಂಗ್ ನಡೆಯಿಂದ ಬಿಜೆಪಿಯಲ್ಲಿ ಅತಂಕ ಜೊತೆ ಭಿನ್ನಮತೀಯ ಚಟುವಟಿಕೆ ಜೋರಾಗುವ ಸುಳಿವು ಸಿಕ್ಕಿದೆ.

    ಭಾನುವಾರ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಆನಂದ್ ಸಿಂಗ್ ಸುಮಾರು ಅರ್ಧ ಗಂಟೆಗಳ ಕಾಲ ಮಾತನಾಡಿದ್ದರು. ಆದ್ರೆ ಭೇಟಿ ವೇಳೆ ಆನಂದ್ ಸಿಂಗ್ ಮನವೊಲಿಸಲು ಸಿಎಂ ವಿಫಲರಾಗಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಭೇಟಿಯ ಬಳಿಕ ಆನಂದ್ ಸಿಂಗ್ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ಹಿಂದಿರುಗಿದ್ದರು. ಆನಂದ್ ಸಿಂಗ್ ಬೆನ್ನಲ್ಲೇ ಮತ್ತೋರ್ವ ಅಸಮಧಾನಿತ ಸಚಿವ ಎಂಟಿಬಿ ನಾಗರಾಜ್ ಸಹ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚೆ ನಡೆಸಿ, ಎರಡ್ಮೂರು ದಿನಗಳಲ್ಲಿ ತಮ್ಮ ನಿರ್ಧಾರ ತಿಳಿಸುವದಾಗಿ ಹೇಳಿ ಖಾತೆ ಹಂಚಿಕೆ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದರು.

  • ಎರಡ್ಮೂರು ದಿನಗಳಲ್ಲಿ ನನ್ನ ನಿರ್ಧಾರ ಪ್ರಕಟಿಸುತ್ತೇನೆ: ಎಂಟಿಬಿ ನಾಗರಾಜ್

    ಎರಡ್ಮೂರು ದಿನಗಳಲ್ಲಿ ನನ್ನ ನಿರ್ಧಾರ ಪ್ರಕಟಿಸುತ್ತೇನೆ: ಎಂಟಿಬಿ ನಾಗರಾಜ್

    ಬೆಂಗಳೂರು: ಎರಡ್ಮೂರು ದಿನಗಳಲ್ಲಿ ನನ್ನ ನಿರ್ಧಾರ ಪ್ರಕಟಿಸುತ್ತೇನೆ ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.

    ಸಿಎಂ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಈ ಹಿಂದೆ ಕಾಂಗ್ರೆಸ್ ನಲ್ಲಿದ್ದಾಗ ವಸತಿ ಸಚಿವನಾಗಿದ್ದವನು ರಾಜೀನಾಮೆ ನೀಡಿ ಬಿಜೆಪಿ ಸೇರಿದವನು. ಹಾಗಾಗಿ ಅದಕ್ಕಿಂತ ಉನ್ನತವಾದ ಖಾತೆಯನ್ನು ನೀಡ್ತಾರೆ ಅನ್ನೋ ನಿರೀಕ್ಷೆ ಇತ್ತು. ವಸತಿ ಖಾತೆಗಿಂತ ಒಳ್ಳೆಯ ಖಾತೆಗಳು ಯಾವುದು ಅನ್ನೋದು ಸಿಎಂಗೆ ಗೊತ್ತಿದೆ. ಲೋಕೋಪಯೋಗಿ, ಇಂಧನ, ಸಾರಿಗೆ, ಸಮಾಜ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಇಲಾಖೆಗಳನ್ನು ನನಗೆ ನೀಡಬಹುದಿತ್ತು. ಆದ್ರೆ ಸಿಎಂ ಬೊಮ್ಮಾಯಿ ಅವರು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ನೀಡಿದ್ದಾರೆ ಎಂದು ಎಂಟಿಬಿ ನಾಗರಾಜ್ ಬೇಸರ ಹೊರ ಹಾಕಿದರು.

    ಖಾತೆ ಬದಲಿಸುತ್ತಾರಾ ಅನ್ನೋ ನಂಬಿಕೆ ನನಗಿಲ್ಲ. ಖಾತೆ ಹಂಚಿಕೆಯಿಂದಾಗಿ ಬೇಸರವಾಗಿದ್ರೆ ವರಿಷ್ಠರ ಜೊತೆ ಮಾತನಾಡುತ್ತೇನೆ. ಮುಂದಿನ ದಿನಗಳಲ್ಲಿ ಮಾತಾಡಿ ನಿರ್ಧಾರ ಮಾಡೋಣ ಎಂದು ಸಿಎಂ ಭರವಸೆ ನೀಡಿದ್ದಾರೆ. ನಾನು ಸಿಎಂ ಬೊಮ್ಮಾಯಿ ಅವರ ಮಾತನ್ನು ಒಪ್ಪಿದ್ದೇನೆ ಎಂದರು.

    ಎರಡ್ಮೂರು ದಿನಗಳಲ್ಲಿ ನನ್ನ ನಿರ್ಧಾರವನ್ನು ಪ್ರಕಟಿಸುತ್ತೇನೆ ನನ್ನ ಹೇಳಿಕೆಗೆ ಇವತ್ತು ಸಹ ಬದ್ಧನಾಗಿದ್ದೇನೆ. ಸುಮಾರು ಮೂವತ್ತಕ್ಕೂ ಹೆಚ್ಚು ನಿಮಿಷ ಸಿಎಂ ಜೊತೆ ಮಾತನಾಡಿದ್ದು, ಅವರು ಸಹ ಕೆಲ ಸಲಹೆಗಳನ್ನು ನೀಡಿದ್ದಾರೆ. ಬಿಜೆಪಿ ಸರ್ಕಾರ ರಚನೆಗೆ ಕಾರಣವಾದ 17 ಜನರಲ್ಲಿ ಕೇವಲ ಮೂವರಿಗೆ ಮಾತ್ರ ಒಳ್ಳೆಯ ಖಾತೆ ನೀಡಿರುವುದು ಬೇಸರಕ್ಕೆ ಕಾರಣವಾಗಿದೆ ಎಂದರು. ಇದನ್ನೂ ಓದಿ: ಮಂತ್ರಿ ಆಗದೇ ಇರುವದಕ್ಕೆ ಬೇಜಾರಿಲ್ಲ: ಲಕ್ಷ್ಮಣ ಸವದಿ

    ಇದೇ ಖಾತೆ ಹಂಚಿಕೆಯಿಂದ ಅಸಮಾಧಾನಗೊಂಡಿರುವ ಸಚಿವ ಆನಂದ್ ಸಿಂಗ್ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ರು. ಆದ್ರೆ ಇಬ್ಬರು ನಡುವಿನ ಸಭೆ ವಿಫಲವಾಗಿದೆ ಎನ್ನಲಾಗಿದೆ. ಸಿಎಂ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಆನಂದ್ ಸಿಂಗ್ ಹಿಂದೇಟು ಹಾಕಿದರು. ಇದನ್ನೂ ಓದಿ: ನಾನು ಹಠವಾದಿ, ಅಂದುಕೊಂಡಿದ್ದನ್ನ ಸಾಧಿಸದೇ ಬಿಡಲ್ಲ: ಸಚಿವ ಆನಂದ್ ಸಿಂಗ್

  • ನಾನು ಹಠವಾದಿ, ಅಂದುಕೊಂಡಿದ್ದನ್ನ ಸಾಧಿಸದೇ ಬಿಡಲ್ಲ: ಸಚಿವ ಆನಂದ್ ಸಿಂಗ್

    ನಾನು ಹಠವಾದಿ, ಅಂದುಕೊಂಡಿದ್ದನ್ನ ಸಾಧಿಸದೇ ಬಿಡಲ್ಲ: ಸಚಿವ ಆನಂದ್ ಸಿಂಗ್

    – ಈ ಬಾರಿ ನಾನು ಸುಮ್ಮನಿರಲ್ಲ

    ಬಳ್ಳಾರಿ: ಖಾತೆ ಹಂಚಿಕೆ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ನಾಯಕರ ಅಸಮಧಾನ ಶುರುವಾಗಿದೆ. ನನಗೆ ಆ ಖಾತೆ ಬೇಕಿತ್ತು, ಈ ಖಾತೆ ಬೇಕಿತ್ತು ಎಂದು ಖ್ಯಾತೆ ತೆಗೆದಿದ್ದಾರೆ. ನಿರೀಕ್ಷೆ ಮಾಡಿದ ಖಾತೆ ಕೈ ತಪ್ಪಿದ್ದಕ್ಕೆ ಹೊಸಪೇಟೆ ಶಾಸಕ ಆನಂದ ಸಿಂಗ್ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ನಾನು ಕೇಳಿರುವ ಖಾತೆಯನ್ನು ಮುಖ್ಯಮಂತ್ರಿಗಳು ನನಗೆ ಕೊಟ್ಟಿಲ್ಲ, ಇದರ ಕುರಿತು ನನಗೆ ಬಹಳ ನೋವಿದೆ. ಪ್ರತಿ ಬಾರಿಯು ನನಗೆ ಸಣ್ಣ ಸಣ್ಣ ಖಾತೆ ನೀಡಿ ಹಿಂಪಡೆದುಕೊಳ್ಳಲಾತ್ತಿದೆ. ಈ ಹಿಂದೆ ಸುಮ್ಮನಿದ್ದೆ, ಆದರೆ ಈ ಬಾರಿ ನಾನು ಸುಮ್ಮನಿರಲ್ಲ. ನಾನು ಕೇಳಿರುವ ಖಾತೆ ಬೇಕು. ಮುಖ್ಯಮಂತ್ರಿಗಳು ನನಗೆ ಆ ಖಾತೆ ನೀಡ್ತಾರೆ ಅನ್ನೋ ನಂಬಿಕೆ ಇದೆ ಎಂದು ಹೇಳಿದರು.

    ಯಾವುದೇ ಕೆಲಸಕ್ಕೆ ಕೈ ಹಾಕಿದ್ರೂ ಸುಮ್ಮನೆ ಬಿಡಲ್ಲ. ಅದು ಅಂತ್ಯ ಆಗುವವರೆಗೂ ಹೋರಾಡುತ್ತೆನೆ. ನಾನು ಅಂದುಕೊಂಡಿದ್ದನ್ನು ಮಾಡೋವರೆಗೂ ಬಿಡೋದಿಲ್ಲ ನಾನು ಹಠವಾದಿ. ನಾನು ಕೇಳಿರುವ ಖಾತೆ ಕೊಡದೇ ಇರಲು ಕಾರಣವಾದ್ರೂ ಬೇಕಲ್ಲ. ಯಾಕೆ ಕೊಟ್ಟಿಲ್ಲ ಅಂತ ಸಮರ್ಥವಾಗಿ ಅದನ್ನು ಮೊದಲು ಹೇಳಬೇಕು. ದೊಡ್ಡ ಖಾತೆ ನನಗೆ ಕೊಡದಿರುವದಕ್ಕೆ ಕಾರಣವೇನು? ನಾನೇನು ಭ್ರಷ್ಟಾಚಾರ ಮಾಡಿದ್ದೇನಾ? ಯಾವುದಾದರು ನನ್ನ ಮೇಲೆ ಕಪ್ಪು ಚುಕ್ಕೆ ಇದೆಯಾ? ಖಾತೆ ನಿಭಾಯಸದೆ ಇರುವಷ್ಟು ಅಸಮರ್ಥನೇ? ಯಾವ ಕಾರಣಕ್ಕೆ ನಾನು ಕೇಳಿದ ಖಾತೆ ನೀಡಿಲ್ಲ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ:ಕಾಂಗ್ರೆಸ್ಸಿನಿಂದ ಬಂದವರನ್ನ ಮಂತ್ರಿ ಮಾಡಬೇಕಾಗಿದ್ದರಿಂದ ನನಗೆ ಸಚಿವ ಸ್ಥಾನ ಕೈ ತಪ್ಪಿತು: ರೂಪಾಲಿ ನಾಯ್ಕ

    ಸಮ್ಮಿಶ್ರ ಸರ್ಕಾರ ಕೆಡವಿ ಬಿಜೆಪಿ ಸರ್ಕಾರದ ರಚನೆಗಾಗಿ ರಾಜೀನಾಮೆ ಕೊಡಬೇಕಾದ್ರೇ ಯಾರಿಗೂ ಹೇಳಿರಲಿಲ್ಲ. ಒಬ್ಬನೇ ಹೋಗಿ ರಾಜೀನಾಮೆ ಕೊಟ್ಟಿದ್ದೇನೆ, ಮುಂದೆ ಏನು ಎಂಬುವುದರ ಬಗ್ಗೆಯೂ ಕೂಡ ಯೋಚನೆ ಮಾಡದೆ ರಾಜೀನಾಮೆ ಕೊಟ್ಟಿರೋದನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಬೇಸರ ಹೊರ ಹಾಕಿದರು. ಇದನ್ನೂ ಓದಿ: ನೂತನ ಸಚಿವರಿಗೆ ಖಾತೆ ಹಂಚಿಕೆ – ಪಟ್ಟಿ ಪ್ರಕಟ

  • ನೂತನ ಸಚಿವರಿಗೆ ಖಾತೆ ಹಂಚಿಕೆ – ಪಟ್ಟಿ ಪ್ರಕಟ

    ನೂತನ ಸಚಿವರಿಗೆ ಖಾತೆ ಹಂಚಿಕೆ – ಪಟ್ಟಿ ಪ್ರಕಟ

    ಬೆಂಗಳೂರು: ಸಿಎಂ ಬೊಮ್ಮಾಯಿ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಬೆಂಗಳೂರು ನಗರ ಅಭಿವೃದ್ಧಿ ಖಾತೆಯನ್ನು ಮುಖ್ಯಮಂತ್ರಿಗಳು ತಮ್ಮ ಬಳಿಯಲ್ಲಿಯೇ ಇರಿಸಿಕೊಂಡಿದ್ದಾರೆ. ಸಂಘ ನಿಷ್ಠರಿಗೆ ಪ್ರಬಲ ಖಾತೆಗಳ ಹಂಚಿಕೆಯಾಗಿರೋದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಮೊದಲ ಬಾರಿ ಸಂಪುಟ ಪ್ರವೇಶಿಸಿರುವ ಸುನಿಲ್ ಕುಮಾರ್ ಪವರ್ ಫುಲ್ ಖಾತೆ ಇಂಧನ ಇಲಾಖೆಯೇ ಸಿಕ್ಕಿದೆ.

    ಖಾತೆ ಹಂಚಿಕೆ ಪಟ್ಟಿ
    * ಸಿಎಂ ಬಸವರಾಜ ಬೊಮ್ಮಾಯಿ – ಆರ್ಥಿಕ ಇಲಾಖೆ, ಗುಪ್ತಚರ ಇಲಾಖೆ, ಸಂಸದೀಯ ವ್ಯವಹಾರಗಳ ಇಲಾಖೆ, ಬೆಂಗಳೂರು ನಗರಾಭಿವೃದ್ಧಿ ಇಲಾಖೆ
    * ಆರ್ ಅಶೋಕ್ – ಕಂದಾಯ
    * ಗೋವಿಂದ ಕಾರಜೋಳ – ಬೃಹತ್ ನೀರಾವರಿ ಇಲಾಖೆ
    * ಅರಗ ಜ್ಞಾನೇಂದ್ರ – ಗೃಹ ಇಲಾಖೆ
    * ಸುನಿಲ್ ಕುಮಾರ್ – ಇಂಧನ ಇಲಾಖೆ, ಕನ್ನಡ ಮತ್ತು ಸಂಸ್ಕøತಿ
    * ಬಿ.ಸಿ.ಪಾಟೀಲ್ -ಕೃಷಿ ಇಲಾಖೆ
    * ಸುಧಾಕರ್- ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ
    * ಕೆ.ಎಸ್.ಈಶ್ವರಪ್ಪ – ಗ್ರಾಮೀಣಾಭಿವೃದ್ಧಿ
    * ಗೋಪಾಲಯ್ಯ – ಅಬಕಾರಿ ಇಲಾಖೆ
    * ಅಶ್ವಥ ನಾರಾಯಣ – ಐಟಿಬಿಟಿ, ಉನ್ನತ ಶಿಕ್ಷಣ ಇಲಾಖೆ
    * ಕೋಟ ಶ್ರೀನಿವಾಸ ಪೂಜಾರಿ – ಸಮಾಜ ಕಲ್ಯಾಣ ಇಲಾಖೆ
    * ಮುರುಗೇಶ್ ನಿರಾಣಿ – ಬೃಹತ್ ಮತ್ತುಮಧ್ಯಮ ಕೈಗಾರಿಕೆ
    * ಶ್ರೀರಾಮುಲು – ಸಾರಿಗೆ, ಹಿಂದುಳಿದ ವರ್ಗಗಳ ಕಲ್ಯಾಣ
    * ಸೋಮಣ್ಣ – ವಸತಿ ಮತ್ತು ಮೂಲಸೌಕರ್ಯ
    * ಉಮೇಶ್ ಕತ್ತಿ – ಅರಣ್ಯ ಇಲಾಖೆ, ಆಹಾರ ಇಲಾಖೆ
    * ಮಾಧುಸ್ವಾಮಿ- ಕಾನೂನು ಮತ್ತು ಸಂಸದೀಯ ಇಲಾಖೆ, ಸಣ್ಣ ನೀರಾವರಿ ಇಲಾಖೆ
    * ಸಿ.ಸಿ.ಪಾಟೀಲ್- ಲೋಕೋಪಯೋಗಿ ಇಲಾಖೆ
    * ಶಶಿಕಲಾ ಜೊಲ್ಲೆ – ಮುಜರಾಯಿ ಇಲಾಖೆ, ಹಜ್ ಮತ್ತು ವಕ್ಫ್
    * ಎಸ್.ಅಂಗಾರ – ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಇಲಾಖೆ
    * ಆನಂದ್ ಸಿಂಗ್ – ಪ್ರವಾಸೋದ್ಯಮ ಇಲಾಖೆ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ
    * ಮುನಿರತ್ನ – ತೋಟಗಾರಿಕೆ ಇಲಾಖೆ
    * ಶಿವರಾಂ ಹೆಬ್ಬಾರ್- ಕಾರ್ಮಿಕ ಇಲಾಖೆ
    * ಎಂಟಿಬಿ ನಾಗರಾಜ್ – ಪೌರಾಡಳಿತ
    * ಬಿ.ಸಿ.ನಾಗೇಶ್ – ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಇಲಾಖೆ
    * ಪ್ರಭು ಚೌಹಾನ್- ಪಶುಶಂಗೋಪನೆ
    * ಎಸ್.ಟಿ.ಸೋಮಶೇಖರ್ – ಸಹಕಾರ
    * ಹಾಲಪ್ಪ ಆಚಾರ್ – ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಸಬಲೀಕರಣ ಇಲಾಖೆ
    * ಶಂಕರ್ ಪಾಟೀಲ್ ಮುನೇನಕೊಪ್ಪ – ಜವಳಿ ಮತ್ತು ಕೈಮಗ್ಗ ಇಲಾಖೆ, ಸಕ್ಕರೆ ಇಲಾಖೆ
    * ನಾರಾಯಣ್ ಗೌಡ – ರೇಷ್ಮೆ ಇಲಾಖೆ, ಯುವ ಜನ ಮತ್ತು ಕ್ರೀಡಾ ಇಲಾಖೆ
    * ಬೈರತಿ ಬಸವರಾಜ್ – ನಗರಾಭಿವೃದ್ದಿ ಇಲಾಖೆ

    ಪವರ್ ಫುಲ್ ಖಾತೆಗಳಾದ ಜಲಸಂಪನ್ಮೂಲ, ಇಂಧನ, ಬೃಹತ್ ಕೈಗಾರಿಕಾ ಖಾತೆಗಳಿಗೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಏರ್ಪಟ್ಟಿತ್ತು. ಹೀಗಾಗಿ ಶುಕ್ರವಾರ ಸಂಜೆಯೇ ಪಟ್ಟಿ ಅಂತಿಮಗೊಂಡಿದ್ರೂ ಬಿಡುಗಡೆಗೆ ವಿಳಂಬವಾಗಿದೆ ಎನ್ನಲಾಗಿದೆ.

  • ಪವರ್ ಫುಲ್ ಖಾತೆಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ – ರೆಬಲ್‍ಗಳ ರಹಸ್ಯ ಸಭೆ!

    ಪವರ್ ಫುಲ್ ಖಾತೆಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ – ರೆಬಲ್‍ಗಳ ರಹಸ್ಯ ಸಭೆ!

    ಬೆಂಗಳೂರು: ಸಿಎಂ ಬೊಮ್ಮಾಯಿ ಸಂಪುಟ ಅಸ್ತಿತ್ವಕ್ಕೆ ಬಂದು ನಾಲ್ಕು ದಿನವಾದ್ರೂ, ನೂತನ ಮಂತ್ರಿಗಳಿಗೆ ಖಾತೆ ಹಂಚಿಕೆ ಆಗಿಲ್ಲ. ಮುಖ್ಯಮಂತ್ರಿಗಳು ಖಾತೆ ಹಂಚಿಕೆ ಪಟ್ಟಿಯನ್ನು ರಾಜಭವನಕ್ಕೆ ಶುಕ್ರವಾರ ಸಂಜೆಯೆ ಕಳಿಸಿಕೊಟ್ಟಿದ್ರೂ, ಅದಕ್ಕೆ ಇನ್ನೂ ಪ್ರಕಟವಾಗುವ ಭಾಗ್ಯ ಸಿಕ್ಕಿಲ್ಲ. ಬೊಮ್ಮಾಯಿ ಪಟ್ಟಿಗೆ ಹೈಕಮಾಂಡ್ ಬ್ರೇಕ್ ಹಾಕಿದ್ಯಾ ಅನ್ನೋ ಅನುಮಾನ ಮೂಡಿದೆ.

    ಪವರ್ ಫುಲ್ ಖಾತೆಗಳಾದ ಜಲಸಂಪನ್ಮೂಲ, ಇಂಧನ, ಬೃಹತ್ ಕೈಗಾರಿಕಾ ಖಾತೆಗಳಿಗೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಏರ್ಪಟ್ಟಿದ್ರಿಂದ ತಡೆ ಹಿಡಿಯಲಾಗಿದೆಯಾ ಎಂಬ ಚರ್ಚೆ ನಡೆದಿದೆ. ಗೃಹ ಖಾತೆಗಾಗಿ ಬಿ.ಸಿ.ಪಾಟೀಲ್ ಪ್ರಯತ್ನಿಸ್ತಿದ್ದಾರೆ. ಎಸ್‍ಟಿ ಸೋಮಶೇಖರ್ ಅವರಂತೂ ನನಗೆ ಬೆಂಗಳೂರು ನಗರ ಅಭಿವೃದ್ಧಿ ಖಾತೆ ಬೇಕು ಎಂದು ಬಹಿರಂಗವಾಗಿ ಬೇಡಿಕೆ ಇಟ್ಟಿದ್ದಾರೆ. ಸುಧಾಕರ್ ಮತ್ತೆ ಆರೋಗ್ಯ ಖಾತೆ ಪಡೆಯಲು ಸಿಎಂ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.

    ಸದ್ಯ ಪಬ್ಲಿಕ್ ಟಿವಿಗೆ ಲಭ್ಯ ಆಗಿರುವ ಮಾಹಿತಿ ಪ್ರಕಾರ, ಕೆಲವರಿಗೆ ಪ್ರಮುಖ ಖಾತೆಗಳು ಲಭ್ಯ ಆಗಿವೆ ಎನ್ನಲಾಗಿವೆ. ಆ ಸಂಭಾವ್ಯ ಪಟ್ಟಿ ಇಲ್ಲಿದೆ.
    * ಗೋವಿಂದ ಕಾರಜೋಳ – ಜಲಸಂಪನ್ಮೂಲ
    * ಆರ್ ಅಶೋಕ್ – ಗೃಹ ಮತ್ತು ಕಂದಾಯ
    * ಉಮೇಶ್ ಕತ್ತಿ – ಲೋಕೋಪಯೋಗಿ
    * ಶ್ರೀರಾಮುಲು – ಸಮಾಜ ಕಲ್ಯಾಣ
    * ಬಿ.ಸಿ.ನಾಗೇಶ್ – ಶಿಕ್ಷಣ
    * ಸುನಿಲ್‍ಕುಮಾರ್- ಹಿಂದುಳಿದ ವರ್ಗಗಳ ಇಲಾಖೆ
    * ಮಾಧುಸ್ವಾಮಿ – ಕಾನೂನು, ಸಂಸದೀಯ ವ್ಯವಹಾರ
    * ಅರಗ ಜ್ಞಾನೇಂದ್ರ – ಅರಣ್ಯ

    ರೆಬೆಲ್ ಮೀಟಿಂಗ್:
    ಇನ್ನು ಸಂಪುಟ ರಚನೆಯಿಂದ ಉಂಟಾಗಿರುವ ಅತೃಪ್ತಿ ಶಮನವಾಗಿಲ್ಲ. ರಹಸ್ಯವಾಗಿ ಭಿನ್ನಮತೀಯ ಚಟುವಟಕೆಗಳು ಶುರುವಾದಂತಿವೆ. 17 ವರ್ಷಗಳ ಬಳಿಕ ಜಾರಕಿಹೊಳಿ ಕುಟುಂಬ ಸದಸ್ಯರು ಇಲ್ಲದ ಸಂಪುಟ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿದೆ. ಈ ಬೆಳವಣಿಗೆಯಿಂದ ತೀವ್ರವಾಗಿ ಅಸಮಾಧಾನಗೊಂಡಿರುವ ರಮೇಶ್ ಜಾರಕಿಹೊಳಿ, ತಮ್ಮ ಬೆಂಬಲಿಗ ಶಾಸಕರೊಂದಿಗೆ ಕಳೆದ ರಾತ್ರಿ ಸಭೆ ನಡೆಸಿದ್ದಾರೆ.

    ತಾವು ಬಿಜೆಪಿಗೆ ಕರೆತಂದ ಶ್ರೀಮಂತ ಪಾಟೀಲ್, ಮಹೇಶ್ ಕುಮಟಳ್ಳಿಗೆ ಮಂತ್ರಿ ಸ್ಥಾನ ನೀಡದಿರುವುದಕ್ಕೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಯೋಗೇಶ್ವರ್‍ಗೆ ಮಂತ್ರಿ ಸ್ಥಾನ ಕೈತಪ್ಪಿರುವ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ. ಸಚಿವ ಸ್ಥಾನ ಸಿಗದೇ ಇರೋದಕ್ಕೆ ನೊಂದಿರುವ ಶ್ರೀಮಂತ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಚಿಂತನೆ ನಡೆಸಿದ್ದಾರೆ. ಶೀಘ್ರವೇ ಈ ಬಗ್ಗೆ ಒಂದು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಕ್ಷತ್ರಿಯ ಮರಾಠ ಒಕ್ಕೂಟ ಎಚ್ಚರಿಸಿದೆ. ಇದನ್ನೂ ಓದಿ: 3ನೇ ಬಾರಿಯೂ ಕೈತಪ್ಪಿದ ಸಚಿವ ಸ್ಥಾನ – ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದ ಕುಮಾರಸ್ವಾಮಿ

    ಈ ಮಧ್ಯೆ, ಸಚಿವ ಸ್ಥಾನ ತಪ್ಪಿದವರಿಗೆ ವೈರಾಗ್ಯ ಕಾಡುವುದು ಸಹಜ. ಆದ್ರೆ ತಾಳಿದವನು ಬಾಳಿಯಾನು ಎಂಬ ಮಾತನ್ನು ನೆನಪಲ್ಲಿ ಇಟ್ಕೋಬೇಕು ಎಂದು ಸಚಿವ ಮುರುಗೇಶ್ ನಿರಾಣಿ ಹಿತವಚನ ಬೋಧಿಸಿದ್ದಾರೆ. ಸಿಎಂ ವಿರುದ್ಧ ಸಿಡಿದಿದ್ದ ನೆಹರೂ ಓಲೇಕಾರ್ ಕೋಪ ಈಗ ಶಮನವಾಗಿದೆ. ಪೂರ್ಣಿಮಾ ಶ್ರೀನಿವಾಸ್‍ಗೆ ಮಂತ್ರಿ ಸ್ಥಾನ ತಪ್ಪಿದನ್ನು ವಿರೋಧಿಸಿ ಅವರ ಬೆಂಬಲಿಗರು ಧರ್ಮಪುರದಿಂದ ಹಿರಿಯೂರಿನವರೆಗೂ ಪಾದಯಾತ್ರೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ರೇಣುಕಾಚಾರ್ಯ ಮೂರು ದಿನದಿಂದ ಕ್ಷೇತ್ರದ ಕಡೆ ತಲೆ ಹಾಕಿಲ್ಲ. ಆದ್ರೆ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಯಾವುದೇ ಭಿನ್ನಮತೀಯ ಚಟುವಟಿಕೆ ನಡೆದಿಲ್ಲ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ. ಇದನ್ನೂ ಓದಿ: ಮಂತ್ರಿಸ್ಥಾನ ನೀಡದಿದ್ರೆ ಮತ್ತೊಂದು ಆಪರೇಷನ್ ನಡೆಸುವ ಎಚ್ಚರಿಕೆ ನೀಡಿದರಂತೆ ಎಂಟಿಬಿ ನಾಗರಾಜ್!

  • ಧರ್ಮ ಒಡೆದು, ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದೀರಾ, ಮುಂದೆಯೂ ಅದೇ ಮಾಡಬೇಡಿ: ಶೃಂಗೇರಿ ಶಾಸಕ ರಾಜೇಗೌಡ

    ಧರ್ಮ ಒಡೆದು, ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದೀರಾ, ಮುಂದೆಯೂ ಅದೇ ಮಾಡಬೇಡಿ: ಶೃಂಗೇರಿ ಶಾಸಕ ರಾಜೇಗೌಡ

    – ಪ್ರತಿ ಬಾರಿಯೂ ಪರಕೀಯರೇ ನಮ್ಮ ಉಸ್ತುವಾರಿಯಾಗುತ್ತಾರೆ, ನಮ್ಮ ಹಣೆಬರಹ

    ಚಿಕ್ಕಮಗಳೂರು: ದತ್ತಪೀಠದ ವಿಷಯ ಇಟ್ಟುಕೊಂಡು ಧರ್ಮವನ್ನ ಒಡೆದು, ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದೀರಾ, ಮುಂದಕ್ಕೂ ಅದೇ ತಪ್ಪು ಮಾಡಬೇಡಿ ಎಂದು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಬಿಜೆಪಿ ಮುಖ್ಯಮಂತ್ರಿ ಬೊಮ್ಮಾಯಿಗೆ ಸಲಹೆ ನೀಡಿದ್ದಾರೆ.

    ಮಂತ್ರಿಮಂಡಲ ರಚನೆಯಾಗುತ್ತಿದ್ದಂತೆ ಸ್ವಯಂ ವಿಡಿಯೋ ಮಾಡಿರೋ ಶಾಸಕ ರಾಜೇಗೌಡ ಸಿಎಂ ಸಲಹೆ ನೀಡಿ, ಮನವಿ ಮಾಡಿ ಬಿಜೆಪಿ ವಿರುದ್ಧ ಅಸಮಾಧಾನವನ್ನೂ ಹೊರಹಾಕಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಅತಿ ಹೆಚ್ಚು ರೆವಿನ್ಯೂ ಕೊಡುವ ಜಿಲ್ಲೆ. ಜಿಲ್ಲೆಗೆ ಮಂತ್ರಿ ಸ್ಥಾನ ನೀಡಲು ವಿಳಂಬವಾಗುತ್ತಿದೆ. ಮೂರು ಬಾರಿ ಗೆದ್ದ ಕುಮಾರಸ್ವಾಮಿ, ಸಿ.ಟಿ.ರವಿ, ಬಯಲುಸೀಮೆ ಭಾಗದ ಇಬ್ಬರು ಶಾಸಕರಿದ್ದರು. ಯಾರಿಗೂ ನೀಡದೆ ಇರುವುದನ್ನ ಗಮನಿಸಿದರೆ, ಜಿಲ್ಲೆಯನ್ನ ಕಡೆಗಣಿಸಿದ್ದಾರೆ ಎಂಬುದು ನಮ್ಮ ಭಾವನೆ ಎಂದಿದ್ದಾರೆ.

    ಜಿಲ್ಲೆಗೆ ಪ್ರತಿ ಬಾರಿಯೂ ಪರಕೀಯರೆ ಉಸ್ತುವಾರಿ ಸಚಿವರಾಗುತ್ತಾರೆ, ನಮ್ಮ ಹಣೆಬರಹ ಮಲೆನಾಡ ಜಿಲ್ಲೆಗೂ ಪ್ರಾತಿನಿದ್ಯ ಕೊಡಬೇಕಿತ್ತು. ನಮ್ಮನ್ನ ಎಲ್ಲದಕ್ಕೂ ಬಳಸಿಕೊಳ್ಳುತ್ತಾರೆ. ಅದಕ್ಕೆ ತಕ್ಕ ಫಲ ನೀಡುವುದಿಲ್ಲ ಎಂದಿದ್ದಾರೆ. ಯಡಿಯೂರಪ್ಪನವರು ಪಕ್ಷಪಾತ ಮಾಡಿದ್ದರು. ನೀವು ಅದನ್ನ ಮಾಡಬೇಡಿ. ಎಲ್ಲಾ ಶಾಸಕರು ಒಂದೇ ಎಂದಿದ್ದಾರೆ. ಯಾರಿಗೂ ತಾರತಮ್ಯ ಮಾಡದಂತೆ ಎಲ್ಲರನ್ನೂ ಒಂದೇ ರೀತಿ ನೋಡುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: 3ನೇ ಬಾರಿಯೂ ಕೈತಪ್ಪಿದ ಸಚಿವ ಸ್ಥಾನ – ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದ ಕುಮಾರಸ್ವಾಮಿ

    ಬಿಜೆಪಿ ಶಾಸಕರಿಗೆ ಹೆಚ್ಚು ಒತ್ತು ನೀಡಬೇಕೆಂದರೆ ನಿಮ್ಮ ವಿವೇಚನಾ ನಿಧಿಯಲ್ಲಿ ಏನೂ ಬೇಕಾದರಿ ಮಾಡಿ, ನಾವು ಪ್ರಶ್ನೆ ಮಾಡುವುದಿಲ್ಲ. ಆದರೆ, ಬೇರೆ ಯೋಜನೆಯಲ್ಲಿ ಎಲ್ಲರನ್ನೂ ಒಂದೇ ರೀತಿ ಕಾಣಿ, ಆಗ ನಿಮಗೂ ಒಳ್ಳೆ ಹೆಸರು ಬರಲಿದೆ ಎಂದಿದ್ದಾರೆ. ಬಿಜೆಪಿ ಸರ್ಕಾರ ರಚನೆ ಮಾಡುವ ಸಂದರ್ಭದಲ್ಲಿ ಯಾವಾಗಲೂ ವಿಳಂಬ ಮಾಡುತ್ತಾರೆ. ಜನ ಅತಿವೃಷ್ಟಿ ಮತ್ತು ಕೊರೊನಾದಿಂದ ಸಂಕಷ್ಟಕ್ಕೀಡಾಗಿದ್ದಾರೆ. ತಡವಾಗಿಯಾದರೂ ಮಂತ್ರಿಗಳ ಆಯ್ಕೆ ಮಾಡಿ ಪ್ರಮಾಣ ವಚನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತೋಷದ ವಿಚಾರ. ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಎನ್.ಆರ್.ಪುರ ತಾಲೂಕಿನ ಮುತ್ತಿನಕೊಪ್ಪ ಭಾಗದಲ್ಲಿ ಅತಿವೃಷ್ಟಿಯಿಂದ ತುಂಬಾ ಹಾನಿಯಾಗಿದೆ. ಸೇತುವೆಗಳು, ರಸ್ತೆಗಳು ಕೊಚ್ಚಿ ಹೋಗಿವೆ. ಹೊಲಗದ್ದೆಗಳಲ್ಲಿ ಮರಳು ಮಣ್ಣು ಮುಚ್ಚಿ ನೂರಾರು ಎಕರೆ ಗದ್ದೆ ನಾಶವಾಗಿದೆ. ಇದರ ಬಗ್ಗೆ ಕೂಡಲೇ ಗಮನ ಹರಿಸಿ ಹಣ ಬಿಡುಗಡೆ ಮಾಡಿ ತುರ್ತು ಕ್ರಮ ವಹಿಸಬೇಕೆಂದು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.

  • ಮೋಸ, ವಂಚನೆ, ವಸೂಲಿಯಿಂದ ಸಚಿವ ಸ್ಥಾನ ತಪ್ಪಿತು: ಸಿಎಂ ವಿರುದ್ಧವೇ ಗುಡುಗಿದ ಶಾಸಕ ಓಲೇಕಾರ್

    ಮೋಸ, ವಂಚನೆ, ವಸೂಲಿಯಿಂದ ಸಚಿವ ಸ್ಥಾನ ತಪ್ಪಿತು: ಸಿಎಂ ವಿರುದ್ಧವೇ ಗುಡುಗಿದ ಶಾಸಕ ಓಲೇಕಾರ್

    – ಎಲ್ಲ ಸ್ಥಾನ ಲಿಂಗಾಯತರಿಗೆ ಸಿಕ್ರೆ ನಾವ್ ಏನ್ ಮಾಡೋದು?
    – ಜಾತಿ ರಾಜಕಾರಣದಿಂದ ಮುಖ್ಯಮಂತ್ರಿಗಳಿಂದಲೇ ಮೋಸ ಆಯ್ತು
    – ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ

    ಬೆಂಗಳೂರು: ಮೋಸ, ವಂಚನೆ ಮತ್ತು ವಸೂಲಿಯಿಂದಾಗಿ ನನಗೆ ಸಚಿವ ಸ್ಥಾನ ತಪ್ಪಿದೆ. ನಮ್ಮ ಜಿಲ್ಲೆಯವರಾದ ಮುಖ್ಯಮಂತ್ರಿಗಳಿಂದಲೇ ನನಗೆ ಮೋಸವಾಯ್ತು ಎಂದು ಶಾಸಕ ನೆಹರು ಓಲೇಕಾರ್ ಸಿಎಂ ಬೊಮ್ಮಾಯಿ ವಿರುದ್ಧವೇ ಆಕ್ರೋಶ ಹೊರಹಾಕಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕ ನೆಹರು ಓಲೇಕಾರ್, ಪಟ್ಟಿಯಲ್ಲಿಯೂ ನನ್ನ ಹೆಸರಿಲ್ಲ ಮತ್ತು ಸಿಎಂ ಸಹ ನನಗೆ ಕರೆ ಮಾಡಿಲ್ಲ. ನಮ್ಮ ಪಕ್ಷದಲ್ಲಿಯೂ ಮೋಸ, ವಂಚನೆ ಮಾಡೋರು ಇರೋದರಿಂದ ಸಚಿವ ಸ್ಥಾನ ತಪ್ಪಿದೆ. ಹಿಂದುಳಿದ ವರ್ಗದ ನಾಯಕನಾದ ನಾನು ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದು, ಸಚಿವ ಸ್ಥಾನಕ್ಕೆ ಅರ್ಹ ವ್ಯಕ್ತಿ. ಆದ್ರೂ ಯಾರ್ ಯಾರಿಗೂ ಸಚಿವ ಸ್ಥಾನ ನೀಡಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ವಿರುದ್ಧ ಅಸಮಾಧಾನ ಹೊರ ಹಾಕಿದರು.

    ಹೈಕಮಾಂಡ್‍ನಿಂದ ಅಗೌರವ:
    ನೂತನ ಸಚಿವರ ಪಟ್ಟಿ ನೋಡಿದ್ರೆ ಇದು ವಸೂಲಿ ಮೇಲೆ ಆಯ್ಕೆಯಾಗಿದೆ ಅನ್ನೋದು ಗೊತ್ತಾಗುತ್ತೆ. ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಬಲಗೈ ಸಮುದಾಯಕ್ಕೆ ಸೇರಿದ ನಾಯಕ ಮೂರು ಬಾರಿ ಆಯ್ಕೆಯಾದ್ರೂ ಹೈಕಮಾಂಡ್ ನಮಗೆ ಅಗೌರವ ತೋರಿಸಿದೆ. ಸದ್ಯ ಹೈಕಮಾಂಡ್ ಮಾಡಿದ ಪಟ್ಟಿಯ ಬಗ್ಗೆ ಅಸಮಾಧಾನವಿದ್ದು, ಇನ್ನುಳಿದ ಸ್ಥಾನಗಳಲ್ಲಿ ಅವಕಾಶ ಮಾಡಿಕೊಡಬೇಕು. ಇಲ್ಲವಾದ್ರೆ ಅನಿವಾರ್ಯವಾಗಿ ಪಕ್ಷದಲ್ಲಿ ಇರುತ್ತೇವೆ.

    ನಾವು ಏನು ಮಾಡಬೇಕು?
    ಪಕ್ಷದಲ್ಲಿ ಜಾತಿ ರಾಜಕಾರಣ ಮಾಡಲಾಗುತ್ತಿದ್ದು, ಪ.ಪಂಗಡದವರನ್ನ ಕಡೆಗಣನೆ ಮಾಡಲಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ ಮುಂದುವರಿದ ಕೋಮಿನವರೆಗೆ ಅವಕಾಶಗಳು ಸಿಗುತ್ತಿವೆ. ಎಲ್ಲ ಲಿಂಗಾಯತರಿಗೆ ನೀಡಿದ್ರೆ, ಪ.ಜಾತಿ ಮತ್ತು ಪ.ಪಂಗಡದವರು ಏನು ಮಾಡಬೇಕು ಎಂದು ಪ್ರಶ್ನೆ ಮಾಡಿದರು. ಸಿಎಂ ಮತ್ತು ಬಿ.ಸಿ.ಪಾಟೀಲ್ ಮುಂದುವರಿದ ಕೋಮಿನವರು. ಅವರಿಗೆ ಸ್ಥಾನ ಕೊಟ್ರೆ, ಅವರೇನು ಹಿಂದುಳಿದ ವರ್ಗಕ್ಕೆ ಸಂಬಂಧಿಸಿದವರಾ ಎಂದು ಕಿಡಿಕಾರಿದರು. ಇದನ್ನೂ ಓದಿ: ರಾತ್ರಿಯಾಗ್ತಿದ್ದಂತೆ ನಾಪತ್ತೆಯಾಗುವ ಸಿಎಂ, ಹೋಗ್ತಿರುವುದು ಎಲ್ಲಿಗೆ? – ದೆಹಲಿಯಲ್ಲಿ ಬೊಮ್ಮಾಯಿ ನಿಗೂಢ ಹೆಜ್ಜೆ

    ಕಾದು ನೋಡಿ, ಎಚ್ಚರಿಕೆ ಕೊಟ್ರಾ?:
    ನಮ್ಮ ಜಿಲ್ಲೆಯವರಾದ ಮುಖ್ಯಮಂತ್ರಿಗಳಿಂದಲೇ ನನಗೆ ಸಚಿವ ಸ್ಥಾನ ತಪ್ಪಿದೆ. ಈ ಮೊದಲು ಮಾತನಾಡಿದಾಗ ದೆಹಲಿಗೆ ಹೋಗಿ ಬಂದು ಮಾತನಾಡುತ್ತೇನೆ ಎಂದು ಹೇಳಿದ್ದರು. ಇತ್ತ ಯಡಿಯೂರಪ್ಪ ಅವರ ಜೊತೆ ಸಹ ಚರ್ಚೆ ನಡೆಸಿದ್ದೇನೆ. ಕ್ಷೇತ್ರಕ್ಕೆ ಹೋಗಿ ಕಾರ್ಯಕರ್ತರ ಜೊತೆ ಸಭೆ ನಡೆಸಿ ಚರ್ಚೆ ನಡೆಸುತ್ತೇನೆ. ಬಿಜೆಪಿಯಲ್ಲಿ ಹಿಂದಿನಿಂದಲೂ ಇದ್ದೇನೆ, ಮುಂದೆಯೂ ಇರುತ್ತೇನೆ. ಆದ್ರೆ ಪಕ್ಷದಲ್ಲಿ ಸದ್ಯದ ವ್ಯವಸ್ಥೆ ಮುಂದಿನ ದಿನಗಳಲ್ಲಿ ದೊಡ್ಡ ಹೊಡೆತ ಬೀಳಲಿದೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ:ಬುಧವಾರ ಮಧ್ಯಾಹ್ನ 2:15ಕ್ಕೆ ನೂತನ ಸಚಿವರ ಪ್ರಮಾಣ ವಚನ- ಯಾರಿಗೆ ಮಂತ್ರಿಗಿರಿ?

  • ನಾಳೆ ಅಥವಾ ಬುಧವಾರ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ: ಕೆ.ಎಸ್.ಈಶ್ವರಪ್ಪ

    ನಾಳೆ ಅಥವಾ ಬುಧವಾರ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ: ಕೆ.ಎಸ್.ಈಶ್ವರಪ್ಪ

    – ಕೇಂದ್ರದ ನಾಯಕರ ತೀರ್ಮಾನವೇ ಅಂತಿಮ

    ಶಿವಮೊಗ್ಗ : ಸಚಿವ ಸಂಪುಟ ವಿಸ್ತರಣೆಯನ್ನು ಆದಷ್ಟು ಶೀಘ್ರವಾಗಿ ಮುಗಿಸಬೇಕು ಎಂಬುದು ಕೇಂದ್ರದ ನಾಯಕರಿಗೂ ಇದೆ. ಹೀಗಾಗಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಹೈಕಮಾಂಡ್ ದೆಹಲಿಗೆ ಕರೆಸಿಕೊಂಡಿದೆ. ಮಂಗಳವಾರ ಅಥವಾ ಬುಧವಾರ ಸಂಪುಟ ವಿಸ್ತರಣೆ ಆಗಲಿದೆ ಎಂಬ ಮಾಹಿತಿ ಇದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

    ಶಿವಮೊಗ್ಗದಲ್ಲಿ ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಅವರು ಸಚಿವ ಸಂಪುಟ ವಿಸ್ತರಣೆ ಬಗ್ಗೆ ಬೊಮ್ಮಾಯಿ ಅವರ ಜೊತೆ ಹೈ ಕಮಾಂಡ್ ಚರ್ಚೆ ನಡೆಸಿದೆ. ಸಚಿವ ಸಂಪುಟ ವಿಸ್ತರಣೆ ವೇಳೆ ಪ್ರಾದೇಶಿಕವಾರು ಸಚಿವ ಸ್ಥಾನ ನೀಡಬೇಕು. ಹಿರಿಯರು ಹಾಗೂ ಕಿರಿಯರಿಗೂ ಸ್ಥಾನ ಕಲ್ಪಿಸಿ ಕೊಡಬೇಕು ಎಂಬ ಚರ್ಚೆ ನಡೆಯುತ್ತಿದೆ. ಅಲ್ಲದೇ ಕೇಂದ್ರದ ನಾಯಕರು ಯಾವುದೇ ಒತ್ತಡಕ್ಕೆ ಮಣಿಯದೇ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಈಶ್ವರಪ್ಪ ತಿಳಿಸಿದರು.

    ಜಾತಿ ರಾಜಕಾರಣ ಬಿಟ್ಟು ಬಿಜೆಪಿ ಸೈದ್ದಾಂತಿಕವಾಗಿ, ಸಚಿವ ಸಂಪುಟ ವಿಸ್ತರಣೆ ಮಾಡಲಿದೆ ಎಂಬ ನಂಬಿಕೆ ಇದೆ. ಅಲ್ಲದೇ ಮುಂದಿನ ಚುನಾವಣೆಯಲ್ಲಿ ಸ್ವಂತ ಬಹುಮತದೊಂದಿಗೆ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂಬ ಆಸಕ್ತಿ ಸಹ ಹೈಕಮಾಂಡ್ ಗೆ ಇದೆ ಎಂದರು. ಇದನ್ನೂ ಓದಿ: ಬಿಜೆಪಿ ಹೈಕಮಾಂಡ್ ಮುಂದೆ ‘ವಿಜಯ’ ಪ್ರಸ್ತಾಪದ ಇನ್‍ಸೈಡ್ ಸ್ಟೋರಿ

    ಇನ್ನು ಸಚಿವ ಸಂಪುಟ ವಿಸ್ತರಣೆ ವೇಳೆ ನನ್ನ ಅನುಭವ ಬಳಕೆ ಮಾಡಿಕೊಳ್ಳಬೇಕೋ ಅಥವಾ ಬೇಡವಾ ಎಂಬುದು ಕೇಂದ್ರದ ನಾಯಕರಿಗೆ ಬಿಟ್ಟಿದ್ದು. ಹಿರಿತನವನ್ನು ಸಚಿವ ಸಂಪುಟದಲ್ಲಿ ಇದ್ದುಕೊಂಡೇ ಬಳಕೆ ಮಾಡಿಕೊಳ್ಳಬೇಕು ಎಂಬುದು ಇಲ್ಲ. ಮುಖ್ಯಮಂತ್ರಿ ಆಯ್ಕೆಯಿಂದ ಹಿಡಿದು ಸಚಿವ ಸಂಪುಟವನ್ನು ಕೃಷ್ಣನ ತಂತ್ರಗಾರಿಕೆಯಿಂದ ಬಹಳ ಬುದ್ದಿವಂತಿಕೆಯಿಂದ ಮಾಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಯಾವ ರೂಪದಲ್ಲಿ ಸಚಿವ ಸಂಪುಟ ಹಾಗೂ ಸರ್ಕಾರ ಇರಬೇಕು ಎಂಬುದನ್ನು ಹೈಕಮಾಂಡ್ ಗಮನಿಸುತ್ತದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಇದನ್ನೂ ಓದಿ: ಕ್ಲೈಮ್ಯಾಕ್ಸ್ ಹಂತದಲ್ಲಿ ಸಂಪುಟ ಸರ್ಕಸ್ – ಕ್ಯಾಬಿನೆಟ್ ಪಟ್ಟಿ ಫೈನಲ್‍ಗೆ ಕೌಂಟ್‍ಡೌನ್

  • ಡಿಸಿಎಂಗಳ ಆಯ್ಕೆ ವಿಚಾರದಲ್ಲಿ ಬಿಜೆಪಿ ‘ಹೈ’ ಲೆಕ್ಕಾಚಾರ ಏನು?

    ಡಿಸಿಎಂಗಳ ಆಯ್ಕೆ ವಿಚಾರದಲ್ಲಿ ಬಿಜೆಪಿ ‘ಹೈ’ ಲೆಕ್ಕಾಚಾರ ಏನು?

    ಬೆಂಗಳೂರು: ಸಿಎಂ ಬೊಮ್ಮಾಯಿ ಸಂಪುಟ ರಚನೆ ಜೊತೆಗೆ ಡಿಸಿಎಂ ಆಯ್ಕೆಯ ವಿಚಾರವೂ ಹೆಚ್ಚು ಸದ್ದು ಮಾಡುತ್ತಿದೆ. ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿ ಡಿಸಿಎಂಗಳಾಗಿದ್ದ ಅಶ್ವತ್ಥ್ ನಾರಾಯಾಣ್, ಲಕ್ಷ್ಮಣ್ ಸವದಿ ಮತ್ತು ಗೋವಿಂದ ಕಾರಜೋಳ ಮತ್ತೆ ಮುಂದುವರಿಯುತ್ತಾರಾ ಅನ್ನೋ ಪ್ರಶ್ನೆಗೆ ಉತ್ತರ ಸಿಗಬೇಕಿದೆ. ಈ ನಡುವೆ ಸಿಎಂ ಬೊಮ್ಮಾಯಿ ಮಾತ್ರ ಉಪ ಮುಖ್ಯಮಂತ್ರಿಗಳ ಆಯ್ಕೆಯ ಜವಬ್ದಾರಿಯನ್ನು ಬಿಜೆಪಿ ವರಿಷ್ಠರ ಹೆಗಲಿಗೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ.

    ಇತ್ತ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಹ ಡಿಸಿಎಂ ಆಯ್ಕೆಯನ್ನು ನೀವೇ ಮಾಡಿಕೊಳ್ಳಿ ಎಂದು ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಮೂವರನ್ನು ಮುಂದುವರಿಸಬೇಕೋ ಅಥವಾ ಒಬ್ಬರಿಗೆ ಕೊಕ್ ನೀಡಿ ಹೊಸಬರಿಗೆ ಅವಕಾಶ ನೀಡಬೇಕೋ ಅಥವಾ ಮೂವರನ್ನ ಮುಂದುವರಿಸೋದರ ಜೊತೆ ಮತ್ತೊಬ್ಬರನ್ನು ಸೇರಿಸಿಕೊಳ್ಳುವ ಕುರಿತು ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಡಿಸಿಎಂ ಆಯ್ಕೆ ಪ್ರಕ್ರಿಯೆಯಿಂದ ಹಿಂದೆ ಸರಿದಿರುವ ಬೊಮ್ಮಾಯಿ ಹೈಕಮಾಂಡ್ ಕೆಲ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಇಂದು ಅಥವಾ ನಾಳೆ ಸಂಪುಟ ರಚನೆ: ಸಿಎಂ ಬೊಮ್ಮಾಯಿ

    ಸಿಎಂ ಬೊಮ್ಮಾಯಿ ಸಲಹೆ: ಸದ್ಯ ಇರೋ ಮೂರು ಡಿಸಿಎಂ ಸ್ಥಾನಗಳನ್ನು ಮುಂದುವರಿಸಬಹುದು. ಒಕ್ಕಲಿಗ, ಎಸ್‍ಸಿ, ಲಿಂಗಾಯತ ಬದಲು ಒಕ್ಕಲಿಗ, ಎಸ್‍ಸಿ-ಎಸ್‍ಟಿಗೆ ಅವಕಾಶ ನೀಡಿ. ಗೋವಿಂದ ಕಾರಜೋಳ ಅವರನ್ನು ಮುಂದುವರಿಸಿ ಇಲ್ಲವಾದ್ರೆ ಅರವಿಂದ್ ಲಿಂಬಾವಳಿಗೆ ಆಯ್ಕೆ ಮಾಡಬಹುದು. ಒಕ್ಕಲಿಗ ಪೈಕಿ ಅಶ್ವತ್ಥ್ ನಾರಾಯಣ್, ಎಸ್‍ಟಿಯಿಂದ ಶ್ರೀರಾಮುಲುಗೆ ಅವಕಾಶ ನೀಡಬಹುದು ಎಂದು ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ನೆರೆ ಸಂತ್ರಸ್ತರಿಗೆ ಬಿಡಿಗಾಸಿನ ಪರಿಹಾರ – 2 ವರ್ಷದ ಹಿಂದೆ 10 ಸಾವಿರ, ಈಗ ಕೇವಲ 3,800 ರೂ.

    ಹೈಕಮಾಂಡ್ ಲೆಕ್ಕಚಾರ ಏನು?
    ನಾಲ್ಕು ಡಿಸಿಎಂ ಹುದ್ದೆಗಳನ್ನು ಸ್ಥಾಪಿಸಿ, ಒಕ್ಕಲಿಗ, ಎಸ್‍ಸಿ, ಎಸ್‍ಟಿ ಮತ್ತು ಒಬಿಸಿ ನಾಯಕರಿಗೆ ಅವಕಾಶ ನೀಡುವುದು. ಗೋವಿಂದ ಕಾರಜೋಳ ಅಥವಾ ಅರವಿಂದ್ ಲಿಂಬಾವಳಿಗೆ ಆಯ್ಕೆ ಮಾಡುವುದು. ಒಕ್ಕಲಿಗ ಪೈಕಿ ಅಶ್ವಥ್ ನಾರಾಯಣ್, ಎಸ್‍ಟಿಯಿಂದ ಶ್ರೀರಾಮುಲು ಮತ್ತು ಒಬಿಸಿಯಿಂದ ಸುನಿಲ್ ಕುಮಾರ್ ಕಾರ್ಕಳಗೆ ಅವಕಾಶ ಕೊಡುವ ಕುರಿತು ಹೈಕಮಾಂಡ್ ತೀರ್ಮಾನಿಸಿದ್ದು, ಇಂದಿನ ಸಭೆ ಬಳಿಕ ಅಂತಿಮ ತೀರ್ಮಾನವಾಗಲಿದೆ. ಲಕ್ಷ್ಮಣ ಸವದಿ ಅವರಿಗೆ ಕೊಕ್ ನೀಡುವ ಸಾಧ್ಯತೆಗಳು ಹೆಚ್ಚಿವೆ.

  • ಕ್ಲೈಮ್ಯಾಕ್ಸ್ ಹಂತದಲ್ಲಿ ಸಂಪುಟ ಸರ್ಕಸ್ – ಕ್ಯಾಬಿನೆಟ್ ಪಟ್ಟಿ ಫೈನಲ್‍ಗೆ ಕೌಂಟ್‍ಡೌನ್

    ಕ್ಲೈಮ್ಯಾಕ್ಸ್ ಹಂತದಲ್ಲಿ ಸಂಪುಟ ಸರ್ಕಸ್ – ಕ್ಯಾಬಿನೆಟ್ ಪಟ್ಟಿ ಫೈನಲ್‍ಗೆ ಕೌಂಟ್‍ಡೌನ್

    – ಬೊಮ್ಮಾಯಿ ಸಂಪುಟಕ್ಕೆ ಯಾರು ಇನ್, ಯಾರು ಔಟ್?

    ಬೆಂಗಳೂರು: ರಾಜ್ಯದಲ್ಲಿ ಕಳೆದ ಆರು ದಿನಗಳಿಂದ ನಡೆಯುತ್ತಿರುವ ಸಂಪುಟ ಸರ್ಕಸ್ ಇಂದು ಮುಗಿಯುವ ಸಾಧ್ಯತೆ ಇದೆ. ಸಂಪುಟ ಪಟ್ಟಿ ಭಾನುವಾರ ರಾತ್ರಿಯೇ ಫೈನಲ್ ಆಗೋದು ಬಹುತೇಕ ಖಚಿತವಾಗಿದೆ ಎನ್ನಲಾಗಿದೆ.

    ಹೈಕಮಾಂಡ್ ಸೂಚನೆ ಮೇರೆಗೆ ಸಂಭಾವ್ಯರ ಪಟ್ಟಿಯೊಂದಿಗೆ ಭಾನುವಾರ ಸಂಜೆ ದೆಹಲಿಗೆ ತೆರಳಿದ ಸಿಎಂ ಬಸವರಾಜ ಬೊಮ್ಮಾಯಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಈ ವೇಳೆ ಸಂಪುಟ ಪಟ್ಟಿಯನ್ನು ಬಸವರಾಜ ಬೊಮ್ಮಾಯಿ ಫೈನಲ್ ಮಾಡಿಕೊಂಡು ಇಂದು ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಒಂದೊಮ್ಮೆ ಎಲ್ಲಾ ಸರಿ ಹೋದಲ್ಲಿ ಇಂದು ಅಥವಾ ನಾಳೆ ಸಂಜೆಯೇ ನೂತನ ಸಂಪುಟ ಅಸ್ತಿತ್ವಕ್ಕೆ ಬರಲಿದೆ. ಈ ಬೆಳವಣಿಗೆ ಸಚಿವ ಸ್ಥಾನದ ಆಕಾಂಕ್ಷಿಗಳ ಎದೆ ಬಡಿತ ಹೆಚ್ಚಿಸಿದೆ.

    ಕಳೆದ ಬಾರಿ ಸಿಕ್ಕಂತೆ ಈ ಬಾರಿ ಬೆಂಗಳೂರಿನ ಶಾಸಕರಿಗೆ ಹೆಚ್ಚು ಪ್ರಾತಿನಿಧ್ಯ ಸಿಗೋದು ಅನುಮಾನ ಎಂಬ ಮಾತು ಕೇಳಿಬರುತ್ತಿದೆ. ಬಿಎಸ್‍ವೈ ಸಂಪುಟದಲ್ಲಿ ಬೆಂಗಳೂರಿನ 8 ಸಚಿವರಿದ್ದರು. ಬೊಮ್ಮಾಯಿ ಸಂಪುಟದಲ್ಲಿ ಅಷ್ಟು ಮಂದಿಗೆ ಚಾನ್ಸ್ ಸಿಗೋದು ಕಡಿಮೆ ಎನ್ನಲಾಗ್ತಿದೆ. ಇನ್ನು ಭಾನುವಾರ ಬೊಮ್ಮಾಯಿ ನಿವಾಸಕ್ಕೆ ಸಚಿವ ಸ್ಥಾನದ ಆಕಾಂಕ್ಷಿಗಳು ಭೇಟಿ ನೀಡಿ ಲಾಬಿ ಮಾಡಿದ್ರು. ಇದನ್ನೂ ಓದಿ: ಸ್ವಾಮೀಜಿಗಳು ಬಿಜೆಪಿಗೆ ಬೆದರಿಕೆ ಹಾಕುವುದು ತಪ್ಪು: ಈಶ್ವರಪ್ಪ

    ಬೊಮ್ಮಾಯಿ ಸಂಪುಟ ಸೇರಬಹುದು ಎನ್ನಲಾಗಿರುವ ಸಂಭಾವ್ಯರ ಪಟ್ಟಿ:
    ಬಸವ’ರಾಜ’ ‘ಮಂತ್ರಿ’ ಮಂಡಲ!
    ಅಶ್ವತ್ಥ ನಾರಾಯಣ್- ಮಲ್ಲೇಶ್ವರಂ ಶಾಸಕ, ಶ್ರೀರಾಮುಲು-ಮೊಳಕಾಲ್ಮೂರು ಶಾಸಕ, ಅರವಿಂದ್ ಲಿಂಬಾವಳಿ-ಮಹದೇವಪುರ ಶಾಸಕ, ಮಾಧುಸ್ವಾಮಿ-ಚಿಕ್ಕನಾಯಕನಹಳ್ಳಿ ಶಾಸಕ, ಮುರುಗೇಶ್ ನಿರಾಣಿ-ಬೀಳಗಿ ಶಾಸಕ, ಮುನಿರತ್ನ-ಆರ್.ಆರ್.ನಗರ ಶಾಸಕ, ಬಿ.ಸಿ.ಪಾಟೀಲ್-ಹಿರೇಕೆರೂರು ಶಾಸಕ, ಬೈರತಿ ಬಸವರಾಜು-ಕೆಆರ್ ಪುರಂ ಶಾಸಕ, ಡಾ.ಕೆ.ಸುಧಾಕರ್-ಚಿಕ್ಕಬಳ್ಳಾಪುರ ಶಾಸಕ, ಎಸ್.ಟಿ.ಸೋಮಶೇಖರ್-ಯಶವಂತಪುರ ಶಾಸಕ, ಅರವಿಂದ ಬೆಲ್ಲದ್-ಧಾರವಾಡ ಪಶ್ಚಿಮ, ಉಮೇಶ್ ಕತ್ತಿ-ಹುಕ್ಕೇರಿ ಶಾಸಕ, ವಿ.ಸೋಮಣ್ಣ-ಗೋವಿಂದರಾಜನಗರ ಶಾಸಕ, ಸುನಿಲ್ ಕುಮಾರ್-ಕಾರ್ಕಳ ಶಾಸಕ, ಎಸ್.ಅಂಗಾರ-ಸುಳ್ಯ ಶಾಸಕ ಇದನ್ನೂ ಓದಿ: ಇಂದು ಅಥವಾ ನಾಳೆ ಸಂಪುಟ ರಚನೆ: ಸಿಎಂ ಬೊಮ್ಮಾಯಿ