Tag: Bolero pickup

  • ಮದ್ವೆ ಮುಗಿಸಿ ವಾಪಸ್ ಬರೋವಾಗ ಅಪಘಾತ- ಮೂವರು ದುರ್ಮರಣ

    ಮದ್ವೆ ಮುಗಿಸಿ ವಾಪಸ್ ಬರೋವಾಗ ಅಪಘಾತ- ಮೂವರು ದುರ್ಮರಣ

    ಚಾಮರಾಜನಗರ: ಮದುವೆಗೆ ತೆರಳಿದವರು ಮಸಣಕ್ಕೆ ಸೇರಿದ ಘಟನೆಯೊಂದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕೊರಮನಕತ್ತರಿ ಜೆ ವಿಲೇಜ್ ಬಳಿ ನಡೆದಿದೆ.

    ಹನೂರು ತಾಲೂಕಿನ ಹುಣಸೇಪಾಳ್ಯ ಗ್ರಾಮದ ನಿವಾಸಿಗಳಾದ ಚಿಕ್ಕಸಿದ್ದಮ್ಮ, ನಂಜುಂಡಯ್ಯ ಹಾಗೂ ನಾಗ ಸ್ಥಳದಲ್ಲೇ ಸಾವನ್ನಪ್ಪಿದ್ದ ದುರ್ದೈವಿಗಳಾಗಿದ್ದಾರೆ. ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿಗೆ ಮದುವೆಗೆಂದು ತೆರಳಿದವರು ಮದುವೆ ಮುಗಿಸಿಕೊಂಡು ವಾಪಸ್ ತೆರಳುವಾಗ ಈ ಅವಘಡ ಸಂಭವಿಸಿದೆ.

    ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣವಾಗಿದೆ. ಬೊಲೆರೋ ವಾಹನದಲ್ಲಿ ಜನ ಸಾಗಣೆ ಮಾಡಬಾರದೆಂದು ನಿಯಮವಿದೆ. ಆದರೂ ಕೂಡ ಬೊಲೆರೋ ಪಿಕಪ್ ವಾಹನದಲ್ಲಿ ತೆರಳಿ ಅಪಘಾತಕ್ಕೀಡಾಗಿದ್ದಾರೆ. ಘಟನೆಯಲ್ಲಿ 15 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಹನೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

  • ಬೊಲೆರೋ ಪಿಕಪ್ ವಾಹನ, ಖಾಸಗಿ ಬಸ್ ಡಿಕ್ಕಿ- ಇಬ್ಬರ ಸಾವು, ಬೊಲೆರೋ ಚಾಲಕನ ಎರಡೂ ಕಾಲು ಕಟ್

    ಬೊಲೆರೋ ಪಿಕಪ್ ವಾಹನ, ಖಾಸಗಿ ಬಸ್ ಡಿಕ್ಕಿ- ಇಬ್ಬರ ಸಾವು, ಬೊಲೆರೋ ಚಾಲಕನ ಎರಡೂ ಕಾಲು ಕಟ್

    ದಾವಣಗೆರೆ: ಬೆಳಗಿನ ನಸುಕಿನಲ್ಲಿ ಬೊಲೆರೋ ಪಿಕಪ್ ವಾಹನ ಮತ್ತು ಖಾಸಗಿ ಬಸ್ ನಡುವೆ ಅಪಘಾತವಾಗಿ ಇಬ್ಬರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಕೆರೆ ಗ್ರಾಮದ ಬಳಿ ನಡೆದಿದೆ.

    ಬೊಲೆರೋ ಪಿಕಪ್ ವಾಹನದಲ್ಲಿದ್ದ ದರ್ಶನ್(24) ಹಾಗೂ ಹರೀಶ್(25) ಮೃತ ದುರ್ದೈವಿಗಳು. ಘಟನೆಯಲ್ಲಿ ಪಿಕಪ್ ವಾಹನದ ಚಾಲಕ ಸೇರಿದಂತೆ 6 ಮಂದಿಗೆ ಗಂಭೀರ ಗಾಯವಾಗಿದ್ದು, ಚಾಲಕನ ಎರಡೂ ಕಾಲು ಕಟ್ ಆಗಿದೆ. ಪ್ರವೀಣ್, ಪ್ರಹ್ಲಾದ ಹಾಗೂ ಮಹಾಂತರಾಜ್ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

    ಹೊನ್ನಾಳಿ ತಾಲೂಕಿನ ಚಟ್ನಹಳ್ಳಿ ಗ್ರಾಮದಿಂದ ಹರಿಹರ ತಾಲೂಕಿನ ಕಡೆ ಅಡಕೆ ಕೊಯ್ಯುವ ಕೂಲಿ ಕೆಲಸಕ್ಕೆ 6 ಕಾರ್ಮಿಕರು ಹೋಗುತ್ತಿದ್ದರು. ಈ ವೇಳೆ ಬೊಲೆರೋ ಪಿಕಪ್ ವಾಹನದ ಚಾಲಕ ಎತ್ತಿನ ಗಾಡಿ ತಪ್ಪಿಸಲು ಹೋಗಿ ಖಾಸಗಿ ಬಸ್ ಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಅಪಘಾತದಿಂದಾಗಿ ಬೊಲೆರೋ ವಾಹನ ಸಂಪೂರ್ಣ ಜಖಂಗೊಂಡಿದ್ದು, ಖಾಸಗಿ ಬಸ್ ಜಮೀನಿಗೆ ನುಗ್ಗಿದೆ. ಘಟನಾ ಸ್ಥಳಕ್ಕೆ ಹೊನ್ನಾಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.