Tag: bomber

  • ರಾಜ್ಯದಲ್ಲಿ ನಡೆಯುತ್ತಿರೋ ಘಟನೆಗಳು ಆತಂಕ ಹುಟ್ಟಿಸ್ತಿದೆ: ಜಮೀರ್ ಅಹಮ್ಮದ್

    ರಾಜ್ಯದಲ್ಲಿ ನಡೆಯುತ್ತಿರೋ ಘಟನೆಗಳು ಆತಂಕ ಹುಟ್ಟಿಸ್ತಿದೆ: ಜಮೀರ್ ಅಹಮ್ಮದ್

    – ಬಾಂಬರ್ ಸಿಗದೇ ಹೋಗಿದ್ರೆ ಬಿಜೆಪಿ ಮುಸ್ಲಿಂರ ಮೇಲೆ ಗೂಬೆ ಕೂರುಸ್ತಿತ್ತು

    ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳು ಆತಂಕ ಹುಟ್ಟಿಸುತ್ತಿದೆ ಎಂದು ಮಾಜಿ ಸಚಿವ ಜಮೀರ್ ಅಹಮ್ಮದ್ ಹೇಳಿದ್ದಾರೆ.

    ಸ್ಫೋಟದಲ್ಲಿ ಗಾಯಗೊಂಡ ಶಾಸಕ ಹ್ಯಾರಿಸ್ ಭೇಟಿಯಾಗಿ ಬಳಿಕ ಮಾತನಾಡಿದ ಜಮೀರ್, ಬಿಜೆಪಿ ಸರ್ಕಾರದ ಬಗ್ಗೆ ಅನುಮಾನಗಳು ಕಾಡತೊಡಗಿದೆ. ಶಾಸಕ ಹ್ಯಾರಿಸ್, ತನ್ವೀರ್ ಸೇಠ್ ಮೇಲೆ ನಡೆದ ಘಟನೆಗಳಿಂದ ಒಂದು ರೀತಿ ರಾಜ್ಯದಲ್ಲಿ ಏನ್ ನಡೆಯುತ್ತಿದ್ದೆ ಎಂದು ವಿಚಲಿತರಾಗಿದ್ದೇವೆ. ಬಿಜೆಪಿ ಸರ್ಕಾರ ನನಗೆ ಕೊಟ್ಟಿರುವ ಭದ್ರತೆಯನ್ನ ವಾಪಸ್ ಪಡೆದುಕೊಳ್ಳಲು ಮುಂದಾಗಿದೆ ಎಂದು ನನಗೂ ಮಾಹಿತಿ ಬಂದಿದೆ ಎಂದರು.

    ನಾನು ಇತ್ತೀಚಿಗೆ ಎನ್‌ಆರ್‌ಸಿ ವಿರೋಧಿ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಗುರುತಿಸಿಕೊಳ್ಳುತ್ತಾ ಇದ್ದೀನಿ. ಆ ಕಾರಣಕ್ಕೆ ಭದ್ರತೆಯನ್ನ ವಾಪಸ್ ಪಡೆದುಕೊಳ್ಳಲು ಬಿಜೆಪಿ ಸರ್ಕಾರ ಮುಂದಾಗಿದೆ ಅನ್ನೋ ಮಾಹಿತಿ ಸಿಕ್ಕಿದೆ. ಭದ್ರತೆ ಇದ್ದರೂ ನಾನು ಎನ್‌ಆರ್‌ಸಿಯನ್ನ ವಿರೋಧಿಸುತ್ತೇನೆ, ಇಲ್ಲದೇ ಹೋದರು ವಿರೋಧಿಸಿ ಪ್ರತಿಭಟನೆ ಮಾಡುತ್ತೇನೆ ಎಂದು ಜಮೀರ್ ಅಹಮ್ಮದ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

    ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವ ವ್ಯಕ್ತಿ ಆದಿತ್ಯ ರಾವ್ ಬುಧವಾರ ಬಂದು ಡಿಜಿ ಕಚೇರಿಯಲ್ಲಿ ಸರೆಂಡರ್ ಆಗಿದ್ದಾನೆ. ಬಾಂಬರ್ ಸಿಗುವುದಕ್ಕೂ ಮುನ್ನ ಬಾಂಬ್ ಇಟ್ಟಿರುವರು ಮುಸ್ಲಿಂರು ಅನ್ನೋ ರೀತಿಯಲ್ಲಿ ಬಿಂಬಿಸತೊಡಗಿದರು. ದೇವರು ದೊಡ್ಡವನು ಬಾಂಬರ್ ಡಿಜಿ ಕಚೇರಿಯಲ್ಲಿ ಸರೆಂಡರ್ ಆಗಿದ್ದಾನೆ. ಬಾಂಬರ್ ಸಿಗದೇ ಹೋಗಿದ್ದರೆ ಮುಸ್ಲಿಂರ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಬಿಜೆಪಿ ಅವರು ಮಾಡುತ್ತಿದ್ದರು ಎಂದು ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

  • ಬಾಂಬ್ ದಾಳಿಗೂ ಮುನ್ನ ಚರ್ಚ್ ಎದುರು ಮಗುವನ್ನು ಮಾತನಾಡಿಸಿದ ದಾಳಿಕೋರ!

    ಬಾಂಬ್ ದಾಳಿಗೂ ಮುನ್ನ ಚರ್ಚ್ ಎದುರು ಮಗುವನ್ನು ಮಾತನಾಡಿಸಿದ ದಾಳಿಕೋರ!

    – ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಕೊಲಂಬೋ: ಈವರೆಗೆ ಶ್ರೀಲಂಕಾ ಸರಣಿ ಬಾಂಬ್ ದಾಳಿಯಲ್ಲಿ 321 ಮಂದಿ ಬಲಿಯಾಗಿದ್ದು, 500ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಒಟ್ಟು 8 ಕಡೆಯಲ್ಲಿ ಬಾಂಬ್ ಸ್ಫೋಟ ನಡೆದಿದ್ದು, ಸೆಂಟ್ ಸೆಬಾಸ್ಟಿಯನ್ ಚರ್ಚ್ ನಲ್ಲಿ ಆತ್ಮಾಹುತಿ ದಾಳಿ ನಡೆಸುವ ಮೊದಲು ಚರ್ಚ್ ಎದುರು ದಾಳಿಕೋರ ಮಗುವೊಂದನ್ನು ಮಾತನಾಡಿಸಿದ ಸಿಸಿಟಿವಿ ದೃಶ್ಯಾವಳಿ ಸದ್ಯ ಭಾರೀ ಸದ್ದು ಮಾಡುತ್ತಿದೆ.

    ಹೌದು. ಬ್ಯಾಗೊಂದನ್ನು ಬೆನ್ನಿಗೆ ಹಾಕಿಕೊಂದು ಆರಾಮಾಗಿ ಸಾಮಾನ್ಯರಂತೆ ಚರ್ಚ್ ಕಡೆ ಬರುತ್ತಿದ್ದ ದಾಳಿಕೋರನಿಗೆ ತಾತನೊಂದಿಗೆ ಬರುತ್ತಿದ್ದ ಮಗುವೊಂದು ಅಡ್ಡಸಿಕ್ಕಿದೆ. ಈ ವೇಳೆ ಆತ ಆ ಮಗುವಿನ ತಲೆ ಸವರಿ ಮಾತನಾಡಿಸಿ ಅಲ್ಲಿಂದ ಮುಂದೆ ಸಾಗಿದ್ದಾನೆ. ಬಳಿಕ ಚರ್ಚ್ ನ ಪ್ರಾರ್ಥನಾ ಸಭಾಂಗಣದಲ್ಲಿ ನೂರಾರು ಮಂದಿ ಪ್ರಾರ್ಥನೆ ಸಲ್ಲಿಸುತ್ತಿರುವಾಗ ಅವರನ್ನು ನೋಡುತ್ತಾ ದಾಳಿಕೋರ ಮುಂದೆ ಬಂದು ಜನರ ಮಧ್ಯೆ ಪ್ರಾರ್ಥನೆಗೆ ಕುಳಿತಿದ್ದಾನೆ. ಈ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ:ಶ್ರೀಲಂಕಾದಲ್ಲಿ ದಾಳಿ ನಡೆಸಿದ ಜೆಎನ್‍ಟಿ ಸಂಘಟನೆ ಉದ್ದೇಶ ಏನು? – ಇಲ್ಲಿದೆ ಪೂರ್ಣ ಮಾಹಿತಿ

    ದಾಳಿಕೋರ ಬಂದ ರೀತಿ, ಆತನ ವೇಷಭೂಷಣ, ನಡವಳಿಕೆ ಗಮನಿಸಿದರೆ ಆತ ನೂರಾರು ಅಮಾಯಕ ಜೀವಗಳ ಬಲಿ ಪಡೆದಿದ್ದಾನೆ ಎಂದು ಊಹಿಸಲು ಸಾಧ್ಯವಾಗಲ್ಲ. ಜನಸಾಮಾನ್ಯರಂತೆ ಚರ್ಚ್ ಗೆ ಪ್ರರ್ಥನೆ ಸಲ್ಲಿಸಲು ಆತ ಬಂದಿದ್ದಾನೆ ಎನ್ನುವ ರೀತಿ ವರ್ತಿಸಿದ್ದಾನೆ. ಸೆಂಟ್ ಸೆಬಾಸ್ಟಿಯನ್ ಚರ್ಚ್ ವೊಂದರಲ್ಲೇ ಸುಮಾರು 100ಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ. ಅವರಲ್ಲಿ 27 ಮಕ್ಕಳು ಕೂಡ ಬಲಿಯಾಗಿದ್ದು, 10ಕ್ಕೂ ಹೆಚ್ಚು ಮಂದಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ:ಕನ್ನಡಿಗರು ಸೇರಿ 321 ಮಂದಿಯನ್ನು ಹತ್ಯೆಗೈದಿದ್ದು ನಾವೇ ಎಂದ ಐಸಿಸ್

    ಈಸ್ಟರ್ ಶುಭ ಸಂದರ್ಭದಲ್ಲಿ ಪ್ರಾರ್ಥನೆಗೆ ಸೇರಿದ್ದವರನ್ನು ಗುರಿಯಾಗಿಸಿ ಭಾನುವಾರ ಬೆಳಗ್ಗೆ 8:45ರ ಸುಮಾರಿಗೆ ಬಾಂಬ್ ಸ್ಫೋಟಿಸಲಾಗಿದೆ. ಕೊಲಂಬೋ ಬಂದರು ಸಮೀಪದ ಸೆಬಾಸ್ಟಿಯನ್ ಚರ್ಚ್, ಸೇಂಟ್ ಅಂತೋನಿಯ ಶ್ರೈನ್, ಜಿಯಾನ್ ಚರ್ಚ್, ಸಿನ್ನಮೋನ್ ಗ್ರ್ಯಾಂಡ್, ಕೊಲಂಬೊದ ಶಾಂಗ್ರಿಲಾ ಹೋಟೆಲ್, ಕಿಂಗ್ಸ್ಬರಿ ಹೋಟೆಲ್, ದೆಹಿವಾಲಾ -ಮೌಂಟ್ ಲವಿನಿಯಾದಲ್ಲಿನ ದೆಹಿವಾಲಾ ಝೂ, ಮಹವಿಲಾ ಗಾರ್ಡನ್ ನಲ್ಲಿ  ಬಾಂಬ್ ಸ್ಫೋಟವಾಗಿದೆ.

    ಶ್ರೀಲಂಕಾದಲ್ಲಿ ಬಾಂಬ್ ದಾಳಿ ನಡೆಸಿದ್ದು ನ್ಯಾಷನಲ್ ತೌಹೀತ್ ಜಮಾತ್(ಜೆಎನ್‍ಟಿ) ಸಂಘಟನೆಯ ಸದಸ್ಯರು ಎಂಬುದನ್ನು ಸರ್ಕಾರ ಅಧಿಕೃತವಾಗಿ ಪ್ರಕಟಿಸಿತ್ತು. ಭಾನುವಾರ ಸ್ಫೋಟ ನಡೆದ ಬಳಿಕ ಯಾವೊಂದು ಸಂಘಟನೆ ಈ ಕೃತ್ಯದ ಹೊಣೆಯನ್ನು ಹೊತ್ತುಕೊಂಡಿರಲಿಲ್ಲ. ಆದರೆ ಈಗ ಶ್ರೀಲಂಕಾದ ಆರೋಗ್ಯ ಸಚಿವ ಮತ್ತು ಸರ್ಕಾರದ ವಕ್ತಾರರಾದ ರಜಿತಾ ಸೆನೆರತ್ನೆ ಈ ಕೃತ್ಯವನ್ನು ಜೆಎನ್‍ಟಿ ಸಂಘಟನೆ ನಡೆಸಿದೆ. ಶ್ರೀಲಂಕಾದ ಪ್ರಜೆಗಳೇ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಈ ಸಂಘಟನೆಗೆ ಅಂತರಾಷ್ಟ್ರೀಯ ಸಂಬಂಧ ಇರುವ ಸಾಧ್ಯತೆ ಇರಬಹುದು ಎಂದು ಶಂಕಿಸಿಸಲಾಗಿದ್ದು, 8 ಬಾಂಬ್ ಸ್ಫೋಟದ ಸಂಬಂಧ ಇಲ್ಲಿಯವರೆಗೂ 24 ಮಂದಿಯನ್ನು ಬಂಧಿಸಲಾಗಿದೆ.

    ಶ್ರೀಲಂಕಾದಲ್ಲಿ ದಾಳಿ ನಡೆಸಲು ಉಗ್ರರು ಪ್ಲಾನ್ ಮಾಡುತ್ತಿದ್ದಾರೆ. ಹೀಗಾಗಿ ಎಚ್ಚರದಲ್ಲಿ ಇರುವಂತೆ ಭಾರತದ ಗುಪ್ತಚರ ಇಲಾಖೆ ಶ್ರೀಲಂಕಾಕ್ಕೆ ಈ ತಿಂಗಳ ಆರಂಭದಲ್ಲಿ ತಿಳಿಸಿತ್ತು ಎಂದು ಮಾಧ್ಯಮವೊಂದು ಸುದ್ದಿ ಪ್ರಕಟಿಸಿದೆ.