Tag: Bomb Disabled

  • ಚಿಕ್ಕಮಗಳೂರಿನಲ್ಲಿ ಅನಾಮಧೇಯ ಸೂಟ್‍ಕೇಸ್ ಪತ್ತೆ- ಸ್ಥಳೀಯರಲ್ಲಿ ಆತಂಕ

    ಚಿಕ್ಕಮಗಳೂರಿನಲ್ಲಿ ಅನಾಮಧೇಯ ಸೂಟ್‍ಕೇಸ್ ಪತ್ತೆ- ಸ್ಥಳೀಯರಲ್ಲಿ ಆತಂಕ

    ಚಿಕ್ಕಮಗಳೂರು: ಅನಾಮಧೇಯ ಮಹಿಳೆಯೊಬ್ಬಳು ಜನವಸತಿ ಪ್ರದೇಶಕ್ಕೆ ಸೂಟ್‍ಕೇಸ್ ತಂದಿಟ್ಟು ನಾಪತ್ತೆಯಾಗಿದ್ದ ಕಾರಣ ಚಿಕ್ಕಮಗಳೂರು ನಗರದ ಜನ ಆತಂಕಕ್ಕೀಡಾಗಿದ್ದಾರೆ.

    ನಗರದ ಬಸವನಹಳ್ಳಿ ಮುಖ್ಯ ರಸ್ತೆಯ ಕ್ರಿಸ್ಟಲಿನ್ ಹೋಟೆಲ್ ಮುಂಭಾಗದ ರಸ್ತೆ ಬದಿಯ ಮರದ ಬುಡದ ಬಳಿ ಚೂಡಿದಾರ ಹಾಕಿಕೊಂಡು ಫೋನಿನಲ್ಲಿ ಮಾತನಾಡಿಕೊಂಡು ಬಂದ ಮಹಿಳೆ ಸೂಟ್‍ಕೇಸ್ ಇಟ್ಟು ನಾಪತ್ತೆಯಾಗಿದ್ದಾಳು. ಆಕೆ ಯಾರೆಂದೂ ಯಾವ ಮಾಹಿತಿ ಕೂಡ ಲಭ್ಯವಾಗಿಲ್ಲ. ಆದರೆ ಸೂಟ್‍ಕೇಸ್ ಕಂಡ ಜನ ಮಾತ್ರ ಆತಂಕ ವ್ಯಕ್ತಪಡಿಸಿದ್ದರು.

    ಈ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಬಂದ ಬಸವನಹಳ್ಳಿ ಪೊಲೀಸರು ಸುಮಾರು 10 ರಿಂದ 15 ಅಡಿ ಉದ್ದದ ಕೋಲಿನ ಮೂಲಕ ಆ ಸೂಟ್‍ಕೇಸನ್ನು ನಗರದ ಡಿ.ಆರ್.ಮೈದಾನಕ್ಕೆ ತಂದಿದ್ದಾರೆ. ಮಹಿಳೆ ಸೂಟ್‍ಕೇಸನ್ನು ತಂದಿಟ್ಟು ಇಟ್ಟು ಹೋಗುವ ದೃಶ್ಯ ಕ್ರಿಸ್ಟಲಿನ್ ಹೊಟೇಲ್‍ನ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಶ್ವಾನ ದಳ ಕೂಡ ಬಂದು ಪರಿಶೀಲನೆ ನಡೆಸಿತ್ತು. ಬಳಿಕ ಡಿ.ಆರ್. ಮೈದಾನಕ್ಕೆ ಸೂಟ್‍ಕೇಸನ್ನು ತೆಗೆದುಕೊಂಡು ಬಂದು ಗುಂಡಿ ತೆಗೆದು ಇಟ್ಟಿದ್ದಾರೆ.

    ಮಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳ ಬಂದ ಬಳಿಕ ಆ ಸೂಟ್‍ಕೇಸನ್ನು ತೆರಯಲು ಮುಂದಾಗಲಿದ್ದಾರೆ. ಅಲ್ಲಿವರೆಗೂ ಆ ಸೂಟ್‍ಕೇಸ್ ಡಿ.ಆರ್.ಮೈದಾನದಲ್ಲೇ ಇರಲಿದೆ. ಈ ವಿಷಯ ನಗರದಾದ್ಯಂತ ಹಬ್ಬಿ ಚಿಕ್ಕಮಗಳೂರು ಜನ ಆತಂಕಕ್ಕೀಡಾಗಿದ್ದಾರೆ. ಬಾಂಬ್ ನಿಷ್ಕ್ರಿಯ ದಳ ಬಂದು ಸೂಟ್‍ಕೇಸ್ ಪರಿಶೀಲನೆ ನಡೆಸಿದ ಬಳಿಕವೇ ಈ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ.