Tag: bohaiah

  • ಹಂಗಾಮಿ ಸ್ಪೀಕರ್ ಪರೀಕ್ಷೆಯಲ್ಲಿ ಬಿಜೆಪಿ ಪಾಸ್: ಕೈ ಅರ್ಜಿ ವಜಾ

    ಹಂಗಾಮಿ ಸ್ಪೀಕರ್ ಪರೀಕ್ಷೆಯಲ್ಲಿ ಬಿಜೆಪಿ ಪಾಸ್: ಕೈ ಅರ್ಜಿ ವಜಾ

    ನವದೆಹಲಿ: ಹಂಗಾಮಿ ಸ್ಪೀಕರ್ ಆಗಿ ಬೋಪಯ್ಯ ಅವರನ್ನು ನೇಮಿಸಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

    ಬೋಪಯ್ಯ ನೇಮಕ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ತ್ವರಿತ ವಿಚಾರಣೆ ಇಂದು ನ್ಯಾಯಮೂರ್ತಿ ಎ.ಕೆ.ಸಿಕ್ರಿ ನ್ಯಾ. ಅಶೋಕ್ ಭೂಷಣ್ ಹಾಗೂ ನ್ಯಾ.ಎಸ್.ಎ ಬೊಬ್ಡೆ ತ್ರಿಸದಸ್ಯ ಪೀಠದಲ್ಲಿ ನಡೆಯಿತು.

    ಹಂಗಾಮಿ ಸ್ಪೀಕರ್ ಬೋಪಯ್ಯ ಅವರ ಟ್ರ್ಯಾಕ್ ರೆಕಾರ್ಡ್ ಸರಿಯಲ್ಲ ಎಂದು ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ವಾದಿಸಿದರೆ ಈ ಹಿಂದೆಯೂ ಕಿರಿಯ ಶಾಸಕರನ್ನು ಸ್ಪೀಕರ್ ಮಾಡಿದ ಉದಾಹರಣೆಗಳಿವೆಯಲ್ಲ ಎಂದು ನ್ಯಾ.ಬೊಬ್ಡೆ ಪ್ರಶ್ನಿಸಿದರು.

    ಇದರ ಜೊತೆಯಲ್ಲಿ ಹಿರಿಯ ಶಾಸಕರು ಎಂದರೆ ವಯಸ್ಸಿನಲ್ಲಲ್ಲ, ಚುನಾಯಿತ ಅವಧಿಯಲ್ಲಿ ಎಂದು ನ್ಯಾ.ಬೊಬ್ಡೆ ಅಭಿಪ್ರಾಯಪಟ್ಟರು. ಬೋಪಯ್ಯಗೂ, ಬೇರೆ ಪ್ರಕರಣಕ್ಕೂ ವ್ಯತ್ಯಾಸವಿದೆ ಎಂದು ಲೋಕಸಭೆಯ ಎಲ್ಲಾ ಹಂಗಾಮಿ ಸ್ಪೀಕರ್ ಗಳ ಪಟ್ಟಿಯನ್ನು ಕಪಿಲ್ ಸಿಬಲ್ ಓದಿದರು. ಲೋಕಸಭೆಯಲ್ಲಿ ವಿಖೆ ಪಾಟೀಲ್ ಹಿರಿಯ ಸದಸ್ಯರಾಗಿರಲಿಲ್ಲ, ರಾಜಸ್ಥಾನದ ಸಂಸದರೊಬ್ಬರು ವಿಖೆ ಪಾಟೀಲ್‍ಗಿಂತ ಹಿರಿಯರಿದ್ದರು ಎಂದು ನ್ಯಾ.ಬೊಬ್ಡೆ ಹೇಳಿದಾಗ ವಿಖೆ ಪಾಟೀಲ್‍ಗೆ ಬೋಪಯ್ಯ ರೀತಿಯ ಇತಿಹಾಸವಿಲ್ಲ ಎಂದು ಕಪಿಲ್ ಸಿಬಲ್ ವಾದಿಸಿದರು.

    ಈ ವೇಳೆ ಸುಪ್ರೀಂ ಕೋರ್ಟ್ ವಿಶ್ವಾಸ ಮತಯಾಚನೆ ವಿಡಿಯೋದಲ್ಲಿ ಸಂಪೂರ್ಣ ಚಿತ್ರೀಕರಣಗೊಳ್ಳುತ್ತದೆ. ಅಷ್ಟೇ ಅಲ್ಲದೇ ರಾಜ್ಯಪಾಲರ ನಿರ್ಧಾರದಲ್ಲಿ ನಾವು ಭಾಗಿಯುವುದಿಲ್ಲ ಎಂದು ಹೇಳಿ ಕಾಂಗ್ರಸ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು. ಸುಪ್ರೀಂ ಕೋರ್ಟ್ ಕಲಾಪ ಆರಂಭಗೊಂಡ ಬಳಿಕ ವಿಧಾನಸಭೆಯ ಕಲಾಪ ಆರಂಭಗೊಂಡಿತ್ತು.

    ಹಂಗಾಮಿ ಸ್ಪೀಕರ್ ಬೋಪಯ್ಯ ನೇಮಕ ವಿವಾದವೇಕೆ?
    * ಹಿರಿಯ ಶಾಸಕರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡುವುದು ವಾಡಿಕೆ
    * ಬೋಪಯ್ಯಗಿಂತ ಆರ್.ವಿ. ದೇಶಪಾಂಡೆ, ಉಮೇಶ್ ಕತ್ತಿ ಹಿರಿಯರು
    * ಬೋಪಯ್ಯ 4 ಬಾರಿ ಎಂಎಲ್‍ಎಯಾದ್ರೆ, ಇವರಿಬ್ಬರು 8 ಬಾರಿ ಎಂಎಲ್‍ಎಗಳು
    * ಜಮೀರ್ ಅಹ್ಮದ್, ಅಖಂಡ ಶ್ರೀನಿವಾಸಮೂರ್ತಿ, ಭೀಮಾನಾಯ್ಕ್ ಅನರ್ಹ ಭೀತಿ
    * 2010ರಲ್ಲಿ ಪಕ್ಷಾಂತರ ಕಾಯ್ದೆಯಡಿ ಅನರ್ಹ ಮಾಡಿದ್ದ ಬೋಪಯ್ಯ

    ಇನ್ನು, ಹಂಗಾಮಿ ಸ್ಪೀಕರ್ ಕಾರ್ಯವ್ಯಾಪ್ತಿ ಈ ರೀತಿ ಇರಲಿದೆ
    * ಶಾಸಕರನ್ನು ಅನರ್ಹ ಮಾಡುವ ಅಧಿಕಾರ ಇರುವುದಿಲ್ಲ
    * ನೂತನ ಸಚಿವರಿಗೆ ಪ್ರಮಾಣವಚನ ಬೋಧನೆ ಮಾಡಬಹುದಷ್ಟೇ
    * ವಿಶ್ವಾಸಮತ ಯಾಚನೆ ಪ್ರಕ್ರಿಯೆಗಷ್ಟೇ ಹಂಗಾಮಿ ಸ್ಪೀಕರ್ ಸೀಮಿತ
    * ಶಾಸಕರನ್ನು ಅನರ್ಹ ಮಾಡುವ ಅಧಿಕಾರ ಇರುವುದಿಲ್ಲ