Tag: Bomb Threats

  • ವಿಮಾನಗಳ ಬೆನ್ನಲ್ಲೇ ತಿರುಪತಿ ಹೋಟೆಲ್‌ಗಳಿಗೆ ಬಾಂಬ್‌ ಬೆದರಿಕೆ!

    ವಿಮಾನಗಳ ಬೆನ್ನಲ್ಲೇ ತಿರುಪತಿ ಹೋಟೆಲ್‌ಗಳಿಗೆ ಬಾಂಬ್‌ ಬೆದರಿಕೆ!

    ಅಮರಾವತಿ: ಆಂಧ್ರಪ್ರದೇಶದ (Andhra Pradesh) ತಿರುಪತಿಯ (Tirupati) 3 ಹೋಟೆಲ್‌ಗಳಿಗೆ ಬಾಂಬ್ ಬೆದರಿಕೆ (Bomb Threats) ಬಂದಿದೆ. ಇಮೇಲ್ ಮೂಲಕ ಬೆದರಿಕೆ ಸಂದೇಶ ಕಳುಹಿಸಲಾಗಿದೆ.

    ಈ ಬಗ್ಗೆ ಹೊಟೆಲ್‌ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು, ಶ್ವಾನದಳ ಹಾಗೂ ಬಾಂಬ್ ಸ್ಕ್ವಾಡ್‌ನೊಂದಿಗೆ ಹೊಟೇಲ್‌ಗಳಲ್ಲಿ ಶೋಧ ನಡೆಸಿದ್ದಾರೆ. ಆದರೆ ಯಾವುದೇ ಅನುಮಾನಾಸ್ಪದ ವಸ್ತುಗಳು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸಚಿವ ವಿ.ಸೋಮಣ್ಣಗೆ ಬಿಗ್ ರಿಲೀಫ್ – ಅಕ್ರಮ ಆಸ್ತಿ ಗಳಿಕೆ ಆರೋಪದ ಪ್ರಕರಣ ವಜಾ

    ಬೆದರಿಕೆ ಇಮೇಲ್ ಕೇವಲ ವದಂತಿ ಎಂದು ಪೊಲೀಸರು ದೃಢಪಡಿಸಿದ್ದಾರೆ. ಇದು ಕೇವಲ ಜನರನ್ನು ಆತಂಕಕ್ಕೊಳಪಡಿಸಲು ಈ ರೀತಿ ಮಾಡಿದ್ದಾರೆ. ಪೊಲೀಸರು ಈಗ ಇಮೇಲ್ ಕಳುಹಿಸಿರುವವರ ಮಾಹಿತಿ ಕಲೆಹಾಕಲು ಮುಂದಾಗಿದ್ದಾರೆ. ಅಲ್ಲದೇ ಹೋಟೆಲ್‌ಗಳಿಗೆ ಭೇಟಿಕೊಟ್ಟವರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

    ಇಮೇಲ್‌ನಲ್ಲಿ ಈ ವರ್ಷದ ಫೆಬ್ರವರಿಯಲ್ಲಿ ಅರೆಸ್ಟ್‌ ಆದ ಮಾದಕವಸ್ತುಗಳ ಜಾಲದ ಕಿಂಗ್‌ಪಿನ್ ಜಾಫರ್ ಸಿದ್ದಿಕ್ ಹೆಸರು ಇದೆ ಎಂದು ಹೇಳಲಾಗಿದೆ.

    ಕಳೆದ 15 ದಿನಗಳಿಂದ ವಿಶ್ವದ ಪ್ರಸಿದ್ಧ ವಿಮಾನಯಾನ ಸಂಸ್ಥೆಗಳ ವಿಮಾನಗಳಿಗೂ ಬಾಂಬ್ ಬೆದರಿಕೆಗಳು ಬಂದಿವೆ. ಶಾಲಾ-ಕಾಲೇಜುಗಳಿಗೂ ಬಾಂಬ್ ಬೆದರಿಕೆ ಸಂದೇಶಗಳು ಬರುತ್ತಿವೆ. ಹೀಗಾಗಿ ಇಂತಹ ಸಂದೇಶಗಳನ್ನು ಕಳುಹಿಸುತ್ತಿರುವ ಜನರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂಬ ಆಗ್ರಹಗಳು ಕೇಳಿಬರುತ್ತಿವೆ. ಇದನ್ನೂ ಓದಿ: ಬಾಬಾ ಸಿದ್ದಿಕ್ ಹತ್ಯೆ ಕೇಸ್‌ – ಪಾಕ್ ಡ್ರೋನ್‌ಗಳ ಮೂಲಕ ಗನ್‌ ಪೂರೈಕೆ?

  • ಇಂಡಿಗೋ, ಏರ್‌ ಇಂಡಿಯಾ, ಸ್ಪೈಸ್‌ಜೆಟ್‌ ಸೇರಿ ಮತ್ತೆ 95 ವಿಮಾನಗಳಿಗೆ ಬಾಂಬ್‌ ಬೆದರಿಕೆ ಕರೆ

    ಇಂಡಿಗೋ, ಏರ್‌ ಇಂಡಿಯಾ, ಸ್ಪೈಸ್‌ಜೆಟ್‌ ಸೇರಿ ಮತ್ತೆ 95 ವಿಮಾನಗಳಿಗೆ ಬಾಂಬ್‌ ಬೆದರಿಕೆ ಕರೆ

    ನವದೆಹಲಿ: ವಿಮಾನಗಳಿಗೆ ಬಾಂಬ್‌ ಬೆದರಿಕೆ (Flight Bomb Threat) ಕರೆಗಳ ತಲೆನೋವು ಹೆಚ್ಚಾಗಿದೆ. ಇಂದು ಒಂದೇ ದಿನ ಮತ್ತೆ 95 ಫ್ಲೈಟ್‌ಗಳಿಗೆ ಬಾಂಬ್‌ ಬೆದರಿಕೆ ಕರೆಗಳು ಬಂದಿವೆ.

    25 ಆಕಾಶ ಏರ್ ವಿಮಾನಗಳು, ಏರ್ ಇಂಡಿಯಾ, ಇಂಡಿಗೋ, ಸ್ಪೈಸ್‌ಜೆಟ್‌ ಮತ್ತು ವಿಸ್ತಾರದ ತಲಾ 20 ವಿಮಾನಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಕಳೆದ 10 ದಿನಗಳಲ್ಲಿ 250 ಕ್ಕೂ ಅಧಿಕ ವಿಮಾನಗಳಿಗೆ ಹೀಗೆ ಬೆದರಿಕೆ ಕರೆಗಳು ಬಂದಿವೆ. ಕಠಿಣ ನಿಯಮಗಳ ಜಾರಿಗೆ ಸರ್ಕಾರ ಚಿಂತಿಸುತ್ತಿರುವ ಹೊತ್ತಲ್ಲೂ ಬೆದರಿಕೆ ಕರೆಗಳು ನಿಂತಿಲ್ಲ. ಇದನ್ನೂ ಓದಿ: ವಾಯುಮಾಲಿನ್ಯದಿಂದ ವಾರ್ಷಿಕ 33 ಸಾವಿರ ಮಂದಿ ಸಾವು

    ಈ ಮೊದಲು ದಿನ ಬಿಟ್ಟು ದಿನ 170 ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬಂದಿದ್ದವು. ಅವುಗಳಲ್ಲಿ ಹೆಚ್ಚಿನವು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಂದ ಬಂದಿವೆ. ಅವು ವಂಚನೆ ಕರೆಗಳು ಎಂದು ನಂತರ ಸ್ಪಷ್ಟವಾಯಿತು. ಬೆದರಿಕೆ ಕರೆ ಹಿನ್ನೆಲೆ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿ ನೂರಾರು ಪ್ರಯಾಣಿಕರಿಗೆ ಅನಾನುಕೂಲತೆ ಉಂಟಾಯಿತು. ಅರೆಸೇನಾ ಸಿಬ್ಬಂದಿ ಮತ್ತು ವಾಯುಯಾನ ಅಧಿಕಾರಿಗಳಿಗೆ ಭದ್ರತೆಯು ತಲೆನೋವಾಗಿ ಪರಿಣಮಿಸಿದೆ.

    ಬಾಂಬ್ ಬೆದರಿಕೆಯ ಸುಳ್ಳು ಕರೆಗಳಲ್ಲಿ ಭಾಗಿಯಾಗಿರುವವರನ್ನು ನೋ-ಫ್ಲೈ ಪಟ್ಟಿಗೆ ಸೇರಿಸಲು ಸರ್ಕಾರ ಯೋಜಿಸಿದೆ. ವಿಮಾನಯಾನ ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಕರೆಗಳನ್ನು ಮಾಡುವುದನ್ನು ಅಪರಾಧವೆಂದು ಪರಿಗಣಿಸಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ತಿಳಿಸಿದ್ದಾರೆ. ಇದನ್ನೂ ಓದಿ: ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ : 5 ಕೋಟಿ ಬೇಡಿಕೆಯಿಟ್ಟಿದ್ದ ತರಕಾರಿ ಮಾರಾಟಗಾರ ಅರೆಸ್ಟ್‌

    ಬಾಂಬ್ ಬೆದರಿಕೆಗಳಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಎಂಟು ಪ್ರಕರಣಗಳನ್ನು ದಾಖಲಿಸಿದ್ದಾರೆ. ಎಕ್ಸ್‌ ಖಾತೆಗಳಲ್ಲಿ ಅನಾಮಧೇಯ ಪೋಸ್ಟ್‌ಗಳ ಮೂಲಕ ಬೆದರಿಕೆ ಸಂದೇಶಗಳು ಬಂದಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

  • ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆ | ಕಾಯ್ದೆ ತಿದ್ದುಪಡಿ ಮಾಡಿ ಕಠಿಣ ಕ್ರಮಕ್ಕೆ ಚಿಂತನೆ : ರಾಮ್ ಮೋಹನ್ ನಾಯ್ಡು

    ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆ | ಕಾಯ್ದೆ ತಿದ್ದುಪಡಿ ಮಾಡಿ ಕಠಿಣ ಕ್ರಮಕ್ಕೆ ಚಿಂತನೆ : ರಾಮ್ ಮೋಹನ್ ನಾಯ್ಡು

    ನವದೆಹಲಿ: ವಿಮಾನಯಾನ (Flights) ಸಂಸ್ಥೆಗಳಿಗೆ ನಕಲಿ ಬಾಂಬ್ ಬೆದರಿಕೆ ಕರೆಗಳು (Bomb Threats) ಹೆಚ್ಚುತ್ತಿರುವ ಹಿನ್ನಲೆ ವಿಮಾನ ಭದ್ರತಾ ನಿಯಮಗಳಲ್ಲಿ ತಿದ್ದುಪಡಿ ಮಾಡಿ, ಕಠಿಣ ಕಾನೂನು ತರಲು ಯೋಚಿಸುತ್ತಿದ್ದೇವೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು (Rammohan Naidu) ತಿಳಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಈ ವಿಷಯದ ಕುರಿತು ಹಲವಾರು ಸಭೆಗಳನ್ನು ನಡೆಸಿದ್ದೇವೆ ಮತ್ತು ನಿಯಮಗಳು, ನಿಬಂಧನೆಗಳಿಗೆ ತಿದ್ದುಪಡಿಗಳು ಅಗತ್ಯವೆಂದು ತೀರ್ಮಾನಿಸಿದ್ದೇವೆ. ನಾಗರಿಕ ಸುರಕ್ಷತೆಯ ಬಗ್ಗೆ ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹದ ವಿಮಾನಯಾನ ಕಾಯ್ದೆ ತರಲಿದ್ದೇವೆ. ಹುಸಿ ಬಾಂಬ್ ಕರೆ ಮಾಡುವವರ ವಿರುದ್ದ ನೊ ಪ್ಲೈ, ದಂಡ ಮತ್ತು ಜೈಲು ಶಿಕ್ಷೆಯಂತಹ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಪಪಡಿಸಿದರು.

    ಕಳೆದ ಕೆಲವು ದಿನಗಳಲ್ಲಿ 75ಕ್ಕೂ ಹೆಚ್ಚು ವಿಮಾನಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಬೆದರಿಕೆ ಸಂದೇಶಗಳನ್ನು ಸ್ವೀಕರಿಸಿವೆ. ಶನಿವಾರವಷ್ಟೇ 30ಕ್ಕೂ ಹೆಚ್ಚು ವಿಮಾನಗಳಿಗೆ ಇಂತಹ ಸಂದೇಶಗಳು ಬಂದಿವೆ. ಏರ್ ಇಂಡಿಯಾ, ಇಂಡಿಗೋ, ಆಕಾಶ್ ಏರ್, ವಿಸ್ತಾರಾ, ಸ್ಪೈಸ್ ಜೆಟ್, ಸ್ಟಾರ್ ಏರ್ ಮತ್ತು ಅಲಯನ್ಸ್ ವಿಮಾನಗಳಿಗೆ ಬೆದರಿಕೆ‌ ಕರೆಗಳು ಬಂದಿವೆ ಎಂದು ತಿಳಿಸಿದರು.

    ಈ ನಕಲಿ ಬೆದರಿಕೆಗಳಲ್ಲಿ ʻಬಾಂಬ್‌ಗಳುʼ, ʻರಕ್ತವು ಎಲ್ಲೆಡೆ ಹರಡುತ್ತದೆʼ, ʻಸ್ಫೋಟಕ ಸಾಧನಗಳುʼ, ʻಇದು ತಮಾಷೆಯಲ್ಲ, ನೀವೆಲ್ಲರೂ ಸಾಯುತ್ತೀರಿʼ ಮತ್ತು ʻಬಾಂಬ್ ರಖ್ವಾ ದಿಯಾʼ ಎಂಬಂತಹ ಕೆಲವು ಸಂದೇಶಗಳ ಸಾಲುಗಳು ಮತ್ತು ಪದಗಳನ್ನು ಪೊಲೀಸರು ಕಂಡುಕೊಂಡಿದ್ದಾರೆ ಎಂದು ಹೇಳಿದರು.

    ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸ್‌ಗಢದ 17 ವರ್ಷದ ಬಾಲಕನನ್ನು ಈ ಹಿಂದೆ ಬಂಧಿಸಲಾಗಿತ್ತು. ಕೆಲವು ಕರೆಗಳಿಗೆ ಆತನೇ ಕಾರಣ ಎಂದು ತನಿಖೆಯಿಂದ ತಿಳಿದುಬಂದಿದೆ. ಆದಾಗ್ಯೂ, ಹೆಚ್ಚಿನ ಬೆದರಿಕೆಗಳ ಮೂಲವನ್ನು ಇನ್ನೂ ಪತ್ತೆಹಚ್ಚಲಾಗಿಲ್ಲ. ಈ ಬಗ್ಗೆ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ​​​​ಸೆಕ್ಯುರಿಟಿ ಶನಿವಾರ ನವದೆಹಲಿಯಲ್ಲಿ ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದೆ ಎಂದು ತಿಳಿಸಿದರು.

  • ಮತ್ತೆ 3 ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆ – ಬೆಂಗಳೂರಿಂದ ಮುಂಬೈಗೆ ಹೊರಟಿದ್ದ ಫ್ಲೈಟ್‌ಗೂ ಥ್ರೆಟ್ ಕಾಲ್

    ಮತ್ತೆ 3 ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆ – ಬೆಂಗಳೂರಿಂದ ಮುಂಬೈಗೆ ಹೊರಟಿದ್ದ ಫ್ಲೈಟ್‌ಗೂ ಥ್ರೆಟ್ ಕಾಲ್

    ನವದೆಹಲಿ: ಕಳೆದ 24 ಗಂಟೆಗಳಲ್ಲಿ 3 ವಿಮಾನಗಳಿಗೆ ಬಾಂಬ್ ಬೆದರಿಕೆ (Bomb Threat) ಕರೆಗಳು ಬಂದಿದೆ. ಆ ಮೂಲಕ ಒಂದು ವಾರದಲ್ಲಿ 35ಕ್ಕೂ ಹೆಚ್ಚು ವಿಮಾನಗಳು ಬೆದರಿಕೆ ಕರೆ ಸ್ವೀಕರಿಸಿರುವ ಬಗ್ಗೆ ವರದಿಯಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ (Ministry Of Civil Aviation) ತಿಳಿಸಿದೆ.

    ದೆಹಲಿಯಿಂದ ಲಂಡನ್‌ಗೆ ಹೊರಟಿದ್ದ ವಿಸ್ತಾರಾ ವಿಮಾನ (Vistara Flight) ಸೋಷಿಯಲ್ ಮೀಡಿಯಾದಲ್ಲಿ ಬಾಂಬ್ ಬೆದರಿಕೆಯ ಕರೆಯನ್ನು ಸ್ವೀಕರಿಸಿದ್ದು, ತಕ್ಷಣ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ, ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನವನ್ನು ಫ್ರಾಂಕ್‌ಫರ್ಟ್‌ಗೆ ಕಳುಹಿಸುವಂತೆ ನಿರ್ಧರಿಸಲಾಯಿತು. ವಿಮಾನವನ್ನು ಜರ್ಮನಿಯ ಫ್ರಾಂಕ್‌ಫರ್ಟ್‌ಗೆ ಕಳುಹಿಸಿ, ಬಳಿಕ ಅಲ್ಲಿಂದ ಲಂಡನ್‌ಗೆ ಕಳುಹಿಸಲಾಯಿತು.ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಕೇಸ್‌ – ಹಿರಿಯ ಐಎಎಸ್‌ ಅಧಿಕಾರಿ, ಆರ್‌ಜೆಡಿ ಮಾಜಿ ಶಾಸಕ ಅರೆಸ್ಟ್‌

    ಜೈಪುರ್‌ನಿಂದ ದುಬೈಗೆ ಹೊರಟಿದ್ದ ಏರ್ ಇಂಡಿಯಾ (Air India) ಎಕ್ಸ್‌ಪ್ರೆಸ್‌ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿತ್ತು. ಇದರಿಂದಾಗಿ ಸ್ವಲ್ವ ಸಮಯದ ಬಳಿಕ ವಿಮಾನ ಟೇಕ್‌ಆಫ್ ಆಯಿತು. ಇಂದು ಬೆಳಗ್ಗೆ 6:10ಕ್ಕೆ ಟೇಕ್ ಆಫ್ ಆಗಬೇಕಿದ್ದ ವಿಮಾನ ತಡವಾಗಿ 7:45ಕ್ಕೆ ಟೇಕ್ ಆಫ್ ಆಯಿತು.

    ಶುಕ್ರವಾರ ಬೆಂಗಳೂರಿನಿಂದ ಮುಂಬೈಗೆ ಹೊರಡಲು ಸಿದ್ಧವಾಗಿದ್ದ ಆಕಾಶ ಏರ್ (Akash Air) ವಿಮಾನಕ್ಕೆ ಬಾಂಬ್ ಬೆದರಿಕೆಯ ಕರೆ ಬಂದ ಹಿನ್ನೆಲೆಯಲ್ಲಿ ವಿಮಾನವನ್ನು ಸಂಪೂರ್ಣ ಪರಿಶೀಲನೆ ನಡೆಸಲಾಯಿತು. ನೆಟ್‌ವರ್ಕ್ ಆಪರೇಷನ್ ಕಂಟ್ರೋಲ್ (NOC) ಒಪ್ಪಿಗೆ ನೀಡಿದ ಬಳಿಕ ಸಂಜೆ ಮುಂಬೈಗೆ ಹೊರಟಿತು.

    ಒಂದು ವಾರದಲ್ಲಿ ಸುಮಾರು 35 ವಿಮಾನಗಳು ಬೆದರಿಕೆಯ ಕರೆಗಳನ್ನು ಸ್ವೀಕರಿಸಿದ್ದು, ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಅಧಿಕಾರಿಗಳು ಆ ಸಂದರ್ಭದಲ್ಲಿ ಭದ್ರತಾ ಪರಿಶೀಲನೆ ನಡೆಸಿ, ಕಠಿಣ ಕ್ರಮಗಳನ್ನು ಕೈಗೊಳ್ಳಲಾಯಿತು.

    ಬಾಂಬ್ ಬೆದರಿಕೆ ಸಂಬಂಧಿಸಿದಂತೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು (Rammohan Naidu)  ಮಾತನಾಡಿ, ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಮೂರು ಸೇರಿದಂತೆ ಸೋಮವಾರ ನಾಲ್ಕು ವಿಮಾನಗಳಿಗೆ ಬೆದರಿಕೆ ಹಾಕಲಾಗಿದೆ. 17 ವರ್ಷದ ಹುಡುಗನನ್ನು ಮುಂಬೈ ಪೊಲೀಸರು ಬುಧವಾರ ಕಸ್ಟಡಿಗೆ ತೆಗೆದುಕೊಂಡಿದ್ದು, ಹೆಚ್ಚಿನ ಕರೆಗಳನ್ನು ಅಪ್ರಾಪ್ತರು ಮತ್ತು ಕುಚೇಷ್ಟೆಗಾರರು ಮಾಡಿದ್ದಾರೆ ಎಂದು ಹೇಳಿದರು.

    ಭವಿಷ್ಯದಲ್ಲಿ ಇಂತಹ ಹುಸಿ ಬಾಂಬ್ ಕರೆಗಳು ನಡೆಯದಂತೆ ನೋಡಿಕೊಳ್ಳಲು ಹಾಗೂ ಈ ರೀತಿಯ ಕುಚೇಷ್ಟೆಗಳನ್ನು ಮಾಡಲು ಪ್ರಯತ್ನಿಸುವ ಜನರಿಗೆ ಕಟ್ಟುನಿಟ್ಟಾದ ಕ್ರಮ ತೆಗೆದುಕೊಳ್ಳಲು ನಮ್ಮ ಇಲಾಖೆಯ ನಿಯಮಗಳು ಮತ್ತು ಶಾಸನಗಳಲ್ಲಿ ಬದಲಾವಣೆ ತರಲು ಸೂಚಿಸಿದ್ದೇವೆ ಎಂದು ತಿಳಿಸಿದರು.ಇದನ್ನೂ ಓದಿ: ಬಿಬಿಎಂಪಿಯಿಂದ ತುರ್ತು ಇ-ಖಾತಾ ಪಡೆಯಲು ಮಾರ್ಗಸೂಚಿ ಬಿಡುಗಡೆ – ಗೈಡ್‌ಲೈನ್‌ನಲ್ಲಿ ಏನಿದೆ?

  • 4 ದಿನದಲ್ಲಿ 20ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್‌ ಬೆದರಿಕೆ – ಲಂಡನ್‌, ಜರ್ಮನಿಯಲ್ಲಿ ಐಪಿ ಅಡ್ರೆಸ್‌ ಪತ್ತೆ

    4 ದಿನದಲ್ಲಿ 20ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್‌ ಬೆದರಿಕೆ – ಲಂಡನ್‌, ಜರ್ಮನಿಯಲ್ಲಿ ಐಪಿ ಅಡ್ರೆಸ್‌ ಪತ್ತೆ

    ನವದೆಹಲಿ: ಭಾರತ ಹಾಗೂ ವಿದೇಶಿ ವಿಮಾನಗಳು ಸೇರಿದಂತೆ 20ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್‌ ಬೆದರಿಕೆ (Bomb Threats) ಬಂದಿದ್ದ ಐಪಿ ವಿಳಾಸವನ್ನು (IP addresses) ಕೇಂದ್ರ ಗುಪ್ತಚರ ಸಂಸ್ಥೆಗಳು ಪತ್ತೆಹಚ್ಚಿವೆ. ಬಾಂಬ್‌ ಬೆದರಿಕೆ ಬಂದಿದ್ದ ಸೋಷಿಯಲ್‌ ಮೀಡಿಯಾ ಐಪಿ ವಿಳಾಸಗಳು ಲಂಡನ್‌ ಮತ್ತು ಜರ್ಮನಿಯಲ್ಲಿ ಪತ್ತೆಯಾಗಿವೆ ಎಂದು ವರದಿಯಾಗಿದೆ.

    ಇದೇ ಅಕ್ಟೋಬರ್‌ 14ರಿಂದ 17ರ ವರೆಗೆ ಸುಮಾರು 20ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್‌ ಬೆದರಿಕೆ ಬಂದಿರುವ ಪ್ರಕರಣಗಳು ವರದಿಯಾಗಿವೆ. ಭಾರತ ಸೇರಿದಂತೆ ಅನೇಕ ವಿದೇಶಿ ವಿಮಾನಗಳಿಗೂ (Indian flights) ಬೆದರಿಕೆ ಬಂದಿವೆ. ಭದ್ರತಾ ಪಡೆಗಳು ತಪಾಸಣೆ ನಡೆಸಿದ ನಂತರ ಅವು ಹುಸಿ ಬಾಂಬ್‌ ಬೆದರಿಕೆ ಎಂಬುದು ಗೊತ್ತಾಗಿದೆ. ಈ ಬೆನ್ನಲ್ಲೇ ಕೇಂದ್ರ ಗುಪ್ತಚರ ಸಂಸ್ಥೆ ಬೆದರಿಕೆ ಮೂಲವನ್ನು ಪತ್ತೆಹಚ್ಚುವ ಕೆಲಸಕ್ಕೆ ಮುಂದಾಗಿತ್ತು. ಬಳಿಕ ಲಂಡನ್‌ ಮತ್ತು ಜರ್ಮನಿಯಲ್ಲಿ ವಿಳಾಸ ಪತ್ತೆಯಾಗಿದ್ದು, ಎಕ್ಸ್‌ ಖಾತೆಗಳನ್ನು ನಿಷ್ಕ್ರಿಯಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಇದನ್ನೂ ಓದಿ: ಸ್ನೇಹಿತನ ವಿರುದ್ಧ ಸೇಡು ತೀರಿಸಿಕೊಳ್ಳಲು 4 ವಿಮಾನಗಳಿಗೆ ಬಾಂಬ್ ಬೆದರಿಕೆ – ಮುಂಬೈನಲ್ಲಿ ಅಪ್ರಾಪ್ತ ಅರೆಸ್ಟ್‌

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗುಪ್ತಚರ ಸಂಸ್ಥೆಯ ಉನ್ನತ ಅಧಿಕಾರಿಯೊಬ್ಬರು, ನಾವು ಪ್ರಾಥಮಿಕ ವರದಿಗಳನ್ನು ಸ್ವೀಕರಿಸಿದ್ದೇವೆ. ಈ ಮೂರು ಪ್ರತ್ಯೇಕ ಹ್ಯಾಂಡಲ್‌ಗಳಿಂದ ಪೋಸ್ಟ್‌ ಮಾಡಲಾಗಿದೆ. ಲಂಡನ್‌ನಲ್ಲಿ ಪತ್ತೆಯಾದ 2 ಐಪಿ ವಿಳಾಸ ಸಾಮಾನ್ಯ ವಿಳಾಸವಾಗಿದೆ. ಉಳಿದಂತೆ ಬಳಕೆದಾರರೊಬ್ಬರು VPN (ವರ್ಚುವಲ್ ಖಾಸಗಿ ನೆಟ್‌ವರ್ಕ್) ಬಳಸಿ ಎಕ್ಸ್‌ ಖಾತೆಯಲ್ಲಿ ಬೆದರಿಕೆ ಪೋಸ್ಟ್‌ ಮಾಡಿದ್ದಾರೆ ಎಂದು ತಿಳಿಸಿರುವುದಾಗಿ ವರದಿಗಳು ಉಲ್ಲೇಖಿಸಿವೆ. ಇದನ್ನೂ ಓದಿ: ಬೆಂಗಳೂರು, ದೆಹಲಿಗೆ ಹೊರಟಿದ್ದ 2 ವಿಮಾನಗಳಿಗೆ ಬಾಂಬ್‌ ಬೆದರಿಕೆ – 3 ದಿನಗಳಲ್ಲಿ 12 ಕೇಸ್‌

    ಅ.16ರಂದು ಸಹ ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ ಆಕಾಶ ಏರ್‌ (Akasa Air) ವಿಮಾನ ಹಾಗೂ ಮುಂಬೈನಿಂದ ದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನಗಳಿಗೂ (IndiGo Flight) ಬಾಂಬ್‌ ಬೆದರಿಕೆ ಬಂದಿತ್ತು. ಬೆದರಿಕೆ ಬೆನ್ನಲ್ಲೇ ವಿಮಾನಗಳನ್ನು ತುರ್ತು ಲ್ಯಾಂಡಿಂಗ್‌ ಮಾಡಿ ತೀವ್ರ ತಪಾಸಣೆ ನಡೆಸಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ – ಶೇ.3 ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಕ್ಯಾಬಿನೆಟ್‌ ಅನುಮೋದನೆ

  • ಸ್ನೇಹಿತನ ವಿರುದ್ಧ ಸೇಡು ತೀರಿಸಿಕೊಳ್ಳಲು 4 ವಿಮಾನಗಳಿಗೆ ಬಾಂಬ್ ಬೆದರಿಕೆ – ಮುಂಬೈನಲ್ಲಿ ಅಪ್ರಾಪ್ತ ಅರೆಸ್ಟ್‌

    ಸ್ನೇಹಿತನ ವಿರುದ್ಧ ಸೇಡು ತೀರಿಸಿಕೊಳ್ಳಲು 4 ವಿಮಾನಗಳಿಗೆ ಬಾಂಬ್ ಬೆದರಿಕೆ – ಮುಂಬೈನಲ್ಲಿ ಅಪ್ರಾಪ್ತ ಅರೆಸ್ಟ್‌

    ಮುಂಬೈ: ತನ್ನ ಸ್ನೇಹಿತನ ವಿರುದ್ಧ ಸೇಡು ತೀರಿಸಿಕೊಳ್ಳಲು ನಾಲ್ಕು ವಿಮಾನಗಳಿಗೆ (Flights) ಬಾಂಬ್‌ ಬೆದರಿಕೆ ಸಂದೇಶ ಕಳುಹಿಸಿದ್ದ ಅಪ್ರಾಪ್ತನನ್ನ ಮುಂಬೈನಲ್ಲಿ ಪೊಲೀಸರು (Mumbai Police) ಬಂಧಿಸಿದ್ದಾರೆ.

    ಸ್ನೇಹಿತನ ಹೆಸರಿನಲ್ಲಿ ಸೋಷಿಯಲ್‌ ಮೀಡಿಯಾ ನಕಲಿ ಖಾತೆ ತೆರೆದು, ಇದೇ ಅಕ್ಟೋಬರ್‌ 14ರಂದು ನಾಲ್ಕು ವಿಮಾನಗಳಿಗೆ ಬಾಂಬ್‌ ಬೆದರಿಕೆ (Bomb Threats) ಕಳುಹಿಸಿದ್ದಕ್ಕಾಗಿ ಅಪ್ರಾಪ್ತನನ್ನ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬೆಂಗಳೂರು, ದೆಹಲಿಗೆ ಹೊರಟಿದ್ದ 2 ವಿಮಾನಗಳಿಗೆ ಬಾಂಬ್‌ ಬೆದರಿಕೆ – 3 ದಿನಗಳಲ್ಲಿ 12 ಕೇಸ್‌

    ಬಂಧಿತ ಅಪ್ರಾಪ್ತನು ತನ್ನ ಸ್ನೇಹಿತನೊಂದಿಗೆ ಹಣದ ವಿಚಾರಕ್ಕೆ ಜಗಳವಾಡಿಕೊಂಡಿದ್ದ. ಅವನ ಮೇಲೆ ಸೇಡು ತೀರಿಸಿಕೊಳ್ಳಬೇಕೆಂದು ನಕಲಿ ಎಕ್ಸ್‌ ಖಾತೆಯೊಂದನ್ನ ತೆರೆದು, ಅದರಲ್ಲಿ ಬಾಂಬ್‌ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಕಾರು ಅಪಘಾತ – ಆಂಧ್ರಪ್ರದೇಶದ ಮೂವರು ಸೇರಿ, ಐವರು ಭಾರತೀಯರು ಸಾವು

    ಕಳೆದ ಮೂರು ದಿನಗಳಲ್ಲಿ ವಿಮಾನಗಳಿಗೆ ಬಾಂಬ್‌ ಬೆದರಿಕೆ ಹಾಕಿದ 12 ಪ್ರಕರಣಗಳು ಕಂಡುಬಂದಿವೆ. ಆದ್ರೆ ವಿಮಾನಗಳಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಬುಧವಾರ (ಇಂದು) ಸಹ ಬೆಂಗಳೂರಿಗೆ ಹೊರಟಿದ್ದ ಆಕಾಶ ಏರ್‌ ವಿಮಾನ QP1335 ಹಾಗೂ ದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನಕ್ಕೆ (ವಿಮಾನ ಸಂಖ್ಯೆ 6E 651) ಬಾಂಬ್‌ ಬೆದರಿಕೆ ಹಾಕಿರುವ ಪ್ರಕರಣಗಳು ಕಂಡುಬಂದಿವೆ.

    ತುರ್ತು ಸಭೆ:
    ವಿಮಾನಗಳಿಗೆ ಬಾಂಬ್‌ ಬೆದರಿಕೆ ವಿಚಾರವಾಗಿ ಬುಧವಾರ ಬೆಳಗ್ಗೆ 11 ಗಂಟೆಗೆ ಸಂಸದೀಯ ಸ್ಥಾಯಿ ಸಮಿತಿ ಸಭೆ ಸೇರಿತ್ತು. ಇದಕ್ಕೂ ಮುನ್ನ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರು ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಡಿಜಿಸಿಎ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ – ಶೇ.3 ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಕ್ಯಾಬಿನೆಟ್‌ ಅನುಮೋದನೆ

    ಡಾರ್ಕ್‌ವೆಬ್‌ ಮೇಲೆ ನಿಗಾ:
    ಬಾಂಬ್‌ ಬೆದರಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೆಲವು ಆರೋಪಿಗಳನ್ನು ಗುರುತಿಸಲಾಗಿದ್ದು, ಡಾರ್ಕ್ ವೆಬ್‌ನ ಮೇಲೆ ನಿಗಾ ಇಡಲಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

  • ಬೆಂಗಳೂರು, ದೆಹಲಿಗೆ ಹೊರಟಿದ್ದ 2 ವಿಮಾನಗಳಿಗೆ ಬಾಂಬ್‌ ಬೆದರಿಕೆ – 3 ದಿನಗಳಲ್ಲಿ 12 ಕೇಸ್‌

    ಬೆಂಗಳೂರು, ದೆಹಲಿಗೆ ಹೊರಟಿದ್ದ 2 ವಿಮಾನಗಳಿಗೆ ಬಾಂಬ್‌ ಬೆದರಿಕೆ – 3 ದಿನಗಳಲ್ಲಿ 12 ಕೇಸ್‌

    ನವದೆಹಲಿ: 184 ಪ್ರಯಾಣಿಕರನ್ನು ಹೊತ್ತು ಬೆಂಗಳೂರಿಗೆ ಹೊರಟಿದ್ದ ಆಕಾಶ ಏರ್‌ (Akasa Air) ವಿಮಾನ ಹಾಗೂ ಮುಂಬೈನಿಂದ ದೆಹಲಿಗೆ ಹೊರಟಿದ್ದ ಇಂಡಿಗೂ ವಿಮಾನಗಳಿಗೆ (IndiGo Flight) ಬಾಂಬ್‌ ಬೆದರಿಕೆ ಬಂದಿದೆ. ಇದು ಕಳೆದ ಮೂರು ದಿನಗಳಲ್ಲಿ 12ನೇ ಬೆದರಿಕೆ ಪ್ರಕರಣ ಆಗಿದೆ.

    ಸೋಷಿಯಲ್‌ ಮೀಡಿಯಾ ಮೂಲಕ ಬಾಂಬ್‌ ಬೆದರಿಕೆ (Bomb Threats) ಬರುತ್ತಿದ್ದಂತೆ ಬೆಂಗಳೂರಿಗೆ ಹೊರಟಿದ್ದ ಆಕಾಶ ಏರ್‌ ವಿಮಾನ QP1335 ಹಾಗೂ ದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನವನ್ನು (ವಿಮಾನ ಸಂಖ್ಯೆ 6E 651) ಅಹಮದಾಬಾದ್‌ಗೆ ಹಿಂತಿರುಗಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಎರಡು ದಿನಗಳ ಹಿಂದೆಯಷ್ಟೇ ಮುಂಬೈನಿಂದ ಹೊರಟಿದ್ದ ಏರ್‌ ಇಂಡಿಯಾ (Air India) ವಿಮಾನಗಳಿಗೂ ಬಾಂಬ್‌ ಬೆದರಿಕೆ ಬಂದಿತ್ತು. ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ – ಶೇ.3 ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಕ್ಯಾಬಿನೆಟ್‌ ಅನುಮೋದನೆ

    ಬಾಂಬ್‌ ಬೆದರಿಕೆ ಬೆನ್ನಲ್ಲೇ ಆಕಾಶ ಏರ್‌ನ ವಕ್ತಾರರು ಪ್ರತಿಕ್ರಿಯೆ ನೀಡಿದ್ದಾರೆ. ಆಕಾಶ ಏರ್‌ನ ಕ್ಯೂಪಿ 1335 ವಿಮಾನವು ದೆಹಲಿಯಿಂದ ಬೆಂಗಳೂರಿಗೆ ಹೊರಟಿತ್ತು. 174 ಪ್ರಯಾಣಿಕರು, ಮೂವರು ಮಕ್ಕಳು ಹಾಗೂ 7 ಸಿಬ್ಬಂದಿ ಸೇರಿ 184 ಮಂದಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಬಾಂಬ್‌ ಬೆದರಿಕೆ ಕೇಳಿಬರುತ್ತಿದ್ದಂತೆ, ತುರ್ತು ನಿರ್ವಹಣಾ ತಂಡಗಳು ಪರಿಸ್ಥಿತಿಯನ್ನು ಮೇಲ್ವಿಚಾರಣೆ ನಡೆಸಿ, ದೆಹಲಿಗೆ ಹಿಂತಿರುಗಿಸುವಂತೆ ಪೈಲಟ್‌ಗಳಿಗೆ ಸೂಚನೆ ನೀಡಲಾಯಿತು. ಸದ್ಯ ನಮ್ಮ ತಂಡಗಳು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಂಡಿವೆ. ಜೊತೆಗೆ ಬಾಂಬ್‌ ಬೆದರಿಕೆ ಕುರಿತು ಮೇಲ್ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

    ಇಂಡಿಗೋ ವಕ್ತಾರರು ಸಹ ಪ್ರತಿಕ್ರಿಯೆ ನೀಡಿದ್ದು, ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ. ತುರ್ತು ನಿರ್ವಹಣಾ ತಂಡಗಳು ಪರಿಶೀಲನೆ ನಡೆಸುತ್ತಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಶಾಸಕಾಂಗ ಪಕ್ಷದ ನಾಯಕನಾಗಿ ಸೈನಿ ಅವಿರೋಧ ಆಯ್ಕೆ – ಎರಡನೇ ಬಾರಿಗೆ ಸಿಎಂ ಆಗಿ ಗುರುವಾರ ಪ್ರಮಾಣವಚನ

    ಕಳೆದ ಮೂರು ದಿನಗಳಲ್ಲಿ ಏರ್‌ ಇಂಡಿಯಾ ದೆಹಲಿ-ನ್ಯೂಯಾರ್ಕ್‌ ವಿಮಾನ, ದಮ್ಮಾಮ್-ಲಕ್ನೋ ಇಂಡಿಗೋ ವಿಮಾನ, ಅಯೋಧ್ಯೆ-ಬೆಂಗಳೂರು ಏರ್ ಇಂಡಿಯಾ ಎಕ್ಸ್‌ಪ್ರೆಸ್, ದರ್ಭಾಂಗಾದಿಂದ ಮುಂಬೈಗೆ ಸ್ಪೈಸ್‌ಜೆಟ್ ವಿಮಾನ (SG116), ಬಾಗ್ಡೋಗ್ರಾ-ಬೆಂಗಳೂರಿಗೆ ಹೊರಟಿದ್ದ ಆಕಾಶ ಏರ್ ವಿಮಾನ (QP 1373) ಅಲಯನ್ಸ್ ಏರ್ ಅಮೃತಸರ-ಡೆಹ್ರಾಡೂನ್-ದೆಹಲಿ ವಿಮಾನ (9I 650) ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ (IX 684) ಹಾಗೂ ಮಧುರೈನಿಂದ ಸಿಂಗಾಪುರಕ್ಕೆ ಹೊರಟಿದ್ದ ವಿಮಾನಗಳಿಗೆ ಬಾಂಬ್‌ ಬೆದರಿಕೆ ಬಂದಿದೆ.

    ತುರ್ತು ಸಭೆ:
    ವಿಮಾನಗಳಿಗೆ ಬಾಂಬ್‌ ಬೆದರಿಕೆ ವಿಚಾರವಾಗಿ ಬುಧವಾರ ಬೆಳಗ್ಗೆ 11 ಗಂಟೆಗೆ ಸಂಸದೀಯ ಸ್ಥಾಯಿ ಸಮಿತಿ ಸಭೆ ಸೇರಿತ್ತು. ಇದಕ್ಕೂ ಮುನ್ನ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರು ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಡಿಜಿಸಿಎ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಇದನ್ನೂ ಓದಿ: ವಾಯು ಮಾಲಿನ್ಯ ನಿಯಂತ್ರಣಕ್ಕೆ ಕ್ರಮಕೈಗೊಳ್ಳದ ಹರಿಯಾಣ, ಪಂಜಾಬ್ ಸರ್ಕಾರಕ್ಕೆ ಸುಪ್ರೀಂ ಛೀಮಾರಿ

    ಡಾರ್ಕ್‌ವೆಬ್‌ ಮೇಲೆ ನಿಗಾ: 
    ಬಾಂಬ್‌ ಬೆದರಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೆಲವು ಆರೋಪಿಗಳನ್ನು ಗುರುತಿಸಲಾಗಿದ್ದು, ಡಾರ್ಕ್ ವೆಬ್‌ನ ಮೇಲೆ ನಿಗಾ ಇಡಲಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.